ಬೇಡ ಸಮುದಾಯದ ಇತಿಹಾಸವನ್ನು ಕರ್ನಾಟಕದ ಪ್ರಾಗೈತಿಹಾಸಿಕ ಕಾಲದಿಂದಲೂ ಗಮನಿಸಬಹುದು. ಕರ್ನಾಟಕದ ಅತಿ ಪ್ರಾಚೀನ ಸಮುದಾಯವಾದ ಬೇಡ ಸಮುದಾಯ ಇಲ್ಲಿನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಮಾನವ ಸಮಾಜದಲ್ಲಿ ಬೇಟೆಗಾರಿಕೆ ಒಂದು ಪ್ರಾಚೀನ ಪ್ರವೃತ್ತಿಯಾಗಿದ್ದು ಆ ನಂತರವೇ ಬೇರೆ ಕಸಬುಗಳು ಜೀವನೋಪಾಯ ಮಾರ್ಗಗಳಾಗಿ ರೂಪುಗೊಂಡವು ಎಂಬುದು ಪ್ರಾಗೈತಿಹಾಸಕಾರರ ನಿಲುವು. ಬೇಟೆಗಾರ ಸಮುದಾಯವಾಗಿ ಮುಂದುವರಿದ ಬೇಡರು ತಮ್ಮ ಆಯುಧ ಬಳಕೆಯ ಕಲೆ ಹಾಗೂ ಸಾಹಸಿ ಜೀವನದ ಅಂಗವಾಗಿ ಯುದ್ಧ ಕಲೆಯನ್ನು ಅಳವಡಿಸಿಕೊಂಡರು. ಮಿಕ ಹಿಡಿಯಲು ಬಳಸುವ ನಾನಾ ತಂತ್ರಗಳೇ ಮುಂದೆ ಸಮರವ್ಯೂಹ ರಚನೆಯ ತಳಹದಿಗಳಾದವು. ಬೇಟೆಯ ಜೊತೆ ಯೋಧತ್ವವನ್ನು ಬೆಳೆಸಿಕೊಂಡ ಬೇಡ ಸಮುದಾಯವು ನಂತರದಲ್ಲಿ ರಾಜ್ಯ ವಿಸ್ತರಣೆ ಹಾಗೂ ನಿರ್ವಹಣೆಯಲ್ಲಿ ಸಾಮ್ರಾಜ್ಯಗಳಿಗೆ ಸೇವೆ ಸಲ್ಲಿಸಿತು.

ಕರ್ನಾಟಕದಲ್ಲಿ ಹಲವು ಅರಸು ಮನೆತನಗಳು ಬೇಡ ಜಾತಿ ಮೂಲದಿಂದ ರೂಪುಗೊಂಡ ವಾಗಿದ್ದವು. ಕಂಪಿಲ ದುರ್ಗ, ಉಚ್ಚಂಗಿ ದುರ್ಗ, ಸುರಪುರ, ಚಿತ್ರದುರ್ಗ, ಹರಪನಹಳ್ಳಿ, ನಿಡಗಲ್ಲು, ಇಕ್ಕೇರಿ ಮುಂತಾದ ಹಲವಾರು ಪಾಳೆಯಪಟ್ಟುಗಳನ್ನು ಆಳ್ವಿಕೆ ಮಾಡಿದ ಬೇಡ ಕುಲದ ರಾಜರು ಪಾಳೆಯಗಾರ ಎಂದರೆ ಬೇಡರ ಕುಲದವನು ಎಂಬ ಅನ್ವರ್ಥನಾಮ ಉಂಟಾಗುವ ಹಾಗೆ ಆಳ್ವಿಕೆ ನಡೆಸಿದರು. ಪಾಳೆಯಗಾರರು ಸಾಮಾನ್ಯವಾಗಿ ಪ್ರಾಂತೀಯ ಸಂಸ್ಥಾನಗಳ ನಿರ್ಮಾಪಕರು. ಕರ್ನಾಟಕದಲ್ಲಿ ಹದಿನೈದು, ಹದಿನಾರು, ಹದಿನೇಳನೇ ಶತಮಾನದಲ್ಲಿ ಪಾಳೆಯಗಾರರು ಹೆಚ್ಚು ಸಂಖ್ಯೆಯಲ್ಲಿದ್ದರು. ಪಾಳೆಯ ಎಂಬುದು ಆಗಿನ ಸಾಮ್ರಾಜ್ಯಾಡಳಿತದ ಒಂದು ಘಟಕವಾಗಿ ರೂಪುಗೊಂಡಿತ್ತು. ಪಾಳೆಯಗಾರರ ವಿಶೇಷವೆಂದರೆ ಅವರು ಭಾಗವಾಗಿದ್ದ ಸಾಮ್ರಾಜ್ಯದಲ್ಲಿ ತಾವೂ ಒಬ್ಬ ರಾಜನಂತೆಯೇ ಒಡ್ಡೋಲಗ ನಡೆಸುತ್ತಿದ್ದರು. ತಮ್ಮ ಸ್ವಂತ ಹೆಸರಿನಲ್ಲಿ ದಾನ ದತ್ತಿ ನೀಡುವ ಸ್ವಾತಂತ್ರ್ಯ ಹೊಂದಿದ್ದರು. ಸಂದರ್ಭದ ಅನುಕೂಲ ದೊರೆತರೆ ತಾವೂ ಕೂಡ ಚಕ್ರವರ್ತಿಯಾಗುವ ಹಂಬಲ ಹೊಂದಿದ್ದರು. ಈ ಅಂಶ ಒಂದು ಮುಖ್ಯ ಸಾಮಾಜಿಕ ಮನೋಭಾವದ ನಿರೂಪಣೆಗೆ ಕಾರಣವಾಗಿತ್ತು. ತಾನು ಚಕ್ರವರ್ತಿಯ ಅಧೀನ ಅಧಿಕಾರಿ ಎಂಬ ಧೋರಣೆಯಲ್ಲಿ ಆಳ್ವಿಕೆ ಮಾಡುವ ಮಂಡಲಾಧಿಪತಿಗಳಿಗೂ, ಪಾಳೆಯಗಾರರಿಗೂ ಇದ್ದ ಮನೋಭಾವ ವ್ಯತ್ಯಾಸ ಬಹಳ ಗಮನಾರ್ಹ. ತಾನೂ ಒಬ್ಬ ರಾಜ, ಆದರೆ ಸಾಕಷ್ಟು ಬಲ ಹಾಗೂ ಸಂಪನ್ಮೂಲ ದೊರೆತೊಡನೆ ತಾನೂ ಚಕ್ರವರ್ತಿಯಾಗಬೇಕು ಎಂಬ ಹಂಬಲದಲ್ಲಿ ಪ್ರತಿ ಪಾಳೆಯಗಾರನೂ ಆಶಿಸುತ್ತಿದ್ದ. ಈ ಧೋರಣೆಯ ಹಿನ್ನೆಲೆಯಲ್ಲಿ ತನ್ನ ಆಡಳಿತದ ಪ್ರಾಂತ್ಯವನ್ನು ಒಂದು ಅಭಿವೃದ್ದಿಶೀಲ ಪ್ರದೇಶವನ್ನಾಗಿ ಮಾಡಲು ಅದರಿಂದ ಜನಾನುರಾಗವನ್ನು ಹೊಂದಲು ಯತ್ನಿಸುತ್ತಿದ್ದ. ಸಾಮ್ರಾಜ್ಯ ನಿರ್ವಹಣೆಯ ಅಂಶದಲ್ಲಿ ಯಾವ ಚಕ್ರಾಧಿಪತಿಯೂ ಒಂದು ಪಾಳೆಯಪಟ್ಟನ್ನು ನಿರ್ಮಿಸಿ ಅದನ್ನು ಒಂದು ಪ್ರಾಂತ್ಯ ಎಂದು ಮಾಡಿ ಅದಕ್ಕೆ ಪಾಳೆಯಗಾರ ರನ್ನು ನೇಮಿಸುತ್ತಿರಲಿಲ್ಲ. ಬದಲಿಗೆ ತಮ್ಮ ಪರಿಶ್ರಮ ಹಾಗೂ ಸ್ವಂತ ಬಲದಿಂದ ರೂಪು ಗೊಂಡ ಪಾಳೆಯಗಾರನಿಗೆ ಅಧಿಕೃತ ಮಾನ್ಯ ಮಾಡಿ ಅದಕ್ಕೆ ಪಡೆಯಬೇಕಾದ ಕಪ್ಪವನ್ನು ಪಡೆಯುತ್ತಿದ್ದ. ಪಾಳೆಯಗಾರರ ರಾಜಕೀಯಾರ್ಥಿಕತೆ ಅಧ್ಯಯನ ಮಾಡುವಲ್ಲಿ ಈ ಸ್ವಂತ ಪ್ರಾಂತೀಯ ಪ್ರತಿಪತ್ತಿಯನ್ನು ನಾವು ಬಹಳ ಮುಖ್ಯವಾದ ಆಯಾಮವಾಗಿ ಗುರುತಿಸಬೇಕು.

ಈ ಸ್ವಂತ ಪ್ರತಿಪತ್ತಿಯೇ ಪಾಳೆಯಗಾರನ ಸ್ವತಂತ್ರ ಮನೋಭಾವವನ್ನು ಪೋಷಿಸುತ್ತದೆ. ಅವನು ಬೇಕಾದರೆ ತನ್ನ ನಿಷ್ಠೆಯನ್ನು ಬದಲಿಸಬಲ್ಲ. ಹಾಗಾಗಿ ಚಕ್ರವರ್ತಿಯೂ ಅವನನ್ನು ಗೌರವದಿಂದಲೇ ನಡೆಸಿಕೊಳ್ಳಬೇಕು. ಯುದ್ಧಗಳಲ್ಲಿ ಗೆದ್ದಾಗ ಮತ್ತಷ್ಟು ಪ್ರಾಂತ್ಯಗಳ ಮೇಲಿನ ಅಧಿಕಾರವನ್ನು ಮಾನ್ಯ ಮಾಡಬೇಕು. ಹೀಗಾಗಿ ಶೌರ್ಯ ಪರಾಕ್ರಮ ಎಂಬುದು ಒಂದು ಸಾಮಾಜಿಕ ಮೌಲ್ಯ ಎಂಬಂತೆ ಬೇಡರು ಬೆಳೆಸಿಕೊಂಡರು. ಸ್ಥಳೀಯ ಕೃಷಿ ವಿಸ್ತರಣೆ, ಕೆರೆ, ಕಟ್ಟೆ ನಿರ್ಮಾಣ, ದೇವಸ್ಥಾನ ದೇಣಿಗೆ, ಕಲೆ ಸಾಹಿತ್ಯದ ಪೋಷಣೆಗೆ ಬೇಡ ಕುಲದ ಅರಸರು ಬೇಕಾದಷ್ಟು ಕೊಡುಗೆ ನೀಡಿದ್ದಾರೆ. ಚಿತ್ರದುರ್ಗದ ಪಾಳೆಯಪಟ್ಟಿನ ಉದಾಹರಣೆ ಮಾತ್ರವಲ್ಲ, ಉಮ್ಮತ್ತೂರು, ತೆರಕಣಾಂಬಿ, ಹದಿನಾಡು ಮುಂತಾದ ಪಾಳೆಯಗಾರರ ಆಳ್ವಿಕೆಯನ್ನು ನೋಡಿದರೆ ತಿಳಿದುಬರುವ ಸಾಮಾನ್ಯ ಅಂಶವಿದು.

ಹೀಗೆ ಬೆಳೆದ ಪಾಳೆಯಪಟ್ಟುಗಳಲ್ಲಿ ಬೇಡ ಅರಸನಿರಲಿ ಅಥವಾ ಬೇರೆಯವರಿರಲಿ ಬೇಡ ಪಡೆಯಂತೂ ಖಾಯಂ. ರಣಪರಾಕ್ರಮವನ್ನೇ ನಂಬಿ ಬದುಕಿದ ಸಮುದಾಯ ಸಾಮ್ರಾಜ್ಯಗಳ ಏಳುಬೀಳಿನಲ್ಲಿ ಪಾಲ್ಗೊಳ್ಳುತ್ತಾ ಕಡೆಗೆ ಬ್ರಿಟಿಷ್ ಆಳ್ವಿಕೆ ಶುರುವಾದ ಮೇಲೆ ದಯನೀಯ ಬಡತನಕ್ಕೆ ಗುರಿಯಾಯಿತು. ಸ್ಥಳೀಯ ರಾಜರಿಗೆ ಸೈನ್ಯ ಇಟ್ಟುಕೊಳ್ಳುವ ಹಕ್ಕು ತೆಗೆದು ಹಾಕಿದ ಸಹಾಯಕ ಸೈನ್ಯ ಪದ್ಧತಿ, ಕಂದಾಚಾರದ ಪಡೆಗಳ ಅವನತಿಗೆ ಕಾರಣವಾಯಿತು. ಬ್ರಿಟಿಷರು ತಂದ ಅರಣ್ಯ ಕಾಯ್ದೆಗಳು ಬೇಡ ಸಮುದಾಯದ ಮುಖ್ಯ ಜೀವನಾಧಾರವಾಗಿದ್ದ ಅರಣ್ಯದಿಂದಲೂ ಹೊರದೂಡಿತು. ಪಾಳೆಯಗಾರರು ಬೇಡ ಸಮುದಾಯದ ಸೈನಿಕ ಸೇವೆಗಾಗಿ ಒದಗಿಸಿದ್ದ ಇನಾಮ್ತಿ ಭೂಮಿಯೂ ಬಹಳ ಕಡೆಗಳಲ್ಲಿ ಜಮೀನ್ದಾರಿ ಪದ್ಧತಿಯ ಕಾರಣದಿಂದ ಕೈತಪ್ಪಿ ಹೋಯಿತು. ಸೈನ್ಯದ ಸೇವೆಗಾಗಿ ಬರುತ್ತಿದ್ದ ಉಂಬಳಿಯೂ ನಿಂತು ಹೋಯಿತು. ಈ ಹಿನ್ನೆಲೆಯಲ್ಲಿ ಬೇಡ ಸಮುದಾಯ ವಸಾಹತುಶಾಹಿ ಆಳ್ವಿಕೆಯಲ್ಲಿ ಬಂಡುಕೋರ ಪಂಗಡವಾಗಿ ರೂಪುಗೊಂಡಿತು. ಹಲವಾರು ದಂಗೆ ಬಂಡಾಯ ಗಳನ್ನು ನಡೆಸಿದ ಬೇಡ ಸಮುದಾಯ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಯಿತು. ನಿಶ್ಯಸ್ತ್ರೀಕರಣ ಕಾಯ್ದೆಯಂತಹ ಕಾನೂನುಗಳು ಆಯುಧ ಹೊಂದಿರುವ ಹಕ್ಕನ್ನು ಕಸಿದುಕೊಂಡು ಬೇಡರನ್ನು ಪೂರ್ಣ ಬಡವರನ್ನಾಗಿಸಿತು. ಈಸೂರು ಬೇಡರು ತಮ್ಮ ಆಯುಧ ಹೊಂದಿರುವ ಹಕ್ಕು ಪ್ರತಿಪಾದಿಸುವ ದಿಸೆಯಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಹಾಡಿದರು. ಹುತಾತ್ಮರಾದರು. ಬದಲಾದ ರಾಜಕೀಯ ಸಾಮಾಜಿಕ ಸನ್ನಿವೇಶಗಳು ಹಾಗೂ ಈ ಆಧುನಿಕ ಸಮಾಜದಲ್ಲಿ ಬೇಡ ಸಮುದಾಯವನ್ನು ಒಂದು ಬಡ ಹಿಂದುಳಿದ ಪಂಗಡವಾಗುವಂತೆ ಮಾಡಿವೆ. ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅಳವಡಿಸಿದ ಮೀಸಲಾತಿ ಸೌಲಭ್ಯ ಹಾಗೂ ಕರ್ನಾಟಕದಲ್ಲಿ ಎಲ್.ಜಿ. ಹಾವನೂರು ಮಂಡಿಸಿ, ದೇವರಾಜ ಅರಸರು ಜಾರಿಗೆ ತಂದ ಹಿಂದುಳಿದ ವರ್ಗಗಳ ಮೀಸಲಾತಿ ನೀತಿಯ ಹಿನ್ನೆಲೆಯಲ್ಲಿ ಸಮುದಾಯ ಈಗ ಚೇತರಿಸಿಕೊಳ್ಳುವ ಹಂತದಲ್ಲಿ ಬಂದು ನಿಂತಿದೆ. ಲಿಂಗಾಯತ, ಒಕ್ಕಲಿಗ, ಕುರುಬರ ನಂತರದ ಸ್ಥಾನದ ಸಂಖ್ಯಾ ಬಲವನ್ನು ಹೊಂದಿರುವ ಬೇಡ ಸಮುದಾಯಕ್ಕೆ ರಾಜ್ಯದಲ್ಲಿ ಪ್ರಬಲವಾದ ನಾಯಕತ್ವ ರೂಪುಗೊಂಡಿಲ್ಲ. ನಾಯಕರು ಇದ್ದಾರಾದರೂ ಅವರಿಗೆ ಸಾಕಷ್ಟು ರಾಜಕೀಯ ಪ್ರಾಮುಖ್ಯತೆ ಸಿಕ್ಕಿಲ್ಲ. ಉಪ ಪಂಗಡಗಳ ಸಂಕುಚಿತ ಮನೋಭಾವ, ಪ್ರಾದೇಶಿಕ ಭಿನ್ನತೆ ಇವು ಬೇಡ ಸಮುದಾಯದ ಸಮಗ್ರ ಐಕ್ಯತೆಗೆ ಹಾಗೂ ಆ ಮುಖಾಂತರ ವೇಗದ ಮುನ್ನೆಡೆಗೆ ಅಡ್ಡಗಾಲು ಹಾಕುತ್ತಿವೆ. ಮುಖ್ಯವಾಗಿ ಬೇಡರಲ್ಲಿ ಊರುಬೇಡರು, ಮ್ಯಾಸಬೇಡರು ದುರುಗ ಮುರುಗಿಯವರು, ಕುರುಮಾಮರು, ಮೊಂಡ ಬೇಡರು, ವಾಲ್ಮೀಕಿ, ತಳವಾರ, ಪರಿವಾರ, ವಾಲ್ಮೀಕಿ ಮಕ್ಕಳು, ಪೆದ್ದರು, ಕಂಪಣ ಬೇಡರು ಹೀಗೆ ಹಲವಾರು ಉಪಪಂಗಡಗಳುಂಟು.

ಇಂತಹ ಒಂದು ಸಮುದಾಯದ ಮೂಲವನ್ನು ಕುರಿತು ನೋಡಿದಾಗ ಇದುವರೆಗೂ ಬೆರಳೆಣಿಕೆಯಷ್ಟು ವಿದ್ವಾಂಸರು ಅಧ್ಯಯನಕ್ಕೆ ಒಳಪಡಿಸಿರುವುದನ್ನು ಕಾಣಬಹುದು. ಅಂತಹ ಅಧ್ಯಯನಕಾರರ ಎಲ್ಲಾ ಅಧ್ಯಯನಗಳನ್ನು ಒಟ್ಟುಗೂಡಿಸುವುದು ಈ ಸಂಕಲನದ ಉದ್ದೇಶವಾಗಿದೆ. ಪ್ರಸ್ತುತದಲ್ಲಿ ಮೂಲ, ಮೂಲದ ಅಧ್ಯಯನಕ್ಕೆ ಸಂಬಂಧಿಸಿದ ಅಂಶ ಗಳನ್ನು ಕುರಿತಾಗಿರುವಂತಹ ಹಾಗೂ ಉಪಪಂಗಡಗಳ ಬಗೆಗಿನ ಅಧ್ಯಯನಗಳನ್ನು ಕ್ರೋಢಿಕರಿಸಿದಾಗ ಮೂವತ್ತು ಲೇಖನಗಳು ನಮ್ಮ ಗಮನಕ್ಕೆ ಕಂಡು ಬರುತ್ತಿವೆ. ಈ ಎಲ್ಲಾ ಲೇಖನಗಳನ್ನು ಗಮನಿಸಿದಾಗ ಇಲ್ಲಿಯ ಲೇಖನಗಳಲ್ಲಿ ಮುಖ್ಯವಾಗಿ ಸಮುದಾಯದ ಮೂಲ, ಪರಂಪರೆ, ಸಂಸ್ಕೃತಿ, ಇತಿಹಾಸ, ಸಾಂಸ್ಕೃತಿಕ ನೆಲೆಗಟ್ಟು, ವರ್ತಮಾನದ ತಾಕಲಾಟ ಗಳು ಹಾಗೂ ಬೆಡಗುಗಳನ್ನು ಶೋಧಿಸುವ ಕ್ರಿಯೆಯಲ್ಲಿ ಬಹುಪಾಲು ಲೇಖನಗಳು ಯಶಸ್ಸನ್ನು ಪಡೆದಿವೆ. ಕೇವಲ ಮೂಲಕ್ಕೆ ಸಂಬಂಧಿಸಿದ ಲೇಖನಗಳು ಮಾತ್ರವಲ್ಲದೆ ವೇದಪೂರ್ವದ ಬೇಡರು, ಶಾಸನಗಳಲ್ಲಿ ಬೇಡರು, ಸಂಸ್ಕೃತಿ ಪಡೆದ ಸ್ಥಿತ್ಯಂತರಗಳು, ಬೆಡಗುಗಳ ಬಗೆಗಿನ ಲೇಖನಗಳನ್ನು ಸಂಗ್ರಹಿಸಲಾಗಿದೆ. ಏಕೆಂದರೆ ಈ ಲೇಖನಗಳು ಮುಂದಿನ ಅಧ್ಯಯನಗಳಿಗೆ ಆಧಾರವಾಗುವವು ಎಂಬ ಹಿನ್ನೆಲೆಯಲ್ಲಿ ಸೇರಿಸಲಾಗಿದೆ. ಕೆಲವು ಲೇಖನಗಳು ಹೊಸದಾಗಿ ಅಧ್ಯಯನಕ್ಕೆ ತೊಡಗಿಸಿಕೊಂಡಿರುವ ವಿದ್ವಾಂಸರ ಲೇಖನಗಳಾಗಿದ್ದು ಅಮಗಳು ಸಹ ಕೆಲವೆಡೆ ಯಶಸ್ಸನ್ನು ಪಡೆದಿರುವುದನ್ನು ಕಾಣಬಹುದು. ಈ ಸಂಕಲನದಲ್ಲಿ ಇಪ್ಪತ್ನಾಲ್ಕು ವಿದ್ವಾಂಸರ ಲೇಖನಗಳನ್ನು ಸಂಗ್ರಹಿಸಲಾಗಿದೆ. ಈ ವಿದ್ವಾಂಸರಲ್ಲಿ ಕೆಲವರು ಈಗಿಲ್ಲ. ಇನ್ನು ಕೆಲವು ಹಳೆ ತಲೆಮಾರಿನ ವಿದ್ವಾಂಸರ ಲೇಖನಗಳಿವೆ. ಯುವ ವಿದ್ವಾಂಸರು ಹಾಗೂ ಮಹಿಳಾ ವಿದ್ವಾಂಸರ ಲೇಖನಗಳು ಇವೆ. ಈ ಎಲ್ಲಾ ವಿದ್ವಾಂಸರಿಗೂ ಹೃತ್ಪೂರ್ವಕವಾದ ಕೃತಜ್ಞತೆಗಳು.

ಇಲ್ಲಿ ಸಂಗ್ರಹಿತವಾಗಿರುವ ಲೇಖನಗಳನ್ನು ಇತಿಹಾಸ ಚಂದ್ರಿಕೆ, ವಾಲ್ಮೀಕಿ ಸಂಪದ, ವಾಲ್ಮೀಕಿ ಜ್ಯೋತಿ, ವಾಲ್ಮೀಕಿ ಕರ್ನಾಟಕ, ಆದಿವಾಸಿ, ಮ್ಯಾಸಬೇಡರ ಸಂಸ್ಕೃತಿ, ಹೊಸಪೇಟೆಯ ಏಳುಕೇರಿ ನಾಯಕರ ಸಾಂಸ್ಕೃತಿಕ ಅಧ್ಯಯನ, ಜಾನಪದ ಕರ್ನಾಟಕ, ವಾಲ್ಮೀಕಿ ಕಿರಣ, ನಾಯಕ ಜನಾಂಗದ ಇತಿಹಾಸ, ಮನೆ, ಸಮಾಜ ಮತ್ತು ಸಂಸ್ಕೃತಿ ಹಾಗೂ ಮ್ಯಾಸಬೇಡರು ಹೀಗೆ ಹತ್ತು ಹಲವಾರು ಸ್ಮರಣ ಸಂಚಿಕೆಗಳು, ಪತ್ರಿಕೆಗಳು ಹಾಗೂ ವ್ಯಕ್ತಿಗತ ಕೃತಿಗಳಿಂದ ಲೇಖನಗಳನ್ನು ಆಯ್ದುಕೊಳ್ಳಲಾಗಿದೆ. ಅವುಗಳ ಸಂಪಾದಕರು ಗಳಿಗೆ, ಲೇಖಕರಿಗೆ ಹೃತ್ಪೂವರ್ತಕ ಕೃತಜ್ಞತೆಗಳು. ಇಂತಹ ಒಂದು ಕೆಲಸಕ್ಕೆ ಸದಾ ಪ್ರೋನೀಡುವ ಸನ್ಮಾನ್ಯ ಕುಲಪತಿಗಳಾದ ಡಾ. ಬಿ.ಎ. ವಿವೇಕ ರೈ ಹಾಗೂ ಕುಲಸಚಿವರಾದ ಸನ್ಮಾನ್ಯ ಶ್ರೀ ವಿ. ಶಂಕರ್ ಅವರಿಗೂ, ಕನ್ನಡ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ.ಜಿ. ವೆಂಕಟೇಶ ಅವರಿಗೆ, ಸಹಾಯಕ ನಿರ್ದೇಶಕರುಗಳಾದ ಶ್ರೀ ಬಿ. ಸುಜ್ಞಾನಮೂರ್ತಿ, ಶ್ರೀ ಹೆಚ್.ಬಿ. ರಂದ್ರ, ಶ್ರೀ ಜೈನುಲ್ಲಾ ಬಳ್ಳಾರಿ ಹಾಗೂ ಸಿಬ್ಬಂದಿ ವರ್ಗದವರಿಗೂ, ಮುಖಪುಟ ರಚಿಸಿದ ಶ್ರೀ ಕೆ.ಕೆ. ಮಕಾಳಿ, ಅಕ್ಷರ ಜೋಡಿಸಿದ ಶ್ರೀ ಜೆ. ಬಸವರಾಜ ಹಾಗೂ ಇತರರಿಗೂ ಹೃತ್ಪೂರ್ವಕ ಕೃತಜ್ಞತೆಗಳು. ಈ ತರಹದ ಕೆಲಸಗಳಲ್ಲಿ ಸದಾ ನನ್ನ ಕುಟುಂಬದ ಸದಸ್ಯರು ಹಾಗೂ ವಿದ್ಯಾರ್ಥಿಗಳಾದ ತಾರಾಮತಿ ಬಿ., ಕೃಷ್ಣವೇಣಿ ಆರ್., ಕು. ಸುಮಂಗಲಾ ಅತ್ತಿಗೇರಿ, ಸುನಂದ ಮೂಲಿಮನಿ, ಹೆಚ್.ಎಸ್. ಗುರುಪ್ರಸಾದ್ ಹಾಗೂ ಶ್ರೀ ಅರುಣಕುಮಾರ್ ಅವರುಗಳು ಸಹಾಯ ಮಾಡುತ್ತಿರುತ್ತಾರೆ. ಲೇಖನಗಳನ್ನು ಸಂಗ್ರಹಿ ಸುವಲ್ಲಿ, ಕರಡು ಪ್ರತಿ ತಿದ್ದುವಲ್ಲಿ ಸಹಕರಿಸಿದ್ದಾರೆ. ಅವರುಗಳ ಸಹಾಯ, ಸಹಕಾರವನ್ನು ಮರೆಯುವಂತಿಲ್ಲ. ಅವರುಗಳಿಗೂ ಹಾಗೂ ವಿಭಾಗದ ಅಧ್ಯಾಪಕರುಗಳಿಗೆ ಹಾಗೂ ಎಲ್ಲಾ ಹಿತೈಷಿಗಳಿಗೆ ಕೃತಜ್ಞತೆಗಳು.

ಪ್ರೊ. ಮಂಜುನಾಥ ಬೇವಿನಕಟ್ಟಿ
ಸಂಚಾಲಕರು