ಭೂಮಿಯ ಮೇಲಿನ ಮಾನವನ ಜೀವನದ ಪ್ರಾರಂಭದೊಂದಿಗೆ ಸಾಂಸ್ಕೃತಿಕ ಪರಂಪರೆಯ ಪ್ರಾರಂಭವನ್ನು ಕಾಣಬಹುದು. ಈ ಮಾನವನು ಎಂದು ಗುಂಪಿನ ಜೀವನವನ್ನು ಕಂಡುಕೊಂಡನೋ ಅಂದಿನಿಂದಲೇ ನಾಗರೀಕತೆಯನ್ನು ಕಂಡುಕೊಂಡನು. ಈ ನಾಗರೀಕ ಹಂತದಲ್ಲಿ ಹಲವಾರು ದೈಹಿಕ ಬದಲಾವಣೆಗಳೊಂದಿಗೆ ಸಾಂಸ್ಕೃತಿಕ ಬದಲಾವಣೆಗಳು ಆಗುತ್ತಾ ಬಂದವು. ಇಂತಹ ಸಾಂಸ್ಕೃತಿಕ ಬದಲಾವಣೆಗಳನ್ನು ಅಥವಾ ವಿಕಾಸಗಳನ್ನು ವಿದ್ವಾಂಸರು ಬುಡಕಟ್ಟು ಸಂಸ್ಕೃತಿ, ಗ್ರಾಮೀಣ ಸಂಸ್ಕೃತಿ ಮತ್ತು ನಗರ ಸಂಸ್ಕೃತಿಗಳೆಂಬ ಮೂರು ಹಂತಗಳಲ್ಲಿ ಗುರುತಿಸಿದ್ದಾರೆ. ಎಲ್ಲಾ ಸಮುದಾಯಗಳಲ್ಲಿ ಏಕಕಾಲದಲ್ಲಿ ಹೊಸ ಹೊಸ ಆವಿಷ್ಕಾರ ಮತ್ತು ಚಿಂತನೆಗಳುಂಟಾಗಲಿಲ್ಲ. ಕೆಲವು ಹೊಸ ಹೊಸ ಶೋಧನೆ ಮತ್ತು ಚಿಂತನೆಗಳಿಂದ ಆಧುನಿಕತೆಯ ಕಡೆ ಚಲಿಸಿದರೆ ಇನ್ನು ಕೆಲವು ಆಧುನಿಕತೆಗೆ ಬೆನ್ನು ಮಾಡಿದ್ದೂ ಉಂಟು. ಹೀಗಾಗಿ ಒಂದು ಸಮುದಾಯ ನಾಗರೀಕತೆಯ ತುತ್ತ ತುದಿಯಲ್ಲಿ ನಿಂತಿದ್ದರೆ, ಇನ್ನೊಂದು ಸಮುದಾಯ ನಾಗರೀಕತೆಯ ಶೈಶಾವಸ್ಥೆಯಲ್ಲಿಯೇ ಇರುವ ಸಾಧ್ಯತೆ ಇದೆ. ಆದ್ದರಿಂದಲೇ ಭಾರತದಲ್ಲಿ ಇಂದಿಗೂ ಗ್ರಾಮ ಮತ್ತು ನಗರಗಳಿಂದ ದೂರವಿರುವ ಆಧುನಿಕತೆಯ ಸೋಂಕಿಲ್ಲದ ಅನೇಕ ಸಮುದಾಯಗಳು ಅಸ್ತಿತ್ವದಲ್ಲಿವೆ. ಇತ್ತೀಚಿನ ಬೆಳವಣಿಗೆಗಳಂತೂ ಸಮುದಾಯದ ಸ್ವರೂಪವನ್ನೇ ಬದಲಾಯಿಸುತ್ತಿವೆ. ಒಂದು ಕಡೆ ಅರಣ್ಯನಾಶ, ಇನ್ನೊಂದು ಕಡೆ ಅರಣ್ಯ ರಕ್ಷಣಾ ನೀತಿಗಳು, ಹೊಸ ಆಣೆಕಟ್ಟುಗಳ ನಿರ್ಮಾಣ, ಬೃಹತ್ ಕೈಗಾರಿಕೆ, ಗಣಿಗಾರಿಕೆಗೆ ಪ್ರೋಇಂಥ ಹಲವು ಕಾರಣಗಳಿಂದ ಸಮುದಾಯದ ಜನರು ಗ್ರಾಮ ಮತ್ತು ನಗರಗಳಿಗೆ ವಲಸೆ ಬರುತ್ತಿದ್ದಾರೆ. ಹೀಗೆ ವಲಸೆ ಬಂದ ಜನರು ತಮ್ಮ ಜೀವನದಲ್ಲಿ ಸಂಪೂರ್ಣ ಹೊಸತನ್ನು ಅಳವಡಿಸಿಕೊಳ್ಳದೆ ಸ್ವಂತಿಕೆಯನ್ನು ಉಳಿಸಿಕೊಳ್ಳುವ ವಿಫಲ ಪ್ರಯತ್ನ ನಡೆಸಿದ್ದಾರೆ. ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಯಾವುದೇ ಸಮುದಾಯಗಳು ಪ್ರತ್ಯೇಕವಾಗಿ ಉಳಿಯಲು ಸಾಧ್ಯವಿಲ್ಲದೆ ಹೊಸ ಬದಲಾವಣೆಗಳನ್ನು ಒಪ್ಪಿಕೊಳ್ಳುವ ಅನಿವಾರ‍್ಯತೆ ಉಂಟಾಗಿದೆ. ಈ ಬದಲಾವಣೆ ಅನಿವಾರ್ಯ. ಯಾವುದೇ ಬೆಳೆಯುತ್ತಿರುವ ಸಮಾಜದಲ್ಲಿ ಈ ಅನಿವಾರ್ಯತೆ ಉದ್ಭವಿಸುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಅನೇಕ ಸಮುದಾಯಗಳು ಮಾರ್ಪಾಡುಗಳನ್ನು ಒಪ್ಪಿಕೊಂಡು ತಮ್ಮ ಆಚಾರ-ವಿಚಾರಗಳಲ್ಲಿ ತಮ್ಮದೇ ಆದ ವಿಶಿಷ್ಟತೆಗಳನ್ನು, ಸಮಾಜ, ಸಂಸ್ಕೃತಿಯ ವೈಶಿಷ್ಟ್ಯತೆಗಳನ್ನು ಉಳಿಸಿಕೊಂಡು ಬಂದಿವೆ. ತಮ್ಮ ಹಿಂದಿನ ಕೊಂಡಿಗಳನ್ನು ಉಳಿಸಿಕೊಂಡಿರುವುದನ್ನು ಕಾಣ ಬಹುದು. ಕೆಲವು ಸಮುದಾಯಗಳಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ಪಂಗಡಗಳಾಗಿ ಉಂಟಾಗಿರುವುದನ್ನು ಕಾಣಬಹುದು. ಉದಾಹರಣೆಗೆ ಕಾಡುಗೊಲ್ಲ ಮತ್ತು ಊರುಗೊಲ್ಲ, ಕಾಡುಕುರುಬ ಮತ್ತು ಊರುಕುರುಬ ಹಾಗೂ ಊರಬೇಡ ಮತ್ತು ಮ್ಯಾಸಬೇಡ ಇತ್ಯಾದಿ.

ಈ ರೀತಿಯಾಗಿ ಪರಿವರ್ತನೆಗೆ ಒಳಗಾದ ಭಾರತೀಯ ಸಮುದಾಯಗಳಲ್ಲಿ ಧೀರೇಂದ್ರನಾಥ ಮಜುಂದಾರ್ ಅವರು ಮೂರು ಹಂತಗಳನ್ನು ಗುರುತಿಸಿದ್ದಾರೆ.

೧. ಜಾತಿಗಳಾಗಿ ಸಂಪೂರ್ಣ ಪರಿವರ್ತಿತವಾಗಿರುವ ಸಮುದಾಯಗಳು.

೨. ಹಿಂದೂಗಳೊಡನೆ ಭಾಗವಹಿಸಿಯೂ ತಮ್ಮ ಸಂಪ್ರದಾಯಗಳನ್ನು ನಂಬಿಕೆಗಳನ್ನು ಉಳಿಸಿಕೊಂಡಿರುವ ಸಮುದಾಯಗಳು.

೩. ಹಿಂದೂ ಧರ್ಮದ ಪ್ರಭಾವಕ್ಕೆ ಒಳಗಾಗದೆ, ಆ ಧರ್ಮದ ದಬ್ಬಾಳಿಕೆಯನ್ನು ಸಹಿಸದೆ ತಮ್ಮ ಸ್ವಾತಂತ್ರ್ಯಕ್ಕಾಗಿ, ಪ್ರತ್ಯೇಕವಾಗಿ ಹೋರಾಡುತ್ತಿರುವ ಸಮುದಾಯಗಳು.

ಈ ಮೂರು ಹಂತಗಳನ್ನು ಅವಲೋಕಿಸಿ, ಕರ್ನಾಟಕದ ಬೇಡನಾಯಕರನ್ನು ಅಧ್ಯಯನ ಮಾಡಿದಾಗ ಇವರಲ್ಲಿಯ ಒಂದು ಪಂಗಡ ಹಿಂದೂ ಧರ್ಮದ ಪ್ರಭಾವಕ್ಕೆ ಒಳಗಾಗಿ ಸಂಪೂರ್ಣ ಬದಲಾಗಿದ್ದಾರೆ ಎಂದು, ಮತ್ತು ಇದೇ ಪಂಗಡದ ಮ್ಯಾಸನಾಯಕರು ಹಾಗೂ ಇತರರು ಹಿಂದೂ ಧರ್ಮವನ್ನು ಒಪ್ಪಿಕೊಂಡಿದ್ದರೂ ತಮ್ಮ ಸಂಪ್ರದಾಯ ಹಾಗೂ ನಂಬಿಕೆಗಳನ್ನು ಬೆಳೆಸಿಕೊಂಡು ಬಂದಿರುವುದು ಎಂದು ತಿಳಿದುಬರುತ್ತದೆ.

ಬೇಡನಾಯಕರು ಯಾರು

ಪ್ರತಿಯೊಂದು ಸಮುದಾಯಕ್ಕೆ ತನ್ನದೇ ಆದ ಚರಿತ್ರೆ ಇರುವಂತೆ ಬೇಡನಾಯಕ ಸಮುದಾಯಕ್ಕೆ ವಿಶಿಷ್ಟವಾದ ಚರಿತ್ರೆ ಹಾಗೂ ಸಂಸ್ಕೃತಿ ಇದೆ. ಮೂಲತಃ ಇವರು ದ್ರಾವಿಡ ಸಮುದಾಯ. ಅದಕ್ಕೆ ಪುಳಿಂದ, ಭಿಲ್ಲ, ಕಿರಾತ, ವ್ಯಾಧ, ಶಬರ, ನಿಷಾದ ಮುಂತಾದ ಪುರಾತನ ಹೆಸರುಗಳಿದ್ದವು. ಅಂತೆಯೇ ದ್ರಾವಿಡ ಭಾಷೆಗಳಲ್ಲಿ ವೇಡನ್, ವೇಂದನ್, ವೇಟ್ಟುವನ್ ಎಂದೆಲ್ಲಾ ಹೆಸರುಗಳಿದ್ದವು. ಅಲ್ಲದೆ ಅವರು ಆಡುತ್ತಿದ್ದ ಬೇಟೆಗನುಸಾರವಾಗಿ ಅವರಿಗೆ ಎಯನರ್, ಪುಲಿಂದರ್, ಕುಳಿಂದರ್, ಕೋವರ್ ಎಂಬ ಹೆಸರುಗಳು ದೊರಕುತ್ತವೆ. ರಾಷ್ಟ್ರಕೂಟರ ಕಾಲದ ದ್ವಿತಿಯ ಭಾಷೆಯಾಗಿದ್ದ ಅಪಭ್ರಂಶ ಭಾಷೆಯಲ್ಲಿ ನಾಹಲ, ನಾಹಿಲ, ನಾಇಲ್ಲ, ವಾಹ, ಸಮರ, ಸಿಮಿರ, ಚಿಲಾಡ, ಭಿಲ್ಲ, ಪಾರದ್ದಿಯ ಮುಂತಾದ ಅನೇಕ ಹೆಸರುಗಳು ದೊರಕುತ್ತವೆ.

ಬೇಡನಾಯಕರು ಬುಡಕಟ್ಟು ಸಮುದಾಯದವರಾಗಿದ್ದು, ಕಾಡಿನ ಸಂಸ್ಕೃತಿಯಿಂದ ನಾಡಿನ ಸಂಸ್ಕೃತಿಯನ್ನು ರೂಢಿಸಿಕೊಂಡವರು. ಯೋಧ ಸಮುದಾಯವೆಂದು ಗುರುತಿಸಿಕೊಂಡ ಇವರು ದೈಹಿಕ ಸದೃಢತೆಗೆ ಮತ್ತು ಧೈರ್ಯ ಸಾಹಸಗಳಿಗೆ ಹೆಸರಾಗಿದ್ದಾರೆ. ಮೂಲತಃ ವಲಸೆಗಾರ ಪಂಗಡಕ್ಕೆ ಸೇರಿದವರೆಂದು ಪೌರಾಣಿಕ ಹಾಗೂ ಅದಕ್ಕೂ ಪೂರ್ವ ಕಾಲದಿಂದಲೂ ಹೆಸರಾದ ನಿರ್ಭೀತ ಸಮುದಾಯವೆಂದು ತಿಳಿದುಬರುತ್ತದೆ. ಅದಕ್ಕಾಗಿಯೇ ಜಗತ್ತಿನಲ್ಲಿಯೇ ಬೇಡರಷ್ಟು ಶೂರರು ಸಿಗಬಹುದು. ಆದರೆ ಬೇಡರಿಗಿಂತ ಶೂರರು ಸಿಗಲಾರರು ಎಂಬ ವಿಲಿಯಂ ಸ್ಮಿಥ್‌ನ ನುಡಿ ಉಲ್ಲೇಖನೀಯ.

ಚಾರಿತ್ರಿಕವಾಗಿ ಮೌರ್ಯರ ಕಾಲದಿಂದಲೂ ಬೇಡರು ಕಾಣಿಸಿಕೊಳ್ಳುತ್ತಾರೆ. ಕರ್ನಾಟಕದ ಪ್ರತಿಷ್ಠಿತ ರಾಜಮನೆತನಗಳಾದ ಶಾತವಾಹನ, ಕದಂಬ, ಗಂಗ, ಚಾಲುಕ್ಯರು, ಹೊಯ್ಸಳ, ವಿಜಯನಗರ ಅರಸರುಗಳ ಸೈನ್ಯದಲ್ಲಿ ಸೈನಿಕರಾಗಿ ಹಾಗೂ ಉನ್ನತ ಹುದ್ದೆಗಳನ್ನು ಪಡೆದು ಅನೇಕ ಯುದ್ಧಗಳಲ್ಲಿ ಗೆಲುವನ್ನು ತಂದುಕೊಟ್ಟವರು ಹಾಗೂ ಅನೇಕ ಪಾಳೆಯಪಟ್ಟುಗಳನ್ನು, ಸಂಸ್ಥಾನಗಳನ್ನು ಕಟ್ಟಿ ಸ್ವತಂತ್ರವಾಗಿ ಆಳ್ವಿಕೆ ಮಾಡಿದ ಉದಾಹರಣೆಗಳು ಚರಿತ್ರೆಯಲ್ಲಿ ದಾಖಲಾಗಿವೆ. ಒಂದು ಕಾಲಕ್ಕೆ ಎಪ್ಪತ್ತೇಳು ಪಾಳೆಯಪಟ್ಟುಗಳಿದ್ದವು ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

ಈ ಸಮುದಾಯದಲ್ಲಿ ಕುಮಾರರಾಮ, ಮದಕರಿನಾಯಕ, ಸುರಪುರದ ವೆಂಕಟಪ್ಪ ಹೀಗೆ ಹಲವಾರು ನಾಯಕರುಗಳು ಶೌರ್ಯ, ಸಾಹಸಗಳಿಗೆ ಹೆಸರಾದ ಚಾರಿತ್ರಿಕ ವ್ಯಕ್ತಿ ಗಳಿದ್ದಾರೆ. ವಾಲ್ಮೀಕಿ, ಶಬರಿ, ಧರ್ಮವ್ಯಾಧ, ನಳಚಕ್ರವರ್ತಿ, ಏಕಲವ್ಯ, ಬೇಡರ ಕಣ್ಣಪ್ಪ ಮುಂತಾದ ಪೌರಾಣಿಕ ಪುರುಷರು ಆಗಿ ಹೋಗಿದ್ದಾರೆ. ಬ್ರಿಟಿಷರ ಆಡಳಿತದ ಸಂದರ್ಭ ದಲ್ಲಿಯೂ ಬೇಡನಾಯಕರು ಈ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮದೇ ಆದ ಕಾಣಿಕೆಯನ್ನು ನೀಡಿದ್ದಾರೆ.

ಪ್ರಸ್ತುತ ಕರ್ನಾಟಕದ ಎಲ್ಲಾ ಪ್ರದೇಶಗಳಲ್ಲಿಯೂ ಈ ಸಮುದಾಯವು ವಾಸಿಸುತ್ತಿದೆ. ಈಗ ಕರ್ನಾಟಕದಲ್ಲಿ ಇವರನ್ನು ಬೇಡರು, ನಾಯಕ, ವಾಲ್ಮೀಕಿ, ಪರಿವಾರ, ಊರನಾಯಕರು, ಮ್ಯಾಸನಾಯಕರು, ಕಂಪಣ ಬೇಡರು , ತಳವಾರ, ಮೊಂಡಬೇಡರು, ಕುರುಮಾಮ, ದುರುಗ ಮುರುಗಿ, ನಾಯಕಮಕ್ಕಳು, ನಾಯಕವಾಡಿ ಹೀಗೆ ಹತ್ತು ಹಲವಾರು ಹೆಸರುಗಳಿಂದ ಇವರನ್ನು ಕರೆಯುತ್ತಿದ್ದಾರೆ. ಈ ಸಮುದಾಯದವರು ಅಲ್ಲಿಯ ಭೌಗೋಳಿಕ ಪರಿಸ್ಥಿತಿಗೆ ಅನುಗುಣವಾಗಿ ತಮ್ಮ ಸಂಸ್ಕೃತಿಯನ್ನು ರೂಪಿಸಿಕೊಂಡಿದ್ದಾಗಲೂ ಹಲವಾರು ಅನನ್ಯತೆ ಮತ್ತು ವೈರುಧ್ಯಗಳಿಂದ ಕೂಡಿರುವ ಸಂಸ್ಕೃತಿ ಇವರದಾಗಿದೆ.

ಕರ್ನಾಟಕದ ಬೇಡನಾಯಕರು ಪ್ರಾದೇಶಿಕವಾಗಿ ವಿಭಿನ್ನ ಸಂಸ್ಕೃತಿಯನ್ನು ಹೊಂದಿ ರುವುದರ ಜೊತೆಗೆ ವಿಭಿನ್ನ ಗೋತ್ರಗಳನ್ನು ಹೊಂದಿದವರಾಗಿದ್ದಾರೆ. ಆರಾಧಿಸುವ ದೈವಗಳು ಒಂದೇ ಆಗಿದ್ದಾಗಲೂ, ಆಚರಿಸುವ ಆಚರಣೆಗಳು ವಿಭಿನ್ನವಾಗಿರುವುದನ್ನು ಕಾಣಬಹುದು. ಕರ್ನಾಟಕದಾದ್ಯಂತ ವಾಸಿಸುತ್ತಿರುವ ಇವರು ಇಲ್ಲಿಯ ಸ್ಥಳೀಯ ಬುಡಕಟ್ಟು ಮತ್ತು ಜಾತಿಯ ಸಮೂಹದವರಾದ ಗೊಲ್ಲ, ಮಾದಿಗ, ಕುರುಬ, ಬೆಸ್ತ ಹೀಗೆ ಹತ್ತಾರು ಬುಡಕಟ್ಟು ಮತ್ತು ಜಾತಿಯವರೊಂದಿಗೆ ಸಂಬಂಧಗಳನ್ನು ಹೊಂದಿದ್ದಾರೆ.

ಥರ‍್ಸ್‌ಟನ್ ಅವರ ಏಳು ಸಂಪುಟಗಳಲ್ಲಿಯ ಮೊದಲ ಸಂಪುಟದಲ್ಲಿ ಕರ್ನಾಟಕ ಮತ್ತು ಆಂಧ್ರದಲ್ಲಿನ ಬೇಡ ಅಥವಾ ಬೋಯಿಗಳ ವಿವರಣೆ ದೊರೆಯುತ್ತದೆ. ಬಳ್ಳಾರಿ ಜಿಲ್ಲೆಯ ಇತರ ಹಿಂದೂ ಜಾತಿಗಳಲ್ಲಿ ಬೇಡರೂ ಒಬ್ಬರು, ಇವರು ಹೈದರನ ಸೈನ್ಯದಲ್ಲಿ ಇದ್ದರೆಂದು ಹಾಗೂ ೧೮ನೆಯ ಶತಮಾನದ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯ ಪಾಳೆಯ ಗಾರರು ಬೇಡರ ಸಮುದಾಯಕ್ಕೆ ಸೇರಿದವರು ಎಂದಿದ್ದಾರೆ. ಇಂದು ಬೇಡರು ಕೃಷಿಕರಾಗಿ ಜೀವಿಸುತ್ತಿದ್ದಾರೆ. ತೆಲುಗು ಮತ್ತು ಕನ್ನಡ ಮಾತನಾಡುವ ಬೇಡರ ಉಪವಿಭಾಗ ಗಳಿಂದ ಊರಬೇಡ ಮತ್ತು ಮ್ಯಾಸಬೇಡರನ್ನು ಹಾಗೂ ಅವರ ಬೆಡಗುಗಳನ್ನು ಥರ್ಸ್‌ಟನ್ ವಿವರಿಸಿದ್ದಾರೆ.

ಥರ‍್ಸಟನ್ ಅವರ ಕೃತಿಗಿಂತ ಬೇಡ ಸಮುದಾಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಎಲ್.ಕೆ. ಅನಂತಕೃಷ್ಣ ಅಯ್ಯರ್, ಅವರ “MYSORE CASTES AND TRIBES” (1998, Pp. 197-237) ಪುಸ್ತಕವು ಒದಗಿಸುತ್ತದೆ. ಥರ್ಸ್‌ಟನ್‌ರವರ ಕೃತಿ ಇಡೀ ದಕ್ಷಿಣ ಭಾರತವನ್ನು ಒಳಗೊಂಡಿದೆ. ಇದರ ವ್ಯಾಪ್ತಿ ವಿಶಾಲವಾಗಿದೆ. ಆದರೆ ಎಲ್.ಕೆ. ಅನಂತಕೃಷ್ಣ ಅಯ್ಯರ್ ಅವರ ಕೃತಿಯು ಅಂದಿನ ಮೈಸೂರು ರಾಜ್ಯಕ್ಕೆ ಮಾತ್ರ ಸೀಮಿತಗೊಂಡಿದೆ (ಬಳ್ಳಾರಿ ಜಿಲ್ಲೆಯ ಮದ್ರಾಸ್ ಅಧಿಪತ್ಯಕ್ಕೆ ಸೇರಿತ್ತು). ಕಾರಣ ಮೈಸೂರು ರಾಜ್ಯದಲ್ಲಿರುವ ಜಾತಿ ಮತ್ತು ಬುಡಕಟ್ಟುಗಳ ಸಂಸ್ಕೃತಿಯನ್ನು ವಿವರಣಾತ್ಮಕವಾಗಿ ಅಧ್ಯಯನ ಮಾಡಲು ಸಾಧ್ಯವಾಗಿದೆ. ಇದರಲ್ಲಿ ಬೇಡರು ಬೇಟೆ ಮತ್ತು ಬುಡಕಟ್ಟುಗಳ ಸಂಸ್ಕೃತಿಯನ್ನು ವಿವರಣಾತ್ಮಕವಾಗಿ ಅಧ್ಯಯನ ಮಾಡಲು ಸಾಧ್ಯವಾಗಿದೆ. ಇದರಲ್ಲಿ ಬೇಡರು ಬೇಟೆ ಮತ್ತು ಕೃಷಿಯನ್ನು ಮಾಡಿಕೊಂಡಿದ್ದ ಸಮುದಾಯ ಎಂದು ಹೇಳಿದೆ. ಈ ಜನವರ್ಗ ಮದ್ರಾಸ್ ಅಧಿಪತ್ಯಕ್ಕೆ ಒಳಪಟ್ಟ ಬೆಳಗಾಂ, ಬಿಜಾಪುರ, ಧಾರವಾಡ, ದಕ್ಷಿಣ ಮರಾಠಿ ಜಿಲ್ಲೆಗಳಲ್ಲಿ, ದಖ್ಖನ್ ಮತ್ತು ಕೊಂಕಣ ಪ್ರದೇಶದಲ್ಲಿ ನೆಲೆಸಿರುವವರು ಎಂದು ಹೇಳಿರುವರು. ಅಲ್ಲದೆ ೧೯೨೧ರ ಮೈಸೂರು ಜನಸಂಖ್ಯಾ ವರದಿಯ ಸಹಾಯದಿಂದ ಬೆಂಗಳೂರು, ಕೋಲಾರ, ತುಮಕೂರು, ಮೈಸೂರು, ಚಿತ್ರದುರ್ಗ, ಹಾಸನ, ಕಡೂರು, ಶಿವಮೊಗ್ಗ ಜಿಲ್ಲೆಯಲ್ಲಿ ಬೇಡನಾಯಕರ ಜನಸಂಖ್ಯೆಯನ್ನು ದಾಖಲಿಸಿದ್ದಾರೆ. ಇದರೊಂದಿಗೆ ಬೇಡರ ಪ್ರಮುಖ ಉಪಪಂಗಡಗಳಾದ ಊರಬೇಡ, ಮ್ಯಾಸಬೇಡ, ಗುಡಿಸಲು ಬೇಡ ಇವರುಗಳ ವಿವರಣೆ ದೊರೆಯುತ್ತದೆ. ಅಲ್ಲದೆ ಬೆಡಗುಗಳ ವಿವರಣೆ ದೊರೆಯುತ್ತದೆ. ಇಲ್ಲಿ ೪೨ ಬೆಡಗುಗಳನ್ನು ಹೆಸರಿಸಿದ್ದಾರೆ. ಬೇಡರ ಕುರಿತು ನಡೆದ ಅಧ್ಯಯನಗಳಲ್ಲಿ ೧೯೪೮ರ ಹೆಚ್.ವಿ. ರನಾಯಕರ ಕೃತಿ ‘ಕ್ಷತ್ರಾಂಶ ಪ್ರಬೋಧ’ವು ಬೇಡ ಸಮುದಾಯದ ಪೌರಾಣಿಕ, ಐತಿಹಾಸಿಕ ಮೂಲದ ಬಗ್ಗೆ ಮಾಹಿತಿ ನೀಡುತ್ತದೆ.

ಆರ್. ರಾಜಣ್ಣರ ‘ನಾಯಕ ಜನಾಂಗದ ಇತಿಹಾಸ’ (೧೯೮೨)ವು ಬೇಡರ ಕುರಿತು ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ. ಬೇಡರ ಮೂಲವನ್ನು ಹಾಗೂ ಮೂಲ ಪುರುಷರ, ಐತಿಹಾಸಿಕ ಪುರುಷರ ಕತೆಗಳನ್ನು ಹೇಳುತ್ತದೆ. ಇಲ್ಲಿ ಸಮಾಜ, ಸಂಸ್ಕೃತಿ, ಆಚಾರ-ವಿಚಾರಗಳನ್ನು ತಿಳಿಸಿಕೊಡುವುದಿಲ್ಲ. ಆದರೆ ಕೃತಿಯ ಆರಂಭದಲ್ಲಿ ನಾಯಕರನ್ನು ಯಾವ ರೀತಿ ಗುರುತಿಸಬೇಕು? ಎಂದು ವಿವರಿಸುವಾಗ ಬೇಡರ ದೈಹಿಕ ಲಕ್ಷಣ, ಅವರ ಉಡುಗೆ-ತೊಡುಗೆ, ಆಚಾರ-ವಿಚಾರ, ಧಾರ್ಮಿಕತೆ ಇತ್ಯಾದಿಗಳನ್ನು ಸ್ಥೂಲವಾಗಿ ಪರಿಚಯಿ ಸುತ್ತಾರೆ. “ನಾಯಕರು ಸಾಲಿಗ್ರಾಮ ಮತ್ತು ಲಿಂಗವನ್ನು ಪ್ರತ್ಯೇಕ ಬುಟ್ಟಿಗಳಲ್ಲಿಟ್ಟು, ಬುಟ್ಟಿಗಳನ್ನೇ ಪೂಜೆ ಮಾಡುತ್ತಾರೆ. ಈ ಬುಟ್ಟಿಗಳಲ್ಲಿರುವ ಸಾಲಿಗ್ರಾಮ ಮತ್ತು ಲಿಂಗವು ಕ್ರಮವಾಗಿ ವೈಷ್ಣವ ಮತ್ತು ಶೈವ ಪಂಥದವರ ದೈವಗಳು. ಭಕ್ತಾದಿಗಳಲ್ಲಿ ವೈಷ್ಣವ ಸಂಪ್ರದಾಯದವರು ಮತ್ತು ಶೈವಪಂಥದವರೆಂದು ಎರಡು ಪಂಥಗಳೇ ಇವೆ. ವೈಷ್ಣವ ಹಾಗೂ ಶೈವ ಪಂಥದವರು ವಿಭೂತಿ ಧರಿಸುತ್ತಾರೆ. ಶೈವ ಪಂಥದವರು ನಾಮವನ್ನು ಮಾತ್ರ ಧರಿಸುವುದಿಲ್ಲ” (೧೯೮೮, ಪು. ೨-೩). ಇಂಥ ಅನೇಕ ಸ್ವಅನುಭವಗಳನ್ನು ಲೇಖಕರು ಕೃತಿಯಲ್ಲಿ ಪರಿಚಯಿಸಿಕೊಟ್ಟಿದ್ದಾರೆ. ಇದು ಸಹ ‘ಕ್ಷಾತ್ರಾಂಶ ಪ್ರಬೋಧ’ದಂತೆ ಒಂದು ಮ್ಯಾಸಬೇಡ ಸಮುದಾಯದ ಶ್ರೇಷ್ಠತೆಯನ್ನು ಎತ್ತಿಹಿಡಿಯುವಂಥ ಕೃತಿ.

ಡಿ.ಬಿ. ಡಂಗ ಅವರ ‘ಜನಾಂಗ ಪರಿಚಯ’ (೧೯೮೮) ಕೃತಿಯಲ್ಲಿ ಒಟ್ಟು ಎಂಟು ಜನಾಂಗಗಳ ಪರಿಚಯವನ್ನು ಮಾಡಿಕೊಡಲಾಗಿದೆ. ಮೊದಲ ಲೇಖನವೇ ‘ನಾಯಕ ಸಮುದಾಯ’ಕ್ಕೆ ಸಂಬಂಧಪಟ್ಟಿದೆ. ನಾಯಕ ಸಮುದಾಯವು ವೇದಗಳ ಕಾಲದಿಂದ ಅಸ್ತಿತ್ವ ದಲ್ಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಡಂಗ ಅವರು ಬೇಡ, ನಾಯಕ, ತಳವಾರ, ವಾಲ್ಮೀಕಿ, ವಾಲ್ಮೀಕಿ ಮಕ್ಕಳು, ಕನ್ನಯ್ಯನ ಮಕ್ಕಳು ಇತ್ಯಾದಿ ಹೆಸರುಗಳ ಹಿಂದಿನ ಕಥೆಗಳನ್ನು ಕೊಟ್ಟಿದ್ದಾರೆ. ಇಂಥ ಕಾರಣಕ್ಕಾಗಿ ಈ ಹೆಸರು ಬಂದಿತು ಎಂದು ವಿವರಿಸಿದ್ದಾರೆ. ಆದರೆ ಬೇಡರ ಸಮಾಜ, ಸಂಸ್ಕೃತಿಯ ಪ್ರಸ್ತಾಪವನ್ನೇ ಮಾಡಿಲ್ಲ. ಹೆಸರೇ ಹೇಳುವಂತೆ ಇದು ಕೇವಲ ಸಮುದಾಯದ ಪರಿಚಯವನ್ನು ಮಾತ್ರ ಮಾಡಿಕೊಡುತ್ತದೆ. ಬೇಡರು ಪಶುಪಾಲನೆ ವಲಸೆ ದ್ರಾವಿಡ ಮೂಲದವರು (ಹಿರೇಮಠ, ಎಸ್.ಎಸ್., ೧೯೯೪, ಪು. ೧) ಎಂದು ಎಸ್.ಎಸ್. ಹಿರೇಮಠರು ಹೇಳುತ್ತಾರೆ. ಚಿತ್ರಲಿಂಗಯ್ಯ ಅವರು ತಮ್ಮ ‘ನಾಯಕ ಜನಾಂಗದ ನಿಷ್ಪತ್ತಿ’ (ವಾಲ್ಮೀಕಿ ಸಂಪದ)ಯ ಕುರಿತು ಚರ್ಚೆ ಮಾಡುತ್ತಾ ನಾಯಕ ಎಂಬ ಪದ ಒಂಬತ್ತನೆಯ ಶತಮಾನದಿಂದ ಕಂಡುಬರುತ್ತದೆ ಎಂದು ಹೇಳಿರುವರು.

ಎಂ.ಜಿ. ಈಶ್ವರಪ್ಪ ಅವರು ತಮ್ಮ ‘ಮ್ಯಾಸಬೇಡರು’ ಕೃತಿಯಲ್ಲಿ ನಾಯಕರ ಉಪಪಂಗಡ ಗಳ ಬಗ್ಗೆ ತಿಳಿಸಿ, ನಂತರ ‘ಮ್ಯಾಸನಾಯಕ’ ಎಂಬ ಹೆಸರು ಬರಲು ಕಾರಣ, ಅದಕ್ಕೆ ಸಂಬಂಧಿಸಿದ ಕಥೆಗಳನ್ನು ನೀಡಿದ್ದಾರೆ. “ವಿಜಯನಗರ ಸಾಮ್ರಾಜ್ಯದಲ್ಲಿ ಮೀಸಲು ಪಡೆಯ ನಾಯಕರಾಗಿದ್ದುದರಿಂದ ಮೀಸಲು ನಾಯಕರು ಮ್ಯಾಸನಾಯಕರು ಎಂದಾಗಿದೆ ಎನ್ನುತ್ತಾರೆ” (೧೯೮೯, ಪು. ೯). ಮ್ಯಾಸಬೇಡರ ಮೂಲವೃತ್ತಿ ಪಶುಪಾಲನೆಯಾಗಿತ್ತು ಎಂಬುದು ಇವರ ಅಭಿಪ್ರಾಯ. ನಾಯಕರಲ್ಲಿ ತಳವಾರ, ಊರನಾಯಕ, ಮ್ಯಾಸನಾಯಕ ಎಂಬ ಉಪಪಂಗಡಗಳಿರುವಂತೆ ಮ್ಯಾಸಬೇಡರಲ್ಲಿಯೂ ಊರಮ್ಯಾಸ, ಅಡವಿಮ್ಯಾಸ, ಕಳ್ಳಮ್ಯಾಸ ಮತ್ತು ಮುಂಜಿಮ್ಯಾಸ ಎಂಬ ನಾಲ್ಕು ಭೇದಗಳನ್ನು ಗುರುತಿಸಿದ್ದಾರೆ. ಆದರೆ ಇವುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ. ಈ ಕೃತಿಯಲ್ಲಿ ಮ್ಯಾಸಬೇಡರ ವಸತಿ, ಸಮಾಜ, ಸಂಪ್ರದಾಯಗಳ ಸಂಕ್ಷಿಪ್ತ ಚಿತ್ರ ದೊರೆಯುತ್ತದೆ.

ಕರ್ನಾಟಕ ಸಾಹಿತ್ಯ ಪರಿಷತ್ತಿನಿಂದ ೧೯೯೫ರಲ್ಲಿ ಪ್ರಕಟಿತವಾದ ಇನ್ನೊಂದು ಗ್ರಂಥ ಕೆ. ರುದ್ರಪ್ಪ ಅವರ ‘ಮ್ಯಾಸನಾಯಕರ ಒಂದು ಜನಾಂಗಿಕ ಅಧ್ಯಯನ’ವೂ ಹೆಚ್ಚಿನ ವಿವರಣೆಯನ್ನು ಹೊಂದಿದೆ. ಇದು ಮ್ಯಾಸನಾಯಕರ ಕೌಟುಂಬಿಕ, ಸಾಮಾಜಿಕ ಜೀವನ, ಕಥೆ, ಹಾಡು, ಲಾವಣಿ, ನಾಯಕ ಸಮುದಾಯಕ್ಕೆ ಸಂಬಂಧಿಸಿದ ಪೌರಾಣಿಕ, ಐತಿಹಾಸಿಕ, ಧಾರ್ಮಿಕ ಪುರುಷರ ವಿಷಯಗಳನ್ನು ಒಳಗೊಂಡಿದೆ. ಈ ಅಧ್ಯಯನವು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕು, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಮತ್ತು ಚಳ್ಳಕೇರಿ ತಾಲೂಕುಗಳಲ್ಲಿ ವಾಸವಾಗಿರುವ ಮ್ಯಾಸರ ಸಂಸ್ಕೃತಿಯ ಅಧ್ಯಯನವಾಗಿದೆ.

‘ಪೆರಿಯ ಪುರಾಣ’ದಲ್ಲಿ ಕಾಳಹಸ್ತಿಯ ಕಾಡಿನಲ್ಲಿ ವಾಸವಾಗಿದ್ದ ಬೇಡರ ವಿವರಣೆ ಇದೆ. ಬೇಟೆಗಾರನಾದ ಬೇಡರ ಕಣ್ಣಪ್ಪನು ಶಿವಭಕ್ತನಾದ ಕಥೆ ಇಲ್ಲಿ ದೊರೆಯುತ್ತದೆ. ೧೯೨೪ರಲ್ಲಿ ಎಂ.ಎಸ್. ಪುಟ್ಟಣ್ಣನವರ ಪಾಳೆಯಗಾರರ ಚರಿತ್ರೆಯಲ್ಲಿ ಬೇಡರ ಆಳ್ವಿಕೆಯ ವಿವರಣೆಯಿದೆ. ಇವರ ‘ಗುಮ್ಮನಾಯಕನಹಳ್ಳಿ ಪಾಳೆಯಗಾರ’ ಎಂಬ ಕೃತಿಯಿಂದ ವಿಜಯನಗರ ಸೈನ್ಯಕ್ಕೆ ಬೇಡ ಸೈನಿಕರು ಬಂದ ಉಲ್ಲೇಖ ದೊರೆಯುತ್ತದೆ ಮತ್ತು ‘ಚಿತ್ರದುರ್ಗದ ಪಾಳೆಯಗಾರರು’ ಎಂಬ ಗ್ರಂಥದಲ್ಲಿ ಬೇಡರು ಹಂಪೆಯ ಮೂಲಕ ಚಿತ್ರದುರ್ಗಕ್ಕೆ ಬಂದ ಕಥೆ ದೊರೆಯುತ್ತದೆ. ಕಪಟರಾಳ ಕೃಷ್ಣರಾವ್ ಅವರ ‘ಸುರಪುರ ಸಂಸ್ಥಾನದ ಇತಿಹಾಸ’ದಲ್ಲಿ ಅರಸರು ದಕ್ಷಿಣದಿಂದ ಬಂದ ಕತೆಯನ್ನು ಕೊಟ್ಟಿದ್ದಾರೆ.

ಎ.ವಿ. ವೆಂಕಟರತ್ನಮ್ಮ ಅವರ ‘ವಿಜಯನಗರ ಸಾಮ್ರಾಜ್ಯದಲ್ಲಿ ಸ್ಥಳೀಯ ಸರ್ಕಾರ’ ಎಂಬ ಗ್ರಂಥದಲ್ಲಿ ವಿಜಯನಗರದ ಆಳ್ವಿಕೆಯ ಸಮಯದಲ್ಲಿ ಬೇಡರ ಸ್ಥಳೀಯ ಆಡಳಿತದ ದಾಖಲೆ ದೊರೆಯುತ್ತದೆ ಹಾಗೂ ಪ್ಲೀಟ್‌ರವರು ಸಂಗ್ರಹಿಸಿದ ಐದು ಲಾವಣಿಗಳಲ್ಲಿ ‘ಹಲಗಲಿ ಬೇಡ’ರ ಲಾವಣಿಯು ಇವರ ಸಾಹಸ, ಧೈರ್ಯ ಮುಂತಾದವುಗಳನ್ನು ಪರಿಚಯಿ ಸುತ್ತದೆ. ಚಿತ್ರಲಿಂಗಯ್ಯ ಎಂ.ವಿ. ಅವರ ಲೇಖನಗಳು ನಾಯಕ ಸಮುದಾಯದ, ಅವರ ಬೆಡಗಿನ, ಅವರ ಸಪ್ತಮಾತೃಕೆ ಮತ್ತು ಪೋತರಾಜನ ಆರಾಧನೆ ಇತ್ಯಾದಿಗಳ ಮೇಲೆ  ಬೆಳಕು ಚೆಲ್ಲುತ್ತವೆ. ‘ವಾಲ್ಮೀಕಿ ಸಂದೇಶ’ ಎಂಬ ಮಾಸಪತ್ರಿಕೆಯಲ್ಲಿ ಪ್ರಕಟವಾದ ‘ನಾಯಕನ ಹಟ್ಟಿ ಬಖೈರು-ಕೆಲವು ಟಿಪ್ಪಣಿಗಳು’ ಬಹುಮುಖ್ಯವಾದ ಆಧಾರ ಗ್ರಂಥವಾಗಿದೆ. ಹಾಗೆಯೇ ಪ್ರೊ. ಲಕ್ಷ್ಮಣ್ ತೆಲಗಾವಿಯವರ ಚಂದ್ರವಳ್ಳಿ ಮತ್ತು ಇತಿಹಾಸ ದರ್ಶನಗಳಲ್ಲಿ ಪ್ರಕಟಿತವಾದ ಚಿತ್ರದುರ್ಗದ ಪಾಳೆಯಗಾರರಿಗೆ ಸಂಬಂಧಿಸಿದ ಲೇಖನಗಳು ಸಮುದಾಯದ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತವೆ. ಜತೆಗೆ ಸರ್ಕಾರ ಮೀಸಲಾತಿ ಸೌಲಭ್ಯಕ್ಕೆ ಹೊರತಂದ ಹಾವನೂರು ಆಯೋಗದ ವರದಿ, ವೆಂಕಟಸ್ವಾಮಿ ಆಯೋಗದ ವರದಿ ಮತ್ತು ಚಿನ್ನಪ್ಪರೆಡ್ಡಿ ಆಯೋಗದ ವರದಿಗಳು, ಗೆಜೆಟಿಯರ್‌ಗಳು, ಅವರ ಜನಸಂಖ್ಯೆ, ಅವರ ಆರ್ಥಿಕ ಮಟ್ಟ,  ಸಾಮಾಜಿಕ ಸ್ಥಾನಮಾನ, ಅವರು ಪಡೆಯುತ್ತಿರುವ ಸೌಲಭ್ಯ ಇತ್ಯಾದಿಗಳ ವಿವರಣೆಗಳನ್ನು ನೀಡಿವೆ.

ಬೇಡನಾಯಕರು ತಮ್ಮ ಪೌರಾಣಿಕ ಮತ್ತು ಸಾಂಸ್ಕೃತಿಕ ನಾಯಕರೆಂದು ತಿಳಿದಿರುವ ವಾಲ್ಮೀಕಿ, ಶಬರಿ, ಧರ್ಮವ್ಯಾಧ, ಏಕಲವ್ಯ, ಮೂಗನಾಯಕ, ಕಣ್ಣಪ್ಪ, ಪಾಪನಾಯಕ ಹಾಗೂ ಇವರ ಚಾರಿತ್ರಿಕ ಪುರುಷರುಗಳಾಗಿದ್ದ ಕೃಷ್ಣದೇವರಾಯ, ಕುಮಾರರಾಮ, ಕಂಪಿಲರಾಯ, ಸೋಮಶೇಖರ ನಾಯಕ, ಮದಕರಿನಾಯಕ, ಜರಿಮಲೆ ಪಾಳೆಯಗಾರರು, ಗುಡೇಕೋಟೆ ಪಾಳೆಯಗಾರರು ಮುಂತಾದವರ ಬಗೆಗಿನ ಜಾನಪದೀಯ ಮತ್ತು ಶಿಷ್ಟ ಪರಂಪರೆಯಲ್ಲಿ ಅನೇಕ ರೀತಿಯ ಮಾಹಿತಿಗಳನ್ನು ನೋಡಬಹುದು. ಸಮುದಾಯದ ಆರಂಭಿಕ ವೃತ್ತಿ ಬೇಟೆಗಾರಿಕೆಯನ್ನು ತಮ್ಮ ಸಾಂಸ್ಕೃತಿಕ ಪ್ರಕ್ರಿಯೆಯ ಅನನ್ಯತೆಯಿಂದಾಗಿ ಉಳಿಸಿಕೊಂಡು ಬಂದಿದ್ದಾರೆ. ಬೇಟೆಗೆ ಅವಕಾಶವಿರದ ಇಂದಿನ ಸಂದರ್ಭದಲ್ಲಿ ಆಚರಣೆಗಳ ಮೂಲಕ ನೆನಪುಗಳನ್ನು ಉಳಿಸಿಕೊಂಡಿದ್ದಾರೆ.

ಒಟ್ಟಾರೆ ಬೇಡ ಸಮುದಾಯವು ತನ್ನ ಸಂಸ್ಕೃತಿಯ ಮೂಲದಿಂದ ವಿಕಾಸದ ಹಂತಗಳಲ್ಲಿ ಹಲವು ಸಮುದಾಯಗಳೊಂದಿಗೆ ಸಾಮರಸ್ಯ-ಸಂಘರ್ಷಗಳನ್ನು ಏರ್ಪಡಿಸಿಕೊಂಡು ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ವಿಶ್ವಸೃಷ್ಟಿಯ ಆರಂಭದಲ್ಲಿ ಮೊದಲು ಆದಿಜಾಂಬವನು ಹುಟ್ಟಿದನೆಂದು, ನಂತರ ಹುಟ್ಟಿದ ಬೊಮ್ಮಣ್ಣನನ್ನು ಆತ ಸಹಿಸಲಿಲ್ಲವೆಂದೂ ಈ ಕಾರಣಕ್ಕಾಗಿಯೇ ಅವರಿಬ್ಬರಿಗೆ ಹೋರಾಟ ನಡೆದು ನಂತರ ಒಂದು ಒಪ್ಪಂದಕ್ಕೆ ಬಂದರಂತೆ. ಇದರ ಪ್ರಕಾರ ಬೊಮ್ಮಣ್ಣನು ತಂದೆ ಜಾಂಬವನು ಮಗನೆಂಬುದನ್ನು ಒಪ್ಪಿಕೊಂಡರು. ಅಂದಿನಿಂದ ಒಂದೇ ರೀತಿಯ ಗೋತ್ರಗಳು ಬಳಕೆಗೆ ಬಂದವೆಂದು ಹೇಳುತ್ತಾರೆ. ಇದರ ಪ್ರಕಾರ ಯಾವುದೇ ಒಂದೇ ಪ್ರದೇಶದಲ್ಲಿ ಬೇಡರಿಗಿಂತ ಮೊದಲು ಮಾದಿಗ ಸಮುದಾಯವು ಅಸ್ತಿತ್ವದಲ್ಲಿದ್ದು ತನ್ನ ಅನನ್ಯತೆಯನ್ನು ಸ್ಥಾಪಿಸಿಕೊಂಡಿದ್ದಾಗ ಅಲ್ಲಿ ಸ್ಪರ್ಧಿಗಳಾಗಿ ಧಾವಿಸಿ ಅವರೊಂದಿಗೆ ಮೇಲುಗೈ ಸಾಧಿಸುವ ಮೂಲಕ ಸಾಮರಸ್ಯವನ್ನು ರೂಪಿಸಿಕೊಂಡಿದ್ದರ ಸುಳಿವುಗಳನ್ನು ಕಾಣಬಹುದು.

ಹಾಗೆಯೇ ಅಡವಿಚೆಂಚರ ಸಮುದಾಯದ ಚಂಚುಲಕ್ಷ್ಮಿಯ ಸಂತಾನದ ಮೂಲದ ವರೆಂದು ಮ್ಯಾಸಬೇಡರು ತಮ್ಮ ಮೂಲವನ್ನು ಗುರುತಿಸಿಕೊಳ್ಳುತ್ತಾರೆ. ಇವರ ಮೂಲಪುರುಷ ಚಟ್ಲುಗೊಟ್ಲು ಮಲ್ಲಿನಾಯಕನು ಚಂಚುಲಕ್ಷ್ಮಿಯನ್ನು ಮದುವೆಯಾದನೆಂದು ಅವರಿಗೆ ಮೂರು ಜನ ಗಂಡುಮಕ್ಕಳು ಆದರೆಂದೂ ಅವರ ಸಂತಾನದ ಹೆಸರುಗಳೇ ಮತ್ತೆ ಗೋತ್ರ-ಬಳಿಗಳು ಆದುವೆಂದು ತಿಳಿದುಬರುತ್ತದೆ. ಆಹಾರದ ಭಿನ್ನತೆಯ ಕಾರಣ ಅದರಲ್ಲೂ ಮಾಂಸಾಹಾರದಲ್ಲಿ ಒಂದು ಪಂಗಡಕ್ಕೆ ಪ್ರಾಶಸ್ತ್ಯವೆನಿಸಿದ್ದ ಮತ್ತೊಂದು ಪಂಗಡಕ್ಕೆ ನಿಷೇಧ ವಾಗಿ ಊರುನಾಯಕ-ಮ್ಯಾಸನಾಯಕರು ಬೇರ್ಪಟ್ಟಿದ್ದಕ್ಕೆ ಸ್ಪಷ್ಟ ನಿಲುವುಗಳಿವೆ. ರಾಜರ ಆಡಳಿತದ ಮುಖಂಡರಾಗಿ ಉನ್ನತ ಹುದ್ದೆಗಳಲ್ಲಿ ಕರ್ತವ್ಯಗಳಲ್ಲಿ ವಿಜೃಂಭಿಸಿದ ಚಾರಿತ್ರಿಕ ಸ್ಮೃತಿಗಳೂ ಪರಂಪರೆಯಲ್ಲಿವೆ.

ಆಚರಣೆಗಳ ಹಿನ್ನೆಲೆಯಲ್ಲಿ ಪ್ರಾದೇಶಿಕ ವೈವಿಧ್ಯಗಳಿವೆ. ಮಾತೃಪ್ರಧಾನ ಕುಟುಂಬ ವ್ಯವಸ್ಥೆಯನ್ನು ಅನುಮೋದಿಸುವ ಪರಂಪರೆಯ ನೆನಪುಗಳನ್ನು ಯಲ್ಲಮ್ಮ, ರೇಣುಕ, ಗಾಳೆಮ್ಮ, ಹುಲಿಗೆಮ್ಮ ಮೊದಲಾದ ದೇವತೆಗಳ ಆಚರಣೆ ಆರಾಧನೆಗಳಲ್ಲಿ ಕಾಣಬಹುದು. ಮೂಲತಃ ಬೇಡರು ಶಿವನ ಆರಾಧಕರೆಂಬುದು ಸ್ಪಷ್ಟವಾದರೂ ವೈಷ್ಣವ ಧರ್ಮದ ಪ್ರಭಾವಕ್ಕೆ ಒಳಪಟ್ಟರು. ಈ ಹಂತದ ಪ್ರಥಮ ಘಟ್ಟ ಚಂಚುಲಕ್ಷ್ಮಿ ಮೂಲದ ನರಸಿಂಹನ ಆರಾಧನೆ ಬೇಟೆಗಾರಿಕೆಯ ಚಹರೆ(Identity)ಯಾದರೆ, ತಿರುಪತಿ ವೆಂಕಟರಮಣನ ಆರಾಧನೆ ಪಾಳೆಗಾರರಾಗಿದ್ದ ಕಾಲದ ಪುರೋಹಿತಶಾಹಿಯ ಅನುಕರಣೆಯಾಗಿದೆ. ಇಂಥ ಸಂದರ್ಭಗಳಲ್ಲಿ ವೆಂಕಟರಮಣ ಮತ್ತು ನರಸಿಂಹನ ಭಕ್ತರಲ್ಲಿ ಪರಸ್ಪರ ನಿಷೇಧಗಳು ಏರ್ಪಟ್ಟು ನರಸಿಂಹನ ಭಕ್ತರು ವೆಂಕಟರಮಣನಿಗೆ, ವೆಂಕಟರಮಣನ ಭಕ್ತರು ನರಸಿಂಹನಿಗೆ ಒಕ್ಕಲಾಗದ ನಿರ್ಬಂಧ ಗಳಿವೆ. ಇಂಥದ್ದು ಶಿವನ ಆರಾಧನೆಯಲ್ಲಿಲ್ಲವೆಂಬುದು ಗಮನಾರ್ಹ ಅಂಶ.

ಹೀಗೆ ಬೇಡನಾಯಕರ ಆಚರಣೆಗಳು ಶೈವ-ವೈಷ್ಣವ ಧರ್ಮಗಳ ಪ್ರಭಾವಗಳಿಗೆ ಒಳಪಟ್ಟಿವೆ. ಜೈನಧರ್ಮದ ಪ್ರಭಾವ ಅಷ್ಟಾಗಿ ಕಂಡುಬರುವುದಿಲ್ಲ. ಬೌದ್ಧ ಧರ್ಮದ ಪ್ರಭಾವಕ್ಕೆ ‘ಅಂಗೂಲಿಮಾಲ’ನು ಒಳಪಟ್ಟ ಸಂದರ್ಭದ ಹಿನ್ನೆಲೆಯಲ್ಲಿ ಕೆಲವು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರಬಹುದೆಂದು ಊಹಿಸಬಹುದು. ಊರಿನ ಸಂಪರ್ಕ ಆಡಳಿತದ ಸಂಪರ್ಕಕ್ಕೆ ಬೇಡರು ಪಲ್ಲಟವಾದ ಕಾಲಘಟ್ಟಗಳಲ್ಲಿ ಊರೊಟ್ಟಿನ ಸಂಬಂಧಗಳಲ್ಲಿ ನೀರಗಂಟಿ, ತಳವಾರ, ಪರಿವಾರ ಮೊದಲಾದ ಸಂದರ್ಭಗಳಲ್ಲಿದೆ. ಲೆಂಕ, ಗರುಡ, ವೇಳೇಪಾಳಿ, ಜೋಳವೇಳಿಗಳಾಗಿ ಪಾಳೆಯಗಾರ ಸೈನಿಕ ಸೇನಾ ಮುಖಂಡರಾಗಿ ಇತಿಹಾಸ ದೊಂದಿಗೆ ಬೆರೆತುಕೊಂಡಿದ್ದಾರೆ. ಮಹಿಳೆಯರು ಮಾತೃಪ್ರಧಾನ-ಪಿತೃಪ್ರಧಾನ ವ್ಯವಸ್ಥೆ ಗಳೆರಡಕ್ಕೂ ಬದ್ಧರಾಗಿದ್ದಾರೆ.

ಬೇಡನಾಯಕರು ತಮ್ಮದೇ ಆದ ಹಲವಾರು ವಿಶಿಷ್ಟ ಮತ್ತು ಅನನ್ಯವಾದ ಸಂಪ್ರದಾಯ ಆಚರಣೆಗಳನ್ನು ನಡೆಸಿಕೊಂಡು ಬರುವುದನ್ನು ಕಾಣಬಹುದು. ಅಂಥವುಗಳಲ್ಲಿ ಪ್ರಸ್ತುತ ಸಮಾಜಕ್ಕೆ ವಿರೋಧಾಭಾಸವಾಗಿ ಕಾಣುತ್ತಿವೆ. ಅಂತಹ ಆಚರಣೆಗಳನ್ನು ಅಳವಡಿಸಿಕೊಳ್ಳಲು, ಇವರ ಸಾಂಸ್ಕೃತಿಕ ಒತ್ತಾಯಗಳೇನು ಅಥವಾ ಸಾಂಸ್ಕೃತಿಕ ಮಹತ್ವಗಳೇನು ಎಂಬುದನ್ನು ಸ್ಪಷ್ಟವಾದ ಚರ್ಚೆಗೆ ಒಳಪಡಿಸುವ ಜರೂರಿದೆ.

ಪ್ರಸ್ತುತ ಬೇಡನಾಯಕ ಸಮುದಾಯದ ಸ್ಥಿತಿಗತಿ, ಸ್ಥಾನಮಾನ, ಬದುಕಿನ ನಿರ್ವಹಣೆಯ ಮಾನದಂಡಗಳ ಮೂಲಕ ಹೇಳುವುದಾದರೆ ಈ ಸಮುದಾಯದ ಜೀವನ ನಿರ್ವಹಣೆ ದುಸ್ಥಿತಿಯಲ್ಲಿದೆ. ಸಾವಿರಾರು ವರ್ಷಗಳ ಸಮುದಾಯದ ಪರಂಪರೆಯಿದ್ದರೂ ಮೂಲಭೂತ ಸೌಲಭ್ಯಗಳಿಂದ ತುಂಬಾ ವಂಚಿತರಾಗಿದ್ದಾರೆ. ಈ ಸಮುದಾಯದಲ್ಲಿ ಈಗಲೂ ತಾಂಡವ ವಾಡುತ್ತಿರುವ ದೇವದಾಸಿ ಸಂಪ್ರದಾಯ, ಬಡತನ, ಹಸಿವು, ನಿರ್ವಸತೀಕರಣ, ಶೈಕ್ಷಣಿಕ ಹಿಂದುಳಿಯುವಿಕೆ (ಕೆಲವೆಡೆ ಶಿಕ್ಷಣ ಪಡೆದಿದ್ದರೂ ನಿರುದ್ಯೋಗಿಗಳಾಗಿದ್ದಾರೆ), ನಿರುದ್ಯೋಗ, ಒಗ್ಗಟ್ಟಿಲ್ಲದಿರುವಿಕೆ ಹಾಗೂ ರಾಜಕೀಯ ಸೌಲಭ್ಯಗಳ ಕೊರತೆಗಳಿವೆ.

ಪರಾಮರ್ಶನಗ್ರಂಥಗಳು

೧. ಅನಂತಕೃಷ್ಣ ಅಯ್ಯರ್, ೧೯೩೦, ಮೈಸೂರು ಕ್ಯಾಸ್ಟ್ಸ್ ಆಂಡ್ ಟ್ರೈಬ್ಸ್, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

೨. ಈಶ್ವರಪ್ಪ, ಎಂ.ಜಿ., ೧೯೮೨, ಮ್ಯಾಸಬೇಡರು, ಐ.ಬಿ.ಹೆಚ್. ಪ್ರಕಾಶನ, ಬೆಂಗಳೂರು.

೩. ಕೃಷ್ಣಮೂರ್ತಿ ಹನೂರು, ೧೯೯೩, ಮ್ಯಾಸಬೇಡರ ಸಂಸ್ಕೃತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

೪. ಚಿತ್ರಲಿಂಗಯ್ಯ, ೨೦೦೬, ನಾಯಕ ಜನಾಂಗದ ನಿಜ ನಿಷ್ಪತ್ತಿ, ಡಾ. ಮಂಜುನಾಥ ಬೇವಿನಕಟ್ಟಿ, ಡಾ. ತಾರಿಹಳ್ಳಿ ಹನುಮಂತಪ್ಪ, ವಾಲ್ಮೀಕಿ ಸಂಪದ, (ಸಂ), ಶ್ರೀ ವಾಲ್ಮೀಕಿ ಮಹಾಸಂಸ್ಥಾನ, ರಾಜನಹಳ್ಳಿ.

೫. ಡಂಗ ಡಿ.ಬಿ., ೧೯೮೮, ಜನಾಂಗ ಅಧ್ಯಯನ

೬. ಥರ್ಸ್‌ಟನ್, ಇ. ಮತ್ತು ರಂಗಾಚಾರಿ.ಕೆ., ೧೯೦೯, ಕ್ಯಾಸ್ಟ್ ಆಂಡ್ ಟ್ರೈಬ್ಸ್ ಆಫ್ ಸದರನ್ ಇಂಡಿಯಾ, ಸರಕಾರಿ ಮುದ್ರಣಾಲಯ, ಮದ್ರಾಸ್.

೭. ಪುಟ್ಟಣ್ಣ ಎಂ.ಎಸ್., ೧೯೯೭, ಚಿತ್ರದುರ್ಗದ ಪಾಳೆಯಗಾರರು

೮. ರಾಜಣ್ಣ ಆರ್., ೧೯೮೨, ನಾಯಕ ಜನಾಂಗದ ಇತಿಹಾಸ, ಚಳ್ಳಕೆರೆ

೯. ರುದ್ರಪ್ಪ ಕೆ., ೧೯೯೫, ಮ್ಯಾಸನಾಯಕರು : ಒಂದು ಜನಾಂಗಿಕ ಅಧ್ಯಯನ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

೧೦. ಲಕ್ಷ್ಮಣ್ ತೆಲಗಾವಿ, ೧೯೮೭, ಜನಪದ ರಸಾಹಿತ್ಯ : ಚಾರಿತ್ರಿಕ ವಿವೇಚನೆ, ವಾಲ್ಮಾಕಿ ಸಾಹಿತ್ಯ ಸಂಪದ,  ಹರ್ತಿಕೋಟೆ, ಚಿತ್ರದುರ್ಗ ಜಿಲ್ಲೆ.

ಕೃಪೆ : ಆದಿವಾಸಿ

* * *