ಕ್ರಿಸ್ತಶಕ ೧೯೭೧ ಜನಗಣತಿಯ ಅಂಕಿ-ಅಂಶಗಳಂತೆ ಕರ್ನಾಟಕದ ಬೇಡ ಜನಾಂಗದ ಸಂಖ್ಯೆ ಸುಮಾರು ಹದಿನೈದು ಕಾಲು ಲಕ್ಷವೆಂದು ತಿಳಿದುಬರುತ್ತದೆ. ಎಂದರೆ ಇದು ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ಪ್ರತಿಶತ ಸುಮಾರು ಏಳರಷ್ಟು ಆಗುತ್ತದೆ. ವೀರಶೈವರು, ಒಕ್ಕಲಿಗರು, ಕುರುಬರು, ಮುಸಲ್ಮಾನರು – ಇವರ ತರುವಾಯದ ಸ್ಥಾನ ಬೇಡ ಜನಾಂಗಕ್ಕೆ ಸಲ್ಲುತ್ತದೆ. ಕರ್ನಾಟಕದ ಮೂಲನಿವಾಸಿಗಳೆನ್ನಬಹುದಾದ ಜನಾಂಗಗಳ ಪೈಕಿ ಬೇಡಜನಾಂಗವೂ ಒಂದು. ಹೊಲೆಯರು, ಮಾದಿಗರು, ಒಕ್ಕಲಿಗರು, ಒಕ್ಕಲುತನ ಮಾಡುವ ವೀರಶೈವ ಪಂಗಡಗಳವರು, ಕುರುಬರು ಮತ್ತು ಬೇಡರು ಬಹುಶಃ ಬಹು ಪುರಾತನಕಾಲದಿಂದ ಕರ್ನಾಟಕದ ತುಂಬೆಲ್ಲ ವಾಸ ಮಾಡುವುದು ಕಂಡುಬಂದರೂ ಸದ್ಯ ಬಳ್ಳಾರಿ, ಬೆಳಗಾವಿ, ಧಾರವಾಡ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಹೆಚ್ಚಾಗಿಯೂ ಚಿತ್ರದುರ್ಗ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಅತ್ಯಂತ ಹೆಚ್ಚಾಗಿಯೂ ಈಗ ಕಂಡು ಬರುತ್ತಾರೆ. ಗುಡ್ಡದ ಸಾಲುಗಳ ಒತ್ತಿನಲ್ಲಿರುವ ಹಲವಾರು ಊರುಗಳು ಈಗಲೂ ಸಂಪೂರ್ಣ ಬೇಡ ಜನಾಂಗದವರೆ ವಾಸವಾಗಿರುವ ಹಳ್ಳಿಗಳಾಗಿವೆ. ಇದು ವಿಶೇಷವಾಗಿ ಕರ್ನಾಟಕದ ಪಶ್ಚಿಮ ಘಟ್ಟದ ಸಾಲುಗಳಿಗಿಂತ ನಾಡಿನ ನಡುಭಾಗದಲ್ಲಿ ಹಬ್ಬಿರುವ ಗುಡ್ಡದ ಹರಿಗಳಲ್ಲಿ ಕಂಡು ಬರುವ ಸ್ಥಿತಿಯಾಗಿದೆ.

ಕರ್ನಾಟಕದಲ್ಲಿ ಮಾತ್ರವಲ್ಲದೆ, ಇಡೀ ಭಾರತದಲ್ಲಿ ವಾಸವಾಗಿರುವ ಆದಿಮ ಜನಾಂಗಗಳಲ್ಲಿ ಬೇಡ ಜನಾಂಗವೂ ಒಂದು. ನಮ್ಮ ದೇಶದಲ್ಲಿ ಬಹು ಪುರಾತನ ಕಾಲದಿಂದಲೂ ಈ ಜನಾಂಗ ಅಸ್ತಿತ್ವದಲ್ಲಿದ್ದಿತೆಂಬ ಬಗೆಗೆ ಅನುಮಾನವಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಆಧಾರಗಳು ಉಪಲಬ್ಧವಾಗಿವೆ.

ಭಾರತ ದೇಶದ ಆದಿಕಾವ್ಯವೆಂದು ಹೆಸರಾದ ರಾಮಾಯಣವನ್ನು ರಚಿಸಿದವನು ಬೇಡನಾದ ವಾಲ್ಮೀಕಿ ಮುನಿ. ಈತ ಪೂರ್ವಾಶ್ರದಲ್ಲಿ ದರೋಡೆಕಾರನಾಗಿದ್ದು ಸಪ್ತರ್ಷಿಗಳ ಪ್ರಭಾವದಿಂದಾಗಿ ತನ್ನ ಕ್ರೂರವೃತ್ತಿಯನ್ನು ತ್ಯಾಗ ಮಾಡಿದನು. ಆಮೇಲೆ ರಾಮಾಯಣ ರಚಿಸಿ ‘ಆದಿಕವಿ’ ಎಂದು ಖ್ಯಾತನಾದನು. ಇದು ಪರಂಪರೆಯ ಹೇಳಿಕೆಯಾದರೂ ರಾಮಾಯಣದ ಕರ್ತೃತ್ವವನ್ನು ಕುರಿತಂತೆ ವಿದ್ವಾಂಸರಲ್ಲಿ ಹೆಚ್ಚಿನ ಭಿನ್ನಾಭಿಪ್ರಾಯಗಳಿಲ್ಲ ವೆಂಬುದು ಗಮನಾರ್ಹವಾಗಿದೆ. ಬೇಡನಾಗಿದ್ದ ವಾಲ್ಮೀಕಿಯು ಆದಿಕವಿಯ ಪಟ್ಟಕ್ಕೇರಿದ್ದ ರಿಂದ ಆತನ ಚರಿತ್ರೆ ಹೇಳುವಲ್ಲಿ ಹಲವಾರು ಪೌರಾಣಿಕ ಅತಿಶಯೋಕ್ತಿಗಳು ಪ್ರಚಲಿತಗೊಂಡಿ ರುವುದು ಸ್ವಾಭಾವಿಕ. ವಿಶೇಷವಾಗಿ ‘ರಾಮನಾಮ’ ಮಹಿಮೆಯನ್ನು ಪ್ರತಿಷ್ಠಾಪಿಸಲೋಸುಗ ವಾಲ್ಮೀಕಿ ತನ್ನ ಪೂರ್ವಾಶ್ರಮದಲ್ಲಿ ದುಷ್ಟನಿದ್ದನೆಂದೂ ರಾಮನಾಮದ ಮಹಿಮೆಯಿಂದ ಋಷಿಯಾದನೆಂದೂ ಹೇಳುವುದು ಅದರ ಮುಖ್ಯ ಆಶಯವೆಂದು ತೋರುತ್ತದೆ. ಇದೇ ರೀತಿಯಲ್ಲಿ ತಮ್ಮ ಮತಮಹಿಮೆಯನ್ನು ಹೇಳಲು ಬೌದ್ಧರು ತಮ್ಮ ಗ್ರಂಥಗಳಲ್ಲಿ ಅಶೋಕನು ಬಹು ಕ್ರೂರಿಯಾಗಿದ್ದನೆಂದು ಹೇಳಿದ್ದಾರೆ. ಅವನು ತನ್ನ ಸಹೋದರರನ್ನೆಲ್ಲ ಸಂಹರಿಸಿ ಪಟ್ಟಕ್ಕೆ ಬಂದಿದ್ದನೆಂದೂ ಬೌದ್ಧದೀಕ್ಷೆ ಹೊಂದಿದ ಮೇಲೆ ಆತನಲ್ಲಿ ಮಾನಯ ಗುಣಗಳ ಪ್ರಾರ್ದುರ್ಭಾವವಾದ ಮೇಲು ಅವನ ಸಹೋದರರು ಜೀವಿಸಿದ್ದರೆಂಬುದಕ್ಕೆ ಶಾಸನಗಳೆ ಆಧಾರವಾಗಿವೆ! ಆದ್ದರಿಂದ ವಾಲ್ಮೀಕಿಯು ಬೇಟೆಯೆ ಜೀವನಾಧಾರವಾಗಿರುವ ಪಂಗಡವಾದ ಬೇಡ ಜನಾಂಗಕ್ಕೆ ಸೇರಿದ್ದನೆಂಬುದು ಮಾತ್ರ ಸತ್ಯ. ಉಳಿದುದೆಲ್ಲ ಕಲ್ಪನೆಯಾಗಿ ತೋರುತ್ತದೆ. ಅವನ ಮೇಲೆ ಹುತ್ತ ಬೆಳೆದಿದ್ದಿತೆಂದೂ ಅವನ ತಂದೆ ಪ್ರಜೇತಸರು ಕಾಡನ್ನು ಕಡಿದು ಬಯಲು ಮಾಡಿದರೆಂದೂ ಪ್ರಜೇತಸರ ಹೆಂಡತಿ ವೃಕ್ಷಕನ್ಯೆಯೆಂದೂ ವಿವರಿಸುವುದು ವಾಲ್ಮೀಕಿಯು ಬೇಡನೇ ಆಗಿದ್ದನೆಂಬ ಸಂಗತಿಯತ್ತ ನಿರ್ದಿಷ್ಟವಾಗಿ ಬೆರಳು ಮಾಡುತ್ತವೆ.

ವಾಲ್ಮೀಕಿ ರಾಮಾಯಣದಲ್ಲಿ ಬರುವ ಇನ್ನೊಂದು ಪಾತ್ರ ಶಬರಿಯದು. ಶಬರಿಯ ಹೆಸರೇ ‘ಬೇಡತಿ’ (=ಸಂ. ಶಬರಿ) ಎಂದು ರಾಮಾಯಣ ತಿಳಿಸುತ್ತದೆ. ಇವಳ ಹೆಚ್ಚಿನ ಇತಿವೃತ್ತಗಳು ಅದರಲ್ಲಿಲ್ಲ. ರಾಮನ ಭಕ್ತಳಾಗಿ ಪಂಪಾಕ್ಷೇತ್ರದ ಸಮೀಪ ವಾಸವಾಗಿದ್ದ ಳೆಂದೂ ರಾಮ-ಲಕ್ಷ್ಮಣರು ಅಲ್ಲಿ ಬಂದಾಗ ಅವರನ್ನು ಬೋರೆಯ ಹಣ್ಣನ್ನು ನೀಡಿ ಸತ್ಕರಿಸಿದಳೆಂದೂ ಅದರಲ್ಲಿಯ ಉಲ್ಲೇಖ ಪ್ರಸಿದ್ಧವಾಗಿದೆ. ಸತ್ಕರಿಸಲು ಅವಳಿಗೆ ಹಾಗೆ ದೊರೆತದ್ದು ಬೋರೆಯ ಹಣ್ಣೆಂಬುದು ಬಹು ವಾಸ್ತವವಾದ ಸಂಗತಿ.

ಮಹಾಭಾರತದಲ್ಲಿ ಬೇಡ ಜನಾಂಗದ ಉಲ್ಲೇಖಗಳು ಮಹತ್ವಪೂರ್ಣವಾಗಿದ್ದು ಸಂಖ್ಯೆಯ ದೃಷ್ಟಿಯಿಂದಲೂ ಹೆಚ್ಚಾಗಿವೆ. ಪುಲಿಂದ, ನಿಷಾದ, ವ್ಯಾಧ ಮುಂತಾದ ಹೆಸರಿನಿಂದ ಈ ಜನಾಂಗದ ಉಲ್ಲೇಖಗಳು ಅಲ್ಲಿ ಕಂಡುಬರುತ್ತವೆ. ಇವರ ಪ್ರತ್ಯೇಕ ರಾಜ್ಯಗಳೆ ಇದ್ದ ಬಗೆಗೆ ಅದರಲ್ಲಿ ಆಧಾರಗಳಿವೆ. ಏಕಲವ್ಯನು ನಿಷಾದರಾಜನ ಮಗನಾಗಿದ್ದನೆಂಬ ಸಂಗತಿ ಪ್ರಸಿದ್ಧವಾದುದು. ಈತ (ಉಚ್ಚಜಾತಿಯ ಯಾವ ಗುರುವೂ ಇಲ್ಲದೆ) ಧನುರ್ವಿದ್ಯೆಯಲ್ಲಿ ಪಾರಂಗತನಾಗಿದ್ದನು. ಆಗ ಕ್ಷತ್ರಿಯರೆಂದು ತಿಳಿಯಲ್ಪಡುತ್ತಿದ್ದವರಿಗಿಂತ ಮಿಗಿಲಾದ ಬಿಲ್ಲುಗಾರಿಕೆ ಅವನದಾಗಿತ್ತು. ಧನುರ್ವಿದ್ಯಾವಿಶಾರದನಾಗಿದ್ದ ದ್ರೋಣನು ಆಶ್ಚರ್ಯಪಡುವ  ರೀತಿಯಲ್ಲಿ ಏಕಲವ್ಯನು ಅದರಲ್ಲಿ ಪ್ರಣನಾಗಿದ್ದನು.

ಶಿವನ ಇಪ್ಪತ್ತೈದು ಲೀಲೆಗಳಲ್ಲಿ ಒಂದಾದ ಕಿರಾತರುದ್ರಲೀಲೆಯ ಪ್ರಸಂಗವು ಮಹಾಭಾರತದ ಅರಣ್ಯಕಪರ್ವದಲ್ಲಿ ವಿಸ್ತಾರವಾಗಿ ಪ್ರತಿಪಾದಿತವಾಗಿದೆ. ಶಿವನು ಬೇಡ ವೇಷದಿಂದ ಬಂದು ಮೂಕದಾನವನನ್ನು ಸಂಹರಿಸಿ ಅರ್ಜುನನಿಗೆ ಪಾಶುಪತಾಸ್ತ್ರ ದಾನ ಮಾಡಿದ್ದು ಪ್ರಸಿದ್ಧವಾದ ಅಖ್ಯಾಯಿಕೆ. ಇದರಿಂದ ಅಂದು ಬೇಡ ಜನಾಂಗ ಮತ್ತು ಅವರ ವೇಷ-ಭೂಷಣಗಳು ಸುಪರಿಚಿತವಾಗಿದ್ದವೆಂದು ತಿಳಿಯಬಹುದು.

ಇದೇ ಅರಣ್ಯಕಪರ್ವದಲ್ಲಿ ಬರುವ ಧರ್ಮವ್ಯಾಧನ ಕತೆ ಸಹ ಪ್ರಖ್ಯಾತವಾಗಿದೆ. ಆದರೆ ಈ ಪಾತ್ರ ಮತ್ತು ಸನ್ನಿವೇಶಗಳು ಭಾರತ ದೇಶದಲ್ಲಿ ಮಾಂಸಾಹಾರ ಅದರಲ್ಲೂ ಗೋಮಾಂಸಾಹಾರದ ವಿಷಯಕ್ಕೆ ತೀವ್ರವಾದ ಮತಭೇದಗಳು ಹುಟ್ಟಿಕೊಂಡ ತರುವಾಯ ಸೃಷ್ಟಿಸಲ್ಪಟ್ಟಂತೆ ಕಾಣುತ್ತದೆ. ಪುಣೆಯ ಭಂಡಾರಕರ ಸಂಸ್ಥೆಯವರು ಮಾತ್ರ ಈ ಪ್ರಸಂಗವನ್ನು ತಮ್ಮ ಸಂಶೋಧಿತ ಆವೃತ್ತಿಯಲ್ಲಿಯೆ ಸ್ವೀಕರಿಸಿದ್ದಾರೆ.

ರಾಮಾಯಣ-ಭಾರತಗಳಲ್ಲದೆ ಇನ್ನಿತರ ಪ್ರಾಚೀನ ಗ್ರಂಥಗಳಾದ ಅರ್ಥಶಾಸ್ತ್ರ, ಸ್ಮೃತಿಗಳು, ಭಾಸ-ಕಾಳಿದಾಸರಂತಹ ಕವಿ ಕೃತಿಗಳು ಕೂಡ ಬೇಡ ಜನಾಂಗಕ್ಕೆ ಸಂಬಂಧಪಟ್ಟ ವಿವರಗಳನ್ನು ಒದಗಿಸುತ್ತವೆ. ಅದಕ್ಕಾಗಿ ಈ ಪ್ರಾಚೀನ ಸಂಸ್ಕೃತ ಸಾಹಿತ್ಯವನ್ನು ಸೂಕ್ಷ್ಮವಾಗಿ ಪರಿಶೀಲಿಸುವುದು ಅವಶ್ಯವಾಗಿದೆ.

ಕನ್ನಡದ ಆದಿ ಕೃತಿಯಾದ ‘ವಡ್ಡಾರಾಧನೆಯಲ್ಲಿ” ಈ ಜನಾಂಗ ಸಂಬಂಧಿಯಾದ ಉಲ್ಲೇಖಗಳು ಬಂದಿವೆ. ಇದರಲ್ಲಿಯ ‘ಚಿಲಾತಪುತ್ರನ ಕಥೆ’ ೧೫ನೆಯದಾಗಿದೆ. ‘ಚಿಲಾತಪುತ್ರ’ ಎಂಬುದು ಸಂಸ್ಕೃತದ ‘ಕಿರಾತಪುತ್ರ’ ಎಂಬುದರ ಪ್ರಾಕೃತರೂಪವೆಂದು ವಿದ್ವಾಂಸರು ನಿರ್ಧರಿಸಿದ್ದಾರೆ. ಅದೇ ಗ್ರಂಥದ ವಿದ್ಯುಚ್ಚೋರನೆಂಬ ಋಷಿಯ ಕಥೆಯಲ್ಲಿಯ ಮದಂಡನೆಂಬ ತಳವಾರನ ಉಲ್ಲೇಖವಿದೆ. ಇಲ್ಲಿ ‘ತಳವಾರ’ ಅಥವಾ ‘ತಳಾರ’ನೆಂದರೆ ನಗರ ರಕ್ಷಕನಾದ ದೊಡ್ಡ ಅಧಿಕಾರಿ. ಕಳ್ಳರನ್ನು ಹಿಡಿದು ಶಿಕ್ಷಿಸುವುದೆ ಮುಂತಾದ ಆರಕ್ಷಕ ಶೌರ್ಯಗಳು ಅವನ ಹೊಣೆಯಾಗಿದ್ದಂತೆ ಅದರಿಂದ ತಿಳಿಯುವುದು. ಇದೇ ರೀತಿ ಸುಕುಮಾರಸ್ವಾಮಿಯ ಕಥೆಯಲ್ಲಿ ಬರುವ ಸುಧಾಮೆಯ ಉಪಕತೆಯಲ್ಲಿಯೂ ತಳವಾರನ ಉಲ್ಲೇಖವಿದೆ. ಇದರಿಂದ ಕನ್ನಡ ವಡ್ಡಾರಾಧನೆಗೆ ಮೂಲಗ್ರಂಥವಾಗಿರುವ ಭಗವತೀ ಆರಾಧನೆಯ ಕಾಲಕ್ಕಾಗಲೆ ಈ ಜನಾಂಗವನ್ನು ಕುರಿತಂತೆ ಜೈನಮತವು ತನ್ನ ಲಕ್ಷ್ಯ ಹರಿಸಿದ್ದಿತೆಂದು ಕಂಡುಬರುವುದು.

ಅರವತ್ತು ಮೂರು ಮಂದಿ ಪುರಾತನರಲ್ಲಿ ಬೇಡರ ಕಣ್ಣಪ್ಪನೂ ಒಬ್ಬ. ಈತ ಕಾಳಹಸ್ತಿಯಲ್ಲಿ ಶ್ರೀಕಾಳಹಸ್ತೀಶ್ವರನನ್ನು ಪೂಜಿಸಿ ಪ್ರಸಿದ್ಧನಾದವನು. ಅದೇ ರೀತಿ ಹನ್ನೆರಡು ಜನ ಆಳ್ವಾರರುಗಳಲ್ಲಿ ಒಬ್ಬರಾದ ಪರಕಾಲರೂ ಪ್ರಸಿದ್ಧರಾಗಿದ್ದಾರೆ. ಪರಶೌಲರು ಶೂದ್ರ ಜಾತಿಯ ಗುರಿಕಾರರೆಂದು ಹೇಳಲಾಗುತ್ತದೆ. ಪೂರ್ವಾಶ್ರಮದಲ್ಲಿ ರಾಜನ ಅಧಿಕಾರಿಯಾಗಿದ್ದು ಕಾರಣಾಂತರಗಳಿಂದ ಕಳವು, ಸುಲಿಗೆಗಳಲ್ಲಿ ನಿರತರಾಗಿದ್ದರೆಂದೂ ತಿಳಿದುಬರುತ್ತದೆ. ತರುವಾಯ ವಿಷ್ಣು ಸಾಕ್ಷಾತ್ಕಾರ ಹೊಂದಿ ಪ್ರಸಿದ್ಧ ಭಕ್ತರೆನಿಸಿದರು. ಇವರೂ ಬಹುಶಃ ಬೇಡರು.

ಇದೇ ರೀತಿ ಹನ್ನೆರಡನೆಯ ಶತಮಾನದಲ್ಲಿ ಆಗಿ ಹೋದ ಶರಣರಲ್ಲಿ ಕೆಲವರಾದರೂ ಈ ಜನಾಂಗದವರಿರಬೇಕೆಂದು ತೋರುತ್ತದೆ. ಸೂಕ್ಷ್ಮವಾಗಿ ಪರಿಶೀಲಿಸಿದರೆ, ಬೇಡ ಜನಾಂಗದ ಶರಣರ ಹೆಸರುಗಳೂ ಬೆಳಕಿಗೆ ಬರಬಹುದು.

ಹೀಗೆ ಅತಿ ಪ್ರಾಚೀನ ಕಾಲದಿಂದಲೂ ಇವರ ಜೀವನ ಹಲವು ರಂಗಗಳಲ್ಲಿ ಪ್ರಸಿದ್ದಿ ಪಡೆಯುತ್ತ ಬಂದಿದ್ದರೂ ವ್ಯವಸ್ಥಿತವಾದ ಗ್ರಂಥಸ್ಥ ಸಾಮಗ್ರಿ ದೊರೆಯುತ್ತಿಲ್ಲ. ಪ್ರಾಚೀನ ಕಾಲದಿಂದಲೂ ಇವರು ಯುದ್ಧ ಕಲೆಯಲ್ಲಿ ನುರಿತವರೂ ಧೀರಯೋಧರೂ ಆಗಿದ್ದು, ಕರ್ನಾಟಕದಲ್ಲಿಯ ಸೈನಿಕ ಜನಾಂಗ(marshal race)ಗಳಲ್ಲಿ ಬಹುಮುಖ್ಯರಾಗಿದ್ದರು. ಏಳನೆಯ ಶತಮಾನದಿಂದ ಇವರ ಪ್ರತ್ಯೇಕ ರಾಜ್ಯಗಳೆ ಇದ್ದುವೆಂದು ಗದ್ದೆ ಮನೆ ಶಾಸನದಿಂದ ಸ್ವಯಂವ್ಯಕ್ತವಾಗಿದೆ. ಗ್ರಂಥಸ್ಥ ಸಾಹಿತ್ಯವು ಇವರ ಬಗೆಗೆ ಹೆಚ್ಚಿನ ವಿವರಗಳನ್ನು ಕೊಡು ವುದಿಲ್ಲ. ಇವರು ಬೇಟೆಯಾಡುವುದೆ ಮುಂತಾದ ಸಂಗತಿಗಳನ್ನು ಮಾತ್ರ ಆಗೀಗ ಗ್ರಂಥಗಳು ಉಲ್ಲೇಖಿಸುತ್ತವೆ.

ನಮ್ಮ ಸಾಹಿತ್ಯ, ಶಾಸನ, ಇತ್ಯಾದಿ ಆಕರಗಳು ಕರ್ನಾಟಕದ ಎಲ್ಲ ರಾಜ ಮನೆತನಗಳನ್ನು ಸೂರ್ಯವಂಶದವರು, ಚಂದ್ರವಂಶದವರು ಅಥವಾ ಯಾದವ ವಂಶದವರು ಎಂದು ಮುಂತಾಗಿ ಹೊಗಳುತ್ತವೆ. ಕದಂಬ ಮತ್ತು ಚಾಲುಕ್ಯರನ್ನು ಹೊರತುಪಡಿಸಿ ಕರ್ನಾಟಕದ ಇತರ ರಾಜಮನೆತನಗಳೆಲ್ಲ ಕೆಳವರ್ಗದಿಂದಲೆ ಬಂದಂತಹವುಗಳು. ಆದರೆ ಯಾವ ರಾಜಕುಲವೂ ತಮ್ಮ ಮೂಲವನ್ನು ನೇರವಾಗಿ ಹೇಳಿಕೊಳ್ಳುವುದಿಲ್ಲ. ಹೀಗಾಗಿ ಕೆಳವರ್ಗದ ಜನಾಂಗಗಳ ಚರಿತ್ರೆಯನ್ನು ಕತ್ತಲೆ ಆವರಿಸಿದೆ. ಇದ್ದುದರಲ್ಲಿ ಬೇಡ ಜನಾಂಗದ ಬಗೆಗೆ ಅಷ್ಟಿಷ್ಟು ವಿಷಯ ಶಾಸನ ಮತ್ತು ಗ್ರಂಥಗಳಿಂದ ಬರುತ್ತದೆ. ಉದಾಹರಣೆಗೆ, ಮೇಲೆ ಹೇಳಿದ ಗದ್ದೆಮನೆ ಶಾಸನವನ್ನು ನೋಡಬಹುದು. “ಸ್ವಸ್ತಿಶ್ರೀ ಶೀಲಾದಿತ್ಯನ್ ದಿಶಾವನ್ ಭಾರ್ಗವನ್ ಆಗ್ಗಳಕಣ್ಣನ್ ಬೇಡರಾಯರ ಮಲಪ್ಪರ್ ಕಾಳೆಗದುಳೆವಿಱದು ಸ್ವರ್ಗ್ಗಾಲಯಕ್ಕೇಱಿದನ್”.

ನನಗೆ ತಿಳಿದಿರುವ ಮಟ್ಟಿಗೆ, ಕರ್ನಾಟಕದಲ್ಲಿ ಈ ಜನಾಂಗವನ್ನು ಕುರಿತಂತೆ ಅತ್ಯಂತ ಪ್ರಾಚೀನ ಮತ್ತು ಖಚಿತವಾದ ಉಲ್ಲೇಖವೆಂದರೆ ಇದೇ. ಇದರಲ್ಲಿ ‘ಬೇಡರರಾಯ’ ಎಂದರೆ ಬೇಡರರಾಜನ ಸ್ಪಷ್ಟ ನಿರ್ದೇಶವಿದೆ. ಇಲ್ಲಿ ಉಲ್ಲೇಖಿತನಾದ ಶೀಲಾದಿತ್ಯನೆಂದರೆ ಕನೋಜಿನ ಪ್ರಸಿದ್ಧ ದೊರೆ ಹರ್ಷವರ್ಧನ ಎಂದು ವಿದ್ವಾಂಸರ ಮತವಾಗಿದೆ. ಪೆಟ್ಟಣಿಸತ್ಯಾಂಕ ಅಥವಾ ಬೇಲಳೆಯ ಮಾಳನೆಂಬವನು ಬೋಡರಾಯರು ಮತ್ತು ಮಲ (ಲೆ) ಪರ ಜತೆಗಿನ ಕಾಳಗದಲ್ಲಿ ಮಡಿದು ರಸ್ವರ್ಗ ಪಡೆದನೆಂಬುದು ಶಾಸನದ ಅಭಿಪ್ರಾಯ. ಎಂದರೆ, ಆ ಕಾಲಕ್ಕಾಗಲೆ ಬೇಡರ ರಾಜ್ಯಗಳು ಕರ್ನಾಟಕದಲ್ಲಿ ಇದ್ದವೆಂಬ ಸಂಗತಿ ಇದರಿಂದ ಸಿದ್ಧವಾಗುತ್ತದೆ.

ಪ್ರಸ್ತುತ ಗದ್ದೆ ಮನೆ ಶಾಸನದಲ್ಲಿ ಬೇಡರರಾಯರ ಜತೆಗೆ ಮಲಪ್ಪರ್ ಅಥವಾ ಮಲೆಪ್ಪರ್ ಎಂಬ ರಾಜರನ್ನೂ ಹೆಸರಿಸಲಾಗಿದೆ. ಇವರನ್ನು ಮುಂದಿನ ಕಾಲದ ಕರ್ನಾಟಕದ ಶಾಸನ ಮತ್ತು ಗ್ರಂಥಗಳು ಮಲೆಪರ್, ಮಲೆವರ್ ಇತ್ಯಾದಿಯಾಗಿ ಸಂಬೋಧಿಸುತ್ತವೆ. ಪಂಪ, ಎರಡನೆಯ ನಾಗವರ್ಮ ಮೊದಲಾದವರಲ್ಲಿ ಈ ಪ್ರಯೋಗಗಳಿವೆ. ಮಲಪರೆಂದರೆ ಗುಡ್ಡಗಾಡು ಪ್ರದೇಶಗಳ ರಾಜರು. ಇವರು ಬಹುಶಃ ಬೇಡರಾಜರೆ ಎಂದು ತೋರುತ್ತದೆ. ಹೊಯ್ಸಳರು ತಮ್ಮನ್ನು ಉದ್ದಕ್ಕೂ ಮಲೆಪರೊಳ್‌ಗಂಡರೆಂದು ಕರೆದುಕೊಂಡಿದ್ದಾರೆ. ಅವರ ಮೂಲಪುರುಷನಾದ ಸಳನು ಬೇಟೆಯಾಡಿ ಬಂದು ತರುವಾಯ ವಾಸುತಿಕಾದೇವಿಯ ಗುಡಿಯಲ್ಲಿ ಎರಿಬಂದ ಹುಲಿಯನ್ನು ಕೊಂದನೆಂದು ಹೇಳಿಕೊಂಡಿರುವುದು ತುಂಬ ಗಮನಾರ್ಹವಾಗಿದೆ. ಇವೆರಡೂ ಅಂಶಗಳು ಹೊಯ್ಸಳರು ಬೇಡ ಮೂಲದವರೇ ಎಂಬುದನ್ನು ಸಂಕೇತಿಸುತ್ತವೆ.

ತರುವಾಯದ ರಾಜಮನೆತನಗಳಲ್ಲಿ ಕಂಪಲಿರಾಜ್ಯದ ಕಂಪಿಲರಾಯನು ಬೇಡರವನು. ಕುಮ್ಮಟದುರ್ಗದಲ್ಲಿದ್ದುಕೊಂಡು ಈತ ಮುಸಲ್ಮಾನರ ದಕ್ಷಿಣ ಆಕ್ರಮಣವನ್ನು ನಿಗ್ರಹಿಸಿದನು. ಈತನ ಮಗ ಕುಮಾರರಾಮನು ತನ್ನ ಶೀಲ ಮತ್ತು ಪರಾಕ್ರಮಕ್ಕಾಗಿ ಪ್ರಖ್ಯಾತನಾದವನು. ಹೊಯ್ಸಳ ಮತ್ತು ದೆಹಲಿಯ ಸುಲ್ತಾನರ ಸೈನ್ಯಗಳನ್ನು ಸೋಲಿಸಿದ ಕೀರ್ತಿ ಈತನದು. ‘ದೈವಾಂಶಸಂಭೂತ’ನೆಂದು ಈವರೆಗೂ ಪೂಜೆಗೊಳ್ಳುತ್ತಿರುವನು. ಅಲ್ಲದೆ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಲ್ಲಿ ಕೂಡ ಕಂಪಲಿರಾಜ್ಯವು ಬಹುಮುಖ್ಯವಾದ ಪಾತ್ರವಾಗಿದೆ.

ಕಂಪಲಿಯ ರಾಜ್ಯ ಚಿಕ್ಕದಾಗಿದ್ದರೂ ಹೊಯ್ಸಳ, ಮುಸಲ್ಮಾನರಂತಹ ಪ್ರಬಲರನ್ನು ಪ್ರತಿಭಟಿಸುವಷ್ಟು ಸಾಮರ್ಥ್ಯ ಪಡೆದುದು ಅದರ ನೈಸರ್ಗಿಕ ಸ್ಥಾನದಿಂದ. ಇದನ್ನು ಮನಗಂಡ ಹಕ್ಕ-ಬುಕ್ಕರು ಅದರ ಸಮೀಪದಲ್ಲಿ ಗುಡ್ಡ-ಬೆಟ್ಟಗಳಿಂದ ಆವೃತವಾದ ವಿಜಯನಗರ ಪ್ರದೇಶವನ್ನು ತಮ್ಮ ಹೊಸರಾಜ್ಯದ ಕೇಂದ್ರವಾಗಿ ಆಯ್ದುಕೊಂಡರು. ಕೆಲವು ಇತಿಹಾಸಜ್ಞರ ಅಭಿಪ್ರಾಯದಲ್ಲಿ, ಈ ಸಹೋದರರು ಮೊದಲು ಕಂಪಿಲಿಯಲ್ಲಿಯೆ ಅಧಿಕಾರಿಗಳಾಗಿದ್ದವರು. ಹೀಗೆ ಹಿಂದೂ ಸಂಸ್ಕೃತಿಯ ರಕ್ಷಣಾಕೋಟೆಯಂತಿದ್ದ ವಿಜಯನಗರ ಸಾಮ್ರಾಜ್ಯಕ್ಕೆ ಕಂಪಲಿಯ ರಾಜ್ಯವೆ ಅಡಿಗಲ್ಲಾಗಿದ್ದುದು ಕಂಡುಬರುತ್ತದೆ.

ವಿಜಯನಗರ ರಾಜ್ಯದ ಕಾಲದಲ್ಲಿ ಕರ್ನಾಟಕದ ತುಂಬ ಹಲವು ಪಾಳೆಯಪಟ್ಟುಗಳು ಹರಡಿದ್ದವೆಂಬುದು ನಿಸ್ಸಂಶಯ. ಅವುಗಳ ಉಲ್ಲೇಖಗಳು ಅಲ್ಲಲ್ಲಿ ಕಂಡುಬರುತ್ತವೆ. ಅಂತಹ ಪಾಳೆಯಗಾರರರಲ್ಲಿ ಬಹುಜನರು ಬೇಡ ಜನಾಂಗದವರಾಗಿದ್ದರೆಂದು ಊಹಿಸಬಹುದಾಗಿದೆ. ತಿರುಮಲಾರ್ಯನು ತನ್ನ ‘ಚಿಕದೇವರಾಯ ವಂಶಾವಳಿ’ಯಲ್ಲಿ ಚಿಂತನಕಲ್ಲು, ಚಿಕ್ಕನಾಯಕಹಳ್ಳಿ, ಬಾಣಾವಾರ, ಬಸವಪಟ್ಟಣ, ಸೀರೆ (ಸಿರಾ) ಮುಂತಾದ ಪಟ್ಟಣಗಳಲ್ಲಿ ಬೇಡರ ರಾಜರು ಪಾಳೆಯಗಾರರಾಗಿ ಆಳುತ್ತಿದ್ದರೆಂದು ಹೇಳಿದ್ದಾನೆ.

ಚಿತ್ರದುರ್ಗದ ನಾಯಕರು ಬಹು ಪ್ರಸಿದ್ಧ ಪಾಳೆಯಗಾರರು, ಸ್ವತಂತ್ರರಾಗಿ ರಾಜ್ಯವಾಳಲು ಪ್ರಯತ್ನಿಸಿ ಹೈದರ್ ಆಲಿ ಮತ್ತು ಮರಾಠ ಪೇಶ್ವೆಗಳಿಂದಾಗಿ ನಾಶವಾದರು. ಕರ್ನಾಟಕದ ಇತ್ತೀಚಿನ ಇತಿಹಾಸದಲ್ಲಿ ಪ್ರಮುಖವಾಗಿದ್ದ ಬೇಡರ ರಾಜ್ಯವೆಂದರೆ ಇದೇ.

ಚಿತ್ರದುರ್ಗದ ಪಾಳೆಯಪಟ್ಟಿನ ಜೊತೆಗೆ ಸುರಪುರದ ನಾಯಕರನ್ನೂ ತರೀಕೆರೆಯ ಪಾಳೆಯಪಟ್ಟನ್ನೂ ಹೆಸರಿಸಬಹುದು. ಇವೆರಡೂ ಪಾಳೆಯಪಟ್ಟುಗಳು ಮೊನ್ನೆ ಮೊನ್ನೆಯ ವರೆಗೂ ಅಧಿಕಾರದಲ್ಲಿದ್ದವು.

ಆಧುನಿಕ ಕಾಲದಲ್ಲಿ ಹಲಗಲಿಯ ಬೇಡರು ಬ್ರಿಟಿಷರ ವಿರುದ್ಧ ಬಂಡಾಯ ಮಾಡಿ ಪ್ರಸಿದ್ಧರಾದರು. ತಮ್ಮ ಶಸ್ತ್ರಗಳನ್ನು ಒಪ್ಪಿಸಬೇಕೆಂದಾಗ ಅದಕ್ಕೊಪ್ಪದೆ ರಾವೇಶದಿಂದ ಹೋರಾಡಿ ಹಲವಾರು ಸಾವು-ನೋವುಗಳಿಗೆ ಗುರಿಯಾದ ಬಂಟರಿವರು. ಇವರಂತೆ ಸಿಂಧೂರ ಲಕ್ಷ್ಮಣ ಕೂಡ ಹಲವು ಕಾಲ ಬ್ರಿಟಿಷರ ವಿರುದ್ಧ ಕತ್ತಿ ಹಿಡಿದು ಶರಣಾಗತನಾಗದೆ ಸಿಂಹದಂತೆ ಸಂಚರಿಸುತ್ತಿದ್ದನು. ಕೊನೆಗೂ ಬ್ರಿಟಿಷರು ಈತನನ್ನು ಮೋಸದಿಂದ ಕೊಲ್ಲಬೇಕಾಗಿ ಬಂತು. ಹಲಗಲಿಯ ಬೇಡರು ಮತ್ತು ಸಿಂಧೂರ ಲಕ್ಷ್ಮಣರ ಲಾವಣಿಗಳು ಈಗಲೂ ಉತ್ತರ ಕರ್ನಾಟಕದ ಜನತೆಯ ನಾಲಗೆಯ ಮೇಲೆ ನರ್ತಿಸುತ್ತಿವೆ.

ಬೇಡ ಜನಾಂಗಕ್ಕೆ ಸೇರಿದ ಇನ್ನೂ ಹಲವಾರು ಚಿಕ್ಕ ಪುಟ್ಟ ರಾಜ್ಯಗಳು ಕರ್ನಾಟಕ ಮತ್ತು ನೆರೆಹೊರೆಯ ರಾಜ್ಯಗಳಲ್ಲಿ ಆಗಿ ಹೋಗಿವೆ. ಅನೇಕ ಪಾಳೆಯಗಾರರ ಇತಿಹಾಸವು ಇಂದು ಉಳಿದುಬಂದಿಲ್ಲ. ಅದರಿಂದಾಗಿ ಅವರ ಜಾತಿ-ಮತಗಳು, ಸಾಧನೆಗಳು ಏನೆಂದು ತಿಳಿದು ಬರುವುದಿಲ್ಲ. ಈ ವಿಷಯವನ್ನು ಕುರಿತಂತೆ ಹೆಚ್ಚಿನ ಸಂಶೋಧನೆ ನಡೆದರೆ ಸಾಕಷ್ಟು ಹೊಸ ಸಂಗತಿಗಳು ಬೆಳಕಿಗೆ ಬರಬಹುದು.

ಸದ್ಯ, ಇವರಿಗೆ ಹಲವಾರು ಜಾತಿ-ವಾಚಕಗಳು ರೂಢವಾಗಿವೆ. ಬೇಡ, ಬೇರಡ, ವೇಡನ್ ಎಂಬವುಗಳ ಮೂಲಾರ್ಥ ಬಹುಶಃ ಬೇಟೆಯಾಡುವವನು ಎಂದು. ತಮಿಳಿನ ವೇಟ್ಟೈ, ಕನ್ನಡದ ಬೇಟೆ ಮುಂತಾದವು ಇದರ ಜ್ಞಾತಿಶಬ್ದಗಳು. ಎರಡನೆಯ ವರ್ಗದ ನಾಯಕ, ನಾಯಕ ಮಕ್ಕಳು, ನಾಯಕವಾಡಿ, ಪಾಳೆಯಗಾರರು ಎಂಬವು ಇವರು ಸೈನಿಕ ಜನಾಂಗ, ಪಾಳೆಯಗಾರರು ಎಂಬುದನ್ನು ತಿಳಿಸುತ್ತವೆ. ವಾಲ್ಮೀಕಿ, ರಾಮೋಶಿ ಎಂಬವು ಸಾಂಸ್ಕೃತಿಕ ಸ್ತರ ಸೂಚಿಸಲು ಇವರು ಹೇಳಿಕೊಳ್ಳುವ ಹೆಸರುಗಳು. ಪ್ರಸಿದ್ಧ ಕವಿ ವಾಲ್ಮೀಕಿಯು ತಮ್ಮ ಮೂಲಪುರುಷನೆಂದು ಭಾವಿಸುವಂತೆಯೆ, ತಾವು ರಾಮನ ವಂಶದವರೆಂದು ಸೂಚಿಸಲು ‘ರಾಮೋಶಿ’ ಎಂದು ಹೇಳಿಕೊಳ್ಳುವರು. ಸಂಸ್ಕೃತ ಭಾಷೆಯ ‘ರಾಮವಂಶೀಯ’ ಎಂಬುದು ಇದರ ಮೂಲರೂಪ ‘ರಾಮೋಶಿ’ ಎಂಬ ಹೆಸರು ಮಹಾರಾಷ್ಟ್ರದಲ್ಲಿ ವಿಶೇಷ ಪ್ರಚಾರ ದಲ್ಲಿದೆ. ತಾವು ರಾಮವಂಶೀಯರೆಂಬ ನಂಬಿಕೆ ಆ ಭಾಗದಲ್ಲಿದೆ. ಇದು ಪರಿಶೀಲನಾರ್ಹವಾದ ವಿಷಯ. ಮಹಾಭಾರತವು ವ್ಯಾಸನ ವಂಶಸ್ಥರ ಚರಿತ್ರೆಯಾಗಿರುವಂತೆ ವಾಲ್ಮೀಕಿಯು ಬರೆದ ರಾಮಾಯಣವೂ ಆತನ (ವಾಲ್ಮೀಕಿಯ) ವಂಶಸ್ಥರ ಚರಿತ್ರೆಯಾಗಿರಬಹುದೆ? ನಾಲ್ಕನೆಯ ವರ್ಗದಲ್ಲಿ ತಳವಾರ, ಪರಿವಾರದವರು, ಬೋವ ಎಂಬ ಹೆಸರುಗಳು ಬರುತ್ತವೆ. ಇವು ಇವರು ಸೇವಾವರ್ಗದವರೆಂಬುದನ್ನು ಸೂಚಿಸುತ್ತವೆ. ತಳವಾರ ಎಂಬುದು ಮೂಲತಃ ‘ತಲವಾರ’ ಎಂಬುದರಿಂದ ಬಂದುದು. ಎಂದರೆ ಆರಕ್ಷಕರೆಂಬರ್ಥದಲ್ಲಿ ಇದು ಮುಂಚೆ ಬಳಕೆಯಾಗುತ್ತಿತ್ತು. ಇದೇ ಅರ್ಥದಲ್ಲಿ ಹಳಗನ್ನಡದಲ್ಲಿಯ ‘ತಳಾಱ’ವು ‘ತಳಾರ’ ಎಂಬ ರೂಪದಲ್ಲಿ ಪ್ರಯೋಗಗೊಳ್ಳುತ್ತಿತ್ತು. ‘ವಡ್ಡಾರಾಧನೆಯ’ ಉದಾಹರಣೆಯನ್ನು ಈಗಾಗಲೇ ನೋಡಿದ್ದೇವೆ. ಶಾಸನಗಳಲ್ಲಿ ‘ತಳಾರಾಯ’ದ ಉಲ್ಲೇಖವಿದೆ. ತಳಾರಾಯವೆಂದರೆ ಈಗಿನ ಅರ್ಥದ ‘ಆಯ’ವಲ್ಲ ಉತ್ಪನ್ನ ಅಥವಾ ಕರವೆಂದು ಅರ್ಥ. ಕ್ರಿ.ಶ. ೧೦೪೨ರ ಒಂದು ಶಾಸನದಲ್ಲಿ ‘ತಳಾರಗೂಲಿ’ಯ ಉಲ್ಲೇಖವೂ ಇದೆ. ಎಂದರೆ ಆ ಕಾಲಕ್ಕಾಗಲೆ ಇವರು ಸೇವಾಕಾರ್ಯಗಳನ್ನೂ ಕೈಕೊಳ್ಳುತ್ತಿದ್ದರೆಂದು ತಿಳಿಯಬಹುದಾಗಿದೆ. ಪರಿವಾರದವರೆಂದರೆ ರಾಜಪರಿವಾರದವರೆಂದೆ ಅರ್ಥ. ಬೇಟೆ ಮತ್ತು ಯುದ್ಧಗಳಲ್ಲಿ ರಾಜನ ಜತೆಗೆ ಯಾವತ್ತೂ ಹೋಗುತ್ತಿದ್ದುದರಿಂದ ಇವರು ಪರಿವಾರದವರೆನ್ನಿಸಿಕೊಂಡರು, ಬೋವರೆಂದರೆ ಮಿಣಿ ಮುಂತಾದ ಭಾರಗಳನ್ನು ಹೊರುವವರೆಂದು ಅರ್ಥ.

ಇವರಲ್ಲಿ ಹಲವಾರು ಪಂಗಡಗಳು ಇವೆ. ಬೆಡಗು ಹೇಳುವ ಕ್ರಮ ಇವರಲ್ಲೂ ಇದೆ. ಗರ್ಭಿಣಿಯರಿಗೆ ಕುಪ್ಪಸ ಮಾಡುವುದು (ಪುಂಸವನೆ) ಜನನಸೂತಕ, ಸೆಟ್ಟೆವ್ವನ ಪೂಜೆ, ತೊಟ್ಟಿಲಿಗೆ ಹಾಕುವುದು, ಕಿವಿ ಚುಚ್ಚುವುದು, ಜವಳ, ಲಗ್ನ, ಮುಂತಾದ ಸಂಸ್ಕಾರಗಳಿವೆ. ಸತ್ತರೆ ಮಣ್ಣು ಮಾಡುವುದೆ ಹೆಚ್ಚು. ಅಗ್ನಿ ಸಂಸ್ಕಾರವೂ ಇದೆ. ಮರಣಸೂತಕವನ್ನು ಆಚರಿಸುತ್ತಾರೆ.

ಮಕ್ಕಳಿಗೆ ರಾಮ, ಲಕ್ಷ್ಮಣ, ಹನುಮಂತ, ಮಾರುತಿ, ಭೀಮ, ಮಲ್ಲ ಮುಂತಾದ ರ‍್ಯ ಸೂಚಕ ಹೆಸರುಗಳನ್ನು ಬಿಚ್ಚುಗತ್ತರಿ ಮುಂತಾದ ಅಡ್ಡ ಹೆಸರುಗಳನ್ನೂ ಇಡುವುದು ಕಂಡುಬರುತ್ತದೆ.

ಆಯಾ ಪ್ರದೇಶದಲ್ಲಿ ಪ್ರಸಿದ್ಧರಾದ ದೇವ – ದೇವತೆಗಳಿಗೆ ನಡೆದುಕೊಳ್ಳುವುದೂ ಅವುಗಳಿಗೆ ತಕ್ಕಾಚಾರಣೆಗಳನ್ನು ನಡೆಸುವುದೂ ಇವರಲ್ಲಿ ಕಂಡುಬರುತ್ತದೆ. ಸವದತ್ತಿಯ ಎಲ್ಲಮ್ಮ, ಮಲ್ಲಯ್ಯ ಅಥವಾ ಮೈಲಾರಲಿಂಗ, ತಿರುಪತಿಯ ತಿಮ್ಮಪ್ಪ, ಹೊಸಪೇಟೆಯ ಸಮೀಪದ ಹುಲಿಗೆಮ್ಮ ಮುಂತಾದ ದೇವರುಗಳಿಗೆ ನಡೆದುಕೊಳ್ಳುತ್ತಾರೆ. ಇವರಿಗೆ ಮೀಸಲಾದ ಪ್ರತ್ಯೇಕ ದೇವರುಗಳು ಇರುವಂತೆ ಕಾಣದು. ಸ್ಥಾನಿಕವಾಗಿ ಶಿವ ಮತ್ತು ದುರ್ಗಾದೇವಿಗೆ ನಡೆದುಕೊಳ್ಳುತ್ತಾರೆ. ಭೂತ, ಮಂತ್ರ, ಮಾಟ, ದೈವ ಮುಂತಾದವುಗಳಲ್ಲಿ ನಂಬಿಕೆ ಯುಳ್ಳವರು.

ಇವರು ಪ್ರಾಚೀನ ಕಾಲದಿಂದಲೂ ಗುಡ್ಡ-ಕಾಡುಗಳಲ್ಲಿ ವಾಸಿಸುತ್ತ ಅಲ್ಲಲ್ಲಿ ತಮ್ಮದೇ ಆದ ರಾಜ್ಯಗಳನ್ನು ಸ್ಥಾಪಿಸಿಕೊಂಡು ಬಂದಂತಹವರು. ವಿದ್ಯೆಯ ಬಲವಿರದ್ದರಿಂದ ವೈದಿಕ ಸಂಸ್ಕೃತಿಯ ಜನಾಂಗಗಳವರಿಗೆ ಸರಿಸಾಟಿಯಾಗಿ ನಿಲ್ಲಲು ಸಾಧ್ಯವಾಗಿಲ್ಲ. ಆಗೀಗ ವಾಲ್ಮೀಕಿ, ಧರ್ಮವ್ಯಾಧ, ಏಕಲವ್ಯರಂತಹವರು ಆಗಿ ಹೋಗಿದ್ದರೂ ಸ್ಪರ್ಧಾ ಮನೋಭಾವ ಅಥವಾ ಸಮುದಾಯ ಪ್ರಜ್ಞೆಯಿಲ್ಲದ್ದರಿಂದ ಸಾಮಾಜಿಕವಾಗಿ ಹಿಂದುಳಿದಿದ್ದಾರೆ.

ಸೈನಿಕ ವೃತ್ತಿ ಇವರಿಗೆ ಮೊದಲಿನಿಂದಲೂ ಪ್ರಿಯವಾದ ಉದ್ಯೋಗ, ಕರ್ನಾಟಕದ ಸೈನಿಕ ಜನಾಂಗಗಳಲ್ಲಿ ಇವರೇ ಪ್ರಮುಖರು. ಈ ಕಾರಣದಿಂದಾಗಿಯೆ ಅನೇಕರು ಪಾಳೆಯಗಾರರೂ, ನಾಯಕರೂ, ಚಿಕ್ಕಪುಟ್ಟ ರಾಜರೂ ಆಗಿ ಹೋಗಿದ್ದಾರೆ. ತಳವಾರಿಕೆ ಎಂದರೆ ಆರಕ್ಷಣೆಯ ಹೊಣೆ ಇವರದೇ ಆಗಿದ್ದಿತೆಂಬ ಸಂಗತಿಯನ್ನು ಕುರಿತು ಈಗಾಗಲೇ ಹೇಳಾಗಿದೆ. ಗಸ್ತಿ ತಿರುಗುವುದು, ಕಾವಲು ಕಾಯುವುದು ಮುಂತಾದ ಕೆಲಸಗಳನ್ನು ಈ ಜನಾಂಗದವರು ಈಗಲೂ ಮಾಡುವುದನ್ನು ಕಾಣಬಹುದು. ಇವರಲ್ಲಿ ಬಹಳಷ್ಟು ಜನ ಸನದಿಗಳಿದ್ದಾರೆ.

ಮೊದಲಿನ ಕಾಲದಲ್ಲಿದ್ದ ಬೇಟೆಗಾರಿಕೆ ಈಗ ನಷ್ಟವಾಗಿದೆ. ಬೇಟೆಯ ಜೊತೆಗೆ ಇವರು ಜೇನುತುಪ್ಪ, ಆನೆಯ ಕೋರೆಗಳು, ಕಾಡುಕೋಣ ಮುಂತಾದ ಪ್ರಾಣಿಗಳ ಕೋಡುಗಳು, ಬೇರೆ ಬೇರೆ ಪ್ರಾಣಿಗಳ ಚರ್ಮ, ನವಿಲುಗರಿ, ಪುನುಗಿನ ಬೆಕ್ಕು, ಗಿಡದ ಅಂಟು ಮುಂತಾದವುಗಳನ್ನೂ ಕವಳೆ, ಬೋರೆ, ನೇರಲ ಮುಂತಾದ ಹಣ್ಣುಗಳನ್ನೂ ಸಂಗ್ರಹಿಸಿ ಮಾರುವುದು ಮುಂತಾದ ಕೆಲಸ ಮಾಡುತ್ತ ಬಂದಿದ್ದಾರೆ. ಕಟ್ಟಿಗೆ ಹಾಗೂ ಪತ್ರಾವಳಿಗಳನ್ನು ತಂದು ಮಾರುವುದು ಮೊದಲಾದ ಕಾರ್ಯಗಳನ್ನು ಇವರು ಮಾಡುತ್ತಿದ್ದುದೂ ಉಂಟು. ಈಗ ಇದೆಲ್ಲ ಕಡಿಮೆಯಾಗಿದೆ. ಹೆಚ್ಚಿನ ಜನರು ಕೃಷಿಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಅಲ್ಲೊಬ್ಬರು ಇಲ್ಲೊಬ್ಬರು ಸ್ವತಂತ್ರವಾಗಿ ಒಕ್ಕಲುತನವನ್ನೂ ಮಾಡುತ್ತಿದ್ದಾರೆ. ಈಗ ತಳವಾರಿಕೆ ಎಂದರೆ ಬೇರೆಯವರ ಮನೆ, ಹೊಲಗಳಲ್ಲಿ ಕಸ-ಮುಸುರೆ ಮಾಡುವುದು, ಅವರು ಎತ್ತಿಕೊಟ್ಟಿದ್ದನ್ನು ಸ್ವೀಕರಿಸುವುದು, ಇನ್ನಿತರ ಸೇವೆಗಳನ್ನು ಮೇಲುವರ್ಗದವರಿಗಾಗಿ ಮಾಡುವುದು ಎಂದು ರೂಢವಾಗಿದೆ. ಆದರೆ ಇವರಲ್ಲಿ ಭಿಕ್ಷಾವೃತ್ತಿ ಮಾತ್ರ ಇಲ್ಲ. ಇವರು ಬೇಡ, ಕುರುಬ ಮೊದಲಾದ ಜಾತಿಗಳಿಗೆ ಸೀಮಿತವಾದ ಉದ್ದವ್ವ, ಹೊನ್ನವ್ವ, ದ್ಯಾಮವ್ವ, ಜುಂಜಪ್ಪ ಮುಂತಾದ ದೇವರುಗಳನ್ನು ಪೂಜಿಸುವ ಪೂಜಾರಿಗಳೂ ಆಗಿದ್ದಾರೆ. ಕೆಲವೆಡೆ ಕಾಮನನ್ನು ತಯಾರಿಸಿ ಪೂಜಿಸುವುದು ಇವರ ನೇಮವಾಗಿದೆ. ಅಂತಹ ಸಂದರ್ಭದಲ್ಲಿ ಊರಿನ ಎಲ್ಲ ಜನರಿಂದಲೂ ಕಾಣಿಕೆ – ನೈವೇದ್ಯಗಳನ್ನು ಸ್ವೀಕರಿಸುವುದು ಇವರ ಹಕ್ಕಾಗಿರುತ್ತದೆ. ಅನೇಕ ಗುಡ್ಡಗಾಡು ಹಳ್ಳಿಗಳಲ್ಲಿ ಇವರು ಕುರಿ-ಆಡುಗಳನ್ನು ಸಾಕುವುದೂ ಕಂಡುಬರುತ್ತದೆ.

ಒಟ್ಟಿನಲ್ಲಿ, ಬೇಡರು ಬಹು ಸಮರ್ಥವಾದ ಜನಾಂಗಕ್ಕೆ ಸೇರಿದವರು. ಈಗ ಮಾತ್ರ ತೀರ ಅಸಮರ್ಥರಾಗಿ ಬಾಳಬೇಕಾದ ಸ್ಥಿತಿ ಉಂಟಾಗಿದೆ. ಶೈಕ್ಷಣಿಕವಾಗಿ ಹಿಂದುಳಿದಿರುವುದೆ ಇದಕ್ಕೆ ಮೂಲಭೂತ ಕಾರಣವೆಂದು ಬೇರೆ ಹೇಳಬೇಕಾಗಿಲ್ಲ.

ಕೃಪೆ : ವಾಲ್ಮೀಕಿ ಸಂಪದ

* * *