ಸಣ್ಣಗಿನ ಬೆತ್ತದ ಸಿಬಿಕೆಯಿಂದ ನೇಯ್ದ ಗಟ್ಟಿಮುಟ್ಟಾದ ಬುಟ್ಟಿ.  ಮೇಲ್ಗಡೆ ಕೆಸವಿನ ಸೊಪ್ಪು.  ಇದು ಅಂತಿಂಥಾ ಕೆಸ ಅಲ್ಲ.  ಮರದ ಪೊಟರೆಯೊಳಗೆ ಮಳೆಗಾಲದಲ್ಲಿ ಬೆಳೆಯೋ ಹಸುರು ಪಾಚಿ ಇರ್‍ತದಲ್ಲ, ಅದರ ಮೇಲೆ ಬೆಳೆದ ಕೆಸವಿನ ಹಂಡಾಪಟ್ಟೆ ಎಲೆಗಳು, ಅದರ ಅಡಿಯಲ್ಲಿ ಕಳಲೆ ಕೋಲು !  ಕಂದು ಕೆಂಪು ಬಣ್ಣದ ಪದರ ಬಿಡಿಸಿದ್ರೆ ಬಿಳಿ ಮೃದುವಾದ ತಿರುಳು.  ಇದು ಬಿದಿರಿನ ಪುಟ್ಟ ಮರಿ.  ಅರಣ್ಯ ಇಲಾಖೆಯ ಗಾರ್ಡ್‌ಗೆ ಕಂಡ್ರೆ ಅಡ್ಡ ಹಾಕಿ ದುಡ್ ಕಸೀತಾನೆ ಸೋಮಿ ಅಂತಾಳೆ ಲಿಂಗಮ್ಮ.  ಅದಕ್ಕೇ ಅಡಿಯಲ್ಲಿ ಇಟ್ಟದ್ದು.  ರೇಂಜರ ಹೆಂಡ್ತಿಗೆ, ಫಾರೆಸ್ಟ್ ಸಾಹೇಬ್ರ ಹೆಂಡ್ತಿಗೆ ಹಿತ್ತಲ ಬಾಗಿಲಿನಿಂದ ವ್ಯಾಪಾರ ಮಾಡಿ ಬರ್‍ತೀನಿ ಎನ್ನುತ್ತಾ ಕಣ್ಣು ಮಿಟುಕಿಸಿ ಬಾಯಿಗೆ ಸೆರಗು ಹಿಡಿದು ದೊಡ್ಡದಾಗಿ ಗಹಗಹಿಸುತ್ತಾಳೆ.  ಅದರ ಅಡಿಯಲ್ಲಿ ಚೂರು ಪಕ್ಕಕ್ಕೆ ಗೆಣಸಿನ ಗೆಡ್ಡೆ.  ಹಾಗೇ ಸಂದೀಲಿ ಹೊನಗೊನೆ ಸೊಪ್ಪು, ಒಂದೆಲಗದ ಸೊಪ್ಪು, ಸ್ವಾರಲೇ ಸೊಪ್ಪು, ಕೊಡಸಿನ ಕಡ್ಡಿ ಏನೇನೋ..  ಇವೆಲ್ಲಾ ಮಳೆಗಾಲ ಬಂತಂದ್ರೆ ಮಾತ್ರ ಸಿಗೋ ಕಾಡಿನ ವಸ್ತುಗಳು.  ಹಾಗಂತ ಲಿಂಗಮ್ಮ ವರ್ಷಾವಧಿ ಒಂದಲ್ಲಾ ಒಂದು ಕಾಯಿ, ಹಣ್ಣು, ದಂಟು, ಸೊಪ್ಪು, ಗೆಡ್ಡೆ ಅಂತಾ ಮಾರಾಟಕ್ಕೆ ಪೇಟೆಗೆ ತರ್‍ತಾನೆ ಇರ್‍ತಾಳೆ.  ನೆಲ್ಲಿಕಾಯಿ, ನೇರಳೆಹಣ್ಣು, ಕವಳಿಹಣ್ಣು, ಸುವರ್ಣಗೆಡ್ಡೆ, ತುಂಬ್ರಿಹಣ್ಣು, ನಂಜಲು ಹಣ್ಣು, ಸಂಪಿಗೆ ಹಣ್ಣು, ಕೊಡ್ತಬಾಳೆಕಾಯಿ, ದೊಡ್ಲಿಕಾಯಿ, ಕಂಚಿಕಾಯಿ, ಪೇರ್‍ಲೆಕಾಯಿ, ಬಸಳೆ ದಂಟು, ಹರಿವೆ ದಂಟು, ಹಕ್ಲು ಶೇಂಗಾ, ಕೆಸವಿನ ಗೆಡ್ಡೆ, ಚಗಟೆಸೊಪ್ಪು, ಎಲವರಿಗೆ ಸೊಪ್ಪು, ಗಂಧದ ಕುಡಿ ಹೀಗೆ ಮುಕ್ಕಾಲು ಪಾಲು ಕಾಡಿನದಾದರೆ ಕಾಲು ಪಾಲು ಹಿತ್ತಲಿನದು.  ಹಂದಿಗೋಡು ಸಣ್ಣಮ್ಮ ಚುಮು ಚುಮು ಬೆಳಕು ಹರಿಯುವ ಸಮಯಕ್ಕೆ ಪೇಟೆಯ ಬೀದಿಯಲ್ಲಿರ್‍ತಾಳೆ.  ಹೊಗೆ ಹಿಡಿದು ಕಪ್ಪಾದ ಬಿದಿರಿನ ಬುಟ್ಟಿಯ ತುಂಬಾ ಪಾವು, ಸೇರು, ತಟಾಕು ಪಾತ್ರೆಗಳು.  ಒಂದು ಮೂಲೆಯಲ್ಲಿ ದೊಡ್ಡ ಹಾಲಿನ ಉಗ್ಗ.  ಮತ್ತೊಂದು ಮೂಲೆಯಲ್ಲಿ ಮೊಸರಿನ ಗಡಿಗೆ.  ಬುಟ್ಟಿಯನ್ನು ಎತ್ತಿ ಇಳಿಸಿ ಮಾಡುವಾಗ ಬೀಳದಂತೆ, ತಾಗದಂತೆ ಕೆಳಗೆ ಹಿಟ್ಟಂಡೆ ಹುಲ್ಲಿನ ಇರಿಕೆ.  ಮೊಸರನ್ನು ಅಳೆಯುವ ಪಾತ್ರೆಗಳೇ ಬೇರೆ.  ಹಾಲನ್ನು ಅಳೆಯುವ ಪಾತ್ರೆಗಳೇ ಬೇರೆ.  ಅವೆಂದೂ ಕಣ್ತಪ್ಪಿಯೂ ಅದಲು ಬದಲಾಗದು.

ವರ್ತನೆ ಮನೆಗಳ ಬಾಗಿಲು ತಟ್ಟಿ, ಕೂಗಿ ಕಟ್ಟೆಯ ಮೇಲೆ ಕುಳಿತ ಸಣ್ಣಮ್ಮ ಕವಳದ ಸಂಚಿ ಬಿಚ್ಚಿ ಅಡಿಕೆ ಬಾಯಿಗೆಸೆದುಕೊಂಡು ಎಲೆಗೆ ಸುಣ್ಣ ಹಚ್ಚುವ ವೇಳೆಗೆ ಪಾತ್ರೆ ಹಿಡಿದ ಯಜಮಾನಿ ಬಾಗಿಲಿನಲ್ಲಿ ಸಿದ್ಧ. ಹಾಲು ನಿನ್ನೆ ನೀರಾಗಿತ್ತು ಎಂಬ ತಕರಾರಿನೊಂದಿಗೆ ಪ್ರಾರಂಭವಾಗುವ ಮಾತುಕತೆ ಮಗಳು ಬಿಮ್ಮನಸಿ.  ಅತ್ತೆಮನೆಯಲ್ಲಿ ಭಾಳ ಕೆಲಸ.  ಬೇಗ ತವರಿಗೆ ಕರ್‍ಕೊಂಬರಬೇಕು.  ಎಮ್ಮೆಗೆ ಕಾಳುಕಡಿ ಹಾಕಲು ಹಣ ಸಾಕಾಗ್ತಾ ಇಲ್ಲ… ಹೀಗೆ ಕರುಳುಬಳ್ಳಿಯ ಕತೆಗಳನ್ನೆಲ್ಲಾ ಹಂಚುತ್ತಾ ಸೂರ್ಯ ನೆತ್ತಿಯ ಮೇಲೆ ಬರುವ ವೇಳೆಗೆ ಬುಟ್ಟಿಯೆಲ್ಲಾ ಖಾಲಿ ಖಾಲಿ.  ಹಾಲು, ಮೊಸರು, ಮಜ್ಜಿಗೆ ವಾರಕ್ಕೊಮ್ಮೆ ಬೆಣ್ಣೆ, ತುಪ್ಪ ಇವೆಲ್ಲಾ ಮುಖ್ಯ ವ್ಯಾಪಾರಗಳಾದರೆ ಜೊತೆಯಲ್ಲಿ ಕನಕಾಂಬರ, ಕಾಕಡ, ಡೇರೆ, ಗ್ವಾಟಳೆ, ರುದ್ರಗ್ವಾಟಳೆ, ಸಂಪಿಗೆ, ರಂಜಳ, ಸುರಗಿ ಇವೆಲ್ಲಾ ಕೈಖರ್ಚಿಗೆ ದಕ್ಕುವ ಕಾಸಿನ ವ್ಯಾಪಾರ.  ಸಣ್ಣಮ್ಮ ಕಾಸಿನಸರವನ್ನು ಸಹ ಇದೇ ವ್ಯಾಪಾರ ಮಾಡಿಯೇ ಮಾಡಿಸಿದ್ದು.  ಸೊಂಟಕ್ಕೆ ಬೆಳ್ಳಿಯ ಡಾಬು, ಕೈಗೆ ಬೆಳ್ಳಿಯ ಕಡಗ, ಕಾಲಿಗೆ ಅಂದುಗೆ, ಮೂಗಿಗೆ ಬೇಸರಿ, ಕೆನ್ನೆ ಸರಪಳಿ, ಮುಂದಲೆಬಟ್ಟು, ನಾಗರಗೊಂಡೆ, ಹೂವು ಹೀಗೆ ತನಗೆ, ಮಗಳಿಗೆ ಅಂತೆಲ್ಲಾ ಬೆಳ್ಳಿ ಬಂಗಾರ ಮಾಡಿಸಿದ್ದೇ ಬೀದಿ ಸುತ್ತಿ ವ್ಯಾಪಾರ ಮಾಡಿದ ದುಡ್ಡಿನಿಂದ.  ಅಳಿಯನಿಗೆ ನಲವತ್ತು ಸಾವಿರ ವರದಕ್ಷಿಣೆ, ಚೈನು, ಉಂಗುರ, ವಾಚು ಇವೆಲ್ಲಾ ಸಣ್ಣಮ್ಮನ ಸಂಚಿಯದೇ ಉಡುಗೊರೆ.  ಮಾಸ್ತಿಯವರ ಮೊಸರಿನ ಮಂಗಮ್ಮ ನೆನಪಾದಳೆ?

ಸುರುಗಿ ದಂಡೆಗೆ ಒಂದು ಮೊಳಕ್ಕೆ ಈಗ ಐದು ರೂಪಾಯಿಗಳು.  ಕನಕಾಂಬರ ಒಂದು ರೂಪಾಯಿ.  ಡೇರೆ ಹೂವಿಗೆ ಕುಚ್ಚಿಗೆ ಎಂಟಾಣೆ, ಪೂನಾಕ್ಕೆ ಎರಡು ರೂಪಾಯಿ, ಕಡ್ಡಿಗೆ ಎರಡು ರೂಪಾಯಿ.  ಬೆಳಗಿನ ಅಂಗಡಿ ಪೂಜೆಗೆ ಹೂವಿನ ಅಂಗಡಿಯ ಹೂವುಗಳು ಹಳಸಲು ಬೆಳಗ್ಗೆ ಲಂಗಜಂಪರ್ ತೊಟ್ಟು ವಿವಿಧ ನಮೂನೆಯ ಹೂಗಳನ್ನು, ಮಾಲೆಗಳನ್ನು ತರುವ ಹುಡುಗಿಯರ ಚಿಗುರು ಕೈಯಲ್ಲಿಯೇ ಅರಳಿದೆಯೇನೋ ಎನ್ನುವ ಹೊಸ ಹೂಗಳ ಸೊಗಸೇ ಬೇರೆ.  ಅಂಗಡಿಯೊಳಗಿನ ದೇವರಪಟಕ್ಕೆ, ಫೋಟೋಗೆ, ವಿಗ್ರಹಗಳಿಗೆ, ಯಂತ್ರಗಳಿಗೆ, ಲಾರಿಯವರಿಗೆ, ಬಸ್ಸು, ಕಾರು, ಬೈಕು, ಟೆಂಪೋ, ಸತ್ಯನಾರಾಯಣ ಪೂಜೆ, ಲಕ್ಷ್ಮೀಪೂಜೆ, ಶಾರದಾ ಪೂಜೆ ಹೀಗೆ ಶುರುವಾದ ವ್ಯಾಪಾರ, ಉದ್ದ ಜಡೆಗೆ ಒಂಟಿ ಹೂ, ತುರುಬಿನ ಶೃಂಗಾರಕ್ಕೆ ಒತ್ತಾಗಿ ಕಟ್ಟಿದ ಕನಕಾಂಬರ, ಸಂಪಿಗೆ, ಕಣಗಲ ಮೊಗ್ಗು, ದೂರ ದೂರ ಕಟ್ಟಿದ ಮಲ್ಲಿಗೆ ಹರಡಿದ ಮುಡಿಗೆ, ಎರಡು ಜಡೆಗೆ ಉದ್ದಮಾಲೆ, ಯಾರ್‍ಯಾರಿಗೆ ಯಾವುದು ಬೇಕೆಂಬುದು ಈ ಹುಡುಗಿಯರಿಗೆ ಚೆನ್ನಾಗಿ ಗೊತ್ತು.  ಚೌಕಾಸಿಯೂ ಗೊತ್ತು.  ಭಕ್ತರನ್ನೂ ಬಲ್ಲರು, ಜೊಲ್ಲು ಸುರಿಸುವವರನ್ನೂ ಸಹ.  ಇದೆಲ್ಲಾ ತಾಸೊಪ್ಪತ್ತಿನ ವ್ಯವಹಾರ.  ಆಮೇಲೆ ಚಿಲ್ಲರೆ ಕಾಸು ಎಣಿಸಿ ಗೆಜ್ಜೆಗೆ, ಬಳೆಗೆ, ಪಲುಕಕ್ಕೆ, ಲಾಲಗಂಧಕ್ಕೆ, ಸ್ನೋ, ಪೌಡರ್ರು ಅರೆರೆ ಎಷ್ಟೆಲ್ಲಾ ಬೇಕು.  ಶನಿವಾರ ಭಿಕ್ಷಕ್ಕೆ ಬರುವ ಮಣಿಸರದವಳಲ್ಲಿ ಏನೇನು ಕೊಳ್ಳಬೇಕೆಂಬ ಪಟ್ಟಿ ಉದ್ದವಾದಂತಿದೆಯಲ್ಲ!!

ಕಿರಣ್ ಸ್ನೋ ಹಚ್ಚಿದರಂತೂ ಖಂಡಿತಾ ಬೆಳ್ಳಗಾಗುತ್ತಾರೆಂಬ ನಂಬುಗೆ.  ಹೇನು, ದಪ್ಪಗುಳಿ ತೆಗೆಯಲು ಜಸ್ಸೂರು ಹಣಿಗೆಯೇ ಬೇಕು.  ಬಟ್ಟೆಗಳು ಘಮಘಮ ಎನ್ನಲು, ಹುಳ ಹಿಡಿದು ಲಡ್ಡಾಗದಿರಲು ದಾಮ್ರ ಗುಳಿಗೆ.  ಎರಡು ಜಡೆಯ ತುದಿಗೆ ಬಣ್ಣದ ರಿಬ್ಬನ್, ಕ್ರಾಪು ಹಣಿಗೆ, ಜಡಕು ಹಣಿಗೆ, ಹೇರ್‌ಪಿನ್, ಪಿನ್, ಗುಲಾಬಿ ಹೂವು, ಪೌಡರ್ರು, ದಿನಾಲೂ ಊರಿ ಊರಿ ಬಾಚಲು ಕೊಬ್ಬರಿ ಎಣ್ಣೆಯಾದರೆ ವಾರಕ್ಕೊಮ್ಮೆ ಮಿಂದ ದಿನ ಘಮಘಮ ಹೇರ್ ಆಯಿಲ್.  ಮೈಗೆ ಪೂಸಲು ಗಂಧದೆಣ್ಣೆ, ಕರಿಮಣಿ, ಕೈಬಳೆ, ಹಸುರು ಬಳೆ, ಕನ್ನಡಿ, ಓಹೋ… ಮಣಿಸರದವಳ ಪುಟ್ಟ ಬಗಲು ಚೀಲದಲ್ಲಿ ಹೆಂಗಳೆಯರ ಶೃಂಗಾರದ ಸಾಮ್ರಾಜ್ಯ.

ಬಳೆ ವ್ಯಾಪಾರದವರು ಬಂದರೆ ಸುಮ್ಮನೆ ಕಳಿಸುವ ಜಾಯಮಾನವೇ ಇವರದಲ್ಲ.  ಒಂದು ಲೋಟ ಮಜ್ಜಿಗೆಯೋ, ಕವಳದ ಸಂಚಿಯಿಂದ ಒಂದಡಿಕೆಯನ್ನೋ ಕೇಳುತ್ತಾ ಜಗುಲಿಯಲ್ಲಿ ಶಿವಾಜಿ ಜೋಗಿ ಕುಳಿತನೆಂದರೆ ಸುತ್ತಲ ಕೇರಿಯ ಸುಮಂಗಲಿಯರೆಲ್ಲಾ ಜಮಾವಣೆ.  ಹಸುರು ಬಳೆ, ಕೆಂಪು ಬಳೆ, ಕಚ್ಚಿನ ಬಳೆ, ವರ್ಕಿನ ಬಳೆ, ಬೊಟ್ಟಿನ ಬಳೆ, ಚುಕ್ಕಿಬಳೆ, ಪಿಳಿಪಿಳಿ ಬಳೆ, ರೇಖಿಬಳೆ, ಸಾದಾ ಬಳೆ, ಬಣ್ಣದ ಬಳೆ, ರೇಷ್ಮೆ ಬಳೆ ಎಷ್ಟೆಲ್ಲಾ ರೀತಿಯ ಗಾಜಿನ ಬಳೆಗಳು.  ಹಚ್ಚೆ ಕುಚ್ಚಿಸಿಕೊಂಡ ಕೈಗಳ ತುಂಬಾ ಜಲ್‌ಜಲ್ ಎನ್ನುವ ಬಳೆಗಳು ತುಂಬಿ ತುಳುಕಿದ ಮೇಲೆ ಶಿವಾಜಿಯ ಬಳೆಯ ಚೀಲ ಹಗುರಾಗುತ್ತಿತ್ತು.  ಜರಕಿನ ಚಪ್ಪಲಿಯ ಸದ್ದು ಗದ್ದೆಯಿಂದ ಅಪ್ಪಯ್ಯ ಬರುತ್ತಿದ್ದಾನೆನ್ನುವ ಸುದ್ದಿ ತಂದು ಚಿಗರೆಯರ ಗದ್ದಲವನ್ನು ದೂರ ಮಾಡುತ್ತಿತ್ತು.

ಅಪ್ಪಯ್ಯ ಸೊಪ್ಪು ಕಡಿದು ಕಡಿದು ಬಾಯಿಮೊಂಡಾದ ಕತ್ತಿಯನ್ನು ಮಸೆಯುತ್ತಾ ಗದ್ದೆ ಕೆಲಸ, ತೋಟದ ಕೆಲಸಗಳ ಹೊಣೆ ವಿವರಿಸುತ್ತಿರುವಾಗಲೇ ಯಂಕಪ್ಪಶೆಟ್ಟಿ ಹಾಜರು.  ಅದೆಂತಾ ಹಳೇ ಕತ್ತಿ ಮಸೀತಾ ಇದ್ರಿ ಮಾರಾಯರೇ. ಇದು ನೋಡಿ.  ಒಳ್ಳೆ ಬ್ಲೇಡಿನ ಕತ್ತಿ.  ಮರ ಕಡಿದರೂ ಮೊಂಡಾಗದು ಕಾಣೆ ಎನ್ನುತ್ತಾ ಸರಂಜಾಮ ಬಿಚ್ಚತೊಡಗಿದನೆಂದರೆ ಆಳುಗಳೆಲ್ಲಾ ಕೆಲಸ ಬಿಟ್ಟು ಹಾಜರ್.  ಯಂಕಪ್ಪಶೆಟ್ಟಿಯದು ಸ್ವಾತಂತ್ರ್ಯಪೂರ್ವ ಕಾಲದಿಂದಲೂ ಇರುವ ವ್ಯಾಪಾರ.  ಅಂದು ಚೂರಿ, ಕತ್ತಿ, ಚಾಕು, ಹಾರೆ, ಸುತ್ತಿಗೆಗಳನ್ನೆಲ್ಲಾ ಗುಟ್ಟಾಗಿ ಮಾರಿದ್ದೂ ಉಂಟಂತೆ.  ಈಗ ಮಾತ್ರ ಕುಡುಗೋಲು, ಕತ್ತಿ, ಸೊಪ್ಪುಗತ್ತಿ, ಕಬ್ಬುಕತ್ತಿ, ಮೆಟಗತ್ತಿ, ಬಾಚಿ, ಪಿಕಾಸಿ, ಗುದ್ದಲಿ, ಕೊಡಲಿ ಹೀಗೆ ಬೇಕು ಅಂದಿದ್ದನ್ನೆಲ್ಲಾ ಮನೆಬಾಗಿಲಿಗೆ ತಂದಿಳಿಸುವ ಕುಂದಾಪುರದ ಜನ.  ಹನ್ನೆರಡು ಹತ್ತು ಕೊಡೀನಿ ಎನ್ನುತ್ತಾ ಹರಿತವಾದ ಕತ್ತಿಯನ್ನು ಝಳಪಿಸುತ್ತಾ ದೊಡ್ಡದನಿಯಲ್ಲಿ ವ್ಯಾಪಾರಕ್ಕೆ ತೊಡಗಿದನೆಂದರೆ ತುದಿಕಾಲಿನಲ್ಲಿ ಕುಳಿತ ಹಳೆಯ ತಲೆಗಳೆಲ್ಲಾ ಯುದ್ಧಕ್ಕೆ ಸಿದ್ಧ.  ಹನ್ನೆರಡಾಣೆಗೆ ಇದನ್ನು ಇಲ್ಲೇ ಕೊಂಡಿದ್ದೆ.  ಈಗ ಹಿಂಗ್ ಹೇಳಿದ್ರೆ ಕೊಡೋರು ಯಾರು?  ನೀವು ೩೦ ವರ್ಷದ ಹಳೇ ರೇಲು ಕಂಬದ್ ರೇಟ್ ಹೇಳ್ತ್ರಿ  ಗೊತ್ತಿತ್ತಾ ಮಾರಾಯ್ರೆ.  ನೂರೆಪ್ಪತ್ತು ಕೆಜಿಗೆ ಕಾಣಿ.  ನೀವು ಬ್ಯಾಡಾಂದ್ರೆ ತಕ್ಕೊಂದೋಪ್ದೆ.  ಕಮ್ಮಿ ಕೊಡಕ್ಕಾಗ್ತಿಲ್ಯೆ.  ಸರಿ ತೂಕ ಹಚ್ಚನಾ?  ನಂದು ಚೌಕಾಸಿಲ್ಯೆ.  ನೀವು ಎಷ್ಟ್ ಕೊಡ್ರ್ತಿ ಹೇಳೀನಿ.  ಒಂದ್ ರೇಟ್ ಮಾಡ್ವು.  ಎಷ್ಟ್ ಕತ್ತಿ ಬೇಕು?  ಇದೇ ಜಾಗದಾಗಿ ಒಮ್ಮಿಗೆ ೧೫-೨೦ ಕತ್ತಿ ಮಾರಿದ್ದಿತ್ತು.  ಈಗ ಮೂರು ಕತ್ತಿ ಹಿಡ್ಕಂಡು ಎಂಟು ಹತ್ತು ಕೊಡ್ತೀನಿ ಅಂತ್ರಿ.  ನ್ಯಾಯಾನ ನೀವೇ ಹೇಳೀನಿ  ಯಂಕಪ್ಪಶೆಟ್ಟಿ ಇದ್ದಕ್ಕಿದ್ದಂತೆ ಮನೆಯ ನೆಂಟನೇ ಆಗಿಬಿಡುತ್ತಾನೆ.  ಕೆಂಪಡಿಕೆ ಕೇಳಲು ಒಳಬಂದ ಶೆಟ್ಟಿಗೆ ಅಡುಗೆಮನೆಯಿಂದಲೇ ಯಜಮಾನಿ ಮುಂದಿನ ಸಾರಿ ಕಾವಲಿ, ಪಡ್ಡು ಕಾವಲಿ ತಗೊಂಬಾ ಮಾರಾಯ ಎಂದು ಕೂಗು ಹಾಕುತ್ತಾಳೆ.

ಮಧ್ಯಾಹ್ನ ಊಟಕ್ಕೆ ಹೋಗಲು ಕೊಡದಂತೆ ಕೂರುವ ಪಾತ್ರೆ ವ್ಯಾಪಾರಿ ಚಂದ್ರಪ್ಪನದು ಸಮಯದ ಪರಿವೆಯಿಲ್ಲದ ವ್ಯಾಪಾರ.  ಬೆಳಗ್ಗೆ ಒಂಬತ್ತಕ್ಕೆ ಪ್ರತ್ಯಕ್ಷ.  ಹಿಂಡಾಲಿಯಂ ದಬರಿ, ಅಲ್ಯೂಮಿನಿಯಂ ತಪ್ಪಲೆ, ಸ್ಟೀಲ್ ಉಗ್ಗ, ಗೋದಾವರಿ ಪಾತ್ರೆ, ಚೊಂಬು, ನೀರು ಕಾಸೋ ಕಂಚಿನ ಪಾತ್ರೆ, ತಾಮ್ರದ ಗಳಿವಾರ, ಹಿತ್ತಾಳೆ ಚೊಂಬು, ಕವಳಿಗೆ, ಗಿಂಡಿ, ಕೊಂಬಿನ ಗಿಂಡಿ, ಜರ್ಮನ್ ಬೆಳ್ಳಿಯ ಕೊಡಪಾನ, ತಾಮ್ರದ ಕೊಡಪಾನ, ತಂಬಿಗೆ, ಡಬ್ಬಿ, ಚಪಾತಿ ಬಾಕ್ಸ್, ಟಿಫಿನ್‌ಕ್ಯಾರಿ, ಹಾಲಿನ ಕೌಳಿಗೆ ಒಂದೇ ಎರಡೇ.  ಪುಟ್ಟ ಬುಟ್ಟಿಯಲ್ಲಿ ಬಟ್ಟೆ ಮುಚ್ಚಿ ತಂದದ್ದನ್ನೆಲ್ಲಾ ಹರಡಿದನೆಂದರೆ ಒಂದು ಅಂಕಣ ತುಂಬಾ ಪಾತ್ರೆಗಳ ಹರಗಾಣ.  ಬೇಕಾದ್ದು ಬೇಡದ್ದು ಅರೆಮನಸಾಗಿದ್ದು ಎಲ್ಲವನ್ನೂ ಒಂದಕ್ಕೆ ನಾಲ್ಕು ಪಟ್ಟು ಹೆಚ್ಚು ಬೆಲೆ ಏರಿಸಿಬಿಡುತ್ತಾನೆ.  ಆಮೇಲೆ ಅವನ ಹೊಗಳಿಕೆ, ಯಜಮಾನಿಯ ದೂಷಣೆ.  ಹೆಂಗಸರ ಪಾತ್ರೆಯ ವ್ಯಾಮೋಹ ತಿಳಿದಾತ.  ಹಾಗೇ ಹಿಂದಿರುಗಿದ್ದೇ ಇಲ್ಲ.  ಹಳೇ ರೇಷ್ಮೆ ಸೀರೆ ಜರಿ, ಹಳೆಕಂಚು, ತಾವ್ರದ ಪಾತ್ರೆಗಳು.  ಹಳೇ ಗಂಟೆ, ಮುರುಕು, ತೂತಾದ ಪಾತ್ರೆಗಳ ಖರೀದಿಯೂ ಉಂಟು. ಅದಕ್ಕೆ ಬದಲಾಗಿ ಹೊಸ ಲಕಲಕಾ ಎನ್ನುವ ಸ್ಟೀಲ್ ಪಾತ್ರೆಗಳನ್ನು ನೀಡಿದಾಗ ಹೊಳೆವ ಮುಖವನ್ನು ನೋಡಿಯೇ ಮಿಕ ಬಲೆಗೆ ಬಿತ್ತೆಂದು ಇನ್ನಷ್ಟು ವ್ಯಾಪಾರ ಮಾಡುವ ಛಾತಿಯನ್ನು ಚಂದ್ರಪ್ಪ ಬಲ್ಲ.  ಒಟ್ಟಾರೆ ಪಾತ್ರೆ ಬೇಕೆನ್ನುವ ಹೆಂಡತಿ, ದುಬಾರಿ ಎನ್ನುವ ಗಂಡ.  ಇಬ್ಬರಿಗೂ ಜಗಳ ಹಚ್ಚಿ ಆಕೆಯೇ ಗೆಲ್ಲುವುದನ್ನು ಹಂಬಲಿಸುವ, ಬೆಂಬಲಿಸುವ ಪಾರ್ಟಿದಾರ.

ಇವನಿಗೆ ಜೊತೆಗಾರ ಬೆಡ್‌ಶೀಟ್, ಸೀರೆ, ಕಂಬಳಿಗಳನ್ನು ಮಾರುವವ.  ಮಳೆಗಾಲದಲ್ಲಿ ನೆಟ್ಟಿ ಮುಗಿದು ಗದ್ದೆ ಕೆಲಸ, ತೋಟದ ಕೆಲಸಗಳು ಕಳೆಯುತ್ತಿದ್ದಂತೆ ಇವರದೆಲ್ಲಾ ಒಬ್ಬರ ಹಿಂದೆ ಒಬ್ಬರ ದಾಳಿ.  ಶ್ರಾವಣದಿಂದ ಶುರುವಾಗುವ ಹಬ್ಬಗಳಿಗೆ, ಮಳೆಗಾಲಕ್ಕೆ, ಚಳಿಗಾಲಕ್ಕೆ ಇವನ್ನೆಲ್ಲಾ ಹಳ್ಳಿಗರು ಕೊಳ್ಳುತ್ತಾರೆನ್ನುವುದೂ ಗೊತ್ತು.  ಜಡಿಮಳೆಯಲ್ಲಿ ಹಲಸಿನ ಬೀಜವನ್ನೋ, ಹಪ್ಪಳವನ್ನೋ ಮೆಲ್ಲುತ್ತಾ ಕುಳಿತ ಹಳ್ಳಿಗರಿಗೆ ಈ ಮನೆಬಾಗಿಲ ವ್ಯಾಪಾರ ಒಂದಿಷ್ಟು ಟೈಂಪಾಸ್.

ದೀಪಾವಳಿ ಬಂತೆಂದರೆ ಬರುವ ವ್ಯಾಪಾರಿಗಳೇ ಬೇರೆ.  ಕುಂಬಾರರಿಗೆ ವರ್ಷದ ಕೆಲಸವನ್ನೆಲ್ಲಾ ಒಟ್ಟಿಗೆ ಮಾಡುವ ಹವಣಿಕೆ.  ಗಾಡಿಯಲ್ಲಿ ಮಡಿಕೆ, ಕುಡಿಕೆ, ಹಣತೆ, ಗಡಿಗೆ, ಪೆಣತೆ, ಬಾನಿ, ಹಂಡೆ, ಹರವಿ ಏನೆಲ್ಲಾ ತುಂಬಿಕೊಂಡು ನಸುಕಿನಲ್ಲೇ ಹೊರಡುತ್ತಾರೆ.  ಊರೂರು ಸುತ್ತುತ್ತಾ ವ್ಯಾಪಾರ ಕುದುರಿಸುವ ಇವರು ಬಡವರ ಬಂಧುಗಳು.  ಕಪ್ಪುಮಣ್ಣಿನ ಈ ಪಾತ್ರೆಗಳೆಲ್ಲಾ ಬಲು ಗಟ್ಟಿ.  ಕೊಟ್ಟಿಗೆಯಲ್ಲಿ ಜಾನುವಾರುಗಳಿಗೆ ನೀರು, ಅಕ್ಕಚ್ಚು ಕುಡಿಸಲು ಇಟ್ಟ ದೊಡ್ಡಬಾನಿಗಳು-ಹತ್ತಾರು ವರ್ಷ ಉಳಿಯುವ ಹತ್ತಿಪ್ಪತ್ತು ರೂಪಾಯಿಗಳ ಮಾಲು.  ಬಯಲುಸೀಮೆಯಿಂದ ಬಂದ ಕಲ್ಲುಗಡಿಗೆಗಳನ್ನು ಹೊಗ್ಗಂಡಿ ಕೋಣೆಯಲ್ಲಿ ಇಂದಿಗೂ ಜೋಪಾನವಾಗಿಟ್ಟಿರುವುದನ್ನು ಅನೇಕ ಮನೆಗಳಲ್ಲಿ ಕಾಣಬಹುದು.  ವಿಶೇಷವಾದ ಹುಡಿಪಲ್ಯ, ಸಾಸಿಮೆ, ಕಾಳುಮೆಣಸಿನ ಹಣ್ಣಿನ ತಂಬಳಿ, ಉಪ್ಪಿನಕಾಯಿ, ಕೂಟು ಮುಂತಾದ ಅಡುಗೆಗಳಿಗೆ ಮಾತ್ರ ಬಳಕೆ.  ರುಚಿ ಮಾತ್ರ ಅದ್ವಿತೀಯ.  ಅದೇ ರೀತಿ ತೊಡೆದವ್ವು ಎನ್ನುವ ಸಿಹಿತಿಂಡಿ ಮಾಡಲು ಸಹ ವಿಶೇಷವಾಗಿ ತಯಾರಿಸಿದ ಗಡಿಗೆಯೇ ಬೇಕು.  ವರ್ಷಕ್ಕೆ ಒಂದೆರಡು ಬಾರಿ ಮಾತ್ರ ಬಳಕೆ.  ಆಮೇಲೆ ಉಪ್ಪರಿಗೆ ಸೇರುವ ಇವು ಮೂರ್‍ನಾಲ್ಕು ತಲೆಮಾರು ಕಾಣುತ್ತವೆ.

ದೀಪಾವಳಿಯ ಇನ್ನೊಂದು ಸಡಗರ ಎತ್ತು, ಹೋರಿ, ದನಕರುಗಳ ಸಿಂಗಾರ.  ಕೌಲುಬೇರು ಕಿತ್ತು ಜಜ್ಜಿ ನಾರು ತೆಗೆದು ಮಾಡುವ ದಂಡೆ, ಕಣ್ಣಿ, ಕುಚ್ಚುಗಳು, ಪುಂಡಿಗಿಡಗಳನ್ನು ಕೆರೆಯಲ್ಲಿ ನೆನೆಸಿ ನಾರು ತೆಗೆದು ಹಗ್ಗ, ಬಾರುಕೋಲು, ಮೂಗುದಾರ, ಕಣ್ಣಿ, ಕೊಳ್ಳಂಗಡ, ಮುಖ್ಹಂಡ, ದಂಡೆ ಇವುಗಳನ್ನೆಲ್ಲಾ ದನ ಕಾಯುವವರು ಮಾಡಿ ಮಾರಲು ತರುತ್ತಿದ್ದರು.  ಕೆಲವರು ಬಳ್ಳಿಗಳ ಹಗ್ಗ, ದಂಡೆಗಳನ್ನೂ ತರುತ್ತಿದ್ದರು.  ಅದರೊಂದಿಗೆ ಕೋಡುಗುಣಿಸೆ, ಬಾಸಿಂಗ, ಕಾಲಿನ ಗೆಜ್ಜೆ, ಗಂಟೆ, ಗಗ್ಗರ, ಮಂಟೆ, ಬಾಲದಂಡೆ, ಮಣಿಸರ, ಕವಡೆಸರ, ದೃಷ್ಟಿದಾರ, ಕಂಬಳಿಪಟ್ಟಿ, ಬಣ್ಣ, ಸರಪಳಿ, ರಿಬ್ಬನ್ನು, ಬೆನ್ನಾಸು ಏನೆಲ್ಲಾ ವ್ಯಾಪಾರ.  ಅಲಂಕರಿಸುವಲ್ಲಿ ಪೈಪೋಟಿ, ತರಬೇತಿ ನೀಡಿ ಊರೊಳಗೆಲ್ಲಾ ಸಿಂಗರಿಸಿ ತಿರುಗಿಸುವುದರಲ್ಲಿ ಸವಾಲು.  ತಮ್ಮದು ಹಳೇ ಅಂಗಿ ಪಂಚೆಯಾದರೂ ಎತ್ತಿಗೆಲ್ಲಾ ಚಂದಾಗಿರಬೇಕೆಂಬ ಅಂತಃಕರಣ.  ಕುಮಾರಿಯರೆಲ್ಲಾ ಕಣ್ಣರಳಿಸಿ ನೋಡಿ ಹುಬ್ಬು ಹಾರಿಸಿ ಪ್ರಶಂಸಿಸಬೇಕೆಂಬ ಆಂತರ್ಯ.

ಭೂಮಣ್ಣಿ ಹಬ್ಬಕ್ಕೆ ಭೂಮಣ್ಣಿ ಬುಟ್ಟಿ ವ್ಯಾಪಾರಿಗಳದ್ದೇ ಕಾರುಬಾರು.  ಭೂಮಣ್ಣಿ ಬುಟ್ಟಿ ತಂದು ಕೆಮ್ಮಣ್ಣು ಸಗಣಿಯ ಸಾರಣೆ.  ಅಕ್ಕಿಹಿಟ್ಟಿನ ಬಣ್ಣದಿಂದ ಬಿಡಿಸಿದ ಚಿತ್ತಾರ.  ಅದರೊಳಗೆ ಹಬ್ಬದ ಅಡುಗೆ ತುಂಬಿ ಹೊತ್ತೊಯ್ಯುವ ಸಂಪ್ರದಾಯ.

ಕೊಯ್ಲಿನ ಪ್ರಾರಂಭವೂ ಅದೇ ಸಮಯಕ್ಕೆ.  ಅದಕ್ಕಾಗಿ ಅಡಿಕೆ ಒಣಗಿಸುವ ತಟ್ಟ್ಟೆ, ಬುಟ್ಟಿ, ಹೆಡಿಗೆ, ಚಟ್ಟೆ, ಪುಟ್ಟಿ ಏನೆಲ್ಲಾ ಸೈಕಲ್ ಮೇಲೆ ಬರುತ್ತಿದ್ದವು.  ಹೂವಿನ ಬಿಬ್ಬಲ, ಮೊರ, ಹೆಗಲುಬುಟ್ಟಿ, ಕಾಶಿಬುಟ್ಟಿ, ಮರಸಣಿಗೆ, ಯಶೋಮುಚ್ಚಲು, ಬೀಸಣಿಗೆಯವರೆಗೂ ಇವರ ತಯಾರಿಕೆಗಳು.  ಇವೆಲ್ಲಾ ಈಗಲೂ ಅಗ್ಗ.  ಈಗಲೂ ಅವಶ್ಯಕ.

ಒನಕೆ, ಹಾರೇಕೋಲು, ಮರದ ಮರಿಗೆ, ಮರದ ಹುಟ್ಟುಗಳು, ರಂಗೋಲಿಹಿಟ್ಟು, ಕಡ್ಡಿ ಹಿಡಿ, ಈಚಲು ಹಿಡಿ, ಈಚಲು ಚಾಪೆ ಇವುಗಳೆಲ್ಲಾ ಪ್ರತಿವರ್ಷ ಬಂದರೆ, ಕತ್ತೆಯ ಮೇಲೆ ಹೇರಿಕೊಂಡು ಬರುವ ಬೀಸೋಕಲ್ಲು.  ಒರಳುಕಲ್ಲು, ಅರೆಯೋ ಕಲ್ಲು, ಕಲ್ಲುಗುಂಡು, ನಾಲ್ಕಾರು ವರ್ಷಗಳಿಗೊಮ್ಮೆ ಮಾತ್ರ.  ಹಾಗಂತ ಇವು ಇಂಥದೇ ನಿಶ್ಚಿತ ದಿನಗಳಲ್ಲಿ ಬರುವ ವ್ಯಾಪಾರವಲ್ಲ.

ಅಡಿಕೆ ಕೊಯ್ಲು ಮುಗಿದು ಶಿವರಾತ್ರಿಯ ಸಮಯಕ್ಕೆ ಘಟ್ಟದ ಕೆಳಗಿನಿಂದ ಸಂಭಾವನೆ ಭಟ್ಟರು ಬಂದರೆ ಬಯಲುಸೀಮೆಯಿಂದ ಜಂಗಮರು.  ಇವರು ಅಶನಕ್ಕಾಗಿ ಬಂದಿದ್ದರೂ ಜೋಳಿಗೆಯಲ್ಲಿ ಒಂದಿಷ್ಟು ಮಾರುವ ಗಂಟೂ ಇರುತ್ತದೆ.  ಜನಿವಾರ, ಶಿವದಾರ, ವಿಭೂತಿ, ಗೋಪೀಚಂದನ, ತಾಮ್ರದ ಉಂಗುರ, ಹರಳು, ಸ್ಫಟಿಕ, ರುದ್ರಾಕ್ಷಿಯ ಜಪಮಾಲೆಗಳು.  ಮುದ್ರೆ, ಉಡುದಾರ, ದೃಷ್ಟಿದಾರ ಹೀಗೆ ಭಕ್ತರಿಗೆ ಮಾತ್ರ ಮೀಸಲು.

ಆಮೇಲೆ ಬೇಸಿಗೆಗೆ ಹುರುಳಿಗಾಡಿಯಿಂದ ಪ್ರಾರಂಭವಾಗುವ ಕಾಳು ಬೇಳೆಯವರು.  ಉದ್ದು, ಹೆಸರು, ಎಳ್ಳು, ಮೆಂತೆ, ಕೊತ್ತಂಬರಿ, ತೊಗರಿ, ಕಡಲೆ ಆಮೇಲೆ ಕೆಂಪುಮೆಣಸಿನಕಾಯಿ, ಹುಣಸೇಹಣ್ಣು ಸಹ ತರತೊಡಗುತ್ತಾರೆ.  ಬಯಲುಸೀಮೆಯ ಅರೆ ಮಲೆನಾಡಿನ ಈ ಜನರಿಗೆ ಬರೀ ಭತ್ತ, ಅಡಿಕೆ, ಸಾಂಬಾರ ಬೆಳೆಯುವ ಮಲೆನಾಡು, ಗ್ರಾಹಕರ ಬೀಡು.  ಇವರೊಂದಿಗೆ ಕಡ್ಲೆಕಾಯಿ ಎಣ್ಣೆ (ಒಳ್ಳೆಣ್ಣೆ), ಗಾಡಿಯ ಗಾಲಿಗೆ ಬಿಡಲು ಹರಳೆಣ್ಣೆ, ಕುಡುಬಿ ಎಣ್ಣೆ, ಎಳ್ಳೆಣ್ಣೆ ಕಜ್ಜಾಯ ಕರಿಯಲು, ಕೊಬ್ಬರಿ ಎಣ್ಣೆ ಹೀಗೆ ಗಾಣಿಗರೊಂದಿಗೆ ಗುದ್ದಾಟ.  ಬಹುಶಃ ತಳ್ಳುಗಾಡಿಯಲ್ಲಿ ಸೀಮೆಎಣ್ಣೆ ಮನೆಬಾಗಿಲಿಗೆ ಬರುವುದು ನಿಂತು ಹತ್ತು ವರ್ಷಗಳೇ ಆಯ್ತೇನೋ?

ಐಸ್‌ಕ್ಯಾಂಡಿ ಚೀಪಿದ್ದು, ಬೊಂಬಾಯಿ ಮಿಠಾಯಿ ಚಪ್ಪರಿಸಿದ್ದು, ಆಲೆಮನೆಯಲ್ಲಿ ಮಂಡಕ್ಕಿ ಕಂಬಳ ಜೇಬಿಗೆ ತುಂಬಿಕೊಂಡು ಶಾಲೆಯಲ್ಲಿ ಪಾಠ ಮಾಡಬೇಕಾದ್ರೆ ಬಟಾಣಿಕಾಳು, ಹುರಿಗಾಳು, ಖಾರದ ಶೇಂಗಾ ಬೀಜಗಳನ್ನು ಕಟುಂ ಕಟುಂ ತಿಂದಿದ್ದು ಇವೆಲ್ಲಾ ಸೈಕಲ್ ಮೇಲೆ ಹೊತ್ತು ತರ್‍ತಿದ್ದ ವ್ಯಾಪಾರಿಗಳೇ ಅಲ್ವಾ ಕೊಟ್ಟಿದ್ದು.  ಗಾಜಿನ ಪೆಟ್ಟಿಗೆಯೊಳಗೆ ತುಂಬಿ ತರ್‍ತಿದ್ದ ಬೊಂಬಾಯಿ ಮಿಠಾಯಿಯವನ ಗಾಡಿಯ ಗಣಗಣ ಗಂಟೆ ಸದ್ದು ಈಗ್ಲೂ ಕಿವಿಯೊಳಗೆ ಇದೆ ಅಂದ್ಕೊಂಡಿದ್ದೆ.  ಆದರೆ ಹೊಸಾ ರೀತಿಯ ಸದ್ದುಗಳು ಅವನ್ನೆಲ್ಲಾ ಮರೆಸತೊಡಗಿಬಿಟ್ಟಿದೆ.  ಮನೆಬಾಗಿಲಿಗೆ ಬರ್‍ತಿದ್ದೋವೆಲ್ಲಾ ಅಂಗ್ಡೀಲಿ ಗಾಜಿನ ಹಿಂದೆ ಕುಳಿತಿವೆ.  ಪ್ಲಾಸ್ಟಿಕ್ ಬಂದು ಒಂದಿಷ್ಟೆಲ್ಲಾ ನುಂಗಿಬಿಟ್ಟಿದೆ.  ಯಂತ್ರಗಳು ಬಂದು ಗಲಬರಿಸಿಟ್ಟಿದೆ.  ಬಹುಶಃ ಅದೂ ಅಲ್ಲ.  ನಾವೇ ಅವನ್ನೆಲ್ಲಾ ಬಳಸೋದನ್ನು ಬಿಟ್ಟಿದ್ದೇವೆ.  ಆಧುನಿಕವಾಗೋದು ನಮಗಿಷ್ಟ.  ಜಗತ್ತೇ ನಮ್ಮಲ್ಲಿಗೆ ಬರೋದಕ್ಕಿಂತ ನಾವೇ ಜಗತ್ತಾಗೋದು ನಮ್ಮ ಈಗಿನ ಧ್ಯೇಯ.  ಆದ್ರೆ ಇದೆಲ್ಲಾ ಸುಲಭವಲ್ಲ ಬಿಡಿ.  ನಮ್ಮ ಸಂಸ್ಕೃತಿಯನ್ನು ನಾವೇ ಒಡೆದು ಹೊಸ ಸಂಸ್ಕೃತಿಯನ್ನು ಕಟ್ಟೋದು… ಇಂತಹ ಚಿಕ್ಕ ಚಿಕ್ಕ ವಿಷಯಗಳೇ, ವೈವಿಧ್ಯಗಳೇ ನಮ್ಮ ದೇಶಾನ ಶ್ರೀಮಂತಗೊಳಿಸಿದೆ ಅನ್ನಿಸುತ್ತದೆ.

ಯತ್ನಿಕ್ ವ್ಯಾಪಾರ

೧. ಹಾಲಿನ ವ್ಯಾಪಾರ : ಬೆಣ್ಣೆ, ತುಪ್ಪ, ಮೊಸರು, ಮಜ್ಜಿಗೆ

೨. ಹೂವಿನ ವ್ಯಾಪಾರ : ಕನಕಾಂಬರ, ಮಲ್ಲಿಗೆ, ಡೇರಾ, ಸೇವಂತಿಗೆ, ಇರುವಂತಿಗೆ, ರುದ್ರ ಗ್ವಾಟಳೆ, ಗ್ವಾಟಳೆ, ಸಂಪಿಗೆ, ಸುರಗಿ, ರಂಜಲ ಹೂ

೩. ಮಣಿಸರ, ಬಳೆ : ಕರಿಮಣಿ, ಸೂಜಿ, ಪಿನ್, ಸರ, ಸ್ನೋ, ಪೌಡರ್, ಹೇರ್ ಆಯಿಲ್, ಗಂಧದೆಣ್ಣೆ, ದಾಮ್ರಗುಳಿಗೆ (ನ್ಯಾಪ್ತಾಲಿನ್), ಹೇರ್‌ಪಿನ್, ಹೂವು, ರಿಬ್ಬನ್, ಬಳೆ, ಹಣಿಗೆ, ಹೇನುಹಣಿಗೆ, ಜಡಕುಹಣಿಗೆ.

೪. ಕತ್ತಿ ವ್ಯಾಪಾರ: ಕುಡುಗೋಲು, ಕತ್ತಿ, ಮೆಟಗತ್ತಿ, ಕಬ್ಬುಕತ್ತಿ, ಚಾಕು, ಸೊಪ್ಗತ್ತಿ, ಮೂರುಹಲ್ಲು, ಬಾಚಿ, ಪಿಕಾಸಿ, ಗುದ್ದಲಿ, ಕೊಡಲಿ, ಸುತ್ತಿಗೆ, ಮೊಳೆ, ಕಾವಲಿ, ಪಡ್ಡು ಕಾವಲಿ, ಹಾರೆ

೫. ದಂಡೆ, ಕಣ್ಣಿ ವ್ಯಾಪಾರ: ದಂಡೆ, ಕಣ್ಣಿ, ಮೂಗುದಾರ, ಹಗ್ಗ, ಬಾರುಕೋಲು, ಕೋಡುಗುಣಿಸೆ, ಕುಚ್ಚು, ಬಾಸಿಂಗ, ರಿಬ್ಬನ್, ಬೆನ್ನಾಸು, ಕಾಲಿನಪಟ್ಟಿ, ಗೆಜ್ಜೆ, ಗಗ್ಗರ, ಮಂಟೆ, ಗಂಟೆ, ಬಾಲದಂಡೆ, ಮಣಿಸರ, ಕಂಬಳಿಪಟ್ಟೆ, ದೃಷ್ಟಿದಾರ, ಹಣೆಕುಚ್ಚು, ಮೈಬಣ್ಣ, ಮುಖ್ಹಂಡ, ಸರಪಳಿ

೬. ಬೀಸೋಕಲ್ಲು: ಒರಳುಕಲ್ಲು, ಬೀಸೋಕಲ್ಲು, ಅರೆಯೋ ಕಲ್ಲು, ಒನಕೆ, ಕಲ್ಲುಗುಂಡು, ಗಂಧದ ಕಲ್ಲು, ಹಾರೆಕೋಲು

೭. ರಂಗೋಲಿ : ಬಣ್ಣದ ರಂಗೋಲಿ

೮. ಮಂಡಕ್ಕಿ : ಮಂಡಕ್ಕಿ, ಹುರಿಗಾಳು, ಬಟಾಣಿಕಾಳು, ಚುರುಮುರಿ, ಹುರಿಹಿಟ್ಟು

೯. ಮಡಿಕೆ : ಕುಡಿಕೆ, ಪೆಣತೆ, ದೀಪದ ಹಣತೆ, ಮಡಿಕೆ, ಹೂವಿನಕುಂಡ, ಬಾನಿ, ಕಲ್ಲುಗಡಿಗೆ

೧೦. ಬುಟ್ಟಿ ತಟ್ಟಿ : ಅಡಿಕೆ ತಟ್ಟಿ, ಬುಟ್ಟಿ, ಹೆಡಿಗೆ, ಚಿಬ್ಬಲು, ಚಬ್ಬೆ, ಪುಟ್ಟಿ, ಮೊರ, ಕಾಶಿಬುಟ್ಟಿ, ಹೆಗಲುಬುಟ್ಟಿ, ಮರಸಣಿಗೆ, ಹಾಳೆಟೊಪ್ಪಿ, ಮರಿಗೆ, ಹುಟ್ಟು (ಮರದ್ದು), ಹಿಡಿ, ಭೂಮಣ್ಣಿ

೧೧. ಬಟ್ಟೆ ವ್ಯಾಪಾರ: ಕಂಬಳಿ, ಬೆಡ್‌ಶೀಟ್, ಸೀರೆ

೧೨. ಐಸ್‌ಕ್ಯಾಂಡಿ: ಬೊಂಬಾಯಿ ಮಿಠಾಯಿ, ಕಡ್ಲೆಮಿಠಾಯಿ, ಕಾಯಿ ಮಿಠಾಯಿ

೧೩. ಪಾತ್ರೆ ವ್ಯಾಪಾರ: ಸ್ಟೀಲ್, ಅಲ್ಯೂಮಿನಿಯಂ, ಹಿಂಡಾಲಿಯಂ, ತಾಮ್ರ, ಹಿತ್ತಾಳೆ, ಕಂಚು, ಜರ್ಮನ್ ಬೆಳ್ಳಿ

೧೪. ಎಣ್ಣೆ ವ್ಯಾಪಾರ: ಕಡ್ಲೆಕಾಯಿ ಎಣ್ಣೆ (ಒಳ್ಳೆಣ್ಣೆ), ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ, ಕುಸುಬಿ ಎಣ್ಣೆ, ಹರಳೆಣ್ಣೆ, ಸೀಮೆಎಣ್ಣೆ.

೧೫. ಕಾಳು-ಬೇಳೆ: ತೊಗರಿ, ಉದ್ದು, ಹೆಸರು, ಹುರುಳಿ, ಸಾಸಿವೆ, ಎಳ್ಳು, ಮೆಂತೆ, ಕೊತ್ತಂಬರಿ, ದಾಲ್ಚಿನ್ನಿ, ಇಂಗು

೧೬. ಜನಿವಾರ: ಜನಿವಾರ, ರುದ್ರಾಕ್ಷಿ, ಹರಳು, ತಾಮ್ರದ ಉಂಗುರು, ಸ್ಫಟಿಕದ ಸರ, ವಿಭೂತಿ, ಶಿವದಾರ, ಮುದ್ರೆ, ಗೋಪೀಚಂದನ, ಶ್ರೀಗಂಧದ/ಚಂದನದ ಕೊರಡು

೧೭. ಕೆಸ, ಕಳಲೆ, ನೆಲ್ಲಿಕಾಯಿ, ಹೊನಗೊನೆ ಸೊಪ್ಪು, ತುಂಬ್ರಿಹಣ್ಣು, ನೇರಳೆಹಣ್ಣು, ಕೊಡಸಿನ ಕಡ್ಡಿ, ಮುರುಗಲು, ಸ್ವಾರಲೇಸೊಪ್ಪು, ಒಂದೆಲಗ

೧೮. ತರಕಾರಿ: ಬಾಳೆದಿಂಡು, ಕೊಡ್ತಬಾಳೆಕಾಯಿ, ತೊಂಡೆಕಾಯಿ, ಬದನೆ, ದಂಟು ಹರಿವೆ, ಬಸಳೆ, ಸೋರೆ, ಕುಂಬಳ, ಚೀನಿ, ತುಪ್ಪದ ಹೀರೆ, ಹಸಿ ಅರಿಸಿನ, ಹಸಿ ಶುಂಠಿ, ಸುವರ್ಣಗೆಡ್ಡೆ, ಗೆಣಸಿನಗೆಡ್ಡೆ, ಕೂಪಿಗೆಡ್ಡೆ, ಅರಾರೋಟು ಹಿಟ್ಟು

೧೯. ಮೀನು, ಏಡಿ, ತಾರ್‍ಲೆ, ಜಬ್ಬು, ಕೂವೆ