ಬೇಡರ ಪರಿಚಯ

ಪ್ರಾಚೀನ ಕಾವ್ಯಗಳಲ್ಲಿ ರಾಜರು ಬೇಟೆಗೆ ಹೊರಟಾಗ ಅವರ ಜೊತೆಗೆ ಸಹಾಯಕ್ಕೊ ಅಥವಾ ಸಾಹಸ ಪ್ರದರ್ಶಿಸಲಿಕ್ಕೊ ಬೇಟೆಯಾಡುವುದರಲ್ಲಿ ನಿಷ್ಣಾತರಾದ ಒಂದು ಪಡೆಯೇ ಹೊರಡುತ್ತಿತ್ತು. ಇದನ್ನು ನೀವು ಓದಿರಬಹುದು ಅಥವಾ ಕೇಳಿರಬಹುದು. ಅವರನ್ನೇ ಬೇಡರು ಎಂದು ಕರೆಯಲಾಗುತ್ತದೆ. ಅವರು ಕಾಡು ಗುಡ್ಡಗಳಲ್ಲಿ ವಾಸಿಸುತ್ತಿದ್ದರು. ಕಾಡುಗುಡ್ಡಗಳ ಪರಿಚಯ ಅವರಿಗೆ ಚೆನ್ನಾಗಿತ್ತು. ಯಾವ ಕಡೆಯಿಂದ ಹೊರಟರೆ ಎಲ್ಲಿಗೆ ತಲುಪಬಹುದು, ಯಾವ ಯಾವ ಪ್ರಾಣಿಗಳು ಎಲ್ಲಿ ಎಲ್ಲಿ ವಾಸವಾಗಿರುತ್ತವೆ, ಯಾವು ಯಾವುದನ್ನು ಹೇಗೆ ಬೇಟೆಯಾಡಬೇಕೆಂಬುದರಲ್ಲಿ ಅವರು ಅನುಭವಿಗಳಾಗಿದ್ದರು.

ಶಬರ, ಬೇಡ, ಬೇಡರ್ ಎಂಬ ಹೆಸರನ್ನುಳ್ಳ ಈ ಜನಾಂಗ ಕಷ್ಟಜೀವಿಗಳಾಗಿದ್ದರು. ಬಿಲ್ಲು ಬಾಣ ಮತ್ತು ಭರ್ಜಿಗಳು ಯಾವಾಗಲೂ ಇವರ ಕೈಯಲ್ಲಿರುತ್ತಿದ್ದ ಆಯುಧಗಳು. ಹೊಟ್ಟೆಹೊರೆಯಲು ಪ್ರಾಣಿಗಳ ಬೇಟೆ ಮಾಡುತ್ತಿದ್ದರು ಎಂದು ಶ್ರೀ ಜಿ.ಎಸ್. ಘರ್ಯೆ (G.S. Ghurye)ಯವರು Caste and Class in India ಎಂಬ ತಮ್ಮ ಪುಸ್ತಕದಲ್ಲಿ ತಿಳಿಸಿದ್ದಾರೆ. ಬೇಡರುಗಳ ಬಣ್ಣ ಕಪ್ಪಾಗಿತ್ತು. ಅವರು ಗುಂಪುಗುಂಪಾಗಿ ವಾಸಿಸುತ್ತಿದ್ದರು ಎಂಬುದು ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿ ಗೊತ್ತಾಗುತ್ತದೆ. ವಿಶ್ವಾಮಿತ್ರ ತನ್ನ ಪರೀಕ್ಷೆಯ ಮೊದಲ ಹಂತವಾಗಿ ಕ್ರೂರಮೃಗಗಳನ್ನು ಸೃಷ್ಟಿಸಿ ಬೆಳೆಗಳನ್ನು ನಾಶಮಾಡಲು ಬಿಡುತ್ತಾನೆ. ಅವುಗಳ ನಾಶಕ್ಕಾಗಿ ಹರಿಶ್ಚಂದ್ರ ಮಹಾರಾಜ ಹೊರಟು ನಿಂತು “ಕರೆ ಕರೆ ಸಮಸ್ತ ಬೇಂಟೆಯ ಶಬರ ಚಾಲಮಂ” ಎಂಬುದಕ್ಕೆ “ನಿಟ್ಟಿಸುವ ಕಣ್ಣಾಲಿ ಕತ್ತಲಿಸೆ ಕತ್ತಲೆಯ ತತ್ತಿಗಳಂತೆ” ಅವರು ಹೊರಬರುತ್ತಾರೆ.

ಬೇಡರನ್ನು ನಾಯಕರು ಎಂದು ಹೆಚ್ಚಾಗಿ ಕರೆಯಲಾಗುತ್ತದೆ. ಬೇಡ ಜನಾಂಗದವರು ‘ಬೇಡ’ ಎನಿಸಿಕೊಳ್ಳಲು ಇಷ್ಟಪಡುವುದಿಲ್ಲ. ಬದಲಾಗಿ ‘ನಾಯಕ’ ಎನಿಸಿಕೊಳ್ಳುವುದು ಹೆಚ್ಚಿನ ಸ್ಥಾನಮಾನ ಗಳಿಸಿದಂತೆ ಎಂಬ ಭಾವನೆ ಬೇರೂರಿದೆ. ಬೇಡರ ಇತರ ಹೆಸರುಗಳೆಂದರೆ ತಳವಾರ, ವಾಲ್ಮೀಕಿ, ನಾಯಕಮಕ್ಕಳು, ಪರಿವಾರ, ನಾಯಕವಾಡಿ, ಬೇರದ್, ವೇದನ್ ಮತ್ತು ಬೋಯ ಎಂದು. ಬೇಡರು ರಾಜನ ಪಡೆಯಲ್ಲಿ ಕೆಳಮಟ್ಟದ ಸೈನಿಕರಾಗಿದ್ದಾರೆ, ಪರಿವಾರ, ವಾಲ್ಮೀಕಿ ಮುಂತಾದ ಜನಾಂಗದವರು ಹಳ್ಳಿಗಳಲ್ಲಿ ಜಾಡಮಾಲಿಗಳಾಗಿದ್ದರು ಎಂದು ಅಭಿಪ್ರಾಯ ಪಡುತ್ತಾರೆ. ಬೇಡರು ಕರ್ನಾಟಕದ ಉತ್ತರ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಯಾವ ಬೇಡ ಜನಾಂಗದವರನ್ನು ವಿಚಾರಿಸಿದರೂ “ನಾವು ವಿಜಯ ನಗರದ ರಾಜರ ಹತ್ತಿರ ಇದ್ದ ಬೇಡ ಪಡೆಯವರು, ಮುಸಲ್ಮಾನರ ವಿರುದ್ಧ ಹೋರಾಡಲು ರಾಜ ನಮ್ಮನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದ. ವಿಜಯನಗರ ಹಾಳಾದ ಮೇಲೆ ನಾವು ಬೇರೆ ಬೇರೆ ಕಡೆ ಛಿದ್ರ ಛಿದ್ರ ಆದೆವು” ಎನ್ನುತ್ತಾರೆ. ತಮ್ಮ ಒರಟು ಶೌರ್ಯದ ಮೇಲೆ ಅವರಿಗೆ ಈಗಲೂ ಹೆಮ್ಮೆ ಇದೆ. ಎಂತಹ ಭಯಂಕರ ಕೆಲಸ ಮಾಡಲೂ ಅವರು ಹಿಂದೆಗೆಯುತ್ತಿರಲಿಲ್ಲವಂತೆ. ಒಬ್ಬ ಶತ್ರು ರಾಜನ ಹಸಿ ತಲೆ ತಂದು ಕಾಲಬುಡಕ್ಕೆ ಹಾಕ ಬೇಕೆಂದಾಗಲೂ, ಅಥವಾ ಆತನ ಕೈಕಾಲುಗಳನ್ನು ಉರಿಸಿ ಅಡಿಗೆಮಾಡಿ ಬಡಿಸಬೇಕೆಂದು ಹೇಳಿದಾಗಲೂ ಅವರು ಅದನ್ನು ಚಾಚೂ ತಪ್ಪದೆ ನೆರವೇರಿಸುವ ನಿಷ್ಠಾವಂತರಾಗಿದ್ದರಂತೆ.

ಮ್ಯಾಸಬೇಡರು ಯಾರು?

ಸಾಧಾರಣವಾಗಿ ಬೇಡರಲ್ಲಿ ಎರಡು ವಿಭಾಗಗಳನ್ನು ಕಾಣುತ್ತೇವೆ. ಊರುಬೇಡ ಮತ್ತು ಮ್ಯಾಸಬೇಡ ಅಥವಾ ಊರನಾಯಕ ಮತ್ತು ಮ್ಯಾಸನಾಯಕ. ಹೆಸರುಗಳೇ ಹೇಳುವಂತೆ ‘ಊರಿನಲ್ಲಿ ವಾಸ ಮಾಡುವವರನ್ನು ಊರಬೇಡರೆಂದೂ, ಊರಹೊರಗೆ ಪ್ರತ್ಯೇಕವಾಗಿ ಅಥವಾ ಕಾಡುಗಳಲ್ಲಿ ವಾಸ ಮಾಡುವವರನ್ನು ಮ್ಯಾಸಬೇಡ, ಅಡವಿ ನಾಯಕ, ಅಡವಿ ಮ್ಯಾಸರು ಅಥವಾ ಅಡವಿಬೇಡ’ ಎಂದೂ ಕರೆಯಲಾಗುತ್ತದೆ. ಮ್ಯಾಸಬೇಡರು ತುಂಬಾ ಆಚಾರ ವಿಚಾರ ಸಂಪ್ರದಾಯಗಳನ್ನು ಅನುಸರಿಸುವವರಾದ್ದರಿಂದ ಇವರು ಊರ ಹೊರಗೆ ವಾಸ ಮಾಡುತ್ತಾರೆ. ಎಲ್ಲಿ ಕೋಳಿಗಳು ಕಾಣಿಸುವುದಿಲ್ಲವೋ ಅಲ್ಲಿ ಮ್ಯಾಸಬೇಡರಿದ್ದಾರೆಂದೇ ಅರ್ಥ. ಯಾಕೆಂದರೆ ಅವರು ಕೋಳಿಯನ್ನು ತಿನ್ನುವುದಿಲ್ಲ. ದಾವಣಗೆರೆಯಲ್ಲಿ ‘ಮ್ಯಾಸ ಬೇಡರ ಹಟ್ಟಿ’ ಎಂಬ ಒಂದು ಕೇರಿಯೇ ಇದೆ. ಆದರೆ ಅಲ್ಲಿ ಈಗ ಯಾರೂ ಮ್ಯಾಸಬೇಡರೇ ಇಲ್ಲ. ಯಾಕೆಂದರೆ ಆ ಕೇರಿಯ ಸುತ್ತ ಮುತ್ತ ಮುಸ್ಲಿಮರು ಬಂದು ವಾಸಮಾಡಲು ಶುರು ಮಾಡಿದ್ದರಿಂದ, ಅವರ ಕೋಳಿಗಳು ಇವರ ಕೇರಿಗೆ, ಮನೆಗೆ ನುಗ್ಗಹತ್ತಿದ್ದರಿಂದ ಅವರು ಆ ಹಟ್ಟಿಯನ್ನೇ ಬಿಟ್ಟು ಹೋಗಿದ್ದಾರೆ.

ಊರಿನಲ್ಲಿ ವಾಸ ಮಾಡುವವನು ಊರುಬೇಡ ಎಂದಾದರೆ ‘ಮ್ಯಾಸಬೇಡ’ ಎಂಬುದರಲ್ಲಿ ಮ್ಯಾಸ ಎನ್ನುವ ಶಬ್ದ ವಿಚಾರಣೀಯ. ಕೆಲವೊಮ್ಮೆ ಮ್ಯಾಸಬೇಡರು, ಮ್ಯಾಸನಾಯಕರು ಎಂದು ಕರೆದುಕೊಳ್ಳದೆ ‘ನೀವು ಯಾವ ಜನ’ ಎಂದರೆ ‘ಮ್ಯಾಸರು’ ಎನ್ನುತ್ತಾರೆ. ಈ ಜನಾಂಗದ ಕೆಲವರು ವಿಜಯನಗರ ಸಾಮ್ರಾಜ್ಯದಲ್ಲಿ ಮೀಸಲು ಪಡೆಯ ನಾಯಕರಾಗಿದ್ದು ದರಿಂದ ಮೀಸಲು ನಾಯಕರು ಮ್ಯಾಸನಾಯಕರು ಎಂದಾಗಿದೆ ಎನ್ನುತ್ತಾರೆ. ಕೆಲವು ಐತಿಹ್ಯಗಳ ಪ್ರಕಾರ ಇವರು ಪಶುಪಾಲನೆ ಮಾಡುತ್ತಿದ್ದರೆಂದೂ ಇವರು ಶ್ರೀಶೈಲದ ಕಡೆಯಿಂದ ಪಶುಗಳನ್ನು ಮೇಯಿಸಿಕೊಳ್ಳುತ್ತ ಕರ್ನಾಟಕದ ಕಡೆಗೆ ಬಂದರೆಂದೂ ತಿಳಿಯುತ್ತದೆ. ಹಿಂದೆ ಒಬ್ಬ ಮುಂದೆ ಒಬ್ಬ ಇದ್ದರು. ಹಿಂದಿನವನು ಆಕಳ ಕರುವಿನ ಕಾಲು ಮುರಿದು ತಿನ್ನಲು ಶುರುಮಾಡಿದನಂತೆ. ಅದಕ್ಕೆ ಮುಂದಿದ್ದವನು “ನೀನು ಗೋಮಾಂಸ ತಿಂದೆ ನೀನು ಬ್ಯಾಡ” ಅಂತ ಅವನನ್ನು ಬಿಟ್ಟು ಮುಂದೆ ಬಂದನಂತೆ. ಮುಂದೆ ಬಂದವನು ‘ಕಾಡುಗೊಲ್ಲ’ ಆದ, ಹಿಂದೆ ಉಳಿದವನು ‘ಮ್ಯಾಸಬ್ಯಾಡ’ ಆದನಂತೆ. ಕಾಡುಗೊಲ್ಲರ ಬಗ್ಗೆ ನೀವು ಈಗಾಗಲೇ ಓದಿರಬಹುದು. ಹಾಗಾಗಿ ಮೇಯಿಸುವವರು>ಮೇಸುವವರು> ಮ್ಯಾಸರು ಆಗಿದೆಯಂತೆ. ಇನ್ನು ಕೆಲವರು ಕರುಚಿಗದು ತಿಂದವನು ಕಾಡಿನಲ್ಲೇ ಉಳಿದು ಮ್ಯಾಸನಾಯಕ ಆದ, ಊರಿಗೆ ಬಂದವನು ಊರನಾಯಕ ಆದ ಎನ್ನುತ್ತಾರೆ. ಊರನಾಯಕರಲ್ಲೂ ಮ್ಯಾಸನಾಯಕ ರಲ್ಲೂ ‘ಕೊಡುಕೊಳ್ಳುವ’ ಸಂಬಂಧವಿಲ್ಲ.

ಮ್ಯಾಸಬೇಡರ ಹುಟ್ಟಿಗೆ ಸಂಬಂಧಪಟ್ಟಂತೆ ದಾವಣಗೆರೆ ತಾಲ್ಲೂಕು ಲೋಕಿಕೆರೆ ಗ್ರಾಮದಲ್ಲಿ ಒಂದು ದಾಖಲೆಯಿದೆ. ಅದನ್ನು ಅವರು ‘ಕುಲಸ್ಥ ರೆಕಾರ್ಡು’ ಎನ್ನುತ್ತಾರೆ. ಸುಮಾರು ೩೦-೪೦ ವರ್ಷಗಳ ಹಿಂದೆ ಬರೆದಿರುವ ಕಾಗದದ ಈ ರೆಕಾರ್ಡಿನಲ್ಲಿ ತರ್ಕಬದ್ಧ ವಾದ ಒಂದು ದಾಖಲೆ ಇದೆ. ೧೪೧೫ನೇ ಇಸವಿಯಲ್ಲಿ ಭಾರತೀಯ ಶಬರ ಜನಾಂಗದಿಂದ ಮ್ಯಾಸ ಮಂಡಳಿಯು ಪ್ರತ್ಯೇಕಿಸಲ್ಪಟ್ಟಿತು ಎಂದು ನಿಖರವಾಗಿ ರೆಕಾರ್ಡು ಹೇಳುತ್ತದೆ. ಕಾರಣವೇನೆಂದರೆ ಮಂದಲ ಗೋತ್ರದಲ್ಲಿ ಹುಟ್ಟಿದವನಾದ ಕನಕದಾಸ ಎಂಬುವನು ಮೈಸೂರು ಬಳಿಯಿರುವ ತಿರುಮ ಕೂಡಲ ವ್ಯಾಸರಾಯ ಸ್ವಾಮಿಗಳ ಇಷ್ಟದ ಶಿಷ್ಯನಾಗಿದ್ದ ನಂತೆ. ಆತನು ‘ವ್ಯಾಸರಾಯ ಸಂಸೇವಿತಾಃ ಎಂದು ಹೇಳಿದ್ದರಿಂದ ಅವನ ಮುಂದಿನ ವಂಶಜರೆಲ್ಲ ಮ್ಯಾಸಬೇಡರಾದರು ಎಂದು ಹೇಳುತ್ತದೆ.

ಮ್ಯಾಸಬೇಡರು ಹೆಚ್ಚಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಕಂಡುಬರುತ್ತಾರೆ. ಇವರ ಗುಡಿಕಟ್ಟೆಗಳು, ಕಟ್ಟೆಮನೆಗಳು ಹೆಚ್ಚಾಗಿ ಇರುವುದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕಿನಲ್ಲಿ. ಈ ತಾಲ್ಲೂಕುಗಳಲ್ಲಿರುವ ಜನರೆಲ್ಲ ಮನೆಯಲ್ಲಿ ಮಾತನಾಡುವುದು ತೆಲುಗು. ಚಿತ್ರದುರ್ಗ, ದಾವಣಗೆರೆ ತಾಲ್ಲೂಕುಗಳಲ್ಲಿ ವಾಸಮಾಡುವ ಜನರಿಗೆ ತೆಲುಗು ಮರೆತುಹೋಗಿದ್ದರೂ ಅರ್ಥವಾಗುತ್ತದೆ ಎನ್ನುವುದನ್ನು ಗಮನಿಸಿದರೆ ಈ ಜನಾಂಗದವರು ಆಂಧ್ರ ಪ್ರದೇಶದ ಕಡೆಯಿಂದ ಬಂದವರಿರಬೇಕು ಎನಿಸುತ್ತದೆ. ಈ ಮಾತಿಗೆ ಇವರ ಕೆಲವು ಐತಿಹ್ಯಗಳು ಸಮರ್ಥನೆ ನೀಡುತ್ತವೆ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನಲ್ಲಿಯೂ ಇವರು ದಟ್ಟವಾಗಿ ಕಂಡು ಬರುತ್ತಾರೆ. ಮ್ಯಾಸಬೇಡರಲ್ಲಿಯೇ ಊರುಮ್ಯಾಸ, ಅಡವಿಮ್ಯಾಸ, ಕಳ್ಳೆಮ್ಯಾಸ ಮತ್ತು ಮುಂಜಿಮ್ಯಾಸ ಎಂಬ ನಾಲ್ಕು ಭೇದಗಳು ಇವೆ.

ಬೇಡರು ಎಂಬ ಹೆಸರೇ ಹೇಳುವಂತೆ ಇವರು ಮೊದಲು ಬೇಟೆಯಾಡುತ್ತಿದ್ದರು. ಬಿಲ್ಲು ಮತ್ತು ಭರ್ಜಿಗಳನ್ನು ಬಳಸುವುದರಲ್ಲಿ ಇವರು ನಿಷ್ಣಾತರಾಗಿದ್ದರು. ಬಲೆಗಳನ್ನು ಹಾಕಿ ಎಷ್ಟೋ ಪ್ರಾಣಿಗಳನ್ನು ಹಿಡಿಯುತ್ತಿದ್ದರು. ಬೇಟೆಯಲ್ಲಿ ಇವರ ಸಾಹಸ ಪ್ರವೃತ್ತಿ ಕಂಡು ಬರುತ್ತಿದ್ದುದು ಮಾತ್ರವಲ್ಲದೆ ಜೀವನೋಪಾಯವೂ ಸಹ ನಡೆಯುತ್ತಿತ್ತು. ಈಗ ಕಾಡುಗಳು ನಾಶವಾಗಿರುವುದರಿಂದ ತಮ್ಮ ವೃತ್ತಿಯನ್ನು ಬದಲಾಯಿಸಿಕೊಂಡಿದ್ದರೂ ತಮ್ಮ ಕುಲಕಸುಬು ನೆನಪು ಮಾಡಿಕೊಳ್ಳಲು ವರ್ಷಕ್ಕೊಮ್ಮೆ ಯುಗಾದಿಯ ದಿವಸ ಬೇಟೆಯಾಡಿ, ತಂದ ಪ್ರಾಣಿಗಳನ್ನು ಊರಲ್ಲೆಲ್ಲ ಮೆರವಣಿಗೆ ಮಾಡಿ ಪಾಲು ಹಾಕಿಕೊಳ್ಳುತ್ತಾರೆ. ಮಿಕ ಅಥವಾ ಕಾಡುಹಂದಿ ಸಿಕ್ಕರೆ ಅದನ್ನು ಮೆರವಣಿಗೆ ಮಾಡಿದ ನಂತರ ತಿನ್ನುವವರಿಗೆ ಕೊಡುತ್ತಾರೆ ತಾವು ತಿನ್ನುವುದಿಲ್ಲ.

ಕೆಲವು ಐತಿಹ್ಯಗಳ ಪ್ರಕಾರ ಇವರು ರಾಜರಾಗಿದ್ದರಂತೆ. ಮ್ಯಾಸರಾಜರು ಎಂದೇ ಎಲ್ಲರೂ ಇವರನ್ನು ಕರೆಯುತ್ತಿದ್ದರಂತೆ. ಪರುಶುರಾಮ ಭೂ ಪ್ರದಕ್ಷಿಣೆ ಮಾಡುತ್ತ ರಾಜರನ್ನೆಲ್ಲ ಕೊಲ್ಲುತ್ತಾನೆ ಎಂದು ಗೊತ್ತಾದಾಕ್ಷಣ ರಾಜರ ವೇಷ ಮರೆಸಿ ಕುರಿ ಹಸುಗಳನ್ನು ಮೇಯಿಸುತ್ತ ಹೊರಟರಂತೆ. ಆವಾಗಿನಿಂದ ಮೇಯಿಸುವವರು, ಮೇಸೋರ, ಮ್ಯಾಸರು ಆದೆವು ಎನ್ನುತ್ತಾರೆ.

ವಿಜಯನಗರ ಸಾಮ್ರಾಜ್ಯದಲ್ಲಿ ನಾವು ಮೀಸಲು ಪಡೆಯವರಾಗಿದ್ದೆವು ಎಂಬುದು ಹಲವರ ಅಭಿಪ್ರಾಯ. ಗುಡ್ಡಗಾಡುಗಳಲ್ಲಿ, ಕಣಿವೆ ಕಂದರಗಳಲ್ಲಿ ನಡೆಯುವ ಕಷ್ಟಕರ ಯುದ್ಧಗಳಲ್ಲೆಲ್ಲ ಇವರ ಪೂರ್ವಜರು ಭಾಗವಹಿಸಿದ್ದರಂತೆ. ರಾಮರಾಯನ ಹೆಸರನ್ನಂತೂ ಸ್ಪಷ್ಟವಾಗಿ ಹೇಳುತ್ತಾರೆ. ಮ್ಯಾಸಬೇಡರು ಹಂದಿ ಮತ್ತು ಕೋಳಿ ತಿನ್ನದೇ ಇರುವುದಕ್ಕೂ ರಾಮರಾಯನಿಗೂ, ಮುಸಲ್ಮಾನರಿಗೂ ನಂಟು ಹಚ್ಚಿ ಹೇಳುತ್ತಾರೆ. ಈ ಜನಾಂಗದವರು ಕೆಲವು ಪಾಳೆಯಪಟ್ಟುಗಳಲ್ಲಿ ಬೇಹುಗಾರರಾಗಿಯೂ ಕೆಲಸ ಮಾಡಿದಂತೆ ಕಂಡುಬರುತ್ತದೆ.

ಮಾರಮ್ಮನ ಪೆಟ್ಟಿಗೆ ಹೊತ್ತು ಕೊಂಡು ಚಾಟಿಯಲ್ಲಿ ಮೈಗೆ ಹೊಡೆದುಕೊಳ್ಳುತ್ತ ಆ ಭಕ್ತ ಈ ಭಕ್ತರು ಕೊಟ್ಟ ಕಾಣಿಕೆಗಳು ಎಂದು ತೋರಿಸುತ್ತ ಭಿಕ್ಷೆ ಬೇಡುವ ‘ಊರೂರು ಮಾರಮ್ಮ’ನವರು, ಕಾಡು ಸುಂದರಾಂಗನಂತೆ ಸೊಂಟಕ್ಕೆ ಎಲೆಗಳನ್ನು ಸುತ್ತಿ ತಲೆಯ ಜಟೆಗೆ ನವಿಲುಗರಿ ಸಿಕ್ಕಿಸಿ ಏಕತಾರಿ ಹಿಡಿದು ಕಣಿಶಾಸ್ತ್ರ, ವೈದ್ಯಶಾಸ್ತ್ರ ಹೇಳುವ ‘ಕೊಂಡ ಮಾಮುಡು’ ಅವರು ಮತ್ತು ಮನೆಯ ಮುಂದೆ ಲಂಗೋಟಿ ಹಾಕಿಕೊಂಡು ಕೂತು ಕೈಯಲ್ಲಿನ ಕಡಗಕ್ಕೆ ಇನ್ನೊಂದು ಲೋಹದ ತುಂಡಿನಿಂದ ಬಡಿಯುತ್ತ ಹಾಡುತ್ತ ಭಿಕ್ಷೆ ಬೇಡುವ ‘ಜಗಮಂಡ’ರು ಮ್ಯಾಸಬೇಡರು ಎನ್ನುತ್ತಾರೆ. ಆಗಿನ ಕಾಲದಲ್ಲಿ ಬೇಹುಗಾರರಾಗಿ ವೇಷ ಬದಲಿಸಿ ಹೊರಟವರು ಅದೇ ವೇಷಗಳಲ್ಲಿಯೇ ಉಳಿದಿದ್ದಾರೆ.

ಹಳ್ಳಿಗಳಲ್ಲಿ ಮಾರಮ್ಮನ ಜಾತ್ರೆಯಾದರೆ ‘ಗಾಂವಗುರಿ’ (ಚಿಕ್ಕ ಮೇಕೆ ಮರಿ) ಜಿಗಿಯು ವವರು ಮ್ಯಾಸಬೇಡರೇ. ರಥೋತ್ಸವದಲ್ಲಿ ಓಕಳಿ ಆಡುವವರು ಇವರ ಜನಾಂಗದ ‘ಮುದ್ರೆ ಒತ್ತಿಸಿಕೊಂಡ’ ಅಥವಾ ‘ದೇವರನ್ನು ಹೊತ್ತ’ ಹೆಂಗಸರೇ. ಈಗ ಕಾಲ ಬದಲಾಗಿದೆ.

ಹಳೆಯ ವೃತ್ತಿಯಲ್ಲಿ ಹೊಟ್ಟೆ ಹೊರೆಯುವುದು ಕಷ್ಟವಾಗಿರುವುದರಿಂದ ಮ್ಯಾಸಬೇಡರು ಕೂಲಿ ಮಾಡಲು ಶುರು ಮಾಡಿದ್ದಾರೆ. ಸರಕಾರದಿಂದ ದರಖಾಸ್ತು ತೆಗೆದುಕೊಂಡಿರುವವರು ಸ್ವಂತ ವ್ಯವಸಾಯ ಮಾಡುತ್ತಿದ್ದಾರೆ. ಬಿಡುವು ಸಿಕ್ಕಾಗ ಬಲೆಹಾಕಿ ಕವುಜುಗ, ಮೊಲ, ಜಿಂಕೆ, ಚಿಗರಿ ಮುಂತಾದ ಪಕ್ಷಿಪ್ರಾಣಿಗಳನ್ನು ಹಿಡಿದು ಸಮಾಧಾನ ಪಟ್ಟುಕೊಳ್ಳುತ್ತಾರೆ.

ಕೃಪೆ : ಮ್ಯಾಸಬೇಡರು

* * *