ಭೂಮಿ ಹುಣ್ಣಿಮೆ

ಇದು ವ್ಯವಸಾಯ ಸಂಬಂಧಿಯಾದ ಒಂದು ಆಚರಣೆ. ಇದು ಮಲೆನಾಡ ಒಕ್ಕಲಿಗರಿಗಷ್ಟೇ ಅಲ್ಲದೆ ಶೂದ್ರ ಸಮುದಾಯಕ್ಕೇ ವಿಶಿಷ್ಟವಾದ ಹಬ್ಬ. ದೀಪಾವಳಿ ಹಬ್ಬಕ್ಕೆ ಹದಿನೈದು ದಿನಗಳು ಹಿಂದೆ ಬರುವಂತದ್ದು. ಈ ಹಬ್ಬ ಮಾಡುವುದಕ್ಕಾಗಿ ಕೆಲವು ದಿನಗಳಿಂದಲೂ ತಯಾರಿ ನಡೆಸುತ್ತಾರೆ. ಭತ್ತದ ಗದ್ದೆಗಳು ಹೊಡೆಬರುವ ಕಾಲ ಅದು. ಕೆಲವು ಪ್ರದೇಶಗಳಲ್ಲಿ ಭತ್ತ ಕಾಯಿ ಆಗುತ್ತಿರುತ್ತದೆ. ಭೂಮಿತಾಯಿ ತುಂಬು ಗರ್ಭಿಣಿಯಾಗಿದ್ದಾಳೆ ಎನ್ನುವುದು ರೈತಾಪಿಗಳ ತಿಳುವಳಿಕೆ ಸಾಮಾನ್ಯವಾಗಿ ಹೆಣ್ಣು ಗರ್ಭಿಣಿಯಾದ ಸಂದರ್ಭದಲ್ಲಿ ಹೇಗೆ ಬಯಕೆ ತೀರಿಸುವಂತಹ ಪ್ರಸಂಗ ಬರುತ್ತದೋ ಅಂತೆಯೇ ಭೂಮಿಯಾಯಿಯು ಗರ್ಭಧರಿಸಿದಾಗ ಅವಳ ಬಯಕೆ ತೀರಿಸಬೇಕಾಗುತ್ತದೆ. ಎಂದು ಜನ ತಿಳಿಯುತ್ತಾರೆ.

ಈ ಹಬ್ಬದ ಸಂದರ್ಭದಲ್ಲಿ ‘ಹೆಗ್ಗಸ’ ಎಂಬ ಒಂದು ಜಾತಿಯ ಕಸುವಿನ ದಡಿಯನ್ನು ತಂದು ತುಂಡುಮಾಡಿ ಒಣಗಿಸುತ್ತಾರೆ. ಹುಣ್ಣಿಮೆಯ ಹಿಂದಿನ ದಿನ ‘ಹೆರಕುವ ದಿನ‘  ಅಡುಗೆ ಮಾಡುವ ಹೆಂಗಸರು ರಾತ್ರಿ ಎಂಟು ಘಂಟೆಗೆ ಸ್ನಾನ ಮಾಡಿಕೊಂಡು ಅಡುಗೆ ಪ್ರಾರಂಭಿಸಿದರೆ ಬೆಳಗಿನ ಜಾವ ನಾಲ್ಕು ಘಂಟೆಯವರೆಗೂ ಅಡುಗೆ ಮಾಡುತ್ತಿರುತ್ತಾರೆ. ಅವರು ಆ ರಾತ್ರಿ ಮಲಗಬಾರದು. ಆ ಹೆಂಗಸರು ಮಲಗಿದರೆ ಗದ್ದೆಯಲ್ಲಿ ಭತ್ತ ಜೊಳ್ಳಾಗುತ್ತದೆ ಎಂಬ ನಂಬಿಕೆಯು ಪ್ರಚಲಿತದಲ್ಲಿದೆ. ಈ ಭೀತಿಯಿಂದಲೇ ಜನರು ಬೆಳಿಗ್ಗೆ ಸೂರ್ಯದಯಕ್ಕೆ ಮುಂಚೆ ಪೂಜೆ ಮಾಡಿ ಮುಗಿಸಿ ಅನ್ನವನ್ನು ಗದ್ದೆಯ ಸುತ್ತಲೂ ಎರೆಚುತ್ತಾರೆ. ಸೂರ್ಯೋದಯವಾದರೆ ಒಳ್ಳೆಯದಲ್ಲ ಎಂಬ ನಂಬಿಕೆ ಪ್ರಚಲಿತವಾಗಿದೆ. ಹಿಂದಿನ ದಿನ ಮನೆಯನ್ನು ಸುಣ್ಣ ಬಣ್ಣಗಳಿಂದ ಸಾರಿಸಿ ಶುದ್ಧಗೊಳಿಸುತ್ತಾರೆ. ಗಂಡಸರು ಪೂಜೆಯ ಹಿಂದಿನ ದಿನ ಸಂಜೆ ಗದ್ದೆಗೆ ಹೋಗಿ ಹೊಡೆ ತುಂಬಿ ನಿಂತಿರುವ ಪೈರಿನ ಹತ್ತಿರ ಒಂದು ಬದುವಿನ ಮೇಲೆ ಬಾಳೆ ಕಂಬ, ಕಬ್ಬು, ಮಾವಿನ ಸೊಪ್ಪಿನ ತೋರಣ ಕಟ್ಟಿ ಸಿಂಗರಿಸುತ್ತಾರೆ. ಅದರಡಿಯಲ್ಲಿ ಮೂರು ಮಣ್ಣಿನ ಮುದ್ದೆಗಳನ್ನು ಮಾಡಿಟ್ಟು ಆ ಮಣ್ಣಿನ ಮುದ್ದೆಗಳಿಗೆ ಒಂದೊಂದು ಮಾವಿನ ಎಲೆ ಸುರಿದಿಟ್ಟು ಬರುತ್ತಾರೆ.

ಭೂಮಿತಾಯಿಗೆ ಬಯಕೆ ತೀರಿಸುವ ಸಂದರ್ಭವಿದು. ಭೂಮಿತಾಯಿ ಪೂಜೆಯೇ ಈ ಹಬ್ಬದ ವಿಶೇಷ.  ಹಬ್ಬದ ಹಿಂದಿನ ದಿನವೇ ಕಾಡಿಗೆ ಹೋಗಿ ಅರವತ್ತು ಬಗೆಯ ಸೊಪ್ಪು ಮತ್ತು ನೆಲಗೆಣಸುಗಳನ್ನು ತರುತ್ತಾರೆ. ಅದರಿಂದ ಬೆರಕೆ ಸೊಪ್ಪಿನ ಪಲ್ಯವನ್ನು ಮಾಡುತ್ತಾರೆ. ಹೆಂಗಸರು ಅಕ್ಕಿಯನ್ನು ಒಣಗಿಸಿಟ್ಟು ಕೆಸವಿನ ದಡಿಯನ್ನು ರುಬ್ಬಿ ಕೊಟ್ಟೆ ಕಡುಬು ಮಾಡುತ್ತಾರೆ. ಅದರ ಜೊತೆಗೆ ಎಂಟು ಜಾತಿಯ ತರಕಾರಿ ಪಲ್ಯವನ್ನು ಮಾಡಿ ನೆಲಗೆಣಸೆಂಬ ಒಂದು ಜಾತಿಯ ಗೆಣಸನ್ನು ಕಾಡಿನಿಂದ ಕಿತ್ತು ತಂದು ಬೇಯಿಸಿ ಹಾಲು, ಬೆಲ್ಲ, ತುಪ್ಪ ಹಾಕಿ ತಿನ್ನುತ್ತಾರೆ. ಇದಲ್ಲದೆ ಚೆಂಡುಹೊವಿನ ಕೋಸಂಬರಿ, ಮಜ್ಜಿಗೆ ಅಂಬಲಿ, ಹಾಲಂಬ, ಬೆಲ್ಲದ  ಹಾಲಿನ ಹಿಟ್ಟು ವಗೈರೆಯನ್ನು ಮಾಡುತ್ತಾರೆ.

ಮಾರನೆಯ ದಿನ ಬೆಳಗಿನ ಜಾವ ನಾಲ್ಕು ಘಂಟೆಗೆ ಎದ್ದು ಮನೆಮಂದಿಯೆಲ್ಲ ಸ್ನಾನ ಮಾಡಿ ಮಡಿಬಟ್ಟೆ ಧರಿಸಿ ಭೂಮಿ ಪೂಜೆಗೆ ಹೋಗಲು ಸಿದ್ಧತೆ ನಡೆಸುತ್ತಾರೆ. ಎಡೆ ಪದಾರ್ಥಗಳನ್ನು ಸ್ತ್ರೀ ಮನೆಯೊಳಗೆ ಒಂದು ಹಣತೆಯನ್ನು ಹಚ್ಚಿ ಆ ದೀಪದ ಮುಂದೆ ದೊಡ್ಡ ಗೆರಸಿರೊಂದನ್ನಿಟ್ಟು ಮಾಡಿದ ಭಕ್ಷ್ಯಗಳನ್ನೆಲ್ಲಾ ಬಡಿಸಿ ಆಮೇಲೆ ಎಲ್ಲವನ್ನು ಕಲಸಿ ‘ಬಳಿ’ ಮಾಡಿ ಕುಕ್ಕೆಯಲ್ಲಿ ತುಂಬಿಬಿಡುತ್ತಾಳೆ. ಎಲ್ಲಾ ಅನ್ನವನ್ನು ಕಲಸಿ ಎರಡೋ ಮೂರೋ ಬುಟ್ಟಿಗಳಿಗೆ ಅನ್ನ ತುಂಬಿಕೊಂಡು ಗದ್ದೆಗೆ ಹೋಗುತ್ತಾರೆ. ಜೊತೆಗೆ ಒಂದು ಅಡಿಕೆ ಹಿಂಗಾರ (ಹೂವು) ಮತ್ತು ಮಾವಿನ ಎಲೆಯ ಒಂದು ತುಂಡು, ಒಂದು ತಂಬಿಗೆಗೆ ನೀರು ಸೇರಿಸಿಮೂರು ನಾಮಗಳನ್ನು ಹಾಕಿ ಒಂದು ಕಳಸವನ್ನು ಮಾಡಿಕೊಳ್ಳುತ್ತಾರೆ. ಈ ಕಳಸಕ್ಕೆ ಮನೆಯಲ್ಲಿರುವ ಬಂಗಾರದ ಸರ, ಬಳೆ ಎಲ್ಲಾ ಹಾಕಿ ಶೃಂಗಾರ  ಮಾಡಿ ಮೂರುನಾಲಕ್ಕೂ ಜನ ಸೇರಿ ಒಬ್ಬನು ಕಳಸವಿದ್ದ ಮಣೆಯನ್ನು ಮತ್ತೊಬ್ಬ ಬೆಳಕಿಗಾಗಿ ದೊಂದಿಯನ್ನೂ ಬಿಟ್ಟಿಯನ್ನು ಹೊತ್ತುಕೊಂಡು ಹೋಗುತ್ತಾರೆ. ಕಳಸ ಮತ್ತು ಪೂಜಾ ಸಾಮಗ್ರಿಯೊಡನೆ ಹಿಂದಿನ ದಿನ ಸಿದ್ಧಮಾಡಿದ ಪೂಜಾ ಸ್ಥಳದಲ್ಲಿ ಇಟ್ಟು ಹೊಡೆಬಂದ ಭತ್ತದ ಎರಡು, ಮೂರು, ತೆಂಡೆಯ ಬುಡಕ್ಕೂ, ಕಳಸಕ್ಕೆ ಮಣ್ಣಿನ ಮುದ್ದೆಗಳಿಗೆ ಕುಂಕುಮ, ಅರಸಿನ, ಗಂದ, ಚಂದನಗಳನ್ನು ಅರ್ಪಿಸಿ ಬೆಂಕಿಯ ಕೆಂಡದಿಂದ ಧೂಪದಾರಿತಿಯನ್ನು ಮಾಡುತ್ತಾರೆ.

ನಂತರ ಮನೆಯಿಂದ ತೆಗೆದುಕೊಂಡು ಹೋಗಿದ್ದ ಕಲಸನ್ನದ ಖಾದ್ಯವನ್ನು ಬಾಳೆಹಣ್ಣು, ತೆಂಗಿನಕಾಯಿ, ಹೊಡೆದು ಭತ್ತ ಪೈರಿಗೂ ನೈವೇದ್ಯ ಅರ್ಪಿಸುತ್ತಾರೆ. ಪೂಜೆ ನಡೆಯುವ ಸಮಯದಲ್ಲಿ ಇನ್ನುಳಿದ ಜನರು ಶಂಖ, ಜಾಗಟೆ, ತುತ್ತೂರಿಗಳನ್ನು ಊದುತ್ತಾರೆ. ಅಲ್ಲದೆ ಒಬ್ಬರ ಕೋವಿಯಿಂದ ಗುಂಡು ಹಾರಿಸಿ ಶಬ್ಧ ಮಾಡುತ್ತಾರೆ. ಒಂದು ಕೊಟ್ಟೆ ಕಡುಬನ್ನು ಅದರ ಬಾಳೆಲೆಯ ಹೊದಿಕೆಯ ಸಮೇತವಾಗಿ ಗದ್ದೆಯಲ್ಲಿ ೧/೨ ಅಡಿ ಗುಂಡಿಮಾಡಿ ಮುಚ್ಚುತ್ತಾರೆ. ನಂತರ ಒಂದು ಹಿಡಿಯಷ್ಟು ಕಲಸನ್ನವನ್ನು ಗದ್ದೆಗೆ ಬೀಸಿ ಎರಚುತ್ತಾರೆ. ಅನಂತರದ ಪೂಜಾಸ್ಥಾನದಲ್ಲಿ ಸೀಮಂತದ ದಿನ ಗರ್ಭಿಣಿಯನ್ನು ಅಲಂಕರಿಸುವಂತೆ ಭತ್ತದ ತೆಂಡೆಗಳಿಗೆ (ಪ್ರಾತಿನಿಧಿಕವಾಗಿ ಒಂದೆರಡಕ್ಕೆ) ಬಿಚ್ಚೋಲೆ, ಬಳೆ, ಅರಿಶಿಣ, ಕುಂಕುಮ, ಹೋವು ಇತ್ಯಾದಿಗಳನ್ನು ತೊಡಿಸಿ ಅಲಂಕರಿಸುತ್ತಾರೆ. ಇವು ಸುಮಂಗಲೆಯ ಸಂಕೇತಗಳು  ಅಲ್ಲಿ ರಚಿಸಿಟ್ಟಿದ್ದ ಗದ್ದುಗೆಯ ಮೇಲೆ ಕಳಸವೊಂದನ್ನು ಸ್ಥಾಪಿಸಿ ಪೂಜೆಯನ್ನು ಮಾಡುತ್ತಾರೆ. ಹಣ್ಣುಕಾಯಿ ಸೇವೆ, ಕಲಸನ್ನದ ನೈವೇದ್ಯ ಕಾರ್ಯಗಳು ಮುಗಿದ ಮೇಲೆ ಕೆಸುವುನ ಕೊಟ್ಟೆಯನ್ನು ನೀರು ನಿಂತಿರುವ ಸ್ಥಳದಲ್ಲಿ ಗುಂಡಿ ತೆಗೆದು ಹೂಳುತ್ತಾರೆ. ನಂತರ ಕಳಸನ್ನವನ್ನು ಗದ್ದೆಗೆ ಎಸೆಯುತ್ತಾ ಈ ಹಾಡನ್ನು ಹೇಳುತ್ತಾರೆ:

`ಅಚ್ಚಂಬಲಿ ಹಾಲಂಬಲಿ ಬೇಲಿಮ್ಯಾಲರೂ 
ದ್ದೋರ ಹೆರೆಕಾಯಿ, ಒಣ ಸೌತೆಕಾಯಿ, ನಿತ
ಮುತ್ತೈದೆ ಅಟ್ಟಂತ ಅಡಗೀ
ಭೂಮಿತಾಯಿ ಬಾಯ್ಬಟ್ಟು ಉಣ್ಣವ್ವ’     

-ಎಂದು ಕೋರಿಕೊಳ್ಳುತ್ತಾನೆ. ಉಳಿದ ಕಲಸನ್ನವನ್ನು ಗದ್ದೆ, ತೋಟ, ಹಿತ್ತಿಲು, ತೆಂಗಿನಮರ, ಕಣ, ಕೊಟ್ಟಿಗೆ, ತಿಪ್ಪೆ ಇತ್ಯಾದಿಗಳಿಗೆ ಎರಚುತ್ತಾರೆ. ಈ ಹೊತ್ತಿನಲ್ಲಿ ಕಾಗೆಕೂಗಬಾರದು ಎನ್ನುವ ನಂಬಿಕೆ ಪ್ರಚಲಿತವಾಗಿದೆ (ಅಂಬಳಿಕೆ ಹಿರಿಯಣ್ಣ, ೧೯೮೨: ೪೧೭). ಇದೇ ರೀತಿಯಾಗಿ ಗದ್ದೆ ಬಯಲಿನಲ್ಲಿ ಬೆಳಗಿನ ಸಮಯದಲ್ಲಿ ಅಲ್ಲಲ್ಲಿ ದೊಂದಿ ಬೆಳಕು ಶಂಖ, ಜಾಗಟೆಗಳ ಸದ್ದು ಇವುಗಳನ್ನು ನೋಡಲು ಮತ್ತು ಕೇಳಲು ವಿಶೇಷವಾಗಿರುತ್ತದೆ.

ರೈತರು ತಾವು ಬೇಸಾಯ ಮಾಡಿದ ಎಲ್ಲಾ ಗದ್ದೆಗಳಿಗೂ ಕಲಸನ್ನವನ್ನ ‘ಅಚ್ಚಂಬಲಿ ಹಾಲಂಬಲಿ‘  ಎಂದು ಹೇಳುತ್ತಾ ಒಂದೊಂದು ಬೊಗಸೆಯನ್ನು ಎಸೆಯುತ್ತಾರೆ. ‘ಹೋಯಿಲೆಗೋ’ ಎಂದು ಮತ್ತೆ ಮತ್ತೆ ಕೂಗುತ್ತಾರೆ. ಹೀಗೆ ಕಲಸನ್ನವೆಲ್ಲ ಖಾಲಿಯಾದ ಮೇಲೆ ಒಂದು ಹಿಡಿಯಷ್ಟು ಅನ್ನವನ್ನು ತಂದು ಮನೆಯಲ್ಲಿ ಪೂಜೆ ಮಾಡುವಾಗ ಹಿರಿಯರ ಎಡೆಗೂ ಬಡಿಸುತ್ತಾರೆ. ಒಟ್ಟಿನಲ್ಲಿ ಈ ಪೂಜೆಯು ಸಮೃದ್ದಿಯನ್ನು ಬಯಸಿ ನಡೆಸುವ ಒಂದು ವಿಧಿಯಾಗಿದೆ. ರೈತರ ಪಾಲಿಗೆ ಮಹತ್ವಾಕಾಂಕ್ಷೆಯನ್ನು ಉಳ್ಳ ಈ ಆಚರಣೆ ಸಮೃದ್ದಿಯ ಆಶಯದ ಒಂದು ಸ್ವತಂತ್ರ ಆಚರಣೆ ಎಂದು ತಿಳಿಯಬಹುದು.

ದಕ್ಷಿಣ ಕರ್ನಾಟಕದ ಆಚರಣೆಗಳು

ಈ ಭಾಗದಲ್ಲಿ ದಕ್ಷಿಣ ಕರ್ನಾಟಕದಲ್ಲಿ ಪ್ರಚಲಿತವಿರುವ ಮಳೆ ಮಲ್ಲಪ್ಪನ ಪೂಜೆ, ಮಳೆರಾಯನ ಪೂಜೆ, ಭೂಮಿ ಪೂಜೆ, ತಿಂಗಳ ಮಾವನ ಪೂಜೆ, ಕುಂತಿ ಪೂಜೆ, ಹೆಚ್ಚು ಮಾಡುವುದು, ಕೈಲುಮುಹೂರ್ತ, ಹುತ್ತರಿ ಹಬ್ಬ ಮುಂತಾದ ವ್ಯವಸಾಯ ಸಂಬಂಧಿಯಾದ ಆಚರಣೆಗಳನ್ನು ಕುರಿತು ಅಧ್ಯಯನ ನಡೆಸಲಾಗುವುದು. ಕೃಷಿಯನ್ನೇ ಪ್ರಧಾನ ವೃತ್ತಿಯಾಗಿ ಅವಲಂಬಿಸಿರುವ ಜನತೆ ಆ ವೃತ್ತಿಗನುಗುಣವಾದ ಒಂದು ಜೀವನಪದ್ಧತಿಯನ್ನು ರೂಢಿಸಿಕೊಂಡಿರುವುದು ಸ್ವಾಭಾವಿಕ. ಸುಂದರ ಬದುಕನ್ನು ಹಸನುಗೊಳಿಸಿಕೊಳ್ಳಲು ಈ ಜನ ತಮ್ಮ ಜೀವನ ಚಕ್ರದ ಬಹುಮುಖ್ಯ ಘಟ್ಟಗಳಲ್ಲಿ  ಆಚರಿಸುವ ಸಂಪ್ರದಾಯಾಚಾರಣೆಗಳಲ್ಲದೆ ಹೊಟ್ಟೆಪಾಡಿಗಾಗಿ ತಾವು ಅವಲಂಬಿಸಿರುವ ಕಸುಬಿನ ಹಿನ್ನೆಲೆಯಲ್ಲೂ ಅನೇಕಾನೇಕ ಸಂಪ್ರದಾಯಗಳನ್ನು ರೂಢಿಸಿಕೊಂಡಿರುವುದು ಸಾಮಾನ್ಯ. ಇಲ್ಲಿನ ಭೌಗೋಳಿಕ ಹಾಗೂ ಸಾಮಾಜಿಕ ವೈಶಿಷ್ಟ್ಯಗಳ ಆಧಾರದ ಮೇಲೆ ವಿಭಿನ್ನ ಸ್ವರೂಪದ ಕೃಷಿ ಸಂಸ್ಕೃತಿಯನ್ನು ರೂಪಿಸಿಕೊಂಡಿರುವ ಕರ್ನಾಟಕದ ರೈತಾಪಿಗಳು ಸಮತಾನ ಪ್ರಾಪ್ತಿಗಾಗಿ. ಮಳೆ ಬೆಳೆ ಫಲಸಮೃದ್ದಿಗಾಗಿ, ಸಂಪತ್ತಿಗಾಗಿ, ಲೋಕಕಲ್ಯಾಣಕ್ಕಾಗಿ ಅನೇಕಾನೇಕ ಸಂಪ್ರದಾಯಾಚರಣೆಗಳನ್ನು ಇಂದಿಗೂ ಆಚರಣೆಯಲ್ಲಿ ಉಳಿಸಿಕೊಂಡಿರುವುದನ್ನು ಕಾಣುತ್ತೇವೆ. ಪ್ರಾದೇಶಿಕ ವಿಶೇಷಗಳೊಡನೆ ಜೀವಂತವಾಗಿರುವ ವ್ಯವಸಾಯ ಸಂಬಂಧಿಯಾದ ಕೆಲವು ಆಚರಣೆಗಳನ್ನು ಪರಿಚಯ ಮಾಡಿಕೊಳ್ಳುವುದು ಈ ಲೇಖನದ ಉದ್ದೇಶ.

ಮಳೆಮಲ್ಲಪ್ಪನ ಪೂಜೆ

ಬಯಲುನಾಡಿನಲ್ಲಿ ಪ್ರಚಲಿತವಿರುವ ಮಳೆಯನ್ನು ಕುರಿತು ಒಂದು ಆಚರಣೆಯೆ ಮಳೆ ಮಲ್ಲಪ್ಪನ ಪೂಜೆ. ಸಾಮಾನ್ಯವಾಗಿ ಈ ಪೂಜೆಯನ್ನು ಕೆಳವರ್ಗದವರು ಮಾತ್ರ ಆಚರಿಸುವ ಪದ್ಧತಿ ಇದೆ. ಏಳು ಎಂಟು ವರ್ಷದ ಹುಡುಗನಿಗೆ ಮೈಮೇಲಿನ ಬಟ್ಟೆಯನ್ನು ತೆಗೆದು ಬೆತ್ತಲುಗೊಳಿಸಿ ಮರದ ಮಣೆಯ ಮೇಲೆ ಕೂರಿಸುತ್ತಾರೆ. ಆ ಹುಡುಗನಿಗೆ ಪಕ್ಕದಲ್ಲಿಯೇ ಎರಡು ಸಗಣಿ ಉಂಡೆಗಳಿಂದ ಬ್ಯಾನಪ್ಪಗಳನ್ನು ತಯಾರಿಸುವರು. ಬ್ಯಾನಪ್ಪಗಳಿಗೆ ತಲೆಭಾಗದಲ್ಲಿ ಗರಿಕೆಯನ್ನು ಸಿಕ್ಕಿಸುವರು ಈ ಬ್ಯಾನಪ್ಪಗಳನ್ನು ‘ಗುರ್ಜಿ’  ಎಂದು ಕರೆಯುತ್ತಾರೆ (ಸಂ. ಲಕ್ಕಪ್ಪಗೌಡ, ೧೯೮೪: ೨೨೨). ಸಗಣಿಯ  ಉಂಡೆಗಳು ಫಲವತ್ತತೆಯನ್ನು ಸಂಕೇತಿಸುತ್ತವೆ. ಈ ಬ್ಯಾನಪ್ಪಗಳು ಮಳೆಮಲ್ಲಪ್ಪನ ಪ್ರತೀಕ. ಈ ಬ್ಯಾನಪ್ಪಗಳನ್ನು ಮಣೆಯ ಮೇಲಿಟ್ಟು ಅರಿಶಿಣ, ಕುಂಕುಮ, ಗಂಧದಕಡ್ಡಿ, ಕರ್ಪೂರ, ಕಾಯಿಹಣ್ಣುಗಳಿಂದ ಪೂಜೆ ಸಲ್ಲಿಸುತ್ತಾರೆ. ನಂತರ ಬ್ಯಾನಪ್ಪಗಳಿರುವ ಮಣೆಯನ್ನು ಆ ಹುಡುಗ ಹೊತ್ತುಕೊಂಡು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೋಗುವನು. ಈ ಆಚರಣೆಯಲ್ಲಿ ಸಣ್ಣ ಪುಟ್ಟ ಹುಡುಗ ಹುಡುಗಿಯರು ಮಾತ್ರ ಭಾಗವಹಿಸುವರು.

ಮಣೆಯನ್ನು ಹೊತ್ತ ಹುಡುಗ ಮನೆಯ ಮುಂದೆ ಹೋಗಿ ನಿಲ್ಲುತ್ತಾನೆ. ಜೊತೆಯಲ್ಲಿ ಬಂದ ಹುಡುಗ ಹುಡುಗಿಯರ ಗುಂಪು ಹಾಡನ್ನು ಹೇಳುತ್ತವೆ:

ಗುರ್ಜಿ ಗುರ್ಜೀ ಎಲ್ಯಾಡಿ ಬಂದೆ! ಹಳ್ಳ ಕೊಳ್ಳತಿರಿದಾಡಿ ಬಂದೆ
ಚಂದೋ
ರಾಮ ಬಂದರ್ ಕಡೆಗೆ! ಬಾ ಮಳೆಯೋ ಬಾ ಮಳೆಯೋ
ಬಣ್ಣಾಕೊಡ್ದೀನಿ
ಬಾ ಮಳೆಯೋ! ಸುಣ್ಣಾ ಕೊಡ್ತೀನಿ ಸುರಿ ಮಳೆಯೋ
ಕಪ್ಪೆಗೆ
ರೊಟ್ಟಿ ಮೊರದಾಗೆ ಜೋಳ! ಬರಲೆವ್ವೋ ಬರಲೆಲ್ವೋ

-ಎಂಬುದಾಗಿ ಹಾಡು ಹೇಳುತ್ತಾ ಹುಡುಗರು ಮುಂದುವರೆಯುತ್ತಾರೆ. ಗುರ್ಜಿಯನ್ನು ಹೊತ್ತು ಹುಡುಗರು ಮನೆಯ ಮುಂದೆ ಹೋದಂತೆಲ್ಲ ಮನೆಯ ಹೆಂಗಸರು ಹುಡುಗನ ತಲೆಯ ಮೇಲೆ ಒಂದು ಚೆಂಬು ನೀರು, ಗುರ್ಜಿಯ ಮೇಲೊಂದು ಚೆಂಬು ನೀರು ಹುಯ್ಯುತ್ತಾರೆ. ಆಗ ಮಣೆಯನ್ನು ಹೊತ್ತ ಹುಡುಗ ಗರಗರನೆ ನಿಂತಲ್ಲೇ ತಿರುಗುತ್ತಾನೆ. ನೀರು ತುಂತುರು ತುಂತುರಾಗಿ ಮಳೆಯಂತೆ ಭೂಮಿಗೆ ಬೀಳುತ್ತದೆ. ಇದು ಅನುಕರಣಾ ಮಾಟದ ವಿಧಾನವಾಗಿದೆ. ಹುಡುಗರಿಗೆ ದವಸಧಾನ್ಯವನ್ನು ಕೊಡುತ್ತಾರೆ. ಇದೇ ರೀತಿಯಾಗಿ ಐದು ಇಲ್ಲವೆ ಏಳುದಿನಗಳು ನಿರಂತರವಾಗಿ ಆಡುತ್ತಾರೆ. ಕೊನೆಯ ದಿನ ಒಂದು ಕೆರೆಯ ಬಳಿಯಲ್ಲಿ ಹೋಗಿ ಗುರ್ಜಿಯನ್ನು ಪೀಜಿಸಿ ಹುಡುಗನಿಗೆ ಬಟ್ಟೆಯನ್ನು ತೊಡಿಸುತ್ತಾರೆ. ಸಂಗ್ರಹವಾಗಿದ್ದ ದವಸ ಧಾನ್ಯಗಳನ್ನು ಅಡುಗೆ ಮಾಡಿ ಎಲ್ಲರೂ ಊಟ ಮಾಡಿ ಬರುತ್ತಾರೆ. ಈ ಪೂಜೆ ಮುಗಿದ ನಂತರ ಮಳೆ ಬರುತ್ತದೆ ಎಂಬುದು ಜನಪದ ನಂಬಿಕೆ.

ಉತ್ತರ ಕರ್ನಾಟಕದಲ್ಲಿ ಮಳೆಯಾಗುವುದು ತಡವಾದಾಗಾ (ಬೆಳುವಲದಲ್ಲಿ) ಗುರ್ಜಿಯನ್ನು ಆಚರಿಸುತ್ತಾರೆ (ಗದ್ದಗೀಮಠ ಬಿಎಸ್, ೧೯೬೩:೧೫೯). ಈ ಗುರ್ಜಿಯ ಆಚರಣೆ ಮಲೆಮಲ್ಲಪ್ಪನ ಪೂಜೆಯನ್ನು ಹೋಲುತ್ತದೆ. ಆಚರಿಸುವ ವಿಧಾನವು ಒಂದೇ ಆಗಿದೆ. ಆದರೆ ಹೆಸರು ಮಾತ್ರ ಬೇರೆ ಬೇರೆಯಾಗಿದೆ. ಈ ಪೂಜೆಯ ಮೂಲ ಆಶಯ ಮಾತ್ರ ಮಳೆಯನ್ನು ಬರಮಾಡಿಕೊಳ್ಳುವುದೇ ಆಗಿದೆ.

ಮಳೆರಾಯನ ಪೂಜೆ 

ವ್ಯವಸಾಯ ಸಂಬಂಧಿಯಾದ ಅತಿಮುಖ್ಯವಾದ ಆಚರಣೆಯಲ್ಲಿ ಮಳೆರಾಯನ ಪೂಜೆ ಕೂಡ ಗಮನಾರ್ಹವಾದುದು. ಮಳೆಯನ್ನು ಕುರಿತ ವಿಶೇಷ ಪೂಜೆಯೇ ಈ ಮಳೆರಾಯನ ಪೂಜೆ. ಈ ಪೂಜೆಯು ಪ್ರಪಂಚದಾದ್ಯಂತ ಪ್ರಚಲಿತದಲ್ಲಿದೆ. ‘ಮಳೆಯಿಲ್ಲದೆ ಬೆಳೆಯಿಲ್ಲ: ಬೆಳೆಯಿಲ್ಲದೆ ಬಾಳಿಲ್ಲ‘ ಎನ್ನುವಂತೆ ರೈತನಿಗೆ ಮಳೆರಾಯನೇ ದೊಡ್ಡ ದೇವರು. ಅವನೇ ಸರ್ವಸ್ವ. ಮಳೆಯ ಅಭಾವದಿಂದ ಬರಗಾಲದ ಬವಣೆಗೆ ಸಿಲುಕಿದ ರೈತ ಮಳೆರಾಯನನ್ನು ಒಲಿಸಿಕೊಳ್ಳಲು ಅವನ ಆರಾಧನೆಯಲ್ಲಿ ತೊಡಗುತ್ತಾನೆ (ಅಂಬಳಿಕೆ ಹಿರಿಯಣ್ಣ, ೧೯೮೫: ೧೦೨೦). ಮಳೆರಾಯನ ಪೂಜೆಯನ್ನು ಸಾಮಾನ್ಯವಾಗಿ ಮುಂಗಾರು ಪ್ರಾರಂಭದ ಏಪ್ರಿಲ್ -ಮೇ ತಿಂಗಳ ಸಮಯದಲ್ಲಿ ಆಚರಿಸುತ್ತಾರೆ. ಊರಿನ ಎಲ್ಲರೂ ನಿಗದಿಯಾದ ಒಂದು ದಿನ ಒಂದಡೆ ಸೇರುತ್ತಾರೆ. ಮಣ್ಣಿನಲ್ಲಿ ಬಸವನನ್ನು ಮಾಡುತ್ತಾರೆ. ಆ ಮಣ್ಣಿನ ಬಸವನ ಮೂರ್ತಿಯ ಹೊಟ್ಟೆಯ ಭಾಗಕ್ಕೆ ಒಂದು ಕಪ್ಪೆಯನ್ನು ಸೇರಿಸುತ್ತಾರೆ. ಮಳೆರಾಯನ ಸಂಕೇತವಾದ ಈ ಕಪ್ಪೆ ಅರಚಿದರೆ ಮಳೆಯಾಗುತ್ತದೆಯೆನ್ನುವ ನಂಬಿಕೆಯ ಹಿನ್ನೆಲೆಯಲ್ಲಿ ಈ ರೀತಿ ಮಾಡಿರಲು ಸಾಧ್ಯ. ಬಸವನ ಮೂರ್ತಿಗೆ ಬೇವಿನಸೊಪ್ಪನ್ನು ಸಿಕ್ಕಿಸುತ್ತಾರೆ. ಗಂಧದಕಡ್ಡಿ, ಕರ್ಪೂರ, ಹಣ್ಣು ಕಾಯಿಗಳಿಂದ ಪೂಜೆ ಮಾಡುತ್ತಾರೆ. ಆ ಮಣ್ಣಿನ ಬಸವನ ಮೂರ್ತಿಯನ್ನು ಸ್ನಾನ ಮಡಿಯಿಂದ ಶುಚಿಯಾಗಿರುವ ಒಬ್ಬ ಹುಡುಗನ ತಲೆಮೇಲೆ ಹೊರಿಸಿಕೊಂಡು ಊರಿನ ಬೀದಿಬೀದಿಗಳಲ್ಲಿ ಮೆರವಣಿಗೆ ಹೋಗುತ್ತಾರೆ. ಪ್ರತಿ ಮನೆಯ ಮುಂದೆ ಹುಡುಗರು ಮಳೆರಾಯನಿಗೆ ಸಂಬಂಧಿಸಿದ ಹಾಡುಗಳನ್ನು ಹೇಳುವರು:

ಮಳೇರಾಯ್ನ ಹೆಂಡ್ತಿ ಮಕ್ಕಳ ತಾಯಿ! ವೊಕ್ಕಳ ಜ್ವಾಳ ಒಬ್ಬಳೆ ತಿಂದ್ಲು
ಉಯ್ಯೋ
ಉಯ್ಯೋ ಮಳೆರಾಯ

ಈ ರೀತಿಯಾಗಿ ಮೂರು ದಿನಗಳವರೆಗೆ ಭಿಕ್ಷೆ ಎತ್ತಿ ಆಹಾರ ಪದಾರ್ಥಗಳನ್ನು ಸಂಗ್ರಹಿಸುತ್ತಾರೆ (ಅಂಬಳಿಕೆ ಹಿರಿಯಣ್ಣ, ೧೯೮೫: ೧೦೩). ಹುಡುಗರು ಬೀದಿಬೀದಿಗಳಲ್ಲಿ ಪದಗಳನ್ನು ಹಾಡುತ್ತಾ ಬಂದಾಗ ಮನೆಯ ಹೆಂಗಸರು ಹುಡುಗನ ತಲೆಯ ಮೇಲೆ ಹರಿಯುವಂತೆ ನೀರು ಹುಯ್ಯುತ್ತಾರೆ. ಬಸವನನ್ನು ಹೊತ್ತಿರುವ ಹುಡುಗ ನೀರು ಹುಯ್ಯುತ್ತಿದ್ದಂತೆಯೇ ನಿಂತಲ್ಲಿಯೇ ತಿರುಗುತ್ತಾನೆ. ಆಕಾಶದಿಂದ ಮಳೆ ಬೀಳುವಂತೆ ನೀರು ತುಂತುರು ಹನಿಹನಿಯಾಗಿ ಬೀಳುವುದು . ಈ ದೃಶ್ಯವು ಮಳೆ ಬೀಳುವಮತೆಯೇ ಕಾಣುತ್ತದೆ. ಇದು ಸಾದೃಶ್ಯತೆಯ ಮೇಲಿನ ಅನುಕರಣ ಮಾಟದ ಒಂದು ನಿದರ್ಶನವಾಗಿದೆ. ದೊಡ್ಡವರು, ಹೆಂಗಸರು, ಮಕ್ಕಳು ಗುಂಪುಗುಂಪಾಗಿ ಮೆರವಣಿಗೆಯಲ್ಲಿ ಬಂದು ಮಳೆರಾಯನ ಕುರಿತು ಹಾಡುಗಳನ್ನು ಹಾಡುತ್ತಾರೆ. ಪ್ರತಿ ಮನೆಯಲ್ಲಿಯೂ ಅಕ್ಕಿ, ರಾಗಿಹಿಟ್ಟು, ಕಾಳು, ತರಕಾರಿ, ಮೆನಸಿನಪುಡಿ, ಉಪ್ಪು, ಇತ್ಯಾದಿ ಅಡುಗೆಗೆ ಬೇಕಾದ ಸಾಮಗ್ರಿಗಳನ್ನು ಸಂಗ್ರಹಿಸಿಕೊಂಡು ಊರಿನ ಹೊರಗಿನ ಬಯಲಲ್ಲಿ ಅಡುಗೆ ಮಾಡುತ್ತಾರೆ. ಪ್ರತಿ ಮನೆಯವರೂ ತಪ್ಪದೇ ಪೂಜೆಯಲ್ಲಿ ಭಾಗವಹಿಸುತ್ತಾರೆ. ಬಯಲಿನಲ್ಲಿ ಕೂತು ಎಲ್ಲರೂ ಊಟವನ್ನು ಮಾಡಿಕೊಂಡು ಸಂತೋಷದಿಂದ ತಮ್ಮ ತಮ್ಮ ಮನೆಗಳಿಗೆ ಹಿಂತಿರುಗುತ್ತಾರೆ. ಮಳೆರಾಯನ ಪೂಜೆ ಮಾಡಿದರೆ ಬರುತ್ತದೆ ಅನ್ನುವ ಬಲವಾದ ನಂಬಿಕೆಯ ಹಿನ್ನೆಲೆಯಲ್ಲಿ ಈ ರೀತಿಯ ಆಚರಣೆಗಳು ಉಳಿದುಕೊಂಡು ಬಂದಿವೆ.

ಮಳೆ ಆಚರಣೆ ಮಾನವನಿಗೆ ಅಗತ್ಯವಾದ ಮಳೆಯನ್ನು ಕುರಿತಾದ ದಾರುಣವಾದ ಮಾನಸಿಕ ಅಭಿವ್ಯಕ್ತಿ ಅಷ್ಟೆ. ಮಳೆ ಅನಿವಾರ್ಯವಾದಂತೆಲ್ಲಾ ಅದು ಪುನರಾವರ್ತನೆಗೊಳ್ಳುತ್ತದೆ. ಮುಂದುವರೆದಂತೆಲ್ಲಾ ಅವನ ಮಾತು ಕಲಾತ್ಮಕ ರೂಪ ಪಡೆಯುತ್ತಾ ಹೊಗುತ್ತದೆ. ಈಗಲೂ ನಮ್ಮಲ್ಲಿ ಮಳೆಗಾಲದ ಪ್ರಾರಂಭವಾದ ದಿನಗಳಲ್ಲಿ ಮಳೆರಾಯನ ಪೂಜೆ ಮಾಡುವುದನ್ನು  ಕಾಣಬಹುದು. ಆನಂದದಿಂದ ಕೇಕೇ ಹಾಕುತ್ತಾ ತಮ್ಮ ಜೊತೆಯವರು ಸಂಗಡ ಮೈಮರೆತು ಹಾಡುತ್ತಾ ಕುಣಿಯುತ್ತಾರೆ.

ಹುಯ್ಯೋ ಹುಯ್ಯೋ ಮಳೆರಾಯ! ಮಾವಿನ ತೋಟಕೆ ನೀರಿಲ್ಲ
ಬಾರೋ
ಬಾರೋ ಮಳೆರಾಯ ! ಬಾಳೆ ತೋಟಕ್ಕೆ ನೀರಿಲ್ಲ
ಬಾರಪ್ಪೇ
ಮಳೆರಾಯ ನೀನು! ಬಂದುಯ್ಯೋ ದೇವೇಂದ್ರ
(ಉದ್ಧೃತ: ಅಗ್ರಹಾರ ಕೃಷ್ಣಮೂರ್ತಿ, ೧೯೭೯:೩)

ಈ ರೀತಿಯಾಗಿ ಹಾಡುಗಳನ್ನು ಮತ್ತೆ ಮತ್ತೆ ಹಾಡಿಕೊಂಡು ಸಂತೋಷದಿಂದ ಕುಣಿದಾಗ ಮಳೆಹನಿ ಹಾಕುತ್ತಾ ಬಂದ ಸಂದರ್ಭಗಳು ಉಂಟೆಂದು ಹೇಳುತ್ತಾರೆ. ಅಂದರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶಗಳು ಎರಡು: ಹಾಡಿ, ಕುಣಿದು ಕುಪ್ಪಳಿಸಿದ್ದರಿಂದ ಮಳೆ ಬಂತೆಂದಾಗಲೀ ಅಥವಾ ಅವರು ಪೂಜೆ ಮಾಡದಿದ್ದ ವರ್ಷದಲ್ಲಿ ಮಳೆ ಬರುತ್ತಿರಲಿಲ್ಲವೆಂದಾಗಲೀ ಅರ್ಥ ಅಲ್ಲ. ಮಳೆ ಬಂದರೆ ಒಟ್ಟಾರೆ ಅವರಿಗೆ ಸಮಾಧಾನ ಸಿಗುತ್ತದೆ. ತಮಗಾಗಿಯೇ ತಮ್ಮ ಅಭ್ಯದಯಕ್ಕಾಗಿಯೇ ಈ ಪೂಜೆ ಆರಾಧನೆ ಎಂದುಕೊಂಡು ಸಮ್ಮನಾಗಬೇಕಾಗುತ್ತದೆ. ಕೃಷಿಯೇ ಮುಖ್ಯ ಜೀವನಾಧಾರವಾದ ಹಾಗೂ ಕೃಷಿಗಾಗಿ ಮಳೆಯನ್ನೇ ಅವಲಂಬಿಸಿರುವ ಭಾರತದಂತಹ ಹಿಂದುಳಿದ ದೇಶಗಳಲ್ಲಿ ಜನಪದರು ಪ್ರಾಕೃತಿಕ ಶಕ್ತಿಗಳ ಪೈಕಿ ಮಳೆರಾಯನಿಗೆ ಹೆಚ್ಚಿನ ಮಹತ್ವವನ್ನು ನೀಡಿದ್ದಾರೆ. ತಮ್ಮ ಬದುಕಿನ ಸುಖ ಸಂತೋಷಗಳಿಗೂ ಕಾರಣವಾದ ಮಳೆಯನ್ನು ಕುರಿತು ಅಪಾರವಾದ ಗೌರವ ಕಾಳಜಿ ಈ ಜನರಲ್ಲಿರುವುದು ಆಶ್ಚರ್ಯವೇನಲ್ಲ. ಭಾರತವೊಂದೇ ಅಲ್ಲದೆ ಆಫ್ರಿಕಾದ ಬುಡಕಟ್ಟುಗಳಲ್ಲಿ, ಪ್ಲೂಬ್ಲೊ ಇಂಡಿಯನ್ನರಲ್ಲಿ, ಹೀಬ್ರೂಕೆಲ್ಯಕ್, ಯೂಜಿ ಜಾಕೊ ಇಂಡಿಯನ್ ಮೊದಲಾದ ಜನಸಮೂಹದಲ್ಲಿ ಮಳೆ ಮತ್ತು ಅದಕ್ಕೆ ಸಂಬಂಧಿಸಿದ ವಿದ್ಯಮಾನಗಳ ಬಗೆಗೆ ವೈವಿಧ್ಯಮಯವಾದ ಆಚರಣೆಗಳು ಪ್ರಚಲಿತವಾಗಿವೆ.

ಭೂಮಿ ಪೂಜೆ

ಯಾವುದೇ ಪ್ರದೇಶದ ಜನಪದವಾದರೂ ಅದು ತನ್ನ ಸುತ್ತಲಿನ ಭೌಗೋಳಿಕ, ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂಶಗಳ ಪ್ರಭಾವದಿಂದ ರೂಪುಗೊಳ್ಳುತ್ತದೆ. ಇಂತಹ ಪ್ರಭಾವಗಳೆನೇ ಇರಲಿ ಜಾನಪದ ಆಯಾ ಪ್ರದೇಶದ ವಿಶಿಷ್ಟವಾದ ಗುಣಗಳಿಂದ ರೂಪುಗೊಳ್ಳುತ್ತದೆ. ಒಂದೇ ಸಂಪ್ರದಾಯಾಚರಣೆ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಆಚರಣೆಗೊಳ್ಳುತ್ತದೆ. ವ್ಯವಸಾಯ ಸಂಬಂಧಿಯಾದ ಆಚರಣೆಯನ್ನು ಗಮನಿಸಿದರೆ ಈ ಅಂಶಗಳು ಸ್ಪಷ್ಟವಾಗುತ್ತದೆ. ಈ ಸಂಪ್ರದಾಯಾಚರಣೆಗಳು ವಿಶಿಷ್ಟವಾದ ಹಾಗೂ ಅರ್ಥಪೂರ್ಣವಾದ ಮೂಲದಿಂದ ಕಲ್ಪಿತವಾಗಿರಬಹುದು. ಇಲ್ಲವೆ ಮಾನವ ಪ್ರಕೃತಿಯೊಡನೆ ಇಟ್ಟುಕೊಂಡಿರುವ ಸಹಜ ಹೊಂದಾಣಿಕೆಯ ಪ್ರವೃತ್ತಿಯಿಂದ ಜನಿಸಿರಬಹುದು. ವಿಶ್ವದ ಎಲ್ಲಾ ಜನರು ಕೂಡ ಕೃಷಿಯನ್ನು ಒಂದು ಗೌರವಯುತವಾದ ಕಸುಬು ಎಂಬುದಾಗಿ ಭಾವಿಸಿದ್ದಾರೆ. ಅಂತೆಯೇ ನಮ್ಮ ಸಮಾಜದಲ್ಲಿಯೂ ರೈತನ ಸ್ಥಾನ ಹಿರಿದಾದುದು. ಪ್ರತಿವರ್ಷ ವಸಂತಮಾಸದಲ್ಲಿ ರಾಜನು ಭೂಮಿಯನ್ನು ಉಳುಮೆ ಮಾಡುತ್ತಿದ್ದುದಾಗಿ ತಿಳಿಯುತ್ತದೆ. ಈ ಆಚರಣೆ ಪ್ರಪಂಚದಾದ್ಯಂತ ಕಂಡುಬರುತ್ತದೆ. ಫೇಜರ್ ಅವರು ಪ್ರಾಚೀನ ಜನಾಂಗಗಳಲ್ಲಿ ರೂಢಿಯಲ್ಲಿದ್ದ (first ploughing) ಇಂತಹ ಅನೇಕ ಆಚರಣೆಗಳ ಬಗೆಗೆ ಮಾಹಿತಿ ಸಂಗ್ರಹಿಸಿ ವಿವರವಾಗಿ ಚರ್ಚಿಸಿದ್ದಾರೆ (ಫ್ರೇಜರ್, ೧೯೬೬: ೧೦೮). ಇವತ್ತಿಗೂ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಒಳ್ಳೆಯ ಘಳಿಗೆಯಲ್ಲಿ ತಮ್ಮ ಉಳುಗೆಲಸದ ನೇಗಿಲಿಗೆ ಪೂಜೆ ಮಾಡಿ ನಂತರ ಉಳುವುದಕ್ಕೆ ಪ್ರಾರಂಭ ಮಾಡುತ್ತಾರೆ. ಇದನ್ನು ‘ಹೊನ್ನಾರು’ ಎಂದು ಕರೆಯುವರು.

ದಕ್ಷಿಣ ಕರ್ನಾಟಕದ ಪ್ರದೇಶದಲ್ಲಿ ಯುಗಾದಿಯ ಮಾರನೆಯ ದಿನ ಹೊಸದಾಗಿ ಉಳುಮೆ ಮಾಡಲು ಪ್ರಾರಂಭ ಆರಂಭಿಸುತ್ತಾರೆ. ಇದನ್ನು ‘ಹೊನ್ನಾರು,’ ‘ಹೊನ್ನೇರು,’ ‘ ಹೊನ್ನುಕ್ಕೆ,’ ‘ಮೊದಲಾರು’, ‘ ಮೊದಲುಕ್ಕೆ’, ಎಂದು ಕರೆಯುತ್ತಾರೆ. ಉಳುವುದಕ್ಕೆ ವಿಧಿವತ್ತಾಗಿ ನಡೆಸಬೇಕಾದ ಪವಿತ್ರ ಕ್ರಿಯೆಯಾಗಿದೆ. ಹೊನ್ನಾರನ್ನು ಯಾರು ಬೇಕಾದವರು ಮಾಡುವಂತಿಲ್ಲ. ಯಾರು ಹೊನ್ನಾರನ್ನು ಹೊಡಬೇಕೆಂಬುದನ್ನು ಊರಿನ  ಜೋಯಿಸರು ನಿಗದಿ ಮಾಡುತ್ತಾರೆ. ಯುಗಾದಿಯ ಮಾರನೆಯ ದಿನ ರೈತ ತಲೆಗೆ ಪೇಟ ಧರಿಸಿ, ಉತ್ತರಾಭಿಮುಖವಾಗಿ ದನಗಳನ್ನು ನಿಲ್ಲಿಸಿ ನೇಗಿಲುಹೂಡಿ ಪೂಜೆ ಮಾಡಿ ಊರ ಸುತ್ತ ಒಂದು ಬಾರಿ ಉಳುತ್ತಾನೆ. ಇದನ್ನು ‘ಊರುಕ್ಕೆ’ ಎಂದು ಕರೆಯುತ್ತಾರೆ. ಬಳಿಕ ಬೇರೆಯವರೆಲ್ಲ ತಮ್ಮ ತಮ್ಮ ಶಾಸ್ತ್ರಕ್ಕಾಗಿ ಒಂದು ಸುತ್ತು ಉಳುವುದು ಎಂದು ಕರೆಯುತ್ತಾರೆ. ಬಳಿಕ ಬೇರೆಯವರೆಲ್ಲ ತಮ್ಮ ತಮ್ಮ ಶಾಸ್ತ್ರಕ್ಕಾಗಿ ಒಂದು ಸುತ್ತು ಉಳುವುದು  (Randhawa. M. S., 1980: Vol. No.1:298). ಹೊಲಗಳಲ್ಲಿ ಆರನ್ನು ಕಟ್ಟಿ ಹೊಲದ ಉತ್ತರ ಭಾಗದಿಂದ ಆರಂಭಿಸುತ್ತಾರೆ. ಹೊಲದ ಸುತ್ತ ಐದು ತೆರೆಗಳಷ್ಟು ಉತ್ತು ಬರುತ್ತಾರೆ. ಹೊರರಾಜ್ಯಗಳಲ್ಲಿಯೂ ಈ ಆಚರಣೆ ರೂಢಿಯಲ್ಲಿರುವುದು ತಿಳಿದುಬರುತ್ತದೆ. ಬಂಗಾಳದಲ್ಲಿ ಇದನ್ನು ‘ಹಲ್‌ಚರೆ ‘ ಅಥವಾ  ‘ಹಲ್‌ಪ್ರವಹ್‘ ಎಂದು ಕರೆಯುತ್ತಾರೆ. ಕರ್ನಾಟಕದ ಕೆಲವು ಭಾಗಗಳಲ್ಲಿ ಮುಖ್ಯವಾಗಿ ಮಂಡ್ಯ ಮತ್ತು ಮೈಸೂರು ಜಿಲ್ಲೆಯ ಬನ್ನೂರು, ಮಳವಳ್ಳಿ, ಮಂಡ್ಯ ಜಿಲ್ಲೆಯಮಂಡ್ಯ, ಪಾಂಡವಪುರ, ಶ್ರೀರಂಗಪಟ್ಟಣ ತಾಲ್ಲೂಕಿನ ಹಳ್ಳಿಗಳಲ್ಲಿಯೂ ಭೂಮಿಪೂಜೆಯ ಆಚರಣೆ ಉಳಿದುಕೊಂಡು ಬಂದಿದೆ. ಭೂಮಿಪೂಜೆಯ ದಿನ ಕೇವಲ ಉಳುವ ಶಾಸ್ತ್ರ ಮಾಡಿ ಬರುವುದೇ ರೂಢಿ. ಭೂಮಿಪೂಜೆಯ ದಿನ ಕೇವಲ ಉಳುವಶಾಸ್ತ್ರ ಮಾಡಿ ಬರುವುದೇ ರೂಢಿ. ಭೂಮಿಪೂಜೆಯ ಮುಖ್ಯ ಆಶಯ ಭೂಮಿಯು ಫಲವತ್ತಾಗಲಿ, ಫಲವತ್ತು ಎಂದಿಗೂ ಕ್ಷಯಿಸದೆ ಉಳಿದುಕೊಂಡು ಬರಲಿ ಎನ್ನುವ ಅಂಶಗಳು ಒಳಗೊಂಡಿದೆ. ನಮ್ಮ ಪೂರ್ವಿಕರ ಬಹುತೇಕ ಎಲ್ಲಾ  ಚಟುವಟಿಕೆಗಳು ವ್ಯವಸಾಯ ಸಂಬಂಧಿಯಾಗಿದ್ದು ಅವು ಋತುಗಳ ಗತಿಯನ್ನು ಚಂದ್ರ ಸೂರ್ಯರ ಚಲನೆಯನ್ನು ಅವಲಂಬಿಸಿದ್ದವು (ವೃಷಭೇಂದ್ರಸ್ವಾಮಿ ಎಸ್.ಎಂ., ೧೯೮೭: ೫೬) ಎನ್ನುವುದರಲ್ಲಿ ಅನುಮಾನವಿಲ್ಲ. ಈ ಆಚರಣೆಗಳಲ್ಲಿ ಮಳೆ, ಬೆಳೆ, ಸಮೃದ್ಧಿಯ ಅಂಶಗಳು ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡಿವೆ. ಅವುಗಳನ್ನು ಬಿಡಿಸಲು ಬರುವುದಿಲ್ಲ. ಈ ಕಾರಣದಿಂದಾಗಿಯೇ ಅವುಗಳು ಜನರ ಮನಸ್ಸಿನಲ್ಲಿ ಹುದುಗಿಹೋಗಿವೆ. ಅವುಗಳು ರೈತಾಪಿಗಳಿಗೆ ರತ್ತಗತವಾಗಿಯೇ ತಲೆಮಾರಿಗೆ ವರ್ಗಾಯಿಸಲ್ಪಡುತ್ತವೆ. ಅವುಗಳಿಗೆ ಯಾವುದೇ ಬಾಹ್ಯ (ಮಹಾದೇವು ಎಚ್. ಪಿ., ೩೦ ವರ್ಷ ಹರಿಜನ, ಹೊನಗನಹಳ್ಳಿ : ೧೯೯೨) ಒತ್ತಡಗಳನ್ನು ಹೇರುವ ಅವಶ್ಯಕತೆ ಇರುವುದಿಲ್ಲ. ಅವು ಸ್ವತಂತ್ರವಾಗಿ ಪ್ರವಹಿಸುತ್ತಿರುತ್ತವೆ.

ತುಳುನಾಡಿನ ಮಾತೃಪ್ರಧಾನವಾದ ಜಾತಿಗಳು ಹೈವಕ್ಕೆ ಬಂದಾಗ ಭೂಮಿತಾಯಿಯನ್ನು ಪೂಜಿಸುವುದನ್ನು ಪ್ರಾರಂಭಿಸಿದರು. ಭೂಮಿಯನ್ನು ಅಲ್ಲಿನ ಮಣ್ಣಿನ ಮಕ್ಕಳು ಮುಂಜಾನೆ ಎದ್ದು ಮಾತಿಗೆ ಮೊದಲು ನೆನೆಯುತ್ತಾರೆ. ಅಂತಹ ಸಂದರ್ಭದ ಒಂದು ಹಾಡನ್ನು ಉಲ್ಲೇಖಿಸುವುದು ಅರ್ಥಪೂರ್ಣವಾಗಿದೆ.

ಸೊಲ್ಲಿಗಿಂದೆ ಮೊದಲೇ ಯಾವ ದೇವರ ನೆನೆವೊ
ಎಳ್ಳು
ಜೀರಿಗಿಯಾ ಬೆಳುವಾಳು | ಭೂಮಿತಾಯಿ
ಆಕೆಯ
ಮೊದಲು ನೆನವೇನೇ |

ಎಂಬುದಾಗಿ ಸ್ವರವೆತ್ತಿ ಹಾಡುತ್ತಾರೆ. ಮಳೆ, ಬೆಳೆ, ಫಲಸಮೃದ್ಧಿಗಾಗಿ ಭೂಮಿತಾಯಿಯನ್ನು ಪ್ರಾರ್ಥಿಸುವ ಈ ರೀತಿಯ ಕೃತಜ್ಞತಾಭಾವ ರೈತಾಪಿಗಳ ಅತ್ಯಂತ ಶ್ರೇಷ್ಠ ನಿಲುವೆನ್ನಬೇಕು.

ತಿಂಗಳು ಮಾವನ ಪೂಜೆ 

ತಿಂಗಳು ಮಾವನ ಪೂಜೆಯ ಮಳೆಯನ್ನು ಕುರಿತು ಆಚರಿಸುವ ಮತ್ತೊಂದು ಸಂಪ್ರದಾಯ. ಸರಿಯಾದ ಸಮಯಕ್ಕೆ ಮಳೆ ಬಾರದೆ ಇದ್ದಾಗ ಮಳೆರಾಯನ ಒಡೆಯನಾದ ತಿಂಗಳು ಮಾವನನ್ನು (ಚಂದ್ರ) ಪೂಜಿಸುವುದು ರೂಢಿ. ಇದನ್ನು ‘ಬೆಳ್ದಿಂಗ್ಳಪ್ಪನ ಪೂಜೆ’  ಎಂದು ಕರೆಯುತ್ತಾರೆ. ತಿಂಗಳು ಮಾವನಿಗೂ ಮಳೆಗೂ ಹಳ್ಳಿಗರು ಒಂದು ಬಗೆಯ ನಿಕಟ ಸಂಬಂಧವನ್ನು ಗುರುತಿಸಿದಂತೆ ಕಾಣುತ್ತದೆ. ಮಳೆಯ ಮೇಲೆ ತಿಂಗಳು ಮಾವನ ಪ್ರಭಾವ ಇದೆ ಎಂಬ ಕಲ್ಪನೆಯಲ್ಲಿ ಮಳೆಯ ದೈವವನ್ನು ಈ ರೀತಿಯಾಗಿ ಗುರುತಿಸಿಕೊಂಡು ಆರಾಧಿಸುತ್ತಾ ಬಂದಿದ್ದಾರೆ. ಮಳೆಯನ್ನು ತರುವವನು ‘ದೇವೇಂದ್ರಾಯ’ ಎಂಬ ನಂಬಿಕೆಯೂ ಪ್ರಚಲಿತವಾಗಿದೆ. ಈ ಪೂಜೆಯನ್ನು ಸಾಮಾನ್ಯವಾಗಿ ಚೈತ್ರದಿಂದ ಕಾರ್ತೀಕಮಾಸಗಳವರೆಗಿನ ಶುಕ್ಲಪಕ್ಷದ ದಿನಗಳಲ್ಲಿ ಆಚರಿಸಲಾಗುತ್ತದೆ. ಹಳ್ಳಿಗಳಲ್ಲಿ ತಿಂಗಳು ಮಾವನ ಪೂಜೆಯು ಇನ್ನು ಒಂದು ತಿಂಗಳು ಇದೆ ಎನ್ನುವಾಗಲೇ ಚಿಕ್ಕ ಮಕ್ಕಳು ಗುಂಪು ಕಟ್ಟಿಕೊಂಡು ಮನೆಮನೆಗೂ ಹೋಗಿ:

 ಉಳ್ಳೀಯ ಹೊಲ್ದಲಿ
ಹೊಳ್ಳಾಡ್ಕಂಡೆ
ಬಂದೀವಿ
ಇಕ್ಕಮ್ಮ
ಚಿಕ್ಕಿ ಭಿಕ್ಷಾವ

ಎಂಬುದಾಗಿ ಹಾಡು ಹಾಡಿಕೊಂಡು ಮನೆಯವರು ಕೊಟ್ಟ ಅಕ್ಕಿ, ರಾಗಿಹಿಟ್ಟು, ಹಣ ಮುಂತಾದುವನ್ನು ಸಂಗ್ರಹಿಸುತ್ತಾರೆ (ಹಿರಿಯಣ್ಣ, ೧೯೮೫:೧೦೦). ಚಂದ್ರರನ್ನು, ಹುಲಿ, ಹಾವುಗಳನ್ನು ಪೂಜಿಸುತ್ತಿದ್ದ ದ್ರಾವಿಡರು ನಡೆಸುತ್ತಿದ್ದ ಚಂದ್ರನ ಪೂಜೆಯೇ ಈ ಹಬ್ಬವಿರಬೇಕು ಅನಿಸುತ್ತದೆ. ಕರ್ನಾಟಕದ ಪಶ್ಚಿಮ ಕರಾವಳಿಯಲ್ಲಿ ಚಂದ್ರನ ದೇವಾಲಯವಿತ್ತೆಂದು ಕ್ರಿ.ಶ. ೯ನೆಯ ಶತಮಾನದ ಗ್ರೀಕ್ ಪ್ರಹಸನವೊಂದರಲ್ಲಿ  ಬರೆದಿರುವುದನ್ನು ಇಲ್ಲಿ ಸ್ಮರಿಸಬಹುದು. ಕಾಲಕ್ರಮದಲ್ಲಿ ಚಂದ್ರನ ಪೂಜೆ, ಚಂದ್ರಶೇಖರನ ಪೂಜೆಯೊಂದಿಗೆ ಸೇರಿ ಹೋಗಿರಬಹುದು. ಚಂದ್ರನನ್ನು ಪೂಜಿಸುವ ದ್ರಾವಿಡರ ಈ ಹಬ್ಬ ಉಳಿದು ಬಂದಿರುವುದಕ್ಕೆ  ತುಮಕೂರು, ಹಾಸನ, ಚಿಕ್ಕಮಗಳೂರು, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ನಡೆಯುವ ಈ ತಿಂಗಳು ಮಾವನ ಪೂಜೆಯು ಸಾಕ್ಷಿಯಾಗಿದೆ (ಮತಿಘಟ್ಟ ಕೃಷ್ಣಮೂರ್ತಿ, ೧೯೮೪ : ೪೭೬). ಹಳ್ಳಿಯಲ್ಲಿ ಬೆಳ್ದಿಂಗಳಪ್ಪನ ಪೂಜೆಯನ್ನು ವರ್ಷಕ್ಕೊಮ್ಮೆ ಯುಗಾದಿ ಹಬ್ಬದ ನಂತರ ಬೇಸಿಗೆಯಲ್ಲಿ ಆಚರಿಸುತ್ತಾರೆ. ಯುಗಾದಿ ಕಾಲದ ಬೆಳ್ದಿಂಗಳ ಬೆಳಕು ಶುಭದ ಸಂಕೇತವೆಂದು ತಿಳಿದು ಆ ಹೊತ್ತಿನಲ್ಲಿಯೇ ಎಲ್ಲ ಪ್ರದೇಶಗಳಲ್ಲಿಯೂ ಆಚರಿಸುತ್ತಾರೆ. ವಾಸ್ತವವಾಗಿ ಯುಗಾದಿಯೇ ನಮ್ಮ ಹಳ್ಳಿಗರಿಗೆ ಶ್ರೇಷ್ಠವಾದ ಹಬ್ಬ.

ತಿಂಗಳು ಮಾವನ ಪೂಜೆಯನ್ನು ಮಾಡಲು ಹಳ್ಳಿಯ ಹೆಂಗಸರು ಒಂದು ಸೋಮವಾರದಂದು ದಿನ ಗೊತ್ತುಪಡಿಸಿ ಆ ದಿನದಿಂದ ಐದು, ಒಂಬತ್ತು ಇಲ್ಲವೆ ಹನ್ನೆರಡು ದಿನಗಳವರೆಗೆ ಈ ಪೂಜೆಯನ್ನು ಮಾಡುತ್ತಾರೆ. ಪೂಜೆ ನಡೆಯುವ ಪ್ರತಿದಿನವೂ ಹೆಣ್ಣು ಮಕ್ಕಳು ಸಂಭ್ರಮ, ಸಂತೋಷದಿಂದ ಗುಂಪು ಸೇರುತ್ತಾರೆ. ಇಲ್ಲಿನ ಎಲ್ಲಾ ಕಾರ್ಯಗಳಲ್ಲಿಯೂ  ಹೆಣ್ಣು ಮಕ್ಕಳದೇ ಮುಖ್ಯಪಾತ್ರ ಮದುವೆಯಾಗದೆ ಇರುವ ಹೆಣ್ಣು ಮಕ್ಕಳ ಜೊತೆಗೆ ಮದುವೆಯಾದ ಹೆಂಗಸರು ಕ್ರಿಯಾತ್ಮಕವಾಗಿ ಭಾಗವಹಿಸುತ್ತಾರೆ. ಹಿರಿಯರು ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತಾರೆ. ಅಂತಹ ಸಮಯದಲ್ಲಿ ಸಣ್ಣ ಪುಟ್ಟ ಹುಡುಗರೆಲ್ಲ ಮಡಿಬಟ್ಟೆಯನ್ನು ಧರಿಸಿಕೊಂಡು ಕಾತುರದಿಂದ ಎಲ್ಲವನ್ನು ಗಮನಿಸುತ್ತಿರುತ್ತಾರೆ. ಹಳ್ಳಿಯ ಪ್ರತಿ ಮನೆಯವರೂ ಭಾಗವಹಿಸುವುದರಿಂದ ಹಬ್ಬದ ವಾತಾವರಣವಿರುತ್ತದೆ. ಊರಿನ ಮಧ್ಯೆ ಇರುವ ಬಯಲು ಪ್ರದೇಶದಲ್ಲಿ ಇಲ್ಲವೇ ಮಾರಮ್ಮನ ದೇವಸ್ಥಾನದ ಮುಂದುಗಡೆ ನೆಲವನ್ನು ಸ್ವಚ್ಚಗೊಳಿಸಿ ಸಗಣಿಯಿಂದ ಸಾರಿಸಿ ರಂಗವಲ್ಲಿಯನ್ನು ಹಾಕಿ ಸಿಂಗರಿಸುತ್ತಾರೆ. ರಂಗೋಲಿಯಿಂದ ತೇರು, ಹಲುಬೆ, ನೇಗಿಲು ಸರ್ಪ, ಹನುಮ, ಅರ್ಧಚಂದ್ರ, ಚಂದ್ರಮಂಡಲ ಹೂವಿನಚಪ್ಪರ ಇತ್ಯಾದಿಗಳನ್ನು ರಂಗೋಲಿಯಿಂದ ಬಿಡುತ್ತಾರೆ. ಅರ್ಧ ಚಂದ್ರಕೃತಿಯ ಮೇಲೊಂದು ಮಣೆಯನ್ನು ಇಟ್ಟು ಸದರ ಮೇಲೆ ತಂಬಿಗೆಯನ್ನು ಕಳಸವಾಗಿ ಮಾಡಿ ಇಡುವರು. ಅದರ ಮೇಲೆ ಒಂದು ರಾಗಿ ಮುದ್ದೆ ಇಲ್ಲವೆ ರೊಟ್ಟಿಯನ್ನು ಇಡುವರು. ಊರಿನಲ್ಲಿ ಮನೆಮನೆಯಲ್ಲಿ ‘ತಿಂಗಳು ಮಾವನ ತಂಗಳು ಭಿಕ್ಷೆ ಕೊಡಿರವ್ವಾ’ ಎಂದು ಹಾಡಿ ಸಂಗ್ರಹಿಸಿದ ದವಸಧಾನ್ಯದಿಂದ ರೊಟ್ಟಿ ಎಲ್ಲವೆ ಮುದ್ದೆಯನ್ನು ಮಾಡುವರು.

ತಿಂಗಳು ಮಾವನನ್ನು ಪೂಜಿಸುವ ದಿನಗಳಲ್ಲಿ ಸಂಜೆಯ ವೇಳೆಯಲ್ಲಿ ಹೆಣ್ಣುಮಕ್ಕಳು ಮುಮ್ಮೇಳ ಹಿಮ್ಮೇಳಗಳಾಗಿ ಗುಂಪು ಕಟ್ಟಿಕೊಂಡು ತಿಂಗಳುಮಾವನ ಪದಗಳನ್ನ ಹಾಡುತ್ತಾರೆ. ಹೆಣ್ಣುಮಕ್ಕಳು ಮಾತ್ರವೇ ಹಾಡು ಹೇಳುವುದು ವಿಶೇಷ. ಗಂಡುಮಕ್ಕಳು ವೇಷಗಳನ್ನು ಹಾಕಿಕೊಂಡು ಪ್ರದರ್ಶನ ನೀಡುತ್ತಾರೆ. ರೈತರಿಗೆ ಬೇಸರವನ್ನು ಕಳೆಯಲು ಇದೊಂದು ಸುಸಮಯವಾಗಿದೆ. ಮನೆಯ ಬೀದಿಯವರೆಲ್ಲ ಮಾತಾಡಿಕೊಂಡು ತಮ್ಮತಮ್ಮ ಅನುಕೂಲಕ್ಕೆ ತಕ್ಕಂತೆ ಅಕ್ಕಿ,ಕಾಯಿ, ಬೆಲ್ಲ, ಹಣಕಾಸು ಮೊದಲಾದವನ್ನು ವಂತಿಕೆಯಾಗಿ ನೀಡಿ ಪೂಜೆ ಮಾಡಲು ಸಹಕರಿಸುತ್ತಾರೆ. ಈ ಸಂದರ್ಭದಲ್ಲಿ ರೈತಾಪಿ ಕೆಲಸ ಅತ್ಯಂತ ಉಲ್ಲಾಸಕರವಾಗಿರುತ್ತದೆ. ಹುಣ್ಣಿಮೆಯ ಬೆಳದಿಂಗಳಲ್ಲಿ ನೆರೆಯುವ ಈ ಹಬ್ಬವು ದೊಡ್ಡ ಹಬ್ಬವೆಂದೇ ಹೇಳಬಹುದು. ತಾವು ಸಂಗ್ರಹಿಸಿದ ದವಸಧಾನ್ಯದಿಂದ ಅಡುಗೆ ಮಾಡಿ ಎಡೆಯನ್ನು ಮಾಡಿರುತ್ತಾರೆ. ಕರ್ನಾಟಕದ ಕೆಲವು ಭಾಗಗಳಲ್ಲಿ ಚಂದ್ರನನ್ನು ಬೆಳದಿಂಗಳ ರೂಪದಲ್ಲಿ ಇವತ್ತಿಗೂ ಪೂಜಿಸುತ್ತಾರೆ. ಸಾಮಾನ್ಯವಾಗಿ ಈ ರೀತಿಯ ಆಚರಣೆಯನ್ನು ತಿಂಗಳು ಮಾವನ ಪೂಜೆ, ಬೆಳದಿಂಗಳ ಪೂಜೆ, ಚಂದ್ರಮ್ಮನ ಪೂಜೆ, ಬೆಳದಿಂಗಳು ಇಡುವುದು, ಬೆಳ್ದಿಂಗ್ಳಪ್ಪನ ಪೂಜೆ ಮುಂತಾದ ಹೆಸರುಗಳಿಂದ ಕರೆಯುತ್ತಾರೆ.

ಈ ಆಚರಣೆಗಳು ಜನಪದರಲ್ಲಿ ಧಾರ್ಮಿಕ ಭಾವನೆಗಳೊಂದಿಗೆ, ಮನರಂಜನೆಯನ್ನು ಕೂಡ ಒದಗಿಸುತ್ತವೆ. ಬೆಳದಿಂಗಳ ರಾತ್ರಿಯಲ್ಲಿ ಆಚರಿಸಲ್ಪಡುವ ಈ ಆಚರಣೆ ಮಕ್ಕಳಲ್ಲಿ ಕುತೂಹಲ ಹುಟ್ಟಿಸುತ್ತದೆ. ಈ ಪೂಜೆಯ ಆಚರಣೆಯಲ್ಲಿ ಪ್ರಾದೇಶಿಕ ಭಿನ್ನತೆಯನ್ನು ಗುರುತಿಸಬಹುದು. ಪೂಜಾವಿಧಾನ, ಆಚರಣೆ, ನಂಬಿಕೆ ಹಾಗೂ ಸಂಪ್ರದಾಯಗಳಲ್ಲಿ ಏಕತೆ ಕಂಡುಬರುವುದಿಲ್ಲ.