‘ಬೇಡ’ ಎಂಬ ಪದವು ‘ವ್ಯಾಧ’ ಎಂಬ ಸಂಸ್ಕೃತದ ಪದದ ಸಮನಾರ್ಥವಾಗಿದೆ. ಬೇಡ ಅಥವಾ ವ್ಯಾಧ ಎಂದರೆ ಬೇಟೆಗಾರ ಎಂದು ಅರ್ಥ. ಕರ್ನಾಟಕದಲ್ಲಿ ನಾಯಕ ಎಂಬ ಪದಕ್ಕೆ ೧೭ ಪರ‍್ಯಾಯವಾದ ಪದಗಳಿವೆ. ಅವುಗಳಲ್ಲಿ ಬೇಡ, ಬೇಡರ, ತಳವಾರ, ಕಿರಾತಕ, ಶಬರ, ಪುಳಿಂದ, ವಾಲ್ಮೀಕಿ, ವಾಲ್ಮೀಕಿ ಮಕ್ಕಳು, ಬಾರ್‌ಕಿ, ವೇದನ, ಕನ್ನಯ್ಯ ಕುಲ, ಪಾಳೆಯಗಾರರು ಮುಂತಾದವುಗಳು. ಈ ಹೆಸರುಗಳಿಗೆ ಸಂಬಂಧಿಸಿದಂತೆ ಒಂದೊಂದು ಕತೆಗಳಿವೆ (ಅನುಬಂಧ-೧) ಢಂಗ ಡಿ.ಬಿ. ಅವರ ‘ಜನಾಂಗ ಪರಿಚಯ’ (೧೯೮೮, ಪು. ೧-೭)ದಲ್ಲಿ ಇವರಿಗೆ ಸಂಬಂಧಿಸಿದ ಕತೆಗಳನ್ನು ಕೊಟ್ಟಿದ್ದಾರೆ.

‘ಬೇಡರ’ ಎಂಬುದು ಉರ್ದು ಪದ. “೧೯೭೦ರಲ್ಲಿ ಆದಿಲ್‌ಶಾಹಿಯ ಬಳಿ ಬೇಡರು ತಮ್ಮ ಅಲ್ಪ ಪ್ರಮಾಣದ ಸೈನ್ಯದಿಂದ ಮೊಗಲ್ ಸೈನ್ಯವನ್ನು ಧೈರ್ಯದಿಂದ, ಸಾಹಸದಿಂದ ಎದುರಿಸಿದ್ದನ್ನು ಕಂಡು ಔರಂಗಜೇಬನು ‘ಏ ಕಿಸಿಸೆ ನಹಿ ಡರೆನೇ ವಾಲೆ ಲೋಗ್ “ಬೇಡರ್ ಲೋಗ್” ಎಂದು ನುಡಿದನು (ಅದೇ. ೧೯೮೮, ಪು. ೧). ಆದಕಾರಣ ಉರ್ದುವಿನಲ್ಲಿ ‘ಬೇಡರ್’ ಎಂದೇ ಇವರನ್ನು ಕರೆಯುತ್ತಾರೆ.

ರಾಮಾಯಣವನ್ನು ರಚಿಸಿದ ಆದಿಕವಿ ವಾಲ್ಮೀಕಿಯು ಬೇಡರವನು. ಆದ್ದರಿಂದಿವರು ತಮ್ಮನ್ನು ವಾಲ್ಮೀಕಿ ಅಥವಾ ‘ವಾಲ್ಮೀಕಿ ಮಕ್ಕಳು’ ಎಂದು ಕರೆದುಕೊಳ್ಳುತ್ತಾರೆ. ಅಂತೆಯೇ ೬೩ ಶಿವಭಕ್ತರಲ್ಲಿ ಒಬ್ಬನಾದ ಬೇಡರ ಕಣ್ಣಪ್ಪನನ್ನು ತಮ್ಮ ಜಾತಿಯವನೇ ಎಂದು ಅವನ ಹೆಸರನ್ನೇ ತಮ್ಮ ಕುಲಕ್ಕಿಟ್ಟುಕೊಂಡು ‘ಕನ್ನಯ್ಯನ ಮಕ್ಕಳು’ ಎಂದು ಕರೆದುಕೊಳ್ಳುತ್ತಾರೆ.

ಸದಾಸುಸಜ್ಜಿತ ಸೈನ್ಯವನ್ನು ಹೊಂದಿ ದಂಡಿನೊಡನೆ ಪಾಳವನ್ನು ಹಾಕಿ ಇಳಿದುಕೊಂಡು ಕದನಕ್ಕೆ ಸಿದ್ಧವಾಗಿರತಕ್ಕವರಿಗೆ ಪಾಳೆಯಗಾರರೆಂದು (ಪುಟ್ಟಣ್ಣ ಎಂ.ಎಸ್., ೧೯೨೪, ಪು. ೧) ಕರೆಯುತ್ತಾರೆ. ಪಾಳೆಯಗಾರರಲ್ಲಿ ಬೇಡರ ಸಂಖ್ಯೆ ಹೆಚ್ಚಾಗಿರುವ ಕಾರಣ ಇವರು ತಮ್ಮನ್ನು ‘ಪಾಳೆಯಗಾರರು’ ಎಂದು ಕರೆದುಕೊಂಡಿರಬೇಕು. ವಿಜಯನಗರ ಸಾಮ್ರಾಜ್ಯಕ್ಕಿಂತ ಹಿಂದೆಯೇ ಪಾಳೆಯಗಾರರ ಮನೆತನಗಳಿದ್ದರೂ ಈ ಕಾಲದಲ್ಲಿಯೇ ಇವರು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡರು. ರಕ್ಕಸ-ತಂಗಡಿ ಕದನದ ನಂತರ ಸ್ವತಂತ್ರವಾಗಿ ಪಾಳೆಯಪಟ್ಟುಗಳಲ್ಲಿ ಆಳ್ವಿಕೆ ನಡೆಸಿದರು. ಬ್ರಿಟಿಷರ ಆಗಮನದಿಂದ ಇವರ ಅಧಿಕಾರ ಮೊಟಕಾಯಿತು.

‘ನಾಯಕ’ ಎಂಬ ಪದವನ್ನು ಕುರಿತು ಚಿತ್ರಲಿಂಗಯ್ಯ, ಎಂ.ವಿ. ಅವರು ವಿವರಣಾತ್ಮಕ ವಾದ ಮಾಹಿತಿ ಒದಗಿಸಿದ್ದಾರೆ (ಇತಿಹಾಸ ಚಂದ್ರಿಕೆ, ಪು. ೮). ‘ನಾಯಕಾಚಾರ್ಯ’, ‘ಶ್ರೀಮನ್ಮಹಾನಾಯಕಾಚಾರ್ಯ’, ‘ನಾಯಕ ನಾರಾಯಣ’, ‘ನಾಯಕ ಶಿರೋಮಣಿ’, ‘ನಾಯಕ ಶಿಖಾಮಣಿ’, ‘ನಾಯಕಮಣಿ’ ಮುಂತಾದ ಬಿರುದುಗಳನ್ನು ಪಡೆದುಕೊಂಡಿದ್ದ ಬೇಡ ಜನಾಂಗದ ಪಾಳೆಗಾರರು ತಮ್ಮನ್ನು ‘ನಾಯಕ’ ಜಾತಿಯವರು ಎಂದು ಅರ್ಥ ಬರುವಂತೆ ಕರೆದುಕೊಂಡಿದ್ದಾರೆ. ಕ್ರಿ.ಶ. ೯ನೆಯ ಶತಮಾನದಲ್ಲಿ ಮೊಟ್ಟ ಮೊದಲು ಕಾಣಿಸಿಕೊಳ್ಳುವ ‘ನಾಯಕ’ ಎಂಬ ಪದ ಜಾತಿಸೂಚಕವಲ್ಲ, ಗೌರವ ಸೂಚಕ ಅಥವಾ ಅಧಿಕಾರ ಸೂಚಕ ಪದ. ನಂತರ ಕನ್ನಡನಾಡಿನ ಚರಿತ್ರೆಯಲ್ಲಿ ಬೇಡರ ನಿರಂತರ ಪ್ರಸಿದ್ದಿ ಯಿಂದಾಗಿ ಅವರ ಪಾಲಿಗೆ ‘ನಾಯಕ’ ಪದವು ಜಾತಿಸೂಚಕ (ಅದೇ. ಪು. ೮) ಶಬ್ಧವಾಗಿದೆ. ‘ನಾಯಕ’ ಎಂಬ ಉಪನಾಮವು ಬೇಡರ ಹೆಸರಿನ ಕೊನೆಯಲ್ಲಿ ಬರುವುದಕ್ಕಿಂತ ಪೂರ್ವದಲ್ಲಿ ‘ಬೋವ / ಬೋಯ ‘ಬೋಯಿ’ ಎಂಬ ಉಪನಾಮಗಳು ಬಳಕೆಯಲ್ಲಿದ್ದುವು (ಅದೇ. ಪು. ೧-೨) ತೆಲುಗಿನಲ್ಲಿ ಇಂದಿಗೂ ಬೇಡರನ್ನು ‘ಬಾಯೊಡ / ಬಾಯೋಳ್ಳು’ ಎಂದು ಕರೆಯುತ್ತಾರೆ.

ಮಹಾಕಾವ್ಯಗಳಲ್ಲಿ ಮತ್ತು ಪುರಾಣಗಳಲ್ಲಿ ವಾಲ್ಮೀಕಿ, ಬೇಡರ ಕಣ್ಣಪ್ಪ, ಶಬರ, ಶಬರಿ, ಏಕಲವ್ಯ, ಕಿರಾತ, ಧರ್ಮವ್ಯಾಧ, ಮೂಗನಾಯಕ ಇವರೆಲ್ಲ ಬೇಡ ಜನಾಂಗಕ್ಕೆ ಸೇರಿದವರು ಎಂದು ಹೇಳುವ ಕಥೆಗಳು ದೊರೆಯುತ್ತವೆ. ಕರ್ನಾಟಕದ ಇತಿಹಾಸದ ಉದ್ದಕ್ಕೂ ಬೇಡರ ಧೈರ್ಯ, ಸಾಹಸದ ವರ್ಣನೆ ಕಂಡುಬರುತ್ತದೆ. Bichanman ಅವರು ತಮ್ಮ ಕೃತಿಯಲ್ಲಿ ಬನವಾಸಿಯ ಕದಂಬರು ಬೇಡರ ಜಾತಿಗೆ ಸೇರಿದವರೆಂದು ಅಭಿಪ್ರಾಯಪಟ್ಟಿದ್ದಾರೆ (ಉದ್ಧ್ಯತ : ಅನಂತಕೃಷ್ಣ, ಎಲ್.ಕೆ., ೧೯೮೮, ಪು. ೨೦೦).

ಅರಣ್ಯದಲ್ಲಿ ತಮ್ಮದೇ ಆದ ಸ್ವತಂತ್ರ ಗಣರಾಜ್ಯಗಳನ್ನು ಕಟ್ಟಿಕೊಂಡು ಆಳ್ವಿಕೆ ನಡೆಸುತ್ತಿದ್ದ ಬೇಡರು ಯುದ್ಧ ಕಾಲದಲ್ಲಿ ಮಾತ್ರ ರಾಜರಿಗೆ ಸೈನಿಕ ಸಹಾಯವನ್ನು ನೀಡುತ್ತಿದ್ದ ಉಲ್ಲೇಖ ದೊರೆಯುತ್ತದೆ. ಕರ್ನಾಟಕ ಚರಿತ್ರೆಯಲ್ಲಿ ‘ಕರ್ನಾಟಕ ಸೈನ್ಯ’ ಎಂದು ಕರೆಸಿ ಕೊಳ್ಳುತ್ತಿದ್ದ ಸೈನ್ಯದಲ್ಲಿ ಬೇಡರೇ ಹೆಚ್ಚು ಸಂಖ್ಯೆಯಲ್ಲಿದ್ದರು.

ವಿಜಯನಗರ ಸಾಮ್ರಾಜ್ಯ ಪೂರ್ವದಲ್ಲಿ ಅಸ್ತಿತ್ವದಲ್ಲಿದ್ದ ಕಂಪಿಲರಾಯ ಮತ್ತು ಕುಮಾರರಾಮ ಬೇಡರ ಜಾತಿಯವರು. ಪಾಂಚಾಳಗಂಗನ ಚೆನ್ನರಾಮನ ಸಾಂಗತ್ಯದಲ್ಲಿ ಇವರು ಬೇಡರೇ ಎಂಬುದು ಸ್ಪಷ್ಟವಾಗುತ್ತದೆ. ಕುಮಾರರಾಮನ ತಾತನಾದ ಪೂವಾಲಿ ಕುಲದ ಮುಮ್ಮಡಿ ಸಿಂಗನು ಒಬ್ಬ ಶಬರ ನಾಯಕನೆಂದೂ ಹೇಳಿದೆ (ವರದರಾಜರಾವ್ ಜೆ., ೧೯೬೬, ಪು. ೭೫, ೧೩-೧೪). ಕುಮಾರರಾಮನ ತಾಯಿ ಹರಿಯಾಲದೇವಿಯು ಗುಜ್ಜಲ ವಂಶದ ರಾಜಕುಮಾರಿ ಎಂದು ಹೇಳಲಾಗಿದೆ. ಊರ ನಾಯಕರಲ್ಲಿ ಇಂದಿಗೂ ಗುಜ್ಜಲರು ಎಂಬ ಬೆಡಗಿದೆ ಮತ್ತು ಮ್ಯಾಸನಾಯಕರಲ್ಲಿಯೂ ಪುವ್ವಲರು ಎಂಬ ಬೆಡಗು ಇದೆ.

ವಿಜಯನಗರ ಕಾಲದಲ್ಲಿ ಬೇಡರು ಸೈನಿಕ ವ್ಯವಸ್ಥೆಯಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದರು. ವಿಜಯನಗರದ ದೊರೆಗಳು ತಮ್ಮ ಸೈನ್ಯದಲ್ಲಿ ಹೆಚ್ಚಾಗಿ ಬೇಡರನ್ನೇ ನೇಮಿಸಿಕೊಳ್ಳುತ್ತಿದ್ದರು. ಆಯಕಟ್ಟಿನ ಸ್ಥಳಗಳಲ್ಲಿ ಪಾಳೆಯಗಾರರನ್ನಾಗಿ ನೇಮಿಸಿ ಪಾಳೆಯ ಪಟ್ಟುಗಳನ್ನು ನೀಡಿ ಅವರಿಂದ ವರ್ಷಕ್ಕೆ ಇಂತಿಷ್ಟು ಎಂದು ಹಣವನ್ನು ಅಥವಾ ಸೈನಿಕ ಸಹಾಯವನ್ನು ಪಡೆದುಕೊಳ್ಳುತ್ತಿದ್ದರು. ವಿಜಯನಗರದ ಅವನತಿಯ ನಂತರ ಜರಿಮಲೆ ದುರ್ಗ, ಗುಡೇಕೋಟಿ, ಹರಪನಹಳ್ಳಿ, ಚಿತ್ರದುರ್ಗದ ಪಾಳೆಯಗಾರರು ತಮ್ಮ ಸ್ವತಂತ್ರವನ್ನು ಘೋಷಿಸಿಕೊಂಡರು.

ಹೈದರ್ ಮತ್ತು ಟಿಪ್ಪುಸುಲ್ತಾನರು ಸಹ ತಮ್ಮ ಸೈನ್ಯದಲ್ಲಿ ಬೇಡರನ್ನು ನೇಮಿಸಿ ಕೊಂಡಿದ್ದರು. ‘ಕಪ್ಪಲ ದುರ್ಗದ ಉತ್ತರದ ಗುಡ್ಡಗಾಡಿನಲ್ಲಿ ಸಾಗುವಳಿಯಾದ ಅನೇಕ ಹೊಲಗಳಿವೆ. ಟಿಪ್ಪುಸುಲ್ತಾನನು ತನ್ನ ಆಳ್ವಿಕೆಯ ಕಾಲದಲ್ಲಿ ಬೇಡರನ್ನು ಈ ಹೊಲಗಳಲ್ಲಿ ನೆಲೆಗೊಳಿಸಿದ್ದ ಅವರಿಗೆ ಹನ್ನೆರಡು ಪಗೊಡಾ ಸಂಬಳವನ್ನು ಕೊಡುತ್ತಿದ್ದ. ಬೇಕಾದಾಗ ಈ ಬೇಡರನ್ನು ತನ್ನ ಸೈನ್ಯದಲ್ಲಿ ಯುದ್ಧಕ್ಕಾಗಿ ಸೇರಿಸಿಕೊಳ್ಳುತ್ತಿದ್ದ. ಇವರು ಸುಸಜ್ಜಿತವಾದ ಫೌಜಿನಲ್ಲಿ ಸೇರುತ್ತಿದ್ದರು’ (ಕಪಟರಾಳ ಕೃಷ್ಣರಾವ್, ೧೯೭೭, ಪು. ೨೩೬). ಇವರ ಸೈನ್ಯದ ಸಹಾಯದಿಂದಲೇ ಬೇಡ ಜಾತಿಯ ಪಾಳೆಗಾರರನ್ನು ಸೋಲಿಸುತ್ತಿದ್ದ ದಾಖಲೆಗಳಿವೆ. ಹೈದರ ಮತ್ತು ಟಿಪ್ಪು ಬಹಳ ಬುದ್ದಿವಂತಿಕೆಯಿಂದ ಬೇಡರನ್ನು ಬೇಡರ ವಿರುದ್ಧವೇ ಎತ್ತಿಕಟ್ಟುತ್ತಿದ್ದರು. ಇದೇ ಕಾಲದಲ್ಲಿ ಬೇಡರು ದರೋಡೆ, ಕೊಳ್ಳೆಗಳನ್ನು ಹೊಡೆಯುತ್ತಿದ್ದ ವಿವರಣೆ ದೊರೆಯುತ್ತದೆ.

ಮದರಾಸು ಕಂದಾಯ ಸಂಗ್ರಹಣ ಮುಖ್ಯಾಧಿಕಾರಿಯಾಗಿದ್ದ ಥಾಮಸ್ ಮನ್ರೋ (ಕ್ರಿ.ಶ. ೧೮೦೦)ರಲ್ಲಿ ಒಟ್ಟು ಎಂಬತ್ತು ಮಂದಿ ಪಾಳೆಯಗಾರರ ಯಾದಿಯನ್ನು ಸಿದ್ಧಪಡಿಸಿದ್ದರು (ಉದ್ಧೃತ : ಲಕ್ಷ್ಮಣ್ ತೆಲಗಾವಿ, ೧೯೮೮, ಪು. ೨೩೨). ಶಸ್ತ್ರಾಸ್ತ್ರಗಳನ್ನು ಹೊಂದಿರುವ ಜನಗಳಿಂದ ಮುಂದೆ ತಮಗೆ ಅಪಾಯ ಉಂಟಾಗಬಹುದು ಎಂಬ ಭಯದಿಂದ ಬ್ರಿಟಿಷ್ ಸರ್ಕಾರ ೧೮೫೭ರಲ್ಲಿ ನಿಶ್ಯಸ್ತ್ರೀಕರಣ ಕಾಯಿದೆಯನ್ನು ಜಾರಿಗೆ ತಂದು ಮೊಟ್ಟ ಮೊದಲು ಬೇಡರಿಂದ ವಿರೋಧವನ್ನು ಎದುರಿಸಬೇಕಾಯಿತು. ಹಲಗಲಿಯ ಬೇಡರ ಹೋರಾಟವನ್ನು ಲಾವಣಿಕಾರರು ತುಂಬಾ ಸೊಗಸಾಗಿ ಚಿತ್ರಿಸಿದ್ದಾರೆ (ಕ್ಯಾತನಹಳ್ಳಿ ರಾಮಣ್ಣ (ಸಂ), ೧೯೨೭, ಪು. ೫೯). ಅಲ್ಲದೆ ಪಾಳೆಯಗಾರರು ಸರ್ಕಾರದ ನಿಯಂತ್ರಣಕ್ಕೆ ಒಳಪಡಲಿಲ್ಲವೆಂದು ಇವರ ಪಾಳೆಗಳನ್ನು ಕಸಿದುಕೊಳ್ಳಲಾಯಿತು. ಅಂದಿನಿಂದ ಇವರು ಬೇಸಾಯದಲ್ಲಿ ತೊಡಗಿದರು (ಕಸಟರಾಳ ಕೃಷ್ಣರಾವ್, ೧೮೭೭, ಪು. ೨೩೬).

ಕ್ರಿ.ಶ. ೧೮ನೆಯ ಶತಮಾನದಿಂದೀಚೆಗೆ ಪಾಳೆಯ ಪಟ್ಟುಗಳನ್ನು ಕಳೆದುಕೊಂಡು, ಸೈನಿಕ ವೃತ್ತಿಯು ಇಲ್ಲದಂತಾಗಿ, ಅರಣ್ಯವು ನಾಶವಾಗಿ ಸರ್ಕಾರದ ಅರಣ್ಯನೀತಿಯಿಂದ ಬೇಟೆಯ ವೃತ್ತಿಯನ್ನು ಕೈಬಿಟ್ಟು ವ್ಯವಸಾಯದಲ್ಲಿ, ಸರ್ಕಾರೀ ನೌಕರಿಯಲ್ಲಿ ತೊಡಗಿ ಕೊಂಡಿದ್ದಾರೆ. ಇಂದು ವ್ಯವಸಾಯವೇ ಜೀವನಾಧಾರವಾಗಿದೆ. ಕ್ರಿ.ಶ. ೧೯೭೬ (The Scheduled Caste and Scheduled Tribes Orders (Amendment) Act, 1976)ರಲ್ಲಿ ಪರಿಶಿಷ್ಟ ಬುಡಕಟ್ಟಿಗೆ ಸೇರಿದ ನಾಯಕ ಜನಾಂಗವು ಇಂದು ಸರ್ಕಾರದ ವಿಶೇಷ ಮೀಸಲಾತಿ ಸೌಲಭ್ಯವನ್ನು ಪಡೆದುಕೊಳ್ಳುತ್ತಿದೆ.

. ಬೇಡರ ಉಪಪಂಗಡಗಳು

ಬೇಡರಲ್ಲಿ ಹಲವು ಉಪಪಂಗಡಗಳಿವೆ. ಅವುಗಳಲ್ಲಿ ಮುಖ್ಯವಾದವುಗಳು : ೧. ಊರನಾಯಕರು (ಚಿನ್ನಬೋಯಿ), ೨. ಮ್ಯಾಸಬೇಡ (ಪೆದ್ದಬೋಯಿ), ೩. ಗುಡ್ಲಬೇಡ (ಗುಡಿಸಲು ಬೇಡ), ೪. ಮತ್ಯಮ್ಮ ಅಥವಾ ಉರಮಿ ಬೇಡ ಮತ್ತು ಸದರಬೇಡ, ೫. ಹಾಲು ಬೇಡ ಮತ್ತು ೬. ಮೆಂಡ ಬೇಡ ಎಂಬ ಪ್ರಮುಖ ಉಪಪಂಗಡಗಳನ್ನು ಕಾಣಬಹುದು. (ಅನಂತಕೃಷ್ಣ ಎಲ್.ಕೆ., ೧೯೮೮, ಪು. ೨೦೫). ಒಂದೇ ಕುಲಕ್ಕೆ ಅಥವಾ ಪಂಡಗಕ್ಕೆ ಸೇರಿದ್ದರೂ ಈ ಉಪಪಂಗಡಗಳ ನಡುವೆ ವೈವಾಹಿಕ ಸಂಬಂಧಕ್ಕೆ ಅವಕಾಶವಿಲ್ಲ. ಅಲ್ಲದೆ ಉಪಪಂಗಡಗಳಲ್ಲೇ ಅನೇಕ ಬೆಡಗುಗಳಿವೆ. ಸ್ವಬೆಡಗಿನಲ್ಲಿ ವೈವಾಹಿಕ ಸಂಬಂಧವಿಲ್ಲ. ಒಂದೇ ಬೆಡಗಿನವರು ಅಣ್ಣತಮ್ಮಂದಿರಾಗುವರು. ಮ್ಯಾಸಬೇಡರಲ್ಲಿ ಮಂದಲರು ಮತ್ತು ಮಲ್ಲಿನಾಯಕರು ಎಂದು ಎರಡು ಪ್ರಮುಖ ವಿಭಾಗಗಳಿವೆ. ಇವು ತಮ್ಮನ್ನು ಚಂದ್ರವಂಶ ಮತ್ತು ಸೂರ್ಯವಂಶಗಳಿಗೆ ಸೇರಿದವರು ಎಂದು ಕರೆದುಕೊಳ್ಳುತ್ತಾರೆ. ಮಂದಲರ ಗುಂಪಿನವರಿಗೆ ಮಲ್ಲಿನಾಯಕರ ಗುಂಪಿನ ಬೆಡಗಿನವರು ಬೀಗರಾಗುತ್ತಾರೆ. ಮಂದಲರ ಗುಂಪಿನ ಅಥವಾ ಮಲ್ಲಿನಾಯಕನ ಗುಂಪಿನಲ್ಲಿಯೇ ಬರುವ ಬೆಡಗುಗಳವರು ಅಣ್ಣತಮ್ಮಂದಿ ರಾಗುತ್ತಾರೆ. ಇವೆರಡು ಗುಂಪುಗಳಲ್ಲಿಯೂ ಸಂಬಂಧ ಬೆಳೆಸಿಕೊಂಡ ಬೆಡಗುಗಳೂ ಇವೆ.

. ಊರ ಬೇಡರು ಮತ್ತು ಮ್ಯಾಸಬೇಡರು

ಹೊಸಪೇಟೆ ತಾಲ್ಲೂಕಿನಲ್ಲಿ ಊರನಾಯಕರು ಮತ್ತು ಮ್ಯಾಸನಾಯಕರು ಪ್ರಮುಖವಾಗಿ ಕಂಡು ಬರುವ ಉಪಪಂಗಡಗಳು. ಒಂದೇ ಕುಲದ ಈ ಎರಡು ಉಪಪಂಗಡಗಳ ಸಮಾಜ, ಸಂಸ್ಕೃತಿಯಲ್ಲಿ ವೈವಿಧ್ಯತೆ, ಸಾಮ್ಯತೆ ಮತ್ತು ವ್ಯತ್ಯಾಸಗಳು ಕಂಡು ಬರುತ್ತವೆ. ಇವರಲ್ಲಿರುವ ಬೆಡಗುಗಳ ಹೆಚ್ಚಿನ ಹೋಲಿಕೆಯನ್ನು ಗಮನಿಸಿದಾಗ ಹಿಂದೆ ಇವೆರಡು ಉಪಪಂಗಡಗಳು ಸೇರಿದ್ದು ನಂತರದಲ್ಲಿ ಬೇರ್ಪಟ್ಟವು ಎಂಬುದು ತಿಳಿಯುತ್ತದೆ. ಬೇಡರ ಎರಡು ಉಪಪಂಗಡ ವನ್ನು ಕುರಿತು ಥರ್‌ಸ್ಟನ್ ಅವರು ಈ ರೀತಿ ಅಭಿಪ್ರಾಯಪಟ್ಟಿದ್ದಾರೆ. ತೆಲುಗು ಮತ್ತು ಕನ್ನಡ ಮಾತನಾಡುವ ಬೇಡರಲ್ಲಿ ಊರ (Village men) ಮತ್ತು ಮ್ಯಾಸ (or grass land men) ಬೇಡರು ಇದ್ದಾರೆ. ಇವರಲ್ಲಿಯೇ ಮತ್ತೆ ಕುಲದ (ಸ್ವಗೋತ್ರವಲ್ಲದ) ಹೊರಗೆ ಮದುವೆಯಾಗುವ ಅನೇಕ ಬೆಡಗುಗಳಿವೆ. ಪ್ರತಿಯೊಂದು ಬೆಡಗುಗಳು ತಮ್ಮದೇ ಆದ ದೇವರುಗಳನ್ನು ಹೊಂದಿವೆ. ಬೋಯ ಮತ್ತು ಬೇಡರಲ್ಲಿ ಬೆಡಗುಗಳು ಒಂದೇ ರೀತಿ ಹೆಸರುಗಳನ್ನು ಹೊಂದಿವೆ ಹಾಗೂ ಊರ ಮತ್ತು ಮ್ಯಾಸಬೇಡರಲ್ಲಿಯೂ ಬೆಡಗುಗಳ ಹೆಸರಿನಲ್ಲಿ ಹೋಲಿಕೆ ಇದೆ. ಇದರಿಂದ ಇವು ಒಂದು ಕಾಲದಲ್ಲಿ ಒಂದೇ ಪಂಗಡಕ್ಕೆ ಸೇರಿದ್ದು ನಂತರ ಬೇರ್ಪಟ್ಟವು ಎಂಬುದು ಸ್ಪಷ್ಟವಾಗುತ್ತದೆ (೧೮೯೭, ಪು. ೧೮೪). ನಗರ ಸಂಸ್ಕೃತಿಯಲ್ಲಿ ಬೆರೆತುಹೋದ ಊರಬೇಡರಿಗೂ, ಅಡವಿಯಲ್ಲಿಯೇ ವಾಸವಾಗಿದ್ದ ಮ್ಯಾಸಬೇಡರಿಗೂ ಸಂಸ್ಕೃತಿಯಲ್ಲಿ ವ್ಯತ್ಯಾಸವಿರುವುದು ಸಹಜ.

ಊರಬೇಡ ಮತ್ತು ಮ್ಯಾಸಬೇಡರು ಬೇರ್ಪಟ್ಟ ಕುರಿತು ಹಲವು ಕಥೆಗಳಿವೆ. ಬಹು ಹಿಂದೆ ಒಬ್ಬ ತಾಯಿಗೆ ಇಬ್ಬರು ಗಂಡು ಮಕ್ಕಳಿದ್ದರಂತೆ. ಹಿರಿಯ ಮಗ ಹೊಲದಲ್ಲಿ ಕೆಲಸ ಮಾಡುತ್ತಿದ್ದ, ಕಿರಿಯ ಮಗ ಮನೆಗೆ ಊಟಕ್ಕೆ ಬಂದ. ಊಟ ನೀಡುವಾಗ ತಾಯಿಯು ಭೇದಭಾವ ತೋರಿ ತನಗೆ ಮಾಂಸದ ತುಂಡನ್ನು ನೀಡದೆ ಅಣ್ಣನಿಗೆ ತೆಗೆದಿಟ್ಟಿದ್ದಾಳೆ ಎಂಬ ಅನುಮಾನ ಬಂದು ಕೋಪದಿಂದ ತಾಯಿಯನ್ನು ಹೊಡೆದು ಕೊಂದು ನಂತರ ಮನೆಯಲ್ಲಿ ಹುಡುಕಾಡಿದಾಗ ಮಾಂಸದ ತುಂಡು ಸಿಗದೆ ತನ್ನ ಪಾಪ ಕೃತ್ಯಕ್ಕಾಗ ಪಶ್ಚಾತ್ತಾಪಗೊಂಡು ಕಾಡಿಗೆ ಹೋದನಂತೆ, ಕಾಡಿಗೆ ಹೋದವನೇ ಮ್ಯಾಸಬೇಡ ಎಂಬ ಕಥೆ ಇದೆ Thurston.E., ೧೯೦೦, Vol.I.P. ೧೮೭).

ಇನ್ನೊಂದು ಕಥೆಯಲ್ಲಿ ಶ್ರೀಶೈಲದ ಕಡೆಯಿಂದ ಕರ್ನಾಟಕಕ್ಕೆ ಪಶುಗಳನ್ನು ಮೇಯಿಸಿ ಕೊಂಡು ಬರುವಾಗ ಹಿಂದೆ ಒಬ್ಬ ಮುಂದೆ ಒಬ್ಬ ಇದ್ದರಂತೆ. ಹಿಂದಿನವ ಆಕಳ ಕರುವಿನ ಕಾಲನ್ನು ಮುರಿದು ತಿನ್ನಲಾರಂಭಿಸಿದನಂತೆ. ಆಗ ಮುಂದಿನವ “ನೀನು ಗೋಮಾಂಸ ತಿಂದೆ ನೀನು ಬ್ಯಾಡ” ಎಂದು ಹೇಳಿ ಅವನನ್ನು ಬಿಟ್ಟು ಮುಂದೆ ಬಂದನಂತೆ, ಅವನೇ ಕಾಡುಗೊಲ್ಲ, ಹಿಂದೆ ಉಳಿದವ ‘ಮ್ಯಾಸಬೇಡ’ ಆದನಂತೆ. ಇನ್ನು ಕೆಲವರು ಕಾಡಿನಲ್ಲಿಯೇ ಉಳಿದವ ಮ್ಯಾಸಬೇಡ, ಊರಿಗೆ ಬಂದವ ಊರಬೇಡನಾದ ಎಂದು ಹೇಳುತ್ತಾರೆ (ಈಶ್ವರಪ್ಪ ಎಂ.ಜಿ., ೧೯೮೨, ಪು. ೬-೮). ಇಂದಿಗೂ ಊರಬೇಡ ದನದ ಮಾಂಸ ತಿನ್ನುವುದಿಲ್ಲ, ಮ್ಯಾಸಬೇಡರು ದನದ ಮಾಂಸ ತಿನ್ನುತ್ತಾರೆ ಎಂಬ ಹೇಳಿಕೆ ಗಮನಾರ್ಹವಾಗಿದೆ.

“ಇನ್ನೊಂದು ದಾಖಲೆಯ ಪ್ರಕಾರ ಮಂದಲ ಗೋತ್ರದ ಕನಕದಾಸ ತಿರುಮಕೂಡಲ ವ್ಯಾಸರಾಯ ಸ್ವಾಮಿಗಳ ಇಷ್ಟದ ಶಿಷ್ಯನಾಗಿದ್ದನಂತೆ. ‘ವ್ಯಾಸರಾಯ ಸಂಸೇವಿತಾಃ’ ಎಂದು ಹೇಳಿಕೊಂಡಿದ್ದರಿಂದ ಅವನ ವಂಶಜರು ಮ್ಯಾಸಬೇಡರಾದರಂತೆ” (ಅದೇ. ಪು. ೮).

ವಾಲ್ಮೀಕಿಯು ಒಮ್ಮೆ ಬೇಟೆಗೆ ಹೋಗಿದ್ದಾಗ ಕಾಡಿನಲ್ಲಿ ಸುಂದರವಾದ ಬೇಡತಿಯನ್ನು ಮೋಹಿಸಿದನಂತೆ. ಈ ಬೇಡತಿಗೆ ಅಡವಿಯಲ್ಲಿ ಹುಟ್ಟಿದ ಮಕ್ಕಳು ಮ್ಯಾಸರಂತೆ. ಊರಿನಲ್ಲಿ ವಾಲ್ಮೀಕಿ ಹೆಂಡತಿಗೆ ಹುಟ್ಟಿದ ಮಕ್ಕಳು ಊರನಾಯಕರಂತೆ. ಮ್ಯಾಸಬೇಡರಲ್ಲಿ ಇಂದಿಗೂ ಅನೇಕ ಜನ ಈ ಕಥೆ ಹೇಳುತ್ತಾರೆ (ಒಂದೇ ತಂದೆಗೆ ಹೆಂಡತಿಯಲ್ಲಿ ಹುಟ್ಟಿದವರು ಊರ ಬೇಡರು, ಸೂಳೆಗೆ ಹುಟ್ಟಿದವರು ಮ್ಯಾಸಬೇಡರು). ಊರಿನ ಸಂಸ್ಕೃತಿಯ ಪ್ರಭಾವದಲ್ಲಿ ಬೆಳೆದ ಊರನಾಯಕರು ಹೆಂಡ ಕುಡಿಯುವುದು, ಕೋಳಿ ತಿನ್ನುವುದು, ಈಚಲ ಚಾಪೆ ಇತ್ಯಾದಿಗಳನ್ನು ಬಳಸುವುದು ಮುಂತಾದ ಚಟಗಳಿಗೆ ಬಲಿಯಾದರು. ಅಡವಿಯಲ್ಲಿ ವಾಸ ವಾಗಿದ್ದ ಮ್ಯಾಸರು ಹೆಂಡ ಕುಡಿಯುವುದಿಲ್ಲ, ಕೋಳಿ ತಿನ್ನುವುದಿಲ್ಲ, ಸಾಕುವುದೂ ಇಲ್ಲ. ಈಚಲನ್ನು ಬಳಸುವುದಿಲ್ಲ. ಮ್ಯಾಸರಲ್ಲಿ ಹಿಂದೆ ಕೋಳಿ ಕೂಗುವ ಹಳ್ಳಿಯಲ್ಲಿ ವಾಸ ಮಾಡಬಾರದು ಎಂಬ ನಂಬಿಕೆ ಇತ್ತು. ಇದು ಇವರ ವಲಸೆ ಪ್ರವೃತ್ತಿಯನ್ನು ತಿಳಿಸುತ್ತದೆ.  ಕೃಷಿಕರಂತೆ ಒಂದು ನೆಲೆಯಲ್ಲಿ ನೆಲಸದೆ ತಮ್ಮ ಪಶುಗಳನ್ನು ಮೇಯಿಸಿಕೊಂಡು ಪ್ರದೇಶ ದಿಂದ ಪ್ರದೇಶಕ್ಕೆ ವಲಸೆ ಹೋಗುತ್ತಿದ್ದುದು ಅಲೆಮಾರಿ ಜೀವನವನ್ನು ಸೂಚಿಸುತ್ತದೆ.

ಮ್ಯಾಸಬೇಡ ಎಂಬ ಪದವು ಪರಾಕ್ರಮಿಗಳು ಎಂಬ ಹಿನ್ನೆಲೆಯಿಂದ ಬಂದಿರಬೇಕು ಎಂಬ ವಾದವಿದೆ. ಕಂಪಿಲದ ಕುಮಾರರಾಮನ ಬಾಲ್ಯವನ್ನು ವರ್ಣಿಸುವಾಗ ನಂಜುಂಡ ಕವಿಯು ‘ಮೀಸರ ಗಂಡ’ ಎಂದು ಕರೆದಿದ್ದಾನೆ. ‘ಮೀಸರು’ ಎಂಬ ಪದ ಪರಾಕ್ರಮಿ ಎಂದು ಅರ್ಥ ಬರುವುದಾದರೆ ಮೀಸಬೇಡರು ಎಂದರೆ ಪರಾಕ್ರಮಿ ಬೇಡರು ಎಂದು, ಕೇಸರ, ಕ್ಯಾಸ, ಬೀಸ ಬ್ಯಾಸರ, ಆದಂತೆ ಮೀಸರ ಮ್ಯಾಸರು ಆಗಿದ್ದಿರಬಹುದು (ಕೃಷ್ಣಮೂರ್ತಿ ಹನೂರು, ೧೯೯೩, ಪು. ೫೨-೫೩).

ಹಿಂದೆ ಬೇಡರಲ್ಲಿ ಕೆಲವರು ನಗರದಲ್ಲಿ ಬಂದು ವಾಸವಾದ ಬಗ್ಗೆ ಧರ್ಮವ್ಯಾಧನ ಕಥೆಯಲ್ಲಿ ವಿವರಣೆಯಿದೆ. ದ್ವಾಪರಯುಗದಲ್ಲಿ ಕೌಶಿಕ ಮುನಿಯು ಧರ್ಮವ್ಯಾಧನ ಬಳಿಬಂದಾಗ ಇವನು ತನ್ನ ಕಾಯಕದ ಕುರಿತು ವಿವರಿಸುತ್ತಾನೆ – “ಎಲೈ ಮುನಿವರ್ಯನೇ ಕೇಳು, ಬೇಡರ ಜಾತಿಗೆ ಸೇರಿದ ನಮ್ಮ ಸಂತತಿಯವರು ಕಾಡಿನಲ್ಲೇ ಹುಟ್ಟಿ, ಕಾಡಿನಲ್ಲೇ ಬೆಳೆದು, ಕಾಡಿನಲ್ಲೇ ಹೆಚ್ಚಾಗಿ ವಾಸಿಸುತ್ತಿರುವರು. ಅವರಲ್ಲೂ ಸ್ವಲ್ಪ ಭಾಗದ ಜನರು ಪಟ್ಟಣಗಳಲ್ಲಿ ವಾಸಿಸಲು ಅನುವಾದರು ಅಂಥವರಲ್ಲಿ ನಾನೊಬ್ಬ. ಹಿಂದಿನಿಂದಲೂ ಬೇಡರ ಕಸಬು ಬೇಟೆಯಾಡವುದಾದ್ದರಿಂದ, ನಾನೂ ನಾಗರಿಕ ಜೀವನದಲ್ಲಿದ್ದರೂ ನನ್ನ ಪೂರ್ವಿಕರ ಪದ್ಧತಿಯಂತೆಯೇ ಪ್ರಾಣಿಗಳನ್ನು ಕೊಯ್ದು ಅವುಗಳ ಮಾಂಸವನ್ನು ಮಾರಾಟ ಮಾಡಿ ಅದರಲ್ಲಿ ಉಳಿದ ಸ್ವಲ್ಪ ಭಾಗದ ಹಣದಿಂದಲೇ ನನ್ನ ಸಂಸಾರವನ್ನು ಸಲಹುತ್ತಿರುವೆನು…” (ರಾಜಣ್ಣ, ಆರ್., ೧೯೮೨, ಪು. ೪೦-೪೧). ಈ ಕಥೆಯನ್ನು ಗಮನಿಸಿದಾಗ ಬೇಡರು ಊರಿಗೆ ಬಂದು ನೆಲೆಸಿದ ಬಗ್ಗೆ, ಅವರ ಕಾಯಕದ ಬಗ್ಗೆ ತಿಳಿಯುತ್ತದೆ. ಇಂಥ ಹಲವು ಗುಂಪುಗಳೇ ಮುಂದೆ ಹಿಂದೂ ಸಂಸ್ಕೃತಿಯ ಚೌಕಟ್ಟಿನಲ್ಲಿ ಸೇರಿಕೊಂಡು ಊರ ನಾಯಕ ರಾದರು ಎಂದು ಹೇಳಬಹುದು.

. ಜನಾಂಗದ ವಲಸೆ

ದೇಶದ ವಿಭಜನೆ, ನೆರೆ-ಬರ ಬಂದಾಗ, ಒಂದು ಸ್ಥಳದಲ್ಲಿ ವಾಸಿಸಲು ಅಸಾಧ್ಯ ಎಂದು ಕಂಡುಬಂದಾಗ ಅಥವಾ ಇನ್ನೊಂದು ಪ್ರದೇಶದಲ್ಲಿ ಉನ್ನತ ಮಟ್ಟದ ಜೀವನವನ್ನು ನಿರ್ವಹಿಸಬಹುದು ಎನಿಸಿದಾಗ ಮಾನವ ವಲಸೆ ಹೋಗುವುದು ಸಹಜ. ವಲಸೆಗೆ ಹಲವು ಪ್ರೇರಣೆಗಳಿವೆ. ಇತಿಹಾಸದ ಉದ್ದಕ್ಕೂ ಇಂಥ ವಲಸೆಗಳು ನಡೆದಿವೆ. ಮಾನವನು ಹುಟ್ಟಿನಿಂದಲೂ ಅವಶ್ಯಕ ವಸ್ತುಗಳಿಗಾಗಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆ ಬಂದಿದ್ದಾನೆ. ವ್ಯಕ್ತಿ, ಕುಟುಂಬ ಅಥವಾ ಸಮುದಾಯ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಲಸೆ ಹೋದರೆ ತನ್ನ ಹಿಂದಿನ ಜೀವನದಿಂದ ಹೊಸ ಜೀವನಕ್ಕೆ, ಪರಿಸರಕ್ಕೆ, ಸಾಮಾಜಿಕ ಪರಿಸ್ಥಿತಿಗೆ ಹೊಂದಿಕೊಳ್ಳಬೇಕು. ಇಂಥ ಸಂದರ್ಭದಲ್ಲಿ ಮಾನವ ಹೊಸದನ್ನು ಸಂಪೂರ್ಣ ಒಪ್ಪಿಕೊಳ್ಳುವುದಿಲ್ಲ ತಾನು ಬೆಳೆದುಬಂದ ಪರಿಸರವನ್ನು ಸ್ಪಲ್ಪಮಟ್ಟಿಗೆ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾನೆ. ಇಂದು ಹಲವು ಬುಡಕಟ್ಟು ಜನಾಂಗಗಳು ಅರಣ್ಯವಾಸದಿಂದ ಗ್ರಾಮ, ನಗರ ವಾಸಿಗಳಾಗಿದ್ದರೂ ತಮ್ಮ ಮೂಲದ ಕೆಲವು ವೈಶಿಷ್ಟ್ಯ ಗಳನ್ನು ಉಳಿಸಿ ಬೆಳೆಸಿಕೊಂಡು ಬಂದಿವೆ. ವಲಸೆ ಕೇವಲ ಬುಡಕಟ್ಟುಗಳಲ್ಲಿ ಮಾತ್ರವಲ್ಲ, ಎಲ್ಲಾ ಸಮುದಾಯಗಳಲ್ಲಿಯೂ ಈ ಪ್ರವೃತ್ತಿ ಕಂಡು ಬರುತ್ತದೆ. ಜೀವನದ ಅವಶ್ಯಕತೆಯ ಪೂರೈಕೆ, ಉನ್ನತಮಟ್ಟದ ಆಸೆಗಳ ಪೂರೈಕೆ ಮುಂತಾದ ಕಾರಣಗಳಿಗಾಗಿ ಇಂದಿಗೂ ಮಾನವ ವಲಸೆ ಕೈಗೊಳ್ಳುತ್ತಿದ್ದಾನೆ. ಆದರೆ ವಲಸೆಯ ಸ್ವರೂಪಗಳಲ್ಲಿ ಮಾರ್ಪಾಡಾಗಿದೆ.

ಬೇಡ ಜನಾಂಗವು ಬೇಟೆ ಮತ್ತು ಪಶುಪಾಲನೆಯ ವೃತ್ತಿಯಲ್ಲಿ ತೊಡಗಿಕೊಂಡಿದ್ದರಿಂದ ಇವರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಆಹಾರ, ನೀರಿಗಾಗಿ ವಲಸೆ ಹೋಗುವುದು ಅವಶ್ಯಕವಾಗಿತ್ತು. ಅರಣ್ಯನಾಶ, ಅರಣ್ಯನೀತಿ, ಕೈಗಾರಿಕೆ ನೀತಿಯ ಕಾರಣವಾಗಿ ಮತ್ತು ವೃತ್ತಿಯ ಬದಲಾವಣೆಯಿಂದಾಗಿ ಬೇಡರು ಇಂದು ಅರಣ್ಯವನ್ನು ತ್ಯಜಿಸಿ ಗ್ರಾಮ ಮತ್ತು ನಗರಗಳಿಗೆ ವಲಸೆ ಬಂದಿದ್ದಾರೆ. ಈ ಸಮುದಾಯದ ವಲಸೆಯು ಇತ್ತೀಚಿನದಲ್ಲ ತುಂಬ ಹಿಂದೆಯೇ ಇವರಲ್ಲಿ ವಲಸೆಯ ಪ್ರಕ್ರಿಯೆ ನಡೆದಿದೆ. ವಲಸೆಯ ಕಾರಣವಾಗಿಯೇ ಇವರಲ್ಲಿ ಎರಡು ಪ್ರಮುಖ ಉಪಪಂಗಡಗಳು ಸೃಷ್ಟಿಯಾಗಿವೆ. ಬಹು ಹಿಂದೆಯೇ ಅರಣ್ಯದಿಂದ ಊರಿನ ಕಡೆ ಬಂದ ಬೇಡರು ಹಿಂದೂ ಧರ್ಮದ ಜಾತಿವ್ಯವಸ್ಥೆಯಲ್ಲಿ ಸೇರಿಕೊಂಡು ಸ್ಥಳೀಯ ದೇವರುಗಳನ್ನು ಆರಾಧಿಸುತ್ತಾ ಊರಿನವರಾಗಿ ಪರಿವರ್ತಿತ ರಾಗಿರುವವರು ಊರು ಬೇಡರು, ಅರಣ್ಯದಲ್ಲಿ ವಾಸವಾಗಿ ಕಾಲಕ್ರಮೇಣ ಹಳ್ಳಿ, ನಗರಗಳಿಗೆ ವಲಸೆ ಬಂದ ಮ್ಯಾಸಬೇಡರು ಇಂದಿಗೂ ಬುಡಕಟ್ಟಿನ ಹಲವು ಲಕ್ಷಣಗಳನ್ನು ಉಳಿಸಿ ಬೆಳಸಿಕೊಂಡು ಬಂದಿದ್ದಾರೆ.

ಪಶುಪಾಲನೆ ವಲಸೆಗಾರ ದ್ರಾವಿಡ ಮೂಲಕ್ಕೆ ಸೇರಿದ ಬೇಡ ಪಂಗಡವು ಆಂಧ್ರ, ಕರ್ನಾಟಕ, ತಮಿಳುನಾಡು (ದಖ್ಖನ್ ಪ್ರಸ್ಥಭೂಮಿ)ಗಳ ಗುಡ್ಡಗಾಡು, ಅರಣ್ಯ ಪ್ರದೇಶದಲ್ಲಿ ವಾಸವಾಗಿದ್ದರು. ಹೊಸಪೇಟೆ ತಾಲ್ಲೂಕಿನಲ್ಲಿಯೂ ಬೇಡರು ಕಾಡಿನ ಅಂಚಿನಲ್ಲಿ ಅಥವಾ ಗುಡ್ಡಗಾಡು ಪ್ರದೇಶದಲ್ಲಿ ಅಲ್ಲದೇ ನದಿ, ಕೆರೆಗಳ ಸಮೀಪ ವಾಸವಾಗಿರುವುದು ಕಂಡು ಬರುತ್ತದೆ. ಈ ತಾಲ್ಲೂಕಿನಲ್ಲಿ ಕನ್ನಡ ಮತ್ತು ತೆಲುಗು ಮಾತನಾಡುವ ಎರಡು ಪ್ರಮುಖ ಉಪಪಂಗಡಗಳಾದ ಊರಬೇಡರು ಮತ್ತು ಮ್ಯಾಸಬೇಡರು ನೆಲೆಸಿದ್ದಾರೆ. ತಾಲ್ಲೂಕಿನಲ್ಲಿ ಮ್ಯಾಸಬೇಡರಿಗಿಂತ ಊರಬೇಡರ ಸಂಖ್ಯೆ ಅಧಿಕವಾಗಿದೆ.

ಬೇಡರ ವಲಸೆಯನ್ನು ನಿರ್ದಿಷ್ಟ ಕಾಲಘಟ್ಟದಲ್ಲಿ ನಿರ್ಣಯಿಸಲು ಸಾಧ್ಯವಿಲ್ಲ. ಕಾಡಿನಿಂದ ನಗರದ ಕಡೆಗೆ ವಲಸೆ ಬರುವ ಪ್ರವೃತ್ತಿಯು ಮೊದಲಿನಿಂದಲೂ ನಡೆದುಬಂದಿದೆ. ಇವರ ಮೌಖಿಕ ಸಾಹಿತ್ಯದಲ್ಲಿ ಜನಾಂಗದ ಮತ್ತು ದೇವರ ವಲಸೆಯನ್ನು ತಿಳಿಸಿದರೂ ನಿರ್ದಿಷ್ಟ ಕಾಲ ತಿಳಿದುಬಂದಿಲ್ಲ. ಬೇಡರ ನಾಯಕ ಶಿವಭಕ್ತ ಕಣ್ಣಪ್ಪನ ಕಥೆಯಲ್ಲಿ ಇವರು ದಕ್ಷಿಣಕ್ಕೆ ಬಂದವರೆಂದು ತಿಳಿದುಬರುತ್ತದೆ. “ದಕ್ಷಿಣ ಭಾರತದ ದಂಡಕಾರಣ್ಯದಲ್ಲಿ ಬಂದು ನೆಲೆಸಿದ ಬೇಡರ ಪಾಳೆಗಳಲ್ಲೊಂದು, ಕಾಳಹಸ್ತಿ ಪರ್ವತದ ತಪ್ಪಲಿನಲ್ಲಿ ಹರಿಯುವ ಸ್ವರ್ಣಮುಖಿ ನದಿ ದಡದಲ್ಲಿ ವಾಸ ಮಾಡುತ್ತಿತ್ತು. ಇವರು ಬೇಟೆಯಾಡಿ ಪ್ರಾಣಿಗಳ ಮಾಂಸವನ್ನು ಸುಟ್ಟು ತಿನ್ನುತ್ತಿದ್ದುದರಿಂದ ಜೊತೆಗೆ ಬಿದಿರನಕ್ಕಿ…” (ರಾಜಣ್ಣ ಆರ್., ೧೯೮೨, ಪು. ೫೦). ಇವರು ಕಾಳಹಸ್ತಿಗೆ ಯಾವ ಪ್ರದೇಶದಿಂದ, ಯಾವ ಮಾರ್ಗದ ಮೂಲಕ ಬಂದು ನೆಲೆಸಿದರು ಎಂಬ ಮಾಹಿತಿ ತಿಳಿದುಬರುವುದಿಲ್ಲ. ಧರ್ಮವ್ಯಾಧನ ಕಥೆಯಲ್ಲಿಯೂ ಬೇಡರು ಅರಣ್ಯದಿಂದ ನಗರಕ್ಕೆ ವಲಸೆ ಬಂದ ಜನರಲ್ಲಿ ತಾನೂ ಒಬ್ಬ ಎಂದು ಧರ್ಮವ್ಯಾದ ಹೇಳಿಕೊಳ್ಳುತ್ತಾನೆ.

ಪೌರಾಣಿಕ ಕಥೆಗಳಲ್ಲದೆ ಕೆಲವು ಐತಿಹಾಸಿಕ ದಾಖಲೆಗಳಲ್ಲಿ ಸಹ ಇವರು ವಲಸೆಗಳನ್ನು ಉಲ್ಲೇಖಿಸಲಾಗಿದೆ. ವಿಜಯನಗರ ಸಾಮ್ರಾಜ್ಯದಲ್ಲಿ ಬೇಡರಿಗೆ ರಾಜಕೀಯ ಮತ್ತು ಸೈನಿಕ ಮಾನ್ಯತೆ ದೊರೆತ ಕಾರಣ ಇವರು ವಿಜಯನಗರಕ್ಕೆ ವಲಸೆ ಬಂದರು ಮತ್ತು ವಿಜಯನಗರದ ನಂತರದ ಈ ಪ್ರದೇಶದಲ್ಲಿ ಕೇಂದ್ರಿಕೃತವಾಗಿದ್ದ ಈ ಸಮುದಾಯದ ಜನರು ಸಾಮ್ರಾಜ್ಯದ ವಿವಿಧ ಪ್ರದೇಶಗಳಿಗೆ ವಲಸೆ ಹೋದರು. ಮುಸ್ಲಿಂ ದಾಳಿಯ ಕಾರಣ ಆಂಧ್ರದಿಂದ ಕರ್ನಾಟಕಕ್ಕೆ ಬಂದ ಬೇಡರು ಮುಸ್ಲಿಂ ಆಳ್ವಿಕೆಯ ವಿರುದ್ಧ ವಿಜಯನಗರದ ಅರಸರಿಗೆ ಸೈನಿಕ ಸಹಾಯ ನೀಡಿದರು ಎಂದರೆ ತಪ್ಪಾಗಲಾರದು. ರಕ್ಕಸ-ತಂಗಡಿ ಯುದ್ಧದ ನಂತರ ಪಾಳೆಯಗಾರರು ಸ್ವತಂತ್ರರಾದರು. ಈ ಪಾಳೆಯಗಾರರ ದಾಖಲೆಗಳನ್ನು ಗಮನಿಸಿದರೆ ಅವರ ಮೂಲ ನಿವಾಸದ ವಿವರಣೆ ದೊರೆಯುತ್ತದೆ.

ಊರನಾಯಕರ ವಲಸೆಯ ಕಾಲ ಅಥವಾ ಅವರ ಮೂಲ ಸ್ಥಳ ಇತ್ಯಾದಿಗಳನ್ನು ತಿಳಿದುಕೊಳ್ಳುವುದು ಕಷ್ಟ. ಇವರು ಆಂಧ್ರ, ಕರ್ನಾಟಕಗಳಲ್ಲಿ ವಾಸವಾಗಿದ್ದು ಆಂಧ್ರದಲ್ಲಿ ತೆಲುಗು ಕರ್ನಾಟಕದಲ್ಲಿ ಕನ್ನಡ ಮಾತನಾಡುತ್ತಾರೆ. ಮ್ಯಾಸನಾಯಕರ ಭಾಷೆ ಮನೆ ದೇವರ ಆಧಾರದಿಂದ ಇವರು ಆಂಧ್ರದ ಶ್ರೀಶೈಲ, ಕದರಿ, ತಿರುಪತಿಗಳಿಂದ ವಲಸೆ ಬಂದವರು ಎಂದು ತಿಳಿದು ಬರುತ್ತದೆ. ಹೀಗೆ ವಲಸೆ ಬಂದ ಗುಂಪುಗಳಲ್ಲಿ ಶೈವ ಮತ್ತು ವೈಷ್ಣವ ಸಂಪ್ರದಾಯದವರು ಇದ್ದಾರೆ. ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಬಖೈರಿನಲ್ಲಿ ಶ್ರೀಶೈಲದಿಂದ ಬಂದ ನಾಯಕರ ವಿವರಣೆ ಹೀಗಿದೆ. “…ಗುರು ಗುಹೇಶ್ವರನ ಬೆಟ್ಟಕ್ಕೆ ಪೂರ್ವಭಾಗದೊಳ್ ಜಂಬ್ಟೀಜನ್ನಿಗೆ ಹಳ್ಳಿಯ ನಿಯವಗಳ್ ಮಧ್ಯದಲ್ಲೂಯೀ ಕಂಪಳಕ್ಕೆ ಹಟ್ಟಿಯಿಟ್ಟುಕೊಂಡು ಹನ್ನೆರಡು ಪೆಟ್ಟಿಗೆಯ ದೇವರುಗಳು ಸಹ ಇದ್ದರು…” (ಕೃಷ್ಣಮೂರ್ತಿ ಹನೂರು, ೧೯೯೩, ಪು. ೩೫). ಬಖೈರಿನ ಪ್ರಕಾರ ಆಂದ್ರದ ಶ್ರೀಶೈಲದಿಂದ ಬಂದ ಒಂದು ತಂಡ ಚಿತ್ರದುರ್ಗ ಜಿಲ್ಲೆಯ ಜಗಳೂರು ತಾಲ್ಲೂಕಿನ ಬಳಿಯ ಜನಿಗೇನಹಳ್ಳಿಯಲ್ಲಿ ನೆಲೆಸಿತ್ತು. ಈ ಗುಂಪಿನ ಯಜಮಾನ ಕಾಟೇಮಲ್ಲಪ್ಪನಾಯಕ. ಈ ವಲಸೆ ಸುಮಾರು ಕ್ರಿ.ಶ. ೫೦೦ರಲ್ಲಿ ನಡೆದಿರಬೇಕು.

ಗುಮ್ಮನಾಯಕನ ಪಾಳ್ಯದ ಪಾಳೆಯಗಾರರು ವಿಜಯನಗರಕ್ಕಿಂತ ಪೂರ್ವದಲ್ಲಿಯೇ ಪಾಳೆಪಟ್ಟನ್ನು ಹೊಂದಿ ಆಳ್ವಿಕೆ ನಡೆಸುತ್ತಿದ್ದರು. ವಿಜಯನಗರದ ಅರಸರು ಅನೇಕ ಪ್ರದೇಶ ಗಳನ್ನು ವಶಪಡಿಸಿಕೊಂಡಾಗ ಗುಮ್ಮನಾಯಕನ ಪಾಳ್ಯವು ಈ ಸಾಮ್ರಾಜ್ಯಕ್ಕೆ ಸೇರಿಕೊಂಡಿತು. ಯುದ್ಧದಲ್ಲಿ ಸೋತ ಪಾಳೆಯಗಾರರು ವಿಜಯನಗರದ ಅರಸರೊಂದಿಗೆ ಒಪ್ಪಂದ ಮಾಡಿ ಕೊಂಡು ವರ್ಷಕ್ಕೆ ಇಂತಿಷ್ಟು ಹಣ ನೀಡುವುದಾಗಿ ಹಾಗೂ ವಿಜಯನಗರಕ್ಕೆ ಇನ್ನೂರು ಮಂದಿಯನ್ನು ಅರಸನ ಚಾಕರಿಗೆ ಕಳಿಸಿ ಕೊಡುವುದಾಗಿ ಒಪ್ಪಿಕೊಂಡರು. ಇಂಥ ಒಪ್ಪಂದ ಹೈದರ್, ಟಿಪ್ಪುವಿನ ಆಕ್ರಮಣದವರೆಗೂ ಮುಂದುವರೆಯಿತು. ನಂತರ ಗುಮ್ಮನಾಯಕನ ಪಾಳ್ಯ ಮೈಸೂರು ಅರಸರ ಆಳ್ವಿಕೆಗೆ ಸೇರಿಕೊಂಡಿತು. ಸೈನಿಕರಾಗಿ, ಸೇವಕರಾಗಿ ಹಿಂದೂಪುರ ಮತ್ತು ಕದರಿ ತಾಲ್ಲೂಕಿನಿಂದ ಬಂದ ಬೇಡರು ಕರ್ನಾಟಕದಲ್ಲಿಯೇ ನಿಂತರು ಎಂಬುದರಲ್ಲಿ ಅನುಮಾನವಿಲ್ಲ.

೧೮೭೯ರಲ್ಲಿ ಷೇರಿಂಗ್, ಎಂ.ಎ.ರವರು ಬರೆದಿರುವ ‘ಹಿಂದೂ ಗಿರಿಜನರು ಜಾತಿಗಳು’ ಎಂಬ ಕೃತಿಯಲ್ಲಿ ಬೇಡರು ಪಂಜಾಬಿನ ಗಿರಿಶಿಖರಗಳಿಂದ ಬಂದವರೆಂದು, ಇವರಿಗೆ “ಬಿಲ್ಲರು”, “ನಾಯಕರು” ಮತ್ತು “ಬೇರಾರ್” ಎಂದು ಕರೆಯುತ್ತಿದ್ದರೆಂದು ಮಧ್ಯಪ್ರದೇಶ ದಲ್ಲಿರುವ ನಾಯಕರು ಬೊಂಬಾಯಿ, ಸಿಂಧೂದೇಶದ, ಗುಜರಾತ್, ಮಹಾರಾಷ್ಟ್ರಗಳಲ್ಲಿರುವ ಬೇಡರು. ಕಾಮೋಕ್ಷಿಗಳು ಹಾಗೂ ಡೆಕ್ಕನ್ ಭೂಮಿ ಮತ್ತು ಉತ್ತರ ಇಂಡಿಯದಲ್ಲಿರುವ “ಬಾಲ್‌ಮೀಕಿ” ನಾಯಕರು ಒಂದೇ ಎಂದು ಕರೆದಿದ್ದಾರೆ (ಅಖಿಲ ಭಾರತ ನಾಯಕರ ಕಲ್ಯಾಣ ಸಂಘ, ಪು. ೨).

ಚಿತ್ರದುರ್ಗದ ಪಾಳೆಯಗಾರರು ತಾವು ಉತ್ತರದ ದೆಹಲಿಯಿಂದ ಬಂದವರೆಂದು ಹೇಳಿಕೊಳ್ಳುತ್ತಾರೆ. “ಉತ್ತರ ದೇಶದಲ್ಲಿ ಜಡಕಲ್ಲುದುರ್ಗದಿಂದ ದಿಳ್ಳೀನಾಡ ತಳವಾರರಾದ ವಾಲ್ಮೀಕೀ ಗೋತ್ರದವರೆಂದು ಹೇಳಲ್ಪಡುವ ಕಾಮಗೇತಿ ವಂಶದ ಸಬ್ಬಗಡಿ ಓಬನಾಯಕ, ಜಡವಿನಾಯಕ, ಬುಳ್ಳನಾಯಕ ಈ ಮೂವರು ಅಣ್ಣ ತಮ್ಮಂದಿರು ಉತ್ತರ ದೇಶದ ಅವಾಂತರದಿಂದ ತಮ್ಮ ಮನೆ ದೇವರು ಅಹೋಬಲ ನರಸಿಂಹಮೂರ್ತಿಯ ಪೆಟ್ಟಿಗೆ, ತುರು, ಕುರಿ, ಕಿಲಾರಿ, ಮುಂತಾದ ಕಂಪಳವನ್ನು ತೆರಳಿಸಿಕೊಂಡು ದಕ್ಷಿಣ ದೇಶಕ್ಕೆ ಬಂದರು” (ಪುಟ್ಟಣ್ಣ ಎಂ.ಎಸ್., ೧೯೨೨, ಪು. ೪) ಇವರು ದಾರಿಯಲ್ಲಿ ಹಂಪೆಯ ವಿರುಪಾಕ್ಷೇಶ್ವರನ ದರ್ಶನ ಮಾಡಿಕೊಂಡು ಮುಂದುವರೆದು ಬಿಳಿಜೋಡಿನಲ್ಲಿ ನೆಲೆಸಿದರು. ವಾಸ್ತವದಲ್ಲಿ ಇವರು ದೆಹಲಿಯಿಂದ ಬಂದವರಲ್ಲ. ಆಂಧ್ರದಿಂದ ಮುಸ್ಲಿಂರ ದಾಳಿಯನ್ನು ಸಹಿಸದೆ ಕರ್ನಾಟಕಕ್ಕೆ ಬಂದವರು. ಇವರು ಬಂದ ಜಡಕಲ್ಲುದುರ್ಗ, ಕರೆಮಲೆ ಮತ್ತು ರಾಮದುರ್ಗ ಗಳು ಕರ್ನೂಲು ಜಿಲ್ಲೆಯಲ್ಲಿವೆ ಎಂದು ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಇವರ ಮೂಲ ಮನೆಯ ದೇವರಾದ ಅಹೋಬಲ ನರಸಿಂಹ ದೇವರ ನೆಲೆ ಕರ್ನೂಲು ಜಿಲ್ಲೆಯ ಅಲ್ಲಗದ್ದ ತಾಲ್ಲೂಕಿನಲ್ಲಿರುವ ನವನರಸಿಂಹ ಕ್ಷೇತ್ರವೇ ಆಗಿದೆ (ಲಕ್ಷ್ಮಣ್ ತೆಲಗಾವಿ, ೧೯೮೮, ಪು. ೨).

ಸುರಪುರದ ಅರಸ ಕಲ್ಲಪ್ಪನಾಯಕನು ಸಾರಂಗ ಕೊಳದಿಂದ ತುಂಬಳಕ್ಕೆ ಬಂದು ತುಂಬಳದಿಂದ ಕಂಪಿಲಿ, ಗಂಗಾವತಿ, ತಾವರಗೇರಿಯ ಮಾರ್ಗ ಹಿಡಿದು ಮುದುಗಲ್ಲಿಗೆ ಬಂದನು (ಕಪಟರಾಳ್ ಕೃಷ್ಣರಾವ್, ೧೯೭೭, ಪು. ೧) ಎಂದು ಹೇಳಲಾಗಿದೆ.

ಗ್ರಂಥಸೂಚಿ

೧. ಕಪಟರಾಳ ಕೃಷ್ಣರಾವ್, ೧೯೭೭, ಸುರಪುರ ಸಂಸ್ಥಾನದ ಇತಿಹಾಸ, ಮಂಜುನಾಥ ಪ್ರಕಾಶನ, ಬೆಂಗಳೂರು.

೨. ಕ್ಯಾತನಹಳ್ಳಿ ರಾಮಣ್ಣ (ಸಂ), ೧೯೭೨, ಫ್ಲೀಟರು ಸಂಗ್ರಹಿಸಿದ ಐದು ಐತಿಹಾಸಿಕ ಲಾವಣಿಗಳು, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

೩. ಕೃಷ್ಣಮೂರ್ತಿ ಹನೂರು, ೧೯೯೩, ಮ್ಯಾಸಬೇಡರ ಸಂಸ್ಕೃತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

೪. ಢಂಗ, ಡಿ.ಬಿ., ೧೯೮೮, ಜನಾಂಗ ಪರಿಚಯ, ಪೆರಿಯರ್ ಪ್ರಕಾಶನ, ಧಾರವಾಡ.

೫. ಪುಟ್ಟಣ್ಣ ಎಂ.ಎಸ್., ೧೯೨೪, ಚಿತ್ರದುರ್ಗದ ಪಾಳೆಯಗಾರರು, ಬೆಂಗಳೂರು.

೬. ರಾಜಣ್ಣ ಆರ್.,  ೧೯೮೨, ನಾಯಕ ಜನಾಂಗದ ಇತಿಹಾಸ, ಚಳ್ಳಿಕೆರೆ, ಚಿತ್ರದುರ್ಗ ಜಿಲ್ಲೆ.

೭. ವರದರಾಜರಾವ್ ಜಿ., ೧೯೬೬, ಕುಮಾರರಾಮನ ಸಾಂಗತ್ಯಗಳು, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

೮. ಚಿತ್ರಲಿಂಗಯ್ಯ ಎಂ.ವಿ., ಅಕ್ಟೋಬರ್, ೧೯೮೨, ಬೇಡ ನಾಯಕರ ಬೆಡಗುಗಳ ಪ್ರಾಚೀನತೆ, ಇತಿಹಾಸ ಚಂದ್ರಿಕೆ, ಸಂಪುಟ-೦೨, ಸಂಚಿಕೆ-೧೦, ಪು. ೧೨೦-೧೬, ಇತಿಹಾಸ ಪರಿಷತ್ತು, ತುಮಕೂರು.

೯. ಲಕ್ಷ್ಮಣ್ ತೆಲಗಾವಿ, ೧೯೮೮, ‘ಮದಕರಿ’ ‘ವಿಶ್ಲೇಷಣೆ’, ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ, ಸಂಪುಟ-೭೩, ಸಂಚಿಕೆ-೨, ಬೆಂಗಳೂರು.

೧೦. Ananthakrishna Iyer, L.Lk, 1988, The Myosre Tribes and Castes (Vol-2), Mittal Publications Delhi.

೧೧. Edgar Thurston and K. Rangachari, 1987, Castes and Tribes of Southern India, Vol-1, Asian Educational Services, New Delhi.

ಕೃಪೆ : ಮನೆ, ಸಮಾಜ ಮತ್ತು ಸಂಸ್ಕೃತಿ

* * *