ಶಂಬಾ ಜೋಶಿಯವರು ಕರ್ನಾಟಕ ಕಂಡ ಅಪ್ರತಿಮ ಸತ್ಯಾನ್ವೇಷಿಗಳಲ್ಲಿ ಒಬ್ಬರು. ನಾಡು ನುಡಿಯ ಇತಿಹಾಸ ಕುರಿತ ಸಂಶೋಧನೆಗೆ ಅವರ ಕೊಡುಗೆ ಅಪಾರ. ಕನ್ನಡ ಭಾಷೆ, ಕರ್ನಾಟಕ ಸಂಸ್ಕೃತಿಯ ಮೂಲಕ ಭಾರತೀಯ ಹಾಗೂ ಮಾನವ ಸಂಸ್ಕೃತಿಯನ್ನು ಅರ್ಥೈಸುವಲ್ಲಿ ಅವರ ಪ್ರಯತ್ನ ಅನನ್ಯ. ಸಾಂಪ್ರದಾಯಿಕ ಸಂಶೋಧನಾ ವಿಧಾನಗಳೊಂದಿಗೆ ಭಾಷಿಕ, ವೈಚಾರಿಕ ಹಾಗೂ ಧಾರ್ಮಿಕ ಚಿಂತನೆಗಳನ್ನು ಬಳಸಿಕೊಂಡು ಪ್ರಾಚೀನ ಸಂಸ್ಕೃತಿಯನ್ನು ಮುಖ್ಯ ಭೂಮಿಕೆಯಾಗಿಸಿಕೊಂಡ ಶಂಬಾ ಜೋಶಿಯವರ ಚಿಂತನೆಗಳನ್ನು ಅಧ್ಯಯನ ಮಾಡುವ ಗುರಿಯನ್ನು ಪೀಠ ಹೊಂದಿದೆ. ಅಲ್ಲದೆ ಅವರ ಸಮಕಾಲೀನ ಚಿಂತಕರ ಚಿಂತನಾ ವಿಧಾನಗಳನ್ನೂ ಸಹ ಗಮನಿಸುವ, ಮರುಶೋಧನೆಗೆ ಒಡ್ಡುವ, ಪ್ರಸ್ತುತತೆಯನ್ನು ವಿವೇಚಿಸುವ ಕೆಲಸಗಳನ್ನು ವಿವಿಧ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಪೀಠ ಕಾರ್ಯ ಪ್ರವೃತ್ತವಾಗಿದೆ.

ಶಂಬಾ ಅವರಿಗೆ ಹುಡುಕಾಟ ತುಂಬ ಪ್ರಿಯವಾದುದಾಗಿತ್ತು. ಹಾಗೆ ಹುಡುಕುವಾಗಲೂ ಅನೇಕ ಸವಾಲುಗಳನ್ನು ಎದುರಿಸಿದವರು, ಅವರು. ಅವರ ಅಧ್ಯಯನ ಹಲವು ಕ್ಷೇತ್ರಗಳಲ್ಲಿ ತನ್ನನ್ನು ವಿಸ್ತರಿಸಿಕೊಂಡಿದೆ. ಅವರ ಅಧ್ಯಯನದ ಮಾದರಿ ವಿಶೇಷವಾಗಿತ್ತು. ಅವರು ಯಾವಾಗಲೂ ಮೂಲ ಆಕಾರವನ್ನೇ ಹುಡುಕಿಕೊಂಡು ಹೋದವರು. ಕನ್ನಡ ಸಂಸ್ಕೃತಿಯ ಶೋಧವನ್ನು ವಿವಿಧ ನೆಲೆಯಲ್ಲಿ ಗುರುತಿಸುತ್ತಾರೆ. ಅವರ ಸಂಸ್ಕೃತಿಯ ಚಿಂತನೆಯಾಗಲೀ, ಭಾಷಿಕ ಚಿಂತನೆಯಾಗಲೀ ಏಕಮುಖಿಯಲ್ಲ. ಅವರಲ್ಲಿದ್ದ ಓದಿನ ಹರವು ಸಹ ಬಹುವಿಸ್ತಾರವಾದದ್ದು. ಅನ್ಯಜ್ಞಾನ ಶಿಸ್ತುಗಳ ಬಗೆಗೂ ಅವರ ಜ್ಞಾನ ಅಪಾರವಾಗಿತ್ತು. ಇದನ್ನು ಅವರ ಕೃತಿಗಳು ಸಾರಿ ಹೇಳುತ್ತವೆ. ಅವರ ಚಿಂತನಾ ಕ್ರಮವೇ ವಿಶೇಷವಾದದ್ದು.

ಪ್ರಸ್ತುತ ಕೃತಿ ಶಂಬಾ ಅವರ ಭಾಷಿಕ ಚಿಂತನೆಯ ನೆಲೆಗಳನ್ನು ಗುರುತಿಸುವ ಕೆಲಸ ಮಾಡಿದೆ. ಶಂಬಾ ಅವರು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಕುರಿತು ನಡೆಸಿರುವ ಚಿಂತನೆಗಳಲ್ಲಿ ಭಾಷಿಕ ಸ್ವರೂಪವನ್ನು ಕುರಿತು ಮಾಹಿತಿಯನ್ನು ಈ ಕೃತಿ ಒಳಗೊಂಡಿದೆ. ಶಂಬಾ ಅವರ ಕೃತಿಗಳಲ್ಲಿ ಮೂಡಿಬಂದಿರುವ ಭಾಷಿಕ ವಿವರಗಳನ್ನು ಒಂದೆಡೆ ಸಿಗುವಂತೆ ಡಾ. ಎಸ್. ಎಸ್. ಅಂಗಡಿಯವರು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಅವರ ಈ ಸಾಧನೆಗಾಗಿ ಅವರನ್ನು ಅಭಿನಂದಿಸುತ್ತೇನೆ. ಅಂತೆಯೇ ಪುಸ್ತಕ ರೂಪದಲ್ಲಿ ಮೂಡಿಬರಲು ಕಾರಣರಾದ ಮಾನ್ಯ ಕುಲಪತಿಯವರಿಗೂ, ಪೀಠದ ಸಲಹಾ ಸಮಿತಿ ಸದಸ್ಯರಿಗೂ, ಪ್ರಸಾರಾಂಗದ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರಿಗೂ ನನ್ನ ಕೃತಜ್ಞತೆಗಳು.

ಡಾ. ಸಾಂಬಮೂರ್ತಿ
ಸಂಚಾಲಕರು
ಡಾ. ಶಂಬಾ ಜೋಷಿ ಅಧ್ಯಯನ ಪೀಠ