I

ಯಾವುದೇ ಶಾಸ್ತ್ರ ಬೆಳೆಯುವುದು ಸಂಶೋಧನೆಯಿಂದ. ಬೌದ್ದಿಕ ಮಟ್ಟದಲ್ಲಿ ಅಥವಾ ವ್ಯವಹಾರದ ಮಟ್ಟದಲ್ಲಿ ಏಳುವ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕಾಗಿ ಬಂದಾಗ ಸಂಶೋಧನೆ ಪ್ರಾರಂಭವಾಗುತ್ತದೆ. ಸಂಶೋಧನೆಯಲ್ಲಿ ಬಳಸುವ ವಿಧಾನಗಳೇ ವೈಜ್ಞಾನಿಕ ವಿಧಾನಗಳು. ಏನು ಮತ್ತು ಹೇಗೆ ಎನ್ನುವ ಪ್ರಶ್ನೆಗಳಿಗೆ (ಅಪರೂಪವಾಗಿ ಏಕೆ ಎನ್ನುವ ಪ್ರಶ್ನೆಗೂ ಕೂಡ) ಅನುಭವ ಜನ್ಯಕ್ಷೇತ್ರದಿಂದ ಉತ್ತರ ಪಡೆಯಲು ಸಾಧ್ಯವಾಗುವಂತೆ ಈ ವಿಧಾನವನ್ನು ಬಳಸಲಾಗಿದೆ. ಇಲ್ಲಿ ಒಂದು ಮಾತನ್ನು ಸ್ಪಷ್ಟಪಡಿಸಬೇಕು. ಇಂತಹ ಎಲ್ಲಾ ಪ್ರಶ್ನೆಗಳಿಗೂ ಶಾಸ್ತ್ರ ಉತ್ತರ ಕೊಟ್ಟಿದೆ. ಅಥವಾ ಕೊಡಬಲ್ಲದು ಎಂದಲ್ಲ, ಸಮುದ್ರ ದಂಡೆಯ ಅಪಾರ ಮರಳಿನ ರಾಶಿಯಲ್ಲಿ ಒಂದು ಹಿಡಿಯನ್ನು ನಾನು ನೋಡುತ್ತಿದ್ದೇನೆ ಎಂದ ನ್ಯೂಟನ್‌ನ ಪ್ರಸಿದ್ಧ ಹೇಳಿಕೆ ಇಂದಿಗೂ ಅನ್ವಯವಾಗುತ್ತದೆ. ಆದರೆ ಒಂದು ಪಕ್ಷ ಉತ್ತರ ಕಂಡುಕೊಳ್ಳಲು ಸಾಧ್ಯವಿದ್ದರೆ ಬೇರೆ ಯಾವ ಮಾರ್ಗಕ್ಕಿಂತ ವೈಜ್ಞಾನಿಕ ವಿಧಾನಗಳು ಮಾತ್ರ ಈ ಉತ್ತರ ಕಂಡುಕೊಳ್ಳಬಲ್ಲವು ಎಂದು ವಿಚಾರಂತರು ನಂಬುತ್ತಾರೆ.

ಸಂಶೋಧನೆ ಮುಖ್ಯವಾಗಿ ವಿಮರ್ಶಾತ್ಮಕ ಆಲೋಚನೆ. ಇದು ಒಂದು ಸಮಸ್ಯೆಯನ್ನು ಹಲವು ದೃಷ್ಟಿಕೋನಗಳಿಂದ ನೋಡುವ ವಿಧಾನ. ಆ ಸಮಸ್ಯೆಯ ಬಗೆಗೆ ಹಲವು ತಾತ್ಕಾಲಿಕ ತೀರ್ಮಾನಗಳನ್ನು ಮಾಡಿಕೊಳ್ಳುವುದು, ಅವುಗಳನ್ನು ವಿಶ್ಲೇಷಿಸುವುದು. ಈ ವಿಶ್ಲೇಷಣೆಯ ಫಲಿತಾಂಶ ಮುಂಚಿನ ತೀರ್ಮಾನಗಳಿಗೆ ಹೊಂದುತ್ತದೆಯೇ ಎಂದು ಪರೀಕ್ಷಿಸುವುದು ಸಂಶೋಧನೆಯಲ್ಲಿ ಸೇರುತ್ತದೆ. ಸಂಶೋಧನೆ ಮುಂಚೆ ಮಾಡಿಕೊಂಡ ನಿರ್ಧಾರಗಳ ಸತ್ಯಾಸತ್ಯತೆಯನ್ನು ಮುಂದಿನ ಅನುಭವಗಳ ಬೆಳಕಿನಲ್ಲಿ ಸಂಪೂರ್ಣವಾಗಿ ಹಾಗೂ ವಿಮರ್ಶಾತ್ಮಕವಾಗಿ ಪರೀಶಿಲಿಸುವ ಮತ್ತು ಪ್ರಯೋಗಿಸಿ ನೋಡುವ ವಿಧಾನ ಎಂದು ಹೇಳಬಹುದು. ಸಂಶೋಧನೆಯ ಉದ್ದೇಶ ಹೊಸ ಸಾಕ್ಷ್ಯಗಳ ಬೆಳಕಿನಲ್ಲಿ ಮೊದಲ ತೀರ್ಮಾನಗಳು ಸರಿಯೇ ಎಂದು ಒರೆಹಚ್ಚಿ ನೋಡುವುದು. ಈ ತೀರ್ಮಾನ ಈಗಿನ ಸಾಕ್ಷ್ಯಕ್ಕೆ ಹೊಂದುವುದಿಲ್ಲವೆನಿಸಿದರೆ ಬೇರೆ ಯಾವ ತೀರ್ಮಾನಗಳಿಗೆ ಬರಬಹುದು ಎಂದು ಪರೀಶಿಲಿಸುವುದು.

ಸಂಶೋಧಕ ಹೊಸ ಹೊಸ ದಿಕ್ಕಿನಲ್ಲಿ ಶೋಧನೆ ನಡೆಸಲು ನಿರಂತರವಾಗಿ ಶ್ರಮಿಸುತ್ತಾನೆ. ಇಂತಹ ಪುರ್ನರಿಶೋಧನೆಯಲ್ಲಿ ಅನುಭವ ಜನ್ಯಪ್ರಪಂಚದಲ್ಲಿ ಸಾಕ್ಷ್ಯಾಧಾರಗಳನ್ನು ಕಾಣುತ್ತಾ ಮುಂದುವರೆಯುತ್ತಾನೆ. ಇಂತಹ ಪುರ್ನರಿಶೋಧನೆ ಕೆಲವೊಮ್ಮೆ ಮುಂಚಿನ ಸಿದ್ಧಾಂತಗಳನ್ನು ದೃಢೀಕರಿಸಬಹುದು. ಇನ್ನು ಕೆಲವು ಸಂದರ್ಭಗಳಲ್ಲಿ ಹೇಳುವುದಾದರೆ ಸಂಶೋಧನೆ ಅರಿವಿನ ಪರಿಧಿಯನ್ನು ವಿಸ್ತರಿಸುವ ಮಾರ್ಗ. ಈಗಿರುವ ತಿಳಿವಳಿಕೆಯನ್ನು ತಿದ್ದುವುದು ಅಥವಾ ಅದಕ್ಕೆ ಪುಷ್ಠಿಕೊಡುವುದರ ಮೂಲಕ ಆಜ್ಞಾನದ ಕ್ಷೇತ್ರವನ್ನು ಕುಗ್ಗಿಸುವುದು ಸಂಶೋಧನೆಯ ಗುರಿ.

ಸಂಶೋಧನೆಯಿಂದ ದೊರೆತ ಹೊಸ ಜ್ಞಾನದಿಂದ ಹಲವು ರೀತಿಯಲ್ಲಿ ಪ್ರಯೋಜನವಾಗುತ್ತದೆ. ಇಂತಹ ಒಂದು ರೀತಿ ಜ್ಞಾನವನ್ನು ಹೆಚ್ಚು ವ್ಯವಸ್ಥಿತಗೊಳಿಸುವುದಕ್ಕೆ ಸಿಗುವ ನೆರವು, ಹೊಸ ಹೊಸ ಸಿದ್ಧಾಂತಗಳನ್ನು ರೂಪಿಸುವುದು, ಆ ಮೂಲಕ ಮುಂಚೆ ತಿಳಿದಿಲ್ಲದ ಅನೇಕ ವಿಷಯಗಳನ್ನು ಅರ್ಥಪೂರ್ಣವಾಗಿ ವಿವರಿಸಲು ಸಾಧ್ಯವಾಗುವುದು. ಇಂತಹ ಸಂದರ್ಭದಲ್ಲಿ ಸಂಶೋಧನೆಯ ಉದ್ದೇಶ ಹೆಚ್ಚಿನ ಜ್ಞಾನ ಪಡೆಯುವುದು ಮಾತ್ರ. ಈ ಉದ್ದೇಶದ ಸಂಶೋಧನೆಯನ್ನು ಸೈದ್ಧಾಂತಿಕ ಅಥವಾ ಅಪ್ಪಟ ಸಂಶೋಧನೆಯೆಂದು ಕರೆಯಲಾಗುತ್ತದೆ. ಸಂಶೋಧನೆಯಿಂದ ದೊರೆಯುವ ಜ್ಞಾನವನ್ನು ತಕ್ಷಣ ಉಪಯುಕ್ತವಾಗಿ ಬಳಸಿಕೊಳ್ಳುವುದೂ ಸಾಧ್ಯವಿರಬಹುದು. ಕೆಲವು ನಿರ್ದಿಷ್ಟ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಶೋಧನೆ ಉದ್ದೇಶಿಸಿರಬಹುದು. ಇಂತಹ ಸಂಶೋಧನೆಯನ್ನು ಪ್ರಾಯೋಗಿಕ ಸಂಶೋಧನೆಯೆಂದು ಕರೆಯಲಾಗುತ್ತದೆ. ಈ ಎರಡೂ ವಿಧಗಳ ನಡುವಿನ ಗೆರೆ ಅಷ್ಟು ಸ್ಪಷ್ಟವಾಗಿರುವುದು ಸಾಧ್ಯವಿಲ್ಲ. ಪ್ರಾಯೋಗಿಕ ಸಂಶೋಧನೆ ಅನೇಕ ಸಂದರ್ಭಗಳಲ್ಲಿ ಮಹತ್ವದ ಸಿದ್ಧಾಂತಗಳನ್ನೂ ರೂಪಿಸಲು ಸಹಾಯಕವಾಗಿದೆ. ಸೈದ್ಧಾಂತಿಕ ಸಂಶೋಧನೆಯಿಂದ ಹಲವಾರು ತಕ್ಷಣದ ಸಮಸ್ಯೆಗಳನ್ನು ಬಗೆಹರಿಸಲೂ ಸಾಧ್ಯವಾಗಿದೆ.

ಸಂಶೋಧನೆ ಅದು ಯಾವ ಕ್ಷೇತ್ರದಲ್ಲಿರಲಿ ಕೆಲವು ಸಾಮಾನ್ಯ ಲಕ್ಷಣಗಳನ್ನು ಹೊಂದಿರುತ್ತದೆ. ಸಂಕೇತಗಳನ್ನು ಹೆಚ್ಚಾಗಿ ಬಳಸುವುದು ಇಂತಹ ಒಂದು ಲಕ್ಷಣ. ಇವುಗಳನ್ನು ಬಳಸುವ ಉದ್ದೇಶ ಹೇಳಬೇಕಾದ್ದಕ್ಕೆ ಖಚಿತರೂಪ ಕೊಡುವುದು. ಆ ಮೂಲಕ ಸಮಯ ಹಾಗೂ ಶ್ರಮವನ್ನು ಉಳಿತಾಯ ಮಾಡುವುದು ಇಂತಹ ಸಂಕೇತಗಳನ್ನು ಹಲವು ಸಂದರ್ಭಗಳಲ್ಲಿ ಅವುಗಳು ಪ್ರತಿನಿಧಿಸುವ ಕ್ರಿಯೆಗಳಿಂದ ಬೇರ್ಪಡಿಸಲು ಸಾಧ್ಯವಾಗುತ್ತದೆ. ಆಗ ಅವುಗಳು ತರ್ಕಶಾಸ್ತ್ರದ, ಗಣಿತಶಾಸ್ತ್ರದ ನಿಯಮಗಳಿಗನುಸಾರವಾಗಿ ಬೇಕಾದಂತೆ ಬಳಸಬಹುದು. ಒಂದು ಕ್ರಿಯೆಯನ್ನು ಹೀಗೆ ಬಳಸಲು ಸಾಧ್ಯವಿರುವುದಿಲ್ಲ. ಈ ರೀತಿ ಸಂಕೇತಗಳು ನಿಖರತೆಯನ್ನು ಹೆಚ್ಚಿಸಲು ಸಹಾಯಕವಾಗುತ್ತವೆ.

ಸಂಶೋಧನೆಗೆ ಒಂದು ವಿಶಿಷ್ಟವಾದ ಭಾಷಾಪದ್ಧತಿ ಇರುತ್ತದೆ. ಇಲ್ಲಿ ಬಳಸುವ ಪ್ರತಿಯೊಂದು ಪದಕ್ಕೂ ಕರಾರುವಕ್ಕಾದ ಅರ್ಥವಿರುತ್ತದೆ. ಇಲ್ಲಿನ ವಸ್ತುಗಳು ಹಾಗೂ ಅವುಗಳ ಸಂಬಂಧಗಳನ್ನು ಭಾಷೆ ನಿಷ್ಕೃಷ್ಟವಾಗಿ ವರ್ಣಿಸುತ್ತದೆ. ಇಲ್ಲಿ ಉಪಯೋಗಿಸುವ ಭಾಷೆ ಗಣಿತದಲ್ಲಿರುವಂತೆ ಕೇವಲ ಸಮೀಕರಣದ ರೂಪದಲ್ಲಿರಬಹುದು. ಅಥವಾ ಹೆಚ್ಚು ವಿವರಣಾತ್ಮಕವಾಗಿರಬಹುದು. ಆದರೆ ಈ ಭಾಷೆ ಸರಳ, ನೇರ ಹಾಗೂ ಸ್ಪಷ್ಟ ಹೇಳಬೇಕಾದ್ದನ್ನು ಯಾವ ಅನುಮಾನಕ್ಕೂ ಆಸ್ಪದವಿಲ್ಲದಂತೆ ತಿಳಿಸುವಂತಹ ಭಾಷೆಯನ್ನು ಮಾತ್ರ ವಿಜ್ಞಾನ ಒಪ್ಪಿಕೊಳ್ಳುತ್ತದೆ. ಅಲಂಕಾರಿಕ ಶೈಲಿಗೆ ಸುತ್ತು ಬಳಸಿನ ಮಾತಿಗೆ ಇಲ್ಲಿ ಅವಕಾಶವಿಲ್ಲ.

ಸಂಶೋಧನೆಯ ಇನ್ನೊಂದು ಅತ್ಯಗತ್ಯ ಅಂಶ ಬಂದ ತೀರ್ಮಾನಗಳ ಜೊತೆಗೆ ಆ ತೀರ್ಮಾನಕ್ಕೆ ಬರಲು ಬಳಸಿದ ವಿಧಾನಗಳನ್ನು ಪ್ರಕಟಪಡಿಸುವುದು ವಿಜ್ಞಾನದಲ್ಲಿ ಯಾವ ರೀತಿಯ ಗುಟ್ಟಿಗೂ ಅವಕಾಶವಿಲ್ಲ. ಪ್ರಕಟಣೆಯನ್ನು ನಿರೀಕ್ಷಿಸುವುದು ಇದೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಇತರ ವಿಜ್ಞಾನಿಗಳೂ ಇಂತಹದೇ ವಿಧಾನಗಳನ್ನೂ ಬಳಸಿದಾಗ ಇದೇ ರೀತಿಯ ಫಲಿತಾಂಶಗಳನ್ನು ಪಡೆಯಲು ಆಗಬೇಕು ಎನ್ನಬಹುದು. ಈ ಅವಕಾಶ ವಿಲ್ಲದಿದ್ದರೆ ಅದು ವಿಜ್ಞಾನವಾಗಲಾರದು.

ಇವುಗಳ ಜೊತೆಗೆ ಸಂಶೋಧನೆಗೆ ಹಲವು ನಿರ್ದಿಷ್ಟ ಮೌಲ್ಯಗಳಿರುತ್ತವೆ. ಅವುಗಳಲ್ಲಿ ಮುಖ್ಯವಾದವು ಅನುಭವ ಜನ್ಯ ಸಾಕ್ಷ್ಯದ ಆಧಾರ, ಘಟನಾ ನಿಷ್ಠತೆ, ಐತಿಕ ತಾಟಸ್ಥ್ಯ, ನಿರ್ದಿಷ್ಟ ಪ್ರತ್ಯಯಗಳ ಬಳಕೆ, ಸಾಮಾನ್ಯೀಕರಣ, ಸಂಭವನಾ ನಿಯಮಗಳ ಆಧಾರ ಮತ್ತು ಒಂದು ಪ್ರಯೋಗವನ್ನು ಮತ್ತೆ ಮತ್ತೆ ಮಾಡಿ ನೋಡಲಿರುವ ಅವಕಾಶ.

ಸಂಶೋಧನೆಯ ಬಗೆಗಿನ ಇಲ್ಲಿಯವರೆಗಿನ ಚರ್ಚೆ ವಿಜ್ಞಾನದ ಎಲ್ಲಾ ಕ್ಷೇತ್ರಗಳಿಗೂ ಸಾಮಾನ್ಯವಾಗಿರುವಂತಹುದು. ಮೇಲಿನ ಸಾಮಾನ್ಯ ನಿಯಮಗಳಿಗೆ ಬದ್ಧವಾದ ಆದರೆ ತನ್ನ ಸಮಸ್ಯೆಗಳನ್ನು ಬಿಡಿಸಲು ಹೆಚ್ಚು ಉಪಯುಕ್ತವಾದ ಒಂದು ವೈಜ್ಞಾನಿಕ ಪದ್ಧತಿಯನ್ನು ಸಮಾಜ ವಿಜ್ಞಾನ ಬೆಳೆಸಿಕೊಂಡಿದೆ. ಇದನ್ನು ಸಾಮಾಜಿಕ ಸಂಶೋಧನೆ ಎನ್ನಬಹುದು. ಈ ವಿಧಾನಗಳು ಸಮಾಜ ವಿಜ್ಞಾನಗಳಿಗೆ ಮತ್ತು ಸ್ವಲ್ಪಮಟ್ಟಿಗೆ ವರ್ತನಾ ವಿಜ್ಞಾನಗಳಿಗೆ ಅನ್ವಯಿಸುವಂತಹುದು.

ಸಾಮಾಜಿಕ ಸಂಶೋಧನೆಯ ಮೂಲ ಉದ್ದೇಶ ಸಹ ಸತ್ಯವನ್ನು ಕಂಡುಕೊಳ್ಳುವುದಾದರೂ ಇಲ್ಲಿ ಹೆಚ್ಚಿನ ಆಸಕ್ತಿ ಇರುವುದು ಮನುಷ್ಯ ಮತ್ತು ಅವನು ಜೀವಿಸುವ ಸಾಮಾಜಿಕ ಪರಿಸರದ ಬಗೆಗೆ. ಮನುಷ್ಯ ಬೆಳೆಸಿಕೊಂಡಿರುವ ಸಂಬಂಧಗಳು ಅವನ ಮೇಲೆ ಪ್ರಭಾವ ಬೀರುವ ಶಕ್ತಿಗಳು, ಮನುಷ್ಯ ಸೇರುವ ಸಾಮಾಜಿಕ ಸಂಸ್ಥೆಗಳು ಮೊದಲಾದ ವಿಷಯಗಳ ಪರಿಶೀಲನೆ ಸಾಮಾಜಿಕ ಸಂಶೋಧನೆಯನ್ನು ಸೇರುತ್ತದೆ.

ಇಲ್ಲೂ ಸಹ ಸಂಶೋಧನೆಯಲ್ಲಿ ಎರಡು ಮುಖ್ಯ ಮಾರ್ಗಗಳನ್ನು ಗುರುತಿಸಬಹುದು. ಒಂದು ಅಪ್ಪಟ ಸಂಶೋಧನೆ ಅಂದರೆ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ನಡೆಸುವಂತಹ ಸಂಶೋಧನೆ, ಎರಡು ಪ್ರಾಯೋಗಿಕ ಸಂಶೋಧನೆ ಎಂದರೆ ನಿರ್ದಿಷ್ಟ ಸಮಸ್ಯೆಯನ್ನು ಬಿಡಿಸಲು ನಡೆಸುವ ಸಂಶೋಧನೆ. ಕೆಲವೊಮ್ಮೆ ಮೂರನೆಯ ಒಂದು ವಿಧವನ್ನೂ ಸೇರಿಸುವುದುಂಟು. ಅದೆಂದರೆ ನೀತಿ ನಿರೂಪಣಾ ಸಂಶೋಧನೆ. ಅಂದರೆ ಒಂದು ನಿರ್ದಿಷ್ಟ ನೀತಿ ನಿರೂಪಣೆಗೆ ಸೈದ್ಧಾಂತಿಕ ಸಂಶೋಧನೆಯನ್ನು ಅನ್ವಯಿಸುವುದು.

ಈ ವಿಭಾಗಗಳೇನೇ ಇರಲಿ, ಸಮಾಜ ವಿಜ್ಞಾನಗಳಲ್ಲಿ ಅದರಲ್ಲೂ ಭಾರತದಂತಹ ದೇಶಗಳಲ್ಲಿ ಸಂಶೋಧನೆ ಹೆಚ್ಚಾಗಿ ಪ್ರಾಯೋಗಿಕ ಹಂತದಲ್ಲಿಯೇ ಇರಬೇಕಾಗುತ್ತದೆ. ಕೆಲವು ವಿಚಾರಗಳ ಬಗೆಗೆ ಕೆಲವೊಮ್ಮೆ ದಾರ್ಶನಿಕ ಸಿದ್ಧಾಂತಗಳು ಅವಶ್ಯಕವೆನಿಸಿದರೂ ಹೆಚ್ಚಿನ ಸಂಶೋಧನೆ ದೈನಂದಿನ ಸಮಸ್ಯೆಗಳನ್ನು ಬಿಡಿಸುವ ಉದ್ದೇಶ ಹೊಂದಿರಬೇಕು.

ಚಾರಿತ್ರಿಕವಾಗಿ ನೋಡುವುದಾದರೆ ಸಮಾಜ ವಿಜ್ಞಾನಗಳೇ ಈಚಿನ ಸೃಷ್ಟಿ. ಪ್ರಾಚೀನ ಕಾಲದಲ್ಲೂ ಸಮಾಜ, ಸಾಮಾಜಿಕ ಸಂಸ್ಥೆ ಇತ್ಯಾದಿಗಳ ಬಗೆಗೆ ಸಾಕಷ್ಟು ಆಸಕ್ತಿಯಿದ್ದರೂ ಮನುಷ್ಯನ ವಿವಿಧ ಸಂಬಂಧಗಳನ್ನು ಅರಿಯಲು ವ್ಯವಸ್ಥಿತ ರೀತಿಯ ಅಧ್ಯಯನ ನಡೆದಿರುವುದು ಕಳೆದ ನೂರು ವರ್ಷಗಳಲ್ಲಿ ಮಾತ್ರ.

ಸಾಮಾಜಿಕ ಸಂಶೋಧನೆಗೆ ಪ್ರೇರಣೆ ಹಲವು ರೀತಿಯಲ್ಲಿ ಬರಬಹುದು. ಮಾನವ ಸಹಜವಾದ ಕುತೂಹಲ, ಹೊಸ ಹೊಸ ಸಂಗತಿಗಳನ್ನು ಅರಿಯಲು ಇರುವ ಉತ್ಸಾಹ, ಹಲವು ಮುಖ್ಯ ಸಾಮಾಜಿಕ ಸಂಶೋಧನೆಗೆ ಪ್ರೇರಣೆಯಾಗಬಹುದು. ಕ್ಲಿಷ್ಟವಾದ ಸಾಮಾಜಿಕ ಸಮಸ್ಯೆಗಳನ್ನು ಬಿಡಿಸಲು ನಡೆಸುವ ಪ್ರಯತ್ನಗಳು ಸಾಮಾಜಿಕ ಸಂಶೋಧನೆಗೆ ಪ್ರೇರಣೆ ಕೊಡಬಹುದು. ಗ್ರಾಮೀಣ ಸಾಲಪದ್ಧತಿ, ಹಿಂದುಳಿದವರ ಸ್ಥಿತಿ ಇವು ಇಂತಹ ಕ್ಲಿಷ್ಟ ಸಮಸ್ಯೆಗಳಿಗೆ ಉದಾಹರಣೆಗಳು. ಈ ಸಮಸ್ಯೆಗಳನ್ನು ಬೇರೆ ಬೇರೆ ದೃಷ್ಟಿಕೋನದಿಂದ ನೋಡಿಗ ಹೊಸ ಹೊಸ ವಿಷಯಗಳು ಬೆಳಕಿಗೆ ಬರಬಹುದು. ಕೆಲವು ಸಂದರ್ಭಗಳಲ್ಲಿ ಹಿಂದೆ ಕಾಣದ ಒಂದು ವಿಶಿಷ್ಟ ಪರಿಸ್ಥಿತಿ ಏರ್ಪಟ್ಟು ಆ ಪರಿಸ್ಥಿತಿಯನ್ನು ಪೂರ್ಣವಾಗಿ ಅರಿಯಲು ಸಂಶೋಧನೆ ಬೇಕಾಗಬಹುದು. ನಗರ ಪ್ರದೇಶಗಳಲ್ಲಿನ ಕೊಳಗೇರಿಗಳ ಅಭ್ಯಾಸ ಇದಕ್ಕೊಂದು ಉದಾಹರಣೆ. ಇನ್ನು ಕೆಲವು ಸಂದರ್ಭಗಳಲ್ಲಿ ಸಾಮಾಜಿಕ ಜೀವನದಲ್ಲಿ ನಿರಂತರವಾಗಿ ಬರುವ ಬದಲಾವಣೆ ಸಂಶೋಧನೆಗೆ ಪ್ರೇರಣೆಯಾಗಬಹುದು. ಸಾಮಾಜಿಕ ಬದಲಾವಣೆಯ ಬಗೆಗಿನ ಸಂಶೋಧನೆಗಳಾಗಿರುವುದು ಈ ಕಾರಣದಿಂದ. ಇನ್ನು ಕೆಲವು ಕಡೆ ಸಮಸ್ಯೆಗಳು ನಿತ್ಯ ವ್ಯವಹಾರದ ಒಂದು ಭಾಗವಾಗುತ್ತವೆ. ಈ ಸಮಸ್ಯೆಗಳನ್ನು ಬಿಡಿಸಲು ಒಂದು ಖಾಯಂ ವ್ಯವಸ್ಥೆ ಬೇಕಾಗುತ್ತದೆ.

ಹಿಂದುಳಿದವರಿಗೆ ಒಂದು ಅಭಿವೃದ್ಧಿ ಪ್ರಾಧಿಕಾರ ಎನ್ನುವ ವ್ಯವಸ್ಥೆಯಿದ್ದಾಗ ಈ ಪ್ರಾಧಿಕಾರ ತನ್ನ ಯೋಜನೆಗಳನ್ನು ರೂಪಿಸಲು, ಈ ಯೋಜನೆಗಳ ಗುಣಮಾಪನ ನಡೆಸಲು ಸಂಶೋಧನೆ ಅಗತ್ಯವಾಗುತ್ತದೆ. ಆ ಸಂಶೋಧನೆಯ ಸ್ವರೂಪವಾಗಿ ಕಾರ್ಯಕ್ರಮ ಬದಲಾಯಿಸಿಕೊಂಡರೆ ದಕ್ಷತೆ ಹೆಚ್ಚುತ್ತದೆ. ಸಾಕಷ್ಟು ಹಣ ಖರ್ಚು ಮಾಡುವ ಇಂತಹ ಸಂಸ್ಥೆ ಸಂಶೋಧನೆಗೆ ಒಂದು ಸಣ್ಣ ಪಾಲನ್ನು ಮೀಸಲಾಗಿಟ್ಟರೆ ತನ್ನ ಗುರಿಯನ್ನು ಸಾಧಿಸಲು ಸುಲಭ ಎಂದು ತಿಳಿದುಕೊಂಡಾಗ ತನ್ನ ದೈನಂದಿನ ಕೆಲಸದ ಒಂದು ಭಾಗವಾಗಿ ಸಂಶೋಧನೆಯನ್ನು ಸೇರಿಸಿಕೊಳ್ಳುತ್ತದೆ.

ಸಾಮಾಜಿಕ ಸಂಶೋಧನೆ ಸಾಮಾಜಿಕ ಸತ್ಯಸ್ಥಿತಿಯ ಬಗ್ಗೆ ನಮ್ಮ ಕಣ್ಣು ತೆರೆಸುತ್ತದೆ. ಅದ್ಭುತವೆನಿಸುವುದನ್ನು ವಿವರಿಸುತ್ತಾ ನಮ್ಮ ಅರಿವನ್ನು ವಿಸ್ತಾರಗೊಳಿಸುತ್ತಾ ನಡೆಯುತ್ತದೆ. ಸಂಶೋಧನೆಯ ಮುಖ್ಯ ಗುರಿ ಜ್ಞಾನ ಭಂಡಾರವನ್ನು ಶ್ರೀಮಂತಗೊಳಿಸುವುದು, ಮುಂಚೆ ಇದ್ದ ತಪ್ಪು ಗ್ರಹಿಕೆಗಳನ್ನು ದೂರಗೊಳಿಸುವುದು. ಇಂತಹ ಸಂಶೋಧನೆಯ ಪ್ರಯೋಜನ ಹಲವು ರೀತಿಯದು. ಅವುಗಳಲ್ಲಿ ಕೆಲವನ್ನು ಪಟ್ಟಿ ಮಾಡುವುದು ಉಪಯುಕ್ತವೆನಿಸಬಹುದು.

ಒಂದು ಸಂಸ್ಥೆಯ ಕೆಲಸವನ್ನು ದಕ್ಷಮಾಡುವ, ಸಂಪನ್ಮೂಲಗಳನ್ನು ಹೆಚ್ಚು ಪ್ರಯೋಜನಕಾರಿಯಾಗಿ ಬಳಸಲು ಸಹಾಯ ಮಾಡುವ ಉದಾಹರಣೆ ಈಗಾಗಲೇ ಬಂದಿದೆ. ಸಾಮಾಜಿಕ ಸಂಶೋಧನೆ ಸಾಮಾಜಿಕ ಯೋಜನೆಗೆ ದಾರಿಮಾಡಿಕೊಡುತ್ತದೆ. ಯೋಜನೆ ಎಂದರೆ ಇರುವ ಸಂಪನ್ಮೂಲಗಳನ್ನು ಅತಿಲಾಭಕರವಾಗಿ, ಹೆಚ್ಚಿನ ಜನರಿಗೆ ಅನುಕೂಲವಾಗುವಂತೆ ಉಪಯೋಗಿಸುವುದೇ ಆಗಿದೆ. ನಮ್ಮ ದೇಶದಲ್ಲಿ ಮೊದಲ ಯೋಜನೆಯಿಂದಲೇ ಸಮುದಾಯಭಿವೃದ್ಧಿ ಯೋಜನೆಯಿದೆ. ಈಚೆಗೆ ಗ್ರಾಮೀಣ ವಿಕಾಸಕ್ಕೆ ಹಲವಾರು ಯೋಜನೆಗಳು ಬಂದಿವೆ. ಇಂತಹ ಕಾರ್ಯಗಳಲ್ಲಿ ಸಾಮಾಜಿಕ ಸಂಶೋಧನೆ ಹೆಚ್ಚಿನ ನೆರವು ನೀಡಿದೆ.

ಒಂದು ವಿಷಯದಲ್ಲಿ ಹೆಚ್ಚಿನ ಜ್ಞಾನವಿದ್ದಾಗ ಆ ವಿಷಯದಲ್ಲಿ ಹೆಚ್ಚಿನ ಹತೋಟಿ ಸಾಧ್ಯವಾಗುತ್ತದೆ. ಅಪರಾಧ, ಹಿಂಸೆ ಇಂತಹವುಗಳಿಗೆ ಕಾರಣ ಹುಡುಕಲು ಸಾಧ್ಯವಾದರೆ ಅವುಗಳ ಹತೋಟಿಯೂ ಸಾಧ್ಯವಾಗುತ್ತದೆ. ಸಾಮಾಜಿಕ ಸಂಶೋಧನೆ ಸಾಮಾಜಿಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಜ್ಞಾನದಿಂದ ತಪ್ಪುಕಲ್ಪನೆ, ಅಂಧವಿಶ್ವಾಸ ಕಡಿಮೆಯಾಗುತ್ತದೆ. ಸಾಮಾಜಿಕ ಸಂಶೋಧನೆ ಇಲ್ಲಿ ನೆರವಿಗೆ ಬರುತ್ತದೆ. ನಮ್ಮ ದೇಶದಲ್ಲಿ ಇಂತಹ ಮೂಢನಂಬಿಕೆಗಳಿಂದಾಗುತ್ತಿರುವ ನಷ್ಟದ ಬಗೆಗೆ ಹೆಚ್ಚು ಹೇಳಬೇಕಾಗಿಲ್ಲ. ಸಾಮಾಜಿಕ ಸಂಶೋಧನೆಯಿಂದ ಸಮಾಜ ಕಲ್ಯಾಣ ಹೆಚ್ಚು ವ್ಯವಸ್ಥಿತವಾಗಿ ನಡೆಯಲು ಸಹಾಯಕವಾಗುತ್ತದೆ. ಸಾಮಾಜಿಕ ಕೆಡಕುಗಳನ್ನು ಗುರುತಿಸಲು ಅವುಗಳ ವಿರುದ್ಧ ಯಶಸ್ವಿಯಾಗಿ ಹೋರಾಡಲು ಸಂಶೋಧನೆ ಸಹಾಯ ಮಾಡುತ್ತದೆ. ಕೆಲವು ಸಂದರ್ಭಗಳಲ್ಲಿ ಸಂಶೋಧನೆಯಿಂದ ಮುಂದಿನ ಗತಿಯನ್ನು ಗುರುತಿಸಲು ಸಾಧ್ಯವಾಗುತ್ತದೆ. ಇದರಿಂದ ಬರಬಹುದಾದ ಅಪಾಯಗಳನ್ನು ಮೊದಲೇ ನಿರೀಕ್ಷಿಸಿ ಅದರ ಬಗೆಗೆ ಕಾರ್ಯಕ್ರಮವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

ಕೊನೆಯದಾಗಿ ಸಂಶೋಧನೆ ನಿರಂತರವಾಗಿ ನಡೆಯುವುದರಿಂದ ಸಂಶೋಧನಾ ವಿಧಾನಗಳು ಉತ್ತಮವಾಗುತ್ತವೆ. ಮುಂದಿನ ಸಂಶೋಧನೆಗಳು ಹೆಚ್ಚು ವಿಶ್ವಸನೀಯವಾಗುತ್ತವೆ, ಉಪಯುಕ್ತವಾಗುತ್ತವೆ.

II

ಸಂಶೋಧನೆ ಎಂಬುದು ಸಂಶೋಧಕ ವ್ಯವಸ್ಥಿತ ಶ್ರಮದ ಕಾರ್ಯವಾಗಿದೆ. ಅದು ಕೇವಲ ಜ್ಞಾನಾರ್ಜನೆಯಲ್ಲ. ಸಾಹಿತ್ಯಿಕ ಸಮಸ್ಯೆಗಳನ್ನು ಗುರುತಿಸಿ, ಪರಿಹರಿಸುವುದು ಅದರ ಗುರಿ, ತಾಳ್ಮೆಯಿಂದ ಸಂಶೋಧನ ಸಮಸ್ಯೆಯ ಸ್ವರೂಪವನ್ನು ಅರಿತು ಪರಿಹಾರಕ್ಕೆ ಯತ್ನಿಸುವುದು ಸಂಶೋಧಕನ ಕೆಲಸ. ಶಂಬಾ ಅವರು ಸಂದರ್ಭೋಚಿತವಾಗಿ ವಿವಿಧ ಸಂಶೋಧನ ಪದ್ಧತಿಗಳನ್ನು ಬಳಸಿ ಯಶಸ್ವಿ ಸಂಶೋಧಕರಾಗಿ ಕನ್ನಡಿಗರ ಮೆಚ್ಚುಗೆಯನ್ನು ಗಳಿಸಿದ್ದಾರೆ. ಶಂಬಾ ಅವರ ಸಂಶೋಧನೆಯ ವೈಧಾನಿಕತೆಯನ್ನು ಗುರುತಿಸುವುದು ಈ ಅಧ್ಯಾಯದ ಉದ್ದೇಶವಾಗಿದೆ.

ಶಂಬಾ ಅವರ ಸಂಶೋಧನೆಯ ಪದ್ಧತಿಯ ಹಲವಾರು ಪ್ರಾಯೋಗಿಕ ಉದ್ದೇಶಗಳನ್ನು ಹೊಂದಿದೆ. ಅದು ಸಾಮಾಜಿಕ ಹಿನ್ನೆಲೆಯಲ್ಲಿ ಕೈಕೊಳ್ಳುವ ಉದ್ದೇಶಿಸಿದ ಚಟುವಟಿಕೆಯಾಗಿದೆ. ಅದರ ಸಂಶೋಧನೆಯಲ್ಲಿ ಕಂಡುಬರುವ ಮುಖ್ಯಹಂತಗಳು ಇಂತಿವೆ.

. ಸಮಸ್ಯೆ ಗುರುತಿಸುವಿಕೆ : ಸಂಶೋಧನೆಯ ಮೊದಲ ಹೆಜ್ಜೆ ಸಮಸ್ಯೆಯನ್ನು ಆಯ್ದುಕೊಳ್ಳುವುದು ಆ ವೇಳೆಯಲ್ಲಿ ಶಂಬಾ ಅವರು ತುಂಬ ಎಚ್ಚರಿಕೆ ವಹಿಸುತ್ತಾರೆ. ಯಾವ ಕ್ಷೇತ್ರದಲ್ಲಿ ಕೆಲಸ ಆಗಿಲ್ಲ. ಎಲ್ಲಿ ಸಮಸ್ಯೆಗಳಿವೆ. ಆ ಸಮಸ್ಯೆಯನ್ನು ಬಿಡಿಸಲಿಕ್ಕೆ ಎಷ್ಟು ಜನ ಕೆಲಸ ಮಾಡಿದ್ದಾರೆ. ಅವರ ಸಂಶೋಧನೆಯ ಸ್ವರೂಪ ಎಂತಹುದು ಮುಂತಾದ ಅಂಶಗಳನ್ನು ಅನುಲಕ್ಷಿಸಿ ಸಮಸ್ಯೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಧ್ಯಯನದ ಪ್ರಸ್ತುತತೆ, ಸಮಕಾಲೀನ ವಿದ್ಯಮಾನಗಳನ್ನು ಅನುಲಕ್ಷಿಸಿ ಸೂಕ್ತ ಸಮಸ್ಯೆಯನ್ನು ಗುರುತಿಸುತ್ತಾರೆ.

. ಸಮಸ್ಯೆಯ ಸ್ಪಷ್ಟೀಕರಣ : ಇದನ್ನು ಪ್ರತಿಪಾದನೆ ಎಂತಲೂ ಅಥವಾ ವಿಷಯ ನಿರೂಪಣೆ, ವಿವರಣೆ ಎಂತಲೂ ಕರೆಯುವರು. ಇಲ್ಲಿ ಹೊಸಜ್ಞಾನ ಅಥವಾ ಹೊಸವಿಷಯದ ವಿವೇಚನೆ ಸಾಂಗವಾಗಿ ಜರುಗುವುದು. ಇಲ್ಲಿ ಶಂಬಾ ಅವರು ತಾವು ಆಯ್ದುಕೊಂಡ ಸಮಸ್ಯೆಯ ಸ್ವರೂಪ ಮತ್ತು ಮಹತ್ವವನ್ನು ಸ್ಪಷ್ಟಪಡಿಸುವರು. ತಾವು ತಿಳಿಸಬೇಕಾದ ವಿಷಯವನ್ನು ತಿಳಿಯಾದ ಭಾಷೆಯಲ್ಲಿ ಅರ್ಥಪೂರ್ಣವಾಗಿ ನಿರೂಪಿಸುವರು. ಸಮಸ್ಯೆಯ ಸ್ವರೂಪ ಹಾಗೂ ವ್ಯಾಪ್ತಿಯ ಬಗ್ಗೆ ಅವರಿಗೆ ಸ್ಪಷ್ಟ ಅರಿವಿರುತ್ತದೆ.

. ದತ್ತಾಂಶಗಳ ಸಂಗ್ರಹಣೆ : ಆರಿಸಿಕೊಂಡ ಸಮಸ್ಯೆಯನ್ನು ಬಿಡಿಸಲಿಕ್ಕೆ ನಾನಾ ಮೂಲಗಳನ್ನಾಧರಿಸಿ ಸಾಮಗ್ರಿ ಸಂಗ್ರಹದಲ್ಲಿ ಶಂಬಾ ಅವರು ತೊಡಗುವ ರೀತಿ ಅನುಕರಣೀಯ. ಒಂದೆಡೆ ಟೇಬಲ್ ಕೆಲಸ; ಇನ್ನೊಂದೆಡೆ ಕ್ಷೇತ್ರಕಾರ್ಯ. ಎರಡೂ ಜೊತೆ ಜೊತೆಯಾಗಿಯೇ ಸಾಗುತ್ತದೆ. ಸಂಗ್ರಹಿಸಿದ ದತ್ತಾಂಶ ಹಾಗೂ ಮಾಹಿತಿಯನ್ನು ವ್ಯವಸ್ಥಿತವಾಗಿ ಸಂಯೋಜಿಸುವ ಕಾರ್ಯವು ಇಲ್ಲಿ ಸಾಗುತ್ತದೆ. ವಿಷಯದ ಸ್ಪಷ್ಟಜ್ಞಾನ ಮೂಡಿಸುವಲ್ಲಿ ದತ್ತಾಂಶಗಳ ಸಂಗ್ರಹಣೆ ಮತ್ತು ಸಂಯೋಜನೆಯೂ ಬಹುಮುಖ್ಯವಾಗಿದೆ.

. ತಾತ್ಕಾಲಿಕ ನಿರ್ಣಯ ಕೈಗೊಳ್ಳುವುದು : ಸಂಗ್ರಹಿಸಿರುವ ದತ್ತಾಂಶಗಳನ್ನು ಸಂಯೋಜಿಸಿ, ತುಲನೆ ಮಾಡುತ್ತಾರೆ. ಆಕರಗಳನ್ನು ಸಂಗ್ರಹಿಸಿ ಅವುಗಳಲ್ಲಿರುವ ಸಾಮ್ಯತೆಗಳನ್ನು ಕಲೆ ಹಾಕುತ್ತಾರೆ. ಆ ವೇಳೆಯಲ್ಲಿ ಅವರು ಎಂದೂ ತಾಳ್ಮೆ, ಮಾನಸಿಕ ಸಮತೋಲನವನ್ನು ಕಳೆದುಕೊಳ್ಳುವುದಿಲ್ಲ. ಈ ಹಂತದಲ್ಲಿ ಸಮಸ್ಯೆಯ ಬಗ್ಗೆ ತಾತ್ಕಾಲಿಕ ನಿರ್ಣಯ ಕೈಕೊಳ್ಳುತ್ತಾರೆ. ಸಮರ್ಪಕ ಪರಿಹಾರ ಸಿಗುವವರೆಗೆ ಸಂದೇಹದಿಂದಲೇ ನೋಡುತ್ತಾ, ಮಾನಸಿಕ ಹಿಂದೇಟು ಹಾಕುತ್ತಾ ಒಂದೇ ಸ್ಥಳಕ್ಕೆ ಪುನಃ ಪುನಃ ಭೇಟಿಕೊಡುತ್ತ ಹೊಸ ಅಂಶಗಳನ್ನು ಹೆಕ್ಕಿ ತೆಗೆಯುತ್ತಾರೆ.

. ಸಮಸ್ಯೆಯ ಪರಿಹಾರ ಕಾರ್ಯ : ತಾತ್ಕಾಲಿಕ ಪರಿಹಾರಗಳನ್ನು ಸಮರ್ಥ ಸಾಕ್ಷ್ಯಧಾರಗಳ ಮೂಲಕ ಪರಿಶೀಲಿಸಿ, ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಹಿಡಿಯುತ್ತಾರೆ. ಈ ಸಂದರ್ಭದಲ್ಲಿ ಶಂಬಾ ಅವರ ಶ್ರಮ ಮತ್ತು ಪ್ರತ್ಯಕ್ಷ ಪರಿಶೀಲನೆ ತುಡಿತ ಅನುಕರಣೀಯ. ತಾವು ತಿಳಿದುಕೊಂಡ ಸಾಮಾನ್ಯ ತತ್ವಗಳನ್ನು ಸಮರ್ಪಕವಾಗಿ ನಿರೂಪಿಸುತ್ತಾರೆ, ದಾಖಲಿಸುತ್ತಾರೆ.

ತಾವು ಗುರುತಿಸಿದ ಫಲಿತಗಳನ್ನು ಸಮಕಾಲೀನ ವಿದ್ಯಮಾನಗಳಿಗೆ ಅನುಣವಾಗಿ ಬಳಸಿ, ಪರೀಕ್ಷಿಸಿ ಹಾಗೂ ಪ್ರಮಾಣೀಕರಿಸುತ್ತಾರೆ. ತಾವು ಶೋಧಿಸಿದ ಅಂಶಗಳನ್ನು ಮುಕ್ತ ಚರ್ಚೆಗೆ ಬಿಡುತ್ತಾರೆ. ಪುನರ್ ಪರಿಶೀಲನೆಗೆ ಒಳಪಡಿಸುತ್ತಾರೆ. ತಮ್ಮ ನಿರ್ಣಯದ ನೆಲೆಗಳನ್ನು ಬೇರೆ ಬೇರೆ ದಿಕ್ಕುಗಳಿಂದ ಶೋಧಿಸಲು ಎಲ್ಲ ಅವಕಾಶಗಳನ್ನು ಬಳಸಿಕೊಳ್ಳುತ್ತಾರೆ. ತಾವು ಕಂಡುಹಿಡಿದ ತೀರ್ಮಾನವೇ ಕೊನೆಯೆಂಬ ಭಾವನೆ ಅವರಲ್ಲಿ ಇಲ್ಲವೇ ಇಲ್ಲ. ಇತರರಿಗೂ ಇರಬಾರದು. ಸಂಶೋಧನೆಯ ವಿಧಾನವೇ ಹೀಗೆ. ಉದಾ. ಕಂದಮಿಳ್ ಬಗೆಗಿನ ಅವರ ಶೋಧವು ಅವರಿಗೆ ತೃಪ್ತಿಯಿಲ್ಲ ಇದು ಶಂಬಾ ಅವರಂತಹ ಪ್ರಾಮಾಣಿಕ ಸಂಶೋಧಕರಿಗೆ ಮಾತ್ರ ಸಾಧ್ಯ. ತಮ್ಮ ವಾದಕ್ಕೆ ವಿರುದ್ಧವಾದ ಸಾಕ್ಷ್ಯಾಧಾರ ದೊರೆತಾಗ ತಮ್ಮ ವಾದವನ್ನು ಕೈಬಿಡುತ್ತಾರೆ.

ಶಂಬಾ ಅವರಲ್ಲಿ ಪಾಂಡಿತ್ಯ, ಅನುಭವ ಮತ್ತು ತರಬೇತಿ ಇವು ಸಮೀಕರಣ ಗೊಂಡಿರುವುದರಿಂದ ಯಾವುದೇ ವಿಷಯವನ್ನು ಅವರು ಕೈಗೆತ್ತಿಕೊಂಡರೂ ಅರ್ಥಪೂರ್ಣವಾಗಿ ವಿವೇಚಿಸುತ್ತಾರೆ. ಅವರ ಸಂಶೋಧನೆಯ ಯಶಸ್ಸಿಗೆ ಅವರು ಉಪಯೋಗಿಸುವ ಹಲವು ಶೋಧಕ ಸೂತ್ರಗಳು ಕಾರಣವಾಗಿವೆ. ಅವು ಹೀಗಿವೆ. ‘ತಿಳಿದಿರುವ ವಿಷಯಗಳಿಂದ ತಿಳಿಯದಿರುವ ವಿಷಯಗಳ ಕಡೆಗೆ’ ಅವರು ಒತ್ತು ಕೊಡುತ್ತಾರೆ. ಒಂದು ವಿಷಯದ ಬಗೆಗೆ ಅವರು ವಿವೇಚಿಸುವಾಗ ತಮಗಿಂತ ಹಿಂದೆ ನಡೆದಿರುವ ಕೆಲಸಗಳ ಸ್ವರೂಪವನ್ನು ಹೇಳಿ ತಾವು ಹೇಳಬೇಕಿರುವ ಹೊಸ ವಿಷಯಕ್ಕೆ ಪೀಠಿಕೆ ಹಾಕುತ್ತಾರೆ. ಉದಾ. ಕನ್ನಡ ರಚನೆ ಹುಡುಕುವಲ್ಲಿ, ಕಣ್ಮರೆಯಾದ ಕಂನಡ ಶೋಧಿಸುವಲ್ಲಿ ಇಂತಹ ಬರಹಗಳಲ್ಲಿ ವಿಷಯದ ಸಾರವನ್ನು ಆರಂಭದಲ್ಲಿ ಹೇಳಿ ನಂತರ ಅವುಗಳ ಅಂಶಗಳನ್ನು ವಿಶ್ಲೇಷಿಸುತ್ತಾರೆ. ಅವರ ಸಂಶೋಧನೆಯಲ್ಲಿ ಬಳಕೆಯಾದ ಇನ್ನೊಂದು ಸೂತ್ರವೆಂದರೆ ‘ಸ್ಥೂಲದಿಂದ ಸೂಕ್ಷ್ಮದ ಕಡೆಗೆ’ ಒಂದು ವಿಷಯದ ಬಗ್ಗೆ ವಿವೇಚಿಸುವಾಗ ಅದರ ಒಟ್ಟು ನೋಟವನ್ನು ಆರಂಭದಲ್ಲಿ ಹೇಳಿ ನಂತರ ಒಂದೊಂದೇ ಅಂಶವನ್ನು ಇಂತಹ ಬರಹಗಳಲ್ಲಿ ಅದನ್ನು ಕಾಣಬಹುದು. ವಿಷಯ ವಿವೇಚನೆಯಾದ ನಂತರ ತಮ್ಮ ಸಂಶೋಧನೆಯ ಫಲಿತಗಳನ್ನು ಹೇಳಿದ್ದಾರೆ. ಅವರ ಶಾಸ್ತ್ರ ಬರಹಗಳನ್ನು ಪರಿಶೀಲಿಸಿದಾಗ ಉದಾಹರಣೆಗಳ ಮೂಲಕ ನಿಯಮವನ್ನು ನಿರೂಪಿಸುವ ‘ಅನುಗಮನ ವಿಧಾನ’ ಹಾಗೂ ನಿಯಮದ ಮೂಲಕ ಉದಾಹರಣೆಯನ್ನು ಕೊಡುವ ‘ನಿಗಮನ ವಿಧಾನ’ ಗಳನ್ನು ಬಳಸಿರುವುದು ಕಂಡುಬರುತ್ತದೆ.

III

ಶಂಬಾ ಅವರ ಸಂಶೋಧನೆಯ ಪದ್ಧತಿ ಆರು ನೆಲೆಗಳಲ್ಲಿ ಪ್ರವರ್ತಿಸುತ್ತದೆ.

. ತಾತ್ವಿಕ ಸಂಶೋಧನೆ : ಈ ಪದ್ಧತಿಯಲ್ಲಿ ಸಾಹಿತ್ಯಿಕ ದಾಖಲೆಗಳಿಗೆ ವಿಶೇಷ ಆದ್ಯತೆಯಿದೆ. ಆಂತರಿಕ ಮತ್ತು ಬಾಹ್ಯ ಸಾಕ್ಷ್ಯಾಧಾರಗಳ ಮೂಲಕ ಸಿದ್ಧಾಂತಗಳನ್ನು ಸ್ಥಾಪಿಸುವುದು ಅಥವಾ ಒಂದು ಸಮಸ್ಯೆಯನ್ನು ಪರಿಹರಿಸುವುದು ಈ ವಿಧಾನದ ಮುಖ್ಯ ಉದ್ದೇಶವಾಗಿದೆ. ಕನ್ನಡದ ನೆಲೆ, ಕಣ್ಮರೆಯಾದ ಕನ್ನಡ ಕುರಿತು ಬರಹಗಳು ತಾತ್ವಿಕ ಸಂಶೋಧನೆಗೆ ಉತ್ತಮ ನಿದರ್ಶನಗಳಾಗಿವೆ.

. ಆನ್ವಯಿಕ ಸಂಶೋಧನೆ : ಸಂಶೋಧನೆಯ ತತ್ವಗಳನ್ನು ಸಾಧ್ಯವಾದಷ್ಟು ಅನುಷ್ಠಾನಕ್ಕೆ ತರಲು ಯತ್ನಿಸುವರು. ಇದರಿಂದ ಶಂಬಾ ಅವರಿಗೆ ತಮ್ಮ ಕಾರ್ಯದ ಬಗ್ಗೆ ಆತ್ಮವಿಶ್ವಾಸ ಮೂಡುತ್ತದೆ. ತಾರ್ಕಿಕ ಆಲೋಚನೆಯಿಂದ ನಿರ್ಧಾರ ಕೈಗೊಳ್ಳುವುದರಿಂದ ಇಲ್ಲಿಯ ಫಲಿತಗಳು ವಾಸ್ತವ ಪ್ರಪಂಚಕ್ಕೆ ಅಳವಡಿಸಿಕೊಳ್ಳುವ ರೀತಿಯಲ್ಲಿರುತ್ತದೆ. ಇಲ್ಲಿ ಕಾರ್ಯ ಕಾರಣ ಸಂಬಂಧವಿರುವುದರಿಂದ ಸಂಶೋಧನೆಯ ಫಲಿತಗಳಿಗೆ ನಿಖರತೆ ಪ್ರಾಪ್ತವಾಗುತ್ತದೆ. ಗ್ರಾಮೀಣ ಮತ್ತು ಪಗರಣದಲ್ಲಿಯ ಸಂಪ್ರಬಂಧಗಳು ಹಾಗೂ ಪೂರ್ಣ ಸೂರ್ಯಗ್ರಹಣದ ಅಧ್ಯಯನವು ಅನ್ವಯಿಕ ಸಂಶೋಧನೆಗೆ ಉತ್ತಮ ನಿದರ್ಶನಗಳಾಗಿವೆ.

. ವಿವರಣಾತ್ಮಕ ಸಂಶೋಧನೆ : ಅಧ್ಯಯನ ಒಂದು ಕಾಲಕ್ಕೆ ಅಥವಾ ಒಂದು ಪ್ರದೇಶಕ್ಕೆ ಸೀಮಿತವಾದುದನ್ನು ವರ್ಣನಾತ್ಮಕ ಪದ್ಧತಿ ಎನಿಸಿಕೊಳ್ಳುತ್ತದೆ. ಉದಾ. ಕನ್ನಡ ನುಡಿಗಟ್ಟು ಗಾದೆ, ಜೋಡುನುಡಿ, ಮರಹಟ್ಟೆ ಮುಂತಾದ ಬರಹಗಳು ವಿವರಣಾತ್ಮಕ ಅಧ್ಯಯನದ ಕಕ್ಷೆಯಲ್ಲಿ ಬರುತ್ತವೆ. ಇದರಿಂದ ಆಯ್ದುಕೊಂಡ ವಿಷಯದ ಉದ್ದೇಶಿತ ಆಯಾಮವನ್ನು ಕಂಡುಕೊಂಡು ಅದರ ಸ್ವರೂಪವನ್ನು ದಾಖಲಿಸಿದಂತಾಗುತ್ತದೆ.

. ತೌಲನಿಕ ಸಂಶೋಧನೆ : ಈ ಪ್ರಕಾರದ ಸಂಶೋಧನೆಯ ಎರಡು ಅಥವಾ ಹೆಚ್ಚು ಭಾಷೆಗಳ ಅಥವಾ ಕೃತಿಗಳ ಕಾಲಘಟ್ಟದ ಅಥವಾ ಸಾಹಿತ್ಯ ಪ್ರಕಾರಗಳ ಸಾಮ್ಯತೆಗಳನ್ನು ಅನುಲಕ್ಷಿಸಿ ಅಧ್ಯಯನ ನಡೆಸಲಾಗುತ್ತದೆ. ಇಲ್ಲಿಯ ಅಧ್ಯಯನವು ಒಂದೇ ಗುಂಪಿಗೆ ಸೇರಿದ ಅಂತರ್ ಸಂಬಂಧಿಯಾಗುತ್ತದೆ. ಉದಾ. ಕುರುಬರೂ, ಮಲೆಯರೂ, ಹಳಬರು, ಹಳಹೈಕರು, ಗೋದಾವರಿ, ಉತ್ತರದಲ್ಲಿ ಕನ್ನಡದ ಕುರುಹುಗಳು, ಮರಹಟ್ಟಿನಾಡು ಮತ್ತು ನುಡಿ ಇಂತಹ ಅಧ್ಯಯನದಿಂದ ಆಯಾ ಭಾಷೆ ಅಥವಾ ಕಾಲಘಟ್ಟದ ಮೂಲರೂಪವನ್ನು ಪುನರಚಿಸಲು ನೆರವಾಗುವುದು.

. ಐತಿಹಾಸಿಕ ಸಂಶೋಧನೆ: ಒಂದು ಭಾಷೆ ಅಥವಾ ಕಾಲಘಟ್ಟದ ಸಾಹಿತ್ಯ ಚರಿತ್ರೆಯ ಐತಿಹಾಸಿಕ ಮೆಟ್ಟಿಲುಗಳನ್ನು ಗುರುತಿಸುತ್ತ ಅದರ ಇತಿಹಾಸವನ್ನು ಶೋಧಿಸುವುದು ಅದು ಪರಿವರ್ತನೆಗೊಳಗಾಗಿ ನಡೆದು ಬಂದ ರೀತಿಯನ್ನು ವಿವರಿಸುವುದು ಶೋಧಿಸುವುದು ಅದು ಪರಿವರ್ತನೆಗೊಳಗಾಗಿ ನಡೆದು ಬಂದ ರೀತಿಯನ್ನು ವಿವರಿಸುವುದು ಮುಖ್ಯವಾಗುತ್ತದೆ. ಮುಖ್ಯವಾಗಿ ದಾಖಲಿತ ಸಾಹಿತ್ಯ ಆಧರಿಸಿ ಈ ಪ್ರಕಾರದ ಅಧ್ಯಯನ ನಡೆಯುತ್ತದೆ ಕನ್ನಡ – ಕರ್ಣಾಟ, ಮರ್ಹಾಟಿ – ಮರಾಠಿ, ವರ್ಹಾಟ – ಮರ್ಹಾಟ ಇಂತಹ ಸಂಪ್ರಬಂಧಗಳು ಸಾಕ್ಷ್ಯಾಧಾರಗಳ ಮೂಲಕ ಒಂದು ವಿಷಯದ ಸಂಪೂರ್ಣ ಚರಿತ್ರೆಯನ್ನು ನೀಡುವುದು ಈ ಅಧ್ಯಯನದ ಕಡೆಗೆ ಸೇರುತ್ತದೆ.

. ಅಂತರ್‌ಶಿಸ್ತ್ರೀಯ ಸಂಶೋಧನೆ : ಈ ಪದ್ಧತಿಯನ್ನು ಸಮನ್ವಯ ಪದ್ಧತಿ ಎಂತಲೂ ಕರೆಯುವರು. ಅಂತರ್‌ಶಿಸ್ತ್ರೀಯ ಎಂದರೆ ವಿವಿಧ ವಿಷಯಗಳಲ್ಲಿ ಸಂಬಂಧ ಕಲ್ಪಿಸುವುದಾಗಿದೆ. ಜ್ಞಾನದ ಐಕ್ಯತೆ ತತ್ವವನ್ನು ಈ ಪದ್ಧತಿ ಆಧರಿಸಿದೆ. ಜ್ಞಾನವೆಂಬುದು ಬೇರೆ ಬೇರೆ ವಿಷಯಗಳಲ್ಲಿ ಪ್ರತ್ಯೇಕವಾಗಿರುವುದಿಲ್ಲ. ಎಲ್ಲಾ ವಿಷಯಗಳು ಒಂದಕ್ಕೊಂದು ಯಾವುದಾದರೊಂದು ರಿತಿಯಲ್ಲಿ ಸಂಬಂಧ ಹೊಂದಿದೆ. ಕನ್ನಡದಲ್ಲಿ ಈ ತರಹದ ಅಧ್ಯಯನವನ್ನು ಬಲಪಡಿಸಿದವರಲ್ಲಿ ಶಂಬಾ ಅವರು ಪ್ರಮುಖರು. ಅವರ ಬಹುಪಾಲು ಕೃತಿಗಳು, ಸಂಪ್ರಬಂಧಗಳು ಅಂತರ್‌ಶಿಸ್ತ್ರೀಯ ಪದ್ಧತಿಯಿಂದ ಪುಷ್ಟಿಕೊಂಡಿವೆ. ಈ ‘ಶಂಬಾ ವಿಧಾನ’ ಮುಂದಿನ ತಲೆಮಾರಿನವರಿಗೆ ಒಂದು ತಲೆಮಾರಿನವರಿಗೆ ಒಂದು ಸಂಶೋಧನೆಯ ಪಥವಾಗಿ ಮುನ್ನಡೆಯಿತು.

ಶಂಬಾ ಅವರ ಸಂಶೋಧನೆಯೂ ಸಂದರ್ಭಕ್ಕೆ ತಕ್ಕಂತೆ ಮೇಲಿನ ಅಧ್ಯಯನ ವಿಧಾನಗಳನ್ನು ಸಮರ್ಪಕವಾಗಿ ಬಳಸಿರುವುದರಿಂದ ಅವರ ಬರಹಗಳು ಕಾಲಗತಿಸಿದರೂ ಆಕರ್ಷಣೆಯನ್ನಾಗಲಿ, ಮಹತ್ವವನ್ನಾಗಲಿ ಕಳೆದುಕೊಳ್ಳುವುದಿಲ್ಲ. ಈ ಕಾಲದಲ್ಲಿ ಸಂಶೋಧನೆಗೆ ಅನೇಕ ನೆಲೆಗಳನ್ನು ತೆರೆದುಕೊಟ್ಟ ಕೀರ್ತಿ ಅವರದಾಗಿದೆ.

ಭಾಷಾಶಾಸ್ತ್ರ, ಸಾಹಿತ್ಯ, ಸಂಸ್ಕೃತಿ ಮತ್ತು ಜಾತಿ ಬುಡಕಟ್ಟು ಕ್ಷೇತ್ರಗಳಿಗೆ ಸಂಬಂಧಿಸಿದ ಮೂಲಭೂತ ಸಮಸ್ಯೆಗಳನ್ನು ಬಿಡಿಸುವಾಗ ಅವರಿಗೆ ಕ್ಷೇತ್ರಕಾರ್ಯ ಅನಿವಾರ್ಯವೆಂದು ತೋರಿರಬೇಕು. ಮೂಲನೆಲೆಗೆ ಹೋಗಿ ವಾಸ್ತವದ ನೆಲೆಯನ್ನು ಗುರುತಿಸಬೇಕಾದರೆ ಕ್ಷೇತ್ರಕಾರ್ಯ ಅವಶ್ಯ. ಶಂಬಾ ಅವರು ಕ್ಷೇತ್ರಕಾರ್ಯಕ್ಕೆ ಹೋಗುವುದಕ್ಕಿಂತ ಮುಂಚೆ ತಾವು ಆಯ್ದುಕೊಂಡ ಸಮಸ್ಯೆಯ ನಗ್ಗೆ ಒಂದು ಸಂಶೋಧನೆಯ ನಕ್ಷೆ ಅವರ ಮನಸ್ಸಿನಲ್ಲಿ ರೂಪು ತಾಳುತ್ತಿರಬೇಕು. ಕ್ಷೇತ್ರಕಾರ್ಯಕ್ಕೆ ಹೋದಾಗ ಅನೇಕ ಸಾಧನ ತಂತ್ರಗಳಿಂದ ಸಾಮಗ್ರಿಗಳನ್ನು ಸಂಗ್ರಹಿಸುತ್ತಾರೆ. ಆ ವೇಳೆಯಲ್ಲಿ ಅವರು ತಾಳ್ಮೆ ಮಾನಸಿಕ ಸಮತೋಲನವನ್ನು ಕಳೆದುಕೊಳ್ಳುವುದಿಲ್ಲ. ನಾಡು – ನುಡಿಗೆ ಸಂಬಂಧಿಸಿದ ಅವರ ಬಹುಪಾಲು ಬರಹಗಳಿಗೆ ಕ್ಷೇತ್ರಕಾರ್ಯ ಮತ್ತು ಕ್ಷೇತ್ರಸಮೀಕ್ಷೆಗಳ ಹಿನ್ನೆಲೆಯಿದೆ.

ಅಧ್ಯಯನದ ನಿರಂತರತೆ ಮತ್ತು ಸಂಶೋಧನೆಯ ಪ್ರಗತಿ ಶಂಬಾ ಅವರ ಸಂಶೋಧನೆಯ ಮಹತ್ವಪೂರ್ಣ ಲಕ್ಷಣವಾಗಿದೆ. ಆದುದರಿಂದ ಅವರ ಲೇಖನಗಳು ಪುನಃ ಪುನಃ ಪರಿಷ್ಕಾರಗೊಂಡಿವೆ. ಉದಾ. ಕಣ್ಮರೆಯಾದ ಕನ್ನಡ ಪರಿಚಯಾತ್ಮಕವಾಗಿವೆ. ಅವೇ ಲೇಖನಗಳು ಮಹಾರಾಷ್ಟ್ರೀಯ ಮೂಲ, ಕನ್ನಡದ ನೆಲೆ ವಿಶ್ಲೇಷಣಾತ್ಮಕವಾಗಿವೆ. ಒಂದು ವಿಷಯಕ್ಕೆ ಸಂಬಂಧಿಸಿದಂತೆ ಒಂದು ಲೇಖನ ಬರೆದ ಮೇಲೆ ಅವರು ಅದನ್ನು ಅಷ್ಟಕ್ಕೆ ಬಿಡುವುದೇ ಇಲ್ಲ. ಅದರ ಬಗ್ಗೆ ಹೊಸ ಹೊಸ ಮಾಹಿತಿಗಳನ್ನು ದೊರೆದಂತೆಲ್ಲ ವಿಷಯವನ್ನು ಒಂದು ಚೌಕಟ್ಟಿಗೆ ಒಳಪಡಿಸುತ್ತಾರೆ. ಆ ಸಂದರ್ಭದಲ್ಲಿ ಮೊದಲಿನ ತಮ್ಮ ವಿಚಾರಗಲಿಗೆ ಪುಷ್ಟಿ ನೀಡುತ್ತಾರೆ. ಆಯಾ ವಿಷಯಗಳ ಮೇಲೆ ಹೊಸ ಬೆಳಕು ಚೆಲ್ಲುತ್ತಾರೆ. ಹೊಸದನ್ನು ಶೋಧಿಸಲು ಶಂಬಾ ಅವರು ಹವಣಿಸುತ್ತಾರೆ.

ಶಬ್ದಾರ್ಥದ ವಿವೇಚನೆಯಲ್ಲಿ ಶಂಬಾ ಅವರು ಅನುಸರಿಸಿದ ಕ್ರಮ ಶಾಸ್ತ್ರೀಯವಾದುದು. ಒಂದು ಪದ ಒಂದೇ ಪ್ರದೇಶದ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಕಾವ್ಯ ; ಶಾಸನಗಳಲ್ಲಿ ಎಲ್ಲೆಲ್ಲಿ ಬಂದಿದೆ ಎಂಬುದನ್ನು ಗಮನಿಸಿ ಆಯಾ ಪದಗಳ ಜ್ಞಾತಿರೂಪಗಳನ್ನು ಬೇರೆ ಬೇರೆ ಭಾಷೆಗಳಲ್ಲಿದ್ದರೆ ಮತ್ತು ಆ ಪದ ಇಂದಿಗೂ ಯಾವುದಾದರೂ ಪ್ರದೇಶದಲ್ಲಿ ಹುದುಗಿಕೊಂಡಿದ್ದರೆ ಅದನ್ನು ಶೋಧಿಸಿ, ಅರ್ಥೈಸುತ್ತಾರೆ. ಉದಾ. ಹಟ್ಟಿ, ಮರಹಟ್ಟಿ ಕಾನಡೇ, ಪುಂಡರಿ, ಕಂಡಾರಿ, ಮಲ್ಲಾರಿ ಇಂತಹ ಶಬ್ದರೂಗಳ ಸ್ವರೂಪವನ್ನು ಗುರುತಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಅವರು ಕೇವಲ ಶಬ್ದಾರ್ಥದ ನೆಲೆಯಲ್ಲಿಯೇ ನಿಲ್ಲುವುದಿಲ್ಲ. ಕ್ರಮವಾಗಿ ವಿಷಯದ ಸ್ಥೂಲ ಸೂಕ್ಷ್ಮ ಆಯಾಮಗಳನ್ನು ತೆರೆದು ತೋರಿಸುತ್ತಾರೆ. ಶಬ್ದಾರ್ಥ ವಿವೇಚನೆಯ ಅಂತರಾಳದಲ್ಲಿಯೂ ಸಮಾಜವೇ ಅವರಿಗೆ ಮುಖ್ಯವಾಗಿ ಕಾಣುತ್ತದೆ.

ಶಂಬಾ ಅವರ ಸಂಪ್ರಬಂಧಗಳಲ್ಲಿ ಎಷ್ಟೆಲ್ಲ ವಿಷಯಗಳು ಮೂಡಿಬರುತ್ತವೆವೋ ಪ್ರಾಯಃ ಅಷ್ಟೇ ವಿವರಗಳು ಆ ಲೇಖನಗಳ ಕೊನೆಟಿಪ್ಪಣಿಗಳಲ್ಲಿಯೂ ಮೂಡಿಬರುತ್ತವೆ. ಅವರ ಬರಹಗಳಲ್ಲಿ ವಿಫುಲವಾದ ಸಾಮಗ್ರಿ, ಆಳವಾದ ಪರಿಶೀಲನೆ, ವ್ಯಾಪಕವಾದ ವಿವೇಚನೆ ಹಾಗೂ ಕೃತಿಯ ಕೊನೆಯಲ್ಲಿ ಕೊಡುವ ಅನುಬಂಧಗಳು, ಶಬ್ದಸೂಚಿ, ಗ್ರಂಥ ಸೂಚಿ, ಸಹಾಯಕಸೂಚಿ, ಇವೆಲ್ಲವು ಹೆಚ್ಚಿನ ಅಧ್ಯಯನಕ್ಕೆ ನೆರವಾಗುತ್ತವೆ. ಆಯಾ ಕ್ಷೇತ್ರದ ವಿದ್ವಾಂಸರ ದೃಷ್ಟಿ ಪಲ್ಲಟವಾಗುವ ಅಥವಾ ದೃಷ್ಟಿ ಪರಿಷ್ಕರಣಗೊಳ್ಳುವ ಹೊಸ ಚಿಂತನಾಮಾರ್ಗ ಅವರ ಬರಹಗಳಲ್ಲಿವೆ ಎಂಬುದು ಗಮನಿಸಬೇಕಾದ ಸಂಗತಿ.

ಶಂಬಾ ಅವರ ಸಂಶೋಧನೆಯ ಭಾಷೆ ‘ಸ್ವಭಾವೋಕ್ತಿ’ ಅಲಂಕಾರದ ಲಕ್ಷಣವನ್ನು ಒಳಗೊಂಡಿದೆ. ತಾವು ಹೇಳಬೇಕಾದ ವಿಷಯವನ್ನು ಸರಳವಾಗಿ, ನೇರವಾಗಿ, ವಸ್ತುನಿಷ್ಠವಾಗಿ ನಿರೂಪಿಸುತ್ತಾರೆ. ಅವರ ಬರಹಗಳಲ್ಲಿ ವಾಕ್ಯಗಳು ಚಿಕ್ಕಚಿಕ್ಕವಾಗಿದ್ದು ಹೇಳುವ ವಿಷಯವನ್ನು ಸ್ಪಷ್ಟಪಡಿಸುತ್ತವೆ. ಅವರ ಬರಹಗಳಲ್ಲಿ ವಿಷಯಕ್ಕೆ ಪ್ರಧಾನ ಸ್ಥಾನವಿದೆ ವಿನಃ ಅಲಂಕಾರಿಕ ಭಾಷೆಗಲ್ಲ. ಓದುಗರ ಗಮನವನ್ನು ವಿಷಯದತ್ತ ಶಂಬಾ ಅವರು ಸೆಳೆಯುತ್ತಾರೆ. ಗೊಂದಲರಹಿತವಾದ, ಅರ್ಥವತ್ತಾದ ಪರಿಣಾಮಕಾರಿಯಾದ ಭಾಷೆ ಅವರದು.

ತಮ್ಮ ಅಧ್ಯಯದ ಮಿತಿಗಳನ್ನು ಕುರಿತು ಶಂಬಾ ಅವರು ತಮ್ಮ ಕೃತಿಗಳ ಅರಿಕೆ ಭಾಗಗಳಲ್ಲಿ ನಿವೇದಿಸಿಕೊಂಡಿದ್ದಾರೆ. ನನ್ನ ಕಿರಿಯ ತಿಳಿವಿನಿಂದ ಅಥವಾ ಅರಿತುದನ್ನು ಅಷ್ಟು ಸರಿಯಾಗಿ ಆಡಿ ತೋರಿಸುವ ಹದವನ್ನು ಅರಿಯವನಾದ್ದರಿಂದ ಈ ಪುಸ್ತಕದಲ್ಲಿ ಅಲ್ಲಿ, ಇಲ್ಲಿ ಕೆಲ ತಪ್ಪು ತಡೆಗಳು ಉಲಿದಿರಲಿಕ್ಕೆ ಸಾಕು. ಅಂತಹುಗಳನ್ನು ತಿದ್ದಿಕೊಳ್ಳಲು ನಾನು ಯಾವಾಗಲೂ ಸಿದ್ಧ. ಬಲ್ಲಿದರು ಪರಾಮರ್ಶಿಸಿ ಅವನ್ನು ತಿಳಿಸಬೇಕಾಗಿ ಬಿನ್ನಹ. ಗ್ರಂಥ ಸಂಗ್ರಹದ ಅನುಕೂಲತೆಗಳು ಇಲ್ಲದ್ದರಿಂದಲೂ ಒಮ್ಮೆ ಓದಿದ ಪುಸ್ತಕಗಳನ್ನು ಇನ್ನೊಮ್ಮೆ ದೊರಕಿಸಬೇಕೆಂದರೆ ಅದು ಸಹ ಅಸಾಧ್ಯವಾದುದರಿಂದಲೂ ನನಗೆ ತೃಪ್ತಿಕರವಾಗುವಷ್ಟು ಟಿಪ್ಪಣಿಗಳನ್ನು ಸೇರಿಸಲಿಕ್ಕೆ ಸಾಧ್ಯವಾಗಲಿಲ್ಲ. ಹಾಕಿದ ಟಿಪ್ಪಣಿಗಳಲ್ಲಿಯೂ ಕೆಲವು ಕೊರತೆಗಳು ಕೈಮೀರಿ ಉಳಿದುವು. ನಾನಿಲ್ಲಿ ನಿರ್ಗತಿಕ ಪುಸ್ತಕದ ಆಕಾರವು ಮೊದಲು ಎಣಿಸಿದ್ದರಿಂದ ಇಮ್ಮಡಿಗಿಂತ ಹೆಚ್ಚಾದುದರಿಂದ ಕೊನೆಯ ಭಾಗಗಳಲ್ಲಿ ವಿವರಣೆಗಿಂತ ನಿರ್ಣಯಗಳನ್ನು ಹೇಳುವುದು ಅನಿವಾರ್ಯವಾಯಿತು (ಕಣ್ಮರೆಯಾದ ಕನ್ನಡ ಅರಿಕೆ). ಇಲ್ಲಿ ಒಂದು ಆದರ್ಶ ಉಂಟು; ಮಾದರಿಯೂ ಉಂಟು.

IV

ಭಾಷೆ ಮತ್ತು ಸಂಸ್ಕೃತಿಯ ಕುರಿತು ವಿಚಾರ ಮಾಡಿದ ಪ್ರಮುಖ ವಿದ್ವಾಂಸರಲ್ಲಿ ಶಂಬಾ ಜೋಶಿಯವರು ಒಂದು ಹೊಸ ಹಾದಿಯನ್ನೇ ಹಾಕಿದ್ದಾರೆ. ಇವರ ೧೯೭೦ರ ಹಿಂದೆ ಬಂದ ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ, ಹಾಲುಮತದರ್ಶನ, ಕಣ್ಮರೆಯಾದ ಕನ್ನಡ, ಮುಂತಾದ ಗ್ರಂಥಗಳು, ಕರ್ನಾಟಕ ಸಂಸ್ಕೃತಿಯನ್ನು ಗ್ರಹಿಸುವ ಹೊಸ ನೆಲೆಗಳತ್ತ ಶೋಧ ನಡೆಸಿದ್ದು, ಕನ್ನಡ ಜನಜೀವನದ ಪ್ರಚಲಿತ ಪುರಾಣ, ಆಚರಣೆಗಳು, ಧಾರ್ಮಿಕ ಪ್ರಕ್ರಯೆಗಳು ಭಾಷಾ ಸಂಕೇತಗಳ ಮೂಲಕ ಇತಿಹಾಸವನ್ನು ಗ್ರಹಿಸುವ ಸಾಧ್ಯತೆಗಳನ್ನು ಸೂಚಿಸುವ ಹೊಸ ದೃಷ್ಟಿಕೋನವನ್ನು ಪ್ರಾರಂಭಿಸಿದವೆಂದೇ ಹೇಳಬಹುದು. ಈ ದೃಷ್ಟಿಕೋನವು ಇತಿಹಾಸವನ್ನು ಬದಲಾಗುವ, ಬೆಳವಣಿಗೆಯಾಗುವ ಪ್ರಕ್ರಿಯೆಯಾಗಿ ಗಮನಿಸುತ್ತದೆಯೆಂಬುದು ಇಲ್ಲಿ ಗುರುತಿಸಬೇಕಾದ ಸಂಗತಿಯಾಗಿದೆ.

ಮನುಷ್ಯ ಬದುಕಿನ ಅಂತಸತ್ವವನ್ನು ಒಳಗೊಂಡ ಭಾಷಿಕ ಸಂಕೇತಗಳು, ಶಂಬಾ ಅವರ ವಿಶ್ಲೇಷಣೆಯ ಪ್ರಮುಖ ಆಕರಗಳಾಗಿವೆ. ಕರ್ನಾಟಕ (ಹಾಗೂ ಭಾರತೀಯ) ಜನಜೀವನದ ಸ್ವರೂಪವನ್ನು ಗೃಹಿಸುವ ಅಧ್ಯಯದಲ್ಲಿ ಶಂಬಾ ಅವರ ಎರಡು ಮುಖ್ಯ ಬೆಳವಣಿಗೆಯನ್ನು ಗುರುತಿಸಬಹುದೆಂದು ತೋರುತ್ತದೆ. ಅವರ ಮೊದಲು ಮೊದಲಿನ ಕೃತಿಗಳಲ್ಲಿ (ಉದಾಹರಣೆಗೆ, ಕಂನಡದ ನೆಲೆ, ಹಾಲುಮತ ದರ್ಶನ) ಭಾಷಿಕ ಸಂಕೇತಗಳ ಮೂಲಕ ಕಂನಾಡ ಜನಜೀವನದ ಮೂಲ ನೆಲೆಗಳನ್ನು ಅರಿಯುವ ಪ್ರಯತ್ನವು ಕಂಡುಬರುತ್ತದೆ. ಕನ್ನಡನಾಡಿನ ಪ್ರಾಚೀನ ಜನಾಂಗವೊಂದರ ಹುಡುಕುವ ಪ್ರಯತ್ನ, ಅದರ ಗಡಿಗಳ ವಿವರಗಳು ಈ ಮುಂತಾದ ಸಮಸ್ಯೆಗಳ ಹುಡುಕಾಟವು ಇಲ್ಲಿ ಪ್ರಧಾನ ನೆಲೆಯದ್ದಾಗಿದೆ. ಕರ್ನಾಟಕ ಪ್ರಾಚೀನ ಜನಾಂಗವೊಂದರ ಲಕ್ಷಣಗಳನ್ನು ಪುನಾರಚಿಸುವ ಈ ಅಧ್ಯಯನದ ಮುಖ್ಯ ದೃಷ್ಟಿಕೋನವು ಜೀವನದ ಖಚಿತ ನೆಲೆಗಳನ್ನು ಹುಡುಕುವ ಸ್ವರೂಪದ್ದೇ ಆಗಿದೆ. ಆದರೆ ಅವರ ನಂತರದ ಕೃತಿಗಳಲ್ಲಿ ಅಂದರೆ ಭಗವದ್ಗೀತೆಯ ರಹಸ್ಯ, ಪ್ರವಾಹ ಪತಿತರ ಕರ್ಮ ಹಿಂದೂ ಎಂಬ ಧರ್ಮ, ಮಾನವ ಧರ್ಮದ ಆಕೃತಿ ಮುಂತಾದ ಕೃತಿಗಳಲ್ಲಿ, ಜೀವನದ ತಾತ್ವಿಕ ನೆಲೆಯ ಗೃಹಿಕೆಯು ಪ್ರಧಾನ ಸ್ವರೂಪದ್ದಾಗಿದೆ. ಅಂದರೆ ಇತಿಹಾಸದ ಆಚರಣಾಯುಕ್ತ ಪಾತಳಿಯ ಅಧ್ಯಯನಕ್ಕಿಂತ, ಅದರ ವೈಚಾರಿಕ ಭೂಮಿಕೆಯ ಸ್ವರೂಪವನ್ನು ಗ್ರಹಿಸುವುದು ಇಲ್ಲಿ ಮುಖ್ಯವಾದ ಕಾರ್ಯವಾಗಿದೆ, ಈ ರೀತಿಯ ಅಧ್ಯಯನ ಕ್ರಮದ ಶೈಲಿಗೆ ಅವರು ಇತಿಹಾಸದ ಸ್ವರೂಪವನ್ನು ಗ್ರಹಿಸುವ ರೀತಿಯೂ ಮುಖ್ಯ ಕಾರಣವೆಂದೂ ಹೇಳಬಹುದು. ಮಾನವರ ಆಚರಣದ ಸಂದರ್ಭದಲ್ಲಿ ಮೈದೋರುವ ಇತಿಹಾಸದ ಆಕೃತಿ ಹಾಗೂ ಇವರ ವೈಚಾರಿಕ ಭೂಮಿಕೆಯ ಮೇಲಣ ತತ್ವಜ್ಞಾನದ ಆಕೃತಿಯನ್ನು, ಮತ್ತು ತತ್ವಜ್ಞಾನದ ಭೂಮಿಕೆಯಿಂದ ಅವರ ಇತಿಹಾಸದ ಆಕೃತಿ ಸ್ವರೂಪವನ್ನು ಗ್ರಹಿಸಿಕೊಳ್ಳುವುದು ಶಕ್ಯವಾಗಬೇಕು ಎನ್ನುವ ಅವರ ಮಾತಿನಲ್ಲೇ ತಮ್ಮ ಅಧ್ಯಯನ ವಿಧಾನಕ್ಕೆ ಕೊಟ್ಟ ಹೊಸ ಒತ್ತನ್ನು ಗಮನಿಸಬೇಕು. ಒಂದರ್ಥದಲ್ಲಿ ಅವರ ಈ ಅಧ್ಯಯನಗಳು ‘Philosophical History’ ಯ ಲಕ್ಷಣವನ್ನು ಹೊಂದಿರುವಂಥದು. ಆದ್ದರಿಂದಲೇ ಮಾನವನ ವೈಚಾರಿಕ ಆಕೃತಿಗಳಲ್ಲಿ ಸಾಮಾಜಿಕ ಮೌಲ್ಯಗಳನ್ನು ಅನ್ವೇಷಿಸುವುದು ಇಲ್ಲಿ ಶಂಬಾ ಅವರಿಗೆ ಮುಖ್ಯವಾದ ಕಾರ್ಯವಾಗಿದೆ. ಭಾಷಿಕ ಸಂಕೇತ, ಪ್ರತಿಮೆಗಳೇ ಇಂಥ ವೈಚಾರಿಕ ಆಕೃತಯಳನ್ನು ನಿರ್ಮಿಸಿರುವಾಗ ಇಂಥ ಆಕೃತಿಯ ಪರಿಶೀಲನೆ ಇಲ್ಲಿ ಪ್ರಮುಖ ಸ್ಥಾನವನ್ನು ಪಡೆಯುತ್ತದೆ.

ಈ ವೈಚಾರಿಕ ಆಕೃತಿಗಳ ಅಧ್ಯಯನವು ಬದುಕಿನಲ್ಲಿ ನೆಲೆಗೊಂಡಿರುವ ಎರಡು ಪಾತಳಿಗಳನ್ನು ಗಮನಿಸಿದರೆ. ಇವರು ವಿವರಿಸುವ ಲೈಂಗಿಕ ಪಾತಳಿ ಹಾಗೂ ಪ್ರಜ್ಞಾಪಾತಳಿಗಳು ಈ ಎರಡು ಪಾತಳಿಗಳ ಲಕ್ಷಣವನ್ನು ಸ್ಪಷ್ಟವಾಗಿ ಹೇಳುತ್ತವೆ. ಬದುಕಿನ ಎರಡು ವಿಧಾನಗಳನ್ನು ಸೂಚಿಸುವ ಈ ಪಾತಳಿಗಳಲ್ಲಿ ಇತಿಹಾಸದಲ್ಲಿ ಪ್ರಾಧಾನ್ಯ ಪಡೆದಿರುವ ಲೈಂಗಿಕ ಪಾತಳಿಯ ಸ್ವರೂಪವೆಂಥದ್ದು ಎನ್ನುವುದನ್ನು ಬೋಧಿಸುವುದು ಇವರ ಈಚಿನ ಎಲ್ಲ ಕೃತಿಗಳ ಸಂಶೋಧನೆಯ ಮುಖ್ಯ ಲಕ್ಷಣವಾಗಿದೆ. ಇತಿಹಾಸದ ಈ ಪಾತಳಿಯ ಪ್ರಭಾವಗಳು ವರ್ತಮಾನಕ್ಕೂ ಆವರಿಸಿರುವ ರೀತಿಯನ್ನು ಪ್ರಚಲಿತ ಭಾಷಿಕ ಸಂಕೇತಗಳ ವಿಶ್ಲೇಷಣೆಯಿಂದಲೇ ಶಂಬಾ ಅವರು ಗುರುತಿಸಲು ಪ್ರಯತ್ನಿಸುತ್ತಾರೆ.

ಕೆಲವು ಸಾರಿ, ಈ ಪಾತಳಿಯ ಹಿನ್ನೆಲೆಯಲ್ಲಿ ನಡೆಯುವ ವೈಚಾರಿಕ ಆಕೃತಿಯ ವಿಶ್ಲೇಷಣೆಯು ಅತ್ಯಂತ ಸರಳವಾದ ತೀರ್ಮಾನ ಸ್ವರೂಪದ್ದು ಎಂದು ಅನ್ನಿಸುತ್ತದೆ. ಈ ಆಕೃತಿಯನ್ನು ನೋಡುವ ನೆಲೆಯೇ ಕೃತಿಕಾರನ ಆದರ್ಶವಾದ ಧೋರಣೆಯ ಹೇರಿಕೆಯಾಗಿ ರೂಪುಗೊಂಡಂತೆ ಅನ್ನಿಸುತ್ತದೆ. ಆ ಕೃತಿಯು ತನ್ನ ಕಾಲದ ಮಿತಿಗಳು ಹಾಗೂ ಸಾಧ್ಯತೆಯ ಪರಿಣಾಮ ಎನ್ನುವುದನ್ನು ಗಮನಿಸದೇ ಹೋದಾಗ ಉಂಟಾಗುವ ಅಪಾಯ ಈ ಕೆಲವು ಕಡೆ ಆಗುವ ಸಾಧ್ಯತೆಗಳಿವೆ.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಶಂಬಾ ಅವರ ಮುಖ್ಯ ಕಾಳಜಿಯು ವರ್ತಮಾನ ಬದುಕಿನ ಮೌಲ್ಯಗಳನ್ನು ಹೇಗೆ ಬೆಳೆಸಿಕೊಳ್ಳುವುದು ಎನ್ನುವುದೇ ಆಗಿದೆ. ಹೀಗಾಗಿ, ಭಾಷಿಕ ಸಂಕೇತಗಳಲ್ಲಿ ತೋರುವ ಜಿವನದ ಲೈಂಗಿಕ ಪಾತಳಿಯ ನೆಲೆಗಳ ನಿರಂತರವಾದ ಅನುಕ್ರಮಣಿಯನ್ನು ನಿವಾರಿಸಬೇಕೆನ್ನುವ ಆಶಯ ಇಲ್ಲಿ ಪ್ರಮುಖವಾಗಿದೆ. ಆದ್ದರಿಂದಲೇ ಅವರ ಇತ್ತೀಚಿನ ಕೃತಿಗಳು ಸಮಾಜದಲ್ಲಿ ಬದುಕುವ ಮತ್ತು ಅದನ್ನು ಬೆಳೆಸುವ ಆದ್ದರಿಂದಲೇ ತನ್ನ ಮತ್ತು ಸಮಾಜದ ಬದುಕಿಗೆ ಹೊಣೆಯಾಗುವ ಬಗೆಯನ್ನು ಕುರಿತು ಮಾಡಿದ ತಾತ್ವಿಕ ಚರ್ಚೆಗಳಾಗಿವೆ ಎಂದೂ ಹೇಳಬಹುದು. ಕಾಮುಕ ಪ್ರಕೃತಿಯು ಸ್ವಹಿತ ನೆಲೆಗಳನ್ನು ನಿರಾಕರಿಸುವ ಶಂಬಾ ಅವರು ಮಾನವ ಪ್ರೇಮವು ಕಟ್ಟಿಕೊಡಬಹುದಾದ ಜೀವನದ ನೆಲೆಗಳನ್ನು ಬಯಸುತ್ತಾರೆ. ಇವರು ವಿವರಿಸುವ ಲೈಂಗಿಕ ಪಾತಳಿ ಅಥವಾ ಜೀವಿತದ ನೆಲೆಗಳು ಪ್ರಜ್ಞಾಪಾತಳಿ ಅಥವಾ ಜೀವನದ ನೆರೆಯ ಹೊಂದಾಣಿಕೆಯನ್ನು ಸ್ಪಷ್ಟವಾಗಿ ಬಯಸುತ್ತವೆ. ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಮಾನವ ಮತ್ತು ಸಮಾಜವನ್ನು ರೂಪಿಸುವ ಮಾನವ ಈ ಎರಡೂ ವ್ಯಕ್ತಿತ್ವಗಳು ಬೇರೆ ಬೇರೆಯಾಗ ಕೂಡದು ಎನ್ನುವ ತಾತ್ವಿಕ ವಿಚಾರದಿಂದಲೇ ಇವರ ಸಂಸ್ಕೃತಿಯ ಶೋಧಗಳು ವೈಛಾರಿಕ ಆಕೃತಿಯ ವಿವರಗಳನ್ನು ಗ್ರಹಿಸಲು ಬಯಸುತ್ತವೆ.

ಶಂಬಾ ಅವರ ಅಧ್ಯಯನದ ಪ್ರಾಮುಖ್ಯತೆಯು, ವಾಸ್ತವವಾಗಿ ಇರುವುದು, ಭಾಷೆ ಮತ್ತು ಸಂಸ್ಕೃತಿಯನ್ನು ಗ್ರಹಿಸುವ ಹಲವು ನೆಲೆಗಳನ್ನು ಇದು ಕಲಿಸಿಕೊಡುತ್ತದೆ ಎನ್ನುವಲ್ಲಿ ಭಾಷಾಧ್ಯಯನದ ತಾತ್ವಿಕ ನೆಲೆಗಳನ್ನು ಕಂಡುಕೊಳ್ಳದೆ ಪ್ರಾಥಮಿಕ ಹಂತದಲ್ಲೇ ಇರುವ ಸಂಶೋಧನೆಗಳ ನಡುವೆ ಶಂಬಾ ಅವರ ಬರವಣಿಗೆ ಓಯಸಿಸ್‌ನಂತೆ ಎಂದರೆ ಅತಿಶಯೋಕ್ತಿಯೇನಲ್ಲ. ಒಟ್ಟಾರೆ ಶಂಬಾ ಅವರು ಕನ್ನಡ ಸಂಶೋಧನೆಗೆ ವಿಧಿ ವಿಧಾನಗಳನ್ನು ವೈಜ್ಞಾನಿಕ ತಳಹದಿಗಳನ್ನು ರೂಪಿಸಿ, ಅದಕ್ಕೆ ಭದ್ರ ಬುನಾದಿಯನ್ನು ಹಾಕಿ ಹೊಸ ಸಂಶೋಧನೆಯ ಮಾರ್ಗದ ಪ್ರವರ್ತಕರಾದರು. ಅವರ ಕಾಲಕ್ಕೆ ಕನ್ನಡ ಸೃಜನೇತರ ಸಾಹಿತ್ಯ ತನ್ನ ಚರಮಸೀಮೆ ತಲುಪಿತು. ಶಂಬಾ ಅವರು ಭಾರತೀಯ ಸಾಹಿತ್ಯಕ್ಕೆ ಗೊತ್ತಿರುವ ಶ್ರೇಷ್ಠ ವಿದ್ವಾಂಸರ ಪಂಕ್ತಿಯಲ್ಲಿ ಸೇರಲು ನ್ಯಾಯ ಸಮ್ಮತ ಅಧಿಕಾರವುಳ್ಳವರು. ಅಂತಹ ಅಧಿಕಾರಕ್ಕೆ ಅವರಿಗಿರುವ ಅಸಾಧಾರಣ ಪ್ರತಿಭೆ, ನೂತನ ವಿಚಾರಗಳು ಮತ್ತು ಮಹತ್ಸಾಧನೆಯೇ ಕಾರಣವಾಗಿದೆ.