ರಾಷ್ಟ್ರಪತಿಯಾಗಿ ಸೇವೆಯ ಅವಧಿ:೨೫.೦೭.೧೯೯೨ ರಿಂದ ೨೪.೦೭.೧೯೯೭

ಘನ ವಿದ್ವಾಂಸರು, ಹಿರಿಯ, ಅನುಭವೀ ರಾಜಕೀಯ ಮುತ್ಸದ್ದಿ, ಸದ್ಗುಣಿ, ಯಾವುದೇ ವಿವಾದಗಳಿಗೆ ಸಿಲುಕಿದ ಪಕ್ವ, ರಾಜಕಾರಣಿ-ಇವೇ ಮುಂತಾದ ಪ್ರಶಂಸೆಗಳು ಶಂಕರ ದಯಾಳ್‌ಶರ್ಮರಿಗೆ ಸಂದಿವೆ. ರಾಷ್ಟ್ರಪತಿ ವೆಂಕಟರಾಮನ್ ಅವರು ತಮ್ಮ ಕಾಲದಲ್ಲೇ ಉಪರಾಷ್ಟ್ರಪತಿಯಾಗಿದ್ದ ಶರ್ಮರನ್ನು ತಮ್ಮ ನಂತರ ರಾಷ್ಟ್ರಪತಿ ಸ್ಥಾನಕ್ಕೆ ಆರಿಸುವ ಆಲೋಚನೆ ಮಾಡಬಹುದು ಎಂಬ ಸೂಚನೆ ನೀಡಿದ್ದೂ ಇವೆ ಕಾರಣಗಳಿಗಾಗಿಯೇ.
ಶಂಕರ ದಯಾಳ್ ಶರ್ಮರು ೧೯೧೮ರ ಆಗಸ್ಟ್ ೧೯ರಂದು ಭೋಪಾಲಿನಲ್ಲಿ ಹುಟ್ಟಿದರು. ತಂದೆ ಖುಷಿಲಾಲ್, ತಾಯಿ ಸುಭದ್ರಾ, ಪತ್ನಿ ವಿಮಲಾ, ಭಾರತ ಹಾಗು ವಿದೇಶಗಳ ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ಶರ್ಮರು ಶಿಕ್ಷಣ ಪಡೆದರು.ಅಲಹಾಬಾದ್ ಹಾಗೂ ಲಕ್ನೋ ವಿಶ್ವವಿದ್ಯಾಲಯಗಳು, ಕೇಂಬ್ರಿಜ್, ಲಿಂಕನ್ಸ್ ಇನ್ ಮತ್ತು ಹಾರ್ವಡ್ ಲಾ ಸ್ಕೂಲ್‌ಗಳ ಪ್ರತಿಭಾವಂತ ವಿದ್ಯಾರ್ಥಿಯಾದ ಶರ್ಮರು ಎಂ.ಎ. ಹಾಗೂ ಎಲ್.ಎಲ್.ಎಂ.ಎರಡೂ ಪರೀಕ್ಷೆಗಳಲ್ಲಿ ವಿಶ್ವವಿದ್ಯಾಲಯಕ್ಕೇ ಪ್ರಥಮ ಸ್ಥಾನ ಪಡೆದರು. ಇಂಗ್ಲಿಷ್ ಸಾಹಿತ್ಯ, ಹಿಂದಿ ಮತ್ತು ಸಂಸ್ಕೃತ ಇವರು ಸ್ನಾತಕೋತ್ತರ ಪದವಿಗೆ ಆರಿಸಿಕೊಂಡ ವಿಷಯಗಳು. ಹಾರ್ವರ್ಡನಿಂದ ಕಾನೂನಿನಲ್ಲಿ ಡಾಕ್ಟರೇಟ್ ಪಡೆದರು.
ತಾವು ವಿದ್ಯಾರ್ಥಿಯಾಗಿದ್ದ ಲಕ್ನೋ ಮತ್ತು ಕೇಂಬ್ರಿಜ್ ವಿಶ್ವವಿದ್ಯಾಲಯಗಳಲ್ಲಿ ಕಾನೂನು ವಿಷಯದ ಬೋಧಕರಾಗಿಯೂ ಕೆಲಸ ಮಾಡಿದ್ದರು. ಇವರು ಅಧ್ಯಯನ ಮಾಡಿದ ವಿದ್ಯಾಕೇಂದ್ರಗಳೆಲ್ಲವೂ ತಮ್ಮ ಸಂಸ್ಥೆಗಳ ಫೆಲೋಷಿಪ್ ನೀಡಿ ಗೌರವಿಸಿರುವುದು ಇವರ ಪ್ರತಿಭೆಗೆ ಸಿಕ್ಕ ಮನ್ನಣೆ. ಕೇವಲ ಪಾಂಡಿತ್ಯ ಸಂಪಾದನೆಯಷ್ಟೇ ಇವರ ಶಿಕ್ಷಣದ ಗುರಿಯಾಗಿರಲಿಲ್ಲ. ಇಂಗ್ಲೆಂಡಿನಲ್ಲಿ ಟ್ಯಾಗೋರ್ ಸಂಘ ಹಾಗೂ ಕೇಂಬ್ರಿಜ್ ಮಜಲಿಸ್‌ನ ಸಕ್ರಿಯ ಸದಸ್ಯರಾಗಿದ್ದರು. ಅಥ್‌ಲಿಟಿಕ್ಸ್, ಹಾಯಿ ದೋಣಿ ಸ್ಪರ್ಧೆ ಹಾಗೂ ಈಜು ಇವರ ಪ್ರೀತಿಯ ಕ್ರೀಡೆಗಳು. ಈಜಿನಲ್ಲಿ ಸತತ ಮೂರು ವರ್ಷ ಲಕ್ನೋ ವಿಶ್ವವಿದ್ಯಾಲಯದ ಛಾಂಪಿಯನ್ ಆಗಿದ್ದರು.
ಇಂಗ್ಲೆಂಡಿನಲ್ಲಿ ವಿದ್ಯಾರ್ಜನೆ ಮಾಡಿ ಸ್ವದೇಶಕ್ಕೆ ಹಿಂತಿರುಗಿದ ಶರ್ಮರು ೧೯೪೦ರಲ್ಲಿ ಲಕ್ನೋದಲ್ಲಿ ನ್ಯಾಯವಾದಿಯಾಗಿ ವೃತ್ತಿ ಜೀವನ ಆರಂಭ ಮಾಡಿದರು. ಆದರೆ, ಬಹಬೇಗ ಸ್ವಾತಂತ್ರ್ಯ ಚಳವಳಿ ಅವರನ್ನು ತನ್ನ ತಕ್ಕೆಯೊಳಗೆ ಎಳೆದುಕೊಂಡಿತು.೧೯೪೨ರ “ಭಾರತ ಬಿಟ್ಟು ತೊಲಗಿ” ಆಂದೋಳನದಲ್ಲಿ ಭಾಗವಹಿಸಿದರು.ರಾಜ ಮನೆತನದ ಆಳ್ವಿಕೆಯಲ್ಲಿದ್ದ ಭೋಪಾಲ್ ಸಂಸ್ಥಾನವನ್ನು ಭಾರತ ಒಕ್ಕೂಟದಲ್ಲಿ ವಿಲೀನ ಗೊಳಿಸಲು ನಡೆದ ಚಳವಳಿಯಲ್ಲೂ ಭಾಗವಹಿಸಿದರು. ಸೆರೆಮನೆವಾಸ ಅನುಭವಿಸಿದರು.
ಕಾಂಗ್ರೆಸ್ ಸಂಸ್ಥೆಯಲ್ಲಿ ಶರ್ಮರು ವಹಿಸಿದ ಪಾತ್ರ ಹಿರಿದು.೧೯೫೦ರಲ್ಲಿ ಕಾಂಗ್ರೆಸ್ ಸೇರಿದ ಶರ್ಮರು ಮೊದಲು ಭೋಪಾಲ್, ನಂತರ ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರಾದರು. ೧೯೬೮ ರಿಂದ೧೯೭೨ರ ವರೆಗೆ Indian National Congress ಕಾರ್ಯದರ್ಶಿಯಾದರು. ೩೨ವರ್ಷಗಳ ಕಾಲ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿದ್ದರು.೨೦ವರ್ಷಗಳ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿದ್ದರು.೧೯೭೨ರಿಂದ ೧೯೭೪ರವರೆಗೆ ಕಾಂಗ್ರೆಸ್ ಅಧ್ಯಕ್ಷರು ಆಗಿದ್ದರು.
ಸಾರ್ವಜನಿಕ ಜೀವನದಲ್ಲಿ ಅಪಾರ ಅನುಭವ ಗಳಿಸಿದ್ದ ಶರ್ಮರನ್ನು ಮಧ್ಯಪ್ರದೇಶ ವಿಧಾನಸಭೆ ಹಾಗೂ ಲೋಕ ಸಭೆಗಳ ಸದಸ್ಯತ್ವ ಮತ್ತು ಮಂತ್ರಿಪದವಿಗಳು ತಾವಾಗಿ ಅರಸಿ ಬಂದವು. ಭೋಪಾಲ್ ಹಾಗೂ ಮಧ್ಯಪ್ರದೇಶದ ಸಚಿವ ಸಂಪುಟಗಳಷ್ಟೇ ಅಲ್ಲದೆ, ಕೇಂದ್ರ ಸಂಪುಟದಲ್ಲಿ ಸಂಪರ್ಕ ಶಾಖೆಯ ಮಂತ್ರಿಯೂ ಆಗಿದ್ದರು.೫ ಮತ್ತು ೭ ನೇಲೋಕ ಸಭೆಗಳೆರಡಲ್ಲೂ ಸದಸ್ಯರಾಗಿದ್ದರು. ೧೯೮೪ರಿಂದ ೧೯೮೭ರ ಅವಧಿಯಲ್ಲಿ ಆಂಧ್ರಪ್ರದೇಶ, ಪಂಜಾಬ್ ಮತ್ತು ಮಹಾರಾಷ್ಟ್ರಗಳ ರಾಜ್ಯಪಾಲರಾಗಿದ್ದರು. ೧೯೮೭ರ ಸೆಪ್ಟಂಬರ್ ೩ರಂದು ಉಪರಾಷ್ಟ್ರಪತಿಯಾಗಿ ಮತ್ತು ೧೯೯೨ರ ಜುಲೈ ೨೫ರಂದು ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಭಾರತದ ವಿವಿಧ ವಿಶ್ವ ವಿದ್ಯಾಲಯಗಳ ಕುಲಪತಿಗಳಾಗಿ ಶಂಕರ ದಯಾಳ್ ಶರ್ಮರು ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಕೊಡುಗೆ ನೀಡಿದರು ಕೇಂದ್ರ ಸಂಸ್ಕೃತ ಮಂಡಳಿಯ ಅಧ್ಯಕ್ಷರಾಗಿ ಸಂಸ್ಕೃತ ಭಾಷೆಯ ಬೆಳವಣಿಗೆಗಾಗಿ ಶ್ರಮಿಸಿದರು. ವಿವಿಧ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಂಸತ್ ಸದಸ್ಯರ ನಿಯೋಗಗಳ ಮುಂದಾಳತ್ವ ವಹಿಸಿದ್ದರು. ಅವುಗಳಲ್ಲಿ ಪ್ರಮುಖವಾದವು-ಅಸ್ಲೋದಲ್ಲಿ (OSLO)ನಡೆದ Inter-Parliamentary Union Conference,ಸೋವಿಯಟ್ ಒಕ್ಕೂಟದಲ್ಲಿ ನಡೆದ Festival of India ದಲ್ಲಿ ಭಾಗವಹಿಸಿದ ಸ್ವಾತಂತ್ರ್ಯ ಯೋಧರ ನಿಯೋಗ ಹಾಗೂ ಶತಾಯುಷಿ ಸ್ವಾತಂತ್ರ್ಯ ಯೋಧ ಖಾನ್ ಅಬ್ದುಲ್ ಗಫಾರ್‌ಖಾನ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲು ಆಘ್ಫಾನಿಸ್ಥಾನದ ಜಲಾಲಾ ಬಾದಿಗೆ ಹೋಗಿದ್ದ ಸ್ವಾತಂತ್ರ್ಯ ಯೋಧರ ನಿಯೋಗ.
ದೇಶ ವಿದೇಶಗಳ ಅನೇಕ ವಿಶ್ವವಿದ್ಯಾಲಯಗಳು ಶಂಕರ ದಯಾಳ್ ಶರ್ಮರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿದವು. ಶರ್ಮರು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳೆರಡರಲ್ಲೂ ಸಮಾನ ಪ್ರಭುತ್ವವಿದ್ದ ಲೇಖಕರು, “Congress Approach to International Affairs”ಎಂಬುದು ಅವರ ಒಂದು ಪ್ರಮುಖ ಪುಸ್ತಕ, ಶಿಕ್ಷಣ, ಕಾನೂನು ಮತ್ತು ಪೋಲೀಸರ ಪಾತ್ರ, ಭಾರತೀಯ ಚಿಂತನೆ, ಜಾತ್ಯತೀತತೆ, ಭಾರತೀಯ ಸಾಂಸ್ಕೃತಿಕ ಪರಂಪರೆ ಮೊದಲಾದ ವಿವಿಧ ವಿಷಯಗಳ ಮೇಲೆ ವಿದ್ವತ್ಪೂರ್ಣ ಲೇಖನ ಹಾಗೂ ಪುಸ್ತಕಗಳನ್ನು ಬರೆದಿದ್ದಾರೆ.
ಅಂತಾರಾಷ್ಟ್ರ ವಿದ್ಯಮಾನಗಳು, ಭಾಷಾಶಾಸ್ತ್ರ, ತತ್ವಶಾಸ್ತ್ರ, ಕಾನೂನು, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ವಿವಿಧ ಧರ್ಮಗಳ ತುಲನಾತ್ಮಕ ಅಧ್ಯಯನ-ಇವು ಅವರಿಗೆ ಪ್ರಿಯವಾದ ವಿಷಯಗಳು, ಓದುವುದು, ಬರೆಯುವುದು ಅವರ ಹವ್ಯಾಸ, ಸಾಹಿತ್ಯ ಅದರಲ್ಲಿಯೂ ಕಾವ್ಯ,ಕಲೆ,ಸಂಸ್ಕೃತಿ ಇತಿಹಾಸ ಅವರ ಅಧ್ಯಯನದ ವಸ್ತುಗಳು. ಭಾರತೀಯ ಶಾಸ್ತ್ರೀಯ ಸಂಗೀತದಷ್ಟೇ ಪಾಶ್ಚಿಮಾತ್ರ ಶಾಸ್ತ್ರೀಯ ಸಂಗೀತವೂ ಅವರಿಗೆ ಪ್ರಿಯವಾದದ್ದು. ಅವರ ಪ್ರತಿಯೊಂದು ಮಾತು ಮತ್ತು ಕೃತಿಯಲ್ಲಿ ಒಂದು ಸುಸಂಸ್ಕೃತ ಚೇತನದ ಮೆರುಗನ್ನು ಕಾಣಬಹುದಿತ್ತು. ೨೪.೦೭.೧೯೯೭ರಂದು ರಾಷ್ಟ್ರಪತಿ ಸ್ಥಾನದಿಂದ ನಿವೃತ್ತರಾದ ಶಂಕರ್ ದಯಾಳ್ ಶರ್ಮ‌ ಅವರು ದಿನಾಂಕ ೨೬.೧೨.೧೯೯೯ ರಂದು ನಿಧನರಾದರು.