ಸಂಸ್ಕೃತಿಯ ವಿಕಾಸದ ಎಲ್ಲಾ ಹಂತಗಳ ವಿವಿಧ ವೃತ್ತಿಗಳನ್ನು ಇಂದಿಗೂ ಉಳಿಸಿಕೊಂಡಿರುವ ಏಕೈಕ ಸಮುದಾಯ ಬೇಡ-ನಾಯಕರೆಂದರೆ ತಪ್ಪಾಗಲಾರದು. ಪ್ರಾಣಿ ವಿಕಾಸದ ಹಂತದಿಂದ ಆರಂಭಗೊಂಡು ಬುಡಕಟ್ಟು ನೆಲೆಗಳಲ್ಲಿ ಅನನ್ಯತೆಯನ್ನು ಗುರುತಿಸಿಕೊಂಡು ಗ್ರಾಮ, ಪಟ್ಟಣ, ನಗರಗಳವರೆಗೆ ಸಾಮಾಜಿಕ ವ್ಯಾಪ್ತಿಯನ್ನು ವಿಸ್ತರಿಸಿಕೊಂಡ ವಿಶಿಷ್ಟತೆ ಅವರದು. ಮೂಲತಃ ಪ್ರೊಟೋಆಸ್ಟ್ರಲಾಯಿಡ್ ಗುಂಪಿಗೆ ಸೇರಿದವರೆಂದು, ಮಂಗೋಲಿ ಯನ್ ಬುಡಕಟ್ಟಿನ ಮೂಲದವರೆಂದೂ ಎರಡು ರೀತಿಗಳಲ್ಲಿ ಗುರುತಿಸಲ್ಪಟ್ಟಿದ್ದಾರೆ.

ನಾಯ್ಕ, ನಾಯಕ್, ನಾಯಕ, ನಾನಾ ನಾಯಕ, ಚೋಲಿವಾಲ ನಾಯಕ, ಕಪಾಡಿಯ ನಾಯಕ ಮೋಟ ನಾಯಕ ಎಂಬ ಹೆಸರುಗಳು, ವ್ಯಾದ, ಶಬರ, ಪುಳಿಂದ, ಕಿರಾತ, ನಿಷದ, ಕಂಕ, ಕುಳಿಂದ, ಬಿಲ್ಲ, ವನದ ಎಂಬ ಪರ‍್ಯಾಯ ನಾಮಗಳೂ ಈ ಸಮುದಾಯಕ್ಕೆ ಸಲ್ಲುತ್ತವೆ. ಕಣ್ಣಪ್ಪ, ವಾಲ್ಮೀಕಿ, ಏಕಲವ್ಯ ಮುಂತಾದ ವ್ಯಕ್ತಿ ಮೂಲ ಪಂಗಡಗಳು ಇವರಲ್ಲಿದೆ. ಪರಿವಾರ, ಗುರಿಕಾರ, ನಾಯಕ ಮಕ್ಕಳು, ಪಾಳೆಗಾರ, ತಳವಾರ, ದೊರೆ ಮಕ್ಕಳು ಎಂಬಿತ್ಯಾದಿ ಅಧಿಕಾರ ಸೂಚಕಗಳಲ್ಲಿಯೂ ಕೆಲಗುಂಪುಗಳು ಗುರುತಿಸಿಕೊಂಡಿವೆ. ಬಿಲ್ಲ, ಬೋಯ, ವೇಡನ್, ವೆಟ್ಟುವನ್, ವೇಡ, ಮೇಳ, ವಿದಿರ್, ಬೇಂಟಿಕಾರ, ವಿ(ಬಿ)ಯದರ್, ಕಣೆಂದರೆ, ಕೋವರ್ ಮೊದಲಾದ ದ್ರಾವಿಡ ಇಲ್ಲವೇ ಹಳೆಗನ್ನಡದ ಪದಗಳು ಈ ಸಮುದಾಯದ ಪ್ರಾದೇಶಿಕ ವಿಸ್ತಾರತೆಯನ್ನು ಸಂಕೇತಿಸುತ್ತವೆ. ಸಂಸ್ಕೃತದ ‘ವ್ಯಾದ’ ಎಂಬ ಪದಕ್ಕೆ ಬೇಡ ಎಂಬ ಸಂವಾದಿ ಪದವಿದ್ದು ಇದು ಬೇಟೆಗಾರರನ್ನು ನಿರೂಪಿಸುತ್ತದೆ. ಇದೇ ಅರ್ಥ ತಮಿಳಿನ ವೇಡನ್ ಹಾಗೂ ತೆಲುಗಿನ ಬೋಯ ಎಂಬ ಪದಗಳಿಂದ ವ್ಯಕ್ತವಾಗುತ್ತದೆ.

ಉತ್ತರ ಭಾರತದ ಹಿಮಾಲಯ ಪ್ರದೇಶ ಪಂಜಾಬ್ ಹಾಗೂ ವಿಂದ್ಯ ಪರ್ವತದ ನೆಲೆಗಳಲ್ಲದೆ ನೇಪಾಳದ ನದಿ ದಂಡೆಗಳವರೆಗೆ ‘ಕಿರಾತದೇಶ’ಗಳೆಂಬ ಹೆಸರುಗಳೂ ಪ್ರಾಚೀನ ಪ್ರದೇಶಗಳ ಚಹರೆಗೆ ಕಾರಣರಾದ ಬೇಡರ ಭಾರತದಲ್ಲಿ ದ್ರಾವಿಡ ವರ್ಗಕ್ಕೆ ಸೇರಿದವ ರಾಗಿದ್ದಾರೆ. ಆರ್ಯರು ಭಾರತಕ್ಕೆ ಆಗಮಿಸಿ ಪ್ರಾದೇಶಿಕ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲು ಹವಣಿಸಿದ ಎಡೆಗಳಲ್ಲಿ ಅವರಿಗೆ ಎದುರಾದವರಲ್ಲಿ ಬೇಡರು ಪ್ರಮುಖರಾಗಿದ್ದಾರೆ.

ಕಾಲಕ್ರಮೇಣ ಆರ್ಯ – ದ್ರಾವಿಡರ ಹೊಂದಾಣಿಕೆ ಏರ್ಪಟ್ಟ ಹಂತಗಳಲ್ಲಿ ಈ ಸಮುದಾಯದ ಮೇಲೆಯೂ ಆರ್ಯರ ಪ್ರಭಾವಗಳಾದವು. ಬಹುಶಃ ಈ ಹಂತದಲ್ಲಿ ಬೇಡರು ಪಶುಪಾಲನೆ ಹಾಗೂ ಕೃಷಿಯನ್ನು ರೂಢಿಸಿಕೊಂಡಿರಬಹುದು. ಬೇಟೆಗಾರಿಕೆ ಹಾಗೂ ಪಶುಪಾಲನೆ ಅಲೆಮಾರಿತನವನ್ನು ಅನುಮೋದಿಸಿದರೆ ಕೃಷಿಯು ಒಂದೆಡೆ ನೆಲೆಯೂರುವ ಗುಣವನ್ನು ಕಲಿಸಿದೆ. ಈ ಚಟುವಟಿಕೆಗಳಿಗೆ ಅನುಗುಣವಾಗಿ ಬೇಡರು ಬದುಕಿನಲ್ಲಿ ವಿರೋಧಾ ಭಾಸಗಳನ್ನು ಅನುಭವಿಸಬೇಕಾಯಿತು. ಪಶುಪಾಲನಾ ಹಂತದಲ್ಲಿಯೂ ಬೇಟೆಗಾರಿಕೆ ಹಾಗೂ ಮಾಂಸಾಹಾರವನ್ನು ಅನುಸರಿಸುತ್ತಿದ್ದುದರಿಂದ ಜೀವನ ನಿರ್ವಹಣೆ ಕಷ್ಟವಾದಾಗ ದಾರಿಗಳ್ಳರಾಗಿ ತುರುಗಳ್ಳರಾಗಿ ಬದುಕನ್ನು ಭದ್ರಪಡಿಸಿಕೊಳ್ಳುತ್ತಿದ್ದರು. ಇಂಥ ಸಂದರ್ಭ ಗಳಲ್ಲಿ ಗೊಲ್ಲ, ಕುರುಬ ಮೊದಲಾದ ಪಶುಪಾಲಕ ಸಮುದಾಯಗಳೊಂದಿಗೆ ಸಂಘರ್ಷ ಸಾಮರಸ್ಯಗಳನ್ನು ಏರ್ಪಡಿಸಿಕೊಳ್ಳುತ್ತಿದ್ದರು. ಅಲ್ಲದೆ ಕೃಷಿಯನ್ನು ಅವಲಂಬಿಸಿದ ಗುಂಪು ಗಳು ಒಂದೆಡೆ ನೆಲೆಯೂರಿ ನಾಡಿನ ಜನರೊಂದಿಗೆ ಬೆರೆತು ಬಾಳುವ ಸಂಸ್ಕೃತಿಯನ್ನು ರೂಢಿಸಿಕೊಂಡರು. ಹೀಗೆ ಪ್ರತ್ಯೇಕ ಗುಂಪುಗಳು ನಿರ್ಮಾಣವಾಗಿ ಒಳಪಂಗಡಗಳಾಗಿ ರೂಪುಗೊಳ್ಳಲು ಕಾರಣವಾಯಿತು.

ವಲಸೆಯ ನೆಲೆಗಳು

ಉತ್ತರ ಭಾರತ ಹಾಗೂ ಮಧ್ಯ ಭಾರತದ ಮೂಲಕ ದಕ್ಷಿಣ ಭಾರತದ ವಿವಿದೆಡೆಗಳಲ್ಲಿ ಪಸರಿಸಿದ ಬೇಡ ಪಂಗಡಗಳು ಪ್ರಮುಖವಾಗಿ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ನೆಲೆಗಳಿಂದ ಕರ್ನಾಟಕಕ್ಕೆ ವಲಸೆ ಬಂದರು. ಕರ್ನಾಟಕ ಹಾಗೂ ಗಡಿ ಪ್ರದೇಶಗಳ ಸಾಂಸ್ಕೃತಿಕ ಅನನ್ಯತೆಯೊಂದಿಗೆ ಇವರು ಲಗ್ಗೆಯಿಟ್ಟ ಸಂದರ್ಭಗಳು ಕೆಲವು ಚಾರಿತ್ರಿಕ ಸಂಘಟನೆಗಳಿಗೆ ಕಾರಣವಾದವು. ಶ್ರೀಶೈಲದ ಕಡೆಯಿಂದ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದ ಕೆಲವೆಡೆಗಳಿಗೆ ಬಂದಂಥವರು ಪಶುಪಾಲಕರಾಗಿ ಬುಡಕಟ್ಟು ಚಹರೆಯ ಅನನ್ಯತೆಯೊಂದಿಗೆ ರಾಜ್ಯಾಡಳಿತದಲ್ಲಿ ಅಸ್ತಿತ್ವ ಪಡೆದರು. ದಕ್ಷಿಣ ಕರ್ನಾಟಕದ ಪ್ರಾಂತ್ಯಗಳಿಗೆ (ಮೈಸೂರು ಪ್ರಾಂತ್ಯ) ಲಗ್ಗೆಯಿಟ್ಟವರು ಕೃಷಿಕರಾಗಿ ಹಲವರು ಸಣ್ಣಪುಟ್ಟ ಪಾಳೆಯಗಾರರಾಗಿ ಕೋಟೆ-ಕೊತ್ತಳದ ರಕ್ಷಕರಾಗಿ ರಾಜರ ಆಪ್ತ ಸೇವಕರಾಗಿ  ಕೆಲವರು ಉಳಿದರು. ಒಟ್ಟಾರೆ ವಲಸೆಗಾರರ ಮಾತೃಭಾಷೆ ತೆಲುಗು ಆಗಿದ್ದು ಕನ್ನಡವನ್ನೂ ರೂಢಿಸಿಕೊಂಡರು.

ವಲಸೆಗಾರರು ತಮ್ಮ ಮೂಲನೆಲೆಯಿಂದ ಕರ್ನಾಟಕದ ವಿವಿದೆಡೆಗಳಿಗೆ ಸಾಗಿ ಬರು ವಾಗಲೇ ಪಿತೃಪ್ರಧಾನ ಕುಟುಂಬ ವ್ಯವಸ್ಥೆಯ ಸಂಹಿತೆಯನ್ನು ರೂಢಿಸಿಕೊಂಡಿದ್ದರು. ತಮಿಳು ಗಡಿಯ ಮೂಲದಿಂದ ಚಾಮರಾಜನಗರ ಹಾಗೂ ಮೈಸೂರಿನ ಕೆಲವೆಡೆಗಳಿಗೆ ಬಂದ ಪರಿವಾರದವರು ಮೂಲತಃ ಮೀನಿನ ಬೇಟೆಗಾರರಾದರೂ ಕೆಲವರು ಮೈಸೂರು ಅರಸರ ಪರಿವಾರದ ಸೇವಾ ಹುದ್ದೆಗಳಲ್ಲಿ ಸೇರಿಕೊಂಡರು. ಮರಾಠರ ಸೈನ್ಯದ ಬೇಡ ಪಡೆಗಳು ಕರಾವಳಿ ಪ್ರದೇಶದವರೆಗೂ ಆಡಳಿತಾತ್ಮಕವಾಗಿ ವ್ಯಾಪಿಸಿ ನೆಲೆಗೊಂಡ ಕಾರಣ ಅಲ್ಲಿ ಮರಾಠ ನಾಯಕರೆಂದು ಕರೆಯಲ್ಪಟ್ಟರು. ಬುಡಕಟ್ಟು ನೆಲೆಗೆ ಬದ್ಧವಾದ ಗುಂಪುಗಳು ಮಾತೃಪ್ರಧಾನ ಕುಟುಂಬ ವ್ಯವಸ್ಥೆಯನ್ನು ಹೆಣ್ಣು ಸಂತತಿಯಲ್ಲಿ ಉಳಿಸಿಕೊಂಡರೂ ಗಂಡು ಸಂತತಿಗೆ ಮದುವೆ ಮಾಡುವ ಪದ್ಧತಿಯನ್ನು ರೂಢಿಸಿಕೊಂಡರು. ಇಂಥ ಕುಟುಂಬಗಳಲ್ಲಿ ಬಸವಿ ಪದ್ಧತಿ, ಮದುವೆ ಪದ್ಧತಿ, ಕೂಡಿಕೆ ಪದ್ಧತಿ, ಮನೆಗೆ ಬಿಡುವ ಪದ್ಧತಿಗಳಂಥ ಸಂಕೀರ್ಣಗಳೆಲ್ಲವೂ ಉಳಿದವು ಕೆಲವು ಧಾರ್ಮಿಕ ಹಾಗೂ ರಾಜಕೀಯ ಕಾರಣಗಳು ಇಂಥ ಪದ್ಧತಿ ಆಚರಣೆಗಳಿಗೆ ನೆಲೆಯಾದವು. ಊರುಬೇಡ, ನೀಚಬೇಡ, ಬಸವಿಬೇಡ, ಹಾಲುಬೇಡ, ಮ್ಯಾಸಬೇಡ, ಕಂಪಣಬೇಡ, ಮೊಂಡಬೇಡ, ಗುಡ್ಲುಬೇಡ, ಉರುಮೆಬೇಡ ಎಂಬಿತ್ಯಾದಿ ಒಳಪಂಗಡಗಳು ಈ ಸಮುದಾಯದ ಸಾಮಾಜಿಕ ಭಿನ್ನತೆಗಳನ್ನು ಹೇಳುತ್ತವೆ.

ಬೇಡ ಜನಾಂಗದ ಮೆರಗನ್ನು ವಾಲ್ಮೀಕಿ ಅಥವಾ ನಾಯಕ ಎಂಬ ಹೆಸರುಗಳಿಂದ ಹೇಳಿಕೊಳ್ಳುವುದನ್ನು ಈ ಸಮುದಾಯವು ಗೌರವಾನ್ವಿತ ಭೂಷಣವೆಂದು ಪರಿಭಾವಿಸುತ್ತದೆ. ಮರಾಠ ನಾಯಕ ಮತ್ತು ಪರಿವಾರದ ನಾಯಕರು ‘ಬೇಡ’ ಎಂಬ ಜಾತಿ ಸೂಚಕದಿಂದ ಹೊರತಾಗಿದ್ದಾರೆ. ಊರಬೇಡ ಮತ್ತು ಮ್ಯಾಸಬೇಡರು ತಮ್ಮನ್ನು ನಾಯಕರೆಂದು ಒಟ್ಟಾರೆಯಾಗಿ ವಾಲ್ಮೀಕಿ ಕುಲದವರೆಂದು, ಪಾಳೆಯಗಾರರೆಂದು ಕರೆದುಕೊಳ್ಳುತ್ತಾರೆ. ಹಾಗೆಯೇ ಊರನಾಯಕ ಮತ್ತು ಮ್ಯಾಸ ನಾಯಕರೆಂದು ಪ್ರತ್ಯೇಕಿಸಿ ಹೇಳಿಕೊಳ್ಳುತ್ತಾರೆ. ಊಳಿದಂತೆ ಮೊಂಡ ಬೇಡರು, ಉರುಮೆ ಬೇಡರು, ಬಸವಿ ಸಾಲಿನ ಬೇಡರು, ಹಾಲು ಬೇಡರು, ಗುಡ್ಲುಬೇಡರು ಎಂಬ ಒಳಪಂಗಡಗಳು ಪಾಳೆಯಗಾರ ‘ನಾಯಕ’ ಎಂಬ ಸಮುದಾಯ ಸೂಚಕ ಭೂಷಣವನ್ನು ಆರೋಪಿಸಿಕೊಳ್ಳುವುದಿಲ್ಲ. ಬಹುಶಃ ಈ ಒಳಪಂಗಡಗಳಿಗೆ ರಾಜಕೀಯ ಆಡಳಿತಾತ್ಮಕ ಅವಕಾಶಗಳು ದಕ್ಕಿಲ್ಲವೆನಿಸುತ್ತದೆ ಅಥವಾ ಸಮುದಾಯದ ಒಳಗೆ ಶೋಷಿತರಾದವರು ಇವರಿರಬಹುದು.

ಇಂಥ ತಾರಮತ್ಯದ ಚೌಕಟ್ಟಿನ ವ್ಯಾಪ್ತಿ ಮತ್ತು ಮಿತಿಗಳ ಹಿನ್ನೆಲೆಯಲ್ಲಿ ಈ ಸಮುದಾಯ ವನ್ನು ಬೇಟೆಗಾರರು ಪಶುಪಾಲಕರು ದರೋಡೆ ಕೋರರು, ತುರುಗಳ್ಳರು- ದಾರಿಗಳ್ಳರು, ತಳವಾರರು, ಪಾಳೆಯಗಾರರು ದೊರೆ ಮಕ್ಕಳು ದೊರೆಗಳು ಎಂದೆಲ್ಲ ಕರೆಯುತ್ತಾರೆ.

ವೃತ್ತಿ ಪೂರಕವಾದ ಸಾಂಸ್ಕೃತಿಕ ಭಿನ್ನತೆ

ಬೇಟೆ ಮತ್ತು ಪಶುಪಾಲನೆಗಾಗಿ ಕಾಡಿನ ವ್ಯಾಪ್ತಿಯಲ್ಲಿ ಅಲೆಮಾರಿತನವನ್ನು ಮುಂದು ವರೆಸಿದವರು ಚಂಚು ಬೇಡರು, ಕಾಡು ಬೇಡರು, ಮ್ಯಾಸಬೇಡರೆಂದು ಅಧಿಕೃತತೆಯನ್ನು ಪಡೆದರು. ಕಾಲಾನಂತರದ ಘಟ್ಟಗಳಲ್ಲಿ ಸೈನಿಕರಾಗಿ ಸೇನಾ ಮುಖಂಡರಾಗಿ ಪಾಳೆಯಗಾರರಾಗಿ ಮ್ಯಾಸಬೇಡರ ಕೆಲವು ಗುಂಪುಗಳು ಮುಂದುವರಿದರು. ಇನ್ನುಳಿದ ಗುಂಪುಗಳು ಪ್ರತ್ಯೇಕವಾದ ‘ಹಟ್ಟಿ’ಗಳನ್ನು ರಚಿಸಿಕೊಂಡು ಬುಡಕಟ್ಟು ಸಂಸ್ಕೃತಿಯ ಅನನ್ಯತೆಯನ್ನು ರೂಢಿಸಿಕೊಂಡರು. ಇವರಿಗೆ ನಾಯಕರಾಗಿ ತಮ್ಮ ಸಮುದಾಯದ ದೈವ-ಧರ್ಮ, ಸಂಪತ್ತುಗಳನ್ನು ರಕ್ಷಿಸಿದ್ದರ ಸಂಕೇತವಾಗಿ ಕೆಲವರು ಆರಾಧನೆಗೆ ಒಳಗಾಗುತ್ತಾರೆ. ಇಂತಲ್ಲಿ ಪೆಟ್ಟಿಗೆ ದೇವರು ಇಲ್ಲವೇ ಹೆಣ್ಣು ಸಂತತಿ ಅಥವಾ ಪಶುಸಂಪತ್ತು ಸಂಕಷ್ಟಗಳಿಂದ ತತ್ತರಿಸುವಾಗ ರಕ್ಷಿಸಿದ ವ್ಯಕ್ತಿಗಳು ಸಾಂಸ್ಕೃತಿಕ ನಾಯಕ-ನಾಯಕಿಯರಾಗಿ ಪರಂಪರೆಯ ಸ್ಮೃತಿಗಳಲ್ಲಿ ಉಳಿದರು.

ಕುರಿ, ಮೇಕೆ ಇಲ್ಲವೇ ದನಗಳನ್ನು ಮೇಯಿಸುವವರು ಮ್ಯಾಸಬೇಡರೆನಿಸಿಕೊಂಡಂತೆ, ಇವರು ಪುಟ್ಟಿಗಳಲ್ಲಿ ಹೊತ್ತು ಆರಾಧಿಸುವ ಮಾರಮ್ಮ ದೇವತೆಯಂಥವರು ಸಾಂಸ್ಕೃತಿಕ ನಾಯಕಿಯರಾಗಿದ್ದಾರೆ. ಪಶುಪಾಲಕರಾದ ಇವರು ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಮಹತ್ವ ನೀಡಿ ಹೈನುಗಾರಿಕೆಯನ್ನು ವೃತ್ತಿ ಮಾಡಿಕೊಂಡಿದ್ದರಿಂದ ಹಾಲು ಬೇಡರೆಂಬ ಒಳಪಂಗಡವೂ ಏರ್ಪಟ್ಟಿತು. ಗುಡಿಸಲುಗಳಲ್ಲಿ ವಾಸಿಸುವವರನ್ನು ಗುಡಿಸಿ (ಗುಡ್ಲು) ಬೇಡರೆಂದು ಪ್ರತ್ಯೇಕಿಸುತ್ತಾರೆ. ಭಿಕ್ಷೆ ಬೇಡುತ್ತಾ ಒರಟುತನ ಅಥವಾ ಮೊಂಡುತನವನ್ನು ಭಿಕ್ಷೆಗೆ ಬಳಸಿಕೊಳ್ಳುವ ಅಧಿಕಾರ ಹೊಂದಿದ ಗುಂಪು ಮೊಂಡ ಬೇಡರೆಂದು ಉಳಿದು ಕೊಂಡಿದ್ದಾರೆ. ಅಲೆಮಾರಿ ಗುಂಪುಗಳ ಬೇಡ ಪಂಗಡಗಳು ತಮ್ಮ ದೈವ ಅಥವಾ ದೇವತೆಗಳನ್ನು ಪೆಟ್ಟಿಗೆಗಳಲ್ಲಿ ಇಟ್ಟುಕೊಂಡು ಸಂರಕ್ಷಿಸಿದರಲ್ಲದೆ, ಅವುಗಳನ್ನು ತಮ್ಮ ಕಂಪಣದೊಂದಿಗೆ ಸಾಗಿಸುತ್ತಿದ್ದರು. ಹೀಗೆ ಸಾಗಿಸಲೆಂದೇ ‘ದೇವರ ಎತ್ತು’ಗಳನ್ನು ಸಾಕುತ್ತಿದ್ದರು.

ಪೂಜ್ಯಾರ್ಹವಾದ ದೇವರ ಎತ್ತುಗಳನ್ನು ಕಾಯುವ ‘ಕಿಲಾರಿ’ಯನ್ನೂ ದೈವ ರೂಪದಲ್ಲಿ ಗೌರವಿಸುತ್ತಾರೆ. ಈತನಿಗೆ ಕೆಲವು ಮಡಿ-ಮೈಲಿಗೆಗಳ ನಿರ್ಬಂಧವಿದ್ದು ಅನುಸರಣೆಯ ಮೂಲಕ ಪ್ರಾಶಸ್ತ್ಯವನ್ನು ಪಡೆಯುತ್ತಾನೆ. ಎತ್ತಿನ ಹಬ್ಬ ಅಥವಾ ಬಸವಣ್ಣನ ಹಬ್ಬದ ಸಂದರ್ಭದಲ್ಲಿ ಹಾಗೂ ಇತರ ಪೆಟ್ಟಿಗೆ ದೈವಗಳಿಗೆ ಸಂಬಂಧಿಸಿದ ಜಾತ್ರೆಗಳಲ್ಲಿ ಇಲ್ಲವೇ ಸಾಂಸ್ಕೃತಿಕ ನಾಯಕರನ್ನು ಆರಾಧಿಸುವ ಸನ್ನಿವೇಶಗಳಲ್ಲಿ ದೇವರ ಎತ್ತು ಮತ್ತು ಕಿಲಾರಿಗೆ ಆದ್ಯತೆ ಇರುತ್ತದೆ. ಇಂಥ ದಿನಗಳಲ್ಲಿ ಮೀಸಲು ಹಾಲು ಮತ್ತು ಹಾಲಿನ ಉತ್ಪನ್ನಗಳು ನೈವೇದ್ಯ ಮತ್ತು ಪ್ರಸಾದವಾಗುತ್ತವೆ. ಚಂಚು ಬೇಡರು ಅಥವಾ ಅಡವಿ ಚಂಚರು ಪಶುಪಾಲನೆಯ ಹಂತದಲ್ಲೇ ಬೇಡರಿಂದ ದೂರ ಉಳಿದರು. ಅಂದರೆ ಇವರು ಬೇಟೆಗಾರಿಕೆಯ ನಂತರದ ವೃತ್ತಿಗಳಿಗೆ ಪರಿವರ್ತನೆಯಾಗಲಿಲ್ಲ. ಚಿತ್ರದುರ್ಗದ ಕಡೆಯಿಂದ ಹಲವು ಕಾರಣಗಳಿಂದಾಗಿ ‘ಓಡಿ ಬಂದು’ ಕಾಕನಕೋಟೆ ಮತ್ತು ಹೆಗ್ಗಡ ದೇವನ ಕೋಟೆಯ ಕಾಡುಗಳಲ್ಲಿ ನೆಲೆಸಿದ ಬೇಡ ಸಂಕುಲವೇ ಓಡಿಗ ಗೌಡರಾದರೆಂದು ಹೇಳುತ್ತಾರೆ. ಮಲೆಮಹದೇಶ್ವರನ ಒಕ್ಕಲು ಮತ್ತು ಗುಡ್ಡರಲ್ಲಿ ಬೇಡಗಂಪವೂ ಒಂದು. ಇವರು ಮಹದೇಶ್ವರನ ಪೂಜಾರಿಗಳಾಗಿರುವುದಲ್ಲದೆ, ಸಾಲೂರು ಮಠದಿಂದ ಲಿಂಗದೀಕ್ಷೆಯನ್ನು ಪಡೆದಿದ್ದಾರೆ.

ಅಲೆಮಾರಿ ಬದುಕು ಮತ್ತು ಪಶುಪಾಲನೆಗೆ ಒಗ್ಗದ ಕೋಳಿ ಸಾಕಾಣಿಕೆ ಮ್ಯಾಸಬೇಡರಿಗೆ ನಿಷೇಧವಾಗಿ ಮಾರ್ಪಟ್ಟಿತು. ಹಾಗೆಯೇ ಕಪ್ಪು ಉಡುಪು ಧರಿಸಿ ಕಾಡಿನ ಪೊಟರು-ಪೊದೆಗಳಲ್ಲಿ ಸಂಚರಿಸುವಾಗ ಬೇಟೆಗಾರರು ಬೇಟೆಯ ಪ್ರಾಣಿ ಎಂದು ತಿಳಿಯುವ ಸಾಧ್ಯತೆಗಳಿದ್ದರಿಂದ ಅದು ಅಪಾಯಕಾರಿ ಸೂಚನೆಯಾಯಿತು. ಕಾಡಿನ ನಡುವೆ ಬೇಟೆಗಾರಿಕೆಗಾಗಿ ಓಡಾಡುವಾಗ ನಿಶ್ಯಬ್ಧ ನಡಿಗೆಗೆ ಗೆಜ್ಜೆಯ ಶಬ್ದ ತೊಡಕಾಗುವುದರಿಂದ ಗೆಜ್ಜೆ ಧರಿಸಬಾರದೆಂದು ಕಂಡುಕೊಂಡರು. ಈಚಲು ಮರದ ಉತ್ಪಾದನಾತ್ಮಕ ಪಾನೀಯವು ಮಾದಕವಾದದ್ದರಿಂದ ಅದರಿಂದ ದೂರವಿರುವ ನಿರ್ಣಯವು ಈಚಲು ಚಾಪೆ ಮತ್ತು ಪುಟ್ಟಿಗಳನ್ನೂ ಉಪಯೋಗಿ ಸದಿರುವಷ್ಟರ ಮಟ್ಟಿಗೆ ಎಚ್ಚರವಹಿಸುವಂತೆ ಮಾಡಿದೆ. ಮೈಮುಚ್ಚಿಕೊಳ್ಳುವಲ್ಲಿ ಬಟ್ಟೆಯ ಬಳಕೆಯನ್ನು ಮಾಡಿಕೊಂಡ ಹಂತದಲ್ಲಿಯೂ ಉಷ್ಣತೆ, ವಾತಾವರಣಕ್ಕೆ ಅನುಗುಣವಾಗಿ ಪುರುಷರು ಲಂಗೋಟಿ, ಧೋತಿ ಚಲ್ಲಣ ರುಮಾಲುಗಳನ್ನು ಧರಿಸಿ ಕಂಬಳಿಯ ಹೊದಿಕೆ ಯಿಂದ ಚಳಿಗೆ ರಕ್ಷಣೆ ಪಡೆದರು. ಅಂತೆಯೇ ಕುಪ್ಪಸಗಳನ್ನು ಒಲಿಯುವ ಕೌಶಲ್ಯ ಹೊರತಾಗಿದ್ದುದರಿಂದ ತ್ಯಜಿಸಿದರು.

ಊರಿನ ಸಂಸ್ಕೃತಿಗೆ ಒಗ್ಗಿಕೊಂಡು ಒಂದೆಡೆ ನೆಲೆಯನ್ನು ಕಂಡುಕೊಂಡ ಬೇಡರ ಗುಂಪುಗಳು ಕೃಷಿಯನ್ನು ಅವಲಂಬಿಸಿದ್ದರಿಂದ ಬೇಟೆಗಾರಿಕೆ ಮತ್ತು ಪಶುಪಾಲನೆಗಳನ್ನು ಪೂರಕವಾದ ವೃತ್ತಿಗಳಾಗಿ ಪರಿವರ್ತಿಸಿದರು. ಆಹಾರವನ್ನು ಪೂರೈಸಿಕೊಳ್ಳುವುದಕ್ಕಾಗಿ ಒಂದು ಹಂತದಲ್ಲಿ ಬೇಟೆಯನ್ನು ಅವಲಂಬಿಸಿದ್ದವರು ಪಶುಪಾಲನಾ ಹಂತದಲ್ಲಿ ತಮ್ಮನ್ನು ತಮ್ಮ ಪಶುಗಳನ್ನೂ ಕ್ರೂರಮೃಗಗಳಿಂದ ರಕ್ಷಿಸಿಕೊಳ್ಳಲು ಬೇಟೆಯಲ್ಲಿ ತೊಡಗಿದರು. ಮುಂದೆ ಕೃಷಿಗೆ ಹಾನಿ ಮಾಡುವ ಇಲಿ, ಮೊಲ, ಜಿಂಕೆ, ಕಾಡುಹಂದಿ, ಕಾಡಾನೆ, ಗುಳ್ಳೆ ನರಿ ಮೊದಲಾದುವನ್ನು ಬೇಟೆಗಾರಿಕೆಯ ತಂತ್ರಗಳಿಂದ ಕೊಲ್ಲತೊಡಗಿದರು. ಇದರಲ್ಲಿ ಮಾಂಸಾಹಾರಕ್ಕೆ ಬಳಸಬಹುದಾದ ಪ್ರಾಣಿ (ರಾಜ ಪರಿವಾರದೊಂದಿಗೆ ಮೋಜಿಗಾಗಿಯೂ ಬೇಟೆಯಾಡಿದ ಸಂದರ್ಭಗಳಿವೆ) ವರ್ಗವನ್ನು ಶಾಖಾಹಾರದೊಂದಿಗೆ ಸೇವಿಸ ತೊಡಗಿದರು. ‘ಊರಿನ ಇತರೆ ಸಮುದಾಯಗಳೊಂದಿಗೆ ಸಮನ್ವಯ ಹೊಂದಾಣಿಕೆಗಳನ್ನು ಮಾಡಿಕೊಂಡ ಗುಂಪುಗಳು ಗ್ರಾಮ-ನಗರ-ಪಟ್ಟಣ ಹೀಗೆ ನೆಲೆಸಿದೆಡೆಗಳ ಪ್ರಾದೇಶಿಕ ಸಾಮಾಜಿಕ ಸಂಸ್ಕೃತಿ ಯನ್ನು ರೂಢಿಸಿಕೊಂಡರು. ಇವರು ತಮ್ಮ ಬುಡಕಟ್ಟು ದೈವ ಮತ್ತು ಆಚರಣೆಗಳೊಂದಿಗೆ ಊರೊಟ್ಟಿನ ಆಚರಣೆಗಳನ್ನು ಪಾಲಿಸತೊಡಗಿದರು.

ಉದಾಹರಣೆಗೆ ಊರನೆಲೆಯ ಬೇಡರು ಸಾರ್ವತ್ರಿಕವಾದ ಮಾರಿಯ ಆಚರಣೆಯಲ್ಲಿ ಊರೊಟ್ಟಿಗೆ ಬೆರತು ತಾವು ನಿರ್ವಹಿಸಬೇಕಾಗಿರುವ ಪ್ರಾಣಿಬಲಿಯ ಕಾರ್ಯವನ್ನು ಈಡೇರಿಸುತ್ತಾರೆ. ಗ್ರಾಮೀಣ ಸಮುದಾಯಗಳು ಒಪ್ಪಿಕೊಂಡ ಮಾರಿಯ ಆಚರಣೆಯ ಮೌಲ್ಯಗಳಿಗೆ ಬದ್ಧರಾಗಿರುತ್ತಾರೆ. ಆದರೆ ಮ್ಯಾಸರು ಮಾಡುವ ಮಾರಿಯ ಆಚರಣೆ ಅವರದೇ ಸಂಸ್ಕೃತಿಯ ಚರಿತ್ರೆ ಮತ್ತು ಪುರಾಣಗಳಿಗೆ ಬದ್ಧವಾದದ್ದು ಮ್ಯಾಸಬೇಡರ ಆರಾಧನಾ ದೇವತೆಯಾಗಿರುವ ಮಾರಮ್ಮನು ಊರಿನವರು ಆರಾಧಿಸುವ ಮಾರಮ್ಮನಿಗಿಂತ ಬೇರೆ ಯಾದವಳು. ಏಕೆಂದರೆ ಈಕೆಯನ್ನು ಬೊಮ್ಮನಾಯಕನೆಂಬ ಸಾಂಸ್ಕೃತಿಕ ರನ ತಂಗಿ ಎಂದು ಪರಿಭಾವಿಸಿ ಗುಡಿಗಳನ್ನು ಕಟ್ಟಿ ಮ್ಯಾಸರು ಆರಾಧಿಸುತ್ತಾರೆ. ಅಲ್ಲದೆ, ಬುಟ್ಟಿ ಅಥವಾ ಪುಟ್ಟಿಗಳಲ್ಲಿಟ್ಟುಕೊಂಡು  ಆಚರಣೆಗಳಿಗೆ ಒಳಪಡಿಸುತ್ತಾರೆ.

ಬೇಟೆಗಾರಿಕೆ ಬೇಡರ ಮೂಲ ವೃತ್ತಿಯಾದರೂ ವಿಕಾಸದ ಹಂತಗಳಲ್ಲಿ ವೃತ್ತಿ ಬದಲಾವಣೆ ಗಳಾದಂತೆ ನಾಯಕ, ಸೈನಿಕ, ಸೇನಾ ಮುಖಂಡ, ಪಾಳೆಯಗಾರ, ಜಮೀನ್ದಾರ, ತಳವಾರ, ಕೋಟೆ-ಕೊತ್ತಳಗಳ ಕಾವಲುಗಾರ, ಕೃಷಿಕಾರ್ಮಿಕ, ಇತರೆ ಕೂಲಿಕಾರ ಮೊದಲಾದ ವೃತ್ತಿ ಪಲ್ಲಟಗಳಿಗೆ ಬೇಡರು ಒಗ್ಗಿ ಹೋಗಿದ್ದಾರೆ. ಸಂಸ್ಕೃತಿಯ ಮೂಲಪುರುಷ ಬೊಮ್ಮಣ್ಣ ಹಾಗೂ ಮಾದಿಗರ ಆದಿಜಾಂಬವರು ಅಣ್ಣ ತಮ್ಮಂದಿರೆಂದು ಕೆಲವರು ಹೇಳುತ್ತಾರೆ. ಇವೆರಡು ಸಮುದಾಯಗಳ ಗೋತ್ರಗಳು, ಹೆಸರುಗಳು, ಒಂದೇ ರೀತಿಯಲ್ಲಿರುವುದರಿಂದ ಇದಕ್ಕೆ ಪುಷ್ಟಿ ದೊರೆಯುತ್ತದೆ. ವಿಕಾಸದ ಹಂತದಲ್ಲಿ ಕುರುಬರಿಂದ ಬೇರ್ಪಟ್ಟವರೆಂದು ನಂತರ ಪಶುಪಾಲನೆಯ ಹಂತದಲ್ಲಿ ಗೊಲ್ಲರಿಂದ ದೂರವಾದವರೆಂದು ಹೇಳಬಹುದು. ಕಾಡು ಕುರುಬ-ಊರುಕುರುಬ, ಕಾಡುಗೊಲ್ಲ, ಊರಗೊಲ್ಲ ಎಂಬ ಪ್ರಮುಖ ಪ್ರಭೇದಗಳಿರು ವಂತೆಯೇ ಕಾಡುಬೇಡ, ಊರಬೇಡರೆಂಬ ಗುಂಪುಗಳಿರುವುದು ಇಲ್ಲಿ ಗಮನಾರ್ಹ. ಅಂತೆಯೇ ದೊಡ್ಡಮಾದಿಗ (ಪೆದ್ದೇಟಿಮಾದಿಗ) ಸಣ್ಣ ಮಾದಿಗ / ಸಿಂದುಮಾದಿಗ (ಸಿನ್ನ ಈಡುಮಾದಿಗ) ಎಂಬ ಒಳಪಂಗಡಗಳಿದ್ದು ಪ್ರೌಢ ವಯೋಮಾನದ ವಿವಾಹಪದ್ಧತಿ ಹಾಗೂ ಬಾಲ್ಯ ವಿವಾಹ ಪದ್ಧತಿಗಳನ್ನು ಅನುಸರಿಸಿದ ಪ್ರತ್ಯೇಕ ಗುಂಪುಗಳಿದ್ದಂತೆ ಆಂಧ್ರದ ಬೇಡರಲ್ಲಿ ಚಿನ್ನ ಬೋಯಿವಾಂಡ್ಲು (ಚಿಕ್ಕ ಬೇಡರು), ಪೆದ್ದಬೋಯಿವಾಂಡ್ಲು (ದೊಡ್ಡ ಬೇಡರು) ಎಂಬ ಪಂಗಡಗಳಿರುವುದು ಕಂಡು ಬರುತ್ತದೆ.

ಚರಿತ್ರೆಯ ಪುಟಗಳಲ್ಲಿ ಬೇಡ ಪಾಳೆಯಗಾರರು

ಬೇಟೆಗಾರರು ಪಶುಪಾಲಕರು, ದಾರಿಗಳ್ಳರು, ತುರುಗಳ್ಳರು, ಸೈನಿಕರು, ಪಾಳೆಯಗಾರರು, ದೊರೆಗಳು ಎಂದೆಲ್ಲ ಕರೆಯಲ್ಪಡುವ ಬೇಡರು ಪುರಾಣಗಳ ಕಾಲದಿಂದಲೂ ತಮ್ಮ ಗುಂಪಿಗೆ ನಾಯಕರೆನಿಸಿಕೊಂಡವರು ಉಳಿದ ವರ್ಗಗಳ ಜೊತೆಯಲ್ಲಿಯೂ ಸಹಭಾಗಿತ್ವವವನ್ನು ಪಡೆದಿದ್ದರು. ಆಡಳಿತಾತ್ಮಕವಾಗಿಯೂ ಆಳುವವರಿಗೆ ಬೆಂಬಲದಾಯಕವಾಗಿದ್ದರು. ಇದಕ್ಕೆ ರಾಮಾಯಣದಲ್ಲಿ ಬಹಳಷ್ಟು ನಿದರ್ಶನಗಳು ಲಭಿಸುತ್ತವೆ.

ಮೌರ್ಯರ ಕಾಲದಲ್ಲಿ ಬೇಡರು ರಾಜನಿಗೆ ಬೇಟೆಯ ಮಾರ್ಗದರ್ಶಕರಾಗಿ ಮುಂಚೂಣಿ ಯಲ್ಲಿದ್ದರು. ಮುಂದುವರಿದಂತೆ ರಾಜಾಶ್ರಯದ ವಿವಿಧ ವೃತ್ತಿಗಳನ್ನು ಪಡೆದುಕೊಳ್ಳುತ್ತಿದ್ದ ರಾದರೂ ರಾಜಾಶ್ರಯ ತಪ್ಪಿದಾಗ ವಲಸೆಗಾರರಾಗಿ ಬೇರೆಡೆಗಳಿಗೆ ಹೊರಡುತ್ತಿದ್ದರು. ಉದಾಹರಣೆಗೆ ಅಶೋಕನ ಜೀವದಯಾ ಪರವಾದ ಮೌಲ್ಯಗಳಿಂದ ಇವರ ಬೇಟೆಗಾರಿಕೆಯ ಮೇಲೆ ಪ್ರಭಾವಗಳಾಗದೆ ಇಲ್ಲ, ಆಗ ಬೇಟೆಯ ಮೇಲೆ ಆಡಳಿತಾತ್ಮಕ ನಿಷೇಧಗಳಿದ್ದಾಗ ಬೇಡರ ವೃತ್ತಿ-ಧೋರಣೆಗಳಲ್ಲಿ ಪಲ್ಲಟಗಳಾದವು. ಶಾತವಾಹನ-ಇಕ್ಷ್ವಾಕು ದೊರೆಗಳ ಕಾಲದಲ್ಲಿ ಮಹಾತಳವಾರರಾಗಿ ಆಡಳಿತಾತ್ಮಕ ಸ್ಥಾನ ಪಡೆದರು.

ಗಂಗರ ಕಾಲದಲ್ಲಿ ಸೈನಿಕರಾಗಿ ಸೇನಾ ಮುಖಂಡರಾಗಿದ್ದುದಲ್ಲದೆ ನಂತರ ನಾಡಗವುಂಡ ಎಂಬ ಹುದ್ದೆಯವರೆಗೂ ಏರಿದ್ದರು / ಕದಂಬ-ಪಲ್ಲವರ ಕಾಲಾವಧಿಯಲ್ಲಿ ಸಂಘರ್ಷ ಗಳಿಂದಾಗಿ ಒಬ್ಬ ರಾಜನಿಂದ ಮತ್ತೊಬ್ಬ ರಾಜನಲ್ಲಿಗೆ  ಸ್ಥಳಾಂತರವನ್ನು ಮಾಡುತ್ತಿದ್ದರು. ಆಗ ರಾಜ್ಯಗಳ ಎಲ್ಲೆಗಳನ್ನು ದಾಟಿದ ವಲಸೆಗಾರರಾಗಿ ಕಂಡು ಬರುತ್ತಾರೆ. ರಾಷ್ಟ್ರಕೂಟ ಅರಸರು ತಮ್ಮ ಸೈನ್ಯದ ಮುಖಂಡರಾಗಿದ್ದ ಇವರಿಗೆ ‘ನಾಯಕ’ ಎಂಬ ಬಿರುದನ್ನಿತ್ತು ಗೌರವಿಸಿದರು. ಚಾಲುಕ್ಯರ ಕಾಲದಲ್ಲಿ ಸೇನಾ ಮುಖಂಡರಾಗಿ ಸೈನ್ಯದ ತುಕಡಿಗಳೊಂದಿಗೆ ಯಶಸ್ಸನ್ನು ಸಾಧಿಸಿಕೊಟ್ಟರು. ರಟ್ಟರು ಮೊದಲಾದ ಚಾಲುಕ್ಯರ ವಿರೋಧಿಗಳನ್ನು ದಮನ ಮಾಡುವಲ್ಲಿ ಬೇಡರ ಪಡೆಗಳು ಸಾಹಸ ತೋರಬೇಕಾಯಿತು. ಈ ಕಾರಣಕ್ಕಾಗಿ ದತ್ತಿದಾನಗಳನ್ನಿತ್ತು ಗೌರವಿಸಲಾಯಿತೆಂಬ ಹೆಗ್ಗಳಿಕೆ ಬೇಡರಿಗೆ ಸಲ್ಲುವಲ್ಲಿ ಶಾಸನಗಳು ಸಹಕಾರಿ ಯಾಗಿವೆ.

ಹೊಯ್ಸಳರ ಸೈನ್ಯದ ಮುಖ್ಯಸ್ಥರಾಗಿದ್ದರಲ್ಲದೆ; ರಾಜನಿಗೆ ಬೇಟೆಗಾರಿಕೆಯ ಮಾರ್ಗದರ್ಶಕರಾಗಿಯೂ ಆಪ್ತ ಸಹಾಯಕರಾದ ಲೆಂಕ-ಗರುಡರೂ ಆಗಿದ್ದರು. ಯುದ್ಧದ ಸಲಹೆಗಾರರೂ ಆಗಿದ್ದರೆಂದು ಹೇಳುತ್ತಾರೆ. ಹೊಯ್ಸಳ ದೊರೆ ವಿಷ್ಣುವರ್ಧನನು ಬೇಡ ಪಡೆಯ ಮುಖಂಡರನ್ನು ತನ್ನ ಆಪ್ತ ವಲಯದಲ್ಲಿರಿಸಿಕೊಂಡಿದ್ದನಂತೆ. ಹೊಯ್ಸಳರು ಸವುಣರನ್ನು ಸೋಲಿಸುವಲ್ಲಿ ಬೇಡರ ಬೆಂಬಲ ಪ್ರೋಪ್ರೇರಕವಾಗಿದ್ದವು.

ವಿಜಯನಗರದ ಕಾಲಕ್ಕೆ ಮೊದಲೇ ಕೆಲವು ಬೇಡನಾಯಕರು ಸ್ವತಂತ್ರ್ಯ ಪಾಳೇಪಟ್ಟು ಗಳನ್ನು ಸ್ಥಾಪಿಸಿಕೊಂಡಿದ್ದರು. ಕಮ್ಮಟದುರ್ಗದ ಕಂಪಿಲರಾಯ ಆತನ ಮಗ ಕುಮಾರರಾಮ ಇವರುಗಳಲ್ಲದೆ ಕಂಪಿಲರಾಯನ ಕಡೆಯವರೆಂದು ಕರೆಯಲ್ಪಡುವ ಹಕ್ಕ-ಬುಕ್ಕ ಮೊದಲಾದವ ರನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ವಿಜಯನಗರದ ಅರಸರ ಕಾಲದಲ್ಲಿ ರಾಜಾಡಳಿತದ ಸೈನ್ಯದಲ್ಲಿ ಉನ್ನತ ಹುದ್ದೆಗಳಲ್ಲಿ ಹಲವು ಬೇಡರು ಸ್ಥಾನ ಪಡೆದರು. ಪಾಳೆಯಗಾರರಾಗಿ ಆಡಳಿತದಲ್ಲಿ ಗುರುತಿಸಿಕೊಂಡಿದ್ದರು. ವಿಜಯನಗರದ ಪತನಾನಂತರ ಬಹುಪಾಲು ಪಾಳೆಯಗಾರರು ಸ್ವತಂತ್ರರೆಂದು ಘೋಷಿಸಿಕೊಂಡರು. ತಾಳಿಕೋಟೆ ಯುದ್ಧ ಹಾಗೂ ರಕ್ಕಸ ತಂಗಡಿ ಯುದ್ಧಗಳ ಹೋರಾಟದಲ್ಲಿ ಸಿಂಹಪಾಲು ಬೇಡ ಪಡೆಗಳದಾಗಿತ್ತು. ಇಂಥ ಕಾರಣದಿಂದಾಗಿಯೇ ವಿಜಯನಗರದ ಅರಸರು ಮದಕರಿನಾಯಕನನ್ನು ಚಿತ್ರದುರ್ಗದ ಪಾಳೆಯಗಾರನನ್ನಾಗಿ ಅಧಿಕೃತಗೊಳಿಸಿದ್ದರು. ನಂತರದ ದಿನಗಳಲ್ಲಿ ಪಾಳೆಯಗಾರರು ಮುಸ್ಲಿಂ ದೊರೆಗಳು, ಮರಾಠರು ನಡೆಸಿದ ದಾಳಿಗಳನ್ನು ಎದುರಿಸಬೇಕಾಯಿತು. ಹೈದರ್‌ಆಲಿ ಮತ್ತು ಟಿಪ್ಪುಸುಲ್ತಾನರ ಉಪಟಳವನ್ನು ಅನುಭವಿಸಬೇಕಾಯಿತು. ಅಲ್ಲದೆ ಬ್ರಿಟಿಷರ ಆಕ್ರಮಣಗಳಿಗೆ ಒಳಗಾಗಬೇಕಾಯಿತು.

ಸ್ಥಳೀಯ ಪಾಳೆಯಗಾರರಲ್ಲಿ ಹೊಂದಾಣಿಕೆ ಇಲ್ಲದೆ ಕಚ್ಚಾಟ ಮನಸ್ಥಾಪಗಳು ಏರ್ಪಟ್ಟಿದ್ದುದರಿಂದ ಕೆಲವು ಪಾಳೆಯಗಾರರು ಬ್ರಿಟಿಷರ ನೆರವಿಗೆ ಮೊರೆ ಹೋದದ್ದೂ ಉಂಟು. ಇಂಥ ಅಂತರ್‌ಕಲಹಗಳಿಂದ ಬ್ರಿಟಿಷರ ಕಾಲದಲ್ಲಿ ಪಾಳೆಯಗಾರರು ಆಡಳಿತಾತ್ಮಕ ವಾಗಿ ಅವಸಾನ ಹೊಂದಿದ್ದರು. ಸರ್ಜಪ್ಪನಾಯಕ, ಸಿಂಧೂರ ಲಕ್ಷ್ಮಣರಂಥ ಹಲವರು ಕುತಂತ್ರಗಳಿಗೆ ಬಲಿಯಾಗಿ ದುರಂತ ಅವಸಾನವನ್ನು ತಲುಪಿದ ಘಟನೆಗಳು  ಇತಿಹಾಸದಲ್ಲಿ ಸಂದಿ ಹೋಗಿವೆ. ಬ್ರಿಟಿಷ್ ಆಳ್ವಿಕೆಯಲ್ಲಿ ಕೆಲವು ಪಾಳೆಯಗಾರ ಮನೆತನಗಳು ಮಾಸಾಶನ ಅಥವಾ ರಕ್ಷಕ ಪಡೆಯ ಹುದ್ದೆಗಳಂಥ ಅಧೀನ ಆಡಳಿತಕ್ಕೆ ಒಗ್ಗಿ ಹೋದರು. ಕೆಲವರು ಕೃಷಿಕರಾಗಿ ಜನಸಾಮಾನ್ಯರಲ್ಲಿ ಬೆರೆತುಹೋದರು. ಮತ್ತೆ ಕೆಲವರು ಅಧಿಕಾರ-ಹಣ-ಅಂತಸ್ತು ಮತ್ತಿತರ ಸಂಪತ್ತನ್ನೆಲ್ಲ ಕಳೆದುಕೊಂಡು ಗರೀಬರಾದರು. ಈ ಎಲ್ಲ ಕಾಲಘಟ್ಟಗಳಲ್ಲೂ ಜನಸಾಮಾನ್ಯರಾದ ಬಹಳಷ್ಟು ಬೇಡರು ಬುಡಕಟ್ಟು ಸಂಸ್ಕೃತಿಯ ಆವರಣವನ್ನು ಅನಾವರಣಗೊಳಿಸಲಾಗದಷ್ಟು ಸಹಜ ಸ್ಥಿತಿಯಲ್ಲಿದ್ದರು.

ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರಗಳತ್ತ ದಾಪುಗಾಲಿನಿಂದ ನಡೆಯುತ್ತಿರುವ ಈ ಸಮುದಾಯದ ಪಾಲಿಗೆ ಮೀಸಲಾತಿಯ ಸೌಲಭ್ಯವು ಊರುಗೋಲಾಗಿದೆ. ಪ್ರಾಚೀನ ಕಾಲದಿಂದ ಆಧುನಿಕ ಕಾಲದ ಎಲ್ಲ ಹಂತಗಳಲ್ಲೂ ಬೇಡ ಸಮಾಜದ ಜೀವನಕ್ರಮದಲ್ಲಿ ಏಕಸ್ವರೂಪತೆಯನ್ನು ಗುರುತಿಸಲಾಗುವುದಿಲ್ಲ. ಸಾಮಾಜಿಕ ಅಲಕ್ಷ್ಯಕ್ಕೆ ಗುರಿಯಾದವರು ಕಳ್ಳರು, ದುಷ್ಟರು, ಕ್ರೂರಿಗಳು ಎನಿಸಿಕೊಂಡು ಪ್ರತಿರೋಧವನ್ನು ತೋರಿದ್ದಾರೆ. ಅಂತೆಯೇ ಸಾಮಾಜಿಕ-ಆರ್ಥಿಕ-ರಾಜಕೀಯ ಭದ್ರತೆಗಳು ದಕ್ಕಿದ ಗುಂಪುಗಳು ಹೋರಾಟಗಾರರು, ಶೂರರು, ಸಾಹಸ-ಪರಾಕ್ರಮಗಳಿಗೆ ಹೆಸರಾದವರೆಂದು ಸಾಬೀತಾಗಿದ್ದಾರೆ. ಸಾಮಾಜಿಕ ಶೋಷಣೆಗೆ ಒಳಗಾದ ಗುಂಪುಗಳು ಇಂದಿಗೂ ಚೇತರಿಸಿಕೊಳ್ಳಲಾಗದ ಶೋಚನೀಯ ಬದುಕನ್ನು ಮುಂದುವರಿಸುತ್ತಿದ್ದಾರೆ. ಇಂಥ ಭಿನ್ನ ಗುಂಪುಗಳ ಸಂಸ್ಕೃತಿಗಳು ಬೇರೆ ಬೇರೆಯಾಗಿಯೆ ಪರಿಚಲನಗೊಳ್ಳುತ್ತಿರುವ ಪ್ರಕ್ರಿಯೆಯಗಳಾಗಿವೆ.

* * *