ರಗಚ್ಛೆ, ಕಾವಿ ಅಥವಾ ಅರ್ಧತೋಳಿನ ಕರಿಯ ಕುಪ್ಪಸ ಇವರ ಸಾಂಪ್ರ ದಾಯಿಕ ಉಡುಪು. ಸೊಂಟಕ್ಕೆ ಕವಡೆಗಳಿಂದ ಅಲಂಕರಿಸಿದ ಕಪ್ಪು ಬಟ್ಟೆ ಅಥವಾ ಚರ್ಮದ ನಡುಪಟ್ಟಿಯನ್ನು ಧರಿಸುತ್ತಾರೆ. ಕೈ ಕಾಲುಗಳಿಗೆ ಬಿಳಿ ಎಕ್ಕದ ಬೇರಿನ ಬಳೆ, ಎತ್ತಿ ಕಟ್ಟಿದ ಮುಡುಗೆ ‘ಮಂತ್ರದ ಬಳ್ಳಿಯಿಂದ’ ಮಾಡಿದ ಸಿಂಬಿ ಮತ್ತು ತಾಮ್ರದ ಬಳೆ ಇರುತ್ತದೆ. ಬಳೆಯ ಆಕಾರದ ಹುಲಿಯ ಚರ್ಮವನ್ನು ಮುಡಿಗೆ ಕಟ್ಟುತ್ತಾರೆ. ಹಣೆಗೆ ಬಿಳಿಯ ನಾಮ ಬಳಿದು ಅದರ ಮೇಲೆ ಚಂದ್ರಾಕಾರದ ಕೆಂಪು ಕುಂಕುಮ ಇಡುತ್ತಾರೆ. ಕುತ್ತಿಗೆಗೆ ಬೆಳ್ಳಿನಾಣ್ಯ ಗಳನ್ನು ಸರವಾಗಿ ಹಾಕಿಕೊಂಡಿರುತ್ತಾರೆ. ಒಂದು ಕೈಯಲ್ಲಿ ಏಕನಾದ, ಮತ್ತೊಂದರಲ್ಲಿ ಮರದ ಚಿಟಿಕೆಗಳನ್ನು ಹಿಡಿದಿರುತ್ತಾರೆ. ಕಿವಿಗೆ ಅರ್ಧ ಚಂದ್ರಾಕಾರದ ದಗ್‌ಪೋಗಲು ಅಥವಾ ಚಂದ್ರಮುಡಿ ಇರುತ್ತದೆ. ಈಚಿನ ದಿನಗಳಲ್ಲಿ ಒಂಟಿಯನ್ನು ಹೆಚ್ಚಾಗಿ ಕಿವಿಯಲ್ಲಿ ಧರಿಸುವುದು ಕಾಣಿಸುತ್ತದೆ. ಪ್ರಾಚೀನ ದಿನಗಳಲ್ಲಿ ಸಂಪ್ರದಾಯಸ್ಥರು ಬೆನ್ನ ಮೇಲೆ ಬಾಣ ಬತ್ತಳಿಕೆಗಳನ್ನು ಧರಿಸುತ್ತಾರೆ” (ಶ್ರೀಕಂಠಕೂಡಿಗೆ; ೧೯೮೨: ೩೫-೩೬). ಈ ರೀತಿಯಲ್ಲಿ ವೇಷಹಾಕಿಕೊಂಡು;

ರಾಮನಂದಂ ರಾಮನಂದಂ ಮಸ್ತಾನನ್ನ ಗುರುನಾದನ್ನ
ಕೊಂಡದೇವತೆ ಜಗ್ನಾಥುಡು ವೆಗಡುಂಡಾವು
ಮಂಜುನಾಥಡು ವೆಗಡುಂಡಾವು
ಶ್ರೀಶೈಲಡ ವೆಗಡುಂಡಾವು ರಾಮನಂದುಡ ವೆಗಡುಂಡಾವು
…………………………………………………….
…………………………………………………….
…………………………………………………….
…………………………………………………….
ಮುಂದೆ ಒಂದು ನಾಲ್ಕು ಜನಕೆ ಅಧಿಕಾರವಾಗಿ
ನಡೆಯೋ ಉದ್ಯೋಗ ನಿನಗೆ ಮಾತ್ರ ಖಂಡಿತಾ ಉಂಟು ಮಾಮ
ನಾಳೆ ಬರುವಂಥ ದೀಪಾವಳಿ ಕಳೆದ ಮೈಮೇಲೆ
ಮಾಡೋ ಕೆಲ್ಸ ನಿನ್ನಂತೆ ಮುಂದು
ಜಯವುಂಟು ರಾಮ ನಿನಗೆ…….ಕುರ್ರ್….ಮಾಮ

ಹೀಗೆ ಶಾಸ್ತ್ರ ಹೇಳುತ್ತಾ ಹಳ್ಳಿಗಳ ಪ್ರತಿ ಬೀದಿ, ಪಟ್ಟಣಗಳ ಸಂತೆ ಹಾಗೂ ಪ್ರಮುಖ ಸ್ಥಳಗಳಲ್ಲಿ ತಮ್ಮ ಜೀವನೋಪಾದಿಯನ್ನು ಕಳೆಯುವ ಸಮುದಾಯವಿದೆ. ಆ ಸಮುದಾಯವೇ ‘ಕೊಂಡಮಾಮ’ ಅಥವಾ ‘ಕುರುಮಾಮ’ ಅಥವಾ ‘ಕುರುಕೊಂಡಯ್ಯ’ ಅಥವಾ ‘ಕೊಂಡ ದೊರ’ ಅಥವಾ ‘ಕೋಯದೊರ’ ಅಥವಾ ‘ರಾಮಕುಂಡೆಡಾರು’ ಇತ್ಯಾದಿ ಹೆಸರುಗಳಿಂದ ಇವರನ್ನು ಕರೆಯುವುದುಂಟು. ಕರ್ನಾಟಕ ಸರಕಾರದ ಮೀಸಲಾತಿ ಪಟ್ಟಿಯಲ್ಲಿ ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಬೆರೆತ ‘ಕೊಂಡ ಕಾಪು’ ಮತ್ತು ‘ಕುರುಮನ್ಸ್’ ಎಂಬ ಹೆಸರುಗಳಲ್ಲಿ ಇವರನ್ನು ಸಂಬೋಧಿಸಿದ್ದಾರೆ. ‘ಕೊಂಡಮಾಮ’ ಹೆಸರು ಬರುವುದಕ್ಕೆ ಡಾ. ಶ್ರೀಕಂಠಕೂಡಿಗೆಯವರು ಈ ರೀತಿ ಹೇಳುತ್ತಾರೆ. “ತಮ್ಮ ಶಾಸ್ತ್ರಕ್ಕೆ ಅಧಿದೈವವಾದ ಶ್ರೀರಾಮ ಅಥವಾ ಕೊಂಡ ದೇವತೆಯನ್ನು ಇವರು ಸ್ತುತಿಸುವುದರಿಂದ ‘ಕೊಂಡಮಾಮ’ರೆಂಬ ಹೆಸರು ಬಂದಿರಬಹುದು. ಕುರುಮಾಮ ಎಂಬ ಹೆಸರು ಕುರು-ಕುರುಹು (ಹೇಳುವ) ಮಾಮ-ದೊಡ್ಡವನು ಎಂಬುದರಿಂದ ಬಂದಿದೆ. ವ್ಯಕ್ತಿಯೊಬ್ಬನ ಮನಸ್ಸಿನಲ್ಲಿ ಏನಿದೆ ಎಂಬುದನ್ನೂ ಬಿಡಿಸಿ ಹೇಳುವ ಶಾಸ್ತ್ರಕಾರನಾಗಿರುವುದರಿಂದ ಆ ಮಾತು ಚೆನ್ನಾಗಿ ಒಪ್ಪುತ್ತದೆ” (ಶ್ರೀಕಂಠಕೂಡಿಗೆ; ೧೯೮೨:೬). ಹೀಗೆ ಕುರುಮಾಮ ಅಥವಾ ಕೊಂಡಮಾಮ ಎಂಬ ಹೆಸರು ಬಂದಿದೆ. ಇವರು ಶಾಸ್ತ್ರ ಹೇಳುವಾಗ ಪ್ರತಿಯೊಂದು ಸಾಲಿನ ಕೊನೆಯಲ್ಲೂ ‘ಕುರ್ರಮಾಮ’ ಎಂದು ಹೇಳುವುದರಿಂದ ‘ಕುರುಮಾಮ’, ‘ಕುರ್ರಮಾಮ’, ‘ಕುರುಕುರು ಮಾಮ’ಗಳೆಂದೂ ಕರೆಯುವರು.

ಆಂಧ್ರಪ್ರದೇಶದ ಶ್ರೀಶೈಲ ಮೂಲದವರು ಎಂದು ಹೇಳುವ ಇವರು ತಮ್ಮ ‘ಭವಿಷ್ಯ’ ಹೇಳುವ ಕುರಿತಂತೆ ಅವರಿಗೆ ಸ್ಪಷ್ಟ ಕಲ್ಪನೆಯಿಲ್ಲ. ಇವರ ಮೂಲದ ಬಗೆಗೆ ಎಡ್ಗರ್ ಥರ್ಸ್‌ಟನ್ ತಮ್ಮ ‘ಕ್ಯಾಸ್ಟ್ ಅಂಡ್ ಟ್ರೈಬ್ಸ್ ಆಫ್ ಸದರನ್ ಇಂಡಿಯಾ’ ಗ್ರಂಥದಲ್ಲಿ ಹೇಳಿರುವ ಅಂಶಗಳನ್ನು ಕ್ರೋಢೀಕರಿಸಿದರೆ ಈ ಅಂಶಗಳು ಗೋಚರಿಸುತ್ತವೆ.

೧. ಭಾರತದ ಪೂರ್ವ ಘಟ್ಟಗಳ ಇಳಿಜಾರುಗಳಲ್ಲಿ ವಾಸ ಮಾಡುತ್ತಿದ್ದ ಹಲವು ಬುಡಕಟ್ಟುಗಳಲ್ಲಿ ಕುರುಮಾಮರದು ಒಂದು. ಒರಿಯಾ ಮತ್ತು ತೆಲುಗು ಭಾಷೆಯ ಪ್ರಭಾವಕ್ಕೊಳಗಾದಂತಿದ್ದ ‘ಕೊಂಡ’ ಎನ್ನುವುದು ಇವರ ನಿತ್ಯ ಬಳಕೆಯ ಭಾಷೆಯಾಗಿತ್ತು. ಇವರ ನಂತರ ಬಂದ ವಲಸಿಗರಿಂದಾಗಿ ತಮ್ಮ ಭೂಮಿಯ ಮೇಲಿನ ಎಲ್ಲ ಹಕ್ಕು ಬಾಧ್ಯತೆಗಳನ್ನು ಕಳೆದುಕೊಂಡು ಅವರ ಕೃಪೆಯಲ್ಲಿ ಬದುಕುವಂಥ ನಿರಾಶ್ರಿತರಾದರು.

೨. ಕುರುಮಾಮರು ತೆಲುಗು ಭಾಷೆಯನ್ನು ಸ್ಪಷ್ಟವಾಗಿ ಮಾತನಾಡುತ್ತಾರೆ. ಆದರೆ ಇವರಲ್ಲಿ ಬಹುಪಾಲು ಜನರಲ್ಲಿ ಅವರ ಮೂಲ ಭಾಷೆಯ ಪದಸಂಪತ್ತನ್ನೂ ಕಾಣ ಬಹುದಾಗಿದೆ. ಇದರಿಂದಾಗಿ ‘ಕೊಂಡ’ ಭಾಷೆಯ ಉಪಭಾಷೆಯೇ ಅವರ ನಿಜವಾದ ಆಡುನುಡಿಯ ಭಾಷೆಯಾಗಿತ್ತೆನ್ನಬಹುದಾಗಿದೆ. ಕೊಂಡ ಸಮುದಾಯಕ್ಕೂ ಮತ್ತು ಕುರುಮಾಮರಿಗೂ ಸಮಾನ ಸಂಸ್ಕೃತಿ ಸಂಬಂಧಗಳಿದ್ದಂತೆ ಕಾಣುತ್ತದೆ.

೩. ಕುರುಮಾಮರು ‘ಕೊಂಡ’ ಸಮುದಾಯದ ಒಂದು ಭಾಗವಾಗಿದ್ದಂತೆ ಕಾಣುತ್ತದೆ ಮತ್ತು ಇವರಲ್ಲಿ ಬಹುಪಾಲು ತೆಲುಗನ್ನೇ ಮಾತನಾಡುತ್ತಾರೆ. ಪ್ರಾಣಿಗಳ ಸಮಸ್ತ ವ್ಯಾಪಾರವೂ ಅಶರೀರ ಚೇತನವೊಂದರಿಂದ ನಡೆಯುತ್ತದೆಂದು ನಂಬಿದ ಕಾಲ ಮತ್ತು ಹಿಂದೂ ಧರ್ಮದ ನಡುವಿನ ಅವಸ್ಥಾಂತರದ ಕಾಲಕ್ಕೂ ಇವರ ಮೂಲವನ್ನು ಗುರುತಿಸ ಬಹುದು. ಇವರು ಅದೇ ಕಾಲದಲ್ಲಿ ತೆಲುಗಿನ ಜನರ ಅನೇಕ ಆಚರಣೆ, ಪದ್ಧತಿಗಳನ್ನು ಅಳವಡಿಸಿಕೊಂಡಿದ್ದರು ಮತ್ತು ತಮ್ಮನ್ನು ‘ಹಿಂದೂ’ಗಳೆಂದು ಕರೆದುಕೊಳ್ಳುತ್ತಿದ್ದರು. ‘ಪಾಂಡವರನ್ನು’ ದೇವತೆಗಳೆಂದು ಆರಾಧಿಸುತ್ತಿದ್ದರು. ‘ತಾಲು ಪುಲಮ್ಮ’ ಎನ್ನುವುದು ಇವರ ದೇವತೆಯಾಗಿದ್ದಿತು. ಜನಗಣತಿಯ ಸಂದರ್ಭ (೧೯೦೧)ದಲ್ಲಿ ಕುರುಮಾಮರ ಸಮುದಾಯಕ್ಕೆ ‘ಪಾಂಡವ ಕುಲ’ ಎನ್ನುವ ಹೆಸರೂ ಬಂದುಬಿಟ್ಟಿತು.

ಸಿ. ಹಯವದನರಾವ್ ಅವರು ಮೈಸೂರು ಗೆಜೆಟಿಯರ್‌ನಲ್ಲಿ ಈ ರೀತಿ ಅಭಿಪ್ರಾಯ ಪಡುತ್ತಾರೆ. ಕೊಂಡಮಾಮರ ಮೂಲವನ್ನು ತೆಲುಗುನಾಡಿನ ಶ್ರೀಶೈಲ, ಭೀಮನಕೊಲ್ಲಿಗಳಲ್ಲಿ ಗುರುತಿಸುತ್ತಾರೆ. ಚಿನ್ನಕೊಂಡಾಲು ಜನರು ತೆಲುಗು ಪದ್ಧತಿಯಾದ ‘ಇಂಟಿ ಪೇರುಲು’ವನ್ನು ಅಳವಡಿಸಿಕೊಂಡು ‘ಭಕ್ತ’ ಸಮುದಾಯದ ಜೊತೆಗಿನ ಸಂಬಂಧದಲ್ಲಿರುತ್ತಿದ್ದರು. ಇವರು ‘ಭಿನ್ನಗೋತ್ರ’ ವಿವಾಹದಲ್ಲಿ ನಂಬಿಕೆಯುಳ್ಳವರಾಗಿದ್ದರು. ಆದರೆ ಪೆದ್ದಕೊಂಡಾಲು ಅವರ ಕುಲ ವಿಭಾಗಗಳು ಕಾಡುಜಾತಿಗಳಾದ ನಾಗ, ಭಾಗ್ ಮತ್ತು ಕೊಚ್ಚಿಮೊ ಸಮುದಾಯ ಗಳೊಂದಿಗೆ ತಮ್ಮ ಸಂಬಂಧ ಬೆಳೆಸುತ್ತಿದ್ದರು.

ಅವರು ಮೂಲದ ಬಗೆಗೆ ಅವರ ಸ್ಮೃತಿಯಲ್ಲಿಯ ಅಂಶಗಳನ್ನು ಕೆದಕಿದಾಗ ಈ ಮಾಹಿತಿಗಳು ಲಭ್ಯವಾಗುತ್ತವೆ. “ಕೊಂಡಮಾಮರ ಮೂಲ ಪುರುಷರು ಕಾಡಿನಲ್ಲಿ ವಾಸಿ ಸುತ್ತಿದ್ದರು. ಕೊಂಡಮಾಮ ಅಥವಾ ಕುರುಮಾಮ ಎಂಬ ಹೆಸರು ಬರುವ ಮುಂಚೆ ಈ ಸಮುದಾಯವನ್ನು ‘ಶ್ರೀ ಜಂಗಾಲು’ ಎಂಬ ಹೆಸರಿನಿಂದ ಕರೆಯುತ್ತಿದ್ದರಂತೆ. ಅರಣ್ಯ ವಾಸಿಗಳಾಗಿದ್ದ ಅಂದಿನ ದಿನಗಳಲ್ಲಿ ಅವರು ಬಟ್ಟೆ ಬರೆಗಳನ್ನು ಬಳಸುತ್ತಿರಲಿಲ್ಲ. ಮರ ಗಿಡಗಳ ಸೊಪ್ಪೇ ಅವರ ಉಡುಗೆಯಾಗಿದ್ದಿತು. ಅಡವಿಯ ಪ್ರಾಣಿಗಳನ್ನು ಬಾಣಗಳಿಂದ ಬೇಟೆಯಾಡಿ ತಿನ್ನುತ್ತಿದ್ದರು. ಮಾಂಸಾಹಾರ ದೊರೆಯದಿದ್ದಾಗ ಗೆಡ್ಡೆಗೆಣಸುಗಳನ್ನು ಬಳಸುತ್ತಿದ್ದರು. ಬಿಲ್ಲು, ಬಾಣ, ಬತ್ತಳಿಕೆಗಳನ್ನು ಧರಿಸುತ್ತಿದ್ದು, ಇವರ ಬದುಕು ಬೇಟೆ ಯಲ್ಲಿಯೇ ಸಾಗುತ್ತಿತ್ತು. ಹೀಗಿರುವಾಗ ಒಮ್ಮೆ ಇವರ ಆದಿದೈವದ ಶ್ರೀಶೈಲದ ಮಲ್ಲಿಕಾರ್ಜುನ ವೇಷ ಮರೆಸಿಕೊಂಡು ನಾರದನ ರೂಪಿನಲ್ಲಿ ‘ಶ್ರೀ ಜಂಗಾಲು’ ವಂಶಸ್ಥರನ್ನು ನೋಡಲು ಬಂದನಂತೆ. ತನ್ನ ಭಕ್ತರು ಬಟ್ಟೆ ಧರಿಸದೆ ಅನ್ನ ಊಟ ಮಾಡದೆ ಅನಾಗರಿಕ ಸ್ಥಿತಿಯಲ್ಲಿ ಇರುವುದನ್ನು ಕಂಡು ಮರುಗಿದನಂತೆ. ಇವರನ್ನು ಈ ಸ್ಥಿತಿಯಲ್ಲೇ ಬಿಟ್ಟರೆ ತನ್ನ ಶಿಷ್ಯರಾಗಿ ಬಹಳ ಕಾಲ ಇರಲಾರರೆಂದು ಭಾವಿಸಿ ಇನ್ನು ಮುಂದೆ ತಪ್ಪದೇ ತನ್ನ ಧ್ಯಾನ ಮಾಡಬೇಕೆಂದು ಅಪ್ಪಣೆ ಕೊಟ್ಟು ‘ಏಕನಾದ’ವನ್ನು ಅನುಗ್ರಹಿಸಿದನೆಂದು ಹೇಳುತ್ತಾರೆ (ಶ್ರೀಕಂಠಕೂಡಿಗೆ; ೧೯೮೨: ೩-೪).

ಕುರುಮಾಮರು ತಮ್ಮನ್ನು ಕುರಿತಂತೆ ತಮ್ಮ ಸ್ಮೃತಿಯಲ್ಲಿರುವ ನಂಬಿಕೆಯ ಪ್ರಕಾರ “ಈ ವಂಶದವರ ಮೂಲ ಗುರು ಶ್ರೀಶೈಲದವರು. ಶ್ರೀ ಮಲ್ಲಿಕಾರ್ಜುನನ ಪರಮಭಕ್ತರಾದ ಇವರು ತಮ್ಮವರೊಂದಿಗೆ ಒಮ್ಮೆ ಭದ್ರಾಚಲಕ್ಕೆ ಭೇಟಿ ನೀಡಿದರೆಂದೂ, ಆಗ ಶ್ರೀರಾಮಚಂದ್ರನ ದರ್ಶನವಾಯಿತೆಂದೂ ಹೇಳುತ್ತಾರೆ. ಅವನಿಂದ ಆಶೀರ್ವಾದ ಪಡೆದಿದ್ದರ ಫಲವಾಗಿ ಶ್ರೀರಾಮನ ಭಕ್ತರಾದರೆಂತಲೂ ನಂಬುತ್ತಾರೆ. ಅಂದಿನಿಂದಲೂ ಕ್ಷೌರ ಮಾಡಿಸದೆ ಶ್ರೀರಾಮನ ಹೆಸರಿನಲ್ಲಿ ಮುಡಿಕಟ್ಟಿ, ಆತನ ಧ್ಯಾನ ಮಾಡುತ್ತಾ ಭವಿಷ್ಯ ಹೇಳುವ ವೃತ್ತಿಯನ್ನು ಹಿಡಿದೆವೆಂದೂ, ತಮ್ಮ ಕುಲದವರಿಗೆ ‘ರಾಮಕ್ಷತ್ರಿಯ’ರೆಂಬ ಹೆಸರು ಬಂದಿತೆಂದೂ ಕೊಂಡಮಾಮ ಜನಾಂಗದ ಹಿರಿಯರು ಹೇಳುತ್ತಾರೆ” (ಶ್ರೀಕಂಠಕೂಡಿಗೆ; ೧೯೮೨:೪-೫).

ಕೋಲಾರದಲ್ಲಿ ಪ್ರಚಲಿತವಾಗಿರುವ ಐತಿಹ್ಯದ ಪ್ರಕಾರ “ಈ ಸಮುದಾಯದ ಮೂಲ ಗುರುಗಳು ಶ್ರೀಶೈಲದ ಮಲ್ಲಿಕಾರ್ಜುನನ ಆರಾಧಕರು. ಇವರ ಮೂಲ ಪುರುಷರು ಒಮ್ಮೆ ಭದ್ರಾಚಲಕ್ಕೆ ಭೇಟಿಕೊಟ್ಟು ರಾಮದಾಸರನ್ನು ಕಂಡರಂತೆ. ಅದರ ಫಲವಾಗಿ ರಾಮನ ಭಕ್ತರಾಗಿ ಪರಿವರ್ತನೆಯಾದರೆಂದು ಹೇಳುತ್ತಾರೆ. ಅಂದಿನಿಂದ ರಾಮನನ್ನು ಧ್ಯಾನಿಸುತ್ತ ಆತನಂತೆಯೇ ಮುಡಿಕಟ್ಟಿ ಏಕನಾದವನ್ನು ಹಿಡಿದು ಭವಿಷ್ಯ ಹೇಳಲು ಹೊರಟರಂತೆ”. ಇವರು ನವಿಲು, ಗಿಳಿ, ಪಾರಿವಾಳ, ಗರುಡ ಮುಂತಾದ ಪಕ್ಷಿಗಳ ಮಾಂಸವನ್ನು ತಿನ್ನುವುದಿಲ್ಲ.

ಇವರ ಮೂಲದ ಬಗೆಗಿರುವ ಇನ್ನೊಂದು ಹೇಳಿಕೆಯು ಈ ತೆರನಾಗಿದೆ. “ಕಾಡಿನಲ್ಲಿ ವಾಸಿಸುತ್ತಿದ್ದ ಇವರು ಅನಿವಾರ್ಯವಾಗಿ ಬೇಟೆಯಾಡುತ್ತಿದ್ದರು. ಬೇಟೆ ಸಿಗದಿದ್ದಾಗ ಕಳ್ಳತನ, ದರೋಡೆ ಮೊದಲಾದ ಮಾರ್ಗಗಳಿಂದ ಬದುಕಿಗೆ ಬೇಕಾದ ದೈನಂದಿನ ಅವಶ್ಯಕತೆ ಗಳನ್ನು ಪೂರೈಸಿಕೊಳ್ಳುತ್ತಿದ್ದರು. ಬರುಬರುತ್ತಾ ಇದು ಅತಿಯಾಗಿ ಕೊಲೆ ಸುಲಿಗೆಗಳೇ ಇವರ ನಿತ್ಯದ ಕಾಯಕವಾಗಿ ಬಿಟ್ಟಿತು. ಇದನ್ನು ತಿಳಿದ ಶಿವನು (ಕೆಲವರು ‘ಮಲ್ಲಿಕಾರ್ಜುನ’ ಎನ್ನುವುದುಂಟು) ಸನ್ಯಾಸಿಯ ವೇಷದಲ್ಲಿ ಬರುತ್ತಿರುವಾಗ ಕುರುಮಾಮರ ಪುರುಷನೊಬ್ಬ ಈ ಸನ್ಯಾಸಿಯನ್ನೇ ಹೆದರಿಸಿ ದರೋಡೆ ಮಾಡುವ ಭೀತಿ ಹುಟ್ಟಿಸಿದನಂತೆ. ಸನ್ಯಾಸಿ ಹೆದರದೆ ‘ಅಯ್ಯಾ ನನ್ನಲ್ಲಿರುವ ಆಹಾರ ಧಾನ್ಯಾದಿಗಳನ್ನೆಲ್ಲಾ ಕೊಟ್ಟು ಬಿಡುತ್ತೇನೆ. ಆದರೆ ನನ್ನ ಪ್ರಶ್ನೆಗೆ ಉತ್ತರ ಹೇಳು’ ಎಂದನಂತೆ. ಇವನು ಒಪ್ಪಿದಾಗ ಸನ್ಯಾಸಿ ‘ಅಯ್ಯಾ, ನೀನು ಹೀಗೆ ಕೊಲೆ, ದರೋಡೆ ಮಾಡಿ ನಿನ್ನ ಹೆಂಡತಿ ಮಕ್ಕಳನ್ನು ಪೊರೆಯುತ್ತೀಯಲ್ಲಾ, ಈ ಕೆಟ್ಟ ಕೆಲಸಗಳಿಂದ ಬರುವ ಪಾಪದ ಭಾರವನ್ನು ನಿನ್ನ ಹೆಂಡತಿ ಮಕ್ಕಳು ಹೊರುತ್ತಾರಾ?’ ಎಂದು ಕೇಳಿದನಂತೆ, ಅದಕ್ಕೆ ಈ ಕುರುಮಾಮ ಪುರುಷ ‘ಯಾಕೆ ಹೊರುವುದಿಲ್ಲ ದುಡಿದು ಹಾಕುವವನು ನಾನು’ ಎಂದು ಕಿರುಚಿದನಂತೆ. ಸನ್ಯಾಸಿ ಗಂಭೀರವಾಗಿ ಮುಗುಳ್ನಗುತ್ತಾ ‘ಆಯಿತು, ನೋಡು, ಇಲ್ಲಿ ಒಂದು ಗೆರೆಯನ್ನು ಎಳೆಯುತ್ತೇನೆ’ ಎಂದು ಗೆರೆ ಎಳೆದು ನಂತರ ‘ನೀನು ಹೋಗಿ ನಿನ್ನ ಹೆಂಡತಿ ಮಕ್ಕಳನ್ನು ಈ ಬಗ್ಗೆ ವಿಚಾರಿಸಿಕೊಂಡು ಬಾ, ಅಲ್ಲಿಯವರೆಗೂ ನಾನು ಈ ಗೆರೆ ದಾಟಿ ಕಾಲಿಡುವುದಿಲ್ಲ’ ಎಂದು ಕಳಿಸಿದನಂತೆ. ಇವನು ಓಡಿಹೋಗಿ ಮನೆಯಲ್ಲಿದ್ದ ಹೆಂಡತಿ ಮಕ್ಕಳನ್ನು ವಿಚಾರಿಸಿದಾಗಿ ಅವರೆಲ್ಲಾ ‘ನೀನು ಏನೇನು ಪಾಪದ ಕೆಲಸ ಮಾಡುತ್ತೀಯೆಂದು ನಮಗೇನು ಗೊತ್ತು. ಅಲ್ಲದೆ ನಿನಗೆ ಬರುವ ಪಾಪವನ್ನು ನಾವು ಹೊರುವುದು ಹೇಗೆ ಸಾಧ್ಯ ಅದನ್ನೆಲ್ಲಾ ನೀನೇ ಅನುಭವಿಸಬೇಕು’ ಎಂದರಂತೆ. ಇವನು ಮತ್ತೆ ಸಂನ್ಯಾಸಿ ಇರುವಲ್ಲಿಗೆ ಓಡೋಡಿ ಬಂದು, ಸಂನ್ಯಾಸಿ ಆ ಗೆರೆಯನ್ನು ದಾಟದೆ ನಿಂತಿರುವುದನ್ನು ಕಂಡು ಗಟ್ಟಿಯಾಗಿ ಕಾಲು ಹಿಡಿದು ಅತ್ತನಂತೆ. ಸಂನ್ಯಾಸಿ ಈತನನ್ನು ಸಂತೈಸಿ, “ಯಾರು ಪಾಪ ಮಾಡುತ್ತಾರೋ ಅವರೇ ಅದನ್ನು ಅನುಭವಿಸಬೇಕು. ಅದು ದೈವ ನಿಯಮ ‘ಭಿಕ್ಷೆ’ ಬೇಡಿ ಬದುಕಿದರೂ ತಪ್ಪಲ್ಲ. ಇಂಥ ಕೆಟ್ಟ ಮಾರ್ಗದಲ್ಲಿ ನಡೆಯ ಬೇಡ” ಎಂದು ತಿಳಿ ಹೇಳಿ ಮಾಯವಾದನಂತೆ. ಇನ್ನೂ ಕೆಲವರು ತಮ್ಮ ಮೂಲವನ್ನು ‘ವಾಲ್ಮೀಕಿ’ಯಲ್ಲಿ ಮತ್ತೆ ಕೆಲವರು ‘ಬೇಡರ ಕಣ್ಣಪ್ಪ’ನಲ್ಲೂ ಗುರುತಿಸುವುದು ಕಂಡು ಬರುತ್ತದೆ. ಇದು ಇಷ್ಟಕ್ಕೆ ನಿಲ್ಲದೆ ಮೇಲೆ ಹೇಳಿದ ಕೊಲೆ ಸುಲಿಗೆ ಮಾಡುತ್ತಿದ್ದ ಕುರಮಾಮರ ಪುರುಷ ಬೇರೆ ಯಾರೂ ಅಲ್ಲ, ವಾಲ್ಮೀಕಿಯೇ. ಆ ಸನ್ಯಾಸಿಯ ಮಾತಿನಿಂದ ಪ್ರಭಾವಿತನಾಗಿ ‘ನಾನು ಈವರೆಗೆ ಕಲಿತದ್ದು ಬೇಟೆ ಮತ್ತು ಕಳ್ಳತನ, ದರೋಡೆಗಳನ್ನೇ, ನಾನು ಬದುಕುವುದಕ್ಕೆ ಬೇರೆ ದಾರಿ ತೋರಿಸಿ’ ಎಂದು ಬೇಡಿದನಂತೆ. ಆ ಸಂನ್ಯಾಸಿ ತಾನು ಗೆರೆ ಎಳೆದ ಜಾಗದಲ್ಲೆ ವಾಲ್ಮೀಕಿಯನ್ನು ಕೂರಿಸಿ ‘ರಾಮ’ ಎಂದು ನುಡಿಯಲು ಹೇಳಿದನಂತೆ. ಹಾಗೆ ಹೇಳಲು ಬರದೇ ಹೋದುದರಿಂದ ‘ಮರ-ಮರ’ ಎಂದು ಧ್ಯಾನ ಮಾಡಲು ಹೇಳಿ ಹೋದನಂತೆ. ಆ ನಂತರವೇ ‘ಮರ’ ರಾಮನಾಗಿ ವಾಲ್ಮೀಕಿ ಮಹಾಕವಿಯಾಗಿ ‘ರಾಮಾಯಣ’ ಬರೆದನಂತೆ” (ಬಿ.ಸಿ. ದಾದಾಪೀರ್; ೨೦೦೦:೩೯೨-೩೯೩).

ಇವರು ಭವಿಷ್ಯ ಹೇಳುವ ಕಲೆಯನ್ನು ರೂಢಿಸಿಕೊಂಡಿದ್ದಕ್ಕಾಗಿ ಪುರಾಣ ಮೂಲದ ಐತಿಹ್ಯವೊಂದು ಪ್ರಚಲಿತದಲ್ಲಿದೆ. ಅದೇನೆಂದರೆ; ಕೈಲಾಸದಲ್ಲಿ ಒಂದು ದಿನ ಹೆಂಗಸರು ಅಡಿಗೆ ಮಾಡಲಿಲ್ಲ. ಆದ್ದರಿಂದ ಗಂಡಸರೇ ಅಡಿಗೆ ಮಾಡಿಕೊಂಡರು. ಈ ಸುದ್ದಿಯು ಪಾರ್ವತಿಗೆ ತಿಳಿಯಿತು. ಅವಳು ಕೋಪಗೊಂಡು ಕೈಲಾಸವಾಸಿಗಳಿಗೆ ಅಪಮಾನವಾಗುವಂತೆ ವರ್ತಿಸಿ ಅಡುಗೆ ಮಾಡದ ಹೆಂಗಸರನ್ನು ಭೂಲೋಕದಲ್ಲಿ ಬದುಕುವಂತೆ ಶಪಿಸಿದಳು. ಅವಳ ಶಾಪದಂತೆ ಅವರು ಭೂಲೋಕದಲ್ಲಿ ಕೊಂಡರಾಜರಾಗಿ ಹುಟ್ಟಿದರು. ಅಲೆಮಾರಿ ಗಳಾಗಿ ಒಂದೊಂದು ಊರಿನಲ್ಲೂ ಮೂರು ಮೂರು ಕಲ್ಲುಗಳ ಒಲೆಗಳನ್ನು ಇಟ್ಟುಕೊಂಡು ಅವುಗಳ ಮೇಲೆ ಅಡಿಗೆ ಮಾಡಿಕೊಂಡು ಮುಂದೆ ಸಾಗುವುದನ್ನು ರೂಢಿಸಿಕೊಂಡರು. ತಮ್ಮ ವೃತ್ತಿಗೆ ಸಂಬಂಧಿಸಿದಂತೆ ಇವರು ಒದಗಿಸುವ ಕಾರಣವನ್ನು  ನಂಬಲು ಆಧಾರಗಳಿಲ್ಲ ವಾದರೂ ಸ್ತ್ರೀಮೂಲದಿಂದ ತಮ್ಮ ಸಂಸ್ಕೃತಿಯ ಆರಂಭವನ್ನು ಗುರುತಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ.

ಶತಶತಮಾನಗಳಿಂದಲೂ ಕುರುಮಾಮರು ತಮ್ಮ ವೃತ್ತಿಯಾದ ಭವಿಷ್ಯ ಹೇಳುವುದನ್ನು ನಿಷ್ಠೆಯಿಂದ ಮಾಡಿಕೊಂಡು ಬಂದಿದ್ದಾರೆ. ಅಲೆಮಾರಿ ಸ್ವಭಾವದ ವೃತ್ತಿಯಾಗಿರುವುದರಿಂದ ಅವರು ನಿರ್ಧಿಷ್ಟವಾದ ಪ್ರದೇಶದಲ್ಲಿ ಒಂದೆರಡು ದಿನ ಇದ್ದು ಮುಂದಿನ ಊರುಗಳಿಗೆ ಹೋಗುತ್ತಾರೆ. ಹೀಗೆ ಅಲೆಮಾರಿ ಜೀವನ ಸಾಗಿಸುತ್ತಿರುವಾಗಲೇ ಕರ್ನಾಟಕದ ಕೆಲವೆಡೆ ನೆಲೆ ನಿಂತಿರುವುದನ್ನು ಕಾಣಬಹುದು. ಕುರುಮಾಮರು ಕರ್ನಾಟಕದ ಬಳ್ಳಾರಿ, ಚಳ್ಳಕೆರೆ, ನಾಯ್ಕನಹಟ್ಟಿ, ದೇವರಹಳ್ಳಿ, ಚನ್ನಗಿರಿ, ನಲ್ಲೂರು, ಹೊಸದುರ್ಗ, ಶಿವಮೊಗ್ಗ, ಸೊರಬ, ಸಾಗರ, ಆನಂದಪುರ, ಶಿಕಾರಿಪುರ, ಶಿರಾಳಕೊಪ್ಪ, ಧಾರವಾಡ, ಗದಗ, ಮೈಸೂರು, ಹಾಸನ, ಕೊಳ್ಳೇಗಾಲ, ಕಡದರಹಳ್ಳಿ, ರಂಗವ್ವನಹಳ್ಳಿ ಮುಂತಾದ ಊರುಗಳಲ್ಲಿ ವಾಸಿಸುತ್ತಿದ್ದಾರೆ. ಇವರ ಮನೆ ಮಾತು ತೆಲುಗು ಆಗಿದ್ದು, ಕನ್ನಡವನ್ನು ಮಾತನಾಡುವರು. ವ್ಯವಸಾಯದಲ್ಲಿ ಆಸಕ್ತಿ ಇಲ್ಲದ ಕುರುಮಾಮರು ತಮ್ಮ ಜೀವನಕ್ಕಾಗಿ ಭವಿಷ್ಯ ಹೇಳುವುದನ್ನೇ ವೃತ್ತಿಯಾಗಿಸಿ ಕೊಂಡಿದ್ದಾರೆ. ತಮ್ಮ ಹಸಿವೆಯನ್ನು ಹಿಂಗಿಸಲು ಊರೂರು ಅಲೆಯುವುದನ್ನು ಇನ್ನೂ ನಿಲ್ಲಿಸಿಲ್ಲ. ಈಗಲೂ ಅಲೆಮಾರಿಗಳಾಗಿರುವ ಇವರು ಯಾವ ಊರಿನಲ್ಲಿ ತಮ್ಮ ನೆಲೆಯನ್ನು ಊರುವರೋ ಅಲ್ಲಿಯ ಭಾಷೆ, ರೀತಿ ರಿವಾಜುಗಳನ್ನು ಕಲಿತು ಅನುಸರಿಸುತ್ತಾ ಸಾಗುತ್ತಿದ್ದಾರೆ. ತಮ್ಮ ಜೊತೆಗೇನೆ ದನಕರು, ಕೋಳಿ, ಕುರಿ, ಮೇಕೆ ಮುಂತಾದ ಪ್ರಾಣಿಗಳನ್ನು ಸಾಕುತ್ತಾರೆ.

ಇತರ ಜಾತಿಗಳಲ್ಲಿ ಇರುವಂತೆ ಕುರುಮಾಮ ಸಮುದಾಯದಲ್ಲೂ ‘ಬೆಡಗು’ಗಳಿವೆ. ಮದುವೆ ಸಂದರ್ಭದಲ್ಲಿ ಈ ಬೆಡಗುಗಳು ಪ್ರಾಮುಖ್ಯತೆಯನ್ನು ಪಡೆಯುವುದುಂಟು. ಉಳಿದಂತೆ ಇವರು ‘ರಾಮಕ್ಷತ್ರಿ’ಯರು ಎಂದು ತಮ್ಮ ಬಗೆಗೆ ಹೇಳಿಕೊಳ್ಳುವರು. ಶ್ರೀಕಂಠಕೂಡಿಗೆ ಅವರು ಇವರಲ್ಲಿರುವ ಬೆಡಗುಗಳನ್ನು ಈ ರೀತಿ ಗುರುತಿಸಿದ್ದಾರೆ. ‘ಸಂಕೋರು, ನ್ಯೂಮೋರು, ಮುಗ್ಗೋರು, ಪಾದಗಂಟೋರು, ಕೊಡಗುಂಳೋರು, ಬಾದಿಗೋರು, ಕೊಮಾರರು, ತಿರುಪತೀರು, ಕುಂದಕರೋರು, ಕರ್ನೋಳು, ತಿರುಪಾತ ಮೋಳು, ಬುದ್ದಿವಂತರು, ಸಾಲಿನ್‌ಕೋರ್ ಇತ್ಯಾದಿ’ (ಶ್ರೀಕಂಠಕೂಡಿಗೆ; ೧೯೮೨:೯).

ಕುರುಮಾಮರು ತಮ್ಮ ವೃತ್ತಿಗೆ ಹೊಸದಾಗಿ ಬರುವ ತಮ್ಮ ಮಕ್ಕಳಿಗೆ ಶ್ರೀಶೈಲಕ್ಕೆ ಕರೆದುಕೊಂಡು ಹೋಗಿ ಮಲ್ಲಿಕಾರ್ಜುನನ ದರ್ಶನ ಪಡೆದು ಗುರುವಿನಿಂದ ದೀಕ್ಷೆ ಕೊಡಿಸುತ್ತಾರೆ. ಕೆಲವರು ಅಂದರೆ ಶ್ರೀಶೈಲಕ್ಕೆ ಹೋಗಲು ಸಾಧ್ಯವಾಗದವರು ಈಗಾಗಲೇ ಗುರುವಿನಿಂದ ದೀಕ್ಷೆ ಪಡೆದು ವೃತ್ತಿ ಮಾಡುತ್ತಿರುವ ಹಿರಿಯರಿಂದಲೇ ದೀಕ್ಷೆ ಕೊಡಿಸು ವುದುಂಟು. ಕನಿಷ್ಟ ಹತ್ತು ಹನ್ನೆರಡು ವರ್ಷವಾಗಿರುವ ಹುಡುಗರಿಗೆ ಗುರುವು ವೃತ್ತಿಗೆ ಅನುಕೂಲವಾಗುವಂತಹ ‘ಚಿಂತಾಮಣಿ’ ಎಂದು ಕರೆಯುವ ಶಾಸ್ತ್ರದ ಕಟ್ಟು, ವಿಭೂತಿ, ರುದ್ರಾಕ್ಷಿಸರ ಮೊದಲಾದವುಗಳನ್ನು ಆರ್ಶೀವಾದ ಮೂಲಕ ಕೊಟ್ಟು, ‘ನಿಯತ್ತಿನಿಂದ ನಿನ್ನ ವೃತ್ತಿಯನ್ನು ನಡೆಸಿಕೊಂಡು ಹೋಗೆಂದು’ ಹರಸುತ್ತಾರೆ. ಈ ದೀಕ್ಷೆ ಪಡೆದ ನಂತರವೇ ಕುರುಮಾಮರ ಹುಡುಗ ಭವಿಷ್ಯ ಹೇಳುತ್ತಾ ಭಿಕ್ಷಾಟನೆಗೆ ಹೊರಡುವ ಅರ್ಹತೆ ಪಡೆಯುತ್ತಾರೆ.

ಕುರುಮಾಮರು ಸಾಮಾನ್ಯವಾಗಿ ಬೆಳಿಗ್ಗೆ ೮ ರಿಂದ ಸಾಯಂಕಾಲ ೯ರವರೆಗೆ ತಮ್ಮ ಭವಿಷ್ಯ ಹೇಳುವ ಕಾಯಕವನ್ನು ನೆರವೇರಿಸುತ್ತಾರೆ. ಸುಮಾರು ೩-೪ ಅಂಗುಲ ಉದ್ದದ ಮತ್ತು ಎರಡೂವರೆ ಅಂಗುಲ ಅಗಲದ ಒಟ್ಟು ೨೫ ರಿಂದ ೩೦ ತಾಳೆ ಗರಿಗಳಿರುವ ಕಟ್ಟನ್ನು ಚಿಂತಾಮಣಿ ಕಟ್ಟು ಎನ್ನುತ್ತಾರೆ. ಈ ಗರಿಗಳನ್ನು ಎರಡು ಬದಿಯಲ್ಲಿ ರಕ್ಷಿಸುವ ತೆಳುವಾದ ಹಲಗೆಯ ಪಟ್ಟಿಗಳಿರುತ್ತವೆ. ಈ ಪಟ್ಟಿ ಮತ್ತು ಗರಿಗಳಿಗೆ ಉದ್ದಕ್ಕಿರುವ ಕಡೆಯ ಒಂದು ಬದಿಯಲ್ಲಿ ಎರಡು ತೂತುಗಳನ್ನು ಮಾಡಿ ದಾರ ಸೇರಿಸಿ ಅವು ಕದಲದಂತೆ ಆದರೆ ಸಡಿಲವಾಗಿ ತೆರೆಯುವಂತೆ ಹೊಲೆದಿರುತ್ತಾರೆ. ಈ ಗರಿಗಳ ಎರಡೂ ಮುಖಗಳಲ್ಲಿ ತೆಲುಗನ್ನು ಹೋಲುವ ಲಿಪಿಯಲ್ಲಿ ಬರಹವನ್ನೂ, ರಾಮಾಯಣ ಮಹಾಭಾರತದ ಪತ್ರಗಳನ್ನು ನೆನಪಿಗೆ ತರುವ ಚಿತ್ರಗಳನ್ನು ಚೂಪಾದ ಕಬ್ಬಿಣದ ಕಂಠ ದಬ್ಬಳದಂತಹ ಸಾಧನದಿಂದ ಕೊರೆದಿರುತ್ತಾರೆ. ಭವಿಷ್ಯ ಕೇಳುವ ಕುತೂಹಲದಿಂದ ಬಂದ ವ್ಯಕ್ತಿಗೆ ನಿಗದಿತ ಕಾಣಿಕೆಯನ್ನು ಏಕನಾದದ ಬುರುಡೆಯಲ್ಲಿ ಹಾಕುವಂತೆ ಸೂಚಿಸುತ್ತಾರೆ. ಯಾವ ಕುರುಮಾಮರು ಕಾಣಿಕೆ ಯನ್ನು ಕೈಯಲ್ಲಿ ಮುಟ್ಟಿ ಪಡೆಯುವುದಿಲ್ಲ.

ವೃತ್ತಿನಿರತ ಕುರುಮಾಮರು ಊರೂರು ಅಲೆಯುವಾಗ ಗುಂಪಾಗಿ ಹೊರಟರೂ ಊರೊಳಗೆ ಮಾತ್ರ ಒಂಟಿಯಾಗಿರುತ್ತಾರೆ. ಕುರುಮಾಮರ ಚಿಟಿಕೆ ಶಬ್ದ ಮತ್ತು ಏಕನಾದದ ಜೊತೆಗೆ ಲಯಬದ್ಧವಾಗಿ ಹೊರಡುವ ಮಾತುಗಳು ಈ ತೆರನಾಗಿರುತ್ತವೆ;

ರಾಮನಂದಂ ರಾಮನಂದಂ ಮಸ್ತಾನನ್ನ ಗುರುನಾದನ್ನ
ಕೊಂಡದೇವತೆ ಜಗನ್ನಾಥುಡು ವೆಗಡುಂಡಾವು
ಮಂಜುನಾಥುಡು ವೆಗಡುಂಡಾವು
ಶ್ರೀಶೈಲಡ ವೆಗಡುಂಡಾವು ರಾಮನಂದುಡ ವೆಗಡುಂಡಾವು
ಹೆಸರು ಯಾವುದು? ಮಾಮ ನಿನ್ನದು

ಎಂದು ಹೇಳಿದಾಗ ವ್ಯಕ್ತಿ ಹೆಸರು ಹೇಳುತ್ತಾನೆ, ನಂತರ ಕುರುಮಾಮನ ಮಾತುಗಳು ಮುಂದುವರೆಯುತ್ತವೆ.

ಹುಟ್ಟಿದ ಗಳಿಗೆ ರೈಟುಂ ಉಂಟು
ಕಟ್ಟಿದ ಹೆಸರು ಕರಟ್ಟು ಉಂಟು
ಬಾಬು ನಿಂದು,
ಹುಟ್ಟಿದು ನಿಂದು ದೇವಗಣಮು
ಬೆಳೆದದ್ದು ನಿಂದು ಹಾರುಗಳಿಗಿ
ಬಾಬು ನಿಂದು
ಹುಟ್ಟಿದೆ ಒಂದು ದೊಡ್ಡ ಸಂಸಾರ
ಬಾಬು ನಿಂದು
ಮಲ್ಲಿಕಾರ್ಜುನ ಯಾಡುಂಡಾವು
ಸಂತಾನನ್ನ ಯಾಡುಂಡಾವು
ಶ್ರೀರಾಮುಡು ಯಾಡುಂಡಾವು
ಚಿಂತಲ ಚೆಟ್ಟಿಗೆ ಚಿಂತಲಕಟ್ಟಿ
ಯಾಪಮಾನಕ್ಕೆ ತಾಳಿಲಕಟ್ಟಿ
ಯಗುಡುಂಡಾವು ರಾಮಚಂದ್ರುಡು ಯಗುಡುಂಡಾವು
ಮಂಜುನಾಥುಡು ಯಗಡುಂಡಾವು
ಮನಸುಲು ಪ್ರಶ್ನೆ ಅಡುಗುರಾ ಮಾಮ
ರೈಟು ಬಂದರೆ ರೈಟುಂ ಅನ್ನು
ಡೊಂಕು ಬಂದರೆ ಡೊಂಕುಂ ಅನ್ನುಬಾಯಿ
ಅರ್ಥ ಮಾಡಿರಾ ಕೇಳು ಬಾಬು
ಮಾಡೊ ಲೆಕ್ಕ ಕೂಡೋ ಲೆಕ್ಕ
ಮುಂದೆ ಮಾಡುವ ವಿಚಾರ ಲೆಕ್ಕ ಕೇಳು ಬಾಬು
ಒಂದು ವರ್ಷದ ಮೂರು ತಿಂಗಳು ಆಯಿತು ಬಾಬು
ಮನದಲಿ ಮಾಡಿದ ಲೆಕ್ಕಮು ನಿನಗೆ ರೈಟುಂ ಇಲ್ಲ
ಮುಂದ ಬರುವ ದೀಪಾಳಿ ಬೆಳಿಗ್ಗೆ
ಮಾಡೋ ಲೆಕ್ಕ ಕೂಡೊ ಲೆಕ್ಕ
ನಡೆಸುವ ಉದ್ಯೋಗಮು
ಮುಂದೆ ನಿನ್ನಂತೆ ಜಯಮು ಉಂಟು ಬಾಬು
ಮನೋಲೆಕ್ಕದಲಿ ಮಧ್ಯೆ ನಿಲ್ಲುವ ಮುಂದೆ ಹೋಗುವ ದಾರಿ ಒಳಗೆ
ಅಡ್ಡ ವಿರೋದ ನಿನಗು ಮಾತ್ರ ಜಾಸ್ತಿ ಉಂಟು ಬಾಬು
ಇಲ್ಲಿಗೆ ಒಂದು ವರ್ಷ ಮೂರು ತಿಂಗಳು ದಿನದಲಿ ನಿನಗೆ
ಕೆಟ್ಟದಾಗಿ ನಿಂತೈತೆ ಬಾಬು
ಮನಿಯೊಳಕೆ ಒಂದಕ್ಕೊಂದು ಒಕ್ಕಟ್ಟಿಲ್ಲ
ಮಾಡೊಲೆಕ್ಕ ಸಮಕಟ್ಟಿಲ್ಲ
ಹೋಗೋ ಲೈನು ರೈಟುಂ ಇಲ್ಲ
ಉದ್ಯೋಗ ಮಾರ್ಗ ಕಟ್ಟಾಗಿ ನಡೆಯುತ್ತಾ ಉಂಟು ಮಾಮಾ
ನಿನಗೆ
ಈಗ ಮುಂದೆ ಮಾಡೊಂತ ಲೆಕ್ಕದ ಒಳಗೆ
ಇನ್ನು ಒಂದು ಜಾಗ ಪ್ರವೇಶ ಮಾಡಬೇಕು ಅನ್ನೋದು ಮಾತ್ರ
ಮನಸೀಲಿ ಇಟ್ಟೀಯ ಮಾಮ
ಎರಡನೆಯ ಒಂದು ಲಕ್ಷ್ಮೀ ವಿಚಾರ
ಕೆಲಸ ಮಾಡ್ಬೇಕು ಅನ್ನೋದು ವೇಚನೆ ಉಂಟು
ಮಧ್ಯೆ ಒಂದು ಅಧಿಕಾರ ಜನಮು ಸಹಾಯಮು ಉಂಟು ಮಾಮ
ಮುಂದೆ ಒಂದು ನಾಲ್ಕು ಜನಕೆ ಅಧಿಕಾರವಾಗಿ
ನಡೆಯೋ ಉದ್ಯೋಗ ನಿನಗೆ ಮಾತ್ರ ಖಂಡಿತಾ ಉಂಟು ಮಾಮ
ನಾಳೆ ಬರುವಂಥ ದೀಪಾವಳಿ ಕಳೆದ ಮೈಮೇಲೆ
ಮಾಡೊ ಕೆಲ್ಸ ನಿನ್ನಂತೆ ಮುಂದು
ಜಯವುಂಟು ರಾಮ ನಿನಗೆ……ಕುರ್ರ್…..ಮಾಮ
ಆದರೂ ಅಣ್ಣ ಇಲ್ಲಿಗೆ ನಿಮಗೂ
ಹುಟ್ಟಿದ ಯೋಗ ರೈಟುಗೆ ಉಂಟು
ಬೆಳೆದ ಯೋಗ ರೈಟುಗೆ ಉಂಟು
ಅದುರುಷ್ಟೆಂಬುದು ಆರು ಉಂಟು
ಗುಣಾ ಎಂಬುದು ನಾಲ್ಕುಂಟು
ನಸೀಪು ಎಂಬುದು ಒಂಭತ್ತೈತೆ
ಚಂದ್ರನ ಬೆಳಕುಸೂರ್ಯನ ರವಸು
ಗುಂಡುವಾರದ ಯೋಗದಲಿ ನೀವು ಹುಟ್ಟಿದ್ದೀರಿ
ಇಲ್ಲಿಗೂ ನಿಮಗೂ ವಿದ್ಯೆಯಲಿ ಒಂಭತ್ತು ವಾಸಿ
ಅನ್ನರೇಕದಲಿ ತೊಂದರೆ ಇಲ್ಲ
ಪುತ್ರರೇಕದಲಿ ತೊಂದರೆ ಇಲ್ಲ
ಬಲುಭಾಗದ ಮರ್ಮಸ್ಥಾನದಲಿ ಮಚ್ಚಿಯ ಉಂಟು
ಅಯುಷ್ಯ ಏಕ ಎಂಬತ್ತೆರಡು ವರ್ಷ ಪ್ರಯಾಣ ಉಂಟು
ನೀವು ಹುಟ್ಟಿದ ಹದಿನಾಲ್ಕು ವರ್ಷ ವಯಸ್ಸುವರೆಗೆ
ಪ್ರಯೋಜನವಿಲ್ಲ
ಹದಿನಾಲ್ಕು ವರ್ಷದ ಮೇಲೆ ಸ್ವತಂತ್ರ ಕಣ್ಣ ಗ್ರೇಡುವೆ ನೀನು
ಹತ್ತಿದ್ದೀರಾ
ಕೃಷ್ಣನಾಗಿ ನೀ ತಿರುಗಿದ್ದೀಯ
ಕಾಮನಾಗಿ ನೀ ಮೆರೆದಿದ್ದೀಯ
ಮೆರೆದರು ಅಣ್ಣ ನಿನ್ನ ರಾಶಿಯಲಿ
ಮೊನ್ನೆ ಹೋದ ಅಮವಾಸ್ಯೆಗಣ್ಣ
ನಿಮ್ಮ ಕಷ್ಟ ಬಿಡುಗಡೆಯಾಯಿತು ಅಣ್ಣ
ಮುಂದು ಭವಿಷ್ಯ ಭರಾಬ್ಬರಿ ಉಂಟು
ಮಿಸ್ಟೀಕಿಲ್ಲ ಕೇಳಲು ಬೇಡ ಕುರ್ರ್ರ್……..ಮಾಮ……

ಕುರುಮಾಮರು ಮನೆಮನೆಗೆ ಬಂದು ಭಿಕ್ಷೆ ಬೇಡುವ ಸಂದರ್ಭದಲ್ಲಿ ಹಾಡುವ ಪದ ಸಾಮಾನ್ಯವಾಗಿ ಶ್ರೀರಾಮನಾಸ್ಮರಣೆಯಿಂದ ಶುರುವಾಗುತ್ತದೆ.

ಶ್ರೀರಾಮಕೊಂಡನ್ನ ರಾಮಕೊಂಡನ್ನ
ದೇಶವೊಂದನ್ನು ಬೇಡಿಕೊಂಡನ್ನ
ವಡಗಲುನಾಥ ಭಿಕ್ಷೆಯ ಮಡಗು
ವಡಗಲು ಸೀತ ಭಿಕ್ಷೆಯ ಮಡಗು
ಶ್ರೀರಾಮಕೊಂಡನ್ನ ರಾಮಕೊಂಡನ್ನ
ವಡಗಲುನಾಥ ಏಮು ಚಂದ್ರನ್ನ….. ಹೀಗೆ ಮುಂದುವರಿಯುತ್ತದೆ.

ಕುರುಮಾಮರು ಹಿಡಿದಿರುವ ಚಿಂತಾಮಣಿ ಕಟ್ಟಿನ ತಾಳೇಗರಿಗಳಲ್ಲಿನ ತೆಲುಗು ಲಿಪಿಯ ಬರಹದ ಒಂದು ಮಾದರಿ :

ಧನಬಲಮು ಧಾನ್ಯ ಬಲಮು ಕನ್ಯಾಕರ್ಕಾಟಕಮು
ಸೂರ್ಯನಕ್ಷತ್ರಂ ರವಿ ಫಾಲ್ಗುಣಂ
ಹುಟ್ಟಿದ ಗಳಿಗೆ ಮಂಚಿದಿ ಪಿರಿಯದಿ ಗಳಿಗೆ ಮಂಚಿದಿ
ಪುಟ್ಟಿಂದಿ ಪೆದ್ದಗುಂಪು, ಪೆರಿಗಿಂದಿ ಪೆದ್ದಗುಂಪು…..
ಕುರುಮಾಮರು ಜನಪದ ವೈದ್ಯರು ಆಗಿರುವುದುಂಟು.

ಇವರಲ್ಲಿ ಸದಾ ಒಂದು ನಾಲ್ಕು ಮೂಲೆಯ ಕಾವಿಬಟ್ಟೆಯ ಚೀಲವಿರುತ್ತದೆ. ಇದನ್ನು ‘ಸಂಚಿ’ ಎಂದು ಕರೆಯಲಾಗುತ್ತದೆ. ಭವಿಷ್ಯವಾಚನಕ್ಕೆ ಸಹಾಯಕವಾಗುವ ಯಕ್ಷಿಭಜನ್ ಎಂಬ ಸಚಿತ್ರ ಪುಸ್ತಕ, ಕವಡೆ, ಚಿಂತಾಮಣಿ, ಅರಪೆಟ್ಟಿಗೆ, ಬಳೆ, ನವಿಲುಗರಿ, ಕರಿಬಂಟನಬಳ್ಳಿ (ಇದನ್ನು ಮಂತ್ರದ ಅಥವಾ ಮೋಡಿಯ ಬಳ್ಳಿ ಎಂದೂ ಕರೆಯುತ್ತಾರೆ.) ತಾಯತ, ತಗಡು, ಕಬ್ಬಿಣದ ಕಂಠ ಇತ್ಯಾದಿ ಸಾಮಗ್ರಿಗಳು ಅದರಲ್ಲಿರುತ್ತವೆ. ದುಂಡಾಗಿ ಸುತ್ತಿದ ಎಕ್ಕದ ಬಿಳಿಬೇರು, ಕರಡಿಕಾಲಿನ ಪಂಜ, ಮೈವದನಿಕೆ, ತಮಸಖಿ, ಜಡಮೂಲಕಿ ಮುಂತಾದ ಅಪರೂಪದ ಗಿಡಮೂಲಿಕೆಗಳು ಇರುತ್ತವೆ. ಮಕ್ಕಳ ಬಾಲಗ್ರಹ, ನೆಲಗ್ರಹ ಭೀತಿ, ಹಲ್ಲು ಕಡಿಯುವಿಕೆ ಮುಂತಾದವುಗಳನ್ನೂ ಇವುಗಳ ಸಹಾಯದಿಂದ ನಿವಾರಿಸುತ್ತಾರೆ. ಗಿಡಮೂಲಿಕೆಗಳ ಜೊತೆಗೆ ಭಂಗಿ ಸೊಪ್ಪಿನ ಚಿಲುಮೆ, ಅಡಿಕೆ ಚೀಲ, ಬಾಚಣಿಗೆ ಇತ್ಯಾದಿ ವಸ್ತುಗಳು ಸಹ ಸಂಚಿಯಲ್ಲಿ ಸೇರಿಕೊಂಡಿರುತ್ತವೆ. ಗುಡ್ಡಗಾಡುವಾಸಿಗಳಾಗಿದ್ದ ಇವರ ಪೂರ್ವಜರು ವೈದ್ಯರಾಗಿದ್ದುಕೊಂಡು ಪ್ರಾಣಾಂತಿಕ ಗಳಿಗೆಗಳಲ್ಲಿ ಚಿಕಿತ್ಸೆ ಮಾಡಿಕೊಳ್ಳ ಬೇಕಾಗುತ್ತಿದ್ದರಿಂದ ಈ ಸಮುದಾಯದ ವೈದ್ಯ ತೀರಾ ಪ್ರಾಚೀನವಾದುದೆಂದು ತಿಳಿಯ ಬಹುದಾಗಿದೆ. ತೀರಾ ವಯಸ್ಸಾದ ಕೊಂಡಮಾಮ ಹೆಂಗಸರಲ್ಲಿ ಕೆಲವರು ಗರ್ಭಚವಿ, ಗರ್ಭಸುಲೆ, ಕಿವಿಸೋರುವುದು, ದೃಷ್ಟಿದೋಷ, ವಾಂತಿ ಮುಂತಾದ ರೋಗಗಳಿಗೆ ಔಷಧಿ ಮಾಡುತ್ತಾರೆ. ಕೊಂಡಮಾಮಗಳು ಏಕನಾದದ ತಂತಿ ಮೀಟುತ್ತಾ ಮನೆಯಿಂದ ಮನೆಗೆ ಭಿಕ್ಷಾಟನೆ ಮಾಡುವಾಗ ಕಾಯಿಲೆ ಆದವರ ಗಮನ ಸೆಳೆಯುತ್ತಾರೆ.

ಹರಿಯೋ ಕಾಲ್ದಲ್ಲಿ ಒಂದು ಅಂಚಿಕಡ್ಡಿ
ಕಳೆಯೋ ಕಾಲ್ದಲ್ಲಿ ಒಂದು ಹುಲ್ಲುಕಡ್ಡಿ
ಮಾಡ್ತೀನಿ
ಮಂಡಿಬಾದಿನಿ
ಕೀಲುಬಾದಿನಿ
ಮುಂಗೈಬಾದಿನಿ
ತಲಬಾದಿನಿ ಮೂಗಿಲಿಪಡಿಸು
ನೆಗಡಿ ಕೆಮ್ಮುಲು
ಏನಾರ ಇರಲಿ
ಜೀವಸ್ಥಾನ ಜನ್ಮಸ್ಥಾನ ಹಿಡಿದು
ಕಳಿತೀನಿ ಹೊಟ್ಟೇಲಿ ಬಾಧಿ
ಸುಸ್ತಿ ಸಂಕಟ
ತಲೀಲಿ ಮಂಕು
ಕಣ್ಣಲ್ಲಿ ಮಂಜು ಏನಿದ್ದರೂ ಪರಿಹಾರ ಆಗ್ತದೆ
ಹಿಂದಿದ್ದ ಬಲಹೋಯ್ತು
ಮುಂದಿದ್ದ ಸಿಂಗಾರ ಹೋಯ್ತು
ಅದರಿಂದ ಕೊಂಚ ಕಷ್ಟ ಅದೆ ಕಳ್ಕೊಳಿ
ನೂರೊಂದು ಮೂಲಿಕೆ ಬೆರೆಸಿ
ಅರಸಿನದ ಪುಡಿ ಆಗದೆ
ಗಿಂಡಿ ನೀರಿಗೆ ಬೆರಸಿ ಎಂಟು ದಿನ ಕಡಿಯಲು ಹರಿದೊಯ್ತದೆ
(ಶ್ರೀಕಂಠಕೂಡಿಗೆ; ೧೯೮೮: ೪೪-೪೫).

ಇವತ್ತು ಊರೂರು ಅಲೆದಾಡುವ ಕುರುಮಾಮರು ಈ ತೆರನ ವೈದ್ಯ ತಿಳಿದವರಲ್ಲ ವಾದ್ದರಿಂದ ಈ ಕುರಿತು ವಿವರಗಳೂ ಅವರಿಂದ ಅಷ್ಟಾಗಿ ದೊರೆಯುವುದಿಲ್ಲ. ಈಗ ಹೆಚ್ಚು ಕಡಿಮೆ ಸಣ್ಣಪುಟ್ಟ ಹಳ್ಳಿಗಳಲ್ಲಿ ಆಧುನಿಕ ವೈದ್ಯರು ಲಭ್ಯವಾಗುವುದರಿಂದ ಕುರು ಮಾಮರೂ ಕೂಡ ತಮ್ಮ ಕಾಯಿಲೆ ಕಸಾಲೆಗಳಿಗೆ ಅವರನ್ನೇ ಅವಲಂಬಿಸುತ್ತಾರೆ.

ಕೊಂಡಮಾಮರು ಕನ್ನಡದಲ್ಲಿ ಬಳಸುವ ವ್ಯವಹಾರಿಕ ಭಾಷೆ ಮತ್ತು ಅವರ ಭವಿಷ್ಯ ಹೇಳುವ ಸಾಹಿತ್ಯ ಹಾಡುಗಳಲ್ಲಿನ ಭಾಷೆ ಆಸಕ್ತಿಕರವಾಗಿದೆ. ಅದೆಷ್ಟೋ ಕನ್ನಡದ ಪದಗಳಿಗೆ ತೆಲುಗು ಪ್ರತ್ಯಯಗಳನ್ನು ಹಚ್ಚಲಾಗುತ್ತದೆ.

ಉದಾಹರಣೆಗೆ;

ಮಾಡೋ ಲೆಕ್ಕ ಕೂಡೊ ಲೆಕ್ಕ
ನಡೆಸುವ ಉದ್ಯೋಗಮು
ಮುಂದೆ ನಿನ್ನಂತೆ ಜಯಮು ಉಂಟು ಬಾಬು

ಮತ್ತೊಂದೆಡೆ ಇಡಿಯಾಗಿ ತೆಲುಗು ನುಡಿಗಟ್ಟುಗಳನ್ನು ಬಳಸಲಾಗಿರುತ್ತದೆ. ಅಲ್ಲಿಯೂ ಕೂಡ ತೆಲುಗಿನ ಲಯವನ್ನು ಕನ್ನಡಕ್ಕೆ ಒಗ್ಗಿಸಲು ತಾಪತ್ರಯ ಪಡಲಾಗಿದೆ. ಕೆಳಗಿನ ಹಾಡಿನಲ್ಲಿ ಶ್ರೀರಾಮನನ್ನು ಎಲ್ಲಿರುವೆಯೆಂದು ಪ್ರಾರ್ಥಿಸುತ್ತಾ ಹುಣಿಸೆ ಮರಕ್ಕೆ ಚಿಂತೆಗಳನ್ನು ಕಟ್ಟಿಹಾಕಿ, (ಹುಣಿಸೆ ಮರ-ಚಿಂತಚೆಟ್ಟು, ಅದು ತೆಲುಗಲ್ಲಿ ಚಿಂತಚೆಟ್ಟುಕು ಚಿಂತಲಕಟ್ಟಿ ಎಂದಾಗಿರಬೇಕು, ಆದರೆ ಚೆಟ್ಟುಕು ‘ಗೆ’ ಪ್ರತ್ಯಯ ಹಚ್ಚಲಾಗಿದೆ.) ಬೇವಿನಮರಕ್ಕೆ ತಾಳಿಯ ಕಟ್ಟಿ ಎಲ್ಲಿರುವೆ ಶ್ರೀರಾಮಚಂದ್ರನೇ ಎಂದು ಕೇಳುವಲ್ಲಿ ಇದನ್ನು ಗಮನಿಸಬಹುದು.

ಶ್ರೀರಾಮುಡು ಯಾಡುಂಡಾವು
ಚಿಂತಲ ಚೆಟ್ಟಿಗೆ ಚಿಂತಲಕಟ್ಟಿ
ಯಾಪಮಾನಕೆ ತಾಳಿಲಕಟ್ಟಿ
ಯಗುಡುಂಡಾವು ರಾಮಚಂದ್ರುಡು ಯಗುಡುಂಡಾವು
ಮಂಜುನಾಥುಡು ಯಗಡುಂಡಾವು
ಮನಸುಲು ಪ್ರಶ್ನೆ ಅಡುಗುರಾ ಮಾಮ
ರೈಟು ಬಂದರೆ ರೈಟುಂ ಅನ್ನು
ಡೊಂಕು ಬಂದರೆ ಡೊಂಕುಂ ಅನ್ನುಬಾಯಿ

ಕೊಂಡಮಾಮರ ಕನ್ನಡದ ವ್ಯವಹಾರಿಕ ಭಾಷೆ ಮತ್ತು ಅವರ ಸಾಹಿತ್ಯ ಭಾಷಾಶಾಸ್ತ್ರೀಯ (ದ್ವಿಭಾಷಿಕ ನೆಲೆಯಲ್ಲಿ) ಅಧ್ಯಯನಕ್ಕೆ ಅದೆಷ್ಟೋ ವಿಷಯಗಳನ್ನು ಒದಗಿಸಿಕೊಡಬಲ್ಲದು.

ಇಡೀ ಜಗತ್ತೇ ಇಂದು ಮಾಹಿತಿ ತಂತ್ರಜ್ಞಾನದಿಂದಾಗಿ ಗ್ಲೋಬಲ್‌ವಿಲೇಜ್‌ನ ಪರಿಕಲ್ಪನೆ ಯಲ್ಲಿದೆ. ವೈದಿಕರ ಸಾಂಪ್ರದಾಯಿಕ ಜೋತಿಷ್ಯವು ಅಂತರ್ಜಾಲದ ಮೂಲಕ ಭವಿಷ್ಯ ಹೇಳಿಕೊಂಡು ಹಣ ಬಾಚುತ್ತಿದೆ. ಅಲ್ಲದೆ ಅದನ್ನು ಪಠ್ಯಕ್ರಮವನ್ನಾಗಿಸುವುದರ ಮೂಲಕ ಅಕಾಡೆಮಿಕ್ ಆದಂತಹ ವೇಷತೊಡಿಸಿ ವಿಶ್ವವಿದ್ಯಾಲಯಗಳ ಪೀಠಗಳಲ್ಲಿ ಕೂರಿಸಲಾಗುತ್ತಿದೆ. ಆದರೆ ಕೊಂಡಮಾಮ ಮಾತ್ರ ಆಧುನಿಕ ಜಗತ್ತಿನ ಹುನ್ನಾರಗಳೊಂದನ್ನೂ ಅರ್ಥ ಮಾಡಿ ಕೊಳ್ಳದೆ ಸಂತೆಯ ಜನಜಂಗುಳಿಯಲ್ಲಿ ಎಲ್ಲೋ ಒಂದು ಮೂಲೆಯಲ್ಲಿ ದಿಗ್ಮೂಢನಾಗಿ ಕುಳಿತಿದ್ದಾನೆ. ತನ್ನ ಪರಂಪರಾಗತ ಜ್ಞಾನ ತಿಳುವಳಿಕೆಯನ್ನು ಎನ್‌ಕ್ಯಾಷ್ ಮಾಡಿಕೊಳ್ಳಲಾಗದ ಜಾಣ್ಮೆ ಅವನಿಗಿಲ್ಲದಾಗಿದೆ ಅಥವಾ ಆಧುನಿಕ ಜಗತ್ತು ಅಂತಹ ಜಾಣ್ಮೆಯನ್ನು ಅವನಿಂದ ಕಸಿದುಕೊಂಡಂತಿದೆ. ಒಂದೆಡೆ ಯಾವ ನೆಲೆಯೂ ಇಲ್ಲದ, ಭವಿಷ್ಯವೂ ಇಲ್ಲದ ಅವನು ಇನ್ನೂ ಭವಿಷ್ಯ ಹೇಳುವ ಗುಂಗಿನಲ್ಲೇ ಇರುವುದು ಮಾತ್ರ ಆಧುನಿಕ ಜಗತ್ತಿನ ವ್ಯಂಗವೆಂದೇ ಹೇಳಬೇಕಾಗುತ್ತದೆ. ಬಹುಶಃ ಇದು ನಮ್ಮ ಬುಡಕಟ್ಟುಗಳೆಲ್ಲಕ್ಕೂ ಅನ್ವಯವಾಗುವ ವೈರುಧ್ಯವೆಂಬುದರಲ್ಲಿ ಎರಡು ಮಾತಿಲ್ಲ.

ಕುರುಮಾಮ ಸಮುದಾಯ ನಾಗರೀಕತೆಯ ಪ್ರಭಾವಕ್ಕೆ ಒಳಗಾಗುತ್ತಾ ಬಂದಂತೆಲ್ಲಾ ತನ್ನ ಮೂಲ ನಂಬಿಕೆ, ಬದುಕಿನ ಸ್ಥಿತಿಗತಿಗಳಲ್ಲಿ ಬದಲಾವಣೆಗೆ ಒಳಗಾಗುತ್ತಾ ನಡೆದಿದೆ. ಬದಲಾವಣೆ ಅನಿವಾರ‍್ಯ ಎಂಬ ಸ್ಥಿತಿಗೆ ಬಂದುದರಿಂದಾಗಿ ಆ ಬದಲಾವಣೆಗೆ ಒಗ್ಗಿಕೊಳ್ಳುತ್ತಾ ಬಂದಿದೆ. ತಮ್ಮ ಸಾಮುದಾಯಿಕ ಕಟ್ಟುಪಾಡು ಆಚರಣೆಗಳನ್ನು ಮೀರಬೇಕಾದ ಸಂದರ್ಭಗಳು ಅವರಿಗೆ ಬಂದೊಂದಗುತ್ತಿವೆ. ಒಂದು ಕಾಲದಲ್ಲಿ ಗಡ್ಡಮೀಸೆ ಬೋಳಿಸಿದುದಕ್ಕೆ ದಂಡ ತೆರಬೇಕಾಗಿದ್ದ ವೃತ್ತಿನಿರತ ಕುರುಮಾಮರು, ಇಂದು ಆ ಕಟ್ಟಳೆಯನ್ನು ಅಲ್ಲಲ್ಲಿ ಮೀರುತ್ತಿದ್ದಾರೆ.

ಮೂಲನೆಲೆಯ ಸಂಸ್ಕೃತಿಯಿಂದ ಸಂಬಂಧಪಟ್ಟ ಸಮುದಾಯಗಳು ದೂರವಾಗುತ್ತಿವೆ. ಈ ದೂರವಾಗುವಿಕೆಯು ಅವರ ಆರ್ಥಿಕ, ಸಾಮಾಜಿಕ, ಉನ್ನತಿ ಸಾಧ್ಯವೆಂಬ ಗ್ರಹಿಕೆಯನ್ನೇ ಮುಖ್ಯ ಪ್ರವಾಹದ ಆಕ್ರಮಣಶೀಲ ಸಂಸ್ಕೃತಿ ಪದೇ ಪದೇ ಹೇಳುವ ಮುಖಾಂತರ ಆದಿಮ ಸಮುದಾಯಗಳನ್ನು ಒಪ್ಪಿಸುತ್ತಿದೆ. ಇಂತಹ ಗ್ರಹಿಕೆಯನ್ನು ಕುರುಮಾಮರಂತಹ ಮುಗ್ಧ ಸಮುದಾಯದವರಿಗೆ ತಲುಪಿಸುವ ಮೂಲಕ ತನ್ನ ಸಾಂಸ್ಕೃತಿಕ ಆಕ್ರಮಣಗಳನ್ನು ಮುಂದು ವರೆಸುತ್ತಿದೆ. ಈ ಆಕ್ರಮಣದಿಂದಾಗಿ ಅವರುಗಳೂ ಸಹ ಅದೇ ಆಲೋಚನೆಯೊಳಗೆ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಹೀಗೆ ಮಾಡುವ ಮೂಲಕ ಕುರುಮಾಮರಂತಹ ಸಮುದಾಯಗಳನ್ನು ದಾಸ್ಯದ ಮನೋಭಾವಕ್ಕೆ ತಳ್ಳುತ್ತದೆ. ಅದನ್ನೇ ಸಮುದಾಯದಿಂದ ಸಮುದಾಯಕ್ಕೆ ದಾಟಿಸುತ್ತಿರುವ ಯಜಮಾನ ಸಂಸ್ಕೃತಿಯ ಆಕ್ರಮಣಶೀಲತೆಯಿಂದ ಕುರುಮಾಮರಂತಹ ಹಲವಾರು ಸಮುದಾಯಗಳನ್ನು ಉಳಿಸಿಕೊಳ್ಳಬೇಕಾಗಿದೆ.

ಆಧುನಿಕತೆಯಿಂದಾಗಿ ಕಾಡುಗಳು ಕಾಂಕ್ರಿಟ್ ಆಗುವ ಈ ಸಂದರ್ಭದಲ್ಲಿ ಕಾಡಿನಲ್ಲಿ ವಾಸಿಸುತ್ತಿದ್ದ ಸಮುದಾಯಗಳು ಕಾಡು ಇಲ್ಲದೇ ನಾಡು ಇಲ್ಲದೆ ಅತಂತ್ರರಾಗುತ್ತಿದ್ದಾರೆ. ಕುರುಮಾಮ ಸಮುದಾಯದವರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಮೂಲತಹ ಕುರು ಮಾಮರು ಶತಮಾನಗಳಷ್ಟು ಹಿಂದೆ ಸಮೃದ್ಧವಾದ ಕಾಡು, ಅಸಂಖ್ಯಾತ ಅರಣ್ಯ ಮೃಗಗಳ ನಡುವೆ ವಾಸ ಮಾಡುತ್ತಿದ್ದರು. ಕುರುಮಾಮರು ನಿಸರ್ಗದ ಅಂಗುಲಂಗುಲವನ್ನೂ ಬಲ್ಲ ವರಾಗಿದ್ದರು. ಪ್ರಕೃತಿಯ ಗಿಡಮರಗಳ ಜಾತಿ, ಲಕ್ಷಣ, ಸ್ವರೂಪವನ್ನು ಅರಿತ ಹಾಗೆಯೇ ಪ್ರಾಣಿಗಳ ಚಲನವಲನಗಳ ಸೂಕ್ಷ್ಮಗಳನ್ನು ಗ್ರಹಿಸಬಲ್ಲವರಾಗಿದ್ದರು. ಅಲೆದಾಡುವಾಗ ಆಗುವ ಸಣ್ಣಪುಟ್ಟ ಅನಾಹುತಗಳಿಗೆ ತಾವೇ ಔಷಧೋಪಚಾರ ಮಾಡಿಕೊಳ್ಳುವವರಾಗಿದ್ದರು. ಆದರೆ ಇಂದು ಕಾಡು ನಶಿಸುತ್ತಿರುವುದರಿಂದಾಗಿ ಅಂತಹ ಅನಾಹುತಗಳಿಂದ ಜೀವ ರಕ್ಷಿಸಿಕೊಳ್ಳಲು ಅನಿವಾರ‍್ಯವಾಗಿ ಆಧುನಿಕ ಔಷದೋಪಚಾರಗಳಿಗೆ ಹೋಗುವ ಸ್ಥಿತಿ ಬಂದಿದೆ. ಜೊತೆಗೆ ಆಗಿನ ಕಾಡೂ, ಗಿಡಮರಗಳೂ, ಪ್ರಾಣಿಗಳೂ ಇಲ್ಲ, ಅಂತಹ ಕುರುಮಾಮ ವ್ಯಕ್ತಿಗಳೂ ಇಲ್ಲವೆಂದರೆ ತಪ್ಪಾಗಲಾರದು.

ಕುರುಮಾಮರಿಗಿದ್ದ ಕುಶಲ ವಿದ್ಯೆಯು ಆಧುನಿಕತೆಯಿಂದಾಗಿ ಇನ್ನಿಲ್ಲದಂತಾಗಿದೆ. ಪರಂಪರೆಯಲ್ಲಿ ತಮ್ಮ ಪೀಳಿಗೆಯಿಂದ ಪೀಳಿಗೆಗಳವರೆಗೆ ರೂಢಿಸಿಕೊಂಡು ಬಂದಿದ್ದ ಆಚಾರ, ವಿಚಾರ, ನಂಬಿಕೆ, ಆಚರಣೆ, ಸಂಪ್ರದಾಯ, ಪದ್ಧತಿಗಳನ್ನು ಕೈಬಿಡುವ ಸ್ಥಿತಿಯಲ್ಲಿದ್ದಾರೆ. ಜೊತೆಗೆ ಅವರ ಮೂಲದವುಗಳೊಂದಿಗೆ ಆಧುನಿಕತೆಯ ಹಲವು ಸಾಂಸ್ಕೃತಿಕ ಅಂಶಗಳೂ ಸೇರಿ ಅವರ ಜೀವನ ಪದ್ಧತಿಯೇ ಕಲಸುಮೇಲೋಗರವಾಗಿದೆ.

ಆಧುನಿಕತೆಯ ಪ್ರಭಾವ ಈ ತರಹದ ಹಲವಾರು ಸಮುದಾಯಗಳಿಗೆ ಸಾಂಸ್ಕೃತಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ. ಆಧುನಿಕತೆಯ ಹೊಸ ಹೊಸ ಆವಿಷ್ಕಾರಗಳು ಮನುಷ್ಯನ ಸಂವೇದನೆ ಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದೆ. ಹಾಗಾಗಿ ಆಧುನಿಕತೆ ಎಂಬುದೊಂದು ಇವತ್ತು ಸಂವೇದನೆಗಳನ್ನು ರೂಪಿಸುವ ಮತ್ತು ನಿಯಂತ್ರಿಸುವ ವೇಗವರ್ಧಕವಾಗಿದೆ. ಇದರಿಂದಾಗಿ ತನಗೆ ಬೇಕಾದ ಸಂವೇದನೆಗೆ ಮನುಷ್ಯನನ್ನು ಒಳಪಡಿಸಿ ಆ ಮುಖಾಂತರ ಅವನ ಪ್ರಾಚೀನತೆ ಯನ್ನು ವಿಸ್ಮೃತಿಗೊಳಪಡಿಸುತ್ತದೆ. ಜೊತೆಗೆ ದೇಸೀ ಪರಿಸರದಲ್ಲಿರುವ ನಮ್ಮಂತಹವರು ಬೇಗ ಬೇಗನೇ ಅಗ್ಗವಾಗಿ ಎಲ್ಲವನ್ನೂ ಸಾಧಿಸಬೇಕೆನ್ನುವ ಅತಿ ಆಸೆಯಿಂದಾಗಿ ಹಲವಾರು ಅವಘಡಗಳನ್ನು ಸೃಷ್ಟಿಸಿಕೊಳ್ಳುತ್ತೇವೆ. ಇಂತಹ ಪರಿಸ್ಥಿತಿ ಸಮುದಾಯಗಳನ್ನು ಸಾಂಸ್ಕೃತಿಕ ವಿಮುಖತೆಗೆ ಒಯ್ಯುತ್ತದೆ. ಕುರುಮಾಮ ಸಮುದಾಯವೂ ಸಹ ಇದರಿಂದ ಭಿನ್ನವಾಗಿಲ್ಲ. ಜೊತೆಗೆ ಈ ತರಹದ ನೂರಾರು ಅಮಾಯಕ ಸಮುದಾಯಗಳ ಸಾಂಸ್ಕೃತಿಕ ದಿವಾಳಿಗೆ ಕಾರಣವಾಗಿದೆ.

ಕುರುಮಾಮ ಯುವ ಸಮುದಾಯ ಸಾಂಸ್ಕೃತಿಕವಾಗಿ ನೆಲೆಹೀನವಾಗುತ್ತಿರುವುದರ ಜೊತೆಗೆ ಶಿಕ್ಷಣದ ಸ್ಪರ್ಶವೂ ಇಲ್ಲದಂತೆ ಹಿಂದುಳಿಯುತ್ತಿದ್ದಾರೆ. ಈUಗ ಹುಟ್ಟಿಬರುತ್ತಿರುವ ಮಕ್ಕಳಲ್ಲಿಯೂ ಕೆಲವರು ಮಾತ್ರ ಹತ್ತಿರದ ಶಾಲೆಗಳಿಗೆ ಹೋಗುತ್ತಿದ್ದರಾದರೂ ಅವರಲ್ಲಿ ಅನೇಕರು ಮಧ್ಯದಲ್ಲಿಯೇ ಶಾಲೆ ಬಿಡುವ ಸಂದರ್ಭಗಳೇ ಹೆಚ್ಚಿವೆ. ಕುರುಮಾಮರಿಗೆ ಸಾಕ್ಷರತೆ ಕುರಿತು ಗೊತ್ತಿಲ್ಲದಿರುವಂತೆಯೇ ಬಹುಶಃ ಸಾಕ್ಷರತೆಗೂ ಕುರುಮಾಮರಂತಹವರ ಬಗ್ಗೆ ಏನೇನೂ ಗೊತ್ತಿದ್ದಂತಿಲ್ಲ.

ಆಧುನಿಕತೆಯ ಪ್ರಭಾವ ಅವರ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳನ್ನು ಸೂಚಿಸುವಂತಿದ್ದರೆ ಸಾಂಸ್ಕೃತಿಕವಾಗಿ ಅವರು ಆಕ್ರಮಣಶೀಲ ಸಂಸ್ಕೃತಿಯನ್ನೇ ಅನುಕರಿಸುವ ದುರಂತಕ್ಕಿಳಿಯುತ್ತಿದ್ದಾರೆ.

ಈ ಆಧುನಿಕತೆಯ ಕೆಟ್ಟ ಪರಿಣಾಮದಿಂದಾಗಿ ಇಂದು ದುಡಿವ ವರ್ಗದ ಜನ ತಮ್ಮ ವೃತ್ತಿಗಳನ್ನು ಬಿಟ್ಟುಕೊಡಲು ಯೋಚಿಸುತ್ತಿದ್ದಾರೆ. ಕೃಷಿಕರಲ್ಲದ ಸಾಮಾಜಿಕವಾಗಿ ‘ಹೀನ’ ವೃತ್ತಿಗಳನ್ನು ಅವಲಂಬಿಸಿರುವ ಬಹುತೇಕ ಎಲ್ಲಾ ಸಮುದಾಯಗಳು ಸಾಮಾಜಿಕ ಅವಮಾನ ವನ್ನು ಮೀರಿನಿಲ್ಲಲು ತಮ್ಮ ವೃತ್ತಿಗಳನ್ನು ಬಿಟ್ಟುಕೊಡಲೇಬೇಕಾದ ಅನಿವಾರ್ಯತೆ ಸೃಷ್ಟಿ ಯಾಗಿದೆ. ಈ ಸಮುದಾಯಗಳು, ಇಂಡಿಯಾವೆಂಬ ದೇಶವೊಂದಿದೆಯೋ ಇಲ್ಲವೋ, ಅದರ ಸಾಂಸ್ಕೃತಿಕ ಬಹುತ್ವ ಇರಬೇಕೋ, ನಾಶವಾಗಬೇಕೋ ಎಂಬುದಕ್ಕಿಂತ ಒಂದು ಹೊತ್ತಿನ ಊಟದ ಕುರಿತು, ತಲೆ ಎತ್ತಿ ನಿಲ್ಲಿಸುವ ಆತ್ಮಪ್ರತ್ಯಯದ ಕುರಿತು ಯೋಚಿಸುತ್ತಿವೆ. ಆಧುನಿಕ ಜಗತ್ತಿನಲ್ಲಿ ಬಿಡಿಗಾಸನ್ನೂ ತರದ ಮತ್ತು ಹಿಂಸಾತ್ಮಕ ಸಾಮಾಜಿಕ ಅವಮಾನಕ್ಕೆ ಕಾರಣವಾಗುವ ಪಾರಂಪರಿಕ ವೃತ್ತಿಗಳನ್ನು  ಅವರು ಬಿಟ್ಟುಕೊಡುತ್ತಿದ್ದಾರೆ. ಆದರೆ ಅಲೆಮಾರಿ ಗಳಿಗೆ ಈ ಅನುಕೂಲತೆಯೂ ಇಲ್ಲ. ಈ ಸಮುದಾಯಗಳು ಒಪ್ಪತ್ತಿನ ಊಟಕ್ಕೆ ತಮ್ಮ ವೃತ್ತಿಗಳನ್ನು ಇನ್ನೂ ಅನುಸರಿಸುತ್ತಲೇ ಇರಬೇಕಾದ ಕ್ರೂರ ಅನಿವಾರ‍್ಯತೆಯ ಮುಂದೆ ಮಂಡಿಯೂರಿಬಿಟ್ಟಿವೆ.

ಈ ತರಹದ ಸಮುದಾಯಗಳು ತಮ್ಮ ಚಾರಿತ್ರಿಕ ಬೆಳವಣಿಗೆಯಲ್ಲಿ, ಸಮಾಜದ ಯಾವುದೋ ಒಂದು ಹಂತದಲ್ಲಿ ನಿಶ್ಚಿತ ಆರ್ಥಿಕ ಸಂಪನ್ಮೂಲಗಳನ್ನು ಕಳೆದುಕೊಂಡು ಶಾಶ್ವತವಾಗಿ ಅಲೆಮಾರಿಗಳಾಗಿದ್ದಾರೆ. ದಿನದಿಂದ ದಿನಕ್ಕೆ ಇವರ ಬದುಕು ಜಟಿಲವಾಗಿದ್ದು ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. ಬಡತನ, ಹಸಿವು, ದಾರಿದ್ರ್ಯ, ಅನಕ್ಷರತೆ, ಮೂಢ ನಂಬಿಕೆ, ವಸತಿ ಸಮಸ್ಯೆ ಹೀಗೆ ಹತ್ತಾರು ಸಮಸ್ಯೆಗಳು ಇವರನ್ನು ಕಿತ್ತು ತಿನ್ನುತ್ತಿವೆ. ಇಂತಹವರ ಬಗೆಗಿನ ಅಭಿವೃದ್ದಿ ಯೋಜನೆಗಳೂ ಸಹ ಸರಕಾರದ ರಾಜಕೀಯ, ಅಧಿಕಾರಿಗಳ ಭ್ರಷ್ಟಾಚಾರದಿಂದಾಗಿ ಇವರಿಗೆ ತಲುಪುತ್ತಿಲ್ಲ. ಕೆಲವೆಡೆ ಅಭಿವೃದ್ದಿ ಯೋಜನೆಗಳಿವೆ ಎಂಬುದರ ಪರಿಜ್ಞಾನವು ಇವರಲ್ಲಿ ಇಲ್ಲ.

ಪರಾಮರ್ಶನಗ್ರಂಥಗಳು

೧. ದಾದಾಪೀರ್, ೨೦೦೦, ಕುರುಮಾಮ (ಇದರಲ್ಲಿ ಕರ್ನಾಟಕದ ಬುಡಕಟ್ಟುಗಳು ಸಂ. ೨, ಸಂ. ಪ್ರೊ. ಎಚ್.ಜೆ. ಲಕ್ಕಪ್ಪಗೌಡ), ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು.

೨. ಪ್ರೊ. ಬೋರಲಿಂಗಯ್ಯ ಹಿ.ಚಿ., ೧೯೯೭, ಕರ್ನಾಟಕ ಜನಪದ ಕಲೆಗಳ ಕೋಶ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೩. ಡಾ. ಶ್ರೀಕಂಠಕೂಡಿಗೆ, ೧೯೮೯, ಕೊಂಡಮಾಮ, ಐ.ಬಿ.ಎಚ್. ಪ್ರಕಾಶನ, ಬೆಂಗಳೂರು.

* * *