ಬೇಡನಾಯಕರ ಜನಾಂಗವು ಭಾರತದ ಪ್ರಾಚೀನ ಜನಾಂಗಗಳಲ್ಲಿ ಪ್ರಮುಖವಾದ ಪುರಾತನ ಜನಾಂಗ. ಆದಿಯಲ್ಲಿ ಇಪ್ಪತ್ತೆರಡು ಕುಲದ ಬೇಟೆಗಾರರು ಪರಸ್ಪರ ವೈವಾಹಿಕ ಸಂಪರ್ಕಗಳನ್ನು ರೂಢಿಸಿಕೊಂಡು ಒಂದು ಸಮಗ್ರವಾದ ಬೇಡರ ಜನಾಂಗವಾಗಿ ಪರಿಣಮಿಸಿದ್ದಾರೆ.

ಎಲ್ಲ ಜನಾಂಗಗಳಲ್ಲಿ ಸ್ವಗೋತ್ರ ವಿವಾಹವು ನಿಷಿದ್ಧವಾಗಿರುವಂತೆಯೇ ಬೇಡ ನಾಯಕರಲ್ಲಿ ಕೂಡ ಸ್ವಗೋತ್ರ ವಿವಾಹ ನಿಷಿದ್ಧ. ಇಂತಹ ಗೋತ್ರಗಳು ಒಟ್ಟು ೨೨ ಇವೆ. ಇವುಗಳಲ್ಲಿ ಹನ್ನೊಂದು ಗೋತ್ರಗಳನ್ನು ಸೂರ‍್ಯವಂಶವೆಂದೂ ಉಳಿದ ಹನ್ನೊಂದು ಗೋತ್ರಗಳನ್ನು ಚಂದ್ರವಂಶವೆಂದೂ ಕಳೆದ ಶತಮಾನದಲ್ಲಿ ಪೌರಾಣಿಕರು ಕೃತಕವಾಗಿ ವಿಂಗಡಿಸಿಕೊಂಡಿದ್ದರು. ಆದರೆ ಪ್ರಾಚೀನ ಪರಂಪರೆಯಲ್ಲಿ ಸೂರ‍್ಯವಂಶ ಚಂದ್ರವಂಶವೆಂಬ ಆರ‍್ಯ ಮಾದರಿಯ ಕಲ್ಪನೆ ಇರಲಿಲ್ಲ. ಒಟ್ಟಿನಲ್ಲಿ ಕೆಲವು ಗೋತ್ರಗಳ ಮಂದಿಗೆ ಇತರ ಗೋತ್ರಗಳ ಮಂದಿಗಳು ಸಾಲುವಳಿಯಾಗುತ್ತಿದ್ದರು. ಈಗಲೂ ಹಾಗೆಯೇ ನಡೆದು ಬರುತ್ತಿದೆ.

ಈ ೨೨ ಗೋತ್ರಗಳನ್ನೇ ಹಿಂದೆ ಕುಲಗಳೆಂದೂ ಕೆಲವೊಮ್ಮೆ ವಂಶಗಳೆಂದೂ ಕರೆಯು ತ್ತಿದ್ದರು. ಆದರೆ ಇವಕ್ಕೆ ಬೇಡರ ಜನಾಂಗದಲ್ಲಿ ನಿರ್ಧಿಷ್ಟವಾಗಿ ‘ಬೆಡಗು’ಗಳೆಂಬ ಪಾರಿಭಾಷಿಕ ಶಬ್ದವು ಬಳಕೆಯಲ್ಲಿದೆ. ಇದು ಬೇಡರ ಜಾತಿಯ ಸ್ವಂತ ಶಬ್ದ ಮತ್ತು ಈ ಶಬ್ದದ ಮೂಲಕವೂ ಕೂಡ ಪುರಾತನವೇ. ಇದು ಶುದ್ಧ ದ್ರಾವಿಡ ಶಬ್ದ (ವೇಡನ್+ಕು+ ವೇಡಂಕು>ವೆಡಂಗು>ಬೆಡಂಗು>ಬೆಡಗು) ಬ್ರಾಹ್ಮಣನ ಬ್ರಾಹ್ಮಣತನಕ್ಕೆ ಬ್ರಾಹ್ಮಣ್ಯವೆಂದು ಹೆಸರು. ಹಾಗೆಯೇ ಬೇಡನ ಬೇಡತನಕ್ಕೆ ‘ಬೆಡಗು’ ಎಂದು ಹೆಸರು.

ಈ ಬೆಡುಗಗಳು ಬ್ರಾಹ್ಮಣರಲ್ಲಿನ ಗೋತ್ರಗಳಿರುವಂತೆ ಋಷಿ ಮೂಲವಾದುವಲ್ಲ. ಇವುಗಳ ಮೂಲ ಅರ್ಥ ಇಂದಿಗೂ ಯಾರಿಗೂ ಗೊತ್ತಾಗುವುದಿಲ್ಲ. ಆದರೆ ಬಹಳ ಮಂದಿ ನಾಯಕರು ಈ ಬೆಡಗುಗಳನ್ನು ತೆಲುಗು ಭಾಷೆಯ ಪದಗಳೆಂದು ಗ್ರಹಿಸಿ ಅವುಗಳಿಗೆ ಕನ್ನಡ ಅನುವಾದ ಮಾಡಿಕೊಂಡಿದ್ದಾರೆ. ಹೇಗೆಂದರೆ ‘ಪಾಮಲೋರು’ ಎಂಬ ಬೆಡಗನ್ನು ‘ಹಾವಿನೋರು’ ಎಂದೂ ‘ಪಾಲೋರು’ ಎಂಬುದನ್ನು ‘ಹಾಲೋರು’ ಎಂದೂ ಅನುವಾದ ಮಾಡುತ್ತಾರೆ. ಇದು ಸರಿಯಲ್ಲ. ಹೇಗೆಂದರೆ, ಹೊಯ್ಸಳರ ಕಾಲದ ಮಹಾ ಸಾಮಂತರು ಗಳಾಗಿದ್ದ ಕರಡಿಹಾಳಿನ (ತಿಪಟೂರು ತಾಲ್ಲೂಕು) ಕನ್ನಡ ಬೇಡನಾಯಕರು ತಮ್ಮ ಕುಲವನ್ನು ಎರ್ತ್ತಿಲ ಕುಲ | ಯತ್ತಿರ್ಲ ಕುಲ ಎಂದು ಹೇಳುತ್ತಾರೆ. ನಾವು ಇದನ್ನು ತೆಲುಗಿನಲ್ಲಿ ‘ಎದ್ದುಲೋರು’ ಎಂಬ ರೂಪದಲ್ಲಿ ಕಾಣಬಹುದು.

ಮತ್ತೆ ಕೆಲವು ಜನರು ಕೆಲವು ಬೆಡಗುಗಳ ರೂಪವನ್ನು ತಮಗೆ ತೋಚಿದಂತೆಲ್ಲ ಅರ್ಥೈಸಿ ಅವುಗಳನ್ನು ವಿಸ್ತರಿಸಿ ಹೊಸ ರೂಪಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಹೇಗೆಂದರೆ ‘ಮಂದಲೋರು’ ಎಂಬ ಬೆಡಗನ್ನು ‘ಮಂದಲಿಗೆಯೋರು’ ಎಂದೂ, ‘ಮಂಡಲದೋರು’ ಎಂದೂ ವಿಸ್ತರಿಸಿದ್ದಾರೆ. ‘ಗುಜ್ಜಲೋರು’ ಎಂಬುದನ್ನು ‘ಗುದ್ದಲಿಯೋರು’ ಎಂದು ವಿಕೃತ ಗೊಳಿಸಿದ್ದಾರೆ.

ಮತ್ತೆ ಕೆಲವು ಹಳೆಯ ಪೀಳಿಗೆಯ ಜನರು ವಾಲ್ಮೀಕಿಗೆ ವ್ಯಾಧ ಸ್ತ್ರೀಯಲ್ಲಿ ಹುಟ್ಟಿದ ಮಕ್ಕಳಿಂದ ಈ ಗೋತ್ರಗಳು ಸೃಷ್ಟಿಯಾದುವೆಂದು ಕತೆ ಕಟ್ಟಿದ್ದಾರೆ. ಆದರೆ ಈ ಬೆಡುಗಗಳ ಪುರಾತನ ರೂಪಗಳನ್ನು ಪ್ರಾಚೀನ ಶಿಲಾಶಾಸನಗಳಲ್ಲಿ ದೊರಕುವ ಉಲ್ಲೇಖಗಳ ಮೂಲಕ ಆಳವಾಗಿ ಅಧ್ಯಯನ ಮಾಡಿದರೆ ಕೆಲವು ಹೊಸ ಸಂಗತಿಗಳು ಬೆಳಕಿಗೆ ಬರುತ್ತವೆ. ಇಲ್ಲಿ ಒಂದೆರಡು ಉದಾಹರಣೆಗಳನ್ನು ಮಾತ್ರ ಕೊಡುತ್ತೇನೆ.

ಬೇಡನಾಯಕರಲ್ಲಿ ‘ಮನುಮಲೋರು’ ಎಂಬ ಒಂದು ಬೆಡಗಿದೆ. ಈ ಬೆಡಗಿನ ನಾಯಕರು ೧೮ನೆಯ ಶತಮಾನದಲ್ಲಿ ಮತ್ತೋಡಿನಲ್ಲಿ ಪಾಳೆಯಗಾರರಾಗಿದ್ದರು ಮತ್ತು ಅದಕ್ಕೂ ಮುಂಚೆ ಕಾಕತೀಯರ ಕಾಲದಲ್ಲಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ‘ಮನುಮಕುಲ ಮಾಂಧಾತ’ ಎಂಬ ಬಿರುದನ್ನು ಪಡೆದುಕೊಂಡು ರಾಜ್ಯವಾಳುತ್ತಿದ್ದರು. ಇದೇ ಬೆಡಗಿನ ನಾಯಕರನ್ನು ಈಗಿನ ಕಾಲದಲ್ಲಿ ತೆಲುಗಿನಲ್ಲಿ ‘ಮನೇರವಾಂಡ್ಲು’ ಎಂದೂ, ಕನ್ನಡದಲ್ಲಿ ‘ಮಿನಗಲೋರು | ಮೀನು ಕುಲದವರು ಎಂದೂ ಕರೆಯುತ್ತಾರೆ. ಈ ಬೆಡಗಿನ ಮೂಲ ಸ್ವರೂಪವೇನು ಎಂಬುದು ನಮಗೆ ಆಂಧ್ರಪ್ರದೇಶದ ಒಂದು ಪ್ರಾಚೀನ ಶಾಸನದಿಂದ ತಿಳಿದುಬರುತ್ತದೆ.

ಗುಂಟೂರು ಜಿಲ್ಲೆಯ ಸತ್ತೇನಪಲ್ಲಿಯ ಬಳಿಯ ಮದಿಪಾಡು ಎಂಬಲ್ಲಿನ ಕ್ರಿ.ಶ. ೧೨೨೦ರ ಮುಂಚೆನಾಯಕನ ಶಾಸನದಲ್ಲಿ ಆತನು ತನ್ನನ್ನು ‘ಮನುಮ’ ಕುಲದವನು ಎಂದು ಹೇಳಿರುವುದೇ ಅಲ್ಲದೆ ತನ್ನ ವಂಶವನ್ನು ‘ಪೆನುಂಗುಲವಂಶ’ವೆಂದು ಹೇಳಿ ಕೊಂಡಿದ್ದಾನೆ. (S I I. ೨೬೫) ಬೇಡರ ಜಾತಿಯಲ್ಲಿ ‘ಪೆನುಂಗಲ’ ವಂಶವೆಂಬುದು ಯಾವುದು? ಎಲ್ಲಿದೆ? ಈಗ ಯಾವ ರೂಪದಲ್ಲಿದೆ? ಈ ಪ್ರಶ್ನೆಗೆ ಉತ್ತರ ಮಲಬಾರಿನ ಉತ್ತರ ಭಾಗದ ಕಾಡು ಬೇಡರಲ್ಲಿ ನಮಗೆ ದೊರಕುತ್ತದೆ (ನೋಡಿ. L.K.A. Iyer : Mysore Tribes and Castes, Vol. III). ಉತ್ತರ ಮಲಬಾರಿನಲ್ಲಿ ‘ಪೆರಿಂಗಳ ವೇಟ್ಟುವನ್’ ಎಂಬ ಕಾಡು ಬೇಡರಿದ್ದಾರೆ. ‘ವೇಟ್ಟುವನ್’ ಎಂದರೆ ಬೇಟೆಗಾರ ಎಂದರ್ಥ. ಆದರೆ ಪೆರಿಂಗಳ ಎಂದರೇನು? ಈಗ ಮದಿಪಾಡು ಶಾಸನದ ‘ಪೆನುಂಗುಲ’ ವಂಶಕ್ಕೂ ಮತ್ತು ಮಲಬಾರಿನ ‘ಪೆರಿಂಗಳ’ವಂಶಕ್ಕೂ ಇರುವ ಧ್ವನಿ ಸಾಮ್ಯವನ್ನು ಗುರುತಿಸಿ, ಭಾಷಾ ವಿಜ್ಞಾನದ ಪ್ರಕಾರ – ರ- ಕಾರವು- ಲ- ಕಾರವಾಗಿ ನಂತರ- ನ- ಕಾರವಾಗಿ ಪರಿಣಮಿಸುವುದು ಶಾಸ್ತ್ರ ಸಮ್ಮತವೂ ಸ್ವಾಭಾವಿಕ ಧ್ವನಿ ನಿಯಮವೂ ಆಗಿದೆ. ಹೇಗೆಂದರೆ- ಪೆರುಕೊಂಡ> ಪೆನುಗೊಂಡ. ಇದೇ ಧ್ವನಿ ನಿಯಮಕ್ಕನುಸಾರವಾಗಿ ಪೆರಿಂಗಳ ಮತ್ತು ಪೆನುಂಗಲ ಎರಡೂ ಒಂದೇ ಎಂಬುದರಲ್ಲಿ ಯಾವ ಅನುಮಾನವೂ ಉಳಿಯುವುದಿಲ್ಲ.

ಇನ್ನೊಂದು ಉದಾಹರಣೆಯನ್ನು ನೋಡಿ. ಬೇಡನಾಯಕರಲ್ಲಿ ‘ಮೋರ್ಕಾಲೋರು’ ಅಥವಾ ‘ಪೆದಮ್ಯಾಕಲೋರು’ ಎಂಬ ಗೋತ್ರವಿದೆ. ಇನ್ನೊಂದು ಗೋತ್ರ ‘ಬುಟಕಲೋರು’ ಎಂಬುದು. ಇವು ಎರಡೂ ಉಚ್ಛಾರಣೆಯ ದೃಷ್ಟಿಯಲ್ಲಿ ಬೇರೆ ಬೇರೆಯೆಂಬಂತೆ ಕಂಡು ಬರುತ್ತವೆಯಾದರೂ ಇವುಗಳ ಪುರಾತನ ರೂಪವನ್ನು ಪತ್ತೆ ಹಚ್ಚಿದ್ದಾಗ ಇವೆರಡೂ ಬೇರೆ ಬೇರೆಯಲ್ಲ ಒಂದೇ ಎಂದು ತಿಳಿದು ನಮಗೆ ಆಶ್ಚರ್ಯವಾಗುತ್ತದೆ. ಹೇಗೆಂದರೆ, ಇಲ್ಲಿಗೆ ಸುಮಾರು ೬೭೦ ವರ್ಷಗಳ ಹಿಂದೆ ಮುಮ್ಮಡಿ ಬಲ್ಲಾಳನ ಆಳ್ವಿಕೆಯಲ್ಲಿ ತೆರಕಣಾಂಬಿಯಲ್ಲಿ ಹೊಯ್ಸಳ ಸಾಮ್ರಾಜ್ಯದ ಪ್ರತಿನಿಧಿಯಾಗಿ ರಾಜ್ಯವಾಳುತ್ತಿದ್ದ ಪೆರುಮಾಳೆ ದಣ್ಣಾಯಕನ ಪುತ್ರ ರಮಾಧವ ದಣ್ಣಾಯಕನು ತನ್ನ ಕುಲವನ್ನು ‘ಮೊಡಕುಲಯಕುಲ’ ಎಂದು ಹೇಳಿಕೊಂಡಿರುವುದನ್ನು ನಾವು ಗಮನಿಸಬಹುದು (ಎಫಿಗ್ರಾಫಿಯ ಕರ್ಣಾಟಕ, ಸಂ. ೩, ೧೫೨-೧೫೩).

ಈ ಮೋಡಕುಲಯ ಅಥವಾ ಮೊಡಕುಲ ಎಂಬುದು ಆ ದಣ್ಣಾಯಕರ ಮನೆತನದ ಬೆಡಗು. ಇಂದು ಅದೇ ಬೆಡಗು ಹಳೆಯ ಮೈಸೂರು ಪ್ರಾಂತದ ದಕ್ಷಿಣ ಭಾಗಗಳಲ್ಲಿ ವಾಸಿಸುತ್ತಿರುವ ಬೇಡನಾಯಕರಲ್ಲಿ ‘ಮೋರ್ಕಾಲೋರು’ ಎಂತಲೂ, ಮುಂಬಯಿ ಕರ್ಣಾಟಕ ದಲ್ಲಿ ‘ಬುಡಕ್ಲ’ ಎಂತಲೂ, ಚಿತ್ರದುರ್ಗ, ನಿಡುಗಲ್ಲು, ವೈ.ಎನ್. ಹೊಸಕೋಟೆಗಳ ಸುತ್ತಿನಲ್ಲಿ ‘ಬುಟಕಲೋರು’ ಎಂತಲೂ ದೊರೆಯುತ್ತದೆ. ಇವುಗಳ ನಿಷ್ಪತ್ತಿ ಹೇಗೆಂದರೆ,- ಮೊಡಕಲು > ಮೊರಕ್ಲವಾರು > ಮೊರಕಲೋರು > ಮೋರ್ಕಾಲೋರು; ಮತ್ತು; ಮೊಡಕುಲ > ಮೊಡಕ್ಲ > ವೊಡಕ್ಲ > ಬೊಡಕ್ಲ > ಬುಟಕ್ಲ + ವಾರು > ಬುಟಕಲೋರು.

ಮತ್ತೊಂದು ಉದಾಹರಣೆಯನ್ನು ನೋಡಿ – ಸೇಲಂ ಜಿಲ್ಲೆಯ ಧರ್ಮಪುರಿ ತಾಲ್ಲೂಕಿನ ಅಧಮನ ಕೋಟೆಯಲ್ಲಿ ಕ್ರಿ.ಶ. ೧೫೩೦ರಲ್ಲಿ ರಾಜ್ಯವನ್ನಾಳುತ್ತಿದ್ದ ಕಾಮಿಯಪ್ಪ ನಾಯಕ ನೆಂಬ ಕನ್ನಡ ಬೇಡನಾಯಕನು ತನ್ನ ಕುಲವನ್ನು ‘ಪಾಲುವಲ್ಲಟ’ ಕುಲವೆಂದು ಹೇಳಿ ಕೊಂಡಿದ್ದಾನೆ. ಇದೇ ಬೆಡಗು ಇಂದು ಚಿತ್ರದುರ್ಗದ ಸುತ್ತಮುತ್ತ ‘ಪಾಂಬಟ್ಲೋರು’ ಎಂಬ ರೂಪದಲ್ಲಿ ದೊರಕುತ್ತದೆ. ತುಮಕೂರಿನ ದಕ್ಷಿಣಕ್ಕೆ ಬರುಬರುತ್ತಾ ಇದೇ ಬೆಡಗು ‘ಹಾಲುಮಲ್ಲೋರು’ ಎಂಬ ರೂಪದಲ್ಲಿ ಬಳಕೆಯಲ್ಲಿದೆ. ಇದೇ ಬೆಡಗು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನರಸರಾವ್ ಪೇಟೆ ಎಂಬಲ್ಲಿನ ಒಂದು ಪ್ರಾಚೀನ ಶಾಸನದಲ್ಲಿ ‘ವಲಉಟ್ಲ’ ವಂಶವೆಂದು ಹೇಳಲ್ಪಟ್ಟಿದೆ (South Indian Incriptions, x. 442).

ಹೀಗೆ ಒಂದೇ ಬೆಡುಗು ಅನೇಕ ರೂಪಗಳನ್ನು ತಳೆದಿರುವುದನ್ನು ನಾವು ಪರೀಕ್ಷಿಸ ಬಹುದು. ಹೀಗೆ ಇಂದು ಬಳಕೆಯಲ್ಲಿರುವ ಬೇಡರ ‘ಬೆಡಗು’ಗಳ ಪುರಾತನ ಇತಿಹಾಸವು ಬಹಳ ಕುತೂಹಲಕಾರಿಯಾಗಿದೆ.

ಆದಿಯಿಂದಲೂ ೨೨ ಬೆಡಗುಗಳ ಬೇಡರು ಪರಸ್ಪರ ವೈವಾಹಿಕ ಸಂಪರ್ಕಗಳನ್ನು ಬೆಳಸಿಕೊಂಡು ಒಂದು ಅಖಂಡವಾದ ಜನಾಂಗವಾಗಿ ಬೆಳೆದು ಬಂದಿದ್ದಾರೆ. ಆದುದರಿಂದ ವಿವಾಹ ಪ್ರಸಂಗಗಳಲ್ಲಿ ಈ ಬೆಡಗುಗಳ ಮಹತ್ವ ಅನಿವಾರ್ಯವಾಗಿದೆ. ಇವುಗಳಿಂದಲೇ ಬೇಡರ ಜನಾಂಗದ ಸಾಮಾಜಿಕ ಅಂತರ ರಚನೆಯು ನಿರಂತರವಾಗಿ ಇಲ್ಲಿಯವರೆಗೆ ಉಳಿದುಬಂದಿದೆ.

ಈ ಬೆಡಗುಗಳಿಂದ ಇನ್ನೂ ಅನೇಕ ಹೆಚ್ಚಿನ ವಿಷಯಗಳನ್ನು ನಾವು ಕಂಡು ಹಿಡಿಯ ಬಹುದಾಗಿದೆ. ಹೇಗೆಂದರೆ, ಇವೇ ಬೆಡಗುಗಳು ಆರ್ಯ ವೈಶ್ಯರೆಂದು ಹೇಳಿಕೊಳ್ಳುವ ತೆಲುಗು ಭಾಷಿಕರಾದ ಕೋಮಟಿ ಶೆಟ್ಟರ ಜನಾಂಗದಲ್ಲಿಯೂ ಬಳಕೆಯಲ್ಲಿವೆ. ಬೇಡರ ಬೆಡಗುಗಳ ಪರ ಜಾತಿಯವರಾದ ಕೋಮಟಿಗಳಲ್ಲಿ ಹೇಗೆ ಕುಲಗಳೆಂದು ಕರೆಯಿಸಿ ಕೊಳ್ಳುತ್ತಿವೆ? ಎಂದು ನಮಗೆ ಸೋಜಿಗವಾಗುತ್ತದೆ. ಇದರ ಉತ್ತರ ಇಷ್ಟೆ. ಇವೆರಡೂ ಜನಾಂಗಗಳು ಮೂಲದಲ್ಲಿ ಒಂದೇ Proto-australoid ಬುಡಕಟ್ಟಿಗೆ ಸೇರಿದಂತಹವು. ಆದುದರಿಂದ ಎರಡು ಜನಾಂಗಗಳಲ್ಲಿಯೂ ಅವೇ ಕುಲಗಳು ಉಳಿದುಬಂದಿವೆ.

ಲಿಂಗಾಯಿತ ಸಾಧು ಜನಾಂಗ ಅಥವಾ ‘ಸಾದರು’ ಜಾತಿಯಲ್ಲಿಯೂ ಸಾವಂತಲೋರು, ಎಮ್ಮೆಯೋರು, ಸೆಟಪುತ್ಲೋರು ಆದಿಯಾಗಿ ಕೆಲವು ಬೆಡಗುಗಳು ಉಳಿದುಕೊಂಡಿವೆ. ಅದೇಕೆ ಹಾಗೆ ಎಂದರೆ ೧೨ ಮತ್ತು ೧೮ನೆಯ ಶತಮಾನದಲ್ಲಿ ಹರಪನಹಳ್ಳಿ ಪಾಳೆಯಗಾರರು, ಮತ್ತೋಡಿನ ಪಾಳೆಯಗಾರರು, ಗುಡೇಕೋಟೆ-ಬಾಣರಾವಿಯ ಪಾಳೆಯಗಾರರು, ರಾಯದುರ್ಗದವರು ಮುಂತಾಗಿ ಅಸಂಖ್ಯಾತವಾಗಿ ಬೇಡನಾಯಕರು ವೀರಶೈವ ಧರ್ಮಕ್ಕೆ ಪರಿವರ್ತಿತರಾಗಿ ಜಾತಿಯನ್ನು ಬಿಟ್ಟು ಹೋದರು. ಆದರೂ ಅವರದೇ ಒಂದು ಜಾತಿಯಾಗಿ ಪರಿಣಮಿಸಿ, ಅವರಲ್ಲಿ ತಮ್ಮ ಪೂರ್ವಜರ ಬೆಡಗುಗಳನ್ನು ಬಿಡಲಾಗಲಿಲ್ಲ. ಆದ್ದರಿಂದ ‘ಸಾದರು’ ಜಾತಿಯಲ್ಲಿ ಇಂದಿಗೂ ಬೆಡಗುಗಳಿವೆ. ಹೀಗೆ ಅಧ್ಯಯನ ಮಾಡಿದರೆ ಶಿಲಾಯುಗ ದಷ್ಟು ಹಿಂದಕ್ಕೆ ಬೇಡರ ಬುಡಕಟ್ಟುಗಳ ಮೂಲವನ್ನು ಪತ್ತೆಹಚ್ಚಬಹುದು. ಈ ರೀತಿಯ ಅಧ್ಯಯನವು ಬೇಡ ಜನಾಂಗದ ವಿಕಾಸವನ್ನು ವಿವರಿಸುವುದಲ್ಲದೆ ನಮ್ಮ ಸಮಾಜ ವ್ಯವಸ್ಥೆಯಲ್ಲಿ ನಡೆದು ಬಂದಿರುವ ಬೆಳವಣಿಗೆಯನ್ನು ತಿಳಿಸುತ್ತದೆ.

ಕೃಪೆ : ವಾಲ್ಮೀಕಿ ಸಂಪದ

* * *