ಮೂಲತಃ ಕಾಡಿನಲ್ಲಿ ವಾಸವಾಗಿದ್ದುಕೊಂಡು ಬೇಟೆಯ ವೃತ್ತಿಯಿಂದ ಬದುಕುವ ಜನಾಂಗವನ್ನು ಬೇಡರು ಎಂದು ಕರೆಯಲಾಗಿದೆ. ನಾಗರೀಕತೆಯ ಬೆಳವಣಿಗೆಯ ಹಂತದಲ್ಲಿ ಇವರು ಗ್ರಾಮವಾಸಿಗಳಾಗಿ ಕೃಷಿ ಮತ್ತಿತರ ವೃತ್ತಿಗಳನ್ನು ಕೈಗೊಂಡರು. ಇವರಿಗೆ ಬೇರಾದ್, ಕಿರಾತ, ಶಬರ, ವ್ಯಾಧ ಎಂಬ ಬೇರೆ ಬೇರೆ ಹೆಸರುಗಳು ಉಂಟು.

ಬೇಡರು ಕಣ್ವ ಋಷಿಯ ವಂಶಜರೆಂಬ ನಂಬಿಕೆಯಿದೆ. ಅದಕ್ಕಾಗಿಯೇ ಅವರು ತಮ್ಮನ್ನು ‘ಕಾಣ್ಯಮ್’ ಕುಲದವರೆಂದು ಕರೆದುಕೊಳ್ಳುತ್ತಾರೆ. ತಮ್ಮ ವಂಶದ ಮೂಲಪುರುಷ ವಾಲ್ಮೀಕಿ ಮಹರ್ಷಿಯೆಂಬ ಇನ್ನೊಂದು ನಂಬಿಗೆಯೂ ಇರುವುದರಿಂದ ತಮ್ಮನ್ನು ವಾಲ್ಮೀಕಿ ಕ್ಷತ್ರಿಯರೆಂದೂ ಕರೆದುಕೊಳ್ಳುತ್ತಾರೆ. ಪೂರ್ವದಲ್ಲಿ ದಾರಿಹೋಕರನ್ನು ಪೀಡಿಸಿ ಅವರಿಂದ ವಸ್ತುಗಳನ್ನು ದೋಚಿಕೊಳ್ಳುತ್ತಿದ್ದರು. ತಮಿಳುನಾಡಿನಲ್ಲಿ ವ್ಯಕ್ತಿಯು ಈ ಜನಾಂಗದ ಆದರಣೀಯ ವ್ಯಕ್ತಿ.

ವಿದೇಶಿ ವಿದ್ವಾಂಸರಾದ ಬುಖಾನನ್‌ರವರು, ‘ಬೇಡರು ಮೂಲತಃ ದ್ರಾವಿಡ ಜನಾಂಗಕ್ಕೆ ಸೇರಿದವರಾಗಿರಬಹುದು ಎಂದು’ ಹೇಳಿದ್ದಾರೆ. ಉತ್ತರ ಮಲಬಾರಿನ ಪೆರಿಂಗಾಲ್ ಪೆಟ್‌ವಾನ್ಸ್ ಅವರು, ಟ್ರಿವೆಂಕೂರಿನ ಮಾಲವೇದನ್ಸ್, ಸಿಲೋನಿನ ವೆಡ್ಡಾ ಮತ್ತು ಕರ್ನಾಟಕದ ಬೇಡರು ಒಂದೇ ಮೂಲದವರೆಂಬುದು, ರೈಸ್ ಅವರ ಅಭಿಪ್ರಾಯವಾಗಿದೆ. ವ್ಯಾಪಕವಾದ ತೌಲನಿಕ ಅಧ್ಯಯನದ ಮೂಲಕ ಈ ಅಭಿಪ್ರಾಯ ಖಚಿತ ರೂಪ ಪಡೆಯಬೇಕಿದೆ.

ನಮ್ಮ ದೇಶದಲ್ಲಿ ಬಹುಪುರಾತನ ಕಾಲದಿಂದಲೂ ಈ ಜನಾಂಗ ಅಸ್ತಿತ್ವದಲ್ಲಿತ್ತೆಂಬ ಬಗೆಗೆ ಅನುಮಾನವಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಪೌರಾಣಿಕ ಸಾಂಸ್ಕೃತಿಕ ಹಿನ್ನೆಲೆಯ ಹಲವಾರು ಉಲ್ಲೇಖಗಳು ಉಪಲಬ್ಧವಿದೆ.

ಆದಿಕಾವ್ಯವಾದ ‘ರಾಮಾಯಣದ’ ರಚನೆಕಾರ ವಾಲ್ಮೀಕಿ ಮುನಿ ಬೇಡರವನು. ಈತ ಪೂರ್ವಾಶ್ರಮದಲ್ಲಿ ದರೋಡೆ ಕೋರನಾಗಿದ್ದು ಸಪ್ತರ್ಷಿಗಳ ಪ್ರಭಾವದಿಂದಾಗಿ ತನ್ನ ಕ್ರೂರ ವೃತ್ತಿಯನ್ನು ತ್ಯಾಗಮಾಡಿದನು. ಆಮೇಲೆ ರಾಮಾಯಣ ರಚಿಸಿ ಆದಿಕವಿ ಎಂದು ಖ್ಯಾತನಾದನು. ಇದು ಪರಂಪರೆಯಾಗಿ ಬಂದ ಹೇಳಿಕೆ. ರಾಮಾಯಣದ ಕರ್ತೃತ್ವವನ್ನು ಕುರಿತಂತೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ಬೇಡನಾಗಿದ್ದ ವಾಲ್ಮೀಕಿಯು ಅವಿರತ ಸಾಧನೆಯಿಂದ ಆದಿಕವಿಯಾಗಿ ಬದಲಾವಣೆ ಹೊಂದಿದ. ಆತನ ಚರಿತ್ರೆಯಲ್ಲಿ ಹಲವಾರು ಭಾವುಕ ಅತಿಶಯೋಕ್ತಿಗಳು ರೂಢಿಗೆ ಬಂದುದು ಸ್ವಾಭಾವಿಕ. ವಿಶೇಷವಾಗಿ ‘ರಾಮಾನಾಮ’ ಮಹಿಮೆಯನ್ನು ಪ್ರತಿಷ್ಠಾಪಿಸಲೋಸುಗ ವಾಲ್ಮೀಕಿ ತನ್ನ ಪೂರ್ವಾಶ್ರಮದಲ್ಲಿ ದುಷ್ಟನಿದ್ದ ನೆಂದೂ ರಾಮನಾಮದ ಮಹಿಮೆಯಿಂದ ಋಷಿಯಾದನೆಂದೂ ಹೇಳುವುದು ಪ್ರಚಾರಕ್ಕೆ ಬಂದಂತೆ ತೋರುತ್ತದೆ. ಈ ಹೇಳಿಕೆಯನ್ನು ನಂಬುವುದಾದರೆ, ವಾಲ್ಮೀಕಿಯು ಬೇಟೆಯೇ ಜೀವನ ವೃತ್ತಿಯಾಗಿದ್ದ ಬೇಡ ಜನಾಂಗಕ್ಕೆ ಸೇರಿದವನೆಂದು ಭಾವಿಸಬಹುದಾಗಿದೆ. ಅವನ ಮೇಲೆ ಹುತ್ತ ಬೆಳೆಯಿತು, ಅವನ ತಂದೆ ಪ್ರಚೇತಸನು ಕಾಡನ್ನು ಕಡಿದು ಬಯಲು ಮಾಡಿದನು. ಪ್ರಚೇತಸನ ಹೆಂಡತಿ ವೃಕ್ಷಕನ್ಯೆಯಾಗಿದ್ದಳು ಮುಂತಾದ ವಿವರಗಳು ವಾಲ್ಮೀಕಿಯು ಕಾಡಿನಲ್ಲಿ ವಾಸವಾಗಿದ್ದ ಬೇಡನೆಂಬುದನ್ನು ಸೂಚಿಸುತ್ತವೆ.

ರಾಮಯಣದ ‘ಶಬರಿ’ ಬೇಡ ಕುಲದವಳು. ಶಬರಿಯನ್ನು ‘ಬೇಡತಿ’ ಎಂದು ರಾಮಾಯಣದಲ್ಲಿ ಕರೆಯಲಾಗಿದೆ. ರಾಮನ ಭಕ್ತಳಾಗಿ ಪಂಪಾಕ್ಷೇತ್ರದ ಸಮೀಪ ಇವಳು ವಾಸವಾಗಿದ್ದಳು. ರಾಮಲಕ್ಷ್ಮಣರು ಅಲ್ಲಿಗೆ ಆಗಮಿಸಿದಾಗ ಅವರಿಗೆ ಬೋರೆಯ ಹಣ್ಣು ಗಳನ್ನು ನೀಡಿ ಸತ್ಕರಿಸಿದಳೆಂದೂ ಹೇಳಲಾಗಿದೆ.

ಮಹಾಭಾರತದಲ್ಲಿಯೂ ಬೇಡ ಜನಾಂಗದ ಉಲ್ಲೇಖಗಳು ಮಹತ್ವಪೂರ್ಣವಾಗಿದ್ದು ಸಂಖ್ಯೆಯ ದೃಷ್ಟಿಯಿಂದಲೂ ಹೆಚ್ಚಾಗಿವೆ. ಪುಲಿಂದ, ನಿಷಾದ, ಕಿರಾತ, ವ್ಯಾಧ ಮುಂತಾದ ಹೆಸರುಗಳಿಂದ ಅವರು ಕರೆಯಲ್ಪಟ್ಟಿದ್ದಾರೆ. ಬೇಡ ಕುಲದವರ ಪ್ರತ್ಯೇಕ ರಾಜ್ಯಗಳೇ ಇದ್ದ ಬಗೆಗೆ ಅದರಲ್ಲಿ ಆಧಾರಗಳಿವೆ. “ಏಕಲವ್ಯ”ನು ನಿಷಾದ ರಾಜನ ಮಗನಾಗಿದ್ದ ಎಂಬ ಸಂಗತಿ ಪ್ರಸಿದ್ಧವಾದುದು. ಅಲ್ಲದೆ ದ್ರೋಣಾಚಾರ್ಯರ ನೆಚ್ಚಿನಶಿಷ್ಯನಾಗಿ ಅಪೂರ್ವ ಮಾನವತಾ ಗುಣಗಳನ್ನು ರೂಢಿಸಿಕೊಂಡು ಜಗದ್ವಿಖ್ಯಾತನಾದ ಬಗ್ಗೆ ಮಹಾಭಾರತದಲ್ಲಿನ ಅನೇಕ ಉಲ್ಲೇಖಗಳು ಇದನ್ನು ದೃಢಪಡಿಸುತ್ತವೆ.

ಶಿವನ ಇಪ್ಪತ್ತೈದು ಲೀಲೆಗಳಲ್ಲಿ ಒಂದಾದ ಕಿರಾತರುದ್ರ ಲೀಲೆಯ ಪ್ರಸಂಗವು ಮಹಾಭಾರತದ ಅರಣ್ಯಕ ಪರ್ವದಲ್ಲಿ ವಿಸ್ತಾರವಾಗಿ ಹೇಳಲ್ಪಟ್ಟಿದೆ. ಶಿವನು ಬೇಡ ವೇಷದಿಂದ ಮೂಷಕರ ದಾನವನ್ನು ಸಂಹರಿಸಿ ಅರ್ಜುನನಿಗೆ ಪಾಶುಪತಾಸ್ತ್ರ ದಾನ ಮಾಡಿದ್ದು ಪ್ರಸಿದ್ಧವಾದ ಆಖ್ಯಾಯಿಕೆ. ರಾಮಾಯಣ-ಮಹಾಭಾರತಗಳಲ್ಲದೆ ಇನ್ನಿತರ ಪ್ರಾಚೀನ ಗ್ರಂಥಗಳಾದ ಅರ್ಥಶಾಸ್ತ್ರ-ಸ್ಮೃತಿಗಳು, ಭಾಸ-ಕಾಳಿದಾಸನಂಥ ಕವಿ-ಕೃತಿಗಳೂ ಕೂಡಾ ಬೇಡ ಜನಾಂಗಕ್ಕೆ ಸಂಬಂಧಿಸಿದ ವಿವರಗಳನ್ನು ಕೊಡುತ್ತವೆ.

ಕನ್ನಡ ಪ್ರಾಚೀನ ಕೃತಿ ‘ವಡ್ಡರಾಧನೆ’ಯಲ್ಲಿ ಈ ಜನಾಂಗಕ್ಕೆ ಸಂಬಂಧಿಸಿದ ಉಲ್ಲೇಖಗಳು ಇವೆ. ಇವುಗಳಲ್ಲಿ ಚಿಲಾತಪುತ್ರನ ಕಥೆ ಒಂದು. ‘ಚಿಲಾತಪುತ್ರ’ ಎಂಬುದು ಸಂಸ್ಕೃತದ ‘ಕಿರಾತಪುತ್ರ’ ಎಂಬುದರ ಪ್ರಾಕೃತ ರೂಪವೆಂದು ವಿದ್ವಾಂಸರು ನಿರ್ಧರಿಸಿದ್ದಾರೆ. ಅದೇ ಗ್ರಂಥದ ವಿದ್ಯುಚ್ಚೋರನೆಂಬ ಕಥೆಯಲ್ಲಿ ಮದಂಡನೆಂಬ ‘ತಳವಾರ’ನ ಉಲ್ಲೇಖವಿದೆ. ತಳವಾರ, ಬೇಡ ಜನಾಂಗದ ಒಂದು ಉಪಪಂಗಡ ಆಗಿದೆ. ಇಲ್ಲಿ ‘ತಳಾರ’ ಎಂದರೆ ನಗರ ರಕ್ಷಕನಾದ ಅಧಿಕಾರಿ. ಇದೇ ರೀತಿ ಸುಕುಮಾರ ಸ್ವಾಮಿಯ ಕಥೆಯಲ್ಲಿ ಬರುವ ಸುಧಾಮೆಯ ಉಪಕಥೆಯಲ್ಲಿಯೂ ತಳವಾರನ ಉಲ್ಲೇಖವಿದೆ. ಇದರಿಂದ ಕನ್ನಡ ವಡ್ಡಾರಾಧನೆಗೆ ಮೂಲ ಗ್ರಂಥವಾಗಿರುವ ಭಗವತೀ ಆರಾಧನೆಯ ಕಾಲಕ್ಕಾಗಲೇ ಈ ಜನಾಂಗವು ನಗರ ಜೀವನದಲ್ಲಿ ಮಿಳಿತವಾಗಿತ್ತು.

ಹನ್ನೆರಡನೆಯ ಶತಮಾನದ ಶರಣರಲ್ಲಿ ಕೆಲವರಾದರೂ ಬೇಡ ಜನಾಂಗದವರಿರ ಬೇಕೆಂದು ತೋರುತ್ತದೆ.

ಸೋಮಸಿಮಾರ, ಕಂಗುಲಿಯ ಕಲಿಯರು, ದೈವಭಕ್ತ ಕನ್ನಣ್ಣ ಇವರೂ ಬೇಡ ಜನಾಂಗಕ್ಕೆ ಸಂಬಂಧಿಸಿದ ಶರಣರು ಎಂದು ಊಹಿಸಲಾಗಿದೆ.

ಪ್ರಾಚೀನ ಕಾವ್ಯಗಳಲ್ಲಿ ‘ಮೃಗಯಾವಿನೋದ’ದ ವರ್ಣನೆ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಅಂಥಲ್ಲಿ ಬೇಡರ ಬಗೆಗಿನ ಸವಿವರ ವರ್ಣನೆಗಳು ಸೇರಿಕೊಂಡಿವೆ.

ಮೂಲತಃ ಬಲಿಷ್ಠರೂ, ಧೈರ್ಯಶಾಲಿಗಳೂ ಆಗಿದ್ದ ಬೇಡರನ್ನು ಸಾಮಂತರ, ಮಾಂಡಲಿಕರು, ಅರಸರು, ತಮ್ಮ ಸೈನ್ಯಕ್ಕೆ ಸೇರಿಸಿಕೊಳ್ಳಲಾರಂಭಿಸಿದರು. ಎಷ್ಟೋ ರಾಜಮನೆತನಗಳ ಸೈನ್ಯದಲ್ಲಿ ಬೇಡ ಪಡೆಯೇ ಪ್ರಮುಖವಾಗಿತ್ತು. ನಿಷ್ಠಾವಂತ ಸೈನಿಕರಾಗಿ ಪ್ರಾಣದ ಹಂಗುತೊರೆದು ಹೋರಾಡಿದ ಬೇಡರು ತಮ್ಮ ದೊರೆಗಳ ಮೆಚ್ಚಿಗೆ, ವಿಶ್ವಾಸ ಗಳಿಸಿದರು. ಇದರ ಪರಿಣಾಮವಾಗಿ ಇವರಿಗೆ ಸೈನ್ಯದಲ್ಲಿ ಬೇರೆ ಬೇರೆ ಅಧಿಕಾರಗಳು ಪ್ರಾಪ್ತವಾದವು. ಅನೇಕರು ಸೇನಾ ನಾಯಕರಾದರು. ಈ ಬೆಳವಣಿಗೆಯ ಹಂತದಲ್ಲಿ ಸೇನಾನಾಯಕರಾಗಿದ್ದ ಬೇಡ ಕುಲಕ್ಕೆ ‘ನಾಯಕ’ ಎಂಬ ವಿಶೇಷಣ ಸೇರಿತು. ಮುಂದೆ ಅದು ಬೇಡ ಪದಕ್ಕೆ ಪರ್ಯಾಯವಾಗಿ ಬೆಳಕಿಗೆ ಬಂತು. ಇಂಥ ಬಲಿಷ್ಠ ಸೇನಾನಾಯಕರು ಕ್ರಮೇಣ ಚಿಕ್ಕಪುಟ್ಟ ಪಾಳೆಯಗಾರರಾದರು.

ಯುದ್ಧ ಕಲೆಯಲ್ಲಿ ನುರಿತವರೂ ಧೀರ ಯೋಧರೂ ಆಗಿದ್ದ ಬೇಡ ಕುಲದವರು ಕರ್ನಾಟಕದಲ್ಲಿಯ ಸೈನಿಕ ಜನಾಂಗಗಳಲ್ಲಿ ಬಹುಮುಖ್ಯರಾಗಿದ್ದರು. ಏಳನೆಯ ಶತಮಾನ ದಿಂದ ಇವರ ಪ್ರತ್ಯೇಕ ರಾಜ್ಯಗಳೇ ಇದ್ದವೆಂದು ‘ಗದ್ದೆಮನೆ ಶಾಸನ’ದಿಂದ ತಿಳಿದುಬರುತ್ತದೆ. ಆ ಶಾಸನದಲ್ಲಿ “ಸ್ವಸ್ತಿ ಶೀಲ ಆದಿತ್ಯನ್ ದಿಶಾಮನ್ ಭಗವಾನ್ ಆಗ್ಗಳಕಣ್ಣನ್ ಪೇರಾಳ್ಕವರೆ ಪೆಟ್ಟಿಣಿಸತ್ಯಾಂಕನ್ ಅಟ್ಟಳ್ವಭಟನ್ ಬೆದರೆ ಮಹೇನ್ದ್ರನ್ ಬೇಡರಾಯರ ಮಲಪರ್ ಕಾಳೆಗದುಳೆವಿರಿದು ಸ್ವರ್ಗಾಲಯಕ್ಕೆ ರಿದನ್” ಎಂದು ಬೇಡರ ರವೃತ್ತಿಯನ್ನು ವರ್ಣಿಸ ಲಾಗಿದೆ. ಗ್ರಂಥಸ್ತ ಸಾಹಿತ್ಯವು ಇವರ ಬಗೆಗೆ ಹೆಚ್ಚಿನ ವಿವರಗಳನ್ನು ಕೊಡುವುದಿಲ್ಲ. ಇವರ ಬೇಡಗಾರಿಕೆಯನ್ನು ಮಾತ್ರ ಕೆಲ ಗ್ರಂಥಗಳು ಉಲ್ಲೇಖಿಸುತ್ತವೆ. ಹೀಗೆ ಕರ್ನಾಟಕದಲ್ಲಿ ಈ ಜನಾಂಗವನ್ನು ಕುರಿತಂತೆ ಅತ್ಯಂತ ಪ್ರಾಚೀನ ಮತ್ತು ಖಚಿತವಾದ ಉಲ್ಲೇಖವೆಂದರೆ ಇದೇ ಇರಬೇಕು. ಈ ಶಾಸನದಲ್ಲಿರುವಂತೆ ‘ಬೇಡರಾಯ’ ಎಂದರೆ ಬೇಡರ ರಾಜನ ಸ್ಪಷ್ಟ ನಿರ್ದೇಶನವಿದೆ.

ತರುವಾಯ ರಾಜಮನೆತನಗಳಲ್ಲಿ ಕಂಪಲಿ ರಾಜ್ಯದ ಕಂಪಿಲರಾಯ ಹಾಗೂ ಇವನ ಮಗ ಕುಮಾರ ರಾಮನು ಕೂಡಾ ಬೇಡ ಜನಾಂಗಕ್ಕೆ ಸಂಬಂಧಿಸಿದವರಾಗಿದ್ದಾರೆ. ಅಲ್ಲದೆ ಅನೇಕ ಪಾಳೆಯಗಾರರೂ ಈ ಜನಾಂಗದಲ್ಲಿದ್ದರೆಂಬುದಕ್ಕೆ ನಿದರ್ಶನಗಳುಂಟು ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಸೇನೆಯ ಗೌರವಾನ್ವಿತ ಸ್ಥಾನಗಳಲ್ಲಿ ಹೆಚ್ಚಿನ ಹುದ್ದೆಗಳನ್ನು ಬೇಡ ಜನಾಂಗದವರು ಹೊಂದಿದ್ದರು. ನಂತರ ಹೈದರಾಲಿ, ಟಿಪ್ಪುಸುಲ್ತಾನರ ಕಾಲಕ್ಕೆ ಅವರ ಸೈನ್ಯದ ಮುಂಚೂಣಿಯ ನಾಯಕರಾಗಿ ಸೇವೆಸಲ್ಲಿಸಿದರು. ವಿಜಯನಗರದ ಪತನಾನಂತರ ಕರ್ನಾಟಕದ ಪ್ರಮುಖ ಪಾಳೆಯಗಾರರಾಗಿ ಚಿತ್ರದುರ್ಗದಲ್ಲಿಯೂ ಆಳ್ವಿಕೆ ನಡೆಸಿದರು.

ಕಾಲಾಂತರದಲ್ಲಿ ವೃತ್ತಿಯ ವೈವಿಧ್ಯತೆಯಿಂದಾಗಿ ಮತ್ತು ಇತರೇ ಕಾರಣಗಳಿಂದಾಗಿ ಅನೇಕ ಹೊಸ ಹೆಸರುಗಳು ರೂಢಿಗೆ ಬಂದವು. ಕಾಡುಗಳಲ್ಲಿದ್ದು ಪಶುಪಾಲನೆಯನ್ನು ಮುಖ್ಯ ವೃತ್ತಿಯನ್ನಾಗಿ ಅವಲಂಬಿಸಿದವರನ್ನು ಕಾಡುಸಂಚರೆಂದೂ, ಮೂಗನಾಯಕನ ಅನುಯಾಯಿಗಳು ನಾಯಕರೆಂದೂ, ರಾಜಕೀಯ ಅಧಿಕಾರವನ್ನು ಸ್ಥಾಪಿಸಿಕೊಂಡವರು ಪಾಳೆಯಗಾರ ಅಥವಾ ‘ದೊರೆ’ಗಳೆಂದೂ, ಪಾಳೇಗಾರರ ಅಂತರರಂಗದ ಸೇವಕರಾಗಿದ್ದವರು ‘ರಾಜ ಪರಿವಾರ’ದವರೆಂದೂ, ಊರಿನ ರಕ್ಷಣೆ ಕಾರ್ಯಕ್ಕೆ ತೊಡಗಿಸಿಕೊಂಡವರು ‘ತಳವಾರ’ರೆಂದು ಕರೆದುಕೊಂಡಿದ್ದಾರೆ.

ನಾಯಕ (ಬೇಡ) ಜನಾಂಗವು ಕರ್ನಾಟಕದ ತುಂಬೆಲ್ಲ ವಾಸಮಾಡುವುದು ಕಂಡು ಬಂದರೂ ಬಳ್ಳಾರಿ, ಬೆಳಗಾವಿ, ಧಾರವಾಡ ಮತ್ತು ಕಲ್ಬುರ್ಗಿ ಜಿಲ್ಲೆಗಳಲ್ಲಿ ಹೆಚ್ಚಾಗಿಯೂ ಚಿತ್ರದುರ್ಗ ಮತ್ತು ರಾಯಚೂರು ಜಿಲ್ಲೆಗಳಲ್ಲಿ ದಟ್ಟವಾಗಿಯೂ ಇರುವುದು ಕಂಡು ಬರುತ್ತದೆ. ಗುಡ್ಡದ ಸಾಲುಗಳ ಒತ್ತಿನಲ್ಲಿರುವ ಹಲವಾರು ಊರುಗಳು ಸಂಪೂರ್ಣ ಬೇಡ ಜನಾಂಗದವೇ ವಾಸವಾಗಿರುವ ಹಳ್ಳಿಗಳಾಗಿವೆ. ಬೇಡರು ಕರ್ನಾಟಕದ ಪಶ್ಚಿಮ ಘಟ್ಟದಲ್ಲಿ ವಾಸವಾಗಿಲ್ಲ. ಬಯಲು ಸೀಮೆಯಲ್ಲಿ ಅಲ್ಲಲ್ಲಿ ಹಬ್ಬಿರುವ ಗುಡ್ಡದ ಹರಿಗಳಲ್ಲಿ ವಾಸವಾಗಿದ್ದಾರೆ.

ಕ್ರಿ.ಶ. ೧೮೦೦ರಲ್ಲಿ ಭಾರತಕ್ಕೆ ಆಗಮಿಸಿದ ವಿದೇಶೀ ವಿದ್ವಾಂಸ ಬುಖಾನನು ಬೇಡರ ಕುರಿತು ಈ ರೀತಿ ಹೇಳಿದ್ದಾನೆ. ಚಿತ್ರದುರ್ಗಜಿಲ್ಲೆಯ ಉತ್ತರ ದಿಕ್ಕಿನ ಗುಡ್ಡಗಾಡು ತೀರದ ಪ್ರದೇಶದಲ್ಲಿ ವ್ಯವಸಾಯಕ್ಕಾಗಿಯೇ ಸೀಮಿತವಾದ ಪ್ರದೇಶಗಳಲ್ಲಿ ಬೇಟೆಯಾಡುವ ಬೇಡರು ವಾಸಿಸುತ್ತಿದ್ದರು. ಟಿಪ್ಪುವಿನ ಕಾಲಕ್ಕೆ ಅವರು ಸೇನೆಯಲ್ಲಿದ್ದು ೧೨ ಪಗೋಡಗಳ ಪಗಾರವನ್ನು ಹೊಂದಿದ್ದರು. ಅವರು ಬೇಟೆಯ ವೃತ್ತಿಗೆ ಪರಿಣಿತರಾದುದರಿಂದ ಸೈನಿಕ ಕಾರ್ಯಚರಣೆಯಲ್ಲಿ ಮತ್ತು ನಿಶ್ಚಿತವಾದ ವಿಜಯವನ್ನು ಸಾಧಿಸುವಲ್ಲಿ ಸಹಕಾರಿಗಳಾಗಿದ್ದರು. ಹೈದರಾಲಿ ಮತ್ತು ಟಿಪ್ಪು ಸುಲ್ತಾನರು ಅನೇಕ ಹೋರಾಟಗಳಲ್ಲಿ ಅವರಿಂದ ಯಶಸ್ಸನ್ನು ಪಡೆದಿದ್ದರು. ಬೇಡ ಜನಾಂಗದವರು ಸದ್ಯಕ್ಕೆ ವ್ಯವಸಾಯನ್ನೇ ಅವಲಂಬಿಸಿ ಕಾಲಯಾಪನೆ ಮಾಡುತ್ತಿದ್ದಾರೆ. ಅವರು ಅಂದಿನ ಕಾಲಕ್ಕೆ ಬೇಟೆಗಾಗಿ ಬಳಸುತ್ತಿದ್ದ ಆಯುಧಗಳನ್ನು ಇಂದಿಗೂ ಇಟ್ಟು ಕೊಂಡಿದ್ದಾರೆ. ಬನವಾಸಿಯ ಕದಂಬರೂ ಈ ಬೇಡ ಜನಾಂಗದವರು. ಮತ್ತೊಬ್ಬ ವಿದೇಶಿಯನಾದ ವಿಲ್ಕ್ಸ್‌ನು “ಭೋಯಾಗಳು ಮತ್ತು ಬೇಡರು ಒಂದೇ. ಇವರುಗಳು ಬಹಳ ತಾಳ್ಮೆಯುಳ್ಳವರು ಹಾಗೂ ಹಂತ ಹಂತವಾಗಿ ಉನ್ನತ ಹುದ್ದೆಗಳನ್ನು ಪಡೆಯು ತ್ತಿದ್ದರು. ಹೈದರಾಲಿಯ ಕಾಲಕ್ಕೆ ಇವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲಾರಂಭಿಸಿದರು. ಅವನ ಸೇನೆಯಲ್ಲಿ ಇವರದೇ ಪ್ರತ್ಯೇಕ ತುಕಡಿಗಳನ್ನು ರಚಿಸಲಾಗುತ್ತಿತ್ತು” ಎಂದು ಹೇಳಿದ್ದಾನೆ.

ರೈಸ್ ಅವರು ಈ “ತುಕಡಿಗಳನ್ನು ಬೇಡರ, ಭೋಯಾ ಅಥವಾ ಚೇಲಾ ಎಂದು ಸಂಬೋಧಿಸಲಾಗಿತ್ತು. ಅಲ್ಲದೆ ನಾಯಕ, ಬಾರಿಕ, ಕಣ್ಣಯ್ಯಗಳೆಂದೂ ಕರೆಯಲಾಗುತ್ತಿತ್ತು. ಈ ಬೇಡರು ಬೇರೆ ಬೇರೆ ಜನಾಂಗದ ಸಂಪ್ರದಾಯ ಹಾಗೂ ಪದ್ಧತಿಗಳನ್ನು ಅಳವಡಿಸಿ ಕೊಂಡಿದ್ದಾರೆ. ಅವರ ಸ್ಥೂಲ ಕಾಯ, ದಪ್ಪನೆಯ ಮೂಗು, ಗುಂಗುರು ಗೂದಲುಗಳನ್ನು ನೋಡಿದಾಗ, ಬಹುಶಃ ಅವರು ಮೂಲತಃ ಅನಾರ‍್ಯ (ಆರ‍್ಯರು ಅಲ್ಲ) ಅಂದು ಸಾಬೀತಾ ಗುತ್ತದೆ” ಎಂದು ಈ ರೀತಿ ಹೇಳಿದ್ದಾರೆ.

ನಾಯಕ (ಬೇಡ) ಜನಾಂಗದ ಉಪಪಂಗಡಗಳು

ಒಂದು ಜನಾಂಗ ಒಂದೇ ಭೌಗೋಳಿಕ ಪರಿಸರದಲ್ಲಿ ಒಟ್ಟಿಗೆ ಕೂಡಿ ಇದ್ದಾಗ ಅವರಲ್ಲಿ ವೈವಿಧ್ಯತೆಗಳು ಉಂಟಾಗುವುದಿಲ್ಲ. ಭೌಗೋಳಿಕ ಸಾಮಾಜಿಕ ಆರ್ಥಿಕ ಕಾರಣಗಳಿಂದಾಗಿ ಒಂದೇ ಜನಾಂಗದ ಬೇರೆ ಬೇರೆ ಗುಂಪುಗಳು ವಿಭಿನ್ನ ಪರಿಸರದಲ್ಲಿ ವಾಸಿಸಲು ಪ್ರಾರಂಭಿ ಸಿದಾಗ ಭಿನ್ನತೆಗಳು ಗೋಚರಿಸುತ್ತವೆ. ಕಾಲಾನಂತರದಲ್ಲಿ ಈ ಭಿನ್ನತೆಗಳ ಪರಿಣಾಮವಾಗಿ ಅವೇ ಉಪ ಪಂಗಡಗಳೆನಿಸುತ್ತವೆ. ಹೊರ ನೋಟಕ್ಕೆ ಈ ಉಪಪಂಗಡಗಳಲ್ಲಿ ಭಿನ್ನತೆಗಳಿದ್ದೂ ಅವು ಮೂಲತಃ ಕೆಲವು ಸಾಮಾನ್ಯ ಅಂಶಗಳನ್ನು ಒಳಗೊಂಡಿರುತ್ತವೆ. ಬೇಡ ಜನಾಂಗವೂ ಅದಕ್ಕೆ ಹೊರತಾದುದಲ್ಲ. ಸದ್ಯಕ್ಕೆ ಬೇಡ ಜನಾಂಗದಲ್ಲಿ ಈ ಕೆಳಗಿನ ಉಪಪಂಗಡಗಳನ್ನು ಗುರುತಿಸಬಹುದಾಗಿದೆ.

ನಾಯಕ (ಬೇಡ)
ಊರುನಾಯಕ (ಊರು ಬೇಡ)                ಮ್ಯಾಸನಾಯಕ ಮ್ಯಾಸ (ಬೇಡ)
ವಾಲ್ಮೀಕಿ
ತಳವಾರ
ನಾಯಕ ಮಕ್ಕಳು
ಪರಿವಾರ
ನಾಯಕವಾಡಿ
ಬೆರದ್ ವೇದನ್
ಭೋಯಾ ರಾಮೋಶಿ
ಮತ್ತೊಂದು ಸಂಗ್ರಹದ ಪ್ರಕಾರ
ಮ್ಯಾಸ ನಾಯಕರು
ಊರು ನಾಯಕರು
ದುರ್ಗಾಮುರ್ಗಿ

ದುರ್ಗಾಮುರ್ಗಿ ಜನಾಂಗವು ಇತ್ತೀಚೆಗೆ ಹೆಚ್ಚಾಗಿ ಕಂಡುಬರುವುದಿಲ್ಲ. ಅಲ್ಲದೆ ಇದು ಬೇಡ ಜನಾಂಗದ ಉಪ ಪಂಗಡವೆಂಬುದಕ್ಕೆ ಪೂರಕವಾದ ಹಿನ್ನೆಲೆಯ ಅಂಶಗಳನ್ನು ಹೊಂದಿರುವುದಿಲ್ಲ.

ಮೇಲ್ಕಾಣಿಸಿದ ಎಲ್ಲ ಉಪ ಪಂಗಡಗಳಿಗೆ ಆಯಾ ಹೆಸರು ಬರಲು, ಔದ್ಯೋಗಿಕ ಹಾಗೂ ರಾಜಕೀಯ ಹಿನ್ನೆಲೆಗಳಿರುವುದನ್ನು ಗುರುತಿಸಬಹುದು.

ವಾಲ್ಮೀಕಿ : ರಾಮಯಾಣ ಕಾವ್ಯದ ಕರ್ತೃ ಆದ (ವ್ಯಾಧನಾಗಿದ್ದ) ವಾಲ್ಮೀಕಿ ತಮ್ಮ ಪ್ರಸಿದ್ಧ ಪೂರ್ವಕನೆಂದು ಭಾವಿಸಿದ ಒಂದು ಪಂಗಡ ತಮ್ಮನ್ನು ವಾಲ್ಮೀಕಿಗಳೆಂದು ಕರೆದುಕೊಂಡರು.

ತಳವಾರ : ಸೇವಾ ವರ್ಗವನ್ನು ಸೂಚಿಸುವ ಪದವಾಗಿದೆ. ತಳವಾರ ಎಂಬುದು ಮೂಲತಃ ‘ತಲವಾರ’ ಎಂಬುದರಿಂದ ಬಂದುದು. ಆರಕ್ಷಕರು ಎಂಬ ಅರ್ಥದಲ್ಲಿ ಬಳಕೆಯಾಗುತ್ತಿತ್ತು. ಇದೇ ಅರ್ಥದಲ್ಲಿ ಹಳೆಗನ್ನಡದಲ್ಲಿಯ ‘ತಾಳಾ’ವು ‘ತಳಾರ’ ಎಂಬ ರೂಪದಲ್ಲಿ ಪ್ರಯೋಗ ಗೊಳ್ಳುತ್ತಿತ್ತು. ತಲವಾರ ಎಂದರೆ ಉತ್ಪನ್ನ ಅಥವಾ ಕರ ಎಂದರ್ಥವು ಉಂಟು. ಹಗಲಿರುಳು ಗ್ರಾಮ ರಕ್ಷಣೆ ಕಾರ್ಯಕ್ಕಾಗಿ ನಿಯಮಿಸಲ್ಪಟ್ಟುದರ ಈ ಕಾಯಕವನ್ನು ಒಪ್ಪಿಕೊಂಡವರ ಸಂತತಿಯವರಿಗೆ ತಳವಾರ ಎಂದು ಕರೆಯುತ್ತಾರೆ.

ನಾಯಕ ಮಕ್ಕಳು : ರಾಜಕೀಯ ಬೆಳವಣಿಗೆಯ ಹಂತದಲ್ಲಿ ದೊರೆತ ನಾಯಕ ಸ್ಥಾನದಿಂದ ನಾಯಕರಾಗಿದ್ದ ವಂಶಸ್ಥರ ಕುಟುಂಬಕ್ಕೆ ನಾಯಕ ಮಕ್ಕಳು ಎಂದು ಕರೆಯ ಲ್ಪಟ್ಟರು.

ಪರಿವಾರ : ಪಾಳೆಯಗಾರರ ಆಸ್ಥಾನದಲ್ಲಿ ಅಂತರಂಗ ಸೇವಕರಂತಿದ್ದ ಸಮೂಹದವರನ್ನು ಪರಿವಾರದವರೆಂದು ಕರೆಯಲಾಗುತ್ತದೆ.

ಬೇರದ್, ವೇದನ್ ಇವುಗಳ ಮೂಲಾರ್ಥ ಬಹುಶಃ ಬೇಟೆಯಾಡುವುದು ಎಂದು. ಬಹುದಿನಗಳವರೆಗೆ ಬೇಟೆ ವೃತ್ತಿಯಲ್ಲಿ ಉಳಿದುಕೊಂಡ ಸಮೂಹಕ್ಕೆ ಈ ಪದನಾಮಗಳು ಉಳಿದುಕೊಂಡಿವೆ.

ಬೋಯ : ಭೋಯ ಅಥವಾ ಭೋವ ಎಂದರೆ ಮಿಣಿ ಮುಂತಾದ ಭಾರಗಳನ್ನು ಹೊರುವ ಸಮೂಹ ಎಂದರ್ಥ.

ರಾಮೋಶಿ : ಇದು ಸಾಂಸ್ಕೃತಿಕ ಸ್ತರ ಸೂಚಿಸುವ ಪದವಾಗಿದೆ. ಪ್ರಸಿದ್ಧ ಕವಿ ವಾಲ್ಮೀಕಿ ರಚನೆಯ ರಾಮಾಯಣದ ಕಥನಾಯಕನಾದ ರಾಮನೇ ನಮ್ಮ ಮೂಲ ಪುರುಷ ಎಂದು ಭಾವಿಸುವ ವರ್ಗಕ್ಕೆ ‘ರಾಮೋಸಿ’ ಎಂದು ಕರೆಯಲಾಗುತ್ತದೆ.

ನಾಯಕ ಬೇಡ ಜನಾಂಗದ ಉಪ ಪಂಗಡ ಕುರಿತು ವಿದ್ವಾಂಸರಾದ ಎಡ್ಗರ್ ಥರಸ್ಟನ್ ‘Edger Thurston – Bedas are split into two main division of “Uru” or village men. and “Myasa” or grass-landmen, and each of these division is again sub divided into a number of exogamous Bedagu. Four of the best known of these subdivisions are Yammalavaru or buffalomen. Mandalavara or men of the herd: Pulavaru or flowermen and Minalavaru of fishmen” ಹೀಗೆ ಅಭಿಪ್ರಾಯಪಡಿಸಿದ್ದಾರೆ.

ಕಾಡುಗಳಲ್ಲಿದ್ದುಕೊಂಡು ಪಶುಪಾಲನೆಯನ್ನು ಮುಖ್ಯ ವೃತ್ತಿಯನ್ನಾಗಿ ಅವಲಂಭಿಸಿ ದವರು ತಮ್ಮ ಸಾಕು ಪ್ರಾಣಿಗಳನ್ನು ಕಾಡಿನಿಂದ ಕಾಡಿಗೆ ಅಟ್ಟಿಕೊಂಡು ಹೋಗಿ, ಪೋಷಿಸು ತ್ತಿದ್ದರಿಂದ ಅಂತಹವರನ್ನು ಕಾಡುಸಂಚರು ಎಂದು ಕರೆಯುತ್ತಾರೆ. ಆದರೆ ಈ ಸೂಚಿತ ಜನಾಂಗವು ಕರ್ನಾಟಕದಲ್ಲಿ ಕಾಣಸಿಗದೆ ಆಂಧ್ರಪ್ರದೇಶದ ಗುಡ್ಡಗಾಡಿನಲ್ಲಿ ವಾಸಿಸಿರುವುದಾಗಿ ತಿಳಿದುಬರುತ್ತದೆ.

ಒಂದು ಗುಂಪಿನಲ್ಲಿ ಕೆಲವರು ತಮ್ಮ ಪಶುಗಳನ್ನು ಅಟ್ಟಿಕೊಂಡು ಬೇಟೆಯಾಡುತ್ತ ಅಡವಿ ಸುತ್ತುತ್ತಾ ಅಲೆದರು. ಈ ತೆರನಾಗಿ ಪಶುಗಳನ್ನು ಮೇಯಿಸುತ್ತ ಒಂದು ಗುಂಪು ಹೊರಟಿತು. ಈ ಗುಂಪನ್ನು ಮೇಯಿಸುವವರು, ಮ್ಯಾಸರು ಎಂದು ಕರೆಯಲ್ಪಟ್ಟರು.

ಊರು ನಾಯಕರು (ಬೇಡರು)

ಊರುಗಳಲ್ಲಿ ವಾಸಿಸುವುದರಿಂದಲೇ ಇವರಿಗೆ ಊರು ನಾಯಕರು ಎಂದು ಹೆಸರು ಬಂದಿರಬೇಕು. ಮೂಲದಲ್ಲಿದ್ದ ಪಶುಪಾಲನೆ, ಬೇಟೆಗಾರಿಕೆ, ಪಾಳೇಗಾರಿಕೆಗಳು ಕ್ರಮೇಣ ಕಡಿಮೆಯಾಗಿರುವುದರಿಂದ ಇಂಥ ನಾಗರೀಕತೆಯ ಬದುಕಿಗೆ ಹತ್ತಿರವಾಗಿ ನಾನಾ ಉದ್ಯೋಗಗಳನ್ನು ಕೈಕೊಂಡು ಬದುಕುತ್ತಿದ್ದಾರೆ.

ಶ್ರೀ ಎಚ್.ವಿ. ನಂಜುಂಡಪ್ಪ ಮತ್ತು ಅನಂತಕೃಷ್ಣ ಅಯ್ಯರ್ ಅವರು ಬೇಡರಲ್ಲಿ ಊರು ಬೇಡರು, ಮ್ಯಾಸಬೇಡರು, ಗುಡಿಸಲು ಅಥವಾ ಗುಡ್ಲು ಬೇಡರು, ಮಾರಮ್ಮನ ಬೇಡರು, ಹಾಲು ಬೇಡರು, ಮೊಂಡ ಬೇಡರು ಎಂದು ವಿಂಗಡಿಸಿದ್ದಾರೆ. ಮೊದಮೊದಲು ಈ ಹಿಂದೆ ಹೇಳಿದಂತೆ ಅನೇಕ ಪಂಗಡಗಳಿದ್ದು, ಕ್ರಮೇಣ ನಾಯಕ ಬೇಡ ಜನಾಂಗದಲ್ಲಿ ಮುಖ್ಯವಾಗಿ ಎರಡು ಪಂಗಡಗಳು ಉಳಿದುಕೊಂಡಿರುವುದು ಗಮನಾರ್ಹವಾಗಿವೆ. ಅವುಗಳಲ್ಲಿ ಒಂದು ಊರ ನಾಯಕ(ಬೇಡ)ರು, ಎರಡು ಮ್ಯಾಸ(ಬೇಡ)ನಾಯಕರು.

ರಾಜಕೀಯ ಸ್ಥಾನಮಾನ

ಅರಣ್ಯ ವಾಸಿಗಳಾದ್ದರಿಂದ ಬೇಟೆ ವೃತ್ತಿಯು ಉಪಜೀವನವಾಗಿರುವುದರಿಂದ ಧೀರರು, ನುರಿತ ಹೋರಾಟಗಾರರಾಗಿದ್ದುದರಿಂದ ಸೈನ್ಯದಲ್ಲಿ ಇವರಿಗೆ ಆದ್ಯತೆ ದೊರೆಯುತ್ತ ಬಂದಿತು. ಕಂಪಲಿ ರಾಜ್ಯದ ಕಂಪಿಲರಾಯನು ಬೇಡರವನು. ಇವನು ಕುಮ್ಮಟ ದುರ್ಗದಲ್ಲಿದ್ದು, ಮುಸ್ಲಿಂರ ಆಕ್ರಮಣವನ್ನು ನಿಗ್ರಹಿಸಿದನು. ಈತನ ಮಗ ಕುಮಾರ ರಾಮನು ತನ್ನ ಶೀಲ ಮತ್ತು ಪರಾಕ್ರಮಕ್ಕಾಗಿ ಪ್ರಖ್ಯಾತನಾಗಿದ್ದಾನೆ. ಹೊಯ್ಸಳ ಮತ್ತು ದೆಹಲಿಯ ಸುಲ್ತಾನರ ಸೈನ್ಯಗಳನ್ನು ಸೋಲಿಸಿದ ಕೀರ್ತಿಗೆ ಪಾತ್ರನಾಗಿದ್ದಾನೆ. ಅಲ್ಲದೆ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ.

ವಿಜಯನಗರ ರಾಜ್ಯದ ಕಾಲದಲ್ಲಿ ಕರ್ನಾಟಕದ ಅನೇಕ ಕಡೆ ಪಾಳೆಯ ಪಟ್ಟುಗಳು ಹರಡಿದವು. ಈ ಪಾಳೆಯಪಟ್ಟುಗಳ ಆಡಳಿತಗಾರರಲ್ಲಿ ಕೆಲವರು ಬೇಡ ಜನಾಂಗದವರಿದ್ದರೆಂದು ತಿಳಿಯುತ್ತದೆ. ತಿರುಮಲಾರ್ಯನ ಚಿಕ್ಕದೇವರಾಯನ ವಂಶಾವಳಿಯಲ್ಲಿ ಚಿಂತನಕಲ್ಲು, ಚಿಕ್ಕನಾಯಕನಹಳ್ಳಿ, ಬಾಣಾವರ, ಬಸವ ಪಟ್ಟಣ, ಸೀರೆ  (ಸಿರಾ) ಮುಂತಾದ ಪಟ್ಟಣಗಳಲ್ಲಿ ‘ಬೇಡರು’ ಪಾಳೆಯಪಟ್ಟುಗಾರರಾಗಿ ಆಳುತ್ತಿದ್ದರು ಎಂಬುದು ತಿಳಿಯುತ್ತದೆ. ಅಲ್ಲದೆ ಸುರಪುರದ ನಾಯಕರನ್ನು, ತರೀಕೆರೆಯ ಪಾಳೆಯಪಟ್ಟನ್ನು ಹೆಸರಿಸಬಹುದು.

ಹಲಗಲಿಯ ಬೇಡರು ಬ್ರಿಟಿಷರ ವಿರುದ್ಧ ಬಂಡಾಯ ಮಾಡಿ ಪ್ರಸಿದ್ಧರಾಗಿದ್ದಾರೆ. ತಮ್ಮ ಶಸ್ತ್ರಗಳನ್ನು ಒಪ್ಪಿಸಬೇಕೆಂದಾಗ ಅದಕ್ಕೊಪ್ಪದೆ ವೀರಾವೇಶದಿಂದ ಹೋರಾಡಿದರು. ಸಿಂಧೂರ ಲಕ್ಷ್ಮಣನು ಹಲವು ಕಾಲ ಬ್ರಿಟಿಷರ ವಿರುದ್ಧ ಹೋರಾಡಿದನು. ಸಿಂಹದಂತೆ ಸಂಚರಿಸುತ್ತಿದ್ದ ಇವನನ್ನು ಬ್ರಿಟೀಷರು ಮೋಸದಿಂದ ಸೆರೆಹಿಡಿದ ಘಟನೆಗಳ ಉಲ್ಲೇಖಗಳು ಇತಿಹಾಸದಲ್ಲಿ ಇನ್ನೂ ಉಳಿದುಕೊಂಡಿವೆ. ಹೀಗೆ ಬೇಡ ಜನಾಂಗಕ್ಕೆ ಸೇರಿದ ಇನ್ನೂ ಹಲವಾರು ಚಿಕ್ಕಪುಟ್ಟ ಪಾಳೆಯಗಾರರು ಕರ್ನಾಟಕ ಹಾಗೂ ನೆರೆಹೊರೆ ರಾಜ್ಯಗಳಲ್ಲಿ ಆಳಿ ಹೋಗಿರಬೇಕು.

ಊರನಾಯಕರಲ್ಲಿಯೂ ಕೆಲವು ಉಪ ಪಂಗಡಗಳನ್ನು ಕಾಣುತ್ತೇವೆ. ಬೇಟೆ ಹಾಗೂ ಯುದ್ಧದಲ್ಲಿ ಇತರೇ ಉದ್ಯೋಗವನ್ನು ಸೂಚಿಸುವ ಅರ್ಥದಿಂದ ಕೆಲವು ಗುಂಪುಗಳಿಗೆ ಆಯಾ ಹೆಸರುಗಳು ಬಂದಿವೆ. ಹೆಚ್.ವಿ. ನಂಜುಂಡಪ್ಪ ಮತ್ತು ಅನಂತ ಕೃಷ್ಣ ಆಯ್ಯರ್ ಅವರು ಊರು ಬೇಡರಲ್ಲಿ ಮತ್ತೊಂದು ಬಗೆಯ ಭಿನ್ನ ಗೋತ್ರದ ಪಂಗಡಗಳನ್ನು ಹೆಸರಿಸಿದ್ದಾರೆ. ಈ ಜನಾಂಗವು ತಮ್ಮ ಕುಲದೈವದ ಆರಾಧನೆಯ ಮೇಲೆ ವಿಭಜನೆಗೊಳ ಪಟ್ಟಿದ್ದಾರೆ ಹಾಗೂ ಸರ್ವೇಸಾಮಾನ್ಯವಾಗಿ ಕೆಲವು ಸಸ್ಯಗಳ, ಪ್ರಾಣಿಗಳ ಹೆಸರುಗಳನ್ನು ಹೊಂದಿದ್ದಾರೆ. ಈ ಗೋತ್ರಗಳ ಸೃಷ್ಟಿಯ ಬಗ್ಗೆ ಒಂದು ಸಾಂಪ್ರದಾಯಿಕ ವಿಶ್ಲೇಷಣೆ ಹೀಗಿದೆ. ವಾಲ್ಮೀಕಿಯ ಹನ್ನೆರಡು ಮಕ್ಕಳಿಂದ ಬೆಳೆದ ಸಂತತಿಯವರು ಕಾಲಾಂತರದಲ್ಲಿ ತಮ್ಮಲ್ಲಿನ ಭಿನ್ನಾಭಿಪ್ರಾಯಗಳಿಂದಾಗಿ ಹೊಡೆದಾಟ ಬಡಿದಾಟಗಳಲ್ಲಿ ತೊಡಗಿ ಅನೇಕ ಮಂದಿ ಸಾವಿಗೀಡಾದರು. ಇವರಲ್ಲಿ ಹಿರಿಯವನಾದ ‘ಮಂದಲ ಮಣಿಭಟ್ಟರಾಜ’ ಎನ್ನುವನು ಹೊಡೆದಾಟದ ಸ್ಥಳಕ್ಕೆ ಹೋಗಿ ತಾನೇ ಅವರನ್ನು ಬಂಧಿಸಲು ಪ್ರಯತ್ನಿಸುತ್ತಾನೆ. ಆಗ ಇವನನ್ನು ನೋಡಿದ ಕೆಲವರು ಅವನಿಗೆ ಹೆದರಿ ಅಲ್ಲಿಂದ ಕಾಲ್ಕಿತ್ತು ಅಲ್ಲಲ್ಲಿಯೇ ಅಡಗಿ ಕೊಳ್ಳುತ್ತಾರೆ. ಆಗ ಮಣಿಭಟ್ಟ ರಾಜನು ಅಡಗಿಕೊಂಡ ಸ್ಥಳದಲ್ಲಿಯೇ ಅವರನ್ನು ಬೇರೆ ಬೇರೆ ಗುಂಪುಗಳನ್ನಾಗಿ ಪ್ರತ್ಯೇಕಿಸಿ ಅಲ್ಲಿಯೇ ವಾಸಿಸಲು ನಿರ್ದೇಶಿಸುತ್ತಾನೆ. ಅಲ್ಲದೆ ಮಂದಲ ಮಣಿಭಟ್ಟ ರಾಜನೇ ಅವರಿಗೆ ಮುಖ್ಯಸ್ಥನಾಗುತ್ತಾನೆ. ಈ ಹಿನ್ನೆಲೆಯಂದು ಇಂದೂ ಬೇಡರ ಮದುವೆಗಳಲ್ಲಿ ಮಂದಲ ಮಣಿಭಟ್ಟ ರಾಜನ ಹೆಸರಿಗೆ ವೀಳ್ಯೆಯನ್ನು ಎತ್ತುತ್ತಾರೆ.

ಊರ ನಾಯಕರು ಮ್ಯಾಸ ನಾಯಕರಿಗಿಂತ ರೂಢಿ, ಸಂಪ್ರದಾಯ, ಸಂಸ್ಕಾರ, ಆಚರಣೆಗಳಲ್ಲಿ ಭಿನ್ನವಾಗಿ ಕಂಡುಬರುತ್ತಾರೆ. ಅಲ್ಲದೆ, ಮದುವೆ ಸಂಸ್ಕಾರದ ಆಚರಣೆ ಗಳಲ್ಲಿಯೂ ವ್ಯತ್ಯಾಸವನ್ನು ಕಾಣುತ್ತೇವೆ.

ಮುದ್ರೆ : ‘ಮುದ್ರೆ ಸಂಸ್ಕಾರ’ ಊರನಾಯಕ ಜನಾಂಗದಲ್ಲಿ ಒಂದು ವಿಶೇಷ ಆಚರಣೆ. ಪ್ರತಿಯೊಬ್ಬ ಪುರುಷನು ಮುದ್ರೆಯನ್ನು ಹಾಕಿಸಿಕೊಳ್ಳಬೇಕಾಗುತ್ತದೆ. ಇದು ಸುಮಾರು ೯ ರಿಂದ ೧೫ ವಯಸ್ಸಿನ ಅಂತರದಲ್ಲಿ ನಡೆಯುತ್ತದೆ. ಇತ್ತೀಚೆಗೆ ಮದುವೆ ಸಂದರ್ಭದಲ್ಲಿ ಮುದ್ರೆ ಹಾಕುವ ಶಾಸ್ತ್ರವನ್ನು ಮಾಡುತ್ತಾರೆ. ಕುಲ ದೇವತೆಯಾದ ಹನುಮಂತ ದೇವರ ಗುಡಿಯಲ್ಲಿ ಪೂಜಾರಿಯಿಂದ ಈ ಕ್ರಿಯೆ ಜರುಗುತ್ತದೆ. ಹೊಸ ಮರದಲ್ಲಿ ಕೊಬ್ಬರಿ ಬಟ್ಟಲು, ಅರಿಷಿಣ ಕೊಂಬು, ಜೀರಿಗೆ, ತಾಳೆಗರಿ, ಎಳ್ಳು, ಕೇರಳ್ಳು ಈ ಸಾಮಗ್ರಿಗಳನ್ನು ತೆಗೆದುಕೊಂಡು ಬರುತ್ತಾರೆ. ಮುದ್ರೆ ಹಾಕಿಸಿಕೊಳ್ಳುವವನ ಕೈಗೆ ಕಂಕಣವನ್ನು ಕಟ್ಟಲಾಗುತ್ತದೆ. ಕಂಕಣ ಕಟ್ಟಿದ ನಂತರ ತಾಮ್ರ ಲೋಹದಿಂದ ನಿರ್ಮಿಸಿದ ‘ಹನುಮಂತ ದೇವರ ಚಿತ್ರ’ ಹಾಗೂ ‘ಶಂಖ’ ಚಿತ್ರವಿರುವ ಮುದ್ರೆಯನ್ನು ಬೆಂಕಿಯಲ್ಲಿ ಕಾಯಿಸಿ, ಬಲ ಭುಜಕ್ಕೆ ತೇಯ್ದು ಗಂಧವನ್ನು ಸವರಿ ಅದರ ಮೇಲೆ ಮುದ್ರೆಯನ್ನು ಒತ್ತುತ್ತಾರೆ.

‘ಮುದ್ರೆ’ ಕ್ರಿಯೆ ಕಡ್ಡಾಯವಾಗಿರುತ್ತದೆ. ಈ ಕ್ರಿಯೆಗೊಳಗಾದವರು ತಮ್ಮ ಗ್ರಾಮದಲ್ಲಿ ಯಾರಾದರೂ ಸತ್ತರೆ ಆ ಶವದ ಅಂತಿಮ ಸಂಸ್ಕಾರವಾಗುವವರೆಗೆ ಊಟ ಮಾಡುವಂತಿಲ್ಲ. ಈ ತೆರನ ಕಟ್ಟಪ್ಪಣೆಯನ್ನು ಪಾಲಿಸಬೇಕಾಗುತ್ತದೆ. ಮುದ್ರೆ ಹಾಕಿಸಿಕೊಳ್ಳದೆ ಪುರುಷರು ಸತ್ತರೆ ಅಂಥವರ ಶವ ಸಂಸ್ಕಾರವನ್ನು ಬೇರೆ ರೀತಿಯಲ್ಲಿ ನಡೆಸುತ್ತಾರೆ. ಅಂದರೆ ಅಂಥದು ನಿಕೃಷ್ಟವೆಂದು ಭಾವಿಸಿ ಚಟ್ಟದ ಮೇಲೆ ಬೋರಲು ಹಾಕಿಕೊಂಡು ಮಸಣಕ್ಕೆ ಒಯ್ಯುತ್ತಾರೆ. ಅಲ್ಲಿಯೂ ಬೋರಲು ಹಾಕಿ ಸುಡಲಾಗುತ್ತದೆ.

ವಿವಾಹ ಪದ್ಧತಿ : ಒಂದೇ ಗೋತ್ರಕ್ಕೆ ಸಂಬಂಧಿಸಿದ ಗಂಡು-ಹೆಣ್ಣುಗಳಲ್ಲಿನ ಮದುವೆಯನ್ನು ನಿಷೇಧಿಸಲಾಗಿದೆ. ವಯಸ್ಕ ಮದುವೆಗೆ ಹೆಚ್ಚಿನ ಪ್ರಾತಿನಿಧ್ಯವಿದ್ದರೂ ಬಾಲ್ಯ ವಿವಾಹಗಳೂ ನಡೆಯುತ್ತವೆ. ಬಹುಪತ್ನಿತ್ವ ರೂಢಿಯಲ್ಲಿದೆ.

ಮದುವೆಯ ಆಚರಣೆಯಲ್ಲಿ ಕೆಲವು ವಿಶಿಷ್ಟಗಳನ್ನು ಕಾಣುತ್ತೇವೆ. ಮದುವೆ ಗಂಡನ್ನು ಬೀಸುವ ಕಲ್ಲಿನ ಮೇಲೆ ನಿಲ್ಲಿಸುತ್ತಾರೆ. ಮದುಮಗಳನ್ನು ಜೋಳ ತುಂಬಿದ ಪುಟ್ಟಿಯಲ್ಲಿ ನಿಲ್ಲಿಸುತ್ತಾರೆ. ಈ ಪುಟ್ಟಿಗೆ ‘ಮಟ್ಟಕ್ಕಿ ಪುಟ್ಟಿ’ ಎಂದು ಕರೆಯುತ್ತಾರೆ. ಈ ಆಚರಣೆಗೆ ‘ಮಟ್ಟಕ್ಕಿ ಪುಟ್ಟಿ ಕಾರ್ಯ’ವೆಂತಲೂ ಕರೆಯುವುದುಂಟು.

ಮದುವೆಯ ಮನೆಯಿಂದ ಮದುವಣಿಗನನ್ನು ಎತ್ತಿನ ಮೇಲೆ ಕುಳ್ಳಿಸಿಕೊಂಡು ಕುಲದೇವತೆಯಾದ ಹನುಮಂತ ದೇವರ ಗುಡಿಗೆ ಹೋಗಿ ಬರುತ್ತಾರೆ. ಈ ಕಾರ್ಯಕ್ಕೆ ‘ದಾರಿ ಎತ್ತಿನ ಕಾರ್ಯ’ ಎಂದು ಕರೆಯುತ್ತಾರೆ. ಮದುವೆಗಳು ಹೆಚ್ಚಾಗಿ ಹೆಣ್ಣಿನ ಮನೆಯ ಮುಂದೆ ಹಾಗೂ ಕುಲದೈವವಾದ ಅಂಜನೇಯ ಮತ್ತು ಹುಲಿಗೆಮ್ಮನ ದೇವಸ್ಥಾನದಲ್ಲಿಯೂ ನಡೆಯುತ್ತವೆ. ವಧು-ವರರ ನಡುವೆ ಬಟ್ಟೆ (ಪಂಚೆ) ಅಡ್ಡಲಾಗಿ ಇಡಲಾಗುತ್ತದೆ. ಮದುವೆ ಮುಹೂರ್ತಕ್ಕೆ ವೀರಶೈವ ಧರ್ಮಗುರುಗಳನ್ನು ಆಮಂತ್ರಿಸುತ್ತಾರೆ.

ದೇವದಾಸಿ : ಈ ಪದ್ಧತಿಯು ನಾಯಕ ಜನಾಂಗದಲ್ಲಿ ಬಹುದಿನಗಳಿಂದ ಆಚರಣೆಯಲ್ಲಿ ಬಂದಿದೆ. ಲೇಸಿ, ದೇವದಾಸಿ, ಎಂಬ ಪದಗಳಿಂದಲೂ ಈ ಪದ್ಧತಿಯ ಸ್ತ್ರೀಯರನ್ನು ಕರೆಯುತ್ತಾರೆ. ಯಾವುದೋ ಒಂದು ಕುಟುಂಬದಲ್ಲಿ ಗಂಡು ಸಂತಾನವಿಲ್ಲದಂತಹ ಸಂದರ್ಭ ದಲ್ಲಿ ಕುಲದೇವತೆಯ ಹೆಸರಿನಿಂದ ದೇವದಾಸಿ ಬಿಡುವ ಪದ್ಧತಿ ರೂಢಿಗೆ ಬಂದಿತೆಂದು ಹೇಳುತ್ತಾರೆ. ಆದರೆ ಈ ಪದ್ಧತಿಯು ಇಂದು ಕಡಿಮೆಯಾಗಿದೆ.

ಶವಸಂಸ್ಕಾರ : ಜೀವ ಹೋದ ತಕ್ಷಣ ಬಂಧುಗಳೆಲ್ಲ ಸೇರುತ್ತಾರೆ. ಶವವನ್ನು ಮನೆಯ ಹೊರಗಡೆ ತಂದು ಸ್ನಾನಮಾಡಿಸಿ ಹೊಸ ಬಟ್ಟೆ ತೊಡಿಸಿ ಕುಳ್ಳಿಸುತ್ತಾರೆ. ಚಟ್ಟವನ್ನು ಸಿದ್ಧಮಾಡಿ ಮಸಣಕ್ಕೆ ತೆಗೆದುಕೊಂಡು ಹೋಗುವರು. ಮುದ್ರೆ ಹಾಕಿಸಿಕೊಂಡವರನ್ನು ಸುಡುವ ಪದ್ಧತಿ ಇದೆ. ಹದಿನಾರನೆ ಅಥವಾ ಮೂವತ್ತನೆ ದಿನ ‘ದಿನಕರ್ಮ’ ಮಾಡುತ್ತಾರೆ. ಉಳಿದಂತೆಲ್ಲಾ ಇತರೆ ಜನಾಂಗದವರ ಆಚರಣೆಗಳನ್ನು ಕಾಣುತ್ತೇವೆ.

ಊರನಾಯಕ ಮತ್ತು ಮ್ಯಾಸನಾಯಕ ಜನಾಂಗಗಳ ರೂಢಿ ಸಂಪ್ರದಾಯ ಆಚರಣೆಗಳನ್ನು ಕೂಲಂಕುಷವಾಗಿ ನೋಡಲಾಗಿ ಕೆಲ ಭಿನ್ನತೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಊರ ನಾಯಕರು ಕೋಳಿಯನ್ನು ಆಹಾರಕ್ಕಾಗಿ ಉಪಯೋಗಿಸುತ್ತಾರೆ. ಮ್ಯಾಸ ನಾಯಕರಲ್ಲಿ ಕೋಳಿಯ ಆಹಾರ ನಿಷಿದ್ಧವಾಗಿದೆ. ಊರ ನಾಯಕರಲ್ಲಿ ವಿಧವಾ ವಿವಾಹ (ಉಡಿಕೆ ಪದ್ಧತಿ) ರೂಢಿಯಲ್ಲಿದ್ದರೆ, ಮ್ಯಾಸ ನಾಯಕರಲ್ಲಿ ಇದನ್ನು ಕಾಣುವುದಿಲ್ಲ.

ಮ್ಯಾಸ ನಾಯಕರಲ್ಲಿ ಋತುಮತಿ ಪ್ರಸಂಗದಲ್ಲಿ, ಹೆರಿಗೆ ಸಂದರ್ಭದಲ್ಲಿ ಆಚರಣೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಊರು ನಾಯಕರಲ್ಲಿ ಈ ತೆರನ ಕಟ್ಟುಪಾಡು ಇರುವುದಿಲ್ಲ.

ಊರ ನಾಯಕರಿಗೆ ಆಂಜನೇಯ, ಎಲ್ಲಮ್ಮ, ಹುಲಿಗೆಮ್ಮ ಆರಾಧಾನೆಯ ದೇವತೆ ಗಳಾಗಿದ್ದರೆ, ಮ್ಯಾಸನಾಯಕರಿಗೆ ಪೆಟ್ಟಿಗೆ ದೇವರುಗಳು ಆಚರಣೆಯ ಪ್ರಮುಖ ದೇವತೆ ಗಳಾಗಿವೆ.

ಮ್ಯಾಸ ನಾಯಕರು

ನಾಯಕ ಜನಾಂಗದ ಒಂದು ಪ್ರಮುಖ ಪಂಗಡವಾಗಿರುವ ಮ್ಯಾಸ ನಾಯಕರ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನ ವಿಶೇಷವಾಗಿದೆ. ಮ್ಯಾಸ ಪದದ ನಿಷ್ಪತ್ತಿಯನ್ನು ಹೀಗೆ ಹೇಳ ಲಾಗುತ್ತಿದೆ.

ಮ್ಯಾಸ ಪದವು ಊರು ಎಂಬ ಪದಕ್ಕೆ ವಿರುದ್ಧಾರ್ಥವೆಂದು ಊಹಿಸಿ, ಊರು ಬೇಡರಿಗೆ ವಿರುದ್ಧವಾದ ಸ್ಥಿತಿಯಲ್ಲಿ ಇರುವವರಾದ್ದರಿಂದ, ಇವರನ್ನು ಹುಲ್ಲುಗಾವಲು ಬಯಲುಗಳಲ್ಲಿ ವಾಸಿಸುವ ಬೇಡರೆಂದು ಅನೇಕ ವಿದ್ವಾಂಸರು ಅರ್ಥೈಸಿದ್ದಾರೆ (ಇದು ಭ್ರಮೆಯ ಉತ್ಪತ್ತಿ ಯಾಗಿರಬೇಕೆಂಬುದು ಕೆಲವರ ವಾದ).

ಮ್ಯಾಸ ಎಂಬ ಪದವನ್ನು ‘ನ್ಯಾಸ’ ಎಂದು ಗ್ರಹಿಸಿ ಜ್ಞಾನಿಗಳು ಎಂಬುದಾಗಿ ಅರ್ಥೈಸಿದ್ದೂ ಉಂಟು.

ಮ್ಯಾಸಬೇಡ ‘ನ್ಯಾಸ’ವೆಂದು ತಪ್ಪಾಗಿ ತಿಳಿದು ಇವರು ಅಮಂಗಲಕಾರರೆಂದು ವಿವರಿಸುತ್ತಾರೆ.

‘ಮ್ಯಾಸ’ ಪದ ‘ವ್ಯಾಸ’ ಎಂಬ ಪದದಿಂದ ನಿಷ್ಪನ್ನವಾದುದೆಂದು, ಅದರಿಂದ ಮ್ಯಾಸ ಬೇಡರು ‘ವ್ಯಾಸ ಮಹರ್ಷಿ’ಯ ಸಂತತಿಯವರಿರಬೇಕು.

ಮ್ಯಾಸ, ಮೇಸ, ಮೇಷ ಮುಂತಾದ ರೂಪಗಳು ‘ಮ್ಲೇಚ್ಛ’ ಎಂಬ ಸಂಸ್ಕೃತ ಪದದ ತದ್ಭವಗಳಾಗಿವೆ. ಇದೇ ಪ್ರಾಕೃತದಲ್ಲಿ ‘ಮೇಸ-ಮೋಷ’ ಎಂದಾಗುತ್ತದೆ.

೫ನೇ ಶತಮಾನದಲ್ಲಿ ಅಮರಸಿಂಹನು ತನ್ನ ಅಮರ ಕೋಶದಲ್ಲಿ ಬೇಡರ ಜಾತಿಯ ಪರ‍್ಯಾಯ ಪದಗಳನ್ನು ಹೇಳುತ್ತ ಅವರನ್ನು ಚಂಡಾಲರ ಜೊತೆಯಲ್ಲಿ ಶ್ರೇಣೀಕರಿಸಿ ಮ್ಲೇಚ್ಛ ಜಾತಿಗಳೆಂದು ವರ್ಗೀಕರಿಸಿದ್ದಾನೆ. ಅಮರ ಕೋಶದ ದ್ವಿತೀಯ ಕಾಂಡದ ಶೂದ್ರ ವರ್ಗದ ಕೊನೆಯ ಭಾಗದಲ್ಲಿ

ಚಂಡಾಲ ಪ್ಲವ ಮಾತಂಗ ದಿವಾಕೀರ್ತಿ ಜನಂಗಮಾ :
ನಿ, ಆದ ಶೃಪಜಾ ಪಂತೀವಾಸಿ ಚಂಡಾಲ ಪುಲ್ಕಸಾ : (೭೨೪)
ಭೆದಾ ಕಿರಾತ ಶಬರ ಪುಳಿಂದಾ ಮ್ಲೆಚ್ಛ ಜಾತಯಾ :
ವ್ಯಾಧೋ ಮೃಗವಾಧಾಜೀವೋ ಮೃಗಯುರ್ಲುಬ್ಧಕಶ್ಚಸ : (೭೨೫)೧೫

ಎಂದು ಹೇಳಿದ್ದಾನೆ.

ಮೂಲದಲ್ಲಿ ಈ ಜನಾಂಗದ ವೃತ್ತಿ ಪಶುಪಾಲನೆ, ಕುರಿ ಸಾಕಾಣಿಕೆಯಾಗಿತ್ತು. ಸೋದರ ಕಲಹದಲ್ಲಿ ಒಂದೇ ಗುಂಪು ಎರಡು ಗುಂಪುಗಳಾಗಿ ಒಡೆದು ಒಂದು ಗುಂಪು ಊರಲ್ಲಿಯೇ ಉಳಿದುಕೊಳ್ಳುತ್ತದೆ. ಅದುವೇ ಊರ ನಾಯಕರಾಗಿ, ಮತ್ತೊಂದು ಪಂಗಡ ದನ-ಕುರಿಗಳನ್ನು ಮೇಯಿಸುತ್ತ ಅಡವಿಯಲ್ಲಿಯೇ ವಾಸವಾದ್ದರಿಂದ ಅಡವಿ ಮ್ಯಾಸ ಎಂದು ಪರಿವರ್ತನೆಯಾಗಿದೆ.

ಮೇಯಿಸುವವ – ಮೇಸುವವ – ಮೇಸ – ಮ್ಯಾಸ : ಮ್ಯಾಸ ಹೀಗೂ ಈ ಪದೋತ್ಪತ್ತಿ ಆಗಿರಬೇಕು.

ಈ ಜನಾಂಗದ ಮೂಲದ ಬಗ್ಗೆ ಒಂದು ಪೌರಾಣಿಕ ಹೇಳಿಕೆ ಹೀಗಿದೆ – ಒಬ್ಬ ಬೇಡರ ಜಾತಿಯ ಹೆಣ್ಣಿಗೆ ಇಬ್ಬರು ಗಂಡು ಮಕ್ಕಳಿದ್ದರು. ಹಿರಿಯವನು ಊಟವಾದ ಮೇಲೆ ಹೊಲಕ್ಕೆ ಹೋಗಿದ್ದನು. ಚಿಕ್ಕವನು ಮನೆಗೆ ಬಂದು ತಾಯಿಯನ್ನು ಊಟಕ್ಕೆ ಕೇಳಿದಾಗ, ತಾಯಿಯು ರೊಟ್ಟಿ ಹಾಗೂ ತರಕಾರಿಯನ್ನು ನೀಡಿದಳು. ಊಟ ಮಾಡುತ್ತಿರುವ ಅವನಿಗೆ ಮಾಂಸದ ವಾಸನೆ ಬಂದಿತು. ಆಗ ತಾಯಿಯನ್ನು ಕೇಳಿದ. ತಾಯಿ ಮಾಂಸವನ್ನು ಕೊಡದಿದ್ದಾಗ ಸಿಟ್ಟಿಗೆದ್ದ ಮಗ ಅವಳನ್ನು ಕೊಂದು ಹಾಕಿದನು. ಅನಂತರ ಅವನು ಮನೆಯಲ್ಲಿ ಹುಡುಕಿದಾಗ ಒಂದು ಗಡಿಗೆ ಸಿಕ್ಕಿತು. ಅದನ್ನು ತೆಗೆದು ನೋಡಿದಾಗ ಅದರಲ್ಲಿ ಕೊಳೆತು ನಾರುವ ಒಂದು ಬೇರು ಸಿಕ್ಕಿತು. ಅದಕ್ಕೆ ಮಾಂಸದ ವಾಸನೆಯಿತ್ತು. ಇದನ್ನರಿತ ಅವನು ತನ್ನ ಮುಂಗೋಪಿತನಕ್ಕೆ ವ್ಯಥೆ ಪಟ್ಟು ಅಡವಿಗೆ ಹೋಗಿ ತಪಸ್ಸಿಗೆ ಕುಳಿತನು. ಕಠಿಣ ತಪಸ್ಸಿನಿಂದ ಋಷಿಯ ಹಂತಕ್ಕೇರಿದ ಈತನೇ ಮ್ಯಾಸನಾಯಕ ಜನಾಂಗದ ಮೂಲ ಪುರುಷನಾದನು.

ಈ ಬಗೆಗಿನ ಮತ್ತೊಂದು ಕಥೆ ಹೀಗಿದೆ ಸೌರವ್ಯೂಹದ ಗೋತಿ ರಾಜನೆನ್ನುವವನ ತೊಡೆಯಿಂದ ಋಷಿಗಳು ಒಬ್ಬ ಭಯಂಕರವಾದ ಹಾಗೂ ಕಪ್ಪಗಿನ ರಾಕ್ಷಸನನ್ನು ಸೃಷ್ಟಿಸಿದರು. ಈತನು ರಾಜ್ಯವಾಳಲು ಯೋಗ್ಯವಲ್ಲವೆಂದು ತಿಳಿದಾಗ ಈತನನ್ನು ರಾಜ್ಯದಿಂದ ಹೊರ ದೂಡಿದರು. ಅರಣ್ಯದಲ್ಲಿ ಅವನಿಗೆ ಗೆಡ್ಡೆ ಗೆಣಸುಗಳು ಸಿಗದೆ, ಬೇಟೆಯಾಡಿ ಜೀವಿ ಸುತ್ತಿದ್ದನು. ಹೀಗೆ ಬೇಟೆ ಆಡುವಾಗ ಒಂದು ದಿನ ಅವನು ಅಪ್ಸರೆಯಾದ ಮೇನಕೆಯನ್ನು ಕಂಡು ವ್ಯಾಮೋಹಗೊಂಡು ಅವಳೊಂದಿಗೆ ಕೂಡಿದುದರ ಪರಿಣಾಮವಾಗಿ ಆತನಿಗೆ ಏಳು ಮಕ್ಕಳು ಹುಟ್ಟಿದರು. ಅವರೇ ಮ್ಯಾಸ ಮಂಡಲದ ಮೂಲಪುರುಷರಾಗಿರುತ್ತಾರೆ. ಅವರ ವಿವರ ಹೀಗಿದೆ, ೧. ಗೋಜಲದಾರೋ ೨. ಗೋಸರ ಅಥವಾ ಗೋರಲ ೩. ಬಾಡ ಮಂಡಲಾಕರು ೪. ಸಾರಂಗಬಸರಾಂಡ್ಲು ೫. ತಾಯದ ಸಾಮಂತಲು ೬. ಪಿಂಗಳರಂಗಮಾನ್ಯ ೭. ರಾಜಾಧಿರಾಜ, ಇವರ ಹೆಸರಿನಿಂದಲೇ ಕ್ರಮೇಣ ಅವುಗಳೇ ಏಳು ಗೋತ್ರಗಳಾಗಿ ಮಾರ್ಪಾಟಾಗಿವೆ.

ವಿದೇಶಿ ವಿದ್ವಾಂಸನಾದ ಬುಖಾನನು ಮ್ಯಾಸ ನಾಯಕರ ಬಗ್ಗೆ “ಇವರು ತೆಲುಗು ಮೂಲದವರೆಂದು, ವೆರೂಲ್ ಎನ್ನುವ ಪೂರ್ವಘಟ್ಟದ ಒಂದು ಪ್ರದೇಶದಲ್ಲಿ ವಾಸ ವಾಗಿದ್ದು, ತೆಲುಗು ಭಾಷೆಯನ್ನು ಮಾತನಾಡುತ್ತಿದ್ದರು. ಇವರನ್ನು ‘ಬೇಡರಿ’ ಎಂದೂ ಕರೆಯಲಾಗುತ್ತಿತ್ತು” ಎಂದು ಹೇಳಿದ್ದಾನೆ. ಆದರೆ, ಇಂದು ಬೇಡರಿ ಎಂಬ ಹೆಸರು ಕಂಡುಬರುವುದಿಲ್ಲ.

ಶ್ರೀಶೈಲದ ಬಳಿಯ ಕರಿಮಲೆ ಕೊಮ್ಮಮಲೆಗಳ ಕಡೆಯಿಂದ ಮತ್ತು ತಿರುಪತಿ ಬಳಿಯ ಜಡೇಕಲ್ಲುದುರ್ಗದ ಪ್ರದೇಶಗಳಿಂದ ಕರ್ನಾಟಕಕ್ಕೆ ಬಂದಿರಬೇಕೆಂಬುದರ ಬಗ್ಗೆ ಕೆಲ ಮಾಹಿತಿಗಳು ದೊರಕುತ್ತವೆ. ಈ ಎಲ್ಲಾ ಹಿನ್ನೆಲೆಗಳಿಂದ ಮ್ಯಾಸ ನಾಯಕರ ಮೂಲ ಆಂಧ್ರಪ್ರದೇಶವೆಂತಲೂ ಇವರು ಕ್ರಮೇಣ ಕರ್ನಾಟಕಕ್ಕೆ ಬಂದು ನೆಲೆಸಿದರೆಂದೂ ಹೇಳ ಬೇಕು. ಅಲ್ಲದೆ ಬರಬರುತ್ತ ಕಾಡುವಾಸ ಬಿಟ್ಟು ಗ್ರಾಮವಾಸಿಗಳಾದರು. ಬೇಟೆ, ಪಶುಪಾಲನೆ ಯಂತಹ ವೃತ್ತಿಗಳಿಗೆ ವಿದಾಯ ಹೇಳಿ, ವ್ಯವಸಾಯ ಮತ್ತು ಇತರೇ ವೃತ್ತಿಗಳನ್ನು ಅಳವಡಿಸಿಕೊಂಡರು. ತಮ್ಮ ಪ್ರಾಚೀನ ಜನಾಂಗದ ಬದುಕಿನ ಕೆಲವು ಅಂಶಗಳನ್ನು ಬಿಟ್ಟುಕೊಡುತ್ತಾ ನಾಗರಿಕ ಜೀವನದತ್ತ ರಭಸದಿಂದ ಧಾವಿಸುತ್ತಿದ್ದಾರೆ.

ಮ್ಯಾಸ ನಾಯಕರ ವೈಶಿಷ್ಟ್ಯ

ಮ್ಯಾಸ ನಾಯಕರನ್ನು ಇತರೇ ಬುಡಕಟ್ಟುಗಳಿಗೆ ಹೋಲಿಸಿದರೆ, ಭಿನ್ನವಾಗಿರುವ ಕೆಲ ಅಂಶಗಳು ಸ್ಪಷ್ಟವಾಗಿ ಗೋಚರವಾಗುತ್ತವೆ. ಅನೇಕ ಬುಡಕಟ್ಟುಗಳು ಇಂದೂ ದಟ್ಟವಾದ ಅರಣ್ಯ ಪ್ರದೇಶಗಳಲ್ಲಿ ವಾಸವಾಗಿದ್ದು, ತಮ್ಮ ಮೂಲ ಆಚರಣೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಂದಿರುತ್ತವೆ. ಆದರೆ ಮ್ಯಾಸ ನಾಯಕರು ಮೂಲದಲ್ಲಿ ಕಾಡಿನಲ್ಲಿ ವಾಸವಾಗಿದ್ದು, ಇಂದು ಕೆಲವರು ಬಯಲು ಪ್ರದೇಶಕ್ಕೆ ಬಂದಿದ್ದಾರೆ. ಅವರಲ್ಲಿ ಮೂಲದ ಆಚರಣೆಗಳು ಸಡಿಲವಾಗಿರುವುದು ಗೋಚರವಾಗುತ್ತದೆ. ಧರ್ಮ ದೇವರಿಗೆ ಸಂಬಂಧಿಸಿ ದಂತೆಯೂ ಅನೇಕ ಹೊಸ ಹೊಸ ಆಚರಣೆಗಳನ್ನು ಸ್ವೀಕರಿಸಿದ್ದಾರೆ. ಅಹೋಬಲ ನರಸಿಂಹಸ್ವಾಮಿ ಕೆಲವರಿಗೆ ಮತ ದೇವತೆ, ಆದರೆ ಇವರಲ್ಲಿ ಶಿವನನ್ನು ಪೂಜಿಸುವಲ್ಲಿಯೂ ಅಪಾರ ನಂಬಿಕೆ. ನಾಯಕನ ಹಟ್ಟಿಯ ಸಂತ ತಿಪ್ಪೇರುದ್ರಸ್ವಾಮಿ ಉತ್ಸವದಲ್ಲಿ ವಿಶೇಷವಾಗಿ ಪಾಲ್ಗೊಂಡು ಅಲ್ಲಿರುವ ಹೊರ ಮಠದಲ್ಲಿ ವಿಶೇಷ ಪೂಜೆ ಹರಕೆ ಸಲ್ಲಿಸುತ್ತಾರೆ.

ಭಾಷೆಗೆ ಸಂಬಂಧಿಸಿದಂತೆ ಹೇಳುವುದಾದರೆ ಮನೆ ಮಾತಾಗಿರುವ ತೆಲುಗು ಭಾಷೆಯನ್ನು ಹೆಚ್ಚಾಗಿ ವ್ಯವಹಾರಕ್ಕಾಗಿ ಬಳಸುತ್ತಿದ್ದರೂ ಮದುವೆ ಮುಂತಾದ ಸಾಂಸ್ಕೃತಿಕ ಸಂದರ್ಭದಲ್ಲಿ ಕನ್ನಡದಲ್ಲಿ ಹಾಡುಗಳನ್ನು ಹಾಡುತ್ತಾರೆ. ತೆಲುಗು ಮತ್ತು ಕನ್ನಡ ಮಿಶ್ರಣವಾಗಿಯೂ ಕೆಲ ಸಂದರ್ಭದಲ್ಲಿ ಮಾತನಾಡುತ್ತಾರೆ. ಇತ್ತ ಶಿಷ್ಟ ತೆಲುಗು ಭಾಷೆಯಲ್ಲದ್ದರಿಂದ ಕನ್ನಡವೂ ಅಲ್ಲವಾಗಿರುವುದರಿಂದ ಇದನ್ನು ಮ್ಯಾಸ ಭಾಷೆ ಎಂದು ಕರೆಯಬಹುದೆನಿಸುತ್ತದೆ. ಈ ಜನಾಂಗದ ಬೆಡಗು ಗೋತ್ರಗಳು ಅವುಗಳ ಉಪಪಂಗಡ ಹಾಗೂ ಗೋತ್ರಕ್ಕೆ ಸೀಮಿತವಾದ ದೇವರು, ಕೌಟುಂಬಿಕ ವೈವಾಹಿಕ ಸಂಬಂಧಗಳು ಮತ್ತು ವಿಧಿ ನಿಷೇಧಗಳು ತುಂಬಾ ವಿಶಿಷ್ಟವಾಗಿವೆ. ಪುರಾಣ ಪುರುಷರು, ಸಾಂಸ್ಕೃತಿಕ ರರು, ಸಂತರು, ರಾಜರು, ಪಾಳೆಯಗಾರರು ಹೀಗೆ ಅನೇಕ ಆದರ್ಶ ವ್ಯಕ್ತಿಗಳನ್ನು ಈ ಜನಾಂಗ ಒಳಗೊಂಡಿರುತ್ತದೆ. ತಮ್ಮದೇ ನ್ಯಾಯ ಪದ್ಧತಿಯ ಕಟ್ಟೇಮನಿ ಮತ್ತು ಮ್ಯಾಸ ಮಂಡಲಗಳುಂಟು ಇತರೆ ಜನಾಂಗದ ಬಹುತೇಕ ಹಬ್ಬಗಳನ್ನು ಆಚರಿಸುವುದರೊಂದಿಗೆ ಕೆಲ ಹಬ್ಬಗಳನ್ನು ತುಂಬಾ ವಿಶಿಷ್ಟವಾಗಿ ಆಚರಿಸುತ್ತಾರೆ. ಧಾರ್ಮಿಕ ಆಚರಣೆಗಳು, ಸಂಸ್ಕಾರದ ವಿಧಿ ವಿಧಾನಗಳಲ್ಲಿನ ಆಚರಣೆಗಳಲ್ಲಿ ಕೆಲ ಅಚ್ಚರಿ ಹುಟ್ಟಿಸುವಂತಹವುಗಳಾಗಿವೆ. ನಾಗರೀಕತೆಯ ಪ್ರಭಾವಕ್ಕೆ ಸಿಲುಕಿಯೂ ಕೆಲ ಮೂಲ ಆಚರಣೆಗಳನ್ನು ಇನ್ನೂ ಪಾಲಿಸುತ್ತಾ ಇರುವುದನ್ನು ಕಾಣುತ್ತೇವೆ.

ಮೂಲದಲ್ಲಿ ಒಂದೇ ಬುಡಕಟ್ಟಿಗೆ ಸೇರಿದ ಜನಾಂಗವಾಗಿದ್ದರೂ ಕ್ರಮೇಣ ಅನೇಕ ಉಪ ಪಂಗಡಗಳಾಗಿ ವಿಭಜನೆಗೊಂಡಿರುತ್ತವೆ. ಎಲ್ಲಾ ಉಪ ಪಂಗಡಗಳಿಗಿಂತ ಪ್ರಸಕ್ತ ಮ್ಯಾಸ ನಾಯಕ ಉಪಪಂಗಡವು ತನ್ನ ಮೂಲ ವಿಶಿಷ್ಟತೆಗಳನ್ನು ಇದುವರೆವಿಗೂ ಉಳಿಸಿ ಕೊಂಡು ಬಂದಿರುವುದನ್ನು ಗುರುತಿಸುತ್ತೇವೆ.

ಭಾಷೆ – ವಾಸ – ಆಚರಣೆ – ವೃತ್ತಿ ಈ ಎಲ್ಲವುಗಳಲ್ಲಿ ಮೂಲ ಅವಿಭಾಜ್ಯ ಬುಡಕಟ್ಟಿನ ಬಹಳಷ್ಟು ಲಕ್ಷಣಗಳು ಕಾಣಿಸುತ್ತವೆ. ಆರಂಭದಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ವಾಸವಾಗಿರುವಂತೆ ಇಂದೂ ಕರ್ನಾಟಕದ ಚಿತ್ರದುರ್ಗ, ಬಳ್ಳಾರಿ, ರಾಯಚೂರು ಜಿಲ್ಲೆಯ ಪ್ರದೇಶಗಳಲ್ಲಿನ ಗುಡ್ಡಗಾಡುಗಳಲ್ಲಿ ವಾಸವಾಗಿರುವುದನ್ನು ಕಾಣುತ್ತೇವೆ. ಅದೂ ವಿಶೇಷವಾಗಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ, ಜಗಳೂರು ತಾಲ್ಲೂಕಿನ ಗುಡ್ಡಗಾಡು ಹಾಗೂ ಅರಣ್ಯ ಪ್ರದೇಶಗಳಲ್ಲಿ ಮ್ಯಾಸ ನಾಯಕರು ದಟ್ಟವಾಗಿ ವಾಸವಾಗಿದ್ದಾರೆ. ಉಪ ಪಂಗಡಗಳಾದ ತಳವಾರ, ವಾಲ್ಮೀಕಿ, ಭೋಯ, ರಾಮೋಶಿ ಮುಂತಾದ ಪಂಗಡಗಳು ಕನ್ನಡ ಹಾಗೂ ಇತರೇ ಭಾಷೆಯನ್ನಾಡುತ್ತಿದ್ದರೂ ಮ್ಯಾಸ ನಾಯಕರು ತಮ್ಮ ಮೂಲದ ತೆಲುಗು ದೃಷ್ಟಿಯಿಂದಲೂ ಭಿನ್ನವಾಗಿದೆ. ಅಲ್ಲದೆ, ಧಾರ್ಮಿಕ ಆಚರಣೆ, ಕೌಟುಂಬಿಕ ವ್ಯವಹಾರ, ಸಂಸ್ಕಾರ, ವಿಧಿ ನಿಷೇಧ, ನ್ಯಾಯ ಪದ್ಧತಿ, ನಂಬಿಕೆಗಳು ಹೀಗೆ ಪ್ರತಿ ಯೊಂದರಲ್ಲೂ ತಮ್ಮ ಉಪ ಪಂಗಡಗಳಿಗಿಂತ ವಿಭಿನ್ನವಾದ ಬದುಕಿನ ರೀತಿಯನ್ನು ತಮ್ಮದೇ ವೈಶಿಷ್ಟ್ಯತೆಯಿಂದ ಕೂಡಿರುವುದನ್ನು ಗುರುತಿಸಬಹುದು.

ಕೃಪೆ : ಮ್ಯಾಸಬೇಡರ ಸಂಸ್ಕೃತಿ

* * *