ಕೆಲವು ವರ್ಷಗಳ ಹಿಂದೆ ಸರಿಯಾಗಿ ಹೇಳಬೇಕಾದರೆ ೨೦೦೩ರಲ್ಲಿ ಶ್ರೇಷ್ಠ ವಿದ್ವಾಂಸ ಡಾ. ಎಂ. ಚಿದಾನಂದಮೂರ್ತಿ ಅವರ ಸಂಶೋಧನೆಯನ್ನು ಕುರಿತು “ಕನ್ನಡ ಸಂಶೋಧನೆ ಮತ್ತು ಎಂ. ಚಿದಾನಂದಮೂರ್ತಿ” ಎಂಬ ಗ್ರಂಥವನ್ನು ರಚಿಸಿದೆ. ಅದನ್ನು ಬೆಂಗಳೂರಿನ ಸಪ್ನ ಬುಕ್‌ಹೌಸ್ ಪ್ರಕಟಿಸಿತು. ನನ್ನ ಗ್ರಂಥ ಪ್ರಕಟವಾದ ಎರಡು ವರ್ಷಗಳಲ್ಲಿಯೇ ಅದರ ಪ್ರತಿಗಳು ಮುಗಿದವು. ಆ ಗ್ರಂಥ ಸಂಶೋಧನ ವಿದ್ಯಾರ್ಥಿಗಳ ಓದಿನ ಭಾಗವಾಗಿದೆ ಎಂದು ಗೆಳೆಯರಿಂದ ತಿಳಿದಾಗ ತುಂಬ ಸಂತೋಷವಾಯಿತು. ಅದೇ ಗ್ರಂಥವನ್ನು “ಎಂ. ಚಿದಾನಂದಮೂರ್ತಿ ಸಾಹಿತ್ಯ ಸಾಧನೆ” ಎಂಬ ಶೀರ್ಷಿಕೆಯಲ್ಲಿ ಪರಿಷ್ಕರಿಸಿ, ವಿಸ್ತರಿಸಿದೆ. ಮತ್ತೆ ಅದನ್ನು ಸಪ್ನ ಬುಕ್‌ಹೌಸ್‌ಪ್ರಕಟಿಸಿತು (೨೦೧೦). ಇದು ಆ ಸಂಸ್ಥೆಯ ಸೌಜನ್ಯಕ್ಕೆ ಸಾಕ್ಷಿಯಾಗಿದೆ. ಇದೇ ಅವಧಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಡಾ. ಶಂಬಾ ಜೋಶಿ ಅಧ್ಯಯನ ಪೀಠದ ಸಂಚಾಲಕರಾದ ಗೆಳೆಯ ಡಾ. ಸಾಂಬಮೂರ್ತಿ ಅವರು ಶಂಬಾ ಅವರ ಭಾಷಿಕ ಚಿಂತನೆಗಳನ್ನು ಕುರಿತು ಗ್ರಂಥವನ್ನು ನಾನು ರಚಿಸಬೇಕೆಂದು ತಿಳಿಸಿದರು. ನಾನು ಅವರಿಗೆ ಪ್ರೋತ್ಸಾಹದ ಮಾತುಗಳನ್ನಾಡಿ ಸಮಾಧಾನ ಪಡಿಸಿದೆ. ನಾನು ಕಂಡಾಗಲೆಲ್ಲ ಡಾ. ಮೂರ್ತಿಗಳು ಕೃತಿ ರಚನೆ ಕುರಿತು ನೆನೆಪಿಸುತ್ತಿದ್ದರು, ಪ್ರೀತಿ ಪೂರ್ವಕವಾಗಿ ಒತ್ತಾಯವನ್ನೂ ಮಾಡುತ್ತಿದ್ದರು, ಒಮ್ಮೆ ಅಧೀಕೃತ ಪತ್ರವನ್ನು ಕಳಿಸಿಯೇ ಬಿಟ್ಟರು. ‘ನನಗೆ ಸಮಯ ಕೊಡಿ’ ಎಂದು ಹೇಳಿದೆ. ಆದರೆ ಮೂರ್ತಿಗಳು ನನ್ನನ್ನು ಅಷ್ಟಕ್ಕೆ ಬಿಡಲಿಲ್ಲ. ಪ್ರಕಟನೆಯ ಭಾರವನ್ನು ಪೀಠ ವಹಿಸುವುದಾಗಿಯೂ ಬರವಣಿಗೆಯ ಕೆಲಸ ನಿಮ್ಮದೆಂದು ಹೇಳಿದರು. ಅವರ ಪ್ರಾಮಾಣಿಕತೆಗೆ, ಶಂಬಾ ಅವರ ಬಗ್ಗೆ ಅವರಿಗಿದ್ದ ಭಾವನಾತ್ಮಕ ಗೌರವಕ್ಕೆ, ನನ್ನ ಬಗ್ಗೆ ತೋರಿದ ವಿಶ್ವಾಸಕ್ಕೆ ಮಾರು ಹೋದೆ, ಒಪ್ಪಿಕೊಂಡೆ. ಒಂದೂವರೆ ವರ್ಷಗಳ ಕಾಲ ಅವರನ್ನು ವಿಧಿಯಿಲ್ಲದೆ ಕಾಯಿಸಿದೆ. ಅವರು ಅದನ್ನು ಸಹಿಸಿದ್ದಾರೆ. ಒಂದು ಇಲಾಖೆಯ ಮುಖ್ಯಸ್ಥನಿಗೆ ಇರಬೇಕಾದ ಹಲವು ಗುಣಗಳಲ್ಲಿ ಸಹನೆ ಕೂಡ ಒಂದು ಎಂದು ಭಾವಿಸಿ ಈ ವಿಳಂಬವನ್ನು ಅವರು ಸಹಿಸಿರುವಂತಿದೆ!

ಕರ್ನಾಟಕ ಸಾಂಸ್ಕೃತಿಕ ಶೋಧದ ಪ್ರಸ್ತಾಪ ಬಂದಾಗ ಥಟ್ಟನೆ ನೆನಪಿಗೆ ಬರುವ ಹೆಸರು. ಡಾ. ಶಂಬಾ ಜೋಶಿ ಅವರದು. ಅವರು ಕರ್ನಾಟಕ ಸಾಂಸ್ಕೃತಿಕ ಚರಿತ್ರೆಗೆ ಸಂಬಂಧಿಸಿದಂತೆ ಹಲವಾರು ಕೃತಿಗಳನ್ನು ಬರೆದಿದ್ದಾರೆ. ಭಾಷಿಕ ಮತ್ತು ಸ್ಥಳನಾಮಗಳ ಮೂಲಕ ಕರ್ನಾಟಕ ಸಂಸ್ಕೃತಿಯನ್ನು ಪುನರಚಿಸಲು ಯತ್ನಿಸಿದವರಲ್ಲಿ ಶಂಬಾ ಅವರೇ ಮೊದಲಿಗರು. ಕರ್ನಾಟಕ ಸಂಸ್ಕೃತಿಯ ಬಗ್ಗೆ ಅವರಿಗೆ ಅತೀವ ಅಭಿಮಾನ. ಹಾಗೆಂದು ಆ ಅಭಿಮಾನ ಕೇವಲ ಭಾವಸ್ತರದ ಮಟ್ಟಕ್ಕೆ ನಿಲ್ಲುವಂತಹದಲ್ಲ. ದೇಸಿ ಸಂಸ್ಕೃತಿಯ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಬೇಕು, ಇತರರಿಗೆ ತಿಳಿಸಿಕೊಡಬೇಕೆಂಬ ಆಸಕ್ತಿಯಿಂದ ಪ್ರೇರಿತವಾಗಿ ತಲಸ್ಪರ್ಶಿ ಅಧ್ಯಯನಕ್ಕೆ ತೊಡಗುವಂತಹುದು. ಸಂಸ್ಕೃತಿಗೆ ಸಂಬಂಧಿಸಿದಂತೆ ಕಾವ್ಯ, ಪುರಾಣ, ದೈವಗಳು, ಸಂಕೇತಗಳು ಮತ್ತು ಭಾಷಿಕ ಆಕೃತಿಗಳು ಮುಂತಾದ ಆಕರಗಳನ್ನು ಸಂಗ್ರಹಿಸಿ, ಒಂದಕ್ಕೊಂದು ಹೋಲಿಸಿ ಅವುಗಳ ಸಾಮ್ಯ ವೈಷಮ್ಯಗಳನ್ನು ಗುರುತಿಸಿ ಇತರ ಸಂಸ್ಕೃತಿಗಳಿಗಿಂತ ಕನ್ನಡ ಸಂಸ್ಕೃತಿ ಹೇಗೆ ಭಿನ್ನವಾಗಿದೆ? ಅದರ ಅನನ್ಯತೆ ಮತ್ತು ಪ್ರಾಚೀನತೆ ಏನು? ಇವುಗಳನ್ನು ಸಾಧಿಸುವ ಪ್ರಯತ್ನ ಶಂಬಾ ಅವರದು.

ಶಂಬಾ ಅವರ ಸಂಶೋಧನೆಯು ಮೂಲತಃ ಶುದ್ಧ ಜ್ಞಾನದ ಕಾಲ, ದೇಶ, ಜೀವನ ತತ್ವದ ಉದಾರವಾದಿ ನಿಲುವು ಇವುಗಳ ಪರವಾಗಿಯೇನೂ ಇಲ್ಲ. ವಾಸ್ತವವಾಗಿ ಈ ದಾರಿಗೆ ವಿರುದ್ಧವಾದ ದಾರಿಯನ್ನೇ ಅವರು ಸಂಶೋಧನೆಯ ಆಶಯವನ್ನಾಗಿ ಆಯ್ದುಕೊಂಡರು. ಹೀಗಾಗಿ ದೇಸಿ ಬೇರುಗಳ ಗುರುತಿಸುವಿಕೆ ಅವರ ಸಂಶೋಧನೆಯ ಮುಖ್ಯ ಭಿತ್ತಿಯಾಯಿತು. ಕರ್ನಾಟಕದ ಬಗ್ಗೆ ಕೆಲಸ ಮಾಡಿದ ಓರಿಯಂಟಲ್ ವಿದ್ವಾಂಸರು ಕನ್ನಡ ಚಿಂತನೆ ಧಾರ್ಮಿಕ ಮೂಲವಾದುದು, ಧಾರ್ಮಿಕ ಪ್ರವೃತ್ತಿಯದು ಎಂದು ತಿಳಿದಿದ್ದರು. ಶಂಬಾ ಆದಿಯಾಗಿ ಆ ಕಾಲದ ದೇಸಿ ಪಂಡಿತರು ಓರಿಯಂಟಲಿಸ್ಟರ ಈ ವಾದವನ್ನು ಕನ್ನಡದಲ್ಲಿ ಒಂದು ವಾಗ್ವಾದದ ಭೂಮಿಕೆಯೆಂದು ಭಾವಿಸಲೇ ಇಲ್ಲ ಎಂಬುದು ಬಹಳ ಮುಖ್ಯವಾದ ಸಂಗತಿ. ಮತ ಧರ್ಮವು ಮಾಡುತ್ತಿದ್ದ ಸೀಮಿತ ಅರ್ಥದ ಚರ್ಚೆಗೂ ಕನ್ನಡ ಸಂಸ್ಕೃತಿ ಇದನ್ನು ಮೀರಿ ಮಾಡುತ್ತಿದ್ದ ಧಾರ್ಮಿಕ ನಡಾವಳಿಯ ಅರ್ಥಪೂರ್ಣ ಚರ್ಚೆಗೂ ಇದ್ದ ಅಂತರವನ್ನು ಶಂಬಾ ಗುರುತಿಸಿದ್ದರು.

ಇಂತಹ ಪರಂಪರೆಯ ಅರ್ಥಪೂರ್ಣ ವಿಶ್ಲೇಷಣೆಯ ಬೆಳವಣಿಗೆಗಾಗಿಯೇ ನಂತರದ ತಲೆಮಾರಿನ ವಿದ್ವಾಂಸರಲ್ಲಿ ಶಂಬಾ ಅವರ ಸಂಶೋಧನೆಯು ಮಹತ್ವ ಪಡೆಯುತ್ತದೆ. ಕನ್ನಡ ಭಾಷೆ ತನ್ನ ಮೂಲಭಾಷೆಯಾದ ಮೂಲ ದ್ರಾವಿಡದಿಂದ ಬಿಡುಗಡೆ ಪಡೆದದ್ದು ಯಾವ ಕಾಲದಲ್ಲಿ ಎಂಬ ಐತಿಹಾಸಿಕ ಪ್ರಶ್ನೆಯನ್ನೆತ್ತಿಕೊಂಡು ಆ ಭಾಷೆಯ ಭೌಗೋಳಿಕ ಕ್ಷೇತ್ರದ ವಿಸ್ತಾರ ಮತ್ತು ಸಂಕೋಚನಗಳನ್ನು ಇತಿಹಾಸದ ಕ್ರಮದಲ್ಲಿ ಗುರುತಿಸುತ್ತ ಉಳಿದ ಭಾಷೆಗಳ ಜೊತೆಗೆ ಅದರ ಸಂಬಂಧವನ್ನು ನಿರ್ಣಯಿಸುತ್ತ, ಸಾವಿರಾರು ವರ್ಷಗಳ ಅವಧಿಯಲ್ಲಿ ಸಾಂಸ್ಕೃತಿಕ ಚಿಂತನೆಯ ಬೇರೆ ಬೇರೆ ಧಾರೆಗಳನ್ನು ಗುರುತಿಸಲು ಪ್ರಯತ್ನ ಮಾಡಿದ್ದಾರೆ. ರಾಷ್ಟ್ರಕೂಟರ ಕಾಲಕ್ಕೆ ಕಾವೇರಿಯಿಂದ ಗೋದಾವರಿಯವರೆಗೆ ಕನ್ನಡ ಜನಪದದ ಸೀಮಾರೇಖೆಗಳಿದ್ದದ್ದು ನಿಜವಾದರೆ ಅದಕ್ಕೂ ಮೊದಲು ಅದರ ವಿಸ್ತಾರ ಹೇಗಿತ್ತು ಮತ್ತು ಅಲ್ಲಿಂದೀಚೆಗೆ ಈ ಕ್ಷೇತ್ರದ ಸ್ಥಿತ್ಯಂತರಗಳಿಗೆ ಕಾರಣಗಳೇನಿರಬಹುದು ಎಂಬುದನ್ನು ಜೋಶಿ ಅವರು ಕಂಡುಹಿಡಿದಿದ್ದಾರೆ. ಭಾಷೆಯೊಳಗಿನ ನುಡಿಗಟ್ಟುಗಳು, ಶಬ್ದನಿರ್ವಚನ, ಸ್ಥಳನಾಮಗಳು, ಜಾತಿ – ಬುಡಕಟ್ಟುಗಳು, ಬಂಧುಸೂಚಕಗಳು ಹೀಗೆ ಅನೇಕ ಪುರಾವೆಗಳ ಬಲದಿಂದ ಕನ್ನಡ ಸಂಸ್ಕೃತಿಯ ನಿರ್ವಚನ ಅವರಿಂದ ನಡೆಯುತ್ತದೆ.

ಭಾಷೆಯ, ಸಾಮಾಜಿಕ ಚಲನೆ ಶಂಬಾ ಅವರಿಗೆ ಮುಖ್ಯವಾಗಿದೆ. ಕನ್ನಡ ಮತ್ತು ಮರಾಠಿ ಭಾಷೆಗಳ ಗಾಢವಾದ ಸಂಬಂಧವನ್ನು ವಿವೇಚಿಸುವಾಗ ಕನ್ನಡ ಕ್ರಿಯಾಪದಗಳು ಮರಾಠಿಯಲ್ಲಿ ಹೋಗಿರುವುದನ್ನು ಅವರು ಗುರುತಿಸಿದ್ದಾರೆ. ಇದು ಬಹಳ ಮಹತ್ವದ ಶೋಧ. ಏಕೆಂದರೆ ಯಾವುದೇ ಒಂದು ಭಾಷೆ ನಾಮಪದಗಳನ್ನು ಮತ್ತು ವಿಶೇಷಣಗಳನ್ನು ಇನ್ನೊಂದು ಭಾಷೆಯಿಂದ ಎರವಲು ಪಡೆದುಕೊಳ್ಳಬಹುದು. ಆದರೆ ಕ್ರಿಯಾಪದಗಳನ್ನಲ್ಲ. ಒಂದು ವೇಳೆ ಹಾಗೆ ತೆಗೆದುಕೊಂಡರೆ ಅವೆರಡು ಭಾಷೆಗಳು ರಾಚನಿಕವಾಗಿ ಹತ್ತಿರವಾಗಿರಬೇಕು ಎಂದು ಸಾಧಾರಣವಾಗಿ ಊಹಿಸಬಹುದು. ಕನ್ನಡ ಮತ್ತು ಮರಾಠಿ ಭಾಷೆಗಳು ಬೇರೆ ಬೇರೆ ಭಾಷಾ ಕುಟುಂಬಕ್ಕೆ ಸೇರಿದ ಭಾಷೆಗಳಾಗಿದ್ದರೂ ಸಾಂಸ್ಕೃತಿಕ ಪರಿಪ್ರೇಕ್ಷದಲ್ಲಿಟ್ಟು ನೋಡಿದಾಗ ಅವೆರಡರಲ್ಲಿ ಗಾಢ ಸಂಬಂಧವಿದೆ. ಕನಾಠಕದ ವಿಶಿಷ್ಠ ಆಚರಣೆಗಳಾದ ಎಲ್ಲಮ್ಮನ ಜೋಗತಿ ಪರಂಪರೆ, ಜೋಕುಮಾರ ಸ್ವಾಮಿ ಪರಂಪರೆ ಇವು ಕೋಲಾಪುರ ಭಾಗವು ಸೇರಿದಂತೆ ದಕ್ಷಿಣ ಮಹಾರಾಷ್ಟ್ರದಲ್ಲಿ ಇನ್ನೂ ಪ್ರಚಲಿತದಲ್ಲಿವೆ ಇದನ್ನು ಶಂಬಾ ಗುರುತಿಸಿದ್ದಾರೆ.

ಡಾ. ಶಂಬಾ ಮತ್ತು ನಾನು ಒಂದೇ ಜಿಲ್ಲೆಯವರು, ಒಂದೇ ತಾಲ್ಲೂಕಿನವರು, ಅಕ್ಕಪಕ್ಕದ ಹಳ್ಳಿಯವರು. ಸವದತ್ತಿ ಎಲ್ಲಮ್ಮ ಆ ದೇವಸ್ಥಾನದ ಪಕ್ಕದಲ್ಲಿ ಹರಿಯುವ ಮಲಪ್ರಭಾ ನದಿ ನಮ್ಮಿಬ್ಬರಿಗೂ ಸ್ಪೂರ್ತಿಯ ಸೆಲೆ. ಅದಕ್ಕಿಂತಲೂ ಹೆಚ್ಚಾಗಿ ಶಂಬಾ ಅವರ ಮತ್ತು ನನ್ನ ಕಾರ್ಯಕ್ಷೇತ್ರಗಳು ಸಮಾನವಾದವು. ಭಾಷೆ ಮತ್ತು ಸ್ಥಳನಾಮ ಅಧ್ಯಯನ ನಮ್ಮಿಬ್ಬರನ್ನು ಹತ್ತಿರಕ್ಕೆ ತಂದಿವೆ. ಶಂಬಾ ಅವರ ಸಂಶೋಧನೆಯ ಹಿಂದಿರುವ ಪ್ರೇರಣೆಯನ್ನು ವಿದ್ವಾಂಸರ ಗಮನಕ್ಕೆ ತರುತ್ತೇನೆ. ಶಂಬಾ ಅವರ ಊರು ಮಲಪ್ರಭಾ ನದಿಗೆ ಅಂಟಿಕೊಂಡಿತ್ತು. ಆ ನದಿಯ ವಿಸ್ತಾರವಾದ ತಪ್ಪಲು ಪ್ರದೇಶ, ದನಕಾರರ ವಾಸಸ್ಥಾನ.ಹ ಆ ಸಮುದಾಯದ ಭಾಷೆ, ನಡವಳಿಕೆ, ದೈಹಿಕ ಮತ್ತು ಸಾಮಾಜಿಕ ಚಹರೆಗಳನ್ನು ಶಂಬಾ ಅವರು ಕುತೂಹಲದಿಂದ ಗಮನಿಸುತ್ತಿದ್ದರು. ಜೀವ ಸಂಕುಲದ ವಿಕಾಸ ಕುರಿತು ಅವರ ಚಿಂತನೆ ಶುರುವಾದದ್ದು ಆಗಲೇ. ಮಲಪ್ರಭಾ ನದಿ ಅವರ ಸಂಶೋಧನೆಯ ಹಿಂದೆ ಪ್ರಭಾವಳಿಯಂತೆ ಕೆಲಸ ಮಾಡಿದೆ ಎಂಬುದು ಮುಖ್ಯವಾದ ಸಂಗತಿ. ಶಂಬಾ ಅವರು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ವಿದ್ವಾಂಸರು. ಭಾರತದ ಪಂಡಿತ ಪರಂಪರೆಯಲ್ಲಿ ಶಂಬಾ ಅವರು ಬೇರೆಯಾಗಿ ನಿಲ್ಲುತ್ತಾರೆ. ಅದಕ್ಕೆ ಕಾರಣ, ಸಿದ್ಧ ಮಾದರಿಯ ಅಧ್ಯಯನ ವಿಧಾನಗಳನ್ನು ಅವರು ಮೀರಿದುದು, ಪಲ್ಲಟಗೊಳಿಸಿರುವುದು. ಅದಕ್ಕೆ (ಸಾಂಸ್ಕೃತಿಕ ಚಿಂತನೆಯ ವಿಕಾಸಕ್ಕೆ) ಅವರು ತಮ್ಮದೇ ಆದ ಭಾಷಾಶಾಸ್ತ್ರ, ಮಾನವಶಾಸ್ತ್ರ ಮತ್ತು ಸಂಕೇತಶಾಸ್ತ್ರಗಳನ್ನು ಕಟ್ಟಿಕೊಂಡರು. ಕನ್ನಡದ ಸಂಬರ್ಭದಲ್ಲಿ ‘ಮೀಮಾಂಸೆ’ ಹಂತಕ್ಕೆ ಏರಿದವರಲ್ಲಿ ಶಂಬಾ ಅವರು ಒಬ್ಬರೇ ಎಂಬುದು ಅಷ್ಟೇ ಮುಖ್ಯವಾದ ಸಂಗತಿ. ಕರ್ನಾಟಕ ಸಂಸ್ಕೃತಿಯ ಪೂರ್ವಪೀಠಿಕೆಯನ್ನು ಶೋಧಿಸುವಲ್ಲಿ, ಇಂದಿನ ಗಡಿಯಾಚೆಯ ಕನ್ನಡ ನಾಡನ್ನು ಗುರುತಿಸುವಲ್ಲಿ, ಕರ್ನಾಟಕದ ಆತ್ಮಗೌರವವನ್ನು ಎತ್ತಿಹಿಡಿಯುವಲ್ಲಿ ಶಂಬಾ ಅವರು ಪಟ್ಟಶ್ರಮ, ಮಾಡಿದ ಆಲೋಚನೆಗಳು ಯಾವಕಾಲಕ್ಕೂ ಪ್ರಸ್ತುತವಾಗಿವೆ. ಅವರ ಬರಹಗಳು ಕರ್ನಾಟಕದ ಬಗ್ಗೆ ಕನ್ನಡಿಗರ ಅರಿವನ್ನು ವಿಸ್ತರಿಸುತ್ತವೆ.

ಪ್ರಸ್ತುತ ಗ್ರಂಥದಲ್ಲಿ ಕೊರತೆಗಳು ಏನೂ ಉಳಿದಿಲ್ಲವೆಂದು ಹೇಳುವ ಎದೆಗಾರಿಕೆಯೂ ನನ್ನಲ್ಲಿ ಇಲ್ಲವಾದರೂ ಒಬ್ಬ ವಿದ್ವಾಂಸನ ಭಾಷಾವಿಚಾರಗಳನ್ನು ಕುರಿತು ಇಷ್ಟೊಂದು ವಿಶದವಾಗಿ ವಿವೇಚಿಸಿದ ಪುಸ್ತಕವು ಇದೇ ಮೊದಲನೆಯದೆಂದು ಅತ್ಯಂತ ವಿನಯದಿಂದ ಹೇಳಬಯಸುತ್ತೇನೆ. ಕರ್ನಾಟಕದ ಶ್ರೇಷ್ಠ ವಿದ್ವಾಂಸರ ಭಾಷಾವಿಚಾರಗಳನ್ನು ಕುರಿತು ಪ್ರತ್ಯೇಕವಾಗಿ ಕೃತಿ ರಚನೆಯಾದರೆ ಕನ್ನಡ ಭಾಷೆಯ ಚಹರೆ ತಿಳಿದುಬರುತ್ತದೆ. ಅಂತಹ ಕೃತಿಗಳು ರಚನೆಯಾದರೆ ಅವುಗಳನ್ನು ಅಭಿಮಾನದಿಂದ ಸ್ವಾಗತಿಸುವವರಲ್ಲಿ, ಅಂತಹವರ ಪ್ರಯತ್ನಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುವವರಲ್ಲಿ ನಾನು ಮೊದಲಿಗನಾಗುತ್ತೇನೆ.

ಈ ಕೃತಿ ಸಿದ್ಧವಾಗುತ್ತಿರುವಾಗ ಅದರ ಪ್ರಗತಿಯಲ್ಲಿ ಆಸಕ್ತಿಯಿಟ್ಟು ಅದು ಇಷ್ಟು ಬೇಗ ಸಿದ್ಧಗೊಳ್ಳಲು ಪ್ರೋತ್ಸಾಹಕರಾದ ಕುಲಪತಿಗಳಾದ ಡಾ. ಎ. ಮುರಿಗೆಪ್ಪ ಅವರಿಗೆ, ಕುಲಸಚಿವರು ಮತ್ತು ಪ್ರಸಾರಾಂಗದ ನಿರ್ದೇಶಕರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೆ ನನ್ನ ಅನಂತ ನಮನಗಳು. ಗ್ರಂಥ ಪ್ರಕಟಣೆಯಲ್ಲಿ ತುಂಬ ಮುತುವರ್ಜಿ ತೋರಿದ ಡಾ. ಶಂಬಾ ಜೋಶಿ ಅಧ್ಯಯನ ಪೀಠದ ಸಂಚಾಲಕರಾದ ಡಾ. ಸಾಂಬಮೂರ್ತಿ ಅವರಿಗೆ, ಅಧ್ಯಯನಾಂಗದ ನಿರ್ದೇಶಕರಾದ ಡಾ. ವೀರೇಶ ಬಡಿಗೇರ ಅವರಿಗೆ, ಅದರಂತೆ ಪುಟವಿನ್ಯಾಸದಲ್ಲಿ ನೆರವು ನೀಡಿದ ಶ್ರೀ ಬಿ. ಸುಜ್ಞಾನಮೂರ್ತಿ ಅವರಿಗೆ, ಹೊದಿಕೆ ಚಿತ್ರವನ್ನು ಬರೆದು ಕೊಟ್ಟ ಶ್ರೀ ಕೆ. ಕೆ. ಮಕಾಳಿ ಅವರಿಗೆ ಅನಂತ ವಂದನೆಗಳು. ಅಕ್ಷರ ಸಂಯೋಜನೆಯನ್ನು ಪೂರೈಸಿದ ಎಸ್. ವಿ. ಗ್ರಾಫಿಕ್ಸ್, ಕಮಲಾಪುರದ ಶ್ರೀ ಜೆ. ಶಿವಕುಮಾರ ಅವರ ಸಹಕಾರ ನೆನೆದಷ್ಟು ಸಾಲದು.

ಡಾ. ಎಸ್. ಎಸ್. ಅಂಗಡಿ