ವೇದಪೂರ್ವ ಭಾರತದ ಮೂಲನಿವಾಸಿಗಳನ್ನು ಕುರಿತು ಆರ್ಯ ಗ್ರಂಥಗಳಲ್ಲಿಯೇ ಉಕ್ತವಾಗಿರುವಂತೆ ಕಿರಾತರು, ನಿಶಾಧರು, ಪುಳಿಂದರು, ವ್ಯಾಧರು ಎಂದೂ, ಪಣಿಗಳು, ನಾಗರು ಎಂದೂ, ವಾನರು, ಅಸುರರು ಎಂದೂ ಉಲ್ಲೇಖಿಸಿರುವುದನ್ನು ಈ ಆರ್ಯ ನಿರ್ಮಿತ ಸಂಸ್ಕೃತ ಗ್ರಂಥಗಳಲ್ಲಿ ಕಾಣಬಹುದಾಗಿದೆ. ಇವರ ವರ್ಣನೆಗಳಿಂದಲೇ ಇವರು ಆರ್ಯರ ಶತೃಗಳಾಗಿದ್ದರೆಂದು ಹಾಗೂ ಆರ್ಯ, ದ್ರಾವಿಡರಿಗಿಂತ ಮೊದಲೇ ಇದ್ದ ಭಾರತದ ಮೂಲನಿವಾಸಿಗಳೆಂದು ತಿಳಿಯಬಹುದಾಗಿದೆ.

ಪ್ರಾಗೈತಿಹಾಸಿಕ ಭಾರತದಲ್ಲಿ ಹಿಮಾಲಯ ತಪ್ಪಲಿನಿಂದ ಹಿಡಿದು, ಗಂಗಾನದಿಯ ಬಯಲಿನಾದ್ಯಂತ ಇರುವ ಶಿಖಾರಗ್ರಗಳಲ್ಲಿ ಕಣಿವೆ ಪ್ರದೇಶಗಳು ಮತ್ತು ನೇಪಾಳದ ಗಂಡಕೀ ನದಿ ಬಯಲುಗಳನ್ನೆಲ್ಲಾ ಭಾರತದ ಪ್ರಾಗೈತಿಹಾಸದ ಕಿರಾತರು ಆಕ್ರಮಿಸಿ ತಮ್ಮ ಸಾಮ್ರಾಜ್ಯ ಸ್ಥಾಪಿಸಿರುವುದನ್ನು ಕಾಣಬಹುದಾಗಿದೆ. ಆರ್.ಕೆ. ಮಜುಂದಾರರ ವೇದಪೂರ್ವ ಭಾರತ ಎಂಬ ಪುಸ್ತಕದಲ್ಲಿನ ನಕ್ಷೆಯಲ್ಲಿ ಹಿಮಾಲಯದ ತಪ್ಪಲಿನ ಕಿರಾತರಾಜ್ಯವೆಂದು ಉಲ್ಲೇಖಿಸಿರುವುದು. ಹಾಗಾದರೆ ಈ ಕಿರಾತರೆಂದರೆ ಯಾರು? ಈ ಕಿರಾತರು ವೇದಪೂರ್ವ ಮೂಲನಿವಾಸಿಗಳ ಒಂದು ಸಾಮಾನ್ಯ ಪದ. ಈ ಬುಡಕಟ್ಟಿನವರ ರೀತಿನೀತಿಗಳನ್ನು, ಆಕಾರ, ಬಣ್ಣಗಳನ್ನು ಕುರಿತು ಸುರೂಪಿಗಳಾದ ಆರ್ಯರು ನೀಡಿರುವ ಒಂದು ನಾಮಧೇಯ ‘ಕಿರಾತ’ ಎಂಬುದು.

ಈ ಮೂಲನಿವಾಸಿಗರು ಶಿಲಾ ಆಯುಧಗಳನ್ನು ಗದೆ, ಗಂಡುಗೊಡಲಿಗಳು, ಭರ್ಜಿ ಗಳಂಥ ಶಿಲಾ ನಿರ್ಮಿತ ಆಯುಧಗಳನ್ನು ಬಳಸುತ್ತಿದ್ದರು ಮತ್ತು ಬೇಟೆ ಹಾಗೂ ಪಶುಪಾಲನೆ ಇವರ ಮುಖ್ಯ ಕಸುಬಾಗಿತ್ತು ಎಂಬುದನ್ನು ತಿಳಿಯಬಹುದಾಗಿದೆ. ಆದಿವಾಸಿ ಮಾನವನ ಮೂಲ ‘ಕಸುಬೇ’ ಬೇಟೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆರ್ಯರಿಗಿಂತ ಬಹು ಮುಂಚೆಯೇ ಈ ಕಿರಾತರು, ನಿಶಾಧರು, ಫಣಿಗಳು ಹರಪ್ಪ – ಮೊಹಂಜೋದಾರೊ ಸಂಸ್ಕೃತಿಯ ಹರಿಕಾರರಾಗಿದ್ದರು. ನಂತರ ಬಂದ ಆರ್ಯ ದ್ರಾವಿಡರು ಇವರೊಂದಿಗೆ ಯುದ್ಧಗಳನ್ನು ಮಾಡಿ ಇವರನ್ನು ಅವರ ನಗರಗಳಿಂದ ಹಿಂದಕ್ಕಟ್ಟಿದರು ಎಂಬುದು ಅವರ ವೇದ, ಪುರಾಣಗಳು ಮತ್ತಿತರ ಸಂಸ್ಕೃತ ಗ್ರಂಥಗಳಿಂದ ತಿಳಿದು ಬರುತ್ತದೆ. ಆಗಿನ್ನೂ ಬುಡಕಟ್ಟು ವ್ಯವಸ್ಥೆಯಿದ್ದು ಈ ಬುಡಕಟ್ಟು ವ್ಯವಸ್ಥೆಯಲ್ಲಿ ಮೇಲು, ಕೀಳು, ವರ್ಣ, ಸ್ಪೃಶ್ಯ, ಅಸ್ಪೃಶ್ಯ ಎಂಬುವುಗಳಿರಲಿಲ್ಲ. ಇದು ತೀರಾ ಪೂರ್ವದ ಬುಡಕಟ್ಟು ಸಮಾಜ. ಅಂದಿನ ಬುಡಕಟ್ಟುಗಳೇ ಆರ್ಯರಿಂದ ಹೆಸರಿಸಿದ್ದ ಕಿರಾತ, ನಿಶಾಧ, ಪುಳಿಂದ, ವ್ಯಾಧ, ಫಣಿಗಳು, ಶಖರರು.

ಈಗಿನ ಸಮಾಜದ ಎಲ್ಲಾ ಜಾತಿಗಳೂ ಸ್ಪೃಶ್ಯ, ಅಸ್ಪೃಶ್ಯರೂ, ವರ್ಣಿಗರು, ಮೇಲ್ಜಾತಿ, ಕೀಳ್ಜಾತಿಗಳೆಲ್ಲವೂ ಆರ್ಯ ಸಮಾಜದ ಫಲಗಳೇ ಆಗಿರುವವು. ಈ ಸಮಾಜವನ್ನು ಅವರು ನಾನಾ ವಿಭಾಗಗಳಾಗಿ ವರ್ಣ, ಜಾತಿ, ಮೇಲುಕೀಳುಗಳಾಗಿ ವಿಂಗಡಿಸಿ ಪ್ರತಿಯೊಂದಕ್ಕೂ ಒಂದೊಂದು ಹೆಸರುಗಳನ್ನು ಇಟ್ಟಿರುವುದನ್ನು ಆರ್ಯ ನಿರ್ಮಿತ ಗ್ರಂಥಗಳಿಂದ ತಿಳಿಯ ಬಹುದಾಗಿದೆ.

ಈ ಕಿರಾತರು ತಮ್ಮ ಅದ್ವಿತೀಯ ಹೋರಾಟಗಳಿಂದ ಆರ್ಯರನ್ನು ನಿಷ್ಕ್ರಿಯ ಗೊಳಿಸಿದ್ದರು. ಆರ್ಯರಿಗಿಂತಲೂ ಸುವ್ಯವಸ್ಥಿತವಾದ ಜೀವನಕ್ರಮ, ವ್ಯವಸ್ಥಿತವಾದ ಕೋಟೆ ಕಟ್ಟುವಿಕೆ, ಬೇಟೆ ಪಶುಪಾಲನೆಗಳನ್ನು ಮುಖ್ಯ ಕಸುಬಾಗುಳ್ಳ ಕಿರಾತರಿಗೂ ಹೊರಗಿನಿಂದ ಬಂದ ಆಕ್ರಮಣಕಾರರಾದ ಆರ್ಯರಿಗೂ ಸಾಲು ಸಾಲು ಯುದ್ಧಗಳಾಗಿ ಸಪ್ತಶಿಖರಗಳನ್ನೊಳಗೊಂಡ ಸಪ್ತಪುರಗಳನ್ನು ನಾಶಪಡಿಸಿದರು. ಫಣಿಗರು ಈ ಆರ್ಯರಿಗೆ ಶಾಮೀಲಾಗಿ ಕಾರ್ಯನಿರ್ವಹಿಸಿದರು.

ಭಾರತದ ಮೂಲನಿವಾಸಿಗಳಾದ ಕಿರಾತ, ನಿಶಾಧ, ಪುಳೀಂದ, ಶಬರ ಮತ್ತು ಫಣಿ ಬುಡಕಟ್ಟುಗಳ ಮೇಲೆ ಆರ್ಯ ಮತ್ತು ದ್ರಾವಿಡರೆಂಬ ಪರ ಸಂಸ್ಕೃತಿಯವರು ದಾಳಿ ನಡೆಸಿ ಈ ಬುಡಕಟ್ಟು ಸಮಾಜವನ್ನು ಛಿದ್ರಗೊಳಿಸಿ ವರ್ಣ, ಅವರ್ಣ, ಸ್ಪೃಶ್ಯ, ಅಸ್ಪೃಶ್ಯರೆಂದೂ ಮೇಲ್ಜಾತಿ, ಕೀಳ್ಜಾತಿಗಳೆಂದು ಚಿದ್ರವಿಚ್ಛಿದ್ರಗೊಳಿಸಿದರು. ಕ್ರಿ.ಪೂ. ೧೨೨೦ರ ಋಗ್ವೇದದ ಕೆಲವು ಪುರುಷ ಸೂಕ್ತಿಯ ಆಧಾರದಲ್ಲಿ ಮಹಾನ್ ಪಂಡಿತರಾದ ರಾಹುಲಸಾಂಕೃತ್ಯಾಯನವರ ಬರಹದ ಪ್ರಕಾರ ಸಪ್ತಸಿಂಧು ಬಯಲು ಎಲ್ಲಾ ಐತಿಹಾಸಿಕ ಘಟನೆಗಳ ಕೇಂದ್ರಸ್ಥಾನವಾಗಿದೆ. ಇದೇ ಭಾರತೀಯರ ನಾಗರೀಕತೆಯ ತೊಟ್ಟಿಲು ಎಂಬುದು ಇವರ ಬರಹಗಳಿಂದ ತಿಳಿಯುತ್ತದೆ.

ಇವರ ಬರಹಗಳು ಭಾರತದ ಆದಿಕಾಲೀನ ಮೂಲನಿವಾಸಿಗಳು ಯಾರು ಹಾಗೂ ಈ ಬುಡಕಟ್ಟು ಸಮಾಜವು ಸಾಮಾಜಿಕ ಚಿತ್ರಣವನ್ನು ಬಿಚ್ಚಿ ಹೇಳುತ್ತದೆ. ಇಂತಹ ಮೂಲ ಬುಡಕಟ್ಟು ಸಮಾಜವನ್ನು ಈ ಆರ್ಯ ಸಮಾಜವು ಹೇಗೆ ತನ್ನ ಹಿಡಿತಕ್ಕೊಳಪಡಿಸಿತು ಎಂಬುದೇ ಆಗಿದೆ. ಆರ್ಯರಿಗೆ ಬೇಕಾಗಿದ್ದು ದೇವದಪ್ಪಿಗರಾದ ಈ ಬುಡಕಟ್ಟುಗಾರರ ಪಶುಸಂಪತ್ತು. ದೇವದಪ್ಪಿಗರಲ್ಲಿ ಬಹಳ ಹೆಚ್ಚಿನ ಸಂಪತ್ತು ಇರಬಹುದೆಂದು ಇಂದ್ರನ ಆಜ್ಞೆಯೆಂದು ಆರ್ಯರು ನಂಬಿದ್ದರು. ಆರ್ಯರ ದೈವ ಇಂದ್ರನಾದರೆ ಈ ಕಿರಾತ ಮತ್ತು ಬುಡಕಟ್ಟಿಗರ ದೈವ ಪಶುಪತಿ. ಆದುದರಿಂದಲೇ ಈ ಶಿವನು ಕಿರಾತವೇಶಧಾರಿಯಾಗಿರುವುದು. ಇವರು ಪ್ರಕೃತಿ ಮತ್ತು ಪಶುಪತಿಯ ಆರಾಧಕರು. ಆರ್ಯರು ವಿಷ್ಣು ಮತ್ತು ಇಂದ್ರನ ಆರಾಧಕರಾಗಿರುವುದು ಒಂದು ಉದಾಹರಣೆಯಾಗಿದೆ. ಶಿವನು ಬುಡಕಟ್ಟು ಸಂಸ್ಕೃತಿಯ ದೈವವಾಗಿಯೂ, ವಿಷ್ಣು ಆರ್ಯ ಸಂಸ್ಕೃತಿಯ ದೈವವಾಗಿರುವುದನ್ನು ನಾವು ಹೆಜ್ಜೆ ಹೆಜ್ಜೆಗೆ ಕಾಣಬಹುದಾಗಿದೆ. ಇದರಂತೆಯೆ ಈಗಿನ ಬುಡಕಟ್ಟುಗಳಾದ ಶಬರ, ನಾಯಕ, ಬೇಡ, ಚಂಚುಗರು ಹಿಂದಿನ ಕೋಲ್ ಬುಡಕಟ್ಟಿನ ಕಿರಾತ, ನಿಶಾದ್ ಮತ್ತು ಫಣಿಗಳು ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.

ಮೂಲನಿವಾಸಿಗಳಾದ ಕಿರಾತ, ನಿಶಾಧ ಮತ್ತು ಫಣಿಗಳು ಆರ್ಯರೊಡನೆ ನಡೆಸಿದ ಯುದ್ಧಗಳ ಫಲಶೃತಿಯಾಗಿ ಕಿರಾತರ ಅನೇಕ ತಮ್ಮ ಮುಖ್ಯ ಪಟ್ಟಣಗಳನ್ನು ಕೋಟೆ ದುರ್ಗಗಳನ್ನು ಬಿಟ್ಟು ವಿಂಧ್ಯಪರ್ವತದ ತಪ್ಪಲಿಗೆ ಬಂದು ನೆಲೆಸಿದ ನಂತರ ಅಲ್ಲಿಂದ ಹುಟ್ಟುವ ನದಿದಡಗಳ ಮೂಲಕ ಓರಿಸ್ಸಾ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕದ ಭಾಗಗಳಿಗೂ ಬಂದು ನೆಲೆಸಿದರು.

ಆರ್ಯರ ಮೂಲದವರಾದ ಬ್ರಾಹ್ಮಣ ಮತ್ತು ಕಿರಾತರ ಮೂಲದವರಾದ ಬೇಡ ಈ ಎರಡು ಬೃಹತ್ ಮೂಲನಿವಾಸಿಗಳಲ್ಲಿ ಅನೇಕ ಸಾಮ್ಯಗಳಿವೆ. ಬ್ರಾಹ್ಮಣನಿಗೆ ಸಾಲಿಗ್ರಾಮ ಪೂಜೆಯ ಮಹತ್ವ ತಿಳಿದಿದ್ದರೆ ಅದೇ ಸಂದರ್ಭದಲ್ಲಿ ಕಿರಾತ, ನಿಶಾಧ, ಶಬರರ ಪ್ರತಿನಿಧಿ ಯಾದ ಬೇಡ ಬುಡಕಟ್ಟಿನವರು ಪೂಜಿಸುವುದು ಸಾಲಿಗ್ರಾಮವನ್ನೆ.

ಈ ಸಾಲಿಗ್ರಾಮ ಸಿಗುವುದು ನೇಪಾಳದ ಗಂಡಕಿ ನದಿಯಲ್ಲಿ ಮಾತ್ರ. ಬಹುಶಃ ಇವರು ಅಲ್ಲಿನ ಮೂಲನಿವಾಸಿಗಳೆಂಬುದಕ್ಕೆ ಇದಕ್ಕಿಂತಲೂ ಬೇರೆ ಉದಾಹರಣೆಗಳಿಲ್ಲ. ಅದರಂತೆಯೇ ನೇಪಾಳದ ಮೂಲ ಅರಸರು ಕಿರಾತರೇ ಆಗಿರುವುದು ಇತ್ತು. ದಕ್ಷಿಣದ ತುತ್ತತುದಿಯ ಮೂಲನಿವಾಸಿಗರು ವಡ್ಡರೆಂಬ ಮೂಲನಿವಾಸಿಗಳು. ಇವರು ಶ್ರೀಲಂಕಾದ ಬೇಡರೆ ಆಗಿರುವುದು. ವಡ್ಡ ಶ್ರೀಲಂಕಾ ಭಾಷೆಯ ಬೇಡ ಎಂದಿರುವುದು ಶ್ರೀಲಂಕಾದಲ್ಲಿ ಶೇಖರ ಗಾಮುಹಾ ಎಂಬ ದೊಡ್ಡ ಪ್ರಾಂತ್ಯವಿರುವುದು.

ಇವೆಲ್ಲ ಅಂಶಗಳಿಂದ ಪ್ರಾಚೀನ ಭಾರತದ ಮೂಲನಿವಾಸಿಗಳು ಕೋಲ್‌ಬುಡಕಟ್ಟಿ ನವರಾದ ಕಿರಾತರು, ನಿಶಾಧರು, ಫಣಿಗಳು ಎಂಬುದು. ಇವರೇ ಆಕ್ರಮಣಕಾರರಾದ ಆರ್ಯರನ್ನು ಸಾವಿರಾರು ಕಡೆಗಳಲ್ಲಿ ಅತ್ಯಂತ ರೋಚಿತವಾಗಿ ಯುದ್ಧ ಮಾಡಿದ ರಣೋತ್ಸಾಹಿಗಳಾಗಿದ್ದು, ಬೇಟೆ ಮತ್ತು ಪಶುಪಾಲನೆಯನ್ನು ಆರಂಭಿಸಿದವರಾಗಿದ್ದರು. ಆರ್ಯರು ತಾವೇ ಶ್ರೇಷ್ಠರೆಂದು ತಾವು ದೇವರ ಪ್ರತಿನಿಧಿಗಳೆಂದು ಪ್ರತಿಪಾದಿಸುತ್ತ ಇವರ ಸಂಪತ್ತು ಮತ್ತು ಭೂಮಿಯನ್ನು ಆಕ್ರಮಿಸಿಕೊಳ್ಳುವ ದುರುದ್ದೇಶ ಹೊಂದಿದವರಾಗಿದ್ದರು. ಅದರಂತೆ ಕ್ರಮೇಣ ಆರ್ಯರ ಆಯುಧ ಬಳಕೆಯಿಂದಲೂ ತಂತ್ರಗಳಿಂದಲೂ ಈ ಕಿರಾತ, ನಿಶಾಧರು ಸೋತು ತಮ್ಮ ಸಪ್ತಶಿಖರಗಳಿಂದ ಉಚ್ಛಾಟಿಸಲ್ಪಟ್ಟರು. ಈ ಮೂಲನಿವಾಸಿಗಳೇ ಹಿಂದಿನ ಕೋಲ್‌ಬುಡಕಟ್ಟಿನ ಪ್ರತಿನಿಧಿಗಳಾದ ಕಿರಾತ, ಶಬರ, ನಿಶಾಧ, ಜುವಿಂಗ್ ಮತ್ತು ಸಂಕಾಲ ಮುಂತಾದವುಗಳಾಗಿದ್ದು ಈ ಬುಡಕಟ್ಟಿನ ಪ್ರತಿನಿಧಿಗಳಾದ ಬೇಡ, ಬೋಯಾ, ಚೆಂಚು ಮತ್ತು ಭೀಲ್ ಬುಡಕಟ್ಟುಗಳಾಗಿದ್ದಾರೆ.

ಕೃಪೆ : ಇತಿಹಾಸ ಚಂದ್ರಿಕೆ

* * *