ಕನ್ನಡ ವಿಶ್ವವಿದ್ಯಾಲಯ ಕನ್ನಡ ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ಹುಡುಕುವ, ಗಟ್ಟಿಗೊಳಿಸುವ, ಹರಡುವ ಕಾಯಕವನ್ನು ನೋಂಪಿಯಂತೆ ನಡೆಸಿಕೊಂಡು ಬಂದಿದೆ. ಕನ್ನಡ ಸಂಸ್ಕೃತಿಯನ್ನು ಮತ್ತೆ ಮತ್ತೆ ನಿರ್ವಚನ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಕನ್ನಡ ವಿಶ್ವ ವಿದ್ಯಾಲಯವು ಒಂದು ಆಡುಂಬೊಲವಾಗಿ ಕಾರ್ಯ ನಿರ್ವಹಿಸುತ್ತಿದೆ. ನಮಗೆ ಗೊತ್ತಿರುವ ಸಂಸ್ಕೃತಿಯ ಅರ್ಥಗಳ ಆಚೆಗೆ ಅನೂಹ್ಯ ಲೋಕಗಳ ಕಡೆಗೆ ತನ್ನನ್ನು ಮತ್ತು ಕನ್ನಡಿಗರನ್ನು ಒಯ್ಯುವ ಪಯಣದ ದಾರಿಗಳನ್ನು ರೂಪಿಸುವ ಮಹತ್ವದ ಸಾಹಸದ ಹೆಜ್ಜೆಗಳು ಮೂಡಿ ಬಂದಿವೆ. ಇದು ನಿರಂತರ ನಡೆಯಬೇಕಾದ ಬಹುದಾರಿಗಳ ಮಹಾಯಾನ.

ಇಪ್ಪತ್ತೊಂದನೆಯ ಶತಮಾನದ ಆರಂಭದಲ್ಲಿ ಜಾಗತೀಕರಣದ ಈ ಸಂಕ್ರಮಣ ಸ್ಥಿತಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ರಚನೆ ಮತ್ತು ಕಾರ್ಯಗಳು ಸವಾಲಿನವು ಮತ್ತು ಜವಾಬ್ದಾರಿಯವೂ ಆಗಿವೆ. ‘ಕನ್ನಡ’ ಎನ್ನುವ ಪರಿಕಲ್ಪನೆಯನ್ನು ಭಾಷೆ, ಸಾಹಿತ್ಯ, ಬದುಕು ಮತ್ತು ಅದರ ಆಧುನಿಕ ಸನ್ನಿವೇಶಗಳಲ್ಲಿ ಅರ್ಥೈಸುವ ಮತ್ತೆ ಕಟ್ಟುವ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ಒಂದು ಕಾಯಕದಂತೆ ಕೈಗೆತ್ತಿಕೊಂಡಿದೆ. ಕನ್ನಡ ಮತ್ತು ಅಭಿವೃದ್ದಿ ಎನ್ನುವ ಎರಡು ಪರಿಕಲ್ಪನೆಗಳು ಎದುರುಬದುರಾಗುವ ಆತಂಕ ಒಂದು ಕಡೆಯಾದರೆ, ಅವು ಒಂದನ್ನೊಂದು ಪ್ರಭಾವಿಸಿ ನೆರವಾಗುವ ಆವರಣವನ್ನು ನಿರ್ಮಾಣ ಮಾಡುವುದು ಇನ್ನೊಂದೆಡೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯವು ಈ ಸಂಬಂಧಿಯಾದ ಹೊಸ ಆಲೋಚನೆಗಳ ಸಂವಾದ ಮತ್ತು ಅದರ ಆನ್ವಯಿಕ ಸಾಧನೆಗಳಲ್ಲಿ ತನ್ನನ್ನು ತೊಡಗಿಸಿ ಕೊಳ್ಳಲು ಬಯಸಿದೆ.

ಕನ್ನಡವು ಕಾಗದರಹಿತ ಮಾಧ್ಯಮದಲ್ಲಿ ಕಾಣಿಸಿಕೊಳ್ಳುತ್ತಿರುವಾಗಲೂ ಪುಸ್ತಕ ರೂಪದಲ್ಲಿ ಕನ್ನಡ ಕೃತಿಗಳ ಪ್ರಕಟಣೆ ಸಮಾನಾಂತರವಾಗಿ ಕ್ರಿಯಾಶೀಲವಾಗಿ ನಡೆಯುವುದು ಬಹಳ ಮುಖ್ಯವಾದದ್ದು. ತಾಂತ್ರಿಕ-ಮೌಖಿಕ ಮಾಧ್ಯಮದಲ್ಲಿ ಕನ್ನಡವು ಬಳಕೆಯಾಗುತ್ತಿರುವಾಗಲೇ ಕಾಗದದಲ್ಲಿ ಕನ್ನಡ ಅಕ್ಷರಗಳು ಮುದ್ರಣಗೊಂಡು ಕಣ್ಣಿಗೆ, ಕಿವಿಗೆ ಮತ್ತು ಮನಸ್ಸಿಗೆ ಕನ್ನಡವನ್ನು ಸಂವಹನಗೊಳಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕಿದೆ. ಇಲ್ಲಿ ಪ್ರಕಟಗೊಳ್ಳುವ ಮಾಧ್ಯಮದೊಂದಿಗೆ ಅಭಿವ್ಯಕ್ತಗೊಳ್ಳುವ ಚಿಂತನಾ ಶರೀರವೂ ಮುಖ್ಯವಾದದ್ದು. ಭಾಷೆ, ಸಾಹಿತ್ಯ, ಕಲೆಗಳು, ವಿಜ್ಞಾನ, ತಂತ್ರಜ್ಞಾನ, ಸಮಾಜವಿಜ್ಞಾನ ಎನ್ನುವ ಬೌದ್ದಿಕ ಗಡಿರೇಖೆಗಳನ್ನು ಕಳಚಿಕೊಂಡು ಕನ್ನಡ ಜ್ಞಾನವು ಕನ್ನಡ ವಿಶ್ವವಿದ್ಯಾಲಯದಲ್ಲಿ ರೂಪುಗೊಳ್ಳುವ ಮತ್ತು ಪ್ರಕಟಗೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.

ಡಾ. ಮಂಜುನಾಥ ಬೇವಿನಕಟ್ಟಿ ಅವರು ಸಂಪಾದಿಸಿರುವ ವ್ಯಾಧ ಚರಿತೆ (ಬೇಡ ಕುಲಮೂಲದ ಕಥನಗಳು) ಸಂಕಲನವು ಬೇಡ ಸಮುದಾಯವನ್ನು ಕುರಿತು   ಬಹುನೆಲೆಗಳಲ್ಲಿ ವ್ಯಾಪಕ ಅಧ್ಯಯನ ನಡೆಸಿರುವ ಮೂವತ್ತೊಂದು ಲೇಖನಗಳ ಸಂಕಲನ. ವೇದಪೂರ್ವ ಕಾಲದಿಂದ ಸಮಕಾಲೀನ ಸಂದರ್ಭದವರೆಗೆ ಬೇಡ ಜನಾಂಗವನ್ನು ಕುರಿತು ವ್ಯಾಪಕ ಕ್ಷೇತ್ರಕಾರ್ಯದ ಮತ್ತು ಅಧ್ಯಯನದ ಅಮೂಲ್ಯ ಮಾಹಿತಿಗಳ ಲೇಖನಗಳು ಇಲ್ಲಿ ಒಟ್ಟು ಸೇರಿವೆ. ಬೇಡ ಜನಾಂಗದ ಭಿನ್ನ ನೆಲೆಗಳು, ಸಾಂಸ್ಕೃತಿಕ ವೈವಿಧ್ಯಗಳು, ಪ್ರಾದೇಶಿಕ ಭಿನ್ನತೆಗಳು, ಸಾಂಸ್ಕೃತಿಕ ವಿವರಗಳು ಇಲ್ಲಿ ಚರ್ಚಿತವಾಗಿವೆ. ಒಂದು ಸಮುದಾಯವನ್ನು ಕುರಿತು ಇಷ್ಟು ವ್ಯಾಪಕವಾದ ಅಧ್ಯಯನ ಹೆಚ್ಚಿನ ಪ್ರಮಾಣದಲ್ಲಿ ನಡೆದಿಲ್ಲ. ಈ ಕ್ಷೇತ್ರದ ಅನೇಕ ತಜ್ಞರು ಈ ಉದ್ದೇಶಕ್ಕಾಗಿಯೇ ತಮ್ಮ ಲೇಖನಗಳನ್ನು ಸಿದ್ಧಪಡಿಸಿಕೊಟ್ಟಿದ್ದಾರೆ. ಆಧುನಿಕ ಸಂದರ್ಭದಲ್ಲಿ ಜನಾಂಗದ ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲುವ ಇಂತಹ ಲೇಖನಗಳ ಈ ಜನಾಂಗದ ಅಭಿವೃದ್ದಿಯ ರೂಪು-ರೇಷೆಯ ದೃಷ್ಟಿಯಿಂದ ಮುಖ್ಯವಾಗುತ್ತವೆ. ಇಂಥ ಮಹತ್ವದ ಸಂಪ್ರಬಂಧಗಳನ್ನು ಸಿದ್ಧಪಡಿಸಿಕೊಟ್ಟ ಎಲ್ಲಾ ವಿದ್ವಾಂಸರಿಗೆ ಕನ್ನಡ ವಿಶ್ವವಿದ್ಯಾಲಯದ ಪರವಾಗಿ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನಮ್ಮ ವಿಶ್ವವಿದ್ಯಾಲಯದ ಜಾನಪದ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ, ಈ ಸಮುದಾಯದ ಬಗ್ಗೆ ವಿಶೇಷವಾಗಿ ಅಧ್ಯಯನ ಮಾಡಿರುವ ಡಾ. ಮಂಜುನಾಥ ಬೇವಿನಕಟ್ಟಿ ಅವರು ತುಂಬ ಪರಿಶ್ರಮದಿಂದ ಈ ಲೇಖನ ಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಈ ಗ್ರಂಥವನ್ನು ಅಚ್ಚುಕಟ್ಟಾಗಿ ಹೊರತರುತ್ತಿರುವ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಮತ್ತು ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ ಅವರಿಗೆ ಆಭಾರಿಯಾಗಿದ್ದೇನೆ.

ಬಿ.. ವಿವೇಕ ರೈ
ಕುಲಪತಿ