ಬ್ಯಾಡ ಬ್ಯಾಡಂದ್ರ ಕೇಳದಲೇ
ಬ್ಯಾಡರ ಬೆನ್ನಿಗೆ ಬಿದ್ದಾಳ

ಬೇಡವೆಂದರೂ ದುರುಗವ್ವನು ಬೇಡರ ಹಿಂದೆ ಬಿದ್ದಳಂತೆ. ಬೆನ್ನಿಗೆ ಬಿದ್ದ ದೈವವು ಬೇಡರಿಗೆ ಗೃಹದೇವತೆಯೂ ಅಹುದು, ಕೇರಿಯ ದೇವತೆಯೂ ಅಹುದು; ಸಮೂಹದ  ದೇವತೆಯೂ ಅಹುದು. ಹೀಗೆ ಬೆನ್ನು ಬಿದ್ದ ದೈವವನ್ನೇ ಕೆಲವರು ಬುಟ್ಟಿಯಲ್ಲಿ, ಕೆಲವರು ಮೊರದಲ್ಲಿ, ಕೆಲವರು ನಾಲ್ಕು ಅಡಿ ಎತ್ತರದ ಗುಡಿ ಆಕಾರದ ಕಪಾಟಿನಲ್ಲಿ ಇಟ್ಟುಕೊಂಡು ದೇಶಾದ್ಯಂತ ಭಿಕ್ಷೆ ಬೇಡುತ್ತಾ ಅಲೆಮಾರಿಗಳಾಗಿ ತಮ್ಮ ಜೀವನವನ್ನು ನಡೆಸುತ್ತಾ ಇರುವ ಪಂಗಡವೊಂದು ಬೇಡನಾಯಕರ ಸಮುದಾಯದಲ್ಲಿದೆ. ಇವರನ್ನೇ ‘ದುರುಗ ಮುರುಗಿ’ ಅಥವಾ ‘ಮರಗಮ್ಮದವರು’ ಅಥವಾ ‘ಬುರ್‌ಬುರ್‌ಪೋಚಮ್ಮ’ ಅಥವಾ ‘ಬೂರ್ ಬೂರ್ ಮಾರಮ್ಮ’ ಎಂದು ಕರೆಯುವರು. ಕೆಲವೆಡೆ ದುರುಗಮ್ಮನಾಡಿಸುವವರು ಎನ್ನುವರು. ದುರುಗಮ್ಮನಾಡಿಸುವುದು ಎಂದರೆ; ಈ ಆಟದಲ್ಲಿ ದುರುಗ ಮುರಗಿಯರ ಪೂಜಾರಿ ಮತ್ತು ಆತನಿಗೆ ಸಾಥಿಯಾಗಿ ಹೆಣ್ಣುಮಗಳು ಉರಿಮೆ ಬಾರಿಸುತ್ತಾ ಸಹಕರಿಸುತ್ತಾಳೆ. ಪೂಜಾರಿ ಲಡ್ಡಿನಿಂದ ತನ್ನ ದೇಹ ದಂಡಿಸಿಕೊಳ್ಳುವುದು ನುಡಿಗಟ್ಟಾಗಿಯೂ ಪರಿಣಮಿಸಿದೆ. ಇನ್ನೊಬ್ಬರನ್ನು ಚೆನ್ನಾಗಿ ಥಳಿಸುವುದು, ಹಿಂಸಿಸುವುದು ಎಂತಲೂ ಅರ್ಥ. ಹೀಗೆ ಬೆನ್ನಿಗೆ ಬಿದ್ದ ದೈವವನ್ನೇ ನಾಡಿನಾದ್ಯಂತ ಸುತ್ತಾಡಿಸುವ ಮೂಲಕ ತಮ್ಮ ಜೀವನ ನಿರ್ವಹಣೆಯನ್ನು ನೆರವೇರಿಸಿಕೊಳ್ಳುವ ಸಮೂಹವೇ ದುರುಗಮುರುಗಿಯರು. ಊರಾಡುವ ಸಂದರ್ಭದಲ್ಲಿ ಪೆಟ್ಟಿಗೆಯನ್ನು ಹೊತ್ತು ‘ಉರುಮೆ’ ಅಥವಾ ‘ಅರೆ’ ವಾದ್ಯದ ಬಡಿತಕ್ಕೆ ತಕ್ಕಂತೆ ಕುಣಿಯು ವುದಲ್ಲದೆ, ಪೋತುರಾಜನ ವೇಷ ಹಾಗೂ ಸೋಮನ ಮುಖವಾಡದ ಪ್ರದರ್ಶನ ಕೂಡಾ ನೀಡುತ್ತಾರೆ. ಇವರಲ್ಲಿ ಪೆಟ್ಟಿಗೆ ದುರುಗ ಮುರುಗಿಯವರು ಹಾಗೂ ಬುಟ್ಟಿದುರುಗ ಮುರುಗಿಯವರೆಂದು ಎರಡು ವಿಧ. ಬುಟ್ಟಿ ದುರುಗ ಮುರುಗಿಯರು ಬುಟ್ಟಿಯಲ್ಲಿ ತಮ್ಮ ದೇವರನ್ನಿಟ್ಟು ಹೊತ್ತು ಊರಾಡುತ್ತಾರೆ.

ಸುಪ್ರಸಿದ್ಧ ವಚನಕಾರನಾದ ಢಕ್ಕೆಯ ಮಾರಯ್ಯ ದುರಗಮುರುಗಿಯ ಕಾಯಕವನ್ನು ಮಾಡುತ್ತಿದ್ದನಂತೆ. ಢಕ್ಕೆಯ ಮಾರಯ್ಯ ಕಂದಗಲ್ಲ ಸಮೀಪದ ನವಿಲೆ ಹಳ್ಳಿಯ ಶಂಕರ ದಾಸಿಮಯ್ಯನ ಓಣಿಯಲ್ಲಿ ಕಾಯಕ ಮಾಡುತ್ತಿರುವಾಗ ಅವರಿಬ್ಬರ ನಡುವೆ ವಾದ ವಿವಾದಗಳು ನಡೆದಾಗ, ದುರ್ಗಾದೇವಿಯು ಢಕ್ಕೆಯ ಮಾರಯ್ಯನ ಕರತಲಲಿಂಗವಾಗಿ ಶಂಕರದಾಸಿಮಯ್ಯನನ್ನು ಕಾಡಿದಳು ಎಂಬ ಪ್ರತೀತಿ ಇದೆ. ದುರುಗಮುರುಗಿಯ ವಚನಗಳಳ್ಲಿ ಬರುವ “ಶರಣ ಶರಣರನ್ನು ಕಾಡಿದಿ” ಎಂಬ ಮಾತು ಮೇಲಿನ ಘಟನೆಗೆ ಒತ್ತನ್ನು ನೀಡುತ್ತದೆ. ಢಕ್ಕೆಯ ಮಾರಯ್ಯನು ತನ್ನ ವಚನಗಳಲ್ಲಿ ತನ್ನ ಕಾಯಕದ ಬಗ್ಗೆ ಹೇಳಿರುವುದನ್ನು ನೋಡಿದರೆ ಅವನು ದುರುಗಮುರುಗಿಯನ್ನು ಹೊತ್ತುಕೊಂಡು ಅಲೆದಾಡುವುದು ಜನರಿಗೆ ಗೊತ್ತಾಗದಿರದು. “ಅರಿವುಳ್ಳವರಿಗೆ ಅರಿವನರಿದಿಹೆನೆಂಬುದೇ ಮಾಯೆ. ಮಾರಮರೆದು ಬೇರೊಂದುವ ಕಂಡೆನೆಂಬುದೇ ಮಾಯೆ. ನುಡಿಯ ನುಡಿವವರಲ್ಲಿ ಎಡಮಾತನಾಡಿ ವಾದಿಸುವುದೇ ಮಾಯೆ. ಘಟಮಟವೆಂಬ ಮಾರಿಯ ಹೊತ್ತು ಭವವೆಂಬ ಬಾಗಿಲಲ್ಲಿ ತಿರುಗಾಡುತ್ತಿದ್ದೇನೆ. ಢಕ್ಕೆಯ ದಾವರಕ್ಕೆ ಸಿಕ್ಕಿ ನೊಂದೆನು. ಇದರಚ್ಚುಗವ ಬಿಡಿಸ ಕಾಲಾಂತರ ಭೀಮಲಿಂಗೇಶ್ವರ”.

“ಕಾಯಕವೆಂಬ ಢಕ್ಕೆಯ ಮೇಲೆ ಜೀವವೆಂಬ ಹಿಡಿಚೆಂಡು ಬೀಳೆ ತ್ರಿವಿಧವ ತಾ, ತಾ, ಎಂಬಾಳಿ ಹಿಂ, ಡಿ, ಡಿಂ ಡಿ, ಎನ್ನುತ್ತಿದೆ. ಇಂತೀ ಎಲುಹಿನ ಭೇದದಲ್ಲಿ ಹೊಲಬುದಪ್ಪದೆ ಗೆಲಬೇಕು ಕಾಲವೆಂಬ ಮಾರಿಯ ಕಾಲಾಂತರ ಭೀಮೇಶ್ವರ ಲಿಂಗವನರಿಯ ಬಲ್ಲೊಡೆ”. ಹೀಗೆ ದುರುಗಮುರಗಿಯ ಪರಂಪರೆಯನ್ನು ಬಲು ಅನಾದಿಯಿಂದಲೂ ಕರ್ನಾಟಕದಲ್ಲಿ ಕಾಣಬಹುದಾಗಿದೆ.

ಡಾ. ಬಿ.ಎಸ್. ಗದ್ದಗಿಮಠರು ದುರ್ಗಾ ದೇವತೆ ಹಾಗೂ ಬೇಡನಾಯಕರ ಸಂಬಂಧದ ಕುರಿತು ಈ ರೀತಿ ಹೇಳುತ್ತಾರೆ. “ದುರ್ಗಾ ಪೂಜೆಯು ಭರತಖಂಡದಲ್ಲಿ ಬಲು ಅನಾದಿ ಯಿಂದಲೂ ಬಂದಿದೆ. ದುರ್ಗಾದೇವಿಯು ಶಕ್ತಿಯ ಅವತಾರವೆಂದು ಭಾರತೀಯರು ನಂಬುತ್ತಾರೆ. ಬಹುತರವಾಗಿ ಉತ್ತರ ಹಿಂದೂಸ್ಥಾನದಲ್ಲಿ. ಈ ದೇವಿಯ ಪೂಜೆ ಪುನಸ್ಕಾರಗಳನ್ನು ಬಲು ವಿಜೃಂಭಣೆಯಿಂದ ಬ್ರಾಹ್ಮಣರೇ ಮಾಡುವರು. ಕರ್ನಾಟಕದಲ್ಲಿ ಈ ದೇವಿಯ ಅರ್ಚಕರೇ ಬೇರೆ. ಈ ದೇವಿಯ ಪೂಜಾರಿಗಳು ಬೇಡರು. ಬ್ರಾಹ್ಮಣರು ಈ ದೇವಿಯ ಪೂಜಾರಿಗಳಾಗಿರುವುದು ಕಂಡು ಬರುವುದಿಲ್ಲ. ಅಲ್ಲದೆ ಉತ್ತರದಲ್ಲಿರುವಂತೆ ದಕ್ಷಿಣದಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ಸುಪ್ರಸಿದ್ಧ ದುರ್ಗಾದೇವತೆಯ ದೇಗುಲಗಳು ಕಡಿಮೆ. ಇಲ್ಲವೆಂದರೂ ಸಲ್ಲುವುದು. ಕರ್ನಾಟಕದಲ್ಲಿ ದ್ಯಾಮವ್ವ, ದುರುಗವ್ವ ದೇವತೆಗಳು ದೇವತೆಗಳಾಗಿ ಅಕ್ಕಸಾಲಿಗ ಹಾಗೂ ಬೇಡರ ಕೈವಶವಾದುದೆಂತು? ಎಂಬುದು ಎಲ್ಲರಿಗೂ ಬಗೆಹರಿಯದ ಸಮಸ್ಯೆಯಾಗದಿರದು. ಉತ್ತರ ಹಿಂದೂಸ್ಥಾನದಲ್ಲಿ ದುರ್ಗಾದೇವಿಗೆ ಆಗುವ ಪೂಜಾ ವಿಧಾನಕ್ಕೂ ಕರ್ನಾಟಕದಲ್ಲಿ ಈ ದೇವತೆಗೆ ದುರುಗಮುರುಗಿಯರು ಮಾಡುವ ಪೂಜಾ ವಿಧಾನಕ್ಕೂ ಮಹದಂತರವಿದೆ. ಒಂದು ಶಾಸ್ತ್ರೋಕ್ತ ವೈದಿಕ ಪದ್ಧತಿಯಲ್ಲಿ ಇನ್ನೊಂದು ಕಾಡು ಬೇಡರ ಬೆಡಗಿನಲ್ಲಿ.

ಬ್ಯಾಡ ಬ್ಯಾಡಂದ್ರ ಕೇಳದಲೇ
ಬ್ಯಾಡರ ಬೆನ್ನ ಬಿದ್ದಾಳ್ರೀ

ಎಂಬ ಮಾತಿನಲ್ಲಿ ಕರ್ನಾಟಕದಲ್ಲಿ ದುರುಗಮ್ಮನ ಮೇಲೆ ದಾಳಿ ಹಾವಳಿಗಳಾಗಿರ ಬಹುದೆಂದು ಅನುಮಾನ ಹೊರಡುವುದು. ಸಂಶೋಧನ ದೃಷ್ಟಿಯಿಂದ ಇದನ್ನು ಹಿಂಜಿ ನೋಡಲು ಇವೆಲ್ಲವುಗಳು ವಿಧಿತವಾಗದರಿವು. ಹನ್ನೆರಡನೆ ಶತಮಾನವು ಕರ್ನಾಟಕದಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಕ್ರಾಂತಿಯ ಕಾಲ. ಅನುಭಾವದೊಡನೆ ಕಾಯಕ ಮಾಹಿತಿಯನ್ನು ಜಗತ್ತಿಗೆ ಬಿತ್ತಿದ ಕಾಲ. ಇದನ್ನರಿತ ಜನರು ಕಾಯಕದೊಡನೆ ಅನುಭಾವಕ್ಕಿಳಿದರು. ಕಾಯಕವೇ ಕೈಲಾಸವಾಗಲು ಜನತೆಯಲ್ಲಿ ಮೂಢನಂಬಿಕೆಗಳು ಮಾಯವಾಗ ಹತ್ತಿದವು. ಆದರೂ ಜನರ ಮೋಹವು ಜ್ಯೋತಿರ್ಲಿಂಗಾದಿಗಳ ಮೇಲೆ ಕಡಿಮೆಯಾಗಲಿಲ್ಲ. ಪುಣ್ಯಕ್ಷೇತ್ರ, ನಿದರ್ಶನವು ಆಗಿನ ಕಾಲದ ಆಯುಷ್ಯದ ಬಹುಭಾಗವನ್ನೇ ನುಂಗುತ್ತಿದ್ದುದರಿಂದ ಕಾಯಕಕ್ಕೆ ತೊಂದರೆಯಾಗಹತ್ತಿತು. ಇದನ್ನರಿತು ಅನುಭಾವಿಯಾದ ಬಸವಣ್ಣನು ಜ್ಯೋತಿರ್ಲಿಂಗ-ಸ್ಥಾವರ ಲಿಂಗಾದಿಗಳು ದ್ಯೋತಕವೆಂದು ಇಷ್ಟಲಿಂಗ ದರ್ಶನವು ಮೋಕ್ಷಕ್ಕೆ ಕಾರಣವಾಗ ಲಾರದೆಂದು ಬೋಧಿಸಿದನು. ಇಷ್ಟಲಿಂಗದೊಡನೆ ಕಾಯಕವೇ ಮೋಕ್ಷವಾಗುವುದೆಂದು ತಿಳಿಸಿ ಹೇಳಲು ಜನರು ಕಾಯಕವನ್ನು ನಂಬಿ ಕಾಯಕ ನಿರತರಾದರು. ಅನುಭಾವಿಗಳಾದರು. ದೇಶವು ಉದ್ಧಾರವಾಗಿ ಜೀವನವು ಸುಖಮಯವಾಯಿತು. ಹೀಗಾಗಬೇಕಾದರೆ ಮಾರಿ, ಮಸಣಿ, ಮರಗಿ, ಜ್ಯೋತಿಷ್ಯ, ಶಕುನಾದಿ ಮೂಢ ಅಪನಂಬಿಕೆಗಳನ್ನು ತಮ್ಮ ವಚನಗಳಲ್ಲಿ ಚರ್ಚಿಸಿ ಜನರಿಗೆ ಬೋಧಿಸುತ್ತಿದ್ದರು. ಇದನ್ನರಿತು ಅನೇಕ ಕಾಡುಜನರೂ ಸಹ ಶಿವಶರಣರ ವಚನಗಳನ್ನೇ ನಂಬಿ ಕಾಯಕದ ಕಡೆಗೆ ತಮ್ಮ ಮನಸ್ಸನ್ನು ಹಾಕಿ ಮಹಾಶಿವಾನುಭವಿ ಗಳಾದರು. ಹೀಗೆ ಬರಬರುತ್ತ ಈ ದೇವತೆಗೆ ಭಕ್ತರು ಕಡಿಮೆಯಾಗಲು ಬ್ರಾಹ್ಮಣರು ಈ ದೇವಿಯ ಅರ್ಚನೆಯನ್ನು ಬಿಟ್ಟಿರಬಹುದೇ? ಆಗ ಅವಳು ಕರ್ನಾಟಕದ ಕಾಡಾಡಿಗಳಾದ ಬೇಡರ ಬೆನ್ನು ಬಿದ್ದಿರಬಹುದೇ? ಮುಂದೆ ಬೇಡರಲ್ಲಿಯೂ ಕೆಲವರು ಶಿವಶರಣರಾಗಿ ಈ ದುರುಗ ಮುರಗಿಯೇ ಇಷ್ಟಲಿಂಗವೆಂದು ಅರುಹಿದ್ದಾರೆ. ದುರುಗಮುರಗಿಯ ಕಾಯಕ ಮಾಡಿ ಇಷ್ಟಲಿಂಗದ ಮಾಹಿತಿಯನ್ನು ಕಾಡು ಜನರಲ್ಲಿ ವಚನರೂಪದಿಂದ ತಿಳಿಸಿದ್ದಾರೆ. ಆದುದರಿಂದ ಇಂದಿನವರೆಗೆ ದುರಗಮುರಗಿಯ ಪೂಜಾ ವಿಧಾನ ಸ್ತೋತ್ರದ ಬಹುಭಾಗವು ವಚನರೂಪದಲ್ಲಿಯೇ ಇರುವುದು” (ಬಿ.ಎಸ್. ಗದ್ದಿಗಿಮಠ, ೧೯೮೮-೯೨).

ಡಾ. ಬಿ.ಎಸ್. ಗದ್ದಗಿಮಠರು ಹೇಳುವ ಹಾಗೆ ಕರ್ನಾಟಕದಲ್ಲಿ ದುರಗಮ್ಮನ ಮೇಲೆ ಹಾವಳಿ ಆಗಿರಬಹುದೆಂಬ ಅನುಮಾನ ಸಮಂಜಸವಲ್ಲ ಎನಿಸುತ್ತದೆ. ಏಕೆಂದರೆ ದುರ್ಗಾದೇವತೆಯ ಮೂಲ ಬಂಗಾಳದ ಕಾಲಘಾಟ್ ಪ್ರದೇಶ, ಇದೊಂದು ಮೂಲದಲ್ಲಿ ಶಕ್ತಿ ಆರಾಧನೆಯ ಕೇಂದ್ರ. ಬಂಗಾಳ ಹಾಗೂ ಪೂರ್ವ ಭಾರತದಲ್ಲಿ ಅತೀ ಪ್ರಾಚೀನವಾದ ಸಮುದಾಯಗಳು ವಾಸಿಸುವ ಪ್ರದೇಶವಾಗಿದೆ. ಆರ್ಯರು ಬರುವ ಪೂರ್ವದಲ್ಲಿಯೇ ಮಾತೃ ಆರಾಧನೆಯ ಸಮುದಾಯಗಳು ಅಲ್ಲಿ ವಾಸಿಸುತ್ತಿದ್ದ ಬಗೆಗೆ ಸಂಶೋಧನೆಗಳು ಸಾಬೀತುಪಡಿಸಿವೆ. ಈ ಕಾರಣದಿಂದ ದುರ್ಗಾ ಆರಾಧನೆ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಈ ಕಾರಣದಿಂದಲೇ ಈ ಕೇಂದ್ರಕ್ಕೆ ಹಲವಾರು ಸಮುದಾಯಗಳು ಆಗಾಗ್ಗೆ ಬಂದು ಹೋಗುವ ಪರಂಪರೆ ಮೊದಲಿನಿಂದಲೂ ನಡೆಯುತ್ತಾ ಇದೆ. ಹಾಗೆಯೇ ಒರಿಸ್ಸಾ ಹಾಗೂ ಆಂಧ್ರಪ್ರದೇಶದಲ್ಲಿ ವಾಸಿಸುತ್ತಿದ್ದ ಬೇಡ ನಾಯಕ ಸಮುದಾಯವು ಅಲ್ಲಿಗೆ ಹೋಗಿ ಬರುವ ಸಂಪ್ರದಾಯವನ್ನು ಇಟ್ಟುಕೊಂಡಿರುತ್ತಾರೆ. ದುರ್ಗಾ ಮೂಲತಃ ಶಕ್ತಿದೇವತೆ. ಇವರು ಶಕ್ತಿದೇವತೆಯ ಆರಾಧಕರು. ಹಾಗಾಗಿ ಒರಿಸ್ಸಾ ಹಾಗೂ ಆಂಧ್ರ ಪ್ರದೇಶದ ಕಡೆಯಿಂದ ವಲಸೆ ಬಂದ ಬೇಡನಾಯಕ ಸಮುದಾಯದವರು ದುರ್ಗಾ ದೇವತೆಯ ಆರಾಧಕರಾಗಿರುವುದು ಸಹಜವಾಗಿದೆ. ದುರುಗಮುರುಗಿ ಕಾಯಕ ಮಾಡಿಕೊಳ್ಳಲು ಇದ್ದಿರಬಹುದಾದ ಕಾರಣಗಳು ಮುಖ್ಯವಾಗಿ ಇವರು ಮೂಲತಃ ಬೇಟೆ ಹಾಗೂ ಪಶುಪಾಲಕ ರಾಗಿರುವುದು. ಇವುಗಳು ಇವರನ್ನು ವಲಸೆಗಾರರನ್ನಾಗಿ ಮಾಡಿದ ಕಸುಬುಗಳು. ಹಾಗಾಗಿ ತಾವು ವಲಸೆ ಹೋದ ಜಾಗಗಳಿಗೆಲ್ಲಾ ತಮ್ಮ ದೈವವನ್ನು ಹೊತ್ತುಕೊಂಡು ಹೋಗುವರಾರು. ಹೊತ್ತುಕೊಂಡು ಹೋಗುವಾಗ ದೈವವನ್ನು ಪೆಟ್ಟಿಗೆ ಅಥವಾ ಬುಟ್ಟಿಯಲ್ಲಿ ಇಟ್ಟುಕೊಂಡು ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗಿದ್ದಿರಬಹುದಾದ ಸಾಧ್ಯತೆ ಇದೆ. ಪಶುಪಾಲನಾ ಹಂತದ ಹಲವು ಜನಸಮುದಾಯಗಳು ತಾವು ಒಂದು ಕಡೆ ಖಾಯಂ ಆಗಿ ನೆಲೆ ನಿಲ್ಲುವುದಕ್ಕೆ ಮೊದಲು ಅಲೆಮಾರಿಗಳಾಗಿದ್ದರು. ಅಂಥ ಸಂದರ್ಭಗಳಲ್ಲಿ ತಾವು ನಂಬಿದ ದೈವದ ಪ್ರತಿರೂಪವನ್ನು ಪೆಟ್ಟಿಗೆಯಲ್ಲಿಟ್ಟು ತಮ್ಮ ಜೊತೆಹೊತ್ತು ಹೋಗುತ್ತಿದ್ದರು. ಅನೇಕ ಅಲೆಮಾರಿ ಜನವರ್ಗ ಒಂದಾನೊಂದು ಕಾಲಕ್ಕೆ ಈ ಪದ್ಧತಿ ಅನುಸರಿಸಿರುವುದನ್ನು ಕೆಲವು ವಿದ್ವಾಂಸರು ಧೃಡಪಡಿಸಿದ್ದಾರೆ. ಆದರೆ ಈಗ ಅಂಥ ವಲಸೆ ಜನವರ್ಗ ಕೂಡ ಖಾಯಂವಾಸಿಗಳಾಗಿ ಮಾರ್ಪಟ್ಟಿರುವುದರಿಂದ ಹೊತ್ತು ತಿರುಗುವ ಪೆಟ್ಟಿಗೆ ದೇವತೆಗಳನ್ನು ನಾವು ಕಾಣಲಾಗುತ್ತಿಲ್ಲ. ಆದರೆ ಕಾಡುಗೊಲ್ಲರು ಹಾಗೂ ಬೇಡನಾಯಕ ಸಮುದಾಯದ ಇನ್ನೊಂದು ಪಂಗಡವಾದ ಮ್ಯಾಸಬೇಡರಲ್ಲಿ ಈಗಲೂ ನೆಲೆಗೊಂಡ ಆದರೆ ಪೆಟ್ಟಿಗೆಯಲ್ಲೇ ಇಟ್ಟು ಪೂಜಿಸುವ ದೇವತೆಗಳನ್ನು ಕಾಣಬಹುದು. ಅಂಥ ಜನವರ್ಗದ ಕವಲುಗಳಾಗಿ ಪೆಟ್ಟಿಗೆ ದೇವರನ್ನು ಹೊತ್ತು ಜನವಿರುವ ಕಡೆಗೇ ಹೋಗಿ ಆರಾಧನೆಗೆ ಒಳಪಡಿಸುತ್ತಿದ್ದ ಒಂದು ಗುಂಪು ದುರುಗಮುರುಗಿಯರಾಗಿರುವ ಸಾಧ್ಯತೆ ಇದೆ.

ದುರುಗಮುರುಗಿಯ ಮೂಲದ ಕುರಿತು ಕನ್ನಡ ಜಾನಪದ ವಿಶ್ವಕೋಶ (ಸಂಪುಟ ೨)ದಲ್ಲಿ “ದುರುಗಮುರುಗಿಯರು ಉತ್ತರದಿಂದ ಬಂದವರೆಂದೂ ದ್ರಾವಿಡರ ಗುಂಪಿಗೆ ಸೇರಿದವರೆಂದೂ ಅಭಿಪ್ರಾಯಗಳಿವೆ. ಇವರು ದ್ರಾವಿಡರ ಗುಂಪಿಗೆ ಸೇರಿದವರಾದ್ದರಿಂದ ದಕ್ಷಿಣದವರಿರಬೇಕೆಂಬ ವಾದವೂ ಇದೆ. ಇವರನ್ನು ‘ಕುರುಬ’ ಜನಾಂಗಕ್ಕೆ ಸೇರಿದವರೆಂತಲೂ  ಹೇಳುತ್ತಾರೆ. ಕುರುಬರಲ್ಲಿ ಊರು ಕುರುಬ, ಅಡವಿಕುರುಬ ಎಂಬೆರಡು ಪಂಗಡಗಳಿವೆ. ಅಡವಿಕುರುಬರಲ್ಲಿ ಶಾಸ್ತ್ರ ಹೇಳುವವರೂ, ಕವಲೆತ್ತಿನವರೂ, ಬಾಳ ಸಂತೋಷರೂ, ದುರುಗಮುರುಗಿಯವರು ಎಂಬ ಪಂಗಡಗಳಾಗಿ ವಿಂಗಡಿಸಿ ಬೇರೆ ಬೇರೆ ವೃತ್ತಿಗಳನ್ನೂ ಕೈಗೊಂಡರೆಂದೇ ಹೇಳುವುದುಂಟು. ಇನ್ನೊಂದು ವಾದದಂತೆ ದುರ್ಗಮ್ಮ ಮರ್ಗಮ್ಮನನ್ನು ಕೆಳವರ್ಗದವರು ಬುಟ್ಟಿಯಲ್ಲಿಟ್ಟುಕೊಂಡು ಬೀದಿಬೀದಿಗೂ ಹೋಗಿ ಈ ದೇವತೆ ಶಾಪ ಹಾಕುತ್ತಾಳೆಂದು ಜನರಲ್ಲಿ ಭಯ ಹುಟ್ಟಿಸಿ ಅವರಿಂದ ದವಸ ಧಾನ್ಯಗಳನ್ನು ಪಡೆದು ಜೀವನ ಸಾಗಿಸುತ್ತಿದ್ದರೆಂದು ತಿಳಿದು ಬರುತ್ತದೆ” (ಡಾ. ಚಂದ್ರಶೇಖರ ಕಂಬಾರ; ೧೯-೧೦೩೪). ಗೀತಾನಾಗಭೂಷಣ ಅವರು ಮೇಲಿನ ಅಭಿಪ್ರಾಯದ ಜೊತೆ ಏಕೀಭವಿಸಿ ಕುರುಬರಲ್ಲಿ ಊರು ಕುರುಬರು, ಅಡವಿ ಕುರುಬರು ಎಂಬ ಎರಡು ವಿಧದ ಜನಾಂಗಗಳಿ ರುವುದರಿಂದ ದುರುಗಮುರುಗಿಯರು ಅಡವಿ ಕುರುಬರ ಜಾತಿಗೆ ಸೇರಿದವರೆಂದು ಹೇಳುತ್ತಾರೆ.

ಡಾ. ಕೆ. ದುರ್ಗಾದಾಸ್ ಅವರು ತಮ್ಮ ಕ್ಷೇತ್ರಕಾರ್ಯ ಮಾಹಿತಿಗಳ ಆಧಾರದ ಮೇಲೆ ದುರುಗಮುರುಗಿಯರು “ಬೇಡ ಜಾತಿಗೆ ಸೇರಿದವರೆಂಬುದು ತಿಳಿದು ಬರುತ್ತದೆ. ಬೇಡರಲ್ಲೂ ಊರ ಬೇಡರು ಮತ್ತು ಅಡವಿ ಬೇಡರೆಂದು ಎರಡು ಪಂಗಡಗಳಿವೆ. ದುರುಗಮುರುಗಿಯರು ತಾವು ಗಂಗಾಮತಸ್ಥರೆಂದೂ, ಮೂಲವೃತ್ತಿ ಮೀನುಗಾರಿಕೆಯಾಗಿತ್ತೆಂದೂ ಹೇಳುವುದನ್ನು ನೋಡಿದರೆ ಇವರು ಮೂಲದಲ್ಲಿ ಬೇಡ ಜಾತಿಯವರಿರಬೇಕೆಂಬ ಮಾತಿಗೆ ಪುಷ್ಟಿ ದೊರೆಯುತ್ತದೆ. ಆದರೆ ಊರ ಬೇಡರ ಜೊತೆ ಕೊಡುಕೊಳೆ ಯಾವುದೂ ಇಲ್ಲ. ಇದಕ್ಕೆ ಕಾರಣವೆಂದರೆ ಬಹುಶಃ ಇವರಿಗೆ ನಿರ್ದಿಷ್ಟ ನೆಲೆಯಿಲ್ಲದಿರುವುದು ಎಂದು ಹೇಳುತ್ತಾರೆ (ಡಾ. ಕೆ. ದುರ್ಗಾದಾಸ್; ೨೦೦೦, ೪೪೮).

ದುರುಗಮುರುಗಿಯರು ತಾವು ಈ ರೀತಿಯ ಕಾರ್ಯದಲ್ಲಿ ತೊಡಗಲು ಕಾರಣವನ್ನು ಪುರಾಣ ಮೂಲದ ಮುಖಾಂತರ ಹೇಳುತ್ತಾರೆ. ಅದೇನೆಂದರೆ, ದುರ್ಗನೆಂಬ ರಾಕ್ಷಸ ಯಾರಿಂದಲೂ ಸಾಯದಂತಹ ವರ ಪಡೆದು ಲೋಕ ಕಂಟಕನಾಗಿರುತ್ತಾನೆ. ದುರ್ಗೆಯು ಬ್ರಹ್ಮನು ಹೇಳಿದಂತೆ ಕಾಳರಾತ್ರಿ ಅವನೊಂದಿಗೆ ಯುದ್ಧಮಾಡಿ ಕೊಂದು ಹಾಕುತ್ತಾಳೆ ಎಂಬುದು ಪುರಾಣ ಪ್ರಸಿದ್ಧವಾದ ಕಥೆ. ಹೀಗೆ ಕೊಂದು ಹಾಕುವಾಗ ದುರ್ಗೆಯು ಆದಿಶಕ್ತಿಯ ರೂಪತಾಳಿದ್ದಳಂತೆ. ಇದರ ಹಿನ್ನೆಲೆಯಿಂದಾಗಿ ದುರುಗ ಮುರುಗಿಯರನ್ನಾಡಿಸುವ ಗಂಡಸು ಪೂಜಾರಿ ಲಡ್ಡಿನಿಂದ ತನ್ನ ದೇಹ ದಂಡಿಸಿಕೊಳ್ಳುತ್ತಾ ದೇವಿ ಆರಾಧನೆಗೆ ಚಾಲನೆ ಸಿಕ್ಕಿರಬಹುದು. ಜೊತೆಗೆ ಮುಂಗೈಯಲ್ಲಿ ಕತ್ತಿಯಿಂದ ರಕ್ತ ಬರಿಸಿಕೊಳ್ಳುವ ಕ್ರಿಯೆಯಿಂದ ತೃಪ್ತಳಾಗುವಳು ಎಂದು ನಂಬುತ್ತಾರೆ. ದೇಹ ದಂಡನೆಯ ಮೂಲಕ ದೇವಿಯನ್ನು ಒಲಿಸಿ ಕೊಳ್ಳುವ ಈ ಕ್ರಿಯೆಯಿಂದ ದೇಹಕ್ಕೆ ನೋವಾಗುವುದಿಲ್ಲ ಎಂದು ನಂಬುತ್ತಾರೆ. ಪ್ರಾಚೀನ ಕಾಲದ ಈ ದೇಹದಂಡನೆಯ ಮುಖಾಂತರ ದೇವರನ್ನು ಒಲಿಸಿಕೊಳ್ಳಬಹುದೆಂಬುದು, ಕೆಂಡ ತುಳಿತ, ಪಾದುಕೆಗಳ ಮೇಲೆ ನಿಲ್ಲುವುದು, ಸಿಡಿ ಮುಂತಾದ ಆಚರಣೆಗಳ ಹಿನ್ನೆಲೆಗೆ ಕಾರಣವಾಗಿದೆ.

ದುರುಗಮುರುಗಿಯವರು ತಮ್ಮ ಅಲೆಮಾರಿತನದ ಸ್ವಭಾವದಿಂದಾಗಿ ಭಾರತದಾದ್ಯಂತ ಸಂಚರಿಸಿ ಬರುವುದುಂಟು. ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ, ಕರ್ನಾಟಕದ ಕಿನ್ನಾಳ, ಕೊಪ್ಪಳ, ಬಳ್ಳಾರಿ, ಹೊಸಪೇಟೆ, ಸುರಪುರ, ಹುಬ್ಬಳ್ಳಿ, ವಿಜಾಪುರ, ಸಿಂದಗಿ, ಚಾಲಾಪುರ, ಬಂಕಾಪುರ, ವಾತನಹಳ್ಳಿ, ಅಕ್ಕಿ ಆಲೂರ, ನರೇಗಲ್ಲ, ಗೋಕಾವಿ, ರಾಯದುರ್ಗ, ಸೊಲ್ಲಾಪುರ, ಚಾಮರಾಜನಗರ ಜಿಲ್ಲೆಯ ಹಲವೆಡೆ, ಬಾರ್ಸಿ ಮುಂತಾದ ಅನೇಕ ಸ್ಥಳಗಳಲ್ಲಿ ವಾಸವಾಗಿರುವುದನ್ನು ಕಾಣಬಹುದು. ದುರುಗಮುರುಗಿಯವರು ಕನ್ನಡ, ತೆಲುಗು ಭಾಷೆಗಳನ್ನು ಮುಖ್ಯವಾಗಿ ಮಾತನಾಡುತ್ತಾರೆ. ಭಿಕ್ಷಾಟನೆಗಾಗಿ ಹೊರಗಡೆ ವಲಸೆ ಹೋದಾಗ ಬೇರೆ ಬೇರೆ ಭಾಷೆಯ ಜನರೊಂದಿಗೆ ವ್ಯವಹರಿಸಬೇಕಾಗಿರುವುದರಿಂದ ಮರಾಠಿ, ಹಿಂದಿ, ಉರ್ದು, ಕೊಂಕಣಿ ಮುಂತಾದ ಭಾಷೆಗಳನ್ನು ಸಹ ಮಾತನಾಡುತ್ತಾರೆ.

ದುರುಗ ಮುರಗಿಯವರು ತಮ್ಮ ವೃತ್ತಿಗಾಗಿ ಊರೂರು ಅಲೆಯುವ ಸಂದರ್ಭದಲ್ಲಿ ‘ಕಾಲೂರಿದ್ದೆ ನೆಲೆ’ ಎಂಬಂತೆ ನಿಗದಿತವಾದ ನೆಲೆ ಇಲ್ಲ. ಭಿಕ್ಷಾಟನೆಗಾಗಿ ಯಾವುದಾದರೊಂದು ಊರನ್ನು ಆಯ್ದುಕೊಂಡು ತಮ್ಮ ಸಹ ಪರಿವಾರದೊಂದಿಗೆ ಪ್ರಯಾಣ ಬೆಳೆಸುತ್ತಾರೆ. ಊರ ಹತ್ತಿರದ ಬಯಲಲ್ಲಿ ಬಿಡಾರವನ್ನು ಹೂಡುತ್ತಾರೆ. ಕತ್ತೆಗಳ ಮೇಲೆ ಹೇರಿರುವ ‘ಸಂಚಾರಿ ಬಿಡಾರ’ವನ್ನು ಕೆಳಗಿಳಿಸಿ ಕ್ಷಣಾರ್ಧದಲ್ಲಿ ಬಿಡಾರ ಸಿದ್ಧಗೊಳಿಸುವ ಚತುರರು, ಬಿಡಾರದ ಪಕ್ಕದಲ್ಲಿ ಕತ್ತೆ, ಹಂದಿ, ನಾಯಿಗಳ ಹಟ್ಟಿಯೂ ರೂಪುಗೊಳ್ಳುತ್ತವೆ. ದುರುಗಮ್ಮನ ಸಂಚಾರಿ ಗುಡಿ, ಢಕ್ಕೆಯ ವಾದ್ಯ, ಪಾತ್ರೆ, ಪಡುಗ, ಬಟ್ಟೆ ಬರೆ, ಚಾಪೆ ಇವುಗಳಿಂದ ಬಿಡಾರ ತುಂಬುತ್ತಾರೆ. ಅಂಗಳದಲ್ಲಿ ಕಲ್ಲುಗುಂಡು ಹೂಡಿ ಒಲೆ ಸಿದ್ಧಪಡಿಸುತ್ತಾರೆ. ಅವಕಾಶ ಸಿಕ್ಕರೆ ಗುಡಿಗುಂಡಾರ, ಧರ್ಮಶಾಲೆ, ಚಾವಡಿಗಳಲ್ಲಿಯೂ ತಂಗುವುದುಂಟು.

ಸಮವಾಗಿ ಬಿಸಿಲು ಗಾಳಿಗಳನ್ನುಂಡ ದುರುಗ ಮುರುಗಿಯರ ಮೈಕಟ್ಟು ಚೆನ್ನಾಗಿಯೇ ಇರುತ್ತದೆ. ಇವರ ವೇಷಭೂಷಣಗಳು ವಿಚಿತ್ರವಾಗಿಯೇ ಇರುತ್ತವೆ. ಮುಖಕ್ಕೆ ಅರಿಶಿಣ, ಹಣೆಗೆ ದೊಡ್ಡ ಬೊಟ್ಟಿನಾಕಾರದ ಕುಂಕುಮ, ಭಂಡಾರದ ಲೇಪನ, ಕೈ ರಟ್ಟೆಗೆ ಬೆಳ್ಳಿಯ ಕಡಗ, ನಡುವಿಗೆ ದಪ್ಪ ಗೆಜ್ಜೆಯ ಸರ, ಕಾಲಿಗೆ ಪೊದೆಗೆಜ್ಜೆ ಸಾಮಾನ್ಯವಾಗಿ ಕೆಂಪು ಸೀರೆಯನ್ನೇ ನಿರಿಗೆಯಾಗಿ ಕಚ್ಚೆಯ ರೀತಿ ಕಟ್ಟಿದ ಕಾಸೆ, ಕೈಯಲ್ಲಿ ಚಾವಟಿ ಅಥವಾ ಛಡಿ ಇವು – ಪೆಟ್ಟಿಗೆ ಹೊತ್ತ ಪೂಜಾರಿಯ ವೇಷ. ಅವನ ಜೊತೆಗೆ ಬರುವ ಹೆಣ್ಣಿನದು (ಸಾಮಾನ್ಯವಾಗಿ ಹೆಂಡತಿ) ಬೇರೆಯದೇ ಚಿತ್ರ. ಮಾಮೂಲಿ ಹೆಂಗಸಿನ ವೇಷವಾದರೂ ಕೈಗೆ ಕಡಗ, ನಡುವಿಗೆ ಡಾಬು, ಮೂಗುತಿ ಹಾಗೂ ವಿವಿಧ ಬೆಳ್ಳಿಯ ಒಡವೆಗಳಿರುತ್ತವೆ. ನಡುವಿನ ಒಂದು ಕಡೆ ಬಟ್ಟೆಯಲ್ಲಿ ತೂಗು ಹಾಕಿಕೊಂಡ ಮಗು, ಇನ್ನೊಂದು ಕಡೆ ಭಿಕ್ಷೆ ಸಂಗ್ರಹಿಸುವ ಅಸುಬೆಚೀಲ, ಕುತ್ತಿಗೆಗೆ ನೇತುಹಾಕಿಕೊಂಡ ಅರೆ ಅಥವಾ ಉರುಮೆ ವಾದ್ಯ. ಎರಡೂ ಕಡೆ ತೆಳುವಾದ ಚರ್ಮವನ್ನು ಹೊಂದಿದ ಉರುಮೆ ವಾದ್ಯವನ್ನು ಒಂದು ಕಡೆಯಿಂದ ಬಡಿಯುತ್ತ ಇನ್ನೊಂದು ಕಡೆಯಿಂದ  ಉಜ್ಜುತ್ತಾರೆ. ಉಜ್ಜುವ ಕಡೆಯಿಂದ ‘ದರ್ರಬುರ್ರ’ ಎಂಬ ಶಬ್ದ ಬಂದರೆ ಬಡಿಯುವ ಕಡೆಯಿಂದ ‘ಢಮ್ಮ ಢಮ್ಮಿ ಢಮಢಮ್ಮಿ’ ಎಂಬ ಶಬ್ದ ಬರುತ್ತದೆ.

ದುರುಗ ಮುರಗಿಯರು ಹೊತ್ತೊಯ್ಯುವ ಗುಡಿಗಳು ಮೂರು ಅಡಿ ಎತ್ತರವಿರುವ ಬಿದಿರು ಕಟ್ಟಿಗೆಗಳ ಅಥವಾ ಚಹಾಪುಡಿ ಡಬ್ಬಿಯಿಂದ ತಯಾರಾದ ಪುಟ್ಟ ಕಪಾಟಿನಂತಿರುತ್ತವೆ. ಈ ಕಪಾಟನ್ನು ತೆಗೆದುಕೊಂಡು ಹೋಗುವಾಗ ಮಾಯಕಾರತಿ ದುರುಗಮ್ಮನ ಗುಣಗಾನವನ್ನು ಕೆಲವೊಮ್ಮೆ ವಚನರೂಪದಲ್ಲಿ ಮಾಡುತ್ತಾರೆ.

೧. ಸಾವಿರ ವರುಷ ಬಾಳಿದರೂ ಸಾವು ತಪ್ಪಲಿಲ್ಲ. ನೂರು ವರುಷವಿದ್ದರೂ ಅಣ್ಣ ತಮ್ಮರ ಪಾಲು ತಪ್ಪಲಿಲ್ಲ. ಮಣ್ಣಿನ ಕಾಯ ಮಣ್ಣಿಗೆ. ಏಸುದಿನ ಬಿಟ್ಟರೂ ಕುಂಬಾರಸ್ವಾರಿ ಒಡಿಯಲೇಬೇಕು. ಬೇಡುಂಡ ಬಾಯಿ ನಾಡು ಕಂಡಿತು. ನಿನ್ಹೊತ್ತು ನಾನು ಬೇಡಿ ಉಣ್ಣುವೆನಮ್ಮ ಮಾಯಾಕಾರತಿ ದುರಗಮ್ಮ…….

೨. ಅಗ್ಗಿ ಹೊತ್ತದ ಉರುವಲು. ಬೆಂಕಿ ಇಲ್ಲದ ಕಿಚ್ಚು. ತಡವಿಲ್ಲದೆ ಮಾನವನ ಕೊಲ್ಲಾಕಿ, ಜಗಳದಾಗ ಜಳ. ತಾಸಿನಲ್ಲಿ ಊರಾಗ ಹೊಕ್ಕು ಬೆಳ್ಳಿ ದೇವ್ರನ ಬಂಗಾರ ದೇವ್ರನ, ಅಡ ಸೇರಿಸಿ ಊರಾ ಮಂದಿನ ಕೇಡು ಮಾಡುವ ಮಾಯಕಾರತಿ ಆದಿಶಕ್ತಿ ದುರಗಮ್ಮ….

೩. ಮಂಡಲದಲ್ಲಿ ಮಾಯಕಾರತಿ, ಕಂಡಜನರಿಗೆ ಮಂಡಕಾರತಿ, ಚಂಡಿಯ ಚಿವುಟಿ ಭಂಡಾರ ಚೀಲ ಬೆನ್ನಿಗೆ ಹೊರಸಾಕೆಮ್ಮೆ, ಶರಣಶರಣರನು ಕಾಡಿದಿ ನಿನ್ನ ಮಾಯೆ ಯಾರಿಗೂ ಸಿಕ್ಕಿಲ್ಲ. ಮಾಯಕಾರತಿ ದುರಗಮ್ಮ…..

ಹೀಗೆ ಅನೇಕ ವಚನಗಳನ್ನು ಹೇಳುತ್ತ ಪೆಟ್ಟಿಗೆಯ ಗುಡಿಯ ಬಾಗಿಲ ಪರದೆಯನ್ನೂ ಹೋಳು ಮಾಡಲು ದೇವಿಯ ಭವ್ಯ ಮೂರ್ತಿಯು ಎಲ್ಲರ ಕಣ್ಣಿಗೆ ಬೀಳುವುದು. ಮೂರ್ತಿಗೆ ನಾಲ್ಕು ಕೈಗಳಿರುವವು. ಮುಂದಿನ ಬಲಗೈಯಲ್ಲಿ ಖಡ್ಗವಿದ್ದು ಅದಕ್ಕೆ ಯಾವಾಗಲೂ ಹಸಿರು ಬಳೆಗಳನ್ನು ಹಾಕಿರುತ್ತಾರೆ. ಎಡಗೈಯಲ್ಲಿ ಕುಂಕುಮ ಕರಣಕಿ ಇರುವುದು. ಹಿಂದಿನ ಎಡಬಲ ಎರಡೂ ಕೈಗಳಲ್ಲಿ ಹೆಡೆನಾಗಗಳಿರುವವು. ಕಿವಿಯಲ್ಲಿ ವಾಲಿ, ಮೂಗಿನಲ್ಲಿ ಮೂಗುತಿ ಹಾಗೂ ಮೂಗಿನ ಸೆಂಜಿಯ ಬುಡದಲ್ಲಿ ಕೋರೆ ಮೀಸೆಯಿಂದ ನೆತ್ತರ ಬಣ್ಣ ತುಂಬಿದ ದೇವಿಯ ಮುಖವು ರೌದ್ರವಾಗಿ ತೋರುವುದು. ಕೊರಳಲ್ಲಿ ಚಿಂತಾಕ ಪದಕ-ತಾಳಿಯನ್ನು ಹಾಕಿ, ಚೆಂದರಕಾಳಿಯ ಸೀರಿ, ಹಸಿರುಗುಪ್ಪಸವನ್ನು ತೊಡಿಸಿರುತ್ತಾರೆ.

ದುರುಗಮ್ಮ ಬಂದಾಳ್ರೇ ಯೆವ್ವಾ
ದುರಗಮ್ಮ ಬಂದಾಳ್ರೇ ಯೆವ್ವಾ
ತಾಯಿ ಬಂದಾಳ ಬರ್ರೆ ಯೆವ್ವಾ
ಬರ್ರೆ ತಾಯಿ ಬರ್ರೇ ತಾಯಿ
ಬುರುಬುರು ಪೋಚಮ್ಮ ಬಂದಾಳ ಬರ್ರೇ ಯವ್ವಾ
ಕಂವಟಿಗಿ ಮರಗಮ್ಮ ಆವ್ಲಾರ ದುರ್ಗಮ್ಮ ಬಂದಾಳ
ಆಲಳ್ಳಿ ದುರುಗಮ್ಮ ಬಂದಾಳ ಬರ್ರೇ ತಾಯೀ
ಬಸವಾಪಟ್ಟಣ ದುರಗಮ್ಮ ಬಂದಾಳ ನೋಡ್ರೇ ಯವ್ವಾ
ಭರಾಭರಾ ಬರ್ರೀ ಮರದಾಗ ಜ್ವಾಳಾ ತಗೊಂಡು ಬರ್ರೇ

ಹೀಗೆ ಸ್ತುತಿ ಮಾಡುತ್ತಾ ಚಾವಟಿ ಏಟು ಹೊಡೆದುಕೊಳ್ಳುವ ಈ ‘ಪೋತರಾಜ’ ತನ್ನ ಪೆಟ್ಟಿಗೆ ಇಟ್ಟಲ್ಲಿಂದ ಆ ಬೀದಿಯ ಅಂತ್ಯದವರೆಗೆ ತನ್ನ ವೇಷವನ್ನು ಮೆರೆಯುತ್ತಾನೆ. ಅಂದರೆ ಉರುಮೆ ವಾದ್ಯದ ಗತಿಗೆ ತಕ್ಕಂತೆ ಹೆಜ್ಜೆ ಹಾಕುತ್ತಾ, ಕೈಲಿ ಹಿಡಿದ ಚಾವಟಿಯನ್ನು ಎತ್ತಿ ತಿರುಗಿಸುತ್ತಾ, ಕೆಲವೊಮ್ಮೆ ಆ ಚಾವಟಿಯನ್ನು ಎರಡೂ ಕೈಯಿಂದ ಹಿಡಿದು ಹಿಂಡುತ್ತಾ ಲಘುವಾಗಿ ನರ್ತಿಸುತ್ತಾನೆ. ಮಧ್ಯೆ ಮಧ್ಯೆ ಆವೇಷ ಬಂದವನಂತೆ ಚಾವಟಿಯಿಂದ ಪಟಪಟನೆ ಮೈಯಿಗೆ ಹೊಡೆದುಕೊಳ್ಳುತ್ತಾನೆ.

ತಲೆಯ ಮೇಲೆ ದುರುಗಮ್ಮಳ ಗುಡಿ ಹೊತ್ತುಕೊಂಡು ಗಂಡ ಹೆಂಡತಿ, ಒಮ್ಮೊಮ್ಮೆ ನಾಲ್ಕೈದು ಜನ ಕೂಡಿಕೊಂಡು ಓಣಿಯಲ್ಲಿ ದೇವಿಯ ಮಹಿಮೆಯನ್ನು ಜನರಿಗೆ ಸಾರಿ ಹೇಳುತ್ತಾರೆ. ಗುಡಿ ಇಳಿಸಿದ ಬಳಿಕ ಹೆಣ್ಣುಮಗಳು ಹಗಲಲ್ಲಿ ಢಕ್ಕೆಯ ವಾದ್ಯ ಹಾಕಿಕೊಂಡು ಬುರ್…ಬುರ್…ಬುರ್…ಢಂ…ಢಂ…ಢಂ… ಎಂದು ಬಾರಿಸುತ್ತ ಓಣಿಯಲ್ಲಿ ಸುತ್ತಾಡಿ ಜನ ಸಮೂಹ ಕೂಡಿಸುತ್ತಾಳೆ. ಈ ಶಬ್ದ ಕೇಳಿದರೆ ಸಾಕು ಮಕ್ಕಳು ಇವರ ಕಡೆಗೆ ಧಾವಿಸಿ ಬರುತ್ತಾರೆ. ಗಂಡಸು ವಿವಿಧ ಬಣ್ಣಗಳ ಬಟ್ಟೆಯಿಂದ ಸಿದ್ಧಪಡಿಸಿರುವ ಲಂಗವನ್ನು ತೊಟ್ಟು ಕೊಂಡು ಕಾಲಿಗೆ ಗೆಜ್ಜೆಸರ ಕಟ್ಟಿ ಮುಖ ಮತ್ತು ತೋಳುಗಳಿಗೆ ಅರಿಷಿಣ ಹಚ್ಚಿಕೊಳ್ಳುತ್ತಾನೆ. ದುರುಗಮ್ಮಳಿಗೆ ಊದಿನಕಡ್ಡಿ ಹಚ್ಚಿ ತಲೆಯ ಜಡೆಯನ್ನು ಬಿಚ್ಚಿಕೊಳ್ಳುತ್ತಾನೆ. ಕಿಕ್ಕಿರಿದ ಜನಸಮೂಹದ ಮಧ್ಯೆ ಅಲಲಲಲ…ಹಾ…ಹಾ…ಹಾ ಎಂದು  ಕೂಗಿ ಹಿಡಿಗಾತ್ರದ ದೀರ್ಘವಾದ ಬಾರಕೋಲಿನಿಂದ ಮೈ ಮೇಲೆ ಚಟಚಟಾರನೆ ಹೊಡೆದುಕೊಳ್ಳುತ್ತ ಜನರಿಗೆ ಅಚ್ಚರಿಯನ್ನುಂಟುಮಾಡುತ್ತಾನೆ. ಆ ಮೇಲೆ ನೆರೆದ ಜನರ ಮಧ್ಯದಲ್ಲಿ ನಿಂತು ದೇವಿಯ ಹೆಸರಲ್ಲಿ ದೀರ್ಘಸ್ತುತಿಯನ್ನು ಸಾರಿ ಹೇಳುತ್ತಾನೆ.

ಅನಂತರ ಹೆಂಡತಿಯ ತಲೆಯ ಮೇಲೆ ಗುಡಿ ಹೊರಿಸಿ ಕೈಯಲ್ಲಿ ಬೇವಿನ ಎಲೆಗಳನ್ನು ಕೊಡುತ್ತಾನೆ. ಗುಡಿ ಹೊತ್ತು ಹೆಣ್ಣುಮಗಳ ಎದುರಿಗೆ ಗಂಡನು ಮುಂಗೈ ಅಥವಾ ಭುಜಕ್ಕೆ ಡಬ್ಬಣದಿಂದ ಚುಚ್ಚಿಕೊಂಡು ರಕ್ತ ಹನಿಸುತ್ತಾನೆ. ಇದನ್ನು ಸಹಿಸದೆ ಹೆಣ್ಣುಮಗಳು ವಿಕಾರರೂಪವಾಗಿ ಬೇವಿನ ಎಲೆಗಳನ್ನು ತಿನ್ನುತ್ತ ತೀವ್ರಗತಿಯಲ್ಲಿ ಇವನ ಕಡೆಗೆ ಧಾವಿಸಿ ಬರುತ್ತಾಳೆ. ಇವನು ತಪ್ಪಿಸಿಕೊಂಡು ಕುಣಿಯುತ್ತಾನೆ. ಹೆಣ್ಣುಮಗಳ ಮೈಯಲ್ಲಿ ‘ಅಮ್ಮ’ ಕಾಣಿಸಿಕೊಂಡಾಗ ಆವೇಶದಿಂದ ಗಂಡನ ಹತ್ತಿರ ಬಂದು ರಕ್ತ ಹರಿಯುತ್ತಿರುವ ಜಾಗಕ್ಕೆ ಬಾಯಿ ಹಚ್ಚಿ ರಕ್ತ ಹೀರುತ್ತಾಳೆ.

ಹೆಂಡತಿಯ ತಲೆಯ ಮೇಲಿನ ಗುಡಿಯನ್ನು ಕೆಳಗಿಳಿಸಿ ಮುಖಕ್ಕೆ ಪೋತರಾಜ ಮುಖವಾಡ ಹಾಕಿ ಕುಣಿಯುತ್ತ ಜನರ ಕಡೆಗೆ ಮೈ…ಕೈ…ಸವರಿಸುತ್ತ ತೋರಿಸುತ್ತಾನೆ. ಹೀಗೆ ತೋರಿಸಿದರೆ ಆ ವರ್ಷ ಮಕ್ಕಳಿಗೆ ಹುರುಕು ಕಜ್ಜಿಯ ಕಾಟ ಜಾಸ್ತಿ ಎಂದು ಜನರ ನಂಬಿಕೆ. ದೇವಿಗೆ ಕಾಣಿಕೆಯಾಗಿ ಕಾಳುಕಡ್ಡಿ ತಂದವರ ಮೊರವನ್ನು ಎತ್ತಿ ಜೋಳಿಗೆಯಲ್ಲಿ ಸುರವಿಕೊಂಡು ಅದರಲ್ಲಿ ಹಿಡಿಕಾಳು ಮತ್ತು ಅಮ್ಮನ ಭಂಡಾರ ಬೇವಿನ ತೊಪ್ಪಲು ಹಾಕಿ ಹಿಂತಿರುಗಿಸುತ್ತಾನೆ. ಭಕ್ತರಿಗೆ ಅಮ್ಮನ ಆಶೀರ್ವಾದ ಪಡೆಯಲು ಗುಡಿಯ ಬಾಗಿಲು ತೆರೆದಿರುತ್ತಾನೆ. ದೇವಿಯ ಆಶೀರ್ವಾದ ಪಡೆದ ಮೇಲೆ ಗುಡಿಯ ಮುಂದಿನ ಬಟ್ಟೆಯ ಪರದೆ ಹಾಕಿಬಿಡುತ್ತಾನೆ. ಭಕ್ತರಿಂದ ಸಂಗ್ರಹಿಸಿದ ಕಾಳು ಕಡಿ, ಅರಿವೆ ಅಂಚಡಿ, ಉಪ್ಪು ಇತರ ವಸ್ತುಗಳನ್ನು ಚೀಲಗಳಲ್ಲಿ ಹಾಕಿಕೊಂಡು ಮತ್ತೊಂದು ಕಡೆಗೆ ಹೊರಡುತ್ತಾರೆ.

ಪ್ರತಿ ಊರಿಗೆ ಹೋದಾಗಲೂ ಇಂತಿಂಥ ಒಡವೆಗಳನ್ನ ಇಂತಿಂಥಾ ಊರವರು ಕೊಟ್ಟರು ಎಂದು ಹೇಳಿ, ಅವರವರಿಗೆ ಒದಗಿದ್ದ ಕಷ್ಟ ಪರಿಹಾರವಾದ ಬಗೆಯನ್ನು ಹೊಗಳುತ್ತಾನೆ.

ಇದು ಗೌಡ್ರ ಮಲ್ಲವ್ವ ಮಾಡಿಸಿಕೊಟ್ಟಾಳ ಬೆಳ್ಳಿ ಬಟ್ಟಾಲ
ಇದು ಲಕ್ಕವ್ವ ಕೊಟ್ಟಾಳ ಬೆಳ್ಳಿ ಛತ್ರಿಕೀ
ಇದು ಗಂಗಾಬಾಯಿ ಕೊಟ್ಟಾಳ ಬೆಳ್ಳಿ ಕಣಬಟ್ಟಲಾ
ಇದು ಗೌರವ್ವ ಮಾಡಿಸಿಕೊಟ್ಟಾಳ ಬೆಳ್ಳಿ ನತ್ತೂ

ಹೀಗೆ ಅವನ ಹೊಗಳಿಕೆ ನಡೆಯುತ್ತದೆ. ಅವನಿಗೆ ಬರುವ ಭಿಕ್ಷೆ, ಹರಕೆ ಬಂದ ಮೇಲೆ ಮತ್ತೆ ಪೆಟ್ಟಿಗೆಯನ್ನು ಹೊತ್ತು ಮುಂದಿನ ಬೀದಿಗೆ ಹೋಗುತ್ತಾನೆ. ಈ ದೇವತೆ ಆಗಾಗ ಊರಿಗೆ ಬಂದು ಹೋಗುವುದರಿಂದ ರೋಗರುಜಿನ ದೂರವಾಗುತ್ತವೆ ಎಂದೇ ಜನ ನಂಬುತ್ತಾರೆ.

ದುರುಗ ಮುರುಗಿಯರು ಹಾಡುವ ಹಾಡುಗಳು ಈ ರೀತಿಯಾಗಿವೆ.

ಪಲ್ಲಾ ಪಲ್ಲಾನೇ ||
ಹೊರಗ ಬಾರಮ್ಮ ದುರಗಮ್ಮ
ಈಕೀ ಆಳಕಿ ಕೇಳ್ಕೋಳ್ರೀ
ದುರಗವ್ವಂ ಹಾಡತಾರ್ರೀ
ದುರಗವ್ವಲ್ಲ ಮರಗವ್ವ
ಒಳಗಿನ ಮಂದಿ ನುಂಗಾಕೀ
ಹೊರಗಿನ ಮಂದಿ ಹೊರುವಾಕೀ
ಕಟಗಿ ದುರುಗವ್ವಂತಾರ
ಕಟಗೀ ದುರುಗವ್ವೀಕೆಲ್ಲ
ಕಟಗೀ ಮ್ಯಾಲ ಹೆಣಗುರಾಸಾರೇ
ದುರುಗೆಮ್ಮಂದರ ಮಾರೆಮ್ಮ
ದುರುಗಿ ಬ್ಯಾನಿ ತರುವಾಕೀ
ಮಂದೀನೆಲ್ಲ ಒಯ್ಯಾಕೀ
ದುರುಗಮ್ಮ ಮಾರೆಮ್ಮಾಗ್ಯಾಳ
ಮಾರೆಮ್ಮ ಗುದ್ದೆಮ್ಮಾಗ್ಯಾಳ
ಗುದ್ದಮ್ಮ ಒದರಮ್ಮಾಗ್ಯಾಳ
ಬ್ಯಾನಿ ಬ್ಯಾಸರಿಕಿ ಹಾಕಾಕೀ
ಕೀಸರ ಬಾಸರ ಹಿಡಿಸಾಕೀ
ಭಕ್ತಿಯಿಂದ ಬೇಡ್ಕೊಂಡ್ರ
ಚಿತ್ತಕೊಟ್ಟು ನಡಕೊಂಡ್ರ
ಹರಕೀ ಅಕಿ ಕೊಡತಾಳ್ರೀ
ನಂಬಿದ ಭಗುತರ ಕಾಯಾಕೀ
ಓಣಿಗೆ ತನುವ ಕೊಡುವಾಕೀ
ಮಕ್ಕಳ ಮರಿಯ ಸಲುವಾಕೀ
ಮಾಯಕಾರತಿ ದುರಗಮ್ಮ
ಧರುಮ ಎಲ್ಲಿ ದಿನದಾಗ
ಕರಮವು ನಿತ್ಯ ನಡೆದೇತೀ
ಕರಮ ಬಿಟ್ಟು ನಡೆಯರೀ
ಧರಮ ಹಿಡಿದು ನಡೆಯರೀ
ನಿಂತ ಜನರು ಕೇಳ್ರೆವ್ವ
ಈಕೆಯ ಕಂಟಕ ತಿಳಿದಿಲ್ಲ
ಮೋಟ ಜನರಿಗೆ ಬುದ್ದಿಲ್ಲ
ಕುಂತರ ಸಣ್ಣಾಕಿ ದುರಗವ್ವ
ನಿಂತರ ಮುಗಿಲ ಮುಟ್ಟಾಕೀ
ಎದ್ದರ ಗಾಳಿ ಅನಿಸಾಳ
ನಡೆದರ ನವಿಲು ನಡೆದಂಗ
ಓದಿದ್ರ ಗಿಳಿಯು ಅನಿಸ್ಯಾಳ
ಬ್ಯಾಡ ಬ್ಯಾಡಂದ್ರ ಕೇಳದಲೆ
ಬ್ಯಾಡರ ಬೆನ್ನಿಗೆ ಬಿದ್ದಾಳ
ಮಾಯಕಾರತಿ ದುರಗಮ್ಮ

ಮೈಲವ್ವನಹಾಡು

ಬಲ್ಲವ ಬಲ್ಲಾನೆ ||
ಈಕೆ ನೋಡ್ರಿ ಮೈಲವ್ವ
ತೆಳಗಡಿ ನಾಡಾಗ ಹುಟ್ಟ್ಯಾಳ್ರೀ
ಐದು ಮಂದಿ ಅಕ್ಕತಂಗೇರು
ಮೈಲವ್ವ, ದ್ಯಾಮವ್ವ, ದುರಗವ್ವ
ಗುದ್ದವ್ವ, ಒದರವ್ವ ಎಂಬವರು
ಮೈಲವ್ವ ದ್ಯಾಮವ್ವ ಜೂಜಾಡಿ
ಮೈಲವ್ವ ಜಗಳಕ ಇಳಿದಾಳ್ರೀ
ಮಾಯಕಾರತಿ ಮೈಲವ್ವ
ಅಕ್ಕನ ಮಕ್ಕಳ ಕೊಂದಾಳ್ರೀ
ಅಕ್ಕನ ನಡವ ಮುರದಾಳ್ರೀ
ಸೀಯಾನ ಮೇಲೆ ಕೂಡ್ರಿಸ್ಯಾಳ್ರೀ
ಮಾದೇವ್ರಂತೇಲಿ ಹೋಗ್ಯಾಳ್ರೀ
ವರವ ಬೇಡಿ ಬಂದಾಳ್ರೀ
ಭಕ್ತರನೆಲ್ಲ ಸಲುವಾಕೀ
ಓಣಿಗೆ ತನುವ ಕೊಡುವಾಕಿ
ಮಾಯಕಾರತಿ ಮೈಲವ್ವ

ಬಸವಣ್ಣನಹಾಡು

ಬಲ್ಲವ ಬಲ್ಲಾನೆ ||
ಜೋಡ ಬಸವಣ್ಣ ಬಾ ಹೊರಗ
ಭಕ್ತರ ನಿಂಗಣ್ಣ ಕೊಟ್ಟಾನ
ನಿಪ್ಪಾಣಿ ನಾಡ ಬಲ್ಲದನ
ದೇವಿ ಕಾಟಕ ಕೊಟ್ಟಾನ
ಭೂಮಿ ಬಿತ್ತಿ ಸಲುಹವಾ
ಲೋಕಕೆ ಅನ್ನ ಹಾಕಾವಾ
ಮ್ಯಾಗಿನ ಶಿವಗಿಂತ ಹಿರಿಯಾವಾ
ಲೋಕಕೆ ಬಂದ ಬಸವಣ್ಣ
ಏರಿಗೆ ಹೆಗಲೂ ಕೊಡತಾನ
ಇಳುವಿಗೆ ಹೆಗಲೂ ಕೊಡತಾನ
ಇವನಿಂದ ಬೆಳೆಸು ಕಂಡೇವ್ರೀ
ಇವನ ಉಪ್ಪು ಉಣತೇವ್ರೀ
ನೆರೆಮನ ಜಗಳ ವರಮನಿಗೆ
ವರಮನಿ ಜಗಳ ನೆರಮನಿಗೆ
ನಾವು ದುಡಿಯುವುದು ದುಡಿತೇವ್ರೀ
ಬಸವನ ಮುಂದೆ ನಾವೇಟೂ
ಜೋಡು ಕೈಗಳ ಮುಗಿದೇವು
ಧರುಮದ ಬೀಜ ಬೆಳೆಯಲೀ
ಕರುಮದ ಬೀಜ ಅಳಿಯಲೀ
ಶಂಬೋ ಶಿವನೆ ಬಸವಣ್ಣ
ಅಂಗದ್ವಸ್ತರ ಇದ್ದವರು
ಲಿಂದ್ವಸ್ತರ ಇದ್ದವರು
ಬಸವಗ ನೆಳ್ಳ ಮಾಡ್ಸ್ಯಾರ
ಬಸವನಿಲ್ಲದ ಲೋಕೇನ್ರೀ
ಬಸವನಿಂದಲೇ ಭೂಲೋಕ
ಶರಣೊ ಶರಣೋ ಶಿವನೆ ಬಸವ

ಹೀಗೆ ಹಾಡುತ್ತಾ ಹಾಡುತ್ತ ಅವನು ನಾಡಿನ ಕಾಲಜ್ಞಾನದಲ್ಲಿ ಇಳಿಯುವನು. ವರುಷದ ಮಳೆ ಬೆಳೆಗಳನ್ನೂ ರೋಗ ರುಜಿನಾದಿಗಳನ್ನೂ ಪೀಡೆ ಪಿಡುಗಗಳನ್ನೂ ಕಲಿಕಾಲವನ್ನೂ ಮನಂಬುಗುವಂತೆ ತನ್ನದಾದ ಒಂದು ಶೈಲಿಯಲ್ಲಿ ಸಾರುವನು. ಹಳ್ಳಿಗರು ಅವನ ಕಾಲಜ್ಞಾ ವನ್ನು ಕೇಳಿ ಪೂರ್ಣ ನಂಬಿ ಭಕ್ತಿಯಿಂದ ಕಾಂಚಾಣ ಕೊಡಲು ಅವನು ಕೊನೆಗೆ ಹೇಳುವುದು ಹರಕೆ :

ಹರಕೆ

ಬಳ್ಳಾರಿ ದುರಗಮ್ಮ, ಚಿಂಚಲಿ ಮಾಯಮ್ಮ ಏಳುಕೊಳ್ಳದ ಎಲ್ಲಮ್ಮ, ಸತ್ಯಮ್ಮ, ಹುಲಿಗೆಮ್ಮ ನಿಮಗೆ ಮುಟ್ಟಲಿ ಹರಕೆ. ಶ್ರೀಶೈಲ ಮಲ್ಲಿಕಾರ್ಜುನ, ಕಲ್ಯಾಣ ಬಸವಣ್ಣ, ಕಲಬುರ್ಗಿ ಬಸವಣ್ಣ, ಉಳವಿ ಬಸವಣ್ಣ, ಬಾಗೋಡಿ ಬಸವಣ್ಣ, ಕೂಡಲ ಸಂಗಮನಾಥ ನಿಮಗೆ ಮುಟ್ಟಲಿ ಹರಕೆ. ಗೂಡೆಚಿ ರಣ್ಣ, ಮುನವಳ್ಳಿ ಪಂಚಲಿಂಗ, ಸೋಗಲದ ಸೋಮಲಿಂಗ, ಲೋಕನಾಥ, ಭೂತನಾಥ, ಪಟ್ಟದಕಲ್ಲಿನ ವಿರೂಪಾಕ್ಷ, ಐಹೊಳೆಯ ಪಂಚಲಿಂಗ, ಹಂಪಿಯ ವಿರೂಪಾಕ್ಷ, ಮಾಕೂಟ ಮಾಕೂಟಲಿಂಗ ನಿಮಗೆ ಮುಟ್ಟಲಿ ಹರಕೆ. ಸರುವ ದೇವರಿಗೆ ಮುಟ್ಟಲಿ ಹರಕೆ…

“ಬಾಳಿಯ ವನದಲ್ಲಿ ತೊಟ್ಟಿಲಾಗಿ, ಲಿಂಬಿಯ ವನದಲ್ಲಿ ತೊಟ್ಟಿಲಾಗಿ, ತೆಂಗಿನ ವನದಲ್ಲಿ  ತೊಟ್ಟಿಲಾಗಿ ಸಂತಾನವಾಗಲಿ ಮಕ್ಕಳ ಸುಖವಿರಲಿ, ಬಳಗದ ಬಳ್ಳಿ ಹಬ್ಬಲಿ. ಹೆಚ್ಚಳಾಗಲಿ,. ಧರುಮದ ಬೀಜ ಬಿತ್ತಲಿ. ಕರುಮದ ಬೀಜ ಅಳಿಯಲಿ…”

“ಅಳ್ಳೆ ಬೆಳ್ಳಿಯಾಗಿ, ಬೆಳ್ಳಿ ಬೆಟ್ಟವಾಗಿ, ಮಕ್ಕಳು ಬಲವಾಗಿ, ರೊಕ್ಕ ಘನವಾಗಿ, ಚಿನ್ನದ ಗಂಡು ಮಕ್ಕಳಾಗಿ, ರನ್ನದ ಹೆಣ್ಣು ಮಕ್ಕಳಾಗಿ, ಸಾಲು ತೊಟ್ಟಿಲದಾಗ, ಸಂತಾನ ತೂಗಲಿ, ಯವನ ಕಾಲಬಂದರ ದೇವನ ಕಾಲ ಕೊಡು, ಬಳ್ಳಾರಿ ದುರಗಮ್ಮ ಸುಖಕೊಡು. ಕೆಂಪಯ್ಯ ಸ್ವಾಮಿ ಬಲಕೊಡು. ಕಾಂಚಾಣ ಕೊಟ್ಟವರಿಗೆ ಸಂರಕ್ಷಣೆ ಕೊಡು. ಮಳಿ ನಿನ್ನದು, ಬೆಳೆ ನಿನ್ನದು. ಬಯಲು ನಿನ್ನದು, ಗಾಳಿ ನಿನ್ನದು, ಬಿತ್ತಿದ್ದು ನಿನ್ನದು, ಉತ್ತಿದ್ದು ನಿನ್ನದು. ಇದ್ದದ್ದೂ ನಿನ್ನದು; ಎಲ್ಲವೂ ನಿನ್ನದು ಮುಕ್ಕಣ್ಣ ಮಹಾದೇವ ಸಂರಕ್ಷಣೆ ಕೊಡು… ಎಂದು ಘಂಟೆಯ ಬಾರಿಸುತ್ತಾ ಹರಕೆಯ ಮುಗಿಸುವನು. ಹರಕೆ ಮುಗಿಯಿತು. ದುರಗಮ್ಮನ ಪೂಜಾವಿಧಾನ ಮುಗಿಯಿತು; ದುರಗಮುರಗಿಯ ಆಟಪಾಟ ಮುಗಿದವು. ಸಂಗಾತಿಯು ಡೊಳ್ಳು ಬಾರಿಸಲು ನಿಲ್ಲಿಸುವಳು. ಹರಕೆ ಮುಗಿಯಲು ದುರಗಮುರಗಿಯು ತನಗೆ ಬಂದ ದಾನ ಮುಡುಪು ಮೊದಲಾದವುಗಳನ್ನು ಕಟ್ಟಿಕೊಂಡು ಸಂಗಾತಿಗೆ ಪೆಟ್ಟಿಗೆಯ ಗುಡಿಯನ್ನು ಹೊರಿಸಿ ಡೊಳ್ಳು ಬಡಿಯುತ್ತ ಸೇರುವುದು ಮುಂದಿನ ಓಣಿ.

ದುರುಗ ಮುರಗಿಯರು ಹೊತ್ತು ತರುವ ದೇವತೆಗಳಿಗೂ ಸಮುದಾಯಕ್ಕೂ ಸಮಾಜಕ್ಕೂ ಆಂತರಿಕ ಸಂಬಂಧವಿದೆ. ಈ ದೇವತೆಗಳು ಸಂಚಾರಿ ದೇವತೆಗಳು ಸದಾ ಉತ್ಸವಮೂರ್ತಿ ಗಳಾಗಿದ್ದು ಮೂಲದಲ್ಲಿ ಪ್ರಾದೇಶಿಕವಾಗಿ ಪ್ರಸಿದ್ಧವಾದ ದೇವಿಯ ಅಕ್ಕತಂಗಿಯರಾಗಿ ರುತ್ತಾರೆ. ಹೊತ್ತು ತಿರುಗುವ ಪೂಜಾರಿಗಳು ಆರಾಧಿಸುವ ಜನವರ್ಗ ದೈವದವರೆಲ್ಲರೂ ಅಮ್ಮನ ಮಕ್ಕಳೆಂದೇ ಪರಿಗಣಿತವಾಗುವುದರ ಮೂಲಕ ಸಮುದಾಯದ ಮಾತೃಪ್ರಾಧಾನ್ಯತೆ ಯನ್ನು ಬಿಂಬಿಸುತ್ತದೆ.

ದುರುಗ ಮುರಗಿಯರ ಮೂಲಸ್ಥಾನವು ಕನ್ನಡ ತೆಲುಗು ನಾಡುಗಳ ಗಡಿಸೀಮೆಯಾಗಿದೆ. ಕಿನ್ನಾಳ, ಕೊಪ್ಪಳ, ಬಳ್ಳಾರಿ, ಹೊಸಪೇಟೆ, ಸುರಪುರಗಳಲ್ಲಿ ಈ ಜನರು ಹೆಚ್ಚಾಗಿರುವರು. ಇವರು ತಮ್ಮ ಪೂರ್ವಜರು ಕನ್ನಡ ನಾಡಿನ ಗುಡೂರು, ಜಾಲಾಪುರವನ್ನು ಬಿಟ್ಟು ಎಂದೋ ಅಲೆದಾಡುತ್ತಾ ಹೊಟ್ಟೆಗಾಗಿ ಗಡಿನಾಡನ್ನು ಸೇರಿದರೆಂದು ಹೇಳುವರು. ಇತ್ತೀಚೆಗೆ ಈ ಜನರಲ್ಲಿ ಕೆಲವರು ಬಂಕಾಪೂರ, ವಾತನಹಳ್ಳಿ, ಅಕ್ಕಿ ಆಲೂರ, ನರೇಗಲ್ಲ ಮೊದಲಾದ ಮಲೆನಾಡ ಹಳ್ಳಿಗಳಲ್ಲಿಯೂ ಕಾಣಸಿಗುತ್ತಾರೆ.

ಅಮಾಯಕರಾದ ದುರುಗ ಮುರುಗಿಯವರು ಮುಗ್ಧರು, ಬೋಳೆ ಸ್ವಭಾವದ ನಿರುಪದ್ರವಿ ಗಳು, ಮೋಸಗಾರರಲ್ಲ, ಕಪಟಿಗಳಲ್ಲ. ಊರ ಮಂದಿಯನ್ನು ರೋಗ ರುಜಿನಗಳಿಂದ ಕಾಯುವವರಾಗಿರುವುದರಿಂದ, ಊರ ಜನರಿಗೆ ಬಲುಬೇಕಾದವರಾಗಿದ್ದು, ಪ್ರಿಯರಾಗುತ್ತಾರೆ. ದುರುಗ ಮುರುಗಿಯರ ಸತ್ವ, ಸಾಹಸ, ಕಲೆ, ಮುಗ್ಧತೆ, ವಿಶ್ವಾಸ, ನಂಬಿಕೆ, ಪ್ರಾಮಾಣಿಕತೆ, ಸಹನೆ ಮೊದಲಾದವುಗಳು ಮಾನವ ಸಮುದಾಯ ಸುಖ ಮತ್ತು ನೆಮ್ಮದಿಯಿಂದ ಬದುಕಲು ಮಾರ್ಗದರ್ಶಿಯಾಗಿವೆ. ದುರುಗ ಮುರುಗಿಯರಲ್ಲಿರುವ ಕೆಲವು ಅನಿಷ್ಟ ಪದ್ಧತಿಗಳನ್ನು ತೊಡೆದುಹಾಕಲು ಸಂಘ, ಸಂಸ್ಥೆ ಹಾಗೂ ಸರಕಾರಗಳು ಪ್ರಯತ್ನಿಸಬೇಕಾಗಿದೆ. ಆ ಮುಖಾಂತರ ಅವರನ್ನು ಆಧುನಿಕ ಜಗತ್ತಿಗೆ ಸಿದ್ಧಗೊಳಿಸುವ ಕ್ರಿಯೆಯಲ್ಲಿ ತೊಡಗಬೇಕಾಗಿದೆ. ದುರುಗ ಮುರುಗಿಯರ ಆರ್ಥಿಕ ಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಮೊದಲೆಲ್ಲಾ ಅವರಿಗೆ ಸಾಕಷ್ಟು ಕಾಳು ಕಡಿ, ಹಳೆಯ ಬಟ್ಟೆ, ದೇವತೆಗೆ ಬೆಳ್ಳಿಯ ವಸ್ತುಗಳನ್ನು ಹಾಕುತ್ತಿದ್ದರು. ಆ ಮುಖಾಂತರ ಅವರ ಆರ್ಥಿಕ ಸ್ಥಿತಿ ಸುಧಾರಿಸುತ್ತಿತ್ತು. ಇತ್ತೀಚೆಗೆ ಅವುಗಳೆಲ್ಲವು ಕಡಿಮೆಯಾ ಗುತ್ತಿವೆ. ಕೆಲವೆಡೆ ಏನನ್ನೂ ಕಾಣಿಕೆ ಹಾಕದೇ ಕಳುಹಿಸುವ ಸ್ಥಿತಿಗಳಿವೆ. ಹೊಟ್ಟೆ ತುಂಬಿಸಿ ಕೊಳ್ಳುವುದಕ್ಕಾಗಿ ಕಾರ್ಖಾನೆಗಳಲ್ಲಿ ಕೂಲಿಕೆಲಸ, ಕಟ್ಟಡ ಕೆಲಸ, ಸಣ್ಣಪುಟ್ಟ ವ್ಯಾಪಾರ, ಕೂಲಿ, ಹಮಾಲಿ ಕೆಲಸ, ಹೋಟೆಲಿನಲ್ಲಿ ಕಪ್ಪು ಬಸಿ ತೊಳೆಯುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಅಲೆಮಾರಿಗಳ ಚಾರಿತ್ರಿಕ ಬೆಳವಣಿಗೆ ಎಷ್ಟು ಸಂಕೀರ್ಣವೋ ಅವುಗಳ ಅಭಿವೃದ್ದಿ ಸಾಧಿಸುವ ಮಾರ್ಗವೂ ಅಷ್ಟೇ ಸಂಕೀರ್ಣವಾಗಿರುತ್ತದೆ. ದುರುಗಮುರುಗಿ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳೆಂದರೆ ಬಡತನ, ವಸತಿ, ಮೀಸಲಾತಿ, ಆಹಾರ ಸಮಸ್ಯೆ, ಸರಕಾರದ ಯೋಜನೆಗಳ ಕುರಿತ ಅಜ್ಞಾನ, ಶೈಕ್ಷಣಿಕ ಸಮಸ್ಯೆ ಇತ್ಯಾದಿಗಳು. ಈ ಎಲ್ಲಾ ಸಮಸ್ಯೆಗಳನ್ನು ಹೊಂದಿರುವ ಇವರು ಸಮಾಜದ ಚಾರಿತ್ರಿಕ ವಿಕಾಸದ ಯಾವುದೋ ಹಂತದಲ್ಲಿ ನಿಶ್ಚಿತ ಆರ್ಥಿಕ ಸಂಪನ್ಮೂಲಗಳನ್ನು ಕಳೆದುಕೊಂಡು ಶಾಶ್ವತವಾಗಿ ಅಲೆಮಾರಿ ಗಳಾದ ದುರುಗಮುರುಗಿಯರ ಸಂಕೀರ್ಣ ಬದುಕು ಮೇಲಿನ ಅನೇಕ ಜಟಿಲ ಸಮಸ್ಯೆಗಳಿಗೆ ಕಾರಣವಾಗಿದೆ. ವರ್ತಮಾನದಲ್ಲಿ ಸರಕಾರ ರೂಪಿಸುವ ಯಾವ ಯೋಜನೆಗಳೂ ಸಾರ್ಥಕ ರೀತಿಯಲ್ಲಿ ಇವರಿಗೆ ತಲುಪುತ್ತಿಲ್ಲ. ಇದಕ್ಕೆ ಕಾರಣ ಶಿಕ್ಷಣದ ಕೊರತೆ, ಸರಕಾರ ಹಾಗೂ ಇನ್ನಿತರೆ ಸಾಮಾಜಿಕ ಸಂಘಟನೆಗಳು ಇವರ ವಿಕಾಸ ಯೋಜನೆಯಡಿ ಗಮನಹರಿಸದಿ ರುವುದು. ಜೊತೆಗೆ ಸರಕಾರದ ಯೋಜನೆಗಳು ಪ್ರತಿ ಹಂತದಲ್ಲೂ ರಾಜಕೀಯ ಮಧ್ಯೆ ಪ್ರವೇಶದಿಂದಾಗಿ, ಇಲ್ಲವೆ ಅನುಷ್ಠಾನದಲ್ಲಿರುವ ಲೋಪಗಳಿಂದಾಗಿ ಈ ಬಗೆಯ ಸಮುದಾಯಗಳನ್ನು ತಲುಪುತ್ತಿಲ್ಲ. ಇವರಿಗೆ ಊಟ, ವಸತಿ, ಸೌಲಭ್ಯವುಳ್ಳ ಶಾಲೆಗಳನ್ನು ನಿರ್ಮಿಸಿ, ಅವರ ಶೈಕ್ಷಣಿಕ ಹಾಗೂ ವೃತ್ತಿಗಳ ಮೇಲೆ ಗ್ರಾಮೋದ್ಯೋಗ ಅಭಿವೃದ್ದಿ ಯೋಜನೆಗಳನ್ನು ರೂಪಿಸುವ ಅವಶ್ಯಕತೆಯಿದೆ. ಜೊತೆಗೆ ಸಂಕೀರ್ಣ ಜೀವನ ವಿಧಾನಗಳಿಗೆ ತಲುಪುವಂತಹ ತಜ್ಞಯೋಜನೆಗಳಾಗಿದ್ದು, ಅನುಷ್ಠಾನದ ವಿಧಾನದಲ್ಲಿ ಮಾತೃಹೃದಯದ ಮನಸ್ಸಿರಬೇಕಾಗಿರುತ್ತದೆ. ಏಕೆಂದರೆ ಆಧುನಿಕ ಜಗತ್ತಿಗೆ ಬೇಕಾದ ವೇಗ ಮತ್ತು ಪ್ರತಿಭಟಿಸುವ ಧ್ವನಿಗಳು ಇಂತಹ ಅನೇಕ ಸಮುದಾಯಗಳಿಗಿಲ್ಲ.

ಆಧಾರಗ್ರಂಥಗಳು

೧. ಡಾ. ಬಿ.ಎಸ್. ಗದ್ದಗಿಮಠ, ೧೯೮೮, ಗದ್ದಗಿಮಠರ ಬರಹಗಳು, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

೨. ಡಾ. ಗೀತಾನಾಗಭೂಷಣ, ೧೯೯೩, ದುರುಗ ಮುರುಗಿಯರ ಸಂಸ್ಕೃತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

೩. ಡಾ. ಚಂದ್ರಶೇಖರ ಕಂಬಾರ (ಸಂ), ೧೯೯೦, ಕನ್ನಡ ಜಾನಪದ ವಿಶ್ವಕೋಶ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

೪. ಡಾ. ಹಿ.ಚಿ. ಬೋರಲಿಂಗಯ್ಯ (ಸಂ), ೧೯೯೭, ಕರ್ನಾಟಕ ಜನಪದ ಕಲೆಗಳ ಕೋಶ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೫. ಪ್ರೊ. ಎಚ್.ಜೆ. ಲಕ್ಕಪ್ಪಗೌಡ (ಸಂ), ೨೦೦೦, ಕರ್ನಾಟಕದ ಬುಡಕಟ್ಟುಗಳು (ಸಂಪುಟ), ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು.

೬. ಡಾ. ಹರಿಲಾಲ್.ಕೆ. ಪವಾರ್, ೧೯೯೩, ಪುರಾತನ ಬದುಕಿನ ಪಳೆಯುಳಿಕೆ ದುರುಗ ಮುರುಗಿಯರು, (ಸಂಯುಕ್ತ ಕರ್ನಾಟಕ, ಸಾಪ್ತಾಹಿಕ ಸೌರಭ, ಭಾನುವಾರ ೨೫.೭.೧೯೯೩) ಬೆಂಗಳೂರು.

* * *