ಸಾಮಾನ್ಯವಾಗಿ ಎಲ್ಲಾ ಬುಡಕಟ್ಟುಗಳಲ್ಲಿಯೂ ಪ್ರಪಂಚದ ಹುಟ್ಟನ್ನು ಕುರಿತು ಸ್ವಾರಸ್ಯಕರವಾದ ಜನಪದ ಕಥೆಗಳು, ಐತಿಹ್ಯಗಳಿದ್ದು ಆ ಪ್ರಪಂಚದ ಹುಟ್ಟಿನ ಆರಂಭಕ್ಕೆ ತಮ್ಮ ಬುಡಕಟ್ಟಿನ ಮೂಲ ಪುರುಷನೇ ಕಾರಣ ಎಂದು ಹೇಳಿಕೊಳ್ಳುವುದು ಸಾಮಾನ್ಯ. ಅದೇ ರೀತಿ ಇಲ್ಲಿಯೂ ಕಾಣಬಹುದು. ಬೇಡ ಜನಾಂಗವು ಬುಡಕಟ್ಟುಗಳಲ್ಲಿ ಒಂದು. ಆ ಜನಾಂಗದ ಮೂಲವನ್ನು ಅರಿಯಲು ಸಹ ಕಥೆ, ಐತಿಹ್ಯಗಳೇ ಸಹಾಯ ಮಾಡುತ್ತವೆ ಎಂಬುದನ್ನು ನಾವು ಮರೆಯುವಂತಿಲ್ಲ.

ಪ್ರತಿಯೊಂದು ದೇಶದಲ್ಲಿಯೂ ಬುಡಕಟ್ಟು ಜನಾಂಗಗಳಿವೆ. ಆ ಜನಾಂಗಗಳಿಗೆ ಅರಣ್ಯವೇ ಮನೆ ಎಂಬುದನ್ನು ಸ್ಪಷ್ಟಪಡಿಸಬಹುದು. ಅವರ ಪಾಲಿಗೆ ಎಲ್ಲದ್ದು ಅರಣ್ಯವೆ ಎಂದರೆ ತಪ್ಪಾಗಲಾರದು. ಅವರು ಅರಣ್ಯವನ್ನು ತಮ್ಮ ಮಾತೃದೇವತೆಯೆಂದೇ ಪರಿಪಾಲನೆ ಮಾಡಿದವರು. ಅರಣ್ಯದಲ್ಲಿರುವ ಗಿಡ ಮರಗಳ ಆರಾಧನೆ ಮಾಡುವರು. ಇವರಿಗೆ ಅರಣ್ಯವೇ ಸಂಪತ್ತು ಆಗಿರುತ್ತದೆ. ಅರಣ್ಯದಲ್ಲಿ ಸಿಗುವ ಗೆಡ್ಡೆ, ಗೆಣಸು ತಿಂದು, ಬೇಟೆಯಾಡಿ, ಅಲ್ಲಿ ಸಿಗುವ ಗಿಡಮೂಲಿಕೆಗಳನ್ನು ಸಂಗ್ರಹಿಸಿ ಮಾರಾಟ ಮಾಡಿ ತಮ್ಮ ಹೊಟ್ಟೆಯನ್ನು ತುಂಬಿಸಿ ಕೊಳ್ಳುವರು.

ಬುಡಕಟ್ಟು ಜನಾಂಗಗಳಲ್ಲಿ ಒಂದಾದ ಜನಾಂಗ ಬೇಡ ಜನಾಂಗ. ಆ ಜನಾಂಗದ ಮೂಲದ ಬಗ್ಗೆ ಅರಿಯುವುದಕ್ಕಿಂತ ಮುಂಚೆ ಆ ಜನಾಂಗಕ್ಕೆ ಬಳಸುತ್ತಿದ್ದ ಪರ‍್ಯಾಯ ಅಥವಾ ಸಂವಾದಿ ಪದಗಳನ್ನು ತಿಳಿಯೋಣ.

Bedar, Bendar, Berad ಎಂದು ಕರೆಯುತ್ತಿದ್ದರು. ಅದೇ ರೀತಿ ನಾಯಕ್ಡ, ನಾಯಕ, ಚೋಲಿವಾಲ, ನಾಯಕ, ಕಪಾಡಿಯ ನಾಯಕ, ಮೋಟನಾಯಕ, ನಾನನಾಯಕ, ನೈಯ್ಕ, ನಾಯಕ್, ಬೇಡ, ಬೇಡರ್ ಮತ್ತು ವಾಲ್ಮೀಕಿ ಎಂದೂ ಕರೆಯುತ್ತಿದ್ದರು. ಬೇಡರನ್ನು ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯಾಗಿ ಕರೆಯುವುದುಂಟು. ಬೇಡರಿಗೆ ಕಿರಾತ,  ಶಬರ, ಕಂಕ, ನಿಷಾಧ, ತಳವಾರ, ದೊರೆನಾಯಕ, ಕಣ್ಣಪ್ಪನ ಮಕ್ಕಳು, ಬೆಂದ್, ವೇದನ್ ಎಂದೂ ಕರೆಯುವರು. ಇವರು ಮೂಲತಹ ದ್ರಾವಿಡರಾಗಿದ್ದರು ಎಂದು ಕೆಲವು ವಿದ್ವಾಂಸರ ಅಭಿಪ್ರಾಯ. ದ್ರಾವಿಡ ಭಾಷೆಯಲ್ಲಿ ಇವರಿಗೆ ವೇಡನ್, ವೇಟ್ಟುವನ್ ಎಂದೂ, ಹಳಗನ್ನಡದಲ್ಲಿ ವೇಡರ್, ವೇಳರ್, ವಿದಿರ್, ಭಿಲ್ಲ, ಬೇಂಟೆಯವರ್, ಬೇಂಟೆಕಾರ, ಬಿಯದರ್, ವಿಯದರ್, ಕಣಿಂದರ್ ಕೋವರ್ ಎಂಬ ಸಂವಾದಿ ಪದಗಳಿವೆ.

ಮಹಾರಾಷ್ಟ್ರದಲ್ಲಿ ಬೇಡರಿಗೆ “ರಾಮೋಶಿ” ಎಂದೆನ್ನುವರು ಖಾನ್‌ದೇಶ ಉತ್ತರದಲ್ಲಿ ಬೇಡರಿಗೆ “ಭಿಲ್ಲರೆನ್ನುವರು”. ಬೇಡರಿಗೆ ತೆಲುಗುವಿನಲ್ಲಿ ‘ಭೋವಿ’ ಎಂದೂ, ತಮಿಳಿನಲ್ಲಿ ‘ವೇದನ್’ ಎಂದೂ ಕರೆಯುವರು. ಮರಾಠಿಯಲ್ಲಿ ಬೇರಡ ಎಂದು ಕರೆಯುವರು.

೧. ಮರಾಠಿ ರಾಣವಾಸಿ ಮತ್ತು ರಾಮೋಶಿಯಾಗಿದೆ. ರಾಣವಾಸಿ ಎಂದರೆ ಅರಣ್ಯದಲ್ಲಿ ವಾಸಿಸುವವರು ಎಂದರ್ಥ.

೨. ಬಿಲ್ಲಿನ ಸಹಾಯದಿಂದ ಬೇಟೆಯಾಡುವ ಬೇಡರಿಗೆ ಭಿಲ್ಲರೆಂಬ ಹೆಸರು ಬಂತು.

ಬೇಡರ್ ಎಂಬುದು ಉರ್ದು ಪದ. ಹಾಗೆಂದರೆ ಅಂಜದ ಹೆದರದ ಎಂದರ್ಥ. ಬೇರಡ ಎಂದರೆ ಅಳಲಾರದ ಎಂಬರ್ಥವನ್ನು ಪ್ರತಿನಿಧಿಸುತ್ತದೆ. “ಬೇಡ” ಎಂಬ ಪದವು ಧೈರ‍್ಯ ಸಾಹಸಗಳನ್ನು ಪ್ರತಿನಿಧಿಸುತ್ತದೆ. “ಬೇಡ” ಎಂಬ  ಪದವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದರೂ ಸಾಮಾಜಿಕ ರಚನೆಯಲ್ಲಿ ಭಿನ್ನತೆಯನ್ನು ಕಾಣಬಹುದಾಗಿದೆ. ಗುಜರಾತ್‌ನಲ್ಲಿ ಬೇಡ (ನಾಯಕ) ಬುಡಕಟ್ಟಿಗೆ ನಾಯಕ್ಡ ಎಂದು ಕರೆಯಲಾಗುತ್ತದೆ. ಮಹಾರಾಷ್ಟ್ರದ ನಾಯಕ್ಡ ಅಥವಾ ನಾಯಕರು ತಮ್ಮನ್ನು ‘ಕಟ್‌ಕಾರಿ’ ಎಂದು ಕರೆದುಕೊಂಡರು. ಹಾಗೆಂದರೆ ಪ್ರಾಣಿಚರ್ಮಧಾರಿಗಳೆಂದರ್ಥ.

ಕರ್ನಾಟಕದಲ್ಲಿ ಮುಖ್ಯವಾಗಿ ಬೇಡರಿಗೆ ವಾಲ್ಮೀಕಿ ಮತ್ತು ನಾಯಕರು ಎಂದು ಕರೆಯುವರು. ಮೇಲಿನ ಎಲ್ಲಾ ಪದಗಳನ್ನು ಗಮನಿಸಿದರೆ ಬೇಡ ಜನಾಂಗದ ಪ್ರಾಚೀನತೆಯ ವ್ಯಾಪ್ತಿಯನ್ನು ಸ್ಪಷ್ಟೀಕರಿಸಬಹುದು. ಹಾಗೂ ಈ ಪದಗಳನ್ನು ಹಲವು ಪ್ರದೇಶಗಳಲ್ಲಿ ಬಳಸಿರುವುದನ್ನು ನೋಡಿದರೆ ವೃತ್ತಿಯ ವಿಚಾರದಿಂದ ಬಂದಿರಬಹುದು ಎಂಬುದು ನನ್ನ ಅನಿಸಿಕೆ. ‘ಜಾತಿಸೂಚಕ’ ಪದವಾಗಿಯೂ ಬಳಸಿದ್ದಾರೆ. ಬೇಟೆಯೇ ಬದುಕಿನ ಭಾಗವನ್ನಾಗಿಸಿ ಕೊಂಡ ಅಥವಾ ಅಂಗವನ್ನಾಗಿ ಮಾಡಿಕೊಂಡು ಬುಡಕಟ್ಟು ಜನಾಂಗವನ್ನು ‘ಬೇಡ’ರೆಂದು ಕರೆದುದಕ್ಕೆ ನಮ್ಮಲ್ಲಿ ಉತ್ತಮವಾದ ಇತಿಹಾಸವಿದೆಯೆಂದೇ ಹೇಳಬಹುದು.

ಆದಿ ಮೂಲವಾದ ಭಗವಂತನು ಬೇಡರ ಚುಂಚುಲಕ್ಷ್ಮಿಯನ್ನು ಮದುವೆಯಾಗುವುದರ ಮುಖಾಂತರ ಈ ವಂಶವನ್ನು ಬೆಳೆಸಿದನೆಂಬ ಕಥೆಯು ಇದೆ. ಅದರಂತೆ ಮನುವಿನ ಏಳನೇಯ ಚಂದ್ರವಂಶದಲ್ಲಿ ಕಾರ್ತ್ಯಾರ‍್ಯಾರ್ಜುನ ಹುಟ್ಟಿದ. ಈತ ಹೇಹೆಯ ರಾಜ್ಯವನ್ನು ಆಳುತ್ತಿ ರುವಾಗ ವೈಷ್ಣವಯಾಗಾದಿಗಳನ್ನು ಮಾಡುತ್ತಿದ್ದ. ಇದೇ ಸಂದರ್ಭದಲ್ಲಿ ಜಮದಗ್ನಿ ಈತನಿಂದ ಹತನಾದ. ಇದರಿಂದ ಕುಪಿತನಾದ ಪರಶುರಾಮ ಕಾರ್ತ್ಯಾರ‍್ಯಾರ್ಜುನ ಹಾಗೂ ಅವನ ಮಕ್ಕಳನ್ನು ಕೊಂದನು. ಇದರಿಂದ ಕ್ಷತ್ರಿಯರೆಲ್ಲ ಕಾಡಿಗೆ ಹೋದರು. ಕಾಡು ವಾಸಿಗಳಾದ ಇವರೇ ಮುಂದೆ ಬೇಡರೆಂದು ಪ್ರಸಿದ್ದಿಯಾದರು. ಇವರಿಗೂ, ಕ್ಷತ್ರಿಯರಿಗೂ ಭಿನ್ನತೆಯೇ ಇಲ್ಲ ಎಂಬುದನ್ನು ಕೆಲವು ಸಂಶೋಧಕರು ವಾದಿಸಿದ್ದಾರೆ. ಬೇಡರ ಜನಾಂಗವು ದ್ರಾವಿಡ ಜನಾಂಗ ಎಂಬುದಕ್ಕೆ ಬೇರೆ ಮಾತಿಲ್ಲ.

ಬೇಡರು ಬ್ರಹ್ಮ, ವಿಷ್ಣು, ಮಹೇಶ್ವರ ಈ ತ್ರಿಮೂರ್ತಿಯರಿಂದ ಜನ್ಮ ಪಡೆದವರು. ಆದ್ದರಿಂದ ಬೇಡರು ಮೂಲತಃ ವೈಷ್ಣವ ಮತದವರೆಂದೂ ಕೆಲವು ಮೂಲಗಳು ತಿಳಿಸುತ್ತವೆ. ಬೇಡರು ಕರ್ನಾಟಕದ ಮಹಾಬೇಟೆಗಾರರು ಮತ್ತು ಕೃಷಿಕಾರರ ಬುಡಕಟ್ಟು ಎಂದೇ ಹೆಸರುವಾಸಿಯಾಗಿದ್ದಾರೆ. ಇವರು ತಮ್ಮನ್ನು ತಾವೇ ‘ಕನ್ಯಾಕುಲಂ ಸಂತತಿ ಕೆಳಗಿನವರು’ ಧೋರಣಿಮ್ ಕುಲಮ್ ಮಹಾನಾಯಕರ ಮಕ್ಕಳು ಮತ್ತು ವಾಲ್ಮೀಕಿ ಕ್ಷತ್ರಿಯರು ಎಂದೂ ಕರೆದುಕೊಂಡಿದ್ದಾರೆ. ಅದಲ್ಲದೆ ಇವರು ಕ್ರೂರಿಗಳು ಮತ್ತು ನೋಟದಲ್ಲಿ ಭಯಾನಕತೆ ಯನ್ನುಳ್ಳವರೆಂದೇ ಹೇಳಬಹುದು. ಇವರು ದಾರಿಗಳ್ಳರು ಮತ್ತು ಹೊಂಚುಗಳ್ಳರೆಂದೇ ಹೆಸರು ವಾಸಿಯಾಗಿದ್ದರೆಂದು ಕೆಲವು ಮೂಲಗಳು ತಿಳಿಸುತ್ತವೆ.

‘ಬೇಡರ್’ ಎಂಬ ಪದವು ಬ್ಯಾಡರು ಪದದಿಂದ ಬಂದಿದೆ. ಸಂಸ್ಕೃತದಲ್ಲಿ ವ್ಯಾಧ ಎಂದು. ಇದರ ಅರ್ಥ ಬೇಟೆಗಾರ ಎಂದು. ಈ ಬುಡಕಟ್ಟಿನ ಮೂಲವು ಹಲವಾರು ಐತಿಹ್ಯಗಳನ್ನೊಳಗೊಂಡಿದೆ. ಇವರು ತುಂಬಾ ಪ್ರಾಚೀನತೆಯ ಕಾಲದಿಂದ ಬಂದವರು, ಅಥವಾ ತುಂಬಾ ಹಳೆಯ ವಂಶದಿಂದ ಬಂದವರು.

ಬಸವಣ್ಣನ ಎಡ ಮತ್ತು ಬಲಗಣ್ಣಿನಿಂದ ಕ್ರಮವಾಗಿ ಕಣ್ಣಯ್ಯ ಮತ್ತು ಕನಕವ್ವ ಚಿಗುರಿದರು ಅಥವಾ ಹುಟ್ಟಿದರು. ಬೇಡರ ವಂಶವು ವಾಲ್ಮೀಕಿ ಋಷಿಯಿಂದ ಬಂದದ್ದು ಎಂಬುದನ್ನು ಕೆಲವು ಪುರಾಣಗಳಲ್ಲಿ ಕಾಣಬಹುದು. ಮತ್ತೊಂದು ಐತಿಹ್ಯದ ಪ್ರಕಾರ ಸೂರ‍್ಯವಂಶದಲ್ಲಿ ಹೋತಿ ಎಂಬ ಅರಸನು ಮರಣ ಹೊಂದಿದ್ದ. ನಂತರ ಈ ವಂಶವು ಒಬ್ಬ ಮಹಾಋಷಿಯಿಂದ ಆರಂಭವಾಯಿತು ಎಂಬ ಊಹೆಯಿದೆ. ಹೋತಿ ಎಂಬ ಅರಸನು ಕಪ್ಪು ಮೈ ಬಣ್ಣ ಹೊಂದಿದ್ದು ನೋಡಲು ತುಂಬಾ ಕುರುಪಿಯೂ ಆಗಿದ್ದನು. ಗುಣದಲ್ಲಿ ಕೆಟ್ಟವನೂ ಆಗಿದ್ದನು. ಆಳಲು ಆಯೋಗ್ಯನೂ ಆಗಿದ್ದನು. ಅವನು ಒಂದು ದಿನ ಬೇಟೆಯಾಡಲು ಎಂದು ಅರಣ್ಯಕ್ಕೆ ಬಂದಿದ್ದನು. ಈ ಒಂದು ಸ್ಥಿತಿಯಲ್ಲಿ ಅವನು ಮನಿಕಾ ಎಂಬ ವರ್ಣಿಸಲು ಹಾಗೂ ಹೋಲಿಸಲು ಅಸಾಧ್ಯವಾದ ಸುಂದರಿಯನ್ನು ನೋಡಿ ಆಕೆಯನ್ನು ಮೋಹಿಸಿ ಮದುವೆಯಾದನು. ಆ ಒಂದು ಕಾರಣದಿಂದಾಗಿ ಅವರಿಗೆ ಏಳು ಮಕ್ಕಳು ಹುಟ್ಟಿದವು. ನಿಷೇಧ, ಷರಾ, ಕುವಂಗ್ರಿಯರಿ, ಸಲೈಕ, ಷರಾಕ್ರಿ, ಅನ್ಸರಿ, ಷೆಷಾತರಾದ್ರಿ. ಇವೇ ಮುಂದೆ ಬೇಡರ ಬಳಿಗಳಾದವು. ಸಮಾಜದಲ್ಲಿ ಇವರು ಮಾಡುತ್ತಿದ್ದ ವೃತ್ತಿಯ ಮೇಲೆ ಅವರನ್ನು ಗುರುತಿಸಿದರು.

೧. ನಿಷೇಧ – ಇವರು ಹುಲಿಗಳನ್ನು ಬೇಡೆಯಾಡುತ್ತಿದ್ದರು. ಎಮ್ಮೆಯ ಮಾಂಸವನ್ನು ತಿನ್ನುತ್ತಿದ್ದರು.

೨. ಷರಾ – ಇವರು ಅರಣ್ಯದಲ್ಲಿ ಸಿಗುವ ಬೇರುಗಳು ಅಥವಾ ಗಿಡಮೂಲಿಕೆಗಳು, ಹಣ್ಣುಗಳು ಮತ್ತು ಗಂಧವನ್ನು ಮಾರುತ್ತಿದ್ದರು.

೩. ಕುವಂಗ್ರಿಯರಿ – ಇವರು ತಮ್ಮ ತಲೆಯ ಕೂದಲನ್ನು ಉದ್ದ ಬಿಡುತ್ತಿದ್ದರು. ಎಲ್ಲರೂ ದೊಡ್ಡದಾದ ಓಲೆಗಳನ್ನು ಹಾಕುತ್ತಿದ್ದರು. ಇವರು ಸಮುದ್ರದ ಬಳಿಯಲ್ಲಿ ಸಿಗುವ ಕಪ್ಪೆ-ಚಿಪ್ಪುಗಳನ್ನು ಮಾರಿ ಹಣ ಸಂಪಾದನೆ ಮಾಡಿ ಜೀವನ ನಡೆಸುತ್ತಿದ್ದರು.

೪. ಸಲೈಕ – ಇವರು ಹಗಲು ಹೊತ್ತು ಕೆಲಸ ಮಾಡುತ್ತಿದ್ದರು. ಅಂದರೆ ಬಾವಿ ಮತ್ತು ಗುಂಡಿಗಳನ್ನು ತೋಡುವ ಕೆಲಸ ಮಾಡುತ್ತಿದ್ದರು.

೫.  ಕ್ಷರಾಕ್ರಿ – ನಿಂಬೆಹಣ್ಣು ಮತ್ತು ಉಪ್ಪನ್ನು ಮಾರುತ್ತಿದ್ದರು.

೬. ಅನ್ಸರಿ – ಮೀನು ಹಿಡಿಯುವ ಕಸಬನ್ನು ಮಾಡಿ ತಮ್ಮ ಹೊಟ್ಟೆಯನ್ನು ತುಂಬಿ ಕೊಳ್ಳುತ್ತಿದ್ದರು.

೭. ಷೆಷಾತರಾದ್ರಿ – ಇವರು ಬೇಟೆಗಾರರು.

ಇದು ಬೇಡರ ಮೂಲ ಎಂದು ಕೆಲವರ ವಾದ. ಅದೇ ರೀತಿ ಬೇಡ ಜನಾಂಗದ ಮೂಲದ ಬಗ್ಗೆ ತಿಳಿಯಲು ಮತ್ತೊಂದು ಐತಿಹ್ಯವಿದೆ. ಬೇಡ ಜನಾಂಗದ ಮೂಲ ಪುರುಷ ‘ವಾಲ್ಮೀಕಿ’ ಎಂದು ಹಲವರ ಅಭಿಪ್ರಾಯ. ಕಿರಾತರ ಯಜಮಾನನಾದ ಈತನು ಕಾಮಕೇತು, ಲಷ್ಕ್ಯಮೀನು ಮಲ್ಲರೆಂಬ ಇನ್ನಿತರ ಏಳು ಜನ ಮಕ್ಕಳ ನೇತೃತ್ವದಲ್ಲಿ ಏಳು ಪಡೆಗಳನ್ನು ರಚಿಸಿಕೊಂಡು ದರೋಡೆ ನಡೆಸುತ್ತಿದ್ದನು. ಮುಂದೆ ಅರಣ್ಯದಲ್ಲಿ ಕಾಲಾನಂತರ ಚದುರಿ ಹೋದ ಈ ಪಡೆಗಳು ಬೇಡರ ಜನಾಂಗದ ವಂಶವನ್ನು ಅಭಿವೃದ್ದಿ ಮಾಡಲು ನಾಂದಿ ಹಾಡಿದವು ಎಂಬ ಐತಿಹ್ಯ ಉಂಟು. ಏನೇ ಇರಲಿ ಚದುರಿ ಹೋದ ಇಂತಹ ಬೇಡ ತುಕಡಿಗಳು ಆಯಾಯ ಪ್ರದೇಶದಲ್ಲಿ ಗಟ್ಟಿಯಾಗಿ ನೆಲೆಯೂರಿದವು ಎಂಬುದರಲ್ಲಿ ಎರಡು ಮಾತಿಲ್ಲ. ಬೇಡರು ಪಂಜಾಬಿನ ಗೌರಿ ಶಿಖರಗಳಿಂದ ಕರ್ನಾಟಕಕ್ಕೆ ಬಂದರೆಂದೂ, ಇವರಿಗೆ ಭಿಲ್ಲರು, ನಾಯಕರು, ಬೇರಾರ್ ಎಂದು ಕರೆಯುತ್ತಿದ್ದರೆಂದು ಕೆಲವು ಸಂಶೋಧಕರ ಅಭಿಪ್ರಾಯವಾಗಿದೆ. ಅದೇ ರೀತಿ ಮಧ್ಯ ಪ್ರದೇಶದಲ್ಲಿರುವ ನಾಯಕರು ಮಹಾರಾಷ್ಟ್ರ ದಲ್ಲಿರುವ ರಾಮೋಶಿಗಳು ಉತ್ತರ ಇಂಡಿಯಾದಲ್ಲಿರುವ ಬಾಲಮೀಕಿ ನಾಯಕರು ಒಂದು ಎಂಬುದನ್ನು ಹಲವು ವಿದ್ವಾಂಸರುಗಳು ಹೊಂದಿದ ವಿಚಾರಗಳಾಗಿವೆ. ತಳವಾರ ಎಂಬುದು ಬೇಡರಲ್ಲಿಯೇ ಇನ್ನೊಂದು ಹೆಸರು. ಇವರು ಬೇಡ ಜನಾಂಗದ ಅವಿಭಾಜ್ಯ ಅಂಗ ಎನ್ನಬಹುದು. ಇವರನ್ನು ಕಾವಲುಗಾರ, ಗ್ರಾಮರಕ್ಷಕ, ನಾಡನಗರದ ಅಧಿಕಾರಿಯೆಂಬ ಅರ್ಥವನ್ನು ಸೂಚಿಸುತ್ತದೆ.

ನಾಯಕ : ಬೇಡರ ಗುಂಪಿನಲ್ಲಿ ಶೂರನಾದ ವ್ಯಕ್ತಿ. ಪಾಳೆಪಟ್ಟುಗಳನ್ನು ಕಟ್ಟಿಕೊಂಡು ಪಾಳೆಯಗಾರನಾದ. ಆತನೇ ಮುಂದೆ ಮುಖಂಡನಾದ. ನೇತೃತ್ವ ವಹಿಸಿದ ಈತನಿಗೆ ‘ನಾಯಕ’ ಎಂದು ಗೌರವ ಸೂಚಕ ಪದವನ್ನಾಗಿ ಬಳಸಿದರು. ಇದಕ್ಕಿಂತ ಮುಂಚೆ ಬೇಡರಿಗೆ ಬೋವ, ಬೋಯ, ಬೋಯಿ ಎಂಬ ಪದಗಳನ್ನು ಬಳಸುತ್ತಿದ್ದ ದಾಖಲೆಗಳಿವೆ.

ನಾಯಕ್ಡಾ : ಎಂದರೆ ತೆಲುಗು ಭಾಷೆಯಲ್ಲಿ ಅಪರಾಧಿ ಕೆಲಸ ಮಾಡುವವ ಎಂಬರ್ಥವನ್ನು ಸೂಚಿಸುತ್ತದೆ. ಮಹಾರಾಷ್ಟ್ರದಲ್ಲಿ ಇವರನ್ನು ರಾಮೋಶಿ, ‘ರಾಣಮಸಿ’ ಎಂದು ಕರೆಯಲು ಕಾರಣವೇನೆಂದರೆ ಇವರು ಶ್ರೀರಾಮನ ವಂಶದವರು.

ಕರ್ನಾಟಕದಲ್ಲಿ ಬೇಡರನ್ನು ಊರಬೇಡ, ಮ್ಯಾಸಬೇಡ ಎಂದು ಎರಡು ವಿಧಗಳಲ್ಲಿ ಕಾಣಬಹುದು. ಆಳುತ್ತಿರುವ ಅರಸನಿಗೆ ವೈರಿಗಳ ಬರುವಿಕೆ ಬಗ್ಗೆ ಗೂಢಾಚಾರಿಕೆ ತಲುಪಿಸುತ್ತಾ ಕಾಡಿನಲ್ಲಿ ಅಲೆಯುತ್ತಿದ್ದವರೆಲ್ಲ ಮ್ಯಾಸಬೇಡರಾದರು. ಊರಲ್ಲಿದ್ದವರೆಲ್ಲ ಊರುಬೇಡ ರಾದರು. ಮ್ಯಾಸಬೇಡರಲ್ಲಿ ಊರುಮ್ಯಾಸ, ಅಡವಿಮ್ಯಾಸ, ಕಳ್ಳಮ್ಯಾಸ, ಮುಂಜಿಮ್ಯಾಸ ಎಂಬ ಬಣಗಳಿವೆ.

‘ಮ್ಯಾಸ’ ಎಂಬ ಪದವು ‘ಮೇಯಿಸುವವರು’ ಶಬ್ದದಿಂದ ನಿಷ್ಪನ್ನವಾಯಿತೆಂದು ಡಾ. ಕೃಷ್ಣಮೂರ್ತಿ ಹನೂರು ಅವರ ಅಭಿಪ್ರಾಯ. ಮೇಯಿಸ ಇದರರ್ಥ ಮ್ಯಾಸವೆಂದೂ ಇವರೇ ಹೇಳಿದ್ದಾರೆ. ಮೀಸಲು ಸೈನ್ಯವಾಗಿದ್ದ ಇವರ ವೃತ್ತಿಯನ್ನು ಗ್ರಾಮೀಣರು ಮ್ಯಾಸ ಎಂಬರ್ಥದಲ್ಲಿ ಪ್ರಯೋಗಿಸಿದ್ದಾರೆ ಎಂಬುದನ್ನು ಇವರೇ ತರ್ಕ ಮಾಡಿದ್ದಾರೆ. ಇವರನ್ನು ಕೆಲವೆಡೆ ಊರು ನಾಯಕರು, ಮ್ಯಾಸನಾಯಕರೆಂದೂ ಗುರುತಿಸುವರು.

ಬೇಡರಲ್ಲೇ ಊರಬೇಡರು ಮತ್ತು ಮ್ಯಾಸಬೇಡರು ಎಂದು ಎರಡು ಬಣಗಳಾದ ಬಗೆಯನ್ನು ಒಂದು ಕಟ್ಟುಕಥೆಯ ಮುಖಾಂತರ ತಿಳಿಯೋಣ. ಒಂದು ಊರಲ್ಲಿ ಒಬ್ಬ ತಾಯಿ ಇದ್ದಳು. ಆ ತಾಯಿಗೆ ಎರಡು ಗಂಡು ಮಕ್ಕಳು ಇದ್ದರು. ಅವರ ತಾಯಿಯು ಅವರಿಗೆ ಪ್ರತಿನಿತ್ಯ ಊಟ ಬಡಿಸುತ್ತಿದ್ದಳು. ಜೊತೆಗೆ ಮೊಸರು ಒಬ್ಬನಿಗೆ, ಕೆನೆಮೊಸರು ಮತ್ತೊಬ್ಬನಿಗೆ ಕೊಡುತ್ತಿದ್ದಳು. ಆಕಸ್ಮಿಕವಾಗಿ ಒಂದು ದಿನ ಮೊಸರು ಕೊಡುವವನಿಗೆ ಕೆನೆಮೊಸರನ್ನೂ, ಕೆನೆಮೊಸರು ಕೊಡುವವನಿಗೆ ಮೊಸರನ್ನು ಕೊಟ್ಟಳು. ಕಿರಿಯವನು ತುಂಬಾ ಬುದ್ದಿವಂತ. ಅದನ್ನು ಗುರುತಿಸಿ ಕೆನೆಮೊಸರನ್ನು ತಿಂದ. ಅದರ ರುಚಿಯನ್ನು ಅರಿತ ಅವನು ನಮ್ಮ ತಾಯಿ ನನಗೆ ದಿನ ಮೋಸ ಮಾಡುತ್ತಿದ್ದಾಳೆ ಎಂಬ ಅಂಶವನ್ನು ತಿಳಿದು, ಆಕಳ ಕೆಚ್ಚಲನ್ನೇ ತಿಂದು ಬಿಟ್ಟ. ಅದನ್ನು ಹಿರಿಯಣ್ಣ ದ್ವೇಷಿಸಿದ. ಅಂದಿನಿಂದ ಊರಬೇಡ ಮತ್ತು ಮ್ಯಾಸಬೇಡ ಎಂಬ ಎರಡು ಪಂಗಡಗಳಾದವು.

ಮ್ಯಾಸಬೇಡರು ತಮ್ಮನ್ನು ಒಮ್ಮೆ ಮ್ಯಾಸರೆಂದೂ ಮತ್ತೊಮ್ಮೆ ಬೇಡರೆಂದೂ, ನಾಯಕ ರೆಂದೂ ಕರೆದುಕೊಳ್ಳುತ್ತಾರೆ. ಮ್ಯಾಸ ಪದಕ್ಕೆ ನಿಷ್ಪತ್ತಿಯಾಗಿ ತಾವು  ವ್ಯಾಸ ಮಹಾಕವಿಯ ಕುಲದವರೆಂದೂ ಹೇಳಿಕೊಳ್ಳುವರು. ವಾಲ್ಮೀಕಿ ಬೇಡನಾಗಿದ್ದರಿಂದ ತಾವು ಬೇಡರಾಗಿರುವುದ ರಿಂದ ಅವನ ಗೋತ್ರದವರೇ ಎಂದು ಹೇಳಿಕೊಂಡಿದ್ದಾರೆ. ಇವರ ಹುದ್ದೆ ಪಶುಪಾಲನೆಯಾದ್ದ ರಿಂದ ಇವರು ದನ, ಕರು, ಕುರಿಗಳನ್ನು ಮೇಯಿಸುವುದರಿಂದ ‘ಮ್ಯಾಸ’ ಎಂಬ ಪದದ ಬಳಕೆಯನ್ನು ತಂದಿರಬಹುದು.

ಕರ್ನಾಟದಲ್ಲಿ ಮಾತ್ರವಲ್ಲದೆ, ಇಡೀ ಭಾರತದಲ್ಲಿ ವಾಸವಾಗಿರುವ ಆದಿಮ ಜನಾಂಗ ಗಳಲ್ಲಿ ಬೇಡ ಜನಾಂಗವು ಒಂದು ಎಂದು ಹೇಳಬಹುದು. ಜೊತೆಗೆ ನಮ್ಮ ದೇಶದಲ್ಲಿಯೇ ಬಹು ಪುರಾತನ ಕಾಲದಿಂದಲೂ ಈ ಜನಾಂಗವು ಅಸ್ತಿತ್ವದಲ್ಲಿದ್ದಿತೆಂಬ ಬಗ್ಗೆ ಯಾವ ಅನುಮಾನವೂ ಇಲ್ಲ. ಇದಕ್ಕೆ ಹಲವಾರು ಆಧಾರಗಳೂ ಉಂಟು. ಕರ್ನಾಟಕದ ಮೂಲ ನಿವಾಸಿಗಳಲ್ಲಿ ಬೇಡ ಜನಾಂಗ ಒಂದು ಎಂದು ಹೇಳಿದರೆ ತಪ್ಪಾಗಲಾರದು.

ಒಟ್ಟಿನಲ್ಲಿ ಹೇಳುವುದಾದರೆ ಬೇಡರು ಬಹು ಸಮರ್ಥವಾದ ಜನಾಂಗಕ್ಕೆ ಸೇರಿದವರು. ಪ್ರತಿಯೊಂದು ಪ್ರದೇಶದಲ್ಲಿ ಜನಗಣತಿ ಮಾಡಿ ಆ ಪ್ರದೇಶದಲ್ಲಿರುವ ಬೇಡ ಜನಾಂಗವನ್ನು ಗುರುತಿಸಿ ಅವರ ಮೂಲದ ಬಗ್ಗೆ ಇನ್ನಷ್ಟು ಕ್ಷೇತ್ರಕಾರ‍್ಯ ಮಾಡಿ ಮಾಹಿತಿ ಸಂಗ್ರಹಿಸಿ, ಜೊತೆಗೆ ಅವರ ವೃತ್ತಿಯ ಬಗ್ಗೆ, ಆರ್ಥಿಕ ಜೀವನದ ಬಗ್ಗೆ, ಸಾಮಾಜಿಕ ಜೀವನದ ಬಗ್ಗೆ, ಹಾಗೂ ಬುಡಕಟ್ಟು ಜನಾಂಗಗಳಲ್ಲಾಗುವ ಸ್ಥಿತ್ಯಂತರಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಿ ಅದರ ವಿಶ್ಲೇಷಣೆ ಮಾಡಿ ಆ ಜನಾಂಗದ ಬಗ್ಗೆ ಜಗತ್ತಿಗೆ ಪರಿಚಯವನ್ನು ಮಾಡಬೇಕಾದ ಅನಿವಾರ‍್ಯತೆ ಇದೆ. ಹಾಗೆಯೇ ಬುಡಕಟ್ಟು ಜನಾಂಗಗಳ ಅಧ್ಯಯನ ನಡೆದರೆ ಬುಡಕಟ್ಟು ಜನಾಂಗಗಳನ್ನು ಗುರುತಿಸಬಹುದಾಗಿದೆ. ಜನಾಂಗದ ಮೂಲದ ಬಗ್ಗೆ ತಿಳಿಯಲು ಇನ್ನೂ ವಿಶ್ವಸನೀಯವಾದ ಸಮಕಾಲೀನ ಚಾರಿತ್ರಿಕ ದಾಖಲೆಗಳು, ಶಾಸನಗಳು, ಐತಿಹ್ಯಗಳು ಬೆಳಕಿಗೆ ಬಂದಂತೆ ನಿಖರವಾದ ವಂಶಾವಳಿಯನ್ನು ಸಿದ್ಧಪಡಿಸಲು ಸಾಧ್ಯವಾಗುತ್ತದೆ.

ಆಧಾರಗ್ರಂಥಗಳು

೧. Castes and Tribes of Southern India – Thurston E. K. Rangachari. New Delhi, Agian Educational Services.

೨. The Caste and Tribes of  H.E.H, The Nizams Domiuaticu (New Delhi : Agian Educational Services – Syed Sirajul.

೩. ‘Trbies of  Mysore‘- Luiz, A.A.D.

೪. ಹನೂರು, ಕೃಷ್ಣಮೂರ್ತಿ, ಮ್ಯಾಸಬೇಡರ ಸಂಸ್ಕೃತಿ (ಬೆಂಗಳೂರು : ಕರ್ನಾಟಕ ಸಾಹಿತ್ಯ ಅಕಾಡೆಮಿ ೧೯೯೩.

೫. ಬುಡಕಟ್ಟು ಕುಲಕಸಬುಗಳು – ಡಾ.ಕೆ. ಮೈತ್ರಿ (ಸಂಪಾದಕರು).

೬. ಇತಹಾಸ ಚಂದ್ರಿಕೆ ಸಂಪುಟ – ಬಿ.ಆರ್. ತುಬಾಕಿ ಲೇಖಕರು : ಎಂ.ವಿ. ಚಿತ್ರಲಿಂಗಯ್ಯ

೭. ವಾಲ್ಮೀಕಿ ಕರ್ನಾಟಕ ಕನ್ನಡ ಮಾಸ ಪತ್ರಿಕೆ – ಎಂ. ನರಸಿಂಹಯ್ಯ (ಪ್ರಧಾನ ಸಂಪಾದಕರು).

೮. ಕರ್ನಾಟಕ ಬಡುಕಟ್ಟುಗಳು ಸಂಪುಟ ೧ – ಎಚ್.ಜೆ. ಲಕ್ಕಪ್ಪಗೌಡ.

೯. ಹರತಿಸಿರಿ – ಪ್ರ.ಸಂ – ಲಕ್ಷ್ಮಣ್ ತೆಲಗಾವಿ.

ಕೃಪೆ : ಜಾನಪದ ಕರ್ನಾಟಕ

* * *