“ತಂದೆಯಾಗಿ ತಾಯಿಯಾಗಿ ಇಂದಿರೇಶನೆ ಎನಗೆ
ಬಂದುವಾಗಿ ಬಳಗವಾಗಿ ಸಿಂಧುಶಯನನೆ ಎನಗೆ
ಹಿಂದಾಗಿ ಮುಂದಾಗಿ ಮುಕುಂದನೇ ಎನಗೆ
ಸ್ವಾಮಿಯಾಗಿ ಪ್ರೇಮಿಯಾಗಿ ರಕ್ಕಸಾಂತಕನೆ
ಗುರುವಾಗಿ ದೈವವಾಗಿ ದೈವೋತ್ತಮನೆ ಎನಗೆ
ವಿದ್ಯೆಯಾಗಿ ಬುದ್ಧಿಯಾಗಿ ವಿದ್ಯಾಪತಿಯೆ
ದಿಕ್ಕಾಗಿ ದೆಸೆಯಾಗಿ ರಾಮಚಂದ್ರನೇ ಎನಗೆ
ಇಹವಾಗಿ ಪರವಾಗಿ ಶ್ರೀ ಕೃಷ್ಣನೆ ಪೊರೆವ “

ಭಗವಂತನ ಮಹಿಮೆಯನ್ನು ಇಷ್ಟು ಚೆನ್ನಾಗಿ ಹಾಡಿವರು ವ್ಯಾಸರಾಜರು.

ವ್ಯಾಸರಾಜರು ಎಂದೇ ಜನರಿಗೆ ಪರಿಚಿತರಾದ ಅವರ ಅಶ್ರಮನಾಮ ವ್ಯಾಸತೀರ್ಥ. ಯತಿಗಳಾದ ಅವರು ಅಗತ್ಯವಾದಾಗ ವಿಜಯನಗರ ಸಾಮ್ರಾಜ್ಯದ ಸಿಂಹಾಸನವನ್ನು ಏರಿದರು. ಇದರ ನೆನಪಾಗಿ ಅವರನ್ನು ವ್ಯಾಸರಾಜರೆಂದು ಕರೆಯುತ್ತಾರೆ. “ಚಂದ್ರಿಕಾ” ಎಂಬ ವಾದಗ್ರಂಥವನ್ನು ಸಂಸ್ಕೃತದಲ್ಲಿ ರಚಿಸಿರುವುದರಿಂದ ಅವರನ್ನು ಚಂದ್ರಿಕಾಚಾರ್ಯರೆಂದು ಕರೆಯುವರು.

ಅವರು ಜ್ಞಾನ, ದಾನ, ಧರ್ಮಗಳ ರಕ್ಷಣೆ ಪ್ರಚಾರ ಗಳಿಗೆ ತಮ್ಮ ಬದುಕನ್ನು ಮೀಸಲಾಗಿಟ್ಟರು. ಕರ್ನಾಟಕದಲ್ಲಿಯೇ ಹುಟ್ಟಿ ಕನ್ನಡದಲ್ಲಿ ಕೀರ್ತನೆ, ಉಗಾಭೋಗ, ಸರಳಾದಿಗಳನ್ನು ರಚಿಸಿ ಭಕ್ತಿಯ ಬೀಜವನ್ನು ಈ ಮಣ್ಣಿನಲ್ಲಿ ಬಿತ್ತಿದ್ದರು.

ಬಲ್ಲಣ್ಣ ಸುಮತಿಲಕ್ಷ್ಮೀದೇವಿ

ಕಾವೇರಿ ನದಿಯ  ತೀರದಲ್ಲಿ ಅದರ ಮಗುವಿನಂತೆ ಆಡಿಕೊಂಡಿರುವ ಬನ್ನೂರು ಎಂಬ ಊರಿನಲ್ಲಿ ಕಾಶ್ಯಪ ಗೋತ್ರದ ಬಲ್ಲಣ್ಣ ಸುಮತಿಯೆಂಬ ಬ್ರಾಹ್ಮಣನಿದ್ದನು. (ಕನ್ನಡದಲ್ಲಿ ಅವನನ್ನು “ಬಲ್ಲಣ್ಣ” ಎಂದು ಕರೆದು ಅದನ್ನೇ ಸಂಸ್ಕೃತದಲ್ಲಿ “ಸುಮತಿ: ಎಂದು ಕರೆದಿರಬೇಕು. ಇಂಥ ದ್ವಿರುಕ್ತಿಗಳು ಕನ್ನಡದಲ್ಲಿ ಅಪೂರ್ವವೇನಲ್ಲ). ಅವನ ಹೆಂಡತಿಯ ಹೆಸರು ಲಕ್ಷ್ಮೀದೇವಿ. ಈ ದಂಪತಿಗಳಿಗೆ ಬಹುಕಾಲದವರೆಗೂ ಸಂತಾನವಾಗಲಿಲ್ಲ. ಲಕ್ಷ್ಮೀದೇವಿಗೆ ಈ ಚಿಂತೆ ಹೆಚ್ಚಾಯಿತು.  ಬಲ್ಲಣ್ಣ ಸುಮತಿಯು ತನ್ನ ಪತಿನಯ ಅನುಮತಿಯಂತೆ ಅಕ್ಕಮಾಂಬೆಯೆಂಬ ಇನ್ನೊಬ್ಬಳನ್ನು ಮದುವೆಯಾದನು. ಎರಡನೆಯ ಮದುವೆಯಿಂದಲೂ ಸಂತಾನವಾಗಲಿಲ್ಲ. ಬಲ್ಲಣ್ಣನು ವೇದವ್ಯಾಸ ಮಂತ್ರದ ಉಪಾಸಕನಾಗಿದ್ದನು. ಅದನ್ನು ತನ್ನ ಹಿರಿಯ ಹೆಂಡತಿಗೆ ಉಪದೇಶಿಸಿದನು.

ವ್ಯಾಸರ ಅನುಗ್ರಹ :

ವ್ಯಾಸರಾಜರು ವ್ಯಾಸ ಮಹರ್ಷಿಗಳ ಅನುಗ್ರಹದಿಂದ ಜನಿಸಿದರು ಎಂದು ಭಕ್ತರು ನಂಬುತ್ತಾರೆ, ಅವರು ಹೇಳುವ ವೃತ್ತಾಂತ ಹೀಗೆ :

ಒಂದು ದಿನ ರಾತ್ರಿ ಲಕ್ಷ್ಮೀದೇವಿಗೆ ವ್ಯಾಸರು ಸ್ವಪ್ನದಲ್ಲಿ ಕಾಣಿಸಿಕೊಂಡರು. “ಈ ದಿವ್ಯ ಪ್ರಸಾಧವನ್ನು ಸ್ವೀಕರಿಸು” ಎಂದು ಒಂದು ಸುವರ್ಣ ಪಾತ್ರೆಯನ್ನು ಕೊಟ್ಟು ಅದೃಶ್ಯರಾದರು. ಅನಂತರ ತಮ್ಮ ಗುರುಗಳಾದ ಬ್ರಹ್ಮಣ್ಯ ತೀರ್ಥರ ದರ್ಶನವಾಯಿತು. ಅವರು “ನಿಮ್ಮ ಅಭಿಲಾಷೆ ನೆರವೇರಲಿ” ಎಂದು ವರವಿತ್ತರು.

ಬ್ರಹ್ಮಣ ತೀರ್ಥರು ಕಾವೇರಿ ಸ್ನಾನಕ್ಕಾಗಿ ಬನ್ನೂರಿಗೆ ಬಂದರು. ಬಲ್ಲಣ್ಣನು ಅವರಿಗೆ ಎಲ್ಲವನ್ನೂ ಹೇಳಿದನು. ಬ್ರಹ್ಮಣತೀರ್ಥರು, “ನಿನಗೆ ಮೂವರು ಮಕ್ಕಳಾಗುವರು ” ಎಂದರು.  “ಬಲ್ಲಣ್ಣಾ, ನಿನ್ನ ಕಿರಿಯ ಮಗನನ್ನು ನಮಗೆ ಕೊಡುವೆಯಾ ?” ಎಂದು ಕೇಳಿದರು. ಬಲ್ಲಣ್ಣನು ಮರುಯೋಚಿಸದೇ, :”ಮಹಾದಾಜ್ಞೆ” ಎಂದು ನಮಸ್ಕರಿಸಿದನು. ಬ್ರಹ್ಮಣ ತೀರ್ಥರು ಅನಂತರ ಅಲ್ಲಿಂದ ಚನ್ನಪಟ್ಟಣದ ಅಬ್ಬೂರಿಗೆ ಪ್ರಯಾಣ ಮಾಡಿದರು.

ಗುರುಗಳಿಗೆ ಸಮರ್ಪಣೆ :

ಬಲ್ಲಣ್ಣನಿಗೆ ಕಾಲಾಂತರದಲ್ಲಿ ಒಬ್ಬ ಮಗನೂ ಒಬ್ಬಳು ಮಗಳು ಹುಟ್ಟಿದರು. ಬಳಿಕ ಕಿರಿಯವನಾಗಿ ಪ್ರಭವ ಸಂವತ್ಸರ ವೈಶಾಖ ಶುದ್ಧ ಸಪ್ತಮಿ ಭಾನುವಾರದಂದು (೨೨-೪-೧೪೪೭) ಮುಂದೆ ವ್ಯಾಸರಾಜರು ಜನಿಸಿದ ಮಗನೂ ಆದನು. ಕಡೆಯ ಮಗನು ಹೇಗಿದ್ದರೂ ಯತಿಯಾಗುವನೆಂದು ತಿಳಿದು ಬಲ್ಲಣ್ಣನು ಅವನಿಗೆ ಯತಿರಾಜ ಎಂದು ನಾಮಕರಣ ಮಾಡಿದನು. ಯತಿರಾಜನಿಗೆ ಎರಡನೇ ವರ್ಷದಲ್ಲಿ ಚೌಲ, ಐದನೆಯ  ವರ್ಷದಲ್ಲಿ ಅಕ್ಷರಾಭ್ಯಾಸ, ಏಳನೆ ವರ್ಷದಲ್ಲಿ ಉಪನಯನಗಳನ್ನು ಬಲ್ಲಣ್ಣನು ಮಾಡಿದನು.  ಯತಿರಾಜನು ಬಹು ಸ್ಫುರದ್ರೂಪಿ, ಅವನದು ಅಸಾಧಾರಣ ಬುದ್ಧಿಶಕ್ತಿ ಯತಿರಾಜನಿಗೆ ಹದಿನಾರು ವರ್ಷ ತುಂಬುತ್ತಲೇ ಅವನಲ್ಲಿ ವೇದ, ವ್ಯಾಕರಣ, ಸಾಹಿತ್ಯ, ಶಾಸ್ತ್ರಗಳ ಪಾಂಡಿತ್ಯವೂ ತುಂಬಿಕೊಂಡಿತು.

ಇವೆಲ್ಲವನ್ನೂ ನಿರೀಕ್ಷಿಸುತ್ತಿದ್ದ ಬ್ರಹ್ಮಣ್ಯ ತೀರ್ಥರು ಯತಿರಾಜನನ್ನು ತಮ್ಮಬಳಿಗೆ ಕಳುಹಿಸುವಂತೆ ಶ್ರೀಮುಖವನ್ನು ಬರೆದು ದೂತನನ್ನು ಕಳುಹಿಸಿದರು.  ದಂಪತಿಗಳು ಮಗನೊಂದಿಗೆ ಅಬ್ಬೂರಿಗೆ ಬಂದು ಯತಿರಾಜನನ್ನು ಗುರುಗಳಿಗೆ ಸಮರ್ಪಿಸಿದರು.

ಗುರುಗಳ ನಿರೀಕ್ಷೆ :

ಬ್ರಹ್ಮಣ್ಯ ತೀರ್ಥರು ಯತಿರಾಜನ ತೇಜಸ್ಸನ್ನೂ ಹೊಳೆಯುವ ಕಣ್ಣುಗಳನ್ನೂ ವಿನಯವನ್ನೂ ಪ್ರಾಯಕ್ಕೆ ಮೀರಿದ ಪಾಂಡಿತ್ಯವನ್ನೂ ನೋಡಿ ಮುಗ್ಧರಾದರು. ಅವನಿಗೆ ನ್ಯಾಯ, ವೇದಾಂತ ಮೊದಲಾದ ಶಾಸ್ತ್ರಗಳನ್ನು ತಾವೇ ಭೋಧಿಸಿದರು. ಯತಿರಾಜನಿಗೆ ಎಲ್ಲರಂತೆ ದೀರ್ಘಕಾಲದವರೆಗೆ ಪಾಠ ಹೇಳುವ ಅವಶ್ಯಕತೆ ಬೀಳಲಿಲ್ಲ. ಅವನು ಸೂಕ್ಷ್ಮಗ್ರಾಹಿಯಾಗಿದ್ದ; ಸ್ವಲ್ಪ ವಿವರಿಸುತ್ತಲೇ ವಿಷಯವನ್ನು ಪೂರ್ಣವಾಗಿ ತಿಳಿದು ಕೊಳ್ಳುತ್ತಿದ್ದ. ತಮ್ಮ ಅಚ್ಚು ಮೆಚ್ಚಿನ ಶಿಷ್ಯನಿಗೆ ಸಂನ್ಯಾಸ ಧೀಕ್ಷೆಯನ್ನು ಕೊಡಲು  ಸಂದರ್ಭವನ್ನು ಅವರು ನಿರೀಕ್ಷಿಸುತ್ತಿದ್ದರು.  ಯತಿರಾಜನು ತಾನಾಗಿಯೇ ಅದನ್ನು ಅಪೇಕ್ಷಿಸಲಿ ಎಂದು ಬ್ರಹ್ಮಣ್ಯ ತೀರ್ಥರು ಕಾದು ಕುಳಿತರು.

ಯತಿರಾಜನು ನಾನು ಎಂದರೇನು, ನನ್ನ ವಯಸ್ಸೇನು, ನನ್ನ ಯೋಗ್ಯತೆಯೇನು, ಸಂನ್ಯಾಸ ಧರ್ಮವನ್ನು ಪಾಲಿಸುವ ಯೋಗ್ಯತೆ ನನ್ನಲ್ಲಿ ಇದೆಯೇ, ಧರ್ಮ ಸಾಮ್ರಾಜ್ಯವನ್ನು ಆಳುವ ಯೋಗ್ಯತೆ ನನಗಿದೆಯೇ ಎಂದೆಲ್ಲ ಆತ್ಮ ಪರೀಕ್ಷೆ ಮಾಡಿಕೊಳ್ಳುತ್ತಿದ್ದನು; ಸದಾ ಚಿಂತಾ ಮಗ್ನನಾಗುತ್ತಿದ್ದನು.

ಒಂದು ಮಧ್ಯಾಹ್ನ

ಈ ಚಿಂತೆಯ ಗುಂಗಿನಲ್ಲಿಯೇ ಒಂದು ದಿನ ಮಧ್ಯಾಹ್ನ ಯತಿರಾಜನು ತಾನು ಎಲ್ಲಿಗೆ ಹೋಗುವೆನೆಂದು ತಿಳಿಯದೆ ಕಡುಬಿಸಿನಲಿನಲ್ಲಿಯೇ ಮಠದಿಂದ ಹೊರಗೆ ಹೊರಟನು. ಎ‌ಷ್ಟು ಹೊತ್ತು ನಡೆದನೋ ಎಂಬುವುದು ತಿಳಿಯಲಿಲ್ಲ: ಕಾಲು ಹೋದ ಕಡೆಗೆ ನಿಲ್ಲದೆ ನಡೆದನು. ನಡೆ ನಡೆದು ಬಳಲಿ ಬೆಂಡಾಗಿ ಕಾಡಿನ ಮಧ್ಯದಲ್ಲಿ ಒಂದು ಆಲದ ಮರದ ನೆರಳಿನಲ್ಲಿ ವಿಶ್ರಮಿಸಿಕೊಂಡನು. ಆಯಾಸದಿಂದ ಅಲ್ಲಿಯೇ ಒರಗಿ ನಿದ್ರೆ ಮಾಡಿದನು.ಆಗ ಯತಿರಾಜನಿಗೆ ಒಂದು ವಿಶೇಷ ಅನುಭವ ಆಯಿತು ಎಂದು ಭಕ್ತರು ಹೇಳುತ್ತಾರೆ.

ನಿದ್ರೆಯಲ್ಲಿ ಯತಿರಾಜನಿಗೆ ಗರುಡಾರೂಢನಾದ ಲಕ್ಷ್ಮಿನಾರಾಯಣನ ಸಂದರ್ಶನವಾಯಿತು. ಎಡಬಲಗಳಲ್ಲಿ ದಿವ್ಯ ಸಂಗೀತ ಕೇಳಿಸಿತು. ಶ್ರೀ ಲಕ್ಷ್ಮೀ ನಾರಾಯಣನು ಯತಿರಾಜನೊಡನೆ ಮಾತನಾಡಿದಂತೆ ಕೇಳೀಸಿತ: “ಯತಿರಾಜ ! ನೀನು ನನ್ನ ಪರಮಭಕ್ತನಾಗಿರುವೆ. ಹಿಂದೆ ನೀನು ನನ್ನ ಪ್ರೀಯ ಭಕ್ತನಾಗಿದ್ದ ಪ್ರಹ್ಲಾದನಾಗಿರುವೆ. ನಿನ್ನಿಂದ ಮಹತ್ತರವಾದ ದೇವತಾ ಕಾರ್ಯ ಸಾಧನೆಯಾಗಬೇಕಾಗಿದೆ. ನಿನ್ನ ಭವಿಷ್ಯವನ್ನು ಕುರಿತು ಚಿಂತಿಸಬೇಡ:”. ಯತಿರಾಜನು ಆನಂದ ಪುಲಕಿತನಾಗಿ, ಆನಂದ ಬಾಷ್ಪ ದಿಂದ ಕಣ್ಣು ತುಂಬಿ ಬಂದು ನಿದ್ರೆಯಿಂದ ಎಚ್ಚತ್ತು ಭಗವಂತನ ದರ್ಶನದಿಂದ ಆಶ್ಚರ್ಯಪ್ಟನು. ಯತಿರಾಜನು ಆನಂದ ಪರವಶನಾದನು. ಅಲ್ಲಿಂದ ಅವನು ಹಿಂದಿರುಗಿ ಮಠಕ್ಕೆ ಬಂದು ಗುರುಗಳನ್ನು ಕಂಡನು.  ಗುರುಗಳು ಯತಿರಾಜನನ್ನು ಎಲ್ಲಿಗೆ ಹೋಗಿದ್ದೆ ಎಂದು ಕೇಳಲಿಲ್ಲ ; ಶಿಷ್ಯನು ತಾನು ಇಷ್ಟ ಕಾಲ ಎಲ್ಲಿದ್ದೇ ಎಂದು ಹೇಳಲಿಲ್ಲ.

ಬ್ರಹ್ಮಣ್ಯ ತೀರ್ಥರು ಯತಿರಾಜನನ್ನು ಕಂಡು ಎಲ್ಲವನ್ನೂ ಅರಿತವರಂತೆ ಮುಗುಳ್ನಕ್ಕರು. ಯತಿರಾಜನು ಆ ದಿನವೆಲ್ಲ ದೈವೋನ್ಮಾದದಲ್ಲಿ ಪರವಶನಾಗಿದ್ದನು.  ಅವನನ್ನು ಆ ದಿನ ಯಾರೂ ಮಾತನಾಡಿಸಬೇಡಿರಿ ಎಂದು ಗುರುಗಳು ಹೇಳಿದ್ದರು.

ವ್ಯಾಸತೀರ್ಥರು:

ಮರುದಿನ ಯತಿರಾಜನಿಗೆ ದೈವಪರವಶತೆ ಇಳಿಯಿತು. ಬ್ರಹ್ಮಣ್ಯತೀರ್ಥರು ಅಂದಿನಿಂದ ಯತಿರಾಜನಿಗೆ ಆಶ್ರಮ ಧರ್ಮಗಳನ್ನು ಉಪದೇಶಿಸಲು ಆರಂಭಿಸಿದರು. ಹಾಗೇ ಸಂನ್ಯಾಸ ಧರ್ಮವನ್ನು ಉಪದೇಶಿಸುತ್ತಿದ್ದಾಗ ಯತಿರಾಜನಿಗೆ ಮತ್ತೇ ದೈವಪರವಶತೆಯುಂಟಾಯಿತು. “ಮಹಾಸ್ವಾಮೀ, ನನಗೆ ಸಂನ್ಯಾಸ ಧೀಕ್ಷೆಯನ್ನು ಅನುಗ್ರಹಿಸಿರಿ: ನನ್ನ ಸ್ವರೂಪವನ್ನು ಉದ್ಧರಿಸಿರಿ” ಎಂದು ಯತಿರಾಜನು ಗುರುಗಳನ್ನು ಪ್ರಾರ್ಥಿಸಿಕೊಂಡನು.

ಬ್ರಹ್ಮಣ್ಯ ತೀರ್ಥರು ಯತಿರಾಜನ ಸಿದ್ಧಿಯನ್ನು ಅರಿತು ಸಂನ್ಯಾಸ ಧೀಕ್ಷೆಯನ್ನು ಅನುಗ್ರಹಿಸಿದರು. ಅವನಿಗೆ ವ್ಯಾಸತೀರ್ಥರೆಂಬ ಹೆಸರನ್ನು ಇಟ್ಟರು.

ದೇಶ ಸಂಚಾರ :

ಬ್ರಹ್ಮಣ ತೀರ್ಥರು ತಮ್ಮ ಅಚ್ಚುಮೆಚ್ಚಿನ ಶಿಷ್ಯರಾದ ವ್ಯಾಸರಾಜರಿಗೆ ಧರ್ಮಸಾಮ್ರಾಜ್ಯದ ಪಟ್ಟಾಭಿಷೇಕ ಮಾಡಿ ವೃಂದಾವನ ವಾಸಿಗಳಾದರು. ವ್ಯಾಸರಾಜರು ಗುರುಗಳ ಮಹಾಸಮರಾಧನೆಯನ್ನು ಮಾಡಿ ದೇಶ ಸಂಚಾರಕ್ಕೆ ಹೊರಟರು. “ದೇಶ ನೋಡು, ಕೋಶ ಓದು” ಎಂಬಂತೆ ಶಾಸ್ತ್ರಾಧ್ಯಯನವಾದ ಮೇಲೆ ದೇಶಪರ್ಯಟನ ಮಾಡುವುದು ಭಾರತೀಯ ಸನಾತನ ಸಂಪ್ರದಾಯ. ಅದರಿಂದ ಲೋಕಾನುಭವ ಹೆಚ್ಚುತ್ತದೆ ಎಂದು ನಮ್ಮ ಹಿರಿಯರು ನಂಬಿ ಬಂದಿದ್ದರು.  ಧರ್ಮ ಸಾಮ್ರಾಜ್ಯದ ದೊರೆಗಳಾಗಿದ್ದ ವ್ಯಾಸರಾಜರಿಗೆ ಇದು ಧರ್ಮ ಪ್ರಚಾರಕ್ಕೆ ಅನುಕೂಲಕರವೂ ಆಯಿತು.

ಆ ಕಾಲದಲ್ಲಿ ಒಂದೊಂದು  ಕ್ಷೇತ್ರವೂ ಒಂದೊಂದು ಮಹಾ ವಿದ್ಯಾಪೀಠವಾಗಿತ್ತು. ಆ ವಿದ್ಯಾಪೀಠಗಳನ್ನು ವ್ಯಾಸರಾಜರು ಸಂದರ್ಶಿಸಿ ಭಕ್ತ ಪಂಥವನ್ನು ಉಪದೇಶಿಸಿದರು.ಹೀಗೆ ವ್ಯಾಸರಾಜರು ಉತ್ತರದ ಭಾತದ ಮಿಥಿಲಾ ಪಟ್ಟಣಕ್ಕೆ ಬಂದರು. ಅಲ್ಲಿ ಪಕ್ಷಧರ ಮಿಶ್ರ ಎಂಬ ಪಂಡಿತನು ತುಂಬ ಪ್ರಸಿದ್ಧನಾಗಿದ್ದನು: ವಾದದಲ್ಲಿ ತನ್ನನ್ನು ಗೆಲ್ಲುವವರೇ ಇಲ್ಲವೆಂದು ಬೀಗಿಕೊಂಡಿದ್ದನು. ವ್ಯಾಸರಾಜರೊಡನೆ ಪಕ್ಷಧರಮಿಶ್ರ ತರ್ಕಕ್ಕೆ ಇಳಿದನು. ಯಾವ ವಾದವನ್ನು ಮುಂದಿಟ್ಟರೂ ವ್ಯಾಸರಾಜರು ಜಗ್ಗಲಿಲ್ಲ. ತರ್ಕದಲ್ಲಿ ತನಗೆ ಎದುರಾಳಿ ಇಲ್ಲವೆಂಬ ಪಕ್ಷಧರಮಿಶ್ರನ ಮಾತು ವ್ಯಾಸರಾಜರಿಂದಾಗಿ ಸುಳ್ಳಾಯಿತು.  ವೇದಾಂತದಲ್ಲಂತೂ ಪಕ್ಷಧರಮಿಶ್ರನಿಗೆ ವ್ಯಾಸರಾಜರು ಎದುರು ಬಾಯಿಯೇ ಹೊರಡಲಿಲ್ಲ. ಅನಂತರ ಮಿಶ್ರನೂರ ವ್ಯಾಸರಾಜರ ಪಾಂಡಿತ್ಯಕ್ಕೆ ಮಾರು ಹೋಗಿ ಅವರ ಶಿಷ್ಯನಾದನು.  ಇದರಿಂದ ವ್ಯಾಸರಾಜರ ಕೀರ್ತಿ ಉತ್ತರ ಭಾರತದಲ್ಲೆಲ್ಲ ಹರಡಿತು. ಮಹಾ ವಿದ್ಯಾಪೀಠಗಳೆಲ್ಲ ವ್ಯಾಸರಾಜರ ಪಾಂಡಿತ್ಯವನ್ನು ಪ್ರಶಂಶಿಸಿದುವು. ವ್ಯಾಸರಾಜರು ಉತ್ತರ ಭಾರತದಲ್ಲಿ ಲಕ್ಷಗಟ್ಟಲೆ ಶಿಷ್ಯರನ್ನು ಸಂಪಾದಿಸಿದರು.

ಕಾಂಚಿಪುರದಲ್ಲಿ :

ಉತ್ತರ ದೇಶದಲ್ಲಿ ದಿಗ್ವಿಜಯ ಮಾಡಿ ವ್ಯಾಸರಾಜರು ದಕ್ಷಿಣ ಭಾರತದ ಕಡೆಗೆ ಬಂದರು. ಆಗಿನ ಕಾಲದಲ್ಲಿ ಕಾಂಚೀಪುರವು ಮಹಾ ವಿದ್ಯಾಪೀಠವೆಂದು ಹೆಸರು ಗೊಂಡಿತ್ತು. ವ್ಯಾಸರಾಜರು ಮಠಾಧಿಪತಿಗಳಾಗಿದ್ದುದರಿಂದ ಕ್ಷೇತ್ರ ಪದ್ಧತಿಯಂತೆ ಕಾಂಚಿಪುರದ ವರದರಾಜ ಸ್ವಾಮಿ ದೇವಾಲಯದ ಸಕಲ ಮರ್ಯಾದೆಗಳೊಡನೆ ಅಲ್ಲಿಯ ಪಂಡಿತ ಮಂಡಲಿಯು ವ್ಯಾಸರಾಜರನ್ನು ಸ್ವಾಗತಿಸಬೇಕಾಗಿತ್ತು. ಅಲ್ಲಿಯ ವಿದ್ವಜ್ಜನರು ಹಾಗೆ ಮಾಡದೆ ತಮ್ಮ ವಿದ್ವತ್ ಸಭೆಯಲ್ಲಿ ಪಾಂಡಿತ್ಯ ಪ್ರದರ್ಶನ ಮಾಡಿದ ನಂತರ, ವ್ಯಾಸರಾಜರು ಮರ್ಯಾದೆ ಮಾಡಿಸಿಕೊಳ್ಳಬಹುದೆಂದು ಹಟಹಿಡಿದರು.

ಇದು ವ್ಯಾಸರಾಜರ ಸತ್ವ ಪರೀಕ್ಷೆಗೆ ಕಾರಣವಾಯಿತು. ವ್ಯಾಸರಾಜರು ತಮ್ಮ ಮಠದಲ್ಲಿಯೇ ವಿದ್ವತ್ಸಭೆಯನ್ನು ಏರ್ಪಡಿಸಿದರು.  ಯಾರು ಬೇಕಾದರೂ ತಮ್ಮ ಶಿಷ್ಯರೊಡನಾಗಲೀ ತಮ್ಮೊಡನಾಗಲೀ ವಾದ ಮಾಡಬಹುದು. ವಿಧ್ವತ್ಪ್ರದರ್ಶನ ಮಾಡಿ ಪ್ರಶಸ್ತಿ ಪಡೆಯಬಹುದು ಎಂದು ಸಾರಿದರು. ಪಂಡಿತರು ಬಂದು ವಾದ ಮಾಡಲಾರದೆ ಸೋಲೊಪ್ಪಿ ಬಂದ ಹಾಗೆಯೇ ಹೋಗುವಂತಾಯಿತು.

ವ್ಯಾಸರಾಜರು ಸೋತ ಪಂಡಿತರನ್ನು ಗೌರವದಿಂದ ಕಂಡು ಪ್ರಶಸ್ತಿಗಳನ್ನಿತ್ತು ಆದರದಿಂದ ಕಾಣುತ್ತಿದ್ದರು.  ಪಂಡಿತರೂ ಇವರು ಮಹಾನುಭಾವರೆಂದು ಬಾಗಿ ತೃಪ್ತಿಯಿಂದ ತೆರಳುತ್ತಿದ್ದರು.  ಅವರ ತೇಜಸ್ಸನ್ನೂ ಪಾಂಡಿತ್ಯವನ್ನೂ ವಿನಯ ಗುಣಗಳನ್ನು ಔದಾರ್ಯವನ್ನೂ ಕಂಡು ಮುಗ್ಧರಾಗಿ ಶಿಷ್ಯರಾಗುತ್ತಿದ್ದರು.  ಮೊದಲು ಕಾಂಚಿಪುರದ ಜನ ವ್ಯಾಸರಾಜರನ್ನು ಸೌಜನ್ಯದಿಂದ ಕಾಣಲಿಲ್ಲ. ಆದರೆ ವ್ಯಾಸರಾಜರ ವಿಧ್ವತ್ತು, ಸೌಜನ್ಯಗಳಿಗೆ ಮಾರು ಹೋಗಿ ಅವರೇ ವ್ಯಾಸರಾಜರನ್ನು ಎಲ್ಲ ಮರ್ಯಾದೆಗಳೊಂದಿಗೆ ವರದರಾಜ ದೇವಾಲಯಕ್ಕೆ ಕರೆದುಕೊಂಡು ಹೋಗಿ ಮರ್ಯಾದೆ ಸಲ್ಲಿಸಿದರು.

ದೇವರ ಪ್ರಸಾದವೇ ಅಮೃತ :

ವ್ಯಾಸರಾಜರ ಕೀರ್ತಿಯನ್ನು ಸಹಿಸಲಾರದೆ ಯಾವನೋ ಒಬ್ಬನು ವಿಷ ಪ್ರಯೋಗ ಮಾಡಿಸಿದನು.  ವ್ಯಾಸರಾಜರ ನೈವೇದ್ಯದ ಅಡುಗೆಯಲ್ಲಿ ವಿಷನವನ್ನು ಹಾಕಿಸಿದನು.  ಹಣದಾಸೆಗೆ ಅಡುಗೆಯವನು ಬಲಿಯಾದರೂ ಸ್ವಾಮಿಗಳಿಗೆ ಬಡಿಸುವಾಗ ಬೆದರಿ ಅವನ ಕೈ ನಡುಗಿತು.

"ಸರಿ , ನನಗೂ ಅದನ್ನೆ ಬಡಿಸು"

ಸ್ವಾಮಿಗಳು, “ಹೀಗೇಕೆ ನಿಂತಿದ್ದಿಯೆ? ಬಡಿಸು” ಎಂದರು.

ಅಡುಗೆಯವನಿಗೆ ಕೈ ಬರಲಿಲ್ಲ. ತಪ್ಪು ಮಾಡಿದೆ, ಕ್ಷಮಿಸಿ., ತಾವು ಅದನ್ನು ಭೋಜನ ಮಾಡಬಾರದು ಎಂದು ಕೈ ಮುಗಿದ.

“ಏಕೆ ?” ಎಂದರು ವ್ಯಾಸರಾಜರು.
“ಅದರಲ್ಲಿ ವಿಷ ಹಾಕಿದೆ” ಎಂದು ಹೇಳಿ ನಡೆದುದನ್ನು ತಿಳಿಸಿದ.
ವ್ಯಾಸರಾಜರು ಪ್ರಶ್ನಸಿದರು. :ಅದನ್ನು ದೇವರ ನೈವೇದ್ಯಕ್ಕಿಟ್ಟಿದ್ದೆಯಾ?
“ಹೌದು:” ಎಂದ ಅಡಗೆಯವನು.
ಯಾವ ಭಾವನೆಯಿಂದ ದೇವರ ಮುಂದಿಟ್ಟೆ ಅನ್ನವೆಂದೋ, ವಿಷವೆಂದೋ ?
ಅನ್ನ ಎಂದು, ಮಹಾಸ್ವಾಮಿ.
ಸರಿ, ನನಗೂ ಅದನ್ನೇ ಬಡಿಸು.

ಅಡುಗೆಯವನಿಗೆ ಬಡಿಸಲು ಕೈಯೇ ಬಾರದು. ಸ್ವಾಮಿಗಳನ್ನು ಬೇಡಿಕೊಂಡ. ” ಇದನ್ನು ಮುಟ್ಟಬೇಡಿ” ಎಂದು.

ಆ ದೇವರ ಪ್ರಸಾದವೇ ತಮಗೂ ಭೋಜನವಾಗಲಿ” ಎಂದು ವಿಷಾನ್ನವನ್ನೇ ತಿಂದರು. ರಾತ್ರಿ ನಿದ್ರೆ ಮಾಡದೇ ವಿಷಾನ್ನವನ್ನೇ ನೈವೇದ್ಯೆ ಮಾಡಿದುದಕ್ಕಾಗಿ ಕ್ಷಮಿಸಿ ಎಂದು ಭಗವಂತನನ್ನು ಬೇಡುತ್ತ ಭಜಿಸುತ್ತ ವಿಷವನ್ನು ಜೀರ್ಣಿಸಿಕೊಂಡರು.

ಜನರು ಸ್ವಾಮಿಗಳಿಗೆ ವಿಷ ಹಾಕಿದವರನ್ನು ಶಿಕ್ಷಿಸಬೇಕೆಂದು ಕೇಳಿಕೊಂಡರು. ವ್ಯಾಸರಾಜರು ಮುಗಳ್ನಗುತ್ತ ಪ್ರಾಣಾಪಹಾರಿಯಾದ ವಿಷವೂ ಔಗವದರ್ಪಿವಾಗಿ ಅಮೃತವಾಯಿತು.  ಆದ್ದರಿಂದ ಯಾರೂ ವಿಷ ಹಾಕಲಿಲ್ಲ.  ಹಾಕಿಸಲಿಲ್ಲ. ಅವರನ್ನು ಕ್ಷಮಿಸಿರಿ ಎಂದು ಜನರನ್ನು ಸಮಾಧಾನಪಡಿಸಿದರು.

ಈ ಘಟನೆಯಿಂದ ವ್ಯಾಸರಾಜರ ಕೀರ್ತಿ ಇನ್ನಷ್ಟು ಹರಡಿತು : ಚಿನ್ನ ಪುತ್ಥಳಿಯಾಯಿತು.

ಗುರುಕುಲವಾಸ :

ಕಾಂಚೀಪುರದಿಂದ ವ್ಯಾಸರಾಜರು ಮುಳಬಾಗಿಲಿಗೆ ಬರಬೇಕೆಂದು ಸಂಕಲ್ಪಿಸಿ ಹೊರಟರು.  ಆ ಕಾಲದಲ್ಲಿ ಮುಳಬಾಗಲೂ ದೊಡ್ಡ ವಿದ್ಯಾಕೇಂದ್ರವಾಗಿತ್ತು. ಶ್ರೀಪಾದ ರಾಯರು ವ್ಯಾಸರಾಜರನ್ನು ತಮ್ಮ ಮಠಕ್ಕೆ ಅತ್ಯಂತ ಸಂತೋಷದಿಂದ ಬರಮಾಡಿಕೊಂಡರು.

ಶ್ರೀಪಾದರಾಯರು ವ್ಯಾಸರಾಜರ ದೃಷ್ಟಿಯಲ್ಲಿ ವಯೋವೃದ್ಧರೂ ಆಶ್ರಮಜ್ಯೇಷ್ಠರೂ ವಿದ್ಯಾಗುರುಗಳೂ ಆಗಿದ್ದರು.  ವ್ಯಾಸರಾಜರು ಗುರುಗಳ ಪಾದಗಳೆರಡನ್ನೂ ಹಿಡಿದು ನಮಸ್ಕರಿಸಿ ತೊಳೆದರು. ಶ್ರೀಪಾದರಾಯರು ಶಿಷ್ಯನನ್ನು  ಹೃದಯ ತುಂಬಿ ಬರುತ್ತಿರುವ ಪ್ರೀತಿ, ಸಂತೋಷಗಳಿಂದ ಬರಮಾಡಿಕೊಂಡರು. ಅಲ್ಲಿ ಅನೇಕ ವರ್ಷಗಳವರೆಗೆ ವ್ಯಾಸರಾಜರಿಗೆ ಗುರುಕುಲ ವಾಸವಾಯಿತು.

ಗೋಪಾಲಕೃಷ್ಣನ್ನು ಕಂಡ ಕಣ್ಣು :

ಒಮ್ಮೆ ಶ್ರೀಪಾದರಾಯರು ವ್ಯಾಸರಾಜರಿಗೆ ತಾವು ಮಾಡುತ್ತಿದ್ದ ಪೂಜಾವಿಧಿಗಳನ್ನು ಮಾಡುವಂತೆ ಹೇಳಿದರು. ಗುರುಗಳ ಅಪ್ಪಣೆಯಿಂದ ಸಂತೋಷಪಟ್ಟ ವ್ಯಾಸರಾಜರು ಪೂಜಾಸಾಮಗ್ರಿಗಳನ್ನು ಸಿದ್ಧಪಡಿಸಿದರು.ಅಲ್ಲಿ ಇದ್ದ ದೇವರ ಕರಡಿಕೆಗಳಲ್ಲಿ ಒಂದು ಸಂಪುಟದ ಮುದ್ರೆ ಅಲ್ಲಿಯ ತನಕ ಯಾರೂ ತೆರೆದಂತಿರಲಿಲ್ಲ. ವ್ಯಾಸರಾಜರು ಅ ಸಂಪುಟವನ್ನು ಸುಲಭವಾಗಿ ತೆರೆದರು. ಆಗ ಅವರ ಕಣ್ಣಿಗೆ ರುಕ್ಮೀಣಿ ಸತ್ಯಭಾಮಾ ಸಮೇತರಾಗಿ ಗೋಪಾಲ ಕೃಷ್ಣನ ದಿವ್ಯ ಮೂರ್ತಿ ದರ್ಶನವಾಯಿತು. ಆ ಮೂರ್ತಿ ಕೊಳಲನ್ನು ಊದುತ್ತ ಕುಣಿಯುತ್ತಿರುವಂತೆ ಅನುಭವವಾಯಿತು.

ಆಗ ಅವರು ಅಲ್ಲಿದ್ದ ಸಾಲಿಗ್ರಾಮ ಶಿಲೆಗಳನ್ನು ತಾಳಗಳನ್ನಾಗಿ ಮಾಡಿ ತಟ್ಟುತ್ತ ಭಾವಪರವಶರಾಗಿ ತಾವೂ ಕುಣಿಯತೊಡಗಿದರು. ವ್ಯಾಸರಾಜರ ಈ ವಿಚಿತ್ರ ವರ್ತನೆಯನ್ನು ಕಂಡ ಸುತ್ತುಮುತ್ತಲಿದ್ದವರೆಲ್ಲ ಆಶ್ಚರ್ಯಚಕಿತರಾದರು.  ಅದನ್ನು ಶ್ರೀಪಾದರಾಯರಿಗೆ ತೋರಿಸಿದರು. ಆ ಪರಮಾನಂದದಲ್ಲಿ ಗುರುಶಿಷ್ಯರಿಬ್ಬರೂ ಒಂದಾದರು.

ಶ್ರೀ ಪಾದರಾಯರು ವ್ಯಾಸರಾಜರನ್ನು ಅಪ್ಪಿಕೊಂಡು ಹೀಗೆ ಹೇಳಿದರು : ವ್ಯಾಸರಾಜರೇ ನೀವಿಂದು ಕೃತಾರ್ಥರಾದಿರಿ. ನಿಮ್ಮದು ಮಹಾಸೌಭಾಗ್ಯ. ಗೋಪಾಲಕೃಷ್ಣನು ನಿಮಗೆ ಪ್ರಸನ್ನನಾದನು. ಈ ಸಂಫುಟವು ಪಾಂಡುರಂಗ ಕ್ಷೇತ್ರದಲ್ಲಿ ಭೀಮಾನದಿಯ ದಡದಲ್ಲಿ ನಮಗೆ ದೊರಕಿತು.  ಇಷ್ಟರವರೆಗೆ ಇದನ್ನು ತೆರೆಯಲಾಗಲಿಲ್ಲ. ಇಂದು ನಿಮ್ಮ ಕೈಗೆ ಅದು ಸಾಧ್ಯವಾಯಿತು. ಇನ್ನು ಮೇಲೆ ಗೋಪಾಲ ಕೃಷ್ಣನ ಪೂಜೆ ನಿಮ್ಮಿಂದಲೇ ನೆರವೇರಲಿ.

ರಾಜಗುರುಗಳು :

ಆ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಆಳುತ್ತಿದ್ದ ಸಾಳ್ವ ನರಸಿಂಹನು ಚಂದ್ರಗಿರಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ರಾಜ್ಯವಾಳುತ್ತಿದ್ದನು. ಅವನು ತನ್ನ ಆಸ್ಥಾನದಲ್ಲಿ ಪರಿಪಕ್ವಪಾಂಡಿತ್ಯವುಳ್ಳ ರಾಜಗುರುಗಳನ್ನು ಇಟ್ಟುಕೊಳ್ಳಬೇಕೆಂದೂ ತಿರುಪತಿಯ ದೇವರ ಪೂಜಾವಿಧಿಗಳನ್ನು ವ್ಯವಸ್ಥಿತಗೊಳಿಸಬೇಕೆಂದೂ ನಿವೇಧಿಸಿಕೊಂಡನು. ಶ್ರೀಪಾದರಾಯರು ವೃದ್ದಾಪ್ಯದಿಂದ ಈ ಕಾರ್ಯಭಾರವನ್ನು ಹೊರುವುದು ಸಾಧ್ಯವಾಗಲಿಲ್ಲ. ಅದರಿಂದ ವ್ಯಾಸರಾಜರನ್ನು ಕಳುಹಿಸುವುದಾಗಿ ಶ್ರೀಪಾದರಾಯರು ಸಾಳ್ವ ನರಸಿಂಹನಿಗೆ ಹೇಳಿದರು.

ವ್ಯಾಸರಾಜರು ಪುರಂದರದಾಸರು ಕನಕದಾಸರು.

ವ್ಯಾಸರಾಜರಿಗೆ ಮುಳಬಾಗಿಲಿನ ಪ್ರಶಾಂತ ಪರಿಸರಣವನ್ನೂ ನರಸಿಂಹತೀರ್ಥವನ್ನೂ ಪೂಜ್ಯ ಗುರುಗಳನ್ನೂ ಬಿಟ್ಟು ಹೋಗಬೇಕಲ್ಲ ಎನಿಸಿತು.

ವ್ಯಾಸರಾಜರು ಚಂದ್ರಗಿರಿಗೆ ಹೊರಟರು. ಸಾಳ್ವ ನರಸಿಂಹನು ಸಕಲ ವೈಭವದಿಂದ ರಾಜಗುರುಗಳನ್ನು ಸ್ವಾಗತಿಸಿ ಪಾದಪೂಜೆಯನ್ನು ಅತ್ಯಂತ ಅದರ ಭಕ್ತಿಗಳಿಂದ ಮಾಡಿದನು. ತಿರುಪತಿ ದೇವರಿಗೆ ಪೂಜೆ ಮಾಡುವ ಅರ್ಚಕರ ಸಂತತಿ ನಿರ್ಮೂಲವಾಗಿತ್ತು. ಪೂಜೆಗೆ ವ್ಯವಸ್ಥೆ ಮಾಡಲು ಸಾಳ್ವ ನರಸಿಂಹನು ಗುರುಗಳೊಡನೆ ಸಲಹೆ ಕೇಳಿದನು. ಗುರುಗಳು ಅರ್ಚಕ ಸಂತತಿ ನಿರ್ಮೂಲವಾಗಿಲ್ಲವೆಂದೂ ಅವನು ಪ್ರಾಪ್ತ ವಯಸ್ಕನಾಗುವವರೆಗೆ ತಾವೇ ಅರ್ಚಕರಾಗುವೆವೆಂದು ಸಾಳ್ವ ನರಸಿಂಹನು ಸಮಾಧಾನ ಪಡಿಸಿದರು.

ಶ್ರೀನಿವಾಸನ ಪೂಜೆ ಮಾಡುವ ಭಾಗ್ಯ ಬಂದುದಕ್ಕಾಗಿ ವ್ಯಾಸರಾಜರು ಅನಂದಪುಲಕಿತರಾದರು. ಹನ್ನೆರಡು ವರ್ಷಗಳ ಕಾಲ ಪೂಜಿಸಿದರು; ಸುವ್ಯವಸ್ಥೆಯನ್ನು ನೆಲೆಗೊಳಿಸಿದರು.  ಅರ್ಚಕ ಸಂತತಿಯ ಬಾಲಕನಿಗೆ  ಪೂಜಾಧಿಕಾರವನ್ನು ಒಪ್ಪಿಸಿದರು. ಕೋಟಿಗಟ್ಟಲೆ ಅದಾಯವಿದ್ದ ದೇವಾಲಯದ ಸರ್ವಾಧಿಕಾರವನ್ನು ವ್ಯಾಸರಾಜರು ಮನಸ್ಸು ಮಾಡಿದ್ದರೆ ತಮ್ಮ ಕೈಯಲ್ಲೆ ಇಟ್ಟುಕೊಳ್ಳಬಹುದಿತ್ತು.  ಹೇಗೆ ಬಂತೋ ಹಾಗೆಯೇ ಅದನ್ನು ಬಿಟ್ಟುಕೊಟ್ಟರು.

ವಿಜಯನಗರದಲ್ಲಿ :

ಸಾಳ್ವ ನರಸಿಂಹನ ಬಳಿಕ ತಮ್ಮರಾಯನು ಪಟ್ಟಣಕ್ಕೆ ಬಂದನು. ವಿಜಯನಗರದ ಸಿಂಹಾಸನವೇರಿದ್ದ ರಾಜವಂಶ ಮುಕ್ತಾಯವಾದುದರಿಂದ ತಮ್ಮಾರಾಯನು ವಿಜಯನಗರವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಳ್ಳಬೇಕಾಯಿತು.  ತಮ್ಮಾರಾಯನು  ಇನ್ನೂ ಚಿಕ್ಕವನಾಗಿದ್ದುದರಿಂದ ವ್ಯಾಸರಾಜರು ಅವನ ಜೊತೆಯಲ್ಲಿಯೇ ವಿಜಯನಗರಕ್ಕೆ ಹೋಗಬೇಕಾಯಿತು.

ಒಮ್ಮೆ ಶ್ರೀರಂಗಕ್ಕೆ ಹೋದಾಗ ಶ್ರೀರಂಗ ಕ್ಷೇತ್ರದವಿಗೂ ಜಂಬುಕೇಶ್ವರ ಕ್ಷೇತ್ರದವರಿಗೂ ಇದ್ದ ಗಡಿ ವಿವಾದವನ್ನುರಾಜಗುರುಗಳಾದ ವ್ಯಾಸರಾಜರು ಪರಿಹರಿಸಬೇಕಾಯಿತು. ಶ್ರೀರಂಗವು ವಿಷ್ಣುಕ್ಷೇತ್ರ; ಜಂಬು ಕೇಶ್ವರವು ಶೈವ ಕ್ಷೇತ್ರ. ಈ ವಿವಾದವೂ ಯಾವಾಗಲೂ ನಡೆಯುತ್ತಿದ್ದು ಹರಿಹರರ ಉತ್ಸವಗಳಿಗೆ ದೊಡ್ಡ ತೊಂದರೆಯಾಗಿತ್ತು.  ಸಾಳ್ವ ನರಸಿಂಹ ಸಮಾಧಾನ ಮಾಡಿದ; ರಾಜಗುರುಗಳು ಸಮಾಧಾನ ಮಾಡಿದರು, ಪ್ರಯೋಜನವಾಗಲಿಲ್ಲ.ಆ ಸಂದರ್ಭದಲ್ಲಿ ವ್ಯಾಸರಾಜರು, ರಂಗನಾಥನ ಸನ್ನಿಧಿಯಿಂದಾಗಲಿ, ಜಂಬುಕೇಶ್ವರನ ಸನ್ನಿಧಿಯಿಂದಾಗಲೀ ಸಮರ್ಥರಾದವರು ಉಸಿರುಕಟ್ಟಿ ಎಲ್ಲಿಯವರೆಗೆ  ಓಡುವರೋ ಅದು ಅವರ ಗಡಿ. ಈ  ನಿಬಂಧನೆಯನ್ನು ಮೀರಿದವರು ರಾಜದಂಡನೆಗೆ ಗುರಿಯಾಗುವವರು ಎಂದರು. ಇದಕ್ಕೆ ಎಲ್ಲರೂ ಒಪ್ಪಿದರು.  ಆದರೆ ಉಭಯ ಪಕ್ಷಗಳಲ್ಲಿ ಉಸಿರುಕಟ್ಟಿ ಓಡಲು ಯಾರು ಮುಂದೆ ಬರಲಿಲ್ಲ. ಕೊನೆಗೆ ವ್ಯಾಸರಾಜರೇ  ಓಡಲು ಮುಂದಾದರು. ಶ್ರೀರಂಗನ ಸನ್ನಿಧಿಯಿಂದ ಒಂದು ಮೈಲಿಯವರೆಗೆ ಉಸಿರುಕಟ್ಟಿ ಓಡಿದರು. ರಸ್ತೆಯ ಇಕ್ಕೆಲಗಳಲ್ಲಿ ಎರಡು ಪಕ್ಷದವರೂ ನಿಂತು ನೋಡಿದರು. ಇದರ ನೆನಪಿಗಾಗಿ ವ್ಯಾಸರಾಜರು ತಾವು ಓಡಲು ಆರಂಭಿಸಿದ ಮಾರುತಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿದರು.ವಿವಾದವೂ ಸಂತೋಷದಲ್ಲಿ ಮುಕ್ತಾಯವಾಯಿತು.

ಸಾಳ್ವ ನರಸಿಂಹನ ಜೈತ್ರಯಾತ್ರೆಯೂ ವ್ಯಾಸರಾಜರ ತೀರ್ಥಯಾತ್ರೆಯೂ ಜೊತೆ ಜೊತೆಯಾಗಿ ನಡೆದುವು. ನರಸಿಂಹ ಭೂಪಾಲನು ತಾನು ಹೋದೆಡೆಗೆಲ್ಲ ತನ್ನ ಗುರುಗಳನ್ನು ಕರೆದುಕೊಂಡು ಹೋದನು. ಆನಂತಶಯನ, ಉಡುಪಿ, ಮೊದಲಾದ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿ ಬೇಕಾದಷ್ಟು ದಾನ ದತ್ತಿಗಳನ್ನಿತ್ತನು. ಉಡುಪಿಯ ಅಷ್ಟಮಠದ ಅಧಿಪತಿಗಳು ಮಹಾರಾಜನನ್ನೂ ವ್ಯಾಸರಾಜರನ್ನೂ ಯೋಗ್ಯ ಮರ್ಯಾದೆಯನ್ನು ಮಾಡಿ ಬರಮಾಡಿಕೊಂಡರು.

ಔದಾರ್ಯ :

ವ್ಯಾಸರಾಜರ ಕೀರ್ತಿ ದಿನದಿಂದ ದಿನಕ್ಕೆ ಹಚ್ಚಾಗುತ್ತ ಬಂತು. ಅವರ ಮಹಿಮೆಯನ್ನು ರಾಯಭಾರಿಗಳಿಂದ ಕೇಳಿ ಬಿಜಾಪೂರದ ಅದಿಲ್ ಷಾಹ, ಬಾಬರ‍್ ಚಕ್ರವರ್ತಿ, ಪೋರ್ಚುಗೀಸ್, ರಾಯಭಾರಿಗಳು ಅವರಿಗೆ ಕಾಣಿಕೆಗಳನ್ನಿತ್ತು ಗೌರವಿಸಿದರು.

ವಿಜಯನಗರದಲ್ಲಿ ವ್ಯಾಸರಾಜರು ತಮ್ಮ ಕೈಯಲ್ಲಿ ಸಾಮ್ರಾಜ್ಯವಿದೆಯೆಂದು ಬೀಗಲಿಲ್ಲ. ಎಲ್ಲ ಧರ್ಮದವರನ್ನು ಸಮಾನವಾಗಿ ನಡೆಸಿಕೊಂಡರು. ವಿಷ್ಣುದೇವಾಲಯಗಳಲ್ಲಿ ಶಿವ ದೇವಾಲಯಗಳಲ್ಲಿ ಒಂದೇ ರೀತಿಯಲ್ಲಿ ಪೂಜೆಗಳನ್ನು ಸಲ್ಲಿಸುತ್ತಿದ್ದರು.  ತಮಗೊಂದು ಮಂಟಪ ಸಾಕೆಂದು ಚಕ್ರತೀರ್ಥದ ಬಳಿ ವಾಸ ಮಾಡಿದರು.

ಆ ಕಾಲದಲ್ಲಿ ವಿಜಯನಗರವು ವಿದ್ಯಾನಗರವೆಂದು ಭರತ ಖಂಡದಲ್ಲಿಯೇ ಪ್ರಸಿದ್ಧ ವಿದ್ಯಾಕೇಂದ್ರವಾಗಿತ್ತು.  ವ್ಯಾಸರಾಜರನ್ನು ಇನ್ನೊಂದು ಕೈನೋಡಬೇಕೆಂದು ದಕ್ಷಿಣೋತತರದ ಪಂಡಿತ ಮಂಡಲಿಯೆಲ್ಲಿ ಕಳಿಂಗ ದೇಶದ ಬಸವಭಟ್ಟನೆಂಬ ಪಂಡಿತನನ್ನು ಮುಂದು ಮಾಡಿಕೊಂಡು ವಿಜಯನಗರಕ್ಕೆ ಬಂದಿತು.  ಬಂದವರ ಅಡಂಬರ ಸಂಭ್ರಮಗಳನ್ನು ನೋಡಿ ಮಹಾರಾಜರು ಭೀತನಾದನು. ವ್ಯಾಸರಾಜರಿಗೂ ಬಸವಭಟ್ಟನಿಗೂ ಮೂವತ್ತು ದಿನಗಳವರೆಗೆ ವಾದ ನಡೆಯಿತು. ವಾದಿಯ ಎಲ್ಲ ವಾದವನ್ನು ಖಂಡಿಸಿ ವ್ಯಾಸರಾಜರು ಜಯಶೀಲರಾದರು. ಬಸವಭಟ್ಟನು ಪರಾಜಿತನಾದನೆಂದು ವ್ಯಾಸರಾಜರು ಅವನನ್ನು ಅವಮಾನಪಡಿಸಲಿಲ್ಲ. ಮೂವತ್ತು ದಿನಗಳವರೆಗೆ ತನ್ನೊಡನೆ ವಾದಿಸಿದನಲ್ಲ ಎಂದು ಅವನನ್ನು ರಾಜಸಭೆಯಲ್ಲಿ ಪ್ರಶಂಸಿಸಿದರು. ಅವನೊಡನೆ ತಮ್ಮ ಎದುರಾಳಿಗಳಾಗಿ ಬಂದಿದ್ದವರ ಪಾಂಡಿತ್ಯವನ್ನು ಹೊಗಳಿದರು. ಪಂಡಿತ ಮಂಡಲಿಯಲ್ಲಿ ಪ್ರತಿಯೊಬ್ಬರಿಗೂ ಸಾಕಷ್ಟು ದ್ರವ್ಯವನ್ನಿತ್ತು ಮನ್ನಣೆ ಮಾಡಿ ಸಂತೃಪ್ತಿಪಡಿಸಿದರು.  ಬಸವಭಟ್ಟನು ತನ್ನ ಜೀವಿತ ಸರ್ವಸ್ವವೆಂದು ಬಹುಕಾಲದಿಂದ ಪೂಜಿಸುತ್ತಿದ್ದ ಪಚ್ಚೆಯಲಿಂಗವನ್ನು ವ್ಯಾಸರಾಜರಿಗೆ ಕಾಣಿಕೆ ಎಂದು ಅರ್ಪಿಸಿದ.  ಈಗಲೂ ವ್ಯಾಸರಾಜ ಮಠದಲ್ಲಿ ಆ ಲಿಂಗಕ್ಕೆ ಸ್ವಾಮಿಗಳು ಶಿವರಾತ್ರಿಯ ದಿನ ವಿಶೇಷ ಪೂಜೆ ಸಲ್ಲಿಸುತ್ತಾರೆ.  ವ್ಯಾಸರಾಜರು ತಮ್ಮ ವಿಜಯವೆಲ್ಲ ಹರಿಗುರು ಕೃಪೆಯೆಂದು ತಿಳಿದು ಅದನ್ನು ಶ್ರೀ ಕೃಷ್ಣಾರ್ಪಣವೆಂದು ಸಮರ್ಪಿಸಿದರು.  ತನ್ನ ಗುರುಗಳ  ಮಹಾ ದಿಗ್ವಿಜಯದಿಂದ ಪರಮ ಸಂತುಷ್ಟನಾದ ರಾಜನು ವ್ಯಾಸರಾಜರನ್ನು ರತ್ನ ಖಚಿತವಾದ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ವಿಜಯೋತ್ಸವ ನಡೆಸಿದರು.  ಅವರು ಮಾತ್ರ ಎಲ್ಲವನ್ನೂ ಶ್ರೀಕೃಷ್ಣನಿಗೆ ಅರ್ಪಿಸಿದರು.

ಬಂದ ಕೀರುತಿಯೆಲ್ಲ ಶ್ರೀಕೃಷ್ಣ ನಿನ್ನದಯ್ಯ
ಮಂದ ಮಾನವಗಿದು ಅಳವಡುವುದೇನಯ್ಯ

ಎಂದು ಹಾಡಿದರು.

ಕೃಷ್ಣದೇವರಾಯ:

ಕೃಷ್ಣದೇವಾಯನ ಕಾಲದಲ್ಲಿ ವಿಜಯನಗರ ಅದರ ಸುವರ್ಣ ಯುಗವನ್ನು ಕಂಡಿತು. ಅದಕ್ಕೆ ವ್ಯಾಸರಾಜರು ಬಹುತೇಕ ಕಾರಣರಾಗಿದ್ದರು. ಎಂಬುವುದನ್ನು ಕೃಷ್ಣದೇವರಾಯನು ಅರಿತಿದ್ದನು. ಅಂಥ ಸಾರ್ವಭೌಮನಾಗಿದ್ದರೂ ಅವನುವ್ಯಾಸರಾಜರ ಮಠದ ಮಹಾದ್ವಾರದಲ್ಲಿ ಗುರುಗಳ ದರ್ಶನಾಭಿಲಾಷಿಯಾಗಿ ಕಾದಿರುತ್ತಿದ್ದನು. ತನಗೆ ಅವರಲ್ಲಿದ್ದ ಪೂಜ್ಯ ಭಾವನೆಗಳಿಗಾಗಿ  ನವರತ್ನಾಭಿಷೇಕವನ್ನು ಮಾಡಿದನು. ನವರತ್ನಗಳಿಂದ ಪೂರ್ಣವಾದ ಕನಕ ಕುಂಭವನ್ನು ತಂದು ಸ್ವ ಹಸ್ತದಿಂದ ಅಭಿಷೇಕ ಮಾಡಿದನು. ಅವನ್ನೆಲ್ಲ ವ್ಯಾಸರಾಜರು ಮಂತ್ರಿ, ಸಾಮಂತ, ಸಜ್ಜನರಿಗೆ ಅಲ್ಲೇ ದಾನ ಮಾಡಿದರು. ಯಾವುದನ್ನು ತಮಗಾಗಿ ಇಟ್ಟುಕೊಳ್ಳಲಿಲ್ಲ.

ಪುರಂದರದಾಸರುಕನಕದಾಸರು:

ಕೃಷ್ಣದೇವರಾಯನ ಕಾಲದಲ್ಲಿಪುರಂದರ ದಾಸರೂ ಕನಕದಾಸರೂ ವ್ಯಾಸರಾಜರ ಬಳಿಗೆ ಬಂದರು. ವ್ಯಾಸರಾಜನ ಶಿಷ್ಯರಲ್ಲಿ ಹಲವರಿಗೆ ಆಸಮಾಧಾನವಾಯಿತು.  ಪುರಂದರ ದಾಸರು ಚಿನ್ನ ಬೆಳ್ಳಿ ವ್ಯಾಪಾರ ಮಾಡುತ್ತಿದ್ದವರು, ಕನಕದಾಸರು ಕುರುಬರು.ಇವರನ್ನು ಶಿಷ್ಯರನ್ನಾಗಿ ಸ್ವೀಕರಿಸುವುದೇ ಎಂದು ಅವರ ವಾದ. ವ್ಯಾಸರಾಜರು ಬೇರೆ ಮತದವರಿಗೆ ಶಿಷ್ಯತ್ವವನ್ನು ಕೊಟ್ಟಲ್ಲಿ ವಿರೋಧವನ್ನು ಎದುರಿಸಬೇಕಾಗಿತ್ತು. ಆದರೆ ವ್ಯಾಸರಾಜರು ಭಕ್ತರಲ್ಲಿ ಜಾತಿಭೇಧವಿಲ್ಲ ಎಂದು ವಿರೋಧಿಗಳ ಮನಸ್ಸನ್ನು ಒಲಿಸಿದರು.

ದಾಸರೆಂದರೆ ಪುರಂದರದಾಸರಯ್ಯಾ
ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವಾ ||

ಎಂದು ಪುರಂದರದಾಸರ ಮಹಿಮೆಯನ್ನು ಕೊಂಡಾಡಿ ಕೀರ್ತನೆ ರಚಿಸಿದರು. ವ್ಯಾಸರಾಜರು ಪುರಂದರದಾಸರ ದೇವರನಾಮಗಳನ್ನು ಹೊಗಳಿ ಅವುಗಳನ್ನು ಬರೆದಿದ್ದ ಪುಸ್ತಕವನ್ನೂ ಪುರಂದರೋಪನಿಷತ್ತು ಎಂದು  ಹೆಸರಿಟ್ಟು ಸರ್ವಮೂಲಗ್ರಂಥಗಳ ವ್ಯಾಸಪೀಠದಲ್ಲಿಟ್ಟು ಪೂಜಿಸಿ ಮಂಗಳಾರತಿ ಮಾಡಿದರು.  ವ್ಯಾಸರಾಜರು ಕನಕ ದಾಸರನ್ನೂ ತಮ್ಮಶಿಷ್ಯರನ್ನಾಗಿ ಸ್ವೀಕರಿಸಿದರು. ಕನಕದಾಸರೊಡನೆ ಸೇರಿ ಭಜನೆ ಮಾಡಿ ಕುಣಿದರು. ಕನಕದಾಸರು ಕುರುಬರೆಂದು ವಿರೋಧಿಗಳು ಜರೆದರು. ಅವರ ಮಹಿಮೆಯನ್ನು ಪ್ರಕಟಿಸಲು ವ್ಯಾಸರಾಜರು ಒಂದು ಉಪಾಯ ಮಾಡಿದರು. ಒಂದು ದಿನ ಏಕಾದಶಿಯ ಮಧ್ಯಾಹ್ನದ ಹೊತ್ತು ನೈವೇದ್ಯ ಮಾಡಿದ ಬಾಳೆ ಹಣ್ಣುಗಳನ್ನು ಹಿಡಿದು ವ್ಯಾಸರಾಜರು ಶಿಷ್ಯರನ್ನು ಕರೆದು ಒಬ್ಬೊಬ್ಬರಿಗೂ ಹಣ್ಣನ್ನು ಕೊಟ್ಟರು. “ಯಾರೂ ಕಾಣದ ಸ್ಥಳದಲ್ಲಿ ಇದನ್ನು ತಿನ್ನಿ” ಎಂದು ಹೇಳಿದರು.

ಎಲ್ಲರೂ ತಿಂದು ಬಂದರು.

ಕನಕದಾಸರು ಮಾತ್ರ ಹಣ್ಣನ್ನು ಹಿಂದಕ್ಕೆ ತಂದರು.  ಸ್ವಾಮಿ, ತಾವು ಹೇಳಿದಂತೆ ಯಾರೂ ಕಾಣದ ಸ್ಥಳವೇ ಸಿಕ್ಕಲಿಲ್ಲ. ಎಲ್ಲಿ ಹೋದರೂ ದೇವರು ನೋಡುತ್ತಾನೆ. ದೇವರಿಲ್ಲದ ಏಕಾಂತ ಸ್ಥಳವು ಯಾವುದೆಂದು ನೀವೇ ತೋರಿಸಿಕೊಡಿರಿ ಎಂದರು.

ವ್ಯಾಸರಾಜರು, ಕನಕದಾಸರನ್ನು ಕಂಡು ಸಹಿಸದ ಶಿಷ್ಯರಿಗೆ ನಿಮಗೂ ಕನಕದಾಸರಿಗೂ ಇರುವ ವ್ಯತ್ಯಾಸ ಇದು ಎಂದರು.

ಕನಕದಾಸರೂ ತಮ್ಮಗುರುಗಳನ್ನು ಕೊಂಡಾಡಿ ಕೀರ್ತನೆ ಹಾಡಿದರು :

ಹರಿ ನಿನ್ನ ಪದಕಮಲ ಕರುಣದಿಂದಲಿ ಎನಗೆ
ದೊರಕಿತೀ ಗುರುಸೇವೆ ಹರಿಯೇ

ನಾನು ಹೋದರೆ

ಒಂದು ದಿನ ವ್ಯಾಸರಾಜರು ವಿದ್ವದ್ಗೋಷ್ಠಿ ಸೇರಿದ್ದಾಗ ಪುರಂದರದಾಸರನ್ನೂ ಕನಕದಾಸರನ್ನೂ ಬಳಿಯಲ್ಲಿ ಕುಳ್ಳಿರಿಸಿಕೊಂಡರು. ಮೋಕ್ಷಕ್ಕೆ ಅಧಿಕಾರಿಗಳು ಯಾರು ಎಂಬುವುದರ ಬಗೆಗೆ ಆ ದಿನ ಚರ್ಚೆ ನಡೆಯುತ್ತಿದ್ದಿತ್ತು.  “ಇಷ್ಟ ಜನರಲ್ಲಿ ವೈಕುಂಠಕ್ಕೆ ” ಹೋಗುವರು ಯಾರು ? ಎಂಬ ಪ್ರಶ್ನೆಯನ್ನು ವ್ಯಾಸರಾಜರು ಸಭೆಯ ಮುಂದೆಯಿಟ್ಟರು. ಯಾರಿಗೂ ಉತ್ತರ ಹೇಳಲು ಧೈರ್ಯ ಬರಲಿಲ್ಲ. ಆಗ ವ್ಯಾಸರಾಜರು, ಕನಕಾ, ಇಷ್ಟು ಜನರಲ್ಲಿ ವೈಕುಂಠಕ್ಕೆ ಹೋಗುವರು ಯಾರು ? ಎಂದು ಕೇಳಿದರು. ಒಬ್ಬೊಬ್ಬರನ್ನೇ ಬೆರಳಿಟ್ಟು ತೋರಿಸಿ ಇವರು ಹೋಗುವರೇ, ಇವರು ಹೋಗುವರೇ ಎಂದು ಕೇಳಿದರು.

ಸ್ವಾಮಿಗಳು ಪುರಂದರ ದಾಸರ ಕಡೆ ಕೈ ಮಾಡಿ ಕೇಳಿದರು. ಕನಕದಾಸರು ಇಲ್ಲವೆಂದರು.

ವ್ಯಾಸರಾಜರು ತಮ್ಮ ಎದೆಯನ್ನು ಮುಟ್ಟಿ “ನಾವು?” ಎಂದು ಕೇಳಿದರು. ಕನಕದಾಸರೂ ಅದಕ್ಕೂ ಇಲ್ಲವೆಂದರು. ಸಭೆ ತಳಮಳಗೊಂಡಿತು.

“ಎಷ್ಟು ಅಹಂಕಾರ ಇವನಿಗೆ !” ಎಂದುಕೊಂಡರು ಹಲವು ಶಿಷ್ಯರು. “ಹಾಗಿದ್ದರೆ ಯಾರು ವೈಕುಂಠ       ಕ್ಕೆ ಹೋಗುವವರು ?” ಎಂದರು ಗುರುಗಳು.

ಕನಕದಾಸರು ಮುಗುಳ್ನಗುತ್ತ, “ಮಹಾಸ್ವಾಮೀ ನಾನು ಹೋದರೆ ಹೋಗಬಹುದು! ಎಂದರು.

ಸಭೆಯಲ್ಲಿ ಕೋಲಾಹಲವುಂಟಾಯಿತು. ಆಗ ಕನಕದಾಸರ ಸಭೆಯನ್ನುದ್ದೇಶಿಸಿ ಕೋಲಾಹಲಕ್ಕೆ ಕಾರಣವಿಲ್ಲ. ನನ್ನ ಅಭಿಪ್ರಾಯವಿಷ್ಟೆ. ನಾನು ಎಂಬ ಅಹಂಕಾರ ಹೋದರೆ ವೈಕುಂಠಕ್ಕೆ ಹೋಗಬಹುದು. ಅದು ಉಳಿದಿದ್ದರೆ ಹೋಗುವುದಲ್ಲವೆಂದು ನಮಸ್ಕಾರ ಮಾಡಿದರು.

ವ್ಯಾಸರಾಜರು ಹೀಗೆ ಹಿಂದೆ ನಿಂತು ಸೂತ್ರಧಾರಿಗಳಾಗಿ ಭಗವಂತನ ಭಕ್ತರ ಮಹಿಮಾತಿಶಯವನ್ನು ಲೋಕಕ್ಕೆ ಪ್ರಕಟಿಸುತ್ತಿದ್ದರು.

ಸಿಂಹಾಸನಾರೋಹಣ :

ವ್ಯಾಸರಾಜರು ಪದವಿಯ ಆಸೆ, ಅಧಿಕಾರದ ಆಸೆ, ವೈಭವದ ಆಸೆ ಎಲ್ಲವನ್ನೂ ಎಷ್ಟರಮಟ್ಟಿಗೆ ಗೆದ್ದಿದ್ದರು ಎಂಬುವುದನ್ನು ಒಂದು ಸಂಗತಿ ತೋರಿಸುತ್ತದೆ.  ಎಂಥವರಿಗಾದರು ಕಷ್ಟ ಬಾರದಿರುವುದಿಲ್ಲ. ಕೃಷ್ಣದೇವರಾಯನಿಗೆ ಒಮ್ಮೆ ಕುಹಯೋಗ ಎಂಬ ಅನಿಷ್ಟ ಪ್ರಾಪ್ತವಾಯಿತು.  ರಾಹು, ಸೂರ್ಯ, ಶನಿ, ಕುಜ ಗ್ರಹಗಳು ವಿಷಗಳಿಗೆಯಲ್ಲಿ ಅಮವಾಸ್ಯೆಯ ದಿನ ಮಕರ ರಾಶಿಯಲ್ಲಿ ಸಂಧಿಸಿದರೆ ಕುಹು ಯೋಗ ಎಂದೆನ್ನುತ್ತಾರೆ. ಇದರಿಂದ ರಾಜನಾಶ,ರಾಜ್ಯ ನಾಶವುಂಟಾಗುತ್ತದೆ ಎಂದು ನಂಬಿಕೆ.

ಕೃಷ್ಣದೇವರಾಯನಿಗೆ ಆಸ್ಥಾನದ ಜ್ಯೋತಿಷ್ಯ ವಿದ್ವಾಂಸರಿಂದ ಸಂಗತಿ ತಿಳಿಯಿತು. ಈ ಯೋಗದ ವಿಪತ್ತಿನಿಂದ ಪರಿಹಾರ ಹೇಗೆ ? ಎಂದು ಕೇಳಿದ. ರಾಜ್ಯ ತ್ಯಾಗ,ಸರ್ವಸ್ವದಾನ, ಸನ್ಯಾಸ, ಸ್ವೀಕಾರಗಳೇ ಈ ಅನಿಷ್ಟ ನಿವಾರಕ ಮಾರ್ಗವೆಂದರು ವಿಧ್ವಾಂಸರು.

ಕೃಷ್ಣದೇವರಾಯನು ತನ್ನ ಸಾಮ್ರಾಜ್ಯವನ್ನೇ ವ್ಯಾಸರಾಜರಿಗೆ ದಾನ ಮಾಡಿ ಅವರನ್ನು ಸಿಂಹಾಸನದ ಮೇಲೆ ಕೂಡಿಸಿದನು. ವ್ಯಾಸರಾಜರು ಸಿಂಹಾಸನಾರೋಹಣ ಮಾಡಿ ಬಗೆಬಗೆಯ ದಾನಧರ್ಮಗಳನ್ನು ಮಾಡಿ ಮಹಾರಾಜನ ಅಪತ್ತನ್ನು ನಿವಾರಿಸಿದರು.

ಈ ರಾಜ್ಯ ನಿನ್ನದು. ಸಿಂಹಾಸನರೋಹಣ ಮಾಡಬೇಕು

ಕುಹುಯೋಗದ ಅವಧಿ ಮುಗಿಯಿತು.

ವ್ಯಾಸರಾಜರು ಸಿಂಹಾಸನದಿಂದಿಳಿದು, “ಮಹಾರಾಜ, ಮತ್ತೇ ಸಿಂಹಾಸನವನ್ನು ಏರು” ಎಂದರು. ಕೃಷ್ಣದೆವರಾಯನು,ಗುರುಗಳೇ ಒಂದು ಬಾರಿ ಕೊಟ್ಟಿದ್ದನ್ನು ಹಿಂದಕ್ಕೆ ತೆಗೆದುಕೊಳ್ಲುವುದು ಪಾಪ.ನಿಮ್ಮ ಸೇವೆ ನನಗೆ ಮುಖ್ಯ . ತಾವೇ ರಾಜ್ಯವನ್ನು ಆಳಬೇಕು ಎಂದು ತಲೆ ಬಾಗಿದ.

ವ್ಯಾಸರಾಜರು, ಮಹಾರಾಜಾ, ಸಂನ್ಯಾಸಿಗೆ ರಾಜ್ಯಾಧಿಕಾರವಿಲ್ಲ: ಈ ರಾಜ್ಯ ನಿನ್ನದು: ಸಿಂಹಾಸನಾರೋಹಣ ಮಾಡಬೇಕು ಎಂದರು. ಕೃಷ್ನದೇವರಾಯನಿಗೆ ಅವನ ಕರ್ತವ್ಯವನ್ನು ತಿಳಿಯ ಹೇಳಿ ಪುನಃ ಸಿಂಹಾಸನ ರೋಹಣವನ್ನು ಮಾಡಿಸಿದರು: ರಾಜನಿಗೂರಾಜ್ಯಕ್ಕೂ ಕ್ಷೇಮವನ್ನು ಉಂಟು ಮಾಡಿದರು.

ಕೃತಿಗಳು :

ವ್ಯಾಸರಾಜರು ತಮ್ಮ ಪಾಂಡಿತ್ಯವನ್ನು ಸಾರರೂಪವಾಗಿ ನ್ಯಾಯಾಮೃತ, ತರ್ಕತಾಂಡವ,ಚಂದ್ರಿಕಾ ಎಂಬ ಮೂರು ಸಂಸ್ಕೃತ ಗ್ರಂಥಗಳನ್ನು ರಚಿಸಿದರು.  ಇವು ವ್ಯಾಸತ್ರಯ ಎಂದು ಹೆಸರಾಗಿವೆ.

ಕನ್ನಡ ಸಾಮಾನ್ಯ ಜನರು ಆಡುವ ಭಾಷೆ. ಧರ್ಮದ ತಿರುಳು, ಹಿರಿಯರ ಉಪದೇಶ ಜನಸಾಮಾನ್ಯರ ಭಾಷೆಯಲ್ಲಿ ಲಭ್ಯವಾಗಬೇಕು. ವಿಧ್ವಾಂಸರಲ್ಲಿ ವಿಧ್ವಾಂಸರಾದ ವ್ಯಾಸರಾಜರು ಇದನ್ನು ಗುರುತಿಸಿ ಸುಲಭವಾದ ಕನ್ನಡ ಭಾಷೆಯಲ್ಲಿ ಕೃತಿಗಳನ್ನು ರಚಿಸಿದರು.  ಭಗವದ್ಗೀತೆಯನ್ನು ವೃತ್ತನಾಮವಾಗಿ ಕನ್ನಡದಲ್ಲಿ ಬರೆದರು. ಅಲ್ಲದೆ ಕನ್ನಡದಲ್ಲಿ ಅವರು ಅನೇಕ ದೇವರನಾಮಗಳನ್ನು ರಚಿಸಿಹಾಡಿ ಕುಣಿದರು. ಅವು ಎಷ್ಟಿವೆ ಎಂಬುವದು ಸ್ಪಷ್ಟವಾಗಿ ತಿಳಿಯುವುದಿಲ್ಲ.   ಶ್ರೀಕೃಷ್ಣ (ಸಿರಿಕೃಷ್ಣ) ಎಂಬ ಅಂಕಿತದಲ್ಲಿ ನೂರಾರು ಕೃತಿಗಳನ್ನು ರಚಿಸಿದರು.  ಅವುಗಳಲ್ಲಿ ಮೂಡಿರುವ ಭಕ್ತಿ ಭಾವವನ್ನು ನೋಡಿದರೆ ಅವು  ಕಟ್ಟಿದ ಪದಗಳಲ್ಲ, ಅವು ಅವರ ಅಂತರಂಗದ ವಾಣಿಗಳು ಎಂಬಂತೆ ಕಾಣಿಸದೆ ಇರದು.

ದೇಹವೇ ದೇವಾಲಯ;

ವ್ಯಾಸರಾಜರು ತಮ್ಮದೇಹವನ್ನೇ ದೇವಾಲಯ ಮಾಡಿ ಅಲ್ಲಿ ಶ್ರೀ ಕೃಷ್ಣನನ್ನಿಟ್ಟು ಪೂಜಿಸಿದರು:

ಎನ್ನ ಬಿಂಬ ಮೂರುತಿಯ ಪೂಜಿಸುವೆ ನಾನು
ಮನಮುಟ್ಟಿ ಅನುದಿನದಿ ಮರೆಯದೆ ಜನರೇ
ಗಾತ್ರವೇ ಮಂದಿರ ಹೃದಯವೇ ಮಂಟಪ
ನೇತ್ರವೇ ಮಹದೀಪ ಹಸ್ತಚಾಮರವು
ಯಾತ್ರೆ ಪ್ರದಕ್ಷಿಣೆ ಶಯನ ನಮಸ್ಕಾರ
ಶಾಸ್ತ್ರ ಮಾತುಗಳೆಲ್ಲ ಮಂತ್ರಂಗಳು ||೧|+

ಎನ್ನ ಸ್ವರೂಪವೆಂಬುದೆ ರನ್ನಗನ್ನಡಿ
ಎನ್ನ ಮನೋವೃತ್ತಿ ಎಂಬುದೇ ಛತ್ರಿ
ಇನ್ನು ನುಡಿವ ಹರಿನಾಮಾಮೃತವೇ ತೀರ್ಥ
ಎನ್ನ ಮನವೆಂಬುದೇ ಸಿಂಹಾಸನ ||೨||

ಅನ್ಯದೇವತೆಯಾಕೆ ಅನ್ಯ ಪ್ರತಿಮೆಯಾಕೆ
ಅನ್ಯವಾದ ಮಂತ್ರ ತಂತ್ರವ್ಯಾಕೆ
ಎನ್ನಲ್ಲಿ ಭರಿತ ಸಾಧನೆಗಳು ಇರುತಿರಲು
ಚೆನ್ನಾಗಿ ಶ್ರೀ ಕೃಷ್ಣಸ್ವಾಮಿಯ ಪೂಜಿಸುವೆ || ೩ |

ಭಗವಂತ ತಮ್ಮ ಮನಸ್ಸಿಗೆ , ಮನೆಗೆ ಬಂದರೆ ಸಾಕು ಎಂದು ಹಂಬಲ ಅವರಿಗೆ. ಅವನು ಬಂದರೆ ಅಂತರಂಗದ ಗುಡಿಯನ್ನು ಸಿಂಗರಿಸಿ ಸಂತೋಷ ಪಡುತ್ತಾರೆ.

ರಂಗಯ್ಯ ಮನೆಗೆ ಬಂದರೆ ಅಂತ
ರಂಗದ ಗುಡಿಕಟ್ಟಿ ಕುಣಿಯುವೆ ನಾನು

ಭಗವಂತ ಮನೆಗೆ, ಮನದೊಳಗೆ ಬಂದರೆ ಬಾಡಿದ ಮಾವು ಪಲ್ಲವಿಸಿತು, ಬಿಸಿಲು ಬೆಳದಿಂಗಳಾಯಿತು ಎಂದು ಹಿರಿ ಹಿರಿ ಹಗ್ಗುವರು.

ಶ್ರೀ ಕೃಷ್ಣನ ಪರಮಭಕ್ತರು:

ವ್ಯಾಸರಾಜರು ಕೃಷ್ಣನ ಪರಮಭಕ್ತರು. ಅವರಿಗಾಗಿ ಕೃಷ್ಣದೇವರಾಯನು ವಿಜಯನಗರದಲ್ಲಿ ಬಾಲಕೃಷ್ಣನ ಗುಡಿಯನ್ನು ಕಟ್ಟಿಸಿಕೊಟ್ಟ. ಅವರಿಗೆ ಶ್ರೀ ಕೃಷ್ಣ ಕಣ್ಣಿಗೆ ಕಾಣದ ದೇವರಲ್ಲ.ಇತರರಿಗೆ ಮರಗಿಡ, ಸುತ್ತಲಿನ ಮನುಷ್ಯರು ಎಷ್ಟು ಸ್ಪಷ್ಟವೋ ನಿಜವೋ ಅಷ್ಟೆ ಸ್ಪಷ್ಟ, ನಿಜ ಶ್ರೀಕೃಷ್ಣ. ಅಂತರಂಗದಲ್ಲಿ ಹರಿಯ ಕಾಣದವನು ಹುಟ್ಟು ಕುರುಡನೋ ಎಂದು ಒಂದು ಹಾಡಿನಲ್ಲಿ ಹೇಳಿದ್ದಾರೆ.

ಸುಳಾದಿಯೊಂದರಲ್ಲಿ ಬಾಲಕೃಷ್ಣನ್ನು ಗೆಜ್ಜೆ ಕಟ್ಟಿಸಿ ಕುಣಿದಾಡಿಸಿದ್ದಾರೆ, ತಮ್ಮ ತಲೆಯ ಮೇಲೆ :

ನಿನ್ನ ಮೃದುಪಾದವ ನೋಯದಂತೆ
ಎನ್ನಶಿರಸ್ಸಿನಲ್ಲಿಡೋ
ರನ್ನ ಕಾಲಂದಿಗೆ ಗೆಜ್ಜೆಯ ನಾದದಿ
ಧಿನ್ನು ಧಿಂಧಿಮಿಕೆಂದು ಕುಣಿಸುವೆ
ಉದಯಾದ್ರಿ ಶ್ರೀಕೃಷ್ಣ ||

ಎಂಥಾ ಸುಲಭನೋ ನೀನು
ಉದಯಾದ್ರಿ ಶ್ರೀಕೃಷ್ಣ
ಚಿಂತೆ ಮಾಡುವರಿಗೆಲ್ಲ ||

ಹೀಗೆ ತಮ್ಮ ನೂರಾರು ಕನ್ನಡದ ಕೃತಿಗಳಲ್ಲಿ ವ್ಯಾಸ ರಾಜರ ನಿರಾಡಂಬರ ಭಕ್ತ ಪ್ರಕಟವಾಗಿದೆ. ಸದಾ ಅವರ ಪ್ರಾರ್ಥನೆ:

ನಿನ್ನಾಜ್ಞದವನೂ ನಾನೆನ್ನನೊಪ್ಪಿಸಿದೆ
ಬಿನ್ನಹ ಚಿತ್ತೈಸಿ ಎನ್ನ ಪಾಲಿಸೋ ಕೃಷ್ಣಾ ||

ಎಂದೆಂದೆನ್ನ ಮನದಿಂದಿಅಗಲದಿರೋ
ನಂದನಂದನನೆ ಆನಂದ ಮೂರುತಿಯೇ ||

ವೈಕುಂಠವಾಸ :

ವ್ಯಾಸರಾಜರು ತಮ್ಮ ತೊಂಬತ್ತೆರಡುವರ್ಷಗಳ ತುಂಬು ಬಾಳಿನಲ್ಲಿ ಮಾನವ ಜನ್ಮವನ್ನು ದೊಡ್ಡದೆನ್ನಿಸಿದರು.ವಿಜಯನಗರ ಸಾಮ್ರಾಜ್ಯದ ಅವನತಿಯ ಚಿಹ್ನೆಗಳು ಅವರಿಗೆ ಕಾಣಿಸತೊಡಗಿದವು: ವೃದ್ದಾಪ್ಯದಿಂದ ದೇಹವೂ ಸೋತಿತು.

ಪುಟ್ಟಿ ನಾ ಭುವಿಯೊಳಗೆ ಬಹುದಿನ ಕಳೆಯಿತೋ
ಪುಟ್ಟದಂತೆ ಆಡೋ ಸೃಷ್ಠೀಶ ಶಿರಿಕೃಷ್ಣ ||
ಪಟ್ಟಾಭಿರಾಮನೆ ಪರಮ ಪುರುಷೋತ್ತಮನೆ
ಗಟ್ಟ್ಯಾಗಿ ನಿನ್ನ ಪಾದಗಳ ನಂಬಿದೆ ದೇವ ||

ಎಂದು ಹಾಡುತ್ತ ಹಾಡುತ್ತ ನಾರಾಯಣ, ನಾರಾಯಣ, ನಾರಾಯಣ ಎಂದು ಹರಿಸ್ಮರಣೆ ಮಾಡಿದರು.

ಶಾಲಿವಾಹನ ಶಕ ೧೪೬೧ನೆಯ ವಿಳಂಬಿ ಸಂವತ್ಸರ ಫಾಲ್ಗುಣ ಕೃಷ್ಣ ಚತುರ್ಥಿಯಂದು (೮-೩-೧೫೩೯) ವ್ಯಾಸರಾಜರು ವೈಕುಂಠವಾಸಿಗಳಾದರು.

ಭಕ್ತಿಪಂಥ :

ಶಂಕರ, ಮಧ್ವ, ರಾಮಾನುಜ ಮೊದಲಾದ ಸರ್ವ ಧರ್ಮದವರಿಗೂ ಸಮಾನವಾದ ಭಕ್ತ ಪಂಥವನ್ನು ಭರತ ಖಂಡದಲ್ಲೆಲ್ಲ ಪ್ರಚಾರ ಮಾಡಿದುದು ವ್ಯಾಸರಾಜರು ಮಾಡಿದ ಮಹಾಕಾರ್ಯ. ಸಾಳ್ವ, ನರಸಿಂಹನಿಂದ ಹಿಡಿದು ಅಚ್ಯುತ್ತರಾಯನ ಕಾಲದವರೆಗೆ ಅರ್ಧ ಶತಮಾನದಷ್ಟು ಕಾಲ ವಿಜಯನಗರ ಸಾಮ್ರಾಜ್ಯ ಹಾಗು ಧರ್ಮ ಸಾಮ್ರಾಜ್ಯದ ರಕ್ಷಕರಾಗಿ, ಪ್ರಸಿದ್ಧರಾದರು. ಅವರು ಭಕ್ತಿ, ವಿನಯ, ನಿರಾಡಂಬರ  ಔದಾರ್ಯ ಗುಣಗಳ ಮಹಾನಿಧಿ ಯಾಗಿದ್ದರು.

ಅಸಮಾನ ವಿದ್ವತ್ತು ಅವರದು: ಶ್ರೀಪಾದರಾಯ ರಂತಹ ಹಿರಿಯರು, ಕೃಷ್ಣದೇವರಾಯನಂತಹ ರಾಜರು ಹೊಗಳಿದ ಪುಣ್ಯ ಚರಿತ್ರರು. ಆದರೆ ದಾಸರ ದಾಸನು ನಾನು ದೋಷಿಗಳಗ್ರೇಸರ ನಾನು ಎಂದು ಹೇಳಿಕೊಳ್ಳುತ್ತಿದ್ದರು.  ಅವರ ದೃಷ್ಟಿಯಲ್ಲಿ ಯಾರೂ ಕೀಳಳ್ಲ. ಅಕ್ಷರ ಬಾರದ ಅವಿದ್ಯಾವಂತನೊಬ್ಬ ಅವರ ಬಳಿ ಬಂದು,ಸ್ವಾಮಿ, ನನಗೆ ವಿದ್ಯೆ ಇಲ್ಲ. ಸಂಪ್ರದಾಯ ತಿಳಿಯದು, ತಾವು ಅನುಗ್ರಹಿಸಬೇಕು ಎಂದು ಬೇಡಿದ.

ವ್ಯಾಸರಾಜರು ಹೇಳಿದರು: ಅಪ್ಪಾ,ವಿದ್ಯೆ ಬಂದವರಿಗೆಲ್ಲ ವಿವೇಕ ಬರುವುದಿಲ್ಲ. ವಿದ್ಯೆ ಬರದ ದಡ್ಡರು ಕೆಲವರು, ವಿದ್ಯೆ ಕಲಿತ ದಡ್ಡರು ಕೆಲವರು. ಇವರಿಬ್ಬರಲ್ಲಿ ವಿದ್ಯೆ ಬಂದ ದಡ್ಡನಿಗಿಂತ ವಿದ್ಯೆ ಬರದ ದಡ್ಡನೇ ಉತ್ತಮ. ವಿದ್ಯೆ ಬಂದರೆ ಅಹಂಕಾರ ಹೋಗಬೇಕು. ನಮಗಿಂತ ದೊಡ್ಡದು, ದೊಡ್ಡವರು ಉಂಟು ಎಂಬ ಜ್ಞಾನ ಬರಬೇಕು. ಇಲ್ಲದಿದ್ದರೆ ಬರಿಯ ವಿದ್ಯೆಯಿಂದ ಫಲವೇನು ?
ಎಂತಹ ಕೆಟ್ಟ ಕೆಲಸ ಮಾಡಿದವನೂ ತನ್ನ ತಪ್ಪನ್ನು ತಿಳಿದುಕೊಂಡು ಉತ್ತಮನಾಗುವ  ಮನಸ್ಸು ಮಾಡಿದರೆ ಸಾಕು. ದೇವರ ಶ್ರದ್ದೇಯಿಂದ ಮನಸ್ಸು ಹರಿಸಿದರೆ ಸಾಕು ಎಂದರು ವ್ಯಾಸರಾಜರು. ಯಾರನ್ನೂ ಪಾಪಿ ಎಂದು ದೂರ ಇಡಲಿಲ್ಲ.

ಪ್ರತಿ ದಿವಸ ಮಾಡಿದ ಪಾಪಂಗಳಿಗೆ ಎಲ್ಲಾ ಪತಿತ ಪಾವನವೆಂದು ಕರೆದರೆ ಸಾಲದೇ? ಎಂದರು. ಶ್ರೀಕೃಷ್ಣನ ಮಹಿಮೆಗಳನ್ನು ವರ್ಣಿಸಿ, ಇಂತಪ್ಪ ಮಹಿಮೆಗಳೊಂದನ್ನಾದರೂ ಒಮ್ಮೆ ಸಂತಸದಿ ನೆನೆಯೆ ಸಲಹುವ ನಮ್ಮ ಸಿರಿಕೃಷ್ಣ ಎಂದು ಭರವಸೆ ಕೊಟ್ಟರು.

ಭಕ್ತರಲ್ಲಿ ಮೇಲು ಕೀಳುಗಳಿಲ್ಲ ಎಂದು ತಮ್ಮ ಆಚರಣೆಯಿಂದ ವ್ಯಾಸರಾಜರು ತೋರಿಸಿಕೊಟ್ಟರು.  ಪುರಂದರ ದಾಸರನ್ನು , ಕನಕದಾಸರನ್ನು ಅವರು ಶಿಷ್ಯರೆಂದು ಸ್ವೀಕರಿಸಿದಾಗಲೇ ಅನೇಕ ಆಚಾರವಂತರು ಅಸಮಾಧಾನ ಪಟ್ಟರು.  ಆ ಶಿಷ್ಯರಿಗೆ ವ್ಯಾಸರಾಜರು ಕೊಟ್ಟ ಗೌರವದಿಂದ ಅವರ ಕೋಪ ಇನ್ನೂ ಭುಗಿಲೆದ್ದಿತು.  ಆದರೆ ವ್ಯಾಸರಾಜರು ಆ ಇಬ್ಬರು ಶಿಷ್ಯರ ಮಹಿಮೆಯನ್ನು ಇತರರಿಗೆ ತೋರಿಸಿ ಕೊಟ್ಟರು. ಭಕ್ತಿಯ ಪರಿಶುದ್ಧತೆ ಮುಖ್ಯ, ಹುಟ್ಟಿದ ಜಾತಿಯಲ್ಲ, ನಿಜವಾದ ಭಗವದ್ಭಕ್ತ ಎಲ್ಲರಿಗಿಂಗ ಶ್ರೇಷ್ಠ ಎಂದು ತೋರಿಸಿದರು.  ಪುರಂದರದಾಸರ ದೇವರನಾಮಗಳನ್ನು ಮೆಚ್ಚಿ ಅವರ ಪುಸ್ತಕಗಳನ್ನು ಪುರಂದರದೋಪನಿಷತ್ತು ಎಂದು ಕರೆದರು.  ಎಲ್ಲ ಮೂಲ ಗ್ರಂಥಗಳ ಜೊತೆಗೆ ವ್ಯಾಸಪೀಠದಲ್ಲಿಟ್ಟು ಮಂಗಳಾರತಿ ಮಾಡಿದರು. ವಿಷ್ಣು ದೇವಾಲಯದಲ್ಲಿ, ಶಿವ ದೇವಾಲಯದಲ್ಲಿ ಪೂಜೆಯನ್ನು ಸಲ್ಲಿಸಿದರು.

ವ್ಯಾಸರಾಜರು ಕರ್ನಾಟಕದ ಸುವರ್ಣ ಯುಗಕ್ಕೆ ಕಾರಣರಾದರು. ವಿಜಯನಗರದ ಅರಸರಿಗೆ ರಾಜಗುರುಗಳಾಗಿ ವಿಜಯನಗರ ಸಾಮ್ರಾಜ್ಯದ ಮಹೋನ್ನತಿಗೆಲ್ಲ ಕಾರಣರಾದರು. ಅವರ ಕಾಲದಲ್ಲಿ ಕರ್ನಾಟಕ ಸಾಹಿತ್ಯ ಇನ್ನಿಲ್ಲ ಎಂದು ಮೆರೆಯಿತು. ದಕ್ಷಿಣ ಭಾರತದ ತೀರ್ಥ ಕ್ಷೇತ್ರಗಳು ದಿವ್ಯಾಭರಣಗಳನ್ನು ಪಡೆದು ರಾರಾಜಿಸಿದವು. ಕಾವೇರಿಯಿಂದ ನರ್ಮದೆಯವೆಗೆ ಕರ್ನಾಟಕ ಸುಖ ಸಂಪತ್ತನ್ನು ಅನುಭವಿಸಿತು.