ಆದಿವಾಸಿ ಜನಾಂಗದ ಚರಿತ್ರೆ ತುಂಬಾ ಸನಾತನವಾದುದು. ಮೂಲತಃ ಅರಣ್ಯ ವಾಸಿಯಾಗಿದ್ದ ಮಾನವನು ಕಾಲಾನಂತರದಲ್ಲಿ ನಾಗರೀಕತೆಯನ್ನು ಮೈಗೂಡಿಸಿಕೊಂಡು ಸಮಕಾಲೀನ ಸ್ಥಿತಿಗೆ ಬಂದು ತಲುಪಿದ್ದಾನೆ. ಈ ನಾಗರೀಕತೆಯ ಅಭಿವೃದ್ದಿ ಪ್ರಕ್ರಿಯೆಯಲ್ಲಿ ಸಮ್ಮಿಲನಗೊಂಡಂತಹವರು ನಾಗರೀಕರೆನಿಸಿದರೆ! ಆ ಪ್ರಕ್ರಿಯೆಯ ಸೋಂಕಿಲ್ಲದೆ ಬಹುದೂರ ಉಳಿದಂತಹವರು ತಮ್ಮ ಮೂಲ ಪರಂಪರೆಯನ್ನು ಅಚ್ಚುಕಟ್ಟಾಗಿ ಪೋಷಿಸಿಕೊಂಡು ಬದುಕುತ್ತಿರುವ ಸಮುದಾಯಗಳಿಗೆ ಬುಡಕಟ್ಟುಗಳೆಂದು ಕರೆಯುತ್ತಾರೆ. ಅರಣ್ಯವಾಸಿಗಳು ನಿತ್ಯಜೀವನ ಕ್ರಮದಲ್ಲಿ ವಿಶಿಷ್ಟವಾದ ಸಂಸ್ಕೃತಿ, ಪೂರ್ವಜರಿಂದ ಬಂದಂತಹ ನಂಬಿಕೆಗಳು ಯಥಾರೀತಿ ಮುಂದುವರೆಸಿಕೊಂಡು ಜೀವಿಸುತ್ತಿದ್ದಾರೆ. ಇಂತಹ ಹಲವು ಗಿರಿಜನರಲ್ಲಿ ಕರ್ನಾಟಕದ ವಾಲ್ಮೀಕಿ ಸಮುದಾಯವೂ ಒಂದು.

ನಮ್ಮ ರಾಜ್ಯದ ಐವತ್ತು ಬುಡಕಟ್ಟುಗಳಲ್ಲಿ ಜನಸಂಖ್ಯೆ ದೃಷ್ಟಿಯಿಂದ ನೋಡುವುದಾದರೆ ವಾಲ್ಮೀಕಿ ಬುಡಕಟ್ಟು ಪ್ರಮುಖವಾಗಿದೆ. ಸರ್ಕಾರದ ಅಧಿನಿಯಮದ ಪ್ರಕಾರ ೧೯.೦೪.೧೯೯೩ ರಂದು ಈ ಸಮುದಾಯದ ಸಮಾನಾಂತರ ಪದಗಳಾದ ನಾಯಕ, ಬೇಡರ, ವಾಲ್ಮೀಕಿ, ಇತರೆ ಹೆಸರುಗಳನ್ನೂ ಬುಡಕಟ್ಟೆಂದು ಪರಿಗಣಿಸಿತು. ಪ್ರಾದೇಶಿಕವಾಗಿ ಈ ಸಮುದಾಯದವರು ರಾಜ್ಯದಲ್ಲೆಡೆ ಕಂಡುಬಂದರೂ, ಬಹುಸಂಖ್ಯಾತವಾಗಿ ರಾಯಚೂರು, ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ, ಗುಲಬರ್ಗಾ, ಬೆಳಗಾವಿ, ತುಮಕೂರು, ಮೈಸೂರು, ಇತರೆ ಜಿಲ್ಲೆಗಳಲ್ಲಿ ಕಂಡು ಬರುತ್ತಾರೆ. ಭೌಗೋಳಿಕ ಪ್ರದೇಶಗಳ ಅನುಗುಣವಾಗಿ ಇವರನ್ನು ಭಿನ್ನ-ಭಿನ್ನವಾದ ಹೆಸರುಗಳಿಂದ ಕರೆಯಲ್ಪಡುವರು. ಈ ಸಮುದಾಯದ ಸಾಹಿತ್ಯಿಕ ಆಕರ ಗಳನ್ನು ಶೋಧಿಸಿದಾಗ ಮೂಲವನ್ನು ಅರಿತುಕೊಳ್ಳಲು ಸಾಧ್ಯ.

ವಾಲ್ಮೀಕಿ ಬೇಡರಿಗೆ, ಕಿರಾತ, ಶಬರ, ಕಂಕ, ನಿಷಾಧ, ಕುಳಿಂದ, ಪುಳಿಂದ, ಭಿಲ್ಲ, ವ್ಯಾಧ, ವನಚರ, ವಾಲ್ಮೀಕಿ, ತಳವಾರ, ದೊರೆನಾಯಕ, ಕಣ್ಣಪ್ಪನ ಮಕ್ಕಳು, ಬೆಂದ್, ವೇದನ್, ಬೋಯಿ ಎಂಬ ಪರ್ಯಾಯ ಹೆಸರುಗಳಿವೆ. ಇವರು ಪ್ರೋಆಸ್ಟ್ರಲಾಯಿಡ್ ಜನಾಂಗಕ್ಕೆ ಸೇರಿದ್ದು, ಭಾರತದಲ್ಲಿ ಇವರು ಮೂಲ ದ್ರಾವಿಡರಾಗಿದ್ದಾರೆ. ಇವರನ್ನು ದ್ರಾವಿಡ ಭಾಷೆಯಲ್ಲಿ ವೇಡನ್, ವೆಟ್ಟುವನ್, ಹಳೆಗನ್ನಡದಲ್ಲಿ ವೇಡರ್, ವೇಳರ್ ವಿದಿರ್, ಭಿಲ್ಲ, ಬೇಂಟೆಯವರ್, ಬೆಂಟೆಕಾರ, ವಯಿದರ್, ಬಿಯದರ್, ಕಣಿಂದರ್ ಕೋವರ ಎಂಬ ಸಂವಾದಿ ಪದಗಳನ್ನು ಬಳಸಲಾಗಿದೆ ಎಂದು ಡಾ. ಕೆ.ಎಂ. ಮೈತ್ರಿಯವರು ಪ್ರಸ್ತಾಪಿಸಿದ್ದಾರೆ.

ಬೇಡರು ಕಣ್ವ ಋಷಿಯ ವಂಶಜರೆಂಬ ನಂಬಿಕೆಯಿದೆ. ಅದಕ್ಕಾಗಿಯೇ ಅವರು ತಮ್ಮನ್ನು ಕಾಣ್ಯಮ್ ಕುಲದವರೆಂದು ಕರೆದುಕೊಳ್ಳುತ್ತಾರೆ. ತಮ್ಮ ವಂಶದ ಮೂಲಪುರುಷ ವಾಲ್ಮೀಕಿ ಮಹಿರ್ಷಿಯೆಂಬ ಇನ್ನೊಂದು ನಂಬಿಕೆಯೂ ಇರುವುದರಿಂದ ತಮ್ಮನ್ನು ವಾಲ್ಮೀಕಿ ಕ್ಷತ್ರಿಯರೆಂದೂ ಕರೆದುಕೊಳ್ಳುತ್ತಾರೆ. ಅದರಂತೆ ತಮಿಳುನಾಡಿನಲ್ಲಿ ಆಗಿ ಹೋದ ೬೩ ಪುರಾತನ ಶಿವಶರಣರಲ್ಲಿ ಒಬ್ಬನಾಗಿರುವ ಬೇಡರ ಕಣ್ಣಯ್ಯ, ಕಣ್ಣಪ್ಪ ಎನ್ನುವ ವ್ಯಕ್ತಿಯು ಈ ಜನಾಂಗದ ಆದರಣೀಯ ವ್ಯಕ್ತಿ. ಇದರಿಂದ ವಾಲ್ಮೀಕಿ ಬುಡಕಟ್ಟಿಗೆ ತನ್ನದೆಯಾದ ಪುರಾತನ ಚರಿತ್ರೆ ಅಲಂಕರಿಸಿದೆ. ವಿದೇಶಿ ವಿದ್ವಾಂಸರಾದ ಬುಖನಾನ್‌ರವರು ಬೇಡರು ಮೂಲತಃ ದ್ರಾವಿಡ ಜನಾಂಗಕ್ಕೆ ಸೇರಿದವರಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಮುಂದುವರೆದು ಉತ್ತರ ಮಲಬಾರಿನ ಪೆರಿಂಗಾಲ್, ಪೆಟ್‌ವಾನ್ಸ್ ಅವರು, ಟ್ರಾವಂಕೂರಿನ ಮೂಲವೇದನ್ಸ್, ಸಿಲೋನಿನ ವೆಡ್ಡಾ ಮತ್ತು ಕರ್ನಾಟಕದ ಬೇಡರು ಒಂದೇ ಮೂಲ ದವರೆಂಬುದು ಬಿ.ಎಲ್. ರೈಸ್‌ರವರ ಅಭಿಪ್ರಾಯವಾಗಿದೆ.

ಆದಿಕಾವ್ಯವಾದ ರಾಮಾಯಣದ ರಚನಾಕಾರ ವಾಲ್ಮೀಕಿ ಮಹರ್ಷಿ ಬೇಡರವನು. ಈತ ಪೂರ್ವಾಶ್ರಮದಲ್ಲಿ ದರೋಡೆಕೋರನಾಗಿದ್ದು, ಸಪ್ತರ್ಷಿಗಳ ಪ್ರಭಾವದಿಂದ ತನ್ನ ಕ್ರೂರ ವೃತ್ತಿಯನ್ನು ತ್ಯಾಗ ಮಾಡಿದನು. ಆಮೇಲೆ ರಾಮಾಯಣ ರಚಿಸಿ ಆದಿಕವಿ ಎಂದು ಖ್ಯಾತನಾದನು. ಇದು ಪರಂಪರೆಯಾಗಿ ಬಂದ ಹೇಳಿಕೆ ರಾಮಾಯಣದ ಕರ್ತೃತ್ವವನ್ನು ಕುರಿತಂತೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಗಳಿಲ್ಲ. ಬೇಡನಾಗಿದ್ದ ವಾಲ್ಮೀಕಿಯು ಅವರ ಸಾಧನೆಯಿಂದ ಆದಿಕವಿಯಾಗಿ ಬದಲಾವಣೆ ಹೊಂದಿದ ಆತನ ಚರಿತ್ರೆಯಲ್ಲಿ ಹಲವಾರು ಭಾವುಕ ಅತಿಶಯೋಕ್ತಿಗಳು ರೂಢಿಗೆ ಬಂದುದು ಸ್ವಾಭಾವಿಕ, ವಿಶೇಷವಾಗಿ ರಾಮನಾಮ ಮಹಿಮೆಯನ್ನು ಪ್ರತಿಷ್ಠಾಪಿಸಲೋಸುಗ ವಾಲ್ಮೀಕಿ ತನ್ನ ಪೂರ್ವಾಶ್ರಮದಲ್ಲಿ ದುಷ್ಟನಿದ್ದ ನೆಂದೂ ರಾಮನಾಮದ ಮಹಿಮೆಯಿಂದ ಋಷಿಯಾದನೆಂದು ಹೇಳುವುದು ಪ್ರಚಾರಕ್ಕೆ ಬಂದಂತೆ ತೋರುತ್ತದೆ. ಈ ಹೇಳಿಕೆಯನ್ನು ನಂಬುವುದಾದರೆ ವಾಲ್ಮೀಕಿಯು ಬೇಟೆಯ ಜೀವನ ವೃತ್ತಿಯಾಗಿದ್ದ ಬೇಡ ಜನಾಂಗಕ್ಕೆ ಸೇರಿದವನೆಂದು ಭಾವಿಸಬಹುದಾಗಿದೆ. ಅವನ ಮೇಲೆ ಹುತ್ತ ಬೆಳೆಯಿತು. ಅವನ ತಂದೆ ಪ್ರಚೇತಸನು ಕಾಡನ್ನು ಕಡಿದು ಬಯಲು ಮಾಡಿದನು. ಪ್ರಚೇತಸನ ಹೆಂಡತಿ ಋಷಿ ಕನ್ಯೆಯಾಗಿದ್ದಳು, ಮುಂತಾದ ವಿವರಗಳು ವಾಲ್ಮೀಕಿಯು ಕಾಡಿನಲ್ಲಿ ವಾಸವಾಗಿದ್ದ ಬೇಡನೆಂಬುದನ್ನು ಸೂಚಿಸುತ್ತವೆ.

* * *