ಬುಡಕಟ್ಟು ಜನಾಂಗಗಳ ಅಧ್ಯಯನ ನಮ್ಮ ಸಾಂಸ್ಕೃತಿಕ ತಿಳುವಳಿಕೆಗೆ, ಸಮಾಜದ ಬಗೆಗಿನ ಒಳನೋಟಗಳಿಗೆ ಹೊಸ ಆಯಾಮಗಳನ್ನು ಒದಗಿಸುತ್ತದೆ. ಇಂತಹ ಸಾಂಸ್ಕೃತಿಕ-ಸಾಮಾಜಿಕ ಅಧ್ಯಯನ ಬ್ರಿಟೀಷರು ಭಾರತವನ್ನು ಆಳುತ್ತಿದ್ದ ಕಾಲದಿಂದಲೇ ನಡೆದು ಬಂದಿದೆ. ಅನೇಕ ವಿದೇಶಿ ವಿದ್ವಾಂಸರು ಗಣನೀಯ ಸೇವೆ ಸಲ್ಲಿಸಿದ್ದಾರೆ. ವೆರಿಯರ್ ಎಲ್ವಿನ್‌ರಂತಹ ವಿದ್ವಾಂಸರು ಭಾರತದ ಅನೇಕ ಬುಡಕಟ್ಟುಗಳ ಬಗ್ಗೆ ಸಂಶೋಧನೆ ಕೈಗೊಂಡು ಅವರ ಉದ್ಧಾರಕ್ಕಾಗಿ ತಮ್ಮ ಬದುಕನ್ನೇ ಅರ್ಪಿಸಿಕೊಂಡಿದ್ದರು.

ಕರ್ನಾಟಕದ ಪ್ರಧಾನ ಬುಡಕಟ್ಟುಗಳಾದ ಮ್ಯಾಸನಾಯಕರು ಮತ್ತು ಕಾಡುಗೊಲ್ಲರನ್ನು ಕುರಿತ ಸಾಕಷ್ಟು ಅಧ್ಯಯನಗಳು ಇ. ಥರ್ಸ್‌ಟನ್

[1] ಎಲ್.ಕೆ. ಅನಂತಕೃಷ್ಣಅಯ್ಯರ್ ಮತ್ತು ಹೆಚ್.ವಿ. ನಂಜುಂಡಯ್ಯ[2] ಡಾ. ತೀ.ನಂ. ಶಂಕರನಾರಾಯಣ[3] ಡಾ. ಕಾಳೇಗೌಡ ನಾಗವಾರ[4] ಅವರಿಂದ ನಡೆದಿದ್ದರೂ, ಇನ್ನೂ ಯಾರ ಗಮನಕ್ಕೂ ಬಾರದಿರುವ ಕೆಲವು ಆಚಾರ-ವಿಚಾರಗಳನ್ನು ಕುರಿತು ಇಲ್ಲಿ ಪ್ರಸ್ತಾಪಿಸಿದ್ದೇನೆ.

ಕರ್ನಾಟಕದ ಉದ್ದಗಲಕ್ಕೂ ಹರಡಿರುವ ಈ ಜನಾಂಗ ರಾಯಚೂರು, ಬಳ್ಳಾರಿ, ತುಮಕೂರು ಜಿಲ್ಲೆಗಳ ಪೂರ್ವ ಭಾಗದಲ್ಲಿ ಹೆಚ್ಚಾಗಿಯೂ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಜಗಳೂರು ಮತ್ತು ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ಅತೀ ದಟ್ಟವಾಗಿಯೂ ನೆಲೆಸಿದ್ದಾರೆ. ನೆರೆಯ ಆಂಧ್ರಪ್ರದೇಶದ ಅನಂತಪುರ, ಕರ್ನೂಲು ಜಿಲ್ಲೆಗಳಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಆದರೆ ಈ ಜನ ಸಾಮಾಜಿಕವಾಗಿ ಆರ್ಥಿಕವಾಗಿ ಅತ್ಯಂತ ಹಿಂದುಳಿದವ ರಾಗಿದ್ದಾರೆ.

ಇವರು ಮೂಲತಃ ಆಂಧ್ರಪ್ರದೇಶದ ಶ್ರೀಶೈಲದ ಬಳಿಯ ಕರಿಮಲೆ ಕೊಮ್ಮಮಲೆ[5]ಗಳ ಕಡೆಯಿಂದ ಮತ್ತು ತಿರುಪತಿ ಬಳಿಯ ಜಡೇಕಲ್ಲುದುರ್ಗ[6]ದ ಕಡೆಯಿಂದ ವಲಸೆ ಬಂದ ಜನ. ಮೂಲತಃ ಬೇಟೆಗಾರರೂ, ಪಶುಪಾಲಕರೂ ಆದ ಈ ಜನ ಹುಲ್ಲು-ನೀರು ಹುಡುಕುತ್ತಾ ದೇಶಾಂತರ ಬಂದವರು. ಮುಖ್ಯವಾಗಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ನಂತರ ಕರ್ನಾಟಕದತ್ತ ವಲಸೆ ಬರತೊಡಗಿದ ಈ ಜನ ರಯೋಧರಾಗಿದ್ದರು, ಯುದ್ಧಪ್ರೇಮಿಗಳಾಗಿದ್ದರು. ಹೀಗಾಗಿ ಇವರಿಗೆ ಸಮಾಜದಲ್ಲಿ ಹೆಚ್ಚಿನ ಸ್ಥಾನ-ಮಾನಗಳು ದೊರೆತವು.

ಇವರ ಮನೆಯ ಮಾತು ತೆಲುಗು ಹಾಗೂ ಕನ್ನಡ. ಈ ಜನಾಂಗದ ಚರಿತ್ರೆಗೆ ಸಂಬಂಧಿಸಿದ ಎಷ್ಟೋ ದಾಖಲೆಗಳು ತೆಲುಗಿನಲ್ಲಿ ಸಿಗುತ್ತವೆ. ಆದರೆ ಕನ್ನಡ ಪ್ರಾಂತದಲ್ಲಿ ನೆಲೆಸಿದ ನಂತರ ದಾಖಲೆಗಳು ಕನ್ನಡದಲ್ಲಿಯೂ ಸಿಗುತ್ತವೆ. ಇಂದು ಕನ್ನಡ ಪ್ರಾಂತಗಳಲ್ಲಿ ನೆಲೆಸಿರುವ ಇವರು ತೆಲುಗು ಬಹುಪಾಲು ಕನ್ನಡ ಮಿಶ್ರವಾಗಿದ್ದು ತನ್ನದೇ ಆದ ವಿಚಿತ್ರ ಶೈಲಿಯನ್ನು ಹೊಂದಿದೆ. ಇವರ ‘ತೆಲುಗನ್ನಡ’ ಭಾಷಾವಿಜ್ಞಾನದ ದೃಷ್ಟಿಯಿಂದ ಕುತೂಹಲಕರವಾದ ಅಧ್ಯಯನವಾಗುತ್ತದೆ.

ಇವರು ತಮ್ಮನ್ನು ಬೇಡರು (ಬ್ಯಾಡರು), ವಾಲ್ಮೀಕಿಗಳು, ಪರಿವಾರದವರು, ಮ್ಯಾಸಬೇಡರು (ಮ್ಯಾಸನಾಯಕರು), ತಳವಾರರು, ನಾಯ್ಕರು, ಪಾಳೇಗಾರರು ಎಂದು ನಾನಾ ಹೆಸರುಗಳಲ್ಲಿ ಕರೆದುಕೊಳ್ಳುತ್ತಾರೆ. ತೆಲುಗಿನಲ್ಲಿ ಇವರನ್ನು ‘ಬೋಯ ಅಥವಾ ಬೇಡರ್’ ಎಂದು ಗುರುತಿಸುತ್ತಾರೆ.

“ಬೇಡರೆಂದು ಕರೆದುಕೊಳ್ಳಬೇಕಾದ ಜನರು ನಾನಾ ಹೆಸರುಗಳನ್ನು ಇಟ್ಟು ಕೊಂಡಿ ದ್ದಾದರೂ ಹೇಗೆ? ಅದಕ್ಕೆ ಅಂದಂದಿನ ಸನ್ನಿವೇಶಗಳೇ ಕಾರಣ. ವಾಲ್ಮೀಕಿ ಸಂತತಿ ಯವರು ತಮ್ಮ ಪ್ರಸಿದ್ಧ ಪೂರ್ವಿಕನ ಹೆಸರಿನಲ್ಲಿ ತಮ್ಮನ್ನು ವಾಲ್ಮೀಕಿಗಳೆಂದು ಕರೆದುಕೊಂಡು ಸಂತೃಪ್ತಿ ಪಡೆದಿದ್ದಾರೆ. ಕಾಡುಗಳಲ್ಲಿದ್ದು ಪಶುಪಾಲನೆಯನ್ನು ಮುಖ್ಯ ವೃತ್ತಿಯನ್ನಾಗಿ ಅವಲಂಬಿಸಿದವರು ತಮ್ಮ ಸಾಕು ಪ್ರಾಣಿಗಳನ್ನು ಕಾಡಿನಿಂದ ಕಾಡಿಗೆ ಅಟ್ಟಿಕೊಂಡು ಹೋಗಿ ಪೋಷಿಸುತ್ತಿದ್ದುದರ ಮೇಲೆ ತಮ್ಮನ್ನು ಕಾಡಸಂಚರು ಎಂದು ಕರೆದುಕೊಂಡಿದ್ದಾರೆ. ಮೂಗ ನಾಯಕನ ಅನುಯಾಯಿಗಳೆಲ್ಲಾ ತಮ್ಮನ್ನು ನಾಯಕರೆಂದು ಕರೆದುಕೊಳ್ಳುತ್ತಾರೆ. ಪಾಳೆಯಗಾರರ ಸಂತತಿಯವರು ತಮ್ಮನ್ನು ಪಾಳೆಯಗಾರರು ಅಥವಾ ದೊರೆಗಳು ಎಂದು ಕರೆದುಕೊಳ್ಳುತ್ತಾರೆ. ಪಾಳೆಯಗಾರರ ಆಸ್ಥಾನಗಳಲ್ಲಿ ಅಂತರಂಗ ಸೇವಕರಂತಿದ್ದವರ ಪೀಳಿಗೆಯವರು ತಮ್ಮನ್ನು ರಾಜಪರಿವಾರದವರೆಂದು ಕರೆದುಕೊಳ್ಳುತ್ತಾರೆ. ಹಗಲಿರುಳೂ ಗ್ರಾಮಗಳ ರಕ್ಷಣಾ ಕಾರ್ಯಕ್ಕೆ ನಿಯಮಿಸಲ್ಪಟ್ಟವರ ಸಂತತಿಯವರು ತಮ್ಮನ್ನು ತಳವಾರರೆಂದು ಕರೆದುಕೊಳ್ಳುತ್ತಾರೆ. ಕೆಲವರು ಹಿಂದಿನಿಂದಲೂ ಉಪಯೋಗಿಸುತ್ತಿದ್ದ ಶಖರ, ಕಿರಾತ, ಭಿಲ್ಲವ ಪದಗಳನ್ನೇ ತಮ್ಮ ಜಾತಿಯೆಂದು ಉಳಿಸಿಕೊಂಡಿದ್ದಾರೆ”[7] ಎಂಬುದು ರಾಜನ ರಾಜಣ್ಣನವರ ವಾದ.

“ಕ್ಷತ್ರಿಯ ಕುಲನಾಶಕ್ಕೆ ಗಂಡುಗೊಡಲಿ ಹಿಡಿದು ಹೊರಟ ಪರಶುರಾಮನ ಹಾವಳಿಯಿಂದ ತಲೆತಪ್ಪಿಸಿಕೊಂಡು ಕಾಡು ಸೇರಿದ ಕ್ಷತ್ರಿಯರು ತಮ್ಮನ್ನು ‘ನಾಯಕರು’ ಎಂದು ಕರೆದುಕೊಂಡರು. ಕ್ರಮೇಣ ತಾವು ಕಟ್ಟಿದ ಸಾಮ್ರಾಜ್ಯಗಳನ್ನು ಮರೆತು, ಕಾಡಿನ ಬದುಕಿನೊಂದಿಗೆ ಬೆರೆತುಹೋಗಿ ‘ಕಿರಾತ’ರೆನಿಸಿಕೊಂಡರು”[8] ಎಂಬ ವಿಶಿಷ್ಟ ವ್ಯಾಖ್ಯಾನಹರತಿ ರನಾಯಕರದು.

ಪುರಾಣ ಕಾಲದ ವಾಲ್ಮೀಕಿ, ಧರ್ಮವ್ಯಾಧ, ಬೇಡರ ಕಣ್ಣಪ್ಪ, ಏಕಲವ್ಯ, ಶಬರಿಯನ್ನು ಬಿಟ್ಟರೆ, ಕ್ರಿ.ಶ. ೯ನೇ ಶತಮಾನಕ್ಕೆ ಸೇರಿದ ‘ವಡ್ಡಾರಾಧನೆ’ ಎಂಬ ಹಳಗನ್ನಡದ ಗದ್ಯಕೃತಿಯ ಅನೇಕ ಕತೆಗಳಲ್ಲಿ ನಗರ ರಕ್ಷಣೆಯಲ್ಲಿ ನಿರತನಾದ ‘ತಳವಾರ’ನ ಉಲ್ಲೇಖವನ್ನು ಕಾಣ ಬಹುದು.

ಇವರೆಲ್ಲರನ್ನೂ ಒಟ್ಟಾಗಿ ‘ನಾಯಕರು’ ಎಂದು ಕರೆಯುವುದು ವಾಡಿಕೆಯಾಗಿದೆ. ಆದರೆ ಇವರಲ್ಲಿ ‘ಮ್ಯಾಸ ನಾಯಕರು, ಊರು ನಾಯಕರು ಮತ್ತು ಪಾಳೆಯಗಾರರು’ ಎಂಬ ಮೂರು ಪ್ರಧಾನವಾದ ಪಂಗಡಗಳಿವೆ.

ಸಹಜವಾಗಿ ಕೃಷ್ಣಕಾಯರಾದ ಈ ಜನಗಳಲ್ಲಿ ಗಿರಿಜನಾಂಗದ ಪ್ರಾಚೀನ ಲಕ್ಷಣಗಳನ್ನು, ಆಚಾರ-ವಿಚಾರಗಳನ್ನು ಕಾಣಬಹುದು. ಇವರಲ್ಲಿ ‘ಮಂದಲೋರು, ಮಲ್ಲನಾಯಕನೋರು, ಮಳೆಲೋರು’ ಎಂಬ ವಿಭೂತಿ ಪುರುಷರ ಹೆಸರಿನಲ್ಲೇ ಗುರುತಿಸಲ್ಪಡುವ ಬೆಡಗುಗಳಿವೆ. ಇವರು ಕ್ರಮವಾಗಿ ವಿಷ್ಣು, ಶಿವ, ಬ್ರಹ್ಮನ ಆರಾಧಕರಾಗಿರುತ್ತಾರೆ, ಆದರೆ ಮಳೆಲೋರು ಮಾತ್ರ, ಬ್ರಹ್ಮನೊಂದಿಗೆ ಬೇರೆಲ್ಲಾ ದೇವರುಗಳನ್ನು ಪೂಜಿಸುತ್ತಾರೆ. ಮಳೆಲೋರು ಎಲ್ಲಾ ಬೆಡಗು ಗೋತ್ರಗಳೊಂದಿಗೆ ವೈವಾಹಿಕ ಸಂಬಂಧಗಳನ್ನು ಬೆಳೆಸುತ್ತಾರೆ. ಅಂದರೆ ಇವರು ಎಲ್ಲ ಕುಲಕ್ಕೂ (ಬೆಡಗು) ನೆಂಟರಾಗಿ ನಡೆದುಕೊಳ್ಳುತ್ತಾರೆ (ಕುಂಚಟಿಗ ಒಕ್ಕಲಿಗರಲ್ಲಿ ಈ ಬೆಡಗನ್ನೇ ಹೋಲುವ ‘ಒಳಕಲ್ಲೊರು’ ಎಂಬ ಅಪರೂಪದ ಬೆಡಗಿದೆ).

‘ಎನಮಲೋರು’ (ಎಮ್ಮೆಯವರು) ಎಂಬ ಇನ್ನೊಂದು ಪ್ರಮುಖ ಬೆಡಗು ಇದೆ. (ಕುಂಚಟಿಗ ಒಕ್ಕಲಿಗರಲ್ಲೂ ಇದನ್ನೇ ಹೋಲುವ ‘ಎಮ್ಮೆನೋರು’ ಎಂಬ ಬೆಡಗು ಇದೆ) ಇವಲ್ಲದೆ ಅಲ್ಪ ಜನಸಂಖ್ಯೆ ಇರುವ ಅನೇಕ ಬೆಡಗುಗಳು ಇವೆ (ಈ ಬೆಡಗುಗಳು ಅಣ್ಣ-ತಮ್ಮಂದಿತನ, ನೆಂಟತನ ನಿರ್ಧರಿಸಲು ಸಹಾಯಕವಾಗುತ್ತವೆ).

ಕಾಡುಗೊಲ್ಲರಿಗೂ, ಮ್ಯಾಸನಾಯಕರಿಗೂ ಅತ್ಯಂತ ಹತ್ತಿರದ ಅನೇಕ ಹೋಲಿಕೆ ಗಳಿರುವುದು ಸಮಾಜ ವಿಜ್ಞಾನಿಗಳಿಗೆ ಆಶ್ಚರ್ಯವನ್ನು ಉಂಟುಮಾಡುವುದರೊಂದಿಗೆ ಇವೆರಡೂ ಬುಡಕಟ್ಟುಗಳೂ ಮೂಲದಲ್ಲಿ ಒಂದೇ ಆಗಿದ್ದಿರಬಹುದೆಂಬ ಅನುಮಾನವನ್ನು ಹುಟ್ಟು ಹಾಕುತ್ತವೆ. ಇಂತಹುದೇ ಸಾಮ್ಯಗಳು ಕುರುಬ ಮತ್ತು ಕುಂಚಟಿಗ ಒಕ್ಕಲಿಗ ಜಾತಿಗಳೊಳಗೂ ಕಾಣಬಹುದು.

ಪ್ರಚಲಿತವಿರುವ ಜನಪದ ಕತೆ[9]ಯೊಂದರ ಪ್ರಕಾರ – ಈಗ ಮ್ಯಾಸಬ್ಯಾಡರು ಮತ್ತು ಕಾಡುಗೊಲ್ಲರು ಎಂದು ಕರೆಯಲ್ಪಡುವ ಇವರು ಒಂದೇ ತಾಯಿಯ ಮಕ್ಕಳಂತೆ. ಇಬ್ಬರೂ ಗೋಪಾಲಕರಾಗಿದ್ದರು. ಬರಬಂದಾಗ ದನಗಳನ್ನು ಪಡುವಲ ಸೀಮೆಗೆ ತಿರುಗಿಸಿದರು. ಬಹಳಷ್ಟು ದಿನಗಳಿಂದ ಆಹಾರವಿಲ್ಲದೆ ಹಸಿವಿನಿಂದ ಕಂಗೆಟ್ಟಿದವನು ತಡೆಯಲಾರದೆ, ಆಗತಾನೆ ಈದ (ಜನನವಾದ) ಕುಂಟ ಆಕಳು ಕರುವಿನ ತೊಡೆಯನ್ನು ಕಿತ್ತುಕೊಂಡು ತಿಂದನಂತೆ. ಇದನ್ನು ನೋಡಿದ ದೊಡ್ಡವನು ‘ಅಯ್ಯೋ ಕಂಕಾ (ಅನಾಗರೀಕ) ಎಂಥಾ ಕೆಲ್ಸ ಮಾಡಿದೆಯೋ’ ಎಂದು ಬಯ್ದನಂತೆ, ಅಂದಿನಿಂದ ಅವರು ಬೇರೆಯಾದರಂತೆ. ‘ಕಂಕಾ’ ಎಂದು ಕರೆಯಲ್ಪಟ್ಟವನು ಮುಂದೆ ‘ಮ್ಯಾಸನಾಯಕ’ನೆನಿಸಿಕೊಂಡನಂತೆ; ಉಳಿದವನು ತನ್ನ ‘ಗೊಲ್ಲ’ತನವನ್ನು ಹಾಗೆ ಉಳಿಸಿಕೊಂಡನಂತೆ.

ಈ ಕಥೆಯನ್ನು ಸಮೀಕರಿಸುವಂತಿರುವ ಅನೇಕ ಆಚಾರ ವಿಚಾರಗಳು ಒಂದೇ ಆಗಿರುವುದನ್ನು ಈ ಕೆಳಕಂಡಂತೆ ಗುರುತಿಸಬಹುದು –

ಗೊಲ್ಲರಲ್ಲಿ-ಕಾಡುಗೊಲ್ಲರು, ಊರುಗೊಲ್ಲರು ಇರುವಂತೆ, ನಾಯಕರಲ್ಲಿ ಮ್ಯಾಸ ನಾಯಕರು, ಊರು ನಾಯಕರು ಎಂಬ ಎರಡು ಪ್ರಭೇದಗಳಿವೆ.

ಹಳೆಯ ತಲೆಮಾರಿನ ಮ್ಯಾಸನಾಯಕರ ಯಜಮಾನರು ಕಾಡುಗೊಲ್ಲರಂತೆ ತಲೆ ಕೂದಲನ್ನು ಕತ್ತರಿಸದೆ ‘ತುರುಬು’ ಕಟ್ಟುವುದನ್ನು ಇಂದು ಕಾಣಬಹುದು (ಆದರೆ ಮುಂದಲೆಯ ಕೂದಲನ್ನು ಚಂದ್ರಾಕಾರವಾಗಿ ಕತ್ತರಿಸಿರುತ್ತಾರೆ). ಕಾಡುಗೊಲ್ಲರ ಹೆಂಗಸರು ಮೇಲು ರವಿಕೆ (ಕುಪ್ಪಸ) ತೊಡದಿರುವಂತೆ, ಹಳೆಯ ಕಾಲದ ಮ್ಯಾಸಬೇಡರ ಹೆಂಗಸರೂ ರವಿಕೆ ತೊಡುವುದಿಲ್ಲ; ಕಾಡುಗೊಲ್ಲರ ಹೆಂಗಸರು ಮುಂಗೈಗೆ ‘ಗೊಲ್ಲಕಡಗ’ ಧರಿಸಿದರೆ, ಅದನ್ನೇ ಹೋಲುವಂತಹ ‘ಬದ್ದು’ ಎಂಬ ಹಿತ್ತಾಳೆಯ ಆಭರಣವನ್ನು ಇವರು ಮುಂಗೈಗೆ ತೊಡುತ್ತಾರೆ.

ಕಾಡುಗೊಲ್ಲರ ಹಾಗೆ ಇವರು ಕೂಡ ಹಟ್ಟಿಯನ್ನು ಊರ ಹೊರವಲಯದಲ್ಲಿ ಪ್ರತ್ಯೇಕವಾಗಿ ಹಾಕಿಕೊಂಡು ಜನಸಂಪರ್ಕದಿಂದ ದೂರವಿರುತ್ತಾರೆ. ಬಹಳಷ್ಟು ಕಡೆಗಳಲ್ಲಿ ಕಾಡುಗೊಲ್ಲರ ಮತ್ತು ಮ್ಯಾಸಬೇಡರ ಹಟ್ಟಿಗಳು ಅಕ್ಕಪಕ್ಕದಲ್ಲೇ ಇರುತ್ತವೆ.

ಕಾಡುಗೊಲ್ಲರಂತೆ ಇವರೂ ಹಟ್ಟಿಯ ಸುತ್ತ ಕಳ್ಳೆಬೇಲಿಯನ್ನು ಹಾಕುತ್ತಾರೆ, ಜೊತೆಗೆ ಕಾಡುಗೊಲ್ಲರಂತೆ ಕೋಳಿಯನ್ನು ಹಟ್ಟಿಯೊಳಗೆ ಸೇರಿಸುವುದಿಲ್ಲ, ಸೇವಿಸುವುದೂ ಇಲ್ಲ. ಆದರೆ ಈಗೀಗ ಈ ಬಿಗಿಯಾದ ಕಟ್ಟು-ನಿಟ್ಟು ಸಡಿಲವಾಗುತ್ತಿದೆ.

ಈ ಎರಡೂ ಜನಾಂಗಗಳ ಪ್ರಮುಖ ದೈವಗಳಾದ ಕಾಟಂಲಿಂಗ, ಚಿತ್ರಲಿಂಗ ದೇವರುಗಳು ಒಂದೇ ಆಗಿವೆ; ಈ ಎರಡೂ ಜನಾಂಗಗಳು ‘ಢಗಮು’[10] ಎಂಬ ವಿಶಿಷ್ಟ ವಾದ್ಯವನ್ನು ತಮ್ಮ ದೇವರಿಗೆ ಬಳಸುತ್ತಾರೆ.

ಕಾಡುಗೊಲ್ಲರಿಗೆ ಸಾಂಸ್ಕೃತಿಕ ರರೂ ಹಾಗೂ ಗೋಪಾಲಕರೂ ಆಗಿದ್ದ ಎತ್ತಪ್ಪ-ಜುಂಜಪ್ಪಗಳು ಹೇಗೆ ಆರಾಧ್ಯದೈವಗಳೋ ಹಾಗೇ ಮ್ಯಾಸಬೇಡರಲ್ಲಿ ಗೋಪಾಲಕರಾಗಿದ್ದ ಗಾದರಿಪಾಲನಾಯಕ ಜಗಲೂರು ಪಾಪನಾಯಕರು ಆರಾಧ್ಯ ದೈವಗಳೂ, ಸಾಂಸ್ಕೃತಿಕ ರರೂ ಆಗಿದ್ದಾರೆ.

ಕಾಡುಗೊಲ್ಲರಲ್ಲಿ ಜುಂಜಪ್ಪನಿಗೆ ದನಗಳನ್ನು ಬಿಡುವಂತೆ, ಮ್ಯಾಸನಾಯಕರೂ ದನಕರು ಗಳನ್ನು ತಮ್ಮ ದೇವರುಗಳಿಗೆ ಬಿಡುತ್ತಾರೆ. ದೇವರ ದನಗಳನ್ನು ಕಾಯುವವರನ್ನು ‘ಎತ್ತಿನ ಕಿಲಾರಿ’ ಎನ್ನುತ್ತಾರೆ. ಈ ದನಗಳನ್ನು ಮಾರಾಟ ಮಾಡುವಂತಿಲ್ಲ, ಸತ್ತರೆ ಅವನ್ನು ಕೊಯ್ಯಲು ಕೊಡುವಂತಿಲ್ಲ, ಅವನ್ನು ‘ಮಣ್ಣು’ ಮಾಡಿ ಭಕ್ತಿಯಿಂದ ಪೂಜಿಸುತ್ತಾರೆ. ಕಾಡುಗೊಲ್ಲರೂ ಜುಂಜಪ್ಪನ ಬಸವಗಳನ್ನು ಕುರಿತು ಇದೇ ಸಂಪ್ರದಾಯವನ್ನು ಅನುಸರಿಸುತ್ತಾರೆ.

ಹೊಳಲ್ಕೆರೆ ಮತ್ತು ನಾಯಕನಹಟ್ಟಿ ಭಾಗದಲ್ಲಿರುವ ಕೆಲವು ಮ್ಯಾಸನಾಯಕರು ಈಚಲು ಚಾಪೆಯ ಮೇಲೆ ಕೂರುವುದಿಲ್ಲ, ಕಸ ತೆಗೆಯಲು ಈಚಲು ಪೊರಕೆಗಳನ್ನು ಬಳಸುವುದಿಲ್ಲ! ಹೆಂಡ ಕೊಡುವ ಹೊಲಸು ಮರದ ಈಚಲು ಗರಿಯನ್ನು ಬಳಸಿದರೆ ‘ಮೈಲಿಗೆ’ಯಾಗುತ್ತದೆ ಎಂಬ ನಂಬಿಕೆ ಅವರದು.

ಇವರು ಅಣ್ಣ-ತಮ್ಮಂದಿರಾಗಿದ್ದಿರಬಹುದು ಎಂಬುದನ್ನು ಸಮರ್ಥಿಸುವಂತಿರುವ ವಿಶಿಷ್ಟ  ಆಚರಣೆ[11] ಚಳ್ಳಕೆರೆ ತಾಲ್ಲೂಕಿನ ಮತ್ಸಮುದ್ರ ಗ್ರಾಮದಲ್ಲಿ ಹನುಮಂತರಾಯನ ‘ಕಾರ್ತೀಕ’ ಉತ್ಸವದಲ್ಲಿ ನಡೆಯುತ್ತದೆ. ಹಗ್ಗಗಳಿಂದ ನಿಲ್ಲಿಸಲ್ಪಟ್ಟ ೪೦ ಅಡಿ ಎತ್ತರವಿರುವ ಕಂಬದ ಬುಡದಲ್ಲಿ ಸಣ್ಣ ವೃತ್ತಾಕಾರದ ಪಾವತಿ ಮಾಡಿ ನೀರು ತುಂಬುತ್ತಾರೆ; ಕಂಬದ ತುದಿಯಲ್ಲಿ ಗೂಡಿನ ಆಕಾರದಲ್ಲಿ ನಿರ್ಮಿಸಿದ ಕಮಾನಿಗೆ ನಾಲ್ಕೂ ಮೂಲೆಗಳ ನಾಲ್ಕು ಅಡ್ಡಗೂಟ ಬಡಿದಿರುವ ಹಸಿ ತೆಂಗಿನ ಕಾಯಿಗಳನ್ನು ತೂಗು ಬಿಟ್ಟಿರುತ್ತಾರೆ, ಜೊತೆಗೆ ಬಟ್ಟೆಗಳಲ್ಲಿ ಹಲವು ತಿನಿಸುಗಳ ಗಂಟು ಕಟ್ಟಿ, ಎಣ್ಣೆ-ಲೋಳಿಸರಗಳ ಮಡಕೆ ಹಿಡಿದ ವ್ಯಕ್ತಿಯೊಬ್ಬ ಕಂಬದ ತುದಿಯಲ್ಲಿ ಕೂತಿರುತ್ತಾನೆ. ಈ ಕಂಬದ ಮೈಗೆ ಜೇಡಿಮಣ್ಣಿನ ಬುರುಜೆ ಮತ್ತು ಎಣ್ಣೆಯನ್ನು ಜಾರುವಂತೆ ಬಳಿದಿರುತ್ತಾರೆ. ಇದು ಕೃಷ್ಣ ಗೋಕುಲದಲ್ಲಿ ಬೆಣ್ಣೆ ಕದಿಯುತ್ತಿದ್ದ ಮೊಸರು, ಹಾಲುಗಳನ್ನು ಇಡುತ್ತಿದ್ದ ‘ನೆಲವು’ ನೆನಪಿಗೆ ತರುವಂತಿದೆ, ಜೊತೆಗೆ ಇದನ್ನು ತೆಲುಗಿನಲ್ಲಿ ‘ಉಟ್ಲು’ ಎನ್ನುತ್ತಾರೆ – ಅಂದರೆ ‘ನೆಲುವು’ ಎಂದೇ ಅರ್ಥ; ಅದಕ್ಕಾಗಿಯೇ ಇದನ್ನು ‘ಉಟ್ಲುಮರ’ ಎಂದು ಕರೆಯುತ್ತಾರೆ. ಈ ಕಂಬವನ್ನು ಹತ್ತಿ ಇನ್ನೇನು ತುದಿ ಮುಟ್ಟಿದೆವು ಎನ್ನುವಾಗ ಮೇಲಿನಿಂದ ಜರ್ರನೆ ಜಾರುವ ಈ ರೋಮಾಂಚಕಾರಿ ಆಟ ಕೆಲವೊಮ್ಮೆ ಪ್ರಾಣಕ್ಕೂ ಸಂಚಕಾರ ತರುತ್ತದೆ. ಈ ಕಂಬವನ್ನು ಹತ್ತುವ ಹಕ್ಕು ಗೊಲ್ಲರದು, ಅವರು ಹತ್ತುವ ಶಾಸ್ತ್ರಮಾಡಿ, ಅನುಮತಿಕೊಟ್ಟ ನಂತರವೇ ಮ್ಯಾಸನಾಯಕರು ಈ ಕಂಬ ಹತ್ತುತ್ತಾರೆ; ಇಲ್ಲಿ ಇವರು ಅಣ್ಣ-ತಮ್ಮಂದಿರಂತೆ ನಡೆದುಕೊಳ್ಳುತ್ತಾರೆ.

ಮ್ಯಾಸನಾಯಕರ ಹೆಣ್ಣಿಗೂ, ಕಾಡುಗೊಲ್ಲನೊಬ್ಬನಿಗೂ ವಿವಾಹವಾದದ್ದರಿಂದ ಕಾಡು ಗೊಲ್ಲರಲ್ಲಿ ‘ತಾಳಿಕಟ್ಟಿದ ಗೊಲ್ಲರು’ ಎಂಬ ವಿಶಿಷ್ಟ ಬೆಡಗು ಹುಟ್ಟಿಕೊಳ್ಳಲು ಕಾರಣವಾಗುವ ಕತೆ[12] ಈ ಎರಡೂ ಜನಾಂಗಗಳ ಮಧ್ಯೆ ನಡೆದಿರಬಹುದಾದ ಸಂಬಂಧಗಳ ಮೇಲೆ ಹೊಸ ಬೆಳಕನ್ನು ಚೆಲ್ಲುತ್ತದೆ.

ಹರತಿಕೋಟೆಯ ರಾಜನ ಮಕ್ಕಳಲ್ಲಿ ಒಬ್ಬಳಾದ ಕರಿಯೋಬಿಯನ್ನು ಬಸವಿಗೆ ಬಿಟ್ಟಿದ್ದರು. (ಇತಿಹಾಸ ಈ ಬಗ್ಗೆ ಮೌನವಾಗಿದೆ). ಆಕೆ ಪ್ರತ್ಯೇಕವಾದ ಅರಮನೆ ಕಟ್ಟಿಸಿ ಕೊಂಡು ಅರಮನೆಯ ಮುಂದೆ – “ಕಪ್ಪೆಕಲಕದ ನೀರು, ಬಿಸಿಲಿಗೆ ಬಾಡದ ಹೂವು, ನಾಲ್ಕು ಏಣಿನ ಹಸಿರು ಕಲ್ಲುಕಂಭ, ತಲೆಗೆ ಮೆತ್ತನೆಕಲ್ಲು, ಕಾಯಿಸದೆ ಆಗಿರೋ ತುಪ್ಪ, ಒಂದು ಕೊಂಬಿನ ಮೇಕೆ ಹೋತ ತಂದು ಕೊಟ್ಟವರಿಗೆ ಭೋಗ ಕೊಡ್ತೀನಿ ಇವನ್ನು ತರದೆ ಸೋತವನು ಸಾವಿರ ವರಹ ದಂಡ ಕೊಡಬೇಕು” ಎಂದು ಶಾಸನ ಹಾಕಿಸಿದ್ದಳು. ಹೀಗೆ ಸೋತವರಿಂದ ಏಳು ಕೊಪ್ಪರಿಗೆ ವರಹ ಸಂಪಾದಿಸಿದ್ದಳು. ಈ ಸುದ್ದಿ ಕೇಳಿದ ಹಟ್ಟಿ ಮಲ್ಲಪ್ಪನಾಯಕ (ಹಟ್ಟಿ ಪಾಳೆಯಗಾರರಲ್ಲಿ ಲಫಂಗನಾಗಿದ್ದ ಚಿಕ್ಕಮಲ್ಲಪ್ಪನಾಯಕ ಇರಬಹುದೇ?) ಬಂದು ಆಕೆಯ ಒಡಪನ್ನು ಬಿಡಿಸಲಾರದೆ ಹುಚ್ಚಾಗಿ ಕಾಡಿನಲ್ಲಿ ತಿರುಗುತ್ತಿದ್ದಾಗ ‘ಕಲ್ಡಿ ಬುಳ್ಳಣ್ಣ’ ಎಂಬ ಗೊಲ್ಲ ಸಿಕ್ಕ. ಅವನು ‘ಇದೇನು ಮಹಾ ಒಗಟು ನಾನು ಬಿಡಿಸ್ತೀನಿ. ಇಂಥ ಸಾವಿರ ಒಗಟು ನಾನು ಬಿಡಿಸ್ತಿನಿ’ ಎಂದು ಅದರ ರಹಸ್ಯ ಒಡೆದ. ಹಟ್ಟಿ ಮಲ್ಲಪ್ಪನಾಯಕ ತಕ್ಷಣವೇ ಕರಿಯೋಬಿಯ ಬಳಿಗೆ ಹೋಗಿ – “ಎಳೆನೀರೇ – ಕಪ್ಪೆಕಲಕದ ನೀರು, ನವಿಲುಗರಿಯೇ – ಬಿಸಿಲಿಗೆ ಬಾಡದ ಹೂವು, ಮುಂಗರ ಬಳ್ಳಿಯೇ – ನಾಲ್ಕು ಏಣಿನ ಹಸಿರು ಕಲ್ಲುಕಂಭ, ಕೈಯ ತೋಳು ತಲೆಗೆ ಮೆತ್ತನೆಯ ಕಲ್ಲು, ಜೇನುತುಪ್ಪವೇ- ಕಾಯಿಸದೆ ಆಗೋ ತುಪ್ಪ, ಕೋಳಿನೇ ಒಂದು ಕೊಂಬಿನ ಮೇಕೆ ಹೋತ” ಎಂದು ಒಡಪು ಬಿಡಿಸಿದ. ಆದರೆ ಆಕೆ ಇವನ ಜಾಣತನವನ್ನು ನಂಬದೆ, ಮೂಲ ಶೋಧಿಸಿದಾಗ ಕಲ್ಡಿ ಬುಳ್ಳಣ್ಣ ಎಂದು ಗೊತ್ತಾಗುತ್ತದೆ. ಸೋತ ಮಲ್ಲಪ್ಪನಾಯಕ ಹ್ಯಾಪ ಮೋರೆ ಹಾಕಿಕೊಂಡು ಹೊರಟ.

ಕರಿಯೋಬಿ ಕಲ್ಡಿ ಬುಳ್ಳಣ್ಣನನ್ನು ಮದುವೆಯಾಗಲು ಬೇಡಿಕೊಳ್ಳುತ್ತಾಳೆ. ಆದರೆ ಅವನು “ನನಗೆ ಬಾಲಮ್ಮ-ನಾಗಮ್ಮ ಅಂತ ಇಬ್ರು ಹೆಂಡ್ರು. ಅವರು ಒಪ್ಪದ ಹೊರತು ನಿನ್ನ ಕೂಡೋಕೆ ಆಗೋಲ್ಲ” ಅಂತಾನೆ. ಕರಿಯೋಬಿ ಅವರ ಮನೆಗೆ ಹೋಗಿ, ಅವರ ಮನೆಯ ಆಳಾಗಿ ದುಡಿದು, ಅವರ ವಿಶ್ವಾಸ ಸಂಪಾದಿಸಿ, ಅವರನ್ನು ಒಲಿಸಿ-ಒಪ್ಪಿಸಿ ಕಲ್ಡಿ ಬುಳ್ಳಣ್ಣನನ್ನು ಮದುವೆಯಾಗುತ್ತಾಳೆ. ಸಾಕಷ್ಟು ವಯಸ್ಸಾದರೂ ಮಕ್ಕಳಾಗದಿದ್ದ ಕರಿಯೋಬಿ (ನಂತರ ಈ ಊರಿಗೆ ಕರಿಯೋಬೆನಳ್ಳಿ ಎಂಬ ಹೆಸರು ಬಂತು, ಇದು ಹಿರಿಯೂರು ತಾಲ್ಲೂಕಿನ ಹರ್ತಿಕೋಟೆಗೆ ಸಮೀಪದಲ್ಲೇ ಇದೆ) ಬಾಲಮ್ಮನ ಮಗನೊಬ್ಬನನ್ನು ದತ್ತು ತೆಗೆದುಕೊಂಡು, ಅವನು ಬೆಳೆದು ದೊಡ್ಡವನಾದ ಮೇಲೆ ನಾಯಕ ಜಾತಿಯಲ್ಲಿ ಒಂದು ಹೆಣ್ಣು ತೆಗೆದು ಮದುವೆ ಮಾಡುತ್ತಾಳೆ. ಅವನಿಗೆ ಏಳು ಜನ ಮಕ್ಕಳಾಗುತ್ತಾರೆ, ಅವರೆಲ್ಲರಿಗೂ ಮದುವೆ ಯಾಗಿ ಏಳು ಮಂದಿ ಸೊಸೆಯರೂ ಮನೆಗೆ ಬರುತ್ತಾರೆ. ಈ ಸೊಸೆಯರು ಆ ಹಳ್ಳಿಗೆ ಬಂದ ಮುತ್ತಿನ ಸೆಟ್ಟಿ ಹತ್ತಿರ ಇದ್ದ ‘ಮುತ್ತಿನ ವಸ್ತ್ರ’ ಕಂಡ ಸೊಸೆಯರು – ‘ನಮ್ಮತ್ತೆ ಏಳು ಕೊಪ್ಪರಿಗೆ ವರಹ ಸಂಪಾದಿಸಿದರೇನು ಬಂತು? ಒಂದು ಮುತ್ತಿನ ವಸ್ತ್ರ  ಸಂಪಾದಿ ಸಲಿಲ್ಲ’ ಎಂದು ಹಾಸ್ಯ ಮಾಡಿ ನಕ್ಕರು. ಇದರಿಂದ ನೊಂದುಕೊಂಡ ಕರಿಯೋಬಜ್ಜಿ ಮಕ್ಕಳಲ್ಲಿ ದುಃಖ ತೋಡಿಕೊಂಡಳು. ಮಕ್ಕಳು ಮುತ್ತಿನ ಸೆಟ್ಟಿಯ ಹಿಂದೆಯೇ ಹೋಗಿ, ಮುತ್ತು ಹೊರುತ್ತಿದ್ದ ಎತ್ತಿನ ಕುತ್ತಿಗೆ ಕೊಯ್ದು ‘ಮುತ್ತಿನ ಮೂಟೆ’ಯನ್ನೇ ಕದ್ದು ತರುತ್ತಾರೆ. ಮುತ್ತಿನ ಸೆಟ್ಟಿಗೆ ಕಳವಿನ ವಿಚಾರ ಗೊತ್ತಾಗಿ ಪಂಚಾಯ್ತಿ ಹಾಕಿಸಿದ. ಆಗ ಇವರು ‘ಮುತ್ತಿನ ತೂಕದ ಒಡವೆ ವಸ್ತ್ರ ಎಲ್ಲ ಹಾಕಿದರೂ ಆ ಮುತ್ತಿಗೆ ಸರಿತೂಗದಾಗ; ಏಳು ಮಂದಿ ಸೊಸೆಯರು ತಮ್ಮ ಕೊರಳಲ್ಲಿಯ ಮಾಂಗಲ್ಯಗಳನ್ನು ತೆಗೆದು ಹಾಕಿದರು, ಆದರೂ ಸರಿದೂಗಲಿಲ್ಲ! ಕೊನೆಗೆ ನಾಗಮ್ಮನ ಸೊಸೆಯರಿಗೆ ಅವರ ಮಾಂಗಲ್ಯಗಳನ್ನು ಹಾಕಲು ಹೇಳಿದಾಗ ಅವರು ನಿರಾಕರಿಸಿದರು. ತಪ್ಪು ಮಾಡಿ ಮಾಂಗಲ್ಯ ಕಳೆದುಕೊಂಡ ಈ ಜನ ಮುಂದೆ ‘ತಾಳಿ ಕಟ್ಟಿದ ಗೊಲ್ಲರು’ ಆದರು, ತಾಳಿತೆಗೆಯಲು ನಿರಾಕರಿಸಿದವರು ತಾಳಿಕಟ್ಟುವ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋದರು.

ಈ ಕತೆ ಈ ಎರಡೂ ಜನಾಂಗಗಳ ಸಾಮರಸ್ಯ-ವೈಷಮ್ಯಗಳನ್ನು, ಇವರ ಪ್ರಾಚೀನ ಸಂಬಂಧಗಳನ್ನು ಕುರಿತು ಹೇಳುತ್ತದೆ.

ಈ ಜನಾಂಗದವರು ಪೂಜಿಸುವ ಪ್ರಮುಖ ದೈವಗಳು-ಕಾಟಲಿಂಗ, ಚಿತ್ರಲಿಂಗ, ಬೋರೆ ದೇವರು, ಬೋಸೆ ದೇವರು, ಗಾದಿರಿಪಾಲನಾಯಕ, ಜಗಲೂರು ಪಾಪನಾಯಕ, ಮಾರಮ್ಮ, ಬಂಗಾರ ದೇವರು, ಬೊಮ್ಮಲಿಂಗ, ಓಬಳ ನರಸಿಂಹಸ್ವಾಮಿ ಮುಂತಾದವುಗಳು.

ಇವರು ಮದುವೆಯ ಸಂದರ್ಭದಲ್ಲಿ ಮಾಡುವ ಸಂಪ್ರದಾಯಗಳೂ ತುಂಬಾ ಭಿನ್ನವಾಗಿವೆ: ಮದುವೆಯ ನಿಶ್ಚಿತಾರ್ಥದ ಸಂದರ್ಭದಲ್ಲಿ ನಡೆಸುವ ಕ್ರಿಯೆಯನ್ನು ‘ವೀಳ್ಯಶಾಸ್ತ್ರ’ ಎನ್ನುತ್ತಾರೆ. ಕಂಬಳಿ ಗದ್ದಿಗೆಯ ಮೇಲೆ ಮೂರು ವೀಳ್ಯಾಗಳನ್ನು ಇಟ್ಟಿರುತ್ತಾರೆ, ಈ ಕಂಬಳಿಯನ್ನು ಹಾಸುವವನು ‘ಮಳೆಲೋರವನು’. ಇವನ್ನು ಮಂದಲೋರ ವೀಳ್ಯ, ಮಲ್ಲನಾಯಕನೋರ ವೀಳ್ಯ, ಮಳೆಮೋರ ವೀಳ್ಯ ಎನ್ನುತ್ತಾರೆ. ಇವು ಆಯಾ ಒಳಪಂಗಡಗಳ ಹಿರಿಯರಾದ ಮೂಲ ಪುರುಷರ ಹೆಸರಿನಲ್ಲಿದ್ದು ಅವರಿಗೆ ತೋರುವ ಸಾಂಕೇತಿಕ ಗೌರವ ಇದಾಗಿದೆ. ಆಯಾ ಒಳಪಂಗಡಗಳ ವಂಶಸ್ಥರು ಇವುಗಳನ್ನು ಪಡೆಯುತ್ತಾರೆ. ಮೊದಲೆರಡು ವೀಳ್ಯಗಳನ್ನು ಕಂಬಳಿ ಗದ್ದಿಗೆಯ ಮೇಲಿನಿಂದ ಎತ್ತಿಕೊಟ್ಟರೆ ಕೊನೆಯದನ್ನು ಕಂಬಳಿಯ ಅಡಿಯಿಂದ ಎತ್ತಿಕೊಡುತ್ತಾರೆ.

ಸಮಾಜದ ಮೇಲ್ವರ್ಗದವರ ಮದುವೆಗಳಲ್ಲಿರುವಂತೆ ಹರಿಣಿ (ಪವಿತ್ರವಾದ ಕುಂಭ), ಧಾರೆಚಪ್ಪರ, ಹಸೆಕಟ್ಟೆ ಇರುವುದಿಲ್ಲ. ತಮ್ಮ ಜಾತಿಗೆ ಸೇರಿದ ತಮ್ಮ ಮನೆ ದೇವರುಗಳ ಪೂಜಾರಿಗಳೇ ಪೌರೋಹಿತ್ಯವನ್ನು ನಿರ್ವಹಿಸುತ್ತಾರೆ.

ಇವರಲ್ಲಿ ಕುಲಾಚಾರದ ಕಟ್ಟುಗಳನ್ನು ನಿರ್ದೇಶಿಸುವ-ನಿಷೇಧಿಸುವ ‘ಕಟ್ಟಿಮನಿ’ಗಳಿರುತ್ತವೆ. ಇವನ್ನು ಇವರು ‘ಮ್ಯಾಸ ಮಂಡಲ’ಗಳೆನ್ನುತ್ತಾರೆ. ಉದಾಹರಣೆಗೆ ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ, ಹಿರೇಹಳ್ಳಿ ಗೌರ ಸಮುದ್ರ (ಐವೋಜಿ ಮಠ)ಗಳನ್ನು ಹೆಸರಿಸಬಹುದು.

ಸತ್ತಾಗ ನಿರ್ವಹಿಸುವ ಕರ್ಮಗಳಲ್ಲೂ ತಮ್ಮದೇ ಆದ ವಿಶಿಷ್ಟತೆಯನ್ನು ಕಾಣಬಹುದು- “ಸತ್ತವರನ್ನು ಸ್ಮಶಾನಕ್ಕೆ ಒಯ್ಯುವಾಗ ವಾರಸುದಾರನಾದವನು ಒಂದು ಮಣ್ಣಿನ ಮಡಿಕೆ ಯಲ್ಲಿ ಪಿಂಡವನ್ನು ಇಟ್ಟುಕೊಂಡು ಹೆಣದ ಮುಂದೆ ಸಾಗುತ್ತಾನೆ. ಮಾರ್ಗ ಮಧ್ಯದಲ್ಲಿ ಒಂದು ಹಸಿರು ಗಿಡದ ಬುಡದಲ್ಲಿ ಪಿಂಡದ ಮಡಿಕೆಯನ್ನಿಟ್ಟು, ಸ್ಮಶಾನಯಾತ್ರೆಯಲ್ಲಿ ಪಾಲ್ಗೊಂಡವರೆಲ್ಲರೂ ಕಲ್ಲುಗಳನ್ನು ಬೀರಿ ಆ ಮಡಕೆಯನ್ನು ನುಚ್ಚನೂರು ಮಾಡುತ್ತಾರೆ. ಮೂರನೆಯ ದಿನ ಸತ್ತವನ ಸಂಬಂಧಿಕರು ಸಮಾಧಿ ಪೂಜೆ ಮಾಡಿ ಮನೆಗೆ ಹಿಂತಿರುಗಿದ ನಂತರ ‘ಕರಿ’ಯನ್ನು ತೀರಿಸುತ್ತಾರೆ. ಯಾವ ಸ್ಥಳದಲ್ಲಿ, ವ್ಯಕ್ತಿಯು ನಿಧನವಾದನೋ ಆ ಜಾಗದಲ್ಲಿ ಒಂದು ಟಗರು ಮರಿಯನ್ನು ಬಲಿ ಮಾಡುವ ಕರ್ಮಕ್ಕೆ ‘ಕರಿ’ಯೆಂದು ಹೆಸರು. ಅದೇ ಮಾಂಸದಿಂದ ಮನೆಮಂದಿಯೆಲ್ಲಾ ಅಡಿಗೆ ಮಾಡಿ ಉಣ್ಣುತ್ತಾರೆ. ತೀರಾ ಬಡವರಾದವರು ಕಟುಕನಿಂದ ಟಗರಿನ ತಲೆಯನ್ನು ಕೊಂಡುತಂದಾದರೂ ‘ಕರಿ’ ತೀರಿಸುತ್ತಾರೆ, ಕರಿ ತೀರಿಸುವ ಕರ್ಮ ಮುಗಿಯುವವರೆಗೆ ಅನ್ಯರಿಗೆ ಆ ಮನೆಗೆ ಪ್ರವೇಶ ವಿರುವುದಿಲ್ಲ. ಹದಿನಾಲ್ಕನೆಯ ದಿನ ಕೈಲಾಸ ಆರಾಧನೆಯನ್ನು ಸತ್ತವರ ಹೆಸರಿನಲ್ಲಿ ತಮ್ಮ ಯೋಗ್ಯತಾನುಸಾರ ನಡೆಸುತ್ತಾರೆ.”[13]

ಇ. ಥರ್ಸ್‌ಟನ್‌ರವರು ಕರ್ನೂಲು ಭಾಗದ ಮ್ಯಾಸಬೇಡರ ಬಗ್ಗೆ ಬರೆಯುತ್ತಾ, ಅಲ್ಲಿ ಇವರನ್ನು ಅಪರಾಧಿ ಬುಡಕಟ್ಟುಗಳು (Criminal Tribes) ಎಂದು ಗುರುತಿಸುತ್ತಾರೆ.

“ಶೌರ್ಯ ಸಾಹಸಗಳಿಗೆ ಹೆಸರಾದ ಈ ಜನಾಂಗದ ಅನೇಕರು ದರೋಡೆಕೋರರೆಂತಲೂ, ಸುಲಿಗೆಕೋರರೆಂತಲೂ ಕುಖ್ಯಾತಿ ಪಡೆದವರು. ಅವರು ಶಸ್ತ್ರಸಜ್ಜಿತರಾಗಿ ಅರಣ್ಯಗಳಲ್ಲೂ, ಗುಡ್ಡಗಳಲ್ಲೂ ಸಂಚರಿಸುತ್ತಾ, ಗ್ರಾಮಗಳನ್ನು ಲೂಟಿ ಮಾಡುತ್ತಾ ಸಾಮಾನ್ಯರಿಗೆ ಸಿಂಹಪ್ರಾಯವಾಗಿರುತ್ತಿದ್ದರು”[14] ಎಂಬ ಅಭಿಪ್ರಾಯವನ್ನು ವಿದ್ವಾಂಸರು ವ್ಯಕ್ತಪಡಿಸುತ್ತಾರೆ.

ಮೂಲತಃ ಯುದ್ಧರರೂ, ಬೇಟೆಗಾರರೂ ಆದಂತಹ ಈ ಜನಾಂಗಕ್ಕೆ ಪಾಳೆಯ ಪಟ್ಟುಗಳ ಅವನತಿಯ ನಂತರ ಕೆಲಸವಿಲ್ಲದಂತಾಯಿತು, ಬ್ರಿಟಿಷರ ಆಳ್ವಿಕೆಯಲ್ಲಿ ಬೇಟೆಗೆ ಬಂದೊದಗಿದ ನಿಷೇಧದಿಂದ ನಿರುದ್ಯೋಗಿಗಳಾದ ಇವರನ್ನು ಪರಿಸ್ಥಿತಿಯೇ ಅಪರಾಧ ಮಾಡಲು ಪ್ರಚೋದಿಸಿರಬೇಕು. ಇವರ ಅಪರಾಧಿ ನಡವಳಿಕೆಗಳನ್ನು ಸಮರ್ಥಿಸುವಂತಹ ಗಾದೆಗಳು ಇಂದೂ ಚಲಾವಣೆಯಲ್ಲಿವೆ.

ನಾಗರೀಕ ಜನಾಂಗದ ಸಂಪರ್ಕವಿಲ್ಲದೆ ಗಿರಿಕಂದರ, ಅರಣ್ಯಗಳಲ್ಲಿ ಇದ್ದಂತಹ ಈ ಜನಾಂಗ, ನಾಗರೀಕ ಜನಗಳಲ್ಲಿ ತಮ್ಮ ಸಹಜ ಒರಟುತನದ ಮೂಲಕ ಅಸಹನೆ-ಅಪನಂಬಿಕೆ ಗಳನ್ನು ಮೂಡಿಸಿರಬಹುದು. ಈ ಜನಾಂಗ ಇಂದು ಗೌರವಯುತ ನಡವಳಿಕೆಯಿಂದ ಇದ್ದರೂ – ಬೇರೆಯವರು ಇವರನ್ನು ಭಯ ಮಿಶ್ರಿತ ದೃಷ್ಟಿಯಲ್ಲೇ ನೋಡುತ್ತಿದ್ದಾರೆ.

ಕೃಪೆ : ವಾಲ್ಮೀಕಿ ಜ್ಯೋತಿ

* * *

 


[1] E. Thurstion, 1975, Castes and tribes of Southern India, Vol. I A & B, cosmo Publications, Delhi.

[2]  L.K. Anatha Krishna Iyer & H.V. Nanjundaiah, The Mysore tribes & castes, Mysore university, Mysore.

[3] ಡಾ. ತೀ.ನಂ. ಶಂಕರನಾರಾಯಣ, ೧೯೮೨, ಕಾಡುಗೊಲ್ಲರ ಸಂಪ್ರದಾಯಗಳು ಮತ್ತು ನಂಬಿಕೆಗಳು, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

[4] ಡಾ. ಕಾಳೇಗೌಡ ನಾಗವಾರ, ಕಾಡುಗೋಲ್ಲರ ಹಟ್ಟಿ – ಒಂದು ಅಧ್ಯಯನ, ಅಪ್ರಕಟಿತ ಪಿಎಚ್.ಡಿ. ಪ್ರಬಂಧ.

[5]  ಚಿತ್ರದುರ್ಗ ಜಿಲ್ಲಾ ಗೆಸೆಟಿಯರ್, ೧೯೬೭, ಪುಟ ೬೦.

[6] ಅದೇ, ಪುಟ ೫೩.

[7] ರಾಜನ ರಾಜಣ್ಣ, ೧೯೮೨, ನಾಯಕ ಜನಾಂಗದ ಇತಿಹಾಸ, ಚಳ್ಳಕೆರೆ, ಪುಟ ೮.

[8] ಹೆಚ್. ರನಾಯಕ, ೧೯೪೮, ಕ್ಷಾತ್ರಾಂಶ ಪ್ರಭೋದ.

[9] ಈ ಜನಪದ ಕತೆಯನ್ನು ‘ಇಟ್ಟಕ್ಕಿ ಗೊಲ್ಲರು’ ಎಂದು ಕರೆಯಲ್ಪಡುವ ಚಳ್ಳಕೆರೆ ತಾಲ್ಲೂಕಿನ ಚೌಳೂರು ಗ್ರಾಮದ ಈರಣ್ಣನವರು ಹೇಳಿದ್ದಾರೆ.

[10] ಜೀವಂತವಾದ ಗೊಂಡೆ ಮಣಕ (ಬಂಜೆಯಾದ ಆಕಳು)ದ ಚರ್ಮವನ್ನು ಸುಲಿದು ತಯಾರಿಸುವ ವಾದ್ಯ, ಇದರ ವಾದನಕ್ಕೆ ಅದೇ ಚರ್ಮದಿಂದ ಕೈಗಳ ಆಕಾರದಲ್ಲಿ ಮಾಡಿರುವ ಚರ್ಮದ ಕೈಗಳನ್ನೇ ಬಳಸಿ ಬಡಿಯುತ್ತಾರೆ.

[11] ಈ ಬಗ್ಗೆ ಮಾಹಿತಿ ಒದಗಿಸಿದವರು ಮತ್ಸಮುದ್ರ ಗ್ರಾಮದ ೯೦ ವರ್ಷದ ರಂಗಜ್ಜ.

[12] ಈ ಕತೆಯನ್ನು ಹೇಳಿದವರು – ಚಳ್ಳಕೆರೆ ಟಾನ್ ಕಾಟಪ್ಪನ ಹಟ್ಟಿ ವಾಸಿ ೭೫ ವರ್ಷದ ಕಲ್ಡೇರ ಗೊಲ್ಲರ ಗಿಡ್ಡಜ್ಜಪ್ಪನವರು.

[13] ರಾಜನ ರಾಜಣ್ಣ, ನಾಯಕ ಜನಾಂಗದ ಇತಿಹಾಸ, ಪುಟ ೪.

[14] ಲಕ್ಷ್ಮಣ್ ತೆಲಗಾವಿ, ೧೯೭೬, ಚಂದ್ರವಳ್ಳಿ (ಚಿತ್ರದುರ್ಗ ಜಿಲ್ಲೆಯಲ್ಲಿ ಪಾಳೆಯಗಾರರ ಆಳ್ವಿಕೆ), ಜಿಲ್ಲಾ ಇತಿಹಾಸ ಸಂಶೋಧನಾ ಮಂಡಳಿ, ಚಿತ್ರದುರ್ಗ, ಪುಟ ೬೩.