ಬುಡಕಟ್ಟು ಸಮುದಾಯಗಳ ಚರಿತ್ರೆ ಸಂಶೋಧನೆ ಮಟ್ಟಿಗೆ ಇಪ್ಪತ್ತನೇ ಶತಮಾನ ಮಹತ್ವದ್ದು. ಈ ಕುರಿತು ಈ ಕಾಲಘಟ್ಟದಲ್ಲಿ ಪ್ರಕಟಗೊಂಡ ಪುಸ್ತಕಗಳು ನೂರಾರಿದ್ದರೆ, ಲೇಖನಗಳು ಸಾವಿರಾರು. ಅಂತೆಯೇ ಅಧ್ಯಯನಕಾರರ ಸಂಖ್ಯೆಯೂ ಕಡಿಮೆಯೇನಲ್ಲ. ತಳವರ್ಗದ ನಿರ್ಲಕ್ಷಿತ ಜಾತಿಸಮುದಾಯಗಳ ಅಧ್ಯಯನದಿಂದ ಆದ ಲಾಭವೆಂದರೆ, ಅವುಗಳ ಚಹರೆಯನ್ನು ಸ್ಪಷ್ಟವಾಗಿ ಗುರುತಿಸುವಂತಾದುದು; ಹಾಗೂ ಹಲವಾರು ಮೂಲ-ಚೂಲಗಳಿಂದ ಸಂಗ್ರಹಿಸಲಾದ ಖಚಿತ ಐತಿಹಾಸಿಕಾಂಶಗಳು ಬೆಳಕಿಗೆ ಬರುವಂತಾದುದು. ಕರ್ನಾಟಕ ಬೇಡ ಸಮುದಾಯಕ್ಕೂ ಇದು ಅನ್ವಯಿಸುತ್ತದೆ.

ಬೇಡ ಸಮುದಾಯ ಕುರಿತು ಈವರೆಗೆ ನಡೆದಿರುವ ವ್ಯಾಪಕ ಅಧ್ಯಯನದ ನೆಲೆಯಲ್ಲಿ, ರಾಷ್ಟ್ರವ್ಯಾಪಿ ನೆಲೆಸಿರುವ ಈ ಸಮುದಾಯದ ನಾನಾ ಹೆಸರುಗಳು ಹಾಗೂ ಪ್ರಭೇದಗಳನ್ನು ಗುರುತಿಸಲಾಗಿದೆ. ಕರ್ನಾಟಕದಲ್ಲಿ ಈ ಸಮುದಾಯದವರನ್ನು ನಾಯಕರು, ನಾಯಕಮಕ್ಕಳು, ವಾಲ್ಮೀಕರು, ವಾಲ್ಮೀಕಿಮಕ್ಕಳು, ಬೇಡರು, ಪಾಳೆಯಗಾರರು, ಗುರಿಕಾರರು, ತಳವಾರರು, ರಾಜಪರಿವಾರದವರು, ಕನ್ನಯ್ಯನ ಕುಲದವರು, ದೊರೆಮಕ್ಕಳು ಮುಂತಾಗಿ ಕರೆದಿದ್ದರೆ; ಆಂಧ್ರದಲ್ಲಿ ಬಾಯಿವಾಳ್ಳು, ಸಂಚುಲು, ರಾಜುಲು, ರಾಜಬಿಡ್ಡಲು, ಪಾಳ್ಳೆಗಾಳ್ಳು, ಕೊಂಡರಾಜುಲು, ಬೋಯಿ ಇತ್ಯಾದಿಯಾಗಿ ಕರೆಯಲಾಗಿದೆ. ತಮಿಳುನಾಡಿನಲ್ಲಿ ರುವವರೆಂದರೆ ವ್ಯಾಧನ್, ನಾಯ್ಡು, ನಾಯರ್, ನಾಯಕನ್, ರಾಜು ಮೊದಲಾದವರು. ವ್ಯಾಧ, ಶಬರ, ಪುಳಿಂದ, ಕಿರಾತ, ರಜಪೂತ ಮುಂತಾದವು ಈ ಸಮುದಾಯಕ್ಕೆ ಅನ್ವಯಿಸಲಾದ ಸಂಸ್ಕೃತ ಶಬ್ದಗಳು. ವಾಲ್ಮೀಕಿ ಮತ್ತು ಕನ್ನಯ್ಯರ ಮೂಲವನ್ನು ಹೇಳಿಕೊಳ್ಳುವವರಲ್ಲಿ ಈ ಸಮುದಾಯದ ಊರುನಾಯಕರು, ಮ್ಯಾಸನಾಯಕರು, ಮಾರಮ್ಮ ನಾಯಕರು, ಮುತ್ಯಾಲ ನಾಯಕರು, ಹಾಲುಬೇಡರು, ಮೊಂಡಬೇಡರು, ಸಂಚುಲು, ಬಿಲ್ಲರು, ರಾಜಪರಿವಾರದವರು, ಕೊಂಡರಾಜುಲು ಮುಖ್ಯರಾಗಿದ್ದು, ಇವರೆಲ್ಲರೂ ಒಂದೇ ಮೂಲ ದವರೆಂದು ಕರೆಸಿಕೊಂಡಿರುವುದುಂಟು.

ಉತ್ತರಭಾರತದಲ್ಲಿ ರಜಪೂತರು, ಮಧ್ಯದಲ್ಲಿ ಮರಾಠರಂತೆ ದಕ್ಷಿಣಭಾರತದಲ್ಲಿ ಪ್ರಮುಖ ಪಾತ್ರ ವಹಿಸಿದವರು ಬೇಡ ಸಮುದಾಯದವರು. ಇವರ ಹಿನ್ನೆಲೆ ಶ್ರೀಮಂತ ವಾದುದಷ್ಟೇ ಅಲ್ಲ, ರೋಚಕವಾದುದು ಸಹಾ. ಮೂಲದಲ್ಲಿ ‘ಕಿರಾತರ ಮುಖಂಡ’ನಾಗಿದ್ದು, ಲಕ್ಷ, ಮೀನ, ಮಲ್ಲರೇ ಮೊದಲಾದ ಏಳುಜನ ಮಕ್ಕಳ ನಾಯಕತ್ವದಲ್ಲಿ ಏಳು ಪಡೆಗಳನ್ನು ರಚಿಸಿ ದರೋಡೆ ಕಾರ್ಯ ನಡೆಸುತ್ತಿದ್ದಂಥಾ, ಸಕಲ ದುರ್ಗುಣಗಳಿಗೂ ಮನೆಯಂತಿದ್ದ, ಅಂದರೆ ವಿಷಜಂತುವಾದ ಸರ್ಪದ ಆವಾಸಸ್ಥಾನವಾದ ಹುತ್ತದಂತಿದ್ದು ‘ವಾಲ್ಮೀಕ’ನೆಂದು ಕರೆಸಿಕೊಂಡಿದ್ದಂಥಾ ಮಹಾಪುರುಷನೇ ಬೇಡ ಸಮುದಾಯದ ವಿಭೂತಿಪುರುಷ. ಶ್ರೀರಾಮನಿಗೆ ಮಾರ್ಗದರ್ಶಕವಾದ ‘ರಾಮಾಯಣ’ ಮಹಾಕಾವ್ಯವನ್ನು ರಚಿಸಿ ಜಗದ್ವಂದ್ಯನೆನಿಸಿದ ಹಾಗೂ ಸಮಕಾಲೀನ ಮುನಿಶ್ರೇಷ್ಠರಾಗಿದ್ದ ವಶಿಷ್ಠ, ವಿಶ್ವಾಮಿತ್ರ ಮೊದಲಾದವರ ಆದರಣೆಗೆ ಪಾತ್ರನಾಗಿದ್ದ ವಾಲ್ಮೀಕಿ ಮಹರ್ಷಿಯನ್ನು ಪೂಜ್ಯಭಾವದಿಂದ, ಗೌರವಾದರಗಳಿಂದ ಅನುಸರಿಸಿದವರೇ ವಾಲ್ಮೀಕಿ ವಂಶದವರು, ಅಂದರೆ ಬೇಡ ಸಮುದಾಯದವರು. ಬೇಡರ ಕಣ್ಣಪ್ಪ, ಶಬರಿ, ಗುಹ, ಏಕಲವ್ಯ ಮೊದಲಾದ ಪರಮಭಕ್ತರೂ ಮಹಾರರೂ ಈ ಸಮುದಾಯದ ಹೆಮ್ಮೆಯ ಪ್ರತೀಕವೆನಿಸಿದರು. ಇಂಥಾ ಪರಂಪರೆ ಈ ಸಮುದಾಯದ ಇತರ ಶ್ರೇಷ್ಠ ಸ್ತ್ರೀ-ಪುರುಷರ ಮೂಲಕ ಅನವರತವೂ ಮುಂದುವರೆದುಕೊಂಡು ಬಂದುದು ಕಂಡಂತೆಯೇ ಇದೆ.

ಯಾವುದೇ ಸಮುದಾಯವಾದರೂ ತನ್ನ ಗುರುತು ಹಾಗೂ ಶ್ರೇಷ್ಠತೆಗಳನ್ನು ತನ್ನದೇ ಐತಿಹಾಸಿಕ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯತೆಗಳ ಮೂಲಕವೇ ಹೇಳಿಕೊಳ್ಳುತ್ತದೆಂಬುದು ವಾಸ್ತವ ಸಂಗತಿ. ಹಾಗೆಯೇ, ಪೌರಾಣಿಕ ಮತ್ತು ಐತಿಹಾಸಿಕ ಅಂಶಗಳನ್ನು ತನ್ನ ಸಮರ್ಥನೆಗೆ ಹಿನ್ನೆಲೆಯಾಗಿ ಬಳಸಿಕೊಳ್ಳುವುದೊಂದು ಸಾಮಾನ್ಯ ಉಪಕ್ರಮ. ಬೇಡ ಸಮುದಾಯವೂ ಇದಕ್ಕೆ ಹೊರತಲ್ಲ. ಇದೊಂದು ಪ್ರಾಚೀನ ಬುಡಕಟ್ಟು ಸಮುದಾಯವಾಗಿದ್ದು, ಕ್ರಿಸ್ತಪೂರ್ವ ಕಾಲದಿಂದಲೂ ಬೇಟೆಯಾಡುತ್ತಾ ಗುಡ್ಡ-ಕಾಡುಗಳಲ್ಲಿ ಸಂಚರಿಸುತ್ತಿದ್ದಂಥದು. ಕಾಲಾನುಸಾರ ಹಾಗೂ ಸಂದರ್ಭಾನುಸಾರ ದೇಶದ ಉದ್ದಗಲದಲ್ಲೂ ವಿವಿಧ ಸಾಮ್ರಾಟರ ರಾಜಕೀಯ ಸಾಧನೆಯ ಕಾರ್ಯದಲ್ಲಿ, ಪೈಪೋಟಿಯಲ್ಲಿ ಸಹಕರಿಸುತ್ತಾ, ಸ್ಪರ್ಧಿಸುತ್ತಾ ಯೋಧಜನಾಂಗ ವಾಗಿ ಮಾರ್ಪಟ್ಟಂಥಾದ್ದು. ಗುಡ್ಡ-ಕಾಡುಗಳ ಮಧ್ಯೆ ಕಂಡುಬರುತ್ತಿದ್ದ ಬೇಡರ ವಸತಿಸ್ಥಾನ ಗಳನ್ನು ಕುರಿತು ಸೂಚಿಸುತ್ತದೆ ರಾಮಾಯಣ. ಬೇಡಪಡೆಗಳನ್ನು ಕುರಿತು ವಿವರಣೆ ನೀಡುತ್ತದೆ ಮಹಾಭಾರತ. ಪಾಂಡವರ ಪೈಕಿ ಪ್ರತಿಯೊಬ್ಬನಿಗೂ ಒಂದೊಂದು ಪ್ರತ್ಯೇಕ ಬೇಡಪಡೆ ಇದ್ದಿತಂತೆ. ಸಹದೇವ ತಾನು ಕೈಗೊಂಡ ದಿಗ್ವಿಜಯದಲ್ಲಿ ದಕ್ಷಿಣದೇಶದಲ್ಲಿದ್ದ ಬೇಡ ಅರಸರಿಂದ ಕಾಣಿಕೆ ಪಡೆದುಕೊಂಡಿದ್ದನಂತೆ. ದಕ್ಷಿಣದ ಪೈನ ಗಂಗಾತೀರದ ಸುತ್ತಮುತ್ತಲ ಪ್ರದೇಶಕ್ಕೆ ಬೇಡರ ದೊರೆಯೋರ್ವನು ಅಧಿಪತಿಯಾಗಿದ್ದನಂತೆ. ಹಾಗೆಯೇ, ಸೂರ್ಪರಕ ದಿಂದ ರತ್ನಗಿರಿಯವರೆಗಿನ ಪ್ರದೇಶವು ಬೇಡರ ರಾಜ್ಯವಾಗಿದ್ದಿತಂತೆ.

ಚಾರಿತ್ರಿಕಯುಗದಲ್ಲಿ, ದಕ್ಷಿಣದಲ್ಲಿ ದೇವಗಿರಿ, ವಾರಂಗಲ್ಲು, ದ್ವಾರಸಮುದ್ರ, ಆನೆಗೊಂದಿ ಹಾಗೂ ರಾಮೇಶ್ವರದವರೆಗಿನ ಪ್ರಾಂತಗಳವರೊಡನೆ ಕೈಜೋಡಿಸಿ ಪರದೇಶ-ಪರಮತಗಳ ದಾಳಿಕೋರರ ವಿರುದ್ಧ ಸೆಣಸಲು ಈ ಸಮುದಾಯದವರು ಸಜ್ಜಾದುದು ಇತಿಹಾಸದಲ್ಲಿ ದಾಖಲುಗೊಂಡಿದೆ. ಮುಖ್ಯವಾಗಿ, ಯವನ ಪ್ರಾಬಲ್ಯವನ್ನು ವಿರೋಧಿ ಸುವಲ್ಲಿ ಇಡೀ ಭಾರತದ ಇತಿಹಾಸದಲ್ಲಿ ಈ ಸಮುದಾಯವು ‘ಹಿಂದೂ ಯೋಧಪಡೆ’ಯಾಗಿ ರೂಪುಗೊಂಡುದೊಂದು ಮಹತ್ವದ ಹಂತ. ಆನೆಗೊಂದಿ ಸಂಸ್ಥಾನವು ಬೇಡಕೂಟದ ಪ್ರಧಾನ ನೆಲೆಯಾಗಿ ಗುರುತಿಸಲ್ಪಟ್ಟುದು ಒಂದು ಪ್ರಮುಖ ಅಂಶವಾದರೆ, ವಿಜಯನಗರದ ಇತಿಹಾಸ ಪ್ರಸಿದ್ಧ ರತ್ನಸಿಂಹಾಸನ ಅಥವಾ ಕರ್ನಾಟಕ ರತ್ನಸಿಂಹಾಸನವು ಕರ್ನಾಟಕ ಬೇಡಸಮುದಾಯದ ಪ್ರತಿಷ್ಠಿತ ಪ್ರತೀಕವೆನಿಸಿದ ಕುಮಾರರಾಮನ ತಂದೆ ಕಂಪಿಲರಾಯನಿಗೆ ಪರಂಪರಾನುಗತವಾಗಿ ಲಭ್ಯವಾದುದೆಂಬುದು ಇನ್ನೊಂದು ಪ್ರಮುಖ ಅಂಶ. ಇಂದು ಮೈಸೂರು ಒಡೆಯರ ಬಳಿ ಯಿರುವ ರತ್ನಸಿಂಹಾಸನವು ಹಿಂದೆ ಕಂಪಿಲರಾಯನ ಬಳಿ ಇದ್ದಿತೆಂದು ಪ್ರತೀತಿ. ಅವನು ಹದಿಮೂರು ವರ್ಷಗಳ ಕಾಲ ಈ ಸಿಂಹಾಸನದ ಮೇಲೆ ಕುಳಿತು ಆಳ್ವಿಕೆ ನಡೆಸಿದನಂತೆ. ಮೊಗಲರು ಕುಮ್ಮಟದುರ್ಗಕ್ಕೆ ಮುತ್ತಿಗೆ ಹಾಕಿದಾಗ ಈ ಸಿಂಹಾಸನವನ್ನು ಪೆನುಗೊಂಡೆಯ ಬಲವಾದ ಕೋಟೆಯಲ್ಲಿ ಅಡಗಿಸಿಟ್ಟ. ಇದರ ರಹಸ್ಯವನ್ನರಿತಿದ್ದ ವಿದ್ಯಾರಣ್ಯರು ಇದನ್ನು ಆನೆಗೊಂದಿಗೆ ತರಿಸಿ, ಇದರ ಮೇಲೆ ಒಂದನೇ ಹರಿಹರರಾಯನನ್ನು ಕುಳ್ಳಿರಿಸಿ, ೧೩೩೬ರಲ್ಲಿ ಪಟ್ಟಕಟ್ಟಿದರೆಂದು ವ್ಯಕ್ತಪಡುತ್ತದೆ. ಕರ್ನಾಟಕದ ಮಟ್ಟಿಗೆ, ಆನೆಗೊಂದಿಯೇ ಬೇಡ ಸಮುದಾಯದ ಮೊದಲನೇ ಪಾಳೆಯಪಟ್ಟೆಂದು ಭಾವಿಸಲಾಗುತ್ತದೆ. ಹಾಗೆಯೇ, ಸುಮಾರು ಹತ್ತನೇ ಶತಮಾನದಲ್ಲೆ ಬೇಡ ಪಾಳೆಯಗಾರರು ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದರೆಂದು ಸಮರ್ಥಿಸಲಾಗುತ್ತದೆ.

ನಾಯಂಕರ ವ್ಯವಸ್ಥೆಯ ಸ್ಥಾಪನೆಯ ಮಟ್ಟಿಗೆ, ಹನ್ನೆರಡನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ಆಂಧ್ರ ಕಾಕತೀಯ ಸಾಮ್ರಾಜ್ಯದ ಕೊಡುಗೆ ಅರ್ಥಪೂರ್ಣವಾದುದು. ಕಾಕತೀಯ ಸಾಮ್ರಾಟ / ಸಾಮ್ರಾಜ್ಞಿಯರಾದ ಗಣಪತಿದೇವ (೧೧೯೯-೧೨೬೨), ರುದ್ರಮದೇವಿ ಅಥವಾ ರುದ್ರಾಂಬಾ (೧೨೬೨-೧೨೮೯), ಇಮ್ಮಡಿ ಪ್ರತಾಪರುದ್ರ (೧೨೮೯-೧೩೨೩), ಪ್ರೋನಾಯಕ ಮತ್ತು ಕಾಪಯನಾಯಕರು ಎಲ್ಲ ಕುಲದ ನಾಯಕರು ಅಥವಾ ಪಾಳೆಯಗಾರರನ್ನು ಸೇರಿಸಿ ಸ್ಥಾಪಿಸಿದ್ದ ನಾಯಂಕರ ಒಕ್ಕೂಟ(Confederacy)ವನ್ನು ಬೆಳೆಸಿದುದು ದಕ್ಷಿಣ ಭಾರತದ ಇತಿಹಾಸದಲ್ಲಿ ಹಿಂದೂ ಸಾಮ್ರಾಜ್ಯಶಾಹಿಯು ಇಟ್ಟ ಮಹತ್ವದ ಹೆಜ್ಜೆಯೆನ್ನ ಬಹುದು. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಹಿನ್ನೆಲೆಯಲ್ಲಿ ಕಾಕತೀಯರು ಹುಟ್ಟು ಹಾಕಿದ ನಾಯಂಕರ ಪದ್ಧತಿ ಪರಿಣಾಮಕಾರಿಯಾಗಿ ಕೆಲಸ ಮಾಡಿತು. ಈ ನಾಯಂಕರ ಒಕ್ಕೂಟದ ಕಮ್ಮ, ರೆಡ್ಡಿ, ಬೋಯ ಅಥವಾ ಬೇಡ, ಬಲಿಜವರ್ಗಗಳ ನಾಯಕರನೇಕರು ತಮ್ಮ ಸಂಗಡಿಗರು ಮತ್ತು ಬಂಧುಗಳೇ ಆಗಿದ್ದ ವಿಜಯನಗರ ಅರಸರ ಅಧೀನದ ನಾಯಂಕರ ವ್ಯವಸ್ಥೆಯನ್ನು ಒಪ್ಪಿಕೊಂಡರು; ಹಂಪಿ-ವಿಜಯನಗರದ ಪಟ್ಟಣ ಮತ್ತು ಕೋಟೆಗಳ ನಿರ್ಮಾಣದಲ್ಲಿ ತಮ್ಮ ಸಹಕಾರವನ್ನಿತ್ತರು. ಇದರಿಂದ ತೆಲುಗುಪ್ರದೇಶ ಮಾತ್ರ ವಲ್ಲದೆ, ತಮಿಳುನಾಡು, ಕರ್ನಾಟಕದ ಕೋಲಾರ ಮತ್ತಿತರ ಪ್ರದೇಶಗಳು ವಿಜಯನಗರದ ಆಧಿಪತ್ಯಕ್ಕೆ ಒಳಪಟ್ಟು ವಿಶಾಲವಾದ ಸಾಮ್ರಾಜ್ಯ ನಿರ್ಮಾಣಗೊಂಡಿತು. ಕರ್ನಾಟಕದ ವ್ಯಾಪ್ತಿಯಲ್ಲಿ ಬೇಡನಾಯಕರು ಪ್ರಧಾನ ಪಾತ್ರವಹಿಸಿದರು.

ವಿಜಯನಗರ ಚರಿತ್ರೆಯ ಮಟ್ಟಿಗೆ, ಆರಂಭದಲ್ಲಿದ್ದ ಬಹುಪಾಲು ನಾಯಕರು ಕನ್ನಡಿಗರು; ಆ ನಂತರ ತೆಲುಗುಮೂಲದ ನಾಯಕರು ಕಾಣಿಸಿಕೊಂಡರೆಂದು ಹೇಳುತ್ತಾರೆ ಇತಿಹಾಸಕಾರರು. ವಿಜಯನಗರ ಅಳವಡಿಸಿಕೊಂಡ ನಾಯಂಕರ ಪದ್ಧತಿಯನ್ನು ಕನ್ನಡ ಮತ್ತು ತಮಿಳುಭಾಷೆಗಳಲ್ಲಿ ನಾಯಕತನ / ನಾಯಕತನಮ್(<ನಾಯಕಟ್ಟನಮ್) ಎಂದು ಕರೆದಿದ್ದರೆ, ತೆಲುಗಿನಲ್ಲಿ ಇದನ್ನು ನಾಯಂಕರಮ್ ಎನ್ನಲಾಯಿತು. ಈ ನಾಯಕ / ನಾಯಂಕರ ವ್ಯವಸ್ಥೆಯು ಪೂರ್ಣಪ್ರಮಾಣದಲ್ಲಿ ರೂಪುಗೊಂಡುದು ಕೃಷ್ಣದೇವರಾಯನ ಕಾಲದಲ್ಲಿ.

* * *

ಭಾರತದ ಮಧ್ಯಕಾಲೀನ ಚರಿತ್ರೆಯಲ್ಲಿ, ಮುಖ್ಯವಾಗಿ ದಖನ್ ರಾಜಕೀಯ ಬೆಳವಣಿಗೆ ಗಳಲ್ಲಿ ನಾಯಕರು ಅಥವಾ ಪಾಳೆಯಗಾರರು ನಿರ್ವಹಿಸಿದ ಪಾತ್ರ ಗಮನೀಯವಾದುದೆನ್ನಲು ಅಡ್ಡಿಯಿಲ್ಲ. ಮೊಗಲ್ ಸಾಮ್ರಾಟ ಔರಂಗಜೇಬನ ವಿರುದ್ಧ ಸೆಟೆದು ನಿಂತ ಮರಾಠಾ ಪ್ರಭುತ್ವಕ್ಕೆ ಇವರು ತಮ್ಮ ನಿಷ್ಠೆಯನ್ನು ತೋರಿದ ಪರಿಣಾಮವಾಗಿ ದಕ್ಷಿಣದ ಮುಸ್ಲಿಂ ಆಕ್ರಮಣಕಾರರ ಪ್ರಾಬಲ್ಯವನ್ನು ಮುರಿಯಲು ಇತರ ಅರಸರಿಗೆ ಸಾಧ್ಯವಾಯಿತೆಂದು ವ್ಯಕ್ತಪಡುತ್ತದೆ.

ಬೇಡದೊರೆಗಳ ಅಥವಾ ನಾಯಕರ ವರ್ಚಸ್ಸನ್ನು ಕುಗ್ಗಿಸಲು ಸತತ ಪ್ರಯತ್ನಿಸಿದವರಲ್ಲಿ ಶ್ರೀರಂಗಪಟ್ಟಣದ ನವಾಬರು ಹಾಗೂ ಇಂಗ್ಲಿಷರು ಮುಖ್ಯರು. ಬೇಡ ಸಂಸ್ಥಾನಿಕರು ತಮ್ಮ ಮಧ್ಯೆಯೇ ಪರಸ್ಪರ ಕಚ್ಚಾಡಿ ನಾಶಗೊಳ್ಳುವಂತೆ ನವಾಬ್ ಹೈದರ್‌ಅಲಿಖಾನ್ ಮತ್ತು ಟಿಪ್ಪುಸುಲ್ತಾನರು ಹುನ್ನಾರ ನಡೆಸಿದರೆ, ಶಸ್ತ್ರೋಪಜೀವಿಗಳಾದ ನಾಯಕರನ್ನು ಶಸ್ತ್ರರಹಿತರನ್ನಾಗಿಸಿ ದುರ್ಬಲಗೊಳಿಸುವ ಇಂಗ್ಲಿಷರ ಹವಣಿಕೆ ಅವರಿಗೇ ತಿರುಗುಬಾಣ ವಾದುದನ್ನು ಚರಿತ್ರೆ ಹೇಳುತ್ತದೆ. ಹೈದರ್‌ಅಲಿಯು ಪಾಳೆಯಗಾರರ ವಿರೋಧಿಯಾಗಿದ್ದರೂ ತನ್ನ ರಾಜಕೀಯ ಲಾಭಕ್ಕಾಗಿ ಅವರನ್ನು ಸಂದರ್ಭಾನುಸಾರ ಬಳಸಿಕೊಳ್ಳುತ್ತಿದ್ದ; ತನ್ನ ವಿರೋಧಿಗಳನ್ನು ಬಗ್ಗುಬಡಿಯಲು ಪಾಳೆಯಗಾರರ ದಂಡನ್ನು ನಿಯೋಜಿಸುತ್ತಿದ್ದ. ೧೭೬೭ ಸೆಪ್ಟೆಂಬರ್ ೨೬ರ ರಹಸ್ಯವರದಿಗಳು ತಿಳಿಸುವಂತೆ, ಹೈದರ್‌ನ ಸೇನೆಯು ೫೦೦೦ ಮಂದಿ ಬೇಡಯೋಧರನ್ನು ಒಳಗೊಂಡಿದ್ದಿತು.

ನಾಯಕ ಪಾಳೆಯಗಾರರಿಗೆ ಸಂಬಂಧಿಸಿದಂತೆ ಇಂಗ್ಲಿಷರ ಕಾರ್ಯನೀತಿಯಾದರೂ ಹೈದರ್‌ಅಲಿಗಿಂತ ಭಿನ್ನವಾಗಿರಲಿಲ್ಲ. ಪಾಳೆಯಗಾರರೆಲ್ಲರೂ ದರೋಡೆಕೋರರೆಂದು ನಿರ್ಣಯಿಸಿದ್ದವರು ಈ ಇಂಗ್ಲಿಷರು. ಹೈದರ್‌ಅಲಿಯ ಪ್ರಾಬಲ್ಯವನ್ನು ಮುರಿಯಲೋಸುಗ ಮಾತ್ರ ಪಾಳೆಯಗಾರರ ಸೈನಿಕ ನೆರವನ್ನು ನೆಚ್ಚಿಕೊಂಡ ಇಂಗ್ಲಿಷರು, ಬೇಡಪಡೆಗಳ ಬಗೆಗೆ ಸದಾ ಸಂಶಯಗ್ರಸ್ತರಾಗಿರುತ್ತಿದ್ದುದು ಸಹಜ. ಆದರೆ ಪಾಳೆಯಗಾರ ಸಂಸ್ಥಾನಗಳ ಮೇಲೆ ಹಿಡಿತ ಸಾಧಿಸುವ ಅವರ ಉಪಾಯ ಮತ್ತು ಪ್ರಯತ್ನಗಳು ಪೂರ್ತ ಯಶಸ್ವಿಯಾಗಲಿಲ್ಲ ವೆನ್ನುವುದು ಗಮನಾರ್ಹ. ಈ ಕಾರಣಕ್ಕಾಗಿಯೇ ಕಡೆಯಲ್ಲಿ ಇಂಗ್ಲಿಷರು ಕಂಡುಕೊಂಡ ಮಾರ್ಗೋಪಾಯವೆಂದರೆ, ಈ ಪಾಳೆಯಗಾರರನ್ನು ಕಂದಾಯ ಸಂಗ್ರಹಣಾಧಿಕಾರಿಗಳನ್ನಾಗಿ ನಿಯೋಜಿಸಿಕೊಂಡುದು; ಹಾಗೂ ಅವರಿಗೆ ಸ್ವತಂತ್ರಾಧಿಕಾರ ನೀಡುವುದರೊಡನೆ ಇತರ ಪಾಳೆಯಗಾರರ ಮೇಲೆ ಆಧಿಪತ್ಯ ಸ್ಥಾಪಿಸಲು ಅವಕಾಶ ಮಾಡಿಕೊಟ್ಟುದು. ಇಷ್ಟಲ್ಲದೆ, ಪಾಳೆಯಗಾರ ಮನೆತನದವರಿಗೆ ಜಹUರು ಮತ್ತು ರಾಜಧನಗಳನ್ನು ಗೊತ್ತುಪಡಿಸಿ, ಸ್ಥಳೀಯವಾಗಿ ಅವರ ಸಹಾಯ-ಸಹಕಾರಗಳನ್ನು ಉಳಿಸಿಕೊಳ್ಳುವುದು ಸಹಾ ಅವರಿಗೆ ಮುಖ್ಯವೆನಿಸಿತು.

ಆದರೆ ಅಸಂಘಟಿತ ನೆಲೆಯಲ್ಲಿ ಸೊರಗಿಹೋಗಿದ್ದ ದಕ್ಷಿಣಭಾರತದ ನಾಯಕ ಪಾಳೆಯ ಗಾರರು, ಇಂಗ್ಲಿಷರ ರಾಜಕೀಯ ಇಚ್ಛಾಶಕ್ತಿಯ ಎದುರು ಒಗ್ಗೂಡಿ ಹೋರಾಡುವ ಸಾಮರ್ಥ್ಯವಿಲ್ಲದವರೆನಿಸಿದುದು ವಾಸ್ತವ. ಬಹಳಷ್ಟು ಮಂದಿ ಪಾಳೆಯಗಾರರು ಸದ್ದಿಲ್ಲದೆ ತೆರೆಮರೆಗೆ ಸರಿದು ತಮ್ಮ ಚಹರೆಗಳನ್ನು ಪೂರ್ತ ಕಳೆದುಕೊಂಡರೆ, ಉಳಿದ ಪಾಳೆಯಗಾರರು ಜೀವನಾಂಶವನ್ನೊ ತೆರಿಗೆರಹಿತ ಭೂಹಿಡುವಳಿಯನ್ನೊ ಪಡೆದುಕೊಳ್ಳುವುದರೊಡನೆ ಸ್ಥಿತ್ಯಂತರಗೊಂಡ ರಾಜಕೀಯ ಪರಿಸರಕ್ಕೆ ಹೊಂದಿಕೊಂಡರು. ಪಾಳೆಯಗಾರಶಾಹಿಯು ಜಮೀನ್ದಾರಿ ವ್ಯವಸ್ಥೆಗೆ ಪೂರಕವೆಂಬಂತೆ ಕಂಡುಬಂದುದೊಂದು ಗಮನಾರ್ಹ ಬೆಳವಣಿಗೆ.

* * *

ದೇಶೀಯ ದಾಖಲೆಗಳು, ಸಾಹಿತ್ಯಕೃತಿಗಳು ಸಹಾ ಪಾಳೆಯಗಾರರ ಮೂಲ ಸ್ವಭಾವ, ಬದುಕನ್ನು ಕುರಿತು ನಾನಾ ತೆರನಲ್ಲಿ ವರ್ಣಿಸುತ್ತವೆ. ಇವುಗಳಲ್ಲಿ ಬೇಡ ಸಮುದಾಯದ ನಾಯಕ ಪಾಳೆಯಗಾರರಿಗೆ ಸಂಬಂಧಿಸಿದ ವಿವರಗಳೇ ಹೆಚ್ಚು. ಬೇಡಕುಲವನ್ನು, ಬೇಡ ರರನ್ನು ಭೀಭತ್ಸ ರೀತಿಯಲ್ಲಿ ಚಿತ್ರಿಸುವ ಪರಿಪಾಠ ಹಿಂದಿನಿಂದಲೂ ಇದ್ದು, ಜನಸಾಮಾನ್ಯ ರಲ್ಲೂ ಇಂಥದೇ ದೃಷ್ಟಿ ಸ್ಥಿರವಾಗಿರುವಂತೆ ಮಾಡುವಲ್ಲಿ ಕೆಲವು ಸಾಹಿತ್ಯಕೃತಿಗಳು ಪರಿಣಾಮಕಾರಿ ಪಾತ್ರ ನಿರ್ವಹಿಸಿವೆ.

ಈ ಮಟ್ಟಿಗೆ, ಕೆಲವು ದೇಶಿ ಚರಿತ್ರಕಾರರೂ ಹಿಂದೆ ಬಿದ್ದಿಲ್ಲ. ದುರ್ಭೇದ್ಯ ದುರ್ಗಗಳುಳ್ಳ ಬೆಟ್ಟ-ಕಾಡುಗಳಲ್ಲಿ ವಾಸಮಾಡುತ್ತಿದ್ದ ಬೇಡಪಡೆಯವರನ್ನು ಕ್ರೂರಿಗಳೆಂದು, ಸುಲಿಗೆಕೋರ ರೆಂದು, ನರಹಂತಕರೆಂದು ಹೀಗೆ ನಾನಾ ವಿಧದಲ್ಲಿ ವರ್ಣಿಸುವ ಇಂಥಾ ಚರಿತ್ರಕಾರರು, ಈ ಬೇಡಪಡೆಯವರು ಹಿಂದೂ ಸಾಮಂತವರ್ಗಕ್ಕೆ ಸೇರಿದ ಸಾಹಸಿಗಳೆಂದು, ನಿಸ್ಸೀಮ ದೈವಭಕ್ತರೆಂದು, ಗುಡಿ-ದೇಗುಲ-ಮಠ-ಮಾನ್ಯಗಳ ನಿಸ್ಪೃಹ ರಕ್ಷಕರೆಂದು, ಧರ್ಮ-ಸಂಸ್ಕೃತಿ ಗಳ ಮಹಾಪೋಷಕರೆಂದು, ಮಹಾಪ್ರಭುಗಳ ನಿಷ್ಠಾವಂತ ಅನುಯಾಯಿಗಳೆಂದು ತಮ್ಮ ಬರವಣಿಗೆಗಳಲ್ಲಿ ಕೊಂಡಾಡುತ್ತಾರೆ. ‘ಸನಾತನ ಧರ್ಮರಕ್ಷಕ’ರೆಂಬ ಹಣೆಪಟ್ಟಿ ಹಚ್ಚಿ, ಹಿಂದೂ ಕಲ್ಪನೆಯ ಚರಿತ್ರೆಯ ತೆಕ್ಕೆಯಲ್ಲಿ ಬಂಧಿಸಿಟ್ಟಿರುವವರೇ ಬೇಡದೊರೆಗಳನ್ನು ಕುರಿತು ಈ ಥರದ ವರ್ಣನೆಗಳ ಮೂಲಕ ಲೇವಡಿಗೊಳಪಡಿಸುವ ಪ್ರಯತ್ನ ಕೈಗೊಂಡಿರುವುದುಂಟು.

ಇನ್ನೊಂದು ಪ್ರಮುಖ ಅಂಶವೆಂದರೆ, ಸದ್ಯದ ಮಾಹಿತಿಯ ಪ್ರಕಾರ, ತೆರೆಮರೆಗೆ ಸರಿದ ಹಾಗೂ ಜೀವಂತ ಪಾಳೆಯಪಟ್ಟುಗಳ ಸಂಖ್ಯೆ ಇನ್ನೂರನ್ನು ಮುಟ್ಟುತ್ತದೆ. ಇವೆಲ್ಲವೂ ಈಗಿನ ಕರ್ನಾಟಕದ ವ್ಯಾಪ್ತಿಯಲ್ಲಿ ಬರುವಂಥವು. ಇವುಗಳಲ್ಲಿ ಬೇಡನಾಯಕರ ಸಂಖ್ಯೆಯೇ ನೂರನ್ನು ಮೀರುತ್ತದೆ. ಇಲ್ಲಿಯ ಪ್ರಶ್ನೆಯೆಂದರೆ, ಪಾಳೆಯಗಾರರನ್ನು ಕುರಿತ ಅಧ್ಯಯನದಲ್ಲಿ ಇಷ್ಟು ಮಂದಿ ಸಂಸ್ಥಾನಿಕರನ್ನು ಗುರುತಿಸಲಾದೀತೆ? ಇನ್ನು ದಕ್ಷಿಣ ಭಾರತದಾದ್ಯಂತ ಕಂಡುಬರುವ ಬೇಡನಾಯಕರನ್ನು ಕುರಿತು ಸಮಗ್ರವಾಗಿ ಪರಿಶೀಲಿಸಲಾದೀತೆ? ಈ ಕಾರಣವಾಗಿ, ಇವರನ್ನು ಕುರಿತು ಚಿತ್ರಿಸುವಾಗಲೆಲ್ಲ ನಮ್ಮ ಬಹುಪಾಲು ದೇಶಿ ಚರಿತ್ರಕಾರರು ತಕ್ಕಮಟ್ಟಿಗಾದರೂ ಗೊಂದಲಕ್ಕೊಳಗಾಗುವುದುಂಟು. ಮಾಹಿತಿಯ ಕೊರತೆಯಂತೂ ಅಪಾರ. ಒಂದು ಪ್ರದೇಶದ ಆಡಳಿತ ವ್ಯವಸ್ಥೆಯಲ್ಲಿ ಈ ನಾಯಕರು ನಿರ್ವಹಿಸುತ್ತಿದ್ದ ಜವಾಬ್ದಾರಿಯ ಸ್ವರೂಪ ಇವರಿಗೆ ಸರಿಯಾಗಿ ಅರ್ಥವಾಗದಿರುವುದಕ್ಕೆ ಇದು ಒಂದು ಕಾರಣವೆಂದಾದರೆ, ಕೆಲವೊಮ್ಮೆ ಈ ಸ್ಥಳೀಯ ಪ್ರಭುಗಳು ಸ್ವತಂತ್ರ ಅರಸರಂತೆ ಕಾರ್ಯಮಗ್ನರಾಗುತ್ತಿದ್ದುದೂ ವರ್ತಿಸುತ್ತಿದ್ದುದೂ ಇದಕ್ಕೆ ಇನ್ನೊಂದು ಕಾರಣವಿರಬಹುದು. ಅಲ್ಲದೆ, ಇಂಗ್ಲಿಷ್ ಆಡಳಿತಗಾರರು, ಗ್ರಂಥಕರ್ತರು ಮೊದಲಾದವರು ಬೇಡಪಾಳೆಯಗಾರ ರನ್ನು ಕುರಿತು ವಿಕಾರವಾಗಿ ಚಿತ್ರಿಸಿರುವುದೂ ದೇಶಿ ಚರಿತ್ರಕಾರರ ಆಲೋಚನೆಗಳು ಹಳಿ ತಪ್ಪಲು ಕಾರಣವೆನಿಸಿರುವುದುಂಟು. ಆದ್ದರಿಂದ ಇಂಥಾ ಚರಿತ್ರಕಾರರು ದ್ವಂದ್ವ ನಿಲುವು ತಳೆಯುವಂತಾಗಲು ಸಮಗ್ರ ಅಧ್ಯಯನದ ಕೊರತೆ ಹಾಗೂ ನಿರ್ದಿಷ್ಟ ತಿಳಿವಳಿಕೆಯ ಅಭಾವವೇ ಕಾರಣ ಎನ್ನಬಹುದು. ಬೇಡ ಪಾಳೆಯಗಾರರೆಂದರೆ ನಿಷ್ಕರುಣಿಗಳೆಂದು ಜರೆಯುವ ಕೆಲವು ದೇಶಿ ಚರಿತ್ರಕಾರರು ಇಂಗ್ಲಿಷ್ ಗ್ರಂಥಕರ್ತರ ಅನುಯಾಯಿಗಳಂತಿದ್ದು, ಪಾಳೆಯಗಾರರ ವಿಷಯದಲ್ಲಿ ಸ್ವತಃ ತಾವೇ ನಿಷ್ಕರುಣಿಗಳಂತಿರುವುದು ವಿಪರ್ಯಾಸ. ಅರೆಬರೆ ತಿಳಿವಳಿಕೆಯು ವಿದ್ವಾಂಸರಲ್ಲಿ ಆಲಸ್ಯವನ್ನೂ ಅವಿವೇಕವನ್ನೂ ಅಲಕ್ಷ್ಯತನವನ್ನೂ ಉಂಟುಮಾಡಬಲ್ಲದು.

ಊಳಿಗಮಾನ್ಯ ವ್ಯವಸ್ಥೆಯ ಮೂಲಕ ತನ್ನ ಹುಟ್ಟನ್ನು ಕಂಡುಕೊಂಡ ಪಾಳೆಯಗಾರ ಶಾಹಿಯ ವಿರುದ್ಧ ಇಂಗ್ಲಿಷ್ ಅಧಿಕಾರಿಗಳ ಮತ್ತು ಬರಹಗಾರರ ಅಸಮಾಧಾನಕ್ಕೆ ಇದ್ದಿರುವ ಪ್ರಮುಖ ಕಾರಣವಾದರೂ ಏನು? ಒಂದು ಮಾತಿನಲ್ಲಿ ಹೇಳುವುದಾದರೆ, ಭಾರತೀಯ ಪಾಳೆಯಗಾರಶಾಹಿಯು ಇಂಗ್ಲಿಷ್ ವಸಾಹತುಶಾಹಿಯೊಡನೆ ಮುಖಾಮುಖಿಯಾದುದೇ ಕಾರಣ. ಈ ಬಗೆಗೆ ಪ್ರತ್ಯೇಕವಾಗಿ ಹಾಗೂ ದೀರ್ಘವಾಗಿ ವಿವರಿಸುವ ಅಗತ್ಯವಿರುವುದರಿಂದ ಅದನ್ನು ಇಲ್ಲಿ ಪ್ರಸ್ತಾಪಿಸದೆ, ದೇಶಿ ಬರಹಗಾರರ ಮೇಲೆ ಪ್ರಭಾವ ಬೀರಿದ ಕೆಲವು ಇಂಗ್ಲಿಷ್ ಅಧಿಕಾರಿಗಳು ಹಾಗೂ ಲೇಖಕರ ಹೆಸರುಗಳನ್ನಷ್ಟೆ ಇಲ್ಲಿ ಉಲ್ಲೇಖಿಸಬಹುದು. ಸರ್ ಥಾಮಸ್ ಮನ್ರೊ, ಎ. ಜೆ. ಅರ್ಬಥ್‌ನಾಟ್, ಡಿ. ಕ್ಯಾಂಪ್‌ಬೆಲ್, ಬೇಡನ್ ಪೊವೆಲ್, ಫ್ರಾನ್ಸಿಸ್ ಬುಕಾನನ್, ಹರ್ಡಿಸ್, ವಿಲ್ಸನ್, ರಾಬರ್ಟ್ ಸಿವೆಲ್, ಸಿ. ಡಿ. ಮ್ಯಾಕ್ಲೀನ್, ಬಿಷಪ್ ಆರ್. ಕಾಲ್ಡ್‌ವೆಲ್, ಜೆ. ಹೆಚ್. ನೆಲ್ಸನ್ ಮೊದಲಾದವರು ತಮ್ಮ ಆಡಳಿತಶಾಹಿ ದೃಷ್ಟಿಕೋನದಿಂದ ಪಾಳೆಯಗಾರಶಾಹಿಯನ್ನು ಅರ್ಥೈಸಲು ಪ್ರಯತ್ನಿಸಿದರು. ತಾವು ಅಧಿಕಾರಕ್ಕೆ ಬರುವ ಮುನ್ನ ಅಥವಾ ಸಂಸ್ಥಾನಗಳನ್ನು ಸ್ಥಾಪಿಸಿಕೊಳ್ಳುವ ಮುನ್ನ ಪಾಳೆಯಗಾರರೆಲ್ಲರೂ ಕೊಳ್ಳೆಕೋರರಾಗಿದ್ದರೆಂಬುದು ಈ ವರ್ಗದವರ ಆರೋಪ. ಮದರಾಸು ಪ್ರಾಂತದ ಕಂದಾಯ ಇಲಾಖೆಯಲ್ಲಿ ಇಂಗ್ಲಿಷ್ ಸರ್ಕಾರದ ಕಾರ್ಯ ದರ್ಶಿಯಾಗಿದ್ದ ಭಾರತೀಯ ಅಧಿಕಾರಿ ದಿವಾನ್ ಬಹಾದ್ದೂರ್ ಎಸ್. ಶ್ರೀನಿವಾಸ ರಾಘವೈಯ್ಯಂಗಾರ್ ಎಂಬಾತನೂ ೧೮೯೨ರಲ್ಲಿ ಸರ್ಕಾರದ ಪರವಾಗಿ ಸಿದ್ಧಪಡಿಸಿದ ತನ್ನ ಮೊಮೋರೆಂಡಮ್‌ನಲ್ಲಿ ಈ ಅಧಿಕಾರಿಗಳ ಜಾಡಿನಲ್ಲಿಯೇ ಸಾಗಿ ಪಾಳೆಯಗಾರಶಾಹಿಯನ್ನು ಟೀಕಿಸಿದ್ದಾನೆ. ಆದರೆ ‘\<uವೆಲ್ಲಿ ಮ್ಯಾನ್ಯುಅಲ್’ ರಚಿಸಿದ ಎ. ಜೆ. ಸ್ಟುವರ್ಟ್ ಅಂಥವರು ಯೂರೋಪಿನ ಫ್ಯೂಡಲ್ ವ್ಯವಸ್ಥೆಗೆ ಪಾಳೆಯಗಾರಶಾಹಿಯನ್ನು ಹೋಲಿಸಿ ಅತ್ಯಂತ ಅರ್ಹ ಸಮರ್ಥನೆ ನೀಡಿರುವುದುಂಟು.

ಹಾಗೆಯೇ, ದಕ್ಷಿಣಭಾರತದ ಪಾಳೆಯಗಾರಶಾಹಿಯನ್ನು ಕುರಿತು ತಕ್ಕಮಟ್ಟಿಗಾದರೂ ಕೆಲಸ ಮಾಡಿರುವ ಆರ್. ಸತ್ಯನಾಥ ಅಯ್ಯರ್, ಟಿ. ವಿ. ಮಹಾಲಿಂಗಂ, ಕೆ. ರಾಜಯ್ಯನ್, ಸಿ. ಎಸ್. ಶ್ರೀನಿವಾಸಾಚಾರಿ, ಪಿ. ಬಿ. ರಾಮಚಂದ್ರರಾವ್, ಬಿ. ಕೇಶವನಾರಾಯಣ, ಕೆ. ವಿಶ್ವನಾಥ, ಸೇತುಮಾಧವರಾವ್ ಪಗಡಿ ಮೊದಲಾದವರು ಪಾಳೆಯಗಾರಶಾಹಿ ಕುರಿತು ನಮ್ಮ ಕೆಲವು ದೇಶಿ ಚರಿತ್ರಕಾರರ ದೃಷ್ಟಿಕೋನ-ಧೋರಣೆಗಳನ್ನು ಬದಲಾಯಿಸುವಲ್ಲಿ ಸಫಲರಾಗಿದ್ದಾರೆನ್ನಬಹುದು. ಆದರೆ ಕರ್ನಾಟಕದ ಮಟ್ಟಿಗೆ, ತಾತ್ವಿಕ ನೆಲೆಯಲ್ಲಿ, ಎಂ. ಎಸ್. ಪುಟ್ಟಣ್ಣ, ಹುಲ್ಲೂರು ಶ್ರೀನಿವಾಸ ಜೋಯಿಸ, ಹೆಚ್. ವಿ. ರನಾಯಕ ‘ಹರತಿ’, ಎಂ. ವಿ. ಚಿತ್ರಲಿಂಗಯ್ಯ ಮೊದಲಾದವರು ಪಾಳೆಯಗಾರಶಾಹಿಯನ್ನು ಸ್ವಲ್ಪಮಟ್ಟಿಗಾದರೂ ವಿಶ್ಲೇಷಿಸಿರುವುದುಂಟು. ಬಿಚ್ಚುಗತ್ತಿ ದೊಡ್ಡಮದಕರಿನಾಯಕ, ಪಾವಗಡದ ವಿ. ರಂಗನಾಯಕ, ದ್ಯಾಮವ್ವನಹಳ್ಳಿಯ ಪಂಡಿತ ರೇವಣ್ಣಶಾಸ್ತ್ರಿ, ಕೃಷ್ಣಮೂರ್ತಿ ಹನೂರು, ಕರಿಶೆಟ್ಟಿ ರುದ್ರಪ್ಪ, ಮೀರಾಸಾಬಿಹಳ್ಳಿ ಶಿವಣ್ಣ, ವಿರೂಪಾಕ್ಷಿ ಪೂಜಾರಹಳ್ಳಿ, ಆರ್. ರಾಜಣ್ಣ, ರಂಗದಾಸ್, ದಳವಾಯಿ ಪರಶುರಾಮನಾಯಕ – ಇಂಥವರು ಬೇಡನಾಯಕರ ಸಾಂಸ್ಕೃತಿಕ ನೆಲೆಗಳನ್ನು ವಿಮರ್ಶಿಸಿರುವುದುಂಟು. ಉಳಿದಂತೆ, ಹಲವಾರು ಪ್ರತಿಷ್ಠಿತ ಸಂಶೋಧಕರು ಹಾಗೂ ಚರಿತ್ರಕಾರರು ಪಾಳೆಯಗಾರರ ಇತಿಹಾಸ, ಸಂಸ್ಕೃತಿ, ಆಡಳಿತ ಸ್ವರೂಪ ಇತ್ಯಾದಿ ಕುರಿತು ಕೃತಿಗಳನ್ನು ರಚಿಸಿರುವರಷ್ಟೆ.

* * *

ಬೇಡನಾಯಕರ ದೈವ, ಮೂಲಪುರುಷ, ರ, ಮನೆತನ, ಸ್ಮಾರಕ ಇತ್ಯಾದಿ ಪ್ರತಿಷ್ಠಿತ ಲಾಂಛನ / ಪ್ರತೀಕಗಳನ್ನು ಜರೆಯುತ್ತಾ, ಆ ಬಗೆಗೆ ಸಾಕಷ್ಟು ಹಗುರವಾಗಿ ಬರೆಯುವ ವರಿಗೇನೂ ಕೊರತೆಯಿಲ್ಲ. ಈವರೆಗೆ ಸರಿಯಾಗಿ ಗ್ರಹಿಸಲಾಗದ ಈ ಸಮುದಾಯದವರ ಚರಿತ್ರೆಯ ಕೆಲವು ಲೋಪ-ದೋಷಗಳನ್ನಷ್ಟೆ ಎತ್ತಿ ಹೇಳುತ್ತಾ ಇವರ ‘ತೇಜೋವಧೆ’ ಮಾಡಲೆತ್ನಿಸುವ ಬರಹಗಳೂ ಸಾಕಷ್ಟಿವೆ. ಬೇಡ ಸಮುದಾಯದ ಶ್ರೇಷ್ಠ ಹಾಗೂ ಹೆಮ್ಮೆಯ ಪ್ರತೀಕ / ಪ್ರತಿನಿಧಿಯೆನಿಸಿರುವ ಕುಮಾರರಾಮನ ಬಗೆಗಿನ ‘ಅಪಸ್ವರ’ ಈಚಿನದು. ಚಿತ್ರದುರ್ಗವೂ ಒಳಗೊಂಡಂತೆ, ತರೀಕೆರೆ / ಸಂತೆಬೆನ್ನೂರು, ಆನೆಗೊಂದಿ ಮೊದಲಾದ ಸಂಸ್ಥಾನಗಳೂ ಇದರಿಂದ ಹೊರತಾಗಿಲ್ಲ. ಮತೀಯ ಸಾಮರಸ್ಯ ಕದಡುವ ಕಾರಣವಾಗಿ ಆಯಾ ಸಂದರ್ಭಗಳಿಗನುಸಾರ ‘ಸೃಷ್ಟಿಸಲಾದ’ ತಾಮ್ರಪತ್ರ / ಜಯರೇಖೆ ಹಾಗೂ ಕಾಗದದ ದಾಖಲೆಗಳೂ ಇಂಥಾ ಉದ್ದೇಶಕ್ಕೆ ಬಳಕೆಗೊಳ್ಳುತ್ತಿರುವುದೊಂದು ಆತಂಕದ ಬೆಳವಣಿಗೆ ಯೆನ್ನಬೇಕು.

ಇವೆಲ್ಲ ಏನೇ ಇದ್ದರೂ ಚಿತ್ರದುರ್ಗ ಜಿಲ್ಲೆಯ ನಾಯಕ ಪಾಳೆಯಗಾರರನ್ನು ಕುರಿತು ತಕ್ಕಮಟ್ಟಿನ ವ್ಯಾಪಕ ಅಧ್ಯಯನ ನಡೆದಿದೆ. ಈ ಜಿಲ್ಲೆಯಲ್ಲಿ ಪ್ರಮುಖವಾಗಿ ಕಂಡುಬರುವ ಚಿತ್ರದುರ್ಗ, ಹರ್ತಿಕೋಟೆ, ನಾಯಕನಹಟ್ಟಿ, ಮತ್ತೋಡು ಸಂಸ್ಥಾನಗಳನ್ನು ಕುರಿತು ಕೃತಿಗಳೂ ಲೇಖನಗಳೂ ಸಂಗ್ರಹಗಳೂ ಪ್ರಕಟಗೊಂಡಿವೆ. ಸಂಶೋಧನ ಮಹಾಪ್ರಬಂಧಗಳೂ ಸಿದ್ಧಗೊಂಡಿವೆ. ಅಲ್ಲದೆ, ಈ ಕಾರ್ಯ ನಿರಂತರವಾಗಿ ನಡೆಯುತ್ತಲೇ ಇದೆ. ಈಗಾಗಲೇ ಪ್ರಸ್ತಾಪಿಸಿದ ಎಂ.ಎಸ್. ಪುಟ್ಟಣ್ಣ, ಹುಲ್ಲೂರು ಶ್ರೀನಿವಾಸ ಜೋಯಿಸ, ಹೆಚ್.ವಿ. ವೀರನಾಯಕ ‘ಹರತಿ’, ಎಂ.ವಿ.ಚಿತ್ರಲಿಂಗಯ್ಯನವರೇ ಅಲ್ಲದೆ, ರಾಜಾ ಬಿಚ್ಚುಕತ್ತಿ ಪರಶುರಾಮಪ್ಪನಾಯಕ, ಬಿ.ಎಸ್. ಶ್ರೀನಿವಾಸನಾಯಕ, ಬಿ.ರಾಜಶೇಖರಪ್ಪ, ಮೀರಾಸಾಬಿ ಹಳ್ಳಿ ಶಿವಣ್ಣ, ಈ ಪ್ರಬಂಧದ ಲೇಖಕ -ಇವರು ಈ ಕ್ಷೇತ್ರದಲ್ಲಿ ವಿಶೇಷವಾಗಿ ತೊಡಗಿಸಿ ಕೊಂಡವರು. ಪರಿಚಯಾತ್ಮಕ ಪುಸ್ತಕಗಳನ್ನು, ಬಿಡಿಲೇಖನಗಳನ್ನು ಪ್ರಕಟಿಸಿರುವವರ ಪಟ್ಟಿ ದೊಡ್ಡದು.

ಚಿತ್ರದುರ್ಗ ಮತ್ತು ಇತರ ಸಂಸ್ಥಾನಗಳ ಬಗೆಗೆ ವಿವಿಧ ನೆಲೆಗಳಲ್ಲಿ ಸಂಶೋಧನೆ ಕೈಗೊಂಡು ಮಹಾಪ್ರಬಂಧಗಳನ್ನು ರಚಿಸಿರುವವರಲ್ಲಿ ಹೆಚ್.ಟಿ. ದೇಶಪಾಂಡೆ, ಹೆಚ್.ಎಂ. ಶಂಭುಲಿಂಗಮೂರ್ತಿ, ಅಮರೇಶ ಯತಗಲ್, ಎಂ.ಕೆ. ದುರುಗಪ್ಪ, ಎಸ್. ತಿಪ್ಪೇಸ್ವಾಮಿ, ಆರ್. ಶಿವಪ್ಪ, ಟಿ. ಮಂಜುನಾಥ್ ಮುಖ್ಯರು. ಎಂ.ವಿ. ಶ್ರೀನಿವಾಸ್, ಎ.ಡಿ. ಕೃಷ್ಣಯ್ಯ, ವಿರೂಪಾಕ್ಷಿ ಪೂಜಾರಹಳ್ಳಿ, ಬಾಗೂರು ಆರ್. ನಾಗರಾಜಪ್ಪ, ಟಿ.ಎನ್.ಗಂಡುಗಲಿ ಅವರ ಕೊಡುಗೆಯೂ ಗಮನೀಯ. ಈಚೆಗೆ ಲಂಡನ್ನಿನ ಬ್ಯಾರಿ ಆರ್. ಲೂಯಿಸ್ ಅವರು ಚಿತ್ರದುರ್ಗ ಕೋಟೆಗೆ ಸಂಬಂಧಿಸಿದ ಕೃತಿಯೊಂದನ್ನು ಪ್ರಕಟಿಸಿದ್ದಾರೆ. ನಾಯಕರ ಇತಿಹಾಸ ವನ್ನಾಧರಿಸಿ ಕಾದಂಬರಿ-ನಾಟಕಗಳನ್ನು ರಚಿಸಿದ ಪ್ರಮುಖರೆಂದರೆ ಗಳಗನಾಥ, ತ.ರಾ.ಸು., ಮರಡಿಹಳ್ಳಿ ಸೀತಾರಾಮರೆಡ್ಡಿ, ಹೆಚ್.ವಿ. ವೀರನಾಯಕ ‘ಹರತಿ’, ಬಿ.ಎಲ್. ವೇಣು ಮತ್ತು ಟಿ. ಗಿರಿಜ. ಪಾಳೆಯಗಾರರ ಪದಗಳನ್ನು ಸಂಗ್ರಹಿಸಿಕೊಟ್ಟ ಕರಾಕೃ ಅವರನ್ನು ಮರೆಯಲಾಗುವುದಿಲ್ಲ.

* * *

ಕೊನೆಯದಾಗಿ ಹೇಳಬಹುದಾದ ಮಾತೆಂದರೆ, ಚಿತ್ರದುರ್ಗ ಜಿಲ್ಲೆಯನ್ನೂ ಒಳ ಗೊಂಡಂತೆ, ಕರ್ನಾಟಕದ ಬೇಡ ಸಂಸ್ಥಾನಿಕರನ್ನು ಕುರಿತ ಅಧ್ಯಯನಗಳು ಸಮಗ್ರವಾಗಿದ್ದರೂ ಸಾಕಷ್ಟು ಕೊರತೆಗಳಿಂದ ಕೂಡಿವೆ. ಇದು ಜನಇತಿಹಾಸ ಬರವಣಿಗೆಯ ಕಾಲ. ಕೆಳಸ್ತರದ ಚರಿತ್ರೆಯ ವ್ಯಾಪ್ತಿಗೆ ಬೇಡ ಸಮುದಾಯದವರೂ ಬರುತ್ತಾರೆ. ಈವರೆಗೆ ಅವರನ್ನು ಚಾರಿತ್ರಿಕ, ಸಾಂಸ್ಕೃತಿಕ ನೆಲೆಗಳಿಂದ ವಿಶ್ಲೇಷಿಸಲಾಗಿದೆ. ಸಾಮಾಜಿಕ ಸ್ಥಿತಿ-ಗತಿಗಳ ಬಗೆಗೂ ತಕ್ಕಮಟ್ಟಿಗೆ ಅಧ್ಯಯನಿಸಲಾಗಿದೆ. ರಾಜಕೀಯವಾಗಿ ಅವರನ್ನು ಇನ್ನೂ ಸಂಪೂರ್ಣ ಅರಿಯಲಾಗಿಲ್ಲ. ಈಗ ಶೈಕ್ಷಣಿಕ, ಆರ್ಥಿಕ ನೆಲೆಗಳಿಂದ ಕಾಣುವ ಕಾರ್ಯ ಬಾಕಿ ಉಳಿದಿದೆ. ಅಲ್ಲದೆ, ಹೊಸ ಆಕರಗಳ ಶೋಧಕಾರ್ಯ ಮುಂದುವರೆಯಬೇಕಿದೆ. ಆಧುನಿಕ ಅಧ್ಯಯನ ವಿಧಾನದ ಅಳವಡಿಕೆ, ಹೊಸ ಪರಿಕಲ್ಪನೆ-ಪರಿಪ್ರೇಕ್ಷ್ಯಗಳ ಬಳಕೆ;  ಮುಖ್ಯವಾಗಿ, ಪಾಳೆಯಗಾರರ ಅಧ್ಯಯನದ ಬಗೆಗಿನ ದೃಷ್ಟಿಕೋನಗಳ ಸುಧಾರಣೆ ತೀರಾ ಅಗತ್ಯ. ಹಾಗೆಯೇ, ಕೇವಲ ಪ್ರಾದೇಶಿಕ ಹಾಗೂ ಜನಾಂಗಿಕ ಇತಿಹಾಸದ ವ್ಯಾಪ್ತಿಯಲ್ಲಷ್ಟೇ ಈ ನಾಯಕ ಪಾಳೆಯಗಾರ ರನ್ನು ಗುರುತಿಸದೆ, ಸಮಗ್ರ ಇತಿಹಾಸದ ನೆಲೆಯಲ್ಲಿಟ್ಟು ಚಿತ್ರಿಸುವುದು ಸೂಕ್ತ. ಯೋಧ ಜನಾಂಗವೆಂಬಂತೆ ನಿರೂಪಿಸುವಾಗ, ಈ ಸಮುದಾಯದ ರರನ್ನು ಹಿಂದೂ ಉಗ್ರಗಾಮಿ ಗಳಂತೆ ಕಾಣಿಸುವ ಧೋರಣೆ ಬದಲಾಗಬೇಕಿದೆ. ಚಾರಿತ್ರಿಕ ವಾಸ್ತವವನ್ನು ಈ ಸಮುದಾಯದ ಅಧ್ಯಯನದ ಹಿನ್ನೆಲೆಯಲ್ಲಿಯೂ ಅರಿಯುವಂತಾಗಬೇಕು.

ಬೇಡ ಸಮುದಾಯದ ಸಾಂಸ್ಕೃತಿಕ ಮತ್ತು ಜಾನಪದೀಯ ಅಧ್ಯಯನಗಳೂ ನಡೆದಿವೆ. ಧಾರ್ಮಿಕವಾಗಿ, ಈ ಸಮುದಾಯದವರು ವೈಷ್ಣವ, ಶ್ರೀವೈಷ್ಣವ ಹಾಗೂ ಶೈವಪಂಥಗಳನ್ನು ಸಮಾನವಾಗಿ ಅನುಸರಿಸಿದುದನ್ನು, ಗೌರವಿಸಿದುದನ್ನು ನೋಡುತ್ತೇವೆ. ಆದರೆ ಕೆಲವು ಮತಾಂತರ ಸಂದರ್ಭಗಳನ್ನು ಹೊರತುಪಡಿಸಿದರೆ, ಈ ಸಮುದಾಯದವರು ಚರಿತ್ರೆಯ ಉದ್ದಕ್ಕೂ ಯಾವ ಸನ್ನಿವೇಶದಲ್ಲೂ ತಮ್ಮ ಮೂಲ ಬುಡಕಟ್ಟು ಸಂಸ್ಕೃತಿಯ ಆಚರಣೆ ಗಳನ್ನು ಬಿಟ್ಟುಕೊಡಲಿಲ್ಲವೆನ್ನುವುದು ಗಮನಾರ್ಹ. ವೈದಿಕ ಬ್ರಾಹ್ಮಣತ್ವ ಅಥವಾ ಬ್ರಾಹ್ಮಣಿಕ ಹಿಂದುತ್ವ ಈ ಸಮುದಾಯದ ಮೇಲೆ ಪ್ರಭಾವ ಬೀರಿತೇ ವಿನಾ ಇದನ್ನು ತನ್ನ ತೆಕ್ಕೆಗೆ ತಂದುಕೊಳ್ಳಲು, ಸುಧಾರಿಸಲು ಹವಣಿಸಲಿಲ್ಲ. ಆದರೆ ಈ ಸಮುದಾಯಕ್ಕೆ ಹಿಂದೂ ರಕ್ಷಕರೆಂಬ ಹಣೆಪಟ್ಟಿ ಹಚ್ಚುವಲ್ಲಿ ಮಾತ್ರ ಹಿಂದುಳಿಯಲಿಲ್ಲ. ಬಹುಸಾಂಸ್ಕೃತಿಕತೆಯ ಪ್ರತೀಕವೆನಿಸಿರುವ ಜನಪದ ಸಂಸ್ಕೃತಿಯ ಎಲ್ಲ ಗುಣ-ಲಕ್ಷಣಗಳೂ ಬೇಡ ಸಮುದಾಯ ದವರ ಆಚರಣೆಗಳಲ್ಲಿ ಕಂಡುಬರುತ್ತವೆ. ಅಲ್ಲದೆ, ಪ್ರಾಣಿಬಲಿ, ಸಿಡಿ ಆಚರಣೆ, ಕೆಂಡಾಚರಣೆ ಯಂಥಾ ಕ್ರೂರಪದ್ಧತಿಗಳು ಇವರ ಆಚರಣೆಗಳಲ್ಲಿ ಸೇರಿಹೋಗಿರುವುದರಿಂದ, ಈ ಸಮುದಾಯವು ಸಹಾ ಕೆಲವು ಶಿಷ್ಟಾಚರಣೆಗಳಿಂದ ದೂರವೇ ಉಳಿಯುವಂತಾಯಿತು.

ಪ್ರಸ್ತುತ ಸಂದರ್ಭದಲ್ಲಿ, ಬೇಡ ಸಮುದಾಯವು ಪ್ರಗತಿಯತ್ತ ದಾಪುಗಾಲು ಹಾಕುತ್ತಿದೆ. ಅದು ತನ್ನ ಪೂರ್ವಸ್ಥಿತಿಯನ್ನು ಸಮರ್ಪಕವಾಗಿ ಅರಿತುಕೊಂಡಿದೆ; ಸಮಕಾಲೀನತೆಗೆ ಸ್ಪಂದಿಸುತ್ತಿದೆ. ಈ ಸಮುದಾಯದ ಪ್ರತಿಭಾವಂತರು, ಬುದ್ದಿಜೀವಿಗಳು, ಹಿರಿಯ ನೇತಾರರು ಯುವಪೀಳಿಗೆಯನ್ನು ಭವಿಷ್ಯದ ಸವಾಲುಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಸಮರ್ಥ ಮಾರ್ಗದರ್ಶನ ನೀಡುತ್ತಲಿದ್ದಾರೆ. ಬುಡಕಟ್ಟು ಮೂಲದ ಬೇಡ ಸಮುದಾಯವು, ಕೆಲವು ಸಮಾಜಶಾಸ್ತ್ರಜ್ಞರು ಗುರುತಿಸುವಂತೆ, ಸಂಸ್ಕೃತೀಕರಣದತ್ತ ಚಲಿಸುತ್ತಿದೆ. ಆದರೆ ಸಂಸ್ಕೃತೀಕರಣವೆಂಬ ಪರಿಕಲ್ಪನೆ ಈಗ ಅಪ್ರಸ್ತುತವೆನಿಸಿದ್ದು, ಅದರಾಚೆಗೆ ಪ್ರಚಲಿತವಿರುವ ಆಧುನೀಕರಣದತ್ತಲೂ ಚಲಿಸುತ್ತಿದೆ. ಏನೇ ಇದ್ದರೂ ವರ್ತಮಾನದ ಸವಾಲುಗಳನ್ನು ನಿಭಾಯಿಸುವಲ್ಲಿ ಹಾಗೂ ಭವಿಷ್ಯದ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವಲ್ಲಿ ಕರ್ನಾಟಕದ, ಮುಖ್ಯವಾಗಿ ಚಿತ್ರದುರ್ಗ ಜಿಲ್ಲೆಯ ಬೇಡ ಸಮುದಾಯ ಇನ್ನಷ್ಟು ಸಿದ್ಧಗೊಳ್ಳಬೇಕಿದೆ; ಸಮಾಜದ ಇತರ ಸಮುದಾಯಗಳೊಡನೆ ಸಮನ್ವಯತೆ ಸಾಧಿಸಿ ಮುನ್ನಡೆಯಲು, ಮಾರ್ಗದರ್ಶನ ನೀಡಲು ಸನ್ನದ್ಧಗೊಳ್ಳಬೇಕಿದೆ.

ಬಳಸಿಕೊಂಡದ್ದು

ಎಂ.ಎಸ್.ಪುಟ್ಟಣ್ಣ, ೧೯೨೩, ಪಾಳಯಗಾರರು : ಐದು ಉಪನ್ಯಾಸಗಳು, ಬೆಂಗಳೂರು.

ಎ.ವಿ.ವೆಂಕಟರತ್ನಂ, ೧೯೭೪, ವಿಜಯನಗರ ಸಾಮ್ರಾಜ್ಯದಲ್ಲಿ ಸ್ಥಳೀಯ ಸರ್ಕಾರ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

ಹೆಚ್.ವಿ.ರನಾಯಕ ‘ಹರತಿ’, ೧೯೮೭, ಕ್ಷಾತ್ರಾಂಶ ಪ್ರಬೋಧ, ವಾಲ್ಮೀಕಿ ಸಾಹಿತ್ಯ ಸಂಪದ, ಹರ್ತಿಕೋಟೆ.

– ೧೯೮೭, ರಾಷ್ಟ್ರಸೇವೆಯಲ್ಲಿ ನಾಯಕ ಜನಾಂಗ, ವಾಲ್ಮೀಕಿ ಸಾಹಿತ್ಯ ಸಂಪದ, ಹರ್ತಿಕೋಟೆ

ಕೃಷ್ಣಮೂರ್ತಿ ಹನೂರು, ೧೯೯೩, ಮ್ಯಾಸಬೇಡರ ಸಂಸ್ಕೃತಿ, ಕರ್ನಾಟಕ ಸಾಹಿತ್ಯ ಅಕಾದೆಮಿ, ಬೆಂಗಳೂರು.

ಕರಿಶೆಟ್ಟಿ ರುದ್ರಪ್ಪ, ೧೯೯೫, ಮ್ಯಾಸನಾಯಕರು: ಒಂದು ಜನಾಂಗಿಕ ಅಧ್ಯಯನ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ಲಕ್ಷ್ಮಣ್ ತೆಲಗಾವಿ, ಚಿತ್ರದುರ್ಗ ನಾಯಕ ಅರಸರ ಚರಿತ್ರೆ ಮತ್ತು ಸಂಸ್ಕೃತಿ, ಚಿತ್ರಕಲ್ಲು ಪ್ರಕಾಶನ, ಚಿತ್ರದುರ್ಗ.

– ೨೦೦೪, ಚಿತ್ರದುರ್ಗ ಜಿಲ್ಲಾ ಇತಿಹಾಸ ಅಧ್ಯಯನದ ವ್ಯಾಪಕತೆ ಮತ್ತು ಸಾಧ್ಯತೆ : ಒಂದು ಶತಮಾನ, ವಾಲ್ಮೀಕಿ ಸಾಹಿತ್ಯ ಸಂಪದ, ಹರ್ತಿಕೋಟೆ.

– ೨೦೦೪, ಇತಿಹಾಸಕಾರ ಹೆಚ್. ವಿ. ರನಾಯಕ ಹರತಿ’, ವಾಲ್ಮೀಕಿ ಸಾಹಿತ್ಯ ಸಂಪದ, ಹರ್ತಿಕೋಟೆ.

P. B. Ramachandra Rao, 1944, The Poligars of Mysore and Their Civilization, Palaniappa Brothers, Tappakulam, Trichinopoly.

N. G. Ranga, 1971, Kakatiya NayaksTheir Contribution to Dakshinapatha’s Independence (1300-1370 A.D.), Nidubrolu (A.P.).

K. Rajayyan, 1974, Rise and Fall of the Poligars of Tamilnadu, University of Madras, Madras.

K. Arangasamy & T.P.J. Bharathi (Ed.), 1983, Poligars and Pattagarers, Society of South Indian History, Velur (Salem).

R. Sathyanatha Aiyar, 1991, History of the Nayaks of Madura, Asian Educational Services, New Delhi.

J. C. Dua, 1996, Palegars of South India: Forms and Contents of Their Resistance in Ceded Districts, Reliance Publishing House, New Delhi.

* * *