೯೮೧ ರ ಜನಗಣತಿಯ ಪ್ರಕಾರ ನಾಯಕ ಜನಾಂಗವು ಕರ್ನಾಟಕದಲ್ಲಿ ೪೦ ಲಕ್ಷದಷ್ಟಿದೆ. ರಾಯಚೂರು, ಕಲ್ಬುರ್ಗಿ, ಬಳ್ಳಾರಿ, ಧಾರವಾಡ, ಚಿತ್ರದುರ್ಗ ಜಿಲ್ಲೆಗಳಲ್ಲಿ ಈ ಜನ ದಟ್ಟವಾಗಿದೆ. ಬೆಳಗಾವಿ, ಕೋಲಾರ, ತುಮಕೂರು ಹಾಗೂ ಮೈಸೂರು, ಶಿವಮೊಗ್ಗ, ಜಿಲ್ಲೆಗಳ ಕೆಲ ಭಾಗಗಳಲ್ಲೂ ನಾಯಕ ಜನಾಂಗ ವಿಪುಲವಾಗಿದೆ. ಇಷ್ಟು ದೊಡ್ಡ ಜನಸಂಖ್ಯೆಯನ್ನು ಹೊಂದಿರುವ ನಾಯಕ ಸಮಾಜವು ವೇದ ಕಾಲದಿಂದ ಹುಟ್ಟಿ ಬಂದಿದೆ. ಅದೇ ಕಾಲಕ್ಕೆ ಒಂದು ಸಮಾಜದಲ್ಲಿ ಎರಡು ಪಂಗಡಗಳಾದವು. ಒಂದು ಬ್ರಾಹ್ಮಣ ಮತ್ತೊಂದು ಕ್ಷತ್ರಿಯ. ಈ ಕ್ಷತ್ರಿಯ ಸಮಾಜದಿಂದಲೇ ಬೇಡರ ಸಮಾಜ ಹುಟ್ಟಿತು. ಈ ಸಮಾಜಕ್ಕೆ “ಬೇಡ” ಅಂತಾ ಹೆಸರು ಬರಲು ಕಾರಣ ಈ ಸಮಾಜ ವೇದ ಕಾಲದಿಂದ ಬಂದುದರಿಂದ “ವೇದ” ವೆಂಬ ಶಬ್ದವು “ವ್ಯಾದ” ಅಂತಾ ರೂಢಿಯಲ್ಲಿ ಬಂದಿತು. “ವ್ಯಾದ” ಅಂದರೆ ಬೇಟೆಯಾಡುವವರು. ಆದ್ದರಿಂದ ಈ ಸಮಾಜಕ್ಕೆ “ಬೇಟೆ” ಎಂಬ ಶಬ್ದ ಬದಲಾವಣೆ ಹೊಂದಿ “ಬೇಡ” ಎಂದು ಕರೆಯುವ ರೂಢಿಗೆ ಬಂದಿತು. ಇದು ಅಲ್ಲದೆ ಈ ಸಮಾಜಕ್ಕೆ ಬೇಡರ ಅಂತಾ ಕರೆಯುತ್ತಾರೆ. “ಬೇಡರ” ಎಂಬುದು ಉರ್ದು ಶಬ್ದ. ಉರ್ದು ಭಾಷೆಯಲ್ಲಿ “ಬೇಡರ” ಅಂದರೆ ಯಾರಿಗೂ ಹೆದರದವನು ಎಂದರ್ಥ. ಈ ಬೇಡರ ಸಮಾಜದವರು ಯಾರಿಗೂ ಹೆದರದೆ ಇದ್ದ ಶೂರ ಜನ. ಜೀವನದಲ್ಲಿ ಸುಖ ಬರಲಿ, ದುಃಖ ಬರಲಿ ಭಾವಾವೇಶಕ್ಕೊಳಗಾಗದೆ ನಗುನಗುತ್ತಾ ಇರುವ ಜನ. ಆದ್ದರಿಂದ ಈ ಸಮಾಜದವರಿಗೆ ಉರ್ದು ಶಬ್ದದಿಂದ “ಬೇಡರ” ಎಂದು ಕರೆಯುತ್ತಾರೆ. ಹದಿನಾರು ನೂರಾ ಎಪ್ಪತ್ತರಲ್ಲಿ ಮೊಗಲ್ ಸೈನ್ಯ ಹಾಗೂ ಬೇಡರ ಸೈನ್ಯ ಒಂದಕ್ಕೊಂದು ಆದಿಲ್‌ಶಾಹಿಯ ಸಮೀಪವಿರುವ ವಾಗಿನ್‌ಗೇರಿ ಗುಡ್ಡದಲ್ಲಿ ಎದುರಿಗೆ ಬಂದಾಗ ಬೇಡರ ಜನಾಂಗದ ಸೈನ್ಯ ಸ್ವಲ್ಪ ಪ್ರಮಾಣದಲ್ಲಿ ಇದ್ದರೂ ಕೂಡ ಅವರ ಶೂರತನ ಹಾಗೂ ಸಾಹಸಗಳನ್ನು ಕಂಡಾಗ ಔರಂಗಜೇಬನು “ಏ ಕಿಸಿ ಸೆ ನಹಿ ಡರನೇವಾಲೆ ಲೋಗ್ “ಬೇಡರ್” ಲೋಗ್ ಎಂದು ನುಡಿದನು. ಅಂದಿನಿಂದ ಈ ಜನಾಂಗಕ್ಕೆ ಉರ್ದು ಶಬ್ದದಿಂದ “ಬೇಡರ” ಎಂದು ಕರೆದರು. “ಬೇಡರು” ಎಂದರೆ ಈ ಜನಾಂಗದವರು ಎಂದಿಗೂ ಭಿಕ್ಷೆಯನ್ನು “ಬೇಡರು” ಎಂದು ತಿಳಿಯುವ ಮೂಲಕ ಬೇಡರು ಎಂಬ ಹೆಸರು ಬಂದಿದೆ ಎಂದು ಈ ಜನಾಂಗದವರು ಹೇಳುತ್ತಾರೆ.

“ಬೇರಡ” ಅಂದರೆ ಮರಾಠಿಯಲ್ಲಿ “ಎಂದಿಗೂ ಅಳದವನು” ಎಂದು ಅರ್ಥವಾಗುವುದು. ಆದ್ದರಿಂದ ಈ ಜನಾಂಗಕ್ಕೆ ಮರಾಠಿಯಲ್ಲಿ ಬೇರಡ ಎಂದು ಕರೆಯುತ್ತಾರೆ. ಛತ್ರಪತಿ ಶಿವಾಜಿ ಕಾಲಕ್ಕೆ “ಬೇಡರ” ಜನಾಂಗದ ಅನೇಕ ಜನ ಸೈನ್ಯದಲ್ಲಿ ಸಹಾಯ ಮಾಡಿದ್ದರಿಂದ ಮಹಾರಾಷ್ಟ್ರದಲ್ಲಿ “ಬೇರಡ” ಎಂದು ಕರೆಯುವುದು ರೂಢಿಗೆ ಬಂದಿದೆ.

ಆದಿಕಾಲದಲ್ಲಿ ವಾಲ್ಮೀಕಿ ಮಹರ್ಷಿಯು ರಾಮಾಯಣ ಬರೆದು ಆದಿಕವಿಯಾದನು. ಈ ವಾಲ್ಮೀಕಿ ಬೇಡರವನು. ಆದ್ದರಿಂದ ಈ ಬೇಡರ ಜನಾಂಗದಲ್ಲಿ ಕೆಲವರು “ವಾಲ್ಮೀಕಿ” ಎಂದು ಕರೆಯಿಸಿಕೊಂಡರು. ಇದೇ ವಾಲ್ಮೀಕಿ ಜನಾಂಗದ ಕೆಲ ಪೀಳಿಗೆಯ ಜನಾಂಗಕ್ಕೆ “ವಾಲ್ಮೀಕಿ ಮಕ್ಕಳು” ಎಂದು ಕರೆಯಿಸಿಕೊಂಡರು. ವಾಲ್ಮೀಕಿ ಜನಾಂಗದಲ್ಲಿ ಕೆಲವು ಜನ ಪ್ರಮುಖರಾಗುತ್ತಿದ್ದರು. ಇಂಥ ಜನರ ಒಂದು ಜನಾಂಗವೇ ಬೇರೆಯಾಯಿತು. ಈ ಜನಾಂಗಕ್ಕೆ ವಾಲ್ಮೀಕಿ ನಾಯಕ ಅಂದು ಕರೆದರು. ಈ ಜನಾಂಗ ಧಾರವಾಡ, ಶಿವಮೊಗ್ಗ ಇವೆರಡು ಜಿಲ್ಲೆಯಲ್ಲಿ ವಾಸಿಸಿದ್ದಾರೆ. ಈ ವಾಲ್ಮೀಕಿ ಜನಾಂಗದವರು ಧಾರವಾಡ ಜಿಲ್ಲೆ ಹಾಗೂ ಸುತ್ತಲಿನ ಪ್ರದೇಶದಲ್ಲಿ ವಾಸಿಸಿದ್ದಾರೆ.

“ನಾಯಕ” ಎಂದು ಹೆಸರು ಬರಲು ಕಾರಣ ಆದಿಕಾಲದಲ್ಲಿ “ಏಕಲವ್ಯ”ನಂಥ ಅನೇಕರು ಅರಸರಾಗಿದ್ದರು. ಅಂಥವರಿಂದ ಬಂದ ಕೆಲ ಜನಾಂಗಕ್ಕೆ “ನಾಯಕ” ಜನಾಂಗ ಎಂದು ಕರೆಯುತ್ತಾರೆ. ಕೆಲವು ಕಡೆ “ನಾಯಕ”, “ನಾಯಕ ಮಕ್ಕಳು” ಎಂದು ಕರೆಯುತ್ತಾರೆ. “ನಾಯಕ” ಈ ಶಬ್ದ ಬರಲು ಕಾರಣವನ್ನು ಮತ್ತೊಂದು ರೀತಿಯಲ್ಲಿ ಈ ಜನಾಂಗದವರು ಹೇಳುತ್ತಾರೆ. ಅದೇನೆಂದರೆ, ಈ ಶಬ್ದ ಒಂಬತ್ತನೇ ಶತಮಾನದಿಂದ ಬಂದಿದೆ. ಇದು ವಿಜಯನಗರ ಅರಸರ ಕಾಲದಲ್ಲಿ ಆಗಿನ ರಾಜರು ಈ ಸಮಾಜದಲ್ಲಿ ಕೆಲವರಿಗೆ ಉಂಬಳಿಯನ್ನು ಹಾಕಿ ಮುಖಂಡತ್ವ ಕೊಟ್ಟು ಅವರಿಗೆ “ನಾಯಕ”ರೆಂದು ಕರೆಯುತ್ತಿದ್ದರು. ಅವರೆಲ್ಲರು ತಮ್ಮ ಸೈನ್ಯದ ಜೊತೆ ಸೇರಿಸಿಕೊಂಡು ಹೋಗುತ್ತಿದ್ದರು. ಆದ್ದರಿಂದ ಇವರಿಗೆ “ನಾಯಕ” ಅಂತ ಹೆಸರು ಬಂದಿತು. ಇದರಲ್ಲಿ ಮುಖ್ಯಸ್ಥರಿಗೆ “ನಾಯಕಾಚಾರ್ಯ” “ಮನ್ ಮಹಾನಾಯಕಾಚಾರ್ಯ” ಹೀಗೆ ಆಗಿನ ರೂಢಿಯಲ್ಲಿ ಕರೆಯುತ್ತಿದ್ದರೆಂದು ಕೆಲವು ಶಿಲಾ ಲೇಖನದಲ್ಲಿ ಕಂಡು ಬರುತ್ತದೆ. ತೆಲಗು ಭಾಷೆಯಲ್ಲಿ ಇವರಿಗೆ “ನಾಯನಿ” ಎಂದು ಕರೆಯುತ್ತಾರೆ. ಮುಂಬೈ ಕರ್ನಾಟಕದಲ್ಲಿ ಇವರಿಗೆ “ನಾಯಕಾ” ‘ನಾಯಕ್ಡಾ’ ‘ಚೋಳಿವಾಲಾ ನಾಯಕ’ ‘ಕಪಾಡಿಯ ನಾಯ್ಕ್’ ‘ನಾನಾನಾಯ್ಕ’ ಮೋಟಾನಾಯ್ಕ ಎಂದು ಕರೆಯುತ್ತಾರೆ. ನಾಯಕ್ಡಾ, ಅಂತಾ ಹೆಸರು ಬರಲು ಕಾರಣವೇನೆಂದರೆ ಅಪರಾಧಿತನದ ಎಲ್ಲ ಕೆಲಸಗಳನ್ನು ಮಾಡುತ್ತಿದ್ದರಿಂದ ಕೆಲವರಿಗೆ ನಾಯಕ್ಡಾ ಎಂದು ಕರೆದರು. ‘ಚೋಳಿವಾಲಾ ನಾಯ್ಕ’ ಎಂದು ಕರೆಯಲು ಕಾರಣ, ಪ್ರಾಚೀನ ಕಾಲದಲ್ಲಿ ಅರಣ್ಯದಲ್ಲಿ ವಾಸಿಸುತ್ತಿದ್ದರಿಂದ ಮೈಮೇಲೆ ಹೆಣ್ಣು ಮಕ್ಕಳು ಕೇವಲ ಸೀರೆಯನ್ನು ಮಾತ್ರ ಧರಿಸಿ ಬಟ್ಟೆ ಧರಿಸುತ್ತಿರಲಿಲ್ಲ. ಅದರ ನಂತರ ಇವರು ನಾಗರೀಕ ಸಂಪರ್ಕತನಕ್ಕೆ ಬಂದಾಗ ಬಟ್ಟೆ ಧರಿಸತೊಡಗಿದರು. ಅಂದಿನಿಂದ ಇವರಿಗೆ ‘ಚೋಳಿವಾಲಾ ನಾಯಕ್’ ಎಂದು ಕರೆದರು. ನಾನಾ ನಾಯಕ ಎಂದು ಕರೆಯಲು ಕಾರಣ ಇದೇ ಜನಾಂಗದಲ್ಲಿಯ ಕಿರಿಯರಿಗೆ “ನಾನಾ ನಾಯಕ”ವೆಂದು ಹಿರಿಯರಿಗೆ “ಮೋಟಾ ನಾಯಕ” ಎಂದು ಕರೆಯುತ್ತಾರೆ. ಮಲೆಯಾಳಿ ಭಾಷೆಯಲ್ಲಿ “ನಾಯರ”ರೆಂದು ಕರೆಯುತ್ತಾರೆ. ತೆಲಗು ಭಾಷೆಯಲ್ಲಿ “ನಾಯಿಡು’ವೆಂತಲೂ ಕರೆಯುತ್ತಾರೆ. ಕರ್ನಾಟಕದಲ್ಲಿ ನಾಯಕ ಅಂತ ನಾಮಧಾರಿಗಳನ್ನು ಲಂಬಾಣಿಗಳನ್ನು ಹಾಗೂ ಕುರುಬರನ್ನು ಕೆಲವು ಕಡೆ ಲಿಂಗಾಯಿತರನ್ನು ಕೂಡಾ ಕರೆಯುತ್ತಾರೆ. ಆದರೆ ಇವರಿಗೆ ನಾಯಕ ಜಾತಿ ಸೂಚಕವಾಗದೆ ಕೇವಲ ನಾಮಸೂಚಕ ಹಾಗೂ ಗೌರವ ಸೂಚಕವಾಗಿ ಅವರುಗಳ ಹೆಸರಿನ ಮುಂದೆ ಸೇರಿಕೊಂಡಿದೆ. ಉದಾಹರಣೆಗೆ ಮಂಜುನಾಥ ನಾಯ್ಕ, ಸೋಮ್ಲಾ ನಾಯಕ. ಆದರೆ ಇವರ ಜಾತಿ ಬೇರೆ ಬೇರೆ ಆಗಿರುತ್ತದೆ. ಅದೇ ನಾಯಕ ಜನಾಂಗದಲ್ಲಿ ನಾಯಕ ಶಬ್ದವು ನಾಮಸೂಚಕವೂ ಆಗಿರುವ ಜೊತೆಗೆ ಜಾತಿ ಸೂಚಕವೂ ಆಗಿರುತ್ತದೆ. ದಕ್ಷಿಣ ಭಾರತದಲ್ಲಿ ಕೆಲ ಬೇಡರ ಸಂಸ್ಥಾನಗಳಿದ್ದವು. ಅವುಗಳನ್ನು ಆಳುತ್ತಿರುವವರೇ ಬೇಡರ “ದೊರೆಯರು”. ಆದ್ದರಿಂದ ಈ ಕೆಲ ಜನಾಂಗಕ್ಕೆ ದೊರೆಯರು ಅಂತಾ ಹೆಸರು ಬಂದಿತು. ಈ ರೀತಿ ಕಲ್ಬುರ್ಗಿ ಜಿಲ್ಲೆ ಹಾಗೂ ರಾಯಚೂರು ಜಿಲ್ಲೆಯಲ್ಲಿ ಕರೆಯುತ್ತಾರೆ. ಅದೇ ಪ್ರಕಾರ ಈ “ದೊರೆಯರು” ಎಂಬ ಜನಾಂಗದಿಂದಲೇ ‘ದೊರೆ ಮಕ್ಕಳು’ ಎಂಬ ಮತ್ತೊಂದು ಉಪಜನಾಂಗ ಹುಟ್ಟಿತು. ವಿಜಾಪುರ ಆದಿಲ್‌ಶಾಹಿಯ ರಾಜಧಾನಿಯಲ್ಲಿ ಈ ಜನಾಂಗವು ಅತಿ ಶೂರತನದಿಂದ ಎಲ್ಲ ಕಾರ್ಯದಲ್ಲಿ (ಯುದ್ಧ ಮೊದಲಾದವುಗಳು) ಯಶಸ್ವಿಯಾಗುತ್ತಿದ್ದರು. ಆದ್ದರಿಂದ ಈ ಜನಾಂಗದ ಶೌರ್ಯ ಮೆಚ್ಚಿಕೊಂಡು ಆದಿಲ್‌ಶಾಹಿ ಸುಲ್ತಾನನು ಇವರಿಗೆ ಖಡ್ಗವನ್ನು ಬಹುಮಾನವನ್ನಾಗಿ ಕೊಡು ತ್ತಿದ್ದನು. ಇಲ್ಲಿ ಖಡ್ಗ ಎಂದರೆ ‘ತಲ್‌ವಾರ್’ ಅಂತ ಅರ್ಥವಾಗುವುದು. ಈ ‘ತಲ್‌ವಾರ್’ ಬಹುಮಾನ ಪಡೆಯುತ್ತಿರುವ ಕೆಲ ಬೇಡರ ಸಮೂಹವೇ ‘ತಲ್‌ವಾರ್’ ಜನಾಂಗದವೆಂದು ಹುಟ್ಟಿ ‘ತಳವಾರ’ವೆಂದು ಕರೆಯುವ ರೂಢಿಗೆ ಬಂದಿತು. ಈ ರೀತಿ ವಿಜಾಪುರ ಜಿಲ್ಲೆಯ ಸುತ್ತಲೂ ಕರೆಯುತ್ತಾರೆ. ಪ್ರಾಚೀನ ಕಾಲದಲ್ಲಿ ಕೆಲ ಬೇಡರ ಅರಸರಲ್ಲಿ ರಾಜಧಾನಿಯಲ್ಲಿ ಮನೆಮನೆಗೆ ತಿರುಗಿ ‘ಪಾಳೆ’ಯನ್ನು ವಸೂಲಿ ಮಾಡುವ ಸಮೂಹವೊಂದು ಇರುತ್ತಿತ್ತು. ಈ ಗುಂಪಿನವರು ‘ಪಾಳೆಯಗಾರರು’ ಎಂಬ ಒಂದು ಉಪ ಜನಾಂಗವನ್ನಾಗಿ ಮಾಡಿ ಕೊಂಡರು. ‘ಪಾಳೆಯಗಾರರು’ ಅಂತಾ ಹೆಸರು ಬರಲು ಇನ್ನೊಂದು ಕಾರಣವೇನೆಂದರೆ ರಾಜರ ಕಾಲದಲ್ಲಿ ಎಲ್ಲಾದರೂ ದಂಡೆತ್ತಿ ಹೋಗುವಾಗ ಕೋಟೆಯನ್ನು ವಶಪಡಿಸಿಕೊಳ್ಳುವಾಗ ಆಸ್ಥಾನದ ಅನಂತ ದೂರದಲ್ಲಿ ಇವರು ಬೀಡು ಬಿಡುತ್ತಿದ್ದರು. ಈ ರೀತಿ ಇರುವ ಸ್ಥಾನಕ್ಕೆ ಪಾಳ್ಯವೆಂದು ಕರೆಯುತ್ತಿದ್ದರು. ಆದ್ದರಿಂದ ಇವರಿಗೆ ‘ಪಾಳೆಯಗಾರರು’ ಎಂದು ಕರೆದರು.

“ವೇಡನ್” ಇದು ತಮಿಳು ಶಬ್ದ. ತಮಿಳಿನಲ್ಲಿ ಈ ಬೇಡರ ಸಮಾಜಕ್ಕೆ “ವೇಡನ್” ಎಂದು ಕರೆಯುತ್ತಾರೆ. ಆಂಧ್ರ ಭಾಷೆಯಲ್ಲಿ ಬೇಡರ ಸಮಾಜಕ್ಕೆ “ಭೋಯಾ” ಅಂತಾ ಕರೆಯುತ್ತಾರೆ. ರಾಜರ ಕಾಲದಲ್ಲಿ ಇದೇ ಜನಾಂಗದವರು ಪಲ್ಲಕ್ಕಿಯನ್ನು ಹೊರುವವರು. “ಭೋಯಾ” ಎಂದು ಕರೆಯುತ್ತಾರೆ. “ರಾಮೋಶಿ” ಎಂಬುದು “ರಾಣವಾಸಿ” ಎಂಬ ಮರಾಠಿ ಶಬ್ದದಿಂದ ಕರೆಯುವುದು ರೂಢಿಗೆ ಬಂದಿದೆ. “ರಾಣ” ಅಂದರೆ ಅರಣ್ಯ ಅಂತ ಅರ್ಥ, “ವಾಸಿ” ಅಂದರೆ ವಾಸಿಸುವ. ಬೇಡರ ಜನಾಂಗ ಪ್ರಾಚೀನ ಕಾಲದಲ್ಲಿ ಅರಣ್ಯದಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದರು. ಆದ್ದರಿಂದ ಈ ಬೇಡರ ಜನಾಂಗಕ್ಕೆ “ರಾಮೋಶಿ” ಎಂದು ಕರೆಯುತ್ತಾರೆ. ಕೆಲ ಭಾಗದಲ್ಲಿ “ರಾಮೋಶಿ” ಎಂದರೆ “ರಾಮನ ವಂಶದವರು” ಎಂದು ಹೇಳಿಕೊಳ್ಳುತ್ತಾರೆ. ಈ “ಬೇಡರ” ಜನ ತಾವು ಬೇಟೆಯಾಡುತ್ತಿರುವಾಗ ಸ್ಪಷ್ಟವಾಗಿ ಗುರಿಯಿಟ್ಟು ಬೇಟೆ ಹೊಡೆ ಯುತ್ತಿದ್ದರು. ಆದ್ದರಿಂದ ಈ ಬೇಡರ ಜನಾಂಗಕ್ಕೆ “ಗುರಿಕಾರ”ರೆಂದು ಕಲ್ಬುರ್ಗಿ ಜಿಲ್ಲೆಯ ಕಡೆಗೆ ಕರೆಯುತ್ತಾರೆ. “ಬೇಡರ” ಶಬ್ದದಿಂದ ಬದಲಾವಣೆ ಹೊಂದಿ “ಬೇಂಡರ” ಅಂತಾ ಕೆಲವು ಕಡೆ ಕರೆಯುತ್ತಾರೆ. ತಮಿಳು ಶಬ್ದದಿಂದ “ನಾಯಕ್ಡಾ” ಅಂತಾ ಕೆಲವು ಕಡೆ ಕರೆಯುತ್ತಾರೆ. “ಕನ್ನಯ್ಯನವರು” ಕನ್ನಯ್ಯನ ಮಕ್ಕಳು ಅಂತಾ ಕೆಲವು ಕಡೆ ಕರೆಯುವುದು ವಾಡಿಕೆಯುಂಟು. ಈ ಸಮಾಜದಲ್ಲಿ ಕೆಲವರು ಬೇಡರ ಕನ್ನಯ್ಯನ ಭಕ್ತರಿದ್ದಾರೆ. ಅವರಿಗೆ “ಕನ್ನಯ್ಯನವರು” ಎಂದು ಕರೆಯುತ್ತಾರೆ. ಇದು ಅಲ್ಲದೆ ಉತ್ತರ ಭಾರತದ ಕಡೆ “ವಾಸಿ” ಎಂದು ಕರೆಯುತ್ತಾರೆ. “ವೇಟನ್” “ವೇಡುವಾಸ್” “ವೆಡ್ಡಾಸ್” ಈ ರೀತಿ ಸಿಲೋನದಲ್ಲಿ ಕರೆಯುತ್ತಾರೆ. ಕರ್ನಾಟಕದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಕೆಲ ಭಾಗಗಳಲ್ಲಿ “ಪೆದ್ದರು” ಎಂದು ಕರೆಯುತ್ತಾರೆ. ಕಾಶ್ಮೀರದಲ್ಲಿ ಈ ಜನಾಂಗಕ್ಕೆ “ಡೊಗ್ರಾ” ಎಂದು ಕರೆಯುತ್ತಾರೆ. ಉತ್ತರ ಪ್ರದೇಶದಲ್ಲಿ “ಜಾಟ” ಅಂತಾ ಕರೆಯುತ್ತಾರೆ. ರಾಜಸ್ಥಾನ ಮತ್ತು ಪಂಜಾಬ ರಾಜ್ಯ ಹಾಗೂ ಮಧ್ಯಪ್ರದೇಶಗಳಲ್ಲಿ ಭಿಲ್ ಅಂತಾ ಕರೆಯುತ್ತಾರೆ. ಇದು ಅಲ್ಲದೆ ಪಂಜಾಬಿನಲ್ಲಿ “ಬಾಲ್ಮೀಕಿ” ಎಂದು ಕರೆಯುತ್ತಾರೆ. ಬಂಗಾಲ ಮತ್ತು ಬಿಹಾರದಲ್ಲಿ “ಸೇನ್” ಅಂತಾ ಕರೆಯುತ್ತಾರೆ. ಕೇರಳದಲ್ಲಿ “ನಾಯರ್” ಅಂತಾ ಕರೆಯುತ್ತಾರೆ. ತಮಿಳುನಾಡಿನಲ್ಲಿ “ನಾಯಿಡು” ಎಂದು ಕರೆಯುತ್ತಾರೆ. ಸಿಲೋನ್‌ದಲ್ಲಿ “ಬಂದರ್ ನಾಯಕ” ಹಾಗೂ ಮಲೇಶಿಯಾ, ಸಿಂಗಪುರದ ಕಡೆ “ವಾಲ್ಮೀಕಿ” ಎಂದೇ ಕರೆಯುತ್ತಾರೆ. ತಮಿಳುನಾಡಿನಲ್ಲಿ “ಗೆಂಟು”ವೆಂತಲೂ ಕರೆಯುತ್ತಾರೆ. ಕೆಲವೊಂದು ಕಡೆ ‘ಭಿಲ್ಲರು’ ಅಂತಾ ಕರೆಯುತ್ತಾರೆ. ಹೀಗೆ ಕರೆಯಲು ಕಾರಣವೇನೆಂದರೆ, ಇವರು ‘ಬಿಲ್ಲು’ ವಿದ್ಯೆಯಲ್ಲಿ ಪಾರಂಗತರಾಗಿದ್ದರಿಂದ ಇವರಿಗೆ ‘ಭಿಲ್ಲರು’ ಎಂದು ಕರೆದರು. ಈ ಸಮಾಜದಲ್ಲಿ ಕೆಲವರು ‘ಪುಳಿಂದ’ ‘ಕಿರಾತ’ ‘ಶಬರ’ ಎಂಬ ಮುಂತಾದ ಹೆಸರುಗಳಿಂದ ಪ್ರಾಚೀನ ಕಾಲದಿಂದ ಕರೆಯುತ್ತಾರೆ. ಈ ಸಮಾಜದಲ್ಲಿ ನ್ಯಾಯಗಳನ್ನು ಬಗೆಹರಿಸುವುದು, ಸಮಾಜದ ಸುಧಾರಣೆಗೆ ಮುಂದಾಳುತನ ವಹಿಸುವ ಜನರಿಗೆ ‘ಕಟ್ಟೀಮನಿ’ ಎಂದು ಕರೆದರು. ಮಹಾರಾಷ್ಟ್ರದಲ್ಲಿ ಈ ಜನಾಂಗಕ್ಕೆ ‘ಥೇರ ಬೇಡ’ ‘ಮದಾರ ಬೇಡ’ ಎಂದು ಕರೆಯುತ್ತಾರೆ. ಐತಿಹಾಸಿಕ ರೀತಿಯಿಂದ ಇವರ ನಡತೆಯನ್ನು ನಾವು ವಿಚಾರಿಸಿದರೆ, ಈ ಜನ ನಂಬಿಗಸ್ಥ ಜನ. ಕರ್ನೂಲ ಜಿಲ್ಲೆಯ ಕೆಲವು ಭಾಗದಲ್ಲಿ ಈ ಜನಾಂಗದ ಮುಖ್ಯಸ್ಥ ಜನಾಂಗಕ್ಕೆ ‘ಸಿಹ್ಮಾನಾನಾ ಬೋಯಾಸ್’ ಎಂದು ಕರೆಯುತ್ತಾರೆ. ‘ಬೈಡಾಸ್’ ಅಥವಾ ‘ಬ್ಯಾಡಾಸ್’ ಎಂದು ಬಳ್ಳಾರಿ ಜಿಲ್ಲೆಯ ಕೆಲವು ಭಾಗ ದಲ್ಲಿ ಕರೆಯಿಸಿಕೊಳ್ಳುತ್ತಾರೆ. ಈ ಬೇಡರ ಸಮಾಜದಲ್ಲಿ ಮದ್ರಾಸಿನ ಕಡೆ ‘ಪೆಡ್ಡಾ’ ಮತ್ತು ‘ಮೈಸಾ’ ಹೀಗೆ ಎರಡು ಹೆಸರುಗಳಿಂದ ಕರೆಯುತ್ತಾರೆ. ಇವರು ಉತ್ತರ ಅರ್ಕಾಟಕ ಜಿಲ್ಲೆ ಯಲ್ಲಿ ವಾಸಿಸುತ್ತಾರೆ. ‘ಸಾದರು’ ಎಂದು ಕರೆಯಲು ಕಾರಣ ಕೆಲ ಬೇಡರ ಜನಾಂಗದವರು ಲಿಂಗಾಯತ ಜನಾಂಗಕ್ಕೆ ಸೇರಿರುತ್ತಾರೆ. ಅಂಥವರಿಗೆ ‘ಸಾದರು’ ಎಂದು ಕರೆಯುತ್ತಾರೆ.

ಇದು ಅಲ್ಲದೆ ‘ಹಾಲು’ ‘ಮಾಚಿ’ ಅಥವಾ ‘ಮೈಸಾ’ ‘ಬಾರೆಕಾ’ ‘ಕನ್ನಯ್ಯನ ಜಾತಿ’ ಮತ್ತು ‘ಕಿರಾತಕಾ’ ಇಂಥ ಅನೇಕ ಹೆಸರುಗಳಿಂದ ಮೈಸೂರಿನ ಕಡೆ ಕರೆಯುತ್ತಾರೆ. ‘ಮೈಸಾ’ ಬೇಡರಲ್ಲಿ ಮತ್ತೊಂದು ಜನಾಂಗವಿದ್ದು, ಅದಕ್ಕೆ ‘ಚುಂಚುಸ್’ ಎಂದು ಕರೆಯುತ್ತಾರೆ. ಇದು ಇಂಗ್ಲೀಷ್ ಶಬ್ದ. ಇವರು ಹೆಚ್ಚಾಗಿ ಅರಣ್ಯದಲ್ಲಿ ವಾಸಿಸುತ್ತಾರೆ. ಬೇಟೆಯಾಡುತ್ತಾ ತಮ್ಮ ಜೀವನ ನಡೆಸುತ್ತಾರೆ. ‘ಮೈಸಾ ಬೇಡರು’ ಎಂದರೆ ಮುಸಲ್ಮಾನರ ಗುಣಗಳನ್ನು ಹೊಂದಿದವರು, ‘ದೊರಾ’ ‘ದೊರಾ ಬಿಡ್ಡಾ’ ಹೀಗೆ ಇನ್ನೂ ಅನೇಕ ಹೆಸರುಗಳಿಂದ ಈ ಸಮಾಜದವರಿಗೆ ಕರೆಯುತ್ತಾರೆ. ಕೆಲ ಬೇಡರ ಜನಾಂಗದವರು “ವಾಲ್ಮೀಕಿ ಬ್ರಾಹ್ಮಣರು” ಎಂದು ಕರೆಯಿಸಿಕೊಳ್ಳುತ್ತಾರೆ. ಇದು ಅಲ್ಲದೆ ‘ನಿಶಾಡಲು’, ‘ನಿಶಾಡು’ ಎಂತಲೂ ಕರೆಯಿಸಿಕೊಳ್ಳುತ್ತಾರೆ. ‘ಕೊರವಾಸ್’, ‘ಯುನಾಡಿಸ್’ ಹೀಗೆ ಕೆಲವು ಕಡೆಗೆ ಕರೆಯುತ್ತಾರೆ. ಇದು ಅಲ್ಲದೆ ‘ವಾಲ್ಮೀಡುಡು’ ಎಂತಲೂ ಕರೆಯುತ್ತಾರೆ. ‘ಮೈಸಾ ಬೇಡರ’ ಜನಾಂಗದಲ್ಲಿ ಕೆಲವರು ಶರಣರಿದ್ದು, ಅವರು ‘ಮೈಸಾ’ ಬೇಡರಿಗೆ ತಮ್ಮ ಸಮಾಜದ ಕೀರ್ತನ, ಉಪದೇಶ ಹೇಳುತ್ತಾರೆ. ಇಂಥ ಕೆಲ ಜನಾಂಗದ ಸಮೂಹಕ್ಕೆ ದಳವಾಯಿ ಜನ ಎಂದು ಕರೆಯುತ್ತಾರೆ.

ಈ ಪ್ರಕಾರ ನಾವು ನೋಡಿದರೆ ಬೇಡರ ಸಮಾಜವು ಬಹು ಪ್ರಾಚೀನವಾದದ್ದು ಎಂದು ತಿಳಿದು ಬರುತ್ತದೆ. ಆದಿಕಾಲದ ಬೇಡರ ದೊರೆಯಾಗಿದ್ದ ಏಕಲವ್ಯನು ಅತಿ ಶೂರನು, ಗುರುವಿಲ್ಲದೆ, ಕೇವಲ ಗುರುವಿನ ಆಶೀರ್ವಾದದಿಂದ ಬಿಲ್ಲು ವಿದ್ಯೆ ಕಲಿತು ನಿಪುಣನಾಗಿದ್ದನು. ಇವನು ಬೇಡರವನೆಂದು ಆಧಾರಗಳಿಂದ ತಿಳಿದು ಬರುತ್ತದೆ. ಆದಿಕವಿ ವಾಲ್ಮೀಕಿ ಈ ಸಮಾಜದವನು. ಈತನಿಂದ ಪ್ರಣೀತವಾದ “ರಾಮಾಯಣ” ಈ ಬೇಡರ ಸಮಾಜದ ಕೊಡುಗೆ ಎಂದು ಹೇಳಲು ಯಾರದೇ ಅಡ್ಡಿಯಿಲ್ಲ.

ಕೃಪೆ : ವಾಲ್ಮೀಕಿ ಸಂಪದ

* * *