ಹೆಚ್ಚು ಮಾಡುವುದು          

ರೈತರು ವ್ಯವಸಾಯದ ಪ್ರಾರಂಭದ ದಿನಗಳಿಂದ ಬೆಳೆಯು ಕೊಯ್ಯಲಿಗೆ ಬರುವತನಕ ಹಲವಾರು ಆಚರಣೆಗಳನ್ನು ಆಚರಿಸುತ್ತಾರೆ. ಅಂತಹ ಒಂದು ಆಚರಣೆಯೇ ‘ಹೆಚ್ಚು ಮಾಡುವುದು’. ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿನ ಹಳ್ಳಿಗಳಲ್ಲಿ ಹೊಲಗದ್ದೆಗಳಲ್ಲಿ ಬೆಳೆಬೆಳೆದು ಕಟಾವಿಗೆ ಬಂದ ಸಂದರ್ಭದಲ್ಲಿ ಹೆಚ್ಚುಮಾಡುವ ಆಚರಣೆ ಮಾಡುತ್ತಾರೆ. ಇದನ್ನು ಉತ್ತರ ಕರ್ನಾಟಕದಲ್ಲಿ ‘ಹುಲುಸು’ ಎನ್ನುತ್ತಾರೆ. ಇದು ಕೊಯ್ಯಲಿಗೆ ಮುಂಚೆ ನಡೆಸುವ ಒಂದು ಆಚರಣೆ. ಹೊಲಗದ್ದೆಗಳಲ್ಲಿ ಬೆಳೆಬೆಳೆದು ನಿಂತ ತೆವರಿಗೆ (ಬದುವಿನ) ಪಕ್ಕದಲ್ಲಿಯೋ ಅಥವಾ ಗದ್ದೆಯ ಮಧ್ಯಭಾಗದಲ್ಲಿಯೋ ಕೊಂಚ ಬೆಳೆದ ಭಾಗವನ್ನು ಕೊಯ್ದು ‘ಅರಿ’ ಹಾಕಿ ಅದರ ಮೇಲೆ ಮೂರು ಕಲ್ಲುಗಳನ್ನು ಇಟ್ಟು ಅದಕ್ಕೆ ಅರಿಶಿಣ, ಕುಂಕುಮ, ಗಂಧದಕಡ್ಡಿ, ಕಾಯಿ ಕರ್ಪೂರಗಳಿಂದ ಪೂಜೆ ಮಾಡುತ್ತಾರೆ. ‘ಬೆಳೆಯು ಹೆಚ್ಚಲಿ’ ಎಂದು ಭೂಮಿತಾಯಿಯನ್ನು ಪ್ರಾರ್ಥಿಸುತ್ತಾರೆ. ನಂತರ ಮನೆಯಿಂದ ತೆಗೆದುಕೊಂಡು ಹೋದ ಮೊಸರನ್ನು ಇಲ್ಲವೆ ಹಾಲನ್ನು ಎಡೆಮಾಡಿ, ನಂತರ ಗದ್ದೆಯ ಸುತ್ತಲೂ ಚೆಲ್ಲುತ್ತಾ ಬರುತ್ತಾರೆ. ಭೂಮಿತಾಯಿಗೆ ಕೃತಜ್ಞತೆಯನ್ನು ಸಲ್ಲಿಸುವ ಈ ಆಚರಣೆ ಮಲೆನಾಡಿನ ‘ಭೂಮಿಹುಣ್ಣಿಮೆ’ ಆಚರಣೆಯನ್ನು ಸ್ಥೂಲವಾಗಿ ಹೋಲುತ್ತದೆ. ಈ ಹೆಚ್ಚು ಮಾಡುವ ಕ್ರಿಯೆಯು ವ್ಯವಸಾಯದ ಸಂದರ್ಭದಲ್ಲಿ ಮುಖ್ಯವಾದುದು. ಬಯಲುಸೀಮೆ ಪ್ರದೇಶದಲ್ಲಿ ‘ಹೆಚ್ಚುಮಾಡದೆ’ ಯಾರೂ ಕೊಯ್ಯಲು ಮಾಡುವುದಿಲ್ಲ. ಹೆಚ್ಚುಮಾಡದೆ ಕೊಯ್ಯಲು ಮಾಡಿದರೆ ಬೆಳೆಯು ಹೆಚ್ಚುವುದಿಲ್ಲ ಅನ್ನುವುದು ಇಲ್ಲಿನ ರೈತಾಪಿಗಳ ನಂಬಿಕೆ. ಭೂಮಿತಾಯಿಗೆ ಮೀಸಲಾಗಿ ತಾವು ಬೆಳೆದ ಫಸಲಿನಲ್ಲಿ ಸ್ವಲ್ಪಭಾಗವನ್ನು ಅರ್ಪಿಸುವುದರ ಮೂಲಕ ಭೂಮಿತಾಯಿಯನ್ನು ಒಲಿಸಿಕೊಳ್ಳುವುದು ಜನಪದರ ಉದ್ದೇಶವಾಗಿದೆ.

ಕೊಂತಿ ಪೂಜೆ  

ಇದುವರೆಗೆ ಪ್ರಸ್ತಾಪಿಸಿದ ಉಳಿದೆಲ್ಲಾ ವ್ಯವಸಾಯ ಸಂಬಂಧಿಯಾದ ಆಚರಣೆಗಳಿಗಿಂತ ಕೊಂತಿಪೂಜೆಯು ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಪ್ರಧಾನವಾಗಿ ಕಂಡುಬರುವ  ವ್ಯವಸಾಯ ಸಂಬಂಧಿಯಾದ ಒಂದು ಮಹತ್ವದ ಆಚರಣೆ. ಕೊಂತಿ ಪೂಜೆಯನ್ನು ‘ಕೊಂತ್ಯಮ್ಮನ ಪೂಜೆ’, ‘ಕೊಂತಿ ಕುರಿಸುವುದು’, ‘ಕೊಂತಿ ನಡೆವುದು’, ‘ಕೊಂತಿಹಬ್ಬ’, ‘ಕುಂತಿಪೂಜೆ’  ಎಂಬ ಹಲವು ಹೆಸರುಗಳಿಂದ ಕರೆಯುತ್ತಾರೆ. ಇದು ಕಾರ್ತೀಕಮಾಸದ ಮುವತ್ತು ದಿನಗಳ ಕಾಲ ನಿರಂತರವಾಗಿ ಆಚರಿಸಲಾಗುವ ಆಚರಣೆ. ಕೆಲವು ಪ್ರದೇಶಗಳಲ್ಲಿ ಪೂಜಿಸುವ ದಿನಗಳಲ್ಲಿ ವ್ಯತ್ಯಾಸವಿರುತ್ತದೆ. ಐದು, ಏಳು, ಒಂಬತ್ತು ಹೀಗೆ ಅವರವರ ಅನುಕೂಲತೆಗಳಿಗೆ ಅನುಸಾರವಾಗಿ ಕುಂತಿಪೂಜೆ ಮಾಡುತ್ತಾರೆ.

ಕೊಂತಿ ಪೂಜೆಯು ಮುಖ್ಯವಾಗಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ, ಪಾಂಡವಪುರ, ನಾಗಮಂಗಲ, ಕೆ.ಆರ್. ಪೇಟೆ, ಮಳವಳ್ಳಿ, ಪೀಹಳ್ಳಿ, ಗಂಜಾಂ, ಬಸ್ತಿಪುರ, ಹರೋಹಳ್ಳಿ, ಚಿಕ್ಕನಹಳ್ಳಿ ಮಲ್ಲೇಗೌಡನಕೊಪ್ಪಲು ಮತ್ತು ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕು, ಹುಣಸೂರು, ಹೆಗ್ಗಡೆ ದೇವನ ಕೋಟೆ, ಗುಂಡ್ಲುಪೇಟೆ, ಬನ್ನೂರು, ಮೈಸೂರು ತಾಲೂಕಿನ  ಸುತ್ತಮುತ್ತಲಿನ ಪ್ರದೇಶಗಳಾದ ಕುಂಬಾರಕೊಪ್ಪಲು, ಮಂಚೇಗೌಡನಕೊಪ್ಪಲು, ಕನ್ನೇಗೌಡನ ಕೊಪ್ಪಲು, ಪಡುವಾರಹಳ್ಳಿ, ಮೈಸೂರಿನ ಅಗಸರಕೇರಿ, ವೀರನಗೆರೆ ಮುಂತಾದ ಕಡೆಗಳಲ್ಲಿಯೂ ಜನಪ್ರಿಯವಾಗಿದೆ. ಶಿವಮೊಗ್ಗೆಯ ನಂದಿಕೊಪ್ಪಲು, ಬೆಂಗಳೂರು ಜಿಲ್ಲೆಯ ಕನಕಪುರ, ತುಮಕೂರು ಜಿಲ್ಲೆಯ ಶಿರಾ ಈ ಕಡೆಗಳಲ್ಲಿಯೂ ಜನಪ್ರಿಯವಾಗಿದೆ. ಶಿವಮೊಗ್ಗೆಯ ನಂದಿಕೊಪ್ಪಲು, ಬೆಂಗಳೂರು ಜಿಲ್ಲೆಯ ಕನಕಪುರ, ತುಮಕೂರು ಜಿಲ್ಲೆಯ ಶಿರಾ-ಈ ಕಡೆಗಳಲ್ಲಿಯೂ ಕೊಂತಿ ಪೂಜೆ ಪ್ರಚಲಿತದಲ್ಲಿರುವುದು ತಿಳಿದುಬರುತ್ತದೆ (ಲಿಂಗಯ್ಯ ಡಿ, ೧೯೭೬: ೨೩). ಇವು ಕೊಂತಿ ಪೂಜೆ ಆಚರಣೆಯಲ್ಲಿರುವ ಪ್ರದೇಶದ ವಿಸ್ತಾರವನ್ನು ಸೂಚಿಸುತ್ತದೆ. ಕರ್ನಾಟಕದ ಎಲ್ಲಾ ಕಡೆಗಳಲ್ಲಿಯೂ ಕೊಂತಿ ಪೂಜೆ ಆಚರಣೆಗಳಲ್ಲಿಲ್ಲದಿದ್ದರೂ; ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಮಾತ್ರ ಹೆಚ್ಚು ಪ್ರಸಿದ್ಧವಾಗಿದೆ. ಇದಕ್ಕೆ ಮುಖ್ಯಕಾರಣ ಈ ಪ್ರದೇಶದ ಸಾಮಾಜಿಕ ಸಂಪ್ರದಾಯಗಳ  ಹಿನ್ನೆಲೆ.

ಕಾರ್ತೀಕಮಾಸದಲ್ಲಿ ಹಳ್ಳಿಗಳಲ್ಲಿ ಯಾರ ಮನೆಯ ಬಳಿ ಅಂಗಳವಿರುತ್ತದೊ ಅಲ್ಲಿ, ಇಲ್ಲವೆ ಜಗುಲಿ ಮೇಲೆ ಸಗಣಿಯಿಂದ ಸಾರಿಸಿ, ಕೊಂತಿಯನ್ನು ನಿರ್ಮಿಸಲು ಸಿದ್ಧ ಮಾಡುತ್ತಾರೆ. ಕುಂತಿ ಎಂಬುದಾಗಿ ಮನೆಯಲ್ಲಿ ಕರ ಅರೆಯುವ ಗುಂಡುಕಲ್ಲನ್ನು ಕಲ್ಪಿಸಿಕೊಳ್ಳಲಾಗುತ್ತದೆ. ಕಲ್ಲನ್ನು ಚನ್ನಾಗಿ ನೀರಿನಿಂದ ತೊಳೆದು ಆ ಕಲ್ಲಿಗೆ ಚೆನ್ನಾಗಿ ಎಣ್ಣೆಯನ್ನು ಸವರಿ, ಅವರಿಕೆ ಹೂವಿನಿಂದ ಕಣ್ಣು, ಮೂಗು, ಬಾಯಿ ಇತ್ಯಾದಿಗಳನ್ನು ಗುಂಡುಕಲ್ಲಿನ ಮೇಲೆ ರೂಪಿಸುತ್ತಾರೆ. ಮೊದಲ ದಿನದಂದು ಪೂಜೆ ಮಾಡುವುದಿಲ್ಲ. ಅಲಂಕಾರ, ಧೂಪ, ದೀಪಗಳಿರುವುದಿಲ್ಲ. ಮೊದಲಿನ ದಿನ ಕುಂತಿಯನ್ನು ‘ಕತ್ಲೆ ಕುಂತಿ’ ಎಂಬುದಾಗಿ ಕರೆಯುತ್ತಾರೆ. ಆ ದಿನದಂದು ಕುಂತಿಯು ಮೈನೆರೆದಿದ್ದಾಳೆಂದು ರೈತಾಪಿಗಳ ಭಾವನೆ. ಈ ಪೂಜೆಯ ಸಂದರ್ಭದಲ್ಲಿ ಹುಚ್ಚೆಳ್ಳು ಹೂವು, ಅಣ್ಣೇಹೂವು, ಜಾಜಿ, ಸ್ಪಟಿಕ, ಅಚ್ಚೆಳ್ಳು, ಕಣಗಿಲೆ, ಕೆಂಡಸಂಪಿಗೆ, ಮಲ್ಲಿಗೆ ಇತ್ಯಾದಿ ಹೂವುಗಳನ್ನು ಕುಂತಿಗೆ ಮುಡಿಸುತ್ತಾರೆ. ಪ್ರತಿದಿನ ರಾತ್ರಿಯ ಸಮಯದಲ್ಲಿ ದೀಪವನ್ನು ತರುವುದು ಪದ್ಧತಿ. ಕುಂತಿಯನ್ನು ಪೂಜಿಸುವ ಸ್ಥಳವನ್ನು ಸ್ವಚ್ಚಗೊಳಿಸಿ ಅಲಂಕಾರಕ್ಕಾಗಿ ರಂಗೋಲಿಯನ್ನು ಬಿಡುತ್ತಾರೆ.

ಈ ಸಂದರ್ಭದಲ್ಲಿ ಕುಂತಿ ಹಾಗೂ ಪಾಂಡವರ ಕುರಿತ ಹಾಡುಗಳನ್ನು ವಿವಿಧ ಮಟ್ಟುಗಳಿಂದ ಮಧ್ಯರಾತ್ರಿಯವರೆಗೂ ಹಾಡುತ್ತಾರೆ. ಪೂಜೆ ನಡೆಯುವಷ್ಟು ದಿನಗಳು ಕುಂತಿಯನ್ನು ಅಲಂಕಾರ ಮಾಡಿ ಪೂಜಿಸುವುದು ಮತ್ತು ಈ ರೀತಿಯಾಗಿ ಹಾಡು ಹೇಳುವುದು ವಿಶೇಷವಾಗಿರುತ್ತದೆ. ಕೊನೆಯ ದಿನದಂದು ವಿಶೇಷ ಪೂಜೆ ಜರುಗುತ್ತದೆ. ಈ ವಿಶೇಷ ಪೂಜೆಯನ್ನು ‘ಕೊಂತಿ ಒಸಗೆ’ ಎಂದು ಕರೆಯುತ್ತಾರೆ. ಅಂದೇ ಕುಂತಿಯನ್ನು ಹುಚ್ಚೆಳ್ಳು, ಅವರೆಬೆಳೆ ತುಂಬಿದ ಹೊಲದಲ್ಲಿ ವಿಸರ್ಜಿಸುವುದು ಪದ್ಧತಿ.

ಹೀಗೆ ಆಚರಣೆಗೊಳ್ಳುವ ‘ಕುಂತಿ’ ಮಹಾಭಾರತದ  ಕುಂತಿದೇವಿ, ಧರ್ಮವನ್ನು ಕೊನೆಯವರೆಗೂ ಹಿಡಿದು ನಡೆದುಕೊಂಡು ಬಂದ ಪಾಂಡವರು ತಾಯಿ. ತನ್ನ ಮಕ್ಕಳನ್ನು ಕಟ್ಟಿಕೊಂಡು ಕಾಡುಮೇಡುಗಳಲ್ಲಿ ಅಲೆದು ಇನ್ನಿಲ್ಲದ ಕಷ್ಟವನ್ನು ಅನುಭವಿಸಿದಳು. ಅರಮನೆಯ ಸುಖದ ಸುಪ್ಪತ್ತಿಗೆಯಲ್ಲಿರಬೇಕಾಗಿದ್ದ ಇವಳು, ಕಾಡುಮೇಡುಗಳಲ್ಲಿ ಪಾಳುಮಂಟಪ, ಗುಡಿಗಳಲ್ಲಿ ಮಲಗಿ, ಹೊಟ್ಟೆಗೆ ಊಟವಿಲ್ಲದೆ ಸಪ್ಪೆ ಸೊಪ್ಪು ತಿಂದು ಅರೆ ಹೊಟ್ಟೆಯಲ್ಲಿ ಕಾಲ ನೂಕಿದವಳು ಎಂದೂ ಪ್ರತೀತಿ. ಇದಕ್ಕೆ ಹಲವಾರು ಐತಿಹ್ಯಗಳು ಸಾಕ್ಷಿಯಾಗಿವೆ. ಕುಂತೀಬೆಟ್ಟ, ಪಾಂಡವಪುರ, ಭೀಮನಪಾದ, ಭೀಮನ ಒಳಲೆ, ಕುಂತಿಕೊಳ, ಕುಂತಿಕೆರೆ, ಒನಕೆ ಬೆಟ್ಟ ಇತ್ಯಾದಿಗಳು ಉದಾಹರಣೆಯಾಗಿದೆ. ರೈತಾಪಿಗಳ ಪಾಲಿಗೆ ಪಾಂಡವರು ಸತ್ತು ಕಣ್ಮೆರೆಯದವರಲ್ಲ. ಅವರ ನೆನಪು ಸದಾ ಅಚ್ಚ ಹಸಿರಾಗಿಯೇ ಉಳಿದು ಬಂದಿರುವಂತದ್ದು. ಅದು ಈ ಹಾಡಿನಲ್ಲಿ ಅಭಿವ್ಯಕ್ತಿ ಪಡೆದಿದೆ.

ಸತ್ಯವುಳ್ಳ ಧರುಮಾರು ಸತ್ತರು ಎನದೀರಿ | ಸತ್ತರೀ ಭೂಮಿ ಬೆಳೆಯದು ಪಾಂಡವರು|
ಬಿತ್ತಿ
ಹೋಗ್ಯವರೆ ಅವರೆಯ!

ಗ್ರಾಮೀಣ ಮಹಿಳೆಯರಿಗೆ ಕುಂತಿಯೇ ಆದರ್ಶ ಸ್ತ್ರೀ. ಸಿರಿತನ, ಬಡತನ ಯಾವುದೊ ಸ್ಥಿರವಾದುದಲ್ಲ. ಧರ್ಮಮಾರ್ಗವೇ ಶ್ರೇಷ್ಠವಾದುದು. ಧರ್ಮವನ್ನು ನಂಬಿ ಹಲವು ಕಷ್ಟನಷ್ಟಗಳನ್ನು ಸಂತೋಷದಿಂದ ಅನುಭವಿಸಿದ ಜನ ಯಾವಾಗಲೂ ಇದ್ದೇ ಇರುತ್ತಾರೆ. ಮಹಾಭಾರತದ ಕುಂತೀದೇವಿಯು ಪಾಂಡವರಂಥ ಧೈರ್ಯವಂತ ಮಕ್ಕಳನ್ನು ಹಡೆದುದರಿಂದ ಅವಳಿಗೆ ಕೀರ್ತಿ ಬಂತೆಂದು ನಂಬಿಕೆ. ಅವಳಂತೆಯೇ ತಮಗೂ ಒಳ್ಳೆಯ ಮಕ್ಕಳಾಗಲಿ ಎಂಬ ಆಶಯವೇ ಕುಂತಿಪೂಜೆಗೆ ಮುಖ್ಯ ಕಾರಣ ಮತ್ತು ಪ್ರೇರಣೆಯಾಗಿದೆ. ಕುಂತಿ ಹೇಗೆ ಪೂಜಾರ್ಹಳಾದುದೆಂಬುದಕ್ಕೆ ಅವಳ ವ್ಯಕ್ತಿತ್ವವೇ ಸಾಕ್ಷಿ ಎನ್ನಬಹುದು. ಕುಂತಿ ಆದರ್ಶ ಸತಿ, ಆದರ್ಶತಾಯಿ, ಮಿಗಿಲಾಗಿ ಸತ್ಸಂತಾನ ಪಡೆದು ಆದರ್ಶನಾರೀಮಣೆ . ಇಂತಹ ಆದರ್ಶ ಮಹಿಳೆಯನ್ನು ಪೂಜಿಸುವುದು ಅವಳಂತೆಯೇ ತಮಗೂ ಸತ್ಸಂತಾನ, ಸತ್ಕೀರ್ತಿ ಲಭ್ಯವಾಗಲೆಂಬ ಅಭಿಲಾಷೆಯಿಂದ. ಹಳ್ಳಿಯ ಮುಗ್ದ ಸ್ತ್ರೀಯರು ತಮ್ಮ ಇಷ್ಟ ದೇವತೆಯೆಂದು ಭಾವಿಸಿ ಸಂಪ್ರದಾಯಕವಾಗಿ ಕುಂತಿಯನ್ನು ಪೂಜಿಸುತ್ತಾ ಬಂದಿದ್ದರೆ (ಲಿಂಗಯ್ಯ ಡಿ. ೧೯೭೬: ೨). ಈ ಆಚರಣೆಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆ ಕುತೂಹಲಕರವಾದುದು.

ಕೊಡವರ ಆಚರಣೆ ಸಂಪ್ರದಾಯಗಳು
ಕೊಡಗಿನ
ಕೈಲ್ ಮುಹೂರ್ತ 

ಮೇ ಕಡೆಯ ವಾರ ಅಥವಾ ಜೂನ್ ಮೊದಲವಾರದಿಂದ ಪ್ರಾರಂಭವಾಗುವ ಮುಂಗಾರಿನ ಮಳೆಯನ್ನು ನೋಡಿಕೊಂಡು ರೈತರು ತಮ್ಮ ವ್ಯವಸಾಯದ ಕಾರ್ಯವನ್ನು ಪ್ರಾರಂಭಿಸುತ್ತಾರೆ. ಆಗಸ್ಟ್ ಕಡೆಯ ಹೊತ್ತಿಗೆ ತಮ್ಮ ಗದ್ದೆಯ ಕೆಲಸವನ್ನೆಲ್ಲಾ ಮುಗಿಸಿಕೊಂಡು ವಿಶ್ರಾಂತಿ ತೆಗೆದುಕೊಳ್ಳಲು, ನಡೆಸುವ ಒಂದು ಹಬ್ಬವಾಗಿ ಈ ಮುಹೂರ್ತ ಪರಿಗಣಿಸಲ್ಪಟ್ಟಿದೆ. ಸಾಮಾನ್ಯವಾಗಿ ಈ ಹಬ್ಬವನ್ನು ಕೈಲ್ ಪೊದು ಎಂದು ಕರೆಯುತ್ತಾರೆ. ಕೈಲ್ ಪೊದು ಎಂದರೆ ಆಯುಧಗಳ ಪೂಜೆ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಇದು ಒಬ್ಬರು ಮತ್ತೊಬ್ಬರೊಡನೆ ಕೂಡುವ ಹಬ್ಬ ಎಂಬುದಾಗಿ ಪರಿಗಣಿಸುತ್ತಾರೆ. ಇಂದಿಗೂ ದೂರದ ಸ್ಥಳಗಳಲ್ಲಿ ವಾಸಿಸುವ ನೆಂಟರಿಷ್ಟರು ಒಟ್ಟಿಗೆ ಸೇರಿ ಇದನ್ನು ಆಚರಿಸುತ್ತಾರೆ.

ವ್ಯವಸಾಯದ ಕಾಲ ಪ್ರಾರಂಭವಾದಾಗ ನಾಟಿ ಮುಗಿಯುವವರೆಗೂ ಬೇಟೆಗೆ ಹೋಗಬಾರದೆಂದೂ, ಬೇಟೆಯ ಆಯುಧಗಳನ್ನೆಲ್ಲಾ ಮನೆಯ ನೆಲ್ಲಕ್ಕಿ ಬಾಡೆ ಅಥವಾ ಕನ್ನಿಕೋಂಬರೆಗಳಲ್ಲಿ (ಒಂದು ವಿಶಿಷ್ಟ ಕೊಠಡಿ ಪೂಜಾಗೃಹ) ಇಟ್ಟಿರುತ್ತಾರೆ. ಈ ಹಬ್ಬದ ದಿನ ಮನೆಯ ಹಿರಿಯರಿಂದ ಮೊದಲ್ಗೊಂಡು ಕಿರಿಯರವರೆಗೆ ಎಲ್ಲರೂ ಆಯುಧಗಳನ್ನು ಪೂಜಿಸಿ ನಂತರ ಅದು ಬೇಟೆಯನ್ನು ಪ್ರಾರಂಭಿಸುತ್ತಾರೆ. ಇದು ಈ ಹಬ್ಬದ ಮುಖ್ಯ ಆಕರ್ಷಣೆ. ಸಾಮಾನ್ಯವಾಗಿ  ಈ ಹಬ್ಬ ಸೆಪ್ಟೆಂಬರ್ ಮೂರನೇ ತಾರಿಖು ನಡೆಯುತ್ತದೆ. ಆದರೆ ನಾಲ್ಕುನಾಡು, ಮೂರ್ನಾಡು, ಮುಂತಾದ ಕಡೆಯವರು ಬಿನ್ಸಾರ್ ೧೨ ರಂದು ಈ ಹಬ್ಬವನ್ನು ಆಚರಿಸುತ್ತಾರೆ (ಬಿನ್ಸಾರ್ ಎಂದರೆ ಸಿಂಹಮಾಸ).

ಈ ಹಬ್ಬದ ಹಿಂದಿನ ದಿನವೇ ಮನೆಗೆ ಬೇಕಾದ ಹಂದಿಮಾಂಸವನ್ನು ಸಿದ್ಧಮಾಡಿಕೊಳ್ಳುತ್ತಾರೆ. ಹಂದಿ ಸಾಕಲು ಶಕ್ತಿ ಇಲ್ಲದವರು ಹಂದಿಯ ಮಾಂಸವನ್ನು ಕೊಂಡಾದರೂ ಅಂದು ಪಡೆಯಲೇಬೇಕು ಎಂಬ ನಿಯಮವೂ ಉಂಟು. ಅಂತೂ ಅಂದು ಸಂಜೆಯ ಹೊತ್ತಿಗೆ ಎಲ್ಲರ ಮನೆಗೆ ಹಂದಿಯ ಮಾಂಸ ಸೇರಬೇಕು. ಮಾರನೆಯ ದಿನ ಬೆಳಗ್ಗೆ ಎದ್ದ ತಕ್ಷಣ, ಮನೆಯಿಂದ ದೂರದಲ್ಲಿರುವ ದೇವಸ್ಥಾನದ ಒಂದು ಗೊತ್ತಾದ ಸ್ಥಳಕ್ಕೆ ಬಂದು ನಿಶ್ಚಿತ ಗಿಡವೊಂದಕ್ಕೆ (ಅಣಕೆ ಗಿಡಕ್ಕೆ) ಬೆರಳು ಗಾತ್ರದ ಗೇರುದ್ದದ ೨ ತುಂಡುಗಳನ್ನು ಕಡಿದು ಅವುಗಳ ಒಂದು ತುದಿಯನ್ನು ಚೂಪಾಗಿಸಿ, ಮತ್ತೊಂದು ತುದಿಯನ್ನು ಸೀಳಿ, ನೇರಳೆ ಎಲೆಗಳನ್ನು ಗರಿಗಳಂತೆ ಕಟ್ಟಿ ಬಾಣಗಳನ್ನು ತಯಾರಿಸಿ, ಹಾಲು ಬರುವ ಒಂದು ಗಿಡಕ್ಕೆ  ಆ  ಬಾಣಗಳನ್ನು  ಆ ಗಿಡದ ಕಾಂಡಕ್ಕೆ ತಗಲುವಂತೆ ಎಸೆಯುತ್ತಾರೆ. ನಂತರ ವ್ಯವಸಾಯಕ್ಕೆ ಬಳಸಿದ ನೇಗಿಲು, ಸನಿಕೆ, ಗುದ್ದಲಿ ಮುಂತಾದ ವ್ಯವಸಾಯದ ಉಪಕರಣವನ್ನು ಚೆನ್ನಾಗಿ ತೊಳೆದು ಶುಚಿಗೊಳಿಸುತ್ತಾರೆ. ನಂತರ ದನ-ಕರುಗಳನ್ನು ತೊಳೆದು ಶುಚಿಗೊಳಿಸಿ ಸೂರ್ಯನಿಗೆ ಧೂಪದೀಪಗಳಿಂದ ಪೂಜೆ ಸಲ್ಲಿಸಿ ಪಣಿಪುಟ್ ನ್ನು ನಿವೇದಿಸುತ್ತಾರೆ. ಅದೇ ಪ್ರಸಾದವನ್ನು ದನ-ಕರುಗಳಿಗೆ ತಿನ್ನಿಸಿ ಮನೆಯವರು ನಂತರ ಸೇವಿಸುತ್ತಾರೆ.

ಮಧ್ಯಾಹ್ನ ಹಂದಿಮಾಂಸದಿಂದ ತಯಾರಿಸಿದ ಸಾರು (ಪಂದಿಕರಿ) ಅಕ್ಕಿಯಿಂದ ತಯಾರಿಸಿದ ಕಡುಬುಗಳನ್ನು ವಿಶೇಷ ಅಡಿಗೆಯೆಂದು ಪರಿಗಣಿಸಿ, ಊಟ ಮಾಡುತ್ತಾರೆ. ಊಟದ ನಂತರ ಮನಸ್ಸು ತೃಪ್ತಿಯಾಗುವಷ್ಟು ಕಳ್ಳು ಮತ್ತು ಸಾರಾಯಿಯನ್ನು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸೇವಿಸುತ್ತಾರೆ. ಹಬ್ಬದ ಅತಿ ಮಹತ್ವ ಘಟ್ಟ ಮಧ್ಯಾಹ್ನದ ಊಟ. ಊಟದ ನಂತರ ಹಬ್ಬ ತನ್ನ ಮೂರನೇ ಘಟ್ಟವನ್ನು ತಲುಪುತ್ತದೆ. ಮಧ್ಯಾಹ್ನ ಕನ್ನಿಕೋಂಬರೆಯಲ್ಲಿಟ್ಟಿರುವ ಆಯುಧಗಳನ್ನು ಧೂಪ, ದೀಪ, ಗಂಧದ ತಿಲಕಗಳಿಂದ ಪೂಜಿಸುತ್ತಾರೆ. ಈ ಪೂಜೆಗೆ ಒಂದು ವಿಶಿಷ್ಟ ಜಾತಿಯ ಪುಷ್ಪಗಳನ್ನು ಮಾತ್ರ ಬಳಸುತ್ತಾರೆ (ಕೆಲವು ಕಡೆ ಈ ಹೂವನ್ನು ಕೋಳಿ ಹೂ ಎಂದು ಕರೆಯುತ್ತಾರೆ. ಇದು ಕೆಂಪು ಬಣ್ಣದ ಹೂ).

ಊಟದ ನಂತರ ಎಲ್ಲರೂ ಹೊಸ ಬಟ್ಟೆಯನ್ನು ಧರಿಸಿ, ಕುಟುಂಬದ  ಗಂಡಸರೆಲ್ಲರೂ ಪೂಜೆಗಿಟ್ಟಿರುವ ಆಯುಧಗಳ ಮುಂದೆ ನಿಲ್ಲುತ್ತಾರೆ. ಆಗ ಕುಟುಂಬದ ಹಿರಿಯ ವ್ಯಕ್ತಿ ಒಂದು ಕೋವಿಯನ್ನು ಕೈಗೆ ತೆಗೆದುಕೊಂಡು ಆತ ನಿಂತಿರುವವರಲ್ಲಿ ಹಿರಿಯನೊಬ್ಬನಿಗೆ ಆ ಕೋವಿಯನ್ನು ನೀಡುತ್ತಾನೆ. ಹಾಗೆ ಕೋವಿಯನ್ನು ನೀಡುವಾಗ ನರಿನೋ ಪಂದಿನೋ ಬಟ್ಟೆ  ಕಟ್ಟಿ ಪರಂಗ್, ಮಿತ್ತುರಕ್ ತೊಣಿಯಾಯಿತ್ ನಿಲ್ಸ್. ರಾಜಂಗ್ ಮಿನಿಯಂತೆ ದೇವಳೆ ಮರೆಯತೆ (ಹುಲಿ ಬರುವಾಗ ಹಂದಿ ಬರುವಾಗ ದಾರಿಬಿಟ್ಟು ನಿಲ್ಲು, ಶತ್ರುವನ್ನು ಪಡೆಯಲು ಹೋಗಬೇಡ, ಹಾಗೆ ತೆಗೆಯುವ ಹಾಗಿದ್ದರೆ, ಆತನು ಚಲಿಸದಂತೆ ದಾರಿಯನ್ನು ಅಡ್ಡಗಟ್ಟಿ ತಡೆ, ಮಿತ್ರನಿಗೆ ಸಹಾಯಕನಾಗಿರು, ರಾಜನನ್ನು ಮೀರದೇ, ದೇವರನ್ನು ಮರೆಯದೇ ಇರು) ಎಂದು ಬುದ್ಧಿವಾದವನ್ನು ಹೇಳಿ ಕೋವಿಯನ್ನು ನಿಲ್ಲುತ್ತಾರೆ. ನಂತರ ಉಳಿದವರು ಕ್ರಮವಾಗಿ ಆಯುಧಗಳನ್ನು ಪಡೆಯುತ್ತಾರೆ. ಆಯುಧಗಳನ್ನು ಪಡೆಯುವಾಗ, ಆಯುಧವನ್ನು ಕೊಡುವ ಹಿರಿಯನ ಕಾಲು ಮಟ್ಟಿ ನಮಸ್ಕರಿಸುತ್ತಾರೆ.

ಇದಾದ ನಂತರ ಊರಿನ ಇಲ್ಲಾ ಗಂಡಸರೂ, ಊರಿನ ದೇವಾಲಯದ ಬಳಿ ಸೇರಿ ಅಲ್ಲಿ ವಿವಿಧ ರೀತಿಯ ಆಟ-ಒಟಗಳ ಸ್ಪರ್ಧೆಯನ್ನು ನಡೆಸುತ್ತಾರೆ. ಅದೇ ಸಂದರ್ಭದಲ್ಲಿ ದೂರದಲ್ಲಿ ಕಟ್ಟಿರುವ ತೆಂಗಿನ ಕಾಯಿಗೆ ಗುಂಡು ಹಾರಿಸುವುದು ಮುಂತಾದ ಸ್ಪರ್ಧೆಗಳು ನಡೆದು ಬೇಟೆಗೆ ಹೋಗಲು ಅಣಿಯಾಗುತ್ತಾರೆ. ಈ ಹಬ್ಬಕ್ಕೆ ಸೇರಿದ ಮಿತ್ರರೆಲ್ಲಾ ಒಂದು ನಿಶ್ಚಿತ ದಿನವನ್ನು ಗೊತ್ತು ಮಾಡಿಕೊಂಡು, ಬೇಟೆಗೆ ಹೊರಡುತ್ತಾರೆ. ಬೇಟೆಗೆ  ನಾಯಿ ನಗಾರಿಗಳನ್ನು ಸಜ್ಜು ಮಾಡಿಕೊಳ್ಳುತ್ತಾರೆ. ನಾಯಿ ಕೊಡಿಸುವವರು ಎಲ್ಲಿ ನಿಲ್ಲಬೇಕು ಎಂಬುದರ ಬಗ್ಗೆ ವಿಧಿವತ್ತಾದ ನಿಯಮಗಳಿವೆ. ಹಾಗೆಯೇ ಬೇಟೆಯಲ್ಲಿ ಯಾವಿದೇ ಕಾಡಿನ ಪ್ರಾಣಿಗೆ ಗುಂಡು ಹಾಕಿ, ಕೊಲ್ಲದೆ ಅಥವಾ ಗುಂಡು ಹಾರಿಸದೇ ಬಿಟ್ಟವರಿಗೆ ತಕ್ಕ ಶಿಕ್ಷೆಯೂ ಇದೆ. ಬೇಟೆಯಲ್ಲಿ ಆಹಾರವಾಗಿ ಉಪಯೋಗಿಸುವ ಪ್ರಾಣಿಯನ್ನು ಕೊಂದವನಿಗೆ ಅದರ ಮೇಲೆ, ಒಂದು ತೊಡೆ ಬೆನ್ನಿನ ಹುರಿಯನ್ನು ಬಹುಮಾನವಾಗಿ ಕೊಡುತ್ತಾರೆ. ಸತ್ತು ಬಿದ್ದ ಪ್ರಾಣಿಯನ್ನು ಮೊದಲು ಮುಟ್ಟಿದವನಿಗೆ, ಆ ಪ್ರಾಣಿಯ ಕಾಲು, ಬೆನ್ನಿನ ಹುರಿಯನ್ನು ಬಹುಮಾನವಾಗಿ ಕೊಡುತ್ತಾರೆ. ಬೇಟೆಯಲ್ಲಿ ಭಾಗವಹಿಸಿದ ಬೇಟೆಗಾರರೆಲ್ಲಾ ಉಳಿದ ಮಾಂಸವನ್ನು ಹಂಚಿಕೊಳ್ಳುತ್ತಾರೆ. ಸಾಮಾನ್ಯವಾಗಿ ಕೈಲ್ ಮುಹೂರ್ತ ಬುಧವಾರ ಅಥವಾ ಶನಿವಾರ ಬಂದರೆ ಅಂದು ಬೇಟೆಗೆ ಹೋಗುವುದಿಲ್ಲ. ಆ ದಿನಗಳನ್ನು ದೇವರ ದಿನಗಳೆಂದು ಪರಿಗಣಿಸುತ್ತಾರೆ.

ಹೀಗೆ ಈ ಮುಹೂರ್ತ ಒಂದು ದಿನ ಮುಕ್ತಾಯಗೊಂಡರೂ ಹಬ್ಬದ ನೆನಪು ಮಾತ್ರ ಅನೇಕ ದಿನಗಳವರೆಗೆ ಕೊಡವರ ಮನಸ್ಸಿನಲ್ಲಿ ತೇಲುತ್ತಲೇ ಇರುತ್ತದೆ. ಈ ಹಬ್ಬದಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಗಮನಿಸಿದರೆ  ಕೊಡವರ ಬೇಟೆಯ ಪ್ರೀತಿ, ಅವರ ಶೌರ್ಯ ಮನೋಭಾವ ವ್ಯಕ್ತವಾಗುತ್ತದೆ. ಹಬ್ಬದ ಪ್ರಾರಂಭದಲ್ಲೇ ಹಾಲು ಬರುವ ಮರಕ್ಕೆ ಬಾಣ ಬಿಡುವ ಸಂಪ್ರದಾಯ ಹಿನ್ನೆಲೆಯನ್ನು ವಿಚಾರಿಸಿದಾಗ, ಆ ಹಿನ್ನೆಲೆ ಆಗಲೇ ಜನರ ಸ್ಮೃತಿಯಿಂದ ಮರೆಯಾಗಿರುವುದು ಅನುಭವಕ್ಕೆ ಬಂದಿತು. ಆದರೆ ನಾನು ಮತ್ತೆ  ಕೆದಕಿದಾಗ, ಅದರ ಹಿನ್ನೆಲೆ ಇದ್ದಿರಬಹುದೆಂದು ನನಗನ್ನಿಸಿತು. ಕೊಡವರ ಸಂಸ್ಕೃತಿಯಲ್ಲಿ ಬೇಟೆಗೆ ಅತ್ಯಂತ ಪ್ರಧಾನ ಸ್ಥಾನವಿದೆ. ಅವರ ಬೇಟೆಯ ದೇವೌ ಅಯ್ಯಪ್ಪ. ಆತನ ರೂಪ ಹೇಗೆ ಎಂದು ನಿರ್ಧಾರವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಹಾಲು ಸುರಿಯುವ ಮರದಲ್ಲಿ ಆತ ವಾಸಿಸುವನೆಂದೂ ಜನರ ನಂಬಿಕೆ. ಊರಿನ ಹೊರಗೆ ಇರುವ ಅಂತಹ ಮರದ ಸುತ್ತಲೂ, ಮಣ್ಣಿನಲ್ಲಿ ಮಾಡಿದ ನಾಯಿಗಳ ಪ್ರತಿಮೆಗಳನ್ನು ನಿಲ್ಲಿಸಿ ಆ ಮರವನ್ನು ಪೂಜಿಸುತ್ತಾರೆ. ತಲೆಮಾರಿನಿಂದ ತಲೆಮಾರಿಗೆ ಆ ಪದ್ಧತಿ. ತಮ್ಮ ಬೇಟೆಯನ್ನು ಪ್ರಾರಂಭಿಸುವ ದಿನ, ತಮ್ಮ ಬೇಟೆಯ ದೇವರನ್ನು ಪೂಜಿಸುವ (ನಮಸ್ಕರಿಸುವ ರೀತಿ ಮಹಾಭಾರತದಲ್ಲಿ ದ್ರೌಪದಿಯ ಸ್ವಯಂವರ ಸನ್ನಿವೇಶದಲ್ಲಿ ಅರ್ಜುನ ದ್ರೋಣರ ಪಾದದೆಡೆಗೆ ಬಾಣಬಿಟ್ಟ ಸನ್ನಿವೇಶ) ರೀತಿ ಇರಬೇಕೆಂದು ಅನ್ನಿಸುತ್ತದೆ. ಆದರೆ ಇದಕ್ಕೆ ತಕ್ಕ ಆಧಾರಗಳು ಸಿಗಬೇಕಾಗಿದೆ.

ಹುತ್ತರಿ ಆಚರಣೆ  

ಕೊಡಗಿನ ಹಬ್ಬಗಳಲ್ಲೆಲ್ಲಾ ಅತ್ಯಂತ ವರ್ಣರಂಜಿತವಾದ ಈ ಹಬ್ಬ ನವೆಂಬರ್, ಡಿಸೆಂಬರ್ ತಿಂಗಳಿನ ಹುಣ್ಣಿಮೆ ದಿನಗಳಲ್ಲಿ ನಡೆಯುತ್ತವೆ. ಪುದಿ ಅರಿ-ಪುತ್ತರಿ-ಹುತ್ತರಿ ಎಂದರೆ ಹೊಸ ಅಕ್ಕಿ ಎಂದರ್ಥ ಗದ್ದೆಯಲ್ಲಿ ಹುಲುಸಾಗಿ ಬೆಳೆದು ನಿಂತ ಭತ್ತದ ಪೈರನ್ನು ಆರಾಧಿಸಿ, ಕುಯಿಲು ಮಾಡಿ ವಿದ್ಯುಕ್ತವಾಗಿ ಮನೆ ತುಂಬಿಸಿಕೊಳ್ಳುವ ಸಮುಹೂರ್ತವೇ ಹುತ್ತರಿ. ಈ ಹಬ್ಬ ಹಿಂದೆ ಮೂರು ದಿನ ದೇವಪೊಳ್ದು, ಅರಮನೆ ಪೊಳ್ದು, ನಾಡ್ಪೊಳ್ದು ಎಂಬ ಹೆಸರಿನಲ್ಲಿ ನಡೆಯುತ್ತಿತ್ತು. ಊರಿನ ದೇವಸ್ಥಾನಕ್ಕೆ ಸೇರಿದ ಭೂಮಿಯಲ್ಲಿ ಬೆಳೆ ಕೊಯ್ಯುವ ಸಮಾರಂಭ ದೇವಪೊಳ್ದು ಅರಸರ ಬೆಳೆ ಕೊಯ್ಯುವ ಸಮಾರಂಭ ಅರಮನೆ ಪೊಳ್ದು, ತಮ್ಮ ತಮ್ಮ ಊರಿನ ಗದ್ದೆಯ ಕುಯಿಲಿನ ಸಮಾರಂಭ ನಾಡಪೊಳ್ದು. ಈಗ ನಾಡಪೊಲ್ದು ಮಾತ್ರ ವಿಜೃಂಭಣೆಯಿಂದ ನಡೆಯುತ್ತದೆ. ರೋಹಿಣಿ ನಕ್ಷತ್ರದಲ್ಲೇ ಕದಿರು (ಬುಡಕಟ್ಟುಇರುವ ಭತ್ತದ ಸಸಿ) ತೆಗೆಯುವುದರಿಂದ ಆ ನಕ್ಷತ್ರ ಇರುವ ದಿನ ಕದಿರು ತೆಗೆಯುವವರು ರಾತ್ರಿ ತೆಗೆಯುತ್ತಾರೆ. ಹಗಲು ತೆಗೆಯುವವರು ಹಗಲು ತೆಗೆಯುತ್ತಾರೆ.

ಪೊಳ್ದು ದಿನ ಪ್ರತಿಯೊಬ್ಬ ಕೊಡವನೂ ತಾನೂ ಎಲ್ಲಿದ್ದರೂ ತನ್ನ ಐನ್ ಮನೆಗೆ ಬರಲೇ ಬೇಕು. ಅಂದು ಕುಟುಂಬದ ಜನರು ಮಾತ್ರವಲ್ಲ, ಕುಟುಂಬಕ್ಕೆ ಸೇರಿದ ಆಳುಗಳು ಪ್ರಾಣಿಗಳು ಮನೆಗೆ ಬಂದಿರಬೇಕು. ದೂರದ ಊರಲ್ಲಿ ಮೇಯಲು ಬಿಟ್ಟಿರುವ ದನಕರುಗಳನ್ನು ಆ ದಿನ ಅಟ್ಟಿಕೊಂಡು ಬರುತ್ತಾರೆ. ಪ್ರಾಣಿಗಳಿಗೆ ಮೈತೊಳೆದು ಅವುಗಳ ಕೊರಳಿಗೆ ಗೆಜ್ಜೆ ಮುಂತಾದವುಗಳನ್ನು ಕಟ್ಟಿ ಅಲಂಕರಿಸುವುದಲ್ಲದೆ, ಸುಣ್ಣ ಬಣ್ಣಗಳಿಂದ ಮನೆಯನ್ನು, ಮನೆಗೆ ಸೇರುವ ರಸ್ತೆ ಓಣಿಗಳನ್ನು ಸುಚುಗೊಳಿಸಿ, ತೋರಣ ಕಟ್ಟಿ ಪ್ರತಿ ಬಾಗಿಲಿಗೂ ಹೂವಿನ ಹಾರಗಳನ್ನು ಕಟ್ಟಿ ಅಲಂಕರಿಸುತ್ತಾರೆ. ಪೋದು ದಿನ ಗ್ರಾಮದ ಬಿದಿರು ಕೆಲಸ ಮಾಡುವವನು ಹುತ್ತರಿ ಕುಕ್ಕೆಯನ್ನು (ಪುತ್ತರಿ ಪಚ್ಚೆಯ), ಕುಂಬಾರ ಹುತ್ತರಿ ಕುಡಿಕೆಯನ್ನು, ಚಾಪೆ ಹೆಣೆಯುವವನು ಚಾಪೆಯನ್ನು, ಮರಗೆಲಸದವನು ಕೊಡ್ತಿಯನ್ನು, ಬಡಗಿ ಕತ್ತಿಯನ್ನು ತಂದುಕೊಡಬೇಕು. ಈ ವಸ್ತುಗಳನ್ನು ಒದಗಿಸುವವರಿಗೆ, ಬೆಲ್ಲ, ಅಕ್ಕಿ, ಬಾಳೆ, ಉಪ್ಪು, ಮೆಣಸು, ತೆಂಗಿನ ಎಣ್ಣೆ, ಎಳ್ಳು ತೆಂಗಿನಕಾಯಿ, ಹುತ್ತರಿಗೆಣಸು ಮೊದಲಾದುವನ್ನು ಕೊಟ್ಟು ಸತ್ಕರಿಸುತ್ತಾರೆ. ಊರಿನ ದೇವಸ್ಥಾನದ ಪೂಜಾರಿ, ಊರಿನ ಪ್ರತಿಮನೆಗೆ ಹೋಗಿ ಪುಣ್ಯ ತೀರ್ಥವೆಂದು ನೀರು ಚಿಮುಕಿಸಿ ಮನೆಯನ್ನು ಶುದ್ಧಗೊಳಿಸುತ್ತಾನೆ.

ಹೀಗೆ ಎಲ್ಲಾ ಸಿದ್ಧತೆಗಳಾದ ಮೇಲೆ ಮನೆಗೆ ನೆಲ್ಲಕ್ಕಿ ನಡುಬಾನೆಯನ್ನು (ಪೂಜಾಗೇ ಹೂ) ಗುಡಿಸಿ, ಶುದ್ಧಮಾಡಿ ತೂಗುದೀಪದ ಕೆಳಗೆ ಹುತ್ತರಿ ಚಾಪೆಯನ್ನು ಹಾಸಿ ಅದರ ಮೇಲೆ ಹುತ್ತರಿ ಕುಕ್ಕೆಯಲ್ಲಿ ಮಾವಿನೆಲೆ, ಅರಳಿಎಲೆ , ಅಬ್ಬಿ, ನಾರು ಮೊದಲಾದುವನ್ನು ಇಡುತ್ತಾರೆ. ಹುತ್ತರಿ ಕುಕ್ಕೆಯ ತುಂಬ ಭತ್ತವನ್ನು ತುಂಬಿಡುತ್ತಾರೆ. ಅದರ ಮೇಲೆ ಒಂದು ಬಳ್ಳದಲ್ಲಿ(ಸೇರು) ಅಕ್ಕಿಯನ್ನು ಅದರ ಮೇಲೆ ಮಾನದಲ್ಲಿ (ಅರ್ಧ ಸೇರು) ಅಕ್ಕಿಯನ್ನು, ಅದರ ಮೇಲೆ ಹುತ್ತರಿ ಕುಡಿಕೆಯನ್ನು ತಂಬಿಟ್ಟು ಪುಡಿ ತುಂಬಿ ಇಡುತ್ತಾರೆ. ಅನಂತರ ಚಾಪೆಯ ಮೇಲೆ ಆಲು, ತುಪ್ಪ, ಜೇನು, ಎಲ್ಳು, ಶುಂಠಿ, ತೆಂಗಿನಕಾಯಿ, ಹಾಗಲಮುಳ್ಳು ಮೊದಲಾದುವನ್ನು ಇಡಬೇಕು. ಹತ್ತಿರದಲ್ಲಿ ಒಂದು ಕುಡುಗೋಲು, ವೇಳ್ಯದೆಲೆ, ಅಡಿಕೆಗಳನ್ನು ಇಡಬೇಕು. ಅಷ್ಟರಲ್ಲಿ ಕುಟುಂಬದ ವಾದ್ಯಗಾರನಾದ ಮೇದ ಕದ್ ಪರೆ ಹೊಡೆಯಲು ಪ್ರಾರಂಭಿಸುತ್ತಾನೆ. ಆಗ ಕುಟುಂಬದ ಮುತ್ತೈದೆಯೊಬ್ಬಳು ಅಕ್ಕಿಹಿಟ್ಟಿನ ರಂಗೋಲಿಯಿಂದ ಅಲ್ಲಿರುವ ಮಡಕೆ, ಕತ್ತಿ, ಕದಿರು ತೆಗೆಯುವ ಕತ್ತಿ. ಈ ಎಲ್ಲವುಗಳ ಮೇಲೆ ಸುಂದರ ಚಿತ್ರವನ್ನು ಬಿಡಿಸುವಳು ಈ ರೀತಿ ಸಿದ್ಧತೆಯನ್ನು ನೆರೆಕಟ್ಟುವುದು ಎನ್ನುತ್ತಾರೆ.

ನೆರೆಕಟ್ಟಿ ಆದ ಮೇಲೆ ಗೆಣಸನ್ನು ಬೇಯಿಸಿ, ಅದಕ್ಕೆ ಜೇನುತುಪ್ಪ, ಬೆಲ್ಲ ಅಥವಾ ಸಕ್ಕರೆ ಎಲ್ಲವನ್ನು ಸೇರಿಸಿ ರಸಾಯನದ ರೀತಿಯಲ್ಲಿ ತಯಾರಿಸಿದ ತಿಂಡಿಯನ್ನು ಮನೆಯವರೆಲ್ಲಾ ಸೇರಿ ತಿನ್ನುವರು. ಅನಂತರ ಎಲ್ಲರೂ ಹೊಸ ಉಡುಗೆ-ತೊಡುಗೆಯನ್ನು ಧರಿಸಿ ತೂಗುದೀಪದ ಎದುರು ನಿಲ್ಲಬೇಕು. ಆಗ ಮನೆತನದ ಹಿರಿಯ ಕದಿರು ತೆಗೆಯುವ ಕತ್ತಿಯನ್ನು ಅದಕ್ಕಾಗಿ ನಿಯಮಿಸಲ್ಪಟ್ಟ ವ್ಯಕ್ತಿಗೆ ಕೊಡುತ್ತಾನೆ. ಕೊಡುವಾಗ ಕಾಲೊಂ ರಾಂಡಕ್ಕೊಮ್ಮೆ ಪುತ್ತರಿಪೋದ್ ಕೊವ್ವಕ್ ಪೊಪಂಗಾಯಿತ್ ಪೋದ್ ಕುತ್ತಿ ಅಡಪಲ್ಲಿಕ್ ತಟ್ಟ್‌ಮುಟ್ಟ್ ಇಲಾತನಕೆ ತಪ್ಪ ಭಾರ ಇಗ್ಗತ ನಡತಿಪ್ಪಂಗೊ. ಈ ಗುರು ಕಾರಣಂಗೂ ಕೂಡಿತ್ತುಂಡ ಎಂದು ಎಚ್ಚರಿಕೆ ಕೊಡುತ್ತಾನೆ. ಅನಂತರ ಮನೆಯವರೆಲ್ಲಾ ಆ ಹಿರಿಯನಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾರೆ.ಆಗ ಮುತ್ತೈದೆಯೊಬ್ಬಳು ತಳಿಯಕ್ಕಿ ಬೊಳಕನ್ನು ತೆಗೆದುಕೊಳ್ಳುತ್ತಾಳೆ. ಅನಂತರ ಆಕೆಯ ಹಿಂದೆ ಕದಿರು ಕುಯ್ಯಲು ಗದ್ದೆಗೆ ಹೊರಡುತ್ತಾರೆ. ಕದಿರು ತೆಗೆಯುವ ಗದ್ದೆಗೆ ದಾರಿ ಸರಿಪಡಿಸಿ, ತೋರಣ ಹಾಗೂ ಬಾಳೆಕಂಬಗಳನ್ನು ಕಟ್ಟಿ ಅಲಂಕರಿಸುತ್ತಾರೆ. ಕುಟುಂಬದ ವಾದ್ಯಗಾರರ ಜೊತೆ ಮನೆಯವರೆಲ್ಲಾ ಗದ್ದಗೆ ಬರುತ್ತಾರೆ. ಕುತ್ತಿಯಲ್ಲಿರುವ ಹಾಲು, ಜೇನು ಮೊದಲಾದುವನ್ನು ಕದಿರಿನ ಬುಡಕ್ಕೆ ಸುರಿಯುತ್ತಿರುವಂತೆಯೇ, ಅವರಲ್ಲೊಬ್ಬಾಕಶದತ್ತ ಕೋವಿ ಹಿಡಿದು ಕುಶಲುತೋಪು ಹಾರಿಸುತ್ತಾನೆ. ಕುಯ್ಯುವವರು ದೇವರನ್ನು ನೆನೆದು ಕದಿರು ಕೊಯ್ಯುತ್ತಾರೆ. ಆಗ ಎಲ್ಲರೂ ಪೊಲಿ ಪೊಲಿ ದೇವ (ಅನ್ನಲಕ್ಷ್ಮಿಯೇ ಅಕ್ಷಯವಾಗು) ಎಂದು ಕೂಗುತ್ತಾರೆ. ಕುಯ್ದು ಕದಿರನ್ನು ಕುತ್ತಿಯೊಳಗಿಟ್ಟು, ಕುತ್ತಿ ತೆಗೆಯುವವನ ತಲೆಯ ಮೇಲೆ ಇಡುತ್ತಾರೆ. ಅನಂತರ ಉಳಿದಿರುವವರೆಲ್ಲರೂ ಕದಿರನ್ನು ಕೈಗಳಲ್ಲಿ ಹಿಡಿದುಕೊಂಡು ಪೊಲಿ ಪೊಲಿದೇವ ಎಂದು ಕೂಗುತ್ತಾ ಮನೆಯ ಕೈಮಠ, ಸಮಾಧಿ ಮೊದಲಾದ ಸ್ಥಳಗಳಲ್ಲಿ  ಕದಿರು ಇಟ್ಟು ಅನಂತರ ಮನಗೆ ಬರುತ್ತಾರೆ. ಮನೆಯ ಹೊರಭಾಗದಲ್ಲಿ ಮುತ್ತೈದೆಯೊಬ್ಬರು ಚೆಂಬಿನಲ್ಲಿ ನೀರು ಹಿಡಿದು, ಅವರನ್ನು ಸ್ವಾಗತಿಸಿ ಕುರ್ತಿ ತೆಗೆದವನ ಕಾಲು ತೊಳೆದು, ಅವನಿಗೆ ಕುಡಿಯಲು ಹಾಲು ಕೊಡುತ್ತಾಳೆ. ಅನಂತರ ಮನೆಯನ್ನು ಪ್ರವೇಶಿಸಿ ನೆಲ್ಲಕ್ಕಿನಡುಬಾಣೆಯ ಚಾಪೆಯ ಮೇಲೆ ಕತ್ತಿಯನ್ನು ಇಡುತ್ತಾರೆ. ಉಳಿದವರು ತಾವು ತಂದ ಕದಿರನ್ನು ಚಾಪೆಯ ಮೇಲೆ ಇಡುತ್ತಾರೆ. ಅನಂತರ ಕದಿರಿನ ಮಾಲೆ ಮಾಡಿ ಜೊತೆಗೆ ಮಾವಿನ ಮತ್ತು ಅರಲಿಯ ತೋರಣ ಕಟ್ಟುತ್ತಾರೆ.

ಕುತ್ತಿಯನ್ನು ಹಿಡಿದಿದ್ದಾತ ಹಿರಿಯನಿಗೆ ನಮಸ್ಕರಿಸುತ್ತಾರೆ. ಇದಾದ ನಂತರ ತಂಬಿಟ್ಟು, ಎಳ್ಳು, ಹಾಗಲಮುಳ್ಳು, ತೆಂಗಿನಕಾಯಿಯ ಚೂರು, ಕಲ್ಲುಹರಲು, ಪೆರೆಂಬು ಕೊಡಿಗಳನ್ನು ಹಾಲು, ಜೇನು, ಪುಡಿಕಾಸು, ಚಿನ್ನದಚೂರು, ಬಾಳೆಹಣ್ಣುಗಳನ್ನು ಕಲೆಸಿ, ಕಲೆಸಿದ ಹಿಟ್ಟನ್ನು ಸಣ್ಣಸಣ್ಣ ಎಂಡೆಗಳಾಗಿ ಮಾಡಿ ಅರಲಿ ಎಲೆಯ ಮೇಲಿಟ್ಟು ಸತ್ತ ಹಿರಿಯರ ಹೆಸರನ್ನು ಹೇಳುತ್ತಾ ಒಂದೊಂದಾಗಿ ಮನೆಯ ಮೇಲೆ ಎಸೆಯುತ್ತಾರೆ. ಹೀಗೆ ಎಸೆದ ಹಿಟ್ಟಿನ ಉಂಡೆ ಎಲೆಯ ಸಹಿತ ಮಾಡಿನಲ್ಲಿ ಅಂಟಿಕೊಂಡರೆ ತಮ್ಮ ಹಿರಿಯರಿಗೆ ತೃಪ್ತಿಯಾಗಿದೆ ಎಂದು ನಂಬಿಕೆ. ಇದರ ಜೊತೆಗೆ ಕನ್ಯೆ ಅಥವಾ ಮುತ್ತೈದೆಯೊಬ್ಬಳು ಆ ದಿನ ತಯಾರಿಸಿದ ಭಕ್ಷ್ಯಗಳನ್ನು ಅಗ್ರದ ಬಾಳೇ ಎಲೆಯಲ್ಲಿ ಸ್ವಲ್ಪ ಇರಿಸಿ ಅದನ್ನು ನೈವೇದ್ಯವೆಂದು ಸಮಾಧಿ ಕನ್ನಿಕೊಂಬರೆಯಲ್ಲಿ ಇಡುತ್ತಾರೆ. ಅನಂತರ ಮನೆಯವರೆಲ್ಲಾ ಹಬ್ಬದ ಊಟ ಮಾಡುವರು, ಊಟಕ್ಕೆ ಮೊದಲು ಏಲಕ್ಕಿ ಹಿಟ್ಟನ್ನು ಸೇವಿಸಿ, ಆಮೇಲೆ ಇತರ ಭಕ್ಷಗಳನ್ನು ತಿನ್ನುತ್ತಾರೆ. ಊಟ ಮಾಡುವಾಗ ಕಲ್ಲು ದೊರೆತರೆ ಆತನಿಗೆ ಕಲ್ಲಿನಷ್ಟೇ ಆಯಸ್ಸುಡೆಂದೂ ಚಿನ್ನ ಚೂರು ಕಾಸು ಮುಂತಾದವು ಸಿಕ್ಕರೆ ಆತನು ಸಿರಿವಂತನಾಗುವನೆಂದು ನಂಬಿಕೆ. ಪೊದ್ ಮುಗಿದ ನಂತರ ಐದು ದಿನಗಳ ಕಾಲ ಊರಿನ ಮಂದ್ ನಲ್ಲಿ ಊರಿನವರೆಲ್ಲಾ ಕಲೆತು ಕೋಲಾಟ ನಡೆಸುತ್ತಾರೆ.

ಹುತ್ತರಿ ಕುಣಿತ 

ಹುತ್ತರಿ ಹಬ್ಬದ ಸಂದರ್ಭದಲ್ಲಿ ನಡೆಯುವ ಕೊಡಗಿನ ಒಂದು ಜಾನಪದ ನೃತ್ಯ. ಹಬ್ಬದ ಅಂಗವಾಗಿ ಊರಿನ ದೇವಸ್ಥಾನದ ಮಂದ್‌ನಲ್ಲಿ ಒಂದು ವಾರ ಪರ್ಯಂತ ಕೋಲಾಟ ನಡೆಯುತ್ತದೆ. ಹಬ್ಬಕ್ಕೆ ನಾಲ್ಕೈದು ದಿನಗಳಿಗೆ ಮೊದಲು ಗ್ರಾಮದ ಯುವಕರೂ, ಹಿರಿಯರೂ ಮಂದ್‌ನಲ್ಲಿ ಸೇರಿ ಕೋಲಾಟ ಅಭ್ಯಾಸ ಮಾಡುತ್ತಾರೆ. ಇದಕ್ಕೆ ‘ಈದ್ ‘ ಎಂದು ಹೆಸರು. ಈದ್ ದಿನಗಳಲ್ಲಿ ಅಥವಾ ಹಬ್ಬದ ದಿನಗಳಲ್ಲಿ ಕೋಲಾಟದಲ್ಲಿ ಭಾಗವಹಿಸುವವರು ಅಥವಾ ಕೋಲಾಟ ನೋಡಲು ಆಗಮಿಸುವವರು ದುಡಿ ಬಾರಿಸುವ ವಾದ್ಯಗಾರನೊಂದಿಗೆ ಮಂದ್ ಗೆ ಬರುತ್ತಾರೆ. ಅವರು ತಲುಪಿದಾಗ:

ಬಾಳೆ ಬಾಳೆನ್ನಡ ಜಬ್ಬೂಮೀ ಬಾಳೋ ! ಜಬ್ಬೂಮಿ ಮೀದಲ್ ಪೊಮಂದ್ ಬಾಳೋ
ಪುಮಂದ್ ಮೀದಲ್ ದೇವಯ್ಯ ಬಾಳೋ! ದೇವಂಗೊತ್ತಾಚಾರ ಪಾಡ್ ಚೊನಂಗ

(ಜೀವನ ಮಾಡು ಒಳ್ಳೆಯ ಭೂಮಿಯ ಮೇಲೆ, ಒಳ್ಳೆಯ ಭೂಮಿಯ ಮೇಲೆ ಚೆನ್ನಾಗಿ ಬಾಳು, ಒಳ್ಳೆಯ ಭೂಮಿಯ ಮೇಲೆ ದೇವಯ್ಯ ನೀನು ಬಾಳು. ದೇವರಿಗೆ ಒಪ್ಪುವಂಥ ಆಚಾರ ವಿಚಾರವನ್ನು ಹಾಡಿದೆವು ನಾವು, ಆಚಾರವನ್ನು ಹಡಿ-ಪಡಿ ಹೇಳುವೆವು ನಾವು) ಎಂದು ಹಾಡಿ ವಾದ್ಯಗಾರರು ಹಾಡು ನಿಲ್ಲಿಸುತ್ತಾರೆ.

ಅನಂತರ ಅನೇಕ ಬಗೆಯ ಕೋಲಾಟ ಪ್ರದರ್ಶಿತವಾಗುತ್ತದೆ. ಬೊಳಕಾಟ, ಪಡೆಕಳಿ ಇತ್ಯಾದಿ ನೃತ್ಯಗಳು ನಡೆಯುತ್ತವೆ. ಹಾಡುಗಳ ರೀತಿ, ಧಾಟಿಗಳು, ಹಾಡಿನೊಂದಿಗೆ ನೃತ್ಯದ ಹೆಜ್ಜೆಗಳನ್ನು ಜೊತೆ ಜೊತೆಯಾಗಿಡುವಂತೆ ಪ್ರೇರೇಪಿಸುತ್ತದೆ. ಹುತ್ತರಿ ಕೋಲಾಟದಲ್ಲಿ ಹಾಡುಗಳು ಪೋಯ್ ಲೇ ಪೋಯ್ ಲೇ ಎಂಬ ಪಲ್ಲವಿಯಿಂದ ಪ್ರಾರಂಭವಾಗುತ್ತದೆ. ಈ ಹಾಡುಗಳಲ್ಲಿ ದೇವರ ಆಶೀರ್ವಾದವನ್ನು ಬೇಡುವ, ವಾದ್ಯದವರಿಗೂ, ನೃತ್ಯದವರಿಗೂ ಸಲಹೆಗಳನ್ನು ಕೊಡುವ ವಿಚಾರಗಳೂ ಸರಸ ಅಥವಾ ಹಾಸ್ಯ ಪ್ರಸಂಗಗಳು ನಿರೂಪಿತವಾಗಿರುತ್ತವೆ.

ಪಡೆಕಳಿ ಅಥವಾ ಪರಿಯಕಳಿ ಯುದ್ಧ ಪರಂಪರೆಗೆ ಸೇರಿದ ನೃತ್ಯ. ಶೂರ ಯುವಕರು ಪೆಟ್ಟುಗಳನ್ನು ತಡೆಯುವ ಗುರಾಣಿಯಂಥ ಸಾಧನವನ್ನು ತಮ್ಮ ಎಡಗೈಯಲ್ಲಿ ಹಿಡಿದು, ಬಲಗೈಯಲ್ಲಿ ಉದ್ದವಾದ ಬೆತ್ತದ ಕೋಲನ್ನು ಹಿಡಿದು, ನಾನ್ ಬಾಳ್, ಬಯತೂರಪ್ಪ ಬಾಳ್, ಬಾಳ್ ಬಾಳಕೀ ಬಾಳ್ ಎಂದು ಹೇಳುತ್ತಾ ಹೋರಾಟಕ್ಕೆ ಆಹ್ವಾನಿಸುತ್ತಾರೆ. ಈ ಆಟದಲ್ಲಿ ಪರಸ್ಪರ ಯಾರೂ ಕೂಡ ಮೊಣಕಾಲಿನ ಮೇಲೆ ಹೊಡೆಯಬಾರದು. ಆಟ ಒಂದು ಘಟ್ಟಕ್ಕೆ ಮುಟ್ಟಿದಾಗ ಆಟವನ್ನು ನಿಲ್ಲಿಸಿ ಪರಸ್ಪರ ಅಪ್ಪಿಕೊಂಡು ಅಭಿನಂದಿಸಿ ಬೇರ್ಪಡುತ್ತಾರೆ. ಹುತ್ತರಿ ಹಬ್ಬದ ಸಂಜೆ ಅಥವಾ ಕೋಲಾಟ ನಡೆಯುವಷ್ಟು ದಿನ ಪ್ರತಿ ರಾತ್ರಿ ಗ್ರಾಮದ ಮನೆ ಮನೆಗೆ ಹೋಗಿ ಮನೆ ಹಾಡು ಹೇಳುವ ಸಂಪ್ರದಾಯವೂ ಇದೆ. ಮನೆಯವರನ್ನು ಹಾಡಿ ಹೊಗಳಿದ ಅನಂತರ ಅವರಿಂದ ಕಾಣಿಕೆಯನ್ನು ಪಡೆಯುತ್ತಾರೆ. ಉದಾಹರಣೆಗೆ ಒಂದು ಮನೆಯ ಹಾಡು:

ನಂದಾಡ್ ಮನೆ ಮಂದಿ ಮಹದೇವ | ಪತ್ತಯ ಚಿತ್ತಾರಿ ತೊನೆಯತಿರಡೊ
ತೊಟ್ಟ್ ಲ್ ಪಾಕುಇ ತಪ್ಪತಿರಡೊ | ಪೊಟ್ಟಲ್ ಕರ್ ಪತ್ತ ನೀಂಗತಿರಡೊ
ಪೊಟ್ಟ್ ಲ್  ಬೀರಾಳಿ ನೀಂಗತಿರಡೊ | ಬೆಪ್ಪಲ್ ಪೊಂಬಣನಂಗತಿರಡೊ

(ಈ ಮನೆಯವರಿಗೆ ಮಂಗಳವನ್ನುಂಟು ಮಾಡ ಮಹದೆವ, ಈ ಮನೆ ಎಲ್ಲ ದಿಕ್ಕಿನಲ್ಲೂ ಅಭಿವೃದ್ದಿ ಹೊಂದಲಿ. ಇದರ ಉಗ್ರಾಣದಲ್ಲಿ ಸಣ್ಣಕ್ಕಿ ತುಂಬಿ ತುಳುಕಾಡುತ್ತಿರಲಿ. ಸದಾಕಾಲವೂ ತೊಟ್ಟಿಲಲ್ಲಿ ಹಾಲು ಹಸುಳಿ ನಗುತಿರಲಿ. ಕೊಟ್ಟಿಗೆಯಲ್ಲಿ ಹಾಲು ಕರೆಯುವ ಹಸು ಇರಲಿ ಇತ್ಯಾದಿ).

ವ್ಯಕ್ತಿ ದೂರದಲ್ಲಿ ಸತ್ತು ಹೇಮವನ್ನು ತರಲು ಸಾಧ್ಯ ಆಗದಿದ್ದರೆ ಅವನ ಕೂದಲು, ಉಗುರುಗಳನ್ನು ತಂದು ಹುಲ್ಲಿನ ಬೊಂಬೆಯನ್ನು ಮಾಡಿ ಅದರಲ್ಲಿ ಆ ಕೂದಲು, ಉಗುರುಗಳನ್ನು ಇಟ್ಟು ಆ ಬೊಂಬೆಯನ್ನು ಸುಡುತ್ತಾರೆ. ದಹನವಾದ ಮಾರನೆಯ ದಿನ ಸತ್ತವನ ಮಗ ಅಥವಾ ಅರೆ ಹತ್ತಿರದ ಸಂಬಂಧಿ ದಹನ ಮಾಡಿದ ಸ್ಥಳಕ್ಕೆ ಮೂರು ಬಾರಿ ಪ್ರದಕ್ಷಿಣೆ ಬಂದು ಮೂರು ಸಲ ಅಕ್ಕಿಯನ್ನು ಆ ಸ್ಥಳದ ಮೇಲೆ ಎರಚುತ್ತಾನೆ. ಯದು ತೇಗ ಅಥವಾ ಬಾಲೆ ಎಲೆಗಳನ್ನು ನೆಲದ ಮೇಲೆ ಹಾಸಿ ಅದರ ಮೇಲೆ ಹಕ್ಕಿಯ ಮಾಂಸ, ಅನ್ನ, ತರಕಾರಿ ಮುಂತಾದದುವನ್ನು ಇಟ್ಟು ‘ಓ ಹಳೆಯ ಆತ್ಮಗಳೇ, ಈ ಹೊಸ ಆತ್ಮವನ್ನು ಸೇರಿಸಿಕೊಳ್ಳಿ. ಅದಕ್ಕೆ ಬೆಂಬಲ ನೀಡಿ. ನಿಮ್ಮಲ್ಲಿ ಅದನ್ನು ಒಂದಾಗಿಸಿಕೊಳ್ಳಿ’ ಎಂದು ಪೂರ್ವಿಕರನ್ನು ಪ್ರಾರ್ಥಿಸುತ್ತಾನೆ. ಇದೇ ರೀತಿ ೬ನೇ ದಿನ ಆಹಾರವನ್ನು ಸಮರ್ಪಿಸಿ ಪ್ರಾರ್ಥನೆ ಸಲ್ಲಿಸುತ್ತಾನೆ. ಏಳನೆಯ ದಿನ ದಹನ ಸ್ಥಳದಲ್ಲಿ ಒಂದು ಚಪ್ಪರ ಕಟ್ಟಿ ಅಗಸ ಆ ಚಪ್ಪರದ ಹೊರಭಾಗಕ್ಕೆ ಬಿಳಿ ಬಟ್ಟೆಯನ್ನು ಹೊದಿಸುತ್ತಾನೆ. ತೆಂಗಿನ ಚಿಪ್ಪಿನ ತುಂಬಾ ಎಣ್ಣೆ ತುಂಬಿ ದೀಪ ಹೊತ್ತಿಸಿ ಚಪ್ಪರದ ಎಲ್ಲಾ ಮೂಲೆಗಳಲ್ಲೂ ಇಡುತ್ತಾರೆ. ಸತ್ತವನ ನೆಂಟರು ಅಳುತ್ತಾ ಒಂದೊಂದು ಹಿಡಿ ಅಕ್ಕಿಯನ್ನು ದಹನ ಮಾಡಿದ ಜಾಗದ ಮೇಲೆ ಎರಚುತ್ತಾರೆ.

ಹೀಗೆ ವ್ಯವಸಾಯ ಸಂಬಂಧಿ ಆಚರಣೆಗಳು ಕೃಷಿಕ ಸಮುದಾಯದ ಸಂಸ್ಕೃತಿಯ ಅವಿಭಾಜ್ಯ ಅಂಶಗಳಾಗಿವೆ.

 

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)