ಸಂಸ್ಕೃತಿ ಎಂದ ತಕ್ಷಣ ನಾವು ಪುರಾತನವೂ ಉಜ್ವಲವೂ ಭವ್ಯವೂ ವೈಭವೋ ಪೇತವೂ ಆದ ಸನಾತನ ಅಪಾರುಕ್ಷೇಯ ಆರ್ಯ ಸಂಸ್ಕೃತಿಯ ಮೂಲವನ್ನು ಪ್ರತಿಬಿಂಬಿ ಸುತ್ತೇವೆ. ಆದರೆ ನಿಜವಾಗಿಯೂ ಸಂಸ್ಕೃತಿಯೆಂಬುದು ಯಾವುದೇ ಒಂದು ಕಾಲ, ದೇಶ, ಜನಾಂಗದ ನಿರ್ದಿಷ್ಟ ಅಭಿವ್ಯಕ್ತಿಯ ಸ್ಪಷ್ಟ ಸ್ವರೂಪವಷ್ಟೇ ಆಗಿರದೆ ಅಪಾರುಕ್ಷೇಯವಾಗಿ ಪರಂಪರಾನುಗತವಾದ ಮಾನವನ ಎಲ್ಲಾ ಭೌತಿಕ ಮತ್ತು ಬೌದ್ದಿಕ ಸಂಸ್ಕಾರಗಳನ್ನೆಲ್ಲಾ ಒಳಗೊಂಡು, ಅನಾದಿ ಕಾಲದಿಂದ ಇಂದಿನವರೆಗೆ ಕಾಲ, ದೇಶ, ಜನಾಂಗಗಳ ಸಂಪರ್ಕ ಸಮ್ಮಿಲನಗಳಿಂದ ವಿಸ್ತೃತವಾಗುತ್ತಾ ಬರುವಂತಹದೇ ಹೊರತು ಕೊನೆಮುಟ್ಟಿ ನಿಲ್ಲುವಂತ ಹದಲ್ಲ. ಈ ಹಿನ್ನೆಲೆಯಲ್ಲಿ ಭಾರತದ ಇಂದಿನ ಮಿಶ್ರಸಂಸ್ಕೃತಿಯ ಮೂಲ ರೂಪ ‘ಮುಂಡ ಸಂಸ್ಕೃತಿ’ಯೆಂದು ಡಾ. ಗೋಕಾಕ್‌ರು ಗುರುತಿಸಿರುವುದು ಗಮನಾರ್ಹವಾದುದು.

ಗೆಜೆಟಿಯರ್ ಆಫ್ ಸೌತ್ ಇಂಡಿಯಾದ ಎರಡನೇ ಸಂಪುಟದಲ್ಲಿ ತಮಿಳುನಾಡಿನ ಉತ್ತರ ಆರ್ಕಾಟ್ ಜಿಲ್ಲೆಯಲ್ಲಿ ಮೊಂಡಿ ಜನರಿರುವುದಾಗಿ ಬರೆಯುತ್ತಾ “Mondas are a body of particularly pertinacious beggers. Whose methods of extracting alms from the reluctant include cutting themselves with knives and other unplesent performance ಎಂದಿದ್ದಾರೆ.

೧೯೧೧ರ ಜನಗಣತಿಯ ಸಂಪುಟ XXI ಮೈಸೂರು ಭಾಗ ೧ರ ವರದಿಯಲ್ಲಿ ಶ್ರೀ ಯು.ಆರ್. ತ್ಯಾಗರಾಜ ಅಯ್ಯರ್‌ರವರು ಪುಟ ೧೬೨ರಲ್ಲಿ ಬೇಡ ಜಾತಿಯ ಬಗ್ಗೆ ಬರೆಯುತ್ತಾ “Monda bedas a wondering tribe who are beggers by proffession” ಎಂದು ಬರೆದಿದ್ದಾರೆ.

ಮೈಸೂರು ಗೆಜೆಟಿಯರಲ್ಲಿ ಸಂಪುಟ ಒಂದು ಪುಟ ೨೫೫ರಲ್ಲಿ B. Lewis and Riceರು ಸಹ ಬೇಡರ ಒಳಪಂಗಡಗಳಲ್ಲಿ Mondayavaru ಎಂದು ಬರೆದಿರುವುದು Mondivaru ಎಂಬ ತೆಲುಗು ಉಚ್ಚಾರದ ಕನ್ನಡ ರೂಪವೆಂದು ಕಾಣುತ್ತದೆ.

ಡಾ. ಚಂದ್ರಶೇಖರ ಕಂಬಾರರು ‘ಕನ್ನಡ ಜಾನಪದ ವಿಶ್ವಕೋಶ, ಸಂಪುಟ ೨, ಪುಟ ೧೩೬೨ರಲ್ಲಿ ಬಂಡೆ ಪದವನ್ನು ವಿವರಿಸುತ್ತಾ ಮೊಂಡಿ ಭಿಕ್ಷುಕ ವರ್ಗಕ್ಕೆ ಬಂಡರೆಂದು ಕರೆಯುತ್ತಿದ್ದರು. ಹಟಮಾರಿ ಎಂಬ ಅರ್ಥದಲ್ಲಿ ಇದನ್ನು ಬಳಸುವಂತೆ ತೋರುತ್ತದೆ. ಭಿಕ್ಷೆ ಬೇಡಲು ಹೋಗುವವನು ಜೊತೆಯಲ್ಲಿಯ ಕಲ್ಲನ್ನು ತೆಗೆದುಕೊಂಡು ಹೋಗಿ ಭಿಕ್ಷೆ ನೀಡದಿದ್ದರೆ ತಲೆ ಚಚ್ಚಿಕೊಳ್ಳುವೆನೆಂದು ಹೆದರಿಸುತ್ತಿದ್ದನು. ಇಂಥ ಭಿಕ್ಷುಕನಿಗೆ ಈ ಹೆಸರು ಅನ್ವಯವಾಗುತ್ತಿತ್ತು. ಬಂಡ ಎಂದರೆ ಕಲ್ಲು ಎಂದು ಬರೆದಿದ್ದಾರೆ. ಶ್ರೀ ಥರ್ಸ್ಟನ್, ಹೆಚ್.ಎ. ಸ್ಟೂವರ್ಟರು ತೆಲುಗಿನ ಬಂಡ ತಮಿಳಿನ ಮೊಂಡಿಗೆ ಸಮಾನವಾದ ಪ್ರಯೋಗ ವೆಂದಿದ್ದಾರೆ.

ತೆಲುಗಿನ “ತೆಲುಗು ಸಾಮೆತಲು ಜನ ಜೀವನಂ” ಎಂಬ ಕೃತಿಯಲ್ಲಿ ಡಾ. ಪಾಪಿರೆಡ್ಡಿ ಮತ್ತು ನರಸಿಂಹರೆಡ್ಡಿಯವರು ಆಂಧ್ರಪ್ರದೇಶದ ೨ ಮಿಲಿಯನ್‌ರಷ್ಟು ಭಿಕ್ಷುಕರನ್ನು ವಿವಿಧ ವೃತ್ತಿಗಳ ಅಡಿಯಲ್ಲಿ ವರ್ಗೀಕರಿಸುವಾಗ ಪುಟ ೧೦೪ರಲ್ಲಿ ೫ನೆಯ ವೃತ್ತಿಪರ ಜಾತಿಯೆಂದು ಅಸಹ್ಯಕರವಾಗಿ ಭಯಂಕರವಾದ ಕೆಲಸಗಳನ್ನು ಮಾಡುತ್ತಾ ಭಿಕ್ಷೆ ಬೇಡುವರು ಮೊಂಡಿ, ಬಂಡ” ಎಂದು ಹೆಸರಿಸಿದ್ದಾರೆ. ಇವರೇ ಪುಟ ೧೩೮ರಲ್ಲಿ  “ಇದು ಒಂದು ಭಿಕ್ಷುಕರ ಜಾತಿ. ಬಲಗೈಗೆ ಕಬ್ಬಿಣದ ಬಳೆಗಳನ್ನು ಹಾಕಿಕೊಂಡು ಕಬ್ಬಿಣದ ಹಿಡಿ ಇರುವ ಕಸಾಯಿ ಕತ್ತಿಯನ್ನು ಹಿಡಿದುಕೊಂಡು ಭಿಕ್ಷಾಟನೆ ಮಾಡುತ್ತಾರೆ. “ಮೊಂಡಿವಾನಿ ಹಿತುಡು ಬಂಡವಾಟು ಮೊಂಡಿಕಿ ಸಿಗ್ಗುಲೇದು ಮೊರಡಕು ಗಾಲಿಲೇದು” ಎಂಬ ಗಾದೆಗಳು ಈ ಎರಡು ಜಾತಿಯವರು ಮಾಡುವ ಕೆಲಸಗಳ ಅಸಹ್ಯತೆಯನ್ನು ಸೂಚಿಸುತ್ತವೆ.

ಎಡ್ಗರ್ ಥರ್ಸ್ಟ್‌ನರು ತಮ್ಮ ಕೃತಿಗಳಲ್ಲಿ ಸಂಗ್ರಹಿಸಿರುವ ಗಾದೆಗಳಲ್ಲಿ “Mondi – The rough rugged ground traversed by The Kalladi Siddan is Powdered to dust ಎಂದೂ ‘Whichever way The Kalladi Mangan goes you should dole out a measure of grain for him ಎಂದು ಬರೆದಿರುವುದು ಇವರ ಭಿಕ್ಷಾವೃತ್ತಿಯನ್ನು ಎತ್ತಿ ತೋರಿಸುತ್ತದೆ.

ಒಟ್ಟಾರೆಯಾಗಿ ಇವರು ಭಿಕ್ಷೆ ಬೇಡುವ, ಜನರು ಭಿಕ್ಷೆ ಕೊಡದಿದ್ದರೆ ಮೊಂಡಾಟ ಮಾಡಿ ಭಿಕ್ಷೆ ಬೇಡುವ ವೃತ್ತಿಯಿಂದಾಗಿ ಮೊಂಡರು ಎಂಬ ಹೆಸರು ಬಂದಿರುವುದಾಗಿದೆ ಎಂದು ಊಹಿಸಬಹುದು.

ಹೆಚ್.ವಿ. ಸ್ಟೂವರ್ಟ್ (Stuart)ರು ಮೊಂಡಿ / ಬಂಡರ ಬಗ್ಗೆ ಬರೆಯುತ್ತಾ “ಇವರಿಗೆ ತಮ್ಮದೇ ಆದ ಮತವಿಲ್ಲ. ಶೂದ್ರರೆಂದು ಪರಿಗಣಿಸಿದರೂ ಸಹ ಕಪ್ಪಗೆ ಅಸಹನೀಯವಾಗಿ ಕಾಣುವ ಇವರ ಹವ್ಯಾಸಗಳನ್ನು ಗುರುತಿಸುವುದು ಕಷ್ಟ ಸಾಧ್ಯ. ಸಂತೋಷದಾಯಕ ಸಂಗತಿಯೆಂದರೆ ಅವರ ಸಂಖ್ಯೆ ಕಡಿಮೆ ಇರುವುದು. ಹಾಡುತ್ತಾ ಕುಣಿಯುತ್ತಾ ಭಿಕ್ಷಾಟನೆ ಮಾಡುತ್ತಾರಾದರೂ ಅವರಿಂದ ಉಚ್ಚರಿಸಲ್ಪಡುವ ಪದಗಳು ಅನುಕರಣೀಯವಾಗಿ ರುವುದಿಲ್ಲ. ಭಿಕ್ಷೆ ನೀಡದಿದ್ದರೆ ಒತ್ತಾಯಿಸುತ್ತಾರೆ. ಇವರ ವೃತ್ತಿಯ ಉಪಕರಣಗಳು ಕತ್ತಿ ಮತ್ತು ಮಣ್ಣು. ಕತ್ತಿಯಿಂದ ಕೈ ಕಾಲು ನಾಲಿಗೆ ಮೊದಲಾದ ಅಂಗಗಳನ್ನು ರಕ್ತ ಬರುವಂತೆ ಕತ್ತರಿಸಿಕೊಂಡು, ಭಿಕ್ಷೆ ನೀಡದ ಅಂಗಡಿ ಅಥವಾ ಮನೆಯೊಳಕ್ಕೆ ರಕ್ತಮಿಶ್ರಿತ ಮಣ್ಣನ್ನು ಎಸೆಯುತ್ತಾರೆ. ಬೇಕೆಂದಾಗ ವಾಂತಿ ಮಾಡಿಕೊಳ್ಳುವ ಕಲೆಯನ್ನು ರೂಢಿಸಿಕೊಂಡಿರುತ್ತಾರೆ. ವಾಂತಿ ಮಾಡುವ ಉದ್ದೇಶ ಭಿಕ್ಷೆ ನೀಡುವವರು ಅಸಹ್ಯದಿಂದ ಮೊದಲು ತೊಲಗಲಿ ಎಂದು ಬೇಡಿದ್ದನ್ನು ನೀಡುವಂತೆ ಮಾಡಲು ಕೆಲವು ವೇಳೆ ಬೀದಿಯ ಮಣ್ಣನ್ನು ಮೈಗೆಲ್ಲಾ ಕಣ್ಣು ಕಾಣುವಂತೆ ಹಚ್ಚಿಕೊಂಡು ಮಣ್ಣಿನಿಂದಲೇ ಉಸಿರಾಡುತ್ತಿದ್ದಾರೋ ಎಂಬಂತೆ ಬೀದಿ ಗಳಲ್ಲಿ ಬಿದ್ದಿರುತ್ತಾರೆ. ಹೀಗೆ ಒಂದಲ್ಲ ಒಂದು ವಿಧಿಯಿಂದ ಇವರು ಇತರರಿಂದ ತಮ್ಮ ಬೇಡಿಕೆಗಳನ್ನು ಪೂರೈಸಿಕೊಳ್ಳುವ ಚಾತುರ್ಯವನ್ನು ಪಡೆದಿದ್ದಾರೆ”.

ಬೇಡರ ಒಂದು ಉಪಜಾತಿಯಾಗಿರುವ ಮೊಂಡ ಸಮುದಾಯವು, ಮುಂಡ ಮೊಂಡರು ಮುಕ್ರಿ ಮೈಕುಂಡ, ಮುಂಡಲ ಬಂಡೆ ಕನ್ನಡ ಪದಗಳಾದರೆ ಮೊಂಡಿ, ಮೊಂಡಿಗ, ಮೊಂಡಿವಾರು, ಮೊಂಡಿಪಟ್ಟಿ, ಬಂಡ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಪ್ರಯೋಗ ವಾಗಿರುವ ಪದಗಳು. ಮುಂಡಲ ಪರಿಶಿಷ್ಟ ಜಾತಿಯಾಗಿಯೂ ಮುಂಡ ಆದಿವಾಸಿ ಬುಡಕಟ್ಟಾಗಿಯೂ ಭಾರತದಾದ್ಯಂತ ಪ್ರಚಾರದಲ್ಲಿವೆ. ತೆಲುಗು ಮಾತೃಭಾಷೆಯನ್ನು ಹೊಂದಿ ರುವ ಇವರು ಆಯಾ ಪ್ರಾಂತಗಳ ಭಾಷೆಯನ್ನು ಹೊಂದಿರುವ ಇವರು ಆಯಾ ಪ್ರಾಂತಗಳ ಭಾಷೆಯನ್ನು ಕಲಿತಿರುತ್ತಾರೆ. ಮೊಂಡ ಎಂದರೆ ಹಠಮಾರಿ ಎಂದರ್ಥ. ಮೊಂಡು ಬಿದ್ದು ಭಿಕ್ಷೆ ಬೇಡುವ ವೃತ್ತಿಯನ್ನವಲಂಬಿಸಿದ್ದರಿಂದಲೇ ಈ ಅಲೆಮಾರಿ ಜನರಿಗೆ ಈ ಹೆಸರು ಬಂದಿರಬಹುದೆಂದು ಹೇಳಬಹುದಾದರೂ ಇದನ್ನು ಈ ಸಮುದಾಯದವರು ಒಪ್ಪುವುದಿಲ್ಲ.

ಭಾರತದಲ್ಲಿ ಸಹಸ್ರಾರು ಬುಡಕಟ್ಟುಗಳ ಪೈಕಿ ಬೇಡರ ಸಮುದಾಯವು ವಿಶಿಷ್ಟವಾಗಿದೆ. ಹಲವು ಕಸುಬು ಮತ್ತು ಉಪ ಕಸುಬುಗಳನ್ನು ಮಾಡುವ ಇವರು ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ವಿವಿಧ ಇಲಾಖೆಗಳಲ್ಲಿ ಪೋಲಿಸರು, ತಳವಾರ, ನೀರಗಂಟಿ, ಓಲೆಕಾರ ಮುಂತಾದ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆಂದು ತಿಳಿದು ಬರುತ್ತದೆ. ಅನೇಕ ಸಾಮ್ರಾಜ್ಯಗಳಲ್ಲಿ ಈ ಸಮುದಾಯದ ಸೈನಿಕರು ಶಕ್ತಿ ಪ್ರದರ್ಶಿಸಿರುವುದು, ಪ್ರಾಣಾರ್ಪಣೆ  ಮಾಡಿರುವುದು ಇತಿಹಾಸದಲ್ಲಿ ಕಂಡು ಬರುತ್ತದೆ.

ಮೊಂಡರು ಬೇಡ ಸಮುದಾಯದ ಒಂದು ಉಪಜಾತಿಯಾಗಿದೆ. ಮೊಂಡ ಬೇಡರು ನಾವು ಮ್ಯಾಸಬೇಡರಿಗೆ ನೆಂಟರಾಗಬೇಕೆಂದು ಹೇಳಿಕೊಳ್ಳುತ್ತಾರೆ. ಅವರ ಮತ್ತು ನಮ್ಮ ಆರಾಧ್ಯ ದೇವತೆಗಳು ಒಂದೇ ಎನ್ನುತ್ತಾರೆ. ಆದರೆ ಇವರಲ್ಲಿ ವೈವಾಹಿಕ ಸಂಬಂಧದ ನಿರ್ಬಂಧವಿದೆ. ಇತ್ತೀಚೆಗೆ ವಸ್ತು ವಿನಿಮಯ ರೂಪದಲ್ಲಿ ಕೊಟ್ಟುಕೊಳ್ಳುವ ವ್ಯವಸ್ಥೆ ಜಾರಿಗೆ ಬರುತ್ತಲಿದೆ. ಈ ಮೊಂಡರು ಊರೂರು ಅಲೆಯುತ್ತ ಭಿಕ್ಷೆ ಬೇಡುವ ವೃತ್ತಿ ಮಾಡುತ್ತಾರೆ. ಇವರು ಮೊಂಡಿ, ಲಾಂಡ, ಕಲ್ಲಾಡಿ, ಸಿದ್ದಾಣ ಮತ್ತು ಕಲ್ಲಾಡಿ ಮುಂಗಾಮ ಎಂದೂ ಜಾತಿ ಸೂಚಕ ಹೆಸರುಗಳನ್ನು ಹೊಂದಿದ್ದಾರೆ.

“ಈ ಮೊಂಡರು ಬೇಡಿ ತಿನ್ನುವವರೆಂದು ಪರಿಣಾಮಕಾರಿಯಾದ ತೊಂದರೆ ಕೊಡುವವರೆಂದು” ಎಡ್ಗರ್ ಥರ‍್ಸ್‌ಟನ್ ಅಭಿಪ್ರಾಯ ಪಡುತ್ತಾರೆ. ಬಂಡರೆಂದು ಕರೆಸಿ ಕೊಳ್ಳುವ ಮೊಂಡರು ಬಂಡೆಗಿಂತ ಗಟ್ಟಿಯೆಂಬ ವಾಡಿಕೆಯಿದೆ. ಗಟ್ಟಿಮುಟ್ಟಾದ ಮೈಕಟ್ಟು, ಪುಡಗೋನಿ ಅಥವಾ ಚಲ್ಲಾಣ ಧರಿಸಿದ್ದು ಅರೆನಗ್ನ ಸ್ಥಿತಿಯಲ್ಲಿರುತ್ತಾರೆ. ಕೈಯಲ್ಲಿ ಕಿರಿದಾದ ಗಂಟೆ ಇಲ್ಲವೆ, ಕೈಬಳೆಗೆ ಕತ್ತಿಯನ್ನಿಟ್ಟುಕೊಂಡು ಶಬ್ದ ಮಾಡುತ್ತಾ ಬರುತ್ತಾರೆ. ಇತ್ತೀಚಿನ ದಿನಗಳಲ್ಲಿ ಅವರು ಕೈಯಲ್ಲೊಂದು ಚೂರಿ ಮಣ್ಣಿನ ಮಡಕೆಯನ್ನು ಇಟ್ಟುಕೊಂಡು ಭಿಕ್ಷೆ ಬೇಡುವಾಗ ಚರ್ಮ ಮತ್ತು ತೊಡೆ ಎಲುಬನ್ನು ಚಾಕುವಿನಿಂದ ಕೊಯ್ದುಕೊಳ್ಳುವುದು ಕಲ್ಲಿನಿಂದ ಎದೆಗೆ ಬಡಿದುಕೊಳ್ಳುವುದು. ಮಣ್ಣಿನ ಕುಡಿಕೆಯಲ್ಲಿ ಸೋಪನ್ನು ಅಥವಾ ಸೌಳನ್ನು ಕಲಿಸಿದ ನೀರಿಟ್ಟುಕೊಂಡು ಆಗಾಗ ಕುಡಿದು ವಾಂತಿ ಮಾಡಿಕೊಳ್ಳುತ್ತಾನೆ. ಮನೆಯ ಮಾಲಿಕರು ಮನೆ ಮುಂದೆ ವಾಂತಿ ಮಾಡುತ್ತಾನೆಂದು ತಿಳಿದು, ಕೂಡಲೇ ಕೇಳಿದಷ್ಟು ಭಿಕ್ಷೆ ಕೊಡುವರು. ಮೊಂಡ ಬೇಡರು ಹಟಮಾರಿತನ, ಛಲಗಾರರಾಗಿದ್ದು, ಧೈರ್ಯ ಹಾಗೂ ಪರಾಕ್ರಮಶಾಲಿಗಳಾಗಿರುತ್ತಾರೆ. ಭಿಕ್ಷೆಯನ್ನು ಪಟ್ಟು ಹಿಡಿದು ಪಡೆಯುವುದು ಸರ್ವೇ ಸಾಮಾನ್ಯವಾದುದು.

ಇವರು ತಮ್ಮ ಮಕ್ಕಳಿಗೆ ಬೇಕೆಂದಾಗ ವಾಂತಿ ಮಾಡಿಕೊಳ್ಳುವ ಕಲೆಯನ್ನು ಬಾಲ್ಯ ದಲ್ಲಿಯೇ ಕಲಿಸುತ್ತಾರೆ. ಹುಡುಗರಿಗೆ ಅವರು ಕುಡಿಯುವಷ್ಟು ನೀರಾಗಲಿ, ಗಂಜಿಯಾಗಲಿ ಕುಡಿಸಿ ಬೇಕೆಂದಾಗ ಹೇಗೆ ವಾಂತಿ ಮಾಡಿಕೊಳ್ಳಬೇಕೆಂದು ತರಬೇತಿ ನೀಡುತ್ತಾರೆ. ಮೊದಲು ಬೆರಳುಗಳನ್ನು ಬಾಯಿಯೊಳಕ್ಕೆ ಹಾಕಿ, ನಾಲಿಗೆಯ ಮೂಲವನ್ನು ಉಜ್ಜಿ, ಒತ್ತಿ, ವಾಂತಿ ಯಾಗುವಂತೆ ಮಾಡುತ್ತಾರೆ. ಕ್ರಮೇಣ ಹೇಗೆ ಬೇಕೆಂದಾಗ ಮಾತ್ರ ವಾಂತಿ ಮಾಡುವುದೆಂದು ನಿರ್ದೇಶಿಸುತ್ತಾರೆ. ನಿತ್ಯ ಭಿಕ್ಷಾಟನೆಗೆ ಹೊರಡುವ ಮೊದಲು ಗಂಜಿಯಾಗಲಿ ಬಿಸಿ ನೀರಾಗಲಿ ಹೊಟ್ಟೆ ತುಂಬ ಕುಡಿದು ವೃತ್ತಿಗಿಳಿಯುತ್ತಾರೆ. ಇವರು ಭಿಕ್ಷೆಯನ್ನು ತಮ್ಮ ಪಾಲಿನ ಹಕ್ಕೆಂದು, ಉಳ್ಳವರು ತಮಗೆ ಸಲ್ಲಿಸಬೇಕಾದ ಸಾಲದ ಬಾಕಿಯೆಂದು ಭಾವಿಸುತ್ತಾರೆ.

ಹೀಗೆ ಭಿಕ್ಷೆಯನ್ನೇ ಒಂದು ವೃತ್ತಿಯನ್ನಾಗಿ ಮಾಡಿಕೊಂಡು ಜೀವನ ನಿರ್ವಹಿಸುತ್ತಿರುವ ಈ ಸಮುದಾಯ ಪ್ರಸ್ತುತ ಜಗತ್ತಿನಲ್ಲಿ ಭಿಕ್ಷೆಯನ್ನು ಬಿಟ್ಟು ದೈಹಿಕವಾಗಿ ಸಬಲ ಸಮರ್ಥ ರಾಗಿರುವ ಇವರು ದುಡಿಯುವ ಕಡೆ, ದೈಹಿಕ ಶ್ರಮವನ್ನು ಹಾಕಿ ಯಾವುದಾದರೂ ಉದ್ಯೋಗದ ಕಡೆ ಮುಂದುವರಿದು ಹೊಟ್ಟೆ ತುಂಬ ಊಟ ಮಾಡುವ ತೃಪ್ತಿಯ ಜೀವನ ನಡೆಸುವ ಕಡೆ ಯೋಚಿಸಬೇಕಾಗಿರುವುದು ಇಂದಿನ ಜರೂರತ್ತಾಗಿದೆ ಎಂದು ಅನಿಸುತ್ತದೆ. ಯಾಕೆಂದರೆ ಮೊಂಡರ ಐತಿಹಾಸಿಕ ಹಿನ್ನೆಲೆ ಖಚಿತವಾಗಿ ತಿಳಿದು ಬಂದಿಲ್ಲ ಇವರು “ನಮ್ಮವರು ಹಿಂದೆ ರಾಜರುಗಳ ಆಸ್ಥಾನದಲ್ಲಿ ಗೂಢಾಚಾರಿಗಳಾಗಿದ್ದು ನೇರವಾಗಿ ಹೋಗುವುದಕ್ಕೆ ಬದಲು ಭಿಕ್ಷೆ ಬೇಡುವ ಮೂಲಕ ಮನೆ ಮನೆಗೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಅವರು ಪ್ರಜೆಗಳ ಅಭಿಪ್ರಾಯ, ಒಲವು ಉದ್ದೇಶಗಳನ್ನು ತಿಳಿದು ರಾತ್ರಿ ಸಮಯದಲ್ಲಿ ಅರಸನಿಗೆ ಖುದ್ದಾಗಿ ತಿಳಿಸುತ್ತಿದ್ದರೆಂದು” ಅಭಿಪ್ರಾಯಪಡುತ್ತಾರೆ.

ರಾಜಪ್ರಭುತ್ವಗಳು ಕೊನೆಗಾಣುತ್ತಾ ಬಂದಂತೆ ಇವರು ನಿರುದ್ಯೋಗಿಗಳಾಗಿ ಜೀವನ ನಿರ್ವಹಣೆಗೆ ಮೊದಲಿನಂತೆ ಭಿಕ್ಷೆ ಬೇಡುವುದನ್ನು ಕಡ್ಡಾಯ ಮಾಡಿಕೊಂಡು ಜೀವನ ನಿರ್ವಹಿಸತೊಡಗಿದರು. ಇಂದಿಗೂ ಇದೇ ಭಿಕ್ಷಾವೃತ್ತಿಯನ್ನು ಮುಂದುವರಿಸಿಕೊಂಡು ಬರುತ್ತಿರುವ ಇವರು ಭಿಕ್ಷೆಯನ್ನು ಬೇಡುವುದೇ ಒಂದು ವೃತ್ತಿಯನ್ನಾಗಿ ಕೈಗೊಂಡಿದ್ದಾರೆ. ಇಂದಿನ ಜಾಗತೀಕರಣದ ಪ್ರಕ್ರಿಯೆಯಲ್ಲಿ ಇವರ ಬದುಕು ಡೋಲಾಯಮಾನವಾಗಿದೆ.

ಪ್ರಸ್ತುತ ಸಂದರ್ಭದಲ್ಲಿ ಭಿಕ್ಷಾಟನೆ ಮಾಡುವ ಜನರಿಗಾಗಲಿ ತಮ್ಮ ಕಲೆಯನ್ನು ಪ್ರದರ್ಶಿಸುತ್ತಾ ಜನರಿಂದ ಭಿಕ್ಷೆಯನ್ನು ಬೇಡುವ ಜನರನ್ನು ಕುರಿತು ಇವತ್ತಿನ ಜನರು ಬಲಶಾಲಿಗಳಾಗಿ ಗಟ್ಟಿಮುಟ್ಟಾಗಿರುವ ಇವರು ದುಡಿದು ತಿನ್ನಲಿಕ್ಕೆ ಏನು ಧಾಡಿ ಎಂದು ಬೈಯುವರೆ ಹೊರತು, ಡೊಂಬರ ಕಲೆಗೂ, ದುರುಗು ಮುರುಗಿಯರ ದುಡಿಯ ನಾದಕ್ಕೆ, ಹಾವಾಡಿಗರ ಪುಂಗಿಯ ನಾದಕ್ಕೆ, ಎತ್ತನ್ನು ಕರೆದುಕೊಂಡು ಬಂದು ಅದರ ಮುಂದೆ ಊದುವ ಶಹನಾಯಿ ಕೇಳಿ ಆನಂದಿಸಲು ಜನರ ಹತ್ತಿರ ಸಮಯವೇ ಇಲ್ಲ. ಇಂಥ ಸಂದರ್ಭದಲ್ಲಿ ಮೊಂಡರ ಭಿಕ್ಷಾಟನೆಗೆ ಜನ ಹೇಗೆ ಸ್ಪಂದಿಸಬಹುದು ಎಂದು ಯೋಚಿಸಿದರೇನೆ ಅವರ ಸ್ಥಿತಿಯನ್ನು ಊಹಿಸಲು ಸಾಧ್ಯವಾಗದು. ಹೀಗೆ ನಮ್ಮ ದೇಶದ ಹಲವು ತಳಸಮುದಾಯಗಳು ಈ ಸ್ಥಿತಿಗಿಂತ ಬೇರೆಯಾಗಿಲ್ಲ ಎಂದರೆ ತಪ್ಪಾಗಲಾರದು. ಒಂದು ಕಡೆ ದೈಹಿಕ ಶ್ರಮವನ್ನು ಕಡೆಗಣಿಸುವ, ಬೌದ್ದಿಕ ಕಸರತ್ತೆ ಮುಖ್ಯವಾಗಿರುವ ಸಮಾಜದ ಕಾನೂನಿನ ರೀತಿ ನೋಡಿದರೆ, ಈ ಸಮಾಜದ ರಚನೆಯಲ್ಲೇ ಏನೋ ದೋಷವಿದೆ ಎಂದು ಹೇಳಬೇಕಾಗುತ್ತದೆ. ಹೀಗೆ ಮೇಲ್ವರ್ಗದವರ ಶೋಷಣೆಯನ್ನು ಅನುಭವಿಸುತ್ತಿರುವ ಈ ಸಮುದಾಯಗಳು ತಮ್ಮ ಸಮುದಾಯದ ಹೆಸರನ್ನು ಹೇಳಿಕೊಳ್ಳಲು ನಾಚುವಂತ ಪರಿಸ್ಥಿತಿಯಲ್ಲಿ ಇವೆ. ಮೊಂಡರ ಸ್ಥಿತಿಗಳು ತುಂಬಾ ಹೀನಾಯವಾಗಿವೆ. ಏಕೆಂದರೆ ಇವರು ಮೊಂಡಾಟ ಮಾಡಿ ಭಿಕ್ಷೆ ಬೇಡುವುದರಿಂದ ಮೊಂಡರು ಎಂಬ ಹೆಸರು ಬಂದಿದೆ. ಆದರೆ ಈ ಸಮುದಾಯ ತನ್ನ ಹೆಸರು ಹೇಳಿಕೊಳ್ಳಲು ಬಯಸದ ಪರಿಸ್ಥಿತಿ. ಹೀಗೆ ಒಂದು ಕಡೆ ನಮ್ಮ ಸಮಾಜ ವ್ಯವಸ್ಥೆ ಇನ್ನೊಂದೆಡೆ ಜಾಗತೀಕರಣದ ಮಾಯೆ, ಹೀಗೆ ದ್ವಂದ್ವಗಳ ನಡುವೆ ಈ ಸಮುದಾಯದ ಪರಿಸ್ಥಿತಿ ಡೋಲಾಯಮಾನವಾಗಿದೆ.

ಗ್ರಂಥಋಣ

೧. ಎನ್. ಚಂದ್ರಪ್ಪ, ಮೊಂಡರ ಸಂಸ್ಕೃತಿ (ಉಪಸಂಸ್ಕೃತಿ ಅಧ್ಯಯ ಮಾಡಿ), ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

೨. ಸಂ. ಮಂಜುನಾಥ ಬೇವಿನಕಟ್ಟಿ, ಜಾನಪದ ಕರ್ನಾಟಕ, ಸಂಪುಟ ೨, ಸಂಚಿಕೆ ೧, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ ೫೮೩ ೨೭೬.

* * *