I

‘ಶೈಲಿ’ ಎಂದರೆ ಬರಹಗಾರರ ಅಭಿವ್ಯಕ್ತಿಯ ವೈಲಕ್ಷಣವಾಗಿದೆ. ಬರಹಗಾರರ ಯಶಸ್ಸಿಗೆ ಅವರ ಅಭಿವ್ಯಕ್ತಿಯ ವಿಧಾನವು ಮಹತ್ವದ ಪಾತ್ರವಹಿಸುತ್ತದೆ. ಗದ್ಯಶೈಲಿಯು ಪದ್ಯವನ್ನು ಬಿಟ್ಟು ಉಳಿದ ಸಾಹಿತ್ಯ ಪ್ರಕಾರಗಳಾದ ಕತೆ, ಕಾದಂಬರಿ, ನಾಟಕ, ಲಲಿತ ಪ್ರಬಂಧ ಹಾಗೂ ಸೃಜನೇತರ ಸಾಹಿತ್ಯಗಳಲ್ಲಿಯ ನಿರೂಪಣೆಗೆ ಸಂಬಂಧಿಸಿರುತ್ತದೆ. ಶಂಬಾ ಅವರು ತಮ್ಮ ಅಭಿವ್ಯಕ್ತಿಗೆ ಸೃಜನೇತರ ಸಾಹಿತ್ಯ ಪ್ರಕಾರವನ್ನು ಆರಿಸಿಕೊಂಡಿರುವುದರಿಂದ ಅವರ ಶೈಲಿಯ ಸಾಧನೆಯು ಗದ್ಯದಲ್ಲಿಯೇ ಇದೆಯೆಂಬುದು ಸ್ಪಷ್ಟವಾಗುತ್ತದೆ. ಅವರ ಗದ್ಯಶೈಲಿಯ ಸ್ವರೂಪವನ್ನು ಈ ಅಧ್ಯಾಯದಲ್ಲಿ ವಿವೇಚಿಸಲಾಗಿದೆ.

ಗದ್ಯರಚನೆ ಲೇಖಕನ ಪ್ರತಿಭೆಯನ್ನು ಪರೀಕ್ಷೀಸಬಹುದಾದ ಒರೆಗಲ್ಲೆಂಬ ಮಾತು ಎಷ್ಟು ಪ್ರಾಚೀನವೋ ಅಷ್ಟೇ ನೂತನವೂ ಆಹುದು. ಚಮತ್ಕಾರಯುತವಾದ ಪದಪ್ರಯೋಗ, ಲವಲವಿಕೆಯಿಂದ ಕೂಡಿದ ವಾಕ್ಯರಚನೆ, ಆಡುಮಾತಿಗೆ ಹತ್ತಿರವಾದ ನಿರಾಧಾರಣವಾದ, ಗದ್ಯ ಆಕರ್ಷಣೀಯವಾಗಬೇಕಾದರೆ ಲೇಖಕ ತನ್ನ ಶಕ್ತಿ ಸಾಮರ್ಥ್ಯಗಳನ್ನೆಲ್ಲ ಅದರ ಶ್ರೇಯಸ್ಸಿಗಾಗಿ ಸಮರ್ಪಿಸಬೇಕಾಗುತ್ತದೆ. ಪ್ರಾಚೀನ ಅಲಂಕಾರಿಕರು ಕಾವ್ಯವನ್ನು ಮೂರು ವಿಭಾಗಗಳನ್ನಾಗಿ ವಿಂಗಡಿಸಿ ಗದ್ಯವೂ ಕಾವ್ಯ ಪ್ರಕಾರಗಳಲ್ಲೊಂದೆಂದು ನಿಗದಿಸುತ್ತಾರೆ. ಅವರ ದೃಷ್ಟಿಯಲ್ಲಿ ಪದ್ಯ, ಗದ್ಯಗಳ ನಡುವಣ ಅಂತರ ಬಾಹ್ಯರೂಪಕ್ಕೆ ಸಂಬಂಧಿಸಿದ್ದೇ ಹೊರತು ಆಂತರಿಕ ಗುಣಕ್ಕೆ ಅನ್ವಯವಾಗುವಂತಹುದಲ್ಲ.

ಪದ್ಯದಲ್ಲಿ ನಿಯತಲಯವಿದ್ದರೆ, ಗದ್ಯದಲ್ಲಿ ಅನಿಯತಲಯವಿರುತ್ತದೆ. ಭಾವರ್ಥಾನು ಗುಣವಾದ ಅನಿಯತಲಯದಲ್ಲಿಯೂ ವಿಶೇಷ ಸ್ವಾರಸ್ಯವಿದೆಯೆಂಬುದನ್ನು ಅಲ್ಲಗಳೆಯುವಂತಿಲ್ಲ. ಸ್ವಚ್ಛಂದ ಕಲ್ಪನಾ ವಿಲಾಸಕ್ಕೆ ಮತ್ತು ಸ್ಪಷ್ಟ ಅಭಿವ್ಯಕ್ತಿಗೆ ಗದ್ಯ ಅತ್ಯುತ್ತಮ ಸಾಧನವಾದುದರಿಂದ ಸಂಸ್ಕೃತದ ಪ್ರಾಚೀನ ಕವಿಗಳು ಅದನ್ನು ಯಶಸ್ವಿಯಾಗಿ ಬಳಸಿಕೊಂಡು ಕಾವ್ಯದ ಮಟ್ಟಕ್ಕೇರಿಸಿದರು. ‘ಪದ್ಯಂವಧ್ಯಂ ಗದ್ಯಹೃದ್ಯಂ’ ಎನ್ನುವಷ್ಟರ ಮಟ್ಟಿಗೆ ಕೆಲವರು ಗದ್ಯವನ್ನು ಪ್ರಶಂಸಿಸಿದ್ದುಂಟು. ಗದ್ಯ ಕವಿಗಳಾದ ಸುಬಂಧು, ದಂಡಿ, ಬಾಣರಿಂದ ಕನ್ನಡ ಚಂಪೂ ಕವಿಗಳು ಪ್ರಭಾವಿತರಾದರೆಂಬುದು ಪ್ರಸ್ತುತದಲ್ಲಿ ಗಣನೀಯವಾದ ಸಂಗತಿ. ಛಂದಸ್ಸಿಗೆ ಆಧಾರಭೂತವಾದ ಧಾಟಿಯೆಂಬ ಒಂದು ಹ್ರಸ್ವದೀರ್ಘಾನುಕ್ರಮವು ಒಳ್ಳೆಯ ಗದ್ಯದಲ್ಲಿಯೂ ಕಾಣುತ್ತದೆ. ಜಾಗರೂಕತೆಯಿಂದ ಕಟ್ಟಿದ ವಾಕ್ಯಗಳು ಒಂದು ಪದ ಮೈತ್ರಿ, ಒಂದು ಲಯಭಂಗಿ ಇವುಗಳಿಂದಾಗಿ ಗದ್ಯ ಸುಂದರವಾಗಿರುತ್ತದೆ.

ಗದ್ಯದಲ್ಲಿ ಭಾವಕ್ಕಿಂತ ಭಾವನೆಗೆ, ಕಲ್ಪನೆಗಿಂತ ಆಲೋಚನೆಗೆ ಮಹತ್ವವಿರುತ್ತದೆ. ಭಾಷೆಯ ಗತಿ ಸಹಜವಾಗಿ, ಸಾಂದ್ರೀಕರಣಕ್ಕಿಂತ ವಿಕೀರ್ಣತೆಯ ಕಡೆಗೆ ಸಾಗುತ್ತದೆ. ಗದ್ಯಕಾರ ಹೇಳುವ ವಿಷಯ ವಿಲಂಬವಿಲ್ಲದೆ ಅಡಚನೆಯಿಲ್ಲದೆ ನೇರವಾಗಿ, ಸ್ಪಷ್ಟವಾಗಿ ವಾಚಕನ ಮನವನ್ನು ಮುಟ್ಟುವಂತಿರಬೇಕು. ಆದ್ದರಿಂದ ನಿಗೂಢತೆಗಾಗಲಿ, ಸಾಕೇತಿಕತೆಗಾಗಲಿ ಗದ್ಯಭಾಷೆಯಲ್ಲಿ ಸ್ಥಾನವಿಲ್ಲ. ತಾರ್ಕಿಕತೆಗೆ, ವಾದ ವಿವಾದಗಳಿಗೆ ಗದ್ಯ ಸಮರ್ಥ ಮಾಧ್ಯಮವಾಗುತ್ತದೆ. ಗದ್ಯಕ್ರಿಯೆಯಲ್ಲಿ ಪದಗಳಿಗೆ ನವಚೈತನ್ಯ ಸ್ಪುರಿಸುತ್ತದೆ, ಹೊಸ ಕಸುವು ದೊರೆಕೊಳ್ಳುತ್ತದೆ. ಕವಿಗಳಿಗೆ ಮಾತ್ರವಲ್ಲ, ಗದ್ಯಕಾರನ ಪ್ರತಿಭೆಯಲ್ಲಿ ಪ್ರಾಚೀನ ಪದಗಳು ನವಜನ್ಮ ಪಡೆಯುತ್ತವೆ, ಗ್ರಾಮ್ಯಪದಗಳು ಆ ಸಂಸ್ಕಾರದಿಂದ ಅಭಿಜಾತ ಪದವಿಗೆ ಸೇರುತ್ತವೆ. ಆ ಮೂಲಕ ಗದ್ಯಕಾರನಲ್ಲಿ ಮಣ್ಣಿನ ವಾಸನೆ ಆಡುತ್ತಿರಬೇಕು.

II

ಈ ಹಿನ್ನೆಲೆಯಲ್ಲಿ ಶಂಬಾ ಅವರ ಗದ್ಯಶೈಲಿಯ ವೈಲಕ್ಷಣವನ್ನು ಗಮನಿಸಬೇಕು. ಸಾಮಾನ್ಯವಾಗಿ ನಾವು ವ್ಯವಹಾರದಲ್ಲಿ ಬಳಸುವುದು ವಾಕ್ಯಗಳನ್ನೇ ಹೊರತು ಬರಿಯ ಬಿಡಿ ಪದಗಳನ್ನಲ್ಲ. ಈ ಪದಗಳು ವಾಕ್ಯದಲ್ಲಿ ಜೋಡಣೆಗೊಂಡಾಗ ಅವು ಪರಸ್ಪರ ಪ್ರಭಾವಕ್ಕೊಳಗಾಗುತ್ತವೆ, ಅವುಗಳ ನಡುವೆ ಸಂಬಂಧವೇರ್ಪಟ್ಟು, ಅದರ ಪರಿಣಾಮವಾಗಿ ಅಂದರೆ ಪರಸ್ಪರಾನ್ವಯದಿಂದ ಅರ್ಥಾಭಿವ್ಯಕ್ತಿವೊದಗುತ್ತದೆ. ಈ ಸಾಂಸರ್ಗಿಕ ವ್ಯಾಪಾರವನ್ನು ತಾತ್ಪರ್ಯವೃತ್ತಿಯೆಂದು ಹೆಸರಿಸುತ್ತಾರೆ. ವಾಕ್ಯಾರ್ಥ ಸಹ ಅಭಿಧಾವೃತ್ತಿಯಿಂದಲೇ ಹೊಮ್ಮುತ್ತದೆನ್ನುವವರು ಉಂಟು. ಶಂಬಾ ಅವರ ಗದ್ಯಭಾಷೆಯ ವ್ಯಾಸಂಗವನ್ನು ವಿಶೇಷ ಅವಧಾನದಿಂದ ನೋಡಬೇಕಾಗುತ್ತದೆ. ಅಗುಳು ಹಿಸುಕಿ ಅನ್ನದ ಪಕ್ವತೆಯನ್ನು ಪರೀಕ್ಷೀಸಬಹುದೆಂಬ ಗಾದೆ ಶಂಬಾ ಅವರ ಅಧ್ಯಯನಕ್ಕೆ ಅನ್ವಯವಾಗುವುದಿಲ್ಲ. ಅವರಲ್ಲಿ ವ್ಯಾಖ್ಯಾನ, ವಿಶ್ಲೇಷಣೆ ತುಂಬ ತರ್ಕಬದ್ಧವಾಗಿರುತ್ತದೆ.

. ಪ್ರಾಥಮಿಕ ಮಟ್ಟದಲ್ಲಿ ಬಂದ ಹೆಸರುಗಳಲ್ಲಿರುವ ಸಹಜತೆಯು ಮುಂದಿನ ಪಾಡಿನಲ್ಲಿ ಉಳಿಯುವುದು ಸಾಧ್ಯವಿಲ್ಲ. ಮಾನವನಲ್ಲಿ ಪುನರಾಲೋಚನೆ ವಿಮರ್ಶನಾಶಕ್ತಿಯು ತಲೆದೋರಿದಂತೆ, ವ್ಯಾಪಾರ ವ್ಯವಹಾರ, ರಾಜ್ಯತಂತ್ರ, ಧರ್ಮ ಮೊದಲಾದವುಗಳಿಗೆ ಜೀವನದಲ್ಲಿ ಮಹತ್ತ್ವವು ಬಂದಂತೆ ಮಾನವನ ಮೊದಲಿನ ಸಹಜವೃತ್ತಿಯ ಬದುಕಿನಲ್ಲಿ ವಿಚಾರ, ಆಲೋಚನೆಗಳು ಹೆಚ್ಚಿನ ಸ್ಥಾನವನ್ನು ಆಕ್ರಮಿಸಿದವು. ಎಡೆಗಳಿಗೆ ಬಂದ ಹೆಸರುಗಳಲ್ಲಿಯೂ ಇದರ ಪರಿಣಾಮವು ಕಾಣಿಸಿಕೊಳ್ಳದೆ ಇಲ್ಲ. ನೆಲದ ಗುಣ, ಬಣ್ಣ ಮೊದಲಾದವುಗಳ ನಿರೀಕ್ಷಣ, ವಿಮರ್ಶೆಯನ್ನು ಸೂಚಿಸುವ ಹೆಸರುಗಳು ಮುಂದಿನ ಮಟ್ಟದುವು ಆಗಿವೆ. ಸಹಜ ವೃತ್ತಿಯಿಂದ ವಿಚಾರಪರತೆಯ ಕಡೆಗೆ ಒಲಿದ ಹಾಗೆಲ್ಲ ಮುಂದಿನ ಕಾಲದಲ್ಲಿ ತಲೆಯೆತ್ತಿದ ಹೆಸರುಗಳಿವು. ಇತಿಹಾಸ, ಪುರಾಣಾದಿಗಳ ನೆನಹನ್ನು ಕೊಡುವಂತಹವೂ ಇದೇ ಬಗೆಯಾಗಿವೆ. ಲೋಕದಲ್ಲಿ ಎಲ್ಲೆಡೆಗಳಲ್ಲಿ ಅವುಗಳಿಗೆ ಹೆಸರು ದೊರೆಕೊಂಡುದು ಇದೇ ತೆರನಾಗಿ.

. ಎಲ್ಲ ಭಾಗದವರೂ ಒಂದೆಡೆಗೆ ಕಲ್ತು ಇಟ್ಟ ಹೆಸರುಗಳಲ್ಲವಾದರೂ ಅವುಗಳಲ್ಲಿರುವ ಹೋಲಿಕೆಯು ಕೌತುಕಾಸ್ಪದವಾಗಿವೆ. ಕೆಲವೊಂದು ಸ್ವಲ್ಪ ವೈಶಿಷ್ಟ್ಯವು ಒಂದೊಂದು ಭಾಗದಲ್ಲಿದ್ದುದು ಬೇರೆ ಮಾತು. ಆದರೆ ಒಟ್ಟಿನಲ್ಲಿ ರೀತಿಯು ಒಂದೇ ಬಗೆಯದಾಗಿದ್ದುದು ಸೋಜಿಗದ ಸಂಗತಿ. ಇಲ್ಲಿಯ ವರ್ಗೀಕರಣದಲ್ಲಿ ಒಳಗೊಳ್ಳದೆ ಉಳಿದಿರುವ ಊರುಗಳ ಸಂಖ್ಯೆ ಅಸಂಖ್ಯವಾಗಿದೆ. ಇನ್ನೂ ಪರಿಶ್ರಮಪಟ್ಟು ಅವುಗಳಲ್ಲಿರುವ ಒಂದು ಕಟ್ಟನ್ನು ಕಂಡುಕೊಳ್ಳಬಹುದಾಗಿದೆ. ಒಂದೊಂದು ಗುಂಪಿನಲ್ಲಿರುವ ಹೆಸರುಗಳೆಲ್ಲ ಒಂದೇ ಕಾಲಕ್ಕೇ ಮುಂದೆ ಬಂದುವೆಂದು ಭಾವಿಸಲಾಗದು. ಅವುಗಳಲ್ಲಿ ಎಷ್ಟೋ ಶತಮಾನಗಳ ಅಂತರವು ಇರಲಿಕ್ಕೆ ಸಾಕು. ಆದರೂ ಅವು ಒಂದು ಪರಂಪರೆಯು ಹೇಗೆ ಅವಿಚ್ಛಿನ್ನವಾಗಿ ನಡೆದು ಬಂದಿತೆಂಬುದನ್ನು ಸೂಚಿಸುತ್ತವೆ.

. ನಿಶ್ಚಿತ ಆಧಾರಗಳು ದೊರೆಯುವುದು ಸಾಧ್ಯವಿಲ್ಲದ್ದರಿಂದ ವರ್ಗೀಕರಣದಲ್ಲಿ ಕೆಲವೊಂದು ತಪ್ಪುಗಳು ಆಗಿದ್ದುದನ್ನು ಒಪ್ಪಲೇಬೇಕು. ಪ್ರಾಣಿಗಳಿಂದ ಬಂದ ಹೆಸರುಗಳಲ್ಲಿ ‘ನಾಗ ರಿಂದ ಬಂದವುಗಳನ್ನು ಹಾವಿನ ಹೆಸರಿನ ಗುಂಪಿನಲ್ಲಿ ಸೇರಿಸಿಲ್ಲ. ಏಕೆಂದರೆ ‘ನಾಗರು ಎಂಬ ಒಂದು ಜನವು ನಾಡಿನಲ್ಲಿ ಒಂದು ಕಾಲಕ್ಕೆ ನೆಲಸಿದ್ದಿತು. ‘ನಾಗನೂರು ಮೊದಲಾದುವು ಬಗೆಯವು, ಹಾವಿನಿಂದ ಬಂದುವಲ್ಲವೆಂದು ನನ್ನ ಗ್ರಹಿಕೆ. ಆದರೆ, ಕೆಲವೆಡೆಗೆ ಪ್ರೌಢ ಗಂಭೀರ ಹೆಸರೆಂದು ಭಾವಿಸಿದ್ದಲ್ಲಿ, ಹಾವಿಗೆ ನಾಗವೆಂದು ಹೇಳಿ ಒಂದು ಹಾವನೂರು > ನಾಗನೂರಾಗಿದ್ದರೂ ಇರಬಹುದು. ಅಥವಾ ಹಾವಿನ ವಿಶಿಷ್ಟ ಜಾತಿಯನ್ನು ನಾಗವನ್ನು ನೆನೆದು ಹೆಸರು ಕೆಲವೆಡೆಗೆ ಬಂದಿದ್ದರೂ ಬಂದಿರಬಹುದು.

(ಎಡೆಗಳು ಹೇಳುವ ಕಂನಾಡು ಕತೆ, ಪು. ೧೨೬-೧೨೭ ಸಂಬಾ ಕೃತಿ ಸಂಪುಟ ೨.)

ಮೊದಲ ಅವತರಣಿಕೆಯಲ್ಲಿ ತ್ವರಿತವಾಗಿ ಅರ್ಥಗ್ರಹಿಕೆಗೆ ಅನುಕೂಲವಾಗುವಂತೆ ಅಚ್ಚಗನ್ನಡದ ತುಂಡು ತುಂಡು ಮಾತುಗಳು ಬರುತ್ತವೆ. ಸಂಸ್ಕೃತ ಅಥವಾ ಅನ್ಯಭಾಷೆಯ ಪದಗಳು ಎರಡು – ಮೂರಿದ್ದರೆ ಹೆಚ್ಚು. ಎರಡು – ಮೂರನೆಯ ಉದಾಹರಣೆಯಲ್ಲಿ ದೀರ್ಘಸ್ವರ, ಅನುಸ್ವಾರಗಳ ವಿನ್ಯಾಸವೂ, ಲಯದ ಲಾವಣ್ಯವೂ, ಪದಗಳ ಪುನರಾವರ್ತನೆವೂ, ಸಂಸ್ಕೃತ ಪದಪ್ರಯೋಗವೂ ಸ್ಥಳನಾಮಗಳ ಸ್ವರೂಪದ ಕಲ್ಪನೆಯು ಸುಂದರವಾಗಿ ಪ್ರಕಟಿಸುತ್ತವೆ. ಅಂತೆಯೇ ಈ ಕೃತಿಯಲ್ಲಿ ಬರುವ ಸ್ಥಳನಾಮಗಳು, ಆಡುಮಾತುಗಳು, ಪಡೆನುಡಿಗಳು ಭಾಷೆಯ ಬಿಗುವನ್ನೂ ಜೀವಂತಿಕೆಯನ್ನು ಪುಟಗೊಳಿಸಿ ಅದರ ವಾಸ್ತವತೆಯನ್ನು ಮೆರೆಸುತ್ತವೆ. ಯುಕ್ತ ಪದಗಳ ಆಯ್ಕೆಗೆ ಶಂಬಾ ಅವರ ಸ್ವೋಪಜ್ಞತೆ ಮತ್ತು ಸಂವೇದನೆಗಳು ಕಾರಣವೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆದರೆ ಈ ವಿವರಣೆ ಈ ಮೂರು ಉದ್ದರಣೆಗಳಿಗೆ ಮಾತ್ರ ಸೀಮಿತಗೊಂಡಿದೆಯೆಂಬುದನ್ನು ಮರೆಯಲಾಗದು. ಅನ್ಯಭಾಷೆಯ ಪದಗಳನ್ನು ಬಳಸುವಾಗ ಶಂಬಾ ಅವರು ತುಂಬ ಎಚ್ಚರವಹಿಸುತ್ತಾರೆ. ಕನ್ನಡ ಭಾಷೆಯ ಜಾಯಮಾನಕ್ಕೆ ಭಂಗ ಬರದಂತೆ, ಕಿವಿಗೆ ಕರ್ಕಶವಾಗದಂತೆ ಅಕ್ಕಪಕ್ಕದ ಕನ್ನಡ ಪದಗಳ ಧ್ವನಿ ಸಮುದಾಯದೊಡನೆ ಮಿಳಿತಗೊಳ್ಳುವಂತೆ ಅನ್ಯಭಾಷೆಯ ಶಬ್ದಗಳನ್ನು ಪವಣಿಸಿದ್ದಾರೆ. ಕನ್ನಡ ನಾಡು ನುಡಿಯ ಬಗೆಗೆ ಬರೆಯುವಾಗ ಭಾವಾಲೋಚನೆಗೆ ತಕ್ಕಂತೆ ಪದಗಳ ಮಾಧುರ್ಯ ಗಾಂಭೀರ್ಯಗಳು ಧ್ವನಿಶಕ್ತಿಯಿಂದ ಫಲಿಸುತ್ತವೆ.

ಕಂನಾಡತಾಯ ಮಕ್ಕಳು ಈವರೆಗೆ ತಮ್ಮ ತಾಯನ್ನು ಮರೆತರು. ಕಂನಾಡಿನಲ್ಲಿ ಹುಟ್ಟಿ, ಕಂನಾಡ ಅನ್ನದಿಂದ ಬೆಳೆದರೂ ಭಾಷೆಗೆ ಕೃತಜ್ಞರಾಗಲಿಲ್ಲ. ಪರಭಾಷೆಗೆ ಒಲಿದು ಅದನ್ನೇ ತಮ್ಮದನ್ನಾಗಿ ಮಾಡಿಕೊಂಡು ಅದಕ್ಕೆ ಪ್ರೋತ್ಸಾಹವನ್ನೀವ ಕೆಲಸವು ದೇಶದಲ್ಲಿ ಬಹುಕಾಲದಿಂದ ನಡೆಯುತ್ತ ಬಂದಿತು. ಕರ್ಣಾಟ ರಮಾರಮಣ, ಕರ್ಣಾಟ ಸಿಂಹಾಸನಾಧೀಶನಾದವಿಜಯನಗರದ ಕೃಷ್ಣರಾಜನು ತೆಲುಗಿನ ಭಕ್ತ ! ಕಂನಾಡಿನ ಕೊನೆಯ ಸಾಮ್ರಾಜ್ಯದ ಕೊನೆಯ ಮಹಾರಾಜನವರೆಗೂ ಇದೇ ಹಾಡು !

ಅವಸ್ಥೆಯಲ್ಲಿಯೂ ಕಂನುಡಿಯು ಬದುಕಿಕೊಂಡು ಬಾಳಿತು, ಇದೇ ಸೋಜಿಗ ! ನಾಡಿನ ಕೀಳ್ಮೆ ಹಿರಿಮೆಗಳ ಪರಿಣಾಮವು ನುಡಿಯ ಮೇಲೂ ಆಗುತ್ತಿರುತ್ತದೆ. ಮೂಲತಃ ಹಿರಿದಾದ ಅರ್ಥಶಕ್ತಿಯಿರುವ ಕಂನುಡಿಯ ದೆಸೆಯ ಕಾಲದಲ್ಲಿ ಅದರ ಅರ್ಥಶಕ್ತಿಯೂ ಬಡವಾಯಿತು. ತೀರ ಕೆಳಗಿನ ಮಟ್ಟಕ್ಕೆ ಇಳಿಯಿತು. ಹಿರಿದಾದ ಅರ್ಥದಲ್ಲಿ ಪರಭಾಷೆಯ ಪದಗಳು ಮುಂದೆ ಬಂದುವು. ಸಂಕುಚಿತಾರ್ಥ, ಅಪಾರ್ಥದಲ್ಲಿ ಕಂನುಡಿಯ ಮಾತುಗಳು ವ್ಯವಹರಿಸಲಾರಂಭಿಸಿದುವು. ಪಟ್ಟಿ, ಪಾಡಿಗಳೆಂಬ ನಮ್ಮ ಊರ ಮತ್ತು ಜನಗಳ ಹೆಸರನು ಕೂಡ ಹೊಸಗನ್ನಡದಲ್ಲಿ
ಹೇಳಬೇಕಾದರೆ
ನಾಚಿಕೆ, ಕೀಳಭಾವವು ಬಂದಿತು !

ನಾಡಿನ ಜನಗಳಿಗೆ ತಮ್ಮ ನಾಡುನುಡಿಯಲ್ಲಿ ಹೆಮ್ಮೆಹಿಗ್ಗುಗಳು ಕಡಿಮೆಯಾಗುವುದು ನಾಡಿನ ಅಧೋಗತಿಯ ಪೂರ್ವಸಿದ್ಧತೆ. ಇದು ಕಂನಾಡ ಮೊದಲಿಗರಲ್ಲಿ ಎಂದಿನಿಂದಲೇ ನಡೆದುಹೋಗಿತ್ತು. ದೇವಭಾಷೆ, ಧರ್ಮಭಾಷೆ, ರಾಜಭಾಷೆ ಎಂದು ಮುಂತಾಗಿ ಕಂನುಡಿಯಲ್ಲದ ಮಾತಿಗೇ, ಕಾಲಕಾಲಕ್ಕೇ ಮಹತ್ವವು ಬಂದಿತು, ಬಂದಿದೆ. ಕಂನುಡಿಗೆ ಗೌಣಸ್ಥಾನ ದಲ್ಲಿಯೇ ಇರಬೇಕಾಯಿತು. ಅದರ ಫಲವೇ ನಮ್ಮ ಇಂದಿನ ಗೌಣಸ್ಥಿತಿ.

(ಎಡೆಗಳು ಹೇಳುವ ಕಂನಾಡು ಕತೆ, ಪು. ೨೪೪-೨೪೫ ಸಂಬಾ ಕೃತಿ ಸಂಪುಟ ೨)

ಇದರಲ್ಲಿ ನಾಡು – ನುಡಿಯ ಚಿಂತನೆಯ ಬಗ್ಗೆ ಕಳಕಳಿ ಇದೆ, ಗಾಂಭೀರ್ಯವೂ ಇದೆ. ಆ ಅವತರಣಿಕೆಯಲ್ಲಿ ಜಡಸ್ವರೂಪದ ನಿದ್ರಾಮುದ್ರಿತ ಕನ್ನಡಿಗರನ್ನು ಜಾಗೃತಗೊಳಿಸಿ, ರೇಗಿಸಿ, ಕೆರಳಿಸಿ, ಚೈತನ್ಯಗೊಳಿಸಿ, ಕಾರ್ಯೋನ್ಮುಖರನ್ನಾಗಿ ಮಾಡುವ ವಾಕ್ಯ ನಮೂಹಗಳಿವೆ. ಶಂಬಾ ಅವರು ಹೇಳಬೇಕಾದುದನ್ನು ನೇರವಾಗಿ, ಸರಳವಾಗಿ ಹೇಳುತ್ತಾರೆ. ಜೀವಂತ ಸಂಸ್ಕೃತಿಯ ಲಕ್ಷಣ ಪ್ರಗತಿಪರ ಆಲೋಚನೆಯಾದ್ದರಿಂದ ಶಂಬಾ ಯಾವಾಗಲೂ ಆ ಚಿಂತನೆ ಕಡೆಗೆ ಮುಖ ಮಾಡಿರುತ್ತಾರೆ. ಉತ್ತಮ ಲೇಖಕನ ಶಬ್ದಪ್ರಜ್ಞೆ ಮತ್ತು ಪದ ನಿರ್ಮಾಣ ಸಾಮರ್ಥ್ಯವೆಷ್ಟು ಪರಿಪಕ್ವವೋ ಅವನ ಪದಕೋಶವು ಅಷ್ಟೇ ಸಮೃದ್ಧವಾದುದಾಗಿರುತ್ತದೆ. ಇದಕ್ಕೆ ಶಂಬಾ ಹೊರತಲ್ಲ. ಅವರ ಕೃತಿಗಳನ್ನು ಕೈಗೆತ್ತಿಕೊಂಡರೆ ಅಲ್ಲಿಯ ಭಾಷೆಯ ವ್ಯವಹಾರದ ಭಾಷೆಗಿಂತ ಭಿನ್ನವಾಗಿರುತ್ತದೆ, ಭಾವತೀವ್ರತೆ, ಅನುಭವ ಸಾಂದ್ರತೆ, ಸಾಹಿತ್ಯ ರಚನೆಗೆ ಪ್ರೇರಣೆಯೊದಗುತ್ತದೆ. ಉದ್ದಿಷ್ಟ ಕಾರ್ಯದಲ್ಲಿ ಲೇಖಕ ಪ್ರವೃತ್ತನಾದಾಗ ಉಕ್ತಿಸಾಮಾನ್ಯ ಮಟ್ಟದಿಂದ ಮೇಲೆರುತ್ತದೆ, ವಿಶೇಷ ರೂಪ ಪಡೆಯುತ್ತದೆ. ಆಗ ಶಬ್ದರ್ಥಗಳಿಗೆ ವೈಚಿತ್ರ್ಯ ಸಂಪ್ರಾಪ್ತವಾಗುತ್ತದೆ. ಇದೇ ಸಾಹಿತ್ಯ ಸೌಂದರ್ಯದ ಲಕ್ಷಣ. ಪ್ರಾಸ, ಉಪಮೆ, ರೂಪಕಾದಿ ಈ ಶಬ್ದಾರ್ಥ ವೈಚಿತ್ರ್ಯಗಳನ್ನು ಅಲಂಕಾರವೆಂಬ ಹೆಸರಿನಿಂದ ಕರೆಯುತ್ತಾರೆ, ಸಾಹಿತ್ಯ ಸೌಂದರ್ಯಕ್ಕೂ ಈ ಪದವೇ ಅನ್ವಯವಾಗುತ್ತದೆ. ಶಂಬಾ ಅವರ ಭಾಷೆ ಕೆಲವು ಕಡೆ ಅಲಂಕಾರಿಕವಾಗಿ ಓದುಗರಿಗೆ ಅಪ್ಯಾಯಮಾನವಾಗುತ್ತದೆ.

ಮನೆಕಟ್ಟಬೇಕೆನ್ನುವವರು ಅದನ್ನು ಕಟ್ಟತಕ್ಕ ನೆಲದಲ್ಲಿ ಪೊಳ್ಳು – ಗಟ್ಟಿಗಳು ಎಲ್ಲೆಲ್ಲಿವೆಯೆಂಬುದನ್ನು ಚೆನ್ನಾಗಿ ಅರಿತವರಾಗಿರಬೇಕು. ಡೊಗರಿದ್ದಲ್ಲಿ ಅದನ್ನು ಅಗಿದುನೋಡಿ ತುಂಬಿಕೊಳ್ಳದೆ ಕಟ್ಟಿದ ಗೋಡೆಗಳು ಕುಸಿದ, ಕಟ್ಟಡವು ನೆಲಕ್ಕುರುಳುವುದು ಖಂಡಿತ. ಮನೆಯಂತೆ ನಾಡು ಕಟ್ಟುವ ವಿಷಯದಲ್ಲಿಯೂ ಮಾತು ಅಕ್ಷರಶಃ ನಿಜವಾಗಿದೆ. ಆದುದರಿಂದಲೇ ಕನ್ನಡದ ನೆಲೆಯನ್ನು ಅರಿದವರಿಂದ ನಾಡನ್ನು ಕಟ್ಟಲಿಕ್ಕಾಗಲಾರದೆಂದು ಹೇಳಬಹುದಾಗಿದೆ. ಕನ್ನಡದ ಐತಿಹ್ಯವನ್ನು ಅರಿತುಕೊಳ್ಳದೆ ನಡೆದ ನಾಡಿನ ಏಳಿಗೆಯ ಪ್ರಯತ್ನಗಳು ವಿಶೇಷ ಫಲಕಾರಿಯಾಗಲಾರವು. ನದಿಯ ಉಪಮೆಯಿಂದ ಮಾತು ಇನ್ನೂ ಸ್ಪಷ್ಟವಾಗಬಹುದು. ಕರ್ಣಾಟಕ ನದೀಪ್ರವಾಹವು ಯಾವ ಯಾವ ದಿಕ್ಕಿನಿಂದ ಹೇಗೆ ಹರಿದುಬಂದಿದೆ? ಇದರ ಗತಿಯ ರೀತಿ ಯಾವುದು? ಆಳವೆಷ್ಟು? ಪ್ರವಾಹದ ವೇಗವೇನು? ಇದಕ್ಕೆ ಬಂದು ಸೇರಿದ ನದಿ, ಉಪನದಿಗಳಾವುವು? ಎಂಬಿವೆ ಮೊದಲಾದ ಸಂಗತಿಗಳ ಸ್ಪಷ್ಟಜ್ಞಾನ ವಿಲ್ಲದೆ ಎಲ್ಲಿ ಆಣೆಕಟ್ಟು ಕಟ್ಟಿದರೆ ಜನಶಕ್ತಿಯ ನೀರನ್ನು ಸರಿಯಾಗಿ ತಿರುಗಿಸಿಕೊಂಡು ನಾಡಿನ ಬೆಳವಣಿಗೆಯ ಹೆಚ್ಚು ಹೆಚ್ಚಿನ ಕೆಲಸಗಳನ್ನು ಕೈಕೊಳ್ಳಲಿಕ್ಕಾದೀತು ಎಂಬುದು ಗೊತ್ತಾಗಲಾರದು. ನಾಡಿನ ನೆಲೆಯನ್ನರಿಯದೆ ಮಾಡಿದ ದೇಶೋದ್ಧಾರದ ಪರಿಶ್ರಮಗಳು ಅಷ್ಟು ಯಶಸ್ವಿಯಾಗ ಲಾರವೆಂಬುದು ನಿಶ್ಚಿತ. ಆದಕಾರಣ, ದೇಶದ ಪೂರ್ವ ಇತಿಹಾಸವನ್ನು  ದುರ್ಲಕ್ಷಿಸುವುದು ಎಂದೂ ಜಾಣತನವೆನಿಸಲಾರದು.

ನಾಡಿನ ಏಳಿಗೆಗಾಗಿ ಹೆಣಗುವವರಿಗೆ ತಮ್ಮ ಇತಿಹಾಸ, ಸಂಸ್ಕೃತಿಗಳ ಸಾಮಾನ್ಯಜ್ಞಾನವಾದರೂ ಇರಲೇಬೇಕು. ರೋಗಿಗೆ ಔಷಧಕೊಟ್ಟು ಅವನನ್ನು ನಿರೋಗಿಯಾದ ಬಲವಂತನನ್ನು ಮಾಡಬೇಕೆಂದು ಹಂಬಲಿಸುವ ವೈದ್ಯರು ಆತನಿಗೆ ಆದ ಬೇನೆಯ ಇತಿಹಾಸವನ್ನೇ ಕಿವಿಯ ಮೇಲೆ ಹಾಕಿಕೊಳ್ಳದೆ ಸುಮ್ಮನೆ ಸೊಪ್ಪು, ಈ ಬೇರು ತಂದು ಅರೆದರೆದು ಕುಡಿಸುವ ಗಡಬಿಡಿಯನ್ನು ನಡೆಸಿದರೆ ರೋಗಿಯ ಗತಿಯೇನಾಗಬೇಕು ! ಸರಿ, ಬರಿ ಹಿಂದಿನ ಇತಿಹಾಸವನ್ನೆ ಕೆದರುತ್ತ ಕುಳ್ಳಿರುವುದು ಹೆಡ್ಡ ತನವೆನಿಸುವುದು. ಆದರೆ, ತನ್ನ ನಿಜಸ್ಥಿತಿಯ ಅರಿವನ್ನುಂಟು ಮಾಡಿಕೊಡುವ ಇತಿಹಾಸವನ್ನು ದುರ್ಲಕ್ಷಿಸುವುದೂ ಆತ್ಮಘಾತವಾಗದೆ ಇರಲಾರದು. ಈ ಗಳಿಗೆಯಲ್ಲಿ ಉಪಯುಕ್ತವಾದ ಕೆಲಸವೇ ಕೆಲಸ, ಉಳಿದುದೆಲ್ಲವೂ ಅಲ್ಲದ ಕೆಲಸ ಎಂಬ ಕಿರುಗಣ್ಣಿನವರ ಸಂಖ್ಯೆಯು ನಮ್ಮಲ್ಲಿ ಹೆಚ್ಚಾಗುತ್ತಲಿದ್ದುದು ಒಳ್ಳೆಯ ಲಕ್ಷಣವಲ್ಲ. ‘ಇದರ ಉಪಯೋಗವೇನು ಈಗ? ಎಂದು ಕೇಳಿ ತಟ್ಟನೆ ತಕ್ಕಂತೆ ತಮ್ಮನ್ನು ಮಾರ್ಪಡಿಸಿಕೊಳ್ಳುವುದರಲ್ಲಿಯೆ ಜಾಣ್ಮೆಯಿದೆ. ಮೊದಲು ನಾವು ಯಾರೆ ಇರಲಿ, ಎಲ್ಲಿಯವರೆ ಇರಲಿ, ನಾವು ಈಗ ನೆಲಸಿರುವ ನಾಡು ನಮ್ಮದು. ಅದರೊಡನೆ ಸಮರಸವಾಗಿ ನಾಡಿನ ಏಳ್ಗೆಗಾಗಿ, ಆ ನಾಡಿನ ಮುಖಾಂತರವಾಗಿ ಮಾನವಕೋಟಿಯ ಕಲ್ಯಾಣಕ್ಕಾಗಿ ದುಡಿಯುವುದರಲ್ಲಿಯೇ ನಮ್ಮ ಮೇಲ್ಮೆಯೂ ಇದೆ. ಇದುವೆ ಇಂದಿನ ಧರ್ಮ. ಇದಕ್ಕೆ ವಿಪರೀತವಾಗಿ ನಡೆವುದೆ ಅಧರ್ಮ. (ಕನ್ನಡ ನೆಲೆ, ಮೊದಲ ಮಾತು)

ಶಂಬಾ ಅವರ ನಿರೂಪಣೆಯಲ್ಲಿ ನಡುನಡುವೆ ಬರುವ ಅಲಂಕಾರಗಳು ರೇಷ್ಮೆ ಸೀರೆಯೊಳಗಿನ ಜರಿತಾರಿ ಎಳೆಗಳಂತೆ, ಊಟದಲ್ಲಿ ಬಳಸುವ ಹಪ್ಪಳ ಸಂಡಿಗೆ, ಉಪ್ಪಿನಕಾಯಿಗಳಂತೆ ಸೌಂದರ್ಯವನ್ನೂ ಸ್ವಾದವನ್ನು ಮಿಗಿಲುಗೊಳೀಸುತ್ತವೆ. ಅವು ಭಾವಾಭಿವ್ಯಕ್ತಿಗೂ ಅರ್ಥವಿಶದತೆಗೂ ಸಹಕಾರಿಯಾಗುವುದುಂಟು. ವಾಚಕರ ಗಮನವನ್ನು ಸೆಳೆಯಬೇಕಾದಾಗ, ಅವರ ಅಂತರಂಗವನ್ನು ಮಿಡಿಯಬೇಕಾದಾಗ, ಅವರಿಗೆ ಸ್ಪೂರ್ತಿ ಪ್ರಚೋದನೆಗಳನ್ನು ನೀಡಬೇಕಾದಾಗ ಭಾಷೆ ಸಹಜವಾಗಿ ಅಲಂಕಾರಿಕವಾಗುತ್ತದೆ. ಅಲಂಕಾರಿಕ ಭಾಷೆ ವಾಗ್ಮಿತೆಯ ಗುಣಗಳಲ್ಲೊಂದು. ಗದ್ಯಲೇಖಕ ಭಾವೋದ್ರೇಕಕ್ಕೆ ವಶವಾದಾಗ, ಅವನ ಕಲ್ಪನೆ ಗಗನ ವಿಹಾರಿಯಾದಾಗ ಭಾಷೆ ಸ್ವಾಭಾವಿಕವಾಗಿಯೇ ಕಾವೇರುತ್ತದೆ, ಭಾವಣಾತ್ಮಕವಾಗುತ್ತದೆ. ಇಲ್ಲಿ ಶಂಬಾ ಅವರ ಶೈಲಿಯ ಪ್ರಮುಖ ಲಕ್ಷಣವಾಗಿದೆ. ಸಾಮಾನ್ಯವಾಗಿ ನಾವು ಮಾತಾಡುವ ಭಾಷೆ ವಾಕ್ಯರೂಪದಲ್ಲಿರುತ್ತದೆ. ಅದು ಏಕಪದಿಯಾಗಿರಬಹುದು ಅಥವಾ ಬಹುಪದಿಯಾಗಿರಬಹುದು.

‘ಕನ್ನಡ ಎಂದರೇನು ಎಂದು ಕೇಳುವುದು ಅದಾವ ಜಾಣತನ? ಎಂದೆನ್ನಬಹುದು ಕೆಲವರು. ನಿಜ. ನಾಡಿನ ಹೆಸರು ‘ಕ(ರ್ಣಾ)ರ್ನಾಟ  ಮತ್ತು ನುಡಿ ‘ಕನ್ನಡ ಎಂದು ಹೇಳುವ ವಾಡಿಕೆಯುಂಟು. ಕರ್ಣಾಟಕ್ಕೆ ‘ಕನ್ನಡ – ನಾಡು ಎಂತಲೂ ಕರೆವ ಪರಿಪಾಠವು ಈಗ ಕಂಡುಬರುತ್ತಲಿದೆ. ‘ಕನ್ನಡ – ನಾಡು ಎಂದರೇನು? ಕನ್ನಡವನ್ನು (ಭಾಷೆಯನ್ನು) ಆಡುವ ನಾಡು ಎಂದು ತಾನೆ ಇದರ ಅರ್ಥ? ಕವಿರಾಜಮಾರ್ಗ (ಕ್ರಿ. ಶ. ೮೧೫) ಮೊದಲಾದ ಪುರಾತನ ಗ್ರಂಥಗಳಲ್ಲಿ ‘ಕನ್ನಡ’ವೆಂದೇ ನಾಡಿಗೆ ಹೆಸರಿಸಿದ್ದಾರೆ. ಅಂತೂ ನಮ್ಮ ಇಂದಿನ ರೂಢಾರ್ಥದ ಮೇಲಿಂದ ವಿಚಾರಿಸಿದರೆ ನೃಪತುಂಗನ ಕಾಲದಲ್ಲಿಯೂ ನಾಡಿಗೆ ‘ಕನ್ನಡ’ವೆಂಬ ಹೆಸರು ಇಲ್ಲಿ ನಡೆಯುತ್ತಲಿದ್ದ ‘ಕನ್ನಡ ಭಾಷೆಯಿಂದಲೇ ಬಂದಿತೆಂದು ಹೇಳಬೇಕಾಗುತ್ತದೆ.

(ಕನ್ನಡದ ನೆಲೆ, ಪು. ೩೨, ಶಂಬಾ ಕೃತಿ ಸಂಪುಟ ೨.)

ಹೀಗೆ ಮಿಶ್ರವಾಕ್ಯ ಚಿಕ್ಕ ಬಿಡಿಸಾಲಿನಿಂದ ಹಿಡಿದು ಪುಟದುದ್ದಕ್ಕೂ ಹರಿಯಬಹುದು. ಎರಡೋ ಹಲವೋ ಪ್ರಧಾನ ವಾಕ್ಯಗಳು ಸೇರಿ ಸಂಯೋಜಿತ ವಾಕ್ಯವಾಗುತ್ತವೆ. ಅಧೀನೋಪ ವಾಕ್ಯಗಳಿಗೂ ಇಲ್ಲಿ ಎಡೆಯಿರುವುದರಿಂದ ಇದು ಸರಳ ಸಮ್ಮಿಶ್ರ ವಾಕ್ಯಗಳನ್ನು ತನ್ನ ಕಕ್ಷಿಯೊಳಗೆ ಸೇರಿಸಿಕೊಂಡಂತಾಗುತ್ತದೆ. ನಿಕಟಸಂಬಂಧವುಳ್ಳ ಹಲವು ಆಲೋಚನೆಗಳನ್ನೋ ಭಾವನೆಗಳನ್ನೋ ಕೂಡಿಸಬೇಕಾದಾಗ, ಅವುಗಳ ನಡುವೆ ಸಮನ್ವಯ ಸಾಧಿಸಬೇಕಾದಾಗ ಇಂಥ ವಾಕ್ಯಗಳ ಅವಶ್ಯಕತೆ ಮೊಳೆದೋರಿರಬಹುದು. ಇವುಗಳನ್ನು ಜಾಗರೂಕತೆಯಿಂದ ನಿರ್ವಹಿಸಿದ್ದಾದರೆ ಭಾಷೆಗೆ ಓಜಸ್ಸು ಗಾಂಭೀರ್ಯಗಳು ಪ್ರಾಪ್ತವಾಗುತ್ತವೆ; ಇಲ್ಲ, ಅಸ್ಪಷ್ಟತೆ, ಕ್ಲಿಷ್ಟತೆಗಳು ದೊರೆಕೊಳ್ಳುತ್ತವೆ.

ಮೊದಲನೆಯ ವಾಕ್ಯವೃಂದದಲ್ಲಿ ಕಾಣುವಂತವೆಲ್ಲ ಪ್ರದಾನವಾಕ್ಯಗಳೇ ಆಗಿವೆ. ಒಂದೊಂದೂ ಪುಟ್ಟ ಸರಳ ವಾಕ್ಯ. ಎರಡನೆಯ ವಾಕ್ಯ ಅದೀರ್ಘವಾದರೂ ಅದರಲ್ಲಿ ಎರಡೂ ಪ್ರದಾನ ವಾಕ್ಯಗಳೂ ಎರಡು ಅಧೀನವಾಕ್ಯಗಳೂ ಇವೆ. ಮೇಲ್ನೋಟಕ್ಕೆ ಅದು ಸರಳವಾಕ್ಯದಂತಿದೆ. ಮೂರನೆಯದು ಹದಿನೈದು ಪ್ರದಾನ ವಾಕ್ಯಗಳನ್ನೂ ನಾಲ್ಕೈದು ಅಧೀನ ವಾಕ್ಯಗಳನ್ನೂ ಒಳಗೊಂಡಿರುವ ದೀರ್ಘವಾಕ್ಯ. ಇಷ್ಟು ದೀರ್ಘವಾದರೂ ಸುತ್ತುಬಳಸಿಲ್ಲ, ಮೂಲೆ ಮೊಡಕುಗಳಿಲ್ಲ, ತಗ್ಗುದಿಣ್ಣೆಗಳಿಲ್ಲ, ಅದರ ಅರ್ಥ ಗ್ರಹಣಕ್ಕಾಗಿ ಕುದಿಯಬೇಕಾಗಿಲ್ಲ. ಪ್ರತಿಯೊಂದು ಪ್ರಧಾನ ವಾಕ್ಯದ ವಿಷಯ ಭಿನ್ನವಾದರೂ ಅವುಗಳ ಗುರಿ ಮಾತ್ರ ಒಂದೇ. ಈ ಗುರಿಯ ವಾಕ್ಯದ ಸಮನ್ವಯವನ್ನು ಸಾಧಿಸಿ, ಸಮತೋಲನವನ್ನು ಕಾಪಾಡುವ ಸಾಧನವಾಗಿದೆ. ಏಕಮುಖತೆ ಸಂಯೋಜಿತ ವಾಕ್ಯದ ವಿಶಿಷ್ಟಲಕ್ಷಣವೆಂಬುದನ್ನು ಮರೆಯಲಾಗದು. ಒಟ್ಟಿನಲ್ಲಿ ವಾಕ್ಯರಚನೆಯ ಶ್ರೇಯಸ್ಸಿಗೆ ಆಲೋಚನೆಗಳ ಸ್ಪಷ್ಟತೆ ಹಾಗೂ ತಾರ್ಕಿಕ ಪ್ರಜ್ಞೆ ಬಹುಮಟ್ಟಿಗೆ ಕಾರಣವಾಗುತ್ತವೆ.

ಲಘುವಾಕ್ಯ ಪರಂಪರೆ ವೇಗದ ಭಾವವನ್ನು ಮನಸ್ಸಿಗೆ ಮುಟ್ಟಿಸುತ್ತವೆ, ದೀರ್ಘ ವಾಕ್ಯಗಳು ಭಾಷೆಗೆ ಬೀಸು ಚಾಚುಗಳನ್ನೂ, ಆಯತಿ – ನಿರಂತತೆಗಳನ್ನೂ, ಘನತೆ ಗುರುತ್ವಗಳನ್ನೂ ದಯಪಾಲಿಸುತ್ತವೆ. ಐತಿಹಾಸಿಕ ಘಟನೆಗಳ ಹಾಗೂ ಕಥನಕ್ರಿಯೆಯು ನಡಗೆಗೆ ಲಘುವಾಕ್ಯಗಳು ಅನುವಾದರೆ, ತಾತ್ತಿಕ ವಿಚಾರಲಹರಿಗೆ ದೀರ್ಘವಾಕ್ಯಗಳು ಸೂಕ್ತವಾಗುತ್ತವೆ. ಮಾನವನ ಬೌದ್ಧಿಕ ಪ್ರಕಾರಗಳ ಭಾವವಿಲಾಸಗಳೂ ಅನಂತಾನಂತ. ಅವುಗಳಿಗೆ ಸೀಮಾರೇಖೇಗಳನ್ನೆಳೆಯುವುದಾಗಲೀ, ಅಭಿವ್ಯಕ್ತಿ ಮಾಧ್ಯಮಗಳ ರೂಪಸ್ವರೂಪಗಳನ್ನು ನಿಷ್ಕರ್ಷಿಸುವುದಾಗಲೀ ವಿವೇಕವಾಗಲಾರದು. ಬಹುಶ್ರುತ ಸಾಹಿತಿಯ ಕಲ್ಪನಾಪ್ರತಿಭೆಗಳೇ ಆಲೋಚನಾ ಭಾಷೆಗಳ ಪರಸ್ಪರ ಸಂಬಂಧವನ್ನು ನಿರ್ಣಯಿಸಬೇಕು. ಲಘುದೀರ್ಘ ವಾಕ್ಯಗಳ ಅನುಕ್ರಮಾನುಪೂರ್ವಿಯ ಯುಕ್ತ ನಿರ್ಧಾರ ಅವನ ವಿವೇಕಕ್ಕೆ ಬಿಟ್ಟದ್ದು. ಒಂದು ಪ್ಯಾರಾದಲ್ಲಿ ಕೇವಲ ಲಘುವಾಕ್ಯಗಳೇ ಇರಬಹುದು, ಮತ್ತೊಂದು ಪ್ಯಾರಾದಲ್ಲಿ ಬರಿಯ ದೀರ್ಘವಾಕ್ಯಗಳೇ ಇರಬಹುದು, ಮಗುದೊಂದರಲ್ಲಿ ಅವುಗಳ ಮಿಶ್ರಣವೇ ಅಂದವೆನಿಸಬಹುದು. ಲಕ್ಷಣ ಸೂತ್ರಗಳನ್ನು ಗಮನದಲ್ಲಿಟ್ಟುಕೊಂಡು ವಿಮರ್ಶಕನ ನಿರೀಕ್ಷೆಗನು ಗುಣವಾಗಿ ಗದ್ಯ ರಚಿಸಬೇಕೆನ್ನುವುದು ಧಾರ್ಷ್ಟ್ಯದ ಹಾಗೂ ಅಟ್ಟಹಾಸದ ಮಾತಾಗುತ್ತದೆ. ಕೆಳಗಿನ ಆಯ್ದ ಎರಡು ಪ್ರಬಂಧ ಭಾಗಗಳನ್ನು ಪರಿಶೀಲಿಸಿದಾಗ ಈ ಮಾತಿನ ಯಥಾರ್ಥತೆ ಮನದಟ್ಟಾಗುತ್ತದೆ.

ಆದರೆ, ದುರ್ದೈವದ ಸಂಗತಿ. ಭಾಷೆಯ ಮೇಲಿಂದ ಹೆಸರುಗೊಂಡ ಒಂದು ದೇಶವೂ ಭೂಮಂಡಲದಲ್ಲಿ ದೊರೆಯುವುದಿಲ್ಲ! ಜನಾಂಗ ಅಥವಾ ದೇಶದಿಂದ ಭಾಷೆಗೆ ಹೆಸರುಂಟಾದುದನ್ನು ಕಾಣಬಹುದೇ ವಿನಾ ಇದರ ವಿಪರೀತವಾದುದನ್ನು ಎಲ್ಲಿಯೂ ಕಾಣಲು ಸಿಕ್ಕುವುದಿಲ್ಲ. ಆದುದರಿಂದ, ಕನ್ನಡದ ಮಟ್ಟಿಗೇ ಇದು ತಿರುವು ಮುರುವಾಗಿ ನುಡಿಯಿಂದ ನಾಡಿಗೆ ಹೆಸರು ಬಂದಿತೆಂದು ಬಗೆವ ಕಾರಣವೇನು? ಆದಕಾರಣ ಗತಾನುಗತಿಕತ್ವದಿಂದ, ರೂಢಿಯಿಂದ ಬಂದಿರುವ ಅರ್ಥವು ತಪ್ಪು ಎನ್ನಲಿಕ್ಕಾಗದಿದ್ದರೂ (ರೂಢಿಗೆ ಭಾಷೆಗೆ ಮೂಲ) ಅದು ಅಪರ ಅರ್ಥವಲ್ಲ. ‘ಕನ್ನಡ ಎಂಬುದಕ್ಕೆ ಮೊದಲಿನ ಅರ್ಥವು ಪರಮ ಅರ್ಥವು ಭಾಷೆಯೆಂದು ಇರಲಾರದು, ಜನಾಂಗ ಅಥವಾ ದೇಶವೆಂಬ ಎರಡರಲ್ಲಿ ಯಾವುದಾದರೂ ಒಂದು ಇರಬೇಕಾಯಿತು.

‘ಕನ್ನಡರು ಅಥವಾ ‘ಕನ್ನಡಿಗ’ರು ಎಂಬಲ್ಲಿ ‘ಕನ್ನಡ – ಇದು ಜನಾಂಗದ ಹೆಸರೆಂದು ಗ್ರಹಿಸಬೇಕೆ? ಇದಕ್ಕೆ ವಿದ್ವಾಂಸರ ಒಪ್ಪಿಗೆ ಇಲ್ಲ. ಒಂದು ಅರೆಗಳಿಗೆ ಇದು ಜನಾಂಗದ ಹೆಸರೆಂದು ಗ್ರಹಿಸಿದರೂ ‘ಕನ್ನಡ’ಕ್ಕೇನು ಅರ್ಥ? ಈ ಹೆಸರೇಕೆ ಬಂದಿತು. ಈ ಜನಾಂಗಕ್ಕೇ? ಮಾತು ಕಟ್ಟಾಯಿತು. ಇದಕ್ಕೆ ಜನಾಂಗವಾಚಕ ಅರ್ಥವನ್ನು ಹೇಳುವ ಸಂಶೋಧಕರು ಯಾರೂ ಮುಂದೆ ಬಂದು ಮಾತು ಬೆಳೆಯಿಸಿಲ್ಲ. ಅಲ್ಲದೆ, ಹಿಂದಿನ ಗ್ರಂಥಗಳನ್ನು ಸ್ವಲ್ಪ ಪರಿಶೀಲಿಸಿದರೆ ಕನ್ನಡವು ಮುಖ್ಯವಾಗಿ ದೇಶವಾಚಕವಾಗಿರುವುದೇ ಕಂಡುಬರುತ್ತದೆ (ನಟ + ಕರ್ಣರೆಂಬ ಜನಾಂಗದಿಂದ ಕರ್ಣಾಟ (ಕನ್ನಡ) ವೆಂಬ ಹೆಸರು ಬಂದಿತೆಂದು ಒಂದು ವಿಚಾರವಿದ್ದು ಅದರ ವಿವೇಚನವು ಮುಂದೆ ಬರತಕ್ಕುದಿದೆ).

(ಕನ್ನಡದ ನೆಲೆ, ಪು. ೩೨, ಶಂಬಾ ಕೃತಿ ಸಂಪುಟ ೨.)

ಪ್ರಸಕ್ತ ವಿಷಯದ ಘನತೆ ಮಹಿಮೆಗಳನ್ನು ಶಿಖರಸ್ಥಾನಕ್ಕೊಯ್ಯುವ ಸಲುವಾಗಿ ಕರ್ತೃ ಕ್ರಿಯೆಗಳಿಂದ ಭರಿತವಾಗಿರುವ ಆವರ್ತಕಾಲೀನ ಪದ ಪರಂಪರೆಯ ಪರಿಸಂಖ್ಯೆಗಳನ್ನು ಜೋಡಿಸಿ ವಾಕ್ಯವನ್ನು ಬೆಳಸುವುದು ವಾಗ್ಮಿತೆಯ ಲಕ್ಷಣಗಳಲ್ಲೊಂದು. ಕುತೂಹಲವನ್ನು ಕೆರಳಿಸುತ್ತ, ನಿರೀಕ್ಷೆಯನ್ನು ಮುಂದೂಡುತ್ತ, ಉದ್ವೇಗವನ್ನುಕ್ಕಿಸುವ ಮೂಲಕ ಭಾವ ಪ್ರಚೋದನೆಯುಂಟುಮಾಡುವುದೇ ಈ ಉಪಾಯದ ಉದ್ದೇಶ. ಒಂದೊಂದು ಪದ ಪರಂಪರೆಯೂ ಸರಾಗವಾಗಿ ವಿಚಾರದಿಂದ ವಿಚಾರಕ್ಕೆ ಜಿಗಿಯುತ್ತ ಮುಖ್ಯ ವಾಕ್ಯದ ಬಳಿ ಬಂದಾಗ ನಿಂತು ಉಸಿರೆಳೆದುಕೊಳ್ಳುತ್ತವೆ.

ಪದಪರಂಪರೆಯ ನಡುವಣ ಆವರ್ತಕಾಲ ನಿರೀಕ್ಷೆಯ ನಿರಂತರತೆಗೆ ಅವಕಾಶ ಮಾಡಿಕೊಟ್ಟದೆ. ಪ್ರತಿಯೊಂದು ಪದಪರಂಪರೆಯ ಗುರಿ ಉತ್ತರಮುಖಿಯಂತೆ ಸದಾ ಚರಮ ವಾಕ್ಯದ ಕಡೆಗೆ ಮುಖವಾಗಿರಬೇಕು. ಅಂದಮೇಲೆ ಅವುಗಳಲ್ಲಿ ಅನುಚಿತ ವಿಷಯಗಳ ಸೇರ್ಪಡೆಗೆ ಅವಕಾಶವಿರಬಾರದು. ಏಕಮುಖತೆಗೆ ಭಂಗವಾದರೆ ಅವುಗಳ ಸಾಮರಸ್ಯಕ್ಕೆ ವೈಕಲ್ಪವೊದಗಿ ಗೊಂದಲವುಂಟಾಗುವ ಸಂಭವವುಂಟು. ಆಗ ಅವುಗಳ ವಾಸ್ತುಶಿಲ್ಪ ಕುರೂಪಗೊಂಡು, ಅವು ಎಸೆದ ವಸ್ತಗಳ ಬಣಬೆಯುಂತಾಗುತ್ತವೆ.

ಆಂಗ್ಲ ಗದ್ಯರಚನೆಯಲ್ಲಿ ವಿರಾಮ ಚಿಹ್ನೆಗಳ ಬಳಕೆ ಅತ್ಯಂತಾವಶ್ಯಕವೆಂದು ಶ್ರುತ ಪಟ್ಟಿದೆ. ವಾಕ್ಯರಚನೆಯಲ್ಲಿ ಜಟಿಲತೆ ಜಾಸ್ತಿಯಾದಂತೆಲ್ಲ ಅವುಗಳ ಬಳಕೆಯೂ ಬಲವಾಗುತ್ತಿದೆ. ರಚನೆ, ಶ್ವಾಸಕ್ರಿಯೆ ಮತ್ತು ಲಯಗಳ ಮೂಲಕ ವಿರಾಮ ಸಂಘಟಿಸುತ್ತದೆ. ಆಲೋಚನೆಗನುಗುಣವಾಗಿ ವಾಕ್ಯ ರಚನೆಗೊಳ್ಳುವುದರಿಂದ ತರ್ಕಬದ್ಧವಾಗಿ ವಿರಾಮಸ್ಥಾನ ನಿರ್ಣಯವಾಗುತ್ತದೆ. ಆಲೋಚನೆಯ ಗತಿಯನೂ ವಾದದ ಸೋಪಾನಗಳನ್ನೂ ಅದು ಗುರುತಿಸುತ್ತದೆ. ಇಡೀ ವಾಕ್ಯವನ್ನು ಏಕಕಾಲದಲ್ಲಿ ಅವಿಚ್ಛಿನ್ನವಾಗಿ ಉಚ್ಚರಿಸಿದರೆ ಉಸಿರು ಕಟ್ಟುತ್ತದೆ. ಸ್ವಾಭಾವಿಕವಾಗಿ ಶ್ವಾಸವೇ ಭಾಷೆಯಾಗುತ್ತದೆ. ಆಡಿದ್ದೇ ಸಹಜವಾದ ಭಾಷೆ, ಬರೆದದ್ದು ಕೃತಕ. ಆಡುನುಡಿ ಶ್ವಾಸೋಚ್ಛಾಸ್ವದ ಭೌತಿಕ ಪರಿಮಿತಿಗೆ ಬದ್ಧವಾಗಿರುತ್ತದೆ. ಈ ಭೌತಿಕ ಪರಿಮಿತಿ ವಿರಾಮವನ್ನು ನಿಯಂತ್ರಿಸುತ್ತದೆ. ರಚನಾ ಮತ್ತು ಶ್ವಾಸ ವಿರಾಮಗಳೆರಡೂ ಲಯಕ್ಕಧೀನವಾಗಿರುತ್ತವೆ. ಹಿಂದಿನ ಕಾಲದ ಭಾರತೀಯ ಭಾಷೆಗಳಲ್ಲಿ ವಿರಾಮದ ಕಲ್ಪನೆ ಯತಿರೂಪದಲ್ಲಿ ಅಭಿವ್ಯಕ್ತಗೊಳ್ಳುತ್ತಿತ್ತೇ ಹೊರತು ಅದನ್ನು ಚಿಹ್ನೆಗಳ ಮೂಲಕ ಗುರುತಿಸುತ್ತಿರಲಿಲ್ಲ. ಅದೂ ಇರಲಿ, ಪ್ರಶ್ನಾರ್ಥಕ ಆಶ್ಚರ್ಯಾರ್ಥಕ ಚಿಹ್ನೆಗಳೂ ರೂಢಿಯಲ್ಲಿರಲಿಲ್ಲ. ಅವು ಅಗತ್ಯವಾಗಿರಲಿಲ್ಲವೆಂದು ಇ. ಪಿ. ರೈಸ್ ಅವರೇ ಒಪ್ಪಿಕೊಂಡಿದ್ದಾರೆ. ಕನ್ನಡದ ವಿರಾಮ ಚಿಹ್ನೆಗಳು ಹೊಸಗನ್ನಡ ಗದ್ಯದ ಅವಿಭಾಜ್ಯಾಂಗಗಳೇಂದೇ ಹೇಳಬೇಕಾಗಿದೆ. ಜಟಿಲ ರಚನೆಯ ಅಂಕುಡೊಂಕಿನ ದೀರ್ಘವಾಕ್ಯಗಳಂತು ವಿರಾಮ ಚಿಹ್ನೆಗಳ ಪ್ರಯೋಗ ಅನಿವಾರ್ಯ. ಇಲ್ಲವಾದರೆ ಅರ್ಥಸ್ಪಷ್ಟತೆಗೆ ಭಂಗವೊದಗುತ್ತದೆ. ಅಭ್ಯಾಸ ಬಲದಿಂದ ಆಲೋಚನಾತರಂಗಗಳು ವಿರಾಮ ಚಿಹ್ನೆಗಳ ಹತೋಟಿಗೊಳಗಾಗುವುದೂ ಉಂಟು. ಅಲ್ಪವಿರಾಮ, ಅರ್ಧವಿರಾಮ, ಪೂರ್ಣವಿರಾಮ, ವಿವರಣ ವಿರಾಮ ಇವೆಲ್ಲವೂ ಈಗ ಕನ್ನಡದಲ್ಲಿ ಬಳಕೆಯಾಗುತ್ತಿವೆ.

‘ಪುನ್ನಾಡು ಎಂಬ ಹೆಸರಿನ ಒಂದು ಪ್ರಾಚೀನ ದೇಶವಿತ್ತು. ಆ ‘ಪುನ್ನಾಡು ಎಂಬ ಹೆಸರು ‘ಪುನ್ನಾಡ, ಪುಣ್ಣಡ, ಪುನ್ನಡ, ಪುನ್ನಾಟ’ ಎಂದು ಮುಂತಾಗಿ ಬದಲಾವಣೆಗಳನ್ನು ಹೊಂದಿದುದನ್ನು ಶ್ರೀ ರಾಜರತ್ನಂ ಅವರು ಹಲವು ಆಧಾರಗಳಿಂದ ಸಿದ್ಧಪಡಿಸಿದ್ದಾರೆ. ಇದೇ ಮೇರೆಗೆ ‘ಕನ್ನಾಡು ಎಂಬ ಇಂದಿನ ರೂಪವನ್ನು ತಾಳಿತೆಂದು ಹೇಳಬಹುದಾಗಿದೆ. ನೃಪತುಂಗನ ಕಾಲದಲ್ಲಿ ಕನ್ನಡ ಶಬ್ದದ ಮೂಲಾರ್ಥವನ್ನು ಜನಗಳು ಇನ್ನೂ ಮರೆತಿದ್ದಿಲ್ಲ. ಕನ್ನಡವು ದೇಶವಾಚಕ ಶಬ್ದ, ನಾಡು ಅರ್ಥದ ಪದವನ್ನು ಅದು ಒಳಗೊಂಡಿದೆ ಎಂಬ ಅರಿವು ಕಾಲದಲ್ಲಿ ಇತ್ತು. ಈಗ ವಿಷಯಕ್ಕೆ ಕಗ್ಗತ್ತಲೆ ! ಈಗಿನಂತಹ ಪರಿಸ್ಥಿತಿಯೆ ಆಗ ನೃಪತುಂಗನ ಕಾಲದಲ್ಲಿಯೂ ಇದ್ದರೆ “ಕನ್ನಡದ ತಿರುಳ್” ಎಂಬೀ ಬಗೆಯ ಮಾತಿನ ಅರ್ಥವೆ ಆಗುವ ಸಂಭವವಿದ್ದಿಲ್ಲ. ಹಾಗಿದ್ದಲ್ಲಿ ನೃಪತುಂಗನಿಗೆ ‘ಕನ್ನಡನಾಡು, ಕನ್ನಡನಾಡಿನ ತಿರುಳ್ ಅಥವಾ ಕರ್ಣಾಟಕ ದೇಶ, ಕರ್ಣಾಟಕದ ದೇಶದ ತಿರುಳ್ ಎಂಬ ರೀತಿಯಲ್ಲಿ ವರ್ಣಿಸಿ ಹೇಳಬೇಕಾಗುತ್ತಿತ್ತು !

ನೃಪತುಂಗನ ಕಾಲದಲ್ಲಿ ‘ಕನ್ನಡ ಪದವು ನಾಡು ಎಂಬ ಅರ್ಥವನ್ನೆ ನಿಶ್ಚಿತವಾಗಿ ವ್ಯಕ್ತಪಡಿಸುತ್ತಿದ್ದುದರಿಂದ ಆಗಿನವರಿಗೆ ‘ಕನ್ನಡ’ದ ಮುಂದೆ ನಾಡು ಎಂಬ ಪದವನ್ನು ಮತ್ತೆ ಸೇರಿಸುವ ಅವಶ್ಯಕತೆಯು ತೋರಲಿಲ್ಲ. ‘ಕನ್ನಡ – ನಾಡು ಎಂದು ಹೇಳುವುದೂ ‘ಚಾತುರ್ಮಾಸ್ಯ ನಾಲ್ಕು ತಿಂಗಳು’ ಎನ್ನುವುದೂ ಒಂದೇ! ಒಂದು ಶಬ್ದದ ಮೂಲಾರ್ಥದ ಮರೆವು ಹೆಚ್ಚಾದಂತೆ ಬಗೆಯ ದ್ವಿರುಕ್ತಿದೋಷದ ಪದಗಳು ತಲೆದೋರುತ್ತವೆ. ನೃಪತುಂಗನ ಕಾಲದಲ್ಲಿ ‘ಕನ್ನಡ’ವು ನಾಡು – ಕನ್ನಾಡು ಎಂಬ ಮಾತಿನ ಸಂಪೂರ್ಣ ಎಚ್ಚರವಿದ್ದುದ್ದರಿಂದಲೇ, ಅವನು ಈಗಿನವರಂತೆ ತನ್ನ ಗ್ರಂಥದಲ್ಲಿ ‘ಕನ್ನಡ – ನಾಡು ಎಂಬೀ ಬಗೆಯ ಪ್ರಯೋಗವನ್ನು ಮಾಡಲಿಲ್ಲ. ‘ಕನ್ನಡ – ನಾಡು ಎಂಬಲ್ಲಿ ಆಡಿದ್ದನ್ನೇ ಆಡುವ ಮರುಳುತನವು ಬಯಲಿಗೆ ಬರುತ್ತಲಿದೆ. ಆಕಳ ಗೋಮೂತ್ರ, ಛಪ್ಪನ್ಮೈವತ್ತಾರು, ಸಹ್ಯಾದ್ರಿಪರ್ವತ ಎಂಬೀ ಬಗೆಯ ಮಾತುಗಳೆಲ್ಲವೂ ಇದೇ ತೆರನಾದ ಉದಾಹರಣೆಗಳಾಗಿವೆ.

(ಕನ್ನಡದ ನೆಲೆ, ಪು. ೩೨, ಶಂಬಾ ಕೃತಿ ಸಂಪುಟ ೩೩-೩೪.)

ಈ ಭಾಗದಲ್ಲಿ ಹೆಚ್ಚು ಕಡಿಮೆ ಎಲ್ಲ ವಿರಾಮ ಚಿಹ್ನೆಗಳೂ ಬಂದಿವೆ. ವಿರಾಮಸ್ಥಾನ ವಾಕ್ಯದ ದೀರ್ಘತೆಯನ್ನವಲಂಬಿಸಿಲ್ಲ, ಆಲೋಚನೆಯ ಗತಿಯನ್ನವಲಂಬಿಸಿದೆಯೆಂಬುದು ಮೇಲಿನ ಉದ್ಧರಣೆಯಿಂದ ವ್ಯಕ್ತವಾಗುತ್ತದೆ. ಪ್ರಾಯಶಃ ಹಾಡಿ ಕುಣಿದು ಬಂದಾಗ ಮೇಲೆ ಅಲ್ಪವಿರಾಮ ಚಿಹ್ನೆಯ ಅವಶ್ಯಕತೆಯಿದೆಯೆಂದು ತೋರುತ್ತದೆ. ಕೊನೆಯ ವಾಕ್ಯದ ಅರ್ಧವಿರಾಮ ಔಚಿತ್ಯಪೂರ್ಣವಾಗಿದೆ.

ಆಡುಗದ್ಯ, ಲಿಖಿತಗದ್ಯವೆಂದು ಗದ್ಯದಲ್ಲಿ ಎರಡು ಬಗೆ. ಅವು ಪರಸ್ಪರ ಪೂರಕ ಮತ್ತು ಪ್ರಭಾವಾತ್ಮಕವೆಂಬುದು ನಿಜ. ಭಾಷೆಯಲ್ಲಿ ಮೊದಲು ಆಡಿದ್ದು, ಆಮೇಲೆ ಬರೆದದ್ದು. ಆಡುಗದ್ಯದ ಭಾಷೆ ಸರಳ, ವಾಕ್ಯ ನಿಜಟಿಲ, ಲಿಖಿತಗದ್ಯದ ಭಾಷೆ ಪ್ರೌಢ, ವಾಕ್ಯ ಸುದೀರ್ಘ. ನಾಟಕದ ಗದ್ಯ ಲಿಖಿತರೂಪದ್ದಾದರೂ ಅದರ ಜಾಯಮಾನವೆಲ್ಲ ಆಡುಮಾತಿನದು, ಆಡುಮಾತಾದರೂ ಗ್ರಾಮ್ಯವಲ್ಲ. ವಾಗ್ಮಿತೆಯ ಭಾಷೆ ಆಡುಮಾತಾದರೂ ಅದರ ಸ್ವರೂಪಗತಿ ಗಾಂಬೀರ್ಯಗಳು ಲಿಖಿತಭಾಷೆಗೆ ಸಮೀಪವಾದುವು, ಅಷ್ಟೇ ಅಲ್ಲ, ಆ ಭಾಷೆ ಲಿಖಿತರೂಪ ತಾಳುವುದೂ ಉಂಟು. ಕಥೆ ಅಥವಾ ಕಾದಂಬರಿ ಪ್ರಮುಖವಾಗಿ ಲಿಖಿತ ಮಾಧ್ಯಮದ ಮೂಲಕ ಅವತಾರವೆತ್ತುವದುಂಟು. ಆದರೆ ಆಕಾಶವಾಣಿಯ ಮೂಲಕ ಪ್ರಸಾರವಾಗುವಾಗ ಅವು ಆಡುಮಾತಿನ ವೇಷ ತೊಡುವುದುಂಟು. ಅವುಗಳನ್ನು ಹೇಳಿ ಬರೆಯಿಸುವ ಕತೆಗಾರರ ಮತ್ತು ಕಾದಂಬರಿಕಾರರ ಸಂಖ್ಯೆಯಂತು ಈಚೀಚೆಗೆ ಬೆಳೆಯುತ್ತಿದೆ. ಆಡುಮಾತಿನ, ಅಂತೆಯೇ ತಕ್ಕಮಟ್ಟಿಗೆ ಲಿಖಿತಭಾಷೆಯ ಶಬ್ದಪ್ರಯೋಗ ಶ್ರೋತೃ ಅಥವಾ ವಾಚಕವೃಂದದ ಗ್ರಹಣ ಸಾಮರ್ಥ್ಯವನ್ನವಲಂಬಿಸುತ್ತದೆನ್ನುವುದು ನಿರ್ವಿವಾದದ ಸಂಗತಿ. ಆಡುಮಾತಿನ ಗದ್ಯ ವ್ಯಾಕರಣದೋಷಗಳನ್ನೊಳಗೊಂಡಿದ್ದರೂ ಕೆಲವೊಮ್ಮೆ ಕ್ಷಮ್ಯವಾಗುತ್ತದೆ. Can’t, Won’t, It’s me ಇವೇ ಮೊದಲಾದ ಆಂಗ್ಲಭಾಷೆಯ ಪ್ರಯೋಗಗಳೂ, ತ್ವಾಟ, ಮಜ್ಜನ್, ಹಿಂಗೆ, ಹೆಂಗೆ, ತಗೊಂಡು ಬಾ ಇವೇ ಮುಂತಾದ ಕನ್ನಡ ಪ್ರಯೋಗಗಳೂ ಆಡುಮಾತಿನಲ್ಲಿ ಮಾನ್ಯವಾಗುತ್ತವೆ.

ಪ್ಯಾರಾ ರಚನೆಯೂ ಒಂದು ವಿರಾಮ ಸಾಧನವೆಂದು ಹೇಳಬಹುದು. ಭಾವಾರ್ಥ ಯತಿಗಳ ಆಧಾರದ ಮೇಲೆ, ಲಯವಿನ್ಯಾಸವನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತೀಯರು ವಿರಾಮ ಸ್ಥಾನವನ್ನು ಗುರುತಿಸುತ್ತಿದ್ದರೆಂದು ಅವರು ವಿರಾಮ ಚಿಹ್ನೆಗಳನ್ನು ಬಳಸುತ್ತಿರಲಿಲ್ಲವೆಂದೂ ಈ ಹಿಂದೆ ತಿಳಿಸಲಾಗಿದೆ. ಇವುಗಳಂತೆ ಪ್ಯಾರಾರಚನೆಯ ಕಡೆಗೂ ಅವರ ಗಮನಹರಿದಂತೆ ಕಾಣುವುದಿಲ್ಲ. ಆದ್ದರಿಂದ ಪ್ಯಾರಾ ಪದಕ್ಕೆ ತಕ್ಕ ಸಂವಾದಿ ಪದ ಭಾರತೀಯ ಭಾಷೆಗಳಲ್ಲಿದ್ದಂತೆ ತೋರುವುದಿಲ್ಲ. ಕನ್ನಡದಲ್ಲಂತು ಇಲ್ಲ. ಕೆಲವರು ಅದನ್ನು ಪ್ರಕರಣವೆಂದು ಕರೆದರೆ, ಇತರರು ವಾಕ್ಯವೃಂದವೆಂದು ಕರೆಯುತ್ತಾರೆ. ಈ ಮಾತೂ ಪ್ಯಾರಾದ ಸ್ವರೂಪವನ್ನು ಮನಕ್ಕೆ ಮುಟ್ಟಿಸುವುದಿಲ್ಲ. ಪ್ಯಾರಾ ಎನ್ನುವುದು ವಾಕ್ಯ ವೃಂದ ನಿಜ. ಇಡೀ ಪ್ರಬಂಧ ಅಥವಾ ಕತೆಯೂ ವಾಕ್ಯವೃಂದ ತಾನೆ? ಈಗ ಪ್ಯಾರಾ ಕತೆಗಳ ವ್ಯತ್ಯಾಸವನ್ನು ಸ್ಪಷ್ಟಪಡಿಸಿದಂತಾಗುವುದಿಲ್ಲ. ಒಂದು ಪ್ಯಾರಕ್ಕೂ ಮತ್ತೊಂದು ಪ್ಯಾರಾಕ್ಕೂ ಸಾವಯವ ಸಂಬಂಧವಿದೆ ಎನ್ನುವುದನ್ನು ಈ ಸಂದರ್ಭದಲ್ಲಿ ಲಕ್ಷಿಸಬಹುದು. ಈ ಮಾತಿಗೆ ಬದಲಾಗಿ ಮುಂದೆ ಕಂಡಿಕೆಯೆಂಬ ಪದವನ್ನು ಬಳಸಲಾಗಿದೆ. ಕಬ್ಬಿನ ಜಲ್ಲೆಯಲ್ಲಿ ಎರಡು ಗೆಣ್ಣುಗಳ ನಡುವಣ ಭಾಗಕ್ಕೆ ಕಂಡಿಕೆಯೆಂದು ಕರೆಯುವುದುಂಟು. ಕಂಡಿಕೆ ಗೆಣ್ಣಿನಲ್ಲಿ ಪರ್ಯವಸಾನವಾಗುವುದಿಲ್ಲ, ಒಂದು ಮತ್ತೊಂದರಲ್ಲಿ ಚಾಚಿಕೊಳ್ಳುತ್ತದೆ, ಸೇರಿಕೊಳ್ಳುತ್ತದೆ. ಪ್ಯಾರಾ ಪದ ಕನ್ನಡ ಮಾತುಗಳೊಡನೆ ಒಗ್ಗಿಲ್ಲವಾದ್ದರಿಂದ ಈ ಮಾತು ಅಗತ್ಯವಾಯಿತು.

ಕಂಡಿಕೆ ಎಂದರೇನು? ಲಿಖಿತ ಭಾಷೆಯಲ್ಲಿ ವಾಕ್ಯದ ಒಳಚಾಚು ಕಂಡಿಕೆಯ ಪ್ರಾರಂಭವನ್ನು ಪ್ರಕಟಿಸುತ್ತದೆ. ಆಡುಮಾತಿನಲ್ಲಿ ಅಥವಾ ಉಪನ್ಯಾಸದಲ್ಲಿ ಪ್ರಾರಂಭವನ್ನರಿಯುವ ಬಗೆ ಹೇಗೆ? ಕಂಡಿಕೆಯ ಸ್ವರೂಪಲಕ್ಷಣಗಳನ್ನಂತು ಕರಾರುವಕ್ಕಾಗಿ ವಿವರಿಸಲಾಗದೋ ಅಂತೆಯೇ ಅದರ ಪ್ರಾರಂಭವನ್ನೂ ಸುಲಭವಾಗಿ ಗುರುತಿಸಲಾಗದು. ವಾಕ್ಯರಚನೆಗೆ ಆಲೋಚನೆ ಸ್ಪೂರ್ತಿ ಹಾಗೂ ಚೈತನ್ಯವಷ್ಟೇ. ಅಂತೆಯೇ ಆಲೋಚನಾ ಅಥವಾ ಅನುಭವ ಪರಂಪರೆ ಕಂಡಿಕೆಯ ಧಮನಿ ಧಮನಿಗಳಲ್ಲಿ ಪ್ರವಹಿಸುತ್ತದೆ. ಆದ್ದರಿಂದ ಆಲೋಚನೆಗಳ ಸಣ್ಣಗುಂಪನ್ನು ಕಂಡಿಕೆಯೆಂದು ಕರೆಯಬಹುದು. ಅದು ದೊಡ್ಡ ಪ್ರಬಂಧದ ಅಥವಾ ಕತೆಯ ಒಂದು ಭಾಗವಾದರೂ ಅದರಷ್ಟಕ್ಕೇ ಅದು ಸ್ವಯಂಪೂರ್ಣವೆನ್ನಬಹುದು, ಅಂದರೆ ಅದು ಸಂಪೂರ್ಣಾರ್ಥವನ್ನು ನೀಡುವಂಥದಾಗಿರಬೇಕು. ದೇಹಕ್ಕೆ ಕೈಕಾಲುಗಳಿದ್ದ ಹಾಗೆ ಕಂಡಿಕೆ. ಕೈಕಾಲುಗಳೆಂತು ದೇಹವಲ್ಲವೋ ಕಂಡಿಕೆಯೂ ಪ್ರಬಂಧವಲ್ಲ, ಕತೆಯಲ್ಲ, ಕೈಕಾಲುಗಳಿಲ್ಲದ ದೇಹ ನಿರುಪಯೋಗಿ. ದೇಹ ನಿರುಪಯೋಗಿ. ದೇಹ ದೇಹಾಂಗಗಳ ಸಂಬಂಧ ಕಂಡಿಕೆ ಮತ್ತು ಕಥೆ ಪ್ರಬಂಧಾದಿ ಗದ್ಯರಚನೆಗಳಿಗೆ ಅನ್ವಯಿಸುತ್ತದೆ.

ಸಾಮಾನ್ಯವಾಗಿ ಪ್ರತಿಯೊಂದು ಕಂಡಿಕೆಯಲ್ಲಿಯೂ ಒಂದೊಂದು ಭಾವನೆ ವಿಕಾಸಗೊಳ್ಳುತ್ತದೆ. ಪ್ರಧಾನ ಭಾವನೆಗೆ ಪೋಷಕನಾಗಿ ಅನೇಕ ಉಪಭಾವನೆಗಳು ಹೆಣಿಗೆಗೊಳ್ಳಬಹುದು. ಆದರೆ ಅವುಗಳ ಗತಿಯಲ್ಲಿ ಏಕಮುಖತೆ ಇರಬೇಕಾದ್ದು ಮುಖ್ಯ.

ನರ್ಮದಾ – ಕಾವೇರು ನಡುವಣ ನಡೆದ ಭಾಷಾ ಸಂಕ್ರಮಣದ ಬೆಗೆಯು ಇದಕ್ಕಿಂತ ಬೇರೆಯಾಗಿಲ್ಲ. ನರ್ಮದಾತೀರದ ಭಾಷಿಕ ಸಂಕ್ರಮಣದ ನಡೆದ ಸಂಘರ್ಷವು ಮುಖ್ಯವಾಗಿ ದೇಶಿ ಮತ್ತು ಪ್ರಾಕೃತ (ಮಹಾರಾಷ್ಟೀ ಮತ್ತು ಅರ್ಧಮಾಗಧಿ). ಸಂಸ್ಕೃತವು ತನ್ನ ‘ಗತಿ ಯನ್ನು ತಪ್ಪಿಕೊಳ್ಳಲು ಕ್ರಿ.ಶ. ೫ – ೬ ಶತಮಾನದ ಮುನ್ನವೇ, ಆಸನಬಂಧ ಧೀರ ಸ್ಥಿತಪ್ರಜ್ಞನ ನಿಲುಮೆಯನ್ನು ಸ್ವೀಕರಿಸಿತು. ಅಮೋಘವಾದ ವ್ಯಾಕರಣದ ಅಚರಪೀಠ (ಪೇಟಿಕೆ) ನಿರ್ಮಿಸಿ ಅಲ್ಲಿ ಗೀರ್ವಾಣ ವಾಣಿಯು ಅನಂತಕಾಲದವರೆಗೂ ವಿರಾಜಿಸುತ್ತಿರುವಂತೆ, ಪಾಣಿನಿ ಮಹಾಮುನಿಯು ಭದ್ರವಾದ ಯೋಜನೆಯನ್ನು ಮಾಡಿಟ್ಟಿದ್ದಾನೆ. ಆ ಉನ್ನತ
ಯೊಗಾಸನಸ್ಥ
ಸಂಸ್ಕೃತದ ಗೌರವಕ್ಕೆ ಚ್ಯುತಿಯನ್ನು ತರುವಲ್ಲಿ ಯಾವ ಕಾಲಪುರುಷನು ಯಶಸ್ವಿಯಾಗಿಲ್ಲ. ಆಗುವಂತೆ ತೋರುವುದಿಲ್ಲ ಆಧುನಿಕ ತುಲನಾತ್ಮಕ ಭಾಷಾಶಾಸ್ತ್ರ ದೃಷ್ಟಿಯಿಂದ ಆದ ವಿಶ್ಲೇಷಣದಲ್ಲಿ ಕೂಡ
ಅದರ
ಅಮೋಘ ಅಂತಃಸತ್ವವು ನಿದರ್ಶನಕ್ಕೆ ಬಂದಿವೆ. ಅದನ್ನು ಕಂಡು ಪಾಶ್ಚಾತ್ಯ ವಿದ್ವಾಂಸರೂ ಅಚ್ಚರಿಗೊಂಡಿದ್ದಾರೆ. ಅದು, ಸಂಸ್ಕೃತದ ಪಿರಾಮಿಡ್ಡು ಎಂದು ಕೆಲವರಿಗೆ ತೋರಿದೆ. ಅಲ್ಲ, ಚ್ಯೆತನ್ಯದ ಉಗಮಸ್ಥಾನವನ್ನು ಕಂಡಂತೆ ಅನುಭೂತಿಯನ್ನೀವ ಪವಿತ್ರ ಸಮಾಧಿಸ್ಥಾನ ಅದು, ಎಂದು ಕೆಲವರು ಅನುಭವ ಹೇಳುತ್ತಾರೆ. ಅದೇನೆ ಇದ್ದರೂ ಸಂಸ್ಕೃತವು, ಅನುದಿನದ ಭೂಲೋಕದ ಲೌಕಿಕ ಜೀವನರಂಗದಿಂದ ಹಿಂಜರಿಯಿತು. ಅ – ಲೌಕಿಕವಾಯಿತು.

(ಹಾಲುಮತ ದರ್ಶನ, ಪು. ೪೨.)

ತರ್ಕಬದ್ಧವಾದ, ಏಕಮುಖವಾದ ಉತ್ತಮ ಕಡಿಕೆಗೆ ಇದೊಂದು ಸೊಗಸಾದ ಉದಾಹರಣೆ. ಕಂಡಿಕೆಯ ಲಕ್ಷಣ ಇಷ್ಟೇ ಎಂದು ಹೇಳಲಾಗದಿದ್ದರೂ,, ಇದೊಂದು ಶ್ರೇಷ್ಠ ಲಕ್ಷ್ಯವೆಂದು ಒಪ್ಪಿಕೊಳ್ಳಬಹುದು. ವನಪುಷ್ಪಗಳ ಸೌರಭ, ಹಲವು ಮೂಲಿಕೆಗಳ ಸಂಜೀವಿನಿ ರಸ, ನಾನಾ ಕಲಾನುಭವಗಳ ಮತ್ತು ನಾನಾಶಾಸ್ತ್ರ, ಶಿಕ್ಷಣಗಳ ಫಲಿತಾಂಶಗಳ ಸಾರ ಸಮ್ಮೇಳನ ಈ ಎಲ್ಲ ಹೋಲಿಕೆಗಳು ಸಂಸ್ಕೃತಿಯ ಸ್ವರೂಪವನ್ನು ವಿವರಿಸಿ ಮನಮುಟ್ಟಿಸುವಂಥವಾಗಿವೆ. ಒಂದೊಂದು ಸಂದರ್ಭದಲ್ಲಿ ಮನಸ್ಸಿನಲ್ಲಿ ಮೂಡುವ ಸರ್ವಭಾವನೆಗಳನ್ನು ಲೇಖಕ ಅವನಷ್ಟೇ ಪ್ರತಿಭಾವಂತನಾಗಿರಲಿ ಸ್ಪುಟವಾಗಿ ತಿಳಿಸಬೇಕಾದರೆ ಎರಡು ಮಾತು ಅಥವಾ ಹೋಲಿಕೆಗಳನ್ನು ಹೆಚ್ಚಾಗಿ ಬಳಸಬೇಕಾಗುತ್ತದೆ. ಹೆಚ್ಚು ಬಳಸುವುದು ತಪ್ಪಲ್ಲ, ಅವು ಪ್ರಕೃತ ವಿಷಯಕ್ಕೆ ಹೊರಗಾಗುವುದಾದರೆ ಮಾತ್ರ ದೋಷವಾಗುತ್ತವೆ.

ಮೇಲಣ ನಿದರ್ಶನದಿಂದ ಕಂಡಿಕೆಯ ಮತ್ತೊಂದು ಲಕ್ಷಣ ಸಂಸಿದ್ಧವಾಗುತ್ತದೆ. ಕಂಡಿಕೆಯ ಆದಿಯಲ್ಲಿಯೋ ಮಧ್ಯದಲ್ಲಿಯೋ ಅಥವಾ ಅಂತ್ಯದಲ್ಲಿಯೋ ಒಂದು ಬಿಂದು ಅಥವಾ ಬೀಜವಾಕ್ಯವಿರಲೇಬೇಕು. ಇತರ ವಾಕ್ಯಗಳು ಬೀಜವಾಕ್ಯದಿಂದ ಉದ್ಭವಿಸಿದಂತೆ ಅಥವಾ ಅದನ್ನು ಶ್ರೀಮಂತಗೊಳಿಸುವ ಜೀವವಾಹಿನಿಗಳಂತಿರಬೇಕು. ಇಂಥ ಬೀಜವಾಕ್ಯ ಕಂಡಿಕೆಯ ಪ್ರಾರಂಭದಲ್ಲಿಯೆ ಬರುತ್ತದೆ. ‘ಸಂಸ್ಕೃತಿಯೆಂಬುದು ಆತ್ಮಶಿಕ್ಷಣ’ ಎನ್ನುವ ವಾಕ್ಯದ ವ್ಯಾಖ್ಯಾನದಂತಿವೆ ಉಳಿದ ವಾಕ್ಯಗಳು.

ಕಂಡಿಕೆಯ ಎಲ್ಲ ವಾಕ್ಯಗಳ ನಡುವೆ ಸಾಮರಸ್ಯವಿರಬೇಕು. ಮೈತ್ರಿಯಿರಬೇಕು. ಒಂದು ವಾಕ್ಯದಿಂದ ಮತ್ತೊಂದು ಹೊರಹೊಮ್ಮಿದಂತಿರಬೇಕು. ಆಲೋಚನೆ ಸ್ಪಷ್ಟವಾಗಿರದೆ ಗೊಂದಲ ಗೊಠಾಳೆಗಳಿಗೆ ಗುರಿಯಾದಾಗ ವಾಕ್ಯಗಳಲ್ಲಿ ವಿಷಮತೆ ತಲೆದೋರುತ್ತದೆ. ಇಲ್ಲಿ ಮೊದಲನೆಯದೇ ಬೀಜವಾಕ್ಯ. ಐತಿಹಾಸಿಕ ಸಂಗತಿಗಳನ್ನು ಪ್ರಶ್ನೆ ಪರಿಪ್ರಶ್ನೆಗಳ ಮೂಲಕ ಬಿಚ್ಚಿ ತೋರಿಸಿ, ಪ್ರಶ್ನೆಗಳಲ್ಲಿಯೇ ಉತ್ತರಗಳನ್ನು ಹುದುಗಿಸಲಾಗಿದೆ. ಸಾರ್ವಕಾಲಿಕ ಮತ್ತು ತಾತ್ಕಾಲಿಕಗಳ ಮುಂದಿನ ವಾಕ್ಯಗಳಲ್ಲಿ ವಿವರಿಸಲಾಗಿದೆ. ಈ ಕಂಡಿಕೆಯಲ್ಲಿ ಹೊಸಮಾರ್ಗಗಳ ಅವತಾರ ಮತ್ತು ದ್ವಂದ್ವಗಳ ಸಮನ್ವಯ ಎಂಬ ಎರಡು ವಿಷಯಗಳಿವೆ. ಇವೆರಡೂ ಪರಸ್ಪರಾವಲಂಬಿಗಳಾದ್ದರಿಂದ ಅವುಗಳಲ್ಲಿ ಸಾಮರಸ್ಯ ಘಟಿಸುವಂತಾಗಿ ಇದೊಂದು ಉತ್ತಮ ಗದ್ಯಭಾಗವೆನ್ನಿಸಿಕೊಳ್ಳಲು ಯೋಗ್ಯವಾಗಿದೆ.

ಹಿಂದೆ ತಿಳಿಸಿದಂತೆ ಕಂಡಿಕೆಗಳು ಪ್ರಬಂಧದ ಅವಯವಗಳು. ಅವಯವಗಳು ಕರ್ಮಗಳು ವಿಭಿನ್ನವಾದರೂ, ಅವುಗಳ ದೃಷ್ಟಿ ಧ್ಯೇಯಗಳಲ್ಲಿ ದೂರಾಂತರವಿಲ್ಲ, ಅಷ್ಟೇ ಅಲ್ಲ, ಅವುಗಳ ಸಂಬಂಧ ಅತ್ಯಂತ ಗಾಢವಾದುದೂ ಅಹುದು. ಕೇವಲ ವಿರಾಮಕ್ಕೋಸ್ಕರ ಕಂಡಿಕೆಗಳ ವಿಭಜನೆಯೇ ಹೊರತು, ವಾಸ್ತವವಾಗಿ ಅವೆಲ್ಲ ಅವಿಚ್ಛಿನ್ನವಾದ ಪೂರ್ಣ ರಚನೆಗಳು. ಅವುಗಳ ಬಿಡಿತನ ಕೃತಕ, ಇಡಿತನ ಮಾತ್ರ ಸಹಜ. ಹಿಂದಿನ ಕಂಡಿಕೆಯ ವಿಚಾರಸ್ರೋತ ಅಲ್ಲಿಯೇ ಬತ್ತಿಹೋಗದೆ ಮುಂದೆಯೂ ಪ್ರವಹಿಸುತ್ತದೆಯಾದ್ದರಿಂದ ಹಿಂದಿನ ಕಂಡಿಕೆಯಿಂದ ಮುಂದಿನ ಕಂಡಿಕೆ ಉದ್ಭವವಾದಂತಿರಬೇಕು. ಅಂದರೆ ಹಿಂದಿನದರ ಕೊನೆಯ ವಾಕ್ಯದ ಭಾವ ಭಾವನೆಗಳು ಮುಂದಿನದರ ಮೊದಲನೆಯ ವಾಕ್ಯದಲ್ಲಿ ಅನುರಣನಗೊಳ್ಳಬೇಕು. ಹಿಂದೆ ಉದ್ಧರಿಸಿರುವ ಕಂಡಿಕೆಯ ನಂತರ ಬರುವ ಮತ್ತೊಂದನ್ನು ಪರಿಶೀಲಿಸಿದರೆ ಈ ತತ್ತ್ವದ ಪ್ರಯೋಜನ ಸ್ವಾರಸ್ಯಗಳು ಮನದಟ್ಟಾಗುತ್ತವೆ.

‘ಮಹಾರಾಷ್ಟ್ರೀ ಭಾಷೆ ಇದೆ, ಈ ಭಾಷಿಕರೂ ಇದ್ದಾರೆ. ಇವರ ನಾಡಿನ ಹೆಸರೂ ಮಹಾರಾಷ್ಟ್ರ. ಏಳನೇಯ ಶತಮಾನದವರೆಗೆ ಎಲ್ಲಿ ಒಂದೆಡೆಯಲ್ಲಿಯೂ ಪ್ರಾದೇಶಿಕ ಉಲ್ಲೇಖವಿಲ್ಲ! ಮೂರೂ ಮಹಾರಾಷ್ಟ್ರಕಗಳನ್ನು ೨ನೆಯ ಪುಲಕೇಶಿ ಗೆಲ್ಲುತ್ತಾನೆ, ಎಂದರೇನು ಅರ್ಥ? ‘ಮಹಾರಾಷ್ಟ್ರ – ತ್ರಯ ಎಂಬಲ್ಲಿಯ ‘ತ್ರಯ’ದ ಮೂಲಕ ‘ಕ ಪ್ರತ್ಯಯ ಅಲ್ಪಾರ್ಥಕವೆಂದು ಗ್ರಹಿಸಬೇಕಾಗುತ್ತದೆ. ಮೊತ್ತಮೊದಲಲ್ಲಿ ಮಹಾರಾಷ್ಟ್ರವಿದ್ದು, ಬಳಿಕ ಅದು ಮೂರು ತುಂಡಾಗಿ ಹರಿದು ಹಂಚಿಹೋಗಿರುವ ಶಕ್ಯತೆಯೂ ಉಂಟು. ಒಂದು ಮಹಾ – ರಾಷ್ಟ್ರವೂ ಒಡೆದುಹೋಗಲು ಸಂಭವಿಸಿರಬಹುದಾದ ಘಟನೆಯ ಉಲ್ಲೇಖವಿಲ್ಲ, ಒಂದು ದಂತಕಥೆ ಕೂಡ ಇಲ್ಲ!

ಆದರೆ, ಒಂದು ಶಕ್ಯತೆ ಹೀಗಿದೆ : ‘ಮಹಾ – ರಾಷ್ಟ್ರ ಎಂಬ ಸ್ಥಲನಾಮವು ರೂಢವಾಗುವ ಮೊದಲೇ ‘ಮಹಾ – ರಾಷ್ಟ್ರಿಕ ಎಂಬ ಹೆಸರಿನ ಜನದ ಒಂದು ಹೊಸ ಪಂಗಡವು, ಯಾವುದೊಂದು ದೇಶ ವಿಭಾಗದಲ್ಲಿ ಮೈದಾಳುತ್ತಿರಬೇಕು. ಮಹಾರಾಷ್ಟ್ರೀಕರ ಪಂಗಡವು ಸಾಕಷ್ಟು ಪ್ರಭಾವ ಶಾಲಿಯಾಗತೊಡಗಿದ ಹಾಗೆ, ಆ ಸುತ್ತಲಿನ ಭಾಗದ ಪ್ರದೇಶವು ಜನದ ಹೆಸರಿನಿಂದ ಸಂಬೋಧಿಸಲ್ಪಡುವುದಕ್ಕೆ ಪ್ರಾರಂಭವಾಗಿರಬೇಕು. ಈ ಜನವೆಲ್ಲ ಒಂದೆಡೆಯಲ್ಲಿಯೇ ಇರುವುದ ಶಕ್ಯವಿಲ್ಲ. ಯಾವುದೊಂದು ನಾಡಿನಲ್ಲಿ ತಲೆದೋರುವ ನೂತನ ಪಕ್ಷ ಪಂಗಡಗಳು, ಬೆಳೆಯಲು ಅನುಕೂಲವಿದ್ದ ಭಾಗದಲ್ಲಿ, ಅಲ್ಲಲ್ಲಿ ಸುಪ್ರತಿಷ್ಠಿತರಾಗಿ ಬೆಳೆದಂತೆ, ಬೇರೆ ಬೇರೆ ಎಡೆಗಳಲ್ಲಿ ಹೀಗೆಯೇ ಬೇರುಬಿಟ್ಟು ಬಲಿಯ ತೊಡಗಿದ ತಮ್ಮ ಪಕ್ಷ ಪಂಗಡಗಳೊಡನೆ ಕೂಡಿಕೊಳ್ಳುವುದುಂಟು. ಈ ಬಗೆಯಲ್ಲಿ ಹೊಸತಾಗಿ ಆಗತೊಡಗಿದ ಮಹಾರಾಷ್ಟ್ರಿಕರು ಒಂದೊಂದೆಡೆಯಲ್ಲಿ ಸು – ಸ್ಥಿರರಾಗಿ ಅವರ ಹೆಸರಿನ ದೇಶ ವಿಭಾಗವು ಅಲ್ಲಿ ಇಲ್ಲಿ ತಲೆಯೆತ್ತಿರುವ ಶಕ್ಯತೆಯಿದೆ. ೨ನೆಯ ಪುಲಕೇಶಿಯು, ಇಂತಹ ಮಹಾರಾಷ್ಟ್ರಿಕರ ಹೆಸರಿನಿಂದ ಸಂಬೋಧಿಸಲ್ಪಡುತ್ತಿದ್ದ ಮೂರು ವಿಭಾಗಗಳನ್ನು ಗೆದ್ದಿರಬೇಕು.

ಇಲ್ಲಿಯೂ ನೂತನ ಕಾವ್ಯಮಾರ್ಗದ ಪ್ರಸ್ತಾಪವಿದೆ. ಹಳೆಯದರ ಮುಂದುವರಿಕೆಯೆಂದರೆ ಪುನರಾವರ್ತನೆಯೆಂದು ತಿಳಿಯಬಾರದು. ಕಂಡಿಕೆಯ ಮೊದಲನೆಯ ವಾಕ್ಯ ಹಳತು ಹೊಸತರ ಸಂಗಮ ಸ್ಥಾನದಂತಿರಬೇಕು. ಮುಂದಿನ ವಾಕ್ಯಗಳಲ್ಲಿ ನೂತನ ವಿಷಯಗಳ ಆವಿಷ್ಕಾರವಿರಬೇಕು. ನೂತನ ಪ್ರಯೋಗವೂ ಕಾಲಕ್ರಮೇಣ ಹೇಗೆ ಜಡ ಸಂಪ್ರದಾಯವಾಗುತ್ತದೆನ್ನುವುದರ ವಿವರಣೆ ಅಲ್ಲಿ ವಿನ್ಯಾಸಗೊಂಡಿದೆ. ಮುಂದಿನ ಎರಡು ಕಂಡಿಕೆಗಳಲ್ಲಿಯೂ ಇಂಥದೇ ತಂತ್ರವಿಧಾನಗಳನ್ನು ಕಾಣಬಹುದು.

ಒಂದು ಕಂಡಿಕೆಯಲ್ಲಿ ಇಷ್ಟೇ ವಾಕ್ಯವಿರಬೇಕೆಂಬ ನಿಯಮ ಸಲ್ಲದು. ಆಲೋಚನೆಯ ವಿಸ್ತಾರ ವೈವಿಧ್ಯಗಳು ಅದನ್ನು ನಿರ್ಣಯಿಸುತ್ತವೆ. ಒಂದು ಮಾತು ಮಾತ್ರ ನಿಜ. ಕಂಡಿಕೆ ಸುದೀರ್ಘವಾದರೆ ಶೈಲಿಯನ್ನು ಉಬ್ಬುತಗ್ಗುಗಳೂ ಸಿಕ್ಕು ಗಂಟುಗಳು ಏಕತಾನತೆಯೂ ಪ್ರವೇಶಿಸುವ ಸಂಭವವುಂಟು. ಆಲೋಚನೆ ಸಾಂದ್ರವಾಗಿದ್ದಾಗ ದೀರ್ಘಸೂತ್ರತೆಗವಕಾಶವಿರುವುದಿಲ್ಲ. ಅದು ಅರಳೆಯಂತೆ ಹಿಂಜಿಕೊಂಡಾಗ ಮಂಜಿನಂತೆ ಆವಿಯಾದಾಗ ಅದು ಮುಷ್ಟಿಗ್ರಾಹ್ಯವಾಗುವುದಿಲ್ಲ. ಆಗ ಶಬ್ದಾಡಂಬರವೇ ಅಧಿಕವಾಗುತ್ತದೆ. ಈ ಭಾಗ ಇಂತೆಯೇ ನಿರರ್ಗಳವಾಗಿ ಎಡೆತಡೆಯಿಲ್ಲದೆ ಮುಂದುವರಿಯುತ್ತದೆ. ಇಲ್ಲಿ ಪ್ಯಾರಾ ವಿಂಗಡಣೆಯಿರಲಿ, ವಾಕ್ಯ ವಿಭಜನೆಯೂ ನಡೆದಿಲ್ಲ. ಇಡೀ ಕಂಡಿಕೆಯೇ ಒಂದು ಸಂಯೋಜಿತ ವಾಕ್ಯವೆಂಬತೆ ಭಾಸವಾಗುತ್ತದೆ.

III

ಮೇಲಿನ ಅಂಶಗಳನ್ನು ಅನುಲಕ್ಷಿಸಿ ಶಂಬಾ ಗದ್ಯಶೈಲಿಯ ವೈಲಕ್ಷಣಗಳನ್ನು ಹೀಗೆ ಕಲೆಹಾಕಬಹುದು.

೧. ಶಂಬಾ ಅವರ ಗದ್ಯರಚನೆ ಸರಳವಾಗಿರುತ್ತದೆ. ವಾಕ್ಯಗಳು ಚಿಕ್ಕ ಚಿಕ್ಕವಾಗಿದ್ದು ಹೇಳಬೇಕಾದ ವಿಚಾರ ಅತ್ಯಂತ ಸ್ಫುಟವಾಗಿ ವ್ಯಕ್ತವಾಗುತ್ತದೆ.

೨. ತರ್ಕಬದ್ಧವಾದ ವಿಚಾರ ಸರಣಿಯ ಜೊತೆಗೆ ಒಂದು ರೀತಿಯ ಲಯವಿದೆ. ಈ ಹೃದ್ಯವಾದ ಗದ್ಯವು ಪದ್ಯಾತ್ಮಕ ಗದ್ಯವಾಗಿದೆ. ಗದ್ಯದಲ್ಲಿ ಕಾವ್ಯಶಕ್ತಿಯನ್ನು ತುಂಬಿದುದು ಶಂಬಾ ಅವರ ಗದ್ಯಶೈಲಿಯ ಲಕ್ಷಣಗಳಲ್ಲಿ ಒಂದಾಗಿದೆ.

೩. ಖಚಿತತೆ, ನಿಖರತೆ ಹಾಗೂ ಸಂವಹನಶೀಲತೆ ಗದ್ಯಶೈಲಿಯ ಮುಖಲಕ್ಷಣಗಳಾಗಿದ್ದು ಶಂಬಾ ಅವರ ಗದ್ಯದಲ್ಲಿ ಈ ಗುಣಗಳನ್ನು ನಿಚ್ಚಳವಾಗಿ ಗುರುತಿಸಬಹುದು. ಭಾಷೆ, ಸಂಸ್ಕೃತಿಗೆ ಸಂಬಂಧಿಸಿದಂತೆ ಅವರು ಯಾವುದೇ ವಿಷಯ ಕುರಿತು ಬರೆಯಲಿ ಅದರ ಮುಖ್ಯ ಲಕ್ಷಣಕ್ಕೆ ಕೈಹಾಕಿ ಸಕಾರಣವಾಗಿ ಸಿದ್ಧಾಂತ ಮಂಡಿಸುತ್ತಾರೆ.

೪. ಅವರ ಶೈಲಿಯು ಕೆಲವೆಡೆ ಮಿತವ್ಯಯ ಗುಣವನ್ನು ಸಾಧಿಸಿದಂತೆ ಕೆಲವು ಬರಹಗಳಲ್ಲಿ ವಿಸ್ತರಣೀಯ ಗುಣವನ್ನು ಸಾಧಿಸಿದೆ. ಆಯ್ಕೆ ಮಾಡಿಕೊಂಡ ಸಂಶೋಧನೆಯ ಸಮಸ್ಯೆಯ ಮೇಲೆ ಅದು ಅವಲಂಬಿಸಿರುತ್ತದೆ.

೫. ವಾಕ್ಯಗಳ ಓಟದಲ್ಲಿ ಲಾಲಿತ್ಯ, ಭಾವನೆಗಳನ್ನು ಶಕ್ತಿಯುತವಾಗಿ ವ್ಯಕ್ತಪಡಿಸುವ ಪದಜೋಡಣೆ ಇವೆಲ್ಲವುಗಳಿಂದ ಅವರ ಗದ್ಯಶೈಲಿ ಬಹು ಆಕರ್ಷಕವಾಗಿದೆ. ಇದರಿಂದ ಮೊದಲ ಓದಿಗೆ ಓದುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಶಂಬಾ ಅವರು ಬೆಳಗಾವಿ ಜಿಲ್ಲೆಯ ವ್ಯವಹಾರಿ ಶಿಷ್ಠಭಾಷೆಯನ್ನು ಬಳಸುವುದರಿಂದ ಪದ ಜೋಡಣೆಯಲ್ಲಿ, ವಾಕ್ಯ ವಿನ್ಯಾಸದಲ್ಲಿ ಒಂದು ಬಗೆಯ ಲಯ ಕಂಡುಬರುತ್ತದೆ.

೬. ಶಂಬಾ ಅವರ ಬರವಣಿಗೆಯಲ್ಲಿ ಲವಲವಿಕೆ ಹೆಚ್ಚು. ಯಾವುದೇ ಎರಡು ತೋಡರುಗಳಿಲ್ಲದೆ ಓದಿಸಿಕೊಂಡು ಹೋಗುತ್ತದೆ. ಸಂದರ್ಭಕ್ಕೆ ತಕ್ಕಂತೆ ಗಾದೆ, ನುಡಿಗಟ್ಟು ಮುಂತಾದ ವಾಗ್ರೂಢಿಗಳು, ಶಬ್ದಚಿತ್ರಗಳು, ರೂಪಕಗಳು ಬಳಕೆಯಾಗಿ ಅವರ ಬರಹಗಳಿಗೆ ಶಕ್ತಿ ತಂದುಕೊಟ್ಟಿದೆ. ಅವರಿಗೆ ವಿಷಯದ ಮೇಲೆ ಹಿಡಿತವಿರುವುದರಿಂದ ಭಾಷೆ ಸತ್ವಯುತವಾಗಿ ಬಳಕೆಯಾಗಿದೆ, ಅಭಿವ್ಯಕ್ತವಾಗಿದೆ.

೭. ಶಂಬಾ ಅವರ ಸಂಶೋಧನೆಯಲ್ಲಿ ಭಾಷೆ ಕೇವಲ ಅಭಿವ್ಯಕ್ತಿಯ ಸಾಧನವಲ್ಲದೆ ಮೌಲ್ಯಗಳ ನಿಕಷವೂ ಸಾಂಸ್ಕೃತಿಕ ಮಹತ್ವವೂ ಆಗಿರುವುದನ್ನು ಗಮನಿಸಬೇಕು. ಅವರ ಕನ್ನಡದ ನೆಲೆ, ಕಣ್ಮರೆಯಾದ ಕನ್ನಡ ಮುಂತಾದ ಕೃತಿಗಳನ್ನು ವಿವೇಚಿಸಿದಾಗ ಕನ್ನಡ ಪರ ಕಾಳಜಿ, ಕನಿಕರ ಅವರ ಭಾಷೆಯಲ್ಲಿ ವ್ಯಕ್ತವಾಗಿದೆ.

೮. ವಾಚಾರ್ಥ ಅವರ ಗದ್ಯದ ಜೀವಾಳ. ಭಾಷೆಯ ಬಗೆಗೆ ಬರೆಯಲಿ, ಸ್ಥಳನಾಮ ಕುರಿತು ವಿವೇಚಿಸಲಿ ಅವರ ವಿಸ್ತಾರದ ವ್ಯಾಸಂಗ, ಸ್ಪಷ್ಟ ಆಲೋಚನೆ, ತಿಳಿಯಾದ ಬರವಣಿಗೆ ಹಾಗೂ ಬೆದಕಿ ವಸ್ತುಸ್ಥಿತಿಯನ್ನು ತಿಳಿಯುವ ಹಂಬಲ ಅವರ ಬರಹಗಳ ಉದ್ದಕ್ಕೂ ಗೋಚರಿಸುತ್ತದೆ.

ಒಂದು ನಿರ್ದಿಷ್ಟ ವಿಷಯಗಳನ್ನು ಕೇಂದ್ರೀಕರಣಗೊಳಿಸಿ ಕೃತಿಗಳನ್ನು ಬರೆದ ಮೇಲೆ ಅಚ್ಚಿನ ಮುನ್ನ ತಿದ್ದಿ ತೀಡಿ, ಪರಿಷ್ಕರಿಸಿ ವಸ್ತುವೂ ಅಭಿವ್ಯಕ್ತಿಯ ವಿಧಾನವೂ ಎರಡು ಉತ್ಕೃಷ್ಟವಾಗಿರುವಂತೆ ಪ್ರಯತ್ನಿಸುವುದು ಅವರ ಪದ್ಧತಿ. ಪ್ರಕಟವಾದ ಮೇಲೂ ಅವಶ್ಯ ಕಂಡಲ್ಲಿ ತಿದ್ದುಪಡಿ ಮಾಡಿಕೊಳ್ಳುವುದು ಅವರ ಕ್ರಮ. ಮುದ್ರಣದ ಅಚ್ಚುಕಟ್ಟುತನದ ಬಗ್ಗೆ ಅವರ ಅವರಿಗೆ ವಿಶೇಷ ಗಮನ. ತಪ್ಪಿಲ್ಲದಂತೆ ಮುದ್ರಿಸುವ ಕಡೆಗೆ ಅವರ ಕಾಳಜಿ ಅಪಾರ. ಅವರ ಬರಹಗಳಲ್ಲಿ, ಅಡಿಟಿಪ್ಪಣಿಗಳು, ವಿರಾಮಚಿಹ್ನೆಗಳು, ಉಲ್ಲೇಖಗಳು ಎಲ್ಲವೂ ಅಚ್ಚುಕಟ್ಟಾಗಿ ಬಳಕೆಯಾಗಿವೆ.

ಶಂಬಾ ಅವರ ನಿರೂಪಣೆಯಲ್ಲಿ ಒಂದು ಕ್ರಮವಿದೆ, ಶಿಸ್ತುವಿದೆ, ವ್ಯವಸ್ಥಿತ ಚಿಂತನೆಯಿದೆ. ಇವುಗಳಿಂದ ಅವರ ಸಂಪ್ರಬಂಧಗಳ ಅನಿರೀಕ್ಷಿತ ಸ್ಥಳಗಳಲ್ಲಿ ಅಮೂಲ್ಯವಾದ ಹೊಸ ವಿಷಯಗಳು ಸಿಗುತ್ತವೆ. ಶಂಬಾ ಅವರದು ಸುಸಂಸ್ಕೃತ ಹೃದಯ. ಅಂತೆಯೇ ಅವರ ಶೈಲಿಯಲ್ಲಿ ಉದ್ವೇಗ, ಆಂಡಬರ, ಆಕ್ರೋಶ, ವಿಡಂಬನೆ ಇವು ಯಾವವೂ ಕಂಡು ಬರುವುದಿಲ್ಲ.ಅವರು ನೇರವಾಗಿ ಇದ್ದುದ್ದನ್ನು ಇದ್ದಂತೆ ಹೇಳುವುದರಿಂದ ಅವರ ಬರಹಗಳ ಬಗ್ಗೆ ನಂಬಿಕೆ ಹುಟ್ಟುತ್ತದೆ. ಶಂಬಾ ಅವರ ಶೈಲಿಯನ್ನು ಸ್ಥೂಲವಾಗಿ ಸ್ವಭಾವೋಕ್ತಿ ಅಲಂಕಾರಕ್ಕೆ ಹೋಲಿಸಬಹುದು. ಹೀಗಾಗಿ ಶಂಬಾ ಅವರ ಸಂಶೋಧನೆ ಓದುಗರಿಗೆ ಬಹಳ ಸಂತೋಷ ಕೊಡುತ್ತದೆ.

ಹೀಗೆ, ಶಂಬಾ ಅವರ ಗದ್ಯಶೈಲಿಯಲ್ಲಿ ಅಸ್ಖಲಿತವಾಗಿ ಹರಿದು ಬಂದಿದೆ. ಬೆಲ್ಲದ ಬೊಂಬೆಯನ್ನು ಯಾವ ಕಡೆಯಿಂದ ನೆಕ್ಕಿದರೂ ಸಿಹಿ ತಾನೆ. ಶಂಬಾ ಅವರ ಶೈಲಿ ಅಷ್ಟೇ ಸೊಗಸಾಗಿದೆ. ಶಂಬಾ ಅವರಷ್ಟು ಖಚಿತರಾಗಿ ವಿಷಯ ನಿರೂಪಿಸುವವರು ಇಂದು ಬೇರೊಬ್ಬರಿರುವುದು ನನಗೆ ಸಂದೇಹ. ಅವರು ಬರವಣಿಗೆಯಲ್ಲಿ ಯಾರನ್ನೂ ಅನುಸರಿಸದೆ ಸ್ವಂತ ನಿರೂಪಣೆಯ ವಿಧಾನವನ್ನು ರೂಢಿಸಿಕೊಂಡಿರುವುದರಿಂದ ಅವರ ಬರವಣಿಗೆ ಇತರರಿಗೆ ಮಾದರಿಯಾಗಿದೆ. ಅಂತೆಯೇ ಹಲವು ಭಿನ್ನ ಶೈಲಿಗಳ ನಡುವೆಯೂ ಶಂಬಾ ಶೈಲಿಯನ್ನು ಸುಲಭವಾಗಿ ಗುರುತಿಸಬಹುದು. ಕನ್ನಡ ಗದ್ಯದ ಬೆಳವಣಿಗೆಯಲ್ಲಿ ಶಂಬಾ ಅವರ ಮುದ್ರೆ ಇದ್ದೇ ಇದೆ.