ಮಾನವ ಸಮಾಜವು ಹಲವಾರು ಹಂತಗಳಲ್ಲಿ ಬೆಳೆದು ಬಂದಿದೆ. ಮೊದಲನೆ ಹಂತದಲ್ಲಿ (hunting and gathering stage) ಮಾನವ ತನ್ನ ದಿನನಿತ್ಯದ ಆಹಾರಕ್ಕೋಸ್ಕರ ಗುಡ್ಡಗಾಡು ಪ್ರದೇಶಗಳಲ್ಲಿದ್ದು ಪ್ರಾಣಿ, ಪಕ್ಷಿ ಮತ್ತು ಮೀನನ್ನು ಬೇಟೆಯಾಡಿ ಅಲೆಮಾರಿ ಯಾಗಿ ಜೀವಿಸುತ್ತಿದ್ದನು. ಎರಡನೆ ಹಂತದಲ್ಲಿ (pastroral stage) ಅವನು ಗುಡ್ಡಗಾಡು ಪ್ರದೇಶ ಬಿಟ್ಟು ಹುಲ್ಲುಗಾವಲುಗಳನ್ನು ಅರಸಿಕೊಂಡು ದನಕರುಗಳನ್ನು ಸಾಕಲಾರಂಭಿಸಿದನು. ಮೂರನೇ ಹಂತದಲ್ಲಿ (farming stage) ತನ್ನ ತಿರುಗಾಟವನ್ನು ನಿಲ್ಲಿಸಿ ವ್ಯವಸಾಯವನ್ನು ದನಕರುಗಳ ಸಹಾಯದಿಂದ ಮಾಡಲಾರಂಭಿಸಿ ಒಂದು ಕಡೆ ಸ್ಥಿರವಾಗಿ ನಿಲ್ಲಲಾರಂಭಿಸಿದ. ಅಂದಿನಿಂದ ಮಾನವ ಸಮಾಜದಲ್ಲಿ ಹಲವಾರು ಮಾರ್ಪಾಡುಗಳು ಉಂಟಾಗಲಾರಂಭಿಸಿದವು. ಅವುಗಳಲ್ಲಿ ಮುಖ್ಯವಾದವುಗಳೆಂದರೆ, ವಿವಿಧ ಕಸುಬುಗಳ ಉಗಮ. ಮಾನವ ಅಲೆಮಾರಿ ಯಾಗಿದ್ದಾಗ ಅವನ ಅವಶ್ಯಕತೆಗಳು ಅಥವಾ ಬೇಡಿಕೆಗಳು ಬಹಳ ಕಡಿಮೆಯಾಗಿದ್ದವು. ಆದರೆ ಅವನು ಒಂದು ಕಡೆ ನಿಂತಾಗ ಹಲವಾರು ವಸ್ತುಗಳ ಅವಶ್ಯಕತೆ ಹೆಚ್ಚಾಯಿತು. ಈ ವಸ್ತುಗಳನ್ನು ತಾನೊಬ್ಬನೆ ಉತ್ಪಾದಿಸಲಿಕ್ಕಾಗಲಿಲ್ಲ. ಅದಕ್ಕಾಗಿ ಅವನು ಹಲವರ ಸಹಕಾರದೊಂದಿಗೆ ಬಾಳಬೇಕಾಗಿ ಬಂದಿತು. ಹೀಗಾಗಿ ಸಮಾಜದಲ್ಲಿ ಹಲವಾರು ಕಸುಬುಗಳು ಅಥವಾ ವೃತ್ತಿಗಳು ಹುಟ್ಟಿಕೊಂಡವು. ಪ್ರಾಚೀನ ಸಮಾಜವು ಮೂಲತಃ ವೃತ್ತಿ ಆಧಾರಿತ ಜಾತಿವ್ಯವಸ್ಥೆಯಿಂದ ಕೂಡಿತ್ತು. ಕಾಲಕ್ರಮೇಣ ಪ್ರತಿ ವೃತ್ತಿಯಲ್ಲೂ ಹವಾಮಾನದ ಬದಲಾವಣೆಯಿಂದಾಗಿ ತಾಂತ್ರಿಕ ವೈಶಿಷ್ಟ್ಯಗಳು ಹುಟ್ಟಿಕೊಂಡವು. ಇದರಿಂದಾಗಿ ಹಲವಾರು ಉಪಜಾತಿಗಳು ಹುಟ್ಟಿಕೊಂಡವು. ಇಂತಹುಗಳಲ್ಲಿ ಬೇಡ ಜನಾಂಗವೂ ಒಂದು.

ಬೇಡ ಜನಾಂಗದ ಬಗ್ಗೆ ಕೆಲವೇ ಕೆಲವು ಸಂಶೋಧನೆಗಳು ನಡೆದಿವೆ.

[1] ಅವುಗಳಲ್ಲಿ ಸಾಮಾಜಿಕ ಹೋರಾಟಗಳು, ಧಾರ್ಮಿಕ ಆಚರಣೆಗಳು ಮತ್ತು ವಿವಿಧ ಗುಂಪುಗಳ ಬಗ್ಗೆ ಕಾಣಬಹುದು. ಆದರೆ ಈ ಜನಾಂಗ ಇತಿಹಾಸ ಕಾಲದಲ್ಲಿ ಹೇಗೆ ಬೆಳೆದುಬಂತೆಂಬುದನ್ನು ಸ್ಪಷ್ಟವಾಗಿ ತಿಳಿಸುವುದಿಲ್ಲ. ಆದ್ದರಿಂದ ಈ ಲೇಖನದಲ್ಲಿ ಬೇಡ ಜನಾಂಗವು ಕಾಲಾನಂತರ ದಲ್ಲಿ ಮೈಸೂರು ಜಿಲ್ಲೆ ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿಯ ಕ್ರಿ.ಶ. ೧೩೨೪ರ ಶಾಸನವು[2] ಬೇಡಗಂಪಣ ರಾಯಣ್ಣನಾಯಕನು ಕುನ್ನಪ್ಪನಾಗರ ಸೀಮೆಯಿಂದ ಹೊಯ್ಸಳ ದೊರೆ ಮುಮ್ಮಡಿ ಬಲ್ಲಾಳನ ಕಾಲದಲ್ಲಿ ಆಳುತ್ತಿದ್ದುದನ್ನು ತಿಳಿಸುತ್ತದೆ. ಹಂಪಿ ಪರಿಸರದ ರಘುನಾಥ ದೇವಾಲಯದ ಬಳಿಯಿರುವ ಶಾಸನವು[3] ಬೇಟೆಯ ನಾಯಕನನ್ನು ಉಲ್ಲೇಖಿ ಸುತ್ತದೆ. ಕ್ರಿ.ಶ. ೧೩೮೦ರ ಅಲ್ಲಿಯ ಮತ್ತೊಂದು ಶಾಸನವು[4] ಶ್ರೀ ರಪ್ರತಾಪ ಹರಿಹರ ಮಹಾರಾಯನ ಮನೆಯ ಎಡವಂಕದ ಬೇಟೆಕಾರ ಮಲಗೆಯನಾಯ್ಕನ ಮಗ ಬದ್ದೆನಾಯ್ಕನು ಬೇಟೆಗಾರರ ಹೆಬ್ಬಾಗಿಲು ಮೂಡಣ ದಿಕ್ಕಿನ ಒರತೆಯ ಮೈಲಾರ ದೇವರ ಪ್ರತಿಷ್ಟೆ ಮಾಡಿದ್ದನ್ನು ತಿಳಿಸುತ್ತದೆ. ಕ್ರಿ.ಶ. ೧೪೧೩ರ ಮೈಸೂರು ಜಿಲ್ಲೆ ಚಾಮರಾಜ ನಗರ ತಾಲ್ಲೂಕಿನ ಮೂಡಲಗ್ರಹಾರದ ಶಾಸನವು[5] ಬಿಲ್ಲಗಾವುಂಡನು ಉಮ್ಮತ್ತೂರಿನ ಬಳಿ ಅಗ್ರಹಾರ  ವೊಂದನ್ನು ಸ್ಥಾಪಿಸಿದುದನ್ನು ತಿಳಿಸುತ್ತದೆ. ಅದೇ ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ಕ್ರಿ.ಶ. ೧೫೫೭ರ ಗಳಿಗೆಕೆರೆ ಶಾಸನವು[6] ಹೊಳೇನರಸೀಪುರದ ದೊರೆ ವೆಂಕಟಪ್ಪನಾಯಕನು ಹಂಪಾಪುರವನ್ನು ಅವನ ತಾಯಿಯ ಪುಣ್ಯಕ್ಕೋಸ್ಕರ ರಾಮಪುರ ಎಂಬ ಅಗ್ರಹಾರವಾಗಿ ಮಾಡಿ ಗಳಿಗೆಕೆರೆಯನ್ನು ವಿಠ್ಠಲಭಟ್ಟರಿಗೆ ಅಲ್ಲಿಯ ಬೇಟೆ ಮತ್ತು ಬೇಟೆಗಾರರ ಸುಂಕದಿಂದ ಬಂದ ಆದಾಯವನ್ನು ಸರ್ವಮಾನ್ಯವಾಗಿ ಬಿಟ್ಟಿದ್ದನ್ನು ತಿಳಿಸುತ್ತದೆ.

ಈ ಮೇಲಿನ ಶಾಸನಗಳಿಂದ ಮುಖ್ಯವಾಗಿ ತಿಳಿದುಬರುವುದೇನೆಂದರೆ, ಕ್ರಿ.ಶ. ೭ನೇ ಶತಮಾನದಿಂದ ಕ್ರಿ.ಶ. ೬ನೇ ಶತಮಾನದವರೆಗೆ ಬಾದಾಮಿ ಚಾಲುಕ್ಯರ ಕಾಲದಿಂದ ವಿಜಯನಗರದ ಕಾಲದವರೆಗೆ ಈಗಿನ ಕರ್ನಾಟಕದುದ್ದಕ್ಕೂ ಬೇಡರ ವೃತ್ತಿ ಬೇಟೆಯಾಗಿದ್ದು, ತಮ್ಮ ಬೇಟೆ ವೃತ್ತಿಯಲ್ಲಿ ಆಯುಧಗಳನ್ನು ಉಪಯೋಗಿಸುವುದರಲ್ಲಿ ಪರಿಣಿತರಾಗಿದ್ದರಿಂದ ಮತ್ತು ದೈಹಿಕ ಸಾಮರ್ಥ್ಯವನ್ನು ಹೊಂದಿದ್ದರಿಂದ ಆಳರಸರು ಇವರನ್ನು ತಮ್ಮ ರಾಜ್ಯವನ್ನು ಶತ್ರುಗಳಿಂದ ಕಾಪಾಡಲು ಮೊದಲಿಗೆ ಕೂಲಿಯ ಸಿಪಾಯಿಗಳಾಗಿ (mercenaries) ನಿಯೋಜಿಸಿಕೊಂಡು, ನಂತರ ಅವರ ಧೈರ್ಯ ಮತ್ತು ಸಾಹಸ ಪ್ರವೃತ್ತಿಯನ್ನು ಗಮನಿಸಿ ಅವರಿಗೆ ರಾಯ, ವೀರ, ಗಾವುಂಡ ಮತ್ತು ನಾಯಕ ಎಂಬ ಬಿರುದಗಳನ್ನು ನೀಡಿ, ನಂತರ ಸ್ಥಳೀಯ ಅಧಿಕಾರಿಗಳನ್ನಾಗಿ ಮಾಡಿರುವುದನ್ನು ಕಾಣಬಹುದು.

ಶಾಸನಗಳ ಜೊತೆಗೆ ಮೆಕೆಂಜಿಯವರು ಕ್ರಿ.ಶ. ೧೯ನೇ ಶತಮಾನದ ಆದಿಭಾಗದಲ್ಲಿ ಸಂಗ್ರಹಿಸಿದಂತಹ ಕೈಫಿಯತ್ತುಗಳು, ಸ್ಥಳಪುರಾಣಗಳು ಸಹ ಬೇಡ ಜನಾಂಗದ ಬಗ್ಗೆ ಸಾಕಷ್ಟು ಬೆಳಕು ಚೆಲ್ಲುತ್ತವೆ. ಉದಾಹರಣೆಗೆ, ಹತ್ತಿ ಬೆಳಗಲ್ಲು ಕೈಫಿಯತ್ತು[7] ಬೇಡರು ಮಾಡುತ್ತಿದ್ದ ಕೆಲಸ ಮತ್ತು ಅವರು ಅಧಿಕಾರಕ್ಕೆ ಬರಲು ನೆರವಾದ ಅಂಶಗಳನ್ನು ತಿಳಿಸುತ್ತದೆ. ಇದರ ಪ್ರಕಾರ ಬೆಳಕಲ್ಲುಗುಡ್ಡದಲ್ಲಿ ‘ಬೇಡರು ಪ್ರಾಬಲ್ಯ ಆಗಲಿಕ್ಕೆ ಕಾರಣ ವಿಜಯನಗರವು  ತುರುಕರಿಂದ ಹಾಳಾದ ಮೇಲೆ ಈ ಬ್ಯಾಡರು ಕೋಟೆ ಕಟ್ಟಿಕೊಂಡರು. ಈ ಬ್ಯಾಡರು ೧೫ ಗ್ರಾಮಕ್ಕೆ ಕಾವಲಿ ತಳವಾರಿಕೆ ಮಾಡಿಕೊಂಡು ಅಧಿಕಾರಯಿವರೆ ಮಾಡಿಕೊಂಡು, ದಿವಾಣಕ್ಕೆ ಹಣ ಕೊಡುತ್ತಾಯಿದ್ದರು…. ಯೀ ದಿನದಲ್ಲು ಕಾವಲ ಸೋಮೇಳನಾಯಕನು ಕಾವಲ ಮಾಡಿಕೊಂಡಿಯಿದ್ದನು… ಕಾವಲಿ ಬುಚ್ಚಪ್ಪನಾಯಕನ ಮಗ ಚಿಕ್ಕ ಸೋಮೆಳನಾಯಕ ಕಾವಲಿ ಮಾಡಿಕೊಂಡು ಯಿದ್ದನು….’ ಬಳ್ಳಾರಿ ತಾಲ್ಲೂಕಿನ ಕುರುಗೋಡಿನ ಕೈಫಿಯತ್ತು[8] ಬೇಡರಿಗು ಮತ್ತು ಕುರುಬರಿಗೂ ಇದ್ದ ವೈಷಮ್ಯವನ್ನು ತಿಳಿಸುತ್ತದೆ. ಇದೇ ತಾಲ್ಲೂಕಿನ ಭಟ್ಟರಹಳ್ಳಿ ಕೈಫಿಯತ್ತು[9] ಬೇಡರ ಕಸುಬು ಮತ್ತು ಸಾಮಗ್ರಿಗಳ ಮೇಲೆ ಬೆಳಕು ಚೆಲ್ಲುತ್ತದೆ. ಇದರ ಪ್ರಕಾರ ‘ಕೆಲಮಂದಿ ಬ್ಯಾಡರ ನಾಯಕರು ನಾಯಿ, ಬಡಿಕೋಲು, ತಲೆಮೇಲೆಗಂಟು, ಕೈಯಲ್ಲಿ ಡ್ಯಾಗಿ ತೆಗೆದುಕೊಂಡು ಹೋದರು. ಕೈಯಲ್ಲಿ ಹಕ್ಕಿಪಂಜರ ಸಹಾ ತೆಗೆದುಕೊಂಡು ಹೋದರು. ಬಲೆಗಳು ಸಹ. ಅವರವರ ಬೇಟೆಗಾರ್ರು ಅವರ ಸಾಮಾನು ತೆಗೆದುಕೊಂಡು ಹೋದರು…..’

ಹೊಳೆಹೊನ್ನೂರು ಕೈಫಿಯತ್ತು[10] ಬೇಡರ ಹನುಮಪ್ಪನಾಯಕನು ಹೇಗೆ ಸಂತೆಬೆನ್ನೂರಿನ ಅಧಿಪತಿಯಾದದ್ದನ್ನು ತಿಳಿಸುತ್ತದೆ. ಅಂತಾಪುರದ ಕೈಫಿಯತ್ತು[11] ಬೇಡರು ಗುಡಿಕೋಟೆ, ಜರಿಮಾಲಿ, ಬಾಣಾವರ ಪ್ರದೇಶಗಳಲ್ಲಿ ಪ್ರಬಲರಾದದ್ದನ್ನು ತಿಳಿಸುತ್ತದೆ. ಅರಿಕುಟಾರದ ಉಮ್ಮತ್ತೂರು ಕೈಫಿಯತ್ತು[12] ರಭದ್ರನಾಯಕನು ಬೇಟೆ ಮಾರ್ಗವಾಗಿ ನಾಯಿ ಕಟ್ಟಿ ಕೊಂಡು ಬಂದು ಬೇಡರಪುರ ಗ್ರಾಮದಲ್ಲಿ ನೆಲೆಸಿದ್ದನ್ನು ತಿಳಿಸುತ್ತದೆ. ತಲಕಾಡಿನ ಎರಡು ಕೈಫಿಯತ್ತುಗಳು[13] ಗಂಗರ ರಾಜಧಾನಿಯಾದ ತಲಕಾಡನ್ನು ಹೇಗೆ ಇಬ್ಬರು ಬೇಡರಾದ ತಲ ಮತ್ತು ಕಾಡ ಎಂಬುವರು ಕಟ್ಟಿದ್ದರೆಂಬುದನ್ನು ತಿಳಿಸುತ್ತದೆ. ಇದರ ಪ್ರಕಾರ ‘…ಯೀಶ್ವರಗೆ ಪೂಜೆಯನ್ನು ಮಾಡಿಕೊಂಡು ಇರಲಾಗಿ, ತಲ ಕಾಡ ಯೆಂಬ ಯಿಬ್ಬರು ಕಿರಾತರು ಬೇಟೆಗೋಸ್ಕರ ಬಂದಂತವರಾಗಿ ಯೀ ಗಜಗಳು ಹೊರಟುಹೋದ ಬಳಿಕ ಕೊಡಲಿಯಿಂದ ಆ ಮರವನ್ನು ಭೇದಿಸಿದಲ್ಲಿ ಸ್ವಾಮಿ ಶಿರಸ್ಸಿನ ಮೇಲೆ ಪೆಟ್ಟು ಬೀಳಲಾಗಿ ರಕ್ತಪ್ರಹಾರವಾಗಲು ಆ ಕಿರಾತಕರು ಮೂರ್ಚಿತರಾಗಲು… ತಲ ಕಾಡ ಎಂಬ ಯಿಬ್ಬರು ಬೇಡರಿಗೆ ಸಾಮ್ರಾಜ್ಯ ಪದವಿಯನ್ನು ಕೊಟ್ಟು ಈ ಕ್ಷೇತ್ರವು ನಿಮ್ಮ ಹೆಸರಿನಿಂದ ತಲಕಾಡು ಎಂಬ ನಾಮಧೇಯವುಳ್ಳದ್ದಾಗಲಿ ಎಂದು ಅಪ್ಪಣೆಕೊಟ್ಟರು….’

ಈ ಕೈಫಿಯತ್ತುಗಳಿಂದ ತಿಳಿದುಬರುವುದೇನೆಂದರೆ, ಬೇಡರ ಕಸುಬು ಬೇಟೆಯಾಗಿದ್ದು, ಬೇಟೆಗಾಗಿ ನಾಯಿ, ಬಲೆ, ಪಂಜರ, ಕೊಡಲಿ ಮುಂತಾದ ಆಯುಧಗಳನ್ನು ಹೊಂದಿದ್ದರು. ಬೇಡರು ಬೇಟೆಗಾರರು ವಿಜಯನಗರದ ಕಾಲದಲ್ಲಿ ಮತ್ತು ಅದಕ್ಕೆ ಮುಂಚೆ ಆಳರಸರ ಸೇವೆಯಲ್ಲಿದ್ದು ಕೆಲವು ಸೈನಿಕ ಮತ್ತು ಆಡಳಿತ ಸ್ಥಾನಮಾನಗಳನ್ನು ಹೊಂದಿದ್ದರು. ಆದರೆ ಕ್ರಿ.ಶ. ೧೫೬೫ರ ತಾಳಿಕೋಟೆ ಯುದ್ಧದ ನಂತರ ವಿಜಯನಗರ ಸಾಮ್ರಾಜ್ಯವು ಹಾಳಾಗಲು, ಇವರು ತಮ್ಮ ಸ್ಥಳಗಳಲ್ಲಿ ಅಥವಾ ಪ್ರಾಂತ್ಯಗಳಲ್ಲಿ ಸ್ವತಂತ್ರ ರಾಜರಾಗಿ ತುಂಡರಸರು ಕರ್ನಾಟಕದ ಹಲವು ಭಾಗಗಳಲ್ಲಿ ಅಧಿಕಾರಕ್ಕೆ ಬಂದರು.

ಶಾಸನಗಳು ಬೇಡರು ಬೇಟೆಗಾರರು ವಾಸಿಸುತ್ತಿದ್ದ ಸ್ಥಳಗಳ ಬಗ್ಗೆ ಬೆಳಕು ಚೆಲ್ಲುತ್ತವೆ. ಉದಾಹರಣೆಗೆ, ಕ್ರಿ.ಶ. ೧೧೨೬-೨೭ರ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ಬ್ಯಾಡರಹಳ್ಳಿ ಶಾಸನವು[14] ಅಲ್ಲಿಯ ಬಮ್ಮಾರನು ಬೋಕಿಮಯ್ಯ ಎಂಬ ಶತ್ರುವನ್ನು ಇರಿದು ತುರುಗಳನ್ನು ಗೆದ್ದುಕೊಂಡು ಹೋದದ್ದನ್ನು ತಿಳಿಸುತ್ತದೆ. ಕ್ರಿ.ಶ. ೧೩೧೪ರ ಹಾಸನ ಜಿಲ್ಲೆ ಮತ್ತು ಅದೇ ತಾಲ್ಲೂಕಿನ ಬ್ಯಾಡರಹಳ್ಳಿ ಶಾಸನವು[15] ಗೊರೂರ ಅಗ್ರಹಾರಕ್ಕೆ ಬೇಡರಹಳ್ಳಿಯನ್ನು ದಾನವಾಗಿ ಕೊಟ್ಟಿದ್ದನ್ನು ಉಲ್ಲೇಖಿಸುತ್ತದೆ. ಅದೇ ಜಿಲ್ಲೆಯ ಹೊಳೇ ನರಸೀಪುರ ತಾಲ್ಲೂಕಿನ ಕ್ರಿ.ಶ. ೧೬೫೮ರ ಕಲ್ಲುಬ್ಯಾಡರಹಳ್ಳಿ ಶಾಸನವು[16] ರಂಗಪ್ಪನಾಯಕನ ಮಗ ನರಸಿಂಹನಾಯಕನು ನರಸಿಂಹಪುರಕ್ಕೆ ಸೇರಿದ ನರಸಿಂಹಸಮುದ್ರ ಬೇಡರಹಳ್ಳಿಯನ್ನು ಹರಿಪಂಡಿತನಿಗೆ ದಾನ ಮಾಡಿದ್ದನ್ನು ತಿಳಿಸುತ್ತದೆ. ಕ್ರಿ.ಶ. ೧೬೬೨ರ ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ಸೋಸಲೆ ಶಾಸನವು[17] ಬೇಲೂರಿಗೆ ಸಲ್ಲುವ ಜಾವಗಲ್ಲು ಸೀಮೆ ಯಲ್ಲಿದ್ದ ಬೇಡರಹಳ್ಳಿಯನ್ನು ಉಲ್ಲೇಖಿಸುತ್ತದೆ.

ಈ ಮೇಲಿನ ಶಾಸನಗಳಿಂದ ತಿಳಿದುಬರುವುದೇನೆಂದರೆ, ಬೇಡರಹಳ್ಳಿಗಳಲ್ಲಿ ಹೆಚ್ಚಾಗಿ ಬೇಡರೇ ಇದ್ದುದರಿಂದ ಅವರನ್ನು ಆಳರಸರು ತಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಶತ್ರುವಿನ ನೆಲ, ಜಲ, ಹೆಣ್ಣು ಮತ್ತು ದನಕರುಗಳನ್ನು ವಶಪಡಿಸಿಕೊಳ್ಳಲು ನಿಯೋಜಿಸಿಕೊಂಡಿದ್ದರು. ನಂತರ ಇವರ ಕುಲಕಸುಬಾದ ಬೇಟೆಯ ಮೇಲೆ ಆಳರಸರು ಸುಂಕವನ್ನು ವಿಧಿಸಿ ಅವರ ಚಟುವಟಿಕೆಗಳನ್ನು ನಿಧಾನವಾಗಿ ತಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಲಾರಂಭಿಸಿದರು. ಕಾಲಕ್ರಮೇಣ ಆಳರಸರಿಗೂ ಬ್ರಾಹ್ಮಣರಿಗೂ ಒಳ್ಳೆಯ ಸಂಪರ್ಕವುಂಟಾಗಲು ಬೇಟೆಗಾರರ ಕಸುಬಾದ ಬೇಟೆಯ ಮೇಲೆ ಸುಂಕವನ್ನು ವಿಧಿಸಿ ಅದರಿಂದ ಬಂದಂತಹ ಆದಾಯವನ್ನು ಬ್ರಾಹ್ಮಣರಿಗೆ ದಾನ ಮಾಡಲಾರಂಭಿಸಿದರು. ಬಹುಶಃ ಈ ಹಳ್ಳಿಗಳನ್ನು ಹೆಚ್ಚಾಗಿ ಬೇಟೆಗಾರರೇ ಕಟ್ಟಿಕೊಂಡು, ಅವರೇ ವಾಸವಿದ್ದು, ತದನಂತರ ಹಲವಾರು ಕಾರಣಗಳಿಂದ ಹಳ್ಳಿಗಳನ್ನು ಬಿಟ್ಟು ಹೋಗಿರುವ ನಿದರ್ಶನಗಳಿವೆ. ಹಾಗಾಗಿ ಈಗ ಕೆಲವು ಬೇಡರಹಳ್ಳಿಗಳಲ್ಲಿ ಈ ಜನಾಂಗವನ್ನು ಗುರುತಿಸುವುದಕ್ಕಾಗುವುದಿಲ್ಲ.

ಇದಲ್ಲದೆ ಶಾಸನಗಳು ಬೇಡ ಜನಾಂಗದ ಉಪ ಪಂಗಡಗಳಾದ ತಳವಾರರ ಬಗ್ಗೆಯೂ ಮಾಹಿತಿ ನೀಡುತ್ತವೆ. ಶಾಸನಗಳಲ್ಲಿ ಇವರನ್ನು ತಳಾರ, ತಲವಾರ, ತಳವಾರಿಕೆಯವರು ಮತ್ತು ಕಾವಲಿನವರು ಎಂದು ಉಲ್ಲೇಖಿಸಿವೆ. ತಳವಾರ ಎಂದರೆ ಒಂದು ಸ್ಥಳದ ವಾರುಸದಾರ. ತಳವಾರಿಕೆ ಎಂಬುದು ಅಧಿಕಾರದ ಸಂಕೇತ. ಕ್ರಿ.ಶ. ೧೦೧೮ರ ಕೊಪ್ಪಳ ಜಿಲ್ಲೆ ಮತ್ತು ತಾಲ್ಲೂಕಿನ ಹಲಗೇರಿ ಶಾಸನವು[18] ತಳಾರ ನಾಯಕ ಎರೆಯಮ್ಮನು ಬೆಣ್ಣೆಕಲ್ಲು ಸೀಮೆ ಯುದ್ಧದಲ್ಲಿ ಸತ್ತಾಗ ಅವರ ಸ್ಮರಣೆಗೋಸ್ಕರ ಸ್ಮಾರಕವಾಗಿ ರಗಲ್ಲು ನಿಲ್ಲಿಸಿದುದನ್ನು ತಿಳಿಸುತ್ತದೆ. ಆಂಧ್ರಪ್ರದೇಶದ ಮೆಹಬೂಬ್‌ನಗರ ಜಿಲ್ಲೆಯ ಆಲಂಪುರದ ಕ್ರಿ.ಶ. ೧೧೦೬ರ ಶಾಸನವು[19] ತಳಾರ ಬಮ್ಮೆನಾಯಕನ ಮಗಳಾದ ಸಾಕಮ್ಮ ಬ್ರಹ್ಮಪುರಿಗೆರೆಯ ಚಿನ್ನಮಾಧವ ದೇವರ ಜೀರ್ಣೋದ್ಧಾರಕ್ಕಾಗಿ ಸುವರ್ಣದ ಅಲಂಕಾರ ಮಾಡಿಸಿದ್ದನ್ನು ತಿಳಿಸುತ್ತದೆ. ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಚಿಕ್ಕಹನಸೋಗೆಯ ಕ್ರಿ.ಶ. ೧೨ನೇ ಶತಮಾನದ ಶಾಸನವು[20] ಹನಸೋಗೆಯಲ್ಲಿ ಹುಟ್ಟಿದ ಬಣ್ಣಜ್ಜನ ಮಗ ತಳವಾರ ಉತ್ತಜನು, ಗಾಳನವಾಡಿ ಹನಿಬ್ಬನಾಯಕರು ಕೋಳಿಯೂರ ಕೋಟೆಯನ್ನು ಮುತ್ತಿದಾಗ ಅವರೊಡನೆ ಹೋರಾಡಿ ಸತ್ತಿದ್ದನ್ನು ತಿಳಿಸುತ್ತದೆ. ಅದೇ ಜಿಲ್ಲೆಯ ಚಾಮರಾಜನಗರ ತಾಲ್ಲೂಕಿನ ಮಲೆಯೂರು ಗ್ರಾಮದ ಕ್ರಿ.ಶ. ೧೪೨೨ರ ಶಾಸನವು[21] ತಳವಾರಿಕೆಯಿಂದ ಬರುತ್ತಿದ್ದ ಸುಂಕವನ್ನು ತಿಳಿಸುತ್ತದೆ. ಕ್ರಿ.ಶ. ೧೫೫೬ರ ಕೊಪ್ಪಳ ಜಿಲ್ಲೆಯ ಗಂಗಾವತಿಯ ಶಾಸನವು ತಳವಾರ ಕೋಟೆ ಮತ್ತು ತಳವಾರ ಕಟ್ಟೆಯನ್ನು ಉಲ್ಲೇಖಿಸುತ್ತದೆ. ಕ್ರಿ.ಶ. ೧೪೬೫-೬೬ರ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಕಾರಬಯಲು ಗ್ರಾಮದ ಕ್ರಿ.ಶ. ೧೬ನೇ ಶತಮಾನದ ಶಾಸನವು[22] ಜಗದೇವರಾಯ ಒಡೆಯರು ತಳವಾರಿಕೆಯ ದಾಸಪ್ಪನಾಯಕರ ಮಗ ಚಿಕ್ಕರಸನಾಯಕರಿಗೆ ಕಾರಬಯಲು ಗ್ರಾಮವನ್ನು ದಂಡಿಗೆ ಉಂಬಳಿಯಾಗಿ ಕೊಟ್ಟಿದ್ದನ್ನು ಉಲ್ಲೇಖಿಸುತ್ತದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ಮಡಕಶಿರಾ ತಾಲ್ಲೂಕಿನ ಅಗಳಿ ಶಾಸನವು[23] ಕಾಚವೊಡೆಯನು ಅಗಳಿಯ ತಳವಾರಿಕೆಯನ್ನು ಹುಲಿಕುಂಟೆ ಚಂದ್ರನಾಯಕನ ಮಗ ತಳವಾರ ದೊಡ್ಡನಿಗೆ ಶಾಶ್ವತವಾಗಿ ಕೊಟ್ಟಿದ್ದನ್ನು ಉಲ್ಲೇಖಿಸುತ್ತದೆ. ಅದೇ ತಾಲ್ಲೂಕಿನ ಅಮರಾಂಪುರನ ರಗಲ್ಲು ಶಾಸನವು[24] ಕುರುಳೆನಾಯಕನ ಮಗ ಮುಂಡಿನ ಬೊಮ್ಮಯ್ಯನು ಹೋರಾಟ ಮಾಡಿ ಸತ್ತದ್ದನ್ನು ತಿಳಿಸುತ್ತದೆ. ಕ್ರಿ.ಶ. ೧೬೪೨ರ ಲಿಂಗಸ್ಗೂರು ತಾಲ್ಲೂಕು ಸುಲ್ತಾನಪುರ ಶಾಸನವು[25] ಮುದಗಲ್ಲು ಒಡೆಯನಾದ ರಾಘೋಸಿದೋಬಾಬಜಿ ಸಾಹೇಬನು ಮಸ್ಕಿಯ ಬಳಿಯಿರುವ ಹಿರೆಹಳ್ಳದ ಬದಿಯಲ್ಲಿ ಸುಲ್ತಾನ್‌ಪುರವನ್ನು ಕಟ್ಟಿ ದತ್ತಿಗಳನ್ನು ಬಿಟ್ಟಾಗ,ತಳವಾರ ಸಿರಮನಾಯಕನು ಶಾಸನವನ್ನು ಹಾಕಿಸಿದನೆಂದು ತಿಳಿಸುತ್ತದೆ.

ಈ ಮೇಲಿನ ಶಾಸನಗಳಿಂದ ತಿಳಿದುಬರುವುದೇನೆಂದರೆ, ಸಾಮಾನ್ಯವಾಗಿ ಈ ಜವಾಬ್ದಾರಿ ಯನ್ನು ಅಂದರೆ ಒಂದು ಸ್ಥಳದ ರಕ್ಷಣೆಯ ಹೊಣೆಯನ್ನು ಆಡಳಿತಗಾರರು ಬೇಟೆಯ ವೃತ್ತಿಯಲ್ಲಿ ಪರಿಣಿತಿಯನ್ನು ಮತ್ತು ಆಯುಧಗಳನ್ನು ಹೊಂದಿದ್ದರಿಂದ ಬೇಡರಿಗೆ ವಹಿಸಿ ಅವರಿಂದ ಕಂದಾಯವನ್ನು ಸಂಗ್ರಹಿಸುತ್ತಿದ್ದರು.

ಬೇಡ ಜನಾಂಗದ ಮತ್ತೊಂದು ಉಪ ಪಂಗಡವಾದ ಪರಿವಾರದವರ ಬಗ್ಗೆ ತಮಿಳು ಶಾಸನಗಳು ಬೆಳಕು ಬೀರುತ್ತವೆ. ಕನ್ನಡ ನಿಘಂಟಿನ ಪ್ರಕಾರ ಪರಿವಾರ ಎಂದರೆ ಸುತ್ತಲಿನ ಜನ. ಪರಿಚಾರಕ ಎಂದರೆ ಸೇವಕ. ಅಂದರೆ ಯಾರು ಆಳರಸರ ಸೇವೆಯಲ್ಲಿದ್ದರೋ ಅಂತಹವರನ್ನು ಪರಿವಾರ ರಾಜಪರಿವಾರದವರೆಂದು ಕರೆಯಲಾಗಿದೆ. ಎಡ್ಗರ್ ಥರ್ಸ್ಟನ್ ರವರು ಕ್ರಿ.ಶ. ೧೮೯೧ರ ಮದ್ರಾಸ್ ಜನಗಣತಿ ಆಧಾರದ ಮೇಲೆ ಇವರು ಮೂಲತಃ ತೆಲುಗಿನವರಾಗಿದ್ದು, ಬೇಟೆಯು ವಂಶಪರಂಪರೆಯಾದ ಕುಲಕಸುಬೆಂದು ಅಭಿಪ್ರಾಯ ಪಟ್ಟಿದ್ದಾರೆ. ಮುಂದುವರಿದು ಕ್ರಿ.ಶ. ೧೯೦೧ರ ಜನಗಣತಿಯ ಆಧಾರದ ಮೇಲೆ ಇವರು ಸಹ ಪಲ್ಲಕ್ಕಿ ಅಥವಾ ಮೇಣಿಯನ್ನು ಹೊರುವ ಕೆಲಸದಲ್ಲಿ ನಿಯೋಜಿತರಾಗಿದ್ದು, ಬೋಯಿ ಅಥವಾ ಪರಿವಾರದವರೆಂದು ಕರೆದಿದ್ದಾರೆ.[26] ದಕ್ಷಿಣ ಭಾರತದ ಪ್ರಸಿದ್ಧ ಇತಿಹಾಸಕಾರ ಕೆ.ಎ. ನೀಲಕಂಠಶಾಸ್ತ್ರಿಯವರು ಇವರ ಬಗ್ಗೆ ಹೆಚ್ಚು ಬೆಳಕು ಚೆಲ್ಲಿದ್ದಾರೆ. ಇವರು ತಮ್ಮ ಪುಸ್ತಕ ‘ದಿ ಚೋಳಾಸ್’ದಲ್ಲಿ[27] ಚೋಳ ರಾಜರಾಜನ ಮನೆಯ ಸಿಬ್ಬಂದಿಯು (Royal household) ಹಲವಾರು ರೀತಿಯ ಸೇವಕರನ್ನು ಒಳಗೊಂಡಿದ್ದು, ಅದರಲ್ಲಿ ರಾಜನ ಪ್ರಮುಖ ಅಂಗರಕ್ಷಕರಾಗಿದ್ದವರನ್ನು ಪರಿವಾರದವರೆಂದು ತಂಜಾವೂರಿನ ಶಾಸನವನ್ನಾಧರಿಸಿ ಹೇಳಿದ್ದಾರೆ. ಈ ಶಾಸನವು ಒಂದನೆಯ ರಾಜರಾಜನ (ಕ್ರಿ.ಶ. ೯೮೫-೧೦೧೪) ಕಾಲಕ್ಕೆ ಸೇರಿದ್ದಾಗಿದೆ. ಇವರ ನಂತರ ದಕ್ಷಿಣ ಭಾರತದ ಇತಿಹಾಸದ ಬಗ್ಗೆ ಹೆಚ್ಚು ಬೀರಿದವರೆಂದರೆ ಟಿ.ವಿ. ಮಹಾಲಿಂಗಮ್‌ರವರು. ಇವರು ತಮ್ಮ ‘ಸೌಥ್ ಇಂಡಿಯನ್ ಪಾಲಿಟಿಯಲ್ಲಿ’[28] ಚೋಳರ ಕಾಲದ ಸೈನಿಕ ವ್ಯವಸ್ಥೆಗೆ ಸಂಬಂಧಪಟ್ಟ ವಿಷಯವನ್ನು ಚರ್ಚಿಸುವಾಗ ಚೋಳರ ಕಾಲ್ದಳ ಸೈನ್ಯವು (infantry) ಹಲವಾರು ತುಕುಡಿಗಳನ್ನು (regiments) ಹೊಂದಿತ್ತು ಎಂದಿದ್ದಾರೆ. ಒಂದನೇ ರಾಜರಾಜನ ತಂಜಾವೂರು ಶಾಸನದ ಪ್ರಕಾರ ಅವನ ಸೈನ್ಯದಲ್ಲಿ ೩೧ ತುಕುಡಿಗಳಿದ್ದವು. ಅವುಗಳೆಂದರೆ, ಮುಮ್ಮಡಿ ಸೋಳ ತೇರಿಂದ ಪರಿವಾರಟ್ಟರ್, ಕೇರಳಾಂತಕ ತೇರಿಂದ ಪರಿವಾರಟ್ಟಾರ್, ಮೂಲ ಪರಿವಾರವಿಟ್ಟೇರು ಅಥವಾ ಜನನಾಥ ತೇರಿದ ಪರಿವಾರಟ್ಟಾರ್, ಸಿಂಗಳಾಂಕ ತೇರಿದ ಪರಿವಾರಟ್ಟಾರ್ ಮತ್ತು ಪರಿವಾರ ಮೆಯಕಪ್ಪಾರಗಲ್ ಇತ್ಯಾದಿ. ಈ ತುಕುಡಿಗಳಿಗೆ ರಾಜನ ಬಿರುದು ಅಥವಾ ಹೆಸರನ್ನು ಇಡಲಾಗಿತ್ತು. ಇಲ್ಲಿಯೂ ಗಮನಿಸಬೇಕಾದ ಅಂಶವೆಂದರೆ, ಬೇಟೆಗಾರರು ಆಯುಧಗಳನ್ನು ಉಪಯೋಗಿಸುವುದರಲ್ಲಿ ಪರಿಣಿತರಾಗಿದ್ದರಿಂದ ಅವರನ್ನು ಆಳರಸರು ತಮ್ಮ ಸೇನೆಯಲ್ಲಿ ನಿಯೋಜಿಸಿಕೊಂಡು ಅವರ ತಂಡಕ್ಕೆ ಪರಿವಾರ ಎಂಬ ಹೆಸರನ್ನು ಇಟ್ಟಿರುವುದು. ಚೋಳರು ಕ್ರಿ.ಶ. ೯೩೯-೪೦ರಲ್ಲಿ ತಕ್ಕೋಳಂ ಯುದ್ಧದಲ್ಲಿ ರಾಷ್ಟ್ರಕೂಟರೊಡನೆ ಹೋರಾಡಲು ಇಂತಹ ತುಕುಡಿ (ಪರಿವಾರದವರನ್ನು)ಗಳನ್ನು ಬಳಸಿರುವುದು ಗಮನಾರ್ಹವಾದದ್ದು. ಈ ಯುದ್ಧದಲ್ಲಿ ಚೋಳರು ಸಂಪೂರ್ಣವಾಗಿ ಸೋತು, ಸುಮಾರು ೩೫ ವರ್ಷಗಳ ಕಾಲ ರಾಜಕೀಯ ಕ್ಷೇತ್ರದಿಂದ ಕಣ್ಮರೆಯಾದರು. ಕ್ರಿ.ಶ. ೯೮೫ರಲ್ಲಿ ಒಂದನೇ ರಾಜರಾಜನು ಚೋಳ ವಂಶ ವನ್ನು ಪುನಶ್ಚೇತನಗೊಳಿಸಿ, ಕರ್ನಾಟಕದಲ್ಲಿ ಗಂಗರನ್ನು ಸೋಲಿಸಿ ತಮ್ಮ ಪ್ರಭುತ್ವವನ್ನು ತಲಕಾಡಿನಲ್ಲಿ ಸ್ಥಾಪಿಸಿದನು. ಬಹುಶಃ ಅಂದಿನಿಂದ ಈ ಪ್ರಾಂತ್ಯದ ಬೇಡರನ್ನು, ಬೇಟೆಗಾರ ರನ್ನು ಪರಿವಾರದವರೆಂದು ಕರೆದಿರಬಹುದು. ಆದರೆ, ಕ್ರಿ.ಶ. ೧೧೧೬-೧೭ರಲ್ಲಿ ಹೊಯ್ಸಳ ವಿಷ್ಣುವರ್ಧನನು ಚೋಳರನ್ನು ಸೋಲಿಸಿ ತಲಕಾಡನ್ನು ತನ್ನ ವಶಕ್ಕೆ ತೆಗೆದುಕೊಂಡ ನಂತರ ಈ ಪ್ರಾಂತ್ಯದಲ್ಲಿ ತಮಿಳರ / ಚೋಳರ ಪ್ರಾಬಲ್ಯ ಕಡಿಮೆಯಾಯಿತು. ಇಂಗ್ಲೆಂಡಿನ ಪ್ರಸಿದ್ಧ ಇತಿಹಾಸಕಾರರಾದ ಜೆ.ಡಿ.ಎಮ್. ಡರೆಟ್‌ರ ಪ್ರಕಾರ ಹೊಯ್ಸಳರು ಸಹ ಮೂಲತಃ ಬೇಡ ರಾಗಿದ್ದರು.[29] ಕ್ರಿ.ಶ. ೧೯ನೇ ಶತಮಾನದ ಮೈಸೂರು ಜಿಲ್ಲೆಯ ಯಳಂದೂರು ತಾಲ್ಲೂಕಿನ ಹೊನ್ನೂರಿನ ಶಾಸನವು[30] ಪರಿವಾರದವರ ಹತ್ತೂ ಜನರ ಭಾವಿಯನ್ನು ಉಲ್ಲೇಖಿ ಸುತ್ತದೆ.

ಈ ಮೇಲಿನ ವಿವರಣೆಯಿಂದ ತಿಳಿದು ಬರುವುದೇನೆಂದರೆ ಹಳೇ ಮೈಸೂರು ಪ್ರಾಂತ್ಯವು ಸಾಮಾನ್ಯವಾಗಿ ೧೨ನೇ ಶತಮಾನದವರೆಗೆ ಚೋಳರ ಪ್ರಾಬಲ್ಯಕ್ಕೆ ಒಳಪಟ್ಟಿದ್ದರಿಂದ ಅವರು ಇಲ್ಲಿಯ ಬೇಡರು ಬೇಟೆಯಲ್ಲಿ ಪಳಗಿದ್ದರಿಂದ ಹಾಗೂ ಆಯುಧಗಳನ್ನು ಬಳಸುವುದರಲ್ಲಿ ಪರಿಣಿತರಾಗಿದ್ದರಿಂದ ಅವರನ್ನು ತಮ್ಮ ಸೇವೆಯಲ್ಲಿ ಸೇರಿಸಿಕೊಂಡು ಅವರ ಗುಂಪಿಗೆ ಪರಿವಾರದವರೆಂದು ಕರೆಯಲಾರಂಭಿಸಿದರು. ಅಂದಿನಿಂದ ಇಲ್ಲಿಯ ಬೇಟೆಗಾರರನ್ನು ಪರಿವಾರನಾಯಕರೆಂದು ಕರೆಯಲಾಗಿದೆ.

ಬೇಡರ ಮತ್ತೊಂದು ಪಂಗಡವಾದ ಗುರಿಕಾರರ ಬಗ್ಗೆಯೂ ಶಾಸನಗಳು ಮಾಹಿತಿ ನೀಡುತ್ತವೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ತೊಂಡವಾಡಿಯ ಕ್ರಿ.ಶ. ೧೧೨೬ರ ತಾಮ್ರಶಾಸನವು[31] ವಡಗೆರೆ ಕಂದಾಚಾರದ ಗುರಿಕಾರ ದೇವಣ್ಣನ ಕುಲದೇವರು ರಾಚವಟ್ಟಿ ವೀರಭದ್ರ ಎಂದು ತಿಳಿಸುತ್ತದೆ. ಕ್ರಿ.ಶ. ೧೭೩೭ರ ಶೃಂಗೇರಿ ಶಾಸನವು[32] ಸಕ್ಕರೆಪಟ್ಟಣದ ಗುರಿಕಾರರು ಶೃಂಗೇರಿ ಮಠದ ವ್ಯಾಸ ಪೂಜೆಗೆ ೬.೫ ಗದ್ಯಾಣ ಕೊಟ್ಟಿದ್ದನ್ನು ತಿಳಿಸುತ್ತದೆ. ಮಂಡ್ಯ ಜಿಲ್ಲೆಯ ಯಲೆಚಾಕನಹಳ್ಳಿಯ ಕ್ರಿ.ಶ. ೧೮೨೫ರ ಶಾಸನವು[33]  ಕೃಷ್ಣರಾಜ ಒಡೆಯರ ಪ್ರಿಯ ಸೇವಕನಾದ ಅರಮನೆ ಒಳಬಾಗಿಲ ಗುರಿಕಾರ್ರು ಚನ್ನರಪ್ಪನ ಪುತ್ರ ಮರಿಚನ್ನಪ್ಪನು ಅಲ್ಲಿಯ ಶ್ರೀವೀರಭದ್ರಸ್ವಾಮಿಯವರ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ್ದನ್ನು ತಿಳಿಸುತ್ತದೆ. ಕ್ರಿ.ಶ. ೧೮೩೯ರ ಮೈಸೂರು ಶಾಸನವು[34] ಗುರಿಕಾರ ಕಬೋತರಖಾನ್ ಪುಟ್ಟಯ್ಯನು ಮಾಡಿಸಿದ ಮಂಟಪದ ಸೇವೆಯನ್ನು ತಿಳಿಸುತ್ತದೆ. ಕ್ರಿ.ಶ. ೧೮೫೪ರ ನಂಜನಗೂಡು ತಾಲ್ಲೂಕಿನ ತಾಂಡ್ಯದ ಶಾಸನವು[35] ಶ್ರೀ ಕೃಷ್ಣರಾಜ ಮಹಾರಾಜ ಕಂಠೀರವ ಸೇವಕನಾದ ಅಂಬಾವಿಲಾಸದ ಗುರಿಕಾರ ಮಲ್ಲಯ್ಯನು ಬಸವೇಶ್ವರ ಸ್ವಾಮಿ ದೇವಸ್ಥಾನಕ್ಕೆ ಮಾಡಿದ ಸೇವಾರ್ಥವನ್ನು ತಿಳಿಸುತ್ತದೆ. ಗುಂಡ್ಲುಪೇಟೆ ತಾಲ್ಲೂಕಿನ ೧೯ನೇ ಶತಮಾನದ ಗೋಪಾಲಸ್ವಾಮಿ ಬೆಟ್ಟದ ಶಾಸನವು[36] ಗುರಿಕಾರ ನಂಜಪ್ಪನು ಗೋಪಾಲ ಸ್ವಾಮಿ ದೇವರಿಗೆ ಮಾಡಿದ ಸೇವೆಯನ್ನು ತಿಳಿಸುತ್ತದೆ. ಚಾಮರಾಜನಗರದ ಕ್ರಿ.ಶ. ೧೯ನೇ ಶತಮಾನದ ಶಾಸನವು[37] ಬೊಕ್ಕಸದ ಗುರಿಕಾರ ನಂಜಪ್ಪನವರು ದೇವಸ್ಥಾನಕ್ಕೆ ಮಾಡಿದ ಸೇವೆಯನ್ನು ತಿಳಿಸುತ್ತದೆ. ಅಲ್ಲಿಯ ಅದೇ ಕಾಲದ ಮತ್ತೊಂದು ಶಾಸನವು[38] ಸಮುಖ ಗುರಿಕಾರ ಜವನಯ್ಯನು ಚಾಮರಾಜೇಶ್ವರ ದೇವಸ್ಥಾನಕ್ಕೆ ಹಿತ್ತಾಳೆ ಚೌಕಟ್ಟನ್ನು ಮಾಡಿಸಿ ಕೊಟ್ಟಿದ್ದನ್ನು ಉಲ್ಲೇಖಿಸುತ್ತದೆ. ಅಲ್ಲಿಯ ಮತ್ತೊಂದು ಶಾಸನವು[39] ಅಂಬಾವಿಲಾಸದ ಗುರಿಕಾರ ಮಲ್ಲಪ್ಪನು ಹಿತ್ತಾಳೆ ಚೌಕಟ್ಟನ್ನು ಗುಬ್ಬೀಕವನ್ನು ಚಾಮರಾಜ ನಗರದ ಪುಟ್ಟರಂಗೇಶ್ವರರ ದೇವಸ್ಥಾನಕ್ಕೆ ದಾನ ಮಾಡಿದ್ದನ್ನು ತಿಳಿಸುತ್ತದೆ. ಅಲ್ಲಿಯ ಮತ್ತೊಂದು ಶಾಸನವು[40] ಅಂಬಾವಿಲಾಸದ ಗುರಿಕಾರ ಮರಿಮಾದಯ್ಯನು ಹಿತ್ತಾಳೆ ಚೌಕಟ್ಟಿನ ಗುಬ್ಬೀಕವನ್ನು ಲಕ್ಷ್ಮೇಶ್ವರ ದೇವಸ್ಥಾನಕ್ಕೆ ಒಪ್ಪಿಸಿದ್ದನ್ನು ತಿಳಿಸುತ್ತದೆ. ಇನ್ನೊಂದು ಶಾಸನವು[41] ಸಮುಖತೊಟ್ಟಿ ಗುರಿಕಾರ ಮರಿಮಲ್ಲಪ್ಪನಿಂದ ಹಿತ್ತಾಳೆ ಚೌಕಟ್ಟಿನ ಗುಬ್ಬೀಕವನ್ನು ಅಲ್ಲಿಯ ಬಾಲನಂಜೇಶ್ವರ ದೇವಸ್ಥಾನಕ್ಕೆ ಸಲ್ಲಿಸಿದ್ದನ್ನು ತಿಳಿಸುತ್ತದೆ. ಗುರಿಕಾರ ಎಂದರೆ ಬಿಲ್ಲು ವಿದ್ಯೆಯಲ್ಲಿ ಪರಿಣಿತಿಯನ್ನು ಹೊಂದಿದ್ದವನು. ಸಾಮಾನ್ಯವಾಗಿ ಬೇಟೆಗಾರರು ಬೇಟೆ ಯಾಡಲು ಬಲೆಯ ಜೊತೆಗೆ ಬಿಲ್ಲನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದರು. ಪ್ರಾಚೀನ ಕಾಲದ ಯುದ್ಧಗಳಲ್ಲಿ ಬಿಲ್ಲನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದುದರಿಂದ ಇವರನ್ನು ಸೈನ್ಯದಲ್ಲಿ ಸೇರಿಸಿಕೊಂಡಿರಬೇಕು. ಹಾಗಾಗಿ ಇವರಿಗೆ ಗುರಿಕಾರರೆಂದು ಕರೆಯಲಾಗಿದ್ದು, ಇವರನ್ನು ಈಗಿನ ಶಾರ್ಪ್ ಶೂಟರ್ಸ್‌ಗಳಿಗೆ ಹೋಲಿಸಬಹುದು.

ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಕಣಕಟ್ಟೆಯ ಶಾಸನಗಳು[42] ಬೇಡರಿಗೆ ಬೋಯಾ ಮತ್ತು ಬೋವ ಎಂಬ ಹೆಸರಿದ್ದುದನ್ನು ತಿಳಿಸುತ್ತವೆ. ಕನ್ನಡ ನಿಘಂಟಿನ ಪ್ರಕಾರ ಬೋಯಾ ಅಥವಾ ಬೋಯಾ ಎಂದರೆ ಪಲ್ಲಕ್ಕಿ, ಮೇಣಿಯನ್ನು ಹೊರುವವರು ಎಂದರ್ಥ. ಇವರು ಆಳರಸರ ಪಲ್ಲಕ್ಕಿಯನ್ನು ಹೊರುವ ಸೇವೆಯಲ್ಲಿದ್ದುದರಿಂದ ಇವರಿಗೆ ಸಹ ಕೆಲಕಾಲ ನಂತರ ಕೆಲವು ಸ್ಥಾನಮಾನಗಳನ್ನು ನೀಡಿ ಗೌರವಿಸಿದಂತೆ ಕಾಣುತ್ತದೆ. ಎಡ್ಗರ್ ಥರ್ಸ್ಟನ್ ರವರು ಬೇಡ ಮತ್ತು ಬೋಯ, ಬೋಯಿ ಜನಾಂಗದವರು ಒಂದೇ ಎಂದು ಅಭಿಪ್ರಾಯ ಪಟ್ಟಿದ್ದಾರೆ.[43] ತೆಲುಗು ಮಾತಾಡುವ ಪ್ರದೇಶಗಳಲ್ಲಿ ಬೇಡರಿಗೆ ಬೋಯರು ಎಂದು ಕರೆಯುತ್ತಾರೆ.

ಇದಲ್ಲದೆ ಅಂದಿನ ಶಾಸನಗಳು ಈ ಸಮಾಜವು ಹೇಗೆ ನಾಯಕತನವನ್ನು ಪಡೆಯುತ್ತಿತ್ತು ಎಂಬುದನ್ನು ತಿಳಿಸುತ್ತವೆ. ಉದಾಹರಣೆಗೆ ಮೈಸೂರು ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹೊರೆಯಾಲದ ಕ್ರಿ.ಶ. ೧೫೪೬ರ ಶಾಸನವು[44] ದಳವಾಯಿ ಕೃಷ್ಣನಾಯಕರು ವಿಜಯನಗರದ ಅರಸು ಅಚ್ಯುತಮಹಾರಾಯರಿಂದ ನಾಯಕತನ ಪಡೆದಿದ್ದನ್ನು ತಿಳಿಸುತ್ತದೆ. ಇದೇ ತಾಲ್ಲೂಕಿನ  ಕ್ರಿ.ಶ. ೧೫೨೧ರ ತ್ರಿಯಂಬಕಪುರ,[45] ಕ್ರಿ.ಶ. ೧೫೫೦-೫೧ರ ಹಳದಪುರ,[46] ಮತ್ತು ಕ್ರಿ.ಶ. ೧೫೫೩ರ ಹೂರದಹಳ್ಳಿ[47] ಶಾಸನಗಳು ನಾಯಕತನವನ್ನು ಹೇಗೆ ವಿಜಯನಗರದ ಅರಸರಿಂದ ಪಡೆಯುತ್ತಿದ್ದರೆಂಬುದನ್ನು ತಿಳಿಸುತ್ತವೆ.

ಈ ಮೇಲಿನ ದಾಖಲೆಗಳಿಂದ ತಿಳಿದುಬರುವುದೇನೆಂದರೆ, ಬೇಡ ನಾಯಕ ಜನಾಂಗವು ಇತರ ಜನಾಂಗಗಳಂತೆ ತನ್ನದೇ ಆದ ಇತಿಹಾಸ ಹೊಂದಿದೆ. ಇವರ ಮುಖ್ಯ ಕಸುಬು ಬೇಟೆಗಾರಿಕೆ ಆದ್ದರಿಂದ ಇವರು ಹೆಚ್ಚಾಗಿ ಗುಡ್ಡಗಾಡು ಮತ್ತು ನದಿ, ಹಳ್ಳ-ಕೊಳ್ಳಗಳ ಪ್ರದೇಶಗಳಲ್ಲಿ ವಾಸವಾಗಿದ್ದರು. ಅದಕ್ಕಾಗಿಯೇ ಇವರನ್ನು ಮಲೆಪರ್ ಎಂದು ಕ್ರಿ.ಶ. ೭ನೇ ಶತಮಾನದಲ್ಲಿ ಕರೆಯಲಾಗಿದೆ. ತಮ್ಮ ಆಹಾರವನ್ನು ಪಡೆಯಲು ಬೇಟೆಯನ್ನು ಮುಖ್ಯ ವೃತ್ತಿಯನ್ನಾಗಿ ಮಾಡಿಕೊಂಡು, ಬೇಟೆಗಾಗಿ ನಾಯಿ, ಬಲೆ, ಪಂಜರ, ಬಿಲ್ಲು ಮುಂತಾದ ಆಯುಧಗಳನ್ನು ಕಾಲಕ್ರಮೇಣ ಹೊಂದಿಸಿಕೊಂಡರು. ಬೇಟೆ ಸಿಗದಿದ್ದ ಸಮಯದಲ್ಲಿ ಇವರು ದಾರಿಹೋಕರನ್ನು ಲೂಟಿ ಮಾಡಿ ತಮ್ಮ ಹಸಿವನ್ನು ನಿವಾರಿಸಿಕೊಳ್ಳುತ್ತಿದ್ದರು. ಹೀಗಾಗಿ ಇವರು ನಾಗರೀಕ ಸಮಾಜಕ್ಕೆ ಒಂದು ರೀತಿಯ ಪಿಡುಗಾಗಿ ಬೇಡವಾದರು. ಬಹುಶಃ ಇದಕ್ಕಾಗಿಯೇ ಏನೋ ಈ ಜನಾಂಗಕ್ಕೆ ಬೇಡರು ಎಂಬ ಹೆಸರು ಬಂದಿರಬಹುದು. ಆದರೆ ಆಳರಸರಿಗೆ ಇವರ ಅವಶ್ಯಕತೆ ಹೆಚ್ಚಾಗಿದ್ದಂತೆ ಕಂಡುಬರುತ್ತದೆ. ಏಕೆಂದರೆ ಇವರು ಪ್ರಾಣಿಗಳನ್ನು ಕೊಲ್ಲುವುದರಲ್ಲಿ ಮತ್ತು ದಾರಿ ಹೋಕರನ್ನು ತಡೆದು ಹೆದರಿಸಿ ಲೂಟಿ ಮಾಡುವುದರಲ್ಲಿ ನಿಸ್ಸೀಮರಾಗಿದ್ದರಿಂದ, ಆಳರಸರು ಮೊದ ಮೊದಲು ತಮ್ಮ ಪ್ರಾಣವನ್ನು ಕಾಪಾಡಿಕೊಳ್ಳಲು ಇವರನ್ನು ತಮ್ಮ ಅಂಗರಕ್ಷಕರನ್ನಾಗಿ ಸೇರಿಸಿ ಕೊಂಡರು. ನಂತರ ತಮ್ಮ ನಾಡನ್ನು ಶತ್ರುವಿನಿಂದ ಕಾಪಾಡಲು ಹಾಗೂ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಶತ್ರುಗಳ ನೆಲ, ಜಲ, ಹೆಣ್ಣು ಮತ್ತು ದನಕರುಗಳನ್ನು ಅಪಹರಿಸಲು ಇವರನ್ನು ಹೆಚ್ಚು ಹೆಚ್ಚಾಗಿ ತಮ್ಮ ಸೇವೆಯಲ್ಲಿ ನಿಯೋಜಿಸಿಕೊಂಡು, ಇವರ ಸ್ವಾಮಿನಿಷ್ಠೆ ಮತ್ತು ಕರ್ತವ್ಯಗಳನ್ನು ಗಮನಿಸಿ ಇವರಿಗೆ ರಾಯ, ರ, ಗಾವುಂಡ, ನಾಯಕ, ದಣ್ಣಾಯಕ ಇತ್ಯಾದಿ ಬಿರುದುಗಳನ್ನು ನೀಡಿ ಗೌರವಿಸಲಾರಂಭಿಸಿದರು. ಕ್ರಿ.ಶ. ೭ನೇ ಶತಮಾನದಲ್ಲಿ ಇವರನ್ನು ಮೊತ್ತಮೊದಲ ಬಾರಿಗೆ ನಾವು ಶಾಸನಗಳಲ್ಲಿ ನೋಡುವುದು ತುರುಗಳನ್ನು ಅಪಹರಿಸುವುದಕ್ಕೋಸ್ಕರ ತುರುಗಾಳದಲ್ಲಿ ಭಾಗವಹಿಸಿರುವುದು. ನಂತರದ ಕಾಲದಲ್ಲಿ ಇವರು ತಮ್ಮ ದೈಹಿಕ ಸಾಮರ್ಥ್ಯ ಮತ್ತು ಆಯುಧಗಳಲ್ಲಿ ನಿಪುಣತೆ ಸಾಧಿಸಿದ್ದರಿಂದ ಇವರನ್ನು ಆಡಳಿತಾಧಿಕಾರಿಗಳನ್ನಾಗಿ ಹಲವಾರು ರಾಜಮನೆತನಗಳು ನೇಮಿಸಿಕೊಂಡವು. ಕ್ರಿ.ಶ. ೧೬ನೇ ಶತಮಾನದಲ್ಲಿ ವಿಜಯನಗರದ ಪತನದ ನಂತರ ಈ ಅಧಿಕಾರಿಗಳು ತಮ್ಮ ತಮ್ಮ ಪ್ರಾಂತ್ಯದ ಮೇಲೆ ಸಾರ್ವಭೌಮತ್ವವನ್ನು ಸ್ಥಾಪಿಸಿಕೊಂಡರು. ಅಂದಿನಿಂದ ಸುಮಾರು ೧೯ನೇ ಶತಮಾನದವರೆಗೆ ಕರ್ನಾಟಕದ ಇತಿಹಾಸದಲ್ಲಿ ತಮ್ಮದೇ ಆದ ಛಾಪು ಮೂಡಿ ಸಿದ್ದಾರೆ. ಬ್ರಿಟಿಷರ ಆಳ್ವಿಕೆಯೊಂದಿಗೆ, ಬೇಡ ನಾಯಕ ಜನಾಂಗವು ಹಲವಾರು ಕಾರಣಗಳಿಂದ ತಮ್ಮ ಎಲ್ಲಾ ಕೋಟೆಕೊತ್ತಳಗಳನ್ನು ಮತ್ತು ಅಧಿಕಾರವನ್ನು ಕಳೆದುಕೊಂಡರು. ಇಂದು ಈ ಜನಾಂಗವು ಜನಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿದ್ದರೂ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಬಹಳ ಹಿಂದುಳಿದಿದ್ದಾರೆ. ಇದಕ್ಕೆ ಮೂಲಕಾರಣ ಈ ಜನಾಂಗವನ್ನು ಆಳುವ ವರ್ಗ ರಾಜಕೀಯ ಲಾಭಕ್ಕಾಗಿ ಹಲವಾರು ಗುಂಪುಗಳಾಗಿ ವಿಂಗಡಿಸಿ ಗುರುತಿಸಿರುವುದು ಮತ್ತು ಈ ಸಮಾಜ ತನ್ನ ಇತಿಹಾಸವನ್ನು ಅರಿಯಲು ಪ್ರಯತ್ನ ಮಾಡದಿರುವುದು. ಬೇಡ ನಾಯಕ ಜನಾಂಗವು ಪ್ರಾಚೀನ ಕಾಲದ ಸಮಾಜದಲ್ಲಿ ಅತ್ಯಂತ ಕೆಳಮಟ್ಟದಲ್ಲಿದ್ದರೂ ಈ ನಾಡಿನ ಹಲವಾರು ರಾಜಕೀಯ ಬದಲಾವಣೆಗಳಿಂದಾಗಿ ಕೆಲವು ಕಾಲವಾದರೂ ಕೆಲವು ಪ್ರಾಂತ್ಯಗಳಲ್ಲಿ ಅಧಿಕಾರ ಹಿಡಿಯುವಂತಾಯಿತು. ಆದರೆ ೧೯ ಮತ್ತು ೨೦ನೇ ಶತಮಾನಗಳಲ್ಲಿ ಆದ ತೀವ್ರ ರಾಜಕೀಯ ಬದಲಾವಣೆಗಳಿಂದಾಗಿ ಈ ಜನಾಂಗವು ತನ್ನ ಎಲ್ಲಾ ಅಸ್ತಿತ್ವವನ್ನು ಕಳೆದುಕೊಂಡು ಮರಳಿ ತನ್ನ ಮೂಲಸ್ಥಿತಿಗೆ ಹಿಂತಿರುಗುವಂತಾಗಿದೆ.

ಕೃಪೆ : ವಾಲ್ಮೀಕಿ ಸಂಪದ

* * *

 


[1] ಈಶ್ವರಪ್ಪ ಎಂ.ಜಿ., ಮ್ಯಾಸಬೇಡರು, (ಬೆಂಗಳೂರು, ೧೯೮೨) ರಾಜಣ್ಣ ಆರ್. ನಾಯಕ ಜನಾಂಗದ ಇತಿಹಾಸ, (ಚಳ್ಳಕೆರೆ, ೧೯೮೨) ಡಾ. ಕರಿಶೆಟ್ಟಿ ರುದ್ರಪ್ಪ, ಮ್ಯಾಸನಾಯಕರು ಒಂದು ಜನಾಂಗಿಕ ಅಧ್ಯಯನ, (ಬೆಂಗಳೂರು, ೧೯೯೫) ಡಾ. ಧ್ರುವ ಬಸವರಾಜ್ ಜ್ಯೋತಿ, ಬೇಡರಲ್ಲಿ ಸಾಮಾಜಿಕ ಬದಲಾವಣೆಗಳು : ಒಂದು ಅಧ್ಯಯನ, ಅಪ್ರಕಟಿತ ಸಂಶೋಧನ ಗ್ರಂಥ, ಮಂಗಳೂರು ವಿಶ್ವವಿದ್ಯಾಲಯ, ಮಂಗಳಗಂಗೋತ್ರಿ : ಎಂ.ಕೆ. ದುರುಗಪ್ಪ, ವಿಜಯ ನಗರೋತ್ತರಕಾಲೀನ ಬೇಡ ಜನಾಂಗದಲ್ಲಾದ ಸ್ಥಿತ್ಯಂತರಗಳು ಚಾರಿತ್ರಿಕ ಅಧ್ಯಯನ, ಅಪ್ರಕಟಿತ ಸಂಶೋಧನ ಗ್ರಂಥ, ಹಂಪಿ ವಿಶ್ವವಿದ್ಯಾಲಯ, ಹಂಪಿ, ೨೦೦೩, ಇತ್ಯಾದಿ.

[2] ಎಡ್ಗರ್ ಥರ್ಸ್ಟನ್, ಕಾಸ್ಟ್ಸ್ ಅಂಡ್ ಟ್ರೈಬ್ಸ್ ಆಫ್ ಸದರನ್ ಇಂಡಿಯಾ, ಸಂಪುಟ ೧, ಮರುಮುದ್ರಣ, (ದೆಹಲಿ , ೧೯೭೫), ಪುಟ ೧೮೪.

[3] ಅದೇ…

[4] ಮೈಸೂರು ಆರ್ಕಿಯಾಲಾಜಿಕಲ್ ರಿಪೋರ್ಟ್ಸ್, ೧೯೨೩, ಪುಟ ೮೩.

[5] ಎಫಿಗ್ರಾಫಿಯಾ ಕರ್ನಾಟಿಕಾ, (ಪು) ಸಂಪುಟ ೭, ನಾಮಂಗಲ, ೩೪.

[6] ಅದೇ., ಸಂಪುಟ ೮, (ಪು) ಆಲೂರು, ೩೫.

[7] ಅದೇ., ಸಂಪುಟ ೩, (ಪು) ಗುಂಡ್ಲುಪೇಟೆ, ೪೮.

[8] ಅದೇ., ಮೂಡಿಗೆರೆ, ೩೩.

[9] ಅದೇ., ಸಂಪುಟ ೪, (ಪು) ಬೇಲೂರು, ೪೨೩.

[10] ಅದೇ., ಸಂಖ್ಯೆ ೫೫೦.

[11] ಅದೇ., ಸಂಪುಟ ೯, ಬೇಲೂರು, ೪೨೩.

[12] ಅದೇ., ಸಂಪುಟ ೧೧, (ಪು) ಚಿಕ್ಕಮಗಳೂರು, ೫೩.

[13] ಅದೇ., ಸಂಪುಟ ೬, (ಹ) ತರೀಕೆರೆ, ೮೪.

[14] ಅದೇ., ಸಂಪುಟ ೪, (ಪು) ಚಾಮರಾಜನಗರ, ೨೯೨.

[15] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ೩, ಹಂಪಿ ಶಾಸನಗಳು, ಸಂಖ್ಯೆ ೨೩೨.

[16] ಅದೇ., ಸಂಖ್ಯೆ ೩೬೫.

[17] ಎ.ಕ. ಸಂಪುಟ ೪, ಚಾಮರಾಜನಗರ, ೧೦೪.

[18] ಅದೇ., ಸಂಪುಟ ೫, ಕೃಷ್ಣರಾಜನಗರ, ೧೦೪.

[19] ಕಲ್ಬುರ್ಗಿ, ಎಂ.ಎಂ., ಸಂಪಾದಿಸಿದ ಕರ್ನಾಟಕದ ಕೈಫಿಯತ್ತುಗಳು, ಬಳ್ಳಾರಿ ಪ್ರಾಂತ್ಯದ ಕೈಫಿಯತ್ತುಗಳು, ಸಂಖ್ಯೆ ೩೫೧, ಪುಟಗಳು ೫೫೬-೫೮.

[20] ಅದೇ., ಕುರುಗೋಡು, ೧೦೫, ಪುಟ ೪೬೦ ಮತ್ತು ಹೈದರ ಕೈಫಿಯತ್ತು, ೪೯, ಪುಟಗಳು, ೫೫೬-೫೮.

[21] ಅದೇ., ಸಂಖ್ಯೆ ೧೦೬, ಪುಟ ೪೭೭.

[22] ಅದೇ., ಸಂಖ್ಯೆ ೫೨, ಪುಟ ೨೧೮.

[23] ಅದೇ., ಸಂಖ್ಯೆ ೩೫೧, ಪುಟಗಳು ೪೧೦-೧೧.

[24] ಅದೇ., ಸಂಖ್ಯೆ ೪ ಪುಟಗಳು, ೬­೭.

[25] ಅದೇ. ಸಂಖ್ಯೆ, ೧೭ ಮತ್ತು ೧೮, ಪುಟಗಳು, ೫೯-೬೫.

[26] ಎ.ಕ. ಸಂಪುಟ, ೫, ಕೃಷ್ಣರಾಜನಗರ, ೮.

[27] ಅದೇ., ಸಂಪುಟ ೮, ಹಾಸನ, ೨೦೬.

[28] ಅದೇ., ಸಂಪುಟ ೮, ಹೊಳೇನರಸೀಪುರ, ೫೫.

[29] ಅದೇ., ಸಂಪುಟ ೫, ಟಿ. ನರಸೀಪುರ, ೧೦೭.

[30] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ೨, ಗಂಗಾವತಿ, ೨೬.

[31] ಅದೇ., ಆಂಧ್ರಪ್ರದೇಶದ ಕನ್ನಡ ಶಾಸನಗಳು, ಸಂಪುಟ ೫, ಆಲಂಪುರ ೪೯೩.

[32] ಎ.ಕ. ಸಂಪುಟ, ಕೃಷ್ಣರಾಜನಗರ, ೪೩.

[33] ಅದೇ., ಸಂಪುಟ ೪, ಚಾಮರಾಜನಗರ, ೩೫೫.

[34] ಕನ್ನಡ ವಿಶ್ವವಿದ್ಯಾಲಯ, ಶಾಸನ ಸಂಪುಟ ೨, ಗಂಗಾವತಿ, ೨೬.

[35] ಎ.ಕ. ಸಂಪುಟ ೮, ಪಾಂಡವಪುರ, ೧೨೩.

[36] ಅದೇ., ಸಂಪುಟ ೮, ಹಾಸನ ೨೦೧.

[37] ಅದೇ., ಸಂಪುಟ ೩, ನಂಜನಗೂಡು, ೧೮೧.

[38] ಅದೇ., ಸಂಪುಟ ೬, ಪಾಂಡವಪುರ , ೧೩೩ ಮತ್ತು ೧೮೧.

[39] ಅದೇ., ಸಂಪುಟ ೪, ಚಾಮನಗರ, ೩೦೨.

[40] ಅದೇ., ಸಂಪುಟ ೭, ನಾಗಮಂಗಲ, ೧೨೬.

[41] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ೫, ಭಾಗ ೧, ಅಗಳಿ, ೫೦

[42] ಅದೇ., ಅಮರಾಪುರಂ, ೬೩.

[43] ಅದೇ., ಸಂಪುಟ ೭, ಸುಲ್ತಾನಪುರ, ೪೭.

[44] ಎಡ್ಗರ್ ಥರ್ಸ್ಟನ್, ಪೂರ್ವೋಕ್ತ,  ಪುಟ, ೨೧೮.

[45] ನೀಲಕಂಠಶಾಸ್ತ್ರಿ ಕೆ.ಎ., ದಿ ಚೋಳಾಸ್, ಮರುಮುದ್ರಣ, (ಮದ್ರಾಸ್, ೧೯೪೮), ಪುಟ ೪೫೦.

[46] ಮಹಾಲಿಂಗಮ್ ಟಿ.ವಿ., ಸೌಥ್ ಇಂಡಿಯನ್ ಪಾಲಿಟಿ, (ಮದ್ರಾಸ್, ೧೯೬೨), ಪುಟಗಳು, ೨೬೪-೬೮.

[47] ಡೆರಟ್, ಜೆ.ಡಿ.ಎಮ್., ದಿ ಹೊಯ್ಸಳಾಲಸ್ ಎ ಮೆಡಿವಲ್ ಇಂಡಿಯನ್ ರಾಯಲ್ ಫ್ಯಾಮಿಲಿ, (ಮದ್ರಾಸ್, ೧೯೫೭), ಪುಟ ೯ ಮತ್ತು ಶೆಟ್ಟರ್ ಎಸ್., ದಿ ಹೊಯ್ಸಳ ಟೆಂಪಲ್ಸ್, (ಧಾರವಾಡ, ೧೯೯೨), ಪುಟ ೩-೪.