ಹೆಸರು: ಉಮಾ
ಊರು: ಕಲ್ಲಹಳ್ಳಿ

 

ಪ್ರಶ್ನೆ: ಡಾ. ಶರತ್ಕುಮಾರ್ ಮತ್ತು ಸುಬ್ರಹ್ಮಣ್ಯರವರಿಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು. ಆಕಾಶವಾಣಿಯ ಮೈಸೂರು ಕೇಂದ್ರದಿಂದ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಪ್ರಸಾರವಾಗುವುದರಿಂದ ಗ್ರಾಮೀಣ ಜನತೆಗೆ ತುಂಬಾ ಉಪಕಾರಿಯಾಗಿದೆ.

ನನ್ನ ಪ್ರಶ್ನೆಯೇನೆಂದರೆ ಪುರುಷರಿಗೆ ವ್ಯಾಸೆಕ್ಟಮಿ ಆಪರೇಷನ್ ಮಾಡುವುದರಿಂದ ಅವರ ಪುರುಷತ್ವದಲ್ಲಿ ಏನು ತೊಂದರೆ ಆಗುವುದಿಲ್ಲವೇ? ವ್ಯಾಸೆಕ್ಟಮಿಯನ್ನು ಹೇಗೆ ಮಾಡುತ್ತಾರೆ? ತಿಳಿಸಿಕೊಡಿ.

ಉತ್ತರ: ವೀರ್ಯನಾಳ ಕೊಯ್ತೆಗೆತ (ವ್ಯಾಸೆಕ್ಟಮಿ)ದಿಂದ ಪುರುಷತ್ವಕ್ಕೆ ತೊಂದರೆಗಳಾಗುತ್ತವೆ ಎಂಬ ಹುಸಿ ನಂಬಿಕೆಗಳು ಜನರಲ್ಲಿ ಮನೆ ಮಾಡಿಕೊಂಡಿವೆ.  ಈ ಚಿಕಿತ್ಸೆಯನ್ನು ಮಾಡಿಸಿಕೊಳ್ಳುವುದರಿಂದ ಲೈಂಗಿಕಶಕ್ತಿ ಕಡಿಮೆಯಾಗುತ್ತದೆ, ಹಾರ್ಮೋನ್‌ಗಳ ಮೇಲೆ ಪ್ರಭಾವ ಬೀರಿ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತವೆ, ಈ ಚಿಕಿತ್ಸೆಯಲ್ಲಿ ತರಡು ಬೀಜಗಳನ್ನು ತೆಗೆಯುತ್ತಾರೆ, ವೀರ್ಯಾಣುಗಳು ದೇಹದಲ್ಲಿಯೇ ಉಳಿದುಕೊಳ್ಳುತ್ತವೆ, ಇದರಿಂದ ಹಲವಾರು ತೊಂದರೆಗಳುಂಟಾಗುತ್ತವೆ, ಇದರಿಂದ ವೀರ್ಯಸ್ಕಲನವಾಗುವುದಿಲ್ಲ, ಹೀಗೆ ಹತ್ತು ಹಲವಾರು ರೀತಿಯ ಹುಸಿ ನಂಬಿಕೆಗಳು ಜನರಲ್ಲಿವೆ. ಆದರೆ ಈ ಎಲ್ಲಾ ನಂಬಿಕೆಗಳು, ಕಲ್ಪನೆಗಳು ನೂರಕ್ಕೆ ನೂರರಷ್ಟು ಕಲ್ಪನೆಗಳಾಗಿರುತ್ತವೆ.

ವೀರ್ಯನಾಳ ಕೊಯ್ತೆತೆಗೆತ (ವ್ಯಾಸೆಕ್ಟಮಿ) ಶಸ್ತ್ರ ಕ್ರಿಯೆಯನ್ನು ಮಾಡುವುದು ತುಂಬಾ ಸರಳ ಮತ್ತು ಸುಲಭ ವಿಧಾನವಾಗಿದೆ. ಇದರಲ್ಲಿ ವೃಷಣದಿಂದ ವೀರ್ಯಾಣುಗಳನ್ನು ರವಾನಿಸುವ ವೀರ್ಯನಾಳಗಳನ್ನು ಎರಡೂ ಕಡೆಯಲ್ಲಿ ಕತ್ತರಿಸಿ ಹೊಲಿಯಲಾಗುತ್ತದೆ. ಈ ಶಸ್ತ್ರ ಕ್ರಿಯೆ ಮಾಡಲು ಹೆಚ್ಚೆಂದರೆ ೨೦ ರಿಂದ ೩೦ ನಿಮಿಷಗಳು ಬೇಕಾಗುತ್ತದೆ.  ಶಸ್ತ್ರ ಕ್ರಿಯೆಯಾದ ನಂತರ ೨೦-೩೦ ನಿಮಿಷದ ವಿಶ್ರಾಂತಿಯ ನಂತರ ವ್ಯಕ್ತಿ ಮನೆಗೆ ತೆರಳಬಹುದು. ಒಂದು ವೇಳೆ ಕರಗದಿರುವ ದಾರದಲ್ಲಿ ಹೊಲಿಗೆಯನ್ನು ಹಾಕಿದ್ದರೆ ಮಾತ್ರ ಒಂದು ವಾರದ ನಂತರ ವೈದ್ಯರನ್ನು ಕಾಣಬೇಕಾಗುತ್ತದೆ. ಇಲ್ಲದಿದ್ದರೆ, ವೈದ್ಯರನ್ನು ಪುನಃ ನೋಡುವ ಅಗತ್ಯವೇ ಇರುವುದಿಲ್ಲ. ಅಷ್ಟೊಂದು ಸುಲಭವಾದ ಶಸ್ತ್ರಕ್ರಿಯೆ ಇದು. ಈ ಶಸ್ತ್ರ ಚಿಕಿತ್ಸೆಯನ್ನು ಹಲವಾರು ಉಪಯೋಗಗಳೆಂದರೆ,

೧. ಶಾಶ್ವತ ಜೀವನ ಪರ್ಯಂತ ಗರ್ಭ ನಿರೋಧಕತೆಯಾಗಿರುತ್ತದೆ.

೨. ನೂರಕ್ಕೆ ೯೯.೯ ಚಿಕಿತ್ಸೆಯಾಗಿದೆ.

೩. ಸಂಭೋಗ ಕ್ರಿಯೆಯಲ್ಲಿ ಯಾವ ಅಡಚಣೆಯು ಇರದು.

೪. ಲೈಂಗಿಕ ಶಕ್ತಿಗೆ ಯಾವುದೇ ತೊಂದರೆ ಆಗುವುದಿಲ್ಲ.

೫. ಯಾವುದೇ ಭಯವಿರದೆ ಸಂಭೋಗ ಮಾಡಬಹುದು.