ಸಮಕಾಲೀನ ಭಾರತೀಯ ಸಂಸ್ಕೃತಿ ಶೋಧಕರಲ್ಲಿ ಶಂಬಾ ಜೋಶಿಯವರು ಅದ್ವಿತೀಯ ಸಂಶೋಧಕರಾಗಿದ್ದಾರೆ. ವೈಚಾರಿಕ ನಿಷ್ಠೆ, ಸತ್ಯಶೋಧನೆಯ ಪ್ರಾಮಾಣಿಕ ಚಿಂತನೆ, ಮೂಲಗಾಮಿಯಾಗಿ ಅನ್ವೇಷಿಸುವ ಪ್ರಖರ ವಿಚಾರಗಳಿಂದ ಭಾರತೀಯ ಸಂಶೋಧನ ಪ್ರಪಂಚದಲ್ಲಿ ಶಂಬಾ ಜೋಶಿ ಅವರು ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಕನ್ನಡ ಹಾಗೂ ಮರ್ಹಾಟಿಗಳಲ್ಲಿ ಅವರ ಸಂಶೋಧನೆಯು ಕೃತಿರಾಶಿ ಹರಡಿರುವುದಾದರೂ ಅವರ ಒಟ್ಟೂ ಸಂಶೋಧನ ಗ್ರಂಥಗಳನ್ನು ನೋಡಿದಾಗ ಜೋಶಿ ಅವರು ಕನ್ನಡ ಸಂಸ್ಕೃತಿ, ಮರ್ಹಾಟೀ ಸಂಸ್ಕೃತಿ, ಮುಂದೆ ಮಾನವ ಸಂಸ್ಕೃತಿಯ ಅನ್ವೇಷಣೆಯಲ್ಲಿ ನೆಲೆ ಪಡೆದುಕೊಂಡಂತೆ ಕಾಣುತ್ತದೆ. ಮಾನವ ಧರ್ಮದ ಪ್ರತಿಷ್ಟಾಪನೆ ಅವರ ಅಂತಿಮ ಶೋಧನೆಯಾಗಿದ್ದರೂ ಶಂಬಾ ಜೋಶಿಯವರ ಆರಂಭದ ಸಂಶೋಧನೆಯು ಇಂದಿಗೂ ಆ ಕ್ಷೇತ್ರದಲ್ಲಿ ಅಧ್ಯಯನ ಮಾಡುವವರಿಗೆ ಬಹುಬೆಲೆಯುಳ್ಳ ವಿಚಾರ ಸಾಮಗ್ರಿಯನ್ನು ಒದಗಿಸುತ್ತದೆ. ಶಂಬಾ ಜೋಶಿಯವರು ಕರ್ನಾಟ ಸಂಸ್ಕೃತಿಯ ಶೋಧನೆಗೆ ಮಾಡಿದ ಕಾರ್ಯ ಅಭೂತಪೂರ್ವವಾದುದು. ಈ ಅಧ್ಯಯನದ ಫಲಿತವನ್ನು ಈ ರೀತಿಯಾಗಿ ಕಲೆ ಹಾಕಬಹುದಾಗಿದೆ.

ಕನ್ನಡದ ಮೊದಲ ಉಪಲಬ್ಧ ಗ್ರಂಥ ಕವಿರಾಜಮಾರ್ಗದಲ್ಲಿ ಬರುವ ‘ಕಾವೇರಿಯಿಂದ ಮಾ ಗೋದಾವರಿವರೆಗಿರ್ದ’ ಕನ್ನಡ ನಾಡು ಇಂದು ಗೋದಾವರಿ ನದಿಯ ಬದಲಾಗಿ ಕೃಷ್ಣೆಯೇ ಕನ್ನಡದ ಉತ್ತರ ಸೀಮೆಯಾಗಿರುವಾಗ ಇದರ ಸತ್ಯಂಶವನ್ನು ಶೋಧಿಸುವ ಅಗತ್ಯವು ಶಂಬಾ ಅವರಿಗೆ ಹೇಗೆ ಬಂತು. ಹಾಗೆ ಶೋಧಿಸುತ್ತ ಹೊರಟ ಅವರಿಗೆ ಮಹಾರಾಷ್ಟ್ರದ ಮೂಲವನ್ನು ಅರಿಯುವ ಪ್ರೇರಣೆ ನೀಡಿತು. ಮಹಾರಾಷ್ಟ್ರದ ಮೂಲದ ವಿಚಾರದಲ್ಲಿ ಹಲವಾರು ಸಂಶೋಧಕರು ತಮ್ಮ ತಮ್ಮ ವಾದ ಮಂಡಿಸಿದ್ದಾರೆ. ಅದರ ನಿಷ್ಪತ್ತಿ ಮಹಾರರ + ರಾಷ್ಟ್ರ (ಮಹಾರಾರರು ಎಂದರೆ ಹೊಲೆಯರು) ಎಂದು ಕೆಲವರು ಪ್ರತಿಪಾದಿಸಿದರು. ತಮ್ಮದು ಮಹಾರರ ನಾಡು ಎಂದು ಹೇಳಿಕೊಳ್ಳಲು ಅಲ್ಲಿಯ ವರ್ಣಾಭಿಮಾನಿಗಳಿಗೆ ಸಂಕಟವಾದ್ದರಿಂದ ಈ ನಿಷ್ಪತ್ತಿ ಮೂಲೆ ಹಿಡಿಯಿತು. ರಠಿ, ಮಹಾರಠಿ ಎಂದು ಇನ್ನೊಂದು ರೀತಿಯಲ್ಲಿ ಭಂಡಾರಕರ ಅವರು ಅಭಿಮತವೂ ಸಂದಿಗ್ಧವಾಗಿದ್ದು ‘ರಠಿ’ ಮಹಾರಠಿ ವಾದ ಪುರಸ್ಕೃತವಾಗಲಿಲ್ಲ. ರಾಠಿ ಅಥವಾ ರಾಷ್ಟ್ರೀಯ ಎಂಬುದರಿಂದಲೇ ಮಹಾರಾಷ್ಟ್ರಕವಾಗಿದೆಯೆಂದು ಹೇಳುವುದಾದರೆ ಅದು ಜನಾಂಗವಾಚಕವಾಗಿ ಉಳಿಲಾರದು. ರಠಿಕರೂ ರಾಷ್ಟ್ರಿಕರೂ ನಾಡವರು, ಇವರು ಮಹಾಠರ ಪೂರ್ವಜರೆಂದು ಸಾಧಿಸಲು ಸಾಧ್ಯವಿಲ್ಲ. ರಾಷ್ಟ್ರಕೂಟರ ವಂಶಪರಂಪರೆಯೆಂದೂ ಹೇಳುವುದು ಸಮಂಜಸವಲ್ಲ. ಇನ್ನು ಕೆಲವರು ಮಹಾ + ರಾಷ್ಟ್ರ (ರಾಷ್ಟ್ರ ಸಮುದಾಯ) ಎಂದು ವಾದಿಸುತ್ತಾರೆ. ಆದರೆ ಇದಕ್ಕೆ ಇತಿಹಾಸದ ಆಧಾರವಿಲ್ಲ. ಅಲ್ಲದೆ ಸಂಸ್ಕೃತ ಪದ ವಿಶ್ಲೇಷಣೆಯೇ ತಪ್ಪಿನದೆಂದು ಶಂಬಾ ಹೇಳುತ್ತಾರೆ. ಭಾರತದಲ್ಲಿ ಆಸ್ಟ್ರೋ ಏಶಿಯಾಟಿಕ್ ಜನಾಂಗದವರು ಆರ್ಯರಿಗಿಂತಲೂ ಮೊದಲು ವಾಸವಾಗಿದ್ದರು. ದಕ್ಷಿಣದಲ್ಲಿ ದ್ರಾವಿಡ ಜನಾಂಗವಿತ್ತು. ಆದ್ದರಿಂದ ನೆಲಸಿದ ಜನಾಂಗದ ಭಾಷೆಯಲ್ಲಿಯೇ ಆ ನಾಡುಗಳಿಗೆ ಹೆಸರು ಇರುವುದನ್ನು ಕಾಣಬಹುದು. ದ್ರಾವಿಡ ಹೆಸರು ಬರುವುದಕ್ಕೆ ಮೊದಲು ಕನ್ನಡ, ತಮಿಳು, ಕಂದಮಿಳು ಎಂದು ಇತ್ತು, ಹಾಗೆಯೇ ದ್ರಾವಿಡ ಅಥವಾ ಕನ್ನಡದ ಸಂಬಂಧ ಬಲೂಚಿಸ್ತಾನದವರೆಗೆ ಇದ್ದದ್ದು ಕಂಡುಬರುತ್ತದೆ.

ಮಹಾರಾಷ್ಟ್ರದ ಕೆಲಬಲದ ನಾಡುಗಳ ಹೆಸರಿನ ಕನ್ನಡ, ಕರ್ನಾಟಕ, ಕರಹಟ್ಟಿ, ಕರ್ಹಾಟ, ಮಲೆಯ, ಮಾಳವ, ತೆಂಕಣ, ಕೊಂಕಣವೆಂಬ ಜೋಡಿಪದ ಸಿದ್ಧವಾಯಿತು. ಹೀಗೆ, ನಾಡಿಂದ ನುಡಿಗೆ ಹೆಸರು ಬರುತ್ತದೆಂಬುದು ಸ್ಪಷ್ಟ. ಆದ್ದರಿಂದಲೇ ಕ್ರಿ. ಶ. ೧೩ನೆಯ ಶತಮಾನಕ್ಕಿಂತ ಮೊದಲು ಬಳಕೆಯಲ್ಲಿದ್ದ ಮರ್ಹಾಟೀಯೇ ಮುಂದೆ ಮರಾಠಿಯೆಂಬ ವಿಕೃತ ರೂಪ ಪಡೆದಿರಬೇಕು. ಅಲ್ಲದೆ ಮರ್ಹಾಟೀ ಮೈಯಲ್ಲಿ ಕನ್ನಡ ಬೆರೆತುಕೊಂಡುದನ್ನು ಕೆಲವು ಪದಗಳು ಸಿದ್ಧಪಡಿಸುತ್ತವೆ. ಪಾಣೀತುಂಬಲೇ ನಡಲೀ ಮೊದಲಾದ ರೂಪಗಳು ಸಾಕ್ಷಿ. ಆದ್ದರಿಂದ ಕನ್ನಡ ತಾಯ ಮೊಲೆ ಹಾಲಲ್ಲೇ ಮರ್ಹಾಟಿ ಬೆಳೆದಿದೆ. ‘ಮರ್ಹಾಟಿಯು ಜನ್ಮ ತಾಳಿದುದು ವರ್ಹಾಟದಲ್ಲಿ’ ಎಂದು ಎಲ್ಲ ಮಹಾರಾಷ್ಟ್ರೀಯರೂ ಒಪ್ಪುತ್ತಾರೆ. ಕನ್ನಡ, ಮರ್ಹಾಟಿ ಭಾಷೆಗಳ ತುಲನಾತ್ಮಕ ಅಭ್ಯಾಸದಿಂದ ಕನ್ನಡದಿಂದಲೇ ಆ ಭಾಷೆಯ ಅಭಿವೃದ್ಧಿಯಾಯಿತೆಂದು ಸಿದ್ಧವಾಗುತ್ತದೆ. ಹಾಗಿದ್ದರೆ, ಮರ್ಹಾಟೀಯ ಮೂಲ ಮರಹಟ್ಟಿ ಪದದಿಂದ ಬಂದಿದೆ. ಇದು ಜನಾಂಗವಾಚಕವೂ ಆಗಿದೆ. “ವರ್ಹಾಟವೇ ಪ್ರಥಮ ಮಹಾರಾಷ್ಟ್ರ. ಮಹಾರಾಷ್ಟ್ರವೆಂಬುದು ಮರ್ಹಾಟ ಶಬ್ದದ ಭಾಷಾಂತರ ಮಹಾರಾಷ್ಟ್ರ. ಇವೆರಡರ ಮೂಲ ಮರ್ಹಾಟ ಅಥವಾ ಮರಹಟ್ಟವೆಂಬ ಪ್ರಾಚೀನ ನಾಮಾಭಿಧಾನ. ಇದೇ ಈ ಪ್ರಬಂಧದ ತಿರುಳು” ಎಂದು ಶಂಬಾ ಅವರು ‘ಮಹಾರಾಷ್ಟ್ರದ ಮೂಲ’ ಗ್ರಂಥದಲ್ಲಿ ತಮ್ಮ ಸಂಶೋಧನ ವಿಚಾರವನ್ನು ಮಂಡಿಸಿದ್ದಾರೆ. ಅವರ ವಾದಕ್ಕೆ ಭಾಷಿಕ ಹಾಗೂ ಜನಾಂಗಿಕ ಆಧಾರಗಳನ್ನು ಮಂಡಿಸಿದ್ದು ಕಂಡುಬರುತ್ತದೆ.

ಇಂದು ಗೋದಾವರಿಯ ನೆರೆಯಲ್ಲಿರುವ ಮಹಾರಾಷ್ಟ್ರದಲ್ಲಿ ಶಂಬಾ ಅವರು ಕಳೆದು ಹೋದ ಕರ್ಣಾಟಕವನ್ನು ಹುಡುಕಿದ್ದು ಸಂಯುಕ್ತಿಕವಾಗಿದೆ. ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕಗಳ ನಡುವಿನ ಸಾಂಸ್ಕೃತಿಕ ಬಾಂಧವ್ಯ ಎರಡು ಭಿನ್ನ ಭಾಷೆಗಳ ಕಾರಣದಿಂದಾಗಿ ಬಿಟ್ಟು ಹೋಗುವಂಥದ್ದಲ್ಲ. ಮರಾಠಿಯ ಮೇಲೆ ಹಳೆಗನ್ನಡದ ಗಾಢವಾದ ಪ್ರಭಾವವಿದೆ, ಮಹಾರಾಷ್ಟ್ರದ ಪ್ರದೇಶವನ್ನು ಒಂದು ಕಾಲಕ್ಕೆ ಕನ್ನಡ ರಾಜರು ಆಳಿದ ಕುರುಹುಗಳು ಉಳಿದುಕೊಂಡಿವೆ, ಸ್ಥಳ ನಾಮಗಳಲ್ಲಿ ಎಷ್ಟೋ ಕನ್ನಡದ ಹೆಸರುಗಳಿವೆ, ಜ್ಞಾನೇಶ್ವರನ ಕಾವ್ಯದಲ್ಲಿ ಕನ್ನಡದ ಅಪಾರವಾದ ಶಬ್ದ ಸಂಗ್ರಹವಿದೆ, ಹಳೆಯ ಮರಾಠಿ ಕವಿಗಳು ಕನ್ನಡ ಕವಿಗಳನ್ನು ನೆನಪಿಸಿಕೊಂಡಿದ್ದಾರೆ, ಕನ್ನಡ ಕವಿಗಳು ಕೂಡ ಮರಾಠಿಯಲ್ಲಿ ಕೃತಿ ರಚನೆ ಮಾಡಿದ್ದಾರೆ. ಶಂಬಾ ಜೋಶಿಯವರು ಈ ಎಲ್ಲ ಪುರಾವೆಗಳನ್ನು ಒಟ್ಟುಗೂಡಿಸಿ ತಮ್ಮ ಸಿದ್ದಾಂತವನ್ನು ಮಂಡಿಸಿದ್ದಾರೆ. ಈ ಶಾಸ್ತ್ರಬದ್ಧವಾದ ಬರವಣಿಗೆಯಲ್ಲಿ ತಪ್ಪುಗಳಿರಬಹುದು, ಆದರೆ ಅದಕ್ಕೆಂದು ಶಾಸ್ತ್ರ ಸುಳ್ಳಾಗುವುದಿಲ್ಲ. ಮಹಾರಾಷ್ಟ್ರ ಮತ್ತು ಕರ್ನಾಟಕಗಳ ನಡುವಿನ ಸಾಂಸ್ಕೃತಿಕ ವಿನಿಮಯವನ್ನು ವಸ್ತುವನ್ನಾಗಿಟ್ಟುಕೊಂಡು ಶಂಬಾ ಅವರು ಕರ್ನಾಟಕ ಭೌಗೋಳಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೇರೆಗಳನ್ನು ಸ್ಥಿರವಾಗಿಸಿದ್ದಾರೆ.

ಭಾಷೆಗೂ ಸಂಸ್ಕೃತಿಗೂ ಅವಿನಾಭಾವ ಸಂಬಂಧವಿದೆ. ಹಲವು ಭಾಷಾ ಪ್ರಭೇದಗಳ ಸಂಸ್ಕೃತಿಯಿಂದ ಒಂದು ನಾಡಿಗೂ, ಸಂಸ್ಕೃತಿಯ ಸಮಗ್ರ ಅಧ್ಯಯನ ಸಾಧ್ಯ. ಭಾಷೆ, ಸಂಸ್ಕೃತಿಯ ವಾಚಕ. ಒಂದು ಸಂಸ್ಕೃತಿಯ ಶಾಬ್ದಿಕ ಹಾಗೂ ಕ್ರಿಯಾತ್ಮಕ ಬಗೆಯನ್ನು ವಿವರಿಸಲು ಮತ್ತೆ ನಾವು ಭಾಷೆಯನ್ನೇ ಮೋರೆ ಹೋಗುತ್ತೇವೆ. ವಿವಿಧ ರೀತಿಯ ಶಬ್ದಗಳನ್ನು ಹೊಂದಿದ ಶಬ್ದಕೋಶ, ಆ ಭಾಷೆಯನ್ನಾಡುವ ಜನ ಸಂಸ್ಕೃತಿಯ ವಿಶಿಷ್ಟ ಅಂಶಗಳನ್ನು ತನ್ನಲ್ಲಿ ಹುದುಗಿಸಿಕಿಟ್ಟುಕೊಂಡಿರುತ್ತದೆ. ಕಾಲನ ಆಘಾತಕ್ಕೆ ಒಳಗಾಗಿ ಶಬ್ದದರೂಪ, ಆಚರಣೆಯ ಕ್ರಿಯಾವಿಧಾನಗಳು ಬದಲಾದರೂ ಕೂಡ, ಆಳವಾದ ಅಧ್ಯಯನದಿಂದ ಮೂಲ ಅರ್ಥವನ್ನು ಅನಾವರಣಗೊಳಿಸಿಕೊಂಡರೆ ಆ ಸಂಸ್ಕೃತಿಯ ಅನೇಕ ವಿಷಯಗಳು ನಮಗೆ ಅರಿವಾಗಬಲ್ಲವು. ಶಂಬಾ ಅವರ ಭಾಷಾಧ್ಯಯನವು ಸಂಸ್ಕೃತಿಯೊಂದಿಗೆ ಅಂಟಿಕೊಂಡಿರುತ್ತದೆ.

ಶಂಬಾ ಅವರ ಕೃತಿಗಳಲ್ಲಿ ಹೆಚ್ಚಿನವು ಸಂಸ್ಕೃತಿಯ ಅಧ್ಯಯನಕ್ಕೆ ಮುಖ್ಯವಾಗಿ ಕರ್ಣಾಟಕ ಸಂಸ್ಕೃತಿಯ ಅಧ್ಯಯನಕ್ಕೆ ಮೀಸಲಾಗಿವೆ. ಕಂನುಡಿಯ ಹುಟ್ಟು ಹಾಗೂ ಕನ್ನಡ ನುಡಿಯ ಜೀವಾಳ ಎಂಬ ಎರಡು ಕೃತಿಗಳು ಮಾತ್ರ ಉಳಿದವುಗಳಿಂದ ಬೇರೆಯಾಗಿದ್ದು ಅವು ಕನ್ನಡ ಭಾಷೆ ಹಾಗೂ ಭಾಷೆಯ ಒಟ್ಟಿನ ಸ್ವರೂಪ ರಚನೆಗಳನ್ನು ಕುರಿತು ವಿವರಿಸುವ ಗ್ರಂಥಗಳು. ಎಡೆಗಳು ಹೇಳುವ ಕನ್ನಾಡಕತೆ ಎಂಬುದು ಸ್ಥಳನಾಮಗಳ ವಿವೇಚನೆಗೆ ಮೀಸಲಾದ ಕೃತಿ. ಇದು ಉಳಿದ ಕೃತಿಗಳಿಗೆ ಪೂರಕವಾಗಿ ಹಾಗೂ ಒಂದು ರೀತಿಯ ಪೀಠಿಕೆಯಾಗಿ ನಿಲ್ಲುತ್ತದೆ.

ಸಂಸ್ಕೃತಿಯ ಅಧ್ಯಯನವನ್ನು ಮುಖ್ಯವಾಗಿಟ್ಟುಕೊಂಡು ಜೋಶಿಯವರ ಕೃತಿಗಳು (‘ಕನ್ನಡದ ನೆಲೆ’, ‘ಭಾಷೆ ಮತ್ತು ಸಂಸ್ಕೃತಿ’, ‘ಹಾಲಮತ ದರ್ಶನ’, ‘ಕರ್ಣಾಟ ಸಂಸ್ಕೃತಿಯ ಪೂರ್ವಪೀಠಿಕೆ’ ಇತ್ಯಾದಿ) ಭಾಷೆ ಸಂಸ್ಕೃತಿಯ ಒಂದು ಅಂಗ ಹಾಗೂ ಅದು ಸಂಸ್ಕೃತಿಯಲ್ಲಾದ ವೈಪರೀತ್ಯಗಳನ್ನು ಪ್ರತಿಬಿಂಬಿಸುತ್ತದೆ ಎಂಬ ತಿಳಿವಳಿಕೆಯ ಹಿನ್ನೆಲೆಯಲ್ಲಿ ರಚಿತವಾಗಿವೆ. ಸಮಾಜದಲ್ಲಿ ಬದಲಾವಣೆಯಾದಂತೆ ಅದು ಭಾಷೆಯಲ್ಲಿಯೂ ಪ್ರತಿಫಲಿತವಾಗುತ್ತದೆ. ವ್ಯಾಕರಣ ಶಬ್ದಕೋಶಗಳು ಬದಲಾಗುತ್ತವೆ. ಮುಖ್ಯವಾಗಿ ಶಬ್ದಕೋಶದಲ್ಲಿ ಗಮನಾರ್ಹ ಬದಲಾವಣೆ ನಡೆಯುತ್ತದೆ. ಸಂಸ್ಕೃತಿಯ ಅಧ್ಯಯನಕ್ಕೆ ಶಬ್ದಕೋಶದಲ್ಲಾದ ಬದಲಾವಣೆಗಳು ಹೆಚ್ಚಿನ ಮಾಹಿತಿಯನ್ನೊದಗಿಸುತ್ತವೆ. ಆದ್ದರಿಂದ ಜೋಶಿಯವರ ಗ್ರಂಥಗಳಲ್ಲಿ ಶಾಬ್ದಿಕ ಕೊಡುಕೊಳ್ಳುಗೆ ಹಾಗೂ ಅವುಗಳ ಅರ್ಥವ್ಯತ್ಯಾಸದ ಬಗೆಗೆ ಒತ್ತು ಬಿದ್ದಿರುವುದು ಸಹಜವೇ. ಸಾಮಾಜಿಕ ಆಚಾರ ಪದ್ಧತಿಗಳನ್ನು ಹಾಗೂ ಭೌಗೋಳಿಕ ವಿಶೇಷಗಳನ್ನು ಭಾಷಿಕ ಸಾಮಗ್ರಿಯನ್ನಾಧರಿಸಿದೆ. ತೀರ್ಮಾನಗಳಿಗೆ ಹೆಚ್ಚಿನ ಸಮರ್ಥನೆಯನ್ನಾಗಿ ಜೋಶಿಯವರು ಬಳಸಿಕೊಳ್ಳುತ್ತಾರೆ. ಜೊತೆಗೆ ನಾಡು ನುಡಿಯ ಬಗ್ಗೆ ಶಂಬಾ ಅವರ ವಿಚಾರಗಳು ತುಂಬ ಪ್ರಗತಿಪರವಾಗಿವೆ.

ಕರ್ನಾಟಕ ಸಂಸ್ಕೃತಿಯ ಪೂರ್ವಪೀಠಿಕೆ, ಕಣ್ಮರೆಯಾದ ಕನ್ನಡ ಇಂತಹ ಕೃತಿಗಳು ಪ್ರಕಟವಾದಾಗ ಕರ್ನಾಟಕ ಮತ್ತು ಮಹಾರಾಷ್ಟ್ರ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಚರ್ಚೆ, ಸಂವಾದಗಳು ಹುಟ್ಟುಹಾಕಿದವು. ಏಕಕಾಲದಲ್ಲಿ ಕನ್ನಡ, ಮರಾಠಿ ಭಾಷೆಗಳ ಪ್ರಾಚೀನತೆಯನ್ನೂ ರಾಜಕೀಯ ಮತ್ತು ಸಾಮಾಜಿಕ ಪಲ್ಲಟಗಳನ್ನೂ ಭಾಷೆಯ ಸಾಮಾಜಿಕ ಆಯಾಮಗಳನ್ನು ಕುರಿತ ಸಂಸ್ಕೃತಿಯ ಕುರುಹು ಶಂಬಾ ಅವರು ತಮ್ಮ ಅಪಾರ ಶ್ರಮ, ಶ್ರದ್ಧೆಗಳಿಂದ ಈ ಪುಸ್ತಕದಲ್ಲಿ ಶೋದಿಸಿದ್ದಾರೆ. ಶಂಬಾ ಅವರು ಎತ್ತಿದ ಪ್ರಶ್ನೆಗಳು ಸಾಂಸ್ಕೃತಿಕವಾಗಿ ಮಹತ್ವದ್ದಾಗಿಯೂ ಹಲವು ನಿಟ್ಟಿನಲ್ಲಿ ವಾಗ್ವಾದ ನಡೆಸಲು ವೇದಿಕೆಯನ್ನು ನಿರ್ಮಾಣ ಮಾಡುವಂತಹವಾಗಿವೆ.

ಶಂಬಾ ಅವರ ಚಿಂತನೆಗಳು ತೀರ್ಮಾನವನ್ನು ನೀಡುವುದಕ್ಕಿಂತ ಆ ದಿಕ್ಕಿನಲ್ಲಿ ಯೋಚಿಸುವಂತೆ ಪ್ರಚೋದನೆಯನ್ನು ಹುಟ್ಟುಹಾಕುತ್ತವೆ. ಅಂದರೆ ಶಂಬಾ ಅವರು ಬಹುಮಾರ್ಗೀಯ ನೆಲೆಯಲ್ಲಿ ನಡೆಯಬೇಕಾದ ನಡೆಯುವ ಚರ್ಚೆಗೆ ಅಪಾರ ಪ್ರಮಾಣದ ಸಾಮಗ್ರಿ ಒದಗಿಸುತ್ತದೆ. ಈ ನಿಟ್ಟಿನಲ್ಲಿ ಶಂಬಾ ಅವರ ‘ದಿಟ್ಟ ಮತ್ತು ದಕ್ಷ’ ಎಂಬ ನಿಲುವು ಮೆಚ್ಚಬೇಕು. ಆ ಮೂಲಕ ಕನ್ನಡ ಭಾಷಾ ಮೀಮಾಂಸೆ ಕ್ರಮವನ್ನು ಶಂಬಾ ಕಟ್ಟಿಕೊಡುತ್ತಾರೆ.

ಕವಿರಾಜಮಾರ್ಗಕಾರನ ಕಾವೇರಿಯಿಂದಮಾ ಗೋದಾವರಿವರ ಇರ್ದನಾಡು ಈ ಹೇಳಿಕೆಯ ಸಮರ್ಥನೆಗೆ ಹಲವು ಮೂಲಗಳನ್ನು ಒಳಗೊಂಡಂತೆ ವಿವಿಧ ಜ್ಞಾನಶಾಖೆಗಳಿಂದ ಮಾಹಿತಿಗಳನ್ನು ಹೆಕ್ಕಿ ತೆಗೆದಿದ್ದಾರೆ. ಇಲ್ಲಿಯೂ ಕೂಡ ವಾಸ್ತವ ಅಂಶಗಳನ್ನು ಮಾತ್ರ ಮರೆಮಾಚದೆ ನೇರವಾಗಿ ಓದುಗರ ಮುಂದಿಡುತ್ತಾರೆ. ಒಟ್ಟಿನಲ್ಲಿ ಶಂಬಾ ಪ್ರತಿಪಾದಿಸುವ ಚಿಂತನೆಯ ಮಾದರಿಗಳನ್ನು ಚರ್ಚೆಗೆ ಒಳಪಡಿಸುವ ಅಗತ್ಯವಿದೆ. ‘ಹಟ್ಟಿ – ಪಾಡಿ’ ಮುಂತಾದವುಗಳ ಬಗ್ಗೆ ಶಂಬಾ ಅವರು ಸಾಕಷ್ಟು ವಿಸ್ತೃತವಾಗಿ ಚರ್ಚಿಸಿದ್ದರೂ ಒಂದು ಅಧ್ಯಯನದ ವಸ್ತುವಾಗಬಲ್ಲಷ್ಟು ವಿಷಯ ಸಾಮಗ್ರಿ ಅಲ್ಲಿದೆ. ಕನ್ನಡ ಭಾಷೆಯಲ್ಲಿ ಪ್ರಾಚೀನತೆ ಮತ್ತು ಅದರ ಸಂಸ್ಕೃತಿ ಅನನ್ಯತೆ ಕುರಿತು ಅಸಕ್ತರಾದವರನ್ನು ಮತ್ತು ಈ ಕ್ಷೇತ್ರದಲ್ಲಿ ಪರಿಣಿತಕಾರರು ಶಂಬಾ ಅವರ ವಾಗ್ವಾದಗಳನ್ನು ಬೆಳಿಸಬಹುದಾಗಿದೆ.

ಕನ್ನಡ – ಮರಾಠಿ ದ್ವಿಭಾಷಿಕ ಭಾಷಾಸ್ಥಿತಿ ಮತ್ತು ಸನ್ನಿವೇಶಗಳನ್ನು ಬಲ್ಲವರಿಗೆ, ನೋಡಿ ಕಂಡವರಿಗೆ ಶಂಬಾ ಅವರ ವಾದ ಸಮರ್ಪಕವಾಗಿದೆ ಎನಿಸುತ್ತದೆ. ಇಡೀ ಅವರ ಚಿಂತನಾ ಕ್ರಮ ಅಥೆಂಟಿಸಿಟಿಯಿಂದ ಕೂಡಿದೆ. ಕನ್ನಡ – ಮರಾಠಿ ಈ ಅವಳಿ ಬಂಧುಗಳು ದೀರ್ಘಕಾಲದವರೆಗೆ ಗದ್ದಲವಿಲ್ಲದೆ ಸ್ವತಂತ್ರವಾಗಿ ಆದರೆ ಒಂದೇ ಕಡೆಗೆ, ೧೨ – ೧೩ನೇ ಶತಮಾನದವರೆಗೆ ಮಳಖೇಡರ ರಾಷ್ಟ್ರಕೂಟರು ಮತ್ತು ಕಲ್ಯಾಣದ ಚಾಲುಕ್ಯರು ಈ ಎರಡು ಸಾಮ್ರಾಜ್ಯಗಳ ಆಡಳಿತದಲ್ಲಿ ಮರಾಠಿ ತನ್ನ ಸ್ವತಂತ್ರವಾದ ಸಂಸಾರವನ್ನು ಹೂಡಿರಲಿಲ್ಲ. ಕರ್ನಾಟಕೀಯ ಆಡಳಿತದಲ್ಲಿಯ ಮರಾಠಿ, ಕನ್ನಡದ ಕಡೆಗೇ ಹೆಚ್ಚು ವಾಲುತ್ತಿತ್ತು. ಮೇಲಿನ ನಾಲ್ಕು ರಾಜಧಾನಿಗಳಲ್ಲಿ ಮೂರು ರಾಜಧಾನಿಗಳು ನಿಃಸಂಶಯವಾಗಿ ಕರ್ನಾಟಕದಲ್ಲಿವೆ. ಮುಂದೆ ದೇವಗಿರಿ ಯಾದವರ ಉತ್ತರಾರ್ಧದಲ್ಲಿ ಮರಾಠಿಗೆ ಸ್ಥಿರವಾದ ಸ್ಥಾವರತೆ ದೊರೆಯಿತು. ಮರಾಠಿಯರ ಸ್ವತಂತ್ರವಾದ ರಾಜಕಾರಣ ಪ್ರಾರಂಭವಾಯಿತು. ೧೩ನೇ ಶತಮಾನದ ನಂತರ ಮರಾಠಿ ಕನ್ನಡದಿಂದ ಸಂಪೂರ್ಣವಾಗಿ ಬೇರೆಯಾಗಿ ಸ್ವತಂತ್ರವಾದ ಸಂಸಾರ ಹೂಡಿತು. ಮುಂದೆ ಈ ಅವಳಿ ಬಂಧುಗಳ ಅತಿಪ್ರಾಚೀನವಾದ ಮನೆತನ ಒಂದಿದ್ದು ಎರಡಾಯಿತು. ಒಂದು ಕಾಲಕ್ಕೆ ಇವರಲ್ಲಿ ನಿಕಟ ಸಂಬಂಧ ಇತ್ತೋ ಇಲ್ಲವೋ ಎನ್ನುವುದು ಮರೆತು ಹೋಗುವಷ್ಟು ಇವು ಬೇರೆ ಬೇರೆಯಾಗಿ ಮುನ್ನಡೆಯುತ್ತ ಬಂದಿವೆ.

ಮನುಷ್ಯನ ಇತಿಹಾಸವನ್ನು ತಿಳಿಯಲು ಅನೇಕ ಸಾಧನಗಳು ಇವೆ. ಅವುಗಳಲ್ಲಿ ಸ್ಥಳನಾಮಗಳು ಒಂದಾಗಿವೆ. ಒಂದೊಂದು ಸ್ಥಳನಾಮವನ್ನು ತೆಗೆದುಕೊಂಡು ಆ ಹೆಸರು ಹೇಗೆ ರೂಢವಾಗಿರಬೇಕೆಂದು ಸಂಶೋಧನೆ ನಡೆಸುವದೊಂದು ಪ್ರಕಾರದ ಅಭ್ಯಾಸ. ಆದರೆ ತೌಲನಿಕ ಅಭ್ಯಾಸ ಇದಕ್ಕಿಂತ ಸ್ವಲ್ಪ ಭಿನ್ನವಾಗಿದೆ. ಒಂದು ವಿಶಿಷ್ಟ ಪ್ರದೇಶದಲ್ಲಿಯ ಸ್ಥಳ ನಾಮಗಳನ್ನು ಕಲೆಹಾಕಿ ಒಂದು ಪಟ್ಟಿಯನ್ನು ಸಿದ್ಧಗೊಳಿಸಬೇಕು. ಆ ಹೆಸರುಗಳ ಹಳೆ ಹೊಸ ರೂಪಾಂತರಗಲನ್ನು ಅರಿಯಬೇಕು. ಹೀಗೆ ಹೆಸರುಗಳನ್ನು ಸಂಗ್ರಹ ಮಾಡುತ್ತ ಹೋದಂತೆ ತಾನಾಗಿಯೇ ಅವುಗಳ ಗುಂಪು ನಿರ್ಮಾಣವಾಗುತ್ತವೆ. ಉದಾಹರಣೆಗೆ ಸ್ಥಳ ನಾಮಗಳ ಪೂರ್ವಭಾಗದಿಂದ ಇಪ್ಪತ್ತು ಇಪ್ಪತ್ತೈದು ಗುಂಪುಗಳು ಆಗಬಹುದು. ಪೌರಾಣಿಕ ಪ್ರಸಂಗಗಳು, ದೇವಾನುದೇವತೆಗಳು, ಐತಿಹಾಸಿಕ ಗುಂಪುಗಳು, ವ್ಯಕ್ತಿಗಳು, ಗ್ರಹ ನಕ್ಷತ್ರಗಳು, ವಾರಗಳು, ಸಂಖ್ಯೆಗಳು, ದಿಕ್ಕುಗಳು, ವೃಕ್ಷ ವನಸ್ಪತಿಗಳು, ಕ್ರಿಮಿಕೀಟಗಳು, ದನಕರುಗಳು, ಪಶುಪಕ್ಷಿಗಳು, ತೆಗ್ಗು ದಿನ್ನೆ ಮೊದಲಾದ ಭೌಗೋಳಿಕ ಪರಿಸ್ಥಿತಿಗಳು, ಜಾತಿ ಜನಾಂಗ ಮತ್ತು ವ್ಯವಹಾರ ಉದ್ಯೋಗಗಳು ಇವುಗಳ ಮೇಲಿಂದ ಸ್ಥಳನಾಮಗಳಲ್ಲಿ ಗುಂಪು ಕಾಣಿಸಿಕೊಳ್ಳುತ್ತವೆ.

ಈ ಒಂದೊಂದು ಗುಂಪಿಗೆ ಸೇರುವ ಸ್ಥಳನಾಮಗಳಲ್ಲಿ ಸೂಕ್ಷ್ಮವಾದ ಹೊಸ ಮಾಹಿತಿ ದೊರೆಯುವ ಸಾಧ್ಯತೆ ಇದೆ. ಒಂದೇ ಸ್ಥಳನಾಮದ ಪ್ರತ್ಯೇಕ ಅಭ್ಯಾಸದಿಂದ ಏನೂ ಅರ್ಥಬೋಧವಾಗಲಿಕ್ಕಿಲ್ಲ. ಆದರೆ ಗುಂಪಿನ ಸಂದರ್ಭದಲ್ಲಿ ಆ ಹೆಸರಿನ ಅರ್ಥ ತಟ್ಟನೆ ಹೊಳೆಯಬಹುದಾಗಿದೆ. ಶಬ್ದಗಳ ಹಳೆಯ ರೂಪಗಳೂ ಕಾಣಸಿಗಬಹುದು. ಭಿನ್ನ ಪ್ರಕಾರದ ಗಿಡಗಂಟಿಗಳ ಬಗ್ಗೆ ಹೊಸ ಮಾಹಿತಿ ದೊರೆಯಬಹುದಾಗಿದೆ. ಒಂದು ಕಾಲಕ್ಕೆ ಆ ಭಾಗದಲ್ಲಿ ಯಾವ ದೇವತೆ ಲೋಕಪ್ರಿಯವಾಗಿದ್ದಿರಬಹುದೆಂದು ತಿಳಿಯುತ್ತದೆ. ಹಳೆಯ ಕಾಲದ ಪ್ರಭಾವೀ ವ್ಯಕ್ತಿಗಳು, ಋಷಿಗಳು, ಮುನಿಗಳು, ಸಂತಮಹಂತರು, ಸಿದ್ಧ ಸತ್ಪುರುಷರು, ಅರಸರು ಇವರ ಅಜರಾಮರ ಸ್ಮಾರಕಗಳಾದ ಸ್ಥಳನಾಮಗಳು ಕಾಲ ಪ್ರವಾಹವನ್ನು ಲೆಕ್ಕಿಸದೆ ತಲೆಯೆತ್ತಿ ನಿಂತಿರುವುದು ಕಾಣುತ್ತದೆ. ಶಂಬಾ ಅವರು ಸ್ಥಳನಾಮಗಳ ನೆರವಿನಿಂದ ಪ್ರಾಚೀನ ಕರ್ನಾಟಕದ ಎಲ್ಲೆಯನ್ನು ಶೋಧಿಸಿದ್ದಾರೆ.

ಸ್ಥಳನಾಮಗಳು, ಉತ್ತರ ಜನಪದ ಭಾಷೆಯಲ್ಲಿಯ ಪದಗಳ ಸ್ವರೂಪ, ಪುರಾಣಗಳಲ್ಲಿನ ಭಾಷಿಕ ಸಂಕೇತಗಳು, ಮುಂತಾದ ಸಾಧನಗಳ ಮೂಲಕ ಕನ್ನಡದ ಸ್ಥಳ ಸೂಚನೆಯನ್ನು ಶಂಬಾ ಅವರು ಮಾಡುತ್ತಾರೆ. ಕನ್ನಡವು ಮೂಲದಲ್ಲಿ ದೇಶವಾಚಕ ಶಬ್ದವೆಂದು ವಿವರಿಸಿ ಆ ಹೆಸರಿನ ಪ್ರದೇಶವು ಯಾವುದೆಂಬುದನ್ನು ಶಂಬಾ ಹುಡುಕಿದ್ದಾರೆ. ಗೋದಾವರಿಯ ಮೇಲುಗಡೆಯ ಈಗಿನ ಖಾನದೇಶ, ವರ್ಹಾಟಗಳನ್ನೊಳಗೊಂಡ ಪ್ರದೇಶ ಪ್ರಾಚೀನ ಕರ್ನಾಟಕವೆಂಬುದನ್ನು ಪ್ರಮಾಣಗಳ ಮೂಲಕ ಹುಡುಕಿದ್ದಾರೆ. ಶಂಬಾ ಅವರು ವರ್ಹಾಟದಲ್ಲಿ ಈಗಲೂ ಕನ್ನಡ ಮಾತನಾಡುವ ಕುರುಬರೂ, ಹೊಲೆಯರೂ ಇರುವುದಲ್ಲದೆ, ಕನ್ನಡ ಎಂಬ ಊರು, ಕನ್ನಡದ ಶಾಸನಗಳು, ಮುಂತಾದವುಗಳು ಲಭ್ಯ. ಪಕ್ಕದ ಖಾನದೇಶ ಕನ್ನಡದೇಶದಲ್ಲೂ ಕನ್ನಡದ ಕನ್ನಡಿಗರ ಅನೇಕ ಕುರುಹುಗಳಿರುವುದು ಶಂಬಾ ಗುರುತಿಸಿದ್ದಾರೆ. ಊರು ಪಟ್ಟಿ, ಪಾಡಿ ವಾಡಿ, ಹಟ್ಟಿ ಹಾಟ. ಬಾಡ ಬೀಡು ಮೊದಲಾದ ಗ್ರಾಮಗಳೂ ಕೂಡ ಕನ್ನಡದ ಭಾಷಿಕರ ಸಂಸ್ಕೃತಿಯು ಪ್ರಚಲಿತದಲ್ಲತ್ತು ಎನ್ನುವುದನ್ನೇ ಹೇಳುತ್ತವೆ.

ಮಹಾರಾಷ್ಟ್ರದ ಬಹುತೇಕ ಸ್ಥಳನಾಮಗಳಿಗೆ ಇಂದಿಗೂ ಕನ್ನಡದಲ್ಲೇ ನಿಷ್ಪತ್ತಿ ಹೇಳಬೇಕಾಗುತ್ತದೆ. ಇಲ್ಲಿನ ಸ್ಥಳನಾಮಗಳಲ್ಲಿ ಮೂಲದ್ರಾವಿಡ ಅಂಶಗಳುಳ್ಳ ಪ್ರಾಚೀನ ಸ್ಥಳನಾಮಗಳನ್ನು ನಾವು ಇಂದಿಗೂ ಗುರುತಿಸಬಹುದು. ಜಾತಿ, ಬುಡಕಟ್ಟು ದಾಖಲಾದ ಸ್ಥಳನಾಮಗಳಲ್ಲಿ ಕೆಲವು ಇಂದಿಗೂ ಯಥಾವತ್ತಾಗಿ ಉಳಿದುಕೊಂಡು ಬಂದಿವೆ. ಕೆಲವು ಅಲ್ಪಸ್ವಲ್ಪ ವ್ಯತ್ಯಾಸಕ್ಕೆ ಒಳಗಾಗಿವೆ. ಬಹಳ ಕಡಿಮೆ ಪ್ರಮಾಣದಲ್ಲಿ ಅವು ಗುರುತಿಸಲಾರದಷ್ಟು ಮಾರ್ಪಾಟು ಕಂಡಿವೆ. ಈ ಸ್ಥಳನಾಮಗಳ ನಿರ್ದಿಷ್ಟ ಹಾಗೂ ವಾರ್ಗಿಕಗಳೆರಡರಲ್ಲಿಯೂ ಹೇರಳವಾಗಿ ಕನ್ನಡ ಪದಗಳು ಬಳಕೆಯಾಗಿರುವುದನ್ನು ಕಾಣಬಹುದು. ಇಲ್ಲಿನ ನಿಸರ್ಗವಾಚಿ, ಜನಾಂಗವಾಚಿ, ವ್ಯಕ್ತಿವಾಚಿ, ಆದರ್ಶವಾಚಿ, ನಿರ್ಮಾಣವಾಚಿ ಸ್ಥಳನಾಮಗಳಲ್ಲಿ ಕನ್ನಡ ಭಾಷೆಯ ಪದಗಳೇ ಬಳಕೆಯಾಗಿವೆ. ಇಲ್ಲಿನ ಜಾತಿ, ಬುಡಕಟ್ಟುಗಳಲ್ಲಿ ದಾಖಲಾದ ಸ್ಥಳನಾಮಗಳು ಇಂದು ಎಲ್ಲಿವೆ? ಯಾವ ಸ್ಥಿತಿಯಲ್ಲಿವೆ? ಯಾವ ರೀತಿಯ ವ್ಯತ್ಯಾಸಕ್ಕೆ ಒಳಗಾಗಿವೆ? ಎಂಬುದನ್ನು ಈ ಅಧ್ಯಯನದಲ್ಲಿ ಗುರುತಿಸಲಾಗಿದೆ. ಇವೆಲ್ಲ ಸ್ಥಳೀಯ ನಿವಾಸಿಗಳಾಗಿದ್ದ ಕನ್ನಡಿಗರೇ ಇಟ್ಟ ಹೆಸರುಗಳೆಂಬುದೂ ಈ ಅಧ್ಯಯನದಿಂದ ಖಚಿತವಾಗುತ್ತದೆ. ಕರ್ನಾಟಕ ಸಂಸ್ಕೃತಿಯನ್ನು ಬಿಂಬಿಸುವ ಈ ಸ್ಥಳನಾಮಗಳು ಪಳೆಯುಳಿಕೆಯಂತೆ ಇಂದಿಗೂ ಇಲ್ಲಿ ಉಳಿದುಬಂದಿರುವುದು ಐತಿಹಾಸಿಕ ಸತ್ಯ.

ಪಟ್ಟಿ, ವಾಡಿ, ವಾಡ, ಹಟ್ಟಿ ಮೊದಲಾದ ಗ್ರಾಮನಾಮದ ರೂಪಗಳು ಜನಾಂಗದ ವಾಸಸ್ಥಾನ ಸೂಚಕಗಳಾಗಿವೆ. ಪಟ್ಟಿ, ಹಟ್ಟಿ ಎಂಬುದು ಹಟ್ಟಿಕಾರ ಇಲ್ಲವೆ ದನಗಾಹಿ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಮೊದಲು ಪತ್ತಿ ಎಂಬ ರೂಪವಿರಬೇಕು. ನರ್ಮದೆಯಿಂದ ಕಾವೇರಿಯವರೆಗೆ ರಾಷ್ಟ್ರಕೂಟರ ರಾಜ್ಯವಿತ್ತು, ಅವರ ರಾಜ್ಯಕ್ಕೆ ‘ರಟ್ಟವಾಡಿ’ ಎಂದು ಹೆಸರಿತ್ತು. ಈ ಪಾಡಿ ಹಾಡಿ (ಹಾಟಕ) ದೇಶದ ಸುವರ್ಣಭೂಮಿಯಾಗಿತ್ತು. ೧೨ನೆಯ ಶತಮಾನದವರೆಗೆ ಒಂದಾಗಿ ಬಾಳಿದ ಈ ನಾಡು ಸೇವುಣರು ಮತ್ತು ಹೊಯ್ಸಳರ ಯಾದವೀ ಕಲಹದಲ್ಲಿ ಹಾಟ ದೇಶ ಎರಡಾಗಿ ಹೋಯಿತು. ವರ್ಹಾಟ, ಕನ್ನಡ ಎಂದು ಈ ದೇಶ ಇಬ್ಭಾಗವಾಯಿತು. ಇದೇ ಕಾರಣದಿಂದಲೇ ಮುಂದೆ ಈ ದೇಶದ ವೈಭವಕ್ಕೆ ತಿರುಗಿ ಅನಂತರ ಅವನತಿ ಬಂದಿತೆಂಬುದು ಸುಸ್ಪಷ್ಟ.

ಭಾರತದಲ್ಲಿ ಆರ್ಯರು ಮತ್ತು ದ್ರಾವಿಡರಿಗಿಂತಲೂ ಮೊದಲು ವಾಸವಿದ್ದ ಜನ ಕೋಲರು ಮತ್ತು ಮುಂಡರು. ಇವರು ಪೂರ್ವಭಾಗದಿಂದ ದೇಶದ ಉಳಿದೆಡೆಗೆ ಹರಡಿ ಹೋದರು. ಕೋಲರು ಮತ್ತು ಮುಂಡರ ಹೆಸರಿನ ಸ್ಥಳಗಳು ಕಂನಾಡಿನಲ್ಲಿ ವಿಶೇಷವಾಗಿವೆ (ಉದಾಹರಣೆಗೆ ಕೊಲ್ಲ, ಕೊಲ್ಲಗಿರಿ, ಕೋಲಾರ, ಕೊಳ್ಳಹಾಳ, ಕೊಲ್ಲಿ, ಕೊಲ್ಲಿಪಾಕೆ, ಕೊಲ್ಲಾಳಿ, ಮುಂಡಕೂರು, ಮುಂಡರಗಿ, ಮುಂಡುಗೋಡು, ಮುಂಡೇವಾಡಿ ಇತ್ಯಾದಿ). ಇವರು ಕಂನಾಡಿನ ಆದಿವಾಸಿಗಳೆಂದು ಶಂಬಾ ಹೇಳುವರು. ಕಂನಾಡಿನಲ್ಲಿ ಮಹಿಷರೂ ಆದಿವಾಸಿಗಳಾಗಿದ್ದರೆಂದು ಶಾಸನಗಳ ಆಧಾರಕೊಟ್ಟು ಶಂಬಾ ವಿವರಿಸುವರು. ಇವರುಗಳ ಹಾಗೆ ಬೇಡರು, ಬಿಲ್ಲವರು, ಅಂಬಿಗರು, ಕೋಲರು ನಮ್ಮ ನಾಡಿನ ಆದಿವಾಸಿಗಳೆಂದು ಶಂಬಾ ಕರೆದಿರುವರು. ಅಂಬು ಹಾಗೂ ಕೋಲು ಸಮಾನಾರ್ಥಕ ಪದಗಳು, ಅಂದರೆ ಬಾಣ ಪ್ರಯೋಗಿಸಿ ಬೇಟೆಯಾಡುವವರು, ಬೇಡರು, ಬಿಲ್ಲವರು ಇವರುಗಳಿಂದ ಅಂಬಿಗರು, ಕೋಲರನ್ನು ಬೇರ್ಪಡಿಸುವುದು ಉಚಿತವೇ. ಅಂಬಿಗರು ದೋಣಿ ನಡೆಸುವ ಕಾಯಕದವರೂ ಆಗುವರು. ಬೇಡರು ಬಿಲ್ಲವರ ಹೆಸರಿನ ಸ್ಥಳಗಳು ಕಾಣಬರುವಂತೆ ಅಂಬಿಗರು, ಕೋಲರ ಸ್ಥಳಗಳು ಕಾಣಬರುವುದಿಲ್ಲ. ಅಂಬಿನಾಡು ಎಂಬ ಹೆಸರಿರುವ ಒಂದೇ ಒಂದು ಶಾಸನ ದೊರೆತಿರುವುದಾಗಿ ಶಂಬಾ ಹೇಳುವರು. ಹೀಗಾಗಿ ಅಂಬಿಗರು, ಕೋಲರು ಎನ್ನುವ ಆದಿವಾಸಿಗಳಿದ್ದರೆಂದು ಊಹಿಸುವುದು ಸಾಧುವಾಗಿ ಕಾಣುತ್ತದೆ.

ಪಣಿಗಳು ಕಂನಾಡ ಆದಿವಾಸಿ ಜನಾಂಗವೆಂಬುದನ್ನು ಕೊಡಗಿನ ಗ್ಯಾಝಟಿಯರ್ ಮೂಲಕ ತಿಳಿಯಪಡಿಸುವ ಶಂಬಾ ಅವರು ಅಲ್ಲಿ ದೊರೆತ ಪುಟ್ಟ ಸೂಚನೆಯ ಮೇಲೆ ಪನಿಗಳು ಎಂದರೆ ಪಳೆಯರು, ಪುರಾತನರು ಎಂಬುದರ ಜಾಡು ಹಿಡಿದು ಮೈಸೂರು ಸೀಮೆಯಲ್ಲಿ ಹಳಿಕಾರರೆಂಬ ಹೆಸರು ಈ ಜನರಿಗಿದ್ದುದ್ದನ್ನು ಕ್ರಿ. ಶ. ೧೧೧೪ರ ಹೊಯ್ಸಳ ವಿಷ್ಣುವರ್ಧನನ ಕಾಲದ ಶಾಸನವೊಂದರ ಮೂಲಕ ಹಾಗೂ ಕ್ರಿ. ಶ. ೧೪೭೧ರ ಶಾಸನ ವೊಂದರ ಮೂಲಕ ಗೊತ್ತುಹಚ್ಚುವರು. ಕೊಡಗಿನಲ್ಲಿ ಪಳೆಯ ಹಳೆಯ, ಐಸೂರಿನಲ್ಲಿ ಹಳಿಯಾರ, ಉತ್ತರ ಕಂನಾಡಿನಲ್ಲಿ ಪಳಪೈಕರೆಂಬ ಜನಗಳು ಈ ಹಳಕಾರ ಬಗೆಯವರೆಂದು ತೀರ್ಮಾನಿಸುವ ಶಂಬಾ ಅವರು ಇವರು ವೃತ್ತಿಯಲ್ಲಿ ಗೀವಳರೆಂದೂ ಒಳ್ಳೆಯ ದಂಡಾಳುಗಳೆಂದೂ ಅಭಿಪ್ರಾಯಪಡುವರು. ಈ ಹಳಬರು, ಕುರುವರ ಒಂದು ಪಂಗಡ. ಮಹಾರಾಷ್ಟ್ರದಲ್ಲಿ ದನಕಾಯುವವರಿಗೆ ಕುರುಬರೆಂಬ ಹೆಸರಿದೆ. ಮಧ್ಯಪ್ರಾಂತದಲ್ಲಿ ಲಕ್ಷಾವಧಿ ಹಳಬರಿದ್ದುದನ್ನು ಅಲ್ಲಿನ Tribes and Castes I ಪುಸ್ತಕದ ಆಧಾರದ ಮೇಲೆ ಉಲ್ಲೇಖಿಸಿ, ಹಟ್ಟಿಕಾರ ದನಕಾರರೊಡನೆ (ಮಹಾರಾಷ್ಟ್ರದಲ್ಲಿ ದನಗಾರರಿಗೆ ದನಗರ (ಕುರುಬ) ರೆಂಬ ಹೆಸರಿದೆ) ಹಳಬರೂ ದೇಶದಾದ್ಯಂತ ಇರುವುದನ್ನು ಶಂಬಾ ಅವರು ತಿಳಿಯಬಡಿಸುವರು. ಇವೆಲ್ಲ ಆಧಾರಗಳ ಮೇಲೆ ಅವರು ಕಂನಾಡ ಹಳೆಯ ಜನಾಂಗಗಳಲ್ಲಿ ಪಣಿಗಳು ಅಥವಾ ಹಳಬರೂ ಒಬ್ಬರೆಂಬ ತೀರ್ಮಾನಕ್ಕೆ ಬರುವರು.

ತ್ರಿಪುರಿಯು ಚೇದಿವಂಶದ ರಾಜರಾದ ಹೈಕಯರೊಡನೆ ರಕ್ತ ಸಂಬಂಧವನ್ನು ಮಳಖೇಡಿನ ರಾಷ್ಟ್ರಕೂಟರು ಮಾಡಿದ್ದರಿಂದ ಕಂನಾಡಿನಲ್ಲಿ ಹೈಕಯರು ಬಂದು ಕಂನಾಡವರೇ ಆದರು. ಬನವಾಸಿ ದೇಶದ ಒಂದು ಭಾಗಕ್ಕೆ ನಾಗರಖಂಡವೆಂಬ ಹೆಸರಿದ್ದು ಈ ನಾಗರು ಸಿಂಧದೇಶದಿಂದ ಬಂದವರು. ಸಿಂಧರೊಡನೆ ಕದಂಬರು, ಚಾಲುಕ್ಯರು ವೈವಾಹಿಕ ಸಂಬಂಧವನ್ನು ಬೆಳೆಸಿದ್ದರು. ಕಂನಾಡಿನಲ್ಲಿ ಹವಿಕರದೊಂದು ಸ್ವತಂತ್ರ ಗುಂಪು ಇದ್ದಂತಿದೆ. ಇವರು ಅಹಿಚ್ಛತ್ರದಿಂದ ಬಂದವರು. ನಾಗರು ಆ ಕಡೆಯವರೇ ಆಗಿರುವುದರಿಂದ ಗುಜರಾತಿನಲ್ಲಿರುವಂತೆ ಇವರೂ ನಾಗರ ಬ್ರಾಹ್ಮಣರಾಗಿರಬಹುದೆ? ಎಂಬ ಸಂದೇಹವನ್ನು ಶಂಬಾ ವ್ಯಕ್ತಪಡಿಸುವರು.

ಹಟ್ಟಿಕಾರರು ಅಲ್ಲಲ್ಲಿ ನಟ್ಟುಕೊಂಡು ನಾಟಿಕೊಂಡು ನೆಲೆಯಾದರಾದ್ದರಿಂದ ನಾಡುಗಳು ಉಂಟಾದುವು. ನಾಡಿನ ಜನಗಳು ನಾಡವರಾದರು. ಮನುಸ್ಮೃತಿಯಲ್ಲಿ ನಟ ನಾಡವರ ಉಲ್ಲೇಖ ಸಿಗುತ್ತದೆ. ಆದುದರಿಂದ ಆ ವೇಳೆಗೆ ನಮ್ಮ ನಾಡುಗಳು ತಲೆಯೆತ್ತಿದ್ದುವು. ಮನುಸ್ಮೃತಿಯ ಕಾಲ ಕ್ರಿ. ಶ. ದ ಮೊದಲು ೨೦೦ ರಿಂದ ಕ್ರಿ. ಶ. ದ ತರುವಾಯದ ೨೦೦ರವರೆಗೆ ಎಂದು ವಿದ್ವಾಂಸರು ನಿರ್ಣಯಿಸಿರುವುದರಿಂದ ಕಂನಾಡ ಮೊದಲಿಗರಾದ ಹಟ್ಟಿಕಾರರು ಕ್ರಿಸ್ತಶಕದ ಆರಂಭದಿಂದಲೂ ಇದ್ದರೆಂದು ಹೇಳಬಹುದೆಂದು ಶಂಬಾ ಊಹಿಸುವರು. ತಮಿಳಿನಲ್ಲಿ ನಾಟ್ಟವನ್ ಎಂದರೆ ಒಕ್ಕಲು, ಕುಡುವನೆಂದು ಅರ್ಥವಿರುವುದರಿಂದ ಕಂನಾಡಿನಲ್ಲಿ ಕುಡುವರು ನಾಡವರೇ ಆದರೆಂದು ತಮಗೆ ಸಿಕ್ಕ ಆಧಾರಗಳಿಂದ ಶಂಬಾ ಹೇಳುವರು.

ಕನ್ ಅಥವಾ ಕಣ್ ಎಂಬ ಜನರ ನಾಡು ಕಂನಾಡು ಎಂಬುದು ಶಂಬಾ ಅವರ ಸಿದ್ಧಾಂತ ‘ಕನ್’ರ ಹೆಸರಿನ ಊರುಗಳು ದಕ್ಷಿಣಾಪಥದ ಎಲ್ಲೆಡೆಗೂ ಹರಡಿಕೊಂಡಿರುವುದನ್ನು ಶಂಬಾ ಪಟ್ಟಿಮಾಡಿ ತೋರಿಸುವರು. ಕಂನಾಡು ಸಂಸ್ಕೃತದಲ್ಲಿ ಕರ್ಣಾಟವೆಂಬ ರೂಪತಾಳಿ ಸ್ಥಾನಪಡೆಯಿತೆಂದೂ ಕರ್ಣಾಟವೆಂಬುದು ಕಂನಾಡ ಹೊರಗಿನವರು ಕರೆಯಲಾರಂಭಿಸಿದ ಹೆಸರೆಂದೂ ಕಂನಾಡು ಕ್ರಿ. ಶ. ೩ – ೪ ನೆಯ ಶತಮಾನದ ಸುಮಾರಿಗೆ ಬಳಕೆಯಲ್ಲಿ ಬಂದಿದೆಯೆಂದೂ ಅವರು ಅಭಿಪ್ರಾಯಪಡುವರು. ಇವರು ಹಟ್ಟಿಕಾರಿಕೆಯಿಂದ ವ್ಯವಸಾಯ ವೃತ್ತಿಗೆ ಪರಿವರ್ತಿತರಾದುದರಿಂದ ಕುಡುವರೆಂದೂ ಒಕ್ಕಲರೆಂದೂ ಹೆಸರು ಬಂದಿತು. ನಾಡವರಿಗೆ ರಾಷ್ಟೀಕರೆಂಬ ಹೆಸರಿದ್ದಿತೆಂದು ವಾದಿಸುವ ಶಂಬಾ ತಮ್ಮ ವಾದಕ್ಕೆ ಡಾ. ಅಳತೇಕರರ ಅಭಿಪ್ರಾಯವನ್ನು ಬೆಂಬಲವಾಗಿ ತೆಗೆದುಕೊಂಡಿರುವರು ಇದು ಗಮನಿಸಬೇಕಾದ ಅಂಶ.

ಆರ್ಯರು ಹಟ್ಟಿಕಾರರ ಹೆಣ್ಣನ್ನು ಮದುವೆಯಾದುದರಿಂದ ಅಥವಾ ಹಟ್ಟಿಕಾರರು ಆರ್ಯರ ಕನ್ಯೆಯರ ಕೈಹಿಡಿಯುವುದರಿಂದಾಗಲೀ ಹುಟ್ಟಿದ ಸಂತತಿಯಿಂದಲೇ ಮುಂದೆ ಆರಿಯರೆಂಬ ಜನವು ನಿರ್ಮಾಣವಾಯಿತು ಎಂದು ಶಂಬಾ ವಿಚಾರ ಮಾಡುವರು. ಪರ್ವತಪೂಜೆ, ವೃಕ್ಷ ಪೂಜೆ, ನರಬಲಿ, ಧರ್ಮಗಳು ಕಂನಾಡಿನಲ್ಲಿ ಬಳಕೆಯಲ್ಲಿದ್ದುದನ್ನು ವಿಸ್ತೃತವಾಗಿ ತಿಳಿಯಪಡಿಸುವರು. ಕಂನಡರ ಸಮಾಜ, ಕುಟುಂಬ ಪದ್ಧತಿ, ವಿದ್ಯೆ, ರಸಿಕತೆ, ಭಾಷೆ ಇವೆಲ್ಲವುಗಳ ಪ್ರಸ್ತಾಪ ಮಾಡುತ್ತ ಆ ಹಿನ್ನೆಲೆಯಲ್ಲಿ ಕಂನಡರ ವಿಶಿಷ್ಟ ಸಂಸ್ಕೃತಿಯ ಪರಿಚಯವನ್ನು ಶಂಬಾ ಬಹಳ ಚೆನ್ನಾಗಿ ಮಾಡಿಕೊಟ್ಟಿರುವರು.

ಹಳೆಯ ಮರಾಠಿ ಮತ್ತು ಕನ್ನಡ ಭಾಷೆಗಳ ತೌಲನಿಕ ಅಭ್ಯಾಸ ಮಾಡಿದರೆ ಅವುಗಳಲ್ಲಿಯ ಭಾಷಾತ್ಮಕ ಸಂಬಂಧ ಸ್ಪಷ್ಟವಾಗುತ್ತದೆ. ಅಲ್ಲದೆ ಕನ್ನಡ ಮರಾಠಿಯಲ್ಲಿ ಅನುವಂಶಿಕ ಸಂಬಂಧವಿತ್ತೆಂಬ ಅಂಶ ಗೋಚರವಾಗುತ್ತದೆ. ಕರ್ನಾಟ ಮತ್ತು ಮರಹಟ್ಟದಲ್ಲಿಯ ಮಲ್ಹಾರಿ, ವಿಠ್ಠಲ ಮೊದಲಾದ ದೇವತೆಗಳು, ಜನರ ರೀತಿ, ನಡೆವಳಿಗಳು ಭಾಷಿಕ ಪ್ರಮಾಣವನ್ನು ಒದಗಿಸುತ್ತವೆ. ಚಾಲುಕ್ಯ, ರಾಷ್ಟ್ರಕೂಟ ಮೊದಲಾದ ಕರ್ನಾಟ – ಮರಹಟ್ಟದ ರಾಜ ಮನೆತನಗಳು ತಮ್ಮ ವಂಶವೃಕ್ಷ ಯದು ತುರ್ವಸುಗಳಿಂದ ಬೆಳೆದುಬಂದುವೆಂದು ಹೇಳುತ್ತವೆ. ಅವಳಿ ಸೋದರರಂತೆ ಕಾಣುವ ಕಾನಡೇ ಮತ್ತು ಮರಾಠಿ ಇವರ ಪೂರ್ವ ಪರಂಪರೆ ರಿಷ್ಟಿಕ ಭೋಜಕ, ಯದು ತುರ್ವಸುಗಳಂಥ ಜೋಡಿ ಹೆಸರುಗಳ ಜನರ ಹತ್ತಿರ ಮುಟ್ಟಿಸುತ್ತದೆ. ಹೀಗೆ ಶಂಬಾರವರು ಭಾಷಿಕ ಹಾಗೂ ಧಾರ್ಮಿಕ, ಸಾಮಾಜಿಕ ನಡೆವಳಿ, ಸಂಪ್ರದಾಯ ಹಾಗೂ ಇತರ ಆಧಾರಗಳಿಂದ ಕನ್ನಡ ಸಂಸ್ಕೃತಿಯ ಅಧ್ಯಯನಕ್ಕೆ ಮೌಲಿಕ ಕೊಡುಗೆ ನೀಡಿರುವರಲ್ಲದೆ ಕನ್ನಡ ಮರ್ಹಾಟೀ ಭಾಷೆ ಸಾಂಸ್ಕೃತಿಕ ಸಂಬಂಧ, ಭಾವೈಕ್ಯತೆಗೆ ಸೇತುವೆ ಕಟ್ಟಿಕೊಟ್ಟಿದ್ದಾರೆ.

ಕನ್ನಡ ಸಂಸ್ಕೃತಿ, ಕರ್ಣಾಟಕದ ಹಿಂದಿನ ವ್ಯಾಪ್ತಿಯನ್ನು ಗುರುತಿಸುವುದರ ಜೊತೆಗೆ ಭಾರತೀಯ ಜೀವನದ ಮೇಲೆ ನಮ್ಮ ನಾಡು ಬೀರಿದ ಪ್ರಭಾವದಲ್ಲಿ ಮುಖ್ಯವಾದುದು ಭಾರತೀಯ ಸಂಸ್ಕೃತಿಯ ಮೂಲದ ಎರಡು ಮುಖ್ಯ ಪರಂಪರೆಗಳ ಜಾಡೂ ಕರ್ನಾಟಕದಲ್ಲಿಯೇ ತಾತ್ವಿಕವಾಗಿ ಮೊದಲು ಕಾಣುತ್ತದೆ ಎಂದೂ ಹೇಳುತ್ತಾರೆ. ಅವೇ ಅಗ್ನಿಸಂಪ್ರದಾಯ ಮತ್ತು ಜಲಸಂಪ್ರದಾಯಗಳು. ಸಂಸ್ಕೃತಿ, ಇತಿಹಾಸ, ಸಂಕೇತಸ್ಥ ಆಕೃತಿಗಳ ವಿಚಾರದ ಬಗ್ಗೆ ಶಂಬಾ ಅವರು ತೆಗೆದುಕೊಳ್ಳುವ ನಿಲುಮೆಗಳು ಹೊಚ್ಚ ಹೊಸವುಗಳು. ಐತಿಹಾಸಿಕ ಸಂಗತಿಗಳೇ ಇರಲಿ, ಸಾಮಾಜಿಕ ಅಂಶಗಳೇ ಇರಲಿ, ಧಾರ್ಮಿಕ ಪ್ರಕ್ರಿಯೆಗಳೇ ಇರಲಿ, ಭಾಷಿಕ ಆಕೃತಿಗಳೇ ಇರಲಿ, ಅವನ್ನೆಲ್ಲ ಪರಿಶೀಲಿಸಿ ಅವುಗಳ ಪರಸ್ಪರ ಸಂಬಂಧಗಳನ್ನು ಗಮನಿಸಿ ವರ್ತಮಾನದ ಮಾನವ ಸಮಾಜದಲ್ಲಿ ಶಂಬಾ ಅವರು ಅರ್ಥೈಸುವ ಬಗೆ ಅಪರೂಪ ಮಾತ್ರವಲ್ಲ ಅಪೂರ್ವವೂ ಹೌದು ! ಹೀಗಾಗಿ ಶಂಬಾ ಅವರ ಭಾಷಾಧ್ಯಯನ ಸಂಸ್ಕೃತಿಯ ನೆಲೆಯಲ್ಲಿ ಸಾಗಿದೆ ಎಂಬುದನ್ನು ಗಮನಿಸಬೇಕು.