ವಿಶ್ವದ ಯಾವುದೇ ದೇಶ ಭಾಷೆ, ಸಂಸ್ಕೃತಿ, ಸಾಹಿತ್ಯ, ಜನಾಂಗಗಳನ್ನು ತೆಗೆದುಕೊಂಡರೂ, ಕಾಲದಿಂದ ಕಾಲಕ್ಕೆ ತನ್ನದೇ ಆದಂತಹ ರೂಪರೇಷೆಗಳಿಂದ ಪರಂಪರಾಗತ ಸಂಸ್ಕೃತಿಗಳ ಇತಿಹಾಸವನ್ನು ಹೊಂದಿರುತ್ತವೆ, ಮತ್ತು ಆಯಾ ಸಮಾಜದ ಶಕ್ತಿ ಸಾಮರ್ಥ್ಯಗಳ ಒಟ್ಟು ಮೌಲ್ಯ ದೊರೆತು, ನಡೆದುಬಂದ ದಾರಿ – ತಲುಪಬೇಕಾದ ಗುರಿ ನಿಚ್ಚಳವಾಗಿ ಬಿಚ್ಚಿಕೊಂಡು ಬದುಕಿನೊಂದಿಗಿನ ಸಂಬಂಧಗಳನ್ನು ಅಭಿವ್ಯಕ್ತಿಗೊಳಿಸುತ್ತಾ ಹೋಗುತ್ತದೆ.

ಪ್ರಸ್ತುತ ಈ ಲೇಖನದಲ್ಲಿ ನಾಯಕ ಜನಾಂಗದ ಸಮಗ್ರ ಬೆಳವಣಿಗೆಯ ಬಗ್ಗೆ ಅಧ್ಯಯನಪೂರ್ಣವಾಗಿ ಕಣ್ಣಾಡಿಸಿದಾಗ – ಪುರಾಣಗಳ ಕಾಲದಿಂದ, ಯುಗದಿಂದ ಯುಗಕ್ಕೆ ಉಲ್ಲೇಖಗೊಂಡು ಈ ಆಧುನಿಕ ಕಾಲದವರೆಗೂ ಕುಲವೊಂದೇ ನಾಮ ಹಲವು, ವೃಕ್ಷವೊಂದೇ ಕೊಂಬೆಗಳು ನೂರಾರು ಎನ್ನುವಂತೆ ಈ ನಾಯಕ ಜನಾಂಗ ಭಾರತದ ಉದ್ದಗಲಕ್ಕೂ, ವಿಶೇಷವಾಗಿ, ಕರ್ನಾಟಕ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ, ಹರಿಯಾಣ ಮುಂತಾದ ಕಡೆ, ಅನೇಕ ಪರ್ಯಾಯ ನಾಮಗಳಿಂದ – ಪ್ರಾಚೀನ ಕಾಲದಿಂದಲೂ ತಮ್ಮದೇ ಆದಂತಹ ನ್ಯಾಯ, ನಿಷ್ಠೆ, ಧರ್ಮ, ಪ್ರೀತಿ, ತ್ಯಾಗ, ಬಲಿದಾನಗಳಿಗೆ ಹೆಸರಾಗಿ, ಶೌರ್ಯ ಪರಾಕ್ರಮಿಗಳೆನಿಸಿ, ವೀರ ಶೂರರಾಗಿ, ಸ್ವಾತಂತ್ರ್ಯ ಸ್ವಾಭಿಮಾನಗಳಿಗೆ ಹೆಸರಾಗಿ-ಪ್ರಜೆಗಳಾಗಿ, ಪ್ರಭುಗಳಾಗಿ ಹೆಮ್ಮೆಯ ಜನಾಂಗವೆನ್ನಿಸಿ ಇತಿಹಾಸ ಪ್ರಸಿದ್ಧರಾಗಿದ್ದಾರೆ.

ಮುಖ್ಯವಾಗಿ ಕರ್ನಾಟಕದಲ್ಲಿ – ಚಿತ್ರದುರ್ಗ, ತುಮಕೂರು, ಕೋಲಾರ, ರಾಯಚೂರು, ಧಾರವಾಡ, ಬೈಲಹೊಂಗಲ, ಗೋಕಾಕ, ಶಹಪೂರ, ಯಮುನಾಪುರ, ಬೆಳಗಾವಿ, ಕಲ್ಬುರ್ಗಿ ಮುಂತಾದ ಕಡೆಗಳಲ್ಲಿ ಸುಮಾರು ೪೦ ಲಕ್ಷದವರೆಗೂ ಹರಡಿಕೊಂಡಿದ್ದಾರೆ.

ಮೊದಲು ವಿಶೇಷವಾಗಿ ಗುಡ್ಡಗಾಡುಗಳಲ್ಲಿ ವಾಸ ಮಾಡುತ್ತಿದ್ದರು. ಬೇಟೆ ಮುಂತಾದ ವೃತ್ತಿಗಳನ್ನು ಅವಲಂಬಿಸಿದ್ದರು. ಆದರೆ ಈಗ ಕಾಲ ಬದಲಾಗಿದೆ. ಅವರ ಬದುಕು ಇತರೆ ಜನಾಂಗದ ಸ್ತರಗಳಂತೆಯೇ ರೂಪುಗೊಂಡಿದೆ.

ಮೂಲದಿಂದ ಈ ಜನಾಂಗ ಬೆಳೆದು ಬಂದ ಬಗೆಯನ್ನು ಕಾಣುವುದಾದರೆ ಪುರಾಣಗಳ ಕಾಲದಲ್ಲಿ – ಜಗದ್ವಿಖ್ಯಾತವಾದಂತಹ ರಾಮಾಯಣ ಮಹಾಕಾವ್ಯವನ್ನು ಬರೆದ ಕವಿ – ವಾಲ್ಮೀಕಿ ಮಹರ್ಷಿಗಳು ಈ ಕುಲದ ಮೂಲ ಪುರುಷರೆಂದು ಉಲ್ಲೇಖನೀಯರೆನಿಸಿದ್ದಾರೆ. ಈ ಜನಾಂಗದ ಉಪಭೇದಗಳೇನಿದ್ದರೂ ತಾವು ವಾಲ್ಮೀಕರೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಶ್ರೀರಾಮಚಂದ್ರನ ಸ್ನೇಹಿ ಗುಹ, ತ್ರೇತಾಯುಗದಲ್ಲಿ ರಾಮಾಯಣದಲ್ಲಿ ಮೂಢಭಕ್ತಿಗೆ ಪ್ರಖ್ಯಾತಳಾದ ಶಬರಿ, ಮಹಾಭಾರತದಲ್ಲಿ ಗುರು ದ್ರೋಣಾಚಾರ್ಯರಿಗೆ ಗುರುದಕ್ಷಣೆ ಯನ್ನಾಗಿ ತನ್ನ ಹೆಬ್ಬರಳನ್ನೇ ಅರ್ಪಿಸಿದ ಏಕಲವ್ಯ, ಶಿವನಿಗೆ ತನ್ನ ಕಣ್ಣುಗಳನ್ನೇ ಭಕ್ತಿಪೂರ್ವಕವಾಗಿ ಅರ್ಪಿಸಿದ ಮುಗ್ಧ ಭಕ್ತಿಯ ಬೇಡರಕಣ್ಣಪ್ಪ, (ಈತ ತನ್ನ ಭಕ್ತಿಗಷ್ಟೇ  ಅಲ್ಲ ಅರವತ್ಮೂರು ಪುರಾತನರಲ್ಲಿ ಒಬ್ಬನೆನಿಸಿದ್ದಾನೆ) ಇವರೆಲ್ಲ ಈ ಜನಾಂಗದವರೆ. ಮಹಾಭಾರತದಲ್ಲಿ ಸಾಕ್ಷಾತ್ ಶಿವನೇ ಬೇಡರ ವೇಷದಿಂದ ಬಂದು ಅರ್ಜುನನಿಗೆ ಪಾಶುಪತಾಸ್ತ್ರ ನೀಡಿದನೆಂದೂ, ಕಿರಾತಾರ್ಜುನವಿಜಯ ಅಥವಾ ಕಿರಾತರುದ್ರಲೀಲೆಯನ್ನು ನೋಡಬಹುದು. ಅಲ್ಲದೆ ಈ ಪ್ರಕರಣದಿಂದ ಬೇಡರ ವೇಷಭೂಷಣಗಳು ಹೀಗೆ ಇದ್ದವೆಂದು ಮತ್ತು ಈ ಕಾಲದಲ್ಲಿಯೇ ಈ ಜನಾಂಗವಿದ್ದಿತೆಂದು ತಿಳಿಯಲು ಸಾಧ್ಯವಾಗಿದೆ.

ವಡ್ಡಾರಾಧನೆಯಲ್ಲಿ ಸಹ ಈ ಜನಾಂಗದ ಉಲ್ಲೇಖವಿದೆ. ಈ ಜನಾಂಗದ ಪ್ರಾಚೀನತೆಯನ್ನು ತಿಳಿದ ನಂತರ ಇತಿಹಾಸದ ಪುಟಗಳನ್ನು ಗಮನಿಸುವುದಾದರೆ ಏಳನೇ ಶತಮಾನದ ‘ಗದ್ದೆ ಮನೆ ಶಾಸನ’ದಿಂದ ಬೇಡರು ರಾಜ್ಯವಾಳಿದ್ದರೆಂದೂ ಗೊತ್ತಾಗುತ್ತದೆ. ಭಾರತದ ಉದ್ದಗಲಕ್ಕೂ ಅಂದು ಆಳಿದ ಬಹಳಷ್ಟು ರಾಜಮನೆತನಗಳವರು ಈ ಜನಾಂಗಗಳವರೇ ಆಗಿದ್ದರು. ಹರ್ಷವರ್ಧನನ ಕಾಲದಲ್ಲಿಯೇ ಈ ಜನರು ಸಾಕಷ್ಟು ಪ್ರಚಲಿತದಲ್ಲಿದ್ದರೆಂದು ತಿಳಿದುಬರುತ್ತದೆ.

ಪಂಪ ಮತ್ತು ನಾಗವರ್ಮನ ಕಾವ್ಯಗಳಲ್ಲಿ ಈ ಜನಾಂಗದ ಉಲ್ಲೇಖವಿದೆ. ಹೊಯ್ಸಳರ ಸಳನು ಸಹ ಬೇಡ ಜನಾಂಗದವನೆಂದು ಅಭಿಪ್ರಾಯವಿದೆ. ದೆಹಲಿ ಸುಲ್ತಾನರನ್ನು ಸದೆ ಬಡಿದರ ಕಂಪಿಲರಾಯ ಹಾಗೂ ಇತಿಹಾಸ ಪ್ರಸಿದ್ಧನಾದ ಕಂಪಿಲನ ಮಗ ಗಂಡುಗಲಿ ಕುಮಾರರಾಮ ಇದೇ ಕುಲದವರಾಗಿದ್ದರು.

ಕಂಪಲಿ ರಾಜ್ಯದಲ್ಲಿ ಸಣ್ಣ ಅಧಿಕಾರಿಗಳಾಗಿದ್ದ ಹಕ್ಕಬುಕ್ಕರು ವಿಜಯನಗರ ಸಾಮ್ರಾಜ್ಯ ವನ್ನು ಸ್ಥಾಪಿಸಿದಾಗ, ಕರ್ನಾಟಕದಾದ್ಯಂತ ನಾಯಕ ಜನಾಂಗದವರು ವಿಜಯನಗರ ಸಾಮ್ರಾಜ್ಯಕ್ಕೆ ಸಾಮಂತರಾಗಿ ಅನೇಕ ಪಾಳೆಯ ಪಟ್ಟಗಳನ್ನು ಆಳುತ್ತಿದ್ದವರು, ವಿಜಯನಗರ ಸಾಮ್ರಾಜ್ಯಪತನಾನಂತರ ಸ್ವತಂತ್ರ ಪಾಳೆಯಗಾರರೆನಿಸಿ ಪ್ರಖ್ಯಾತರಾಗಿದ್ದರು. ಈ ಪ್ರಖ್ಯಾತ ಪಾಳೆಯಗಾರರೆಂದರೆ ಚಿತ್ರದುರ್ಗ, ರಾಯದುರ್ಗ, ಹರತಿ, ಸಿರಾ, ನಿಡುಗಲ್ಲು, ಬಸವಾಪಟ್ಟಣ ತರಿಕೆರೆ, ಚಿಕ್ಕನಾಯಕನಹಳ್ಳಿ, ಹಲಗಲಿ ಇನ್ನೂ ಮುಂತಾದ ಪಾಳೆಯಪಟ್ಟುಗಳೆಲ್ಲ ಈ ನಾಯಕರುಗಳಿಂದ ಕೂಡಿದ್ದು ಚಿತ್ರದುರ್ಗದ ವೀರ ಮದಕರಿನಾಯಕ, ಬಿಚ್ಚುಗತ್ತಿ ಭರಮಣ್ಣ, ಶಿಸ್ತುಗಾರ ಶಿವಪ್ಪ ನಾಯಕ, ರ ಎಚ್ಚೆಮ ನಾಯಕ, ಸುರಪುರದ ರಾಜಾ ವೆಂಕಟಪ್ಪ ನಾಯಕ, ಸಿಂಧೂರ ಲಕ್ಷ್ಮಣ ಮುಂತಾದವರು ತಮ್ಮ ಶೌರ‍್ಯ ಸಾಹಸಗಳಿಂದ ದೇಶಾಭಿಮಾನದಿಂದ ಇತಿಹಾಸ ಪ್ರಸಿದ್ಧರಾಗಿದ್ದಾರೆ.

ಮೊದಲಿನಿಂದಲೂ ಈ ಜನಾಂಗ ಅಲ್ಲಲ್ಲಿ ಗುಡ್ಡಗಾಡುಗಳಲ್ಲಿ ವಾಸಿಸುತ್ತಾ ಬೇಟೆಯಾಡು ವುದನ್ನೆ ತಮ್ಮ ಮೂಲ ವೃತ್ತಿಯನ್ನಾಗಿಸಿಕೊಂಡು ಬೇಡಜನಾಂಗವೆನಿಸಿದರು. ಯುದ್ಧ ಮಾಡುವುದು ಮೆಚ್ಚಿಕೆಯ ವಿಚಾರವಾಗಿತ್ತು. ಅನೇಕ ರಾಜ್ಯಗಳಲ್ಲಿ ಸೈನಿಕರಾಗಿ ಬದುಕಿದ್ದರು. ನಮ್ಮ ದಕ್ಷಿಣ ಭಾರತದ ಮೇಲೆ ಮಹಮದೀಯರು ದಾಳಿ ಇಟ್ಟಾಗ ದಾಳಿಯನ್ನು ಕೆಚ್ಚೆದೆಯಿಂದ ತಡೆಗಟ್ಟಿ, ಹಿಂದೂ ರಾಜ್ಯ ಹಾಗೂ ಹಿಂದೂಧರ್ಮವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ವಿಜಯನಗರ ಸಾಮ್ರಾಜ್ಯದಲ್ಲಿ, ಮೈಸೂರಿನ ಹೈದರ ಹಾಗೂ ಟಿಪ್ಪುವಿನ ಹಾಗೂ ಇನ್ನೂ ಮುಂತಾದವರಲ್ಲಿ ವಿಶೇಷ ಪಡೆಗಳಾಗಿ, ಕಾಲಾಳುಪಡೆಗಳಾಗಿ ದಂಡಿನ ದಳವಾಯಿಗಳಾಗಿ ಸೇವೆಸಲ್ಲಿಸಿ ಅನೇಕರ ವಿಜಯಕ್ಕೆ ಕಾರಣೀಭೂತರಾಗಿದ್ದಾರೆ.

ಕಾಲ ಬದಲಾದ ಹಾಗೆ ಬೇಟೆಯಾಡುವುದು ನಿಂತಿತು. ರಾಜ್ಯಗಳು ಪತನವಾಗಿ ಪಡೆಗಳು ಇಲ್ಲವಾದವು. ಈಗ ಹದಿನೆಂಟು ಇಪ್ಪತ್ತು ಜಾತಿಯ ಹೆಸರಿನಲ್ಲಿ ಗೊತ್ತು ಗುರಿಯಿಲ್ಲದೆ, ಬದುಕಿಕೊಂಡು ನೆಲೆಯಿಲ್ಲದಂತೆ ಹರಿದು ಹಂಚಿ ಹೋಗಿದ್ದಾರೆ.

ಈ ಜನಾಂಗ ವಿವಿಧ ನಾಮಗಳಲ್ಲಿ ಬೆಳೆದುಬಂದ ಬಗೆಯನ್ನು ವಿದ್ವಾಂಸರು ಹೀಗೆ ಅರ್ಥೈಸಿದ್ದಾರೆ –

ಬೇಡರು (ನಾಯಕರು) ಕರ್ನಾಟಕದ ಮೂಲವಾಸಿಗಳೆನ್ನಿಸಿದ್ದಾರೆ. ಬೇಡ, ಬೇಡನ್, ಬೇಡರ್, ಬೇರಡ್ ಎಂದರೆ ಬೇಟೆಯಾಡುವವರೆಂದು (ಕನ್ನಡದಲ್ಲಿ ಬೇಟೆ, ತಮಿಳಿನಲ್ಲಿ ವೇಟೈ) ಬೇ=ಇಲ್ಲ, ಡರ್=ಅಂಜಿಕೆ=ಅಂಜಿಕೆಯಿಲ್ಲದವರೆಂದೂ, ಶಿವಾಜಿಯ ಕಾಲದಲ್ಲಿ ಬೆ=ಇಲ್ಲ, ರಡ=ಅಳುವುದು=ಯಾವುದಕ್ಕೂ ಅಳದವರೆಂದೂ ಧೈರ್ಯವಂತರೆಂದೂ, ಬೇಡರು=ಯಾರಮುಂದೆಯೂ ಯಾವುದಕ್ಕೂ ಕೈಒಡ್ಡಿ ಬೇಡದವರೆಂದೂ (ಈ ಜನಾಂಗದಲ್ಲಿ ಭಿಕ್ಷುಕ ವೃತ್ತಿಯವರು ಕಂಡು ಬರುವುದಿಲ್ಲ) ಹೇಳುತ್ತಾರೆ. ಈ ಬೇಡರಲ್ಲಿ ಮ್ಯಾಸಬ್ಯಾಡರು ಊರುಬೇಡರು ಎಂದು ಒಳಪಂಗಡಗಳಿವೆ. ಅಲ್ಲದೆ ಈ ಬೇಡರು ಕರ್ನಾಟಕದ ರಜಪೂತ ರೆನಿಸಿದ್ದಾರೆ.

ಸ್ವಾತಂತ್ರ್ಯ ಬರುವ ಮೊದಲು ಮತ್ತು ದೇಶಕ್ಕಾಗಿಯೂ ತಮ್ಮ ಪ್ರಾಣವನ್ನೆ ಲೆಕ್ಕಿಸದೆ, ಅತ್ಯಂತ ಜವಾಬ್ದಾರಿಯನ್ನು ವಹಿಸಿ, ಜನರ ಪ್ರಾಣಗಳನ್ನೂ ರಕ್ಷಿಸುತ್ತಾ ಪ್ರಜೆಗಳ ಹಿತಕ್ಕಾಗಿ ನಾಯಕತ್ವವಹಿಸುತ್ತಿದ್ದುದರಿಂದ, ನಾಯಕರೆನಿಸಿಯೂ, ಪಾಳೆಯಪಟ್ಟುಗಳನ್ನು ಆಳಿದ್ದರಿಂದ ಪಾಳೆಯಗಾರರಾಗಿಯೂ, ನಾಯಕ, ನಾಯಕವಾಡಿಗಳೆನಿಸಿಯೂ ಜನಜನಿತರಾಗಿದ್ದರು. ಅಲ್ಲದೆ ಈ ಜನಾಂಗ ತಮ್ಮ ಹೆಸರಿನ ಮುಂದೆ “ನಾಯಕ” ಎನ್ನುವ ಪದವನ್ನು ಬಳಸುತ್ತಾರೆ (ಲಂಬಾಣಿಗಳಲ್ಲಿಯ “ನಾಯಕ” ಪದವನ್ನು ಹೆಸರಿನ ಕೊನೆಯಲ್ಲಿ ಹಚ್ಚಿಕೊಳ್ಳುತ್ತಾರೆ ಇವರು ಇದನ್ನು ಕೇವಲ ಗೌರವ ಸೂಚಕವಾಗಿ ಬಳಸುತ್ತಾರೆ., ಆದರೆ ನಾಯಕ ಜಾತಿಯವರು ಈ ಪದವನ್ನು ಜಾತಿ ಸೂಚಕವಾಗಿಯೂ ತಮ್ಮ ಹೆಸರಿನೊಂದಿಗೆ ಬಳಸುತ್ತಾರೆ).

ದೊರೆ ಮಕ್ಕಳೆಂದರೆ ದೇಶವನ್ನು ಆಳುತ್ತಿದ್ದವರ ಮಕ್ಕಳೆಂದೂ, “ಪರಿವಾರ”ದವರೆಂದರೆ ರಾಜಪರಿವಾರದವರೆಂದೂ ಹಿಂದೆ ರಾಜರು ಯುದ್ಧಕ್ಕೆ ಹೊರಟಾಗ ರಾಜನ ಮುಂದೆ ಕತ್ತಿಹಿಡಿದು ಇವರೂ ಯುದ್ಧಕ್ಕೆ ಹೊರಡುತ್ತಿದ್ದರು. ರಾಜ ಪರಿವಾರದವರಲ್ಲಿ ಖಾಯಂ ಆಗಿ ಇರುತ್ತಿದ್ದರು. (ಈಗಲೂ ಹಳೇ ಮೈಸೂರು, ಕೊಡಗು ಮುಂತಾದ ಕಡೆ ಈ ಜನಾಂಗ ದವರಿದ್ದು, ತಮ್ಮ ಏಳ್ಗೆಗಾಗಿ ಸಂಘಸಂಸ್ಥೆಗಳನ್ನು ರಚಿಸಿಕೊಂಡಿದ್ದಾರೆ).

ಕನ್ನಯ್ಯಗಳೆಂದರೆ ಕೃಷ್ಣನ ಪರಿವಾರದವರೆಂದೂ, ಗುರಿಕಾರರೆಂದೂ, ಕ್ಷತ್ರಿಯರೆಂದೂ, ಮಹಾರಾಷ್ಟ್ರ ಮತ್ತು ಉತ್ತರ ಭಾರತದಲ್ಲಿ “ರಾಮೋಶಿ”ಯರೆಂದು (ರಾಮನ ಕುಲದವರು, ರಾಮನ ವಂಶದವರೆಂದೂ) ಶಿಂಗರೆಂದೂ (ಶಿಂಗರೆಂದರೆ ದಿಟ್ಟತನದಲ್ಲಿ ಮೆರೆದಾಡುವವರೆಂದೂ), ವಾಲ್ಮೀಕಿ ಜನಾಂಗವೆಂದರೆ ವಾಲ್ಮೀಕಿ ಮಹರ್ಷಿಯ ಕುಲದವರೆಂದೂ, ಬೋವಿ-ಬೋವ (ಬೋವಿಗಳೆಂದರೆ ಒಡ್ಡರು ಎಂದೂ ಸಹ ಹೇಳುತ್ತಾರೆ) ಮಿಣಿಯನ್ನು, ಭಾರವನ್ನು ಹೊರುವವರು, ಹೊತ್ತು ಸಹಾಯಕ ಮಾಡತಕ್ಕವರೆಂದೂ, ತಳವಾರರೆಂದರೆ – ತಳವಾರ, ತಲಕಾರ, ಕತ್ತಿಹಿಡಿದು ಊರಿನ ಜನರ ಹಿತವನ್ನು ಕಾಪಾಡತಕ್ಕವನೆಂದೂ, ಪಂಚಾಯತಿ ಕಟ್ಟೆಗಳಲ್ಲಿ (ಪ್ರತಿ ಗ್ರಾಮದಲ್ಲಿ ಊರಿನ ತಳವಾರ, ಕೋಲುಕಾರ, ಓಲೇಕಾರರಿರುತ್ತಿದ್ದರು. ಕತ್ತಿಕೋಲು ಹಿಡಿದು ಸುದ್ದಿ ಸಾರುವವನು, ಆರಕ್ಷಕನ ಹೆಗ್ಗುರುತಾಗಿಯು, ಊರನ್ನು ಕಾಯುವ ರಕ್ಷಿಸುವ ಅಧಿಕಾರಿಗಳಂತೆಯ) ಹೊಣೆಯನ್ನು ನಿರ್ವಹಿಸುತ್ತಿದ್ದವರಿಗೆ ತಳವಾರರೆಂದು ಕರೆಯುತ್ತಿದ್ದರು. ಪೂಜಾರಿಕೆಯನ್ನೂ ನಿರ್ವಹಿಸುತ್ತಿದ್ದರು.

ಹೀಗೆ ಈ ಜನಾಂಗ ತಮ್ಮ ವೃತ್ತಿಗಳ ಮೂಲಕವೂ ಜಾತಿ ಪದವನ್ನು ಸೃಷ್ಟಿಸಿಕೊಂಡಿವೆ. ಈ ಜಾತಿಗಳಲ್ಲಿ ಅನೇಕ ಗೋತ್ರ, ಬೆಡಗು ಮುಂತಾದವುಗಳಿವೆ.

ಹಿಂದೆ ನಾಯಕರು, ಪಾಳೆಯಗಾರರು ಕೊಡುಗೈ ದಾನಿಗಳಾಗಿ ಅನೇಕ ದಾನದತ್ತಿಗಳನ್ನು ನೀಡಿ, ಕೆರೆಕಟ್ಟೆ ಬಾವಿಗಳನ್ನು, ಗುಡಿ-ಗುಂಡಾರಗಳನ್ನು ಕೋಟೆಕೊತ್ತಳಗಳನ್ನು ಬುರುಜು ಬತೇರಿಗಳನ್ನು ನಿರ್ಮಿಸಿ ಅನೇಕ ಪ್ರಜಾಹಿತ ಕಾರ್ಯಗಳನ್ನು ಮಾಡಿದ್ದು ಅವು ಇಂದಿಗೂ ಸ್ಮರಣೆಗೆ ಪಾತ್ರವಾಗಿವೆ.

ಕೃಪೆ : ವಾಲ್ಮೀಕಿ ಜ್ಯೋತಿ

* * *