ನಾಗರೀಕ ಜಗತ್ತು ಉದಯವಾದಂದಿನಿಂದಲೇ ಸಂಸ್ಕೃತಿಯ ಉದಯವೂ ಆಗಲಿಲ್ಲ. ಆದು ಅದಿಮಾನವನು ತನ್ನ ಅಲೆಮಾರಿತನವನ್ನು ಬಿಟ್ಟು ಬುಡಕಟ್ಟಿನ ನಿಯಮ ಕ್ಕೊಳಗಾಗಿ ಒಂದು ಕಡೆ ಸ್ವಲ್ಪ ಕಾಲವಾದರೂ ನಿಲ್ಲತೊಡಗಿದ ಮೇಲೆಯೇ ಸಂಸ್ಕೃತಿಯ ಉದಯದ ಕುರುಹು ಕಾಣತೊಡಗಿತು. ಇದರಿಂದ ಸಾಂಸ್ಕೃತಿಕ ಮಾನವಶಾಸ್ತ್ರಜ್ಞರಿಗೆ ಕೇವಲ ನಾಗರೀಕ ಜಗತ್ತಿನ ಸಂಸ್ಕೃತಿಯನ್ನು ಅಧ್ಯಯನ ಮಾಡುವುದರ ಜೊತೆಗೆ ಆದಿಮಾನವನ ಬದುಕಿನ ಕುರುಹುಗಳನ್ನೂ ಹೇಳುವ ಬುಡಕಟ್ಟುಗಳ ಸಂಪ್ರದಾಯ, ನಡವಳಿಕೆ, ಆಚಾರ ವಿಚಾರ ಇವುಗಳನ್ನೂ ಅಧ್ಯಯನ ಮಾಡಬೇಕಾಗಿ ಬಂತು. ಭಾರತದ ಮಟ್ಟಿಗಂತೂ ಇದು ಅತ್ಯಗತ್ಯವಾಯಿತು. ಯಾಕೆಂದರೆ ಭಾರತದಲ್ಲಿ ಬುಡಕಟ್ಟುಗಳದೇ ಒಂದು ವಿಶಿಷ್ಟ ಸಂಸ್ಕೃತಿ ಯಾದರೆ ಉಳಿದದ್ದು ಗ್ರಾಮ, ನಗರ ಪಟ್ಟಣಗಳ ಸಂಸ್ಕೃತಿ. ಈ ಗ್ರಾಮ, ನಗರ ಪಟ್ಟಣಗಳ ಸಂಸ್ಕೃತಿ ಕಾಲಕಾಲಕ್ಕೆ ಅನೇಕಾನೇಕ ದಾರ್ಮಿಕ ಪ್ರಭಾವಗಳಿಗೆ ಒಳಗಾಗಿ ತಮ್ಮ ಸಂಸ್ಕೃತಿಯ ಸ್ವರೂಪ ರಚನೆಯಲ್ಲಿ ಬದಲಾವಣೆಗೊಳ್ಳುತ್ತಾ ಹೋದವು. ಆದರೆ ಬುಡಕಟ್ಟುಗಳು ಗ್ರಾಮ, ನಗರ, ಖೇಡ, ಖರ್ವಡಗಳಿಂದ ದೂರ ಉಳಿದು ತಮ್ಮ ಯಾವುದೇ ಬಗೆಯ ನಡವಳಿಕೆಯನ್ನು ಬಿಟ್ಟುಕೊಡದೆ, ಬೇರೆಯವರ ಯಾವುದೇ ಬಗೆಯ ನಡವಳಿಕೆಯನ್ನು ಸ್ವೀಕರಿಸದೆ ತಮ್ಮದೇ ವಿಶಿಷ್ಟತೆಯನ್ನು ಉಳಿಸಿಕೊಳ್ಳುತ್ತ ಬಂದವು. ಒಂದು ವೇಳೆ ಬುಡಕಟ್ಟಿನಿಂದ ಒಬ್ಬ ವ್ಯಕ್ತಿ ಹೊರಬಂದು ಊರು ಕೇರಿ ಸೇರಿದರೆ ಅಂಥವನನ್ನು ಬುಡಕಟ್ಟು ಬಹಿಷ್ಕರಿಸಿ, ಅವನ ಜೊತೆಯಲ್ಲಿ ಯಾವುದೇ ಸಂಬಂಧವನ್ನು ಹೊಂದದೇ ತಿರಸ್ಕರಿಸುವಷ್ಟರ ಮಟ್ಟಿಗೆ ಅದರ ಸಂಸ್ಕೃತಿ ಶುದ್ಧವಾಗಿ ಉಳಿಯಿತು. ಇಷ್ಟಾದರೂ ಅರಣ್ಯಗಳಲ್ಲಿ ಗುಂಪುಗುಂಪಾಗಿ ಆದಿಮಾನವ ಸಮೂಹ ಕಾಲ ಕಳೆಯುವಲ್ಲಿ ಅವರ ನಡುವೆಯೇ ತುಸು ಬುದ್ದಿಬಲ ಹೆಚ್ಚಿದ್ದವರು ಹೊಸದೊಂದು ಜೀವನಕ್ರಮ ಕಂಡುಕೊಳ್ಳುವ ಬಯಕೆ ಇರುವವರು, ಬುಡಕಟ್ಟಿನಿಂದ ಹೊರಬರುತ್ತ ಅವರೆ ಒಂದು ಹೊಸ ಗುಂಪು ಆಗತೊಡಗಿ ಗ್ರಾಮ, ನಗರ ಸಂಸ್ಕೃತಿ ಬೆಳೆಯತೊಡಗಿತು ಎನಿಸುತ್ತದೆ.

ಈಗಲೂ ಸಹ ಕರ್ನಾಟಕದಲ್ಲಿ ಚಿತ್ರದುರ್ಗ ಪ್ರದೇಶದೊಳಗೆ ವಾಸಿಸುತ್ತಿರುವ ಬೇಡ ನಾಯಕ ಮತ್ತು ಕಾಡುಗೊಲ್ಲರಲ್ಲಿಯೇ ಇನ್ನೊಂದು ಗುಂಪಾಗಿರಬಹುದಾದ ಊರು ನಾಯಕರು ಊರುಗೊಲ್ಲರು ಎಂಬ ಪ್ರತ್ಯೇಕ ಗುಂಪು ಇದೆ. ಈ ಊರುನಾಯಕರು, ಊರುಗೊಲ್ಲರು ಒಂದು ಕಾಲಕ್ಕೆ ಕಾಡುಬೇಡರು, ಕಾಡುಗೊಲ್ಲರ ಗುಂಪಿನಲ್ಲಿಯೇ ಇದ್ದು ತದನಂತರ ಊರು ಸೇರಿದವರಿರಬೇಕು. ಆದರೆ ಈಗ ಮಾತ್ರ ಎರಡು ಗುಂಪುಗಳಲ್ಲಿ ಯಾವುದೇ ಸಂಬಂಧವಿರುವುದಿಲ್ಲ. ಹೀಗೆಯೇ ಪ್ರಾಚೀನ ಕಾಲಕ್ಕೆ ಬುಡಕಟ್ಟುಗಳನ್ನೂ ಅಡವಿಗಳನ್ನೂ ತೊರೆದು ಬಂದವರು ಊರೊಳಗೆ ಮತ್ತು ನಗರಗಳಲ್ಲಿ ಜಾತಿ ಮತ ವರ್ಗದವರಾಗಿ ಪರಿವರ್ತಿತರಾದರು. ಆ ಜಾತಿ ಮತಗಳಲ್ಲಿಯೂ ಅವರವರ ಬುದ್ದಿಶಕ್ತಿ ಮತ್ತು ಶ್ರೀಮಂತಿಕೆಗೆ ತಕ್ಕಂತೆ ಶ್ರೇಣಿಗಳು ರೂಪುಗೊಳ್ಳತೊಡಗಿದವು. ಆದರೆ ಇದ್ಯಾವುದರ ಗೋಜಿಗೂ ಹೋಗದೆ, ಜಾತಿ, ವರ್ಗ, ಐಶ್ವರ‍್ಯ ಜೊತೆಗೆ ಭೂಮಿಯೂ ಮುಖ್ಯವಾಗದೆ ಬುಡಕಟ್ಟು ಜೀವನವೇ ಮುಖ್ಯವೆಂದು ಅದರ ನಿಯಮಗಳನ್ನು ಮೀರಬಾರದೆಂದು ತಿಳಿದು, ಅರಣ್ಯವನ್ನೇ ಆಸ್ತಿ ಎಂದು ಭಾವಿಸಿ ಇಂದಿಗೂ ಅಲ್ಲಿಯೆ ಬದುಕುತ್ತಿರುವ ಅನೇಕಾನೇಕ ಗುಂಪುಗಳನ್ನು ನಾವು ಇವೊತ್ತಿಗೂ ಕಾಣಬಹುದಾಗಿದೆ.

ಬಹಳ ತಡವಾಗಿಯಾದರೂ, ಕಳೆದ ಶತಮಾನದ ಆರಂಭದಿಂದಲೇ ಬುಡಕಟ್ಟುಗಳ ಅಧ್ಯಯನ ಆರಂಭವಾಯಿತು. ಹಾಗೆ ನೋಡಿದರೆ ಅರಣ್ಯ ಜನಾಂಗಗಳ ಅಧ್ಯಯನ ತುಂಬಾ ಪ್ರಯಾಸದ ಕೆಲಸ. ಅವರು ಪಟ್ಟಣ, ಗ್ರಾಮ ಜೀವನದಿಂದಲೇ ದೂರವಾಗಿರುವಾಗ ವಿದ್ವಾಂಸರು, ಮಾನವಶಾಸ್ತ್ರಜ್ಞರು ಆ ಗುಂಪನ್ನು ಹೊಕ್ಕು ಅವರ ಆಚಾರ ವಿಚಾರಗಳನ್ನು ಕುರಿತು ವಿಷಯ ಸಂಗ್ರಹಿಸುವುದು, ಅಧ್ಯಯನ ಮಾಡುವುದು ಅತ್ಯಂತ ಕಠಿಣವಾದುದು. ತಮ್ಮ ಯಾವ ಸಂಗತಿಗಳನ್ನೂ ಆ ಜನ ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಹೊರಗಿನದೆಲ್ಲವನ್ನೂ ಅವರು ಸಂಶಯದಿಂದಲೇ ಕಾಣುತ್ತಾರೆ. ಇಂಥ ವಾತಾವರದಲ್ಲಿಯೂ ಸಹ ಭಾರತದ ಬುಡಕಟ್ಟುಗಳ ಬಗ್ಗೆ ಭಾರತೀಯ ವಿದ್ವಾಂಸರು ಅಧ್ಯಯನ ಮಾಡಿದ್ದಕ್ಕಿಂತ ಪಾಶ್ಚಾತ್ಯರು ಅಧ್ಯಯನ ಮಾಡಿದ್ದೇ ಹೆಚ್ಚು. ವೆರಿಯರ್ ಎಲ್ವಿನ್ನರೇ ಆದಿಯಾಗಿ ಜಿ.ಹೆಚ್. ಹಟ್ಟನ್, ಜಿ.ಪಿ. ಮಿಲ್ಸ್, ಸ್ಮಿಥ್, ಹೈಮರ್, ಡಾರ್ಫ್ ಇಂಥವರೆಲ್ಲ ಉತ್ತರ ಭಾರತದ ಬುಡಕಟ್ಟುಗಳಾದ ಅಂಗಾಮಿ, ನಾಗಾ, ಸೆಮಾ ಇವರನ್ನು ಕುರಿತು ಅಧ್ಯಯನ ನಡೆಸಿ ಗ್ರಂಥಗಳನ್ನು ಹೊರತಂದ ಮೇಲೆ ಅದರ ಮಹತ್ವ ಅರಿವಾಯಿತು. ಬುಡಕಟ್ಟಿನವರ ಭಾಷೆ, ಅವರ ಜೀವನಕ್ರಮ, ದೇವರ ಕಲ್ಪನೆ, ನ್ಯಾಯಪದ್ಧತಿ, ಜೀವನಾವರ್ತನದ ವಿವಿಧ ಸಂದರ್ಭದಲ್ಲಿ ಅವರು ಕೈಗೊಳ್ಳುವ ಕೆಲವು ಆಚರಣೆಗಳು, ಹುಟ್ಟು ಸಾವಿನ ಸಂದರ್ಭದ ವಿಧಿಕ್ರಿಯೆಗಳು, ಪ್ರಕೃತಿಯೊಂದಿಗೆ ತಾದಾತ್ಮ್ಯ ಇದನ್ನೆಲ್ಲ ಅಭ್ಯಾಸ ಮಾಡಿದ ನಂತರ, ಅರೆಬೆತ್ತಲೆಯಾಗಿ ಗುಡ್ಡಗಾಡು ಅರಣ್ಯಗಳಲ್ಲಿ ಅಲೆದಾಡಿಕೊಂಡು ಜೀವಿಸುವ ಆದಿವಾಸಿಗಳ ಜೀವನದಲ್ಲಿಯೂ ನಾಗರೀಕವಾದ ಉತ್ಕೃಷ್ಟ ಮೌಲ್ಯಗಳು ಪ್ರಚಲಿತದಲ್ಲಿವೆ ಎಂಬುದು ಗೊತ್ತಾಯಿತು. ತಂದೆ ಮಕ್ಕಳ ಸಂಬಂಧದಲ್ಲಿ, ಪತಿ ಪತ್ನಿಯರ ವಿಚಾರದಲ್ಲಿ ಇರಬೇಕಾದ ಪ್ರೇಮ, ಪ್ರಕೃತಿಯ ಮೇಲಿನ ವಿಶ್ವಾಸ, ಅದನ್ನು ಪ್ರೀತಿಸುವುದು, ಬುಡಕಟ್ಟಿನ ಹಿರಿಯರಲ್ಲಿ ಗೌರವ, ಸಾಹಸ ಪ್ರವೃತ್ತಿ, ದೈವದ ಮೇಲಿನ ಭಕ್ತಿಯಿಂದಾಗಿ ತಪ್ಪು ಮಾಡಲು ಹೆದರುವುದು,  ಇವೆಲ್ಲ ಇಂದಿಗೂ ಬುಡಕಟ್ಟಿನ ಪ್ರಮುಖ ಲಕ್ಷಣಗಳಾಗಿವೆ.

ಸಾಮಾನ್ಯವಾಗಿ ಬುಡಕಟ್ಟಿನವರೆಲ್ಲರೂ ತಮ್ಮ ಕುಲದೇವತೆಗಳನ್ನಾಗಿ ಸೂರ‍್ಯಚಂದ್ರರನ್ನು ಸ್ವೀಕರಿಸಿದ್ದಾರೆ. ಇದೇ ಅಭಿಪ್ರಾಯವನ್ನು ನಾವು ಇತಿಹಾಸದ ವಿವರಗಳಲ್ಲೂ ಅನೇಕ ಕಥೆ ಕಾವ್ಯಗಳಲ್ಲಿಯೂ ಕಾಣಬಹುದು. ಎಂದರೆ ಎಲ್ಲ ಕಥೆಗಳ ರಾಜವಂಶಗಳ ಮೂಲವೂ ಸೂರ‍್ಯವಂಶವಾಗಿರುತ್ತದೆ ಅಥವಾ ಚಂದ್ರವಂಶವಾಗಿರುತ್ತದೆ. ಇನ್ನು ಬುಡಕಟ್ಟು ಒಂದೇ ಕಡೆ ಗುಂಪುಕಟ್ಟಿಕೊಂಡು ವಾಸಿಸುವುದಾದರೂ ಕುಲಭೇದಗಳನ್ನು ಮಾಡಿಕೊಂಡು, ಅದರಲ್ಲಿ ಅನೇಕ ಕುಲಗಳನ್ನು ಪರಸ್ಪರ ಅಣ್ಣತಮ್ಮಂದಿರು ಎಂದು ಕರೆದು, ಅವರ ನಡುವೆ ವಿವಾಹ ಸಂಬಂಧವನ್ನೂ ನಿಷೇಧಿಸಿದೆ. ಅರಿತೋ ಅರಿಯದೆಯೋ ಅಂತೂ ಒಂದೇ ರಕ್ತ ಸಂಬಂಧದಲ್ಲಿ ವಿವಾಹ ಸಂಬಂಧ ಏರ್ಪಡಲಾರದು. ಅದರಿಂದ ವಂಶಾಭಿವೃದ್ದಿಗೆ ಹಾನಿ ಎಂಬ ವೈಜ್ಞಾನಿಕ ಸತ್ಯವನ್ನು ಬುಡಕಟ್ಟಿನವರು ಕಂಡುಕೊಂಡಂತೆ ಕಾಣಿಸುತ್ತದೆ. ನ್ಯಾಯ ತೀರ್ಮಾನ ವಿಚಾರಗಳಲ್ಲೂ ಅಷ್ಟೆ. ಯಾವುದೇ ನ್ಯಾಯಗಳು ದೇವತೆಯ ಮುಂದೆ, ಹಿರಿಯರ ಸಮ್ಮುಖದಲ್ಲಿ ನಡೆಯುತ್ತಿತ್ತು. ತಪ್ಪಿತಸ್ಥ ತಾನು ನಿಂತ ಕಟ್ಟೆಮನೆಗೆ ಹೆದರದಿದ್ದರೂ, ಅಲ್ಲಿ ಸೇರಿದ ಹಿರಿಯರಿಗೆ ಅಂಜಬೇಕಾಗುತ್ತಿತ್ತು. ಹಿರಿಯರಿಗೆ ಅಂಜದಿದ್ದರೂ ಅಲ್ಲಿ ನೆಲೆಸಿರುವ ದೇವತೆಗೆ ಅಳುಕಬೇಕಿತ್ತು. ಹೀಗೆ ಪ್ರತಿಯೊಂದು ಹಂತದಲ್ಲಿಯೂ ತಮ್ಮದೇ ಆದ ನೀತಿ ನಿಯಮಗಳನ್ನು ಸೃಷ್ಟಿಸಿಕೊಂಡು ಪ್ರಾಮಾಣಿಕತೆಯಿಂದ ಬದುಕುತ್ತಿದ್ದ ಬುಡಕಟ್ಟುಗಳು ಅನೇಕ ಕಾಲದವರೆಗೆ ಗ್ರಾಮ, ಪಟ್ಟಣಗಳ ನಾಗರೀಕತೆಗೆ ಅನಾಗರೀಕರಂತೆಯೇ ಕಂಡರು.

ಈ ಎರಡು ಶತಮಾನಗಳಿಂದೀಚೆಗೆ ಸಾಮಾಜಿಕ ಮಾನವಶಾಸ್ತ್ರ ವಿಷಯಗಳ ಉಗಮದ ನಂತರ ನಾಗರೀಕ ಜಗತ್ತಿನ ಮನುಷ್ಯನ ಜೀವನ ಕ್ರಮವನ್ನು ಅರ್ಥಮಾಡಿಕೊಳ್ಳಬೇಕು ಎಂದಾಯಿತು. ಹಾಗೇ ಅವರ ಜೀವನವನ್ನರಿಯಬೇಕಾದರೆ ಅವರು ವಾಸಿಸುವ ನೆಲೆಗಳಿಗೆ ಹೋಗಬೇಕು ಎಂಬುದು ಮಾನವಶಾಸ್ತ್ರಜ್ಞರ ಮನಸ್ಸಿಗೆ ಬಂತು. ಹೀಗೆ ಬಾರತದ ಆದಿವಾಸಿಗಳ ಅಧ್ಯಯನ ಕ್ರಮ ಆರಂಭವಾಯಿತು. ಆಮೇಲಾಮೇಲೆ ಅದರ ಉಪಯೋಗದ ಅರಿವೂ ಆಯಿತು. ಮಾನವಶಾಸ್ತ್ರಜ್ಞರು ವಿಶ್ವದ ನಾನಾ ಭಾಗದ ಬುಡಕಟ್ಟುಗಳ ಅರಿವೂ ಆಯಿತು. ಮಾನವಶಾಸ್ತ್ರಜ್ಞರು ವಿಶ್ವದ ನಾನಾ ಭಾಗದ ಬುಡಕಟ್ಟುಗಳ ಸ್ಥಿತಿಗತಿಗಳನ್ನು ಅವರ ಸಂಸ್ಕೃತಿಯ ಪ್ರತಿಯೊಂದು ಹಂತವನ್ನು ಸಂಶೋಧಿಸುತ್ತಾ ಹೋದಂತೆ, ಭಾರತದಲ್ಲಿಯೇ ಅಲ್ಲದೆ ಪ್ರಪಂಚದ ಎಲ್ಲಾ ಬುಡಕಟ್ಟುಗಳ ನಡುವೆ ಅನೇಕಾನೇಕ ಸಾಮ್ಯತೆಗಳೂ ಕಂಡು ಬಂದವು.

ಉದಾಹರಣೆಗೆ ಭಾರತದೊಳಗಿನ ಬುಡಕಟ್ಟುಗಳ ನಡುವಣ ಒಂದು ವಿಚಾರವನ್ನೇ ಗಮನಿಸುವುದಾದರೆ ಭಾರತದ ತುತ್ತ ತುದಿಯಲ್ಲಿರಬಹುದಾದ ಒಂದು ಬಗೆಯ ಪ್ರಾಣಿಯನ್ನು ಕೊಲ್ಲುವುದಿಲ್ಲ, ತಿನ್ನುವುದಿಲ್ಲ ಎಂದು ಹೇಳಿ ಅದನ್ನು ಕುಲದೇವತೆಯನ್ನಾಗಿ  ಭಾವಿಸಿಕೊಂಡು ಬಂದಿದ್ದಾರೆ, ಮಧ್ಯಪ್ರದೇಶದ ಅರಣ್ಯದ ಒಂದು ಬುಡಕಟ್ಟಿನಲ್ಲಿಯೂ ಸಹ ಇದೇ ಬಗೆಯ ನಿಷೇಧ ಇರುವುದು ಕಂಡುಬರುತ್ತದೆ. ಈ ಸಂಗತಿಯನ್ನು ಇನ್ನಷ್ಟು ವಿವರವಾಗಿ ಮುಂದೆ ಪ್ರಸ್ತಾಪಿಸಿಲಾಗಿದೆ. ಹೀಗಾಗಿ ಬುಡಕಟ್ಟುಗಳ ಅಧ್ಯಯನ ಕುತೂಹಲಕಾರವಾಗಿಯೂ, ತೀರ ಅಗತ್ಯವಾಗಿಯೂ ಕಂಡುಬಂದಿತು. ಹಾಗೆ ನೋಡಿಕೊಂಡರೆ ದಕ್ಷಿಣ ಭಾರತಕ್ಕಿಂತ ಉತ್ತರ ಭಾರತದಲ್ಲಿಯೇ ಬುಡಕಟ್ಟುಗಳ ಅಧ್ಯಯನ ವ್ಯಾಪಕವಾಗಿ ನಡೆಯಿತು. ಈ ಹಿಂದೆಯೇ ಹೇಳಿದಂತೆ ಜೆ.ಹೆಚ್. ಮಿಲ್, ಸ್ಮಿಥ್, ಹೈಮನ್ ಡಾಫ್, ಧೀರೇಂದ್ರನಾಥ್ ಮಜುಂದಾರ್ ಇವರೆಲ್ಲ ಉತ್ತರಭಾರತದ ಹಲಕೆಲವು ಆದಿವಾಸಿ ಜನಾಂಗಗಳನ್ನು ಕುರಿತು ಅಧ್ಯಯನ ಮಾಡಿದರೆ, ವೆರಿಯರ್ ಎಲ್ವಿನ್ ಅವರೊಬ್ಬರೇ ಇಂಗ್ಲೆಂಡಿನಿಂದ ಭಾರತಕ್ಕೆ ಕ್ರೈಸ್ತ ಧರ್ಮ ಪ್ರಚಾರಕ್ಕಾಗಿ ಬಂದು ಅದನ್ನು ಬಿಟ್ಟು ಅನೇಕ ಬುಡಕಟ್ಟುಗಳ ಅಧ್ಯಯನದಲ್ಲಿ ತೊಡಗಿದರು. ಅನೇಕಾನೇಕ ವರ್ಷಗಳ ಕಾಲ ಆದಿವಾಸಿಗಳ ನಡುವೆ ಬದುಕಿ ಭಾರತೀಯ ಸಂಸ್ಕೃತಿಯ ಮೂಲವಾದ ಬುಡಕಟ್ಟು ಜನಾಂಗವನ್ನು ಕೂಲಂಕುಷವಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಮಾಡಿದರು. ಮಾನವಶಾಸ್ತ್ರವನ್ನು ತಮ್ಮ ಅಧ್ಯಯನ ವಿಷಯವನ್ನಾಗಿಸಿಕೊಂಡರು ಎಂಬ ಸಂಗತಿಯನ್ನು ಅವರ ಜೀವನ ಚರಿತ್ರೆಯ ಪುಟಗಳಿಂದಲೇ ನೋಡುವುದಾದರೆ “ಮಾನವನನ್ನು ಇಡೀ ಮಾನವನನ್ನು ಕುರಿತ ವೈಜ್ಞಾನಿಕ ಮಾನವಶಾಸ್ತ್ರ ಬಹಳ ದೊಡ್ಡ ವಿಷಯ. ಅದರ ಅಭ್ಯಾಸಕ್ಕೆ ನಾನಾ ತರಹ ಜನಗಳು ಬೇಕು. ಇದರ ಜತೆಗೆ ಮನುಷ್ಯ ಸ್ವಭಾವವನ್ನು ಅರಿತವರೂ ಬೇಕು. ಆದರೆ ಇಂಥವರ ಬಗ್ಗೆ ಮಾನವಶಾಸ್ತ್ರಜ್ಞರು ತಾತ್ಸಾರ ಭಾವನೆಯನ್ನು ತೋರಿಸುತ್ತಿರುವುದು ದುರದೃಷ್ಟವೇ ಸರಿ. ಮಾನವರ ಅಭ್ಯಾಸ ಮಾಡುವಾಗ ಅವರನ್ನು ಕೇವಲ ಪ್ರಯೋಗ ಶಾಲೆಯ ವಸ್ತುಗಳನ್ನಾಗಿ ಪರಿಗಣಿಸುವ ಬದಲು ಮನುಷ್ಯರೆಂದು ಭಾವಿಸಿ, ಅವರ ಕಷ್ಟಸುಖಗಳಲ್ಲಿ ಭಾಗಿಯಾಗುವುದು ತಪ್ಪಲ್ಲ. ಮಾನವಶಾಸ್ತ್ರದ ತಿರುಳು ಹಾಗೂ ಕಲೆ ಪ್ರೇಮ. ಅದಿಲ್ಲದೆ ಯಾವುದೂ ರುಚಿಯಿಲ್ಲ. ಯಾವುದೂ ಸತ್ಯವಲ್ಲ. ನನಗೆ ಮಾನವಶಾಸ್ತ್ರ ಎಂದರೆ ಹೊರಗಡೆಯ ಕೆಲಸ ಅಷ್ಟೇ ಅಲ್ಲ. ನನ್ನ ಬಾಳೆ ಅದಾಗಿತ್ತು”. (ವೆರಿಯರ್ ಎಲ್ವಿನ್ ಗಿರಿಜನ ಪ್ರಪಂಚ, ಅನು. ಹೆಚ್.ಎಲ್. ನಾಗೇಗೌಡ, ೧೯೭೯, ಪು. ೧೨೬)

ವೆರಿಯರ್ ಎಲ್ವಿನ್ ನಿಡುಗಾಲ ಕೆಲಸ ಮಾಡಿದ ಕಾರಣವಾಗಿ ಉತ್ತರ ಭಾರತದಲ್ಲಿ ಬುಡಕಟ್ಟುಗಳ ಅಧ್ಯಯನ ವ್ಯಾಪಕವಾಗಿ ಆಯಿತು. ದಕ್ಷಿಣ ಭಾರತದಲ್ಲಿ ನೀಲಗಿರಿಯ ತೋಡರ ಬಗ್ಗೆ ಮಾತ್ರ ಹೆಚ್ಚು ಅಧ್ಯಯನವಾಯಿತೇ ಹೊರತು ಉಳಿದಂತೆ ಆ ಸಂಬಂದದ ಕ್ಷೇತ್ರಕಾರ್ಯ ನಡೆಯಲೇ ಇಲ್ಲ. ಬುಡಕಟ್ಟುಗಳ ಅಧ್ಯಯನಕ್ಕೆ ಅಷ್ಟು ಹೊತ್ತಿಗಾಗಲೇ ಪಾಶ್ಚಾತ್ಯರು ನಾಂದಿ ಹಾಡಿದ್ದರೂ ಭಾರತೀಯರು ಆ ಕಡೆಗೆ ಗಮನವನ್ನೇ ಹರಿಸಲಿಲ್ಲ. ಎಲ್ಲೆಲ್ಲಿ ಕ್ರೈಸ್ತ ಧರ್ಮ ಪ್ರಚಾರಕ್ಕಾಗಿ ಪಾಶ್ಚಾತ್ಯ ವಿದ್ವಾಂಸರು ಬಂದು ನೆಲೆಸಿದರೋ ಅಲ್ಲೆಲ್ಲ ಜನಾಂಗಿಕ ಅಧ್ಯಯನ ನಡೆಯಿತು. ಮಿಕ್ಕ ಬುಡಕಟ್ಟಿನವರು ಯಾರ ಗಮನಕ್ಕೂ ಬಾರದೆ ಹಾಗೇ ಉಳಿದರು.

ದಕ್ಷಿಣ ಭಾರತದಲ್ಲಿ ಎಲ್ಲ ಬುಡಕಟ್ಟುಗಳ ಬಗೆಗೆ ವಿವರಣಾತ್ಮಕ ಅಧ್ಯಯನ ನಡೆಯದಿದ್ದರೂ ಸ್ಥೂಲಚಿತ್ರ ಕೊಡುವಂಥ ಲೇಖನಮಾಲೆಗಳನ್ನು ಪ್ರಕಟಿಸುವ ಕೆಲಸ ೧೯೦೦ರ ಸುಮಾರಿಗೆ ನಡೆಯಿತು. ಅದು ಎಡ್ಗರ್ ಥರ್‌ಸ್ಟನ್ ಮತ್ತು ಕೆ. ರಂಗಾಚಾರಿ ಅವರ “Caste and Tribes of Southern India” ಎಂಬ ಕೃತಿ. ಈ ಕೃತಿ ಮಾಲಿಕೆಯು ಏಳು ಸಂಪುಟಗಳಲ್ಲಿದ್ದು ದಕ್ಷಿಣ ಭಾರತದ ಅನೇಕಾನೇಕ ಜಾತಿ ಮತ್ತು ಬುಡಕಟ್ಟುಗಳ ಬಗೆಗೆ ಒಂದು ಸೂಕ್ಷ್ಮ ಚಿತ್ರ ಕೊಡುವಂಥ ಲೇಖನಗಳಿಂದ ಕೂಡಿದೆ. ಎಡ್ಗರ್ ಥರ್‌ಸ್ಟನ್ ಅವರದು ದಕ್ಷಿಣ ಭಾರತದ ಬುಡಕಟ್ಟುಗಳ ಪರಿಚಯ ಗ್ರಂಥವಾದರೆ, ಕರ್ನಾಟಕದಲ್ಲಿ ಇಂಥದ್ದೇ ಒಂದು ಕಾರ‍್ಯ ಎಲ್.ಕೆ. ಅನಂತಕೃಷ್ಣಅಯ್ಯರ್ ಮತ್ತು ಹೆಚ್.ವಿ. ನಂಜುಂಡಯ್ಯ ಅವರಿಂದ ಆಯಿತು. ಕರ್ನಾಟಕದಲ್ಲಿ ಯಾವುದೇ ವಿದ್ವಾಂಸರು ಜಾತಿ ಅಥವಾ ಬುಡಕಟ್ಟುಗಳ ಬಗೆಗೆ ಅಧ್ಯಯನವನ್ನು ಕೈಗೊಳ್ಳಬೇಕಾದರೆ ಅಯ್ಯರ್ ಮತ್ತು ನಂಜುಂಡಯ್ಯನವರ “The Mysore Castes and Tribes” ಕೃತಿ ಮೂಲಕವಾಗಿಯೇ ಪ್ರವೇಶ ಪಡೆಯಬೇಕು. ಈ ಇಬ್ಬರು ಮಹನೀಯರೂ ಆಗಿನ ಮೈಸೂರು ಪ್ರಾಂತ್ಯದಲ್ಲೆಲ್ಲ ಪ್ರವಾಸ ಮಾಡಿ ಎಲ್ಲಾ ಜಾತಿ ಬುಡಕಟ್ಟುಗಳ ಮುಖಂಡರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿ ಸಾಧ್ಯವಾದಷ್ಟು ಮಟ್ಟಿಗೆ ಲೇಖನದ ಮಿತಿಯಲ್ಲಿಯೇ ಎಲ್ಲ ವಿವರಗಳನ್ನೂ ಪ್ರಕಟಿಸಿದ್ದಾರೆ. ೧೯೨೫ರ ಸುಮಾರಿಗೆ ಅಯ್ಯರ್ ಮತ್ತು ನಂಜುಂಡಯ್ಯನವರು ಕೈಗೊಂಡ ಈ ಕೆಲಸ ಅಗಾಧವಾದುದು.

ಭಾರತದ ನೆಲವನ್ನು ಬಹುಪಾಲು ಅರಣ್ಯ ಆಕ್ರಮಿಸಿಕೊಂಡಿದೆ. ಇಲ್ಲಿ ಪಟ್ಟಣದ ಸಂಸ್ಕೃತಿಯೊಂದು ಹೇಗೆ ಬೆಳೆದುಕೊಂಡು ಬಂದಿತೋ ಹಾಗೆಯೇ ಅರಣ್ಯ ಸಂಸ್ಕೃತಿಯೂ ಬೆಳೆದುಕೊಂಡು ಬಂದಿದೆ. ಬುಡಕಟ್ಟುಗಳ ವಾಸವೆಲ್ಲ ಬಹುಪಾಲು ಅರಣ್ಯದಲ್ಲಿಯೇ ಅಥವಾ ಅರಣ್ಯ ಅಂಚುಗಳ ಸರಹದ್ದಿನಲ್ಲಿ. ಈಗಲೂ ಚಿತ್ರದುರ್ಗ ಕಡೆ ಕಾಡುಗೊಲ್ಲರು ಮತ್ತು ಬೇಡನಾಯಕರು ವಾಸಿಸುವ ಬಹುಮಟ್ಟಿನ ಸ್ಥಳಗಳೆಲ್ಲ ಅರಣ್ಯದ ಅಂಚಿನಲ್ಲಿಯೆ ಇವೆ. ಕೆಲವು ಬುಡಕಟ್ಟುಗಳಂತೂ ಅರಣ್ಯದ ನಟ್ಟನಡುವಣ ಭಾಗವನ್ನು ಬಿಟ್ಟುಬರುವುದಕ್ಕೆ ಹಿಂಜರಿಯುತ್ತವೆ. ಆದರೆ ಈ ಬುಡಕಟ್ಟುಗಳ ದುರಾದೃಷ್ಟವೋ ಎಂಬಂತೆ ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಸಮೂಹ ನಾಶವಾಗುತ್ತಾ ಬರುತ್ತಿದೆ. ಅರಣ್ಯ ನಾಶವೆಂದರೆ ಬುಡಕಟ್ಟು ಬದುಕಿನ ಒಂದು ಭಾಗದ ಆಸ್ತಿ ಹೋದಂತೆಯೇ. ಈ ಅರಣ್ಯ ನಾಶದ ಕಾರಣವಾಗಿಯೇ ಬುಡಕಟ್ಟುಗಳ ಬದುಕಿನ ಕ್ರಮವೂ ಬದಲಾಗುತ್ತಿದೆ.

ಇತಿಹಾಸದ ಕಾಲಕ್ಕೂ ಬುಡಕಟ್ಟು ಜನಾಂಗಗಳು ಅಷ್ಟು ತೊಂದರೆಗೆ ಒಳಗಾಗಿರಲಿಕ್ಕಿಲ್ಲ. ಯಾಕೆಂದರೆ ಈ ಜನ ದಟ್ಟ ಅರಣ್ಯಗಳ ನಡುವೆ ವಾಸಿಸುತ್ತಿದ್ದುದರಿಂದ ಜತೆಗೆ ಪಟ್ಟಣದ ಸಂಸ್ಕೃತಿಯನ್ನು ಇವರು ಬಯಸುವವರೇ ಅಲ್ಲವಾಗಿದ್ದರಿಂದ ಪಟ್ಟಣದವರಿಗೂ ಇವರ ಗೊಡವೆ ಬೇಕಿಲ್ಲವಾದ್ದರಿಂದ ಸಂಪೂರ್ಣವಾಗಿ ಆದಿವಾಸಿಗಳ ಬದುಕು ಅರಣ್ಯದಲ್ಲಿ ಶಾಂತತೆ ಯಿಂದಲೇ ಕೂಡಿತ್ತು. ಬಹುಶಃ ಗ್ರಾಮ, ನಗರ, ಪಟ್ಟಣಗಳನ್ನಾಳುತ್ತಿದ್ದ ರಾಜ ಮಹಾರಾಜರೂ ಕೂಡ ಇವರನ್ನು ತಮ್ಮ ಪ್ರಜೆಗಳು ಎಂದು ಭಾವಿಸಿರಲಿಕ್ಕಿಲ್ಲವೆಂದು ಕಾಣಿಸುತ್ತದೆ. ಯಾಕೆಂದರೆ ಗ್ರಾಮ-ನಗರಗಳಲ್ಲಿ ಬದುಕಿದ್ದ ಕೆಳ ಜಾತಿಯವರನ್ನೇ ಉನ್ನತ ವರ್ಗದವರು, ರಾಜರು, ರಾಜ ಪರಿವಾರದವರು ಒಂದು ಜನಸಮೂಹ ಎಂದು ಗಂಭೀರವಾಗಿ ಪರಿಗಣಿಸದೇ ಹೋದ ಸಂದರ್ಭದಲ್ಲಿ ಇನ್ನೂ ದೂರ ದೂರದ ಅಡವಿಗಳಲ್ಲಿ ಹಟ್ಟಿ ಕಟ್ಟಿಕೊಂಡು ಬೇಟೆ, ಪಶುಪಾಲನೆಯ ಮೇಲೆ ಬದುಕಿದ್ದವರನ್ನು ಒಂದು ಜನಾಂಗದ ಅಸ್ತಿತ್ವ ಎಂದೇ ಭಾವಿಸಿದಂತೆ ಕಾಣುವುದಿಲ್ಲ. ಈಗಲೂ ಮಾನವಶಾಸ್ತ್ರಜ್ಞರು, ಜಾನಪದಾಸಕ್ತ ವಿದ್ಯಾರ್ಥಿಗಳು, ಸಮಾಜಶಾಸ್ತ್ರಜ್ಞರು ಇಂತವರನ್ನು ಬಿಟ್ಟರೆ ಮಿಕ್ಕಂಥವರು ಬುಡಕಟ್ಟುಗಳ ಬಗೆಗೆ ಅಂಥದೇ ಭಾವನೆ ಇರುವುದನ್ನು ನಾವು ನೋಡಬಹುದು.

ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿಯೇ ಅರಣ್ಯನಾಶದ ಕಾರ್ಯ ಆರಂಭವಾಯಿತು. ಒಂದು ಕಡೆ ಗ್ರಾಮಸ್ಥರು ಸಾಗುವಳಿ ಭೂಮಿಗಾಗಿ ಅರಣ್ಯವನ್ನು ಕಡಿದು ಒತ್ತರಿಸುತ್ತ ಬಂದರೆ ಬ್ರಿಟೀಷರು ಭಾರತದಾದ್ಯಂತ ಪ್ರಮುಖ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸಿಕೊಳ್ಳಲು ರೈಲು, ರಸ್ತೆ ಹಾಕುವ ಸಲುವಾಗಿ ಅರಣ್ಯಗಳನ್ನು ಕಡಿದರು. ಜತೆಗೆ ಭಾರತದಲ್ಲಿ ಕೈಗಾರಿಕೆಗಳೂ ಹೆಚ್ಚುತ್ತಾ ಹೋಗಲು, ಕಟ್ಟಡಗಳ ನಿರ್ಮಾಣ, ಕಾಗದದ ಕಾರ್ಖಾನೆ, ಕಛೇರಿಗಳಿಗೆ ಬೇಕಾದ ಪರಿಕರಗಳ ತಯಾರಿಕೆಗಾಗಿ ಹೇರಳ ಪ್ರಮಾಣದ ಮರಮುಟ್ಟು ಬೇಕಾಯಿತು. ಅರಣ್ಯ ನಾಶವಾಗುತ್ತ ಬಂದಂತೆಲ್ಲ ಬುಡಕಟ್ಟು ಜನಾಂಗಗಳ ನೆರಳಿನಲ್ಲಿ ಮುಚ್ಚಿಟ್ಟ ಜೀವನವನ್ನು ಬಿಸಿಲಿಗೆ ತೆರೆದಿಟ್ಟಂತಾಯಿತು. ಈ ಕಾರಣದಿಂದ ಹೊರಗಿನ ನಾಗರೀಕತೆ, ವಿಜ್ಞಾನದ ಪ್ರಭಾವವೂ ಸ್ವಲ್ಪ ಸ್ವಲ್ಪವಾಗಿ ಅರಣ್ಯ ಜನಾಂಗಗಳ ಜೀವನವನ್ನು ಪ್ರವೇಶಿಸಿತು. ನಾಗರೀಕತೆಯ ಆಗಮನದಿಂದ, ಅರಣ್ಯ ನಾಶದಿಂದ ಅಡವಿವಾಸಿಗಳು ಒಂದು ಬಗೆಯಲ್ಲಿ ಅನಾಥರಂತೆಯೇ ಆದರು. ಇಂದಿಗೂ ಸೂಕ್ಷ್ಮವಾಗಿ ಗಮನಿಸಿ ನೋಡಿದರೆ ಚಿತ್ರದುರ್ಗ ಕಡೆಯ ಕಾಡುಗೊಲ್ಲರು ಮತ್ತು ಮ್ಯಾಸಬೇಡ ಬುಡಕಟ್ಟಿನ ಅನೇಕ ವ್ಯಕ್ತಿಗಳಿಗೆ ತಾವು ಯಾವ ವೃತ್ತಿಯನ್ನು ಕೈಗೊಳ್ಳಬೇಕೆಂಬುದೇ ತಿಳಿಯದವರಾಗಿದ್ದಾರೆ. ಯಾಕೆಂದರೆ ಬೇಡನಾಯಕರು ಮತ್ತು ಕಾಡುಗೊಲ್ಲರು ಕಾಲಾನುಕಾಲದಲ್ಲಿ ಅರಣ್ಯದಲ್ಲಿಯೆ ವಾಸಿಸಿ, ಪಶುಪಾಲನೆ, ಕುರಿ ಸಾಕಣಿಕೆ ಮಾಡಿಕೊಂಡು ಬಂದವರು. ಬಹುಮಟ್ಟಿಗೆ ಅವರು ವ್ಯವಸಾಯ ನಂಬಿ ಬದುಕಿದವರಲ್ಲ. ಬೇಡ ನಾಯಕರಂತೂ ಒಮ್ಮೊಮ್ಮೆ ಪಶುಪಾಲನೆಯನ್ನೂ ಬಿಟ್ಟು ಸೈನಿಕ ವೃತ್ತಿಯಲ್ಲಿದ್ದವರು. ಸೈನಿಕವೃತ್ತಿ ಎಂದರೆ ರಾಜ ಮಹಾರಾಜರುಗಳಿಗೆ ಯುದ್ಧ ಪರಿಸ್ಥಿತಿ ಬಿದ್ದಾಗ ಹೋಗಿ ಯುದ್ಧಗಳಲ್ಲಿ ಭಾಗವಹಿಸುವುದು. ಮಿಕ್ಕಂತೆ ತಂತಮ್ಮ ಹಟ್ಟಿಗಳಲ್ಲೆ ವಾಸಿಸುವುದು. ಕೆಲವು ರಾಜರುಗಳು ಈ ಅರಣ್ಯವಾಸಿ ಬೇಡರನ್ನು ಬಹುಮಾನ ಗಳ ಮೂಲಕ ಮೆಚ್ಚಿಸಿ ಅವರನ್ನು ಮೀಸಲು ಪಡೆಯವರನ್ನಾಗಿ ಇಟ್ಟುಕೊಂಡಿದ್ದರು. ಬೇಡರು ಅರಣ್ಯದಲ್ಲಿ ವಾಸಿಸುತ್ತಾ ಬೇಟೆಯಾಡಿ, ಪಶುಪಾಲನೆ ಮಾಡಿ, ದೃಢಕಾಯ ರಾಗಿರುತ್ತಿದ್ದರು. ಬಿಲ್ವಿದ್ಯೆಯಲ್ಲಿ, ಅಂಗಸಾಧನ ವಿದ್ಯೆಯಲ್ಲಿ ಪಳಗಿದವರಾಗಿ ಜತೆಗೆ ಮುಗ್ಧ ರಾಗಿ ರಾಜನ ಆಜ್ಞೆಯನ್ನು ಶಿರಸಾವಹಿಸುತ್ತಿದ್ದರು. ಹೀಗೆ ಬದುಕುತ್ತಿದ್ದ ಬೇಡ ನಾಯಕರಿಗೆ, ಕಾಡುಗೊಲ್ಲರಿಗೆ ಇಂದು ಯಾವ ವೃತ್ತಿಯನ್ನು ಹಿಡಿಯಬೇಕೆಂಬುದೇ ತೋರುತ್ತಿಲ್ಲವಾಗಿದೆ. ಯಾಕೆಂದರೆ ಹಿಂದಿನಿಂದ ಬಂದ ಪಶುಪಾಲನೆ ಈಗ ಲಾಭದಾಯಕವಾಗಿ ತೋರುತ್ತಿಲ್ಲ. ಜೊತೆಗೆ ಅರಣ್ಯಗಳೂ ಉಳಿದಿಲ್ಲ. ಸೈನಿಕ ವೃತ್ತಿಯೂ ಸಾಧ್ಯವಿಲ್ಲ. ಬೇಟೆಯಂತೂ ಈಗ ವೃತ್ತಿಯಾಗಿ ಉಳಿದಿಲ್ಲ. ಹೀಗಾಗಿ ಭಾರತದ ಅನೇಕ ಬುಡಕಟ್ಟುಗಳವರು ಅತಂತ್ರರಾಗಿ, ದ್ವಂದ್ವ ಸ್ಥಿತಿಯಲ್ಲಿರುವಂತೆ ಚಿತ್ರದುರ್ಗದ ಮ್ಯಾಸಬೇಡ ನಾಯಕರೂ ಕಾಡುಗೊಲ್ಲರೂ ಒಂದು ಬಗೆಯ ಸಂಕೀರ್ಣ ಸ್ಥಿತಿಯಲ್ಲಿದ್ದಾರೆ. ಅತ್ತ ಹೊಸ ನಾಗರೀಕತೆಗೂ ಹೊಂದಿಕೊಳ್ಳದೆ ಇತ್ತ ಪ್ರಾಚೀನ ಸಂಪ್ರದಾಯಗಳನ್ನೂ ಬಿಡದೆ,ಹತ್ತಾರು ಅನಾನುಕೂಲಗಳ ನಡುವೆ ಆಯಾ ಹಟ್ಟಿಗಳಲ್ಲಿಯೆ ಪ್ರಯಾಸದಿಂದ ಕಾಲ ತಳ್ಳುತ್ತಿರುವ ಬೇಡನಾಯಕರ ಮತ್ತು ಕಾಡುಗೊಲ್ಲರ ಸಮೂಹವನ್ನು ನಾವು ಇಂದಿಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಕಾಣಬಹುದಾಗಿದೆ. ಅಂತೆಯೇ ಮತ್ತೆ ಕೆಲವರು ಈ ಬುಡಕಟ್ಟಿಗೆ ಸೇರಿದ ನಾಯಕರು, ಗೊಲ್ಲರು ಹತ್ತಿಪ್ಪತ್ತು ವರ್ಷಗಳ ಹಿಂದೆಯೇ ಅಡವಿ ಸರಹದ್ದಿನ ಹಟ್ಟಿಗಳನ್ನು ಬಿಟ್ಟು ಊರು ಕೇರಿ ಪಟ್ಟಣಗಳನ್ನು ಸೇರಿ ವಿದ್ಯೆ ಮತ್ತು ಶ್ರೀಮಂತಿಕೆಯಲ್ಲಿ ಮುಂದುವರೆದಿರುವವರೂ ಸಹ ಕಾಣಸಿಗುತ್ತಾರೆ. ಹಾಗೆ ಚಿತ್ರದುರ್ಗದ ಮೂರು ತಾಲ್ಲೂಕುಗಳಾದ ಚಳ್ಳಕೆರೆ, ಜಗಳೂರು, ಮೊಳಕಾಲ್ಮೂರು ಪ್ರದೇಶಗಳಲ್ಲಿ ವಾಸಿಸುತ್ತಿರುವ ಬೇಡನಾಯಕರ ಹಿಂದಿನ ಸಂಪ್ರದಾಯ, ನಂಬಿಕೆ, ನಡವಳಿಕೆಗಳು, ಆಧುನಿಕ ಜೀವನದ ಸ್ಥಿತಿಗತಿಗಳನ್ನು ಕುರಿತು ಕೊಂಚ ವಿವರಣಾತ್ಮಕವಾಗಿ ಈ ಕೃತಿಯಲ್ಲಿ ಮುಂದೆ ಪ್ರಸ್ತಾಪಿಸಲಾಗಿದೆ. ವಿವರಣಾತ್ಮಕ ಎಂದು ಇಲ್ಲಿ ಏಕೆ ಹೇಳಲಾಗಿದೆಯೆಂದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಮ್ಯಾಸಬೇಡ ನಾಯಕರ ಸಂಖ್ಯೆ ಅಪಾರವಾಗಿದೆ. ಸುಮಾರು ಎರಡುವರೆ ಲಕ್ಷ ಸಂಖ್ಯೆಯಲ್ಲಿ ನಾಯಕರು ಆ ಜಿಲ್ಲೆಯಾದ್ಯಂತ ಈಗ ಇದ್ದಾರೆ. ಅಷ್ಟಲ್ಲದೆ ಕರ್ನಾಟಕದಾದ್ಯಂತ ಕೂಡ ಬೇರೆ ಬೇರೆ ಹೆಸರುಗಳಲ್ಲಿ ಇವರು ಚೆದುರಿ ಹೋಗಿದ್ದಾರೆ. ಆದರೆ ಅದನ್ನೆಲ್ಲ ವ್ಯಾಪಕವಾಗಿ ಗಮನಿಸಿ ಕ್ಷೇತ್ರಕಾರ್ಯಮಾಡಿ ಅಭ್ಯಾಸ ಮಾಡುವುದು ಒಬ್ಬ ವ್ಯಕ್ತಿಯಿಂದ ಆಗದ, ಜೊತೆಗೆ ಅನೇಕ ಜನರು ಸೇರಿ ಮಾಡಬೇಕಾದ ಕೆಲಸ. ಇದರಿಂದ ಚಿದ್ರದುರ್ಗ ಜಿಲ್ಲೆಯ ಮೂರು ತಾಲ್ಲೂಕುಗಳಾದ ಚಳ್ಳಕೆರೆ, ಜಗಳೂರು, ಮೊಳಕಾಲ್ಮೂರು-ಈ ಪ್ರದೇಶದ ನಾಯಕರ ಜೀವನಕ್ರಮವನ್ನು ಮಾತ್ರ ಇಲ್ಲಿ ಪ್ರಸ್ತಾಪಕ್ಕೆ ಆರಿಸಿಕೊಳ್ಳಲಾಗಿದೆ. ಈ ವೂರು ಪ್ರದೇಶಗಳಲ್ಲಿಯೇ ಬೇರೆಲ್ಲ ತಾಲ್ಲೂಕುಗಳಿಗಿಂತ ಬೇಡ ನಾಯಕರ ಸಂಖ್ಯೆ ಹೆಚ್ಚಿಗೆ ಇದೆ. ಜೊತೆಗೆ ಬೇರೆಲ್ಲ ಭಾಗಗಳಿಗಿಂತ ಈ ಕಡೆಯಲ್ಲಿಯೇ ನಾಯಕರು ತಮ್ಮೆಲ್ಲ ಹಿಂದಿನಿಂದ ಬಂದ ಸಂಪ್ರದಾಯ, ನಡವಳಿಕೆಗಳು, ಜಾತ್ರೆ ಉತ್ಸವ ಇವುಗಳನ್ನು ಅದರದರ ರೂಪದಲ್ಲಿಯೇ ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಇವರ ಹಾಗೆಯೇ ಚಿತ್ರದುರ್ಗ ಜಿಲ್ಲೆಯಲ್ಲಿ ಊರ ಹೊರಗೆ ಹಟ್ಟಿಕಟ್ಟಿಕೊಂಡು ವಾಸಮಾಡುತ್ತಿ ರುವವರು ಕಾಡುಗೊಲ್ಲರು.

ಎಡ್ಗರ್ ಥರ್ಸ್‌ಟನ್ ಮತ್ತು ಕೆ. ರಂಗಾಚಾರಿಯವರು ತಮ್ಮ Castes and Tribes of Southern India ಎಂಬ ಕೃತಿ ಮಾಲಿಕೆಯ ಒಂದನೇ ಸಂಪುಟದಲ್ಲಿ ಬೇಡರು ಮತ್ತು ಬೋವಿಗಳನ್ನು ಒಂದೇ ಜಾತಿಯವರು ಎಂದು ಕರೆದಿದ್ದಾರೆ. ಆಂಧ್ರದ ಕಡೆ ಬೇಡರನ್ನು ಬೋವಿ ಎಂದು ಕರೆಯುವುದಾಗಿ ಕಪಟರಾಳ ಕೃಷ್ಣರಾವ್ ಹೇಳುತ್ತಾರೆ. ಆದರೆ ಚಿತ್ರದುರ್ಗದ ಬೇಡನಾಯಕರನ್ನು ತಳವಾರನಾಯಕರು, ಮ್ಯಾಸರು ಎಂದಷ್ಟೇ ಕರೆಯುವುರೇ ಹೊರತು ಬೋವಿಗಳು ಎಂದು ಕರೆಯುವುದಿಲ್ಲ. ಆದರೆ ಬೇಡನಾಯಕರ ಬೆಡಗುಗಳನ್ನು ಹೇಳುವಾಗ ತಮ್ಮಲ್ಲಿ ಬೋವಿಗಳದೂ ಒಂದು ಬೆಡಗು ಉಂಟು ಎಂದು ಹೇಳುವರು.

ಥರ‍್ಸ್‌ಟನ್ ಅವರು ತಮ್ಮ ಎರಡನೇ ಸಂಪುಟದ ೧೮೪ನೇ ಪುಟದಲ್ಲಿ “…….Both telugu speaking Boyers and the Canarese speaking Bedars are split into the two main division of uru or village men and Myasa or grass land men, and each of these division is again subdivided into a number of exogamous bedags” ಎಂಬುದನ್ನು ಹೇಳಿದ್ದಾರೆ. ಅಲ್ಲದೆ ೧೯೫ನೇ ಪುಟದಲ್ಲಿ “……according to the Mysore Census report 1901 the chief deity of the Beders in Tirupati Venkataramanaswamy worshiped locally under the name of Tirumala Devaru, but offsrings and sacrifices are also made to Mariyamma. Their guru is known is Tirumala Tatacharya who is also a head of the Srivaishna Brahimins…. The Dewan of Sandur informs me that in recent times some Mysore Bedas have changed their faith and are now showing special reverence to Mahadeva. They were apparently convertedby Jangamas but not to the fullest extent. The guru is the head of the Ujjani Lingayat Mutt which is in the Kudligi Taluk, bellary District…..”.

ಥರ್ಸ್‌ಟನ್ ಅವರು ಬೇಡನಾಯಕರನ್ನು ಮೂಲತಃ ವೈಷ್ಣವರೆಂದು, ಅವರ ದೇವರು ತಿರುಪತಿ ವೆಂಕಟರಮಣನೆಂದು ಭಾವಿಸಿರುವಂತಿದೆ. ಆದರೆ ಬೇಡರು ಮೂಲತಃ ಶೈವರೇ ಆಗಿದ್ದರು. ಅವರ ಬುಡಕಟ್ಟಿನ ಮೂಲ ದಂತೆ ಕಥೆಗಳು, ಅವರು ಇಟ್ಟುಕೊಳ್ಳುವ ಹೆಸರುಗಳು ಶೈವ ಮೂಲದವು. ಆದರೆ ಆ ನಂತರದಲ್ಲಿ ಅವರ ಮೇಲೆ ವೈಷ್ಣವ ಧರ್ಮದ ಪ್ರಭಾವವೂ ಆಗಿದೆ. ಕೆಳವರ್ಗದ ಮೇಲೆ ಯಾವುದೇ ಧರ್ಮಗಳು ಬಹಳ ಸುಲಭವಾಗಿ ಪ್ರಬಾವ ಬೀರಬಲ್ಲವು. ಧಾರ್ಮಿಕ ಭಾವನೆಗಳು ಮೇಲ್ವರ್ಗದವರ ಮನಸ್ಸನ್ನು ಪ್ರವೇಶಿಸುವುದಕ್ಕಿಂತ ಕೆಳವರ್ಗದವರ ಮನಸ್ಸನ್ನು ಬಹುಬೇಗ ಪ್ರವೇಶಿಸುತ್ತವೆ. ಉದಾಹರಣೆಗೆ ಚಿತ್ರದುರ್ಗದ ಇನ್ನೊಂದು ಬುಡಕಟ್ಟು ಗುಂಪಾದ ಕಾಡುಗೊಲ್ಲರು ತಮ್ಮನ್ನು ಯದುವಂಶದವರು ಎಂದು ಕರೆದುಕೊಳ್ಳುತ್ತಾರೆ. ಕೃಷ್ಣ ತಮ್ಮ ಆರಾಧ್ಯದೈವ ಎನ್ನುವರು. ಆದರೆ ಅವರ ಬುಡಕಟ್ಟು ಸಂಬಂಧದ ಕಥೆ ಜುಂಜಪ್ಪನ ಪುರಾಣ ಸಂಪೂರ್ಣವಾಗಿ ಶೈವ ಮೂಲವಾದದ್ದು. ಆ ಕಥಾನಕದ ಘಟನೆಗಳೆಲ್ಲವೂ ರಭದ್ರನ ಯಜ್ಞನಾಶದ ಕಥೆಯಂತೆ ಇದ್ದು ಜುಂಜಪ್ಪನನ್ನು ರಭದ್ರನ ಅವತಾರ ಎಂತಲೂ ಹೇಳುವರು. ಅಲ್ಲದೆ ಗೊಲ್ಲರ ಆರಾಧಾನೆಗಳು ಮತ್ತು ಜಾತ್ರೆಗಳೆಲ್ಲ ಶೈವ ಸಂಪ್ರದಾಯದಲ್ಲೇ ನಡೆಯುತ್ತವೆ. ಅವರು ಪೂಜಿಸುವ ಇನ್ನಿತರ ದೇವತೆಗಳ ಹೆಸರುಗಳು ಕೂಡ ಕೇತಲಿಂಗ, ಪಾತೇಲಿಂಗ, ಚಿತ್ರಲಿಂಗ, ಕಾಟಮಲಿಂಗ ಹೀಗೆ ಬರುತ್ತವೆ. ಹಾಗೇ ನೋಡಿದರೆ ಪ್ರಾಚೀನ ಕಾಲಕ್ಕೆ ದಕ್ಷಿಣ ಭಾರತದ ಬಹುಪಾಲು ಬುಡಕಟ್ಟುಗಳೆಲ್ಲ ಶೈವ ಸಂಪ್ರದಾಯವನ್ನೇ ಆರಂಭಕ್ಕೆ ಅನುಸರಿಸಿಕೊಂಡು ಬಂದಿವೆ. ತದನಂತರ ಉತ್ತರದಿಂದ ಬಂದ ಆರ‍್ಯ ಸಂಪ್ರದಾಯ, ಧರ್ಮಶ್ರದ್ಧೆ, ರಾಮಾಯಣ, ಮಹಾಭಾರತ ಸಂಸ್ಕೃತಿಗೆ ಒಳಪಟ್ಟು ಆ ಕಥೆಯ, ಧರ್ಮದ ಅಂಶಗಳನ್ನೆಲ್ಲಾ ತಮ್ಮ ಬುಡಕಟ್ಟಿಗೆ ಹೊಂದಿಸಿಕೊಂಡದ್ದಲ್ಲದೆ ಆಮೇಲಾಮೇಲೆ ವೈಷ್ಣವ ದೇವತೆಗಳನ್ನೂ ಆರಾಧಿಸತೊಡಗಿದರು. ಅದರಿಂದ ದನಕರು, ಕುರಿಪಾಲನೆ ಮಾಡುತ್ತಿದ್ದ ಶೈವ ಸಂಪ್ರದಾಯದ ಕಾಡುಗೊಲ್ಲರು ಅದೇ ಪಶುಪಾಲಕನಾಗಿದ್ದ ಕೃಷ್ಣನನ್ನು ಆರಾಧ್ಯ ದೈವವನ್ನಾಗಿ ಮಾಡಿ ಕೊಂಡರು. ಅಂತೆಯೇ ಶೈವಾರಾಧಕರಾಗಿದ್ದ ಬೇಡನಾಯಕರೂ ಆಮೇಲೆ ವಿಷ್ಣು ಆರಾಧಕರೂ ಆದರು. ಈ ಕಾರಣಗಳಿಂದಾಗಿಯೇ ಇಂದಿಗೂ ಚಿತ್ರದುರ್ಗದ ಬೆಟ್ಟದ ಮೇಲೆ ವಾಸಿಸಿದ ಪಾಳೆಯಗಾರ ನಾಯಕರು ಒಂದು ಕಡೆ ಸಂಪಿಗೆ ಸಿದ್ದೇಶ್ವರನ ಭಕ್ತರೂ ಆಗಿ, ಮತ್ತೊಂದು ಕಡೆ ಶಕ್ತಿ ದೇವತೆಯ ಆರಾಧಕರೂ ಆಗಿ ಪಾಳೆಯಗಾರಿಕೆ ನಡೆಸಿದ್ದನ್ನು ಕಾಣಬಹುದು. ಇದೇ ಪ್ರವೃತ್ತಿ, ಗುಣ ಅಡವಿಗಳಲ್ಲಿ ವಾಸಿಸುತ್ತಿದ ಮ್ಯಾಸಬೇಡರಲ್ಲೂ ಕಂಡುಬರುತ್ತದೆ. ಕುಲದೇವತೆ ಶ್ರೀ ಶೈಲ ಮಲ್ಲಿಕಾರ್ಜುನ, ವೈಷ್ಣವ ದೇವತೆಯಾಗಿ ಅವರು ಕಂಪಳರಂಗ (ವೆಂಕಟೇಶ್ವರ)ನನ್ನು ಪೂಜಿಸುವರು. ಹಾಗೆಯೇ ಮಾರಮ್ಮನ ಜಾತ್ರೆಯನ್ನೂ ಏರ್ಪಡಿ ಸುವರು. ಹೀಗಾಗಿ ಬೇಡನಾಯಕರನ್ನು ವೈಷ್ಣವರೆನ್ನುವುದಕ್ಕಿಂತ ಮೂಲತಃ ಶೈವಭಕ್ತರೆಂದು ಗುರುತಿಸುವುದೇ ಸೂಕ್ತ.

ಎಡ್ಗರ್‌ಥರ್ಸ್‌ಟನ್ ಮತ್ತು ಕೆ. ರಂಗಾಚಾರಿಯವರನ್ನು ಬಿಟ್ಟರೆ, ಬೇಡ ನಾಯಕರನ್ನು ಕುರಿತು ಸಾಕಷ್ಟು ಮಾಹಿತಿಗಳನ್ನು ಒಳಗೊಂಡ ಲೇಖನ ಪ್ರಕಟವಾಗಿರುವುದು ಹೆಚ್.ವಿ. ನಂಜುಂಡಯ್ಯ ಮತ್ತು ಎಲ್.ಕೆ. ಅನಂತಕೃಷ್ಣ ಅಯ್ಯರ್ ಅವರು ೧೯೨೮ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಾಂಗದ ಮೂಲಕ ಪ್ರಕಟಿಸಿರುವ “Mysore castes and Tribes” ಎಂಬ ಕೃತಿಯಲ್ಲಿ ಪು. ೧೯೭ ರಿಂದ ೨೩೦ರವರೆಗೆ ಇರುವ ಮೂವತ್ಮೂರು ಪುಟಗಳ ಈ ಬರವಣಿಗೆ ಇಂಗ್ಲಿಷಿನಲ್ಲಿದೆ. ಲೇಖಕರು ನಾಯಕ ಜನಾಂಗವನ್ನು “The bedas are an aboriginal Tribe of the Telugu and Canarese districts…” ಎಂದು ಹೇಳುವುದರೊಡನೆ, ಇವರು ಆರ್ಯೇತರರೂ ದಕ್ಷಿಣದ ದ್ರಾವಿಡ ಜನಾಂಗದ ಪೂರ್ವಜರೂ ಆಗಿರುವಂತೆ ತೋರುತ್ತದೆ ಎಂದಿದ್ದಾರೆ. ‘Beda’ ಎಂಬುದು “a curruption to the Sanskrit word Vyadha” ಎಂದು ಬೇಡಪದ ನಿಷ್ಪತ್ತಿಯೊಡನೆ “Most of the Mysore paleyagars or petty chiefs are bedas” ಎಂದು ಹೇಳಿದ್ದಾರೆ. ಅಲ್ಲದೆ ಬೇಡ ಜನಾಂಗದ ಹಲ ಕೆಲವು ಸಂಪ್ರದಾಯವನ್ನೂ ಜೀವನಕ್ರಮಗಳನ್ನೂ ಸೂಕ್ಷ್ಮವಾಗಿ ವಿವರಿಸಿದ್ದಾರೆ. ಸಂಪೂರ್ಣ ಲೇಖನದಲ್ಲಿ ಬೇಡರ ಮೂಲ ವಿವರಗಳು, ವಾಸದ ಕ್ರಮ, ಜನಸಂಖ್ಯೆ, ಅವರ ಆಂತರಿಕ ಸಂಬಂಧಗಳು, ಕುಲಪದ್ಧತಿ, ವಿವಾಹ ಕ್ರಮ, ಆಚರಣೆ ಪದ್ಧತಿ ಇವನ್ನೆಲ್ಲ ವಿವರವಾಗಿಲ್ಲದಿದ್ದರೂ ತಕ್ಕಷ್ಟು ಮಟ್ಟಿಗೆ ಒದಗಿಸಿದ್ದಾರೆ. ಬೇಡ ನಾಯಕರನ್ನು ಕುರಿತಂತೆ ಒಂದು ಸ್ಥೂಲ ಚಿತ್ರಣವನ್ನು ಈ ಲೇಖನ ಕೊಡುತ್ತದೆ.

ಎಡ್ಗರ್‌ಥರ್ಸ್‌ಟನ್ ಮತ್ತು ಹೆಚ್.ವಿ. ನಂಜುಂಡಯ್ಯ ಅವರ ಮೇಲಿನ ಎರಡು ಇಂಗ್ಲಿಷ್ ಲೇಖನಗಳನ್ನು ಬಿಟ್ಟರೆ ಇನ್ನು ಮುಂದೆ ಪ್ರಸ್ತಾಪಿಸುವ ಕೃತಿಗಳೆಲ್ಲ ಕನ್ನಡದಲ್ಲಿ ಇರುವಂಥವೇ ಆಗಿವೆ. ದಿವಗಂತ ಎಂ. ರಂಗಪ್ಪನವರು ‘ನುಂಕೆಮಲೆ ಪರಮಾರ್ಥ’ ಎಂಬ ಕೃತಿಯೊಂದನ್ನು ೧೯೩೮ರಲ್ಲಿ ಬರೆದು ೧೯೭೧ರಲ್ಲಿ ಪ್ರಕಟಿಸಿದ್ದಾರೆ. ಈ ಪುಸ್ತಕವು ಮೊಳಕಾಲ್ಮೂರು ಟೌನಿನ ಪಶ್ಚಿಮ ಭಾಗ ಎರಡು ಬೆಟ್ಟಗಳ ನಡುವಣ ಕಣಿವೆಯಲ್ಲಿರುವ ನುಂಕೇಶ್ವರ ಜಾತ್ರೆ, ಉತ್ಸವಾದಿಗಳನ್ನು ಒಮ್ಮೊಮ್ಮೆ ವಿವರಣಾತ್ಮಕವಾಗಿ, ಒಮ್ಮೊಮ್ಮೆ ಸಂಭಾಷಣಾ ರೂಪದಲ್ಲಿ ಹೇಳುವ ಐನೂರು ಪುಟಗಳ ಬೃಹತ್ ಗ್ರಂಥವಾಗಿದೆ.

ಲೇಖಕರು ಮತ್ತು ಅವರ ಸ್ನೇಹಿತರು ನುಂಕೆಮಲೆಯ ಕಡೆ ಬರುವಾಗ ಬೇಡನಾಯಕರು ವಾಸ ಮಾಡುವ ಹಟ್ಟಿಗಳ ಮಾರ್ಗದಲ್ಲಿ ಬರುತ್ತ, ಆ ಹಟ್ಟಿಗಳಲ್ಲಿ ವಾಸಿಸುವ ಮ್ಯಾಸಬೇಡರ ಸ್ಥಿತಿಗತಿಗಳ ಬಗ್ಗೆ ಮಾತಾಡಿಕೊಳ್ಳುವರು. ಆ ಭಾಗಗಳನ್ನು ಇಲ್ಲಿ ಉದ್ಧರಿಸಬೇಕಾದ ಅಗತ್ಯ ಯಾಕೆ ಬರುತ್ತದೆಂದರೆ, ಬೇಡನಾಯಕರ ಒಂದು ವರ್ಗ ಪಾಳೇಗಾರರಾಗಿ ಮೆರೆದಿದ್ದರೆ ಅದೇ ಇನ್ನೊಂದು ವರ್ಗ ಅಡವಿ ಅರಣ್ಯ ಭಾಗಗಳ ಚಿಕ್ಕ ಗುಡಿಸಲಲ್ಲಿ ಹೇಗೆ ಬುಡಕಟ್ಟು  ಜೀವನವನ್ನು ಸಾಗಿಸಿಕೊಂಡು ಬಂದಿದ್ದಾರೆ ಎಂಬುದಕ್ಕೆ ಈ ಮಾತುಗಳು ಆಧಾರವಾಗುತ್ತವೆ.

ಲೇಖಕರು ಮತ್ತು ಅವರ ಸ್ನೇಹಿತರ ಸಂಭಾಷಣೆ ಹೀಗಿರುತ್ತದೆ.

“…. ಮಾತು ಮತ್ತು ಮಾತು ಆಡಿಕೊಳ್ಳುತ್ತ ಬರುವಾಗ ದಟ್ಟವಾದ ಜೀಯೆಂದು ದನಿಗೈಯುವ ದೃಢವಾದ ಆಸಿನ ಗಿಡಗಳನ್ನೂ ನೋಡಿ, ಸ್ವಾಮಿ ಇವು ಎಷ್ಟ ಬಲವಾದ ಗಿಡಗಳು ಪ್ರದೇಶಕ್ಕೆ ಹೆಸರೇನು ಇಲ್ಲಿ ಯಾವುದಾದರೂ ಹಳ್ಳಿ ಇದೆಯಾ?” ಅದಕ್ಕೆ ಜನಾರ್ಧನ ಅವರ ಉತ್ತರ ಇದಕ್ಕೆ ಕಮರದ ಕಾವಲು ಎಂದು ಹೆಸರು. ನಮಗೆ ಎಡಗಡೆ ಹತ್ತಿರದಲ್ಲಿಯೆ ತುಮಕೂರ್ಲಳ್ಳಿ ಎಂಬ ಒಂದು ಚಿಕ್ಕ ಗ್ರಾಮವಿದೆ. ಅಲ್ಲಿರುವವರು ಮ್ಯಾಸನಾಯಕ ವರ್ಗದವರು. ಜನಾಂಗದವರು ನಾಗರೀಕತೆಯಲ್ಲಿ ಬಹಳ ಹಿಂದಾಗಿರುವವರು. ಪಾಪ ಹಿಟ್ಟು ಚಟ್ನಿಯೇ ಇವರ ಮುಖ್ಯ ಆಹಾರ. ಚಡ್ಡಿ ಪುಟಗೋಸಿ ನೆರೆಗಂಬಳಿಗಳೇ ಇವರ ಉಡುಗೆ ತೊಡುಗೆಗಳು. ಹೆಂಗಸರು ಕುಪ್ಪಸ ತೊಡಬೇಕೆಂಬಷ್ಟಾದರೂ ವಿವೇಕವಿಲ್ಲದವರು. ತಾಲ್ಲೋಕುಗಳಲ್ಲಿ ಜನಗಳ ಕಂಪಳವು ಹೆಚ್ಚು ಸಾಧಾರಣವಾಗಿ ಒಂದು ಲಕ್ಷದ ಮೇಲೆ ಇರಬಹುದು. ಇವರೆಲ್ಲರೂ ಅಹನ್ಯಹನಿ ಕಾಲಕ್ಷೇಪಿಗಳು. ಆದರೂ ದೃಢಾಂಗಿಗಳು. ಕಷ್ಟಸಹಿಷ್ಣುಗಳು. ಮಧ್ಯಪಾನರಹಿತರು. ಎಂಥ ಕಷ್ಟಕಾಲದಲ್ಲಿಯೂ ಇವರು ಸ್ಥಳವನ್ನು ಬಿಡುವವರಲ್ಲಪಾಪ ಇತರ ನಾಗರೀಕ ಜನಾಂಗದವರಾರೂ ಇವರ ವಿಷಯದಲ್ಲಿ ಏನೇನೂ ಗಮನಿಸುವುದೇ ಇಲ್ಲ. ಆದುದರಿಂದ ಇವರ ಅಭಿವೃದ್ದಿಗೆ ಇವರೇ ಪ್ರಯತ್ನಿಸಬೇಕು”. ಪರಿಣಾಮಾನಂದರು. (ಕೃತಿಯಲ್ಲಿ ಲೇಖಕರ ಸ್ನೇಹಿತರಾಗಿರುವವರು) ಈಗ ನನಗೆ ಇವರ ನಿಜ ಸ್ಥಿತಿಯು ಚೆನ್ನಾಗಿ ಬೋಧನೆಯಾಯಿತು. ತಾವು ಸೂಚಿಸಿದಂತೆ ಹೇಗಾದರೂ ಮಾಡಿ ಇವರನ್ನು ಉನ್ನತಿಗೆ ತರಬೇಕು ಸ್ವಾಮಿ. ಇವರು ಉತ್ತಮ ಮಾರ್ಗಕ್ಕೆ ಬರಬೇಕು. ಗುರುದೇವರು ಮಲ್ಲನಾಯಕರಿಗೆ ಸತ್ಪ್ರೇರಣೆಯನ್ನು ಮಾಡಲಿಎಂದು ಸಂಭಾಷಣೆ ಮುಂದುವರೆಯುತ್ತದೆ.

ಲೇಖಕರು ಬೇಡನಾಯಕರ ಸ್ಥಿತಿಗತಿಗಳನ್ನು ಕುರಿತಂತೆ ತಮ್ಮ ಅಂತರಂಗ ಪೂರ್ವಕವಾದ ಕಾಳಜಿಯನ್ನು  ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಂಭಾಷಣೆಯ ಕೊನೆಗೆ ಮ್ಯಾಸಬೇಡ ನಾಯಕರ ಎಚ್ಚರಿಕೆಗಾಗಿ ಲೇಖಕರೇ ಬರೆದ ಒಂದು ದೀರ್ಘ ಪದ್ಯವಿದೆ. ಎಂ. ರಂಗಪ್ಪ ಅವರ “ನುಂಕೆಮಲೆಯ ಪರಮಾರ್ಥ” ಕೃತಿಯ ನಂತರ ೧೯೮೨ರಲ್ಲಿ ಎಂ.ಜಿ. ಈಶ್ವರಪ್ಪ ಅವರು “ಮ್ಯಾಸಬೇಡರು” ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ. ಮ್ಯಾಸಬೇಡ ನಾಯಕರ ಆಚಾರ-ವಿಚಾರ ಮತ್ತು ಜೀವನಕ್ರಮವನ್ನು ಸಂಕ್ಷಿಪ್ತವಾಗಿ ವಿವರಿಸುವ ಕಿರುಪುಸ್ತಿಕೆ ಇದು. ಒಟ್ಟು ಮ್ಯಾಸನಾಯಕರ ಸಮೂಹವನ್ನು ವಿವರಿಸುತ್ತ ಈಶ್ವರಪ್ಪನವರು ಮ್ಯಾಸಬೇಡರು ಯಾರು, ಮ್ಯಾಸಬೇಡರ ಹಟ್ಟಿಗಳು ಮತ್ತು ದೇವಸ್ಥಾನಗಳು, ವೇಷಭೂಷಣಗಳು, ಬೇಡರ ಪ್ರವೃತ್ತಿ, ಕುಟುಂಬ ಪದ್ಧತಿ ಅಲ್ಲದೆ ಅವರ ಕೆಲವು ಸಂಪ್ರದಾಯಾಚರಣೆಗಳನ್ನು ಕುರಿತಂತೆ ಹುಟ್ಟು, ಸಾವು, ವಿವಾಹ ಕ್ರಮ, ಹಬ್ಬ ಹರಿದಿನಗಳು ಈ ಮುಂತಾಗಿ ವಿಷಯಗಳನ್ನು ವಿಂಗಡಿಸಿ ಕೊಂಡಿದ್ದಾರೆ.

‘ಮ್ಯಾಸ’ ಪದ ‘ಮೇಯಿಸುವುದು’ ಶಬ್ದದಿಂದ ನಿಷ್ಪನ್ನವಾಯಿತೆಂದು ಲೇಖಕರು ಹೇಳಿದ್ದಾರೆ. ಇವರ ದೇವರುಗಳನ್ನು ಕುರಿತು, “ಒಂದು ಕಡೆ ನೆಲೆ ನಿಲ್ಲದೆ ಬೇಟೆಯಾಡುತ್ತ ಬೇರೆ ಕಡೆಗೆ ಸಾಗುತ್ತ ಅಲೆಮಾರಿ ಜನಾಂಗವಾಗಿದ್ದ ಇವರು ಸಾಗಾಣಿಕೆಗೆ ಅನುಕೂಲ ವಾಗಲೆಂದು ಪೆಟ್ಟಿಗೆ ದೇವರುಗಳನ್ನು ನಿರ್ಮಾಣ ಮಾಡಿಕೊಂಡಿರಬೇಕು. ಪಾಲೇ ದೇವರು, ಓಬಳ ದೇವರು, ಕಂಪಳ ದೇವರು, ಬೋಸೇ ದೇವರು, ಗಾದರ ದೇವರು ಮುಂತಾದ ಗಂಡು ದೇವತೆಗಳನ್ನು ಇವರು ಪೂಜಿಸುತ್ತಾರೆ….” ಎಂಬುದಾಗಿ ಹೇಳಿರುವ ಲೇಖಕರ ಮಾತುಗಳು ಸಮರ್ಪಕವಾಗಿಯೇ ಇವೆ. ಬೇಡರಲ್ಲಿ ಪ್ರಮುಖವಾಗಿ ಕಂಡುಬರುವ ನ್ಯಾಯ ತೀರ್ಮಾನದ ಕಟ್ಟೆಮನೆಗಳನ್ನು ಹೆಸರಿಸುತ್ತ ದಾವಣಗೆರೆ ತಾಲ್ಲೋಕಿನ ಕೋಡಿಹಳ್ಳಿ, ಚಳ್ಳಕೆರೆ ತಾಲ್ಲೋಕಿನ ಬುಕ್ಕಾಂಬಂದಿ, ಮೊಳಕಾಲ್ಮೂರು ತಾಲ್ಲೋಕಿನ ಗೌರಸಂದ್ರ ಮತ್ತು ಓಬೇನಹಳ್ಳಿ ಎಂದು ಹೇಳಿದ್ದಾರೆ. ಆದರೆ ಬೇಡನಾಯಕರ ಮೂರು ಕಟ್ಟೆ ಮನೆಗಳು ನಾಯಕನ ಹಟ್ಟಿ, ನನ್ನೀವಾಳ ಮತ್ತು ಚಿತ್ರದುರ್ಗದ ಬಳಿಯ ಗೊನೂರು. ಇದರೊಂದಿಗೆ ಸಣ್ಣಪುಟ್ಟ ಪಂಚಾಯ್ತಿಯ ತೀರ್ಮಾನಗಳು ಆಯಾ ಗ್ರಾಮದ ಇಲ್ಲ ಪಕ್ಕದ ಮ್ಯಾಸರಟ್ಟಿಯ ಗುಡಿಕಟ್ಟೆಗಳಲ್ಲಿ ತೀರ್ಮಾನವಾಗುತ್ತಿದ್ದು ವ್ಯಾಜ್ಯವು ಕೊಂಚ ದೊಡ್ಡದಿದ್ದು ಪರಿಹರಿಸ ಲಾರದಂತಿದ್ದರೆ ಅವು ಮೇಲೆ ಹೇಳಿದ ಗೊನೂರು, ನಾಯಕನಹಟ್ಟಿ, ನನ್ನಿವಾಳ ಕಟ್ಟೆಮನೆ ಗಳಲ್ಲಿ ತೀರ್ಮಾನವಾಗುತ್ತಿದ್ದವು. ಈ ಮೂರು ಹಟ್ಟಿಗಳೂ ಹಿಂದೆ ಸಣ್ಣ ಸಣ್ಣ ಪಾಳೆಯ ಪಟ್ಟುಗಳಾಗಿದ್ದವು. ಈಗಲೂ ಆಗಾಗ್ಗೆ ಸಣ್ಣ ಪುಟ್ಟ ಕಲಹಗಳು, ಫಿರ‍್ಯಾದುಗಳು ನನ್ನಿವಾಳದ ಕಟ್ಟೆಮನೆಗೆ ಬರುತ್ತಲಿವೆ. ಇನ್ನು ಬೇಡ ನಾಯಕರ ಹುಟ್ಟು ಸಾವಿನ ಆಚರಣೆಗಳನ್ನು ಕುರಿತಂತೆ ಲೇಖಕ ಎಂ.ಜಿ. ಈಶ್ವರಪ್ಪನವರು ಸಂಗ್ರಹಿಸಿಕೊಟ್ಟಿರುವ ಮಾಹಿತಿಗಳು ಸರಿ ಯಾಗಿಯೇ ಇವೆ. ಎಡ್ಗರ ಥರ‍್ಸಟನ್ ಮತ್ತು ಹೆಚ್.ವಿ. ನಂಜುಂಡಯ್ಯನವರ ಇಂಗ್ಲೀಷ್ ಲೇಖನಗಳನ್ನು ಬಿಟ್ಟರೆ, ಅಷ್ಟೇ ಮಾಹಿತಿಗಳನ್ನು ಕನ್ನಡದಲ್ಲಿ ಒದಗಿಸುವ ಪುಸ್ತಕ ‘ಮ್ಯಾಸಬೇಡರು’ ಪುಸ್ತಕ ಆಗಿದೆ.

ಎಂ.ಜಿ. ಈಶ್ಪರಪ್ಪನವರ ‘ಮ್ಯಾಸಬೇಡರು’ ಪುಸ್ತಕ ಪ್ರಕಟವಾದ ವರ್ಷದಲ್ಲಿಯೇ ಆರ್. ರಾಜಣ್ಣ, ಚಳ್ಳಕೆರೆ ಇವರು ‘ನಾಯಕ ಜನಾಂಗದ ಇತಿಹಾಸ’ ಎಂಬ ನೂರು ಪುಟಗಳ ಪುಸ್ತಕವನ್ನು ಪ್ರಕಟಿಸಿದ್ದಾರೆ. ಈ ಕೃತಿಯಲ್ಲಿ ‘ಬೇಡರನ್ನು ಗುರ್ತಿಸುವುದು’ ಎಂಬ ಅಧ್ಯಾಯವನ್ನು ಲೇಖಕರು ತಮ್ಮ ಅನುಭವಪೂರ್ಣ ಮಾತುಗಳಿಂದಲೇ ಆರಂಭಿಸಿ ಬೇಡರ ಪರಿಚಯಕ್ಕೆ ತೊಡಗುತ್ತಾರೆ. “ದೀರ್ಘದೇಹಿಗಳೂ ಅಷ್ಟೇ ದೃಢಕಾಯರಾಗಿಯೂ ಕೃಷ್ಣವರ್ಣವನ್ನು ಹೊಂದಿದ್ದು, ಬರಿಗಾಲಲ್ಲೇ ಬಹುಮಟ್ಟಿಗೆ ನಡೆಯುವವರೂ ಮೈತುಂಬ ಹೊದೆಯುವುದು ನಿಷಿದ್ಧವೆಂದು ಪರಿಗಣಿಸಿ ಸೊಂಟದಿಂದ ಕೆಳಕ್ಕೆ ಒಂದು ಚಡ್ಡಿ ಮತ್ತು ತಲೆಗೆ ಒಂದು ಲಪ್ಪಟೆ ಧರಿಸುವ ಗಂಡಸರು ಮತ್ತು ಸೀರೆಯನ್ನು ಮಾತ್ರ ಉಟ್ಟು ಸೆರಗಿ ನಿಂದಲೇ ಎದೆ ಮುಚ್ಚಿಕೊಳ್ಳುವ ಸ್ತ್ರೀಯರು ಬೇಟೆ, ಬೇಸಾಯ ಮತ್ತು ಪಶುಪಾಲನೆಯನ್ನೇ ಜೀವನೋಪಾಯ ಮಾಡಿಕೊಂಡಿರುವವರು….ಬುಟ್ಟಿ ದೇವರುಗಳನ್ನು ಮಾತ್ರ ದೇವರೆಂದು ಸ್ವೀಕರಿಸಿ ಅವುಗಳಿಗೆ ನಡೆದುಕೊಳ್ಳುವವರು. ಬಿದರಿನ ಬುಟ್ಟಿಗಳಲ್ಲಿ ಸಾಲಿಗ್ರಾಮ ಮತ್ತು ಲಿಂಗಗಳನ್ನಿಟ್ಟು ಬುಟ್ಟಿಗಳನ್ನು ಯಾವಾಗಲೂ ಮುಚ್ಚಿಟ್ಟಿರುವವರು… ಗುಗ್ಗರಿ ಹಬ್ಬ ಮತ್ತು ಎತ್ತಿನ ಹಬ್ಬದ ದಿನಗಳಲ್ಲಿ ಬುಟ್ಟಿ  ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ” (ಆರ್. ರಾಜಣ್ಣ, ನಾಯಕ ಜನಾಂಗದ ಇತಿಹಾಸ, ೧೯೮೨, ಪು. ೨-೩). ಈ ರೀತಿಯ ಆಚಾರ ವಿಚಾರಗಳನ್ನು ಹೊಂದಿರುವ ಜನರನ್ನು ತಾವು ಯಾವ ಜಾತಿಗೆ ಸೇರಿದವರು ಎಂದು ಪ್ರಶ್ನಿಸಿದರೆ ವಿಚಿತ್ರವೆನಿಸುವಂಥ ಉತ್ತರಗಳು ಬರುತ್ತವೆ. ಕೆಲವರು ತಾವು ನಾಯಕರೆಂದೂ ಕೆಲವರು ತಾವು ನಾಯಕ ಮಕ್ಕಳೆಂದೂ ಕೆಲವರು ಬೇಡರೆಂದೂ ಮತ್ತೆ ಕೆಲವರು ವಾಲ್ಮೀಕಿಗಳೆಂದೂ ಕೆಲವರು ಕಿರಾತರೆಂದೂ ಕೆಲವರು ಪರಿವಾರದವರೆಂದೂ ಕೆಲವರು ಪಾಳ್ಳೇಗಾರರೆಂದೂ ಇನ್ನು ಕೆಲವರು ತಳವಾರರೆಂದೂ ಮತ್ತೆ ಕೆಲವರು ಬಿಲ್ಲರೆಂದೂ ಹೇಳುತ್ತಾರೆ (ಆರ್. ರಾಜಣ್ಣ, ನಾಯಕ ಜನಾಂಗದ ಇತಿಹಾಸ, ೧೯೮೨, ಪು. ೫).

ಲೇಖಕರು ಬೇಡನಾಯಕರ ವಿವಿಧ ನಾಮಧೇಯಗಳನ್ನೂ ಅವರ ವೃತ್ತಿ ಸಹಿತ ಗುರುತಿಸುವುದು ಸರಿಯಾಗಿಯೇ ಇದ್ದು ಮೇಲಿನ ಎಲ್ಲ ಹೆಸರುಗಳಿಂದಲೂ ಬೇಡನಾಯಕರು ಕರೆಯಲ್ಪಡುತ್ತಾರೆ.

ಪುಸ್ತಕದ ಎರಡನೆಯ ಭಾಗವಾದ ಬೇಡರ ಮೂಲ ಮತ್ತು ಪರಂಪರೆಯಲ್ಲಿ ವಾಲ್ಮೀಕಿ, ಶಬರಿ, ಏಕಲವ್ಯ, ಕುಮಾರರಾಮ, ಮದಕರಿನಾಯಕ, ಇವರೆಲ್ಲ ಬೇಡನಾಯಕರೇ ಎಂದು ತಿಳಿಸಿ ಅವರೆಲ್ಲರೂ ಇಂದು ಬೇಡಜನಾಂಗಕ್ಕೆ ಪ್ರಾತಃಸ್ಮರಣೀಯರಾಗಿದ್ದಾರೆಂದೂ ಆ ಅಧ್ಯಾಯವನ್ನು ಅವರೆಲ್ಲರ ವಿವರವಾದ ಕಥಾ ಸಾರಾಂಶಗಳನ್ನು ಕೊಡುವುದರ ಮೂಲಕ ವಿಸ್ತರಿಸಿದ್ದಾರೆ. ಕೃತಿಯ ಕೊನೆಯ ಭಾಗದಲ್ಲಿ ಲೇಖಕರು ಬೇಡರು ಇಂದು ದುಃಸ್ಥಿತಿ ಯಲ್ಲಿದ್ದರೆ ಅದಕ್ಕೆ ಕಾರಣಗಳೇನು ಎಂದು ತಿಳಿಸಿರುವುದು ಅತ್ಯಂತ ಸಮಂಜಸವಾಗಿರುವಂತೆ ಕಾಣಿಸುತ್ತದೆ. ಬೇಡರಿಗೆ ತಮ್ಮದೇ ವೃತ್ತಿ ಯಾಕೆ ಬೆಳೆದು ಬರಲಿಲ್ಲ ಎಂದು ಹೇಳಿ ಅದಕ್ಕೆ ಮುಖ್ಯ ಕಾರಣ ಅವರು ಯೋಧರಾಗಿ ಸೈನ್ಯ ಸೇರಿ ದುಡಿದದ್ದೇ ಎಂದು ಊಹಿಸಿದ್ದಾರೆ. ಕೃತಿಯ ತೊಂಭತ್ತನೇ ಪುಟದಲ್ಲಿ ಲೇಖಕರು “…..ಕಾಡಿನಲ್ಲಿ ಸಂಸ್ಕೃತಿ ನಾಗರೀಕತೆ ಎಂದರೇನು ಎಂಬುದನ್ನು ಅರಿಯುವಂಥ ಪೀಳಿಗೆಯಾಗಿ ಬೆಳೆದುಕೊಂಡು ಬಂದು ಈ ಮಧ್ಯಕಾಲಾವಧಿಯಲ್ಲಿ ನಾಗರೀಕರ ಜೊತೆ ಸೇರಿಕೊಂಡರೂ ಕ್ಷತ್ರಾಂಶ ಸಂಭೂತರಾದಂಥ ಇವರು ಯಾವ ಉದ್ಯೋಗಕ್ಕೂ ತೊಡಗದೆ ಶೇಕಡ ತೊಂಭತ್ತರಷ್ಟು ರಕ್ಷಣಾ ಕಾರ್ಯದಲ್ಲೇ ತೊಡಗಿ ಯೋಧರಾಗಿ ನಿಂತರು. ಈ ಕಸುಬಿನಿಂದ ಈ ವಂಶದವರಿಗೆ ನಾಗರೀಕ ಚಟುವಟಿಕೆ ಗಳೇ ಬೇರೆ ಬೇರೆ ಆಗಿ ಜೀವನ ವೃತ್ತಿಯ ಸಂಬಂಧವೇ ಬೆಳೆಯಲಿಲ್ಲ. ಮುಸಲ್ಮಾನರಿಂದಲೂ, ಬಿಳಿಯರಿಂದಲೂ ಹಾನಿಯಾದ ಇವರ ಕೋಟೆ ಕೊತ್ತಲಗಳ ಜೊತೆಗೆ ಲಕ್ಷೋಪಲಕ್ಷ ಯೋಧರು ಯುದ್ಧದಲ್ಲಿ ಮಡಿದರು. ಯುದ್ಧದಲ್ಲಿ ಮಡಿದ ಯೋಧರ ಅರ್ಧಾಂಗಿನಿಯರು ತಮ್ಮ ಗಂಡಂದಿರು ಯುದ್ಧದಲ್ಲಿ ಸಾವನ್ನಪ್ಪಿದ ಮೇಲೆ ಅನಾಥರಾದರು. ಯಾರಿಂದಲೂ ಇವರಿಗೆ ಆಶ್ರಯ ದೊರೆಯಲಿಲ್ಲ. ಇವರ ಜೀವನವು ಅಧೋಗತಿಗೆ ಇಳಿಯಿತು. ಅನೇಕರು ಪ್ರಾಣಹತ್ಯೆ ಮಾಡಿಕೊಂಡರು. ಇವರ ಮಕ್ಕಳು ಅನಾಥರಾಗಿ ಬೇಡಿ ಜೀವನ ಮಾಡ ತೊಡಗಿದರು. ಇನ್ನೂ ಅನೇಕ ಹೆಣ್ಣು ಮಕ್ಕಳು ಜೀವನಕ್ಕೆ ಗತಿಯಿಲ್ಲದೆ ಬಲವಂತವಾಗಿ ಸಮಾಜದ ಬಲಿಷ್ಟರ ಭೋಗಜೀವನಕ್ಕೆ ತುತ್ತಾದರು. (ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಟೌನಿನಲ್ಲಿ ಇಂದು ಜೀವಿಸಿರುವ ಬಹುಪಾಲು ಸಂಸಾರಗಳು ಜೀವನಕ್ಕಾಗಿ ವೇಶ್ಯಾವೃತ್ತಿಯನ್ನು ಅವಲಂಬಿಸಿವೆ. ಆ ಕುಟುಂಬಗಳೆಲ್ಲ ಮೂಲತಃ ವಿಜಯನಗರ ಮತ್ತು ಬಹುಮನಿ ಸುಲ್ತಾನರ ನಡುವೆ ರಕ್ಕಸ-ತಂಗಡಿಗಿ ಯುದ್ಧದ ನಂತರ ಮಡಿದ ಯೋಧರ ಕುಟುಂಬಗಳೇ ಎಂದು ಲೇಖಕರು ಹೇಳುತ್ತಾರೆ. ಯುದ್ಧದಲ್ಲಿ ವಿಜಯನಗರಕ್ಕೆ ಅಧೀನವಾದ ನಾಯಕರ ಪಾಳೆಯ ಪಟ್ಟುಗಳೆಲ್ಲ ಬಹುಮಟ್ಟಿಗೆ ಭಾಗವಹಿಸಿ ಅದರಲ್ಲಿ ಮಡಿದವರೆಲ್ಲರೂ ಬೇಡರೇ ಆಗಿದ್ದರು. ಹಾಗೆ ಮಡಿದವರ ಕುಟುಂಬಗಳು ದಿಕ್ಕಿಲ್ಲದೆ ಓಡಿ ಬಂದು ಕೂಡ್ಲಿಗಿಯ ಕಡೆ ನೆಲೆಸಿ ಮತ್ತೆ ಅವರನ್ನು ಸಲಹುವವರು ಯಾರೂ ಇಲ್ಲದೆ ಉದರ ಪೋಷಣೆಗಾಗಿ ವೇಶ್ಯಾವೃತ್ತಿಯನ್ನು ಕೈಕೊಂಡರು. ಒಮ್ಮೆ ಆರಂಭವಾದ ಕುಟುಂಬ ವೃತ್ತಿ ಹಾಗೆಯೇ ಮುಂದುವರೆಯಿತು. ಲೇಖಕರ ಈ ಅಭಿಪ್ರಾಯದಲ್ಲಿ ಸತ್ಯಾಂಶವಿರುವಂತೆ ಕಾಣುತ್ತದೆ) ಯುದ್ಧದ ಪರಿಣಾಮವನ್ನು ಕುರಿತು ಲೇಖಕರು ಕೊಟ್ಟಿರುವ ವಿವರಗಳು ಸತ್ಯವಾದುದಾಗಿವೆ. ತದನಂತರ ರಾಜಣ್ಣನವರು ಮ್ಯಾಸಬೇಡರ ಉದ್ಧಾರಕ್ಕಾಗಿ ಕಲಿತವರು, ಅಧಿಕಾರಿಗಳು, ರಾಜಕಾರಣಿಗಳು ಏನೇನು ಮಾಡಬೇಕೆಂಬ ಸಲಹೆ ಕೊಡುತ್ತ ಬರವಣಿಗೆಯನ್ನು ಮುಗಿಸಿದ್ದಾರೆ.

ಕೃತಿಯಲ್ಲಿ ಪೌರಾಣಿಕ ವ್ಯಕ್ತಿಗಳನ್ನು ಕುರಿತು ಹೇಳಿರುವುದು ಬಿಟ್ಟರೆ ಉಳಿದಂತೆ ಬೇಡನಾಯಕರ ಬಗ್ಗೆ ಲೇಖಕರು ಮಾಡಿರುವ ಚಿಂತನೆ ಗಮನಾರ್ಹವಾಗಿದೆ. ಆರ್. ರಾಜಣ್ಣನವರ ನಾಯಕ ಜನಾಂಗದ ಇತಿಹಾಸ ಕೃತಿಯ ನಂತರ ಬೇಡರ ಬಗ್ಗೆ ಇನ್ನಷ್ಟು ಮಾಹಿತಿ ಒದಗಿಸುವ ಪುಸ್ತಕ ಚಿತ್ರದುರ್ಗದ ಗೆಜೆಟಿಯರ್. ಚಿತ್ರದುರ್ಗದ ನೆಲದ ಎಲ್ಲ ವಿವರಗಳನ್ನು ಒದಗಿಸುತ್ತ ಮ್ಯಾಸಬೇಡರ ಬಗೆಗೂ ಸಮಯಾನುಸಾರ ಅಷ್ಟಿಷ್ಟು ಹೇಳಲಾಗಿದೆ. ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳನ್ನು ಹೇಳುತ್ತ ನಾಯಕನಹಟ್ಟಿಯ ಬಗೆಗೂ ಅಲ್ಲಿಯ ಶಿವಶರಣ ತಿಪ್ಪೇಸ್ವಾಮಿ ಮತ್ತು ಆತನ ಆದೇಶದ ಮೇರೆಗೆ ನಿರ್ಮಾಣವಾದ ಹಿರೇಕೆರೆ ಬಗೆಗೂ ಉಲ್ಲೇಖವಿದೆ.

ಮೇಲೆ ಹೇಳಿದ ಎಲ್ಲ ಕೃತಿಗಳೂ ಬಹುಮಟ್ಟಿಗೆ ಬೇಡನಾಯಕರನ್ನು ಕುರಿತ ಪರಿಚಯಾತ್ಮಕ ಬರವಣಿಗೆಗಳು ಸ್ವತಂತ್ರ ಕೃತಿಗಳಾದರೆ, ನಾಯಕನಹಟ್ಟಿ ಧಾರ್ಮಿಕ ಕ್ಷೇತ್ರ ವಾಗಿ ಹೇಗೆ ಪುರೋಭಿವೃದ್ದಿಗೆ ಬಂದಿದೆ ಎಂಬುದನ್ನು ಹಿಂದೆ ತಿಪ್ಪೇಸ್ವಾಮಿ ಮಾಡಿದನೆನ್ನಲಾದ ಪವಾಡ ವಿವರಗಳೊಂದಿಗೆ ಬರೆದ ಹಲವಾರು ಕ್ಷೇತ್ರ ಪರಿಚಯ ಪುಸ್ತಕಗಳೂ ಪ್ರಕಟವಾಗಿವೆ. ಅವುಗಳ ಪ್ರಸ್ತಾಪ ಇಲ್ಲಿ ಅನಗತ್ಯ. ನಾಯಕನಹಟ್ಟಿ ಪಾಳೆಯಗಾರರನ್ನು ಕುರಿತಂತೆ ನಾಯಕನಹಟ್ಟಿಯಲ್ಲೇ ದೊರೆತ ಬಖೈರನ್ನು ಅಭ್ಯಾಸಮಾಡಿ ಎಂ.ಎನ್. ಪ್ರಭಾಕರ್ ಅವರು ೧೯೭೬ರಲ್ಲಿ ಹೊರತಂದ ‘ಚಂದ್ರವಳ್ಳಿ’ ಕೃತಿಯಲ್ಲಿ ಪ್ರಕಟಿಸಿದ್ದಾರೆ. ಪ್ರಭಾಕರ್ ಅವರು ಬಖೈರನ್ನು ಅಮೂಲಾಗ್ರವಾಗಿ ಓದಿ ನಾಯಕನಹಟ್ಟಿ ಪಾಳೆಯಗಾರರ ಇತಿಹಾಸವನ್ನೂ ಕರ್ನಾಟಕಕ್ಕೆ ಅವರು ಆಗಮಿಸಿದ ಕಾಲವನ್ನೂ ಗುರುತಿಸುವ ಪ್ರಯತ್ನ ಮಾಡಿದ್ದಾರೆ. ತಾವು ಬರೆದ ಲೇಖನದೊಂದಿಗೆ ಬಖೈರಿನಲ್ಲಿ ಪಾಳೆಯಗಾರರ ಆಳ್ವಿಕೆಯ ಕ್ರಮವನ್ನನುಸರಿಸಿ ಪಾಳೆಯಗಾರರ ಒಂದು ಪಟ್ಟಿಯನ್ನು ಅದರ ಕೊನೆಗೆ ಪೂರ್ಣ ಬಖೈರಿನ ಪಾಠವನ್ನೂ ಅನುಬಂಧವಾಗಿ ಕೊಟ್ಟಿದ್ದಾರೆ.

ನಂತರ ಎಂ.ವಿ. ಚಿತ್ರಲಿಂಗಯ್ಯಅವರು ೧೯೮೭ರ ‘ವಾಲ್ಮೀಕಿ ಸಂದೇಶ’ ಎಂಬ ಮಾಸ ಪತ್ರಿಕೆ(ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳ ಸಂಚಿಕೆಗಳ)ಯಲ್ಲಿ ‘ನಾಯಕನಹಟ್ಟಿ ಬಖೈರು- ಕೆಲವು ಟಿಪ್ಪಣಿಗಳು’ ಎಂಬ ಲೇಖನ ಬರೆದು ಚಂದ್ರವಳ್ಳಿ ಕೃತಿಯಲ್ಲಿ ಪ್ರಭಾಕರ್ ಅವರು ಬರೆದಿರುವ ಲೇಖನದ ಕೆಲವು ಲೋಪದೋಷಗಳನ್ನು ಹೇಳಿದ್ದಾರೆ. ಪ್ರಭಾಕರ್ ಅವರು ಬಖೈರಿನಲ್ಲಿ ಪ್ರಸ್ತಾಪವಾದ ಕಾಲಮಾನವನ್ನೇ ನಂಬಿ ಅದನ್ನೇ ಅನುಸರಿಸಿ ಕರ್ನಾಟಕಕ್ಕೆ ಬೇಡನಾಯಕರ ಆಗಮನ ೧೩೪೦ ಎಂದಿದ್ದರೆ, ಎಂ.ವಿ. ಚಿತ್ರಲಿಂಗಯ್ಯನವರು ಬೇಡರು ಕರ್ನಾಟಕಕ್ಕೆ ೧೫೩೦ರ ನಂತರ ಬಂದರೆಂದು ಹೇಳುತ್ತಾರೆ. ಹೀಗೆ ಬೇಡನಾಯಕರು ಮತ್ತು ಬೇಡನಾಯಕ ಪಾಳೆಯಗಾರರನ್ನು ಕುರಿತಂತೆ ಅಲ್ಲಲ್ಲಿ ಪ್ರಸ್ತಾಪ, ಲೇಖನಗಳು ಸಣ್ಣಪುಟ್ಟ ಕೃತಿಗಳು ಈವರೆಗೆ ಪ್ರಕಟವಾಗಿವೆ.

ಕೃಪೆ : ವಾಲ್ಮೀಕಿ ಸಂಪದ

* * *