ಅಮಲಕಮಲಾಧಿವಾಸಿನಿ
ಮನೋ ವೈಮಲ್ಯದಾಯಿನಿ ಮನೋಜ್ಞೆ !
ಸುಂದರಗಾತ್ರಿ ಸುಶೀಲೆ
ತವ ಚರಣಾಮಚ್ಭೊರುಹಂ ನಮಾಮಿಸದಾ ||

(ನಿರ್ಮಲ ಕಮಲದಲ್ಲಿ ವಾಸಿಸುವ ಮನಸ್ಸಿಗೆ ಹರ್ಷವನ್ನು ನೀಡುವ ದೇವಿ, ಸುಂದರಿಯೂ ಸುಶೀಲೆಯೂ ಆದ ದೇವಿ, ಸದಾ ನಿನ್ನ ಪಾದಕ ಕಮಲಗಳಿಗೆ ನಮಸ್ಕರಿಸುತ್ತೇನೆ).

ನಮ್ಮದೇಶದಲ್ಲಿ ಪರಿಚಿತವಾದ ಈ ಸರಸ್ವತೀ ಸ್ತೋತ್ರವನ್ನು ರಚಿಸಿದವರು ಶ್ರೀಶಂಕರಾಚಾರ್ಯರು.

“ಆತನ ರೂಪ ಇಂತಹುದೇ ಎಂದು ಹೇಳಲು ಬಾರದು. ಆದರೆ ಕೀರ್ತಿ ಮಹತ್ತರವಾದುದು.” ಈ ವಾಕ್ಯ ಭಗವಂತನನ್ನು ಕುರಿತು ಹೇಳಿದ್ದು. ವೇದದಲ್ಲಿ ಬರುತ್ತದೆ.  ನಮ್ಮ ನಾಡಿನ ಸಾಂಸ್ಕೃತಿಯನ್ನು ಕಟ್ಟಿ ಬೆಳೆಸಿದ ಅನೇಕ ಮಹಿಮಾನ್ವಿತರ ಬಗ್ಗೆ ಋಷಿಗಳು, ದಾರ್ಶನಿಕರು, ತತ್ವಜ್ಞರು ಇತ್ಯಾದಿ- ಈ ಮಾತನ್ನು ಹೇಳಬಹುದು. ಅವರ ಕಾಲ, ದೇಶ ಹುಟ್ಟು, ಬದುಕು ಮುಂತಾದ ಭೌತಿಕ ಅಂಶಗಳಿಂದ ಅವರು ಭಾರತದ ಚರಿತ್ರೆಯನ್ನು ತುಂಬಲು ಇಚ್ಛಿಸಲಿಲ್ಲ. ಇದು ಈ ಸಂಸ್ಕೃತಿಯ ವೈಶಿಷ್ಟ್ಯ.  ಅವರ ಚೇತನ ಜೀವಂತವಾಗಿ ನಮ್ಮ ಸುತ್ತ ಮುತ್ತಲು ಇದೆ. ಅವರ ತಪೋಶಕ್ತಿಗೆ, ಮೇಧಾಶಕ್ತಿಗೆ, ಕ್ರೀಯಾಶಕ್ತಿಗೆ ಅವರ ಕೃತಿಗಳಿಗೆ ನಿದರ್ಶನ. ಅವುಗಳನ್ನು ಅರಿತೇವಾದರೆ ಆ ಮಹನೀಯರು “ದೇವ-ಮಾನವರಂತೆ ನಮಗೆ ಕಾಣುತ್ತಾರೆ. ಅವರ ಕೃತಿಗಳು ಅತಿ-ಮಾನುಷವೆಂದು ಕಂಡುಬರುತ್ತದೆ. ಇಂತಹವರ ಚಟುವಟಿಕೆಗಳು ನಮ್ಮಶಕ್ತಿಗೆ ಮೀರಿದ್ದು, ಅವುಗಳನ್ನು “ಪವಾಡ”ಗಳೆಂದು ನಾವು ಭಾವಿಸುವುದೂ ಉಂಟು.ಆದರೆ ಆ ಲೋಕೋತ್ತರ ಮಹನೀಯರು ಪವಾಡಗಳನ್ನೇ ಮೀರಿದವರು. ಅವುಗಳನ್ನು ಲೆಕ್ಕಿಸದೇ ಅವರ ಜೀವನ ಕಥೆಯನ್ನು ತಿಳಿದರೂ ಅದೂ ಕೂಡ ಅದ್ಭುತವಾಗಿ ರಮ್ಯವಾಗಿ ಶೋಭಿಸುತ್ತದೆ. ಅಂತಹವರ ಶುದ್ಧಜೀವನ ಭಾರತದ ಸಂಸ್ಕೃತಿಯ ಹೃದಯವನ್ನು ತೆರೆದು ತೋರಿಸುತ್ತದೆ. ಅಂತಹವರ ಪಂಕ್ತಿಗೆ ಸೇರಿದವರಲ್ಲಿ ಶ್ರೀ ಆದಿ ಶಂಕರಾಚಾರ್ಯರು ಒಬ್ಬರು.

ಭಾರತ ಸಂಸ್ಕೃತಿಯ ಇತಿಹಾಸ ನಿಜವಾಗಿ ಇಂತಹ ಮಹಾತ್ಮರ ಜೀವನದ ಹೊನಲು.ಸಮಾಜದಲ್ಲಿ ಆಗಾಗ ತಲೆ ಎತ್ತುವ ಕ್ಷೋಭೆಯಿಂದ- ಧಾರ್ಮಿಕ,ನೈತಿಕ,ತಾತ್ವಿಕ, ರಾಜಕೀಯ ಕ್ಷೋಬೆಗಳಿ-ಚೇತರಿಸಿಕೊಳ್ಳಲು ನಾಡು ಚೈತನ್ಯಪೂರ್ಣ ಮಹಿಮಾವಂತರನ್ನು ಕಾತರದಿಂದ ನಿರೀಕ್ಷಿಸುತ್ತದೆ. ಇದೇ ರೀತಿಯಲ್ಲಿ ಸರ್ವ ವಿಧದಲ್ಲಿಯೂ ಬೆಂದು ಉಪಶಾಂತಿಗಾಗಿ ತವಕಪಡುತ್ತಿದ್ದ ಭಾರತದ ಆತ್ಮ ನಿರೀಕ್ಷೆಯ ಫಲವಾಗಿ ಶ್ರೀ ಶಂಕರ ಜನ್ಮ ಆಯಿತು ಎನ್ನಬಹುದು. ಅವರ ಕಾಲ ಕ್ರಿಶ. ೭೮೮ ರಿಂದ ೮೨೦ರವರೆಗೆ ಎಂದು ವಿಧ್ವಾಂಸರು ಅಭಿಪ್ರಾಯ ಪಡುತ್ತಾರೆ.

ದೇವರ ಕೃಪೆ :

ತಂದೆ ತಾಯಿ ದೈವಕೃಪೆಯಂದ ಪಡೆದ ಮಗ ಶ್ರೀ ಶಂಕರಾಚಾರ್ಯರು ಎಂದು ಹೇಳುತ್ತಾರೆ.

ಕಾಲಟಿ ಎಂಬುವುದು ಕೇರಳದಲ್ಲಿನ ಒಂದು ಸುಂದರ ಗ್ರಾಮ. ಚೂರ್ಣಾ ನದಿಯ ದಂಡೆಯ  ಮೇಲೆ ಇಂದಿಗೂ ಕಂಗೊಳಿಸುತ್ತಿರುವ ಜನನಿವಾಸ. ಅಲ್ಲಿ ಶಿವಗುರು ಮತ್ತು ಆರ್ಯಾಂಬೆ  ಎಂಬ ದಂಪತಿಗಳಿದ್ದರು. ಸಂಪ್ರದಾಯಸ್ಥ, ನಂಬೂದ್ರೀ ಬ್ರಾಹ್ಮಣ  ಕುಟುಂಬ. ಶ್ರೀಮಂತರಾದರೂ ಸರಳ ಜೀವಿಗಳೂ. ಸತಿಪರಿಯರಿಬ್ಬರೂ ವಿದ್ಯಾಸಂಪನ್ನರು. ಹೆಚ್ಚಾಗಿ ದೈವಭಕ್ತರು. ಆಧರೆ ಅವರಿಗೆ ಎಷ್ಟು ಕಾಲಕ್ಕೂ ಮಕ್ಕಳಾಗಲಿಲ್ಲವೆಂಬ ಚಿಂತೆ. ಎಲ್ಲ ದೇವರಿಗೂ ಹರಕೆ ಹೊತ್ತದ್ದಾಯಿತು. ಕೊನೆಗೆ ಇಷ್ಟ ಮಿತ್ರರ ಸಲಹೆಯಂತೆ ತ್ರೀಚೂರಿನಲ್ಲಿ ವೃಷಾಚಲೇಶ್ವರನ ಸೇವೆಗೆಂದು ದಂಪತಿಗಳು ಹೊರಟರು. ದೇವರ ದಿವ್ಯ ಮಂಗಳ ಮೂರ್ತಿ ಅವರನ್ನು ಆಕರ್ಷಿಸಿತು. ಆತನ ಸೇವೆಯೇ ತಮಗೆ  ಕಂಡ ಮಾರ್ಗ ಎನ್ನುವ ಭಾವದಿಂದ ದಂಪತಿಗಳು ಹಲವು ದಿನಗಳನ್ನು ಕಳೆದರು. ಒಂದು ರಾತ್ರಿ ದಂಪತಿಗಳ ಕನಸಿನಲ್ಲಿ ವೃಷಾಚಲೇಶ್ವರನು ಕಾಣಿಸಿಕೊಂಡ ಅನುಭವ.

ಕನಸಿನಲ್ಲಿ ಭಗವಂತ ಪ್ರಶ್ನಿಸಿದ:” ನಿಮ್ಮ ನಿಷ್ಠೆ ಭಕ್ತಿಗಳಿಗೆ ಮೆಚ್ಚಿದ್ದೇನೆ. ನಿಮ್ಮಾಸೆಯನ್ನು ತೀರಿಸುತ್ತೇನೆ. ಆಧರೆ ಒಂದು ಪ್ರಶ್ನೆ. ಲೋಕ ಗುರುವೆನಿಸುವ ಕೆಲವೇ ವರ್ಷ ಬದುಕುವ ಒಬ್ಬ ಪುತ್ರನು ಸಾಕೋ, ಅಥವಾ ಬಹು ವರ್ಷ ಬದುಕುವ ಆದರೆ ದಡ್ಡರಾದ ಅನೇಕ ಮಕ್ಕಳು ಬೇಕೋ?” ಸುಲಭದಲ್ಲಿ ಸಿಕ್ಕದ ದೇವರು ಸುಲಭದ ಪ್ರಶ್ನೆ ಹಾಕುತ್ತಾನೆಯೇ? ಭಗವಂತನಲ್ಲಿ ಅಪಾರವಾದ ವಿಶ್ವಾಸವುಳ್ಳ  ದಂಪತಿಗಳು ಹುಡುಕಿದ ದಾರಿಯೇಬೇರೆ. ತೀರ್ಪನ್ನು ಆತನಿಗೆ ಬಿಟ್ಟರು ! ಪ್ರಸನ್ನನಾದ ಸ್ವಾಮಿಯೂ “ಶಿವಾಂಶ  ಸಂಭೂತನಾದ ನಿಮ್ಮ ಕುಮಾರ ಲೋಕ ಗುರುನಾಗುತ್ತಾನೆ” ಎಂದು ಹೇಳಿ ಅಂತರ್ದನಾದ ಅನುಭವ. ಬಹು ಸಂತೋಷಪಟ್ಟು ಶಿವಗುರು ಅರ್ಯಾಂಬೆಯರು ಮತ್ತೇ ಹಲವು ದಿನಗಳು ಅಲ್ಲಿಯೇ ಇದ್ದು, ಇಶ್ವರನ ಸೇವೆ ಮಾಡಿ ತಮ್ಮ ಊರಿಗೆ  ಹಿಂತಿರುಗಿದರು.

ಈಶ್ವರನ ಪೂರ್ಣಾನುಗ್ರಹದಿಂದ ಆರ್ಯಾಂಬೆಯ ಗರ್ಭದಲ್ಲಿ ಜನಿಸಿದ ಶಿಶುವಿಗೆ “ಶಂಕರ”ನೆಮದೇ ನಾಮಕರಣ ಮಾಡಿದರು. ಈ ಶುಭದಿನವನ್ನು ಸೌರಮಾನದ ರಿತಿಯಲ್ಲಿ ಗುಣಿಸಿ ವೈಶಾಖ ಶುಕ್ಲ ಪಂಚಮಿ” ಎಂದು ಪರಿಗಣಿಸಿದ್ದಾರೆ. ಪ್ರತಿ ವರ್ಷ ದಿನ ಭಕ್ತರು “ಶಂಕರ ಜಯಂತಿ”ಯನ್ನು ಆಚರಿಸುತ್ತಾರೆ.

ದೈವಾಂಶ ಸಂಭೂತರಾದ ಶಂಕರರು ಬಾಲ್ಯದಿಂದಲೇ ಎಲ್ಲ ರೀತಿಯಲ್ಲಿ ಅಸಮಾನರಾಗಿಯೇ ಬೆಳೆಯುತ್ತಿದ್ದರು.  ಎಂಟರ ವಯಸ್ಸಿನಲ್ಲಿ ನಾಲ್ಕು ವೇದಗಳನ್ನುಅರಿತರಂತೆ. ಹನ್ನೆರಡರ ವೇಳೆಗೆ ಎಲ್ಲಾ ಶಾಸ್ತ್ರಗಳೂ ಅವರಿಗೆ ಮನದಟ್ಟಾಗಿತ್ತು. ಹದಿನಾರರ ವೇಳೆಗೆ ತಮ್ಮ ಪ್ರಧಾನ ಕೃತಿಗಳೆನಿಸಿರುವ ವೇದಾಂತ ಬಾಷ್ಯಗಳನ್ನು ಬರೆದಿದ್ದನಂತೆ.  ಅವರ ಬುದಿಧಿ ಶಕ್ತಿ ಎಷ್ಟು ತೀಕ್ಷಣವಾಗಿತ್ತೋ ಅಷ್ಟೆ ಅವರ ಹೃದಯವೂ ವಿಶಾಲವಾಗಿತ್ತು. ಚಿಕ್ಕಂದಿನಲ್ಲಿಯೇ  ಶಂಕರರು ಪ್ರಾಕೃತ, ಮಾಗಧಿ ಮತ್ತು ಸಂಸ್ಕೃತ ಭಾಷೆಗಳಲ್ಲಿ ಪಾರಂಗತರಾಗಿದ್ದರು.  ಶಂಕರರು ತಮ್ಮ ಮೊದಲ ವರ್ಷದಲ್ಲಿ ಮಾತೃಭಾಷೆಯಾದ ಮಲೆಯಾಳ ಮತ್ತು ವೇದ ಭಾಷ್ಯಯಾದ ಸಂಸ್ಕೃತ ಎರಡನ್ನೂ ಕಲಿತರು. ಎರಡನೇ ವರ್ಷದಲ್ಲಿ ಈ ಭಾಷೆಗಳಲ್ಲಿ ಓದಿ ಬರೆಯಲು ಪ್ರಾರಂಭಿಸಿದರು.  ಮೂರನೆಯವರ್ಷದಲ್ಲಿ ಕಾವ್ಯಗಳನ್ನೂ ಪುರಾಣಗಳನ್ನೂ ಓದಿ ಅವುಗಳ ಅರ್ಥವನ್ನು ಹೇಳುತ್ತಿದ್ದು. ಹೀಗೇ ಕೆಲವು ಗ್ರಂಥಗಳಲ್ಲಿ ಹೇಳಿದೆ. ಇದರಲ್ಲಿ ಸಾಮಾನ್ಯ ದೃಷ್ಟಿಯಿಂದ ನೋಡಿದರೆ ಉತ್ಪ್ರೇಕ್ಷೆ ಬಹಳವಿದೆ ಎನಿಸಬಹುದು. ಆದರೆ ಬಾಲ್ಯದಲ್ಲಿಯೇ ದೈವದತ್ತವಾದ ಇಂತಹ ಪ್ರತಿಭೆಯನ್ನು ವ್ಯಕ್ತಪಡಿಸಿದವರ ನಿದರ್ಶನಗಳು ನಮಗೆ ಸಿಕ್ಕುತ್ತವೆ.

ಗುರುಕುಲದಲ್ಲಿ :

ಶಂಕರರಿಗೆ ಐದು ವರ್ಷಕ್ಕೆ ಉಪನಯನವಾಯಿತು. ಆ ಹೊತ್ತಿಗೆ ತಂದೆ ಶಿವಗುರು ಕಾಲವಶರಾಗಿದ್ದರು. ತಾಯಿಯೇ ಬಾಲವಟುವಿನ ಬೆಳವನಿಗೆಯ ಜವಾಬ್ದಾರಿಯನ್ನು ವಹಿಸಬೇಕಾಯಿತು. ಗ್ರಾಮದ ಸಮೀಪದಲ್ಲಿಯೇ ಚೂರ್ಣಾ ನದಿಯ ದಡದಲ್ಲಿಯೇ ಇದ್ದ ಗುರುಕುಲವಾಸಕ್ಕೆ ಶಂಕರರು ಅಧ್ಯಯನ ಮಾಡಿದರು. ಇವರ ವರ್ಚಸ್ಸು ಗುರುಕುಲಕ್ಕೆ ಒಂದು ಶೋಭೆಯನ್ನು ದೊರಕಿಸಿಕೊಟ್ಟಿತು. ಶಂಕರರ ಗುರುಕುಲವಾಸದ ಸಮಯದಲ್ಲಿ ನಡೆದ ಘಟನೆಯೊಂದರಿಂದ ದೀನರ ವಿಚಾರದಲ್ಲಿ ಇವರಿದ್ದ ಕರುಣೆ ಗೊತ್ತಾಗುತ್ತದೆ.

ಗುರುಕುಲವಾಸಿಯಾದ ಶಿಷ್ಯರು ಭಿಕ್ಷಾನ್ನದಿಂದ ಜೀವಿಸಬೇಕೇಂದು ನಿಯಮ. ಇದಕ್ಕೆ ಅನುಸಾರವಾಗಿ ಬಾಲ ಬ್ರಹ್ಮಚಾರಿ ಶಂಕರರು “ಭವತಿ ಭಿಕ್ಷಾಂದೇಹಿ” ಎಂದರು. ಒಮ್ಮೆ ಕೂಗಿದರು.  ಎರಡು ಬಾರಿ ಕೂಗಿದರು. ಉತ್ತರವಿಲ್ಲ. ಹಲವು ಸಲ ಕೂಗಿದರು.  ಒಬ್ಬ ಹೆಂಗಸು ಹೊರಕ್ಕೆ ಬಂದು ನಿಂತರು. ಅವರ ಮುಖ ಬಾಡಿತ್ತು. ಹುಡುಗನಿಗೆ ನೀಡಲುಅವರ ಮನೆಯಲ್ಲಿ ಏನೂ ಇರಲಿಲ್ಲ. ಆದುದರಿಂದ ದೇನ್ಯಭಾವ ಕಣ್ಣಿನಲ್ಲಿ ನೀರು.

ಶಂಕರರಿಗೆ ವಿಷಯ ಅರ್ಥವಾಯಿತು. “ತಾಯಿ, ತಾವು ಏನನ್ನು ನೀಡಿದರೂ ಅದು ನನಗೆ ತೃಪ್ತಿ. ಅದರಿಂದ ತಮ್ಮ ಮನೆ ಅಕ್ಷಯವಾಗಲಿ” ಎಂದರು.

ಆದರೆ ಮನೆಯಲ್ಲಿ ಏನೂ ಇಲ್ಲದೆ ಕೊಡುವುದಾದರೂ ಹೇಗೆ, ಯಾವುದನ್ನು ? ಕೊನೆಗೆ ಆಕೆಗೆ ಹೊಳೆಯಿತು. ಹಿತ್ತಲಿನ ಗಿಡದಲ್ಲಿ ನೆಲ್ಲಿಕಾಯಿ ಬಿಟ್ಟಿತ್ತು ! ಆಕೆ ಅದನ್ನೇ ತಂದು ಶಂಕರರಿಗೆ ಅರ್ಪಿಸಿದರು.  ದೀನ ಸಾಧ್ವೀಮಣಿಯ ಮೇಲೆ ಕರುಣೆ ತೋರುವಂತೆ ಶಂಕರರು ಶ್ರೀದೇವಿಯನ್ನೇ ಪ್ರಾರ್ಥಿಸಿದರಂತೆ. ಬಂಗಾರದ ನೆಲ್ಲಿಕಾಯಿಗಳ ಸುರಿಮಳೆಯೇ ಆ ಮನೆಯಲ್ಲಿ ಆಯಿತು ಎಂದು ಗ್ರಂಥಗಳು ಹೇಳುತ್ತವೆ. ಎಂದರೆ, ಶಂಖರರ ಪ್ರಾರ್ಥನೆಯ ಫಲವಾಗಿ ಕಾಲಕ್ರಮದಲ್ಲಿ ಆ ಮನೆ ಶ್ರೀಮಂತವಾಯಿತು ಎಂದು ನಾವು ಭಾವಿಸಬಹುದು.

ಶಂಕರರ ಗುರುಕುಲವಾಸ ಎಂಟು ವರ್ಷಗಳ ಕಾಲ ನಡೆಯಿತು. ಆ ವೇಳೆಗೆ  ಅವರು ಎಲ್ಲಾ ಶಾಸ್ತ್ರಗನ್ನೂ ಅಂಗೈಯಲ್ಲಿಟ್ಟುಕೊಂಡಂತೆ ತಿಳಿದುಕೊಂಡರು. ಎಲ್ಲದಕ್ಕಿಂತ ಹೆಚ್ಚಾಗಿ ಆಧ್ಯಾತ್ಮ ಶಾಸ್ತ್ರದ ಅತಿ ಉನ್ನತ ಘಟ್ಟವೆನಿಸಿರುವ ವೇದಾಂತ ದಲ್ಲಿ ಹೆಚ್ಚಿನ ಒಲವನ್ನು ಪಡೆದಿದ್ದರು.  ಇದು ಎಲ್ಲ ಜ್ಞಾನಗಳ ಪರಿಸಮಾಪ್ತಿ.  “ಯಾವುದನ್ನು ಅರಿಯುವುದರಿಂ ಎಲ್ಲವನ್ನು ತಿಳಿದಂತಾಗುತ್ತದೋ” ಅದೇ ವೇದಾಂತದ ಗುರಿ ಎಂದು ತಿಳೀದವರು ಹೇಳುತ್ತಾರೆ.  ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಶಂಕರರಿಗೆ ಈ ಗುರಿಯ ಅಕರ್ಷಣೆ ಬಹಳವಾಗಿತ್ತು. ಇದು ಅವರ ವ್ಯಕ್ತಿತ್ವದ ಹಿರಿಮೆಯನ್ನು ತೋರಿಸುತ್ತದೆ.

ತಾಯಿಗಾಗಿ :

ಮಹಾತ್ಮರ ಎಲ್ಲ ಹಂತಗಳಲ್ಲೂ ಅವರ ದಿವ್ಯಚೇತನ್ಯ ಪ್ರಕಟಗೊಳ್ಳೂವ ನಿದರ್ಶನಗಳು ಬಹಳ ಸಿಕ್ಕುತ್ತವೆ.  ಶಂಕರರ ವಿಚಾರದಲ್ಲಿಯೂ ಸಹ ಹೀಗೆಯೇ. ಗುರು ಕುಲವಾಸದ ಅನಂತರ ಶಂಕರರು ಮುದುಕಿಯಾಗಿದ್ದ ತಮ್ಮತಾಯಿಯನ್ನು  ಸೇವಿಸುತ್ತಾ  ಮನೆಯಲ್ಲಿಯೇ ಇತರರಿಗ ಪಾಠಪ್ರವಚನಗಳನ್ನು ನಡೆಸುತ್ತಿದ್ದ ಕಾಲ. ಆರ್ಯಾಂಬೆ ಅಸ್ವಸ್ಥಳಾಗಿದ್ದಳು.. ಆದರೂ ದಿನಂಪ್ರತಿ ಚೂರ್ಣಾ ನದಿಯ ಸ್ನಾನ ಆಗಲೇಬೇಕು .ಮನೆಯ ಮುಂದೆ ನದಿಯಿದ್ದರೂ ಬೇಸಿಗೆಯಿಂದ ಬತ್ತಿ ಹೋಗಿ ಕೃಶವಾಗಿ ಹರಿಯುತ್ತಿದ್ದ ಕಾಲ. ವಿಸ್ತಾರವಾಗಿ ಹರಡಿದ್ದ ಮರಳು ರಾಶಿಯನ್ನು ದಾಟಿಕೊಂಡು ಸ್ನಾನ ಮಾಡಲು ಆರ್ಯಾಂಬೆ ಹೊರಟಿದ್ದಳು. ಹೇಗೋ ಸ್ನಾನ ಆಗಿತ್ತು. ಆದರೆ ಮನೆಗೆ ಹಿಂದಿರುಗುವಾಗ  ಬಲಹೀನಳಾದ ಆಕೆ ಬಿಸಿಲಿನ ತಾಪಕ್ಕೆ ಬಳಲಿದಾರಿಯಲ್ಲಿ ಬಿದ್ದು ಬಿಟ್ಟಳು. ಜ್ಞಾನ ತಪ್ಪಿತು.  ವರ್ತಮಾನ ತಿಳಿದ ಶಂಕರರು ತಾಯಿಯನ್ನು ಉಪಚರಿಸಿ ಮನೆಗೆ ಕರೆ ತಂದರು. ಆದರೆ ಬೇಸಿಗೆ ಎಷ್ಟಿದ್ದರೇನು? ಸೊರಗಿದ ನದಿ ಕಟ್ಟಳೆಯನ್ನು ತಪ್ಪಿಸದ ತಾಯಿ ಮಾರನೆಯ ದಿನ ನದಿ  ಸ್ನಾನಕ್ಕೆ ಹೋಗದೆಯೇ ಇರುತ್ತಾರೆಯೇ? ಇದು ಶಂಕರರನ್ನು ಕಾಡಿದ ವಿಚಾರ. ಶಂಕರರು ಚೂರ್ಣಾದೇವಿಗೆ ನಮಸ್ಕರಸಿದರು.  ತಾಯಿಯ ಸೇವೆಯನ್ನು ಕೈಗೊಳ್ಳಲು ಆಕೆಗೆ ಅನುಕೂಲ ಮಾಡಿಕೊಡುವಂತೆ ಚೂರ್ಣೆ ತುಂಬಿ ತನ್ನ  ಪಾತ್ರವನ್ನು ವಿಸ್ತರಿಸಿಕೊಂಡು ಮನೆಯ ಹತ್ತಿರವೇ ಹರಿಯಲಿ ಎಂದು ಪ್ರಾರ್ಥಿಸಿಕೊಂಡರು.  ಅವರ ಪ್ರಾರ್ಥನೆ ಮತ್ತು  ಋತುಧರ್ಮಗಳ ಸಂಯೋಗವೋ ಎಂಬಂತೆ ರಾತ್ರಿ ಇಡೀ ಎಡೆಬಿಡದೆ ಮಳೆ. ಮರುದಿನ ಪ್ರಾತಃ ಕಾಲದ ವೇಳೆಗೆ ಪಾತ್ರವನ್ನು ವಿಸ್ತರಿಸಿಕೊಂಡು ಚೂರ್ಣಾ ನದಿ ಲಲಿತ ಗಾಂಭಿರ್ಯದಿಂದ ತುಂಬಿ ಹರಿಯುತ್ತಿದ್ದಳು. ದೂರದ ನದಿಯನ್ನೇ ಹತ್‌ಇರ ತಂದರೋ ಎನ್ನುವಂತಹ “ಪವಾಡ” ಇದು. ಪ್ರಕೃತಿಯಲ್ಲಿ ಅಡಗಿರುವ ಜಡಶಕ್ತಿಯನ್ನು ಸಚೇತನಗೊಳಿಸುವಂತ ಶಕ್ತಿ ಅಧ್ಯಾತ್ಮಕ್ಕೆ ಇಲ್ಲವೇ ಎಂದು ಯೋಚಿಸಬೇಕು.  ಅಸ್ವಸ್ಥರಾಗಿದ್ದ ಆರ್ಯಾಂಬೆಯೊಡನೆ ಕಾಲಟಿ ಗ್ರಾಮಸ್ಥರೆಲ್ಲರೂ ಶಂಕರನನ್ನು ಹರಸುವವರೇ?

ತಾಯಿಯ ಹಂಬಲ, ಚಿಂತೆ :

ವೇದಾಧ್ಯಯನ, ವೇದಾಂತ ಚಿಂತೆ, ಇತರರಿಗೆ ಹೇಳಿ ಕೊಡುವುದು ಇವು ಕೇವಲ ಎಂಟು ವರ್ಷಗಳ ಬಾಲಕನ ದಿನಚರಿ ಎಂದರೆ ಯಾರಿಗೆ ತಾನೇ ಆಶ್ಚರ್ಯವಾಗದು ? ಇದರ ಜೊತೆಗೆ ವೃದ್ಧ ತಾಯಿಯ ಶುಶ್ರೂಷೆ.

ಹೀಗಿರಲು ಒಂದು ದಿನ ಜ್ಞಾನವೃದ್ಧರೂ ವಯೋವೃದ್ಧರೂ ಆಗಿದ್ದ ಇಬ್ಬರು ಬ್ರಾಹ್ಮಣರು ಅವರ ಮನೆಗೆ ಬಂದರು. ಆರ್ಯಾಂಬೆಯೂ,ಶಂಖರರೂ ಅವನ್ನು ಬರಮಾಡಿಕೊಂಡು ಸತ್ಕರಿಸಿದರು. ಅತಿಥಿಗಳಿಗೆ ಮನೆಯ ವಾತಾವರಣ  ಅಸಾಧಾರಣಾಗಿ ಕಂಡುಬಂದಿತು.ಶಂಕರರ ದೈವಿಕ ಗುಣಗಳು, ಪ್ರತಿಭೆ, ವಿನಯ ಸಂಪನ್ನತೆ ಇವುಗಳಿಂದ ಅತಿಥಿಗಳು ಮೋಹಿತರಾದರು. ಲೊಕಕಲ್ಯಾಣವನ್ನು ಸಾಧಿಸಲೆಂದೇ  ಈ ಚಿಕ್ಕ ವಯಸ್ಸಿನಲ್ಲಿಯೇ ಇಷ್ಟು ಸಾಧನೆ ಮಹಿಮೆಗಳನ್ನೂ ಭಗವಂತ ಈತನಲ್ಲಿ ತುಂಬಿದ್ದಾನೆ ಎಂದು ಭಾವಿಸಿದರು. ಹೊರಡುವಾಗ ಆ ವೃದ್ಧರು ಶಂಕರರ ತಾಯಿಗೆ ಹೇಳಿದರು: “ನಿಮ್ಮ ಕುಮಾರ ದೀರ್ಘಾಯುವಾಗಲಿ. ಲೋಕಕ್ಕೆ  ಕಲ್ಯಾಣವಾಗುವಂತಹ ರೀತಿಯಲ್ಲಿ ಆತನು ವೈದಿಕ ಸಂಪ್ರದಾಯವನ್ನು ಸಂಕಷ್ಟಕ್ಕೆ ಸಿಕ್ಕಿರುವ ಈ ಭಾರತದಲ್ಲಿ ಸುಪ್ತಿಷ್ಠವಾಗಿ ನೆಲೆಸುವಂತೆ ಮಾಡುವ ಧುರಿಣನಾಗಲಿ.”

ತಾಯಿಯ ಕರಳೂ ಅದನ್ನೇ ಬಯಸುತ್ತಿದ್ದುದು. ಅವರ ಅಶಿರ್ವಾದ ಫಲಿಸಲಿ.  ಕುಮಾರನು ದೀರ್ಘಾಯುವಾಗಲಿ ಎಂದು ಈಶ್ವರನನ್ನು ಬೇಡಿದಳು.   ಆದರೆ ಸಾಕ್ಷಾತ ಈಶ್ವರನೇ ಕನಸಿನ್ಲಿ ಕಾಣಿಸಿಕೊಂಡು, “ನಿನ್ನ ಮಗ ಅಲ್ಪಾಯುಷಿಯಾದರೂ ಲೋಕ ಗುರುವಾಗುತ್ತಾನೆ” ಎಂದಿದ್ದನಲ್ಲ? ಹಾಗಾದರೆ ಈ ವೃದ್ಧರ ಅಶಿರ್ವಾದದ ಅರ್ಥವೇನು ?ಅರ್ಯಾಂಬೆಗೆ ಅರ್ಥವಾಗಲಿಲ್ಲ. ಈಶ್ವರಚ್ಛೆಯಂತೆ ನಡೆಯಲಿಎಂದು ತನ್ನಷ್ಟಕ್ಕೆ ತಾನೇ ಸಂತೈಸಿಕೊಂಡಳು.

ತಾಯಿಯ ತಳಮಳ ಕುಮಾರನಿಗೆ ಅರ್ಥವಾಯಿತೆಂದು ತೋರುತ್ತದೆ. “ಅಮ್ಮಾ ಲೋಕದಲ್ಲಿ ಪ್ರತಿ ದಿನವೂ ಆಗುವ ಘಟನೆಗಳನ್ನು ಕಂಡರೆ ಜೀವನ ಎಷ್ಟು ಕ್ಷಣಿಕವೆಂದು ವ್ಯಕ್ತವಾಗುವುದಿಲ್ಲವೇ? ಇದ್ದ ಸಮಯವನ್ನು ಸಂಪೂರ್ಣವಾಗಿ ಭಗವಂತನ ಸೇವೆಗೆ ನಾವು ಉಪಯೋಗಿಸಿದರೆ ಅದೇ ಪರಮ ಭಾಗ್ಯವಲ್ಲವೇ?” ಎಂದು ಸಂತೈಸಿದರು.

ಸನ್ಯಾಸಿ ಶಂಕರರು :

ಶಂಕರರ ಜೀವನವನ್ನು ಕಣ್ಣಿಗೆ ಕಾಣದ  ಕೈ ರೂಪಿಸುತ್ತಿತ್ತು ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ಅದರ ಕೈವಾಡವೋ ಎಂಬಂತೆ ಒಂದು ದಿನ ಒಂದು ಘಟನೆ ನಡೆಯಿತು.

ಚೂರ್ಣಾ ನದಿಯಲ್ಲಿ ಶಂಕರರು ಸ್ನಾನ ಮಾಡುತ್ತಿದ್ದಾರೆ. ಮೊಸಳೆಯೊಂದು ಅವರ ಕಾಲನ್ನು ಹಿಡಿದು ನದಿಯೊಳಕ್ಕೆ ಅವರನ್ನು ಎಳೆದೊಯ್ಯಲು ಪ್ರಾರಂಭಿಸಿತು. ನೀರಿನಲ್ಲಿರುವ ಮೊಸಳೆಯೊಡನೆ ಎಂತಹ ಶಕ್ತಿಯಿದ್ದವನೂ ಹೋರಾಡಿ ಗೆಲ್ಲಲಾರ. ಇನ್ನೂ ಬಾಲಕ ಶಂಕರರ ಪಾಡೇನು? ತಮ್ಮಬಾಳಿನ ಕಥೆ ಮುಗಿಯುತೆಂದೇ ಅವರು ಎಣಿಸಿದರು.ತಾಯಿಯನ್ನು ಕೂಗಿ ಕರೆದರು, ಧಾವಿಸಿ  ಬಂದ  ತಾಯಿಗೆ ಹೇಳೀದರು:” ಸಾವು ನನಗೆ ಸಮೀಪಿಸಿದೆ, ಮೊಸಳೆ ಹಿಡಿದಿದೆ. ಇದರಿಂದ ಬಿಡಿಸಿಕೊಳ್ಳಲು  ನನಗೆ ಸಾಧ್ಯವಾಗುತ್ತಿಲ್ಲ.  ಕಾಣುತ್ತಿರುವ ದಾರಿಯೊಂದೇ.ಮೃತುಯವಿನ ಮೊದಲು ಸನ್ಯಾಸ ಸ್ವೀಕಾರ. ನನಗೆ “ಆತುರ ಸನ್ಯಾಸ” ತೆಗೆದುಕೊಳ್ಳಲು ಅಪ್ಪಣೆ ಕೊಡು”. (ತತ್ವತಃ ಸನ್ಯಾಸ ಸ್ವೀಕರಿಸುವುದೆಂದರೆ ಒಂದು ಜನ್ಮ ಹೋಗಿ ಮತ್ತೊಂದು ಬಂದಂತೆಯೇ . ಸನ್ಯಾಸ ಸಂಕಲ್ಪದಿಂದ ಮೊಸಳೆಯಿಂದ ತನಗೊದಗಿರುವ ಮೃತ್ಯುವು ಕಳೆದಂತೆಯೇ ಆಗುತ್ತದೆ. ಎರಡೂರೀತಿಯಲ್ಲಿ ಸದ್ಗತಿಯೇ.ಬದುಕಿದರೆ ಹೊಸ ಜನ್ಮ. ಸಾವನ್ನು ಅಪ್ಪಿದರೂ ದೇಹಾಂತರದ ಹೊಸ ಜನ್ಮ).

ಅಮ್ಮಾ ನನಗೆ ಆತುರ ಸನ್ಯಾಸ ತೆಗೆದುಕೊಳ್ಳಲು ಅಪ್ಪಣೆ ಕೊಡು

ದೀನನಾಗಿ ಕೇಳುತ್ತಿರುವ ಮಗನ ಅವಸ್ಥೆ ತಾಯಿಯ ಕರುಳನ್ನು ಕಿವುಚಿತು. ಏನು ಮಾಡಲು ತೋರಲಿಲ್ಲ ತಾಯಿಗೆ. ತನ್ನಮಗ ಸನ್ಯಾಸಿಯಾಗಿದರೂ ಉಳಿದುಕೊಂಡು ತನ್ನ ಕಣ್ಣೆದುರಿಗೆ ಇರಲಿ ಎನ್ನುವ ಹಂಬಲ. ಈಶ್ವರನಲ್ಲಿ ದೃಢ ವಿಶ್ವಾಶವಿಟ್ಟು, “ಮಗೂ, ಈಶ್ವರೇಚ್ಛೆಯಂತೆಯೇ ಆಗಲಿ” ಎಂದು ಅಪ್ಪಣೆ ಕೊಟ್ಟರು.

ಈಶ್ವರೇಚ್ಛೆ ಅವರನ್ನು ಲೌಕಿಕ ಸಂಸಾರದಿಂದ ಬಿಡುಡಗೆ ಮಾಡುವುದೇಇದ್ದಿರಬೆಕು. ಮೊಸಳೆ ಶಂಕರನನ್ನು ಬಿಟ್ಟು ಪ್ರವಾಹದೊಡನೆ ಹರಿದು ಹೋಯಿತು ! ಸಂಸಾರದ ಕುತ್ತಿನಿಂದ ಶಂಕರರು ಪಾರಾದರು ! ಸಂಕಲ್ಪ ಮಾತ್ರದಿಂದ ಸನ್ಯಾಸಿಗಳಾದರು. ನವಜನ್ಮ ತಾಳಿದರು.

ಮಗ ಸನ್ಯಾಸಿಯಾದ ಎಂದು ತಾಯಿಗೆ ದುಃಖವೇ. ಘಟನೆ ನಡೆದ ಹಲವೇ ದಿನಗಳಲ್ಲಿ ಬಾಲಸನ್ಯಾಸಿ  ತಮ್ಮ ಜಿವಿತದ ಉದ್ದೇಶವನ್ನು ತಾಯಿಯ ಮುಂದೆ ಇಟ್ಟರು.

“ಕಾಲಟಿಯಿಂದ ಹೊರಡಲು ಅಪ್ಪಣೆ ಬೇಡಿದರು.

ತಾಯಿಗೆ ಒಬ್ಬನೆ ಮಗ, ಅವನೂ ದೇವರ ವರ. ಈಶ್ವರನ  ಮತ್ತು ಲೋಕ ಸೇವೆಗಾಗಿ ಹುಟ್ಟಿದವನು ಎಂದು ಮನಗಂಡ ಆ ಮಾತೆ ಮಗನ ಬೇಡಿಕೆಯನ್ನು ಅರ್ಥಮಾಡಿಕೊಂಡಳು. “ಕೀರ್ತಿ ಶಾಲಿಯಾಗು” ಎಂದು ಹರಸಿದಳು.

“ನನ್ನ ತಾಯಿಯ ಯೋಗಕ್ಷೇಮವನ್ನು ನೋಡಿಕೊಳ್ಳಿ” ಎಂದು ಶಂಖರರು ತಮ್ಮ ಹಿರಿಯರಿಗೆ , ಇಷ್ಟ ಮಿತ್ರರಿಗೆ ಹೇಳಿ ಹೊರಡಲು ಸಿದ್ಧರಾದರು. ತಾಯಿಗೆ ದುಃಖವನ್ನು ತಡೆಯಲಾಗಲಿಲ್ಲ. “ಶಂಕರಾ, ನಾನು ಸಾಯುವುದಕ್ಕೆ ಮುನ್ನ ನಿನ್ನನ್ನು ಒಮ್ಮೆಯಾದರು ನೋಡುತ್ತೇನೆಯೇ?” ಎಂದು ಕೇಳಿದಳು. ಮಾತೆಯ ಹೃದಯವನ್ನರಿತ ಶಂಕರರು ಭರವಸೆ ನೀಡಿದರು.” ತಾಯಿ, ನಿನ್ನ ಅವಸಾನ ಕಾಲದಲ್ಲಿ ನನ್ನನ್ನು ಸ್ಮರಿಸಿಕೊಳ. ನಾನುಎಲ್ಲಿದ್ರೂ ನಿನ್ನೆಡೆಗೆ ಬರುತ್ತೇನೆ. ನಿನ್ನ ಅಂತ್ಯ ಸೇವೆಯ ಭಾಗ್ಯ  ನನಗೆ ಸಿಕ್ಕಲಿ ಎಂದು ಭಗವಂತಲ್ಲಿ ಪ್ರಾರ್ಥಿಸುತ್ತಿದ್ದೇನೆ. ” ಇದು ಭಗವಂತ ಅಪಾರ ಶಕ್ತಿಯಲ್ಲಿ ದೃಢ ವಿಶ್ವಸವಟ್ಟವನ ಉತ್ತರ. ತನ್ನ ಮಾತೆಯ ಚಿಂತೆ ಭಗವಂತನ ಕಡೆಗೆ ತಿರುಗಲಿ ಎಂದು ಯೋಚಿಸಿದ.  ಶಂಕರರು ತಮ್ಮ ಮನೆಯಲ್ಲಿ ಶ್ರೀ ಕೃಷ್ಣನ ವಿಗ್ರಹವನ್ನು ಸ್ಥಾಪಿಸಿದರು.  ಆತನ ಕೃಪಕಟಾಕ್ಷಕ್ಕೆ ತನ್ನ ತಾಯಿಯ ಯೊಗಕ್ಷೇಮವನ್ನು ಬಿಟ್ಟು ಶಂಕರರು ಕಾಲಟ್ಟಿಯಿಂದ ಹೊರಟರು.

ಅದ್ವಿತೀಯ ಶಿಷ್ಯನಿಗೆ ಅದ್ವಿತಿಯ ಗುರು:

ಈಗ ಶಂಕರರ ಗುರುವಿನ ಅನ್ವೇಷಣೆ, ಬ್ರಹ್ಮ ಸಾಕ್ಷಾತರವನ್ನು ಪಡೆದುಕೊಂಡ ಗುರುವೇ ತನಗಾಗಿ ಬೇಕು ಎನ್ನುವ ಉತ್ಕಟ ಆಕಾಂಕ್ಷೆ.  ಇದು ಶಿಷ್ಯನ ನೀರಿಕ್ಷೆಯಾದರೆ, ಅದು ಗುರುವಿನ ಮಹಾಭಾಗ್ಯವೇ ಅಲ್ಲವೇ? ಉತ್ತರಾಭಿಮುಖವಾಗಿ ಹೊರಟ ಶಂಕರರು ಅನೇಕ ತಪೋಧಾಮಗಳನ್ನು ದಾಟಿ ನರ್ಮದಾ ತೀರವನ್ನು  ಸೇರಿದರು. ಅಲ್ಲಿ ಒಂದು ಮಹಾಯೋಗಿಯ ನಿವಾಸ. ಇವರೇ ಗೋವಿಂದ ಭಗವತ್ಪಾದರು. ಸಮಾಧಿಸ್ಥರಾಗಿದ್ದ ಗೋವಿಂದ ಭಗವತ್ಪಾದರನ್ನು ಕಂಡ ಶಂಕರರ ಮನಸ್ಸು ತಣಿಯಿತು.  ಅವರ ನಿರೀಕ್ಷೆ ಫಲಿಸಿದಂತಾಯಿತು.  ಎಚ್ಚೆತ್ತ ಗೋವಿಂದರು ನೋಡಿದ್ದೇನು?ಅಂಜಲಿ ಬುದ್ಧತೇಜ ಪೂರ್ಣ ಬಾಲಸನ್ಯಾಸಿ. ಅಂತರಂಗದ ಸಾಧನೆ ಮುಖದಲ್ಲಿ ಎದ್ದು ಕಾಣುತ್ತಿತ್ತು. ಗುರುವಿಗೆ ಪ್ರಣಾಮ ಮಾಢಿದ ಶಂಖರರು ತಮ್ಮ  ಪರಿಚಯ ಮಾಡಿಕೊಟ್ಟರು. ತಮ್ಮನ್ನು ಶಿಷ್ಯನನ್ನಾಗಿ  ಪರಿಗ್ರಹಿಸಬೇಕೆಂದು ಪ್ರಾರ್ಥಿಸಿಕೊಂಡರು. ತಾವು ಯಾರಿಗಾಗಿ ಕಾಯುತ್ತಿದ್ದರೋ ಅಂತ ಯೋಗ್ಯ ಶಿಷ್ಯನೇ ದೊರಕಿದನೆಂದು ಗೋವಿಂದ ಯೋಗಿಗಳು ಪ್ರಥಮ ಪರಿಚಯದಲ್ಲಿಯೇ ಸಂಗೊಷಪಟ್ಟರು. ವೇದಾಂತದ ಗೂಢ ರಹಸ್ಯಗಳನ್ನು ಶಿಷ್ಯನಿಗೆ ಉಪದೇಶ ಮಾಡಿಕೊಡುವುದಿರಲಿ-ಸಾಕ್ಷಾತ ವೇದಾಂತ ತತ್ವವನ್ನೇ ಜೀರ್ಣಿಸಿಕೊಂಡು ಆ ತತ್ವದ ಸಾಕಾರ ಮೂರ್ತಿಯೋ ಎಂಬಂತ್ತಿದ್ದ ಶಿಷ್ಯನನ್ನು ಕಂಡರೆ ಗುರುವಿಗೆ ಸಂತೋಷವಲ್ಲವೇ? ಗುರುಗಳಿಂದ ಕ್ರಮವಾಗಿ ಸನ್ಯಾಸ ಪಡೆದು ಭಕ್ತಿಯಿಂದ ಅಧ್ಯಯನ ನಡೆಸಿದರು.ಶಂಕರಾಚಾಯೃರು.

ಅದ್ವೈತ ತತ್ವವನ್ನು ತಿಳೀದುಕೊಳ್ಳುವುದರಲ್ಲಿ ಅದ್ಭುತವಾಗಿ ಯಶಸ್ವಿಗಳಾಗಿದ್ದ ಬಾಲ ಶಂಕರನಿಗೆ “ಅಧ್ಯಾತ್ಮ ಯೋಗ” ಅಗತ್ಯವಾಗಿ ಬೇಕಾಗಿದ್ದ ಅಂಶ. ಬಯಸಿದಾಗ ಜಗತ್ತನ್ನು ತಮ್ಮನ್ನು ಮರೆತು, ಮಾತಿನಲ್ಲಿ ವರ್ಣಿಸಲಾಗದ  ಶಾಂತಿಯ ಸ್ಥಿತಿಗೆ ಏರುವ ಶಕ್ತಿ ಇದ್ದ ಗುರುಗಳು. ಅದನ್ನು ಪಡೆಯುವ ಯೋಗ್ಯತೆ ಇದ್ದ ಶಿಷ್ಯ. ಶಂಕರರು ಮುಂದೆ ಮಾಡಬೇಕಾಗಿದ್ದ ಕೆಲಸ ಸುಲಭವಾಗಿ ಅಗುವಂತೆ ಶಕ್ತಿ ಸಂಗ್ರಹಕ್ಕೆ ಇದು ಪೂರ್ವ ಪೀಟಿಕೆ. ಸತ್ಯವನ್ನು ಅರ್ಥ ಮಾಡಿಕೊಳ್ಳುವುದು ಬೇರೆ.  ಅದರ ಅನುವ ಬೇರೆ. ಶಂಕರನನ್ನು ಗೋವಿಂದ ಭಗವತ್ಪಾದರೂ ಈ ವಿಸ್ತಾರವಾದ ಅನುಭವದ ನೆಲೆಯಲ್ಲಿ ನಿಲ್ಲಿಸಿದರು.  ತಿಳಿದವರು ಇದನ್ನು”ಭೂಮ”ದ ಅನುಭವ ಎನ್ನುತ್ತಾರೆ. “ಆನಂದ”ದ ಅನುಭವ ಎನ್ನುತ್ತಾರೆ.  ಶಂಕರರ ಚೇತನ ಈ ಅನುಭವದಿಂದ ಪರಿಪುಷ್ಪವಾಯಿತು. ಈ ದರ್ಶನದಿಂದ ಶಂಕರರಿಗೆ ಪ್ರಪಂಚ ಬ್ರಹ್ಮ ಮಯವಾಗಿ ಕಂಡಿತು. ಇದರ ಅನಂತರ ತಾವು ಕಂಡು ಅನುಭವಿಸಿದ ಅನಂದವನ್ನು ವೇದಾಂತದ ಮೂಲಕ ಎಲ್ಲರಿಗೂ ತಿಳಿಸಿಕೊಡುವುದೊಂದೇ ಉಳಿದದ್ದು. ಅದನ್ನು ಗುರು ಗೋವಿಂದ ಭಗವತ್ಪಾದರು ನಿಯೋಜಿಸಿದರು. ಭಾರತದ ಅಧ್ಯಾತ್ಮಕ ನಿಧಿಗಳಾದ ಉಪನಿಷತ್ತುಗಳು,ಭಗವದ್ಗೀತೆ ಮತ್ತು ಬ್ರಹ್ಮಸೂತ್ರಗಳು ಎಂಬ ಮೂರು ಆಧಾರ ಗ್ರಂಥಗಳ ರಾಶಿಗೆ ತಾವು ಕಂಡುಕೊಂಡ ಸತ್ಯದ ಬೆಳಕಿನಲ್ಲಿ ವಿವರಣಾತ್ಮಕವಾದ “ಭಾಷ್ಯ”ಗಳನ್ನು  ಬರೆಯಿರಿ ಎಂದರು. “ಗಳಿಸಿದ ನಿನ್ನ ಯೋಗಸಾಧನೆಯಿಂದ ಇಚ್ಛಸಿದ ಸಂಕಲ್ಪ ನರೆವೇರತ್ತದೆ ” ಎಂದುಗುರುಗಳು ಅಶಿರ್ವದಿಸಿದರು. ಶಂಕರರ ಮುಂದಿನಜೀವನ ವೇದಾಂತ ಪ್ರಸರನೆಗೆ ಮೀಸಲಾಯಿತು.

‘ಜ್ಞಾನ ವೈರಾಗ್ಯ ಸಿದ್ದ್ಯರ್ಥಂ ಭಿಕ್ಷಾಂದೇಹಿ ಚ ಪಾರ್ವತಿ’

ಭಿಕ್ಷಾಂದೇಹಿ ಪಾರ್ವತೀ

 

ಪುಣ್ಯಭೂಮಿ ಭಾರತದ ಹಲವು ಪವಿತ್ರ ಕ್ಷೇತ್ರಗಳನ್ನು ಸಂದರ್ಶಿಸಿ ಕಾಶಿ ಕ್ಷೇತ್ರವನ್ನು ಶಮಕರರು ತಲುಪಿದರು. ಆವನಗಂಗಾ ತೀರದಲ್ಲಿರುವ ವಿಶ್ವೇಶ್ವರನ ದರ್ಶನ ಅವರ ಗುರಿ. ಕಾಶಿಯಲ್ಲಿಯೇ ಶಂಕರರ ಧರ್ಮ ದ್ವಿಗ್ವಿಜಯ ಪ್ರಾರಂಭವಾಗಬೇಕಿತ್ತು.

ಕಾಶಿಯನ್ನು ಸೇರಿದ ಶಂಕರರ ಪ್ರಥಮ ಕರ್ತವ್ಯ ಜಗನ್ಮಾತೆ , ಕಾಶೀಪುರಾಧೀಶ್ವರಿ ಶ್ರಿ ಅನ್ನಪೂರ್ಣೆಯ ದರ್ಶನ. ಪ್ರಥಮ ಭಿಕ್ಷೆ ಆಕೆ ನೀಡಬೇಕು. ಆದರೆ ಶಂಕರರು ಬೇಡಿದ ಭಿಕ್ಷೆ ಅಸಾಧರಣವಾದುದು:

“ಜ್ಞಾನ ವೈರಾಗ್ಯ ಸಿದ್ಧರ್ಥ ಭಿಕ್ಷಾಂದೇಹಿ ಚ ಪಾರ್ವತೀ”

ಜಗನ್ಮಾತೆಯ ಮುಂದೆ ಜ್ಞಾನ ವೈರಾಗ್ಯಗಳು ಸಿದ್ಧಿಸುವಂತೆ ಭಿಕ್ಷೆ ನೀಡು ಎಂದು ಭಾವಪೂರ್ಣವಾಗಿ ಬೇಡುತ್ತಿದ್ದ ದೈನ್ಯ ವಯಸ್ಸಿಗೆ ಮೀರಿದ ತೇಜಸ್ಸಿನಿಂದ ಕೂಡಿದ ಬಾಲ ಸನ್ಯಾಸಿಯ ಸುಂದರ ರೂಪ, ಎಲ್ಲರನ್ನೂ  ಬೆರಗುಗೊಳಿಸದವು.ಶಂಖರರ ವಾಣಿಯಿಂದ ಹೊರಹೊಮ್ಮುತ್ತಿದ್ದ ಭಕ್ತರಸಪ್ರಧಾನವಾದ ಗೀತೆಗಳನ್ನು ಕೇಳಲು ಹಲವರು ಬಂದರೆ, ಅವರ ಪ್ರಬೋಧಪೂರ್ಣ ವೇದಾಂತ ಪ್ರವಚನವನ್ನು ಕೇಳಲು ಅನೇಕರು ಅವರ ತಪ :ಪ್ರಭಾವದ ಸನ್ನಿಧಿಯಲ್ಲಿ ಶಾಂತಿಯನ್ನು ಅನುಭವಿಸಿದ ಮತ್ತೂ ಹಲವರು. ಹೀಗೆ ಕೆಲವೇ ದಿನಗಳಲ್ಲಿ ಬಾಲಯತಿ ಜನರ ಹೃದಯದಲ್ಲಿ  ಸ್ಥಾನ ಪಡೆದರು.

ಕಾಶಿ ನಗರದಲ್ಲಿದ್ದಾಗ ಶಂಕರರ ಆತ್ಮ ಪರೀಕ್ಷೆ ಎಂಬಂತೆ ಒಂದು ಘಟನೆಯ  ನಡೆಯಿತು.  ಅರುಣೋದಯ ಸಮಯ. ಶಂಕರರು ಗಂಗಾಸ್ನಾನಕ್ಕೆ ಹೊರಟಿದ್ದಾರೆ. ಚಂಡಾಲ ಎಂಬ ಜನರು ಕರೆಯುತ್ತಿದ್ದವನೊಬ್ಬ ದಾರಿಗೆ ಅಡ್ಡ ಬಂದ. ಶಂಕರರು “ಅಯ್ಯಾ ಚಂಡಾಲ , ದೂರ ಸರಿ” ಎಂದರಂತೆ. ಆತನು ನೀಡಿದ ಉತ್ತರ ಚಕಿತಗೊಳಿಸುವಂತಹುದು : “ಚಂಡಾಲನೆಂದುಯಾವುದನ್ನು ಕರೆಯುತ್ತೀರಿ. ಈ ದೇಹವನ್ನು ಅಥವಾ ಆತ್ಮವನ್ನೇ ? ನಿಮ್ಮ ದೇಹದಂತೆಯೇ ನನ್ನ ದೇಹವೂ ಮಣ್ಣಿನಿಂದ ಆದುದಲ್ಲವೇ? ಆತ್ಮಕ್ಕೆ ಚಂಡಾಲತ್ವ ಇದೆಯೇ? ಎಲ್ಲ ಕಡೆ ಇರುವ ಆತ್ಮ ದೂರ ಸರಿಯುವುದಾದರೂ ಹೇಗೆ ? ಅದು ವ್ಯಾಪಿಸಿರುವ ರೀತಿಯಲ್ಲಿ ನಿಮ್ಮ ನನ್ನ ಭೇದ ಉಂಟೆ ?” ಇದು ಯಾರನ್ನಾದರೂ ತೊಡಕಿನಲ್ಲಿ ಸಿಕ್ಕಿಸುವ ಸನ್ನಿವೇಶವೇ. ಆದರೆ ಶಂಕರರ ಪ್ರತಿಕ್ರಿಯೆಯೆ ಬೇರೆ. ಎಲ್ಲ ಸ್ವಾಭಿಮಾನವನ್ನು ಬಿಟ್ಟು ಆತನಿಗೆ ಸಾಷ್ಟಾಂಗ ನಮಸ್ಕರ ಮಾಡಿದರು! ಈ ಮನುಷ್ಯ ಸಾಮಾನ್ಯನಲ್ಲ.  ಆತ್ಮ ಸ್ವರಪವನ್ನು ಇಷರಟು ಸುಲಲಿತವಾಗಿ ತಿಳಿಸುವ ವ್ಯಕ್ತಿ ಸಾಮಾನ್ಯನಲ್ಲ. ಪರಮಾತ್ಮನೇ ಸರಿ. ಈ ಅಂತರ‍್ ದರ್ಶನ ವಿಶ್ವಶ್ವರನ ಅನುಗ್ರಹ ರೂಪವಲ್ಲವೇ? ಎಂದು ಆನಂದಪಟ್ಟರು.  ಅದ್ವೈತ ತತ್ವದ ಅನುಭವವನ್ನು ಪಡೆದಿದ್ದ ಶಂಕರರು ಕ್ಷಣಿಕವಾಗಿ ಮೇಲು-ಕೀಳು ಎಂಬ ಮಾಯೆಗೆ ಸಿಕ್ಕಿದ್ದರು.ಅದನ್ನು ಕಿತ್ತು ಹಾಕಿದ ಭಗವತ್ಸರೂಪಿಗೆ ವಂದಿಸಿದರು.

ಕಾಶಿಯಲ್ಲಿ ವಿಷ್ಣು ಶರ್ಮ ಎಂಬಾತ “ಸಂಸಾರ ಬಂಧನದಿಂದ ಪಾರಾಗಬೇಕು ಎಂದುಬಂದಿದ್ದೇನೆ. ನೀವೇ ದಾರಿ ತೋರಿಸಬೇಕು” ಎಂದು ಭಕ್ತಿಯಿಂದ ಬೇಡಿದ. ಶಂಕರರ ಮೊದಲನೆಯ ಶಿಷ್ಯನಾದ. ಈತನೇ ಮುಂದೆ “ಪದ್ಮ ಪಾದಾಚಾರ್ಯ ” ಎಂದು ಪ್ರಸಿದ್ಧನಾದ.

ಭಾಷ್ಯಗಳು:

ಪ್ರಚಂಡ ವಿದ್ವಾಂಸರಾದ ಶಂಕರರು ಮಾಡಬೇಕಾಗಿದ್ದ ಒಂದು ಬಹುಮುಖ್ಯ ಕೆಲಸವಿತ್ತು. ಉಪನಿಷತ್ತುಗಳು, ಭಗವದ್ಗಿತೆ, ಬ್ರಹ್ಮಸೂತ್ರಗಳು ಇವು ಹಿಂದುಗಳಿಗೆ ಬಹಳ ಪವಿತ್ರವಾದುವು : ಆದರೆ ಇವನ್ನು ಅರ್ಥಆಡಿಕೊಳ್ಳುವುದು ಸುಲಭವಲ್ಲ.ಶಂಕರಾಚಾರ್ಯರು ಇವಕ್ಕೆ ಭಾಷ್ಯಗಳನ್ನು (ಎಂದರೆ ಅರ್ಥ ವಿವರಣೆಗಳನ್ನ) ಬರೆಯಲು ಸಂಕಲ್ಪ ಮಾಢಿದರು.  ಉಪನಿಷತ್ತುಗಳು ಮತ್ತು ಭಗವದ್ಗೀತೆಗೆ ಭಾಷ್ಯೆಗಳನ್ನು ಬರೆದರು. ಇವು ತುಂಬ ಜನಪ್ರೀಯವಾದುದು. ಬ್ರಹ್ಮಸೂತ್ರಗಳಿಗೆ ಭಾಷ್ಯ ಬರೆಯಬೇಕಾಗಿತ್ತು.  ಭಗವಾನವ್ಯಾಸರು ಬದರಿ ಕ್ಷೇತ್ರದಲ್ಲಿದ್ದಾರೆ ಎಂದು ಹಿಂದುಗಳ ನಂಬಿಕೆ.ಈ ಕ್ಷೇತ್ರ ಇರುವುದು ಹಿಮಾಲಯದ ತಪ್ಪಲಿನಲ್ಲಿ. ಹನ್ನೆರಡು ಸಾವಿರ ಅಡಿಗಳ ಎತ್ತರದಲ್ಲಿ. ಸುಮಾರು ಒಂದು ಸಾವಿರದ ಇನ್ನೂರ ವರ್ಷಗಳ ಹಿಂದೆ ಪ್ರಯಾಣವೇನು ಸುಲಭವಾಗಿರಲಿಲ್ಲ. ಆದರೆ ಶಂಕರಾಚಾರ್ಯರು ಬ್ರಹ್ಮಸೂತ್ರಗಳಿಗೆ ಭಾಷ್ಯ ಬರೆಯಲು ಬದರಿಕ್ಷೇತ್ರಕ್ಕೆ  ಹೊರಟರು.

ಈಶ್ವರನ ಮತ್ತು ಭಗವಾನರ ಸೇವೆಯ ಸಂಕಲ್ಪ ಮಾಢಿ ಕಾರ್ಯೊನ್ಮುಖರಾದರು. ಭಾಷ್ಯದ ಕೆಲಸ ನಿರಾತಂಕವಾಗಿ ಸಾಗಿತು. ವ್ಯಾಸರೇ ಶಂಕರರಿಗೆ ದರ್ಶನವಿತ್ತು ಅಶಿರ್ವಧಿಸಿದರು ಎಂದು ಹೇಳುತ್ತಾರೆ. ತಮ್ಮನಿರೀಕ್ಷೆ ಫಲಿಸಿದಂತಾಗಿ ಶಂಕರರು ನವಚೇತನದಿಂದ ಕೆಲಸ ಮುಂದುವರೆಸಿದರು. ಶಂಕರರ ಆಯಃ ಪ್ರಮಾಣ ಇದರಿಂದ ಇಮ್ಮಡಿಸಿದಂತಾಯಿತು. ಮುಖ್ಯವಾಗಿ ಈ ನವಚೇತನ-“ಅರ್ಯುವೃದ್ಧಿ”ಎಂದರೂ ಅನ್ನಿ- ಶಂಕರರ ಇಷ್ಟ ಸಾಧನೆಗೆ ಅಗತ್ಯವಾಗಿಬೇಕಿತ್ತು.  ಈ ಮಹಾ ಗ್ರಂಥಗಳ ಅರ್ಥವನ್ನು ಪ್ರಸಾರ ಮಾಢಬೇಕಾಗಿದ್ದ ಕಾರ್ಯಭಾರ ಕಾದಿತ್ತು. ಇದನ್ನು ಸಾಧಿಸದೇ ಶಂಕರರ ಜನ್ಮ ಸಾಫಲ್ಯ ಆಗುವಂತಿರಲಿಲ್ಲ.  ಇದನ್ನು ನಿರ್ವಹಸಲು ಶಂರರಿಗೆ ದೈವಾನುಗ್ರಹ. ಗುರು ಅನುಗರಹಗಳ ರೂಪದ ನವಚೈತನ್ಯ ಬೇಕಿತ್ತು. ಆದನ್ನು ಪಡೆದ ಶಂಕರರು ತಮ್ಮ ಉಳಿದ ಅಯಸ್ಸನ್ನು  ಅದಕ್ಕಾಗಿಯೇ ವಿನಿಯೋಗಿಸಿದರು.  ಇದನ್ನು ಶಂಕರರ ದಿಗ್ವಿಜಯ ಕಾಲ ಎನ್ನಬಹುದು.

ದಿಗ್ವಿಜಯದ ಮೊದಲ ಹಂತವೆಂಬಂತೆ ಶಂಕರರು ರುದ್ದ ಎಂಬ ನಗರಕ್ಕೆ ಬಂದರು. ಅಲ್ಲಿ ಕುಮಾರಿಲಭಟ್ಟ ಎಂಬುವವರನ್ನು ಎದುರಿಸಿ ವಾದದಲ್ಲಿ ಗೆಲ್ಲಬೇಕಾಗಿತ್ತು. ಕುಮಾರಿಲರು”ವೇದಾಂತದ ವಿಚಾರವಾಗಿವಾದ ಮಾಡಬೇಕಾದರೆ ಮಂಡನ ಮಿರ ಎನ್ನುವವರ ಹತ್ತಿರ ಹೋಗಿ, ಅವರನ್ನು ವಾದದಲ್ಲಿ ಗೆದ್ದರೆ ವೇದಾಂತಕ್ಕೆ ಎಲ್ಲೆಲ್ಲಿಯೂ ಜಯಸಿಕ್ಕುವುದು ಖಂಡಿತ” ಎಂದರು.

ಮಂಡನ ಮಿಶ್ರರು ಉದ್ಧಾಮ ವಿದ್ವಾಂಸರು. ಅವರೊಂದಿಗೆ ವಾದ ಮಾಢುವುದೆಂದರೆ ಮಹಾ ಪಂಡಿತರಿಗೂ ಮೈಬೆವರುತ್ತಿತ್ತು.

ಅವರಿದ್ದುದು ಮಾಹಿಷ್ಮತಿ ಎಂಬ ಊರಿನಲ್ಲಿ.ಶಂಕರಾಚಾರ್ಯರು ಅಲ್ಲಿಗೆ ಬಂದರು. ಮಂಡನಮಿಶ್ರರುವಾದ ಮಾಡಲು ಒಪಿದರು.

ಪಣ ಏನು ?

ಸೋತವರು ಗೆದ್ದವರ ಶಿಷ್ಯರಾಗಬೇಕು.

ಇಬ್ಬರೂ ಪ್ರಚಂಡ ವಿಧ್ವಾಂಸರು. ಇವರಲ್ಲಿ ಯಾರು ಸೋತರು,ಯಾರು ಗೆದ್ದರು ಎಂದು ತೀರ್ಮಾನ ಮಾಡುವ ಯೋಗ್ಯತೆ ಯಾರಿಗುಂಟು ?

ಮಂಡನ ಮಿಶ್ರರ ಹೆಂಡತಿ ಉಭಯಭಾರತಿದೇವಿ. ಆಕೆಯದು ಅಸಾಧಾರಣ ವಿಧ್ವತ್ತುಯಾಕೆಯನ್ನು ಸರಸ್ವತಿಯ ಅವತಾರ ಎನ್ನುತ್ತಿದ್ದರು.  ಆಕೆಯೇ ತೀರ್ಪುಗಾರಳಾದಳು.

ಪ್ರಚಂಡವಾಗಿ ವಾದವಿವಾದಗಳೂ ನಡೆದವು. ಹಲವು ದಿನಗಳೇ ಕಳೆದವು.

ಪ್ರಚಂಡನ ಮಿಶ್ರರು ಸೋತರು.  ಸನ್ಯಾಸಿಗಳಾಗಿ ಶಂಕರಾಚಾರ್ಯರ ಶಿಷ್ಯರಾದರು.

ಶಂಕರರಿಗೆ ದೊರಕಿದ ಈ ಜಯ ಬಹಳ ಮಹತ್ವದ್ದೆಂದು ಹೇಳಬೇಕು. ಶಂಕರಾಚಾರ್ಯರ ಭೋಧನೆಗೆ ಜಯದೊರೆಯಿತು. ಅಲ್ಲದೆ ಮಂಡನ ಮಿಶ್ರರಂತಹ ಪ್ರತಿಭಾನ್ವಿತ ಶಿಷ್ಯರು ಅವರಿಗೆ  ದೊರಕಿದರು. ಇವರೇ “ಸುರೇಶ್ವ” ರೆಂಬ ಹೆಸರಿನಂದ ವೇದಾಂತಕ್ಕೆ ಅಮೋಘವಾದ ಸೇವೆ ಸಲ್ಲಿಸಿದರು.

ಇಲ್ಲಿಂದ ಶಂಕರರು ಶ್ರೀಲಕ್ಷೇತ್ರಕ್ಕೆ ಹೊರಟರು. ಮಾಟ ಮಂತ್ರ ಮೊದಲಾದ ತಾಂತ್ರಿಕ ಮಾರ್ಗದಲ್ಲಿ ಪ್ರಚಂಡನೆನಸಿದ ಉಗ್ರಬೈರವನನ್ನು ಪರಾಜಯಗೊಳಿಸುವದೇ ಅವರ ಉದ್ದೇಶ. ಶಂಕರರ ಸಾತ್ವಿಕ ಮತ್ತು ವೈದಿಕ ತತ್ವವನ್ನು ಈ ಕಪಾಲಿಕ ಗೆಲ್ಲಲಾರದೆ ಹೋದ. ಶಂಕರನನ್ನುಕಲ್ಲುವ ತಂತ್ರವನ್ನು ಹೂಡಿ ತಾನೇಬಲಿಯಾದ. ಶ್ರೀಶಯಲದಿಂದ ಗೊಕರ್ಣ ಕ್ಷೇತ್ರಕ್ಕೆ ಸಂದರ್ಶನವಿತ್ತ ಶಂಕರರು ಸಹ್ಯಾದಿರ ಪರ್ವತ ಶ್ರೇಣಿಯತಪ್ಪಲಲ್ಲಿರುವ ಮೂಕಾಂಬಿಕಾ ಕ್ಷೇತ್ರಕ್ಕೆ ಬಂದರು.

ಹಸ್ತಮಲಕ“:

ಇಲ್ಲಿ ಮತ್ತೊಬ್ಬ ಮಹಾ ಶಿಷ್ಯನನ್ನು ಸಂಪಾದಿಸಿಕೊಳ್ಳುವ ಪ್ರಸಂಗ ಬಂದಿತು.ಪ್ರಭಾಕರನೆಂಬ ಬ್ರಾಹ್ಮಣ. ಅವನಿಗೆ ಒಬ್ಬ ಮಗ, ಮಗ ಮೂಕ.  ನೋಡುವುದಕ್ಕೆ ಜಡನಂತೆ ವರ್ತಿಸುತ್ತಿದ್ದ ಈ ಕುಮಾರನನ್ನು ಕಂಡ ಶಂಕರರಿಗೆ ಈತ  ನಿಜವಾಗಿ ಯೋಗಿ ಎನ್ನಿಸಿತು.ಮೂಕನನ್ನುಕರೆದುಕೊಂಡು ಬಂದ ತಂದೆತಾಯಿಯರನ್ನು “ಮಗನು ಏಕೆ ಹೀಗಾದ? ಎಂದಿನಿಂದ ಹೀಗೆ?” ಎಂದು ವಿಚಾರಿಸದೇ, ನೇರವಾಗಿ ಅವನನ್ನೇ ಅವನನ್ನೆ “ನೀನುಯಾರು ಮಗುವೇ ಹೇಳು. “ಆಚಾರ್ಯರ ದಿವ್ಯ ಸನ್ನಿಧಿಗಿಂತ ಪವಿತ್ರವಾದ ಸ್ಥಳ ಬೇರೊಂದುಂಟೆ, ಯೋಗಿಗೆ ಮೌನವನ್ನು ಮುರಿಯುವುದಕ್ಕೆ? ಮೂಕನಾಗಿದ್ದವನು, ಉತ್ತರ ಕೊಟ್ಟ: “ನಾನು ನಿತ್ಯ ಸ್ವರೂಪನಾದ ಆತ್ಮ, ಜಡನಲ್ಲ.” ಇದು ಸರಳ ರೀತಿಯ ಆತ್ಮತತ್ವದ ನಿವೇದನೆ. ಆಚಾರ್ಯರ ಅನುಗ್ರಹದಿಂದ ಈ ಜಡನೂ ಮೌನಿಯೂಆದ ಕುಮಾರ ಮಹಾಜ್ಞಾನಿಯೆಂದು ಪ್ರಕಟವಾಯಿತು. ಸಂತೋಷಗೊಂಡ ಆಚಾರ್ಯರು ಆತನಿಗೆ “ಹಸ್ತಾಮಲಕ” ಎಂದುಹೆಸರಿಟ್ಟರು ತಮ್ಮ ಶಿಷ್ಯನನ್ನಾಗಿ ಪರಿಗ್ರಹಿಸಿದರು.

ಶಂಕರಾಚಾರ್ಯರಿಗೂ ಮಂಡನಮಿತ್ರರಿಗೂ ಹಲವು ದಿನಗಳ ಪ್ರಚಂಡವಾಗಿ ವಾದ ನಡೆಯಿತು.

ಅಮಾಯ್ನಯ ಪೀಠಗಳು :

ಶ್ರೀಶಂಕರರ ಜೀವನದಲ್ಲಿ ಅನಂತರದ  ಮುಖ್ಯ ಪ್ರಸಂಗ ಶೃಂಗೇರಿಗೆ ಆಗಮಿಸಿದ್ದು. ಈ ಕ್ಷೇತ್ರ ಕನ್ನಡ ನಾಡಿನಲ್ಲಿ ತುಂಗಾತೀರದಲ್ಲಿರುವ ಅತಿ ರಮಣೀಯ ಸ್ಥಳ.   ಹಿಂದಿನ ಕಾಲದಿಂದ ವಿಭಾಂಕ, ಋಷ್ಯಶೃಂಗ  ಮುಂತಾದ ಮಹಾಋಷಗಳ ಪೋಭೂಮಿಯಾಗಿದ್ದ ಪವಿತ್ರ ಸ್ಥಳ.  ಈ ಸ್ಥಳದ ಪ್ರಸನ್ನತೆಯಿಂದ ಆಕರ್ಷಿತರಾದ ಶಂಕರರು ಈ ಸ್ಥಳದಲ್ಲಿ ತಮ್ಮ ಪ್ರಥಮ ವೇದಾಂತ ಜ್ಞಾನಪೀಠವನ್ನು ಸ್ಥಾಪಿಸಿದರು. ವಿದ್ಯಾಧಿದೇವತೆಯಾದ ಶ್ರೀ ಶಾರದೆಯನ್ನು ಪ್ರತಿಷ್ಠಿಸಿ, ಸುರೇಶ್ವರರನ್ನು ಶಾರದಾಪೀಠದ ಆಚಾರ್ಯರನ್ನಾಗಿ ನೇಮಿಸಿದರು. ಆಚಾರ್ಯ ಶಮಕರರ ದೃಷ್ಟಿಯಲ್ಲಿ ಇಡೀ ಭಾರತವೇ ಒಂದುಧರ್ಮಕ್ಷೇತ್ರ. ಇದರ ಕ್ಷೇಮ, ಸಂಘಟನೆಗಳು ಧರ್ಮದ ತಳಹದಿಯ ಮೇಲೆಯೇ ಆಗಬೇಕಾದ್ದದ್ದು ಸಂಘಟನೆಯ ಅಂಗವಾಗಿ ಭಾರತದ ನಾಲ್ಕು ಮೂಲೆಗಳಲ್ಲಿ ವೇದಾಂತ ಪ್ರಸಾರಕ್ಕೆ ಮತ್ತು ಅನುಷ್ಠಾನಕ್ಕೆ ಮಾರ್ಗದರ್ಶನ ನೀಡಲು ನಾಲ್ಕು ಕೇಂದ್ರಗಳನ್ನು ನಿರ್ಮಿಸಬೇಕೆಂದು ಆಚಾರ್ಯರ ಯೋಜನೆ.ಈ ಯೋಜನೆಯ ಪ್ರಥಮ ಹಂತ ಶೃಂಗೇರಿಯಲ್ಲಿ ನಡೆದ ಶಾರದಾಪಿಠದ ಸ್ಥಾಪನೆ. ಇದು ದಕ್ಷಿಣ ಭಾರತಕ್ಕೆ ದಿಗ್ದರ್ಶನ ನೀಡಲು ನಿಯೋಜಿಸಿದರೆ, ಪೂರ್ವದಲ್ಲಿ ಜಗನ್ನಾಥದಲ್ಲಿ ಗೋವರ್ಧನ ಪೀಠವನ್ನು, ಪಶ್ಚಿಮದಲ್ಲಿ ದ್ವಾರಕೆಯಲ್ಲಿ ಕಾಳಿಕಾ ಪೀಠವನ್ನು, ಉತ್ತರದಲ್ಲಿ ಬದರಿಕಾಶ್ರಮದಲ್ಲಿ ಜ್ಯೋತಿರ್ಪಿಠವನ್ನು, ಸ್ಥಾಪಿಸಿದರು. ಈ ಪೀಠಗಳಿಗೆ “ಆಮ್ನಾಯ” ಪೀಠಗಳೆಂದು ಹೆಸರು.

ಶಿಷ್ಯರು :

ಶೃಂಗೇರಿಯಲ್ಲಿ ನೆಲೆಸಿದ್ದಾಗ “ಗಿರಿ ” ಎನ್ನುವ ಶಿಷ್ಯನನ್ನು ಕಂಡರೆ ಆತನ ಸಹಪಾಠಿಗಳಿಗೆ ತಾತ್ಸಾರ- ಆತನಿಗೆ ವೇದಾಂತ ಕಬ್ಬಿಣದ ಕಡಲೆ ಎಂದು. ಒಮ್ಮೆ ಶಂಕರರು ತಮ್ಮ ಪ್ರವಚನ ಕಾಲದಲ್ಲಿ “ಗಿರಿಗಾಗಿ ಕಾಯೊಣ” ಎಂದರಂತೆ. ಇತರ ಶಿಷ್ಯರು “ಆತನಿಗಾಗಿ ಕಾಯುವುದೇಕೆ,  ಆ ಮಂದಮತಿಗಿಂತ ಗೋಡೆಯೇ ಮೇಲು ಎಂದರಂತೆ. ಗುರುವಿನ ಶೂಶ್ರಷೆಯಲ್ಲಿಯೇ ಅಪಾರವಾದ ಭಕ್ತಿಯನ್ನಿಟ್ಟಿದ್ದ ಶಿಷ್ಯರನ್ನು ಮೂದಲಿಸಿದ್ದು ಶಂಕರರಿಗೆ ನೋವನ್ನುಂಟು ಮಾಡಿತು. “ಆತನ ಪರಿಪಕ್ವ ಮನಸ್ಸನ್ನೂ ಆಧ್ಯಾತ್ಮ ಸಾಧನವನ್ನು ನೀವೇನು ಬಲ್ಲಿರಿ ?ಆತನಶಕ್ತಿ ಇಷ್ಟರಲ್ಲಿಯೇ ನಿಮಗೆ ಪ್ರಕಟವಾಗುತ್ತದೆ” ಎಂದರು. ತನ್ನ ಯೋಗ್ಯತೆ ಗುರುವಿಗೆ ಗೊತ್ತಿದ್ದರೆ ಸಾಲದೇ? ಇತರಿಗೂ ಪ್ರಕಟಗೊಳಿಸಬೇಕೇ? ಆಂತಹ ಅಹಂಕಾರ ತನಗೆ ಬೇಢವೆಂದು ಮೌನವಾಗಿ ಗುರು ಶುಶ್ರೂಷೆಯನ್ನುಮಾಡುತ್ತಿದ್ದ ಗಿರಿಯು ಎಂದಿನಂತೆ ತಡವಾಗಿ ಬಂದು ಆಚಾರ್ಯರಿಗೆ ನಮಿಸಿದ. ಮಂದಸ್ಮಿತದಿಂದ ಆಚಾರ್ಯರು “ಗಿರಿ, ನಿನ್ನಿಂದ ಈ ದಿನ ಆತ್ಮ ತತ್ವವನ್ನು ಕೇಳಬೇಕೆಂದಿದ್ದೇವೆ. ಅದಕ್ಕಾಗಿಯೇ ಕಾಯುತ್ತಿದ್ದೇವು” ಎಂದರು.

ಇಂದುಗುರುವಿನ ಆಜ್ಞೆ. ಆಶಿರ್ವಾದವೂ ಕೂಡ. ಮಂದಮತಿ ಎನಿಸಿದ್ದ ಗಿರಿಯು ಬಹು ವಿನಮ್ರಭಾವದಿಂದ ಭಕ್ತಿತುಂಬಿದ ಕಂಗಳಿಂದ ಪ್ರಭೋಧಕರವಾದ ರೀತಿಯಲ್ಲಿ ಆಚಾರ್ಯರನ್ನು ನಮಿಸುವ ರೂಪದಲ್ಲಿ ಪರಮ ವೇದಾಂತದ ಸಾರವನ್ನು ಜಟಿಲವೆನಿಸಿದ”ತ್ರೋಟಕ ವೃತ್ತಿ”ಯಲ್ಲಿ ನಿವೇದನ ಮಾಡಿದ!  ಇತರ ಶಿಷ್ಯರಿಗೆ ತಮ್ಮತಪ್ಪು ತಿಳೀದು ನಾಚಿಕೆಯಾಯಿತು.  ಆಚಾರ್ಯರ ಮತ್ತು ಗಿರಿಯ ಕ್ಷಮೆ ಬೇಡಿದರು. ಶಿಷ್ಯನಲ್ಲಿ ಅಡಗಿದ್ದ ಸಾರಸ್ವತ ಚೇತನವನ್ನು ಪ್ರಕಟಗೊಳಿಸಿ, ಈ ಘಟನೆ ಶಾಶ್ವತವಾಗಿ ಉಳಿಯಲಿ ಎಂದು ಶಂಕರರು ಗಿರಿಯನ್ನು “ತರೋಟಕಾಚಾರ್ಯ” ಎಂದು ಕರೆದರು.

ಶಂಕರರ ಶಿಷ್ಯರಲ್ಲಿ ಪ್ರಮುಖರಾದ ಶಿಷ್ಯರು ನಾಲ್ವರು : ಪದ್ಮಪಾದರು, ಸುರೇಶ್ವರರು, ಹಸ್ತಾಮಲಕರು ಮತ್ತು ತ್ರೋಟಕಾಚಾರ್ಯರು. ಇವರನ್ನು ತಾವು ಸ್ಥಾಪಿಸಿದ ವೇದಾಂತ ಪೀಠಗಳಿಗೆ ಆಚಾರ್ಯರನ್ನಾಗಿ ನಿಯೋಜಿಸಿದರು ಶಂಖರರು. ಸುರೇಶ್ವರರನ್ನು ಶಂಗೇರಿಯ ದಕ್ಷಿಣಾಮ್ನಾಯ ಫೀಠಕ್ಕೆ, ಪದ್ಮಪಾದರನ್ನು ದ್ವಾರಕೆಯ ಕಾಳಿಕಾ ಪೀಠಕ್ಕೆ, ತ್ರೋಟಕರನ್ನು ಬದರಿಯ ಜ್ಯೋತಿ ರ್ಪಿಟಕ್ಕೆ ಮತ್ತು ಹಸ್ತಾಮಲಕರನ್ನು  ಜಗನ್ನಾಥದ ಗೋವರ್ಧನ ಪೀಠಕ್ಕೆ ನಿಯೋಜಿಸಿದರು. ಸನಾತನ ಧರ್ಮದ ಸಂಘಟನೆಗೆ ನಿಮ್ಮ ಜೀವನ ಮೀಸಲು ಎಂದು ಅವರಿಗೆ ಹೆಳಿ, ತಮ್ಮ ಜನ್ಮೋದ್ದೇಶ ಸಫಲವಾಯಿತೆಂದು ಸಂತೋಷಪ್ಟರು.

ತಾಯಿಯ ಅಪೂರ್ವ ಸೇವೆ :

ಈ ಮಧ್ಯೆ ಶಂಕರರಿಗೆ ತಮ್ಮ ವೃದ್ಧ ತಾಯಿ ಆರ್ಯಾಂಬೆಯ ಅವಸಾನ ಸಮೀಪಿಸಿತೆಂದು ತಿಳಿದು ಬಂದಿತು. ತಾನು ಎಲ್ಲಿದ್ದರೂ ತಾಯಿಯ ಹತ್ತಿರಕ್ಕೆ ಬರುತೇನೆಂದು ಮಾತು  ಕೊಟ್ಟಿದ್ದರು. ಆ ಮೇರೆಗೆ ಕಾಲಟಿಗೆ ಹಿಂತಿರುಗಿದರು. ಮಗ ಬಂದನೆಂದು ತಾಯಿಗೆ ತುಂಬಾ ಸಂತೋಷ. ಆದರೆ ತಾಯಿಯ ಮರಣ ಹತ್ತಿರವಾಗುತ್ತಿದೆ ಎಂದುಶಂಕರರಿಗೆ ತಿಳಿಯಿತು. ಆತ್ಮವನ್ನು ಉದ್ಧರಿಸುವ “ಶಿವಭುಜಂಗ ಸ್ತೋತ್ರ”ವನ್ನೂ “ವಿಷ್ಣು ಸ್ತೋತ್ರ”ವನ್ನೂ ತಾಯಿಗೆ ನೀಡಿ ಆಕೆಗೆ ಸನ್ಮರಣವನ್ನೂ ಸದ್ಗತಿಯನ್ನೂ ಕೋರಿದರು.

ಶಂಕರರ ತಾಯಿತೀರಿಕೊಂಡರು. ಆಕೆಯ ದೇಹವನ್ನು ಅಗ್ನಿಗೆ ಅರ್ಪಿಸಬೇಕಾಗಿತ್ತು; ಆದರೆ ಶಂಕರರ ಬಂದುಗಳು ಯಾರೂ ಸಹಾಯಕ್ಕೆ ಬರಲಿಲ್ಲ.ಸನ್ಯಾಸಿಗಳೂ ತಾಯಿ-ತಂದೆ   ಎಂದು ಯಾರಿಗೇ ಆಗಲಿ ಅಂತ್ಯ ಸಂಸ್ಕಾರ ಮಾಡುವ ಹಾಗಿಲ್ಲ. ಆದರೂ ಶಂಕರಾಚಾರ್ಯರು , ಸನ್ಯಾಸಿಗಳಾಗಿ ತಮ್ಮಧರ್ಮಕ್ಕೆ ವಿರೋಧಬಾರದಂತೆ, ತಾಯಿಯ ದೇಹಕ್ಕೆ ಸಂಸ್ಕಾರ ಮಾಡಿದರು. ತಿರಿಕೊಂಡು ಯಾರ ದೇಹಕ್ಕೆ ಆಗಲಿ, ಕಡೆಯ ಸಂಸ್ಕಾರ ಮಾಡುವುದು ಪವಿತ್ರ ಕರ್ತವ್ಯವಲ್ಲವೇ? ತಾವೊಬ್ಬರೇ ಕಷ್ಟದಿಂದ ತಾಯಿಯ ಶವವನ್ನು  ಸಾಗಿಸಿ, ಅದನ್ನು ಅಗ್ನಿಗೆ ಅರ್ಪಿಸಿದರು ಶಂಕರರು “ತಾಯಿಗೆ ಈ ಕಡೆಯ ಸೇವೆ ಸಲ್ಲಿಸಿ ಕೃತಾರ್ಥರಾದರು.

ಶಂಕರಾಚಾರ್ಯರು ಕಾಶ್ಮೀರಕ್ಕೂ ಭೇಟಿ ಕೊಟ್ಟರು. ಅಲ್ಲಿನ ಶ್ರೀ ನಗರದ ಶಾರದಾನಿಲಯದಲ್ಲಿ ಒಂದು ಪೀಠ- ಅದಕ್ಕೆ ಸರ್ವಜ್ಞ ಪೀಠ” ಎಂದು ಹೆಸರು.  ಸರ್ವಜ್ಞರಲ್ಲದವು ಆ ಪೀಠವನ್ನು ಅಲಂಕರಿಸಲು ಯೋಗ್ಯರಲ್ಲ ಎನ್ನುವ ಪ್ರತೀತಿ ಇತ್ತು.ಅಲ್ಲದೇ ಅದನ್ನು ಹತ್ತದೆಯೇ ಯಾರೂ ನಿಷ್ಣಾತನೆಂದು ಹೇಳಿಕೊಳ್ಳೂವ ಹಾಗೆಯೂ ಇರಲಿಲ್ಲ. ಈ ದೃಷ್ಟಿಯನ್ನು ಇಟ್ಟುಕೊಂಡುಹಲವು ವಿರೋಧಿಗಳು ಶಂಕರರನ್ನು ಕೆಣಕಿದರು.  ತಾವು ಸರ್ವಜ್ಞರೆಂದು ತೋರಿಸಿಕೊಳ್ಳಲು ಶಂಕರರು ಬಯಸಲಿಲ್ಲ. ಆದರೆ ಸರ್ವಜ್ಞ ಪೀಠವಿರುವ ಶ್ರೀ  ಶಾರದಾನಿಲಯನವನ್ನು ಎಲ್ಲ ಭಕ್ತರು ಸಂದರ್ಶಿಸಬೇಕಾದದ್ದೇ. ತಮ್ಮಪ್ರತಿಷ್ಟೆಯ ಅಂತಿರಲಿ,ದೇವಿಯ ದರ್ಶನ ಅನುಗ್ರಹ ತಮಗೆ ಅಗತ್ಯವೆಂದು ಅವರು ಶಾರದಾ ನಿಲಯಕ್ಕೆ ಹೋಗಲು ತೀರ್ಮಾನಿಸಿದರು. ಅಲ್ಲದೇ ಕಾಶ್ಮೀರ ಭಾರತ ಪುಣ್ಯಭೂಮಿಯ ಶಿಖರವಿದ್ದಂತೆ. ಸನಾತನ ವೈದಿಕ ಧರ್ಮ ಅಲ್ಲಿ ನಾಶ ಹೊಂದಬಾರದು ಎನ್ನುವ ಉದ್ದೇಶದಿಂದ ಅಲ್ಲಿಗೆ ಹೊರಸಲು ನಿಶ್ಚಯ ಮಾಡಿದರು.

ಶಾರದಾನಿಲಯಕ್ಕೆ ನಾಲ್ಕು ದ್ವಾರಗಳು- ದಿಕ್ಕಿಗೆ ಒಂದೊಂದು.ಒಂದೊಂದು ದಿಕ್ಕಿನಿಂದಲೂ ವಿದ್ವಾಂಸರೂ ತತ್ವವೇತ್ತರೂ ಪ್ರವೇಶ ಮಾಡಿ ತಮ್ಮ ಪ್ರತಿಷ್ಠೆಯನ್ನು ಸ್ಥಾಪನೆ ಮಾಡಿದ್ದರು. ಆದರೆ ಯಾರು ಸರ್ವಜ್ಞ ಪೀಠ”ವನ್ನು ಅಲಂಕರಿಸಿರಲಿಲ್ಲ. ಆದುವರೆವಿಗೂ ದಕ್ಷಿಣ ದ್ವಾರದಿಂದ ಯಾರೂ ದೇವಾಲಯವನ್ನು ಪ್ರವೇಶಿಸಲು ಪ್ರಯತ್ನವನ್ನೂ ಪಟ್ಟಿರಲಿಲ್ಲ.  ದಕ್ಷಿಣದಿಂದ ಬಂದಿದ್ದ ಆಚಾರ್ಯ ಶಂಕರರಿಗಾಗಿಯೇ ಆ ದ್ವಾರ ಕಾದಿತ್ತೋ ಏನೋ! ದೇಶದಾದ್ಯಂತ ಧರ್ಮ ಧ್ವಜವನ್ನು ನಿರಾತಂಕವಾಗಿ ಎತ್ತಿದ ಆಚಾರ್ಯರ ಪ್ರತಿಭೆಯ ವೃತ್ತಾಂತ ಎಲ್ಲರಿಗೂ ತಿಳಿದದ್ದೇ. ಅನೇಕ ಪಂಗಡಗಳ, ಧರ್ಮಗಳ ವಿಧ್ವಾಂಸರು ಶ್ರೀ ಶಾರದಾ ನಿಲಯದ ಆವರಣದಲ್ಲಿ ಎದುರು ನೋಡುತ್ತಿದ್ದರು.  ಶ್ರೀಶಂಕರರು ದೇವಾಲಯಕ್ಕೆ ಬಂದರು. ಜ್ಞಾನವಿಜ್ಞಾನ ಸಂಪನ್ನರಾದ ಆಚಾರ್ಯರನ್ನು ಕಂಡು ಎಲ್ಲರಿಗೂ ಗೌರವ ಭಾವ. ಆದರೂ ಆಚಾರ್ಯರು ದೇವಾಲಯ ಪ್ರವೇಶ ಮಾಡಬೇಕಾದರೆ ಅಲ್ಲಿ ನೆರೆದಿದ್ದ ಜೈನ, ಭೌಧ್ಧ, ಸಾಂಖ್ಯ, ಯೋಗ್ಯ ನ್ಯಾಯ ವೈಶೇಷಿಕ ಮುಂತಾದ ಮತಧರ್ಮಗಳ ಪಂಡಿತರು ಅಡ್ಡ ಬಮದರು. ಅಲ್ಲಿ ವಾದದಲ್ಲಿ ಪ್ರತಿಯೊಬ್ಬರನ್ನು  ಜಯಿಸಿ ದಕ್ಷಿಣ ದ್ವಾರದ ಮೂಲಕ ಶ್ರೀ ಶಂಖರರು ಶಾರದಾ ನಿಲಯವನ್ನು ಪ್ರವೇಶಿಸಿದರು.

ಆಚಾರ್ಯರು ಸರ್ವಜ್ಞಪೀಠವನ್ನು ಏರಲು ಹೋದರು. ಆಗ ವಿದ್ಯಾಧಿದೇವೆ ಶ್ರೀ ಶಾರದೇಯೆ ಶಂಕರರಿಗೆ ಒಂದು ಪರೀಕ್ಷೆ ಒಡ್ಡಿದಳು. ಅದರಲ್ಲಿಯೂ ಶಂಕರರು ವಿಜಯಿಗಳಾದರು. ಇದಾದ ಮೇಲೆ ದೇವಿಯೇ ಶಂಕರನನ್ನು ಆಶಿರ್ವದಿಸಿ ಅವರ ಸರ್ವಜ್ಞತೆಯನ್ನು ಸಾರಿ ಪೀಠಾಂಕಾರಕ್ಕೆ ಅನುಮತಿ ಕೊಟ್ಟಳು ಎಂದು “ಶಂಕರ ವಿಜಯ”ಗಳು ಹೇಳುತ್ತವೆ.

ಈ ಪ್ರಸಂಗವೆಲ್ಲವೂ ಶಂಕರರ ಜೀವನದಲ್ಲಿ ನಡೆದ ಸಮಸ್ತ ಹೋರಾಟದ ಕಲ್ಪನಾ ಪೂರ್ಣ ಚಿತ್ರ ಎಂದು ನಾವು ಭಾವಿಸಬಹುದು. ಭಾರತದ  ಉತ್ತರ ದಿಶೆಯಲ್ಲಿನ ಕಾಶ್ಮೀರದಲ್ಲಿನ ಸರ್ವಜ್ಞ ಪೀಠ ಹತ್ತುವುದೆಂದರೆ ಅದೊಂದು ಸಂಕೇತ. ಭಾರತದ ಅಧ್ಯಾತ್ಮದ ತುದಿಯನ್ನು ಮುಟ್ಟಿದರೆಂಬುವುದಕ್ಕೆ ಕುರುಹು. ವಿದ್ಯಾಭಿಮಾನಿ ದೇವತೆಯ ಪೂರ್ಣ ಅನುಗ್ರಹ ಶಂಕರರಿಗೆ ದೊರಕಿತ್ತು ಎನ್ನುವುದಕ್ಕೆ ನಿದರ್ಶನ. ಕೇವಲ ಮೂವತ್ತರ ಹರೆಯದ ವ್ಯಕ್ತಿ  ಈ ಜ್ಞಾನಸಾಮ್ರಾಜ್ಯ ಪಟ್ಟಕ್ಕೆ ಏರಿದ್ದರೆ ಅವರ ಮಹಿಮೆ ಎಂತಹುದು ಎಂದು ನಾವು ಭಾವಿಸಬಹುದು.

ಶಂಕರರು ತೋರಿಸಿದ ದಾರಿ :

ಈ ವಯಸ್ಸಿಗೆ ಆಚಾರ್ಯರು ಭಾರತ ಪ್ರದಕ್ಷಿಣೆಯನ್ನು ಎರಡು ಸಲ ಮಾಡಿರಬೇಕು. ದಕ್ಷಿಣದ ರಾಮೇಶ್ವರ ಮತ್ತು ಕನ್ಯಾಕುಮಾರಿಯಿಂದ ಉತ್ತರದ ಕಾಶ್ಮೀರದವರೆವಿಗೂ, ಪೂರ್ವದ ಜಗನ್ನಾಥದಿಂದ ಪಶ್ಚಿಮದ ದ್ವಾರಕೆಯವರೆಗೂ ಸಂಚಾರ ಮಾಡಿ ಅನೇಕ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿದರು.  ದೇವಸ್ಥಾನಗಳನ್ನು ಪುನರುಜ್ಜೀವನಗೊಳಿಸಿದರು. ಅನೇಕರನ್ನು ಧರ್ಮದ ಮಾರ್ಗಕ್ಕೆ ತಂದರು.

ಶ್ರೀ ಶಂಕರಾಚಾರ್ಯರು  ಮನುಷ್ಯನಜೀವನ ಹೇಗಿರಬೇಕು ಎಂದು ತೋರಿಸಿಕೊಟ್ಟರು. ಜ್ಞಾನ, ಭಕ್ತಿ, ವೈರಾಗ್ಯ, ಮೊದಲಾದ ಸಾತ್ವಿಕ ಗುಣಗಳಿಂದ ಜೀವನ ಶೋಭಿಸಬೇಕು. ಅವರು ಬೋಧಿಸಿದುದು ಅದ್ವೈತ ಮಾರ್ಗ- ಎಂದರೆ ಪ್ರಪಂಚದಲ್ಲಿ ಎಲ್ಲವೂ ಒಂದೆ, ಎಲ್ಲವೂ ಬ್ರಹ್ಮ: ಜಗತ್ತಿನಲ್ಲಿ ಬದಲಾವಣೆಯಾಗುತ್ತೇ ಇರುತ್ತದೆ. ಈ ಬದಲಾವಣೆಗಳು ಮುಖ್ಯವಲ್ಲ, ಸತ್ಯವಲ್ಲ. ಎಲ್ಲ ವಸ್ತಗಳು ಮತ್ತು ವ್ಯಾಪಾರಗಳ ಹಿಂದೆ ಸತ್ಯ ಬ್ರಹ್ಮ.  ಬ್ರಹ್ಮ ಬೇರೆ- ಮನುಷ್ಯರು ಬೇರೆ ಅಲ್ಲ. ಮನುಷ್ಯರಲ್ಲಿ ಮೇಲು ಕೀಳು ಎಂಬ ಭಾವನೆಯನ್ನು ಇಟ್ಟುಕೊಳ್ಳಬಾರದು. ಪರಮಾತ್ಮನನ್ನು ಎಲ್ಲರಲ್ಲಿಯೂ  ಎಲ್ಲೆಲ್ಲಿಯೂ ಕಣುವ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕು. ಈ ದೃಷ್ಟಿಯನ್ನು ಪಡೆದವರಿಗೆ ಪ್ರಪಂಚವೆಲ ತಮ್ಮ ದೇಶವೇ, ಪ್ರಪಂಚದ ಎಲ್ಲರೂ ತಮ್ಮ ಅಣ್ಣ ತಮ್ಮ,ಅಕ್ಕ ತಂಗಿ ಎಂಬ ಭಾವನೆ ಬೆಳೆಯುತ್ತದೆ.

ಶಂಕರರು ಜನರಿಗೆ ಹಿಂದೂ ಧರ್ಮದ ಅರ್ಥವಾಗಲೆಂದು ಶಾಸ್ತ್ರ ಗ್ರಂಥಗಳನ್ನುಬರೆದರು. ಜೊತೆಗೆ ಜನರಲ್ಲಿ ಭಕ್ತಿಯ ಪೋಷಣೆಗೆ ಅನುಕೂಲವಾಗುವಂತಹ ಅನೇಕ ಸ್ತೋತ್ರಗಳನ್ನು ರಚಿಸಿದರು. ಅವನು ರಚಿಸಿದ “ಭಜ ಗೊವಿಂದಂ” ಎನ್ನುವ ಕವನ ಭಾರತದಲ್ಲೆಲ್ಲ ಬಹು ಜನಪ್ರೀಯವಾಗಿದೆ ಸಂಸಾರದ ಕಷ್ಟ-ದುಃಖಗಳಿಂದ, ಸಾವಿನ ಭಯದಿಂದ ಪಾರಾಗಬೇಕಾದರೆ ಗೋವಿಂದನನ್ನು ಭಜಿಸು  ಎಂಬುವುದು ಇದರ ಉಪದೇಶ.

ಅದ್ಭುತ ಸಾಧನೆ, ದಾರಿದೀಪ:

ಆಚಾರ್ಯರು ತಮ್ಮ ಅಂತ್ಯಕಾಲದಲ್ಲಿ ಎಲ್ಲಿ ಇದ್ದರು ಎಂಬುವುದು ಖಚಿತವಾಗಿ ಹೇಳಲು ಬರುವುದಿಲ್ಲ. ಮಹಾತ್ಮರಾದವರು ತಮ್ಮ ಊರಿನಲ್ಲೇ ಜನ್ಮ ತಾಳಿದ್ದು,ತಮ್ಮ ಸ್ಥಳಕ್ಕೆ ಭೇಟಿನೀಡಿದ್ದರು. ಅವರ ಪಾದಸ್ಪರ್ಶದಿಂದ ಈ ನೆಲ ಪುನೀತವಾಗಿದೆ, ಅವರು ಅಂತ್ಯಕಾಲದಲ್ಲಿ ತಮ್ಮ ಕ್ಷೇತ್ರದಲ್ಲೇ ಸಮಾಧಿ ಹೊಂದಿದರು ಎಂದು ಎಲ್ಲ ಜನರೂ ಎಲ್ಲೆಲ್ಲಿಯೂ ಹೇಳಿಕೊಂಡು ಹೆಮ್ಮೆ ಪಡುವುದು ಸಹಜವೇ? ಆಚಾರ್ಯ ಶಂಕರರ ವಿಚಾರದಲ್ಲಿಯೂ ಹೀಗೆಯೇ. ಕಂಚಿ ,ತ್ರಿಚೂರು, ಕೇದಾರ ಕ್ಷೇತ್ರಗಳಲ್ಲಿ ಶಂಖರರ ಮಹಾಸಮಾಧಿಯ ಗುರುತುಗಳನ್ನು ಜನರು ತೋರಿಸುತ್ತಾರೆ! ಇದರಲ್ಲಿ  ಅಶ್ಚರ್ಯವೇನಿದೆ? ಆಚಾರ್ಯ ಎಲ್ಲ ಕ್ಷೇತ್ರಗಳಲ್ಲಿಯೂ ಇದ್ದರು.  ಎಲ್ಲವನ್ನೂ ದಾಟಿ ಮುಂದೆ ಹೊರಟಿದ್ದರು. ದಕ್ಷಿಣದ ಆಚಾರ್ಯರ ಸಮಾಧಿ ಉತ್ತರದ ಕೇದಾರದಲ್ಲಿ ಇರುವುದು ಸತ್ಯವೇಂದಾದಲ್ಲಿ ಅದು ಅವರ ಯೋಗ್ಯತೆಯ ಪ್ರಮಾಣವೇ. ಅವರ ವ್ಯಕ್ತಿತ್ವ ಭಾರತವಿಡೀ ಹರಡಿದ್ದುದರ ಸಂಕೇತ.

ಆಚಾರ್ಯ ಶಂಕರರು ತಮ್ಮ ಮೂವತ್ತೆರಡನೆಯ ವಯಸ್ಸಿನಲ್ಲಿ ಇಹಲೋಕದ ಎಲ್ಲ ಸಂಬಂಧಗಳನ್ನೂ ಕಳಚಿಕೊಂಡು ಬ್ರಹ್ಮನಿರ್ವಾಣವನ್ನು ಪಡೆದರು. ಅವರ ಇಹ ಜೀವನದ ಕಾಲ ಕೇವಲ ಮೂವತ್ತೆರಡು ವರ್ಷ. ಆದರೆ ಅವರು ಸಾಧಿಸಿದ ಸಾಧನೆ ಎಣೆ ಇಲ್ಲದ್ದು, ಸಾಮಾನ್ಯ ಮಾನವರಿಗೆ ಬದುಕಿನ ಅರ್ಥವೇನು? ಎಂದು  ಕೇಳುವುದಕ್ಕೆ ಮೂವತ್ತ್ತೆರಡು ವರ್ಷ ಕಳೆಯಬೇಕಾಗುತ್ತದೆ. ಆದರೆ ಆಚಾರ್ಯರು ಆ ಆಯುಃಪ್ರಮಾಣದಲ್ಲಿ ಭಾರತದಾದ್ಯಂತ ಧರ್ಮದ ಅಂದೋಲನ ನಡೆಸಿದರು.  ಚಿರಸ್ಮರಣೀಯವಾದ ಧಾರ್ಮಿಕ, ತಾತ್ವಿಕ ಗ್ರಂಥಗಳನ್ನು ರಚಿಸಿ ಸನಾತನ ಧರ್ಮದ ವಿಶಿಷ್ಟತೆಯನ್ನು ತೋರಿಸಿದರು.  ಸಂಸ್ಕೃತಿ ತಮ್ಮ ಜೀವನವನ್ನು ಕೃತಾರ್ಥಗೊಳಿಸಿಕೊಂಡರು. ಸ್ವಲ್ಪ ದೂರದ ಪ್ರಯಣ ಸಹ ಬಹುಕಷ್ಟವಾಗಿದ್ದ ಕಾಲದಲ್ಲಿ ಭಾರತವನ್ನೆಲ್ಲ ತಿರುಗಾಢಿದರು.  ಬೇರೆ ಬೇರೆ ಪ್ರದೇಶಗಳಲ್ಲಿ ಮಠಗಳನ್ನು ಸ್ಥಾಪಿಸಿ ಭಾರತವೆಲ್ಲ ಒಂದೇ ಎಂಬ ಸತ್ಯಕ್ಕೆ ಮೂರ್ತರೂಪ ಕೊಟ್ಟರು.  ಅವರ ಪ್ರತಿಭೆ, ಕ್ರಿಯಾಸಾಮರ್ಥ್ಯ, ಕಾರ್ಯತತ್ಪರತೆ ಎಷ್ಟೆಂದು ಊಹಿಸಲೂ ನಮಗೆ ಸಾಧ್ಯವಾಗದು.

ಅಂತಹ ಮಹಾತ್ಮರ ದಿವ್ಯ ಜೀವನ ನಮ್ಮ ಬಾಳಿಗೆ ಬೆಳಕಾಗಲಿ. ಅವರು ಕಟ್ಟಿದ ಭಾರತದ ಕಲ್ಪನೆ ನಮ್ಮದಾಗಲಿ. ಅವರು ತೋರಿದ ಜೀವನತತ್ವ ನಮ್ಮನ್ನು ತುಂಬಲಿ.