ಭಾರತದ ಬುಡಕಟ್ಟುಗಳಲ್ಲೊಂದಾದ ನಾಯಕ ಸಮುದಾಯಕ್ಕೆ ತನ್ನದೇ ಆದ ವಿಶಿಷ್ಟ ಚಹರೆ ಇದೆ. ಅಲ್ಲದೆ ನಾಯಕ ಸಮುದಾಯ ತನ್ನದೇ ಆದ ಪ್ರತ್ಯೇಕ ಸಂಸ್ಕೃತಿಯೊಂದಿಗೆ ಜನ ಜೀವನವನ್ನು ನಡೆಸುತ್ತಿದೆ ಎನ್ನಬಹುದು. ಪ್ರತಿಯೊಂದು ಸಮುದಾಯಕ್ಕೂ ಅವರದೇ ಆದ ಚಾರಿತ್ರಿಕ, ಐತಿಹಾಸಿಕ, ಸಾಮಾಜಿಕ ಹಿನ್ನೆಲೆಗಳನ್ನು ಕಾಣುತ್ತೇವೆ. ಅಂತಹದರಲ್ಲಿ ಈ ನಾಯಕ ಸಮುದಾಯವು ಒಂದು. ಇದಕ್ಕೆ ಇದರದೇ ಆದ ವರ್ಣರಂಜಿತ ಇತಿಹಾಸವಿದೆ.

ನಾಯಕ ಸಮುದಾಯದಲ್ಲಿ ಅನೇಕರು ವೀರಸಾಹಸಿಗಳಾಗಿ ಬಾಳಿ ಬದುಕಿ ಪಾಳೆಯಗಾರ ರಾಗಿ, ರಾಜರೆನಿಸಿಕೊಂಡು, ಗಂಡುಗಲಿಗಳಾಗಿ ತಮ್ಮ ಪ್ರಭುತ್ವ ಸಾಧಿಸಿ ರಾಷ್ಟ್ರಪ್ರೇಮಕ್ಕೆ, ಸಾಹಸಕ್ಕೆ, ಧೈರ್ಯಕ್ಕೆ, ಸಾಹಸಕ್ಕೆ, ಶೌರ್ಯ, ಪರಾಕ್ರಮಗಳಿಗೆ ಹೆಸರಾಗಿ, ಸಾಹಿತ್ಯ ಸಂಸ್ಕೃತಿ, ಕಲೆಗಳ ಪ್ರೋಹೋಗಿದ್ದಾರೆ.

ಆದ್ದರಿಂದ ಬೇಡರೆಂದರೆ ಯಾರಿಗೂ ಅಂಜದ, ಅಳುಕದ, ಅಳಲಾರದ ವ್ಯಕ್ತಿ ಎನ್ನುವ ಅರ್ಥವನ್ನು ಕಾಣುತ್ತೇವೆ.

ಬೇಟೆಯಾಡುವುದನ್ನೇ ಬದುಕಿನ ಭಾಗವಾಗಿಸಿಕೊಂಡ ಈ ಸಮುದಾಯವು ಬೇಟೆಯಾಡಿ ತನ್ನ ಜೀವನವನ್ನು ಸಾಗಿಸುತ್ತಿತ್ತು. ಬೇಟೆಯಾಡುವುದರಿಂದಲೇ ಈ ಬುಡಕಟ್ಟು ಸಮುದಾಯವು ‘ಬೇಡ’ರೆಂದು ಕರೆಯಿಸಿಕೊಂಡಿತೆನ್ನಬಹುದು. ಬೆಟ್ಟ ಗುಡ್ಡಗಳ ಮಧ್ಯೆ ತಮ್ಮ ವಾಸಸ್ಥಳ ಮಾಡಿಕೊಂಡ ಈ ಸಮುದಾಯದವರು ಚರ್ಮದ ತೊಗಟೆಯಿಂದಲೇ ತಮ್ಮ ಉಡುಪನ್ನು ತಯಾರಿಸಿಕೊಳ್ಳುತ್ತಿದ್ದರು.

ಆದಿ ಮೂಲವಾದ ಭಗವಂತನು ಬೇಡರ ಚಂಚುಲಕ್ಷ್ಮಿಯನ್ನು ಮದುವೆಯಾಗುವುದರ ಮೂಲಕ ಬೇಡರ ವಂಶವನ್ನು ಬೆಳೆಯಿಸಿದನೆಂಬ ಐತಿಹ್ಯವನ್ನು ಕಾಣಬಹುದು. ಏಕಾಂಗಿತನದಲ್ಲಿ ಅಲೆಯುತ್ತಿದ್ದ ಬೇಡ ಸಮುದಾಯದ ರೋಮಾಂಚನ ಹೆಜ್ಜೆಗಳು ಎಲ್ಲಿಂದ ಆರಂಭವಾದವು, ಹೇಗೆ ಆರಂಭವಾದವು ಎನ್ನುವುದರ ಬಗ್ಗೆ ಹಲವಾರು ವಿದ್ವಾಂಸರಲ್ಲಿ ವಾದ ವಿವಾದಗಳಿವೆ.

ಹಲವರ ಅನಿಸಿಕೆಯಲ್ಲಿ ಬೇಡ ಜನಾಂಗದ ಮೂಲ ವಾಲ್ಮೀಕಿ ಎಂದು ಹೇಳುತ್ತಾರೆ. ಈತ ಕಿರಾತರ ಯಜಮಾನನಾದ ಕಾಮಕೇತು, ಲಕ್ಷ, ಮೀನು, ಮಲ್ಲರೆಂಬ ಇನ್ನಿತರ ಏಳು ಜನ ಮಕ್ಕಳ ನೇತೃತ್ವದಲ್ಲಿ ಏಳು ಪಡೆಗಳನ್ನು ರಚಿಸಿ ದರೋಡೆ ನಡೆಸುತ್ತಿದ್ದನು. ಮುಂದೆ ಕಾಡಿನಲ್ಲಿ ಕಾಲಾನಂತರ ಚದುರಿಹೋದ ಈ ಪಡೆಗಳು ಬೇಡ ಜನಾಂಗದ ವಂಶ ವಿಕಾಸಕ್ಕೆ ನಾಂದಿ ಹಾಡಿದವು ಎಂದು ಹೇಳಲಾಗಿದೆ.

ಬೇಡರು ಕಣ್ವ ಋಷಿಯ ವಂಶಜರೆಂಬ ನಂಬಿಕೆಯಿದೆ. ಅದಕ್ಕಾಗಿಯೇ ಅವರು ‘ಕಾಣ್ಯಮ್’ ಕುಲದವರೆಂದು ತಮ್ಮನ್ನು ಕರೆದುಕೊಳ್ಳುತ್ತಾರೆ.

‘ಬೇಡ’ ಎನ್ನುವ ಪದವು ಸೃಷ್ಟಿಕರ್ತ ಬ್ರಹ್ಮನು ಊರಿನೊಳಕ್ಕೆ ಪ್ರವೇಶಿಸುತ್ತಿದ್ದ ಅಪರಿಚಿತವಾದ ಒಂದು ಜಾತಿಯನ್ನು ತಡೆದು ಊರಿನೊಳಕ್ಕೆ ಹೋಗುವುದು ‘ಬೇಡ’ವೆಂದದ್ದ ರಿಂದ ಆ ಜಾತಿಗೆ ಅದೇ ಹೆಸರೇ ಬಂದು ಅಂದಿನಿಂದ ಬೇಡ ಎಂಬ ಪದ ಬಂದಿತೆಂದು ಹೇಳಲಾಗಿದೆ.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಜಾತಿ ನಿರ್ಮಾಣದಲ್ಲಿ ತೊಡಗಿದ್ದ ಬ್ರಹ್ಮನು ಹಸಿ ಮಣ್ಣಿನಿಂದ ಹಲವು ಹೆಸರುಗಳ ಜಾತಿ ನಿರ್ಮಾಣಗಳನ್ನು ಮಾಡಿ ಮಾಡಿ ಊರಿನೊಳಗೆ ಎಸೆಯುತ್ತಿದ್ದ, ಸೃಷ್ಟಿ ಸಾಕೆನಿಸಿ ತನ್ನ ಕೈಲಿದ್ದ ಮಣ್ಣನ್ನು ‘ಬೇಡ’ವೆಂದು ಬೇಲಿಯಾಚೆಗೆ ಎಸೆದನು. ಅದರಲ್ಲಿಯೇ ಒಂದು ಸಮೂಹ ಸೃಷ್ಟಿಯಾಗಿ ಊರಿನೊಳಗೆ ಪ್ರವೇಶಿಸಲು ಪ್ರಯತ್ನಿಸಿದರು. ‘ನೀವ್ಯಾರು’ ಎಂದು ಪ್ರಶ್ನಿಸಿದ ಬ್ರಹ್ಮನಿಗೆ ನಾವು ‘ಬೇಡರು’ ಎಂದು ಉತ್ತರಿಸಿದರಂತೆ. ನೀವು ಊರಿನೊಳಗೆ ಹೋಗುವುದು ಬೇಡವೆಂದು ತಡೆದಿದ್ದರಿಂದ ಕಾಡಿಗೆ ಹೋಗಿ ಬೇಟೆಯಾಡುತ್ತಾ ಬೇಡರಾದರು ಎಂದು ಹೇಳಲಾಗಿದೆ.

‘ಬೇಡ’ರೆಂದರೆ ಪೂರ್ವದಲ್ಲಿ ದಾರಿ ಹೋಗುವವರನ್ನು ಪೀಡಿಸಿ ಅವರಿಂದ ವಸ್ತುಗಳನ್ನು ಕಸಿದುಕೊಳ್ಳುತ್ತಿದ್ದರಂತೆ. ಆದ್ದರಿಂದ ಊರೊಳಗೆ ಬೇಡರು ಬರುತ್ತಾರೆಂದರೆ ‘ಅಯ್ಯೋ’ ಬೇಡರು ಬಂದರು, ಇನ್ನೇನು ನಮ್ಮ ಸಾಮಾನುಗಳನ್ನು ಕಸಿದುಕೊಳ್ಳುತ್ತಾರೆಂದು ಜನರೆಲ್ಲಾ ಹೆದರಿ ತಮ್ಮ ಮನೆಯನ್ನು ಪ್ರವೇಶಿಸಲು ತಡೆಯೊಡ್ಡುತ್ತಿದ್ದರಂತೆ.

ಪರ್ಯಾಯ ಪದವಾಗಿ ಬೇಡ ಎನ್ನುವುದಕ್ಕೆ ಆಯಾ ಪ್ರದೇಶಕ್ಕನುಗುಣವಾಗಿ ಬೇರೆ ಬೇರೆ ಪದಗಳಲ್ಲಿ ಕರೆಯಲಾಗಿದೆ. ತಮಿಳುನಾಡಿನಲ್ಲಿ ಬೇಡರಿಗೆ ನಾಯಾಷಾ, ನಾಯಕರ್, ವಾಲ್ಮೀಕಿ, ವೇಡನ್, ವೆತ್ತಲೆ, ಸಿಲೋನ್, ವೇಟನ್, ವೇಡುವಾಸ, ಟೆವ್ಹಾನ್ ವೇಟೆಕಾರನ್.

ಉತ್ತರ ಪ್ರದೇಶದಲ್ಲಿ ಜಾಟ್, ಪಂಜಾಬ್ ಭೀಲ್, ಬಾಲಮೀಕಿ, ವಾಲ್ಮೀಕಿ, ನಾಯಕ ಮಾಂಗ್, ಬಾಂಗಾಲ, ಬಿಹಾರ ಸೇನ್ ಎಂದು ಗುರುತಿಸಲಾಗಿದೆ.

ಕರ್ನಾಟಕ ಮತ್ತು ಕೇರಳದಲ್ಲಿ
ಬೇಡ ಬ್ಯಾಡ ನಾಯರ್
ಎಂದು ಕರೆಯಲಾಗುತ್ತಿದೆ.

ಮಹಾರಾಷ್ಟ್ರದಲ್ಲಿ ರಾಮೋಶಿ, ರಾಣವಾಸಿ ಅಂದರೆ ಅರಣ್ಯದಲ್ಲಿ ವಾಸಿಸುವ ಎಂದರ್ಥ. ಮರಾಠಿಯಲ್ಲಿ ಬೇರಡ ಎಂತಲೂ ಅಂದರೆ ಯಾರಿಗೂ ಅಂಜದವರು, ಅಳದವರು, ಅಳಲಾರದ ಎಂದರ್ಥ.

ಬೇಡ ಜನಾಂಗದ ಬಗ್ಗೆ ಮಹಾಭಾರತದಲ್ಲಿ ಕೆಲವು ಪದಗಳ ಉಲ್ಲೇಖಗಳು ಸಿಗುತ್ತವೆ. ಪುಲಿಂದ, ನಿಷಾಧ, ವ್ಯಾಧ ಎಂಬ ಪದಗಳು ಕಂಡು ಬರುತ್ತದೆ.

ಬೇಡ ಜನಾಂಗದವರ ಮೂಲ ದ್ರಾವಿಡ ಜನಾಂಗವೆಂದು ಹೇಳಲಾಗಿದೆ. ಅದಕ್ಕೆ ಸಾಕ್ಷಿ ಯಾಗಿ ಪುಳಿಂದ, ಭಿಲ್ಲ, ಕಿರಾತ, ವ್ಯಾಧ, ಶಿಬಿರ, ನಿಷಾಧ ಮುಂತಾದ ಹೆಸರುಗಳನ್ನು ಕಾಣಲಾಗಿದೆ.

ಭಿಲ್ಲ ಎಂದರೆ ಬಿಲ್ಲಿನ ಸಹಾಯದಿಂದ ಬೇಟೆಯಾಡುವ ಬೇಡರಿಗೆ ಭಿಲ್ಲರೆಂದು ಕರೆಯಲಾಗಿದೆ.

ಈ ಎಲ್ಲ ಇಲ್ಲಿಯ ಕೆಲವು ಪದಗಳು ಬೇರೊಂದು ಮತ, ಜತಿಗಳನ್ನು ಸೂಚಿಸುತ್ತವೆ ಎಂಬುದನ್ನು ಗಮನಿಸಬಹುದು.

ಹೆಚ್.ವಿ. ನಂಜುಂಡಯ್ಯ ಮತ್ತು ಎಲ್.ಕೆ. ಅನಂತಕೃಷ್ಣ ಅಯ್ಯರ್ ಅವರ ಪ್ರಕಾರ:
“The Bedas are an aboriginal Tribe of  the Telugu and Canarese districts” ಎಂದು

‘Beda’ ಎಂಬುದು “a curruption of the sanskrit word Vyadh” ಎಂದು ಬೇಡ ಪದ ನಿಷ್ಪತ್ತಿಯೊಡನೆ,

“Most of the Mysore Palayagars of pretty chifs are bedas” ಎಂದು ಹೇಳಿದ್ದಾರೆ.

ಬುಖಾನನ್‌ರವರು ಬೇಡರು ಮೂಲತಃ ದ್ರಾವಿಡ ಜನಾಂಗಕ್ಕೆ ಸೇರಿದವರಾಗಿಬಹುದು ಎಂದು ಹೇಳಿದ್ದಾರೆ.

ಅದೇ ರೀತಿಯಾಗಿ ಬೇಡರಲ್ಲಿ ಮ್ಯಾಸಬ್ಯಾಡರು, ಊರುಬ್ಯಾಡರು ಎಂದು ಎರಡು ರೀತಿಯಲ್ಲಿ ಕರೆಯುತ್ತಾರೆ.

ಊರಲ್ಲಿ ವಾಸಿಸುವವನು ಊರ ಬೇಡನಾದರೆ, ಮೇಷ ಕುರಿಗಳನ್ನು ಮೇಕೆಗಳನ್ನು ಮೇಯಿಸುವವರು ಮ್ಯಾಸಬೇಡರಾದರು.

ಮ್ಯಾಸಬೇಡರಿಂದ ಕವಲೊಡೆದ ಬೇಡರೇ ಊರಬೇಡರು. ಊರಿನ ಸಂಸ್ಕೃತಿಗೆ ಒಗ್ಗಿ ಕೊಂಡರು ಎಂದು ಒಟ್ಟಾರೆಯಾಗಿ ಹೇಳಬಹುದು. ಪ್ರದೇಶಕ್ಕನುಗುಣವಾಗಿ ಅಲ್ಲಿಯ ದೇವ-ದೇವತೆಗಳಿಗೆ ನಡೆದುಕೊಳ್ಳುವರು. ಇವುಗಳಿಗೆ ತಕ್ಕ ಆಚರಣೆಗಳನ್ನು ನಡೆಸಿಕೊಂಡು ಮುಂದುವರಿಸುತ್ತಾ ಬಂದಿದ್ದಾರೆ.

ಎಲ್ಲಮ್ಮ, ಹುಲಿಗೆಮ್ಮ, ವೆಂಕಟರಮಣ, ಮಾರೆಮ್ಮ, ಮೈಲಾರಲಿಂಗ ಹೀಗೆ ಇವರ ದೇವರುಗಳನ್ನಾಗಿ ಕಾಣಬಹುದು.

ಪ್ರಾಚೀನತೆಯಿಂದಲೂ ಗುಹೆಗಳಲ್ಲಿ, ಬೆಟ್ಟಗಳಲ್ಲಿ ವಾಸವಾಗಿದ್ದು, ಯಾವುದೇ ಅಕ್ಷರ ಜ್ಞಾನ ಇಲ್ಲದಿದ್ದರೂ ತಮ್ಮದೇ ಆದ ಸಾಂಸ್ಕೃತಿಕ ಚಹರೆಯೊಂದಿಗೆ ತಮ್ಮ ಬದುಕನ್ನು ನಿರೂಪಿಸಿಕೊಂಡಿದ್ದಾರೆನ್ನಬಹುದು. ಆದರೆ ಶಿಷ್ಟ ಸಂಸ್ಕೃತಿಗೆ ಸರಿಸಾಟಿಯಾಗಿ ನಿಲ್ಲಲಾಗದೆ ಇವರು ಸಾಮಾಜಿಕವಾಗಿ ಹಿಂದುಳಿದಿದ್ದಾರೆ.

ಸೈನಿಕ ವೃತ್ತಿ ಇವರಿಗೆ ಮೊದಲಿನಿಂದಲೂ ಪ್ರಿಯವಾದಂತ ಉದ್ಯೋಗವಾಗಿದೆ. ಕರ್ನಾಟಕದ ಸೈನಿಕರಲ್ಲಿ ಈ ಸಮುದಾಯದವರೇ ಪ್ರಮುಖರು ಇರುತ್ತಿದ್ದರು ಎನ್ನಬಹುದು. ಗಸ್ತಿ ತಿರುಗುವುದು, ಕಾವಲು ಕಾಯುವುದು ಮುಂತಾದ ಕೆಲಸಗಳನ್ನು ಈ ಸಮುದಾಯದವರೇ ಈಗಲೂ ಮಾಡುತ್ತಿರುವುದನ್ನು ನಾವು ಕಾಣಬಹುದಾಗಿದೆ.

ಹಿಂದೆ ಬೇಡರು ಬೇಟೆಯಾಡಿ ಬದುಕುವುದೇ ಅವರ ಪ್ರವೃತ್ತಿಯಾಗಿತ್ತು. ಹಾಗಾಗಿ ಅವರಿಗೆ ಸಿಕ್ಕ ಬಿಡುವಿನ ವೇಳೆಯಲ್ಲಿ ಬೇಟೆಗೆ ಹೋಗಿ ಪ್ರಾಣಿಗಳನ್ನು ಬೇಟೆಯಾಡಿಕೊಂಡು ಬರುವುದಾಗಿತ್ತು. ಆದರೆ ಇತ್ತೀಚಿನ ದಿನಮಾನಗಳಲ್ಲಿ ನಗರೀಕರಣ ಪ್ರಭಾವದಿಂದಾಗಿ ಸಂಪೂರ್ಣವಾಗಿ ಬೇಟೆಗೆ ಹೋಗುವುದನ್ನು ನಿಲ್ಲಿಸಿದ್ದಾರೆ. ಯಾಕೆಂದರೆ ಹೆಚ್ಚಿನ ಜನರು ಕೃಷಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಕೆಲವರು ಸ್ವತಂತ್ರ ಒಕ್ಕಲುತನವನ್ನು ಮಾಡು ತ್ತಿದ್ದಾರೆ. ಇನ್ನೂ ಕೆಲವರು ತರಕಾರಿಗಳನ್ನು ಮಾರುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಉದ್ದವ್ವ, ಹೊನ್ನವ್ವ, ದ್ಯಾಮವ್ವ, ಜುಂಜಪ್ಪ ಮುಂತಾದ ದೇವರುಗಳನ್ನು ಪೂಜಿಸುವ ಪೂಜಾರಿ ಗಳಾಗಿದ್ದಾರೆ. ಯಾಕೆಂದರೆ ಕಾಡು ನಾಶವಾಗಿ ಪ್ರಾಣಿಗಳು ನಾಶವಾಗಿರುವ ಇಂದಿನ ಸಂದರ್ಭದಲ್ಲಿ ಬೇಟೆಯ ಪದ್ಧತಿ ತನ್ನ ಅರ್ಥವನ್ನು ಕಳೆದುಕೊಂಡಿದೆ. ಇನ್ನು ಬೇಟೆಗೆ ಹೋದರೂ ಕೆಲವೊಂದು ಕಾನೂನಿನ ಕ್ರಮಗಳು ಇವರು ಬೇಟೆಯಾಡುವುದನ್ನು ತಡೆಯೊಡ್ಡಿದೆ. ಆದರೂ ಯುಗಾದಿ ಹಬ್ಬದ ಸಂದರ್ಭದಲ್ಲಿ ಕೆಲವು ಕಡೆ ಬೇಟೆಗೆ ಹೋಗುತ್ತಾ ರೆಂದು ತಿಳಿದು ಬಂದಿದೆ. ಕೆಲವರು ಆಚರಣೆಗೋಸ್ಕರ ಮತ್ತು ತಮ್ಮ ಚಹರೆಯನ್ನು ಬಿಡಕೂಡದೆಂದು ಬೇಟೆಯಾಡುತ್ತಾರೆ.

ಒಟ್ಟಾರೆ ಹೇಳಬೇಕೆಂದರೆ ಇತ್ತೀಚಿನ ದಿನಗಳಲ್ಲಿ ನಾಯಕ ಅಥವಾ ಬೇಡ ಜನಾಂಗಕ್ಕೆ ತನ್ನದೆ ಆದ ಉಜ್ವಲ ಪರಂಪರೆಯನ್ನು ಹೊಂದಿದ್ದರೂ ಸಹ ಇಂದಿನ ಯುವ ಪೀಳಿಗೆಗೆ ಅದರ ಅರಿವಿಲ್ಲದೆನೆ, ಅಲ್ಲದೆ ಇವರ ಗುಂಪಿಗೆ ನಾಯಕತ್ವದ ಕೊರತೆಯಿಂದಾಗಿ, ಅಲ್ಲದೆ ರಾಜಕೀಯದಿಂದಾಗಿ ಇವರಿಗೆ ಸಲ್ಲಬೇಕಾದ ಸವಲತ್ತುಗಳಿಂದ ವಂಚಿತವಾಗುತ್ತಿದ್ದಾರೆ ಎನ್ನಬಹುದು.

* * *