ಪೃಥ್ವಿ ೧೨ ಸಾವಿರ ವರುಷ ಅಗ್ನಿಯಾಗಿ ಉರಿದು ೬ ಸಾವಿರ ವರುಷ ಇದಕ್ಕೆ ಮಳೆ ಸುರಿದು ಮೇಲ್ಭಾಗ ಮಾತ್ರ ತಂಪಾಗಿ, ಭೂಮಿಯ ಮುಕ್ಕಾಲು ಭಾಗ ನೀರು ಆವರಿಸಿತು. ವಾತಾವರಣದಲ್ಲಿ ಜೀವಿ ಸಂಕುಲ ಸೃಷ್ಟಿಯಾಯಿತು. ಕ್ರಮೇಣದಲ್ಲಿ ಈ ಭೂಮಿಯ ಮೇಲೆ ಮನುಸಂಕುಲ ಹುಟ್ಟಿತು. ಮಾನವನು ಭೂಮಿ ಮೇಲೆ ಕಂಡು ಬಂದ ನಂತರ ಅವನು ತನ್ನ ಆಹಾರವನ್ನು ಗುಂಪು ಗುಂಪಾಗಿ ಪಡೆಯಲು  ಹೊರಟರು. ಅಡವಿಯಲ್ಲಿ ಬೆಳೆದ ಗೆಡ್ಡೆ ಗೆಣಸು ಹಾಗೂ ಪ್ರಾಣಿಗಳ ಹಸಿ ಮಾಂಸವನ್ನು ತಿನ್ನುತ್ತಿದ್ದ. ಪ್ರಾಣಿಗಳ ಬೇಟೆಯಾಡಲು ಚೂಪಾದ ಕಲ್ಲುಗಳನ್ನು ತನ್ನ ಆಯುಧವನ್ನಾಗಿ ಬಳಸತೊಡಗಿದ. ಕ್ರಮೇಣ ತೊಪ್ಪಲು ಮತ್ತು ಪ್ರಾಣಿಗಳ ಚರ್ಮವನ್ನು ಸುತ್ತಿಕೊಂಡು ತಿರುಗಾಡುತ್ತಿದ್ದನು.

ಗುಡುಗು, ಮಿಂಚು, ಮಳೆಗೆ ಭಯಪಟ್ಟು ದಿಕ್ಕೆಟ್ಟು ಓಡುತಿದ್ದರು. ಭಯದಿಂದ ಗಿಡಗಳ ಪಟಕಿ, ಗುಹೆಗಳಲ್ಲಿ ಅವಿತುಕೊಳ್ಳುತ್ತಿದ್ದರು. ಸ್ವಲ್ಪ ವಿಚಾರವಂತರಾದ ನಂತರ ಭಯವಿಲ್ಲದೆ, ಸಸ್ಯರಾಶಿಗಳ ಸಹವಾಸದಿಂದ ಬೆಳೆದ ಹೂ ಹಣ್ಣು, ಕಾಯಿಗಳನ್ನು ಕೂಡಾ ತಿಂದರು ಮತ್ತು  ವ್ಯವಸಾಯ ಪದ್ಧತಿಯನ್ನು ರೂಢಿಸಿಕೊಂಡರು. ನೀರು ಇರುವ ಕಡೆ ವಾಸ ಮಾಡಲು ಕಲಿತರು. ಅಲ್ಲಲ್ಲಿ ಪಂಗಡ ಪಂಗಡವಾಗಿ ಬಾಳಲು ಕಲಿತು ವಾಸಿಸುತ್ತಿದ್ದರು.

ಆರ್ಯರು ಸಿಂಧೂ ನದಿಯ ಕಣಿವೆಯ ಮುಖಾಂತರ ಭಾರತಕ್ಕೆ ಬಂದ ನಂತರ, ಆರ್ಯರಿಗೂ ಮತ್ತು ದ್ರಾವಿಡರಿಗೂ ಬಹುಕಾಲದವರೆಗೆ ಜಗಳ ಯುದ್ಧ ನಡೆಯಿತು. ನಂತರ ಒಬ್ಬರನ್ನು ಒಬ್ಬರು ಅರಿತುಕೊಂಡು ಸಹ ಜೀವನವನ್ನು ನಡೆಸಿದರು.

ಸಹಮತದಿಂದ ಬಾಳಲು ಕಲಿತ ಕಾಲದಿಂದ ವರ್ಣಗಳು ಹುಟ್ಟಿದವು. ವರ್ಣಗಳಿಂದ ವೃತ್ತಿಯ ಮೇಲೆ ಹಲವಾರು ಜಾತಿಗಳು ಬೆಳೆದವು. ಅಡವಿಯಲ್ಲಿಯೇ ಹುಟ್ಟಿ ಅಡವಿ ಯಲ್ಲಿಯೇ ಬೆಳೆದ ಜನಾಂಗವೇ? ಬೇಡ ಜನಾಂಗ, ಕಾಡುಮೃಗಗಳು ಬೇಟೆಯಾಡಿ ಕಾಡು ಪ್ರಾಣಿಗಳ ಮಾಂಸವನ್ನು ತಿಂದ ಸೂರರಿವರು.

ಹೀಗಿರುವ ಸಮುದಾಯದ ಕುಲಮೂಲ, ಜಲಮೂಲ, ಋಷಿಮೂಲವನ್ನು ತಿಳಿದವರಿಲ್ಲ. ದೇವನೊಬ್ಬ ನಾಮ ಹಲವು, ಮರವೊಂದೇ ಟೊಂಗೆಗಳು ಹಲವು ಎಂಬಂತೆ ಜಾತಿ. ಇಲ್ಲಿ ಬೇಡ ಜನಾಂಗದಲ್ಲಿ ಊರು ಬೇಡರು ಮತ್ತು ಮ್ಯಾಸಬೇಡರು ಎಂಬ ಎರಡು ಉಪಜಾತಿಗಳು ಗಿಡವೊಂದೇ ಕವಲೆರಡು. ಮೂಲದಲ್ಲಿ ಬೇಡರು ದ್ರಾವಿಡರು, ದ್ರಾವಿಡ ಸಂಪ್ರದಾಯ ಆಚರಣೆಯಿಂದ ಶ್ರೀಶೈಲ ಇವರ ಮೂಲ ಸ್ಥಳವಿರಬೇಕು. ದನ, ಕುರಿ, ಮೇಕೆ ಹೀಗೆ ಸಾಕು ಪ್ರಾಣಿಗಳನ್ನು ಕಾಡಿನಲ್ಲಿ ಮೇಯಿಸಿಕೊಂಡು ಅಲೆಮಾರಿಗಳಂತೆ ನಿರ್ದಿಷ್ಟ ನೆಲೆಯಿಲ್ಲದ, ಹಾಸುಹೊಕ್ಕಾದ ಹುಲ್ಲುಗಾವಲು ಪ್ರದೇಶಗಳಲ್ಲಿ ಬೀಡು ಬಿಡುತ್ತಿದ್ದರು. ಬೇಟೆಯಾಡುವುದು ಇವರ ಮೂಲ ಪ್ರವೃತ್ತಿ. ಬಿಲ್ಲು, ಕವಣಿ, ಬಲೆಯಿಂದ ಮೀನು ಹಿಡಿಯುವುದು ಇವರಿಗೆ ಕರಗತ. ಕಾಲಕ್ರಮೇಣ ಇಲ್ಲಿ ಅಲೆಮಾರಿಯಾಗಿ ತಿರುಗುತ್ತಿದ್ದ ಈ ಜನಾಂಗದ ಹಲವು ಗುಂಪುಗಳು ಸ್ವಂತ ಸ್ಥಳದಲ್ಲಿ ನೆಲೆಯೂರಿ ಬೇಸಾಯ ವೃತ್ತಿಯನ್ನು ಮೈಗೂಡಿಸಿಕೊಂಡರು. ಕ್ರಮೇಣದಲ್ಲಿ ಬೇರೆ ಸಮುದಾಯದ ಸಂಪರ್ಕದಿಂದ ತಮ್ಮ ಮೂಲ ಸಂಪ್ರದಾಯಗಳನ್ನು ಸುಧಾರಣೆ ಮಾಡಿಕೊಂಡರು. ಹಳೆಯ ಆಚಾರ ವಿಚಾರ, ಸಂಪ್ರದಾಯ ಕಟ್ಟುಪಾಡುಗಳನ್ನು ಕ್ರಮೇಣ ಮಾರ್ಪಡಿಸಿಕೊಂಡರು. ಇದಕ್ಕೆ ಕಾರಣ ಬೇಡ ಸಮುದಾಯ ಬೇರೆ ಮುಂದುವರೆದ ಸಮುದಾಯದ ಜನರೊಡನೆ ಬೆರೆತು ತಮ್ಮ ಕಟ್ಟುಪಾಡುಗಳನ್ನು ಬದಲಾಯಿಸಿಕೊಂಡರು. ಮದುವೆ ಪದ್ಧತಿ, ಮೈನೆರೆದ ಆಚರಣೆಯ ಪದ್ಧತಿ ಹಾಗೂ ಕೆಲವು ಆಚಾರಗಳನ್ನು ಸ್ವಲ್ಪಮಟ್ಟಿಗೆ ಬದಲಾಯಿಸಿಕೊಂಡರು. ಇವರು ಬಲಿಷ್ಠರು ಕೂಡ.

ಪೂರ್ವಕಾಲದಲ್ಲಿ ಚಂದ್ರವಂಶದಲ್ಲಿ ಅಂಗ ಎಂಬ ಹೆಸರಿನ ಓರ್ವ ರಾಜ. ಧರ್ಮಿಷ್ಠ, ಪ್ರಜಾಹಿತದಲ್ಲಿ ಸದಾಸಕ್ತ. ಮಹಾತ್ಮನಿಂದ ವೇನ ಜನಿಸಿದ. ವೇನನು ತಂದೆಗೆ ವಿರುದ್ಧವಾದ ಗುಣಗಳನ್ನು ಹೊಂದಿದ್ದ. ಅಧರ್ಮಿಯಾದ, ಪ್ರಜಾಪೀಡಕನಾದ. ಇದಕ್ಕೆ ಕಾರಣವೂ ಇದೆ. ಈ ವೇನನ ತಾಯಿ ಮೃತ್ಯುದೇವನ ಮನೆಯಲ್ಲಿಯೇ ಬೆಳೆದ. ಹೀಗಾಗಿ ಮೃತ್ಯುದೇವನ ದೋಷಗಳೆಲ್ಲ ಪರಿಸರ ಪ್ರಭಾವದಿಂದ ಈ ವೇನನಲ್ಲೂ ಬಂದವು. ವೇನನು ಸ್ವಧರ್ಮವನ್ನು ತ್ಯಜಿಸಿ ಸ್ತ್ರೀಲೋಲುಪನಾದ. ಅತಿಲೋಭಿಯಾದ, ವೇದ ಬ್ರಾಹ್ಮಣ ದ್ವೇಷಿಯಾದ. ತನ್ನ ರಾಜ್ಯದಲ್ಲಿ ಯಜ್ಞಯಾಗಗಳನ್ನು ಆಚರಿಸುವುದು, ಪ್ರಾರ್ಥನೆ ದೇವ ಪೂಜೆಗಳನ್ನು ಮಾಡು ವುದೂ ನಿಷಿದ್ಧವೆಂದು ಸಾರಿದ. ಹಾಗೆ ಯಾಗಗಳನ್ನು ನೆರವೇರಿಸಿದರೂ ನನ್ನನ್ನು ಕುರಿತು ಆ ಯಾಗಗಳಲ್ಲಿ ಹವಿಸ್ಸನ್ನು ಹಾಕಬೇಕು. ಆ ಯಾಗ ನನಗೆ ಅರ್ಪಿತವಾಗಬೇಕು. ಯಾಗಕ್ಕೆ ಯಜಮಾನ ನಾನೇ, ಈ ನಿಲುವಿಗೆ ವಿರುದ್ಧವಾಗಿ ನಡೆದುಕೊಳ್ಳುವವರ ತಲೆ ಕಡಿಸುವೆ ಎಂದು ಡಂಗುರ ಸಾರಿಸಿದ.

ಇದರಿಂದ ಋಷಿಮುನಿಗಳಿಗೆ ಬಹಳ ತೊಂದರೆಯಾಯಿತು. ಸಂತ್ರಸ್ತರಾದ ಅವರು ಎಲ್ಲರೂ ಒಂದೆಡೆ ಸೇರಿದರು. ಸಮಾಲೋಚನೆ ಗೈದು ರಾಜನಿಗೆ ಬುದ್ದಿವಾದವನ್ನು ಹೇಳುವುದೆಂದು ತೀರ್ಮಾನಿಸಿದರು. ಎಲ್ಲರೂ ಸೇರಿ ರಾಜನ ಬಳಿಗೆ ಬಂದರು. ಅವನನ್ನು ಉದ್ದೇಶಿಸಿ ಇಂತು ನುಡಿದರು.

ಮುನಿಗಳು – “ರಾಜನ್, ನೀನು ಪವಿತ್ರವಾದ ಅತಿವಂಶದಲ್ಲಿ ಜನಿಸಿರುವಿ. ಸಿಂಹಾಸನ ವನ್ನು ಆರೋಹಣ ಮಾಡುವಾಗ ಧರ್ಮದಿಂದ ಪಾಲನೆ ಮಾಡುವೆ ಎಂಬುದಾಗಿ ವಚನ ನೀಡಿರುವೆ. ನೀನೇ ಪವಿತ್ರ ಸ್ಥಳದಲ್ಲಿ ನಿಂತು ಘೋಷಿಸಿಕೊಂಡಿರುವ ವಚನವನ್ನು ಉಲ್ಲಂಘಿಸಿ ವಿಶೃಂಖಲನಾಗಿ ವರ್ತಿಸಬೇಡ. ಆದುದು ಆಗಿ ಹೋಯಿತು. ಇನ್ನಾದರೂ ಸ್ವೇಚ್ಛಾಚಾರ ಗಳನ್ನು ಬಿಡು. ಲೋಭವನ್ನು ತ್ಯಜಿಸು. ಪ್ರಜೆಗಳ ತೊಂದರೆಗಳತ್ತ ಗಮನಹರಿಸು. ಧರ್ಮಮಾರ್ಗವನ್ನು ಮೀರಬೇಡ. ಮುನಿಗಳಿಗೆ ಸಾತ್ವಿಕರಿಗೆ ಹಿಂಸೆ ನೀಡಬೇಡ” ಎಂದು ಉಪದೇಶಿಸಿದರು.

ಮುನಿಮನೀಷಿಗಳ ಈ ಮಾತುಗಳನ್ನು ಕೇಳಿ ಆ ದುಷ್ಟ ವೇನನು ಅಟ್ಟಹಾಸಗೈದ. ಅಪಹಾಸ್ಯ ಮಾಡಿ, ಅಹಂಕಾರದಿಂದ ಈ ರೀತಿ ಉದ್ಗಾರಗಳನ್ನೆತ್ತಿದ.

ವೇನ – “ಧರ್ಮಕ್ಕೆ ಅಧಿಪತಿ ನನ್ನ ಹೊರತು ಬೇರೆ ಯಾರಿದ್ದಾರೆ? ನನಗಿಂತ ಶ್ರೇಷ್ಠರು ಯಾರೂ ಇಲ್ಲ. ನಾನು ಯಾರ ಮಾತನ್ನೂ ಕೇಳುವುದಿಲ್ಲ. ಶಸ್ತ್ರ, ಶಾಸ್ತ್ರಗಳಲ್ಲಿ ನಾನು ಅಸಾಧಾರಣ ಪ್ರತಿಭಾಶಾಲಿಯಾಗಿರುವೆ. ಈ ಲೋಕದಲ್ಲಿ ಮೂಢರಾದ ನೀವು ಮಾತ್ರ ನನ್ನನ್ನು ಸರಿಯಾಗಿ ತಿಳಿಯದೇ ನನಗೆ ಉಪದೇಶಿಸಲು ಬಂದಿರುವಿರಿ. ನಾನು ಇಚ್ಛಿಸಿದರೆ ಭೂಮ್ಯಾಕಾಶಗಳನ್ನು ಒಂದುಗೂಡಿಸಿಯೇನು. ಜಲಪ್ರಳಯವನ್ನೇ ಸೃಷ್ಟಿಸಿ, ಸಕಲಲೋಕ ಗಳನ್ನು ಧ್ವಂಸಗೊಳಿಸಬಲ್ಲೆ. ನನಗೆ ನೀವು ಉಪದೇಶ ನೀಡುವ ಬದಲು ನಿಮ್ಮನ್ನು ನೀವು ತಿದ್ದಿಕೊಳ್ಳಿ. ಇನ್ನು ಮೇಲಾದರೂ ನನ್ನನ್ನು ಸರಿಯಾಗಿ ಅನುಸರಿಸಿರಿ. ಇಲ್ಲಿಂದ ಹೊರಡಿ” ಎಂದು ಅಬ್ಬರಿಸಿದ.

ವೇನನ ಈ ಹೂಂಕೃತಿಗಳನ್ನು ಮೌನವಾಗಿಯೇ ಅನುಭವಿಸಿದರು. ಓಂಕಾರ ನುಡಿದು ಸತ್ವಸಂಪನ್ನವಾದ ಆ ಮುನಿಗಳ ಬಾಯಿಯಿಂದ ಓಂಕಾರ ಶಬ್ದ ಹೊರಬಿದ್ದಿತು. ಕ್ಷಣಾರ್ಧ ದಲ್ಲಿ ವೇನ ಗತಪ್ರಾಣನಾಗಿ ನೆಲಕ್ಕೆ ಉರುಳಿದ. ಮುನಿ ಶಾಪದಿಂದ ವೇನ ರಾಜ ಹತನಾದಾಗ ಎಲ್ಲೆಡೆ ಹಾಹಾಕಾರ ಎದ್ದಿತು. ವಿಷಮ ಪರಿಸ್ಥಿತಿ ಉಂಟಾದರೆ ಏನು ಗತಿ ಎಂದು ಋಷಿ ಗಳಿಗೂ, ಋಜುಗಳಿಗೂ ಕೂಡಿಯೇ ಚಿಂತೆ. ಇದನ್ನೆಲ್ಲ ಆಲೋಚಿಸಿ ಆ ಮುನಿ ಮಹರ್ಷಿಗಳು ವೇನ ರಾಜನ ತೊಡೆಯನ್ನು ಮತ್ತೆ ಮಥನ ಮಾಡಿದರು. ಅದರಿಂದ ಓರ್ವ ಕಪ್ಪು ಬಣ್ಣದ ಕುಳ್ಳಪುರುಷ ಹುಟ್ಟಿಬಂದ. ಕೈಮುಗಿದು ಭಯಭ್ರಾಂತನಾಗಿ ನಿಂತ. ಅವನನ್ನು ಕಂಡು ಮುನಿಪುಂಗವರಾದ ಅತ್ರಿಗಳು ನುಡಿದರು. ‘ನಿಷಿದ’ ಕುಳಿತುಕೋ ಎಂದರು. ಆದುದರಿಂದ ಅವನು ನಿಷಿಧ ಎಂದೆ ಹೆಸರಾದ. ಅವನ ವಂಶದವರಿಗೆಲ್ಲ ನಿಷಿಧ ಎಂದು ಹೆಸರು ಬಂದಿತು. ವಿಂಧ್ಯಾ ಮೊದಲಾದ ಬೆಟ್ಟಗಳ ತಪ್ಪಲು ಪ್ರದೇಶದಲ್ಲಿ ಇರುವ ಬೇಡರ ಜಾತಿಗೆಲ್ಲ ವೇನರಾಜನ ಪಾಪದಿಂದ ಹುಟ್ಟಿದ ಈ ನಿಷಾಧನೇ ಮೂಲ ಪುರುಷ.

ಆರ‍್ಯರು ದ್ರಾವಿಡ ಸಮುದಾಯಗಳನ್ನು ಕೀಳಾಗಿ ಕಾಣುವ ದೃಷ್ಟಿಕೋನವೊಂದು ಈ ಕಥೆಯ ಮೂಲಕ ವ್ಯಕ್ತವಾಗಿದೆ. ಆರ‍್ಯರು ಆರಂಭದಿಂದಲೂ ದ್ರಾವಿಡ ಸಮುದಾಯಗಳನ್ನು ಈ ಬಗೆಯಲ್ಲಿ ತುಚ್ಛೀಕರಿಸುವ ಪ್ರಕ್ರಿಯೆಯು ಅವರ ಶೋಷಣೆಯ ಒಂದು ಭಾಗವಾಗಿದೆ. ಇದು ಕೂಡ ಆ ಸಾಲಿಗೆ ಸೇರುವಂತಹ ಕಥೆಯೇ. ಇನ್ನು ರಾಮಾಯಣದಲ್ಲಿ ನಿಷಾಧ ಬರುತ್ತಾನೆ. ರಾಮ ವನವಾಸಕ್ಕೆಂದು ಕಾಡಿಗೆ ಹೋಗುವಾಗ ದೋಣಿಯಲ್ಲಿ ದಡ ಸೇರಿಸಿದವನು ನಿಷಾಧ ಮತ್ತು ಅವನ ಪಡೆ. ಅಲ್ಲಿಯೂ ಕೂಡ ನಿಷಾಧ ಬೇಡ ಎಂದೇ ನಿರ್ಧಾರಿತವಾಗುತ್ತದೆ. ಇನ್ನು ಬೇಡರ ಕಣ್ಣಪ್ಪನನ್ನು ಕುರಿತಂತೆ ಈತ ಊರು ನಾಯಕ ಅಥವಾ ಮ್ಯಾಸನಾಯಕ ನೆಂದು ವರ್ಗೀಕರಿಸಲಾಗಿಲ್ಲ. ಆದಿಯಿಂದ ಇಂದಿನವರೆಗೂ ಆತನನ್ನು ಬೇಡರ ಕಣ್ಣಪ್ಪನೆಂದೇ ನಿರ್ಧರಿಸಲಾಗುತ್ತದೆ. ಹಾಗಾದರೆ ನಾಯಕ ಜನಾಂಗವನ್ನು ಊರು ನಾಯಕರು ಮತ್ತು ಮ್ಯಾಸನಾಯಕರು ಎಂದು ವರ್ಗೀಕರಿಸಿದವರು ಯಾರು ಎನ್ನುವ ಪ್ರಶ್ನೆ ಏಳುತ್ತದೆ. ದೇವರ ವಿಷಯಕ್ಕೆ ಬಂದಾಗ ದೇವರನ್ನು ಬೇರೆ ಬೇರೆ ಹೆಸರಿನಲ್ಲಿ ಕರೆಯುವುದರಲ್ಲಿ ತಪ್ಪೇನಿದೆ. ಹನುಮಂತನನ್ನು ಓಬಳೇಶ ಎಂದು ಮ್ಯಾಸನಾಯಕರು, ಆಂಜನೇಯನೆಂದು ಊರು ನಾಯಕರು ಕರೆಯುತ್ತಾರೆ. ಊರು ನಾಯಕರಲ್ಲಿ ಭರ್ಮಪ್ಪದೇವರು ಮ್ಯಾಸನಾಯಕರಲ್ಲಿ ಬರುವ ಬೊಮ್ಮಯ್ಯ ಇಬ್ಬರೂ ಒಂದೇ. ಅಲ್ಲದೆ ಬೇಡರ ಮೂಲವೃತ್ತಿ ಮೊದಲು ಬೇಟೆಗಾರಿಕೆ. ಮ್ಯಾಸನಾಯಕರ ಬೇಟೆಗಾರಿಗೆ ಮತ್ತು ಊರುನಾಯಕರ ಬೇಟೆಗಾರಿಕೆಯೆಂದು ಎಲ್ಲೂ ಕರೆದಿಲ್ಲ. ಹೀಗಿರುವಾಗ ಇವರ ಮಧ್ಯೆ ಗೊಂದಲ ಹುಟ್ಟಿಸಿದವರು ಯಾರು? ಮಹರ್ಷಿ ವಾಲ್ಮೀಕಿ, ಏಕಲವ್ಯ, ಬೇಡರಕಣ್ಣಪ್ಪ, ಧರ್ಮವ್ಯಾಧ ಇತ್ಯಾದಿ, ಆದಿಯಿಂದ ಪಾಳೆಯಗಾರರ ತನಕ ಅಂದರೆ ವಿಜಯನಗರ ಸಾಮ್ರಾಜ್ಯದ ತನಕ ಊರು ನಾಯಕ ಮತ್ತು ಮ್ಯಾಸನಾಯಕ ಎಂದು ಯಾವ ಸಂದರ್ಭದಲ್ಲೂ ಬಳಕೆಯಾಗಿಲ್ಲ. ಮದುವೆ ಸಂಪ್ರದಾಯ, ಮುದ್ರೆ ಹಾಕಿಸುವ ಸಂಪ್ರದಾಯಗಳು ಮ್ಯಾಸನಾಯಕ ಮತ್ತು ಊರನಾಯಕರ ಆಚರಣೆಗಳಲ್ಲಿ ಎಲ್ಲೂ ಭಿನ್ನತೆ ಕಂಡು ಬರುವುದಿಲ್ಲ. ಉಡುಗೆ ತೊಡುಗೆಯ ವಿಚಾರದಲ್ಲೂ ಕೂಡ ಸಾಮ್ಯವನ್ನು ಕಾಣಬಹುದಾಗಿದೆ.

ಹೀಗೆ ಸಮುದಾಯಗಳ ಮೈನೆರದ ಸಮಯದಲ್ಲಿ ಸೂತಕ ತನವು, ಮನೆಯಲ್ಲಿ ಮೈಲಿಗೆ ಎಂದು ಯಾರೂ ಸಹ ಹುಡಿಗಿಯನ್ನು ಮುಟ್ಟುವುದಿಲ್ಲ. ೫ ದಿನದವರೆಗೆ, ಮುದುಕರು ಮಾತ್ರ ಕುಪ್ಪಸವನ್ನು ಹಾಕುವುದಿಲ್ಲ. ಹೆರಿಗೆಯಾದ ಸಮಯದಲ್ಲಿ ಮನೆಯ ಒಂದು ಮೂಲೆಯಲ್ಲಿ ತೆರೆಯನ್ನು ಕಟ್ಟಿ ಯಾರು ನೋಡಿದ ಸ್ಥಳದಲ್ಲಿ ವ್ಯವಸ್ಥೆ ಮಾಡಿರುತ್ತಾರೆ. ೩ನೇ ದಿನ ನೀರು ಮಾಡುತ್ತಾರೆ. ರಾತ್ರಿ ಸಮಯದಲ್ಲಿ ಹಾಗೂ ನಾಮಕರಣದ ಪದ್ಧತಿಯೂ ಸಹ ಒಂದೇ. ಗಂಡು ಮಕ್ಕಳು ಪ್ರಾಯಕ್ಕೆ ಬರುವ ಮೊದಲೇ ಅವರಿಗೆ ಮುದ್ರೆ ಕಾರ್ಯವನ್ನು ಮಾಡುತ್ತಾರೆ;

ಧಾನ್ಯದ ರಾಶಿಯ ಪೂಜೆಯಲ್ಲಿ ಮುದ್ರೆ ಇದ್ದವರು ಮಾತ್ರ ರಾಶಿಯ ಕಣದಲ್ಲಿ ಇರುತ್ತಾರೆ. ಬೇಡ ಜಾತಿಯ ಜನ ನಂಬಿಗೆಯ ಭಂಟರು ನಂಬಿದರೆ ಪ್ರಾಣವನ್ನಾದರೂ ಕೊಟ್ಟು ರಕ್ಷಣೆಗೆ ನಿಲ್ಲುವ ಜನ, ಧೈರ್ಯ, ಸಾಹಸ, ಮುತ್ತು ಕಾಡುಮೃಗಗಳ ಭಯವಿಲ್ಲ ದವರ ಎಂತಹ ಸಾಹಸಕ್ಕಾದರು ಸೈ ಎನ್ನುವ ಜನರು.

ಕಾಡಿನಲ್ಲೆ ಹುಟ್ಟಿ ಕಾಡಿನಲ್ಲೆ ಬೆಳೆದು ಕಾಡು ಪ್ರಾಣಿಗಳ ನಡುವೆ ಧೈರ್ಯದಿಂದ ತಮ್ಮ ಸಾಕು ಪ್ರಾಣಿಗಳಾದ ದನ, ಹಸು, ಕುರಿ, ಮೇಕೆ, ನಾಯಿ, ಕೋಳಿಗಳನ್ನು ಸಾಕುತ್ತಾರೆ. ಬೇಡರು ನಾಯಿಯನ್ನು ಪ್ರೀತಿಯಿಂದ ಸಾಕುತ್ತಿದ್ದರು. ನಾಯಿ ನಾಯಕ ಜನಾಂಗಕ್ಕೆ ಬಹುಪ್ರಿಯ ಏಕೆಂದರೆ ಬೇಟೆಯಾಡಲು ನಾಯಿ ಬಹು ಅನುಕೂಲಕರವು ಮತ್ತು ತಾವು ವಾಸಿಸುವ ನೆಲೆಗೆ ಬೇರೆಯವರು ಬಂದರೆ ಅವರನ್ನು ಬೆನ್ನಟ್ಟಿ ಓಡಿಸುತ್ತವೆ.

ಆಯುಧ

ಕಲ್ಲು ಬೀಸುವುದು, ನುಣುಪು ಚೂಪಾದ ಕಲ್ಲು ಚಪ್ಪಡಿ, ಕವಣಿ, ಬಿಲ್ಲು ಮತ್ತು ಸಿಡಿ ಕಟ್ಟುವುದು, ಮುಖಾಮುಖಿ ಹೊಡೆದಾಟದಲ್ಲಿ ಎತ್ತಿದ ಕೈ. ಇದಕ್ಕಾಗಿ ಇವರನ್ನು ರಾಜರು ಸೈನಿಕ ಪದ್ಧತಿ ಇಲ್ಲ ಹಾಗೂ ಅಂಗ ರಕ್ಷಕರನ್ನಾಗಿ ಮಾಡಿಕೊಂಡಿದ್ದರು.

ಹಿಂದಿನ ಕಾಲದ ರಾಜರ ಸೈನ್ಯದಲ್ಲಿ ಇದ್ದಾಗಲೂ ಕೂಡ ಬೇಡರ ಪಡೆಯೆಂದೇ ಸಂಬೋಧಿಸಲಾಗುತ್ತಿತ್ತು. ಅದನ್ನು ಎಲ್ಲೂ ಕೂಡ ಮ್ಯಾಸನಾಯಕರ ಪಡೆ ಅಥವಾ ಊರು ನಾಯಕರ ಪಡೆಯೆಂದು ಕರೆಯುತ್ತಿರಲಿಲ್ಲ. ಕುರಿಕಾದು ಕುರುಬನಾದ, ಕಲ್ಲು ಒಡೆದು ವಡ್ಡನಾದ, ಬಲೆಬೀಸಿ ಬೆಸ್ತನಾದ ಮತ್ತು ಬೇಟೆಯಾಡಿ ಬೇಡನಾದ ಎಂದು ಗುರುತಿಸಲಾಗುತ್ತದೆ. ಇವರೆಲ್ಲಾ ನಿಷಾಧರೇ. ಅಲ್ಲೂ ಕೂಡ ಊರ ಮತ್ತು ಮ್ಯಾಸ ಎಂಬ ಪದ ಬಳಕೆಯಲ್ಲಿ ಇಲ್ಲ. ಇನ್ನು ಚರಿತ್ರೆಯಲ್ಲಿ ಎಲ್ಲಿಯೂ ಯಾವ ಕಾಲಘಟ್ಟದಲ್ಲಿಯೂ ಈ ಬಗೆಯ ವರ್ಗೀಕರಣ ಕಂಡುಬರುವುದಿಲ್ಲ. ಸ್ವಾತಂತ್ರ್ಯಾನಂತರದ ಕಾಲಘಟ್ಟದಲ್ಲಿ ಈ ಬಗೆಯ ವ್ಯತ್ಯಾಸ ಮಾಡುವುದನ್ನು ಕಾಣಬಹುದಾಗಿದೆ.

ಕರ್ನಾಟಕ ಮತ್ತು ಆಂಧ್ರದ ಗಡಿಭಾಗದಲ್ಲಿ ತೆಲುಗು ಮಾತೃಭಾಷೆಯನ್ನುಳ್ಳ ಬೇಡ ಸಮುದಾಯದವರನ್ನು ಗುರುತಿಸಲು ಮಾತ್ರ ಈ ಪದ ಬಳಸಿದಂತಿದೆ. ಸಮುದಾಯದ ಸಂಘಟನೆಯ ಹಿತದೃಷ್ಟಿಯಿಂದ ಈಗಾಗಲೇ ಬಳ್ಳಾರಿ, ರಾಯಚೂರು, ಚಿತ್ರದುರ್ಗ ಇತ್ಯಾದಿ ಕಡೆಗಳಲ್ಲಿ ಬಳಕೆಯಲ್ಲಿರುವ ನಾಯಕ ಪದವನ್ನು ಮಾತ್ರ ಬಳಸುವುದು ಉಚಿತವೆನ್ನಿಸುತ್ತದೆ.

ಈಗಾಗಲೇ ಊರು ಮತ್ತು ಮ್ಯಾಸ ಎಂದು ಕರೆಯಲ್ಪಡುವ ನಾಯಕ ಜನಾಂಗದಲ್ಲಿ ವೈವಾಹಿಕ ಸಂಬಂಧ, ಕೊಡುಕೊಳ್ಳುವಿಕೆ, ಅನ್ಯೋನ್ಯತೆ, ಸಾಮರಸ್ಯ ಜೀವನ ನಡೆಯುತ್ತಿ ರುವುದು ಆರೋಗ್ಯಕಾರಿ ಬೆಳವಣಿಗೆಯಾಗಿದೆ.

ಪ್ರಸ್ತುತ ಅಂತಹ ವರ್ಗೀಕರಣ ಮಾಡಿ ಭಿನ್ನಾಭಿಪ್ರಾಯ ಹುಟ್ಟಿ ಹಾಕುತ್ತಿರುವವರು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹಿಂದುಳಿದ ಸಮುದಾಯವೊಂದು ಸೈದ್ಧಾಂತಿಕ ಸಂಘಟನೆಗೆ ತೊಡಗಿಕೊಂಡು ಸಮುದಾಯದ ಸರ್ವತೋಮುಖ ಅಭಿವೃದ್ದಿಗೆ ಹೋರಾಟ ಮಾಡಬೇಕಾದ ಸಂಧಿಕಾಲದಲ್ಲಿ ಸಮುದಾಯದ ಏಕತೆಯನ್ನು ಒಡೆಯುವ ಇತರೆ ಸಮುದಾಯಗಳ ಹಿತಾಸಕ್ತಿಯೂ ಅಡಗಿದೆಯೆಂಬುದು ಸರ್ವವೇದ್ಯ. ಸಮುದಾಯದ ಎಲ್ಲಾ  ಪ್ರಜ್ಞಾವಂತರು ಇದನ್ನು ಅರಿತುಕೊಳ್ಳಬೇಕಾದ ಸಂದರ್ಭ ಬಂದೊದಗಿದೆ. ಇನ್ನಾದರೂ ಸಕಲ ಬೇಡನಾಯಕ ಸಮುದಾಯದವರು ತಮ್ಮಲ್ಲಿನ ಭಿನ್ನಾಭಿಪ್ರಾಯ, ಒಳಪಂಗಡ, ಬೆಡಗು ಇವುಗಳನ್ನು ಅಷ್ಟಾಗಿ ಪರಿಗಣಿಸದೆ ಒಂದೇ ತಳಹದಿಯ ಮೇಲೆ ಒಂದಾಗಬೇಕಾಗಿದೆ.

ಇನ್ನು ಬೇಡ ಸಮುದಾಯದ ಮೂಲದ ಕುರಿತಂತೆ ಕೆಲವು ಪೌರಾಣಿಕ ಅಂಶಗಳು ಈ ಕೆಳಗಿನಂತಿವೆ. ಅವುಗಳೆಂದರೆ; ಜಮದಗ್ನಿಯಲ್ಲಿ ಕಾಮಧೇನು ಎನ್ನುವ ಹಸು ಇರುತ್ತದೆ. ಅದರ ವಿಶಿಷ್ಟತೆ ಎಂದರೆ ಕೇಳಿದ್ದನ್ನೆಲ್ಲ ಕೊಡುತ್ತದೆ. ಅದನ್ನು ಕಾರ್ತ್ಯರಾರ್ಜುನ ಸಾಹಸ್ರರ್ಜುನ ಕಾಮಧೇನುವನ್ನು ತೆಗೆದುಕೊಂಡು ಬರುತ್ತಾರೆ. ಯುದ್ಧ ಮಾಡಿ ಕಿತ್ತುಕೊಂಡು ಬರುತ್ತಾರೆ. ಅದು ಪರಶುರಾಮನಿಗೆ ಗೊತ್ತಾಗುತ್ತದೆ. ಪರಶುರಾಮ ಜಮದಗ್ನಿಯ ಮಗ. ಪರಶುರಾಮ ೨೭ ಬಾರಿ ಭೂ ಪ್ರದಕ್ಷಿಣೆ ಮಾಡುತ್ತಾನೆ. ಕಾರಣ ಕ್ಷತ್ರಿಯರನ್ನು (ಅಳಿಯಲು) ಸಂಹರಿಸಲು ಭೂ ಪ್ರದಕ್ಷಿಣೆ ಮಾಡುತ್ತಾನೆ. ಆಗ ಕ್ಷತ್ರಿಯರೆಲ್ಲ ಕಾಡಿಗೆ ದಿಕ್ಕೆಟ್ಟು ಹೋಗು ತ್ತಾರೆ. ಈ ಅಡವಿ ಸೇರಿದವರೆಲ್ಲ ಬೇಡರಾಗಿ ಪರಿವರ್ತನೆಯಾದರು? ಎಂಬ ಮಾತಿದೆ.

ಪಾರ್ವತಿ ಮತ್ತು ಪರಮೇಶ್ವರ ಸಹಜವಾಗಿ ಮಾತುಕತೆಯಲ್ಲಿ ನಿರತವಾಗಿರುವಾಗ ಪಾರ್ವತಿ ಒಮ್ಮೆ ನೀನೇನು ಶ್ರೀರಾಮಚಂದ್ರನೇನು ಎಂದು ಶಿವನಿಗೆ ಹೇಳುತ್ತಾಳೆ. ಆಗ ಶಿವನಿಗೆ ಸಿಟ್ಟು ಬಂದು ಆಕೆಯನ್ನು ತ್ಯಜಿಸಿ ತಪಸ್ಸಿಗೆ ಹೋಗುತ್ತಾನೆ. ಆಮೇಲೆ ಹಲವಾರು ದಿನಗಳಾದ ಮೇಲೆ ಬೇಡ ವೇಷವನ್ನು ಹಾಕಿಕೊಂಡು ಶಿವನ ಬಳಿಗೆ ಬರುವಳು. ಪರೀಕ್ಷೆಗಾಗಿ ಶಿವನನ್ನು ಭೇಟಿಯಾಗುವಳು. ನಾನು ಬೇಡತಿ ಲಗ್ನವಾಗುವ ಆಸೆಯಿದೆ. ಶಿವನ ಲಕ್ಷಣ ಹೊಂದಿರುವ ಗಂಡ ಬೇಕೆಂದಾದಾಗ ಆ ಲಕ್ಷಣ ಹೊಂದಿರುವ ವ್ಯಕ್ತಿ ನಾನೇ ಇದ್ದೇನೆ. ನನ್ನನ್ನು ಲಗ್ನವಾಗು ಎನ್ನುತ್ತಾನೆ. ಆಗ ಶಿವ ಮೊದಲನೇ ಹೆಂಡತಿ ಇದ್ದಾಳೆ ಎಂದು ಹೇಳುತ್ತಾನೆ. ಅವಳಿಗೆ ಸಂಕಟ ಬೀಳಲಿ, ಮಾನಸಿಕ ಹಿಂಸೆಯಾಗಲಿ ಎಂಬ ಕಾರಣಕ್ಕಾಗಿ ಮದುವೆಯಾಗುತ್ತೇನೆ ಎಂದು ಹೇಳುತ್ತಾನೆ. ಅದಕ್ಕೆ ಅವಳು ಒಪ್ಪುತ್ತಾಳೆ. ಇಬ್ಬರೂ ಒಪ್ಪಿ ಮದುವೆ ಆಗುತ್ತದೆ. ಪಾರ್ವತಿಗೆ ದುಃಖವಾಗುತ್ತದೆ, ಸಂಕಟವಾಗುತ್ತದೆ ಎಂದು ಶಿವ-ಬೇಡತಿ ಮುಂದೆ ಹೇಳುತ್ತಾನೆ. ಆಗ ಶಿವ ಬೇಡತಿಯನ್ನು ತಿರುಗಿ ನೋಡುವಾಗ ಬೇಡತಿ ಪಾರ್ವತಿ ರೂಪ ತಾಳುತ್ತಾಳೆ. ಆಗ ಪಾರ್ವತಿ ಹೇಳುತ್ತಾಳೆ. ನಾನು ಸೀತೆಯ ರೂಪದಲ್ಲಿ ಶ್ರೀರಾಮಚಂದ್ರನ ಮುಂದೆ ನಿಂತಾಗ ನೀನು ಮಾತೆ ಎಂದು ಗುರುತಿಸಿದ. ನೀನು ನಾನು ಬೇಡತಿ ರೂಪದಲ್ಲಿ ಬಂದರೂ ನನ್ನನ್ನು ಪಾರ್ವತಿ ಎಂದು ಗುರುತಿಸಲಿಲ್ಲ. ಅದಕ್ಕೆ ನೀನು ಶ್ರೀರಾಮಚಂದ್ರನಂತೆ ಅಲ್ಲ. ಆಗ ರಾಮ ಮಂತ್ರಕ್ಕಿಂತಲೂ ಯಾವುದು ದೊಡ್ಡದಿಲ್ಲವೆಂದು ಶಿವ ತಿಳಿದುಕೊಳ್ಳುತ್ತಾನೆ.

ನೀನು ಶ್ರೇಷ್ಠವಲ್ಲ. ಶ್ರೀರಾಮಚಂದ್ರನಂತೆ ಅಲ್ಲ ಎಂದು ಹೇಳುತ್ತಾಳೆ. ಬೇಡರ ಜೊತೆಗೆ ಬಂದ ಬೇಡತಿ ರೂಪದ ಪಾರ್ವತಿ ಜೊತೆ ಬಂದ ಬೇಡ ಪರಿವಾರ ಬೇಡತಿ ತಂದೆ-ತಾಯಿ, ಬಂಧು ಬಳಗ ಹಿಮಾಲಯದಲ್ಲಿ ಉಳಿಯಿತು. ಅಲ್ಲಿಂದ ಬೇಡ ಜನಾಂಗದ ಉಗಮವಾಯಿತೆ? ಎಂಬುವುದು ನನ್ನ ವಾದವಾಗಿದೆ.

ವಾಲ್ಮೀಕಿ

ಬ್ರಾಹ್ಮಣನೆಂದರೆ, ನಾಲ್ಕು ವೇದ, ಬ್ರಹ್ಮ ಜ್ಞಾನ ಹೊಂದಿದವನು. ಹುತ್ತದಿಂದ ವಾಲ್ಮೀಕಿ ಹೊರ ಬಂದ ಮೇಲೆ ಬ್ರಹ್ಮಜ್ಞಾನ ಹೊಂದಿದ. ಬೇಡನಾಗಿ ಹುಟ್ಟಿ ಕಾಡಿನಲ್ಲಿ ಬೆಳೆದು ಪಾಪ-ಪುಣ್ಯದ ತಂತ್ರ ಇಲ್ಲದಿರುವಾಗ ನಾರದ ಮುನಿಯ ವಚನದಿಂದ ಪಾಪ-ಪುಣ್ಯದ ಅರಿವನ್ನು ತಿಳಿದು ರಾಮನಾಮ ಮಂತ್ರ ಜಪಿಸುತ್ತಾ ತಪಸ್ಸು ಗೈದ. ತಪಸ್ಸು ಗೈಯತ್ತ ಹುತ್ತದಿಂದ ಜ್ಞಾನಿಯಾಗಿ ಹೊರಬಂದ ಮಹಾಪುರುಷನೇ ವಾಲ್ಮೀಕಿ. ಹುತ್ತಕ್ಕೆ ಸಂಸ್ಕೃತದಲ್ಲಿ “ವಲ್ಮೀಕ”. ಪರಿಪೂರ್ಣತೆಯನ್ನು ಪಡೆದ ವಾಲ್ಮೀಕಿ ಪ್ರಥಮ ಕವಿ. ಮಹಾಕಾವ್ಯ ರಾಮಾಯಣವನ್ನು ರಚಿಸಿದ. ಇಲ್ಲಿಂದ ನಮ್ಮ ಬೇಡ ಜಾತಿ ಹುಟ್ಟಿತೆ?

ಗುಹಾ

ಗುಹಾ ಬೇಡರ ದೊರೆ. ಇವನು ಗುಹೆಯಲ್ಲಿ ವಾಸ ಮಾಡುತ್ತಿದ್ದನು. ಅವನು ಶ್ರೀರಾಮಚಂದ್ರ ಹಾಗೂ ದಶರಥನ ಆಪ್ತಮಿತ್ರ. ಶ್ರೀರಾಮಚಂದ್ರ ವನವಾಸಕ್ಕೆ ಹೋಗುವಾಗ ಗುಹಾನ ಹತ್ತಿರ ಉಳಿದುಕೊಳ್ಳುತ್ತಾನೆ. ಆ ಪ್ರಾಂತಕ್ಕೆ ಗುಹಾ ಮಹಾರಾಜನಾಗಿದ್ದ. ಅಲ್ಲಿ ಬೇಡ ಸಮುದಾಯವಿತ್ತು. ಅಲ್ಲಿಂದ ಬೇಡ ಸಮುದಾಯ ಹುಟ್ಟಿತೇ?

ಶಬರಿ, ಹನುಮಂತ

ಶಬರಿ ಬದುಕಿದ್ದು ೫೫ ವರ್ಷ. ಆನೆಗೊಂದಿಯಲ್ಲಿದ್ದ ಒಬ್ಬ ಬೇಡತಿ, ಇಲ್ಲಿ ತುಂಗಭದ್ರೆಯ ಎರಡು ಸೀಳುಗಳ ನಡುವೆ ವೈಷ್ಣವರ ಒಂಬತ್ತು ಮಂದಿ ಸ್ವಾಮಿಗಳ ವೃಂದಾವನಗಳಿವೆ. ಇದಕ್ಕೆ ನವ ವೃಂದಾವನವೆನ್ನುತ್ತಾರೆ. ಇದರ ಸಮೀಪದಲ್ಲೇ ಶಬರಿಯ ಆಶ್ರಮವಿದೆ. ವಾಲ್ಮೀಕಿ ರಾಮಾಯಣದಲ್ಲಿ ಈಕೆ ರಾಮನನ್ನು ಅರ್ಘ್ಯವಾದ್ಯ ಗಳಿಂದುಪಚರಿಸಿ, ಪಂಪಾತೀರದಲ್ಲಿ ಬೆಳೆಸಿದ ಬಗೆ ಬಗೆಯ ಪದಾರ್ಥಗಳನ್ನು ಆತನ ಮುಂದೆ ತಂದಿಟ್ಟಳೆಂದಿದೆ.

ಪದ್ಮಪುರಾಣದಲ್ಲಿ ತಾನು ಹಣ್ಣುಗಳ ರುಚಿ ನೋಡಿ ಶ್ರೀಮನಿಗೆ ತಿನ್ನಿಸಿದಳೆಂದಿದೆ. ಅವನ ಮುಂದೆಯೇ ಅಗ್ನಿ ಪ್ರವೇಶ ಮಾಡಿ ಸ್ವರ್ಗ ಸ್ಥಳಾದಳು. ಮತಂಗಮುನಿಯ ಶಿಷ್ಯ ಈಕೆ. ಈಕೆ ೫೦೦ ವರ್ಷದ ಮುದುಕಿ. ಶ್ರೀರಾಮನ ಪರಮಭಕ್ತೆ. ಹಾಗಾಗಿ ಈಕೆಯ ಹಿಂದೆ ನಾಯಕ ಸಮುದಾಯವಿರಬೇಕು. ಅಲ್ಲಿಂದ ನಾಯಕ ಸಮುದಾಯದ ಉಗಮವಾಯಿತೇ?

ಹನುಮಂತ

ಆಂಜನೇಯನ ಪೂಜಕರೆಲ್ಲ ಸಾಮಾನ್ಯವಾಗಿ ನಾಯಕ ಜನಾಂಗದವರೆ. ಆಂಜನೇಯನ ದೇವಸ್ಥಾನದಲ್ಲಿ ನಡೆಯುವ ಪವಾಡ ಮಾಡುವವರು ಕೂಡ ನಾಯಕ ಜನಾಂಗದವರೆ. ಇಷ್ಟೆಲ್ಲ ಆಂಜನೇಯ ಪೂಜೆ ಪುನಸ್ಕಾರ ನಡೆದಾಗ ಆಂಜನೇಯನ ಜಾತಿ – ಬೇಡರವನೇ?

ಏಕಲವ್ಯ

ಮೇಲ್ಜಾತಿ ದೋಣಾಚಾರ್ಯರಿಂದ ತುಳಿತಕ್ಕೀಡಾದ ಮೂರುಲೋಕದ ಗಂಡ ಅರ್ಜುನ ಅದನ್ನು ಮೀರಿಸಿದ ಗಂಡ ಏಕಲವ್ಯ. ಶಬ್ದವೇದಿ ಬಾಣ ಪ್ರಯೋಗಿಸಿದ ಸಮರ್ಥ ರ. ಆಗಿನ ವಂಶಸ್ಥರು ನಾಯಕರು.

ಕಿರಾತಾರ್ಜುನವಿಜಯ

ಪಾರ್ವತಿ ಶಿವನ ಹತ್ತಿರ ಅರ್ಜುನನ ಬೆನ್ನು ನೋಡಬೇಕೆಂದು ಆಸೆ ಪಡುತ್ತಾಳೆ. ಒಮ್ಮೆ ಕಿರಾತನವೇಷದಲ್ಲಿ ಶಿವ ಹಾಗೂ ಅರ್ಜುನ ಒಂದೇ ಬಾರಿಗೆ ಬಿಲ್ಲು ಬಿಡುತ್ತಾರೆ. ಅದು ಹಂದಿಗೆ ತಾಕುತ್ತದೆ. ಹಂದಿ ಸಾಯುತ್ತದೆ. ಅರ್ಜುನ ಮತ್ತು ಕಿರಾತಕ (ಶಿವ) ಇಬ್ಬರೂ ಹಂದಿ ಬೇಕೆಂದು, ಮೊದಲು ನಾನು ಬಾಣ ಪ್ರಯೋಗಿಸಿದ್ದಕ್ಕಾಗಿ ಹಂದಿ ಸತ್ತಿದೆ ಎಂದು ಹಠ ಹಿಡಿಯುತ್ತಾರೆ. ಕೊನೆಗೆ ಇಬ್ಬರೂ ಮಲ್ಲಯುದ್ಧಕ್ಕೆ ಸಿದ್ಧರಾಗುತ್ತಾರೆ. ಶಿವ ಮಲ್ಲಯುದ್ಧದಲ್ಲಿ ಕೆಳಗೆ ಬೀಳುತ್ತಾನೆ. ಅರ್ಜುನ ಮೇಲೆ ಇರುತ್ತಾನೆ. ಶಿವ ಪಾರ್ವತಿಗೆ ಬೆನ್ನು ನೋಡು ಅರ್ಜುನನದು ಎಂದು ಹೇಳುತ್ತಾನೆ. ಪಾರ್ವತಿ ಬೆನ್ನನ್ನು ನೋಡುತ್ತಾಳೆ. ಶಿವ (ಕಿರಾತಕ) ಬೇಟೆಗಾರನ ವೇಷದಲ್ಲಿ ಬಂದಾಗ ಆತನ ಜೊತೆ ಬೇಡರ ಪಡೆ ಇತ್ತು. ಅಲ್ಲಿಂದ ಬೇಡ ಜನಾಂಗ ಉಗಮವಾಯಿತೇ? ಪ್ರತಿಯೊಂದು ಹಂತದಲ್ಲಿ ದೈವದ ಜೊತೆಗೆ ಬೇಡ ಜಾತಿ ಬೆರೆತುಕೊಂಡು ಹೋಗಿರುವುದನ್ನು ನಾವು ಕಾಣುತ್ತಿದ್ದೇವೆ. ಅಲ್ಲಿ ಎಲ್ಲಿಯೂ ಊರಬೇಡ ಮತ್ತು ಮ್ಯಾಸಬೇಡ ಎಂಬುವುದನ್ನು ನೋಡುವುದಿಲ್ಲ. ಈ ಜನಾಂಗ ತುಳಿತಕ್ಕೆ ಒಳಗಾಗಿರುವುದು ಇಂದಿನ ದುಸ್ಥಿತಿಯ ಸಂಕೇತವಾಗಿದೆ.

* * *