ಮೈಸೂರು ಜಿಲ್ಲೆಯ ತಾಲ್ಲೂಕುಗಳಲ್ಲಿ “ಪರಿವಾರ” ಎಂಬ ಒಂದು ಜನಾಂಗವಿದೆ. ಇವರಲ್ಲಿ ಬಹುಪಾಲು ಗಂಡಸರು ತಮ್ಮ ಹೆಸರಿನ ಕೊನೆಗೆ “ನಾಯಕ” ಎಂಬ ಉಪನಾಮ ವನ್ನು ಸೇರಿಸಿಕೊಂಡಿರುತ್ತಾರೆ. ಇತ್ತೀಚೆಗೆ ಇವರು “ನಾಯಕ ಜನಾಂಗ”ದ ಎಂದರೆ ಬೇಡರ ಜಾತಿಯ ಒಂದು ಉಪಜಾತಿಯೆಂದು ಹೇಳಿಕೊಳ್ಳತೊಡಗಿದ್ದಾರೆ. ಅಲ್ಲದೆ, ಅಲ್ಲಲ್ಲಿ ರಕ್ತಸಂಬಂಧವನ್ನೂ ಬೆಳಸತೊಡಗಿದ್ದಾರೆ. ಇವರ ಮೂಲವೇನು ಎಂಬುದೇ ನಮ್ಮ ಜಿಜ್ಞಾಸೆ.

“ಪರಿವಾರ” ಎಂಬ ಜಾತಿಸೂಚಕ ಪದಕ್ಕೆ ಅರ್ಥವನ್ನು ಹೇಳುವಾಗ ಆ ಜನರು ತಾವು  ರಾಜನ ಪರಿವಾರದವರೆಂದು ಹೇಳಿಕೊಳ್ಳುತ್ತಾರೆ. ಇದರಿಂದ ಅವರು ತಮ್ಮ ಜಾತಿಯನ್ನು “ರಾಜ ಪರಿವಾರ”ವೆಂತಲೂ ಹೇಳಿಕೊಳ್ಳುತ್ತಾರೆ. ಆದರೆ ಇವರು ಯಾವ ಯಾವ ರಾಜರ  ಬಳಿ ಪರಿವಾರದವರಾಗಿದ್ದರು? ಎಂಬುದು ಖಚಿತವಾಗಿ ಗೊತ್ತಿಲ್ಲ. ಹಿಂದಿನ ಕಾಲದಲ್ಲಿ ರಾಜ ಮಹಾರಾಜರ ಬಳಿ ಊಳಿಗ ಮಾಡುತ್ತಿದ್ದವರು ಕೇವಲ ಈ ಜಾತಿಯ ಜನರು ಮಾತ್ರ ವೇನಲ್ಲ. ಕೈಗೆ ಸಿಕ್ಕಿದವರನ್ನೆಲ್ಲ ಹಿಡಿದುಕೊಂಡು ರಾಜ ಮಹಾರಾಜರು ದುಡಿಸಿಕೊಳ್ಳು ತ್ತಿದ್ದರು. ಆದುದರಿಂದ “ಪರಿವಾರದವರು” ಎಂಬ ಜಾತಿ ಸೂಚಕ ಶಬ್ದಕ್ಕೆ ಸಿಬ್ಬಂದಿಯವರು ಎಂಬ ಸಾಧಾರಣ ಅರ್ಥವನ್ನು ಗ್ರಹಿಸಿದರೆ ಅಪಾರ್ಥವಾಗುತ್ತದೆ; ಅನರ್ಥವಾಗುತ್ತದೆ.

ಸತ್ಯಶೋಧನೆಗಾಗಿ ಪ್ರಾಚೀನ ಶಿಲಾ ಶಾಸನಗಳನ್ನು ಹುಡುಕಿ ನೋಡಿದಾಗ ನಮಗೆ ದೊರೆತ ಸ್ವಾರಸ್ಯಕರ ಸಂಗತಿಗಳನ್ನು ಇಲ್ಲಿ ತಿಳಿಸಬಯಸುತ್ತೇವೆ.

೧. ಈ “ಪರಿವಾರ” ಜಾತಿಯ ಅತಿ ಪ್ರಾಚೀನ ಹೆಸರು “ಪಱಮೆಯರ್” ಎಂಬುದಾಗಿ   ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ದೊರೆತಿರುವ ಒಂದು ಶಾಸನ (ನಂಬರ್ ೮೪) ತಿಳಿಸಿಕೊಡುತ್ತದೆ. ಆ ಶಾಸನವು ಕ್ರಿ.ಶ. ೧೧ನೆಯ ಶತಮಾನಕ್ಕೆ ಸೇರಿದುದು. ಅದು ಹೀಗೆ ಪ್ರಾರಂಭವಾಗುತ್ತದೆ.

ಸ್ವಸ್ತಿ ಶ್ರೀಮತ್ ಪಱಮೇಯರ ಕುಲದ ತೊರೆಯರ ಮಾರಣ್ನಗಂ
ಅನ್ನವ್ವೆಯಕ್ಕಂಗಂ ಪುಟ್ಟದ ವರ ತಾತಣ್ನ …………………..

ಇದರಲ್ಲಿ ಉಕ್ತನಾಗಿರುವ ತಾತಣ್ಣ ಎಂಬುವನು ತೊರೆಯರ ಜಾತಿಯವನು ಮತ್ತು ಪಱಮೆಯರ ಕುಲದವನು. ಎಂದರೆ ತೊರೆಯರ ಜಾತಿಯಲ್ಲಿ ಪಱಮೆಯರ ಎಂಬ ಒಂದು ಕುಲ ಇದ್ದಿತು, ಎಂದು ನಮಗೆ ಗೊತ್ತಾದಂತಾಯಿತು. ಈಗಲೂ “ಪರಿವಾರ”ದವರನ್ನು ಹಳಬರು ತೊರೆಯರೆಂದೇ ಕರೆಯುತ್ತಾರೆ. ಪರಿವಾದವರೂ ಕೂಡ ತಮ್ಮನ್ನು ತೊರೆಯರೆಂದು ಒಪ್ಪಿಕೊಳ್ಳುತ್ತಾರೆ.

೨. ಕ್ರಿ.ಶ. ೧೩ನೆಯ ಶತಮಾನಕ್ಕೆ ಸೇರಿದ ಗುಂಡ್ಲುಪೇಟೆ ತಾಲ್ಲೂಕಿನ ೯೯ನೆಯ ನಂಬರಿನ ಒಂದು ಶಾಸನವು ಇದೇ ಜಾತಿಯನ್ನು “ಪರಿಯಮಿರ” ಎನ್ನುತ್ತದೆ. ಇದರಿಂದ “ಪಱಮೆಯರ” ಎಂಬ ಶಬ್ದವು ಇನ್ನೂರು ವರ್ಷಗಳ ನಂತರ ವಿಕಾಸಗೊಂಡು ಪರಿಯಮಿರ ಎಂದು ಬದಲಾಯಿಸಿರುವುದು ಕಂಡುಬರುತ್ತದೆ. ತೊರೆಯರ ಜಾತಿಯ ಈ “ಪರಿಯಮಿರ” ಎಂಬ ಒಂದು ಕುಲವೇ ೧೯-೨೦ನೆಯ ಶತಮಾನದಲ್ಲಿ “ಪರಿವಾರ” ಎಂದಾಗಿದೆ. ಇದರ ಧ್ವನ್ಯಾತ್ಮಕ ವಿಕಾರ ಹಾಗೂ ವಿಕಾಸವನ್ನು ನಾವು ಹೀಗೆ ತೋರಿಸಬಹುದು.

ಪಱಿಮೆಯರ > ಪರಿಯಮಿರ > ಪರಿವಯರ > ಪರಿವಾರ

ಆದಕಾರಣ ಈ ಪ್ರಸಂಗದಲ್ಲಿ “ಪರಿವಾರ” ಎಂಬ ಜಾತಿಸೂಚಕ ಶಬ್ದದ ಅರ್ಥ ರಾಜನ ಬಳಗದವರು ಎಂದಾಗಲಿ, ಸೇವಕರು ಎಂದಾಗಲಿ ಅಲ್ಲ. “ಪರಿವಾರ” ಎಂಬುದು “ಪಱಿಮೆಯರ್” ಎಂಬ ಪ್ರಾಚೀನ ಜಾತಿಯ ನನ ರೂಪ. ಈ ಸತ್ಯ ಸಂಗತಿಯು ಪರಿವಾರ ಜಾತಿಯವರಾರಿಗೂ ಗೊತ್ತಿಲ್ಲ. ಅವರಿಗೆ ಅವರ ಜಾತಿಯ ಹುಟ್ಟು ಮತ್ತು ಬೆಳವಣಿಗೆಯ ಚರಿತ್ರೆ ಗೊತ್ತಿದ್ದಿದ್ದರೆ ಮನಸ್ಸಿಗೆ ತೋಚಿದಂತೆಲ್ಲ ಅಪಾರ್ಥಗಳನ್ನು ಕಲ್ಪಿಸಿಕೊಳ್ಳುತ್ತಿರಲಿಲ್ಲ; ಮತ್ತು ಬೇಡರೊಡನೆ ಸಂಬಂಧ ಬೆಳಸಲು ಇಷ್ಟವೂ ಪಡುತ್ತಿರಲಿಲ್ಲ.

೩. ಇನ್ನೂ ಪ್ರಾಚೀನ ಚರಿತ್ರೆಯನ್ನು ಹುಡುಕಿದರೆ, ‘ಪಱಿಮೆಯರ್” ಎಂಬ ಈ ದ್ರಾವಿಡ ಜನಾಂಗದ ಬಗೆಗೆ ಸುಮಾರು ೨,೦೦೦ ವರ್ಷದಷ್ಟು ಹಳೆಯದಾದ ತಮಿಳಿನ ಆದಿಗ್ರಂಥವಾದ “ತೊಲ್ ಕಾಸ್ಪಿಯಂ”ನಲ್ಲಿ ಅತ್ಯಂತ ಮುಖ್ಯವಾದ ಉಲ್ಲೇಖ ದೊರಕುತ್ತದೆ. ಕೇರಳ (ಮಲೆಯಾಳ) ದೇಶದ ಪ್ರಾಗೈತಿಹಾಸಕ್ಕೆ ಸಂಬಂಧಪಟ್ಟಂತೆ ಇವರ ಬಗೆಗೆ ಹೇಳಲಾಗಿದೆ. ಈ ಗ್ರಂಥದಲ್ಲಿ ಇವರನ್ನು “ಮೀನವರ್” ಎಂಬ ಪ್ರಾಚೀನ ಬೆಸ್ತರ ಜಾತಿಯಲ್ಲಿ ಒಂದು ಉಪಜಾತಿಯೆಂದು ವರ್ಗೀಕರಿಸಲಾಗಿದೆ. ಇವರು ಪ್ರಾಗೈತಿಹಾಸಿಕ ಕಾಲದಲ್ಲಿ ಮಲೆಯಾಳ (ಕೇರಳ)ದ ನಿವಾಸಿಗಳು.

೪. ಮೈಸೂರು ಜಿಲ್ಲೆಯ ಹೊರತಾಗಿ ಉಳಿದ ಕನ್ನಡನಾಡಿನ ಯಾವ ಜಿಲ್ಲೆಯಲ್ಲೇ ಆಗಲಿ ಇವರು ದೊರಕುವುದಿಲ್ಲ. ಆಂಧ್ರದಲ್ಲಿಯೂ ಈ ಜಾತಿಯ ಜನರು ಇಲ್ಲ.

೫. ಮೈಸೂರು ಜಿಲ್ಲೆಯಲ್ಲಿ ಮೊದಲಿನಿಂದಲೇ ಇವರ ನಡುನಡುವೆಯೇ ಬೇಡರೂ ಇರುತ್ತಿದ್ದರು. ಈ ಬೇಡರಿಗೆ ವೇಳರ್, ಕುಣಿಂದರ್, ಕೋವರ್ ಎಂದೆಲ್ಲ ಹೆಸರುಗಳಿದ್ದವು. ವಿಜಯನಗರದ ದೊರೆಗಳ ಆಡಳಿತದಲ್ಲಿಯೂ ಮೈಸೂರು ಜಿಲ್ಲೆಯಲ್ಲಿ ಬೇಡರ ಜಾತಿಯ  ಅಧಿಕಾರಿಗಳು ಬಹಳಷ್ಟು ಮಂದಿ ಇದ್ದರು ಎಂಬುದಕ್ಕೆ ಶಿಲಾಶಾಸನಗಳ ಆಧಾರವಿದೆ. ಬೆಟ್ಟದಪುರ, ರಾವಂದೂರು, ಕೊಳ್ಳೇಗಾಲಗಳಲ್ಲಿ ಬೇಡರ ನಾಯಕರ ಪ್ರಾಚೀನ ಶಿಲಾಶಾಸನ ಗಳು ದೊರಕುತ್ತವೆ. ಅವರು ಎಲ್ಲಿಯೂ ತಮ್ಮನ್ನು ತೊರೆಯರೆಂದಾಗಲಿ, ಪರಿವಾರ ವೆಂದಾಗಲಿ, ಪಱಮೆಯರ್ ಎಂದಾಗಲಿ ಹೇಳಿಕೊಂಡಿಲ್ಲ. ಆದುದರಿಂದ ಬೇಡರೂ ಪರಿವಾರ ದವರೂ ಮೈಸೂರು ಜಿಲ್ಲೆಯಲ್ಲಿ ಜೊತೆ ಜೊತೆಯಲ್ಲಿದ್ದರೂ ಬೇರೆ ಬೇರೆ ಗುಂಪುಗಳಲ್ಲಿಯೇ ಇದ್ದರು. ಈಗಲೂ ಹಾಗೆಯೇ ಬೇರೆ ಬೇರೆಯೆ ಇದ್ದಾರೆ.

೬. ಇತ್ತೀಚಿನ ಪರಿವಾರದವರು ಸುಮಾರು ೧೦೦೦ ವರ್ಷಗಳಿಂದ ಕನ್ನಡ ಮಾತಾಡುತ್ತಿದ್ದಾರೆ. ಅದಕ್ಕೆ ಮೊದಲು ಪ್ರಾಚೀನ ಮಲೆಯಾಳಿ ಭಾಷೆಯನ್ನೋ ತಮಿಳನ್ನೋ ಆಡುತ್ತಿದ್ದಿರಬಹುದು. ಏಕೆಂದರೆ ಅವರ ಜಾತಿಯ ಹೆಸರಿನಲ್ಲಿರುವ ಪ್ರಕಾರವು ೯೦೦ ವರ್ಷಗಳಿಂದಲೂ ಬದಲಾಯಿಸದೆ ಉಳಿದು ಬಂದಿರುವುದನ್ನು ಗಮನಿಸಿರಿ.

ಹಳಗನ್ನಡದಲ್ಲಿ ಪ-ಕಾರವು ಸುಮಾರು ೧೦ನೆಯ ಶತಮಾನದಿಂದಲೇ ಹ-ಕಾರವಾಗಿ ಮಾರ್ಪಾಡಾಗತೊಡಗಿದ್ದಿತು. ಆದರೆ ಈ ರೀತಿ ತಮಿಳು, ಮಲೆಯಾಳಿ, ತೆಲುಗು ಭಾಷೆಗಳಲ್ಲಿ ಪ-ಕಾರವು ಹ-ಕಾರವಾಗಿ ಬದಲಾಯಿಸುವುದಿಲ್ಲ. ಆದ್ದರಿಂದ “ಪಱಮೆಯರ್ / ಪರಿಯಮಿರ / ಪರಿವಾರ” ಎಂಬ ಶಬ್ದಗಳು ಕನ್ನಡದವೇ ಆಗಿದ್ದ ಪಕ್ಷದಲ್ಲಿ ಅವು ಕನ್ನಡದಲ್ಲಿ ಕ್ರಮಶಃ *ಹಱಿಮೆಯರ್ / *ಹರಿಯಮಿರ / * ಹರಿವಾರ” ಎಂದು ಬದಲಾಯಿಸಬೇಕಿತ್ತು. ಆದರೆ ಹಾಗೆ ಆಗಿಲ್ಲದಿರುವುದರಿಂದ ಈ “ಪರಿವಾರ” ಎಂಬ ನನ ಶಬ್ದವು ಕನ್ನಡವೂ ಅಲ್ಲ, ಸಂಸ್ಕೃತ ಭಾಷೆಯದಂತೂ ಮೊದಲೇ ಅಲ್ಲ. ಇದು ಮಲೆಯಾಳೀ ಭಾಷೆಯ ಧ್ವನಿ ಲಕ್ಷಣವನ್ನುಳ್ಳ ಪರಂಪರಾಗತ ಮಲೆಯಾಳೀ ಶಬ್ದ.

೭. ಬೇಡರು ಕನ್ನಡಿಗರಾಗಿರಲಿ, ತೆಲುಗರಾಗಿರಲಿ, ತಮಿಳಿನವರಾಗಿರಲಿ, ಅವರಲ್ಲಿ “ಬೆಡಗು”ಗಳು ಎಂದು ಇಪ್ಪತ್ತೆರಡು ಗೋತ್ರಗಳಿವೆ. ಇವುಗಳಲ್ಲಿ ಪಱಮೆಯರ್ ಅಥವಾ ಪರಿವಾರ ಎಂಬ ಗೋತ್ರವು ಯಾವುದೂ ಇಲ್ಲ. ಬೆಡಗು ಎಂದರೆ ಬೇಡನ ಬೇಡತನ ಎಂದು ಅರ್ಥ. ಇದರ ಮೂಲ-ವೇಡನ್+ಕು>ವೆಡಂಗು>ಬೆಡಂಗು>ಬೆಡಗು ಎಂದಿರುತ್ತದೆ. ಒರಿಸ್ಸಾ ಪ್ರಾಂತದಲ್ಲಿ ಬಹು ಹಿಂದೆಯ ವಲಸೆ ಹೋಗಿ ನೆಲೆಸಿರುವ (ಮತ್ತು ಒರಿಯಾ ಭಾಷೆಯನ್ನು ಮಾತಾಡುವ) ಶಬರ ಅಥವಾ “ಸೌರ್” ಎಂಬ ಕಾಡು ಬೇಡರಲ್ಲಿಯೂ ಇಂದಿಗೂ ಬೆಡಗು ಎಂಬುದು “ವೆರ್‌ಗು” ಎಂಬ ರೂಪದಲ್ಲಿದೆ, ಉಳಿದಿದೆ. ಆದರೆ ಪರಿವಾರದವರೆಂಬ ತೊರೆಯರ ಜಾತಿಯಲ್ಲಿ ಈ ಬೇಡರ ಬೆಡಗುಗಳ ವ್ಯವಸ್ಥೆ ಕಂಡು ಬಂದಿಲ್ಲ. ಅವರಲ್ಲಿ ಇಂತಹ ಗೋತ್ರ ಪದ್ಧತಿ ಇಲ್ಲ.

ಬೇಡರ ಗೋತ್ರಗಳಲ್ಲಿ ಬರಮಲೋರು ಅಥವಾ ಭ್ರಮರಕುಲ ಎಂಬ ಒಂದು ಬೆಡಗು ಇದೆ. ಇದು ಪೂವಾಲೀ ಗೋತ್ರದ ಒಂದು ಉಪಗೋತ್ರ. ಈ ಬರಮಲೋರು ಎಂಬ ಬೇಡರ ಬೆಡಗು ಮತ್ತು ಪಱಮೆಯರ್ ಎಂಬ ತೊರೆಯರ ಕುಲ ಇವೆರಡೂ ಒಂದೇಯೋ ಅಲ್ಲ ಎರಡೂ ಒಂದೇ ಆಗಿದ್ದಿದ್ದ ಪಕ್ಷದಲ್ಲಿ ಪ್ರಾಚೀನ ಶಾಸನಗಳಲ್ಲಿ ಎರೆ ಪಱಮೆಯರ್ ಎಂಬ ಕುಲದ ಉಲ್ಲೇಖವಿಲ್ಲ ಅದೂ ಅಲ್ಲದೆ ಹಿಂದೆ ಹೇಳಿದ ಗುಂಡ್ಲುಪೇಟೆಯ ೮೮ನೆಯ ನಂಬರಿನ ಶಾಸನವು ಪಱಮಿಯರ್ ಕುಲವು ತೊರೆಯರಿಗೆ ಸಂಬಂಧಿಸಿದುದು ಎಂದು ಸ್ಪಷ್ಟವಾಗಿ ನುಡಿಯುತ್ತಿದೆ. ತೊಲ್‌ಕಾಪ್ಪಿಯಂ ಗ್ರಂಥದಲ್ಲಿಯಂತೂ ಸ್ಪಷ್ಟವಾಗಿ ಪಱಿಮಿಯರನ್ನು ಬೆಸ್ತರೆಂದು ವರ್ಗೀಕರಿಸಲಾಗಿದೆ. ಆದುದರಿಂದ ಇಂದು ಮೈಸೂರು ಜಿಲ್ಲೆಯಲ್ಲಿ ಕಂಡುಬರುವ ಪರಿವಾರ ಜನಾಂಗದ ಪೂರ್ವಜರು ಬೇಡರಲ್ಲ.

೮. ‘ಪರಿವಾರದವರು’ ವಾಲ್ಮೀಕಿಯನ್ನಾಗಲಿ ಅಥವಾ ಆತನ ಮಗನೆಂದು ಹೇಳಿಕೊಳ್ಳುವ ಮಣಿಪೋತರಾಯನನ್ನಾಗಲಿ ತಮ್ಮ ಪೂರ್ವಜರೆಂದು ಬೇಡರು ಒಪ್ಪಿಕೊಳ್ಳುವಂತೆ, ಒಪ್ಪಿಕೊಳ್ಳುವುದಿಲ್ಲ. ಪರಿವಾರದವರು ತಮ್ಮನ್ನು ಗಂಗೆ ಮತಸ್ಥರೆಂದು ಹೇಳಿಕೊಳ್ಳುತ್ತಾರೆ. ಆದರೆ ಬೇಡರು ವಾಲ್ಮೀಕಿ ಮತಸ್ಥರು.

ಈ ಎಲ್ಲ ಕಾರಣಗಳಿಂದ ‘ಪರಿವಾರದವರು’ ಬೇಡರ ಜನಾಂಗಕ್ಕೆ ಯಾವ ಕಾಲದಿಂದಲೂ ಸೇರಿದವರಲ್ಲ. ಇವರು ಕೇರಳದ ಕಡೆಯಿಂದ ಸುಮಾರು ೮-೯ನೆಯ ಶತಮಾನದಲ್ಲಿ ಅಥವಾ ಅದಕ್ಕೂ ಮುಂಚೆಯೇ ಕನ್ನಡನಾಡಿನ ಗುಂಡ್ಲುಪೇಟೆ, ಯಳಂದೂರು ಮುಂತಾದ ಕಡೆಗಳಿಗೆ ವಲಸೆ ಬಂದ ಪ್ರಾಚೀನ ಮಲೆಯಾಳಿ ಬೆಸ್ತರ ಒಂದು ಉಪಜಾತಿ ಎಂದು ಸಾಧಾರಣವಾಗಿ ಊಹಿಸಬಹುದಾಗಿದೆ. ಈ ಸಾವಿರಾರು ವರ್ಷಗಳಲ್ಲಿ ಸ್ಥಳೀಯ ಪ್ರಭಾವಗಳಿಗೆ ಸಿಕ್ಕಿಬಿದ್ದು ಪೀಳಿಗೆಯಿಂದ ಪೀಳಿಗೆಗೆ ಇವರು ಅಚ್ಚಕನ್ನಡಿಗರಾಗಿ ಬಿಟ್ಟಿದ್ದಾರೆ. ಆದರೂ ಇಲ್ಲಿನ ಸ್ಥಳೀಯ ಬೆಸ್ತರೊಂದಿಗೆ ನೆಂಟಸ್ತಿಕೆ ಮಾಡಲು ಇವರು ಹಿಂಜರಿಯುತ್ತಾರೆ. ಏಕೆಂದರೆ ಸ್ಥಳೀಯ ಕನ್ನಡ ಬೆಸ್ತರ ಪೂರ್ವೋತ್ತರಗಳೇ ಬೇರೆ, ಪರಿವಾರದವರ ಪೂರ್ವೋತ್ತರಗಳೇ ಬೇರೆ.

ಪುರಾತನ ಬೇಡರು ಆಂಧ್ರ-ಪುಲಿಂದ ಎಂಬ ಹೆಸರನ್ನುಳ್ಳವರು. ಅಶೋಕ ಮೌರ‍್ಯನ ೧೩ನೆಯ ನಂಬರಿನ ಬಂಡೆ ಶಾಸನದ ಪ್ರತಿಗಳಲ್ಲಿ ಬೇಡರನ್ನು “ಪುಲಿಂದ / ಪುರಿಂದ / ಪುಳಿಂದ” ಎಂದು ಉಲ್ಲೇಖಿಸಲಾಗಿದೆ. ಬೇಡರು ನರ್ಮದಾ, ತಪತೀ ನದಿಗಳ ಪ್ರದೇಶದಿಂದ ಹಿಡಿದು ವಿಂಧ್ಯಪರ್ವತದಲ್ಲೆಲ್ಲ ಹೆಚ್ಚಾಗಿದ್ದು ತದನಂತರ ಬಳ್ಳಾರಿ, ಚಿತ್ರದುರ್ಗ, ಗುಂಟೂರು, ಕಡಪ, ಕರ್ನೂಲು ಜಿಲ್ಲೆಗಳಲ್ಲಿ ಹೆಚ್ಚಾಗಿ ವಾಸಿಸತೊಡಗಿದ್ದರು. ಆದುದರಿಂದ ಕನ್ನಡ ನಾಡಿನ ಬೇಡರಿಗೂ ಮೈಸೂರು ಜಿಲ್ಲೆಯ “ಪರಿವಾರ”ದವರಿಗೂ ಯಾವ ಬಾದರಾಯಣ ಸಂಬಂಧವೂ ಇಲ್ಲ.

ಇಷ್ಟೆಲ್ಲಾ ವ್ಯತ್ಯಾಸಗಳಿದ್ದರೂ, ತೊರೆಯರ ಜನಾಂಗದ ಈ “ಪರಿವಾರ”ದವರು ನಾಯಕ ಎಂಬ ಐತಿಹಾಸಿಕ ಪರಂಪರೆಯ ಉಪನಾಮವನ್ನು ತಮ್ಮ ಹೆಸರುಗಳಿಗೆ ಲಗತ್ತಿಸಿಕೊಳ್ಳು ವುದರಿಂದ ಬರಿಯ ಭ್ರಮೆಗೆ ಕಾರಣವಾಗಿದೆ. ರಾಷ್ಟ್ರಕೂಟರ ಕಾಲದಿಂದಲೂ “ನಾಯಕ” ಎಂಬ ಹೆಸರು ಬಹುಪಾಲು ಬೇಡರಿಗೇ ಅನ್ವಯಿಸುತ್ತಿದ್ದಿತು. ಏಕೆಂದರೆ ಬೇಡರು ಬಹು ಹಿಂದಿನಿಂದಲೂ ಬಹುಸಂಖ್ಯೆಯಲ್ಲಿ ಸೈನಿಕರು, ಶಸ್ತ್ರಧಾರಿಗಳು ಮತ್ತು ಆಯುಧ ಜೀವಿಗಳು.

ಒಟ್ಟಿನಲ್ಲಿ “ಪರಿವಾರ”ದವರು ಎಂದರೆ ಪಱಮೆಯರ್ ಎಂಬ ಒಂದು ದ್ರಾವಿಡ ಜಾತಿ. ಅವರು ಬೇಡರೆಂದೆನ್ನಿಸಿಕೊಳ್ಳುವುದಿಲ್ಲ. ತೊರೆಯರೆಂದೆನ್ನಿಸಿಕೊಳ್ಳುತ್ತಾರೆ. ತೊರೆಯರು ಬೇಡರಲ್ಲ, ಬೇಡರು ತೊರೆಯರಲ್ಲ. ಆದಕಾರಣ ನಾಯಕ, ನಾಯ್ಕ, ನಾಯಕ್, ಪಾಳೇಗಾರ್ ಮುಂತಾದ ಭ್ರಾಮಕ ನಾಮಧೇಯಗಳಿಗೆ ಮರುಳಾಗದ, ಬೇಡರೇ ಆಗಲಿ, ಪರಿವಾರದವರೇ ಆಗಲಿ, ಚಾರಿತ್ರಿಕ ಸತ್ಯಾಂಶಗಳಿಗೆ ಮಹತ್ವ ಕೊಟ್ಟು ತಂತಮ್ಮ ಮನೆಯ ಹೆಣ್ಣುಮಕ್ಕಳನ್ನು ಕೊಟ್ಟು ತರುವಾಗ ಪರಸ್ಪರ ಎಚ್ಚರದಿಂದ ವ್ಯವಹರಿಸಬೇಕೆಂಬುದು ಈ ನಮ್ಮ ಲೇಖನದ ಉದ್ದೇಶ. ನಮ್ಮ ಘನ ಸರ್ಕಾರವೂ ಜಾತಿ ಸರ್ಟಿಫಿಕೇಟ್‌ಗಳನ್ನು ದಯಪಾಲಿಸುವಾಗ ಇತ್ತ ಗಮನಹರಿಸುವುದು ಅತ್ಯಂತ ಅಗತ್ಯವಾಗಿದೆ.

ಕೃಪೆ : ಇತಿಹಾಸ ಚಂದ್ರಿಕೆ

* * *