ಬೇಡ ಸಮುದಾಯದ ಇತಿಹಾಸವನ್ನು ಕರ್ನಾಟಕದ ಪ್ರಾಗೈತಿಹಾಸಿಕ ಕಾಲ ದಿಂದಲೂ ಗಮನಿಸಬಹುದು. ಕರ್ನಾಟಕದ ಅತಿ ಪ್ರಾಚೀನವಾದ ಬೇಡ ಸಮುದಾಯ ಇಲ್ಲಿನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಮಾನವ ಸಮಾಜದ ಬೇಟೆಗಾರಿಕೆ ಒಂದು ಪ್ರಾಚೀನ ಪ್ರವೃತ್ತಿಯಾಗಿದ್ದು, ಆ ನಂತರವೇ ಬೇರೆ ಕಸಬುಗಳು ಜೀವನೋಪಾಯ ಮಾರ್ಗ ಗಳಾಗಿ ರೂಪುಗೊಂಡವು ಎಂಬುದು ಪ್ರಾಗೈತಿಹಾಸಕಾರರ ನಿಲುವು. ಬೇಟೆಗಾರ ಸಮುದಾಯ ವಾಗಿ ಮುಂದುವರೆದ ಬೇಡರು ತಮ್ಮ ಆಯುಧ ಬಳಕೆಯ ಕಲೆ ಹಾಗೂ ಸಾಹಸಿ ಜೀವನದ ಅಂಗವಾಗಿ ಯುದ್ಧ ಕಲೆಯನ್ನು ಅಳವಡಿಸಿಕೊಂಡರು. ಮಿಕ ಹಿಡಿಯಲು ಬಳಸುವ ನಾನಾ ತಂತ್ರಗಳೇ ಮುಂದೆ ಸಮರವ್ಯೂಹ ರಚನೆಯ ತಳಹದಿಗಳಾದವು. ಬೇಟೆಯ ಜೊತೆ ಯೋಧತ್ವವನ್ನು ಬೆಳೆಸಿಕೊಂಡ ಬೇಡ ಸಮುದಾಯವು ನಂತರದಲ್ಲಿ ರಾಜ್ಯ ವಿಸ್ತರಣೆ ಹಾಗೂ ನಿರ್ವಹಣೆಯಲ್ಲಿ ಸಾಮ್ರಾಜ್ಯಗಳಿಗೆ ಸೇವೆ ಸಲ್ಲಿಸಿತು.

ಕರ್ನಾಟಕದಲ್ಲಿ ಹಲವು ಅರಸು ಮನೆತನಗಳು ಬೇಡ ಜಾತಿ ಮೂಲದಿಂದ ರೂಪುಗೊಂಡಿದ್ದವು. ಅಂತಹವುಗಳಲ್ಲಿ ಕುಮ್ಮಟದುರ್ಗ, ಉಚ್ಚಂಗಿದುರ್ಗು, ಸುರಪುರ, ಚಿತ್ರದುರ್ಗ, ಹರಪನಹಳ್ಳಿ, ನಿಜಗಲ್ಲು, ಇಕ್ಕೇರಿ ಮುಂತಾದ ಹಲವಾರು ಪಾಳೆಯಪಟ್ಟು ಗಳನ್ನು ಆಳ್ವಿಕೆ ಮಾಡಿದ ಬೇಡ ಕುಲದ ರಾಜರು ಪಾಳೆಯಗಾರ ಎಂದರೆ ಬೇಡ ಕುಲದವನು ಎಂಬ ಅನ್ವರ್ಥನಾಮ ಉಂಟಾಗಿರುವ ಹಾಗೆ ಆಳ್ವಿಕೆ ನಡೆಸಿದರು.

ಈ ರೀತಿ ಆಳ್ವಿಕೆ ನಡೆಸಿದಂತಹ ಸಮುದಾಯವು ಕಾಲದ ಹೊಡೆತಕ್ಕೆ ತಮ್ಮ ತಮ್ಮಲ್ಲಿಯೇ ಉಪ ಪಂಗಡಗಳಾಗಿ ಛಿದ್ರದ ಬದುಕನ್ನು ಬದುಕುತ್ತೀವೆ. ಬೇಡ ಸಮುದಾಯವು ಇಂದು ಊರು ಬೇಡರು, ಮ್ಯಾಸಬೇಡರು, ದುರುಗ ಮುರುಗಿಯರು, ಕುರುಮಾಮರು, ಮೊಂಡ ಬೇಡರು, ಕಂಪಣ ಬೇಡರು ಹೀಗೆ ಹಲವಾರು ಉಪ ಪಂಗಡಗಳಾಗಿ ಒಡೆದು ಹೋಗಿವೆ. ಇಂತಹ ಉಪ ಪಂಗಡಗಳಲ್ಲಿ ಒಂದಾದ ಕಂಪಣ ಬೇಡರು ಕರ್ನಾಟಕ ಚಾಮರಾಜನಗರ ಜಿಲ್ಲೆ ಹಾಗೂ ಕೇರಳದ ಈರೋಡ್ ಜಿಲ್ಲೆಯ ಸತ್ತಿ ಹಾಗೂ ಭವಾನಿ ತಾಲೂಕುಗಳಲ್ಲಿ ವಾಸಿಸುತ್ತಿದ್ದಾರೆ.

ತಮಿಳುನಾಡಿನ ಈರೋಡ್ ಜಿಲ್ಲೆಯ ಸತ್ತಿ ತಾಲ್ಲೂಕಿನ ಗುಂಡ್ರ ಹಾಗೂ ತಾಳವಾಡಿ ಹೋಬಳಿಗಳಲ್ಲಿ ಹಾಗೂ ಭವಾನಿ ತಾಲೂಕಿನ ಅಂದಿಯೂರು ಹೋಬಳಿಗಳಲ್ಲಿ ಮೂರು ಸಾವಿರದ ಇಪ್ಪತ್ತೊಂಬತ್ತು ಕುಟುಂಬಗಳೂ ಹಾಗೂ ಕರ್ನಾಟಕದ ಕೊಳ್ಳೇಗಾಲ ತಾಲ್ಲೂಕಿನ ರಾಮಾಪುರ, ಲೋಕನಹಳ್ಳಿ ಹಾಗೂ ಹನೂರು ಹೋಬಳಿ ಹಾಗೂ ಚಾಮರಾಜನಗರ ತಾಲೂಕಿನ ಚಂದಕವಾಡಿ ಹೋಬಳಿಗಳಲ್ಲಿ ಒಂದು ಸಾವಿರದ ಏಳು ನೂರಾ ತೊಂಬತ್ತಾರು ಕುಟುಂಬಗಳಿವೆ. ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಒಟ್ಟು ನಾಲ್ಕು ಸಾವಿರದ ಎಂಟು ನೂರಾ ಇಪ್ಪತ್ತೈದು ಕುಟುಂಬಗಳು ವಾಸವಾಗಿದ್ದು, ಇಪ್ಪತ್ನಾಲಕ್ಕು ಸಾವಿರದ ಎಂಟು ನೂರ ಇಪ್ಪತ್ತಕ್ಕೂ ಹೆಚ್ಚಿನ ಜನಸಂಖ್ಯೆ ಇರುವುದನ್ನು ಕಾಣಬಹುದು. ಇದರಲ್ಲಿ ಹನ್ನೆರಡು ಸಾವಿರದ ಒಂಬತ್ತು ನೂರಾ ಅರವತ್ನಾಲ್ಕು ಜನ ಗಂಡಸರು ಹಾಗೂ ಹನ್ನೊಂದು ಸಾವಿರದ ಎಂಟು ನೂರಾ ಐವತ್ತಾರು ಜನ ಮಹಿಳೆಯರು ಇದ್ದಾರೆ. (ಆಧಾರ: ಬೇಡಗಂಪಣರ ಸಮಗ್ರ ಅಧ್ಯಯನ ಸಮೀಕ್ಷೆ; ಶ್ರೀ ಮಹದೇಶ್ವರ ಮಲೆಯ ಬೇಡಗಂಪಣ ಜನಾಂಗ ಕ್ಷೇಮಪಾಲನಾ ಸಮಿತಿ; ಮಹದೇಶ್ವರ ಬೆಟ್ಟ ಕೊಳ್ಳೇಗಾಲ ತಾಲೂಕು ಚಾಮರಾಜನಗರ ಜಿಲ್ಲೆ)

ಹೀಗಿರುವ ಕಂಪಣಬೇಡರ ಮೂಲದ ಕುರಿತು ನೋಡಿದಾಗ, ಅವರ ಬಗೆಗಿರುವ ಶಾಸನಗಳು ಹಾಗೂ ತಾಮ್ರದ ಶಾಸನಗಳು ಹಾಗೂ ಅವರು ಬೇಡರ ಕಣ್ಣಯ್ಯನ ವಂಶಸ್ಥರು ಎಂದು ಹೇಳಿಕೊಳ್ಳುವ ಅಂಶಗಳು ಇವರು ಮೂಲತಹ ಬೇಡರು ಎಂದು ತಿಳಿದು ಬರುತ್ತದೆ. ಕಂಪಣ ಬೇಡರ ಬಗೆಗೆ ಮೈಸೂರು ಜಿಲ್ಲೆ ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿಯ ಕ್ರಿ.ಶ. ೧೩೨೪ರ ಶಾಸನವು ಬೇಡಗಂಪಣ ರಾಮಣ್ಣ ನಾಯಕನು ಕುನ್ನಪ್ಪ ನಾಗರ ಸೀಮೆಯಿಂದ ಹೊಯ್ಸಳ ದೊರೆ ಮುಮ್ಮಡಿ ಬಲ್ಲಾಳನ ಕಾಲದಲ್ಲಿ ಆಳುತ್ತಿದ್ದುದನ್ನು ತಿಳಿಸುತ್ತದೆ. ಹಾಗೆಯೇ ತಾಮ್ರಶಾಸನದ ಸಾರಾಂಶವು ಈ ರೀತಿ ಇದೆ.

ಶ್ರೀರಂಗಪಣ್ಮದ ಅಧಿಪತಿಯಾದ ಬಹದ್ದೂರಸಾಬಿಯವರು ಶ್ರೀ ಮಾದೇಶ್ವರನ ಸನ್ನಿಧಿಗೆ ಕ್ರಿ.ಶ. ೧೭೭೬ರಲ್ಲಿ ಕೆಂಪವೂದ ವಡೇರು ಕಾಳಿಯಾದ ವಡೆರು ಬೋಳಮಾದ ವಡೇರು ಸಂಗತಿಯಾದ ಕಾಡಪ್ಪನವರ ಮಕ್ಕಳಿಗೆ ಬರೆಸಿಕೊಟ್ಟ ತಾಮ್ರಶಾಸನ.

ಮಾದೇಶ್ವರಸ್ವಾಮಿ ಕರ್ನಾಟಕ ದೇಶಕ್ಕೆ ಒಂದು ಶ್ರವಣನು ಸಮಸ್ತ ದೇವರುಗಳನ್ನೆಲ್ಲಾ ಸೆರೆಯಲ್ಲಿಟ್ಟಿದ್ದನ್ನು ನೋಡಿ ಆ ಶ್ರವಣನನ್ನು ಸಂಹಾರ ಮಾಡಿ ಜನಕ್ಕೆಲ್ಲ ತಾನೇ ದೇವರಾಗಿ ವಜ್ರಮಲೆಯಲ್ಲಿ ನಶಿಸಿ ಲಂಬಾಡಿ ಮಾಜಿ ಗೌಡನಿಂದ ೫ ಅಂಕಣದ ನಿವೇಶನ ಕಟ್ಟಿಸಿಕೊಂಡನು. ಬೇಡರ ಕಣ್ಣಪ್ಪನಿಂದ ಪೂಜಿಸಿಕೊಂಡು ಅವನ ಭಕ್ತಿಗೆ ಮೆಚ್ಚಿ ಮೋಕ್ಷ ಕೊಟ್ಟು ಗುಂದಿಪ್ಪ ನಾಗರ ಸೇವೆಯ ಬೆಡರ ರಾಯಣ್ಣನಾಯಕನ ಮನೆಯಲ್ಲಿ ಕೊಂಗರು ಹೆಣ್ಣನ್ನು ಕೇಳಿದ್ದರಿಂದ ಇವರು ಕಾರಣದ ಹಾಗೆ ಬರುತ್ತಿರುವಾಗ ತುಂಗಭದ್ರ ನದಿ ದಾಟಲಾರದೆ ಶ್ರೀಮಹಾದೇವನನ್ನು ಭಜಿಸಲು ನದಿ ಇಬ್ಭಾಗವಾಗಿ ದಾರಿ ಬಿಟ್ಟಿತು. ಇವರು ತಮಗೆ ಮಕ್ಕಳು ಹುಟ್ಟಿದರೆ ಭದ್ರಾ ಮತ್ತು ಬದ್ರಿ ಎಂದು ಹೆಸರಿಡುತ್ತೇವೆಂದು ನದಿ ದಾಟಿ ಬಂದು ಇರಲು ಬಾಲಳ್ಳಿ ಸಿಂಹಾಸನ ಕುಂತೂರು ವಾಟದ ಸ್ವಾಮಿಯವರು ಬಂದು ಲಿಂಗಧಾರಣೆ ಮಾಡಿದರು. ಕಾಡಪ್ಪನವರ ಮಕ್ಕಳನ್ನು ಪೂಜಾಕರ್ತರನ್ನಾಗಿ ನೇಮಿಸಿ ಇವರು ಉತ್ತ ಭೂಮಿಗೆ ತೆರಿಗೆ ಇಲ್ಲವೆಂದು ಪಟ್ಟಗಾರನಾದ ರಾಯಣ್ಣ ನಾಯಕನಿಗೆ ಬಿಳಿ ಛತ್ರಿ, ಶಾಲು ಮುಂತಾದವುಗಳನ್ನು ಕೊಟ್ಟು ಈ ಜನ (ಕಂಪಣ)ಕ್ಕೆ ಕರ್ತನೆಂದು ಜಾತಿ ಪ್ರಕಾರ ಅವಾಚಾರಸ್ಥರಿಗೆ ತಿಳಿಸಬಹುದೆಂದು ನೇಮಿಸಿಕೊಟ್ಟ ತಾಮ್ರಶಾಸನ.

ಕಂಪಣ ಬೇಡರು ತಾವು ನಂಬಿಕೊಂಡು ಬಂದ ಸತ್ಯವನ್ನು ಈ ರೀತಿ ಹೇಳುತ್ತಾರೆ. ಅದೇನೆಂದರೆ; “ನಾವು ಮೂಲತಃ ಬೇಡರ ಕಣ್ಣಯ್ಯ ವಂಶಸ್ಥರು ಬೇಡರು, ನಾವು ಮುಂದೆ ಗಂಪಣ ಎಂಬುವವನು ನಮ್ಮ ಜನಾಂಗದ ಒಬ್ಬ ನಾಯಕನಾದ್ದರಿಂದ ಈ ಜನರನ್ನು ಬೇಡಗಂಪಣರೆಂದು ಕರೆದು ಈವತ್ತಿಗೂ ನಾವು ಬೇಡಗಂಪಣರಾಗಿದ್ದು ಲಿಂಗಧಾರಣೆ ಯಾದ್ದರಿಂದ ಮುಂದುವರಿದ ಜಾತಿ ಪಟ್ಟಿಗೆ ಸೇರು ತುಂಬಾ ಕಷ್ಟನಷ್ಟ ಸಂಕಟ ಬಡತನವನ್ನು ಎದುರಿಸುತ್ತಿದ್ದೇನೆ. ನಾವು ಬೇಡರೆಂಬುದಕ್ಕೆ ಹಿಂದಿನ ರಾಜ ಮಹಾರಾಜರುಗಳಾದ ಹೈದರಾಲಿ ಶಾಸನ, ಹೊಯ್ಸಳರ ಕಾಲದ ಶಾಸನ ಮತ್ತು ಇನ್ನೂ ಇತರೆ ತಾಮ್ರದ ಶಾಸನಗಳಲ್ಲಿ ನಾವು ಮೂಲತಃ ಬೇಡರೆಂಬುದಕ್ಕೆ ನಿದರ್ಶನಗಳಿದ್ದು ಇದರಲ್ಲೆ ನಾವು ಬೆಡರು ಎಂಬ ನಿದರ್ಶನ ಮತ್ತು ನಮ್ಮ ಪರಿಸ್ಥಿತಿಗೆ ಅಂದಿನ ರಾಜ ಮಹಾರಾಜರುಗಳೇ ಉತ್ತ ಭೂಮಿಗೆ ತೆರಿಗೆ ಇಲ್ಲ ಎಂಬುದಾಗಿ ನಮೂದು ಮಾಡಿರುತ್ತಾರೆ. ಇದರಿಂದಲೇ ಆಗಲೇ ನಮ್ಮ ಸ್ವಾತಂತ್ರ್ಯ ಬಂದು ೫೯ ವರ್ಷ ಕಳೆದರೂ ಈಗಿನ ಸರ್ಕಾರಕ್ಕೆ ನಮ್ಮ ಪರಿಸ್ಥಿತಿ ತಿಳಿಯದಾಗಿದೆ. ನಾವು ತಿಳಿಸಲು ಸಮಸ್ಥರಾಗಿರಲ್ಲಿಲ್ಲ. ನಮಗೆ ಸ್ವಾತಂತ್ರ್ಯಪೂರ್ವ ಮೀಸಲಾತಿ ನೀಡಿದ್ದರು ಎಂಬುದು ತಿಳಿಯುತ್ತದೆ. ಈ ಕ್ಷೇತ್ರದ ಕಥೆಗಳನ್ನು ಬರೆದಿರುವ ಅನೇಕ ಮಹಾನುಭಾವರು ನಮ್ಮ ಜನಾಂಗದ ಪರಿಸ್ಥಿತಿಯನ್ನು ಕೂಲಂಕುಷನಾಗಿ ವಿವರಿಸಿದ್ದು ಇದರ ನಿದರ್ಶನ ಮತ್ತು ನಾವು ನಮ್ಮ ಸಂಘದ ವತಿಯಿಂದ ಜನಾಂಗದ ಸಮೀಕ್ಷೆ ನಡೆಸಿದ್ದು ಇದರ ಮಾಹಿತಿಗಳನ್ನೊಳ ಗೊಂಡಂತೆ ಆಧಾರಗಳನ್ನು ತಮಗೆ ನೀಡುತ್ತಾ ಕಣ್ಣಾರೆ ಕಾಣುವ ನಮ್ಮ ಹೀನಾಯ ಸ್ಥಿತಿ ಬಡತನ ಅನಕ್ಷರತೆಯಿಂದ ಬದುಕುತ್ತಿದ್ದೇವೆ” ಎಂದು ಹೇಳುತ್ತಾರೆ.

ಇವೆಲ್ಲವುಗಳ ಜೊತೆಗೆ ಚಾರಿತ್ರಿಕವಾಗಿ ನೋಡಿದಾಗ ಕಂಪಲಿಯ ಕುಮಾರರಾಮನು ಕಂಪಲಿಯಿಂದ ಹೋಗಿ ಮಲೆಮಹದೇಶ್ವರ ಬೆಟ್ಟದಲ್ಲಿ ರಾಜ್ಯ ಸ್ಥಾಪನೆ ಮಾಡಿದುದರ ಬಗೆಗೆ ಆಧಾರಗಳಿವೆ. ಕಂಪಲಿಯು ಬೇಡರ ಮೊಟ್ಟಮೊದಲ ಪಾಳೆಯಪಟ್ಟಾಗಿದ್ದು ಅದನ್ನಾಳಿದವರು ಬೇಡರು. ಹೀಗೆ ಆಳುತ್ತಿರುವಾಗ ಬೇಡರ ಸೈನಿಕ ಪಡೆಗಳು ಅವರ ಬೆಂಬಲಕ್ಕೆ ಇದ್ದರು. ಕುಮಾರರಾಮ ಮಲೆಮಹದೇಶ್ವರ ಬೆಟ್ಟದಲ್ಲಿ ರಾಜ್ಯ ಸ್ಥಾಪನೆಗೆ ಹೋದಾಗ ಅವನೊಂದಿಗೆ ಈ ತರಹದ ಪಡೆಗಳು ಹೋಗಿದ್ದಿರಲೇಬೇಕು. ಏಕೆಂದರೆ ರಾಜರು ಯುದ್ಧಕ್ಕೆ ಹೊರಟಾಗ ಅವರ ಬರೆಗಾವಲ ಪಡೆಗಳು, ಸೈನಿಕರು ಹೋಗಿರಲೇಬೇಕು. ರಾಜ್ಯ ಸ್ಥಾಪನೆಯ ನಂತರ ಕುಮಾರರಾಮ ಮತ್ತೆ ಈ ಕಡೆಗೆ ಬಂದಾಗ, ಆ ರಾಜ್ಯವನ್ನು ನೋಡಿಕೊಳ್ಳಲು ಹೋದ ಪಡೆಗಳಲ್ಲಿ ಕೆಲವರು ಉಳಿದಿರಬಹುದು. ನಂತರ ಮಲೆಮಹದೇಶ್ವರನ ಭಕ್ತರಾಗಿರಬಹುದು. ಹೀಗೆ ರಾಜ್ಯ ಸ್ಥಾಪನೆಗಾಗಿ ಹೊರಟ ಪಡೆಗಳು ಹಾಗೂ ಸದಾ ವಲಸೆಯಲ್ಲಿರುವಾಗ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆ ಹೋಗುವುದಕ್ಕೂ, ರಾಜರುಗಳು ಬೇರೆ ಬೇರೆ ಸ್ಥಳಗಳಲ್ಲಿ ಹೋಗಿ ನೆಲೆಸುವುದಕ್ಕೆ ಕಂಪಳಯೆದ್ದು ಹೋದರು ಎನ್ನುವುದುಂಟು. ಡಾ. ಜಿ. ವರದರಾಜರಾವ್ ಅವರು ತಮ್ಮ ಕುಮಾರರಾಮನ ಸಾಂಗತ್ಯಗಳು ಸಂಬಂಧದಲ್ಲಿ “ಬೇಡನಾಯಕನಾದ ಮುಮ್ಮಡಿಸಿಂಗನ ತರುವಾಯ ಕಂಪಿಲನು ತನ್ನ ತಾಯಿಯಾದ ಮಂಚಕ್ಕನೊಂದಿಗೆ ಜಟ್ಟಂಗಿಗಿರಿಗೂ ಅನಂತರ ಲೋಹಗಿರಿಗೂ ಸಂಸಾರ ಸಮೇತ ವಲಸೆ ಹೋಗಿ ನೆಲೆಸಿದನೆಂದೂ ಹೇಳುವಲ್ಲಿ ಕಂಪಳ ಯೆದ್ದು ಹೋದನೆಂಬ ಪ್ರಯೋಗವಿದೆ. ಒಂದು ಕಾಲದ ಬೇಡರ ಮುಖ್ಯ ನೆಲೆಯಾಗಿದ್ದ ಆನೆಗೊಂದಿಯಿಂದ ಅನೇಕ ಶಾಖೆಗಳವರು ಬೇರೆ ಬೇರೆ ಕಡೆಗೆ ಹೋಗಿ ನೆಲೆಸಿದುದನ್ನು ಕಂಪಳ ಎಂದು ಕರೆದಿರುವುದಂಟು” ಎಂಬುದನ್ನು ಪ್ರಸ್ತಾಪಿಸಿದ್ದಾರೆ. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಕಂಪಣಬೇಡರನ್ನು ಮೂಲತಹ ಬೇಡರೆನ್ನಲು ಕಾರಣಗಳಾಗಿವೆ. ಹೆಚ್ಚಿನ ಸಂಶೋಧನೆಯಿಂದ ಕಂಡುಕೊಳ್ಳಲು ಸಾಧ್ಯ. ಮೈಸೂರು ಜಿಲ್ಲೆ ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿಯ ಕ್ರಿ.ಶ. ೧೩೨೪ರ ಶಾಸನವು ಬೇಡಗಂಪಣ ರಾಮಣ್ಣನಾಯಕನು ಕುನ್ನಪ್ಪ ನಾಗರ ಸೀಮೆಯಿಂದ ಹೊಯ್ಸಳ ದೊರೆ ಮುಮ್ಮಡಿ ಬಲ್ಲಾಳನ ಕಾಲದಲ್ಲಿ ಆಳುತ್ತಿದ್ದುದನ್ನು ತಿಳಿಸುತ್ತದೆ.

ಶ್ರೀ ಕ್ಷೇತ್ರ ಶ್ರೀ ಮಲೆಮಹದೇಶ್ವರ ಬೆಟ್ಟವು ಕೊಳ್ಳೇಗಾಲ ತಾಲ್ಲೂಕಿನ ಒಂದು ಪ್ರಸಿದ್ಧ ಪುಣ್ಯಕ್ಷೇತ್ರವಾಗಿದ್ದು, ಈ ಕ್ಷೇತ್ರವು ಅನೇಕ ಬೆಟ್ಟ ಗುಡ್ಡಗಳ ಸಾಲಿನ ಅರಣ್ಯ ಮಧ್ಯೆ ಇದ್ದು ಇದರ ಸುತ್ತಮುತ್ತಲೂ ಸುಮಾರು ೨೧ ಕುಗ್ರಾಮಗಳಲ್ಲಿ ಹಾಗೂ ಕೊಳ್ಳೇಗಾಲ ತಾಲ್ಲೂಕಿನ ಕೆಲವು ಹಳ್ಳಿ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ಶ್ರೀ ಮಹದೇಶ್ವರನನ್ನು ಪೂಜಿಸುವ ತಂಬಡಿ ಜನಾಂಗವಾದ ಬೇಡಗಂಪಣ ಜನಾಂಗವು ವಾಸವಾಗಿದೆ.

ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ತಾಲ್ಲೂಕಿಗೆ ಸೇರಿದ ಸುಮಾರು ೪೦ ಕುಗ್ರಾಮಗಳು ಅರಣ್ಯ ಮಧ್ಯೆ ಬೆಟ್ಟಗುಡ್ಡಗಳ ಸಾಲಿನಲ್ಲಿದ್ದು ಈವರೆಗೆ ಈ ಗ್ರಾಮಗಳಲ್ಲಿ ರಸ್ತೆ, ಕುಡಿಯುವ ನೀರಿನ ಸೌಲಭ್ಯ ವಿದ್ಯುತ್, ಶಾಲೆ, ಇತರೆ ನಾಗರೀಕ ಸೌಲಭ್ಯಗಳಿಲ್ಲದೆ ನಾವುಗಳು ಕಾಡು ಜನರಾಗಿಯೇ ಬದುಕುತ್ತಿದ್ದಾರೆ. ಸ್ವಾತಂತ್ರ್ಯ ಬಂದು ೫೯ ವರ್ಷ ಕಳೆದರೂ, ಈ ಗ್ರಾಮಗಳು ಇಂದಿಗೂ ಕಾಡಿನಲ್ಲೇ ಕಣ್ಮರೆಯಾಗಿ ಸರ್ಕಾರದ ಕಣ್ಣುತಪ್ಪಿ ಹೋಗಿರು ವಂತಿದೆ. ಇನ್ನು ನಾಗರೀಕತೆಯ ಸೋಂಕು ಕಂಡಿಲ್ಲವಾಗಿದೆ. ಇತ್ತೀಚಿಗೆ ಕೆಲವು ಗ್ರಾಮಗಳಳ್ಲಿ ಶಾಲೆ ತೆರೆಯಲಾಗಿದೆ.

ಈ ಜನಾಂಗವು ಸಂಪೂರ್ಣವಾಗಿ ಅನಕ್ಷರಸ್ಥರಾಗಿದ್ದು, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ತುಂಬಾ ಹಿಂದುಳಿದಿದ್ದು, ಕಡುಬಡತನ ಎದ್ದು ಕಾಣುತ್ತದೆ. ಒಂದು ಅಥವಾ ಎರಡು ಎಕರೆ ಜಮೀನಿನಲ್ಲೇ ಹತ್ತಾರು ಕುಟುಂಬದ ಸದಸ್ಯರು ಅವಲಂಬಿತಕ ವಾಗಿದ್ದು, ಇವು ಬೆಟ್ಟದ ಇಳಿಜಾರಿನಿಂದ ಕೂಡಿರುವುದರಿಂದ ಅಲ್ಪಸ್ವಲ್ಪ ಪ್ರಮಾಣದ ವ್ಯವಸಾಯ, ಆಡು, ಕುರಿ, ಎಮ್ಮೆ ಕಾಯುವುದು, ಬುಟ್ಟಿ ನೇಯುವುದು, ಒಣಸೌದೆ ಶೇಖರಣೆ ನಮ್ಮ ಮುಖ್ಯ ಜೀವನವಾಗಿದೆ. ಹುಲ್ಲಿನ ಜೋಪಡಿಗಳಲ್ಲೆ ವಾಸ ಕೆಲವಾರು ಹಳ್ಳಿಗಳಲ್ಲಿ ಮಾತ್ರ ಹಂಚಿನ ಮನೆ ಕಾಣಬಹುದು. ಮಹದೇಶ್ವರರ ಭಕ್ತಾಧಿಗಳಲ್ಲಿ ವರ್ಷಕ್ಕೆ ಒಂದು ಸಾರಿ ಭಿಕ್ಷೆ ಬೇಡುವುದು ಗುಳೆ ಹೋಗುವುದು ಮತ್ತು ಈ ಬೇಡಗಂಪಣರಲ್ಲಿ ಒಂದು ಗುಂಪು ಮಾತ್ರ ಪೂಜಾರ್ಹರಾಗಿದ್ದು ಇವರಿಗೆ ಮೂರು ವರ್ಷಕ್ಕೆ ಸರದಿಯಂತೆ ಒಂದು ತಿಂಗಳ ಪೂಜೆ ನಿರ್ವಹಿಸಿವುದು ಅದೂ ಸಂಬಳವಿಲ್ಲದೆ ಕಾಯಕವಾಗಿ ನಿರ್ವಹಿ ಸುವುದು ಮುಖ್ಯ ಕಸುಬಾಗಿದೆ.

ಕಂಪಣ ಬೇಡರೇ ಹೇಳುವಂತೆ, ಮಲೆಮಹೇದೇಶ್ವರರು ಈಗ್ಗೆ ೮೦೦ ವರ್ಷಕ್ಕೆ ಹಿಂದೆ ಈ ಬೇಡರ ಮುಗ್ಧ ಭಕ್ತಿಗೆ ಮೆಚ್ಚಿ ಇವರಿಗೆ ಲಿಂಗಧಾರಣೆ ಮಾಡಿಸಿ ಇವರನ್ನೇ ತನ್ನ ಪೂಜಾಕರ್ತರನ್ನಾಗಿ ಮಾಡಿಕೊಂಡಾಗ ಇದ್ದ ಜನಾಂಗದ ಪರಿಸ್ಥಿತಿ ಈ ದಿನಗಳಲ್ಲೂ ಇದೆ. ನಮ್ಮ ಉದ್ಧಾರಕ್ಕೆ ಶ್ರೀಮಹದೇಶ್ವರರೇ ಪುನಃ ಅವಕಾರ ಎತ್ತಿ ಬರಬೇಕೇನೋ ಅನ್ನುವಷ್ಟು ಜನರಲ್ಲಿ ಮೌಢ್ಯತೇ ಇದೆ. ಒಬ್ಬರಿಗೊಬ್ಬರಿಗೆ ಹೊಂದಾಣಿಕೆ ಇಲ್ಲ. ವಿದ್ಯೆ ಇಲ್ಲ ನಾಗರೀಕತೆಯ ಸೊಂಕಿಲ್ಲ. ಈ ಅವಿದ್ಯಾವಂತ ಜನಾಂಗದವರಾದ ನಾವು ನಮ್ಮ ಪರಿಸ್ಥಿತಿ ಯನ್ನು ಸರ್ಕಾರಕ್ಕೆ ತಿಳಿಸುವಷ್ಟು ಶಕ್ತಿಯನ್ನು ಹೊಂದಿಲ್ಲದಿರುವಷ್ಟಾಗಿದೆ.

ಈ ಬೇಡಗಂಪಣ ಜನಾಂಗದವರಾದ ನಾವು ಮೂಲತಃ ಬೇಡರು, ಅರಣ್ಯದಲ್ಲಿ ಕಾಡು ಮನುಷ್ಯರಾಗಿ ಗೆಡ್ಡೆ, ಗೆಣಸು ತಿಂದು ಮಾಂಸಾಹಾರಿಗಳಾಗಿ ಜೀವನ ನಡೆಸುತ್ತಿದ್ದು ಮಲೆಮಹದೇಶ್ವರರು ಈ ಕ್ಷೇತ್ರಕ್ಕೆ ಬಂದಾಗ ಅವರ ಮುಗ್ಧ ಭಕ್ತಿಗೆ ಮೆಚ್ಚಿ ಲಿಂಗಧಾರಣೆ ಮಾಡಿಸಿ ತನ್ನ ಪೂಜಾ ಕರ್ತರನ್ನಾಗಿ ನೇಮಿಸಿಕೊಂಡಿದ್ದು ಈವಾಗ ಲಿಂಗಧಾರಣೆಯಿಂದ ವೀರಶೈವರೆಂದು ಸರ್ಕಾರ ನಮ್ಮನ್ನು ಕಡೆಗಣಿಸಿದೆ. ನಮಗೂ ವೀರಶೈವ ಲಿಂಗಾಯಿತರಿಗೂ ವೈವಾಹಿಕವಾಗಿ ಮತ್ತು ಎಲ್ಲಾ ರೀತಿಯಿಂದಲೂ ಯಾವುದೇ ಸಂಬಂಧವಿಲ್ಲ. ನಾವು ವೈವಾಹಿಕ ಸಂಬಂಧ ಕೂಡ ನಮ್ಮ ಈ ಬೇಡಂಗಂಪಣದಲ್ಲೇ ನಡೆಯಬೇಕು. ನಮ್ಮಲ್ಲಿ ಇನ್ನೂ ಅನೇಕ ಸಾಮಾಜಿಕ ಪಿಡುಗುಗಳು ದುಷ್ಟ ನಂಬಿಕೆಗಳು ಹಾಗೂ ಮೂಢನಂಬಿಕೆಗಳನ್ನು ಪಾಲಿಸುತ್ತಿರುವುದು ಇಂದಿಗೂ ಇದೆ. ಇದಕ್ಕೆ ಮೂಲ ಕಾರಣ ಈ ಜನರಿಗೆ ವಿದ್ಯೆ ಮತ್ತು ನಾಗರೀಕತೆಯ ಅರಿವಿಲ್ಲದಿರುವುದು.

* * *