ಬೇಡರ ಜನಾಂಗಕ್ಕೆ “ನಾಯಕರು” ಎಂಬ ಪರ್ಯಾಯ ಪದವು ಕ್ರಿ.ಶ. ೯ನೆಯ ಶತಮಾನದಿಂದಲೂ ಬಳಕೆಯಲ್ಲಿದೆ. ಅದರ ಮೂಲದ ಬಗೆಗೆ ಇಲ್ಲಿ ವಿವೇಚಿಸಿ ಚಾರಿತ್ರಿಕ ವಾಗಿ ಪರ‍್ಯಾಲೋಚಿಸಲಾಗುತ್ತದೆ.

ಬೇಡರ ಜನಾಂಗವು ಮೂಲ ದ್ರಾವಿಡ ಜನಾಂಗ. ಅದಕ್ಕೆ ಪುಳಿಂದ, ಭಿಲ್ಲ, ಕಿರಾತ, ವ್ಯಾಧ, ಶಬರ, ನಿಷಾಧ ಮುಂತಾದ ಪುರಾತನ ಹೆಸರುಗಳಿದ್ದುವು. ಅಂತೆಯೆ ದ್ರಾವಿಡ ಭಾಷೆಗಳಲ್ಲಿ ವೇಡನ್, ವೇಂದನ್ ವೇಟ್ಟುವನ್, ಎಂದೆಲ್ಲ ಹೆಸರುಗಳಿದ್ದುವು. ಅಲ್ಲದೆ, ಅವರು ಆಡುತ್ತಿದ್ದ ಬೇಟೆಗನುಸಾರವಾಗಿ ಅವರಿಗೆ ಎಯಿನರ್, ಪುಲಿಂದರ್, ಪುಳಿಞ್ಞರ್, ಕುಳಿಂದರ್, ಇತ್ಯಾದಿ ಅನೇಕ ದ್ರಾವಿಡ ಹೆಸರುಗಳಿದ್ದುವು. ಹಳೆಗನ್ನಡದಲ್ಲಿ ವೇಡರ್, ವೇಳರ್, ವಿದಿರ್, ಬಿಲ್ಲ, ಬೇಂಟೆಯವರ್, ಬೇಂಟೆಕಾರ, ವಿಯದರ, ಬಿಯದರ, ಕುಣಿಂದರ್, ಕೋಮ್, ಎಂಬ ಹೆಸರುಗಳು ದೊರಕುತ್ತವೆ. ರಾಷ್ಟ್ರಕೂಟರ ಕಾಲದ ದ್ವಿತೀಯ  ಭಾಷೆಯಾಗಿದ್ದ ಅಪಭ್ರಂಶ ಭಾಷೆಯಲ್ಲಿ ನಾಹಲ, ನಾಹಿಲ, ನಾಇಲ್ಲ, ವಾಹ, ಸಮರ, ಸಿಮಿರ, ಚಿಲಾಡ, ಭಿಲ್ಲ, ಪಾರದ್ದಿಯ, ಮುಂತಾದ ಅನೇಕ ಹೆಸರುಗಳು ದೊರಕುತ್ತವೆ.

ಆದರೆ ‘ನಾಯಕ’ ಎಂಬ ಪದವು ಕ್ರಿ.ಶ. ೯ನೆಯ ಶತಮಾನಕ್ಕಿಂತ ಹಿಂದೆ ಎಲ್ಲಿಯೂ ಉಪನಾಮ ಅಥವಾ ವ್ಯಕ್ತಿನಾಮವಾಗಿ ದೊರಕುವುದಿಲ್ಲ. ಸಂಸ್ಕೃತ ಭಾಷೆಯ ಈ ಪದವು ಮುಂದಾಳು, ಮುಖ್ಯಸ್ಥ ಎಂಬ ಅರ್ಥದಲ್ಲಿ ಭರತನ ನಾಟ್ಯಶಾಸ್ತ್ರವೇ ಮೊದಲಾದ ಕಾವ್ಯಶಾಸ್ತ್ರ ಗಳಲ್ಲಿ ಕ್ರಿ.ಶ. ಮೂರನೆಯ ಶತಮಾನದಲ್ಲಿ ಕಾಣಿಸಿಕೊಳ್ಳುತ್ತದೆ. ಸಂಸ್ಕೃತದ “ನೇ  ನಯ್” ಎಂಬ ಧಾತುವಿನಿಂದ ಈ ಕೃದಂತ ನಾಮಪದವು ಸಿದ್ಧವಾಗುತ್ತದೆ. ತದನಂತರ, ಈ “ನಾಯಕ” ಎಂಬ ಪದಕ್ಕೆ ಮುಂದಾಳು, ತಲೆಯಾಳು, ಮುಖ್ಯಸ್ಥ, ಸೇನಾಪತಿ, ಪಡೆವಳ, ಎಂದೆಲ್ಲ ಅರ್ಥವಿಕಾಸವಾಗಿದೆ. ಹೀಗೆ “ನಾಯಕ” ಎಂಬ ಪದವು ಅಧಿಕಾರ ಸೂಚಕ ಶಬ್ದವಾಗಿ ಕನ್ನಡನಾಡಿನ ರಾಜಕೀಯ ವಲಯಗಳಲ್ಲಿ ಸುಮಾರು ಕ್ರಿ.ಶ. ೮-೯ನೆಯ ಶತಮಾನಗಳಲ್ಲಿ ಬಳಕೆಗೆ ಬಂದಿತು. ಅಂದಿನ ರಾಜ್ಯಾಡಳಿತದಲ್ಲಿ ಮುಖ್ಯ ಅಧಿಕಾರಿಗಳಾಗಿದ್ದ “ಶ್ರೀಕರಣದ ರಾಜಾಧ್ಯಾಕ್ಷ”ರುಗಳಿಗೂ, ಸೈನ್ಯದ ಅಧಿಕಾರಿಗಳಿಗೂ ಮತ್ತು ಅಂದಿನ ಪೊಲೀಸ್ ವಿಭಾಗದ “ತಳಾಱ” ಎಂಬ ಅಧಿಕಾರಿಗಳಿಗೂ “ನಾಯಕ” ಎಂಬ ಉಪನಾಮವು ಬಳಕೆಗೆ ಬರತೊಡಗಿತು. ಇದು ಪ್ರಾರಂಭದಲ್ಲಿ ಜಾತಿಸೂಚಕ ಶಬ್ದವಾಗಿರಲಿಲ್ಲ. ಕೇವಲ ಗೌರವ ಸೂಚಕ ಶಬ್ದವಾಗಿದ್ದಿತು.

“ನಾಯಕ” ಎಂಬ ಉಪನಾಮವು ಬೇಡರ ಹೆಸರುಗಳ ಕೊನೆಯಲ್ಲಿ ಪ್ರಯುಕ್ತ ವಾಗುವುದಕ್ಕಿಂತ ಪೂರ್ವದಲ್ಲಿ, ಅವರ ಹೆಸರುಗಳ ಕೊನೆಯಲ್ಲಿ “ಬೋವ / ಬೋಯ / ಬೋಯಿ” ಎಂಬ ಉಪನಾಮಗಳು ಬಳಕೆಯಲ್ಲಿದ್ದುವು. ಇವು ಎಲ್ಲಿಂದ ಬಂದುವೆಂದರೆ, ಶಾತವಾಹನರ ಕಾಲದಲ್ಲಿ “ಭೋಜ / ಭೋಜಕ / ಭೋಜಿ” ಎಂಬ ಉನ್ನತ ಹುದ್ದೆಗಳಿದ್ದುವು. ಆ ಗೌರವಾನ್ವಿತವಾದ ಅಧಿಕಾರ ಸೂಚಕ ಪದಗಳೇ ತದ್ಭವವಾಗಿ ಬೇಡರ ಪಾಲಿಗೆ “ಬೋವ / ಬೋಯ / ಬೋಯಿ” ಎಂಬ ರೂಪಗಳಲ್ಲಿ ಬಳಕೆಯಲ್ಲಿ ಬಂದುವು. ಆದುದರಿಂದ “ಬೋಯಿ” ಎಂದರೆ ಪಲ್ಲಕ್ಕಿ ಹೊರುವವನು ಎಂದು ಅರ್ಥವಲ್ಲ. ಈ ಅಪಾರ್ಥ ಇತ್ತೀಚೆಗೆ ಉಂಟಾಗಿದೆ.

ಕ್ರಿ.ಶ. ೩ನೆಯ ಶತಮಾನದ ವೇಳೆಗೆ ಆಂಧ್ರಪ್ರದೇಶದ ನಾಗಾರ್ಜುನ ಕೊಂಡದ ಇಕ್ಷ್ವಾಕು ವಂಶದ ದೊರೆಗಳಿಂದ “ಸ್ಥಲವರ / ತಲವರ / ತಳವರ / ತಳಾರ / ತಳಾಱ / ತಳವಾರ ಮಹಾತಲವರ / ನಾಡತಳವಾರ” ಎಂಬ ಪೊಲೀಸ್ ವಿಭಾಗದ ಹುದ್ದೆಗಳು ಸೃಷ್ಟಿಸಲ್ಪಟ್ಟವು. “ಸ್ಥಲವರ” ಎಂದರೆ ಸ್ಥಳೀಯ ಅಧಿಕಾರಿ ಎಂದು ತಿಳಿಯಬೇಕು. ಆ ಕಾರಣದಿಂದ ಇಕ್ಷ್ವಾಕುಗಳು ಈ “ಸ್ಥಲವರ” ಎಂಬ ಅಧಿಕಾರವನ್ನು ಸ್ಥಳೀಯ ಮೂಲ ನಿವಾಸಿಗಳಾಗಿದ್ದ ಬೇಡರಿಗೇ ವಂಶ ಪಾರಂಪರ‍್ಯವಾಗಿ ಅನುಭವಿಸುವಂತೆ ಕಟ್ಟಳೆ ಮಾಡಿದರು. ಬೇಡರ ಜಾತಿಗೆ ಈ “ತಳವಾರ” ಚಾಕರಿಯು ಹೀಗೆ ಕ್ರಿ.ಪೂ. ೩ನೆಯ ಶತಮಾನದಿಂದಲೂ ಇತ್ತೀಚಿನವರೆವಿಗೂ ನಡೆದು ಬರುತ್ತಲೇ ಇದೆ.

ಶಿಲಾಶಾಸನಗಳಲ್ಲಿ “ನಾಯಕ” ಎಂಬ ಉಪನಾಮವು, ಈಗ ನಮಗೆ ಲಭ್ಯವಿರುವಂತೆ, ಮೊಟ್ಟಮೊದಲು ಹಾಸನಜಿಲ್ಲೆ, ಅರಸೀಕೆರೆ ತಾಲ್ಲೂಕು, ಕಣಿಕಟ್ಟೆ ಹೋಬಳಿ, ಕಲ್ಗುಂಡಿ ಗ್ರಾಮದಲ್ಲಿ ದೊರೆತಿರುವ ಕ್ರಿ.ಶ. ೯ನೆಯ ಶತಮಾನದ ಇಮ್ಮಡಿ ಸತ್ಯವಾಕ್ಯ ರಾಚಮಲ್ಲ ಗಂಗನ ಆಳ್ವಿಕೆಯ ಒಂದು ರಗಲ್ಲಿನಲ್ಲಿ ದೊರಕುತ್ತದೆ. ಅದರಲ್ಲಿ “ಪ್ಪೆಗಡೆ ನಾಯಕ” ಎಂಬ ವೀರನು ಗೋಗ್ರಹಣದ ಯುದ್ಧದಲ್ಲಿ ಸತ್ತುದಾಗಿ ತಿಳಿಸಲಾಗಿದೆ. ಎಂದರೆ, ೯ನೆಯ ಶತಮಾನಕ್ಕಿಂತ ಹಿಂದೆ ಬಹುಷಃ “ನಾಯಕ” ಎಂಬ ಪದಪ್ರಯೋಗವು ಬೇಡರ ಜನಾಂಗ ಕ್ಕಿರಲಿಲ್ಲವೆಂತಲೇ ಕಾಣುತ್ತದೆ.

ರಾಷ್ಟ್ರಕೂಟರ ಕಾಲದಲ್ಲಿ ತಳವಾರರಿಗೆ ನಾಯಕ ಎಂಬ ಉಪನಾಮವಿದ್ದುದು ಕಂಡು ಬರುತ್ತದೆ. ಎರಡನೆಯ ಕೃಷ್ಣ ಅಕಾಲವರ್ಷ ಶುಭತುಂಗನ ಆಳ್ವಿಕೆಯಲ್ಲಿ ರಾಷ್ಟ್ರಕೂಟರ ರಾಜಧಾನಿಯಾದ ಮಾನ್ಯಖೇಟ (ಮಲ್‌ಖೇಡ್)ನಗರದ “ತಳಾಱ”ನು ಹೊರೆಯಮನಾಯಕ ಎಂಬವನು.

ಅಲ್ಲಿಂದ ಮುಂದೆ, “ನಾಯಕ” ಎಂಬ ಉಪನಾಮವು ಕಲ್ಯಾಣಿ ಚಾಳುಕ್ಯರ ಕಾಲದ ಕ್ರಿ.ಶ. ೧೧-೧೨ನೆಯ ಶತಮಾನದ ಶಿಲಾಶಾಸನಗಳಲ್ಲಿ ಹೆಚ್ಚು ಹೆಚ್ಚಾಗಿ ಕಂಡು ಬರುತ್ತದೆ. ಈ ಚಾಳುಕ್ಯರ ಆಳ್ವಿಕೆಯಲ್ಲಿ ಆಡಳಿತದ ಉನ್ನತ ಅಧಿಕಾರ ಸ್ಥಾನಗಳಲ್ಲಿ ಬ್ರಾಹ್ಮಣ ಅಧಿಕಾರಿಗಳಿರುತ್ತಿದ್ದರು. ಈ ಬ್ರಾಹ್ಮಣ ಅಧಿಕಾರಿಗಳು “ಶ್ರೀಕರಣ ರಾಜಾಧ್ಯಕ್ಷ”, “ಅಂತಃಪುರಾಧ್ಯಕ್ಷ” ಮುಂತಾದ ಮುಖ್ಯ ಮುಖ್ಯ ಪದವಿಗಳನ್ನು ಅಲಂಕರಿಸಿದ್ದರು. ಇವರ ಹೆಸರುಗಳಲ್ಲಿಯೂ “ನಾಯಕ” ಎಂಬ ಉಪನಾಮವು ಕಂಡು ಬರುತ್ತದೆ. ಅವರು ತಮ್ಮ ಶಾಸನ ಗಳಲ್ಲಿ ತಮ್ಮ ಜಾತಿಯನ್ನು “ವಿಪ್ರವಂಶ / ಬ್ರಹ್ಮವಂಶ / ಕಮಲಭವಂಶ” ಎಂದೆಲ್ಲ ರೀತಿಯಲ್ಲಿ ತಮ್ಮ ಬ್ರಾಹ್ಮಣ್ಯವನ್ನು ಸ್ಪಷ್ಟವಾಗಿ ತಿಳಿಸಿರುತ್ತಾರೆ. ಇದರಿಂದ ಗೊತ್ತಾಗುವುದೇನೆಂದರೆ ೧೨ನೆಯ ಶತಮಾನದಲ್ಲಿ ಕೂಡ “ನಾಯಕ” ಎಂಬ ಪದವು ಇನ್ನೂ ಜಾತಿಸೂಚಕವಾಗಿ ಪರಿಣಮಿಸಿರಲಿಲ್ಲ, ಅದು ಕೇವಲ ಗೌರವ ನಾಮಧೇಯ ಮಾತ್ರವಾಗಿದ್ದಿತು ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬಹುದು.

ಆದರೆ, ಅದೇ ಕಾಲದ ಬೇಡರ ಜನಾಂಗದ “ತಳಾಱ”ರುಗಳ ಹೆಸರುಗಳ ಕೊನೆಯಲ್ಲಿ “ನಾಯಕ” ಎಂಬ ಉಪನಾಮವು ಕಂಡು ಬರುವುದಲ್ಲದೆ. “ತಳಾಱ / ತಳವಾರ ನಾಯಕಂ” ಎಂಬ ಪದ ಪ್ರಯೋಗವೂ ಸಾಕಷ್ಟು ಸಂಖ್ಯೆಯಲ್ಲಿ ಕಂಡುಬರುತ್ತದೆ. ನೋಡಿ, ಕಲ್ಯಾಣಿಯ ಚಾಳುಕ್ಯ ಚಕ್ರವರ್ತಿ ನಾಲ್ಕನೆಯ ಸೋಮೇಶ್ವರನ ಆಳ್ವಿಕೆಯ ಧಾರವಾಡ ಜಿಲ್ಲೆಯ ಗದಗ್ ತಾಲ್ಲೂಕಿನ ಹೊಂಬಳದ ಒಂದು ಶಾಸನದ ಕೊನೆಯ ಭಾಗದಲ್ಲಿ “………….ಊರ ತಳವಾರ ನಾಯಕಂ ಮುಖ್ಯವಾಗಿ ಯಾಳಲೊಂದು ಹೊಱಿಯಂ ಬಿಟ್ಟರು……………. ಮತ್ತಮಾ ಪುಣ್ಯದಿವಸದಲೂರ ತಳವಾರ ನಾಯಕಂ ತನ್ನಲ್ಲಿ ಖಣ್ಡುಗ ಭತ್ತಮುವ ನಾಳಲಯ್ಗುಳ ಭತ್ತಮಂ ಬಿಟ್ಟರು………” ಎಂದು ಹೇಳಲಾಗಿದೆ.

ಇಂತೆಯೆ, ತಳಾಱ ಬೊಪ್ಪನಾಯಕ (೧೧೩೮ ಕ್ರಿ.ಶ.), ತಳಾಱ ಮಲ್ಲೆಯ ನಾಯಕ (೧೧೭೯ ಕ್ರಿ.ಶ.), ತಳಾಱ ಚಿಣ್ನಯ ನಾಯಕ (೧೨೧೬ ಕ್ರಿ.ಶ.) ಮುಂತಾದ ಅನೇಕ “ತಳಾಱ ನಾಯಕ”ರನ್ನು ನಾವು ಶಾಸನಗಳಲ್ಲಿ ಕಾಣಬಹುದು. ಇದರಿಂದ ಗೊತ್ತಾಗುವುದೇ ನೆಂದರೆ, ‘ತಳಾಱ’ ಚಾಕರಿಯನ್ನು ವಂಶಪಾರಂಪರ‍್ಯವಾಗಿ ಮಾಡಿಕೊಂಡು ಬರುತ್ತಿದ್ದ ಬೇಡರಿಗೆ “ನಾಯಕ” ಎಂಬ ಗೌರವ ಸೂಚಕವಾದ ಪರ್ಯಾಯ ನಾಮವು ಬರಲು ಅಂದಿನ ರಾಜ್ಯಾಡಳಿತದ ರೀತಿನೀತಿಗಳೇ ಕಾರಣ ಎಂಬುದು ಸ್ಪಷ್ಟ. ಇವರೆಲ್ಲ ಅಂದಿನ ಸರ್ಕಾರಗಳಲ್ಲಿ ಅಧೀನರಾಗಿ ಬಾಳಿ ಬದುಕುತ್ತಿದ್ದವರು.

ಆದರೆ, ಸರ್ಕಾರಗಳ ಕೈ ಕೆಳಗೆ ಚಾಕರಿಮಾಡದೆ, ತಮ್ಮ ಮೂಲ ನಿವಾಸ ಸ್ಥಾನಗಳಲ್ಲಿ ತಮ್ಮದೇ ಆದ ಗಣರಾಜ್ಯಗಳನ್ನೋ ಗ್ರಾಮರಾಜ್ಯಗಳನ್ನೋ ನಡೆಯಿಸಿಕೊಂಡು ಬರುತ್ತಿದ್ದ ಬೇಡರುಗಳು ಅಲ್ಲಲ್ಲಿ ಬಹುವಾಗಿ ಇದ್ದರೆಂದು ಪ್ರಾಚೀನ ಸಾಹಿತ್ಯ ಹಾಗೂ ಶಿಲಾಶಾಸನಗಳ ಅಧ್ಯಯನದಿಂದ ನಮಗೆ ತಿಳಿದುಬರುತ್ತದೆ. ಅಂತಹ ಬೇಡರ ಗಣ ರಾಜ್ಯಗಳಿಗೆ “ಬೇಡವಟ್ಟು”ಗಳು ಎಂಬ ಹೆಸರಿದ್ದಿತು. ಅವುಗಳ ಬಳಿ ಅವುಗಳದೇ ಆದ ಬೇಡರ ಪಡೆಗಳಿರುತ್ತಿದ್ದುವು. ಆ ಸೈನ್ಯಗಳಿಗೆ “ಬೇಡರ ಘಟ್ಟ” ಎಂಬ ಹೆಸರಿದ್ದಿತು. ಹಾಗೆ ಪರಾಧೀನರಾಗದೆ ಸ್ವತಂತ್ರರಾಗಿ ಜೀವಿಸುತ್ತಿದ್ದ ಬೇಡರ ಘಟ್ಟಗಳ ಮುಂದಾಳುಗಳನ್ನು “ಬೇಡನಾಯಕರು” ಎಂದು ಕರೆಯಲಾಗುತ್ತಿದ್ದಿತು. ಅಂತಹ ಬೇಡನಾಯಕರುಗಳು ತಮ್ಮ ಬೇಡರ ಘಟ್ಟ ಗಳೊಡನೆ” “ತುಱುಗೊಳ್” ಅಥವಾ ಗೋಗ್ರಹಣಕ್ಕೆ ಹೊರಟು ಹಳ್ಳಿಗಳ ಮೇಲೆ ಧಾಳಿಮಾಡಿ ಮಾರಾಂತರನ್ನು ಕೊಂದು, ಹಳ್ಳಿಯ ಗೋವುಗಳನ್ನು ಅಟ್ಟಿಕೊಂಡು ತೆರಳುತ್ತಿದ್ದರು. ಈ ಬಗೆಯ “ತುಱುಗೊಳ್”ಗಳಿಗೆ ಸಂಬಂಧಪಟ್ಟಂತೆ ಕನ್ನಡನಾಡಿನಲ್ಲಿ ಬಹಳಷ್ಟು ಶಾಸನಗಳು ದೊರಕುತ್ತವೆ. ಅವುಗಳಲ್ಲಿ ಬೇಡರನ್ನು “ಬೇಡನಾಯಕರು” ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹೇಗೆಂದರೆ, ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ, ಹಿರೇ ಮಾಗಡಿಯಲ್ಲಿ ದೊರೆತಿರುವ ಕ್ರಿ.ಶ. ೧೧ನೆಯ ಶತಮಾನದ ಒಂದು ಶಾಸನದ ವಿವರಗಳನ್ನು ನೋಡಿ – “ಶ್ರೀಮಚ್ಚಾಳುಕ್ಯ ವಿಕ್ರಮ ವರಿಷ……. ಸಂವತ್ಸರ ಮಾರ್ಗ್ಗಶಿರ……..ವಾರದಲು, ಮೇಲಾಳ………ಯ ಬೇಡನಾಯಕರು ಗುಡ್ಡಮನ್ ಏಱಿ ಹೋಹಾಗ ಅನ್ದಿಗೆ ಮಾದಯನ್ ಇಱಿಯೆ ಸತ್ತು ಸುರಲೋಕ……”

ಇದೇ ರೀತಿ ಚಿಕ್ಕಮಗಳೂರು, ಜಿಲ್ಲೆಯ ತರೀಕೆರೆ ತಾಲ್ಲೂಕಿನ ಅಜ್ಜಂಪುರದ ಹೋಬಳಿಯ ಮುದಿಗೆರೆ ಎಂಬಲ್ಲಿ ದೊರೆತಿರುವ ಕ್ರಿ.ಶ. ೧೨೦೯ರ ಒಂದು ಶಾಸನವನ್ನು ನೋಡಿ. ಇದರಲ್ಲಿ ಚೀಲಗೌಡನೆಂಬ ರನು ಗೋಗ್ರಹಣದ ಕಾಳಗದಲ್ಲಿ ಬೇಡ ನಾಯಕ ರೊಡನೆ ಹೋರಾಡಿದ ವಿವರಗಳಿವೆ. – “…………..ಇರ್ಕ್ಕೆಡಿ ಧನ ಮನೆ ನಲ್ವಿಡಿದು ಬೇಡನಾಯಕರ್ಮ್ಮ ಗುೞ್ಪೊಡ ಕೊಂಡಿಕ್ಕಿ, ತುಱುಮ ಮಗುೞ್ಚು ರಕ್ಕಸನೇಕಾಂಗ ರ ಚೀಲಗಉಡಂ………” ಇಲ್ಲಿಯೂ ‘ಬೇಡನಾಯಕ’ ಎಂಬ ಪ್ರಯೋಗವನ್ನು ಗಮನಿಸಿರಿ.

“ಬೇಡರಘಟ್ಟ” ಎಂಬ ಬೇಡರ ಸ್ವಂತ ಸೈನ್ಯದ ಬಗೆಗೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಉಡುಗಣಿ ಹೋಬಳಿಯ ಅಡಗಂಟಿ ಗ್ರಾಮದಲ್ಲಿ ದೊರೆತಿರುವ ಕ್ರಿ.ಶ. ೧೦೫೮ರ ಒಂದು ಶಾಸನದಲ್ಲಿ-” ……………ಬೇಡರಘಟ್ಟ ಮಡಿಯಂ ಗೆರಿಯ ನಿಱದು, ತುರುಮ ಕೊಂಡು,………….”ಎಂಬ ಉಲ್ಲೇಖವಿದೆ.

ಬೇಡನಾಯಕರ ಗಣರಾಜ್ಯಗಳಾಗಿದ್ದ “ಬೇಡವಟ್ಟು”ಗಳಲ್ಲಿ ಕೆಲವಂತೂ ದೊಡ್ಡದೊಡ್ಡ ಚಕ್ರವರ್ತಿಗಳಿಗೂ ತಗ್ಗಿ ಬಗ್ಗಿ ನಡೆಯುತ್ತಿರಲಿಲ್ಲವೆಂದು ಇಮ್ಮಡಿ ತೈಲಪ ಚಕ್ರವರ್ತಿ (೯೭೩-೯೯೭ ಕ್ರಿ.ಶ.)ಯ ಕಾಲದ ಒಂದು ಘಟನೆಯಿಂದ ಗೊತ್ತಾಗುತ್ತದೆ. ತೊರಗಲ್ಲು (ಬೆಳಗಾವಿ ಜಿಲ್ಲೆ, ರಾಮದುರ್ಗ ತಾಲ್ಲೂಕು), ರಟ್ಟೆಹಳ್ಳಿ (ಧಾರವಾಡ ಜಿಲ್ಲೆ, ಹಿರೇಕೇರು ತಾಲ್ಲೂಕು) ಮತ್ತು ಆಜಿರಗೋಳ (ಉತ್ತರ ಕರ್ನಾಟಕ?) ಎಂಬ ಸ್ಥಳಗಳಲ್ಲಿ ಬೂತುಗ, ಬೀರುಗ ಮತ್ತು ಗೋವೆಯ ಎಂಬ ಬೇಡ ನಾಯಕರು ತಮ್ಮ “ಬೇಡವಟ್ಟು”ಗಳನ್ನು ನಿರ್ವಹಿಸುತ್ತಾ ಯಾರಿಗೂ ಅಧೀನರಾಗದೆ ಸ್ವತಂತ್ರವಾಗಿದ್ದುಕೊಂಡು ಭಯಂಕರರಾಗಿದ್ದರು. ಅನೇಕ ಪೂರ್ವಕಾಲದ ಚಕ್ರವರ್ತಿಗಳು (ಎಂದರೆ ರಾಷ್ಟ್ರಕೂಟರು) ಅವರನ್ನು ಸೋಲಿಸಲಾರದೆ ಹೋದರಂತೆ; ಕೊನೆಗೆ ತೈಲಪ ಚಕ್ರವರ್ತಿಯೇ ಅವರನ್ನು ಸೋಲಿಸಲು ದಂಡೆತ್ತಿ ಬರಬೇಕಾಯಿತಂತೆ. ನೋಡಿ, ನಾಗವರ್ಮನ “ಕಾವ್ಯಾವಲೋಕನ” ಎಂಬ ಲಕ್ಷಣ ಗ್ರಂಥದ ಒಂದು ಉದಾಹರಣೆ ಪದ್ಯದಲ್ಲಿ ಹೀಗೆ ಹೇಳಿದೆ –

ತೊಱಗಲೆ ಱಟ್ಟಹಳ್ಳಿ ನೆಗೞ್ದಾಜಿರಗೋಳ ಮೆನಿಪ್ಪಗುರ್ವುವೆ
ತ್ತಱೆಕೆಯ ಬೇಡವಟ್ಟುಗಳ ಬೂತುಗ, ಬೀರುಗ, ಗೋಯೆಯರ್ಕಳಂ
ನೆಱೆಯರೆನಿಪ್ಪೊಡಂ ಕಿಡಿಸಲಂಕದ ಮುನ್ನಿನ ಚಕ್ರವರ್ತಿಗಳ್
ಪೆಱರಳವಲ್ತವಂ ಕೆಡೆಸಿತೊಟ್ಟಜೆ ತೈಲಪ ಚಕ್ರವರ್ತಿಯಾ|”

ಅದಂತಿರಲಿ, ಸರ್ಕಾರಿ ನೌಕರಿಗಳಲ್ಲಿ ತೊಡಗಿದ್ದ ಹಳೆಯ ಬೇಡರ ಬಗೆಗೆ ನೋಡೋಣ. ಕಲಚೂರಿ ಕಾಲದಲ್ಲಿ ಬ್ರಾಹ್ಮಣ “ನಾಯಕ”ರು ವಹಿಸಿದ್ದ ಉನ್ನತ ಅಧಿಕಾರ ಸ್ಥಾನಗಳಲ್ಲೆಲ್ಲ ಬೇಡ “ನಾಯಕ”ರು ವಿರಾಜಿಸತೊಡಗಿದರು. ಅದಕ್ಕೆ ಕಾರಣ ಅಂದಿನ ಬೇಡರ ಶೂರತನ ಮತ್ತು ಸಾಹಸ. ಸ್ವಯಂ ದುಸ್ಸಾಹಸಿಯಾಗಿದ್ದ ಬಿಜ್ಜಳನು ಬೇಡರ ಸಾಹಸಗಳನ್ನು ಮೆಚ್ಚಿಕೊಂಡು ಅವರಿಗೆ ಉನ್ನತ ಹುದ್ದೆಗಳನ್ನು ನೀಡಿದುದರಲ್ಲಿ ಅಸ್ವಾಭಾವಿಕವಾದುದೇನೂ ಇಲ್ಲ. ಬೇಡರ ಆ ರಾಜಕೀಯ ಉನ್ನತಿಯನ್ನು ಮನಗಂಡ ಶಿವಶರಣ ಚನ್ನಬಸವಣ್ಣನವರು ತಮ್ಮ ಒಂದು ವಚನದಲ್ಲಿ – “ಕಿರಾತರು ಹೆಚ್ಚಿ ಪುರಾತರು ಅಡಗಿದರು” – ಎಂದು ಆ ಕಾಲದ ರಾಜಕೀಯ ವಲಯಗಳಲ್ಲಾಗುತ್ತಿದ್ದ ಪರಿವರ್ತನೆಯನ್ನು ಸೂಚಿಸಿದ್ದಾರೆ. ಅವರ ಈ ಮಾತನ್ನು ಬಿಜ್ಜಳನ ಮತ್ತು ಅವನ ಮಕ್ಕಳ ಕಾಲದ ಶಾಸನಗಳಲ್ಲಿ ಕಂಡು ಬರುವ ಬೇಡರ ಜನಾಂಗದ ನಾಯಕರ ವಿಶೇಷ ಉಲ್ಲೇಖನಗಳು ಪುಷ್ಟೀಕರಿಸುತ್ತವೆ. ಬೇಡರಿಗೆ ಅದು ಕೊಂಚಮಟ್ಟಿಗೆ ಉಚ್ಛ್ರಾಯದ ಕಾಲವೇ.

“ನಾಯಕ” ಎಂಬ ಶಬ್ದವು ಬೇಡರ ಜನಾಂಗಕ್ಕೆ ಪರ್ಯಾಯ ವಾಚಕವಾಗಲಿಕ್ಕೆ ಮತ್ತೂ ಒಂದು ಕಾರಣವಿದೆ. ಅದೇನೆಂದರೆ, ಮೂಲದ್ರಾವಿಡ ಶಬ್ದವಾದ “ವಿಲ್ಲವರ್” ಎಂಬ ಪದದೊಡನೆ ಅನುಸೂಚಿತವಾದ “ಬಿಲ್ಲ / ಭಿಲ್ಲ” ಎಂಬ ಶಬ್ದವು ಹಳಗನ್ನಡ ಹಾಗೂ ಪ್ರಾಕೃತಾಪಭ್ರಂಶ ಭಾಷೆಗಳಲ್ಲಿ ಬಳಸಲ್ಪಡತೊಡಗಿದ್ದಿತು. ಈ “ಭಿಲ್ಲ” ಅಥವಾ “ಭೀಲ” ರೆಂಬ ಉತ್ತರ ಭಾಗದ ಬೇಡರಲ್ಲಿ “ನಾಹಲ” ಎಂಬುದೊಂದು ಪಂಗಡವು ರಾಷ್ಟ್ರಕೂಟರ ಕಾಲದಲ್ಲಿಯೂ ಇದ್ದಿತು ಮತ್ತು ಈಗಲೂ ಮುಂಬಯಿ ಪ್ರಾಂತದಲ್ಲಿ ಇದೆ. ರಾಷ್ಟ್ರಕೂಟರ ಕಾಲದ ಜೈನಮತೀಯ ಅಪಭ್ರಂಶ ಕಾವ್ಯಗಳಲ್ಲಿ ಬೇಡರ ಬಗೆಗೆ ಹೇಳುವಾಗ “ನಾಹಲ / ನಾಹಿಲ / ನಾಇಲ / ನಾಇಲ / ನಾಇಲ್ಲ” ಎಂಬ ಪದಗಳು ಬಳಸಲ್ಪಟ್ಟಿವೆ. ಅಪಭ್ರಂಶದ ಕವಿಗಳಲ್ಲಿ ಒಬ್ಬನು “ನಾ ಇಲ್ಲ ಧವಲ” ಎಂಬವನು ಪ್ರಸಿದ್ಧನಿದ್ದಾನೆ. ಬಹುಶಃ ಅವನು  ಭಿಲ್ಲರ ಜಾತಿಯಿಂದ ಜೈನ ಮತಕ್ಕೆ ಪರಿವರ್ತಿತನಾದ ವಿದ್ವಾಂಸ ಕವಿ ಇರಬಹುದು. ಅದಂತಿರಲಿ, “ನಾಹಲ / ನಾಹಿಲ” ಎಂಬ ಪದಗಳಿಗೆ ತತ್ಸಮಾನವಾದ ಕನ್ನಡ ಬೇಡರ ಗೋತ್ರವು “ನಾಗಲ್ನ” ಎಂಬುದಾಗಿ ಇಂದಿಗೂ ಮುಂಬಯಿ ಕರ್ನಾಟಕದ ಜಿಲ್ಲೆಗಳ ಬೇಡರಲ್ಲಿ ಉಳಿದುಬಂದಿದೆ. ಎಂದರೆ, ಮುಂಬಯಿ ಕರ್ನಾಟಕದ “ನಾಗಲ್ನ” ಎಂಬ ಬೇಡರ ಬೆಡಗೂ ಮತ್ತು “ಭಿಲ್ಲ” ರಲ್ಲಿರುವ “ನಾಹಲ” ಎಂಬ ಪಂಗಡವೂ ಮೂಲತಃ ಒಂದೇ ಎಂದು ಗೊತ್ತಾಗುತ್ತದೆ.

ಈ “ನಾಗಲ್ನ / ನಾಹಲ / ನಾಹಿಲ” ಮುಂತಾದ ರೂಪಗಳು ತೆಲುಗಿನಲ್ಲಿ “ನಾಹಿನಿ / ನಾಇನಿ / ನಾಯನಿ” ಎಂದು ದೊರಕುತ್ತವೆ. ಕಾಕತೀಯರ ಆಳ್ವಿಕೆಯ ತೆಲುಗು ಬೇಡರ ಶಾಸನಗಳಲ್ಲಿ “ನಾಯಕ / ನಾಯಕುಡು / ನಾಯಕುಂಡು” ಎಂಬ ಪದಗಳ ಜೊತೆ ಜೊತೆಯಲ್ಲಿಯೇ “ನಾಯನಿ / ನಾಯಿನಿ” ಮುಂತಾದ ಪ್ರಯೋಗಗಳು ಅಸಂಖ್ಯಾತವಾಗಿ ಕಂಡು ಬರುತ್ತವೆ. ಆಮೇಲಾ ಮೇಲಂತೂ ತೆಲುಗಿನಲ್ಲಿ “ನಾಯಕ” ಎಂಬ ಸಂಸ್ಕೃತ ಪದವು ಲುಪ್ತವಾಗಿ “ನಾಯನಿ” ಎಂಬ ಅಚ್ಚ ತೆಲುಗು ಶಬ್ದವೇ ಹೆಚ್ಚು ಬಳಕೆಗೆ ಬಂದಿತು. ಈ “ನಾಯನಿ” ಎಂಬುದು ಮೇಲೆ ತೋರಿಸಿರುವಂತೆ ಸಂಸ್ಕೃತ ಮೂಲದಿಂದ ಬಂದುದಲ್ಲ. “ನಾಹಲ / ನಾಹಿಲ / ನಾಗಲ್ನ / ನಾಹಿನಿ / ನಾಯನಿ” ಎಂಬವು ಬೇಡರ ಜನಾಂಗದ ಸ್ವಂತ ಜಾತಿಸೂಚಕ ಶಬ್ದಗಳು.

ಸಂಸ್ಕೃತ ಮೂಲದ “ನಾಯಕ” ಮತ್ತು ಅಚ್ಚಬೇಡರ ಜಾತಿ ಶಬ್ದವಾದ “ನಾಯನಿ” ಇವೆರಡೂ ಮಿಶ್ರವಾಗಿ, ಕ್ರಿ.ಶ. ೧೩ನೆಯ ಶತಮಾನದ ವೇಳೆಗೆ “ನಾಯಂಕ” ಎಂಬ ಶಬ್ದವು ಬಳಕೆಗೆ ಬರತೊಡಗಿತು. ಇದನ್ನು ನಾವು ಆ ಕಾಲದ ಶಾಸನಗಳಲ್ಲಿ ಪದೇ ಪದೇ ಕಾಣಬಹುದು. ಈ ಒಂದು ಘಟ್ಟಕ್ಕೆ ಬಂದು ತಲುಪಿದಾಗ ಬೇಡರ ಜಾತಿಗೆ “ನಾಯಂಕ / ನಾಯಕ / ನಾಯನಿ” ಎಂಬ ಶಬ್ದಗಳು ಪರಸ್ಪರ ಪರ‍್ಯಾಯವಾದ ಜಾತಿ ಸೂಚಕ ಶಬ್ದಗಳಾಗಿ ಪರಿಣಮಿಸಿದುವು.

ಉದಾಹರಣೆಗೆ ಬೇಕಾದರೆ, ಚಿತ್ರದುರ್ಗದ ಪಾಳೆಯಗಾರರ ಶಾಸನಗಳನ್ನೇ ಪರಿಶೀಲಿಸಿರಿ. ಚಿತ್ರದುರ್ಗದ ಪಾಳೆಯ ಪಟ್ಟಿನ ಮೊಟ್ಟಮೊದಲನೆಯ ಪಾಳೆಯಗಾರ ಮತ್ತು ತಿಮ್ಮಣ್ಣ ನಾಯಕನ ಎರಡು ಶಾಸನಗಳು ತೆಲುಗಿನಲ್ಲಿ ದೊರಕುತ್ತವೆ. ಅವುಗಳಲ್ಲಿ ಸ್ಪಷ್ಟವಾಗಿ “ನಾಯನಿ” ಎಂಬ ಪದವೇ ಬಳಸಲ್ಪಟ್ಟಿದೆ. ನೋಡಿ-”……ಶ್ರೀಮನ್ಮಹಾನಾಯಕಾಚಾರ್ಯ ಕಾಮಗೇತ್ತಿ ಹನುಮಿ ನಾಯನಿಗಾರಿ ಕೊಮಾರುಡು ಕಾಮುಗೇತ್ತಿತಿಂಮಂಣ ನಾಯನಿಗಾರು ತಮ ತಂಡ್ರಿ ಹನಿಮಿ ನಾಯನಿಂಗಾರಿಕಿ ಪುಣ್ಯ ಅಯಿ ಅಟ್ಲಂಗಾನು……….”(ಹಿರಿಯೂರು-೭೬). ಅದೇ ನಾಯಕನು ಕನ್ನಡದಲ್ಲಿ ಶಾಸನವನ್ನು ಬರೆಯಿಸುವಾಗ “……..ಕಾಮಗೇತಿ ತಿಂಮಂಣನಾಯಕರು………” ಎಂದು ಬರೆಯಿಸುತ್ತಾನೆ (ಹಿರಿಯೂರು-೪೦).

ಇದಲ್ಲದೆ, “ನಾಯನಿ” ಎಂಬ ರೂಪಕ್ಕೆ ತೆಲುಗಿನ ಪ್ರಥಮಾ ವಿಭಕ್ತಿ ಏಕವಚನದ “ಡು” ಪ್ರತ್ಯಯವು ಸೇರಿ, “ನಾಯನಿ / ನಾಯಿನಿ+ಡು” > ನಾಯಿಡು > ಎಂಬ ಪ್ರಯೋಗವೂ ಆ ಕಾಲದ ತೆಲುಗಿನಲ್ಲಿ ಬಳಕೆಗೆ ಬಂದಿತು. “ನಾಯಕುಂಡು / ನಾಯಂಕುಡು” ಎಂಬ ರೂಪಗಳಿಂದಲೂ ಕೂಡ “ನಾಯಿಡು / ನಾಯ್ಡು” ಎಂಬ ರೂಪವು ಸಾಧಿತವಾಗುತ್ತದೆ. ಆದರೆ ಈ ಪದವು ವಿಜಯನಗರದ ದೊರೆಗಳ ಆಳ್ವಿಕೆಯಲ್ಲಿ ಬೇಡರಿಗೇ ಅಲ್ಲದೆ, “ತೆಲುಗು ಬಣಜಿಗ / ಬಲಿಜ” ಜನಾಂಗದವರಿಗೂ ಬಹುವಾಗಿ ಬಳಸಲ್ಪಡುತ್ತಿದ್ದಿತು. ಬೇಡರು ಈ “ನಾಯುಡು / ನಾಯಡು” ಮತ್ತು “ನಾಯನಿ” ಪದಗಳನ್ನು ಒಟ್ಟಿಗೆ ಬಳಸಿರುವುದನ್ನು ನೋಡಬೇಕಾದರೆ, ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನಲ್ಲಿ ಮತ್ತು ಉತ್ತರ ಆರ್ಕಾಟು ಜಿಲ್ಲೆಯಲ್ಲಿ ದೊರೆಯುವ “ಅಂಗನಮಲ” ಪಾಳೆಯಗಾರರ ಶಾಸನಗಳನ್ನು ನೋಡಿರಿ.

ವಿಜಯನಗರದ ಸಾಮ್ರಾಜ್ಯದ ಕಾಲದಲ್ಲಿ ಈ “ನಾಯಕ / ನಾಯನಿ”ಗಳ ಗುಂಪಿಗೆ “ನಾಯಕವಾಡಿ” ಅಥವಾ “ನಾಯನಾಡಿ” ಎಂಬ ಹೆಸರಿದ್ದಿತು. ಇಮ್ಮಡಿ ಹರಿಹರನ ಕಾಲದ ಮೈಸೂರು ಜಿಲ್ಲೆಯ ಚಾಮರಾಜನಗರ ತಾಲ್ಲೂಕಿನಲ್ಲಿದ್ದ ಹಳೇ ಆಲೂರು ಸಂಸ್ಥಾನದಲ್ಲಿ ಕ್ರಿ.ಶ. ೧೪೦೩ರಲ್ಲಿ ಇಂತಹ “ನಾಯನಾಡಿ”ಗಳಿದ್ದರೆಂದು ಒಂದು ಶಾಸನ (ಚಾಮರಾಜನಗರ-೧೮೪)ದಿಂದ ತಿಳಿದು ಬರುತ್ತದೆ. ಇವರೆಲ್ಲ ಬೇಡರೇ.

ವಿಜಯನಗರದ ಆಳ್ವಿಕೆಯಲ್ಲಿ ಪ್ರಜೆಗಳನ್ನು ೧೮ ವಿಭಾಗಗಳಾಗಿ ವಿಂಗಡಿಸಿ “ಅಷ್ಟಾದಶ ಪ್ರಜೆ”ಗಳು ಎನ್ನುತ್ತಿದ್ದರು. ಇನ್ನೂ ಹಿಂದೆ ಈ ಪ್ರಜಾವರ್ಗಗಳಿಗೆ ಹಳೆಗನ್ನಡದಲ್ಲಿ “ಮಕ್ಕಳ್” ಎಂಬ ಅಚ್ಚಕನ್ನಡ ರೂಪವು ದೊರಕುತ್ತದೆ. ಇದರಿಂದ, ಒಕ್ಕಲು ಮಕ್ಕಳ್, ಬೆಸ ಮಕ್ಕಳ್, ನಾಯಕ ಮಕ್ಕಳ್, ಮುಂತಾದ ಶಬ್ದಗಳನ್ನು ಶಾಸನಗಳಲ್ಲಿ ನಾವು ಗಮನಿಸಬಹುದು. ಇವುಗಳಲ್ಲಿ “ನಾಯಕ ಮಕ್ಕಳ್” ಎಂಬ ಪ್ರಯೋಗವು ಬೇಡರ ಜನಾಂಗದ ಪ್ರಜಾವರ್ಗವನ್ನು ಸೂಚಿಸುತ್ತದೆ.

ಬೇಡರ ಜನಾಂಗಕ್ಕೆ ಬಹು ಹಿಂದಿನಿಂದಲೂ ಮಠಗಳಾಗಲಿ, ಮಠಾಧಿಪತಿಗಳಾಗಲಿ, ಗುರುಗಳಾಗಲಿ ಇಲ್ಲದ್ದರಿಂದ ಬೇಡರ ದೊರೆಗಳೇ ಬೇಡರ ಮತ ಸಂಪ್ರದಾಯಗಳಿಗೂ ಮಾರ್ಗದರ್ಶಕರಾಗಿರುತ್ತಿದ್ದರು. ಆದುದರಿಂದ ದೇವಗಿರಿಯ ಯಾದವ (ಸೇಣ)ರ ಕಾಲದಲ್ಲಿ ಸು. ಕ್ರಿ.ಶ. ೧೩ನೆಯ ಶತಮಾನದ ವೇಳೆಗೆ ಬೇಡರ ದೊರೆಗಳಿಗೆ “ಶ್ರೀಮನ್ಮಹಾನಾಯಕಾ ಚಾರ್ಯ” ಎಂಬ ಉಪಾಧಿಯು ಬಳಕೆಗೆ ಬಂದಿತು.

ಈಗ ನಮಗೆ ಲಭ್ಯವಿರುವಂತೆ, ಈ ಉಪಾಧಿಯ ಮೊಟ್ಟಮೊದಲ ದಾಖಲೆಯು ಯಾವುದೆಂದರೆ, ಕರ್ನೂಲು ಜಿಲ್ಲೆಯ ಆಲೂರು ತಾಲ್ಲೂಕಿನ ನೇರಣಿಕಿ ಗ್ರಾಮದ ಸುಂಕಾಲಮ್ಮನ ದೇವಸ್ಥಾನದಲ್ಲಿ ಸಿಕ್ಕಿರುವ ಕ್ರಿ.ಶ. ೧೨೮೭ರ ಒಂದು ಕನ್ನಡ ಶಾಸನವು. ಇದರಲ್ಲಿ ಉಕ್ತವಾಗಿರುವ ನಾಗೆಯನಾಯ್ಕ ಎಂಬುವನ ಬಿರುದು – “ಶ್ರೀಮನು ಮಹಾನಾಯ್ನಾಚಾರ್ಯ” – ಎಂದು. ಇಲ್ಲಿ “ನಾಯ್ನ” ಎಂಬುದನ್ನು ಗಮನಿಸಿರಿ, ಇಲ್ಲಿ ನಾಯನಿ + ಆಚಾರ್ಯ > ನಾಯ್ನಾಚಾರ್ಯ ಎಂದಾಗಿದೆ, ಎಂಬುದನ್ನು ನಾವು ಸರಿಯಾಗಿ ತಿಳಿದುಕೊಳ್ಳಬೇಕು. ಇದು ಕನ್ನಡ ಶಾಸನ ಎಂಬುದು ಜ್ಞಾಪಕದಲ್ಲಿರಲಿ.

ಇದೇ ಸರಿಸುಮಾರಿಗೆ, ಇವನ ನೆರೆಹೊರೆಯ ಬೇಡರ ದೊರೆಯಾದ ರ ಕಂಪಿಲ ದೇವನ ಒಂದು ಶಾಸನ (No. 121 / MAR – 1923)ದಲ್ಲಿ ಅವನಿಗೆ “ಸ್ವಯಂಭು ನಾಯಕಾಚಾರ್ಯ” ಎಂಬ ಬಿರುದು ಇರುವುದು ಕಂಡು ಬರುತ್ತದೆ. ಇದೇ ಕಾಲದಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕೊಟ್ಟ ಗ್ರಾಮದಲ್ಲಿ ದೊರೆತಿರುವ ಕ್ರಿ.ಶ. ೧೩೦೪ರ ಒಂದು ಶಾಸನದಲ್ಲಿ ಕಾರೆ ಮನೆತನದ ಚಿಕ್ಕಣ್ಣ ನಾಯಕ ಎಂಬುವನಿಗೆ “ಶ್ರೀಮನ್ಮಹಾನಾಯಕಾಚಾರ್ಯ” ಎಂಬ ಉಪಾಧಿಯು ಇದ್ದುದು ಗೊತ್ತಾಗುತ್ತದೆ. ಈ ಶಾಸನಗಳೆಲ್ಲ ವಿಜಯನಗರ ಸಾಮ್ರಾಜ್ಯದ ಸ್ಥಾಪನೆ (೧೩೩೬ ಕ್ರಿ.ಶ.)ಗಿಂತ ಮುಂಚಿನವು; ಮತ್ತು ದೇವಗಿರಿ ಯಾದವರ ಆಡಳಿತ ಕ್ಷೇತ್ರಕ್ಕೆ ಸೇರಿದ್ದ ಭೂಭಾಗಗಳಲ್ಲಿ ದೊರೆತಿರು ವಂತಹವು. ಆದುದರಿಂದ ಬೇಡರ ಜಾತಿಯ ದೊರೆಗಳ ಈ ಬಿರುದು ವಿಜಯನಗರಕ್ಕಿಂತ ಹಳೆಯದೆಂಬುದನ್ನು ಮರೆಯದಿರಿ. ಇದು ವಿಜಯನಗರದವರು ಕೊಟ್ಟ ಬಿರುದಲ್ಲ.

ಈ ಉಪಾಧಿಯ ಪ್ರಯೋಗವು ಹೆಚ್ಚುತ್ತಾ ಹೆಚ್ಚುತ್ತಾ ಶ್ರೀಕೃಷ್ಣದೇವರಾಯನ ಕಾಲದಲ್ಲಿ ರವೈಷ್ಣವ ಸಂಪ್ರದಾಯಸ್ಥರಾಗಿದ್ದ ಕೆಲವು ತೆಲುಗು ಬೇಡರಲ್ಲಿ “ಶ್ರೀಮದ್ರಘುಪತಿ ನಾಯಂಕಾಚಾರ್ಯ್ಯ” ಎಂಬ ಹೊಸ ಬಗೆಯ ಉಪಾಧಿಯು ಕಂಡು ಬರುತ್ತದೆ (ಶ್ರೀನಿವಾಸಪುರ – ೮೮). ಇದರ ಪ್ರಯೋಗ ಒಂದೆರಡು ಕಡೆಗಳಲ್ಲಿ ಮಾತ್ರ ಕಾಣಬಹುದು.

ಆನಂತರದಲ್ಲಿ ಈ “ನಾಯಕಾಚಾರ್ಯಾ / ನಾಯಂಕಾಚಾರ್ಯ” ಎಂಬ ಬಿರುದು ಸಾವಿರಾರು ಶಾಸನಗಳಲ್ಲಿ ೧೯ನೆಯ ಶತಮಾನದ ಪ್ರಾರಂಭಿಕ ದಶಕಗಳವರೆವಿಗೂ ಬೇಡರ ಜಾತಿಯ ಸಣ್ಣ ಪುಟ್ಟ ಪಾಳೆಯಗಾರರಿಗೂ ಬಳಕೆಯಲ್ಲಿ ಉಳಿದುಕೊಂಡಿದ್ದುದು ನಮ್ಮ ಗಮನವನ್ನು ಸೆಳೆಯುತ್ತದೆ. ಎಂದರೆ ಸುಮಾರು ೫೭೦ ವರ್ಷಗಳಷ್ಟು ದೀರ್ಘಕಾಲ ಬೇಡರ ಜಾತಿಯ ದೊರೆಗಳಿಗೆ ಮತ್ತು ನಾಯಕರಿಗೆ ಅಥವಾ ಪಾಳೆಯಗಾರರಿಗೆ “ಶ್ರೀಮನ್ಮಹಾ ನಾಯಕಾಚಾರ್ಯ” ಎಂಬ ಬಿರುದು ಚಲಾವಣೆಯಲ್ಲಿದ್ದಿತು ಎಂದು ತಿಳಿಯಬೇಕು.

ಈ ಬಿರುದಲ್ಲದೆ ಬೇಡರ ಜನಾಂಗದ ಅನೇಕ ಪಾಳೆಯಗಾರರು “ನಾಯಕ ಶಿರೋಮಣಿ, ನಾಯಕ ನಾರಾಯಣ, ನಾಯಕ ಶಿಖಾಮಣಿ, ನಾಯಕ ಮಣಿ” ಮುಂತಾದ ತಮ್ಮ ಬಿರುದುಗಳಲ್ಲಿ ತಮ್ಮನ್ನು ನಾಯಕರ ಜಾತಿ ಎಂದು ಅರ್ಥಬರುವಂತೆ ಹೇಳಿಕೊಂಡಿದ್ದಾರೆ. “ಪುಳಿಂದ ವಂಶೋದ್ಭವ” ಎಂದು ಹೇಳಿಕೊಳ್ಳುತ್ತಿದ್ದ ಬೇಡರು ನಾಯಕರು ಆಮೇಲಾಮೇಲೆ “ನಾಯಕ ವಂಶೋದ್ಭವ” ಎಂದು ಕೆಲವು ಶಾಸನಗಳಲ್ಲಿ ಹೇಳಿಕೊಂಡಿದ್ದಾರೆ. ಎಂದರೆ ೧೮-೧೯ನೆಯ ಶತಮಾನಕ್ಕೆ ತಲುಪುವಷ್ಟರಲ್ಲಿ ಬೇಡರ ಜಾತಿಗೆ ನಾಯಕರ ಜಾತಿ ಎಂಬ ರೂಪವು ದೊರೆಕೊಂಡಿದ್ದಿತು.

ಆದಕಾರಣ, ಕ್ರಿ.ಶ. ೯ನೆಯ ಶತಮಾನದಲ್ಲಿ ಮೊಟ್ಟ ಮೊದಲು ಕಾಣಿಸಿಕೊಳ್ಳುವ “ನಾಯಕ” ಎಂಬ ಗೌರವ ಸೂಚಕ ಅಥವಾ ಅಧಿಕಾರ ಸೂಚಕ ಪದವು ಕನ್ನಡ ನಾಡಿನ ಚರಿತ್ರೆಯಲ್ಲಿ ಬೇಡರ ನಿರಂತರ ಪ್ರಸಿದ್ದಿಯಿಂದಾಗಿ ಅವರ ಪಾಲಿಗೆ ಜಾತಿ ಸೂಚಕ ಶಬ್ದವಾಗಿ ಬಿಟ್ಟಿದೆ.

* * *

೧೮ನೆಯ ಶತಮಾನದಿಂದೀಚೆಗೆ ಬೇಡರ ರಾಜನೈತಿಕ ಪತನವು ಆರಂಭವಾಗಿ, ಅವರ ಪಾಳೆಯ ಪಟ್ಟುಗಳು ಒಂದೊಂದಾಗಿ ಕೈಬಿಟ್ಟು ಹೋದಂತೆಲ್ಲ ಅವರ ಆರ್ಥಿಕ ಸ್ಥಿತಿಯು ಕೆಟ್ಟು, ಅದರಿಂದ ಮನನೊಂದಿದ್ದ ಬೇಡರ ಪಾಳೆಯಗಾರರೂ ಮತ್ತು ಅವರ ಅನುಯಾಯಿ ನಾಯಕರೂ ಬ್ರಿಟಿಷರ ಆಡಳಿತದಲ್ಲಿ ಸುರಪುರ, ಹಲಗಲಿ, ಚಿಕ್ಕದಿನೆ, ತರೀಕೆರೆ, ಕಿತ್ತೂರು, ಮುಂತಾದ ಕಡೆಗಳಲ್ಲೆಲ್ಲ ಬ್ರಿಟಿಷರ ವಿರುದ್ಧ ಬಂಡಾಯ ಹೂಡಿದ್ದರಿಂದ, ಬ್ರಿಟಿಷರು ಬೇಡರನ್ನು ಅಪರಾಧಿ ಜನಾಂಗವೆಂದು ಪರಿಗಣಿಸಿ ಅವರ ರಾಜನೈತಿಕ, ಆರ್ಥಿಕ, ಸಾಮಾಜಿಕ ಪತನಕ್ಕೆ ಮೂಲ ಕಾರಣರಾದರು. ಇದನ್ನು ಸಾರ್ವಜನಿಕರು ಗಮನಿಸಿ, ಬೇಡರೇ “ನಾಯಕರು” ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು.

ದಿನಾಂಕ : ೫.೧೦.೧೯೮೦                                          
ಕೃಪೆ : ಇತಿಹಾಸ ಚಂದ್ರಿಕೆ

* * *