ಹಿಂದೂಗಳಲ್ಲಿರುವಷ್ಟು ಜಾತಿಗಳು ಮತ್ತು ಅವುಗಳ ಪ್ರಭೇದಗಳು ಇಡೀ ವಿಶ್ವದಲ್ಲಿ ಮತ್ತಿನ್ನಾವ ಜನಾಂಗದಲ್ಲೂ ಕಂಡುಬರುವುದಿಲ್ಲ. ಅನೈಕ್ಯತೆಯಲ್ಲಿ ಐಕ್ಯತೆಯನ್ನು ಸಾಧಿಸಿರುವುದೇ ಹಿಂದು ಧರ್ಮದ ವೈಶಿಷ್ಟ್ಯ. ಜಾತಿಯ ಪದ್ಧತಿಯಿಂದ ಅನೇಕ ಧಾರುಣ ಪರಿಣಾಮಗಳೂ ಆಗಿವೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಜಾತೀಯ ಪದ್ಧತಿಗಳನ್ನು ಪರಿಹರಿಸುವುದು ಸುಲಭವೂ ಅಲ್ಲ ಹಾಗೂ ಸಾಧ್ಯವೂ ಅಲ್ಲ. ಸಮಾನ ಧರ್ಮ, ಸಮಾನ ಧ್ಯೇಯ, ಸಮಾನ ಮನೋಭಾವ ಹಾಗೂ ಸಮಾನ ಸಂಕಲ್ಪಗಳನ್ನು ಹೊಂದಿರದೇ ಇರುವವರು ಬಹುಕಾಲ ಒಗ್ಗಟಾಗಿ ಬಾಳಲಾರರೆಂಬುದನ್ನು ನಮ್ಮ ದೇಶದ ರೀತಿಯು ಸಾರಿ ಸಾರಿ ಹೇಳುತ್ತಿದೆ. ಆದ್ದರಿಂದ ಜಾತೀಯ ಪದ್ಧತಿಯು ಪರಿಹರಿಸಲಾರದೊಂದು ಅನಿವಾರ್ಯವಾದ ಅನಿಷ್ಟವೆಂದೇ ಭಾವಿಸಬೇಕು. ಪ್ರಪಂಚದಲ್ಲಿ ಧರ್ಮದ ಆಧಾರದ ಮೇಲೆ ಒಗ್ಗಟ್ಟಾಗಿ ಜನತೆಯು ಬಾಳಿರುವಂತೆ ಬೇರಿನ್ನಾವ ಸಾಧನದಿಂದಲೂ ಬಾಳಿರುವುದು ಕಂಡು ಬರುವುದಿಲ್ಲ. ಸಮಾನ ಆರ್ಥಿಕ ಪರಿಸ್ಥಿತಿ, ಸಮಾನ ಸಾಮಾಜಿಕ ಪರಿಸ್ಥಿತಿ, ಎಲ್ಲ ರಂಗಗಳಲ್ಲೂ ಸಮಾನ ಅವಕಾಶಗಳು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ವಿದ್ಯಾವಂತರಾಗುವಿಕೆ-ಇವು ಮೂಡಿದಂದು ಜಾತೀಯ ಕಟ್ಟುಕಟ್ಟಳೆಗಳೆಲ್ಲಾ ತಾವೇ ತಾವಾಗಿ ಸಡಿಲಗೊಳ್ಳುತ್ತವೆ.

ಪ್ರತಿ ಜಾತಿಗೂ ಅದರದೇ ಆದಂತಹ ದೇವರುಗಳು, ಹಬ್ಬಗಳು, ಪೂಜಾ ವಿಧಾನಗಳು, ಉಡಿಗೆ ತೊಡಿಗೆಗಳು, ಸಂಪ್ರದಾಯಗಳು, ಮೂಢನಂಬಿಕೆಗಳು ಮತ್ತು ಜನನದಿಂದ ಮರಣಾಂತ್ಯದವರೆಗೆ ನಡೆಸುವ ಕರ್ಮಗಳು ಇರುತ್ತವೆ. ಇವುಗಳ ಆಧಾರದ ಮೇಲೆಯೇ ಒಬ್ಬ ವ್ಯಕ್ತಿಯು ಯಾವ ಜಾತಿಗೆ ಸೇರಿದವನೆಂದು ಗುರ್ತಿಸಲು ಸಾಧ್ಯವಿರುವಂತೆ ಆಯಾ ಜಾತಿಯವರು ಅವುಗಳನ್ನು ಅನುಷ್ಠಾನದಲ್ಲಿಟ್ಟುಕೊಂಡಿರುವರು. ಈ ಜಾತಿಯ ಬಾಹ್ಯ ಲಕ್ಷಣಗಳನ್ನು ಪಟ್ಟಣಗಳ ನಾಗರೀಕತೆಯ ಮೇಳಗಳಲ್ಲಿ ಕಾಣುವುದು ಸುಲಭವಾದದ್ದಲ್ಲ. ಆದರೆ ಗ್ರಾಮಾಂತರ ಪ್ರದೇಶಗಳಲ್ಲಿ ಅವು ಸೋಂಪಾಗಿ ಬೆಳದಿದ್ದು ಸುಲಭವಾಗಿ ಗೋಚರವಾಗುತ್ತವೆ. ಗ್ರಾಮಾಂತರ ಪ್ರದೇಶಗಳೇ ಪ್ರಾಚೀನ ಭಾರತೀಯ ಪರಂಪರೆಗಳನ್ನು ಉಳಿಸಿಕೊಂಡು ಬಂದಿರುವ ರಕ್ಷಣಾಗಾರಗಳಂತಹ “ಮ್ಯೂಸಿಯಂ”ಗಳು. ಗ್ರಾಮಾಂತರ ಪ್ರದೇಶಗಳಲ್ಲಿ ಹಾಗೂ ಕಾಡು ಮೇಡುಗಳಲ್ಲಿ ವಾಸಿಸುವ ಈ ಕೆಳಗಿನ ಆಚಾರ-ವಿಚಾರ, ಉಡಿಗೆ-ತೊಡಿಗೆ, ಹಬ್ಬ-ಹರಿದಿನಗಳು, ಧರ್ಮ-ಕರ್ಮ, ಇಷ್ಟ-ಅನಿಷ್ಟ, ಊಟ-ಉಪಚಾರ, ರೀತಿ-ನೀತಿ ಹಾಗೂ ನಂಬಿಕೆ-ಅಪನಂಬಿಕೆಗಳನ್ನು ಅನುಷ್ಠಾನದಲ್ಲಿಟ್ಟುಕೊಂಡಿರುವ ಜನರನ್ನು ಗಮನಿಸಿ :-

ದೀರ್ಘದೇಹಿಗಳೂ ಅಷ್ಟೇ ದೃಢಕಾಯರಾಗಿಯೂ ಕೃಷ್ಣವರ್ಣವನ್ನು ಹೊಂದಿದ್ದು ಬರಿಗಾಲಿನಲ್ಲೇ ಬಹುಮಟ್ಟಿಗೆ ನಡೆಯುವವರು, ಮೈತುಂಬ ಹೊದೆಯುವುದು ನಿಷಿದ್ಧವೆಂದು ಪರಿಗಣಿಸಿ, ಸೊಂಟದಿಂದ ಕೆಳಕ್ಕೆ ಒಂದು “ಚಡ್ಡಿ” ಮತ್ತು ತಲೆಗೆ ಒಂದು “ಲಪ್ಪಟ್ಟೆ” ಧರಿಸುವ ಗಂಡಸರು ಮತ್ತು ಸೀರೆಯನ್ನು ಮಾತ್ರ ಉಟ್ಟು, ಸೆರಗಿನಿಂದಲೇ ಎದೆ ಮುಚ್ಚಿ ಕೊಳ್ಳುವ ಸ್ತ್ರೀಯರು; ಬೇಟೆ, ಬೇಸಾಯ ಮತ್ತು ಪಶುಪಾಲನೆಯನ್ನೇ ಜೀವನೋಪಾಯ ಮಾಡಿಕೊಂಡಿರುವವರು; ಭಾದ್ರಪದ ಮಾಸದಲ್ಲಿ ಮಾರಿಹಬ್ಬವನ್ನೂ, ಯುಗಾದಿ ಹಾಗೂ ವಿಜಯದಶಮಿಯಂದು ಪಿತೃಹಬ್ಬಗಳನ್ನೂ, ಉಳಿದಂತೆ ಗುಗ್ಗರಿ ಹಬ್ಬ ಮತ್ತು ಎತ್ತಿನ ಹಬ್ಬಗಳನ್ನು ಮಾತ್ರ ಆಚರಿಸುವವರು; ಬುಟ್ಟಿ ದೇವರುಗಳನ್ನು ಮಾತ್ರ ದೇವರೆಂದು ಸ್ವೀಕರಿಸಿ ಅವುಗಳಿಗೆ ನಡೆದುಕೊಳ್ಳುವವರು; ಬಿದಿರಿನ ಬುಟ್ಟಿಗಳಲ್ಲಿ ಸಾಲಿಗ್ರಾಮ ಮತ್ತು ಲಿಂಗಗಳನ್ನಿಟ್ಟಿದ್ದು ಬುಟ್ಟಿಗಳನ್ನು ಯಾವಾಗಲೂ ಮುಚ್ಚಿಟ್ಟಿರುವರು; ಈ ಬುಟ್ಟಿಗಳನ್ನು ದೇವಾಲಯಗಳಲ್ಲಿಟ್ಟಿದ್ದು ಯಜಮಾನರುಗಳ ನೇತೃತ್ವದಲ್ಲಿ ಪೂಜಾರಿಗಳು ಪೂಜೆ ಸಲ್ಲಿಸುತ್ತಾರೆ; ವರ್ಷದಲ್ಲಿ ಯಾವುದಾದರೂ ವಿಶೇಷ ಸಂದರ್ಭಗಳಲ್ಲಿ ಈ ಬುಟ್ಟಿದೇವರು ಗಳನ್ನು ತೊರೆಗಳ ಬಳಿಗೆ ಒಯ್ಯುತ್ತಾರೆ; ಆಗ ಮಾತ್ರ ಬುಟ್ಟಿಯಲ್ಲಿನ ಸಾಲಿಗ್ರಾಮ ಮತ್ತು ಲಿಂಗಗಳನ್ನು ಹೊರಕ್ಕೆ ತೆಗೆಯುತ್ತಾರೆ; ತೊರೆಯ ಬಳಿ ನೆಲವನ್ನು ತೋಡಿ, ಅಲ್ಲಿ ಬರುವ ಜಲದಿಂದಲೇ ಸಾಲಿಗ್ರಾಮ ಮತ್ತು ಲಿಂಗಗಳಿಗೆ ಜಲಾಭಿಷೇಕವನ್ನು ಪೂಜಾರಿಗಳು ತೆರೆಯ ಮರೆಯಲ್ಲಿ ಮಾಡುತ್ತಾರೆ; ಸಾಲಿಗ್ರಾಮ ಮತ್ತು ಲಿಂಗಗಳನ್ನು ಪ್ರತ್ಯೇಕವಾಗಿ ಕಟ್ಟಿ ಬುಟ್ಟಿ ಗಳಲ್ಲಿಟ್ಟು, ಬುಟ್ಟಿಯನ್ನು ಮುಚ್ಚುತ್ತಾರೆ. ಈ ಪೂಜಾ ಕಾರ್ಯ ನಡೆಯುವಾಗ ಪೂಜಾರಿಗಳು ಮಡಿಯಲ್ಲಿದ್ದು, ಬಾಯಿಗೆ ಬಟ್ಟೆಯನ್ನು ಕಟ್ಟಿಕೊಂಡು ಬಹಳ ಶ್ರದ್ಧೆಯಿಂದಲೂ ಭಯಭಕ್ತಿ ಯಿಂದಲೂ ಕೂಡಿರುತ್ತಾರೆ. ಈ ದೇವರುಗಳಿಗೆ ಅರ್ಪಿಸುವ ನೈವೇದ್ಯವೆಂದರೆ ಕೆಲವು ಜನ ನಿರ್ದಿಷ್ಟ ನಾಯಕರು ಮೀಸಲಾಗಿ ನೀಡಿದ ಹಾಲು ಹಾಗೂ ಭಕ್ತಾದಿಗಳು ನೀಡಿದ ಬಾಳೆಹಣ್ಣು ಮತ್ತು ತೆಂಗಿನಕಾಯಿ. ಭಕ್ತರು ಬುಟ್ಟಿಗಳಿಂದ ಬಹುದೂರದಲ್ಲಿ ಭಯ ಭಕ್ತಿಗಳಿಂದ ನಿಂತಿರುವರು; ಈ ಬುಟ್ಟಿಗಳಲ್ಲಿರುವ ಸಾಲಿಗ್ರಾಮ ಮತ್ತು ಲಿಂಗವು ಕ್ರಮವಾಗಿ ವೈಷ್ಣವ ಮತ್ತು ಶೈವ ಪಂಥದವರ ದೈವಗಳು. ಭಕ್ತಾದಿಗಳಲ್ಲಿ ವೈಷ್ಣವ ಸಂಪ್ರದಾಯದವರು ಮತ್ತು ಶೈವ ಸಂಪ್ರದಾಯದವರೆಂದು ಎರಡು ಪಂಥಗಳೇ ಇವೆ. ಪೂಜಾರಿಯಾದವರು ಮಾತ್ರ ಎರಡು ದೈವಗಳಿಗೂ ಸಮಾನ ರೀತಿಯಲ್ಲಿ ಪೂಜೆ ಸಲ್ಲಿಸುತ್ತಾರೆ. ವೈಷ್ಣವ ಪಂಥದವರು ಹಾಗೂ ಶೈವ ಪಂಥದವರು ವಿಭೂತಿ ಧರಿಸುತ್ತಾರೆ; ಆದರೆ ಶೈವ ಪಂಥದವರು ನಾಮವನ್ನು ಮಾತ್ರ ಧರಿಸುವುದಿಲ್ಲ; ಒಂದು, ಎರಡು ಹಾಗೂ ಮೂರು ನಾಮಗಳನ್ನು ವೈಷ್ಣವ ಪಂಥದವರು ತಮ್ಮ ತಮ್ಮ ಸಂಪ್ರದಾಯದಂತೆ ಧರಿಸುತ್ತಾರೆ. ಗುಗ್ಗರಿ ಹಬ್ಬ ಮತ್ತು ಎತ್ತಿನ ಹಬ್ಬದ ದಿನಗಳಲ್ಲಿ ಬುಟ್ಟಿ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ಹಬ್ಬಗಳನ್ನು “ಉದಿ”, “ಪದಿ”ಗಳ ಸೇರುವಿಕೆಯ ದಿನವೆಂದು ಕರೆಯುತ್ತಾರೆ. “ಉದಿ” ಎಂದರೆ ಬುಟ್ಟಿಯ ದೇವರುಗಳು ಮತ್ತು “ಪದಿ” ಎಂದರೆ ದೇವರ ಬಸವಗಳು ಎಂದು ರೂಢಿಗೆ ಬಂದಿದೆ; ಆ ದಿನ ಬುಟ್ಟಿ ದೇವರುಗಳನ್ನೂ ದೇವರ ಬಸವನನ್ನೂ ಪೂಜಿಸುವುದರಿಂದ ಸೇರುವಿಕೆಯ ದಿನವೆನ್ನುತ್ತಾರೆ. ಆ ಸಂದರ್ಭದಲ್ಲಿ ಭಕ್ತಾದಿಗಳು ತಮ್ಮ ತಮ್ಮ ಪಂಗಡಗಳ ನಾಯಕರ ಮುಖಾಂತರ “ಕಾಸಿನ ಕಾಣಿಕೆ”ಯನ್ನೂ ಮತ್ತು “ಮೀಸಲು ಹಾಲು”ಗಳನ್ನೂ ಸಮರ್ಪಿಸುತ್ತಾರೆ. ಯುಗಾದಿಯಂದು ಆಚರಿಸುವ ಪಿತೃಹಬ್ಬದಲ್ಲಿ ಮಾತ್ರ ಸಿಹಿ ಊಟ ಉಣ್ಣುವರು. ವಿಜಯದಶಮಿಯಂದು ಆಚರಿಸುವ ಪಿತೃಹಬ್ಬದಲ್ಲಿ ಮಾಂಸ,  ಸಿಹಿ ಆಹಾರ ಉಪಯೋಗಿಸುತ್ತಾರೆ. ಬುಟ್ಟಿದೇವರು ಮತ್ತು ದೇವರ ಬಸವಗಳ ಸಾತ್ವಿಕ ಪೂಜೆಯಲ್ಲದೆ ಮಾರಿದೇವತೆಯ ಪೂಜೆಯನ್ನು ಭಾದ್ರಪದ ಮಾಸದಲ್ಲಿ ಕುರಿ, ಕೋಣ, ಕೋಳಿ ಹಾಗೂ ಮೇಕೆಗಳ ಬಲಿ ಮುಖಾಂತರ ಅವರವರ ಶಕ್ತ್ಯಾನುಸಾರ ಹಾಗೂ ಪದ್ಧತಿ ಮತ್ತು ಹರಕೆಗಳ ಪ್ರಕಾರ ನಡೆಸುತ್ತಾರೆ; ಇದೂ ಅಲ್ಲದೆ ಬೇವಿನ ಮರವನ್ನು ದೇವಿ ಮರವೆಂದೂ ಮತ್ತು ಬನ್ನಿ ಮರವನ್ನು ಮಹಾಕಾಳಿಯ ಮರವೆಂದೂ ಸ್ವೀಕರಿಸಿ, ಕೆಲವು ಬೇವಿನ ಮರಗಳ ಮತ್ತು ಬನ್ನಿಮರಗಳ ಬುಡದ ಹತ್ತಿರ ಕಲ್ಲುಗಳನ್ನು ಪ್ರತಿಷ್ಠಾಪಿಸಿ, ಅವುಗಳನ್ನೇ ದೇವಿ ಮತ್ತು ಮಹಾಕಾಳಿಯೆಂದು ಪೂಜಿಸುತ್ತಾರೆ. ಮಾರಿ, ದೇವಿ, ಮಹಾಕಾಳಿ ಮುಂತಾದ ದೈವಗಳು ಕೆಲವು ನಿರ್ದಿಷ್ಟ ಜನರ ಮೈಯಲ್ಲಿ ಆಗಾಗ್ಗೆ ಆವಾಹನೆಯಾಗಿ ಸೂಚನೆಗಳನ್ನು ನೀಡುತ್ತವೆಯೆಂದು ನಂಬಿ, ಆ ಸೂಚನೆಗಳನ್ನು ಎಷ್ಟೇ ಅಡ್ಡ ಬರಲಿ ಸ್ವೀಕರಿಸಿ ಪಾಲಿಸಿಯೇ ತೀರುತ್ತಾರೆ. ಕೆಲವು ಜನರು ಬೇರೆ ಬೇರೆ ದೇವರುಗಳನ್ನೂ ತಮ್ಮ ಕುಲದೈವವೆಂದು ಸ್ವೀಕರಿಸಿ ಆ ದೇವರುಗಳಿಗೆ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಆದ್ದರಿಂದಲೇ ಹುಟ್ಟುವ ಮೊದಲನೇ ಮಗುವಿಗೆ ಕುಲದೈವದ ಹೆಸರನ್ನೇ ಇಟ್ಟು ಆ ಮಗುವು ಗಂಡಾಗಲೀ ಅಥವಾ ಹೆಣ್ಣಾಗಲೀ ತಲೆಯ ಕೂದಲನ್ನು ಮುಡುಪಾಗಿ ಬೆಳೆಸಿ ಮೂರು ವರ್ಷಗಳೊಳಗೆ ಆ ದೇವರ ಸಮ್ಮುಖಕ್ಕೆ ಹೋಗಿ ಕೂದಲನ್ನು ತೆಗೆಸುತ್ತಾರೆ. ಮತ್ತು ಅಲ್ಲೇ ಅದರ ಕಿವಿ ಚುಚ್ಚುವ ಶಾಸ್ತ್ರವನ್ನೂ ನಡೆಸುತ್ತಾರೆ. ಅತಿಥಿಗಳನ್ನು, ಯಜಮಾನರನ್ನೂ, ಪೂಜಾರಿಗಳನ್ನು ಹಾಗೂ ನೆಂಟರಿಷ್ಟರನ್ನು ಸತ್ಕರಿಸಲು ಕರಿಕಂಬಳಿಯನ್ನು ಪೀಠವಾಗಿ ಹಾಸುತ್ತಾರೆ; ಸತ್ತವರನ್ನು ಸ್ಮಶಾನಕ್ಕೆ ಒಯ್ಯುವಾಗ, ವಾರಸುದಾರನಾದವನು ಒಂದು ಮಣ್ಣಿನ ಮಡಿಕೆಯಲ್ಲಿ ಪಿಂಡವನ್ನಿಟ್ಟುಕೊಂಡು ಹೆಣದ ಮುಂದೆ ಸಾಗುತ್ತಾನೆ. ಮಾರ್ಗ ಮಧ್ಯದಲ್ಲಿ ಒಂದು ಹಸಿರು ಗಿಡದ ಬುಡದಲ್ಲಿ ಪಿಂಡದ ಮಡಕೆಯನ್ನಿಟ್ಟು, ಸ್ಮಶಾನ ಯಾತ್ರೆಯಲ್ಲಿ ಪಾಲ್ಗೊಂಡವರೆಲ್ಲರೂ ಕಲ್ಲುಗಳನ್ನು ಬೀರಿ ಆ ಮಡಕೆಯನ್ನು ನುಚ್ಚುನೂರು ಮಾಡುತ್ತಾರೆ. ನಂತರ ಹೆಣವನ್ನು ರುದ್ರಭೂಮಿಯಲ್ಲಿ ಸಮಾಧಿ ಮಾಡುತ್ತಾರೆ. ಮೂರನೆಯ ದಿನ ಸತ್ತವನ ಸಂಬಂಧಿಕರು ಸಮಾಧಿಗೆ ಪೂಜೆ ಮಾಡಿ ಮನೆಗೆ ಹಿಂದಿರುಗಿದ ನಂತರ “ಕರಿ”ಯನ್ನು ತೀರಿಸುತ್ತಾರೆ. ಯಾವ ಸ್ಥಳದಲ್ಲಿ ವ್ಯಕ್ತಿಯು ನಿಧನವಾದನೋ ಆ ಜಾಗದಲ್ಲಿ ಒಂದು ಟಗರು ಮರಿಯನ್ನು ಬಲಿ ಮಾಡುವ ಕರ್ಮಕ್ಕೆ “ಕರಿ”ಯೆಂದು ಹೆಸರು. ಅದೇ ಮಾಂಸದಿಂದ ಮನೆಮಂದಿಯಲ್ಲಾ ಅಡುಗೆ ಮಾಡಿ ಉಣ್ಣುತ್ತಾರೆ. ತೀರಾ ಬಡವರಾದವರು ಕಟುಕನಿಂದ ಟಗರಿನ ತಲೆಬುರುಡೆಯನ್ನು ಕೊಂಡು ತಂದಾದರೂ “ಕರಿ” ತೀರಿಸುತ್ತಾರೆ. ಕರಿ ತೀರಿಸುವ ಕರ್ಮ ಮುಗಿಯುವವರೆಗೆ ಅನ್ಯರಿಗೆ ಆ ಮನೆಗೆ ಪ್ರವೇಶವಿರುವುದಿಲ್ಲ. ಹದಿನಾಲ್ಕನೆಯ ದಿನ ಕೈಲಾಸ ಆರಾಧನೆಯನ್ನು ಸತ್ತವರ ಹೆಸರಿನಲ್ಲಿ ತಮ್ಮ ತಮ್ಮ ಯೋಗ್ಯತಾನುಸಾರವಾಗಿ ನಡೆಸುತ್ತಾರೆ.

ಈ ರೀತಿಯ ಆಚಾರ ವಿಚಾರಗಳನ್ನು ಹೊಂದಿರುವ ಜನರನ್ನು “ಯಾವ ಜಾತಿಗೆ ಸೇರಿದವರು” ಎಂದು ಪ್ರಶ್ನಿಸಿದರೆ ವಿಚಿತ್ರವೆನಿಸುವಂತಹ ಉತ್ತರಗಳು ಬರುತ್ತವೆ. ಕೆಲವರು, ತಾವು ನಾಯಕರೆಂದೂ, ಕೆಲವರು ತಾವು ನಾಯಕ ಮಕ್ಕಳೆಂದೂ, ಕೆಲವರು ಬೇಡರೆಂದೂ, ಮತ್ತೆ ಕೆಲವರು ವಾಲ್ಮೀಕಿಗಳೆಂದೂ, ಇನ್ನೂ ಕೆಲವರು ಶಬರರೆಂದೂ, ಇನ್ನೂ ಕೆಲವರು ಕಾಡು ಸಂಚರೆಂದೂ, ಕೆಲವರು ಕಿರಾತರೆಂದೂ, ಕೆಲವರು ಪರಿವಾರದವರೆಂದೂ, ಕೆಲವರು ಪಾಳೆಯಗಾರರೆಂದೂ, ಇನ್ನೂ ಕೆಲವರು ತಳವಾರರೆಂದೂ ಮತ್ತೆ ಕೆಲವರು ಬಿಲ್ಲರೆಂದೂ ಹೇಳುತ್ತಾರೆ. ಏಕರೀತಿಯ ಮತೀಯ ಪದ್ಧತಿಗಳಿದ್ದರೂ ತಾವುಗಳು ಬೇರೆ ಬೇರೆಯೆಂದು ಹೇಳಿಕೊಳ್ಳುವರಲ್ಲದೆ ಒಂದು ಹೆಸರಿನ ಪಂಗಡದವರು ಮತ್ತೊಂದು ಹೆಸರಿನ ಪಂಗಡದವ ರೊಡನೆ ಕೊಳು ಕೊಡೆ ನಂಟನ್ನೂ ಹೊಂದಿರುವುದಿಲ್ಲವೆಂದರೆ ವಿಸ್ಮಯವಾಗುತ್ತದೆ. ಇವರ ಮತೀಯ ನಡವಳಿಕೆಗಳಿಂದ ಇವರೆಲ್ಲರೂ ಒಂದೇ ಮೂಲದಿಂದ ಬಂದಿದ್ದು, ಪರಿಸ್ಥಿತಿ ಮತ್ತು ಸನ್ನಿವೇಶಗಳ ಒತ್ತಡದಿಂದಾಗಿ ಬೇರೆ ಬೇರೆಯಾಗಿದ್ದೇವೆಂದು ಹೇಳುತ್ತಾರೆಂಬುದು ಅರ್ಥವಾಗುತ್ತದೆ. ಹಾಗಿದ್ದ ಮೇಲೆ ಈ ಬುಡಕಟ್ಟಿನವರು ಎಂದಿನವರು? ಎಲ್ಲಿಯವರು? ಮತ್ತು ಯಾವ ಮೂಲದಿಂದ ಬಂದವರು? ಇದನ್ನು ಇತಿಹಾಸ, ಪುರಾಣ ಮತ್ತು ಕಾವ್ಯಗಳ ಅಧ್ಯಯನದಿಂದ ಪತ್ತೆ ಹಚ್ಚಬಹುದಲ್ಲವೇ?

ಈ ಬುಡಕಟ್ಟಿನ ಜನರ ಒರಟುತನ, ಸದೃಢವಾದ ಶರೀರ, ಬೇಟೆಯಾಡುವಿಕೆ, ಪಶುಪಾಲನೆ, ಬೇಸಾಯ ಮಾಡುವಿಕೆ, ಮೇಲಿನ ಅಲ್ಪ ಉಡುಪು ಮತ್ತು ಮನೆಗಳಲ್ಲಿಟ್ಟು ಕೊಂಡಿರುವ ಆಯುಧಗಳು, ಇವುಗಳನ್ನು ಗಮನಿಸಿದರೆ, ಇವರೆಲ್ಲಾ ಕಾಡುಗಳಲ್ಲಿ ವಾಸ ಮಾಡುತ್ತಿದ್ದವರೆಂದು ತೋರಿ ಬರುತ್ತದೆ. ಕಾಡುಗಳಲ್ಲಿ ಸಾಮಾನ್ಯವಾಗಿ, ನಮ್ಮ ಕರ್ನಾಟಕ ದಲ್ಲಿ ಇಂದಿಗೂ ವಾಸಮಾಡುತ್ತಿರುವ ಜನಾಂಗಗಳೆಂದರೆ ಕಾಡುಕುರುಬರು, ಕಾಡುಗೊಲ್ಲರು, ಹಕ್ಕಿಪಿಕ್ಕಿಯವರು, ತೋಡರು ಮತ್ತು ಬೇಡರು. ಇವರೆಲ್ಲಾ ಭಿನ್ನ ಭಿನ್ನ ಜಾತಿಯವರೆಂದು ಅವರ ಭಾಷೆ, ದೇವರುಗಳು, ಆಹಾರ ಪಾನೀಯ ಹಾಗೂ ಕಂದಾಚಾರಗಳಿಂದ ಹೇಳಬಹುದು. ಕಾಡುಕುರುಬರು ಗ್ರಾಮ್ಯ ಕನ್ನಡ ಭಾಷೆಯನ್ನಾಡುತ್ತಾರೆ. ಇವರು ಮಧ್ಯಪಾನ ಕೂಡ ಮಾಡುತ್ತಾರೆ. ವಿವಾಹಿತ ನವದಂತಿಗಳು ಹೆಣ್ಣು ಗರ್ಭವತಿಯಾಗುವವರೆಗೂ ಪ್ರತ್ಯೇಕವಾಗಿ ಒಂದು ಗುಡಿಸಿಲಿನಲ್ಲಿ ವಾಸ ಮಾಡಿಕೊಂಡಿರುವರು. ಬೇಸಾಯ, ಪಶುಪಾಲನೆ ಮತ್ತು ಬೇಟೆ ಇವರ ವೃತ್ತಿ. ಕಾಡುಗೊಲ್ಲರಲ್ಲಿ ಕೆಲವರು ಕನ್ನಡವನ್ನೂ ಮತ್ತೆ ಕೆಲವರು ತೆಲುಗು ಭಾಷೆಯನ್ನು ಆಡುವರು. ಕೃಷ್ಣನೇ ಇವರ ಆರಾಧ್ಯ ದೈವ. ಇವರ ಕೆಲವು ಆಚರಣೆಗಳು ಬಹಳ ಕಠೋರವಾದವು. ರಜಸ್ವಾಲೆಯಾದ ಸ್ತ್ರೀಯರು ಹದಿನಾಲ್ಕು ದಿನಗಳವರೆಗೆ ಬೇರೆಯವರೊಡನೆ ಬೆರೆಯದೆ ಪ್ರತ್ಯೇಕವಾಗಿರಬೇಕು. ಹೆರಿಗೆಯಾದ ಮೂರು ತಿಂಗಳವರೆಗೆ ಬಾಣಂತಿಯಾದವಳು ಪ್ರತ್ಯೇಕವಾದ ಗುಡಿಸಲಿನಲ್ಲಿ ಏಕಾಂಗಿಯಾಗಿ ವಾಸಿಸಬೇಕು. ಬೇಸಾಯ ಮತ್ತು ಪಶುಪಾಲನೆ ಮುಖ್ಯ ವೃತ್ತಿಗಳು. ಬಹಳಷ್ಟು ಜನರು ಸಸ್ಯಾಹಾರವನ್ನೇ ಉಪಯೋಗಿ ಸುವುದು. ಮಧ್ಯಸೇವನೆಯೂ ನಿಷಿದ್ಧ. ಹಕ್ಕಿಪಿಕ್ಕಿಯವರ ಭಾಷೆ ಗ್ರಾಮ್ಯವಾದ ಮರಾಠಿ. ಪಶುಪಾಲನೆ ಮತ್ತು ಬೇಟೆ ಇವರ ಮುಖ್ಯ ವೃತ್ತಿ. ಇವರು ಅಲೆಮಾರಿಗಳಾಗಿದ್ದರಿಂದ ಮನೆಗಳನ್ನು ಕಟ್ಟಿಕೊಳ್ಳುವುದಿಲ್ಲ ಮತ್ತು ಬೇಸಾಯವನ್ನು ಮಾಡುವುದಿಲ್ಲ. ತೋಡರು ಮಾರಿಮಸಣಗಳ ಆರಾಧಕರು; ಇವರ ಭಾಷೆ ಯಾವ ಮೂಲದ್ದೆಂದು ಹೇಳುವುದು ಕಷ್ಟ. ಬೇಟೆ ಮತ್ತು ಪಶುಪಾಲನೆ ಇವರ ವೃತ್ತಿ. ಕಾಡು ಇಲಿಗಳನ್ನು ಬೇಟೆಯಾಡಿ ಅವುಗಳ ಮಾಂಸ ಭಕ್ಷಣೆ ಇವರಲ್ಲುಂಟು. ಮಧ್ಯಪಾನ ಕೂಡ ಮಾಡುತ್ತಾರೆ. ಬೇಡರ ಮಾತೃಭಾಷೆ ತೆಲುಗು. ಮಧ್ಯಪಾನ ಇವರಲ್ಲಿ ನಿಷೇಧ; ಬೇಟೆ, ಬೇಸಾಯ ಮತ್ತು ಪಶುಪಾಲನೆ ಇವರ ಕಸುಬು; ಇವರ ಬುಟ್ಟಿದೇವರುಗಳು, ಪಿಂಡ ಪ್ರಧಾನ ಮತ್ತು ಕರಿ ತೀರಿಸುವುದು ಇವರದ್ದೇ ಆದದ್ದು. ಅಂದರೆ, ಕಾಡಿನಲ್ಲಿ ವಾಸಿಸುವ ಜನರಲ್ಲಿ ಬೇಡರು ಪ್ರತ್ಯೇಕ ಜಾತಿಗೆ ಸೇರಿದವರೆಂಬ ಲಕ್ಷಣಗಳಿವೆಯೆಂಬುದು ಸ್ಪಷ್ಟವಾಗುತ್ತದೆ. ಬೇಡರ ಜಾತಿಗೆ ಸೇರಿದವರಲ್ಲಿ ಕೆಲವರು ನಾಯಕರುಗಳೆಂದು ಕರೆದುಕೊಳ್ಳುತ್ತಾರೆಂದು ವಿವೇಚಿಸಿದೆವಷ್ಟೆ. ನಾಯಕರುಗಳೆಂದು ಹೇಳಿ ಕೊಳ್ಳುವ ಬೇರೆಯವರು ಇದ್ದಾರೆ. ಆದರೆ ಅವರೆಲ್ಲಾ ಬೇರೆ ಜಾತಿಗೆ ಸೇರಿದವರಾಗಿದ್ದು, ತಮ್ಮ ವಂಶದ ಮುಖಂಡತ್ವದ ಸಂಕೇತವಾಗಿ ಹೆಸರುಗಳ ಕೊನೆಯಲ್ಲಿ “ನಾಯಕ” ಎಂದು ಇಟ್ಟುಕೊಂಡಿರುತ್ತಾರೆ. ಗ್ರಾಮವಾಸಿಗಳಾದಂತಹ ಲಂಬಾಣಿಗಳು, ಬ್ರಾಹ್ಮಣರು, ಒಕ್ಕಲಿಗರು ಹಾಗೂ ಕೆಲವು ಜಾತಿಯವರು “ನಾಯಕ” ಎಂಬ ವಂಶಾವಳಿಯ ಸಂಕೇತ ಹೊಂದಿದ್ದಾರೆಯೇ ಹೊರತು ಅವರಾರೂ ಅಡವಿವಾಸಿಗಳಾಗಿದ್ದ ಬೇಡರಲ್ಲ.

ಬೇಡರ ಮೂಲ ಮತ್ತು ಪರಂಪರೆ

ಕಾಡುಗಳಲ್ಲಿದ್ದು ಬೇಟೆಯಾಡಿಕೊಂಡು ಜೀವಿಸುತ್ತಿದ್ದ ಜನ ಅನಾದಿ ಕಾಲದಿಂದಲೂ ಇದ್ದರೆಂಬುದು ಆದಿಮಾನವನ ನಡವಳಿಕೆಗಳನ್ನು ತಿಳಿದ ಮೇಲೆ ಸ್ವಯಂ ವೇದ್ಯವಾಗುತ್ತದೆ. ಕೃತ ಮತ್ತು ತ್ರೇತಾಯುಗಗಳಲ್ಲಿದ್ದು ಆದಿಕಾವ್ಯವಾದ ರಾಮಾಯಣವನ್ನು ರಚಿಸಿದ ವಾಲ್ಮೀಕಿ ಮುನಿಯು ಬೇಡರವನು ಎಂದು ತಿಳಿದು ಬರುತ್ತದೆ. ಸತಿಯನ್ನು ಕಳೆದುಕೊಂಡು ನಿರ್ವೀಯನೂ ನಿಸ್ತೇಜನೂ ಆಗಿ ಕಾಡುಗಳನ್ನು ಅಲೆಯುತ್ತಿದ್ದ ಶ್ರೀರಾಮಚಂದ್ರನನ್ನು ಉಪಚರಿಸಿ ತನ್ನ ತಪಸ್‌ಶ್ರೀಯನ್ನೆಲ್ಲಾ ಆತನಿಗೆ ಅರ್ಪಿಸಿ ಹುತಾತ್ಮಳಾದ ಶಬರಿಯು ಬೇಡರವಳು. ಸಿದ್ದಿಗಳನ್ನು ಪಡೆಯದಿದ್ದ ಬ್ರಾಹ್ಮಣ ವಟುವಿಗೆ ಜೀವಿತ ವೇದಾಂತವನ್ನು ಉಪದೇಶಿಸಿದ ಧರ್ಮವ್ಯಾಧನು ಬೇಡರವನು. ಗುರುಭಕ್ತ ದುರಂಧರನೂ ಅತ್ಯಂತ ಧನುರ್ಧರನೂ ಎನಿಸಿದ ಏಕಲವ್ಯನು ಬೇಡರವನು. ಬೇಡರ ಪರಂಪರೆಗೆ ನಿರ್ದಿಷ್ಟ ಸಾಂಸ್ಕೃತಿಕ ಅಸ್ತಿಭಾರವನ್ನು ಹಾಕಿಕೊಟ್ಟ ಮೂಗನಾಯಕನು ಬೇಡರವನು. ಭೀಮಭಕ್ತಿಯ ಕಣ್ಣಪ್ಪನು ಬೇಡರವನು. ಕುಮ್ಮಟದುರ್ಗದ ರಕೇಸರಿ ಕುಮಾರರಾಮನೂ ಬೇಡರವ. ಕರ್ನಾಟಕದ ಸುವರ್ಣಯುಗವೆಂದು ಇತಿಹಾಸದಲ್ಲಿ ಹೇಳಲ್ಪಡುವ ಆಳ್ವಿಕೆ ನಡೆಸಿದ ವಿಜಯನಗರದ ಕೃಷ್ಣದೇವರಾಯನು ಬೇಡರವನು. ಶೂರಶ್ರೇಷ್ಠನೂ ಭೀಮ ಬಲವುಳ್ಳವನೂ ಮತ್ತು ಪ್ರಚಂಡ ಸ್ವಾತಂತ್ರ್ಯಪ್ರಿಯನೂ ಆದ ಚಿತ್ರದುರ್ಗದ ಮದಕರಿನಾಯಕನು ಬೇಡರವನು. ಅಂದ ಮೇಲೆ ಕೃತಯುಗದಿಂದ ಇಂದಿನವರೆಗೂ ಬೇಡರು ಒಂದು ಪ್ರತ್ಯೇಕ ಜಾತಿಯಾಗಿ ಬಾಳಿದ್ದಾರೆಂಬುದು ಸ್ವಯಂವೇದ್ಯ.

ಬೇಡ ಎಂಬ ಕನ್ನಡ ಪದವು ವ್ಯಾಧ ಪದದ ಅಪಭ್ರಂಶವೆಂದು ಪಂಡಿತರು ಅಭಿಪ್ರಾಯ ಪಡುತ್ತಾರೆ. “ವ”ಕಾರಕ್ಕೆ ಬದಲಾಗಿ “ಬ”ಕಾರ ಪ್ರಯೋಗ ಭಾರತದಲ್ಲಿ ಮಾಮೂಲಿಯಾಗಿದೆ. ವಂಗ, ರಂದ್ರ, ವಾಳ್ ಮೊದಲಾದ ಪದಗಳನ್ನು ಬಂಗ, ರಬೀಂದ್ರ, ಬಾಳ್ ಎಂದು ಕರೆಯುವ ರೂಢಿಯಿದೆ. “ಧ” ಕಾರವು “ಢ”ಕಾರವಾಗಿ ಪರಿವರ್ತಿಸಲ್ಪಟ್ಟಿರಲು ಸಾಧ್ಯ; ಈ ಎರಡು ಅಕ್ಷರಗಳ ಉಚ್ಚಾರದಲ್ಲಿ ಅಷ್ಟೇನೂ ಹೆಚ್ಚಿಗೆ ವ್ಯತ್ಯಾಸವಿಲ್ಲ. ಹೀಗೆ “ಬೇಡ” ಪದವು ಕನ್ನಡದಲ್ಲಿ ಬಳಕೆಗೆ ಬಂದಿರಬಹುದು. ವಿದ್ಯಾವಂತರಲ್ಲಿ ವ್ಯಾಧ, ಶಬರ, ಕಿರಾತ ಎಂಬ ಪದಗಳು ಬಳಕೆಯಲ್ಲಿದ್ದರೆ ಅವಿದ್ಯಾವಂತರ ಬಾಯಲ್ಲಿ “ಬೇಡ” ಪದವೇ ಉಚ್ಚರಿಸಲ್ಪಟ್ಟಿರಬಹುದು. ಇನ್ನೂ ಸಂಸ್ಕೃತ ಪದಗಳಾದ ಶಬರ ಹಾಗೂ ಕಿರಾತ ಎಂಬವು ಗಳನ್ನೂ ಕೆಲವರು ಉಪಯೋಗಿಸಿಕೊಳ್ಳುತ್ತಲಿದ್ದಾರೆ. “ಬೇಡ” ಪದವು ಈ ಜಾತಿಯವರಿಗೆ ಅನ್ವರ್ಥವಾಗಿಯೂ ಇರಬಹುದು, ಯಾರಿಂದಲೂ ಏನನ್ನೂ ಬೇಡದ ಜನರಿವರು; ಅಲ್ಲದೆ ಹಳೆಯಕಾಲದ ಯುದ್ಧ ರೀತಿಗಳು ತಪ್ಪಿದ ಮೇಲೆ ಈ ಜನರು ಯಾರಿಗೂ “ಬೇಡ”ದವ ರಾಗಿಯೂ ಇರಬಹುದು! ಹಿಂದಿನ ಕಾಲದಲ್ಲಿ ರಾಜರ ಬಳಿಯೂ ಬೇಡರ ಪಡೆಗಳಿದ್ದು, ಆ ಪಡೆಗಳನ್ನು ಯುದ್ಧ ಕಾಲಗಳಲ್ಲಿ ಬಿಲ್‌ಪಡೆಗಳಾಗಿ ಉಪಯೋಗಿಸುತ್ತಿದ್ದರು ಮತ್ತು ಇತರೆ ಕಾಲಗಳಲ್ಲಿನ ವನ್ಯಮೃಗಗಳ ಹಾವಳಿ ಜಾಸ್ತಿಯಾದಾಗ ಬೇಟೆಯಾಡುವ ಪಡೆಗಳಾಗಿ ಉಪಯೋಗಿಸುತ್ತಿದ್ದರು. ಒಂದು ವಿಧದಲ್ಲಿ ಈ ಬೇಡರು ಯೋಧರೇ, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿರುವ ಬೇಡರ ಸಂಖ್ಯೆಯೆಷ್ಟೋ | ಈ ಮಾಜಿ ಯೋಧರ ಪೀಳಿಗೆಯವರು ಸಮಾಜಕ್ಕೆ ಬೇಡವಾಗಿದ್ದಾರೆಂದರೆ ಎಂತಹ ಪುರಸ್ಕಾರ ನೀಡಲಾಗಿದೆಯೆಂದು ಯಾರಾದರೂ ಕೌತುಕಪಡಬೇಕಾದದ್ದೇ ಸರಿ!

ಬೇಡರೆಂದು ಕರೆದುಕೊಳ್ಳಬೇಕಾದ ಜನರು ನಾನಾ ಹೆಸರುಗಳನ್ನು ಇಟ್ಟುಕೊಂಡದ್ದಾ ದರೂ ಹೇಗೆ? ಅದಕ್ಕೆ ಅಂದಂದಿನ ಸನ್ನಿವೇಶಗಳೇ ಕಾರಣ. ವಾಲ್ಮೀಕಿ ಸಂತತಿಯವರು ತಮ್ಮ ಪ್ರಸಿದ್ಧ ಪೂರ್ವಿಕನ ಹೆಸರಿನಲ್ಲಿ ತಮ್ಮನ್ನು ವಾಲ್ಮೀಕಿಗಳೆಂದು ಕರೆದುಕೊಂಡು ಸಂತೃಪ್ತಿ ಪಡೆದಿದ್ದಾರೆ. ಕಾಡುಗಳಲ್ಲಿದ್ದು ಪಶುಪಾಲನೆಯನ್ನು ಮುಖ್ಯ ವೃತ್ತಿಯನ್ನಾಗಿ ಅವಲಂಬಿಸಿದವರು ತಮ್ಮ ಸಾಕು ಪ್ರಾಣಿಗಳನ್ನು ಕಾಡಿನಿಂದ ಕಾಡಿಗೆ ಅಟ್ಟಿಕೊಂಡು ಹೋಗಿ ಪೋಷಿಸುತ್ತಿದ್ದುದರ ಮೇಲೆ ತಮ್ಮನ್ನು ಕಾಡು ಸಂಚರು ಎಂದು ಕರೆದುಕೊಂಡಿದ್ದಾರೆ. ಮೂಗನಾಯಕನ ಅನುಯಾಯಿಗಳೆಲ್ಲಾ ತಮ್ಮನ್ನು ನಾಯಕರೆಂದು ಕರೆದುಕೊಳ್ಳುತ್ತಾರೆ. ಪಾಳೆಯಗಾರರ ಸಂತತಿಯವರು ತಮ್ಮನ್ನು ಪಾಳೆಗಾರರು ಅಥವಾ ದೊರೆಗಳೆಂದು ಕರೆದು ಕೊಳ್ಳುತ್ತಾರೆ. ಪಾಳೆಯಗಾರರ ಆಸ್ಥಾನಗಳಲ್ಲಿ ಅಂತರಂಗ ಸೇವಕರಂತಿದ್ದವರ ಪೀಳಿಗೆಯವರು ತಮ್ಮನ್ನು ರಾಜಪರಿವಾರದವರೆಂದು ಕರೆದುಕೊಳ್ಳುತ್ತಾರೆ. ಹಗಲಿರುಳೂ ಗ್ರಾಮಗಳ ರಕ್ಷಣಾಕಾರ್ಯಕ್ಕಾಗಿ ನಿಯಮಿಸಲ್ಪಟ್ಟಿದ್ದವರ ಸಂತತಿಯವರು ತಮ್ಮನ್ನು ತಳವಾರರೆಂದು ಕರೆದುಕೊಳ್ಳುತ್ತಾರೆ. ಕೆಲವರು, ಹಿಂದಿನಿಂದಲೂ ಉಪಯೋಗಿಸಿಕೊಳ್ಳುತ್ತಿದ್ದ ಶಬರ, ಕಿರಾತ ಮತ್ತು ಬಿಲ್ಲ ಪದಗಳನ್ನೇ ತಮ್ಮ ಜಾತಿಯೆಂದು ಉಳಿಸಿಕೊಂಡಿದ್ದಾರೆ. ನಾನಾ ಹೆಸರುಗಳು, ಒಂದೇ ಜಾತಿಯವರಿಗೆ ನಾನಾ ಕಾರಣಗಳಿಂದ ಬಂದಿರಬಹುದಾದರೆ, ಈ ಜಾತಿಯ ಮನುಕುಲದ ಮೂಲದಿಂದ ಎಂದು ಮತ್ತು ಹೇಗೆ ಕವಲೊಡೆಯಿತೆಂಬ ಕುತೂಹಲ ಉಂಟಾಗುವುದು ಸ್ವಾಭಾವಿಕವಷ್ಟೆ | ಅದರ ಅನ್ವೇಷಣೆಯಿಂದ, ನಾಗ ಕಲ್ಪಿಸಿಕೊಂಡಿರುವ ಬೇಡರೆಂಬ ಒಂದೇ ಜಾತಿಯ ಹತ್ತಾರು ಉಪಜಾತಿಗಳಿವೆ ಎಂಬ ಪ್ರಮೇಯಕ್ಕೆ ಸೈದ್ಧಾಂತಿಕ ಆಧಾರವೂ ದೊರೆತಂತಾಗುತ್ತದೆ.

ಬೇಡ ಜನಾಂಗದ ಮೂಲಪುರುಷ

ವೇದವ್ಯಾಸರಿಂದ ರಚಿಸಲ್ಪಟ್ಟಿರುವ ಭಾಗವತದಲ್ಲಿ ಬೇಡರ ಹುಟ್ಟಿನ ಬಗ್ಗೆ ಉಲ್ಲೇಖ ವಿದೆ. ಬಾಲ್ಯದಲ್ಲೇ ಮುಗ್ಧ ಭಕ್ತಿಯಿಂದ ವಿಷ್ಣುವನ್ನು ಸಾಕ್ಷಾತ್ಕಾರ ಮಾಡಿಕೊಂಡು ಶಾಶ್ವತ ವಾದ ನಕ್ಷತ್ರ ಲೋಕದ ಪಟ್ಟವನ್ನು ಗಳಿಸಿಕೊಂಡ ಧ್ರುವ ಚಕ್ರವರ್ತಿಯ ವಂಶದಲ್ಲಿ ಅಂಗನೆಂಬ ಚಕ್ರವರ್ತಿಯು ಧರ್ಮ ಮಾರ್ಗದಲ್ಲಿ ರಾಜ್ಯಭಾರ ಮಾಡುತ್ತಾ ಕೊನೆಗೆ ಅಶ್ವಮೇಧ ಯಜ್ಞವನ್ನು ಕೈಗೊಂಡನು. ಆದರೆ ದೇವತೆಗಳಾರು ಹವಿಸ್ಸನ್ನು ಸ್ವೀಕರಿಸಲು ಬರಲಿಲ್ಲ. ಪುತ್ರರಿಲ್ಲದವರು ನೀಡಿದ ಹವಿಸ್ಸನ್ನು ದೇವತೆಗಳು ಸ್ವೀಕರಿಸುವುದಿಲ್ಲ ಎಂದು ತಿಳಿದ ಮೇಲೆ ಮಗನನ್ನು ಪಡೆಯುವ ಉದ್ದೇಶದಿಂದ ಪುತ್ರಕಾಮೇಷ್ಠಿಯಾಗವನ್ನು ಮಾಡಿ, ವೇನನೆಂಬ ಪುತ್ರನನ್ನು ಪಡೆದನು. ವೇನನು ತನ್ನ ತಾತನಾದ ಮೃತ್ಯುದೇವತೆಯ ಮನೆಯಲ್ಲೇ ಬೆಳೆದುದರಿಂದ ಆತನಲ್ಲಿ ಸದ್ಗುಣಗಳಾವುವೂ ಮೂಡದೆ ದುರ್ಗುಣಗಳೇ ಬೆಳೆದವು. ಬೇಟೆಯಾಡುವುದು, ಪರಹಿಂಸೆ ಮಾಡುವುದರಲ್ಲೇ ಆನಂದಗೊಳ್ಳುತ್ತಿದ್ದ. ತಂದೆಯ ಮನೆಗೆ ಬಂದ ಮೇಲೂ ರಾಜ್ಯದ ಜನರನ್ನು ಗೋಳಾಡಿಸುತ್ತಿದ್ದ. ಮಗನ ಮೇಲಿನ ದೂರುಗಳು ಪ್ರತಿನಿತ್ಯ ತಂದೆಯ ಕಿವಿಗೆ ಬೀಳುತ್ತಿದ್ದವು. ಮಗನನ್ನು ತಿದ್ದುವುದರಲ್ಲಿ ವಿಫಲನಾದ ಅಂಗ ಚಕ್ರವರ್ತಿಯು ಪ್ರಜೆಗಳ ಮುಖದರ್ಶನ  ಮಾಡಲೂ ಅಳುಕಿ, ಒಂದು ರಾತ್ರಿ ಯಾರಿಗೂ ಗೊತ್ತಾಗದಂತೆ ರಾಜ್ಯವನ್ನು ತೊರೆದು ಹೊರಟು ಹೋದ. ಎಷ್ಟು ಹುಡುಕಿದರೂ ಅಂಗರಾಜನನ್ನು ಪತ್ತೆ ಮಾಡಲಾಗದಿದ್ದಾಗ, ಸಿಂಹಾಸನವು ಬರಿದಾಗಿದ್ದರೆ, ರಾಜ್ಯವು ಅನಾಯಕವಾಗುತ್ತದಲ್ಲಾ ಎಂದು, ಕೆಟ್ಟವನೆಂದು ತಿಳಿದಿದ್ದರೂ ವೇನನನ್ನೇ ಚಕ್ರಾಧಿಪತಿ ಯಾಗಿ ಪಟ್ಟ ಕಟ್ಟಿ ಸ್ವೀಕರಿಸಿದರು. ಚಕ್ರವರ್ತಿಯಾದ ಮೇಲಾದರೂ ಆತನ ಹೀನಗುಣಗಳೆಲ್ಲಾ ಹಿಂದಕ್ಕೆ ಸರಿಯುತ್ತವೆಯೆಂದು ಭಾವಿಸಿಕೊಂಡಿದ್ದ ಜನರ ಊಹೆಗಳೆಲ್ಲಾ ಹುಸಿಯಾದವು. ವೇನನು ತನಗೆ ಬಂದಂತೆ ರಾಜ್ಯಭಾರ ಮಾಡುತ್ತಿದ್ದನೇ ಹೊರತು, ಸಚಿವರ ಮತ್ತು ಗುರುಹಿರಿಯರ ಸಲಹೆಗಳಿಗೆ ಸೊಪ್ಪೂ ಹಾಕುತ್ತಿರಲಿಲ್ಲ. ತನ್ನ ರಾಜ್ಯದಲ್ಲಿ ಯಾರೂ ಯಾಗ ಯಜ್ಞಗಳೂ ಮತ್ತು ಧರ್ಮ ಕಾರ್ಯಗಳನ್ನೂ ಆಚರಿಸಕೂಡದೆಂದು ಆಜ್ಞೆ ಮಾಡಿದನು. ರಾಜ್ಯದ ಸುಖ ಶಾಂತಿಗಳಿಗೆ ಯಾಗ ಯಜ್ಞಗಳೂ ಮತ್ತು ಧರ್ಮ ಕಾರ್ಯಗಳೂ ಅನಿವಾರ್ಯವೆಂದು ಚಕ್ರವರ್ತಿಗೆ ಬುದ್ದಿವಾದ ಹೇಳಲು ಬಂದ ಋಷಿಮುನಿಗಳನ್ನೆಲ್ಲಾ ತನ್ನ ಚಾರ್ವಾಕ ಸರಣಿಯಿಂದ ಅವಹೇಳನ ಮಾಡಿದನು. ಹೊಟ್ಟೆ ಬಟ್ಟೆಗೆ ನೀಡಿ ಸಾಕಿಸಲಹುವ ಪತಿಯನ್ನು ತಿರಸ್ಕರಿಸಿ ವಿಟನಲ್ಲಿ ಪ್ರೇಮಗೊಳ್ಳುವ ಹೀನ ಸತಿಯಂತೆ, ರಾಜ್ಯದ ಸಕಲ ಪ್ರಜೆಗಳನ್ನೂ ದೈವದಂತೆ ಪೋಷಿಸುವ ಚಕ್ರವರ್ತಿಯನ್ನು ಬಿಟ್ಟು ಕಾಣದ ದೇವತೆಗಳಿಗೆ ಹವಿಸ್ಸನ್ನು ಅರ್ಪಿಸುವ ಋಷಿಮುನಿಗಳನ್ನು ಸೋಲಿಸಿ, ಅವರನ್ನು ನಿಂದಿಸಿ, ಮುಂದೆ ತನಗೆ ಮಾತ್ರ ಹವಿಸ್ಸನ್ನು ಅರ್ಪಿಸಬೇಕೆಂದು ಆಗ್ರಹ ಮಾಡಿದನು. ಚಕ್ರವರ್ತಿಯ ಈ ಪಾಷಾಂಡ ವರ್ತನೆಯಿಂದ ಕುಪಿತರಾದ ಮುನಿಗಳು ತಮ್ಮ ಹುಂಕಾರ ಮಾತ್ರದಿಂದಲೇ ಆತನನ್ನು ಗತಪ್ರಾಣನನ್ನಾಗಿ ಮಾಡಿದರು. ವೇನನಿಗೆ ಮಕ್ಕಳಿಲ್ಲದ್ದರಿಂದ, ಪಟ್ಟಕ್ಕೆ ಉತ್ತರಾಧಿಕಾರಿ ಯಿರದೆ ರಾಜ್ಯವು ಅನಾಯಕವಾಗುತ್ತದಲ್ಲಾ ಎಂದು ಚಿಂತಿಸಿ, ವೇನನ ತಾಯಿಯಾದ ಸುನೀತಿಯು ತನ್ನ ಮಂತ್ರಬಲದಿಂದಲೂ ಮತ್ತು ಋಷಿಗಳು ತಮ್ಮ ತಪೋಬಲದಿಂದಲೂ, ವೇನನ ದೇಹಕ್ಕೆ, ಸಂತಾನೋತ್ಪತ್ತಿಗೆ ಪ್ರಾಣ ಚೇತನ ನೀಡಿದರು. ವೇನನ ಅಂಶದಿಂದ ಬಾಹುಕನೆಂಬ ಪುತ್ರನು ಜನಿಸಿದನು. ಈ ಶಿಶುವನ್ನು ಕಂಡ ಸಮಸ್ತರಿಗೂ ಸಂಕಟವೇ ಆಯಿತು. ಸಿಂಹಾಸನವನ್ನೇರುವ ವ್ಯಕ್ತಿ ಲಕ್ಷಣಗಳಾವುವೂ ಆ ಮಗುವಿನಲ್ಲಿರಲಿಲ್ಲ. ಈ ಮಗುವಿಗೆ ವಿಕಾರರೂಪ, ಕಾಗೆಯಂತೆ ಕಪ್ಪಾದ ಬಣ್ಣ. ಕೆಂಪು ಕೂದಲುಗಳು, ಕೆಂಡದುಂಡೆ ಗಳಂತಹ ಕಣ್ಣುಗಳು, ಕುಬ್ಜವಾದ ದೇಹ, ಮೋಟು ಕೈಗಳು, ಚಪ್ಪಟೆಯ ಮೂಗು, ಉಬ್ಬಿದ ಗಲ್ಲ ಮತ್ತು ಚಿಕ್ಕ ಬಾಯಿಯಿರುವ ಮಗುವು ಜನಿಸಿದರೂ ಅವರುಗಳ ಆಕಾಂಕ್ಷೆ ಮಾತ್ರ ನೆರವೇರಲಿಲ್ಲ. ಇದಾದ ಕೆಲವು ಕಾಲದ ನಂತರ ವೇನನ ಅಂಶದಿಂದ ಸರ್ವಲಕ್ಷಣ ಗಳಿಂದ ಕೂಡಿದ ಮಗು ಜನಿಸಿತು. ಈ ಮಗುವಿಗೆ ಪೃಥು ಎಂದು ನಾಮಕರಣ ಮಾಡ ಲಾಯಿತು. ಪ್ರಾಪ್ತವಯಸ್ಸಿಗೆ ಬಂದ ಪೃಥುವೇ ಚಕ್ರವರ್ತಿಯಾದ. ಈತನನ್ನು ಸಾಕ್ಷಾತ್ ವಿಷ್ಣುವಿನ ಅಂಶದಿಂದಲೇ ಜನಿಸಿದವರೆಂದು ಈತನ ಬಲಗೈಲಿದ್ದ ಚಕ್ರದ ರೇಖೆಯಿಂದಲೂ ಮತ್ತು ಕಾಲುಗಳಲ್ಲಿದ್ದ ಪದ್ಮರೇಖೆಗಳಿಂದಲೂ ಗುರ್ತಿಸಲಾಯಿತು. ಈತನು ಶ್ರೇಷ್ಠ ಚಕ್ರವರ್ತಿಯೆನ್ನಿಸಿಕೊಂಡುದು ಮಾತ್ರವಲ್ಲದೆ ೯೯ ಯಾಗಗಳನ್ನೂ ಮಾಡಿ ಪ್ರಸಿದ್ಧನಾಗಿ, ಇಂದ್ರ ಪದವಿಗೆ ಭಾದ್ಯತೆಯುಳ್ಳವನಾದ್ದರಿಂದ, ಮಾತ್ಸರ್ಯದಿಂದ ಕೂಡಿದ ಇಂದ್ರನು ಈತನ ನೂರನೇ ಯಜ್ಞಕ್ಕೆ ಸಾಕಷ್ಟು ವಿಘ್ನಗಳನ್ನೊಡ್ಡಿ ಪೃಥುವಿನ ಕೈಗೆ ಸಿಕ್ಕಿಹಾಕಿಕೊಂಡು ಸಾಯುವ ಸ್ಥಿತಿಯಲ್ಲಿದ್ದಾಗ, ಮಹಾವಿಷ್ಣುವೇ ಅಲ್ಲಿಗೆ ಧಾವಿಸಿ ಇಂದ್ರನನ್ನು ಹೀಯಾ ಳಿಸಿದುದು ಮಾತ್ರವಲ್ಲದೆ ಪೃಥುವಿನಿಂದ ಆತನನ್ನು ರಕ್ಷಿಸಿದನು. ಮೋಕ್ಷ ಸಾಧನೆಯ ಉದ್ದೇಶದಿಂದಲೇ ಯಾಗಗಳನ್ನು ಮಾಡಿದ್ದ ಪೃಥುವು ಮೋಕ್ಷವನ್ನು ಪಡೆದನು. ಪೃಥುವು ಸರ್ವರಿಂದಲೂ ಮಾನ-ಸನ್ಮಾನ, ಹಿರಿಮೆ-ಗರಿಮೆ ಮತ್ತು ಅಧಿಕಾರ-ಪದವಿಗಳನ್ನು ಹೊಂದುತ್ತಿರುವಾಗ ಆತನಿಗಿಂತ ಹಿರಿಯನಾದ ಬಾಹುಕನು ಜನರ ತಾತ್ಸಾರಕ್ಕೂ ಪಾತ್ರ ನಾಗಿದ್ದನು. “ಚಂದನದಕೊರಡು ಮುರುಟಿರ್ದರೇನಾಯ್ತು ಗಂಧಕ್ಕೆ”? ಎನ್ನುವಂತೆ ಬಾಹ್ಯ ವಿಕೃತಿ ಯುದ್ಧ ಮಾತ್ರಕ್ಕೆ ಅಂತಹವನಲ್ಲಿ ಕೋಮಲ ಮನವಿರುವುದಿಲ್ಲವೇ? ಜೇಷ್ಠ ನಾದವನು, ಪಟ್ಟಕ್ಕಾಗಿಯೇ ಜನಿಸಿದವನು, ತನ್ನ ತಮ್ಮನ ಕೃಪಾಕಟಾಕ್ಷದಿಂದ ಬೆಳೆಯು ವಂತಹ ದೀನ ಪರಿಸ್ಥಿತಿ ಒದಗಿ ಬಂದಾಗ ಹೇಗೆ ಸಹಿಸಿಕೊಂಡಾನು? ಆತನಿಗೆ ತನು ವಿಕೃತಿಯಿತ್ತೆ ಹೊರತು ಮನ ವಿಕಾರವೇನೂ ಇರಲಿಲ್ಲವಲ್ಲಾ! ಕೂಳಿಗಾಗಿ ಬಿದ್ದಿರಲೇ ಬೇಕಾದಂತಹ ದುರ್ಬಲನೂ ಆಗಿರಲಿಲ್ಲ. ಗೌರವಾದರಗಳು ದೊರಕದೆಡೆಯಲ್ಲೂ ನೆಲೆಯೂರುವಷ್ಟು ಆತ್ಮಪ್ರತ್ಯಯವನ್ನು ಕಳೆದುಕೊಂಡವನಾಗಿರಲಿಲ್ಲ. ಆದ್ದರಿಂದ ತನ್ನ ಆತ್ಮೀಯರೊಡನೆ ರಾಜಧಾನಿಯನ್ನು ತೊರೆದು ಕಾಡಿಗೆ ತೆರಳಿದನು. ಈತನೂ ಮತ್ತು ಈತನ ಸಹಚರರೂ ಜೀವನ ನಿರ್ವಹಣೆಗಾಗಿ ಬೇಟೆ, ಬೇಸಾಯ ಮತ್ತು ಪಶುಪಾಲನೆಯನ್ನು ವೃತ್ತಿ ಮಾಡಿಕೊಂಡರು. ಇವರ ಪೀಳಿಗೆಯವರಲ್ಲಿ ದೀರ್ಘ ಮತ್ತು ದೃಢವಾದ ದೇಹ, ಕಷ್ಟಸಹಿಷ್ಣತೆ, ಆರೋಗ್ಯವಾದ ಕೃಷ್ಣವರ್ಣದ ಶರೀರ, ಕಠೋರ ಮನಃಸ್ತಿತಿ, ಪರಪೀಡನೆ ಮತ್ತು ಒರಟಾದ ಮೃಗ ಸ್ವಭಾವಗಳು ಬೆಳೆಯುತ್ತಾ ಬಂದವು. ಈ ರೀತಿ, ವೇನ ಚಕ್ರವರ್ತಿಯ ತಿರಸ್ಕೃತ ಮತ್ತು ಅನಾಮಧೇಯ ಜೇಷ್ಠಪುತ್ರನ ಸಂತತಿಯವರೇ ಕಾಡಾಡಿಗಳೆನಿಸಿಕೊಂಡ ನಾಗರೀಕ ಜನಾಂಗದಿಂದ ಪ್ರತ್ಯೇಕಿಸಲ್ಪಟ್ಟ ವ್ಯಾಧರೆಂದು ಕರೆಯಲ್ಪಡುವ ವರ್ಗದವರು. ಇವರೆಲ್ಲರೂ ಬೇಟೆಯಾಡಿ ಜೀವಿಸುತ್ತಿದ್ದುದರಿಂದ ಇವರನ್ನು ವ್ಯಾಧರು, ಶಬರರು, ಕಿರಾತರು, ವನಸಂಚರು ಮತ್ತು ಬಿಲ್ಲರೆಂದು ಸಮಾನಾರ್ಥ ಪದಗಳಿಂದ ಕರೆಯುತ್ತಿದ್ದರು. ಕಾಡಿನಲ್ಲಿ ಇವರ ಪೀಳಿಗೆ ವೃದ್ದಿಯಾದಂತೆ, ಎಲ್ಲರಿಗೂ ಆಹಾರ ಮತ್ತು ನೆಲೆ ಸಾಕಾಗದಿದ್ದಾಗ ಅನುಕೂಲವಿದ್ದ ಕಡೆಗಳಿಗೆ ಹೋದ ಗುಂಪುಗಳನ್ನು ಆಯಾ ಪ್ರದೇಶಗಳಲ್ಲಿ ಬಳಕೆಯಲ್ಲಿದ್ದ ಪದಗಳಿಂದಾಗಿ ವ್ಯಾಧರು, ಕಿರಾತರು, ಶಬರರು, ವನಸಂಚಕರು ಮತ್ತು ಬಿಲ್ಲರೆಂದು ಕರೆಯಲಾಗುತ್ತಿತ್ತು. ಕಾಲಕ್ರಮೇಣ ಈ ಹೆಸರುಗಳೇ ಜಾತಿಗಳೆಂದು ಪರಿಗಣಿಸಲ್ಪಟ್ಟು ಇಂದು ಬೇಡರಲ್ಲಿ ಹೇಳಿಕೊಳ್ಳುವ ಐದು “ಬೆಡಗುಗಳು” ಉಂಟಾದವು. ಕರ್ನಾಟಕದಲ್ಲಿರುವ ಬೇಡರು ತಮ್ಮದು ಐದು ಬೆಡಗುಗಳು ಅರ್ಥಾತ್ ಮೂಲಪಂಗಡಗಳೆಂದು ಇಂದಿಗೂ ಹೇಳುತ್ತಾರೆ. ಅವರು ಹೇಳುವ ಬೇಡ, ಶಬರ, ಕಿರಾತ, ಬಿಲ್ಲ ಮತ್ತು ಕಾಡುಸಂಚ ಎಂಬ ಪದಗಳು ಈ ಮೂಲದಿಂದಲೇ ಬಂದಿರುವಂತಹದು. ವ್ಯಾಧ ಮತ್ತು ಕಾಡುಸಂಚ ಎಂಬ ಪದಗಳನ್ನು ಕನ್ನಡೀಕರಿಸಿ ಬೇಡ ಮತ್ತು ಕಾಡು ಸಂಚ ಎಂದು ಕರೆದುಕೊಂಡಿದ್ದಾರೆ. ಈ ಎಲ್ಲಾ ಬೇಡರ ನಿವಾಸಸ್ಥಾನ ಉತ್ತರ ಹಿಂದೂಸ್ಥಾನ. ಪರಿಸ್ಥಿತಿಯ ಒತ್ತಡಗಳಿಂದಾಗಿ ಈ ಬೇಡರು ಹಿಂದೂಸ್ಥಾನದ ಬೇರೆ ಬೇರೆ ಕಡೆಗಳಿಗೆ ವಲಸೆ ಹೋಗಿ ನೆಲಸಿರಬೇಕು. ತ್ರೇತಾಯುಗದ ವಾಲ್ಮೀಕಿ ಮತ್ತು ಶಬರಿ, ದ್ವಾಪರ ಯುಗದ ಧರ್ಮವ್ಯಾಧ ಮತ್ತು ಏಕಲವ್ಯ ಇವರುಗಳ ಪ್ರಸಂಗಗಳು ರಾಮಾಯಣ ಮತ್ತು ಮಹಾಭಾರತ ಕಾವ್ಯಗಳಲ್ಲಿ ಬಂದಿದ್ದರೂ, ಅವುಗಳಲ್ಲಿ ಅವರ ವೃತ್ತಿ ಮತ್ತು ಪ್ರವೃತ್ತಿಗಳ ಬಗ್ಗೆ ಮಾತ್ರ ಉಲ್ಲೇಖವಿದೆ. ಆದರೆ ಅವರ ಜಾತಿಯ ಸಂಪ್ರದಾಯಗಳ ಬಗ್ಗೆ ಏನೂ ತಿಳಿಸಲ್ಪಟ್ಟಿಲ್ಲವಾದ್ದರಿಂದ ಈ ಕಾಲದಲ್ಲಿ ಕೇವಲ ವೃತ್ತಿಯೇ ಜಾತಿ ಲಕ್ಷಣವಾಗಿತ್ತೆಂದು ತಿಳಿಯಬಹುದು. ಮನುಧರ್ಮಶಾಸ್ತ್ರವು ಸರ್ವರಿಗೂ ಮಾನತ್ವವಾಗಿತೆಂಬುದಕ್ಕೆ ವಾಲ್ಮೀಕಿ, ಶಬರಿ ಮತ್ತು ಧರ್ಮವ್ಯಾಧ ಇವರುಗಳು ದೇವಮಾನವತ್ವ ಪಡೆದಿರುವುದೇ ಸಾಕ್ಷಿ. ಜಾತಿಯ ಕಟ್ಟು-ನಿಟ್ಟುಗಳು, ಧರ್ಮ-ಕರ್ಮಗಳು ಮತ್ತು ರೀತಿ ರಿವಾಜುಗಳು ಎಲ್ಲಾ ವರ್ಣಗಳಲ್ಲೂ, ತೀರಾ ಇತ್ತೀಚೆಗೆ ಆಯಾಯಾ ವರ್ಗಗಳ ವಿಭೂತಿಪುರುಷರೆನ್ನಿಸಿಕೊಳ್ಳುವವರಿಂದ ಪ್ರಾರಂಭಿಸಲ್ಪಟ್ಟು ಅವರ ಅನುಯಾಯಿಗಳು ಅದೇ ಪಂಥಗಳಲ್ಲಿ ಮುಂದುವರಿಯುತ್ತಾ ಬಂದಿರುವರೆಂಬುದನ್ನು ಇತಿಹಾಸವು ಪುಷ್ಟೀಕರಿಸುತ್ತದೆ. ಕರ್ನಾಟಕದಲ್ಲಿರುವ ಬೇಡ, ಕಿರಾತ, ಶಬರ, ಬಿಲ್ಲ ಮತ್ತು ಕಾಡುಸಂಚರೆಂಬ ಐದು ಬೆಡಗಿನವರೂ ಹಾಗೂ ಅವುಗಳ ಉಪಜಾತಿ ಯವರೂ ತಮ್ಮನ್ನು ಬೇಡ ಎಂಬ ಮೂಲ ಜಾತಿಗೆ ಸೇರಿದವರೆಂದೇ ಹೇಳಿಕೊಳ್ಳುತ್ತಾರೆ.

ಕೃಪೆ : ನಾಯಕ ಜನಾಂಗದ ಇತಿಹಾಸ

* * *

ಚಿತ್ರದುರ್ಗ ಜಿಲ್ಲೆಯ ಮ್ಯಾಸನಾಯಕರ ಹನ್ನೆರಡು ಕಟ್ಟೆಮನೆಗಳು
೧. ಗೋನೂರು ಚಿತ್ರದುರ್ಗ ತಾಲ್ಲೂಕು
೨. ಕಾಮಗೇತನಹಳ್ಳಿ ಜಗಳೂರು ತಾಲ್ಲೂಕು
೩. ಹಿರೇಹಳ್ಳಿ ಚಳ್ಳಕೆರೆ ತಾಲ್ಲೂಕು
೪. ಅಡವಿ ಮಾರೇನಹಳ್ಳಿ ಚಳ್ಳಕೆರೆ ತಾಲ್ಲೂಕು
೫. ಓಬೇನಹಳ್ಳಿ ಚಳ್ಳಕೆರೆ ತಾಲ್ಲೂಕು
೬. ಮಲುವರಳ್ಳಿ ಚಳ್ಳಕೆರೆ ತಾಲ್ಲೂಕು
೭. ಕೋನಸಾಗರ ಮೊಳಕಾಲ್ಮೂರು ತಾಲ್ಲೂಕು
೮. ತಾಳೀಕೆರೆ ಮಡಕಶಿರಾ ತಾಲ್ಲೂಕು (ಅನಂತಪುರ ಜಿಲ್ಲೆ, ಆಂಧ್ರಪ್ರದೇಶ)
೯. ಮುತ್ತಿಗಾರಹಳ್ಳಿ ಮೊಳಕಾಲ್ಮೂರು ತಾಲ್ಲೂಕು
೧೦. ನಾಯಕನಹಟ್ಟಿ ಚಳ್ಳಕೆರೆ ತಾಲ್ಲೂಕು
೧೧. ಹಿರೇಮಲ್ಲನಹೊಳೆ ಚಳ್ಳಕೆರೆ ತಾಲ್ಲೂಕು
೧೨. ನನ್ನಿವಾಳ ಚಳ್ಳಕೆರೆತಾಲ್ಲೂಕು
– ಡಾ. ಕೃಷ್ಣಮೂರ್ತಿ ಹನೂರು