ಹೊತ್ತಾರೆ ಮುನ್ನೆದ್ದು ಎತ್ತ ಕೈ ಮುಗಿವುದು
ಹೆರಿಯಣ್ಣ ಕಟ್ಟಿಸಿದ ಅಸುವಂತನ ಸುತ್ತಿ ಬಂದ್
ಸೂಲಿಯಮ್ಮ ಕೈಯ್ಯ ಮುಗಿದಾನ

ನಾನೂ ದೇವರ ಕೂಡ ಏನುಬೇಡಿದಳಲ್ಲ
ಹೂಡುವ ಎತ್ತು ಹುಡುಗಾನ ಕೊಡಕೆಂದು
ಬೇಡಿದೆ ಶಿವನ ಮೊರೆ ಹೊಕ್ಕಿ

ಶಿರಸಿಯ ಮಾದೇವಿ ಹೊಸೂರೀಗೆ ದೊಡ್ಡೋಳು
ಬಸಿರಿಗೆ ಭಂಗ ಬರಸೂಳು ಏನೆಂದೆ
ಶಿಶುವಿಗೆ ನನ್ಹೆಸರು ಇಡಕೆಂದು

ಗುಡ್ಡಿ ಮ್ಯಾಲೆ ಇರುವರೆ ಗುಜ್ಜು ಗುಜ್ಜು ಕಾಲೋರೆ
ನಡೆಯುತ್ತ ನಡೆಯುತ್ತ ಬಾಯಿ ಬಿಡುವೋರ ಕಮ್ಮರಸಾಲಿ
ಗುಪ್ಪಿ ಒಳಗಿರುವ ಗುರುಗೋಳ

ಅಂಚೆಂಚೆ ಹತ್ತುತ್ತ ಕುಂಚ್ ಬಾಲ ಬೀಸುತ್ತ
ಜಂತದ ಬಾಯಿ ಅಮರುತ್ತ ಹೈಗುಳಿರಾಯ
ಬರುವರು ಕಲ್ಯಾಣಿ ಬಯಲಲ್ಲಿ

ಗಂಡುಳ್ಳ ಗರತೀಯ ಮಂಡಿ ಚ್ವಾಳಂಗಿ ಮಾಡಿ
ಹೊತ್ತಿದ್ದ ಗೆಂಟು ಸೆಳಕಂಡು ಗೋವಿಂದ್ರಾಯ
ಗಂಡರೂಪಿನಲಿ ಕಳುಗೂರು

ಯಾರ್ಯಾರ ನಂಬಿ ನಾನಿದ್ದ ಮಗಳಲ್ಲ
ದೇವರ ನಂಬಿದೆನೆ ಧೃಡವಾಯಿ ಶಿರಸಿಯ ತಾಯ್
ನಂಬಿದ ಮಗಳು ಕೆಡುವಳೆ

ಶಂಖ ಚಕ್ರವ ಕಂಡೆ ನೀಲಿ ನಾಮವ ಕಂಡೆ
ದಶರಥನಕಂಡೆ ಗಿರಿ ಮೇಲೆ ಗೋವಿಂದನ
ತಳಕ್ಹೋಗಿ ಕಂಡೆ ನಿಜರೂಪ

ತಲೆಗೆಂಟು ಹೊತ್ತಿದ ಮೇಲೆ ಮನಿ ಆಸಿ ನನಗವಿಲ್ಲ
ಒಡಿಯ ಗೋವಿಂದನ ತಲೆಗಂಟು ಹೊತ್ತಿದ ಮೇಲೆ
ತಾಯೇ ನಿನ್ನಾಸೆ ನನಗಿಲ್ಲ

ಗುಡ್ಡಮ್ಮಾಡಿ ಸೃಷ್ಟೀಲು ಚಿಂತೆ ನಾಗದೇವ್ರಿಗೆ
ಹುಂತ ಬಿಟ್ಟು ಹ್ಯಾಂಗೆ ಹೊರಡಲಿ ಮಾಣಿಕದ
ಹರಳು ಬಿಟ್ ಹ್ಯಾಂಗೆ ತಿರುಗಲೀ

ಮಲ್ಲಿಗೆ ಹೂವಿನ ಗಮನ ಮನಿಗಿ ಬಂದವರು ಯಾರೆ
ಗಂಧದ ಗಮನ ಒಳಗೆಲ್ಲ ಶಿರಸಿಯ
ದುರ್ಗಮ್ಮನಲ್ಲದೇ ಪರರಲ್ಲ

ಪಟ್ಟೀನ ಉಟ್ಕಂಡ ಪಟ್ಟಿ ಮುಸುಕ ಹ್ಯಾಕಂಡ
ದೊಟ್ಟಿ ಕಾಲಮ್ಮ ಹೊರಟೀಳ ಗುಡ್ಡಮ್ಮಾಡಿ
ತೊಟ್ಟಿಲ ಕಾಣುಕಿಯ ತಿಳಕಂದ

ಹತ್ತು ತಿಂಗಳ ಬಸಿರಿನ ನೆತ್ತಿ ಮೇಲಿನ ಕಳಸ
ಹತ್ತಲಾರೆ ಗಿಳಿಯ ಇಳಿಲಾರೆ ಗೋವಿಂದ
ನಿತ್ತಲ್ಲೇ ಕೈಯ್ಯ ಮುಗಿವೆನು

ಹೊತ್ತು ಮೂಡಿ ಬರುವಾಗೆ ಹಾಯುಗಳಿ ಕೊಣುವಾಗೆ
ಹೇಳಿಕೋ ಮಾವಯ್ಯ ಹರಕೀಯ ನಿನಸೂಸಿ
ಗಂಡು ಹುಟ್ಟಿರು ಗೆಂಡೋ ತೂಳಿಕಂದ ನಿನ ಸೊಸಿಗೆ
ಹೆಣ್ಣು ಹುಟ್ಟಿರೆ ಪಟ್ಟೇ ಕೊಡತೆಂದು

ಹಸಿವಿಗ್ಹಣ್ಣನ್ನು ತಿಂದು ಬಾಯಾರಿಗ್ಹಾಲನು ಕುಡಿದು
ಭಾಗ್ಯ ಬಂತೇನು ಹುಲಿರಾಯ ಮೂರ‍್ ಗೋಳಿ
ಬಾಗಿಲಕೆ ಬೆನ್ಹಾಕಿ ಒರಗಿದೆ.

ಆಚಾರಿ ಕಟ್ಟಿದ ಮನಿಯೆ ಆಯು ನೋಡಲು ಬನ್ನಿ
ಸೂಜಿಗೂ ಹೂವ ಸುರಿದ್ಹಂಗೆ ಮೂರು ಗೋಳೀ
ವೋಪು ಮುಂಡಿಗೆಯ ಕೆಲಸವೇ

ಮೂರ್‌ಗೋಳಿ ಮರುಳಮ್ಮ ಸತ್ಯ ತೋರುತ್ತೇನೆಂದು
ಬತ್ತಿಲ್ಲದ ದೀವ್ಗಿ ಉರಿದಾಳು ಮರುಳಮ್ಮ
ಸತ್ಯವ ತೋರಿದಳೇ ಜನರಿಗೆ

ಮಕ್ಕಿಯ ಗದ್ದೀಲೆ ಬಿದ್ದಿತು ಬಾಗಾಳ ಹೂಗು
ಹೆಕ್ಕಿ ಮುಡುವಂದ್ರು ತೆರಪಿಲ್ಲ ಸರುಪನ
ಹೆಡಿ ಮೇಲೈದ್ಹೂಗೆ ಕಳುಹೀದೆ

ಭಾಗೀರತಿ ಬಂದು ಬಾಗಿಲ್ಲಿ ನಿಂತ್ಕಂಡ
ನೋಡೋಳಿ ಮನೆಯ ಭಕ್ತಿಯ ಭಾಗಿರತಿ
ಭಕ್ತಿ ಕಂಡ ಭಾಗ್ಯ ಕೊಡುವಾಳು

ಬಾಗೀ ಬಸಳೆಯ ಕೊಯ್ದೆ ತೂಗಿ ತೊಂಡಿಯ ಕೊಯ್ದೆ
ನಾಗೇಣಿ ಬಚ್ಚಿ ಎಲ್ಲಿಕೊಯ್ದೆ ದೇವರೆ
ನಾಮುಕು ಕೊಯ್ದೆ ತೊಳಸಿಯ

ಬಡವಿ ಕಾಣ್ ಗಂಗಾತಾಯಿ ನಡವ ಕಡಲಲ್ಲಿದ್ದೆ
ಹಿಡುವಲ್ಲಾ ಧರದ ಗಿಡುವಿಲ್ಲ ಗಂಗಾತಾಯಿ
ಬಡವಿಗೂ ನೀನೇ ಗತಿ ಕಾಣು

ಕಟ್ಟಿ ಅಶುವಂತನ ನೆಟ್ಟಿಕು ಸತ್ತರು ಯಾರೆ
ಕಟ್ಟಿ ಇಲ್ಲಿದಕೆ ಮದಿ ಇಲ್ಲ ಆಶುವಂತನ
ನಟ್ಟಿಕೂ ಸತ್ತರಿಗೂ ಸ್ವರ್ಗಿಲ್ಲ

ಕಾಶೀ ಕಾವೇರಮ್ಮ ಬಾಚಿ ಮಂಡೆಯ ಕಟ್ಟಿ
ನೇಸರ ಕನ್ನಡಿಲೆ ಮುಖ ತೋರಿ ಗಮಡನ ತೊರೆದು
ಯಾಕೆ ನನ ಪರಿಸೆ ಇನ್ನೂ ಬರಲಿಲ್ಲ

ತಿರುಪತಿ ಹೋಗಬೇಕು ತಿಮ್ಮಪ್ಪನ ಕಾಣಬೇಕು
ಚಿನ್ನದ ಕಂಬ್ಹಿಡಿದು ನಿಲಬೇಕು ನಮ್ಮ ತೋಳಿಗೆ
ಚಿನ್ನದ ಮುದ್ರಿಯ ಸುಡಬೇಕು

ಕೊಲ್ಲೂರ ಮೂಕಾಂಬಿ ನುಗ್ಗಿಯ ಮರವೇರಿ
ಬಗ್ಗಿ ನೋಡಿದಳೆ ಪರಿಸೆಯ ಮೂಕಾಂಬಿ
ಯಾಕೋ ನೆನ ಪರಿಸಿ ಬರಲಿಲ್ಲ ಅನುತ್ಹೇಳಿ
ದುಡ್ಡಿನ ಕಣಜ ಕಿರಿದಾಯ್ತು

ಕೊಲ್ಲೂರು ಮೂಕಾಂಬೆ ಯಾಕಾಗಿ ಮುನಿದಳು
ಹೂವು ಸಾಲೆಂದೇ ಮುನಿದಾಳು ತಾನು
ಹೂವು ಸಾಲೆಂದೇ ಮುನಿದಾಳು ಮೂಕಾಂಬೆ
ಹೂಗ್ ಬಂದು ಹೂಗಿನ ಹೊರಿ ಬಂದು ಕೊಲ್ಲೂರು
ವಡ್ಯಾಣು ಬಾಗಿಲಲೆ ನಿಲುವುದೇ ತಾನು
ಇನ್ನೇಳು ಮೂಕಾಂಬೆ ರಥವೇರು ತಾನು
ಕೊಲ್ಲೂರ ಮೂಕಾಂಬೆ ಯಾಕಾಗಿ ಮುನಿದಾಳು
ಚಿನ್ನ ಸಾಲೆಂದು ಮುನಿದಾಳು ತಾನು
ಚಿನ್ನ ಬಂದು ಚಿನ್ನದ ಹೊರಿ ಬಂದು ತಾನು
ಚಿನ್ನ ಬಂದು ಚಿನ್ನದ ಹೋರಿ ಮೂಕಾಂಬೆ
ವಡ್ಯಾಣು ಬಾಗಿಲಲಿ ನಿಲುವುದು ತಾನು
ವಡ್ಯಾಣು ಬಾಗಿಲಲಿ ನಿಲ್ಲುವುದು ಮೂಕಾಂಬಿ
ಇನ್ನೇಳು ಮೂಕಾಂಬಿ ರಥವೇರು ತಾನು
ಕೊಲ್ಲೂರ ಮೂಕಾಂಬಿ ಯಾಕಾಗಿ ಮುನಿದಾಳು
ಪಟ್ಟೆ ಸಾಲೆಂದು ಮುನಿದಾಳು ತಾನು
ಪಟ್ಟೆ ಸಾಲೆಂದು ಮುನಿದಾಳು ಮೂಕಾಂಬಿ
ಪಟ್ಟಿ ಬಮದು ಪಟ್ಟಿ ಹೋರಿ ಬಂದು ಮೂಕಾಂಬಿ
ವಡ್ಯಾಣು ಬಾಗಿಲಲಿ ನಿಲುವುದು ತಾನು
ವಡ್ಯಾಣು ಬಾಗಿಲಲಿ ನಿಲುವುದು ಮೂಕಾಂಬಿ
ಇನ್ನೇಳು ಮೂಕಾಂಬಿ ರಥವೇರು

ಕೊಲ್ಲೂರ ಮೂಕಾಂಬೆ ವರವ ಕೊಡುವಾಳೆಂದು
ಬಂಜೆಯರ ಘಟ್ಟ ಇಳಿದಾಗ ವೀರಭಧ್ರ
ತಂಗಿ ಮೂಕಾಂಬೆಯ ಕರೆದಾರು ಏನೆಂದೆ
ಬಂಜಿಗಳಿಗ್ವರವ ಕೊಡ ತಂಗಿ
ದುಷ್ಟ ಅಣ್ಣಯ್ಯನೆ ಪಾಪದ ಮಾತಾಡ್ಬ್ಯೇಡ
ಹುಟ್ಟು ಅಣ್ಣಯ್ಯನೆ ಪಾಪದ ಮಾತಾಡ್ಬೇಡ
ಹುಟ್ಟ ಬಂಜಿಗೆ ವರವ ಕೊಡಲಾರೆ
ಮಕ್ಕಳಿವರಿಗಾರು ಕೀರುತಿ ನಮಗಕ್ಕೆ
ಬಂಜೀಯರಿಗರವ  ಕೊಡು ತಂಗಿ
ತೊಟ್ಟಿಲು ಕಾಣಿಕೆಯ ಪಡಕಂಬೆ ಮೂಕಾಂಬೆ
ಹುಟ್ಟು ಬಂಜೆಗೆ ವರವ ಕೊಡ ತಂಗಿ

ಕೊಲ್ಲೂರ ಮೂಕಾಂಬಿ ಶುಕ್ಲ ತೀರ್ಥಕೆ ಹೋಗಿ
ಚಕ್ರು ಸರವೇರಡೇ ಕಳಕೊಟ್ರೂ ಮೂಕಾಂಬೆ
ಕುತ್ರ ಶೋಕದಲಿ ಒರಗೀರು

ಉಪ್ಪುಂದ ಅಮ್ಮನೋರ ತಪ್ಪಲಿಗೆ ಹೋಯ್ಕಿದ್ರೆ
ಸತ್ತೂಗಿ ನೂರು ಜನ ನೂರು ಅಮ್ಮ ನೋರಿಗೆ
ನಿತ್ತಲ್ಲೇ ನೂರು ಇಡುಗಾಯಿ

ದೇವ್ರು ಬರುತ್ತಾರೆಂದು ಕಟ್ಟೆ ಸಾರಿಸಿ ಇಟ್ಟೆ
ಜೋಡು ರಂಗೋಲಿಯ ಬರೆದಿಟ್ಟೆ ಉಪ್ಪುಂದ
ದೇವ್ರು ಗದ್ದುಗಿಯ ಇಳಿಲಿಲ್ಲ.

ತೇರು ಕೊಡಿ ಮೇಲೆ ತೋರೀತು ಸತ್ತುಗಿ
ಊರು ಉಪ್ಪುಂದ ಬಯಲಲ್ಲಿ ಅಮ್ಮ ನೋರು
ಹೊಳೆಯನ ಕೋಗಿ ಬರುವಾರೆ

ತೇರು ಕಟ್ಟುದಕೋ ದೇವರಪ್ಪಣೆಯಾದೋ
ಊಟ ಪಟೇಲರ ಮಗನಿಗೂ ಕಂದಯ್ಯನಿಗೆ
ತೇರು ಕಟ್ಟುದಕು ಕರೆ ಬಂದೋ

ಹರಿದಿದ್ದ ತೇರಿಗೆ ಇಡುವರುಬಾಳಿಯ ಹಣ್ಣು
ವರನ ಚೆಲ್ಲಿದರೆ ದೊರೆಗಳು ಉಪ್ಪುಂದ
ಹರಿದಿದ್ದ ತೇರ ಹರಿ ಎಂದ

ಭೂಮಿಯ ನೆಡ್ಕಂದ ಗೋವಿಂದನ ನೆನಕಂಡ
ಭೂಮಿಗೆ ನೆಲ್ಲ ಬಿಡುವಾನೆ ಏನಂದ ಬಿಡುವಾನೆ
ಒಂದ್ ಅಕ್ಕಿ ನೂರು ಬೆಳಿಲೆಂದು

ಆಯುಷ್ಯ ಕೊಡಿ ಸ್ವಾಮಿ ಆನಂದ ಗುಡ್ಡಾಗೆ
ಸಾವಿರೊಂದು ಸಂಸಾರವೇ ಹೊರುವಳು ಶಂಕರ ತಂದಿ
ಅಯುಸ ಕೊಡಿ ಸ್ವಾಮಿ ತಲೆ ತುಂಬ

ಮಾವಯ್ಯ ನಿನ ಸೊಸಿಗೆ ಏನ್ಹೇರಿಕಿ ಹೊತ್ತಿದೆ
ಬೇವುಡ್ಸಿ ಬೀದಿ ಕಸಗುಡ್ಸಿ ಅಮ್ಮನೋರ
ಬೇಡಿ ನಿನ್ಹರಿಕಿ ಸಲಿಸುವೆ

ಹೊರಿಯ ಹೊತ್ತಿರುವ ಮೇಲೆ ಮನೆಯಾಸಿ ನಮಗಿಲ್ಲ
ಒಡಿಯು ತಿಮ್ಮಪ್ಪನ ತಲೆಗೆಂಟು ಹೊತ್ತಿರುವ ಮೇಲೆ
ತಾಯಿ ನಿನ್ನಾಸಿ ನನಗಿಲ್ಲ

ನಾರಾಯಣ ಸ್ವಾಮಿಗೆ ಏನೆಂಜಲಾದವು
ಹೊಗೆಂಜಲಾದವು ಹುಳುಮುಟ್ಟಿ ಕೈಲಿ
ಹಾಲೆಂಜಲಾದೊ ಕರುಕುಡದು

ತಾರಿಕಿ ಬೆಳಕೀಗೆ ನಾನಕ್ಕಿ ತೊಳಿಸೂವೆ
ಭೂಮಂಡಲ ತಿರಗೂ ಬೆಳಕೀಗೇ ಗುಡ್ಡಮ್ಮಾಡಿ
ತೊಲಾಭಾರಕ್ಕಾಗಿ ಅಕ್ಕಿ ತೊಸೂವೆ

ಹೊನ್ನಳದು ಹೊನ್ನಳದು ಬೆನ್ನೆಲ್ಲ ಬಾಗೀದು
ಹೊನ್ನಿನ ಕಳಸಿ ತಲೆದಿಂಬು ಹ್ಯಾಕಂಡು
ಒಡೆಯ ಗೋವಿಂದೇವ್ರು ಒರಗೀರು

ಮೂಡಾಯಿ ಮೂಡುವ ಸೂರ್ಯ ಮೂರು ಲೋಕದೊಡೆಯ
ಬಾರಯ್ಯ ಜಗವ ಝಗಿಸುತ್ತ ನಾರಿಯರು
ಮೂರುಲೋಕದ ಕದವ ತೆಗಿವಾಗ್ಗೆ

ಬಟ್ಟಂಥ ಕಣ್ಣ ಬಿಟ್ಟಿರೆ ದೇಶದ ಮ್ಯಾಲೆ
ಪಟ್ಟಣ ಸುಟ್ಟು ಗರ್ಕೆದ್ದು ಸೂರ್ಯ ದೇವ್ರೆ
ಮುಚಿಚ ಕಣ್ಣಿ ನಿಮ್ಮ ಕಡಗಣ್ಣ

ತೊಳಸಿ ಕಟ್ಟೆಯ ಮೇಲೆ ನಾಕು ಜಂಗಿನ ಮೇಲೆ
ನಾಕು ರನ್ನದೀವ್ಗಿ ಉರಿದಾವು  ಈ ಮನಿ
ಅಜ್ಜಯ್ಯ ಮಾಡಿದರೆ ಹರಿಸಾಯ

ತನ್ನ ಗಂಡನ ಕೊಂದು ಮನೆಯ ದೀಪವ ಹಚ್ಚಿ
ಕನ್ನಡಿ ಒಳಗೆ ತೆರಿ ಕಟ್ಟಿ ಶಿರಸೀಯ
ಮಾದೇವಿ ಎಂಥ ಜಗತ್ತಿಯೇ

ಮಂಗಳ್ವಾರ ದಿನದಲ್ಲಿ ಅಮ್ಮನವರು ಬಿಡಕಿ ಬಿಟ್ಟು
ರಂಗೋಲಿ ಮುಂದೆ ಕುರಿಕೋಳಿ ಶಿರಸಿ
ಕೋಣನ ಮುಂದೆ ಕುರಿಕೋಳಿ

ಹೆದ್ದಾರಿ ಮೇಲೆ ಕುಂಕುಮ ಚೆಲ್ಲಿದವರಾರು
ರಾಹುತಿ ಬಿದ್ಹೋದು ರಣಬಲಿ ಶಿರಸೀಲಿ
ಕಾಣಿಕೆ ಬಿದ್ಹೋದು ಸ್ಥಳದಲ್ಲಿ

ಬೆನ್ನ ತಿಕ್ಕುವರಿಲ್ಲ ಬೆನ್ನಿಗೆ ಬಿದ್ದವರಿಲ್ಲ
ನೆನತಾಯಿ ಹೆಣ್ಣ ಪಡಿಲಿಲ್ಲ ಶಿರಸಿಯ
ಮಾದೇವಿ ನನ್ನ ಹಿರಿಯಕ್ಕ ಕೊಲ್ಲೂರ

ಮೂಕಾಂಬಿ ನನ್ನ ಕಿರಿಯಕ್ಕ
ಬಾಳಿಯ ಹಣ್ಣು ಬೀಗ  ಮುದ್ರಿಕೆ ಮಾಡಿ
ಹೋಗುವರ ಕೈಲಿ ಕಳಿಸುವೆ ಶಿರಸಿಯ
ತಾಯ್ ದುರ್ಗಮ್ಮನ ಹರಕಿಯ

ಶಿರಸೀಯ ಮಾದೇವಿ ಊರಿಗೆ ಬರುತ್ತೇನೆಂದು
ಕೈಯಲಿ ಕನ್ನಡಿಯ ಕೊನೆ ಹೂಗ ತಕ್ಕಂಡ
ಊರಿಗೂ ತನ ಗಾಳಿ ಕಳುಹೂಳು.

ಹುಟ್ಟಿದ ಮಕ್ಕಳು ಹುಟ್ಟಿದ ಹಂಗೆ ಇದ್ದಾರೆ
ತೊಟ್ಟಿಲ ತೂಗಿಸುವೆ ತಳದಲ್ಲಿ ಅಶುವಂತನ
ಕಟ್ಟಿ ಕಟ್ಟಿಸುವೆ ಬುಡದಲ್ಲಿ

ಮುತ್ತು ರತ್ನವ ಬೇಡಿ ಮೂರು ಬಾಗಿಲಿಗೆ ಬಂದು
ಮುತ್ತಿನ ಕಿರು ಜಡಿಯ ಶಿಶು ಬೇಡಿ ಮೂರ‍್ಗೋಳಿ
ಸುತ್ತ ಬಂದೇ ಏಳು ಪೌಳಿಲೂ

ಕರ್ಕೇರಿ ಮಾಡೀರೋ ಕರಕೇರಿ ಆಳಲ್ಲ
ನನಗು ಈ ಮನಿಯು ನಿಜವಲ್ಲ ಮೂರ‍್ಗೋಳಿ
ನಾ ಬಾಳುವ ಮುನಿಯೇ ಸ್ವರ್ಗವೇ ಬಾಗಿಲ ಮುಂದೆ
ಕೋಲು ಮಲ್ಲಿಗಿನೆ ನೆಡಿಸುವೆ

ನಾರಿ ಬಾಲಮ್ಮಗೆ ನಾಗರಂಚಿನಸಿರಿ
ತಾಮರದ ಚಂಬು ಬಲಗೈಲಿ ಹಿಡಕಂಡ
ನಾಗದೇವ್ರಿಗೂ ತನುವ ಎರಕ್ಹೋಳ

ಶ್ಯಾಮಂತಿ ಹೂಗಿಗೆ ನೂರೆಂಟು ಕುಸುಬುಂಟು
ಸ್ವಾಮಿ ಕುಲದವರೆ ಕಳುಗೀರು ಏನೆಂದೆ ಕುಳಗೀರು
ದೇವಿಕುಲದವಳ ಮುಡಿಗೆಂದು

ಬಾಳಿಯೇ ಬಸವಳಿಯೇ ನೀರಿಲ್ಲ ದುರಿದಾವು
ನಿನ್ಯಾಕೆ ಉರಿವೆ ತುಳಸಮ್ಮ ನಮ್ಮನಿ
ಕಲ್ಲು ಗೋಪುರದ ಕಣನಲ್ಲಿ

ಮಗುವೆ ಮಗಿನ ತೊಟ್ಲ ಹರಕಿ ಗುಡ್ಡ ಮ್ಯಾಡಿ
ಎಳಿಯ ಸಿಂಗರುನೆ ಬಲಗೈಲಿ ಹಿಡ್ಕಂಡ
ಹರಕಿ ನಾಗಮ್ಮಗೆ ಸಲಿಸುವೆ

ಬೇಡುವಳ್ತಿ ಬೇಡೂಳೂ ಬೇಡದಿದ್ದ ವಸ್ತುವ
ದೇವರ ಕೊರಳ ಕರಿಮಣಿ ಬೇಡಿರೆ
ಬೇಡುವಳ್ತಿಯಲ್ಲ ಸಿರಿದೇವಿ

ಕಾರಣವಿಲ್ಲದೆ ಕರಿಯಾಳು ನನ ತಾಯಿ
ಯಾವ ಕಾರಣಕೆ ಕರೆದಾಳು ಕಾಸಾನಾಡಿ
ಕೊಂತಾಳಿ ಕಾಯಿ ಕೊನೆಹೂಗ ತಕ್ಕಂಡು
ಹರಕಿ ಹೈಗುಳಿಗೆ ಸಲಿಸೂಕೆ

ದೆಕ್ಕೆ ದೆಕ್ಕಿಯರ ಚಂದು ದೆಕ್ಕಿ ಮಂಡಲ ಚಂದು
ದಕ್ಕಿಯರಕಿಂತುದೈವ ಚಂದು ಮಾರಣಕಟ್ಟೆ
ಮೇಳದಲಿ ಚಂದು ಸ್ತ್ರೀವ್ಯಾಸು

ಸತ್ತುಗಿ ಹಿಡಿವಾನು ಸತ್ತಾನ ಇದ್ದಾನ
ಇದ್ದಾರು ಸತ್ತುಗಿಯ ಹಿಡಿತಿದ್ದ ಉಪ್ಪುಂದ
ಮಾದೇವಿ ಬಿಸ್ಲಲ್ಲಿ ಹೈಟೀಳ

ತಿರುಪತಿ ಊರಲ್ಲಿ ಗಾಳಿ ಗೂಪುರದಲ್ಲಿ
ಹಾಲ ಹ್ಯೊದು ತೋಳ್ಸ ನಡಿಸುವೆ ಏನೆಂದೆ ನಡಿಸುವೆ
ಗಿಜ್ಜಿಕಾಲ ಮಗನ ಪಡಿಕೆಂದು

ಹೂ ಹೂಗಿನೊಳಗು ಯಾ ಹೂಗೆ ಪರಿಮಳ
ಗಾಳಿ ಮಾಯೆರದೊಳಗೀರು ಸಿಂಗರ ಕೊನಿಯೆ
ಒಡೆದೀರಿನ್ನೆಂಥ ಪರಿಮಳ

ಗಟ್ಟಿದ ಮೇಲಿರುವುದು ಬೆಟ್ಟಕ್ಕೆ ಬೇರ‍್ಹೋಯ್ವುದು
ಗಾಳಿಗೂ ಗರ್ಭೆ ನಿಲುವಾದು ಸಿಂಗರ ಕೊನೆಯ
ಧಾರೀ ಮೂರತಕೂ ಅದು ಮುಂದೆ

ನಿಲ್ಲು ನಿಲ್ಲೆಂದರೆ ನಿಲ್ಲಾಳ ಸರಸತಿ
ಎಲ್ಲವ್ರಕ್ಕಿಂತ ಪತುರತಿ ತಿಂಗಳ ಬೆಳಕ
ಎಲ್ಲಾ ರಂಗಗಳಕೂ ಹೊಳಿವಾಳ

ಪಾದಕೂ ನೀರ್ ಕೊಟ್ಟೀರು ಬ್ಯಾಡಂಬಾ ಪರುಷಾರು
ಯಾವ ಪುಣ್ಯವತಿ ಪಡೆದೀಳು ಶಿವರಾತರಿ ಜಾಗರಣೇ ಕೂತ ಗಳಗೀಲೆ

ಉಂಡಾರೊಂದೂಟವೇ ಮೆಲಿದಾರೊಂದೀಳ್ಯವೇ
ಎದ್ದಾರು ಶಿವರಾತ್ರಿ ಕಳವೀಗೆ ನಾರಾಯಣ ಸ್ವಾಮಿ
ತಂದರೊಂದೂರು ಎಳನುಗ್ಗಿ

ಹತ್ತೂ ಕೊನಿ ಹೂಗ ತೆಕ್ಕೀಲಿಟಕಂಡ
ಮತ್ತೂ ಸಲಂಬುದ್ದ ಮನಿದೈವ ಮರ್ಲಮ್ಮ
ಪಟ್ಟಿ ಬೇಕೆಂದ ನಲದಾಡಿ

ತಾಯಿ ಶಂಕರತಂದಿ ಭೂಮಿ ಹರಿವಳ ದೇವಿ
ವಾಲಾಡು ನನ್ನ ಬಯಲಲ್ಲಿ ಶಂಕರ ತಮದಿ
ಚೆಲ್ಯಾಡು ನನ್ನ ಕಣನಲ್ಲಿ ಶಂಕರತಂದಿ
ರಾಗಿ ಅಂಬುಲಿನೆ ಕುಡಿಲಾರೆ

ಗಂಗಾತಾಯಿ ತಡಿಯಲ್ಲಿ ಉಂಡೆದ್ದರು ಯಾರಮ್ಮ
ತಂಡ ತಂಡದಲಿ  ಎಲಿ ಬಿದ್ದು ನಾರಾಯಣ ಸ್ವಾಮಿ
ಉಂಡೆದ್ದಲ್ ಬಾಳಿ ನವವಾದೋ

ಹಾಲಂತ ಗಂಗಾತಾಯಿ ಹರದೋಡಿ ಬರುವಾಗೆ
ಹಾಲೆದೇ ಜನರು ಮಗಿದಾರೆ ಗಂಗಾತಾಯಿ
ನೀರು ಸಾದನವೇ ಕಲುವಾಳೆ