I

ಸಾಮಾಜಿಕ ಭಾಷಾ ಸಂಶೋಧನೆಯಲ್ಲಿ ಭಾಷೆ ಮತ್ತು ಸಂಸ್ಕೃತಿಗಳು ಅಭಿನ್ನವಾಗಿದ್ದು, ಆ ಜಾಯಮಾನದಲ್ಲಿ ಕಂಡ ನುಡಿಯ ಅರ್ಥ, ಸೊಬಗು, ಇಂಪು, ತೂಕ, ಹದ ಮೊದಲಾದವನ್ನು ತನ್ನ ಭಾಷೆಯಲ್ಲಿಯಂತೆ ನಿರಾಯಾಸವಾಗಿ ತನ್ನದಲ್ಲದ ಭಾಷೆಯಲ್ಲಿ ಗ್ರಹಿಸಲು ಸಾಧ್ಯವಿಲ್ಲ. ಆದ್ದರಿಂದ ಬಬ್ಬ ಮನುಷ್ಯನಿಗೆ ಭಾಷೆ ಮತ್ತು ಸಂಸ್ಕೃತಿಗಳ ಸಂದರ್ಭದಲ್ಲಿ ಅದಕ್ಕಿಂತಲೂ ಮಿಗಿಲಾದ, ತನ್ನದಾದ ‘ಒಂದು ಭಾಷೆ’ ಮತ್ತು ‘ಒಂದು ಸಂಸ್ಕೃತಿ’ ಗಳ ಪರಿಕಲ್ಪನೆ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ಮಹಾತ್ಮ ಗಾಂಧೀಜಿ ಅವರು ದೇಶ ಭಾಷೆಗಳ ವಿಷಯದಲ್ಲಿ ಆಡಿದ ಒಂದು ಮಾತು ಇಲ್ಲಿ ಮುಖ್ಯವಾಗುವುದು. “ಯಾರು ಎಷ್ಟೇ ಪರೋಪಕಾರ ಬುದ್ಧಿಯಿಂದ ಅಥವಾ ಉದಾರ ಬುದ್ಧಿಯಿಂದ ಯಾವ ತರಹದ ಸ್ವರಾಜ್ಯವನ್ನೇ ಕೊಡಲಿ, ನಮ್ಮ ತಾಯಂದಿರಾಡುವ ಭಾಷೆಯ ವಿಷಯದಲ್ಲಿ ನಮ್ಮ ಮನದಲ್ಲಿ ಅದರ ಬುದ್ಧಿಯಿಲ್ಲದಿದ್ದರೆ ನಾವು ನಿಜವಾದ ಸ್ವರಾಜ್ಯ ಭೋಗಿಗಳಾಗಲಾರೆವು”. ಈ ಸಂದರ್ಭದಲ್ಲಿ ಗಮನಿಸಬೇಕಾದ ಮತ್ತೂ ಒಂದು ಸಂಗತಿಯೇನೆಂದರೆ, ಯಾವುದೇ ಒಂದು ನಿರ್ದಿಷ್ಟ ಭಾಷೆ ಮತ್ತು ಸಂಸ್ಕೃತಿಗಳ ಬಗೆಗೆ ಒಬ್ಬ ಮನುಷ್ಯ ಇಟ್ಟುಕೊಳ್ಳುವ ಸಹಜವಾದ ಪ್ರೀತಿ, ಆದರಗಳು ಅತಿರೇಕಕ್ಕೇರಿದರೆ ಅಥವಾ ಅಧಃಪತನಕ್ಕಿಳಿದರೆ ಭಾಷಾ ಸಂಗೋಪನೆ ಕಷ್ಟ ಸಾಧ್ಯವಾಗುತ್ತದೆ. ಆ ಭಾಷಾ ಈ ತಾತ್ತ್ವಿಕ ಹಿನ್ನೆಲೆಯಲ್ಲಿ ಕನ್ನಡ ನಾಡು ಮತ್ತು ನುಡಿಗಳ ಸಂಬಂಧದ ಸ್ವರೂಪವನ್ನು ಗ್ರಹಿಸಬೇಕಾಗಿದೆ. ಈ ನೆಲೆಯಲ್ಲಿ ಚರ್ಚಿತವಾದ ‘ಸಂಸ್ಕೃತಿ’ ಯ ಜಾಗದಲ್ಲಿ ಕನ್ನಡ ನಾಡು, ‘ಭಾಷೆ’ ಯ ನೆಲೆಯಲ್ಲಿ ಕನ್ನಡ ನುಡಿ ಮತ್ತು ಅವುಗಳ ಶಿಶುವಾದ ‘ಮನುಷ್ಯ’ ನ ಜಾಗದಲ್ಲಿ ‘ಕನ್ನಡಿಗ’ ನನ್ನು ಇಟ್ಟು ನೋಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಚರ್ಚೆಯು ಜಾಗತಿಕ ನೆಲೆಯಿಂದ ಕನ್ನಡದ ಪ್ರಾದೇಶಿಕ ನೆಲೆಗೆ ಜಾರಿದಂತಾಗುತ್ತದೆ. ಈ ತಾತ್ವಿಕತೆಯಲ್ಲಿ ‘ಕನ್ನಡ ನಾಡಿಗೆ ಕನ್ನಡವೇ ಗತಿ’ ಯಾಗುತ್ತದೆ. ಕನ್ನಡಿಗನಿಗೆ ಕನ್ನಡವೇ ಮತಿಯಾಗುತ್ತದೆ. ಒಟ್ಟಾರೆಯಾಗಿ ಕನ್ನಡ ಸಂಸ್ಕೃತಿಯ ವಿಕಾಸ ಕನ್ನಡ ಭಾಷೆಯಿಂದ ಮಾತ್ರ ಸಾಧಿತಗೊಳ್ಳುವ ಸತ್ಯ ಎಂಬುದು ಅರಿವಾಗುತ್ತದೆ.

ನಾಡು ಎಂಬುದು ಒಂದು ನಿರ್ದಿಷ್ಟ ಸಾಂಸ್ಕೃತಿಕ ಭೌಗೋಳಿಕ ವಲಯ. ಕನ್ನಡದ ಸಂದರ್ಭದಲ್ಲಿ ಪರಂಪರೆಯ ಉದ್ದಕ್ಕೂ ನೂರಾರು ನಾಡುಗಳು ಇರುವುದು ವೇದ್ಯವಾಗುತ್ತವೆ. ಉದಾಹರಣೆಗೆ, ಪಂಪನ ಕಾಲಕ್ಕೆ ಬನವಾಸಿ ನಾಡು, ಅನಂತರದ ಬೆಳುವೊಲ ನಾಡು, ಕೆಳದಿ ನಾಡು, ತುಳುನಾಡು, ಯಲಹಂಕ ನಾಡು, ನೊಳಂಬ ದೇಶ ಇತ್ಯಾದಿ. ಇವು ವಿಶಿಷ್ಟ ಸಂಸ್ಕೃತಿಯ ಹಿನ್ನೆಲೆಯಿಂದ ಕೂಡಿದ್ದಿರಬಹುದು ಅಥವಾ ಒಂದು ಪ್ರಭುತ್ವದ ನಿರ್ದಿಷ್ಟ ಭೂವಲಯವಿರಬಹುದು ಅಥವಾ ತನ್ನದೇ ಆದ ಮೇರೆಗಳನ್ನು ನಿರ್ಮಿಸಿಕೊಂಡಿದ್ದ ಪ್ರಾಕೃತಿಕ ವಲಯವೂ ಆಗಿರಬಹುದು ಅಥವಾ ಏಕಕಾಲಕ್ಕೆ ಇವೆಲ್ಲವೂ ಒಂದೇ ‘ನಾಡಿ’ನಲ್ಲಿ ಪರಿಣಮಿಸಿಯೂ ಇರಬಹುದು. ಇದು ಖಚಿತವಾಗಿ ವಸಾಹತುಪೂರ್ವದ ನಾಡಿನ ಕಲ್ಪನೆ.

ಆದರೆ ಭಾರತಕ್ಕೆ ಬ್ರಿಟಿಷರ ಆಗಮನವಾಗಿ, ಅವರಿಂದ ಇಲ್ಲಿ ವಸಾಹತುಶಾಹಿ ಸಂಸ್ಕೃತಿ ಮೈತಾಳಿದಾಗ, ಈ ನಾಡಿನ ಕಲ್ಪನೆ ಮಹತ್ತರ ತಿರುವನ್ನು ಪಡೆಯುತ್ತದೆ. ವಸಾಹತುಕಾಲದಲ್ಲಿ ಕಾಣಿಸಿಕೊಂಡ ಹಲವು ನೂತನ ಕಲ್ಪನೆಗಳಲ್ಲಿ ಒಂದಾದ ಇದು ಭಾಷಾವಾರು ಪ್ರಾಂತ್ಯಗಳ ರಚನೆಗಾಗಿ ನಡೆದ ಕರ್ನಾಟಕ ಏಕೀಕರಣ ಚಳುವಳಿಯ ತೀವ್ರತೆಯಲ್ಲಿ ಜಾಗೃತಗೊಳ್ಳುತ್ತದೆ. ಈಗಾಗಲೇ ಇದ್ದ ಈ ಪ್ರಾಚೀನ ‘ನಾಡಿ’ ನ ಕಲ್ಪನೆ ಇಲ್ಲಿ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತದೆ. ಉದಾಹರಣೆಗೆ, ದಕ್ಷಿಣ ಭಾರತದ ಸಂದರ್ಭದಲ್ಲಿ ‘ಕನ್ನಡ’ ನಾಡು, ‘ತಮಿಳು’ ನಾಡು ಹೀಗೆ.

ಹೀಗೆ ಭಾರತೀಯ ಪರಂಪರೆಯ ಉದ್ದಕ್ಕೂ ಮುಖ್ಯವಾಗಿ ಸಾಂಸ್ಕೃತಿಕ ಪರಿಕಲ್ಪನೆಯಾಗಿ ಉಳಿದು ಬಂದಿದ್ದ ‘ನಾಡು’ ಎಂಬುದು ಇಪ್ಪತ್ತನೆಯ ಶತಮಾನದಲ್ಲಿ ರಾಜಕೀಯ ಛಾಯೆಯನ್ನು ಪಡೆಯುತ್ತದೆ. ಆದ್ದರಿಂದ ಭೂವೈಶಾಲ್ಯತೆ ಮತ್ತು ರಾಜಕೀಯ ನೆಲೆ ಈ ಎರಡೂ ಮೇಳೈಸಿದ ಸಾಂಸ್ಕೃತಿಕ ‘ನಾಡು’ ಹೊಸ ವಿನ್ಯಾಸದಲ್ಲಿ ಕಾಣಿಸಿ ಕೊಳ್ಳತೊಡಗುತ್ತದೆ.

ಹೀಗೆ ಸಾವಿರ ವರ್ಷಗಳಿಗೂ ಮೀರಿದ ಚರಿತ್ರೆಯನ್ನು ಹೊಂದಿರುವ ‘ನಾಡು’ ಎಂಬ ಪರಿಕಲ್ಪನೆ ಕರ್ನಾಟಕದ ಸಂದರ್ಭದಲ್ಲಿ ಕೂಡ ಇದೇ ರೀತಿಯಲ್ಲಿ ವಿಕಸನ ಹೊಂದಿ ಬಂದಿದೆ. ಇದು ಶಂಬಾ ಅವರು ನಾಡಿನ ಪರಂಪರೆಯನ್ನು ಈ ಅಧ್ಯಯನದಲ್ಲಿ ಗ್ರಹಿಸಿರುವ ಕ್ರಮವೂ ಹೌದು. ಅದು ಅವರಿಗೆ ಕಂಡ ಬಗೆಯನ್ನು ಚರ್ಚಿಸಲಾಗಿದೆ. ಇಂತಹ ಅಭಿವ್ಯಕ್ತಿಯ ಚರ್ಚೆಯನ್ನು ಅವರ ವೈಚಾರಿಕ ಚಿಂತನೆಯ ವಿವಿಧ ನೆಲೆಗಳಲ್ಲಿ ನಿರ್ವಹಿಸಲಾಗಿದೆ. ನುಡಿ ಎಂಬುದು ಒಂದು ನಾಡಿನ ಜೀವದ್ರವ್ಯ. ಇದಿಲ್ಲದೆ ನಾಡಿನ ಅಸ್ತಿತ್ವ ಇಲ್ಲ. ಈ ಚರ್ಚೆ ಕರ್ನಾಟಕದ ಸಂದಭರ್ಭದಲ್ಲಿ ಕನ್ನಡವನ್ನು ಮುಖ್ಯವಾಗಿ ಗುರುತಿಸಿದೆ. ಆದ್ದರಿಂದ ಕನ್ನಡ ನಾಡು ಎಂದಾಗ ಅದರ ಪ್ರಾಣರೂಪಿಯಾಗಿ ಕನ್ನಡ ನುಡಿ ಮೊದಲಾಗುತ್ತದೆ.

II

ಕನ್ನಡ ನಾಡು, ನುಡಿಯ ಇತಿಹಾಸ ಸಂಶೋಧನೆ ಹಾಗೂ ಭಾರತೀಯ ಸಾಂಸ್ಕೃತಿಕ ಮೂಲಕ ತಾತ್ವಿಕ ಚಿಂತನೆಗೆ ತಮ್ಮ ಜೀವಿತದ ಬಹುಭಾಗವನ್ನು ವಿನಿಯೋಗಿಸಿ ವೈಯಕ್ತಿಕವನ್ನು ಮೀರಿದ ಸಾಮಾಜಿಕ ಬದುಕಿನಲ್ಲೂ, ಎರಡಿಲ್ಲದ ಬಾಳಿನ ಗರಡಿಯಲ್ಲಿ ಪಳಗಿದ ಧೀಮಂತ ಲೇಖಕ ಶಂಬಾ ಅವರು. ಮಹಾರಾಷ್ಟ್ರದ ಮೂಲವನ್ನು ಬರೆದ ಶಂಬಾ ಅವರಿಗೆ ಸಂಶೋದನೆಯೇ ಉಸಿರಾಯಿತು. ನಿಷ್ಠೆಯಿಂದ ಪ್ರಾಮಾಣಿಕತೆಯಿಂದ ಸಂಶೋಧನೆಗೆ ತೊಡಗಿದ ಶಂಬಾ ತಮ್ಮ ಸಂಶೋಧನೆಗಳನ್ನು ಜನತೆಯ ಮುಂದೆ ಇಡತೊಡಗಿದರು. ಇವರ ‘ಮರಾಠೀ ಸಂಸ್ಕೃತಿ ಕಾಹೀ ಸಮಸ್ಯಾ’ ಎನ್ನುವ ಸಂಶೋಧನಾತ್ಮಕ ಪುಸ್ತಕವನ್ನು ಅಂತರ ಭಾರತೀ ಸಂಸ್ಥೆಯವರು ಪ್ರಕಟಿಸಿದರು. ಮಹಾರಾಷ್ಟ್ರದಲ್ಲಿ ಅದರ ಪ್ರತಿಕ್ರಿಯೆ ತೀವ್ರವಾಯಿತು. ಅಲ್ಲಿಯ ತರುಣ ಜನಾಂಗ ಸಿಡಿದೆದ್ದಿತು. ಮಹಾರಾಷ್ಟ್ರದ ಮೂಲವನ್ನು ರೂಪಿಸುವಲ್ಲಿ ಆಗಿರುವ ಕರ್ನಾಟಕದ ಪ್ರಭಾವವನ್ನು ಒಪ್ಪಲು ಅವರ ಅಹಮಹಮಿಕೆ ಅಡ್ಡ ಬರುತ್ತಿತ್ತು.

ಒಂದು ದೇಶಕ್ಕೆ ಹೆಸರು ಜನತೆಯಿಂದ ಬರಲು ಸಾಧ್ಯವಿದೆ. ಇಲ್ಲಿಯವರೆಗೆ ‘ಮಹಾರಾಷ್ಟ್ರ’ ಈ ಶಬ್ದ ಮಹಾರರ ರಾಷ್ಟ್ರ (ಅಂದರೆ ಹೊಲೆಯರ ದೇಶವೆಂಬರ್ಥದಲ್ಲಿ) ಅಥವಾ ಮಹಾರಠಿಗಳ ದೇಶ, ಹೀಗೆ ಹಲವು ವಿಚಾರಗಳು ಪ್ರಚಾರದಲ್ಲಿರುವಾಗ ಶಂಬಾ ಹೊಸದನ್ನು ಹೇಳಿದರು. ಮರಹಟ್ಟ ಶಬ್ದದಿಂದ ಮರಾಟಾವಾಗಿ ಮಹಾರಾಷ್ಟ್ರವಾದುದನ್ನು ತಿಳಿಸಿದರು. ಮರ, ಹಟ್ಟ ಇವೆರಡೂ ಕನ್ನಡ ಪದಗಳು. ಮಹಾರಾಷ್ಟ್ರದಲ್ಲಿ ‘ಝೂಢ ಮಂಡಳಿ’ (ಗಿಡಮರಗಳು) ಎನ್ನುವ ಜನರ ಪಂಗಡ ಬಂದಿದೆ. ಅದು ಗಿಡಮರಗಳನ್ನು ಪೂಜಿಸುವ ಪಂಗಡ. ಕನ್ನಡ ನಾಡಿನಲ್ಲೂ ಮರದಮ್ಮನ ಪೂಜೆ ಮಾಡುವ ಜನವೂ ಇದೆ. ಹಟ್ಟಿ, ಪಟ್ಟಿ (ತೋಟಪಟ್ಟಿಯಲ್ಲಿಯ ಪಟ್ಟಿ) ಯಲ್ಲಿ ವಾಸಿಸುವ ಜನ. ಇಲ್ಲಿ, ಕನ್ನಡ ಪ್ರತ್ಯಯದೊಂದಿಗೆ (ಪಟ್ಟಿ ಮತ್ತು ಇಲ) ಪಟ್ಟಿಲರಾದರು. ಅವರೇ ಮುಂದೆ ಪಾಟೀಲರಾದರು. ಮರಾಠೀ ಭಾಷೆಯಲ್ಲಿ ಇಂದಿಗೂ ಕಾಣುವ ಕನ್ನಡ ಮೂಲಧಾತುಗಳನ್ನು ತಮ್ಮ ಅಧ್ಯಯನದಲ್ಲಿ ಶಂಬಾ ವಿವರಿಸಿದರು.

ಹೀಗೆ ಮರಾಠೀ ಮೇಲೆ ಕನ್ನಡದ ಪ್ರಭಾವವನ್ನು ಅವರು ಸಪ್ರಮಾಣವಾಗಿ ವಿವರಿಸಿದರು. ದುರಭಿಮಾನದಿಂದ ಅಂಧರಾದ ಕೆಲ ಮರಾಠೀ ತರುಣರಿಗೆ ಈ ಸುವಿಚಾರ ರುಚಿಸಲಿಲ್ಲ. ಶಂಬಾ ಅವರ ಬರಹಗಳನ್ನು ಸಾರ್ವಜನಿಕವಾಗಿ ಸುಡಲು ಪ್ರಯತ್ನಿಸತೊಡಗಿದರು.

ಆದರೆ ಸಮಂಜಸ ಪ್ರವೃತ್ತಿಯ ಮರಾಠಿ ವಿದ್ವಾಂಸರು ಇವರ ಸಂಶೋಧನೆಯತ್ತ ಹೊರಳಿ ನೋಡಿದರು. ಅಭ್ಯಾಸ ನಡೆಸಿದರು. ಶ್ರೀ ವಿನೋಬಾ ಭಾವೆ ಅವರು ಶಂಬಾ ಸಿದ್ಧಾಂತಗಳನ್ನು ಮೆಚ್ಚಿಕೊಂಡು ಪತ್ರ ಬರೆದರು. ಬೆಡೇಕರರು “ ಈ ವಿಷಯದಲ್ಲಿ ನೀವು ಹೊಸ ಚಾಲನೆಯನ್ನು ನೀಡಿದ್ದೀರಿ” ಎಂದು ಹೇಳಿದರು. ದೆಹಲಿಯಲ್ಲಿ ಕೂಡಿದ ಮಹಾರಾಷ್ಟ್ರ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ತರ್ಕತೀರ್ಥ ಲಕ್ಷ್ಮಣಶಾಸ್ತ್ರಿ, ಜೋಶಿಯವರಂತೂ ಈ ಪುಸ್ತಕವನ್ನು ಮುಕ್ತಕಂಠದಿಂದ ಹೊಗಳಿದರು. ಮಹಾರಾಷ್ಟ್ರದ ಸಂಶೋಧಕರಾದ ಶ್ರೀ ವಾ. ನಾ. ದೇಶಪಾಂಡೆಯವರಂತೂ ಇಂದಿನ ಸ್ಥಿತಿಯಲ್ಲಿ ಶಂಬಾ ಅವರ ‘ಮಹಾರಾಷ್ಟ್ರ ಮೂಲ’ ಸಿದ್ಧಾಂತಗಳೇ ಸಮಂಜಸವೆನಿಸಿವೆ ಎಂದು ಪ್ರಾಂಜಲ ಮನಸ್ಸಿನಿಂದ ಒಪ್ಪಿಗೆಯನ್ನು ನೀಡಿ ಅವರ ಸಿದ್ಧಾಂತಗಳ ತಳಹದಿಯ ಮೇಲೆಯೇ ಇನ್ನಿತರ ವಿಷಯಗಳ ಸಂಶೋಧನೆಯನ್ನು ನಡೆಸಿದ್ದಾರೆ.

ಯುಗ – ಯುಗಾಂತರಗಳಿಂದ ನಡೆದು ಬಂದ ಅಥವಾ ರೂಢ ಮೂಲವಾದ ನಂಬುಗೆಗಳ ತಳಪಾಯವನ್ನೇ ಅಲುಗಾಡಿಸುವ ಸಾಮರ್ಥ್ಯವನ್ನು ಹೊಂದಿದ ಇವರ ಸಂಶೋಧನೆ ಇವರನ್ನು ನಾಲ್ಕು ಜನರಿಂದ ಬೇರ್ಪಡಿಸಿದೆ. ಆ ನಾಲ್ಕು ಜನರ ಅಸೂಯೆಗೆ ತುತ್ತಾದ ನೋವನ್ನೂ ಶಂಬಾ ಅನುಭವಿಸಿದ್ದಾರೆ. ಆದರೂ ಸತ್ಯದ ಶೋಧನೆಗಾಗಿ ಅವರು ಎಂತಹ ಬೆಲೆಯನ್ನೂ ಕೊಡಲು ಸಿದ್ಧ. ಶಂಬಾ ಆರಿಸಿಕೊಂಡ ಕ್ಷೇತ್ರವೇ ಅಂತಹುದು.

ಶಂಬಾ ಅವರು ಕಂನಾಡಿನ ಮತ್ತು ಕಂನಾಡ ನುಡಿಯ ಇತಿಹಾಸ ಸಂಶೋಧನೆಗೆ ತಮ್ಮ ಇಡೀ ಬಾಳನ್ನೇ ಮುಡುಪಾಗಿಟ್ಟರು. ಅಪಾರ ಶ್ರಮವಹಿಸಿದರು. ‘ಕಣ್ಮರೆಯಾದ ಕನ್ನಡ, ಕಂನುಡಿಯ ಹುಟ್ಟು, ಕನ್ನಡದ ನೆಲೆ, ಕರ್ಣಾಟಕ ಸಂಸ್ಕೃತಿಯ ಪೂರ್ವಪೀಠಿಕೆ, ಎಡೆಗಳು ಹೇಳುವ ಕಂನ್ನಾಡ ಕತೆ, ಕಂನುಡಿಯ ಹುಟ್ಟು, ಕಂನುಡಿಯ ಜೀವಾಳ ಇತ್ಯಾದಿ ತಮ್ಮ ಗ್ರಂಥಗಳಲ್ಲಿ ಮಹಾಭಾರತದಲ್ಲಿ ಉಲ್ಲೇಖಿತವಾಗಿರುವ ಕಣ್ಣರು, ನಟರೆ ಈ ನಾಡ ಮೊದಲಿಗರೆಂದೂ ‘ಕಾವೇರಿಯಿಂದಮಾ ಗೋದಾವರಿವರಮಿರ್ದ’ ಎಂಬ ಕವಿವಾಣಿ ಅತಿಶಯೋಕ್ತಿಯೇನಲ್ಲ. ಕ್ರಿ. ಶ. ೧೦ನೇ ಶತಮಾನಕ್ಕೇ ಮುಂಚೆಯೇ ಕಂನಾಡು ನರ್ಮದಾ ನದಿಯ ಆಚೆಗೂ ವ್ಯಾಪಿಸಿತ್ತು ಎಂಬುದನ್ನು ಸಾಧಾರಣವಾಗಿ ವಿವರಿಸಿದ್ದಾರೆ. ನೆರೆಯ ಭಾಷೆಗಳಲ್ಲಿಯ ಮಿಳಿತವಾಗಿರುವ ಕಂನುಡಿಯ ಪದಗಳನ್ನು ಗುರುತಿಸಿ ಅವು ಬಳಕೆಯಲ್ಲಿರುವ ಸ್ಥಳಗಳಲ್ಲಿ ಒಮ್ಮೆ ಕಂನಾಡಿಗರು ನೆಲೆಸಿದ್ದರು ಎಂಬುದನ್ನು ಸಮರ್ಥವಾಗಿ ವಾದಿಸಿದ್ದಾರೆ. ಕಂನಾಡಿನ ಗಡಿಯನ್ನು ಬಹುದೂರದವರೆಗೂ ವಿಸ್ತರಿಸಿದ್ದಾರೆ.

ಪ್ರಸ್ತುತ ಅಧ್ಯಯನದಲ್ಲಿ ಭಾಷೆ ಮತ್ತು ಸಂಸ್ಕೃತಿಯನ್ನು ಕುರಿತು ಶಂಬಾ ಅವರ ಮೇಲಿನ ಬರೆಹಗಳನ್ನು ಅನುಲಕ್ಷಿಸಿ ಕನ್ನಡ ಭಾಷೆಯ ರಚನೆ, ಕನ್ನಡ ಭಾಷೆಯ ಸಾಮಾಜಿಕ ಚಹರೆ, ಕಣ್ಮರೆಯಾದ ಕರ್ಣಾಟಕದ ಹುಡುಕಾಟ, ಕನ್ನಡ – ಕರ್ನಾಟಕ ಕುರಿತು ಅವರ ವಿಚಾರ ಸರಣಿ, ಸ್ಥಳನಾಮಗಳನ್ನು ಭಾಷೆಯ ಅವಸ್ಥಾಂತರದ ಕುರುಹುಗಳಾಗಿ ಶಂಬಾ ಬಳಸಿಕೊಂಡ ಬಗೆ, ಹಟ್ಟಿ ಪದ ಸಂಸ್ಕೃತಿಕ ಆಯಾಮ, ಶಂಬಾ ಅವರ ಗದ್ಯಶೈಲಿ ಅವರು ತಮ್ಮ ಸಂಶೋಧನೆಯಲ್ಲಿ ಅನುಸರಿಸಿದ ವಿಧಾನ ಕುರಿತು ಸಮಾಜೋಭಾಷಿಕ ಅಂಶಗಳನ್ನು ಅಭ್ಯಸಿಸುವುದು ಈ ಅಧ್ಯಯನದ ಉದ್ದೇಶವಾಗಿದೆ.

ಶಂಬಾ ಅವರ ಅಧ್ಯಯನದ ಹರಹು ದೊಡ್ಡದು. ಅವರ ಭಾಷಿಕ ಚಿಂತನೆಗಳನ್ನು ಕುರಿತು ಬಹುಮಟ್ಟಿಗೆ ಪೂರ್ಣಪ್ರಮಾಣದ ಕೃತಿ ರಚನೆ ಕನ್ನಡದಲ್ಲಿ ಈವರೆಗೆ ನಡೆದಿಲ್ಲ. ಈ ಅಧ್ಯಯನ ಈ ದಿಕ್ಕಿನಲ್ಲಿ ಮೊದಲು ಪ್ರಯತ್ನವಾಗಿದೆ. ಒಟ್ಟಾರೆ ಶಂಬಾ ಅವರ ಭಾಷೆ – ಸಂಸ್ಕೃತಿ ವಿಚಾರಗಳ ಸ್ಥೂಲವಾದ ಸಮಾಜೋಭಾಷಿಕ ನೋಟವನ್ನು ಕುರಿತು ವಿವೇಚಿಸುವುದು ಪ್ರಸ್ತುತ ಅಧ್ಯಯನದ ಮುಖ್ಯ ಉದ್ದೇಶವಾಗಿದೆ.