ಭಾರತವು ಹಲವಾರು ಬುಡಕಟ್ಟುಗಳ ತವರು ಮನೆ. ಒಂದೊಂದು ಬುಡಕಟ್ಟುಗಳನ್ನು ಅವಲೋಕನ ಮಾಡಿ ನೋಡಿದಾಗ ಒಂದು ಬುಡಕಟ್ಟಿನಿಂದ ಇನ್ನೊಂದು ಬುಡಕಟ್ಟಿಗೆ ವಿಭಿನ್ನತೆ ಕಂಡು ಬರುವುದು ಸಹಜ. ಅದರಲ್ಲಿ ಅವರದೇ ಆದ ಪ್ರಾಚೀನತೆ, ಐತಿಹಾಸಿಕತೆ, ಸಮಾಜದ ಹಿನ್ನೆಲೆಗಳನ್ನು ಕಾಣಬಹುದು. ಪ್ರಮುಖವಾಗಿ ಆದಿವಾಸಿಗಳು ದಟ್ಟ ಅರಣ್ಯ, ಬೆಟ್ಟ ಗುಡ್ಡ, ಪರ್ವತ, ಸುಂದರವಾದ ಪರಿಸರ ಮತ್ತು ಜೀವಿಸಲಿಕ್ಕೆ ಯೋಗ್ಯವಾದಂತಹ ಸ್ಥಳ, ಜೀವನ ಮುಂದುವರಿಕೆಗೆ ಉತ್ಪನ್ನಾಂಗಗಳನ್ನು ಅವಲಂಬಿಸಿಕೊಂಡು ಆಯಾ ಪ್ರದೇಶಗಳಲ್ಲಿ ವಾಸಿಸುವುದು ನಮ್ಮ ಭವ್ಯ ಭಾರತದಲ್ಲಿ ಕಂಡುಬರುತ್ತಿದೆ. ಭಾರತದ ಪ್ರಮುಖ ಬುಡಕಟ್ಟಗಳನ್ನು ೩ ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಪ್ರಥಮವಾಗಿ ಉತ್ತರ ಮತ್ತು ಉತ್ತರ ಪೂರ್ವವಲಯ, ಈ ವಲಯದಲ್ಲಿ ಹಿಮಾಲಯ ಗಿರಿ ಕಂದರ ಶ್ರೇಣಿಯಲ್ಲಿ ಹಲವಾರು ಬುಡಕಟ್ಟುಗಳನ್ನು ನೋಡಬಹದು. ಅದರಲ್ಲಿ ಪ್ರಮುಖವಾಗಿ ನಾಗ ಬುಡಕಟ್ಟಿನ ಕೋನಾಕ್, ರೆಂಗ್ಮಾ, ಇತರೆ ಕಂಡು ಬರುತ್ತಿವೆ. ಅದೇ ರೀತಿ ೨ನೆಯ ವಲಯಗಳಲ್ಲಿ ಕೇಂದ್ರೀಯ  ಅಥವಾ ಮಧ್ಯವಲಯ, ಈ ವಲಯವು ಪಶ್ಚಿಮ ಬಂಗಾಳ, ಒರಿಸ್ಸಾ, ಬಿಹಾರ್, ಮಹಾರಾಷ್ಟ್ರ, ಮಧ್ಯಪ್ರದೇಶ ಮುಂತಾದ ಪ್ರದೇಶಗಳನ್ನೊಳಗೊಂಡು ಪ್ರಮುಖ ವಾಗಿ ಸಂತಾಳ, ಮುಂಡ ಇತ್ಯಾದಿ ಪ್ರಮುಖ ಬುಡಕಟ್ಟುಗಳು ಕಂಡು ಬರುತ್ತವೆ. ೩ನೆಯ ದಕ್ಷಿಣ ವಲಯದಲ್ಲಿ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ರಾಜ್ಯಗಳಲ್ಲಿ ಚೆಂಚು, ಗೊಂಡ, ನಾಯರ್, ಸೋಲಿಗ, ಕಾಡು ಕುರುಬ, ಜೇನುಕುರುಬ ಮುಂತಾದುವು ಕಂಡು ಬರುತ್ತಿವೆ.

ಕರ್ನಾಟಕದಲ್ಲಿ ಬರುವಂತಹ ಬುಡಕಟ್ಟುಗಳು ದಕ್ಷಿಣ ವಲಯಕ್ಕೆ ಸೇರ್ಪಡೆಗೊಂಡಿವೆ. ರಾಜ್ಯದಲ್ಲಿರುವ ೫೦ ಬುಡಕಟ್ಟುಗಳಲ್ಲಿ ಬೇಟೆ ವೃತ್ತಿಯನ್ನೇ ಪ್ರಾಚೀನತೆಯಿಂದ ತನ್ನ ಜೀವಾಳವನ್ನಾಗಿ ರೂಢಿಸಿಕೊಂಡು ಜೀವಿಸುತ್ತಿರುವ ಬೇಡ ಬುಡಕಟ್ಟು ರಾಜ್ಯದಲ್ಲಿ ಬಹುಸಂಖ್ಯಾತವಾಗಿದೆ. ಪ್ರಮುಖವಾಗಿ ಚಿತ್ರದುರ್ಗ, ಬಳ್ಳಾರಿ, ಧಾರವಾಡ, ರಾಯಚೂರು, ಗುಲ್ಬರ್ಗಾ ಜಿಲ್ಲೆಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಕಂಡು ಬರುತ್ತಾರೆ. ಉಳಿದಂತೆ ಬೆಳಗಾಂ, ಮೈಸೂರು, ಕೋಲಾರ, ತುಮಕೂರು, ಬೆಂಗಳೂರು ಇನ್ನುಳಿದ ಜಿಲ್ಲೆಗಳಲ್ಲಿ ಸಾಮಾನ್ಯ ವಾಗಿದ್ದಾರೆ. ಈ ಬುಡಕಟ್ಟು ಸಮುದಾಯದವರನ್ನು ಭೌಗೋಳಿಕ ಪ್ರದೇಶಗಳಿಗೆ ಅನುಗುಣ ವಾಗಿ ಹೆಸರಿಸಲ್ಪಟ್ಟಿದ್ದಾರೆ. ಜೊತೆಗೆ ಒಂದೊಂದು ಪ್ರದೇಶದಲ್ಲಿ ವೃತ್ತಿಗೆ ಅನುಗುಣವಾಗಿ, ಇನ್ನೊಂದು ಪ್ರದೇಶದಲ್ಲಿ ವಂಶಸ್ಥರ ಅನುಗುಣವಾಗಿ ಗುರುತಿಸಲ್ಪಡುತ್ತಿದ್ದಾರೆ. ಉದಾಹರಣೆಗೆ ಚಿತ್ರದುರ್ಗವನ್ನಾಳಿದ ನಾಯಕ ಪಾಳೆಯಗಾರರು, ಸುರುಪುರದ ಅರಸರು, ಇತ್ಯಾದಿ.

ಈ ಸಮುದಾಯದ ಆದರಣೀಯ ವ್ಯಕ್ತಿಯಾದ ಏಕಲವ್ಯನು ನಿಷಾದ ರಾಜನ ಮಗನಾಗಿದ್ದ ಎಂಬ ಸಂಗತಿ ಪ್ರಸಿದ್ಧವಾದುದು. ಅಲ್ಲದೆ ದ್ರೋಣಾಚಾರ್ಯರ ನೆಚ್ಚಿನ ಶಿಷ್ಯನಾಗಿ ಅಪೂರ್ವ ಮಾನವತಾ ಗುಣಗಳನ್ನು ರೂಢಿಸಿಕೊಂಡು ಜಗದ್ವಿಖ್ಯಾತನಾದ ಬಗ್ಗೆ ಮಹಾಭಾರತದಲ್ಲಿನ ಅನೇಕ ಉಲ್ಲೇಖಗಳು ದೃಢಪಡಿಸುತ್ತವೆ. ಇದಲ್ಲದೆ ಶಿವನ ಇಪ್ಪತ್ತೈದು ಲೀಲೆಗಳಲ್ಲಿ ಒಂದಾದ ಕಿರಾತರುದ್ರಲೀಲೆಯ ಪ್ರಸಂಗವು ಮಹಾಭಾರತದ ಅರಣ್ಯಕ ಪರ್ವದಲ್ಲಿ ವಿಸ್ತಾರವಾಗಿ ಹೇಳಲ್ಪಟ್ಟಿದೆ.

ಕನ್ನಡದ ಪ್ರಾಚೀನ ಕೃತಿ ವಡ್ಡಾರಾಧನೆಯಲ್ಲಿ ಈ ಸಮುದಾಯದ ಉಲ್ಲೇಖಗಳು ದೊರೆಯುತ್ತವೆ. ಇವುಗಳಲ್ಲಿ “ಚೆಲಾತಪುತ್ರ”ನ  ಕಥೆ ಒಂದು. ಚೆಲಾತಪುತ್ರ ಎಂಬುದು ಸಂಸ್ಕೃತ ಕಿರಾತಪುತ್ರ ಎಂಬುದರ ಪ್ರಾಕೃತ ರೂಪವೆಂದು ವಿದ್ವಾಂಸರು ನಿರ್ಧರಿಸಿದ್ದಾರೆ. ಅದೇ ಗ್ರಂಥದ ವಿದ್ಯುಚ್ಚೋರನೆಂಬ ಕಥೆಯಲ್ಲಿ ಮದಂಡನೆಂಬ ತಳವಾರನ ಉಲ್ಲೇಖವಿದೆ. ತಳವಾರ ಬೇಡ ಜನಾಂಗದ ಒಂದು ಉಪ ಪಂಗಡ ಆಗಿದೆ. ಇಲ್ಲಿ ತಳವಾರ ಎಂದರೆ ನಗರ ರಕ್ಷಕನಾದ ಅಧಿಕಾರಿ. ಇದೇ ರೀತಿ ಸುಕುಮಾರಸ್ವಾಮಿಯ ಕಥೆಯಲ್ಲಿ ಬರುವ “ಸುಧಾಮೆಯ” ಉಪಕಥೆಯಲ್ಲಿಯ ತಳವಾರನ ಉಲ್ಲೇಖವಿದೆ. ಇದರಿಂದ ಕನ್ನಡ ವಡ್ಡರಾಧನೆಗೆ ಮೂಲ ಗ್ರಂಥವಾಗಿರುವ ಭಗವತಿ ಆರಾಧನೆಯ ಕಾಲಕ್ಕಾಗಲೇ ಈ ಸಮುದಾಯ ನಗರ ಜೀವನದಲ್ಲಿ ಮಿಳಿತವಾಗಿತ್ತು.

ಕರ್ನಾಟಕದಲ್ಲಿ ಶಾಸನಗಳನ್ನು ಅವಲೋಕನ ಮಾಡಿದಾಗ ಸೈನಿಕ ವೃತ್ತಿಯಲ್ಲಿಯೇ ಬಹುಮುಖ್ಯರಾಗಿದ್ದರು ಎಂಬುದಕ್ಕೆ ಹಾಗೂ ಏಳನೆಯ ಶತಮಾನದಿಂದಲೇ ಇವರ ಪ್ರತ್ಯೇಕ ರಾಜ್ಯಗಳೇ ಇದ್ದವೆಂದು “ಗದ್ದೆಮನೆ ಶಾಸನದಿಂದ” ತಿಳಿದು ಬರುತ್ತದೆ. ಆ ಶಾಸನದಲ್ಲಿ ಒಂದು ಉಲ್ಲೇಖ ಈ ರೀತಿ ಇದೆ. “ಸ್ವಸ್ತೀಶ್ರೀ ಶೀಲ ಆದಿತ್ಯನ ದಿಶಾಮನ್ ಭಾಗವಾನ್ ಅಗ್ಗಳ ಕಣ್ಣನ್ ಪೇರಾಳ್ಳವರ ಪೆಟ್ಟಣಿ ಸತ್ಯಾಂಶನ ಅಚ್ವಳ್ವ ಭಟನ್ ಬೆದರೆ ಮಹೇನ್ದ್ರನ್ ಬೇಡರಾಯರ್, ಮಲಪರ್ ಕಾಳಗದುಳೆವಿರಿದು, ಸ್ವರ್ಗಾಲಯತ್ನ ರಿದನ್” ಎಂದು ಬೇಡರ ವೀರವೃತ್ತಿಯನ್ನು ವರ್ಣಿಸಲಾಗಿದೆ. ಇವರ ಬೇಟೆಗಾರಿಕೆಯನ್ನು ಮಾತ್ರ ಕೆಲ ಗ್ರಂಥಗಳು ಉಲ್ಲೇಖಿಸುತ್ತವೆ.

ಈ ಶಾಸನದಲ್ಲಿರುವಂತೆ ಬೇಡರಾಯ ಎಂದರೆ ಬೇಡರ ರಾಜನ ಸ್ಪಷ್ಟ ನಿರ್ದೇಶನವಿದೆ. ತರುವಾಯ ರಾಜಮನೆತನಗಳಲ್ಲಿ ಕಂಪಲಿ ರಾಜ್ಯದ ಕಂಪಿಲರಾಯ ಹಾಗೂ ಇವನ ಮಗ ಕುಮಾರರಾಮನೂ ಕೂಡ ಬೇಡ ಜನಾಂಗಕ್ಕೆ ಸಂಬಂಧಿಸಿದವರಾಗಿದ್ದಾರೆ. ಅಲ್ಲದೆ ಅನೇಕ ಪಾಳೆಯಗಾರರೂ ಈ ಜನಾಂಗದಲ್ಲಿದ್ದರೆಂಬುದಕ್ಕೆ ನಿದರ್ಶನಗಳುಂಟು. ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಸೇನೆಯ ಗೌರವಾನ್ವಿತ ಸ್ಥಾನಗಳಲ್ಲಿ ಹೆಚ್ಚಿನ ಹುದ್ದೆಗಳನ್ನು ಬೇಡ ಜನಾಂಗದವರು ಹೊಂದಿದ್ದರು. ನಂತರ ಹೈದರಾಲಿ, ಟಿಪ್ಪುಸುಲ್ತಾನರ ಕಾಲಕ್ಕೆ ಸೈನ್ಯದ ಮುಂಚೂಣಿಯ ನಾಯಕರಾಗಿ ಸೇವೆ ಸಲ್ಲಿಸಿದರು. ವಿಜಯನಗರದ ಪತನಾನಂತರ ಕರ್ನಾಟಕದ ಪ್ರಮುಖ ಪಾಳೆಯಗಾರರಾಗಿ ಚಿತ್ರದುರ್ಗದಲ್ಲಿಯೇ ಆಳ್ವಿಕೆ ನಡೆಸಿದರು. ತದನಂತರದಲ್ಲಿ ವೃತ್ತಿಯ ವೈವಿಧ್ಯತೆಯಿಂದಾಗಿ ಮತ್ತು ಇತರೆ ಕಾರಣಗಳಿಂದಾಗಿ ಅನೇಕ ಹೊಸ ಹೆಸರುಗಳು ರೂಢಿಗೆ ಬಂದವು. ಕಾಡುಗಳಲ್ಲಿದ್ದು ಪಶುಪಾಲನೆಯನ್ನು ಮುಖ್ಯ ವೃತ್ತಿಯನ್ನಾಗಿ ಅವಲಂಬಿಸಿದವರನ್ನು ಕಾಡು ಸಂಚರೆಂದು, ಮೂಗನಾಯಕನ ಅನುಯಾಯಿಗಳು ನಾಯಕರೆಂದು, ರಾಜಕೀಯ ಅಧಿಕಾರವನ್ನು ಸ್ಥಾಪಿಸಿಕೊಂಡವರನ್ನು “ಪಾಳೆಯಗಾರ” ಅಥವಾ ದೊರೆಗಳೆಂದು, ಪಾಳೆಗಾರರ ಅಂತರಂಗದ ಸೇವಕರಂತಿದ್ದವರು ರಾಜಪರಿವಾರದವರೆಂದೂ ಊರಿನ ಕಾರ‍್ಯಕ್ಕೆ ತೊಡಗಿಸಿಕೊಂಡುವರು ತಳವಾರರೆಂದು ಕರೆದುಕೊಂಡಿದ್ದಾರೆ.

* * *