ಬೇರೆ ಬೇರೆ ಪ್ರದೇಶಗಳಲ್ಲಿ ಕಾಲದಲ್ಲಿ ಜೀವಿಸಿದ ಈಗಲೂ ಜೀವಿಸುತ್ತಿರುವ ಮೇಲಿನ ಮೂರೂ ಜನಾಂಗಗಳು ಮೂಲತಃ ಒಂದೇ ಜನಾಂಗದ ಬುಡಕಟ್ಟಿಗೆ ಸೇರಿದವುಗಳೇ ಎಂಬ ವಿಷಯವನ್ನು ಹೋಲಿಸಿ ನೋಡುವುದು ಈ ಲೇಖನದ ಉದ್ದೇಶವಾಗಿದೆ.

ಕೇರಳದ ಚೇರರು (ರಾಜರು), ನಾಯರರು ಇವರುಗಳ ಬಗ್ಗೆ ವಿದೇಶಿ ಪ್ರವಾಸಿ “ದುಅರ್ತೆ ಬಾರ್ಬೋಸಾ” ಇವರ ವಿವರಗಳನ್ನು ಗಮನಿಸಿ. (ನೋಡಿ ಪ್ರವಾಸಿ ಕಂಡ ಇಂಡಿಯಾ ಭಾಗ-೨ ಅನುವಾದ ಡಾಕ್ಟರ್ ಹೆಚ್.ಎಲ್. ನಾಗೇಗೌಡ ಪುಟ ೩೦೪ ರಿಂದ ೩೨೪)

೧. ಮಲಾಬಾರಿನ ರಾಜರುಗಳು ಜುಂಟೈಲರು (ಹಿಂದೂಗಳು) ಮತ್ತು ವಿಗ್ರಹಾರಾಧಕರು. ಇವರು ಮದುವೆಯಾಗುವುದಿಲ್ಲ; ಮತ್ತು ಇವರಲ್ಲಿ ವಿವಾಹದ ವಿಧಿಗಳಿಲ್ಲ. ನಾಯರ್ ಜಾತಿಗೆ ಸೇರಿದ ಒಳ್ಳೆಯ ಮನೆತನದ ಸುಂದರ ಹೆಣ್ಣುಗಳನ್ನು ಇಟ್ಟುಕೊಳ್ಳುತ್ತಾರೆ. ಹೀಗೆ ಇಟ್ಟುಕೊಂಡ ಸ್ತ್ರೀಯರ ಹೊಟ್ಟೆಯಲ್ಲಿ ಹುಟ್ಟಿದ ಗಂಡು ಮಕ್ಕಳು ರಾಜನ ಮಕ್ಕಳೆಂದು, ಇವರು ರಾಜ್ಯಕ್ಕೆ ಉತ್ತರಾಧಿಕಾರಿಗಳೆಂದು ಭಾವಿಸುವುದಿಲ್ಲ, ಅವರು ತಾಯಿಯ ಆಸ್ತಿಗೆ ಮಾತ್ರ ಹಕ್ಕುದಾರರು.

ಈ ರಾಜರುಗಳಿಗೆ ಅವರ ಸಹೋದರಿಯರು ಅಥವಾ ಸಹೋದರಿಯ ಗಂಡು ಮಕ್ಕಳು ಮಾತ್ರ ರಾಜ್ಯದ ಉತ್ತರಾಧಿಕಾರಿಗಳು. ಸಹೋದರಿಯ ಹೊಟ್ಟೆಯಲ್ಲಿ ಹುಟ್ಟಿರುವುದು ಖಚಿತವಾಗಿರುವುದರಿಂದ ಅವರೇ ನಿಜವಾದ ಗಂಡು ಮಕ್ಕಳೆಂದು ರಾಜ್ಯದ ಉತ್ತರಾಧಿಕಾರಿ ಗಳೆಂದು ಭಾವಿಸುತ್ತಾರೆ. ರಾಜನ ಹಿರಿಯ ಸಹೋದರಿಯ ಹೊಟ್ಟೆಯಲ್ಲಿ ಹುಟ್ಟಿದ ಹಿರಿಯ ಮಗನೇ ರಾಜ್ಯಕ್ಕೆ ಉತ್ತರಾಧಿಕಾರಿ. ಅವನ ಮರಣದ ನಂತರ ಅವನ ಹಿಂದಿನ ಸಹೋದರರು ಪಟ್ಟಕ್ಕೆ ಬರಲು ಅರ್ಹರಾಗಿರುತ್ತಾರೆ.

ರಾಜ್ಯದ ಉತ್ತರಾಧಿಕಾರಿಗಳನ್ನು ಹೆರುವ ಸಹೋದರಿಯನ್ನು, ಸಹೋದರನ ಹೆಣ್ಣು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅವರು ೧೩-೧೪ ವರ್ಷ ವಯಸ್ಸಾಗಿ ಋತುಮತಿ ಯರಾದಾಗ ರಾಜ್ಯದ ಹೊರಗಡೆಯಿಂದ ಗೌರವ ಮನೆತನದ ಯುವಕನನ್ನು ಸಕಲ ಗೌರವಪೂರ್ವಕವಾಗಿ ಕರೆಸಿ, ಆಕೆಯ ಕನ್ನೆತನವನ್ನು ನೀಗುವಂತೆ ಮಾಡುತ್ತಾರೆ. ಮದುವೆ ಯೋಪಾದಿಯ ಶಾಸ್ತ್ರಗಳೆಲ್ಲ ಮುಗಿದು, ಅವನು ಆಕೆಯ ಕೊರಳಿಗೆ ಚಿನ್ನದ ಮಾಂಗಲ್ಯ ಕಟ್ಟುತ್ತಾನೆ. ಅದನ್ನು ಆಕೆ ಸಾಯುವವರೆಗೂ ಧರಿಸಿರಬೇಕು. ಈ ಶಾಸ್ತ್ರವಾದ ಮೇಲೆ ಆಕೆ ಯಾರೊಡನೆಯಾದರೂ ಸ್ವತಂತ್ರವಾಗಿ ಕಾಲ ಕಳೆಯಬಹುದು. ಮಾಂಗಲ್ಯ ಕಟ್ಟಿದ ಯುವಕನು ಆಕೆಯೊಡನೆ ಹಲವಾರು ದಿನಗಳಿದ್ದು ಹೋಗುತ್ತಾನೆ. ಜೀವನ ಪರ್ಯಂತರ ಇರಬೇಕೆನ್ನುವ ಯಾವುದೇ ಕಟ್ಟಳೆಗಳಿಲ್ಲ.

೨. ಮಲಬಾರು ರಾಜ್ಯಗಳಲ್ಲಿ ನಾಯರುಗಳೆಂಬ ಜಾತಿಯ ಜನ ಇದ್ದಾರೆ. ಇವರಿಗೆ ಯುದ್ಧ ಮಾಡುವುದಲ್ಲದೇ ಬೇರೆ ಕೆಲಸವಿಲ್ಲ. ಇವರು ಯಾವಾಗಲೂ ಎಲ್ಲಿ ಹೋದರೂ ಕತ್ತಿ, ಗುರಾಣಿ, ಬಿಲ್ಲು, ಬಾಣ ಭರ್ಚಿಗಳನ್ನು ಹೊಂದಿರುತ್ತಾರೆ. ಇವರು ರಾಜರೂ, ಸಾಮಂತರೂ, ರಾಜ ಮನೆತನದವರು, ಶ್ರೀಮಂತರು, ಸಂಬಳ ಪಡೆಯುವ ರಾಜ್ಯಪಾಲರೂ, ಇವರೊಡನೆ ಇರುತ್ತಾರೆ. ಹಗಲು ರಾತ್ರಿ ತಮ್ಮ ಒಡೆಯನ ಸೇವೆ ಮಾಡುವುದೇ ಇವರಿಗೆ ಹಿತ.

ಈ ನಾಯರುಗಳು ಕೂಡಾ ಮದುವೆಯಾಗುವುದಿಲ್ಲ. ಸಂಸಾರ ಮಕ್ಕಳು ಮರಿ ಇರು ವುದಿಲ್ಲ. ಇವರ ಸಹೋದರಿಯ ಗಂಡು ಮಕ್ಕಳೇ ಇವರ ಉತ್ತರಾಧಿಕಾರಿಗಳು. ನಾಯರ ಹೆಂಗಸರು ತಮ್ಮ ಇಷ್ಟ ಬಂದಂತೆ ಇರಬಹುದು. ನಾಯರುಗಳು ಮತ್ತು ಬ್ರಾಹ್ಮಣರೊಡನೆ (ನಂಬೂದರಿ) ಅಡ್ಡಿಆತಂಕಗಳಿಲ್ಲದೇ ಬೆರೆಯಬಹುದು, ಆದರೆ ಕೀಳುಜಾತಿಯವರೊಡನೆ ಬೆರೆಯುವಂತಿಲ್ಲ, ಬೆರೆತರೆ ಮರಣದಂಡನೆ ಖಂಡಿತ.

ಮಗಳಿಗೆ ೧೨ ವರ್ಷ ವಯಸ್ಸಾದಾಗ ‘ನಾಯರ’ ಜನಾಂಗದ ತಾಯಿ ತನ್ನ ಬಂಧುಬಳಗ ದವರಿಗೆ ಹೇಳಿ ಕಳುಹಿಸುತ್ತಾಳೆ. ತನಗೆ ಬೇಕಾದವನೊಬ್ಬವನನ್ನು ಕುರಿತು ತನ್ನ ಮಗಳನ್ನು ವರಿಸಲು ಕೇಳಿಕೊಳ್ಳುತ್ತಾಳೆ. ಅವನು ಒಪ್ಪಿ, ಚಿನ್ನದ ಒಂದು ಸಣ್ಣ ಆಭರಣವನ್ನು ಮಾಡಿಸಿ, ಅದಕ್ಕೆ ಮಧ್ಯೆ ತೂತು ಮಾಡಿದ ದಾರದಲ್ಲಿ ಪೋಣಿಸಿ, ತಾಯಿ ನಿರ್ಧರಿಸಿದ ದಿನ ಬಂಧು ಗಳೆಲ್ಲಾ ಸೇರಿ, ಹೆಣ್ಣನ್ನು ಸಿಂಗರಿಸಿ, ಗಂಡು ಕೆಲವು ಶಾಸ್ತ್ರಗಳನ್ನು ನೆರವೇರಿಸಿ ಹೆಣ್ಣಿನ ಕೊರಳಿಗೆ ಆ ಆಭರಣ ಕಟ್ಟುತ್ತಾನೆ. ಇದನ್ನು ಆ ಹೆಣ್ಣು ತನ್ನ ಜೀವಮಾನವೆಲ್ಲಾ ಕಟ್ಟಿಕೊಂಡಿ ರುತ್ತಾಳೆ. ಹೀಗೆ ತಾಳಿ ಕಟ್ಟಿಸಿಕೊಂಡವಳು ಹೇಗೆ ಬೇಕಾದರೂ ಇರಬಹುದೆಂದರ್ಥ. ತಾಳಿ ಕಟ್ಟಿದವನು ರಕ್ತ ಸಂಬಂಧಿಯಾದರೆ, ಅವನು ಆಕೆಯೊಡನೆ ಇರದೇ ಹೊರಟು ಹೋಗುತ್ತಾನೆ. ರಕ್ತಸಂಬಂಧಿಯಲ್ಲದಿದ್ದರೆ, ಆಕೆಯೊಡನೆ ಕೆಲವು ದಿನ ಇದ್ದು ಹೋಗಬಹುದು, ಆದರೆ ಇರಲೇಬೇಕೆಂಬ ನಿರ್ಬಂಧವಿಲ್ಲ, ಅದು ಅವನ ಇಷ್ಟ. ತಾಳಿ ಕಟ್ಟಿದ ಮೇಲೆ ತಾಯಿ ತನ್ನ ಮಗಳ ಕನ್ನೆತನವನ್ನು ನೀಗಲು ಸರಿಯಾದ ‘ನಾಯರ್’ ಜನಾಂಗದ ಯುವಕನನ್ನು ಹುಡುಕುತ್ತಾಳೆ. ಕನ್ನೆತನ ನೀಗಿಸಿಕೊಂಡ ಆ ಹೆಣ್ಣು ಅನಂತರ ಹೇಗೆ ಬೇಕಾದರೂ ಸ್ವತಂತ್ರವಾಗಿ ಇರಬಹುದು. ಈ ಹೆಣ್ಣಿಗೆ ಹುಟ್ಟಿದ ಮಕ್ಕಳನ್ನು ತಾಯಿ ಮತ್ತು ತಾಯಿಯ ಸಹೋದರರು ಸಾಕಿ ಸಲುಹಬೇಕು. ಇವು ಮಾತೃಪ್ರಧಾನ ಕುಟುಂಬದ ಪದ್ಧತಿಗಳಾಗಿವೆ.

ಈ ಮೇಲಿನ ಚೇರರ (ರಾಜರ) ಮತ್ತು ನಾಯರ ಜನಾಂಗದ ಸಾಮಾಜಿಕ ಪದ್ಧತಿಗಳನ್ನು ಹೋಲಿಸಿ ನೋಡಿದಾಗ, ಇವೆರಡು ಒಂದೇ ಜನಾಂಗದ ಪದ್ಧತಿಯಾಗಿ, ಒಂದೇ ಬುಡಕಟ್ಟಿಗೆ ಸೇರಿದ ಜನಾಂಗವೆಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಕೇರಳದ ನಾಯರರು ಮತ್ತು ಕರ್ನಾಟಕದ ನಾಯಕರು

ನಾಯರ ಜನಾಂಗದ ಬಗ್ಗೆ ಕೃಷ್ಣ ಚೈನ್ಯರು ಹೀಗೆ ಬರೆದಿದ್ದಾರೆ. “೧ನೇ ಶತಮಾನದಲ್ಲಿ ಕೇರಳದ ಚೇರರಿಗೂ ತಮಿಳುನಾಡಿನ ಚೋಳರಿಗೂ ೧೦೦ ವರ್ಷಗಳವರೆಗೆ ಯುದ್ಧ ನಡೆಯಿತು. ಚೇರ ಚಕ್ರಾಧಿಪತ್ಯದ ರಾಜಧಾನಿಯಾದ ಮಹೋದಯಪುರ ಅವನತಿ ಹೊಂದಿದ್ದು ೧೦೧೯ರಲ್ಲಿ. ಚೇರರು, ಚೋಳರ, ಆಕ್ರಮಣವನ್ನು, ಗಂಡಾಂತರ ಪರಿಸ್ಥಿತಿ ಯನ್ನು, ಎದುರಿಸಲು ಬೇಗಬೇಗನೇ ಸೈನ್ಯವನ್ನು ಸಜ್ಜುಗೊಳಿಸಿದರು. ಪ್ರಖ್ಯಾತ ಬಲಿದಾನಿ ಗಳಾದ ಯುದ್ಧ ರರು (ಚಾವೇರ ನಾಯರ‍್ಸ್) ಮಸುಕಾದ ಇತಿಹಾಸದ ಕಾಲಸ್ಥಿತಿಯಲ್ಲಿ ಎದ್ದು ನಿಂತ ಶೂರರು. ಈ ಸಂದರ್ಭದಲ್ಲಿಯೇ ನಾವು ಮೊಟ್ಟ ಮೊದಲು ‘ನಾಯರ್’ ಶಬ್ದವನ್ನು ಕಾಣುವುದು. ಪ್ರಾರಂಭದಲ್ಲಿ ಈ ಶಬ್ದ ಜಾತಿ ಸೂಚಕವಾದುದಾಗಿರಲಿಲ್ಲ. ಸಮರ ಶೂರರನ್ನು ಕುರಿತು, ಅವರ ಸ್ಥಾನಮಾನವನ್ನು ಕುರಿತು, ಮುಖಂಡತ್ವವನ್ನು ಕುರಿತು, ಪ್ರಯೋಗಿಸಿದ ಶಬ್ಧವಾಗಿತ್ತು, ಆದರೆ ಸೈನ್ಯಕ್ಕೆ ಸೇರಿ, ಸೇವೆ ಸಲ್ಲಿಸುವುದರ ಆಧಾರದ ಮೇಲೆ, ಜಾತಿಯ ವಿಂಗಡಣೆ ತೀವ್ರಗತಿಯಲ್ಲಿ ಹೆಜ್ಜೆ ಇರಿಸಿ, ಮನೆ ಮಾಡಿಕೊಂಡಿತು. ಸಾಮ್ರಾಜ್ಯವನ್ನು ಸಂರಕ್ಷಿಸುವುದಕ್ಕಾಗಿ ಮರಣವನ್ನು ಲೆಕ್ಕಿಸದೇ ಹೋರಾಡುವ ಯುದ್ಧ ಕೌಶಲದಿಂದ ಈ ನಾಯರ ಸಮುದಾಯ ಅರಸುಮನೆತನಗಳ ಸಮೀಪವರ್ತಿಯಾಯಿತು. ಅದರ ಫಲವಾಗಿ ನಾಯರರು ಸಮಾಜದಲ್ಲಿ ಉನ್ನತ ಸ್ಥಾನವನ್ನು  ಪಡೆದರು. ಬ್ರಾಹ್ಮಣ ಮತ್ತು ಕ್ಷತ್ರಿಯ ಯುವಕರು ನಾಯರ ಹುಡುಗಿಯರನ್ನು ಮದುವೆಯಾಗುವುದಕ್ಕೂ ಸಾಧ್ಯವಾಯಿತು.

ಚೇರರು ಮೂಲತಃ ಬೇಡ ಜನಾಂಗಕ್ಕೆ ಸೇರಿದವರಾಗಿದ್ದರೆಂಬುದನ್ನು ಡಾ. ಎನ್. ಸುಬ್ರಮಣಿಯನ್ ಅವರು ತಮ್ಮ ಸಂಶೋಧನಾ ಮಹಾಪ್ರಬಂಧವಾದ ಸಂಗಮ್ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಗ್ರಂಥದಲ್ಲಿ ಹಲವಾರು ಐತಿಹಾಸಿಕ ಸಂಗತಿಗಳಿಂದ ಸಿದ್ಧಪಡಿಸಿದ್ದಾರೆ (ನೋಡಿ : ಸಂಗಮ್ ರಾಜಕೀಯ ಸಾಮಾಜಿಕ ವ್ಯವಸ್ಥೆ – ಅನುವಾದ ನಿರಂಜನ ಮೈಸೂರ ವಿಶ್ವವಿದ್ಯಾನಿಲಯದ ಪ್ರಕಟಣೆ).

“ಬೇಡರು ಹೆಚ್ಚಾಗಿ ಇರುವ, ಗುಡ್ಡಗಾಡು ಪ್ರದೇಶಗಳಲ್ಲಿ ವನ್ಯಮೃಗಗಳಿಗೆ ಎದುರಾಗಿ, ಬೇಟೆಯ ನಾಯಕತ್ವ ವಹಿಸುವ, ಬೇಡರ ಮುಂದಾಳು ಸುಲಭವಾಗಿ ಸಮಾಜದ ನಾಯಕತ್ವ ವನ್ನು ವಹಿಸಿಕೊಂಡಿರಬಹುದು. ಚೇರ ಭೂಮಿಯು “ಮಲೈನಾಡು” (ಗುಡ್ಡಪ್ರದೇಶ) ಆಗಿದ್ದುದು, ಬಿಲ್ಲು ಅವರ ರಾಜಲಾಂಛನವಾಗಿದ್ದುದೂ ಬೇಟೆ ಕಾರ್ಯಾಚರಣೆಯಲ್ಲಿ ಅರಸೊತ್ತಿಗೆ ಹುಟ್ಟಿತು. ಬೇಡ ನಾಯಕನೇ ಮೊಟ್ಟಮೊದಲ ಅರಸ ಎಂದು ಸ್ಪಷ್ಟಪಡಿಸುತ್ತವೆ. ಎತ್ತರದ ಭೂಮಿಯನ್ನು ಆಳುವ ಚೇರರು ವಾನವರ್ ಆದರು. ಚೇರರು (ಬೇಡರು) ಬಿಲ್ಲಾರರು ಆಗಿದ್ದುದರಿಂದ ವಿಲ್ಲಮ್ ಎಂದು ಕರೆಯಲ್ಪಟ್ಟರು. ಪಶ್ಚಿಮದವರಾದ್ದರಿಂದ ಕುಡುವರ್ ಅಥವಾ ಕುಟ್ಟುವರ್ ಆದರು. ಪೊರೈ ಮತ್ತು ಮಲೈ ಇವು ಸಾಮಾನಾರ್ಥ ಪದಗಳು. ಇವುಗಳ ಅರ್ಥ ಬೆಟ್ಟ ಪರ್ವತ ಪ್ರದೇಶಗಳನ್ನು ಆಳುತ್ತಿದ್ದ ಚೇರರು ಸಹಜ ವಾಗಿಯೇ ಪೊರೈಯರ್ ಮತ್ತು ಮಲೈಯರ್ ಆದರು. ಕೇರಳ ಎನ್ನುವುದು ಚೇರಳದ ಅಥವಾ ಚೇರದ ಸಂಸ್ಕೃತ ರೂಪ.

ಇನ್ನು ಕರ್ನಾಟಕದ ನಾಯಕ ಜನಾಂಗದ ಬಗ್ಗೆ ಈ ಕೆಳಗಿನ ವಿವರಗಳನ್ನು ಕೆಲವು ಪ್ರಾಚೀನ ಗ್ರಂಥಗಳಲ್ಲಿ ಕಾಣಬಹುದಾಗಿದೆ. ಬೇಡ ಜನಾಂಗದವರು ಶೌರ್ಯ ಪರಂಪರೆಗೆ ಹೆಸರಾದವರು. ಪ್ರತಿಯೊಬ್ಬ ರಾಜನ ದಂಡಿನಲ್ಲಿಯೂ ಅತ್ಯಗತ್ಯವಾಗಿ ಬೇಡರ ಪಡೆಗಳು ಇದ್ದೇ ಇರುತ್ತಿದ್ದವು. ಬೇಡ ಜನಾಂಗದವರಿಗೆ ನಾಯಕ ಎಂಬ ಗೌರವಸೂಚಕ ಶಬ್ದ ಜಾತಿ ಶಬ್ದವಾಗಿ, ಪರಿವರ್ತಿತವಾದ ಇತಿಹಾಸವನ್ನು ಶ್ರೀ ಎಂ.ವಿ. ಚಿತ್ರಲಿಂಗಯ್ಯ ಅವರು ತಮ್ಮ ನಾಯಕ ಜನಾಂಗದ ನಿಜ ನಿಷ್ಪತ್ತಿ ಎಂಬ ಐತಿಹಾಸಿಕ ಲೇಖನದಲ್ಲಿ ಕ್ರಿಸ್ತಶಕ ೯ನೆಯ ಶತಮಾನದಲ್ಲಿ ಮೊದಲು ಕಾಣಿಸಿಕೊಳ್ಳುವ ನಾಯಕ ಎಂಬ ಗೌರವ ಸೂಚಕ ಅಥವಾ ಅಧಿಕಾರ ಸೂಚಕ ಪದವು ಕನ್ನಡ ನಾಡಿನ ಚರಿತ್ರೆಯಲ್ಲಿ ಬೇಡರ ನಂತರ ಪ್ರಸಿದ್ದಿ ಯಿಂದಾಗಿ ಅವರ ಪಾಲಿಗೆ ಜಾತಿಸೂಚಕ ಶಬ್ದವಾಗಿ ಪರಿಣಮಿಸಿದ ಬಗ್ಗೆ ಪ್ರಸ್ತಾಪಿದ್ದಾರೆ.

ಬಾರ್ಬೋಸನು-ಕೇರಳದ ಚೇರ (ರಾಜ)ರನ್ನು ಜಂಟಲೈರ್ (ಹಿಂದೂ) ಎಂದು ಮಾತ್ರ ಕರೆದಿದ್ದಾನೆ. ಅವರ ಜಾತಿಯನ್ನು ಪ್ರಸ್ತಾಪಿಸಿಲ್ಲ. ಆದರೆ ಅವರ ಸಾಮಾಜಿಕ ಪದ್ಧತಿಗಳನ್ನು ರೂಢಿ-ಸಂಪ್ರದಾಯಗಳನ್ನೂ ಹೇಳಿರುವುದರಿಂದ ಅವರ ಜಾತಿ ಮೂಲವನ್ನು ಗುರುತಿಸಲು ಸಾಧ್ಯವಾಗಿದೆ.

ಎಲ್ಲಾ ರಾಜಮನೆತನದವರೂ ಸಾಮಾನ್ಯವಾಗಿ ಸ್ಥಳೀಯರೇ ಆಗಿದ್ದು, ಅಲ್ಲಿಯ ಸಾಮಾನ್ಯ ಜಾತಿ ಒಂದಕ್ಕೆ ಸೇರಿದವರೇ ಆಗಿದ್ದರು. ತಮ್ಮ ಮನೆತನದ ಪ್ರತಿಷ್ಠತೆ ಹೆಚ್ಚಿದಂತೆ ಹಿಂದಿನ ತಮ್ಮ ಸಾಮಾನ್ಯ ಹುಟ್ಟನ್ನು ಮರೆತು, ತಮ್ಮ ವಂಶವನ್ನು ಪುರಾಣ ಕಾಲದ ಪುರುಷರೊಂದಿಗೆ ಜೋಡಿಸಿಕೊಳ್ಳುತ್ತಿದ್ದರು. ಇಂತಹ ಮಾರ್ಗಗಳನ್ನು ನಿರ್ಮಿಸಲು ಪುರೋಹಿತ ವರ್ಗ ಸದಾ ಸಿದ್ಧವಾಗಿ ನಿಂತಿತ್ತು. ಹೀಗಾಗಿ ನಮ್ಮನಾಡಿನ ರಾಜರ ಮೂಲ ಬೇರುಗಳನ್ನು ಇಂದು ನಿಖರವಾಗಿ ಗುರುತಿಸಲು ಅಸಾಧ್ಯವಾಗಿದೆ. ಅವರು ಉತ್ತರದ ಯಾವುದೋ ಮಹಾಪುರುಷನ ಗೋತ್ರದವರೆಂಬಂತೆ ಕಂಡು ಬಂದಿದ್ದಾರೆ. ಈ ಮೇಲಿನ ಚೇರರು, ನಾಯರರು ಮತ್ತು ನಾಯಕ ಜನಾಂಗದವರು, ಮೂಲತಃ ಒಂದೇ ಜನಾಂಗಕ್ಕೆ ಸೇರಿದವರೆಂಬ ಅಂಶ ಸ್ಪಷ್ಟವಾಗುತ್ತಿದೆ. ಚೇರರು ಬೇಡ ಜನಾಂಗಕ್ಕೆ ಸೇರಿರುವಂತೆ; ಚೇರರು ನಾಯರ್ ಜನಾಂಗಕ್ಕೆ ಸೇರಿದವರೂ ಆಗಿದ್ದಾರೆ. ಇದರಿಂದ ಕೇರಳದ ಈಗಿನ ನಾಯರ್ ಜನಾಂಗದವರು ಮತ್ತು ಕರ್ನಾಟಕದ ನಾಯಕ ಜನಾಂಗದವರು ಮೂಲತಃ ಒಂದೇ ಪಂಗಡಕ್ಕೆ ಸೇರಿದದವರೆಂಬುದನ್ನು ಈ ಮೇಲಿನ ಅಂಶಗಳಿಂದ ತಿಳಿದು ಬರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗೆ ಕಾರಣವಾಗಲಿ, ಬಲ್ಲ ಇತಿಹಾಸ ತಜ್ಞರು, ಸಮಾಜಶಾಸ್ತ್ರಜ್ಞರು, ಈ ಕುರಿತು ಹೆಚ್ಚಿನ ವಿವರಗಳನ್ನು ನೀಡುವಂತಾಗಲಿ ಎನ್ನುವುದು ಈ ಲೇಖನದ ಉದ್ದೇಶ.

ಕೃಪೆ : ವಾಲ್ಮೀಕಿ ಜ್ಯೋತಿ

* * *