I

ಶಂ.ಬಾ ಅವರ ಭಾಷಿಕ ಚಿಂತನೆಗಳು ಸಂಸ್ಕೃತಿಯ ನೆಲೆಗಟ್ಟಿನ ಮೇಲೆ ನಿಂತಿವೆ. ಅವರ ದೃಷ್ಟಿಯಲ್ಲಿ ಭಾಷೆ ಮತ್ತು ಸಂಸ್ಕೃತಿಗಳ ನಡುವಿನ ಸಂಬಂಧವನ್ನರಿಯುವ ಮೊದಲು ‘ಸಂಸ್ಕೃತಿ ಎಂದರೇನು?’ ಎಂಬುದನ್ನು ತಿಳಿಯುವುದು ಹೆಚ್ಚು ಸೂಕ್ತ. ‘ಸಂಸ್ಕೃತಿ’ ಎಂಬ ಪದ ಅತ್ಯಂತ ವ್ಯಾಪಕವಾದ ವ್ಯಾಪ್ತಿಯನ್ನು ಹೊಂದಿದೆ. ಅದರ ವಿವಿಧ ಮುಖಗಳ ಸ್ವರೂಪವನ್ನು ಒಂದು ವ್ಯಾಖ್ಯೆಯಲ್ಲಾಗಲೀ ಹಿಡಿದಿಡುವುದು ಕಷ್ಟಕರ. ಒಂದೇ ಮಾತಿನಲ್ಲಿ ಸಂಸ್ಕೃತಿಯ ಬಗೆಗೆ ವಿವರಣೆ ಕೊಡುವುದು ಸುಲಭವಲ್ಲ. ‘ಸಂಸ್ಕೃತಿ’ ಯ ಬಗೆಗೆ ವಿದ್ವಾಂಸರು ಹೇಳಿದ ಕೆಲವು ವ್ಯಾಖ್ಯೆಗಳನ್ನಿಲ್ಲಿ ನೋಡಬಹುದು.

ಸಂಸ್ಕೃತಿ ಎಂಬುದು ಜ್ಞಾನ, ನಂಬಿಕೆ, ನೈತಿಕತೆ, ಕಲೆ, ನ್ಯಾಯ ವಿಚಾರಗಳಲ್ಲದೇ ಇತರ ಸಾಧ್ಯತೆಗಳ ಸ್ವಭಾವವನ್ನೆಲ್ಲ ಒಳಗೊಂಡಿದೆ. ಅಲ್ಲದೇ ಮಾನವ ಸ್ವಪ್ರಯತ್ನದಿಂದ ಗಳಿಸಿಕೊಂಡ ಈ ಸಂಸ್ಕೃತಿ ಸಂಕೀರ್ಣವಾದುದಾಗಿದೆ ಎಂದು ಹೇಳಬಹುದು. ಮೆಕ್ಯಾವರ್‌ ಮತ್ತು ಪೇಜ್‌ರವರ ಪ್ರಕಾರ ಸಂಸ್ಕೃತಿ ಎಂದರೆ ‘ನಮ್ಮ ಬದುಕಿನ ವಿವಿಧ ರೀತಿಯಲ್ಲಿ, ವಿಚಾರಗಳಲ್ಲಿ, ನಿತ್ಯದ ವ್ಯವಹಾರ, ಕಲೆ, ಸಾಹಿತ್ಯ, ಸೃಜನ ಮತ್ತು ಆನಂದಾನುಭವಗಳಲ್ಲಿ ವ್ಯಕ್ತವಾಗುವ ನಮ್ಮ ಸ್ವಭಾವ’. ಹೀಗೆ ನಮ್ಮ ಸ್ವಭಾವ ಹಾಗೂ ವಿವಿಧ ತೆರನಾದ ಸಂದರ್ಭಗಳಲ್ಲಿ ಅದರ ಅಭಿವ್ಯಕ್ತಿಯನ್ನೇ ಅವರು ‘ಸಂಸ್ಕೃತಿ’ ಎನ್ನುತ್ತಾರೆ. ಮತ್ತೊಬ್ಬ ವಿದ್ವಾಂಸ ರಾಬರ್ಟರವರು ‘ಸಂಸ್ಕೃತಿ ಎಂಬುದು ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ರೂಪಗಳಲ್ಲಿ ಅಭಿವ್ಯಕ್ತವಾಗುವ ವೈಚಾರಿಕತೆ ಹಾಗೂ ಜ್ಞಾನಗಳ ಸಮನ್ವಿತ ರೂಪ’ ಎಂದಿದ್ದಾರೆ. ವಾಸ್ಕಿಯವರು “ಸಂಸ್ಕೃತಿ ಎಂಬುದು ಮನುಷ್ಯ ನಿರ್ಮಿತ ವ್ಯವಸ್ಥೆ. ಈ ವ್ಯವಸ್ಥೆಯ ಮೂಲಕ ಅವನು ತನ್ನ ಜೀವನದ ಗೊತ್ತು ಗುರಿಗಳನ್ನು ಸಾಧಿಸುತ್ತಾನೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇವರ ಪ್ರಕಾರ ಬಾಳುವೆಯ ರೀತಿಯೇ ಸಂಸ್ಕೃತಿ. ಆರ್. ಕರ್ನಫೀಲ್ಡರವರು ಸಂಸ್ಕೃತಿಯನ್ನು ಒಂದೇ ಚಿಕ್ಕ ಸೂತ್ರದಲ್ಲಿ ವ್ಯಾಖ್ಯಾನಿಸುತ್ತಾರೆ. ಅವರು “ಮಾನವ ಸಂಸ್ಕೃತಿ ಎಂದರೆ ಅದೇ ಸಮಾಜದಲ್ಲಿ ಬಾಳಲು ಹಂಚಿಕೊಂಡ ಒಟ್ಟು ಜೀವನ ರೂಪ” ಎನ್ನುತ್ತಾರೆ.

‘ಸಂಸ್ಕೃತಿ’ ಎಂದರೆ ನಾಡಿನ ಸತ್ ಸಂಪ್ರದಾಯಗಳ, ರೀತಿ – ನೀತಿಗಳ, ಧರ್ಮ – ದರ್ಶನಗಳ, ಕಲೆ – ಕಾವ್ಯಗಳ, ಆಚಾರ – ವಿಚಾರಗಳ ಒಟ್ಟು ಜ್ಞಾನದ ಸ್ವರೂಪ ಎಂದು ಕೆಲವು ವಿದ್ವಾಂಸರ ಅಭಿಪ್ರಾಯ. ಮತ್ತೆ ಕೆಲವರು “ಸಂಸ್ಕೃತಿ ಎಂಬುದು ಒಂದು ಮಾನವ ಗುಂಪು ಒಪ್ಪಿಕೊಂಡು ರೂಢಿಸಿಕೊಂಡು ಬಂದಿರುವ ನಂಬಿಕೆ, ಕಲೆ, ನೈತಿಕತೆ, ನ್ಯಾಯ, ಆಚಾರ, ವಿಚಾರ, ಧರ್ಮ, ನಾಗರಿಕತೆ, ಭಾಷೆ ಮುಂತಾದ ಜ್ಞಾನಗಳ ಒಟ್ಟು ಸಾರ” ಎಂದೆನ್ನುತ್ತಾರೆ.

ಒಟ್ಟಿನಲ್ಲಿ ಒಂದು ಸಮಾಜದಲ್ಲಿ ನೆಲೆಗೊಂಡ ಸಂಪ್ರದಾಯಗಳು ಆ ಸಮಾಜದ ಸಂಸ್ಕೃತಿಯನ್ನು ಸುಳುಹುಗಾಣಿಸುತ್ತವೆ. ‘ಜೀವನದ ಉತ್ತಮಿಕೆಯೇ ಸಂಸ್ಕೃತಿ’ ಎಂದು ಹೇಳಬಹುದು. ಸಮಾಜ ಜೀವನದ ಉತ್ತಮ ಸಂಪ್ರದಾಯಗಳ ಸಾರವೇ ಸಂಸ್ಕೃತಿ. ಪರಂಪರೆ ಹಾಗೂ ಪ್ರಗತಿಗಳು ಹಿತವಾಗಿ ಮೇಳವಿಸಿದ ಸಂಗಮವೇ ಸಂಸ್ಕೃತಿ.

ಮಾನವಶಾಸ್ತ್ರಜ್ಞರು ‘ಸಂಸ್ಕೃತಿ’ ಎಂಬ ಪದವನ್ನು ವಿಶಾಲಾರ್ಥದಲ್ಲಿ ಬಳಸುತ್ತಾರೆ. ಅವರು ಸಂಸ್ಕೃತಿಯನ್ನು ಸಾಮಾನ್ಯವಾಗಿ ಎರಡು ರೀತಿಯಲ್ಲಿ ಗುರುತಿಸುತ್ತಾರೆ. ೧. ಭೌತಿಕ ೨. ಅಭೌತಿಕ. ‘ಭೌತಿಕ’ ಎಂದು ಗುರುತಿಸಬಹುದಾದ ಸಂಸ್ಕೃತಿಯೇ ನಾಗರಿಕತೆ ಎನ್ನಬಹುದು. ಪಾತ್ರೆ, ಲೋಹಗಳು, ವಾಸ್ತುಶಿಲ್ಪ ಮುಂತಾದವುಗಳು ಭೌತಿಕ ಸಂಸ್ಕೃತಿಯಲ್ಲಿ ಬಂದರೆ, ಆಚಾರ, ವಿಚಾರ, ನಂಬುಗೆ, ಧರ್ಮ, ಭಾಷೆ, ಅಭೌತಿಕ ಸಂಸ್ಕೃತಿಯಲ್ಲಿ ಬರುತ್ತವೆ. ಸಂಸ್ಕೃತಿ ಮಾನವನನ್ನು ದೈಹಿಕವಾಗಿ, ಬೌದ್ಧಿಕವಾಗಿ, ಭಾವುಕವಾಗಿ ಹಾಗೂ ನೈತಿಕವಾಗಿ ನಿರ್ಧರಿಸುತ್ತದೆ. ಅಲ್ಲದೇ ಅವನ ಮಾತು, ಅಂದರೆ ಭಾಷೆ ಹಾಗೂ ನಡತೆ, ಅಂದರೆ, ಕ್ರಿಯೆಗಳನ್ನು ನಿರ್ಣಯಿಸುತ್ತದೆ.

ಮಾನವ ತನ್ನ ಆಸೆ – ಆಕಾಂಕ್ಷೆಗಳ ಪೂರೈಕೆಗಾಗಿ ಬಳಕೆಯಲ್ಲಿ ತಂದ ವಿಧಿ ವಿಧಾನಗಳೇ ಸಂಸ್ಕೃತಿ ಎಂದೆನ್ನಬಹುದು. ಈ ವಿಧಿ ವಿಧಾನಗಳ ಆಚರಣೆಗಾಗಿ ಪರಸ್ಪರ ಅರಿಕೆಗೆ ಕಾರಣವಾಗುವುದು ಹಾಗೂ ಅವುಗಳನ್ನು ಮುಂದಿನ ಪೀಳಿಗೆಗೆ ರೂಢಿಗತ ಮಾಡುವುದಕ್ಕೆ ನಾಂದಿಯಾಗುವುದಾಗಿದೆ. ಭಾಷೆ ಇವೇ ಸಂಸ್ಕೃತಿ ಹಾಗೂ ಭಾಷೆ ನಿರ್ಮಾಣವಾಗಲು ಮುಖ್ಯ ಕಾರಣಗಳು.

ಸಂಸ್ಕೃತಿ ಹಾಗೂ ಭಾಷೆಗಳ ಕೆಲವು ಸಾಮ್ಯ ಗುಣಗಳನ್ನು ಹಾಗೂ ಅವುಗಳ ಸಂಬಂಧವನ್ನು ಈ ಕೆಳಗಿನಂತೆ ಗುರುತಿಸಬಹುದು.

ಮನುಷ್ಯ ಪ್ರಾಣಿಪಕ್ಷಿಗಳಿಗಿಂತ ಭಿನ್ನವಾಗಿ ಮೇಲ್ಮಟ್ಟದಲ್ಲಿರಲು ಕಾರಣವಾದವುಗಳೇ ಭಾಷೆ ಹಾಗೂ ಸಂಸ್ಕೃತಿಗಳು. ಭಾಷಾವಿಜ್ಞಾನಿ Noam chomsky ಯವರು `The most stupid men learn how to taik while most brilliant monkeyas never learn, ಎಂದಿದ್ದಾರೆ. ಭಾಷೆ, ಮಾನವನಿಗೆ ಮಾತ್ರ ಮೀಸಲಾಗಿರುವ ಅಮೂಲ್ಯವರ. ಅದರಂತೆಯೇ ಸಂಸ್ಕೃತಿ ಕೂಡ ಮಾನವನಿಗಷ್ಟೇ ಮೀಸಲಾಗಿದೆ. ಮಾನವ ತನ್ನ ಆಸೆ ಆಕಾಂಕ್ಷೆಗಳನ್ನು ಪ್ರಾಣಿಗಳಂತೆ ಪೂರೈಸಿಕೊಳ್ಳದೇ ವ್ಯವಸ್ಥಿತವಾದ ವಿಧಿ ವಿಧಾನಗಳನ್ನು ಅನುಸರಿಸಿ ಸಮಾಜಕ್ಕೆ ಒಪ್ಪಿಗೆಯಾಗುವಂತೆ ನಡೆದು ಪೂರೈಸಿಕೊಳ್ಳುತ್ತಾನೆ. ಈ ವಿಧಿ ವಿಧಾನಗಳೇ ಸಂಸ್ಕೃತಿ. ಇವುಗಳನ್ನು ನಾವು ಪ್ರಾಣಿಗಳಲ್ಲಿ ಕಾಣುವುದಿಲ್ಲ. ಹಾಗಾಗಿ ಭಾಷೆ ಹಾಗೂ ಸಂಸ್ಕೃತಿಯಿಂದಾಗಿಯೇ ಮಾನವ ಉಳಿದ ಪ್ರಾಣಿಗಳಿಗಿಂತ ಶ್ರೇಷ್ಠನಾಗಿದ್ದಾನೆ.

ಭಾಷೆ ಹಾಗೂ ಸಂಸ್ಕೃತಿಗಳೆರಡೂ ಅನುವಂಶಿಕವಲ್ಲ. ಅವು ಕಲಿಕೆಯಿಂದ ಬಂದವುಗಳಾಗಿವೆ. ಮಗು ತಾಯಿಗರ್ಭದಿಂದ ಹೊರಬಂದಾಗ ಅದಕ್ಕೆ ಸಂಸ್ಕೃತಿಯಾಗಲೀ ಭಾಷೆಯಾಗಲೀ ಇರುವುದಿಲ್ಲ. ಮಗು ಪರಿಸರದಿಂದ ಮತ್ತು ತನ್ನ ಹಿರಿಯರನ್ನು ನೋಡಿ ಅನುಕರಿಸುವುದರ ಮೂಲಕ ಭಾಷೆ ಹಾಗೂ ಸಂಸ್ಕೃತಿಯನ್ನು ಪಡೆದುಕೊಳ್ಳುತ್ತದೆ. ವ್ಯಕ್ತಿ ಮೊದ ಮೊದಲು ತನ್ನ ಬಾಲ್ಯಾವಸ್ಥೆಯಲ್ಲಿ, ಸಮಾಜದ ಒಂದು ಭಾಗವೆಂದು ಪರಿಗಣಿಸಲ್ಪಡುವ ಕುಟುಂಬದ ಸದಸ್ಯನಾಗಿರುತ್ತಾನೆ. ಅಲ್ಲಿ ಅವನು ತನ್ನ ಸುತ್ತಮುತ್ತಲಿನ ಆಗುಹೋಗುಗಳನ್ನು ನಿರೀಕ್ಷಿಸುತ್ತಾ ಅನುಕರಿಸಲು ಪ್ರಾರಂಭಿಸುತ್ತಾನೆ. ಹಿರಿಯರಿಂದ ಆ ಬಗ್ಗೆ ತಿಳಿದುಕೊಳ್ಳುತ್ತಾನೆ. ಇಲ್ಲಿ ಅವನ ಶಬ್ದ ಭಂಡಾರ ಹಾಗೂ ಜ್ಞಾನ ಭಂಡಾರ ತೀರ ಪರಿಮಿತವಾಗಿರುತ್ತದೆ. ಆತನ ಮಾತಿನ ಹಾಗೂ ನಡವಳಿಕೆಯ ಜ್ಞಾನ ಸೀಮಿತವಾಗಿರುತ್ತದೆ. ಮುಂದೆ ನಿರ್ದಿಷ್ಟ ವಯಸ್ಸಿಗೆ ಬಂದಾಗ ಆತನ ಸದಸ್ಯತ್ವ ಸಮಾಜದ ಇನ್ನೊಂದು ಅಂಗವಾದ ಶಾಲೆಯಲ್ಲಿ ಬರುತ್ತದೆ. ಇಲ್ಲಿ ವ್ಯಕ್ತಿಯ ಪರಿಮಿತ ಜ್ಞಾನ ಹಂತ ಹಂತವಾಗಿ ವಿಶಾಲವಾಗುತ್ತಾ ವಿಭಿನ್ನ ಅಂಶಗಳನ್ನು ಒಳಗೊಳ್ಳುತ್ತಾ ಹೋಗುತ್ತದೆ. ಹಾಗೆಯೇ ಭಾಷಾ ರಚನೆಯ ಶಬ್ದ ಸಂಪತ್ತನ್ನು ಒಳಗೊಳ್ಳುತ್ತಾ ಹೋಗುತ್ತದೆ. ಭಾಷಾ ರಚನೆಗಳನ್ನು ಉಪಯೋಗಿಸುವ ಸಂದರ್ಭಗಳ ಜ್ಞಾನ ಅಂದರೆ ಸಂಸ್ಕೃತಿ ಬೆಳೆಯುತ್ತದೆ. ಕೆಲವು ಕಾಲಾನಂತರ ಅವನಿಗೆ ತನ್ನ ಮಾತಿನ ಮೇಲೆ ಅಂತೆಯೇ ತನ್ನ ನಡವಳಿಕೆಯ (ಸಂಸ್ಕೃತಿ) ಮೇಲೆ ಪ್ರಭುತ್ವ ಬರುತ್ತದೆ. ಹೀಗೆ ಅವನು ತನ್ನ ಪ್ರೌಢಾವಸ್ಥೆಯಲ್ಲಿ ಒಂದೇ ಸಮಯದಲ್ಲಿ ಅನೇಕ ಪರಿಸರಗಳಲ್ಲಿ ಸ್ಪಂದಿಸಲು ಸಮರ್ಥನಾಗುತ್ತಾನೆ.

ಸಂಸ್ಕೃತಿ ಹಾಗೂ ಭಾಷೆಗಳು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಸಾಗಿಸಲ್ಪಡುತ್ತವೆ. ನಮಗೆ ನಮ್ಮ ಭಾಷೆ ಸಂಸ್ಕೃತಿಗಳು ಕಲಿಕೆಯಿಂದ ಬಂದುವಾದರೂ ಅವು ಹಿರಿಯರು ನಮಗೆ ನೀಡಿದ ಬಳುವಳಿ ಎಂದು ಹೇಳಬಹುದು. ಕುಟುಂಬದಲ್ಲಿ ಹಿರಿಯರು ಮಕ್ಕಳ ಮಾತು ಮತ್ತು ನಡತೆಯನ್ನು ನಿರ್ದೇಶಿಸಿ ನಿಯಂತ್ರಿಸುತ್ತಾರಷ್ಟೇ. ಆ ಮೂಲಕವೇ ಅವರು ಭಾಷೆ ಮತ್ತು ಸಂಸ್ಕೃತಿಗಳನ್ನು ಮಕ್ಕಳಿಗೆ ರವಾನಿಸುತ್ತಾರೆ, ರಕ್ತಗತವಾಗುವಂತೆ ಮಾಡುತ್ತಾರೆ. ಆದ್ದರಿಂದ ಭಾಷೆ ಮತ್ತು ಸಂಸ್ಕೃತಿಗಳೆರಡೂ ಸಮೂಹ ನಿಷ್ಠ ಹಾಗೂ ಪರಂಪರಾನುಗತವಾದವುಗಳು.

ಬಾಷೆ ಹಾಗೂ ಸಂಸ್ಕೃತಿಗೆ ಭೌಗೋಳಿಕ ಪರಿಸರವೂ ಕಾರಣವಾಗಿದೆ. ಇವು ಆಯಾ ಪರಿಸರದಲ್ಲಿ ವ್ಯಕ್ತಿಗಳ ಅಗತ್ಯ ಪೂರೈಕೆಗೆ ತಕ್ಕಂತೆ ರೂಪಿತವಾಗಿರುತ್ತವೆ. ಉದಾಹರಣೆಗೆ ‘ಆಕಳು’ ಎಂಬ ಪ್ರಾಣಿ ನಮ್ಮ ಪರಿಸರದಲ್ಲಿ ಇರದಿದ್ದರೆ ಆ ಶಬ್ದ ಸೃಷ್ಟಿಯಾಗುತ್ತಿರಲಿಲ್ಲ ಅಥವಾ ಆ ಶಬ್ದವನ್ನು ಬೇರೆ ಪ್ರಾಣಿಗೋ ಪಕ್ಷಿಗೋ ಬಳಸಲಾಗುತ್ತಿತ್ತು. ನಮ್ಮ ಸಂಸ್ಕೃತಿಯಲ್ಲಿ ವಿಶಿಷ್ಠ ಸ್ಥಾನಗಳಿಸಿರುವ “ಗೋಪೂಜೆ” ಪಾಶ್ಚಿಮಾತ್ಯ ದೇಶಗಳಲ್ಲಿ ಇಲ್ಲ. ಮಂಜಿನ ತುಂಬ ಸೂಕ್ಷ್ಮ ವ್ಯತ್ಯಾಸಗಳನ್ನು ಸೂಚಿಸುವ ನಾಲ್ವತ್ತು ಬೇರೆ ಬೇರೆ ಪದಗಳು ಎಸ್ಕಿಮೊ ಜನಾಂಗದ ಭಾಷೆಯಲ್ಲಿವೆ. ಆದರೆ ನಮ್ಮಲ್ಲಿ ಅವು ಇಲ್ಲ. ಪರಿಸರವೇ ಇಲ್ಲದ ಮೇಲೆ ಅವುಗಳ ಸೃಷ್ಟಿಯಾದರೂ ಹೇಗಾದೀತು?

ಭಾಷೆ ಮತ್ತು ಸಂಸ್ಕೃತಿಗಳು ಕೇವಲ ಒಂದು ಕಾಲ ಅಥವಾ ಒಂದು ಪೀಳಿಗೆಯ ನಿರ್ಮಾಣವಲ್ಲ. ಅವೆರಡೂ ಕಾಲಾಂತರದಲ್ಲಿ ಆದ ಸಂಚಯದ ಒಟ್ಟು ರೂಪಗಳು. ಒಂದು ಜನಾಂಗ ಅಥವಾ ಸಮಾಜ ತನ್ನ ವೈಶಿಷ್ಟ್ಯಗಳನ್ನು, ಭಾಷೆಯದೇ ಇರಲಿ, ಸಂಸ್ಕೃತಿಯದೇ ಇರಲಿ ಅವುಗಳನ್ನು ರಕ್ಷಣೆ ಮಾಡಿಕೊಳ್ಳುತ್ತದೆ. ತನಗೆ ಸರಿ ಎನಿಸದಂಥವುಗಳನ್ನು ಬಿಟ್ಟು ಹೊಸ ಹೊಸ ಸಂಪ್ರದಾಯಗಳನ್ನು ಮಾಡಿಕೊಂಡು ತನ್ನ ಭಾಷೆ ಹಾಗೂ ಸಂಸ್ಕೃತಿಗಳನ್ನು ವೃದ್ಧಿಪಡಿಸುತ್ತದೆ. ಉದಾಹರಣೆಗೆ ಹಿಂದೂ ಸಂಸ್ಕೃತಿಯಲ್ಲಿ ಬೇರೂರಿದ್ದ ‘ಬಾಲ್ಯ ವಿವಾಹ’ ಪದ್ಧತಿ ಅಳಿದುದನ್ನು ನೋಡಬಹುದು. ಅನಿಷ್ಠ ರೂಢಿಗಳಾದ ‘ದೇವದಾಸಿ’ ಪದ್ಧತಿಗಳಂಥವು ಅಳಿದರೆ ಆ ಶಬ್ದಗಳೂ ಕೂಡ ಭಾಷೆಯಿಂದ ಕ್ರಮೇಣವಾಗಿ ಮಾಯವಾಗುತ್ತವೆ. ಹೀಗೆ ಒಂದು ಸಮಾಜ ತನಗೆ ಬೇಡವಾದಂಥ ಸಂಪ್ರದಾಯಗಳನ್ನು ತೆಗೆದುಹಾಕುತ್ತದೆ. ಅಂತೆಯೇ ತನ್ನ ಒಳಿತಿಗೆ ಅನುಕೂಲವಾಗುವಂಥ ನೀತಿ ನಡವಳಿಕೆಗಳನ್ನು ತಮ್ಮ ಜೀವನದಲ್ಲಿಯೂ ತತ್ ಪರಿಣಾಮವಾಗಿ ಭಾಷೆಯಲ್ಲಿಯೂ ನಿರ್ಮಿಸುತ್ತಾ ಹೋಗುತ್ತದೆ. ಇದರಿಂದ ಭಾಷೆ ಮತ್ತು ಸಂಸ್ಕೃತಿಗಳು ಕೇವಲ ಕೆಲಕಾಲದ ನಿರ್ಮಾಣಗಳಲ್ಲ, ಅವು ಸಹಸ್ರಾರು ವರುಷಗಳ ಜನ ಜೀವನದ ಪಡಿನೆಳಲು ಎಂದು ಹೇಳಬಹುದು.

ಕೊಡುಕೊಳ್ಳುವ ವ್ಯವಹಾರ ಭಾಷೆ ಅಂತೆಯೇ ಸಂಸ್ಕೃತಿಗೂ ಸಹಜ. ಒಂದು ಸಮಾಜಕ್ಕೆ ಇನ್ನೊಂದು ಸಮಾಜದ ಸಂಪರ್ಕ ಬಂದಾಗ ಭಾಷೆಯ ಅಂಶಗಳನ್ನಾಗಲೀ ಸಾಂಸ್ಕೃತಿಕ ಅಂಶಗಳನ್ನಾಗಲೀ ಕೊಡುವುದು ಪಡೆಯುವುದು ನಡೆಯುತ್ತದೆ. ಉದಾಹರಣೆಗೆ ನಮಗೆ ಇಂಗ್ಲೀಷರ ಸಂಪರ್ಕವಾದ ಮೇಲೆ ‘ಲೈಟು’, ‘ಲಾಟೀನು’, ‘ವಾಚು’, ‘ಪೆನ್ನು’ ಎಂಬ ಶಬ್ದಗಳು ಕನ್ನಡದಲ್ಲಿ ಬಂದವು. ಒಮ್ಮೊಮ್ಮೆ ಇಂಥ ಶಬ್ದಗಳ ಮೂಲಕ ನಮ್ಮ ಭಾಷೆಯಲ್ಲಿಲ್ಲದ ಧ್ವನಿ, ಧ್ವನಿಮಾಗಳು ಕೂಡ ನಮ್ಮವಾಗಬಹುದು. ಉದಾಹರಣೆಗೆ ಕಾಫಿ, ಲಾಯರು, ಲಾಟರಿ, ಬಝಾರು ಮುಂತಾದ ಶಬ್ದಗಳನ್ನೂ ನಮ್ಮ ಭಾಷೆ ಸ್ವೀಕರಿಸಿದಾಗ ಸಹಜವಾಗಿಯೇ ನಮ್ಮ ಧ್ವನಿಮಾ ಪಟ್ಟಿಯಲ್ಲಿ f, O, Z ಮುಂತಾದ ಧ್ವನಿಗಳು ಸೇರ್ಪಡೆಯಾದವು. Necktie ಕಟ್ಟುವುದನ್ನು ನಮ್ಮವರು ಇಂಗ್ಲೀಷರ ಮೂಲಕ ಕಲಿತು ಅದನ್ನು ನಮ್ಮ ಸಂಸ್ಕೃತಿಯಲ್ಲಿ ತಂದರು ಭಾಷಾಂತರ ಸ್ವೀಕರಣ ಮಾಡಿ ‘ಕೊರಳ ಪಟ್ಟಿ’ ಎಂದರು. ಹೀಗೆಯೇ ನಮ್ಮ ಸಂಸ್ಕೃತಿಯಲ್ಲಿ Radio, Aeroplane ಮುಂತಾದವುಗಳ ಸೇರ್ಪಡೆ ಆದಾಗ ಬಾನುಲಿ, ಆಕಾಶವಾಣಿ, ವಿಮಾನ ಮುಂತಾದ ಶಬ್ದಗಳು ನಿರ್ಮಾಣವಾದವು. ನಮ್ಮಲ್ಲಿ ಸೌಭಾಗ್ಯ ಪ್ರತೀಕವಾದ ಮಾಂಗಲ್ಯ ಪಾಶ್ಚಿಮಾತ್ಯರಲ್ಲಿ ಫ್ಯಾಷನ್‌ದ ಸಂಕೇತವಾಗಿ ‘ಮಣಿಸರ’ ವಾಗಿದೆ. ನಮ್ಮ ಸೀರೆ ಅಲ್ಲಿ ‘ಸಾರಿ’ ಆಗಿದೆ.

ಇಲ್ಲಿಯವರೆಗೆ ಭಾಷೆ ಮತ್ತು ಸಂಸ್ಕೃತಿಯ ಕೆಲವು ಸಾಮ್ಯ ಗುಣಗಳನ್ನೂ ಹಾಗೂ ಅವು ಪರಸ್ಪರ ಹೇಗೆ ಪೂರಕವಾಗಿರುತ್ತವೆ ಎಂಬುದನ್ನು ನೋಡಲಾಯಿತು. ಈಗ ಅವುಗಳು ನಿರ್ವಹಿಸುವ ಕಾರ್ಯದ ಮೂಲಕ ಅವು ಎಷ್ಟೊಂದು ಒಂದಕ್ಕೊಂದು ಅವಲಂಬಿತವಾಗಿವೆ ಎಂಬುದನ್ನು ಗಮನಿಸೋಣ. ಮಾನವ ಸಮುದಾಯದ ಸಹಜ ಗುಣಗಳಿಂದ ಪ್ರೇರಿತವಾದ ಎಲ್ಲ ಚಟುವಟಿಕೆಗಳನ್ನು ಭಾಷೆ ಒಳಗೊಳ್ಳುತ್ತದೆ. ಆದರೆ ಈ ಸಮುದಾಯದ ನಡುವೆ ಯಶಸ್ವಿ ಸಂಪರ್ಕ ಮಾಧ್ಯಮವಾದ ಭಾಷೆ ಇಲ್ಲದೇ ಹೋಗಿದ್ದರೆ ಅದರ ಚಟುವಟಿಕೆಗಳು ನಡೆಯಲು ಸಾಧ್ಯವಿರುತ್ತಿರಲಿಲ್ಲ. ಯಾಕೆಂದರೆ ಭಾಷೆಯೊಂದೇ ಎಂಥ ಸಂಕೀರ್ಣವಾದ ಕ್ಲಿಷ್ಟತಮವಾದ ವಿಷಯಗಳನ್ನೂ ಒಬ್ಬರಿಂದ ಇನ್ನೊಬ್ಬರಿಗೆ ಪ್ರವಹಿಸಬಲ್ಲುದು.

ಸಂಸ್ಕೃತಿ ವಾಹಕತೆಯ ಕಾರ್ಯ ನಡೆಯುವುದು ಭಾಷೆಯ ಮೂಲಕವೇ. ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಭಾಷೆ ಸಾಗಿಸಲ್ಪಡುವಾಗ ಸಹಜವಾಗಿ ಸಂಸ್ಕೃತಿಯೂ ಸಾಗಿಸಲ್ಪಡುತ್ತದೆ. ಯಾಕೆಂದರೆ ಸಂಸ್ಕೃತಿಯನ್ನು ಹೊತ್ತುಕೊಂಡೇ ಭಾಷೆ ಸಾಗುತ್ತದೆ.

ಭಾಷೆಯ ಮೇಲೆ ಸಂಸ್ಕೃತಿಯ ಹಿಡಿತವಿರುತ್ತದೆ. ಒಂದು ಸಮಾಜದ ಸಂಸ್ಕೃತಿಯಲ್ಲಿ ಬದಲಾವಣೆಯಾದರೆ ಆ ಸಮಾಜದ ಸದಸ್ಯರು ಆಡುವ ಭಾಷೆಯಲ್ಲಿ ಬೆಳವಣಿಗೆ ಆಗುತ್ತದೆ. ಅಂದರೆ ಒಂದು ಸಮಾಜದಲ್ಲಿಯ ಸಂಸ್ಕೃತಿಯಂತೆಯೇ ಅದರ ಭಾಷೆ ಇರುತ್ತದೆ.ಅಂದರೆ ಸಮಾಜದಲ್ಲಿಯ ಸಂಸ್ಕೃತಿಯಂತೆಯೇಅದರ ಭಾಷೆ ಇರುತ್ತದೆ. ಅಂದರೆ ಭಾಷೆ ಸಮಾಜದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದೆನ್ನಬಹುದು. ಉದಾಹರಣೆಗೆ ಒಂದು ಪ್ರಾಣಿ ಒಂದು ಸಂಸ್ಕೃತಿಯಲ್ಲಿ ಇಲ್ಲದಿದ್ದಾಗ ಅದರ ಚಿತ್ರವಾಗಲಿ, ಕಲ್ಪನೆಯಾಗಲಿ, ಹೆಸರಾಗಲಿ, ಆ ಭಾಷೆಯಲ್ಲಿ ಇರುವುದಿಲ್ಲ. ಒಂದು ವೇಳೆ ಆ ಪ್ರಾಣಿ ಸಂಸ್ಕೃತಿಯಲ್ಲಿ ಯಾವುದಾದರೂ ಕಾರಣದಿಂದ ಪ್ರವೇಶ ಮಾಡಿದರೆ ಅದಕ್ಕೆ ತಕ್ಕ ಶಬ್ದವನ್ನು ಅದು ಇದ್ದ ಸಮಾಜದ ಮೂಲ ಭಾಷೆಯಿಂದಲೋ ಅಥವಾ ಹೊಸ ರಚನೆಯಿಂದಲೋ ಪಡೆಯಬೇಕಾಗುತ್ತದೆ. ಹೀಗೆ ಸಂಸ್ಕೃತಿ ಭಾಷೆಯನ್ನು ನಿಯಂತ್ರಿಸುತ್ತದೆ. ಸಂಸ್ಕೃತಿ ಬೆಳೆದಂತೆಲ್ಲ ಭಾಷೆ ಬೆಳೆಯುತ್ತದೆ.

ಸಂಸ್ಕೃತಿಯ ಅಧ್ಯಯನಕ್ಕೆ ಭಾಷೆ ಅವಶ್ಯಕ. ಉದಾಹರಣೆಗೆ ಸಮಾಜ ಮತ್ತು ಸಂಸ್ಕೃತಿಗಳ ಅಧ್ಯಯನಕ್ಕೆ ಉಪಯೋಗಿಸಲಾಗಿರುವ ಅನೇಕ ವಿಷಯಗಳಲ್ಲಿ ನಾಮಗಳ (ಹೆಸರುಗಳ) ಅಧ್ಯಯನಕ್ಕೆ ಪ್ರಾಶಸ್ತ್ಯವಿದೆ. ಭಾಷಾವಿಜ್ಞಾನಿ ನಾಮಗಳ ಅಂದರೆ, ಸ್ಥಳನಾಮಗಳ ಹಾಗೂ ವ್ಯಕ್ತಿನಾಮಗಳ ಅಧ್ಯಯನ ಮಾಡಿ ಸಾಂಸ್ಕೃತಿಕ, ಸಾಮಾಜಿಕ ಅಂಶಗಳು ಎಷ್ಟರಮಟ್ಟಿಗೆ ಆ ಹೆಸರುಗಳಿಗೆ ಕಾರಣವಾಗಿವೆ ಎಂಬುದನ್ನು ಕಂಡುಹಿಡಿಯುತ್ತಾನೆ. ಸ್ಥಳನಾಮಗಳ ಅಧ್ಯಯನ ಸ್ಥಳಗಳಿಗೆ ಅಂದರೆ ಹಳ್ಳಿ, ಪಟ್ಟಣ, ಹೊಳೆ, ಗುಡ್ಡ ಮುಂತಾದವುಗಳಿಗೆ ಸಂಬಂಧಿಸಿರುವುದು. ಆ ಸ್ಥಳಗಳ ಹೆಸರು, ಅದಕ್ಕೆ ಕಾರಣಗಳೇನು ಎಂಬುದನ್ನು, ಇಲ್ಲಿ ವಿವೇಚಿಸಲಾಗುತ್ತದೆ. ಇಂಥ ಅಧ್ಯಯನದಿಂದ ಅಲ್ಲಿಯ ಸಂಸ್ಕೃತಿ, ಸಾಂಸ್ಕೃತಿಕ ರೀತಿನೀತಿಗಳಲ್ಲಿ ನಂಬಿಕೆ ಹಾಗೂ ಇತಿಹಾಸಗಳನ್ನು ಅರಿಯಬಹುದು. ವ್ಯಕ್ತಿನಾಮಗಳ ಅಭ್ಯಾಸದಿಂದ ಅವರ ವಯಸ್ಸು, ಲಿಂಗ, ಜಾತಿ, ಕೆಲಸ ಆದಾಯ, ಇಷ್ಟದೇವರು, ಮನೆತನ, ಮನೆತನದ ಹಿನ್ನೆಲೆ, ವಾಸಿಸುವ ಪ್ರದೇಶ, ಭಾವನೆಗಳು, ನಂಬಿಕೆಗಳು ಮುಂತಾದವುಗಳನ್ನು ಅಭ್ಯಸಿಸಿದಾಗ ಅವರ ಸಂಸ್ಕೃತಿ ತಾನೇ ತಾನಾಗಿ ಕಂಡುಬರುತ್ತದೆ.

ಯಾವುದೇ ಜನಾಂಗದ ಸಾಮಾಜಿಕ, ಸಾಂಸ್ಕೃತಿಕ ಅಂಶಗಳನ್ನರಿಯಲು ಸಂಶೋಧಕನಿಗೆ ಆ ಜನಾಂಗದ ಭಾಷೆಯ ಬಗೆಗೆ ಕೊಂಚ ಮಟ್ಟಿಗಾದರೂ ಗೊತ್ತಿರಬೇಕು. ಭಾಷೆಯ ಅಧ್ಯಯನದಿಂದ ಅದನ್ನಾಡುವ ಜನರ ಸಂಸ್ಕೃತಿ, ವಿಚಾರಧಾರೆ ಹಾಗೂ ಇತಿಹಾಸಗಳ ಪರಿಚಯವಾಗುತ್ತದೆ. ‘ಭಾಷೆ’ ಸಂಸ್ಕೃತಿಯ ಒಂದು ಭಾಗ ಮಾತ್ರವಲ್ಲ, ಅತಿಮುಖ್ಯವಾದ ಭಾಗವಾಗಿದೆ. ಭಾಷೆ ಮಾನವನ ಎಲ್ಲ ಸಾಂಸ್ಕೃತಿಕ ಚಟುವಟಿಕೆಗಳ ಬುನಾದಿಯಾಗಿದೆ. ಆಡುವ ನುಡಿ ಆಯಾ ಭಾಷೆಯನ್ನಾಡುವ ಜನರ ಸಂಸ್ಕೃತಿಯ, ನಾಗರಿಕತೆಯ ವಿಕಾಸವನ್ನು ಪ್ರತಿಬಿಂಬಿಸುತ್ತದೆ. ನಾಡು ನುಡಿಯುವುದೇ ನುಡಿಯ ಮೂಲಕ. ಆದ್ದರಿಂದ ಸಮಾಜದ ನಾಡಿ ನುಡಿಯಲ್ಲಿ ಮಿಡಿಯುತ್ತಿರುತ್ತದೆ. ಭಾಷೆ ಮತ್ತು ಸಂಸ್ಕೃತಿಗಳ ಈ ಅವಿನಾಭಾವ ಸಂಬಂಧವನ್ನು ಭಾಷಾವಿಜ್ಞಾನದಲ್ಲಿ ಮಾತ್ರವಲ್ಲ ಮಾನವಶಾಸ್ತ್ರದಲ್ಲಿಯೂ ಅಭ್ಯಸಿಸಲಾಗುತ್ತದೆ.

II

ಈ ಹಿನ್ನೆಲೆಯಲ್ಲಿ ಶಂಬಾ ಅವರ ಭಾಷೆ ಮತ್ತು ಸಂಸ್ಕೃತಿ ಕುರಿತು ಚಿಂತನೆಯ ನೆಲೆಗಳನ್ನು ಗುರುತಿಸಬಹುದು. ಶಂಬಾ ಅವರು ಒಟ್ಟು ಹತ್ತು – ಹನ್ನೆರಡು ಪುಸ್ತಕಗಳನ್ನು ಬರೆದಿದ್ದರೂ ಬರೆದದ್ದು ಒಂದೇ ಗ್ರಂಥವೆಂದು ಹೇಳಬಹುದು. ಈ ಗ್ರಂಥದ ವಸ್ತುವೆಂದರೆ ಕಣ್ಮರೆಯಾದ ಕನ್ನಡವನ್ನು ಹುಡುಕಿ ತೆಗೆಯುವುದು, ಇಂದಿನ ತಿಳಿವಳಿಕೆಯ ಹಿನ್ನೆಲೆಗಿರುವ ಇತಿಹಾಸವನ್ನು ಪುನಃ ಸೃಷ್ಟಿಸುವುದು. ಈ ವಸ್ತುವಿನ ಬಗ್ಗೆ ನಿರಂತರವಾಗಿ ನಡೆಸಿದ್ದ ಚಿಂತನೆ ಅವರ ಗ್ರಂಥಗಳಲ್ಲಿ ಹಂಚಿಹೋಗಿದೆ. ಕನ್ನಡ ಭಾಷೆ ತನ್ನ ಮೂಲ ಭಾಷೆ ಕಂದಮಿಳುಯಿಂದ ಬಿಡುಗಡೆ ಪಡೆದದ್ದು ಯಾವ ಕಾಲದಲ್ಲಿ ಎಂಬ ಐತಿಹಾಸಿಕ ಪ್ರಶ್ನೆಯನ್ನೆತ್ತಿಕೊಂಡು, ಆ ಭಾಷೆಯ ಭೌಗೋಳಿಕ ಕ್ಷೇತ್ರದ ವಿಸ್ತಾರ ಮತ್ತು ಸಂಕೋಚಗಳನ್ನು ಇತಿಹಾಸದ ಕ್ರಮದಲ್ಲಿ ಗುರುತಿಸುತ್ತ, ಉಳಿದ ಭಾಷೆಗಳ ಜೊತೆಗೆ ಅದರ ಸಂಬಂಧವನ್ನು ನಿರ್ಣಯಿಸುತ್ತ, ಸಾವಿರಾರು ವರ್ಷಗಳ ಅವಧಿಯಲ್ಲಿಯ ಸಾಂಸ್ಕೃತಿಕ ಚಿಂತನೆಯ ಬೇರೆ ಬೇರೆ ಧಾರೆಗಳನ್ನು ಅವರು ಗುರುತಿಸಲು ಪ್ರಯತ್ನ ಮಾಡಿದ್ದಾರೆ. ಇಂಥ ಒಂದು ಸಾಂಸ್ಕೃತಿಕ ಸಾಹಸದ ಸಿದ್ಧಿಗಾಗಿ ಅವರು ತಮ್ಮದೇ ಆದ ಭಾಷಾಶಾಸ್ತ್ರ, ಮಾನವಶಾಸ್ತ್ರ, ಮತ್ತು ದೈವತಶಾಸ್ತ್ರಗಳನ್ನು ಕಟ್ಟಿಕೊಂಡರು.

ರಾಷ್ಟ್ರಕೂಟರ ಕಾಲಕ್ಕೆ ಕಾವೇರಿಯಿಂದ ಗೋದಾವರಿಯವರೆಗೆ ಕನ್ನಡ ಜನಪದದ ಸೀಮಾರೇಖೆಗಳಿದ್ದದ್ದು ನಿಜವಾದರೆ ಅದಕ್ಕೆ ಮೊದಲು ಅದರ ವಿಸ್ತಾರ ಹೇಗಿತ್ತು ಮತ್ತು ಅಲ್ಲಿಂದೀಚೆಗೆ ಈ ಕ್ಷೇತ್ರದ ಸ್ಥಿತ್ಯಂತರಗಳಿಗೆ ಕಾರಣಗಳೇನಿರಬಹುದು ಎಂಬುದನ್ನು ಜೋಶಿಯವರು ಕಂಡುಹಿಡಿದಿದ್ದಾರೆ. ಭಾಷೆಯೊಳಗಿನ ನುಡಿಗಟ್ಟುಗಳು, ಶಬ್ದಾರ್ಥಗಳ ಇತಿಹಾಸ, ಸ್ಥಳನಾಮಗಳು, ಮಾನವ ಸಂಬಂಧಗಳ ರೂಪಗಳು ಹೀಗೆ ಅನೇಕ ಪುರಾವೆಗಳ ಬಲದಿಂದ ಅವರ ಇತಿಹಾಸದ ನಿರ್ವಚನ ನಡೆಯುತ್ತದೆ.

ಶಂಬಾ ಅವರದು ಸಂಶೋಧನೆಯ ಕಠಿಣ ಮಾರ್ಗ. ಮೊದಮೊದಲಿಗೆ ಭಾಷಾಶಾಸ್ತ್ರದ ಬೆನ್ನು ಹತ್ತಿ ಅದರಲ್ಲಿ ಪ್ರಗಲ್ಭವಾದ ಪಾಂಡಿತ್ಯವನ್ನು ಸಂಪಾದಿಸಿದರು. ಕರ್ನಾಟಕ ಮತ್ತು ಮಹಾರಾಷ್ಟ್ರಗಳ ಸ್ಥಳನಾಮಗಳ ಹಿಂದೆ ಇರುವ ಎರಡು ಭಾಷೆಗಳಿಗೂ ಸಾಮಾನ್ಯವಾಗಿರುವ ಇತಿಹಾಸವನ್ನು ಶೋಧಿಸಿ ತೆಗೆದರು. ಈ ದಿಕ್ಕಿನಲ್ಲಿ ಮಾಡಿದ ಅವರ ಪ್ರಯತ್ನಗಳಲ್ಲಿ ಅವರು ಮರಾಠಿಯಲ್ಲಿ ಬರೆದಿರುವ ಮತ್ತು ಇದೀಗ ಕನ್ನಡದಲ್ಲಿ ಅನುವಾದಗೊಂಡಿರುವ ‘ಮರಾಠಿ ಸಂಸ್ಕೃತಿ’ ಅವರ ಉತ್ಕೃಷ್ಟ ಸಿದ್ಧಿಯಾಗಿದೆ. ಒಂದೇ ಸಂಸ್ಕೃತಿ ಈ ಎರಡು ಭಾಷೆಗಳಿಂದ ವಿಭಕ್ತವಾಗಿದ್ದು ಅವುಗಳ ಹಿಂದಿನ ಅವಿಭಕ್ತ ತತ್ವವನ್ನು ಅವರು ಹುಡುಕಿ ತೆಗೆದಿದ್ದಾರೆ. ಭಾಷೆ, ಕೌಟುಂಬಿಕ ಸಂಬಂಧಗಳು, ಧಾರ್ಮಿಕ ನಂಬಿಕೆಗಳು ಮತ್ತು ನಂಬಿಕೊಂಡಿರುವ ದೈವ ದೇವತೆಗಳ ವಿವರವಾದ ಮತ್ತು ಆಳವಾದ ಅಭ್ಯಾಸದಿಂದ ಅವರು ಹೊರತಂದಿರುವ ಸತ್ಯಮೌಲಿಕವಾಗಿದೆಯಲ್ಲದೆ ಬೆಲೆಯುಳ್ಳದ್ದು ಆಗಿದೆ. ಅದಕ್ಕಿಂತ ಹೆಚ್ಚು ಮಹತ್ವದಾಗಿರುವದು ಈ ಗ್ರಂಥದಲ್ಲಿ ಅವರು ಉಪಯೋಗಿಸುವ ಶಾಸ್ತ್ರ ವಿಧಾನ. ಪಾಶ್ಚಾತ್ಯ ವಿದ್ವಾಂಸದಿಂದ ಕಡ ತೆಗೆದುಕೊಂಡ ಶಾಸ್ತ್ರ ವಿಧಾನಗಳನ್ನು ನಮ್ಮ ಶಾಸ್ತ್ರಕಾರರು ಬಳಸುತ್ತಿರುವಾಗ ಶಂಬಾ ತಮಗೆ ಅನುಕೂಲವಾದ ವಿಧಾನವನ್ನು ತಾವೇ ಹುಡುಕಿ ತೆಗೆದರು. ಆದರೆ ಈ ಶಾಸ್ತ್ರದಲ್ಲಿ ಕೂಡ ಅವರ ಅಂತರ್‌ದೃಷ್ಟಿಗೆ ಹೊಳೆದದ್ದು ಅವರ ಪ್ರಯತ್ನದಿಂದ ಸಿಕ್ಕಿದ್ದಕ್ಕಿಂತ ಹೆಚ್ಚು ಬೆಲೆಯುಳ್ಳದ್ದಾಗಿದೆ. ಕನ್ನಡ ಮತ್ತು ಮರಾಠಿ ಭಾಷೆಗಳ ಗಾಢವಾದ ಸಂಬಂಧವನ್ನು ವಿವೇಚಿಸುವಾಗ ಕನ್ನಡದ ಕ್ರಿಯಾಪದಗಳು ಮರಾಠಿಯಲ್ಲಿ ಹೋಗಿರುವುದನ್ನು ಅವರು ಗುರುತಿಸಿದ್ದಾರೆ. ನಾಮಪದಗಳನ್ನು ಮತ್ತು ವಿಶೇಷಣಗಳನ್ನು ಬೇರೆ ಭಾಷೆಗಳಿಂದ ಕಡವಾಗಿ ತರಬಹುದೇ ಹೊರತು ಕ್ರಿಯಾಪದಗಳನ್ನಲ್ಲ ಹಾಗೆ ತಂದುಕೊಂಡದ್ದೇ ಆದರೆ ಈ ಭಾಷೆಗಳು ತೀರ ಹತ್ತಿರವಾಗಿರಬೇಕು ಎಂಬ ಅವರ ನಿರ್ಣಯ ಬಹಳ ಮಹತ್ವದ್ದಾಗಿದೆ.

‘ಕರ್ನಾಟಕ ಸಂಸ್ಕೃತಿಯ ಪೂರ್ವಪೀಠಿಕೆ’ ಯ ನಂತರ ಶಂಬಾ ಅವರು ನಮ್ಮ ಪೌರಾಣಿಕ ಸಂಕೇತಗಳ ಅರ್ಥಘಟಕಕ್ಕೆ ಗಂಟುಬಿದ್ದರು. ಭಾಷಾಶಾಸ್ತ್ರದಲ್ಲಿ ಅವರು ಮಾಡಿದ್ದ ಪರಿಶ್ರಮವೆಲ್ಲ ಇಲ್ಲಿ ಉಪಯೋಗಕ್ಕೆ ಬಂದ ಹಾಗಾಯಿತು. ನಮ್ಮ ಅನೇಕ ದೇವತೆಗಳ ಆಕಾರಗಳೇ ಒಂದು ಭಾಷೆಯಾಗಿ ಅವರನ್ನು ಕಾಡಿತು. ಇದೇ ಸಂದರ್ಭದಲ್ಲಿ ಅವರು ಸೂರ್ಯನ ಒಡಲಲ್ಲಿ ಹುದುಗಿರುವ ಕಪ್ಪು ಹಾವನ್ನು ಕಂಡರು. ‘ಆಪರಸ’ಕ್ಕೂ ಕತ್ತಲೆಗೂ ಇರುವ ಗಾಢವಾದ ಸಂಬಂಧವನ್ನು ಹುಡುಕಿ ತೆಗೆದರು. ರುದ್ರ, ಇಂದ್ರ, ವಿಷ್ಣು, ಅದಿತಿ, ಎಲ್ಲಮ್ಮ, ದತ್ತಾತ್ರೇಯ ಮೊದಲಾದ ದೇವ ದೇವಿಯರ ಹಣೆಬರಹದ ಇತಿಹಾಸವನ್ನು ಪುನಃ ಸೃಷ್ಟಿಸಿದರು. ಈ ಪ್ರಯತ್ನದಲ್ಲಿ ಶಂಬಾ ಅವರ ಪ್ರಜ್ಞಾಪೂರ್ವಕ ಚಿಂತನದ ಹಟ ಸತ್ಯದ ಆಕಸ್ಮಿಕ ದರ್ಶನಕ್ಕೆ ಕೂಡ ಮಣಿಯುವಂತಿರಲಿಲ್ಲ. ಆದರೆ ನಮ್ಮ ಪೌರಾಣಿಕ ಪ್ರತಿಮೆಗಳಿಗೂ ನಮ್ಮ ವರ್ತಮಾನದ ಸಾಮಾಜಿಕ ರಚನೆ ಮತ್ತು ಸಮಸ್ಯೆಗಳಿಗೂ ಇರುವ ಸಂಬಂಧವನ್ನು ಕುರಿತು ಆಲೋಚಿಸುವುದರಲ್ಲಿ ತಪ್ಪಿಲ್ಲ ಎಂದು ತಿಳಿದರೂ ಸಾಕು, ಶಂಬಾ ಅವರ ಸಂಶೋಧನದ ಪ್ರಯತ್ನ ಸಾರ್ಥಕವಾಗುತ್ತದೆ. ಈ ದಿಕ್ಕಿನಲ್ಲಿ ಇನ್ನೂ ಆಗಬೇಕಾದ ಕೆಲಸ ಗುಡ್ಡದಷ್ಟಿದೆ. ಅಭ್ಯಾಸಕ್ಕಾಗಿ ಹೊಸ ಉಪಕರಣಗಳನ್ನು, ಶಾಸ್ತ್ರ ವಿಧಾನಗಳನ್ನು ನಾವು ಹುಡುಕಿ ತೆಗೆಯಬೇಕಾಗಿದೆ. ಈ ಎಲ್ಲ ಕಾರ್ಯಕ್ಷೇತ್ರದ ವ್ಯಾಪ್ತಿ ಮತ್ತು ಪರಿಣಿತಿಗಳು ನಮ್ಮ ಕಣ್ಣಿಗೆ ಕಾಣುವಂತೆ ಗೆರೆಕೊರೆದು ತೋರಿಸಿದ್ದಕ್ಕಾಗಿ ಹೊಸದಾಗಿ ಅಭ್ಯಾಸ ಮಾಡುವವರೆಲ್ಲ ಶಂಬಾ ಅವರಿಗೆ ಕೃತಜ್ಞರಾಗಿರಬೇಕಾಗಿದೆ. ಅಲ್ಲಿಯವರೆಗೂ ನಾವು ಶಂಬಾ ಅವರು ದೊರಕಿದ ಇತಿಹಾಸದ ಪರಿಪ್ರೇಕ್ಷ್ಯದಲ್ಲಿಯೇ ಕೆಲಸ ಮಾಡಬೇಕಾಗುತ್ತದೆ. ಸೂರ್ಯನ ವಾರ್ಷಿಕ ಗತಿಯಲ್ಲಿ ತಿಂಗಳು ತಿಂಗಳು ತಪ್ಪದೇ ನಡೆಯುವ ಸೂರ್ಯ ಸಂಕ್ರಮಣದಲ್ಲಿ ಮನುಷ್ಯನ ಇತಿಹಾಸದ ಪ್ರಾರಂಭ ಬಿಂದುವನ್ನು ಗುರುತಿಸಿ ನಾಗರಿಕತೆಗಳ ಪ್ರಾದುರ್ಭಾವ ಮತ್ತು ಪತನಗಳ ಇತಿಹಾಸವನ್ನು ನಿರ್ಮಿಸಿಕೊಳ್ಳಬೇಕಾಗಿದೆ. ಇಂತಹ ದೊಡ್ಡದಾದ ಸಾಂಸ್ಕೃತಿಕ ಪ್ರಯತ್ನಕ್ಕೆ ಶಂಬಾ ಅವರು ಶ್ರೀಕಾರ ಹಾಕಿರುವುದು ಹೆಮ್ಮೆಯ ಮಾತಾಗಿದೆ.

III

ಜೋಶಿಯವರ ಈ ಭಾಷೆ – ಸಂಸ್ಕೃತಿ ನಿರೂಪಣೆಯಲ್ಲಿ ಕೆಲವು ಬೆರಗುಗೊಳಿಸುವಂಥ ಒಳನೋಟಗಳಿವೆ. ಕರ್ನಾಟಕ ಮತ್ತು ಮಹಾರಾಷ್ಟ್ರಗಳಿಗೆ ಸಾಮಾನ್ಯವಾಗಿರುವ ಸೋದರ ಮಾವನ ಮಗಳ ಜೊತೆಗೆ ಮದುವೆ ಮಾಡಿಕೊಳ್ಳುವ ಪದ್ಧತಿಯ ಬಗ್ಗೆ ಬರೆಯುವಾಗ ಇಂಥ ಒಳನೋಟಗಳ ಮೂಲಕವೇ ಅವರು ಸತ್ಯಸಂಗತಿಯನ್ನು ಹೊರಗೆಡವಿದ್ದಾರೆ. ಮುಖ್ಯವಾಗಿ ಭಾಷೆಗೂ ಮತ್ತು ಮನುಷ್ಯ ಸಂಬಂಧಗಳಿಗೂ ಇರುವ ಸಮಾನತೆಯನ್ನು ಅವರು ಅರಿತುಕೊಂಡದ್ದು ಬಹಳ ಮಹತ್ವದ್ದಾಗಿದೆ. Claude Levi – Strauss ನಂಥ ವಿಖ್ಯಾತ ವಂಶಶಾಸ್ತ್ರಜ್ಞ ತನ್ನ Structure of Kinship ಎಂಬ ಪುಸ್ತಕದಲ್ಲಿ ಇದೇ ಜಾಡನ್ನು ಅನುಸರಿಸುತ್ತಾನೆ. ಭಾಷೆಯಂತೆ ಸಾಮಾಜಿಕ ಸಂಬಂಧಗಳು ವಿನಿಮಯದ ಸಾಧನವಾಗಿವೆ. ಭಾಷೆ, ಸಾಮಾಜಿಕ ಸಂಬಂಧಗಳು ಮತ್ತು ಆರ್ಥಿಕ ವ್ಯವಹಾರ ಇವು ಮೂರನ್ನೂ ಒಟ್ಟಿನಲ್ಲಿ ಅಭ್ಯಾಸ ಮಾಡದಿದ್ದರೆ ಒಂದು ಸಂಸ್ಕೃತಿಯ ಅಭ್ಯಾಸ ಪೂರ್ಣವಾಗುವುದಿಲ್ಲ. ‘ಮಾವ’ ಅಥವಾ ‘ಮಾಮ’ ಎಂಬ ಅಚ್ಚ ದ್ರಾವಿಡಶಬ್ದ ಇವು ಭಾರತದ ಎಲ್ಲ ಭಾಷೆಗಳಲ್ಲಿಯೂ ಹೊಕ್ಕಿರುವದು ಆಕಸ್ಮಿಕವಾದ ಸಂಗತಿಯೇನಲ್ಲ.

ಮಹಾರಾಷ್ಟೀ ಪ್ರಾಕೃತವನ್ನು ಪೋಷಿಸಿ ಬೆಳೆಸಿದ ಕರ್ಣಾಟಕವು ಕ್ರಮೇಣ ಅದರಿಂದ ದೂರವಾಗಿರುವ ಇತಿಹಾಸವನ್ನು ಜೋಶಿಯವರು ಪುನಃಸೃಷ್ಟಿಸಿದ್ದಾರೆ. ಎರಡು ಭಾಷೆಗಳ ಮತ್ತು ಎರಡು ಸಂಸ್ಕೃತಿಗಳ ನಡುವಿನ ಕೊಡುಕೊಳೆ ನಿರಂತರವಾಗಿ ನಡೆಯತಕ್ಕುದೇ. ಆದರೆ ಮರಾಠಿ ಭಾಷೆ ಕೇವಲ ನಾಮಪದ, ವಿಶೇಷಣಗಳಷ್ಟನ್ನೇ ಅಲ್ಲದೆ ಆಖ್ಯಾತಗಳನ್ನೂ ಕನ್ನಡದಿಂದ ಎರವಲು ಪಡೆದಿರುವದನ್ನು ಜೋಶಿಯವರು ಉಲ್ಲೇಖಿಸಿ ಈ ಅಪರೂಪದ ಕೊಡುಕೊಳೆಯ ಹಿಂದೆ ಇರುವ ಅತ್ಯಂಕ ನಿಕಟವಾದ ಸಾಂಸ್ಕೃತಿಕ ಸಂಬಂಧವನ್ನು ಬಯಲಿಗೆ ತಂದಿದ್ದಾರೆ. ತೀರ ಆಳವಾದ ಅಭ್ಯಾಸದಿಂದ ಶಾಸ್ತ್ರ ಹುಟ್ಟಿಕೊಳ್ಳುವ ಕ್ರಮಕ್ಕೆ ಇದೊಂದು ಉತ್ಕೃಷ್ಟವಾದ ಉದಾಹರಣೆಯಾಗಿದೆ. ದ್ವೈಭಾಷಿಕತೆಯ ಅನುಕೂಲತೆಗಳನ್ನಲ್ಲದೆ ಅದರ ಸಮಸ್ಯೆಗಳನ್ನು ಕುರಿತು ಕೂಡ ಅವರ ಬರಹಗಳಲ್ಲಿ ಬಹಳ ಉಪಯುಕ್ತವಾದ ಚರ್ಚೆಯಿದೆ. ವೇದಕಾಲದಿಂದ ಪ್ರಾರಂಭಿಸಿ ಇಂದಿನವರೆಗೆ ನಮ್ಮ ದೇಶಧ ಭಾಷೆಗಳು ಸಂಸ್ಕೃತ, ಅರಬೀ ಮತ್ತು ಇಂಗ್ಲೀಷ್‌ದಂಥ ಭಾಷೆಗಳ ಪ್ರಭಾವಕ್ಕೆ ಈಡಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಿದೆ. ಈ ಸಂಪರ್ಕದಿಂದ ಭಾಷೆ ಭಾಷೆಗಳಲ್ಲಿ ತರ – ತಮಭಾವಗಳೂ ಹುಟ್ಟಿಕೊಂಡಿವೆ. ಭಾಷೆಗಳು ಎಷ್ಟೇ ಭಿನ್ನವಾಗಿದ್ದರೂ ಅವುಗಳನ್ನು ಒಂದು ಭಾಷೆ ಶ್ರೇಷ್ಠ ಮತ್ತೊಂದು ಕನಿಷ್ಠ, ಒಂದು ಮುಂದುವರಿದದ್ದು ಇನ್ನೊಂದು ಹಿಂದುಳಿದದ್ದು ಎನ್ನುವ ವರ್ಗೀಕರಣ ಶಾಸ್ತ್ರೀಯವಲ್ಲ ಎಂಬ ಸತ್ಯ ನಮಗಿನ್ನೂ ತಿಳಿಯಬೇಕಾಗಿದೆ. ಶ್ರೇಷ್ಠ ಮತ್ತು ಕನಿಷ್ಠ ಭಾವನೆಗಳು ಹುಟ್ಟುವದು ರಾಜಕೀಯ ಕಾರಣಗಳಿಗಾಗಿ. ಅದೇನೇ ಇದ್ದರೂ ಜೋಶಿಯವರು ಭಾಷೆಗಳ ಆಳವಾದ ಅಭ್ಯಾಸದ ಮೂಲಕವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರಗಳ ಸಾಂಸ್ಕೃತಿಕ ಸಂಬಂಧದ ಎಲ್ಲ ಪದರುಗಳನ್ನು ಸಮರ್ಥವಾಗಿ ಬಿಚ್ಚಿತೋರಿಸಿದ್ದು ಬಹಳ ಮಹತ್ವದ ಮಾತಾಗಿದೆ.

ಭಾಷೆಯಂತೆಯೇ ಈ ಎರಡು ಪ್ರದೇಶಗಳಲ್ಲಿ ರೂಢವಾಗಿರುವ ದೇವತೆಗಳು ಮತ್ತು ಧರ್ಮಪಂಥಗಳ ಬಗ್ಗೆ ಜೋಶಿಯವರು ವಿಸ್ತಾರವಾಗಿಯೇ ಬರೆದಿದ್ದಾರೆ. ಸಾಮಾಜಿಕ ಸಂಬಂಧಗಳನ್ನು ಅಭ್ಯಾಸ ಮಾಡುವವರು ಹೆಚ್ಚಾಗಿ ಈ ವಿಷಯಗಳಲ್ಲಿ ತಲೆಹಾಕುವುದಿಲ್ಲ. ನಮ್ಮ ಇತಿಹಾಸಕಾರರಿಗೆ ಪುರಾಣ ಮತ್ತು ಕಾವ್ಯಗಳು ವರ್ಜ್ಯವಾಗಿರುವಂತೆ ಸಮಾಜಶಾಸ್ತ್ರಜ್ಞರಿಗೆ ಧರ್ಮ ಮತ್ತು ದೈವತಶಾಸ್ತ್ರಗಳು ವರ್ಜ್ಯವಾಗುತ್ತವೆ. ಆದರೆ ಧಾರ್ಮಿಕತೆ ನಮ್ಮ ಸಮಾಜ ರಚನೆಯ ಬಹಳ ಮಹತ್ವದ ತತ್ತ್ವವಾಗಿರುವದನ್ನು ಮರೆತರೆ ಅಭ್ಯಾಸದಲ್ಲಿ ಕೊರತೆಯುಂಟಾಗುತ್ತದೆ. ಸಂಸ್ಕೃತಿಯೆಂದರೆ ಧರ್ಮವಲ್ಲ ಎನ್ನುವದೇನೋ ನಿಜ. ಅದಕ್ಕಾಗಿ ಅವೆರಡರ ನಡುವೆ ವಿರೋಧವನ್ನು ಹುಟ್ಟಿಸಿ ಒಂದಕ್ಕಿಂತ ಇನ್ನೊಂದು ಶ್ರೇಷ್ಠ ಎಂಬಂತೆ ಮಾತಾಡಿದರೆ ಅವಿವೇಕದ ಮಾತಾಗುತ್ತದೆ. ಸತ್ಯದರ್ಶನಕ್ಕಾಗಿ ಮನುಷ್ಯ ನಿರ್ಮಿಸಿಕೊಂಡಿರುವ ಹಲವಾರು ಸಾಧನಗಳಲ್ಲಿ ಧರ್ಮ ಬಹಳ ಮಹತ್ತ್ವದ್ದಾಗಿದೆ ಮತ್ತು ಈ ಎಲ್ಲ ಮನುಷ್ಯ ಪ್ರಯತ್ನಗಳಿಗೆ ನಾವು ಸಾಂಸ್ಕೃತಿಕ ವ್ಯಾಪಾರವೆಂದು ಕರೆಯಬೇಕಾಗುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಜೋಶಿಯವರು ಧರ್ಮಪಂಥಗಳು ಮತ್ತು ದೇವತೆಗಳನ್ನು ಕುರಿತು ಚರ್ಚಿಸಿದ್ದು ಪ್ರಸ್ತುತವಾಗಿದೆಯೆಂದೇ ಹೇಳಬೇಕು.

ದೇವತೆಗಳ ಮತ್ತು ಧರ್ಮಪಂಥಗಳ ಚರ್ಚೆ, ಈ ಗ್ರಂಥದ ಉದ್ದೇಶದ ಮಟ್ಟಿಗೆ ಹೇಳುವುದಾದರೆ ಸಾಕಷ್ಟು ಉಪಯುಕ್ತವಾಗಿದೆ. ಕಾರ್ನಾಟಕ ಮತ್ತು ಮಹಾರಾಷ್ಟ್ರಗಳ ಸೋದರ ಸಂಬಂಧ ದೇವತೆಗಳ ಇತಿಹಾಸದಲ್ಲಿ ಮತ್ತು ಧರ್ಮಪಂಥಗಳ ಬೆಳವಣಿಗೆಗೆ ಬಂದ ತಿರುವಿನಲ್ಲಿ ಪ್ರತಿಬಿಂಬಿತವಾಗಿದೆ. ಮಲ್ಲಾರಿಯಂಥ ದೇವತಾಪ್ರತಿಮೆಯಲ್ಲಿ ಹಲವಾರು ದೇವತೆಗಳು ಸಂಯೋಜನೆಗೊಂಡು ಮುಂದೆ ಅದೇ ಸಂಯುಕ್ತ ದೇವತೆ ಮಲ್ಲಯ್ಯ ಮತ್ತು ಖಂಡೋಬನೆಂದು ವಿಭಕ್ತವಾದದ್ದರ ಇತಿಹಾಸ ಈ ಎರಡು ಪ್ರದೇಶಗಳ ಸಾಂಸ್ಕೃತಿಕ ಇತಿಹಾಸದ ಪ್ರತಿಮೆಯಾಗಿ ಉದ್ಬೋಧಕವಾಗಿದೆ. ಅಷ್ಟೇ ಉದ್ಭೋಧಕವಾಗಿರುವದು ‘ಕಾನಡಾ ವಿಠ್ಠಲ’ನ ವಿಲಕ್ಷಣವಾದ ಆಗುಹೋಗಿನ ಕಥೆ. ಈ ದೇವತೆಗಳ ಬಗ್ಗೆ ಜನಸಾಮಾನ್ಯರಲ್ಲಿರುವ ಭಕ್ತಿ ಪ್ರಾದೇಶಿಕ ಗಡಿಗಳನ್ನು ಮೀರಿ ಬಿಳೆದು ಬಂದಿರುವದರಿಂದ ಈ ಎರಡು ಪ್ರದೇಶಗಳ ನಿಕಟವಾದ ಸಂಬಂಧವನ್ನು ಈ ದೇವತೆಗಳು ಇನ್ನಷ್ಟು ದೃಢವಾಗಿಸುತ್ತವೆಂಬ ಮಾತು ಒಪ್ಪತಕ್ಕದ್ದಾಗಿದೆ. ೧೩ನೆಯ ಶತಮಾನದವರೆಗೆ ಕರ್ನಾಟಕದಿಂದ ಪೋಷಿತವಾದ ಮಹಾರಾಷ್ಟ್ರ ಮುಂದಿನ ಶತಕಗಳಲ್ಲಿ ತನ್ನ ಸಾಂಸ್ಕೃತಿಕ ಋಣವನ್ನು ತೀರಿಸಬೇಕಾಗಿದೆ.

ಶಂಭಾ ಅವರು ಜಾತಿ – ಬುಡಕಟ್ಟುಗಳು, ಭಾಷಿಕ ಆಕೃತಿಗಳು ಇಂಥದೇ ಸಾಮಗ್ರಿಯನ್ನು ಉಪಯೋಗಿಸಿಕೊಂಡು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ‘ಕರ್ನಾಟಕ ಸಂಸ್ಕೃತಿಯ ಪೂರ್ವಪೀಠಿಕೆ’, ‘ಕನಂಡದ ನೆಲೆ’ ಮೊದಲಾದ ಗ್ರಂಥಗಳಲ್ಲಿ ಪೌರಾಣಿಕ ಪ್ರತಿಮೆಗಳನ್ನು ವಿಶ್ಲೇಷಿಸಿ ಕೆಲವು ನಿರ್ಣಯಗಳಿಗೆ ಬಂದುಮುಟ್ಟಿದ್ದಾರೆ. ಪುರಾಣಗಳನ್ನು ಅರ್ಥವಿಸುವ ರೀತಿಯನ್ನು ಅಲ್ಲಿ ಕಂಡುಹಿಡಿದಿದ್ದಾರೆ. ಆದರೆ ಅದೇ ಕಾರಣಕ್ಕಾಗಿ ಮುಂದಿನ ಗ್ರಂಥಗಳಲ್ಲಿ ಕಂಡುಬರುವ ಕೆಲವು ಭಾಷಿಕ ಸಮಸ್ಯೆಗಳನ್ನು ಅವರು ಎತ್ತುತ್ತಾರೆ. ಒಂದು ದೇಶದ ಸಂಸ್ಕೃತಿಯ ಅಧ್ಯಯನ ಎಷ್ಟು ನೆಲೆಗಳಿಂದ ನಡೆಯಬಹುದೆಂಬುದನ್ನು ಇಲ್ಲಿ ತೋರಿಸಿಕೊಟ್ಟಂತಾಗಿದೆ. ಅದಕ್ಕಿಂತ ಹೆಚ್ಚು ಮಹತ್ವದ ಮಾತೆಂದರೆ ಕೈಗೆ ದೊರೆತ ಸಾಮಗ್ರಿಯನ್ನು ವಿಂಗಡಿಸಿಕೊಂಡು, ಅದರ ಅಭ್ಯಾಸದ ಮೂಲಕವಾಗಿ ಒಂದು ಶಾಸ್ತ್ರ ನಿರ್ಮಾಣಕ್ಕಾಗಿ ಇಲ್ಲಿ ದಾರಿಮಾಡಿಕೊಟ್ಟಂತಾಗಿದೆ.

ಸಾಮಾಜಿಕ ಅಧ್ಯಯನ ಕಲೆಯೆಂದರೆ ಕಲೆ, ಶಾಸ್ತ್ರವೆಂದರೆ ಶಾಸ್ತ್ರ, ಭೌತಶಾಸ್ತ್ರದಂತೆ ಅದು ಕೇವಲ ಶಾಸ್ತ್ರೀಯ ನಿಯಮಗಳನ್ನು ಅನುಸರಿಸಿ ಬೆಳೆಯಲಾರದು. ಸಾಮಾಜಿಕ ಅಧ್ಯಯನದ ಕೇಂದ್ರವಸ್ತು ಮನುಷ್ಯನೇ ಹೊರತು ಜಡವಸ್ತುವಲ್ಲ. ಜಡವಸ್ತುವಿನ ಪ್ರಾಮಾಣಿಕ ಸ್ವರೂಪ ಮನುಷ್ಯನಿಗಿಲ್ಲ. ಅದೇರೀತಿ ಮನುಷ್ಯ ತೋರಿಸುವ ಪ್ರತಿಕ್ರಿಯೆಯನ್ನು ಜಡವಸ್ತು ತೋರಿಸಲಾರದು. ಅದೇ ರೀತಿ ಮನುಷ್ಯ ತೋರಿಸುವ ಪ್ರತಿಕ್ರಿಯೆಯನ್ನು ಜಡವಸ್ತು ತೋರಿಸಲಾರದು. ಆದ್ದರಿಂದ ಸಾಮಾಜಿಕ ಅಧ್ಯಯನದಲ್ಲಿ ಸಜೀವತೆ ಮತ್ತು ವಸ್ತುನಿಷ್ಠತೆಗಳು ಕೂಡಿಯೇ ಇರಬೇಕಾದದ್ದು ಅನಿವಾರ್ಯವಾಗಿದೆ. ಜೋಶಿಯವರ ಭಾಷಾಸಾಹಿತ್ಯದಲ್ಲಿ ಅಂಥ ಅಪರೂಪದ ಹೊಂದಾಣಿಕೆ ಇದೆ.

ಶಂಬಾ ಜೋಶಿಯವರು ಈ ಕಾಲದ ಅತ್ಯಂತ ಧೀಮಂತ ಲೇಖಕರಲ್ಲಿ ಒಬ್ಬರಾಗಿದ್ದಾರೆ. ಕನ್ನಡದಲ್ಲಿ ಈಗಾಗಲೇ ಅವರು ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ಅವೆಲ್ಲ ಗ್ರಂಥಗಳ ವಸ್ತು ಒಂದೇ, ಅದು ಸಾಂಸ್ಕೃತಿಕ ಅಧ್ಯಯನ. ಅವರ ಸಾಂಸ್ಕೃತಿಕ ಚಿಂತನ ಹೆಚ್ಚಾಗುತ್ತ, ವಿಸ್ತಾರ ಪಡೆಯುತ್ತ ಹೋದಂತೆ ಅವರ ಗ್ರಂಥಗಳ ಸಂಖ್ಯೆಯೂ ಹೆಚ್ಚಾಯಿತು. ಈ ಗ್ರಂಥಗಳ ಅಧ್ಯಯನ ಶಾಸ್ತ್ರೀಯ ದೃಷ್ಟಿಯಿಂದ ಇನ್ನೂ ಆಗಬೇಕಾಗಿದೆ. ಕರ್ನಾಟಕದ ಭಾಷೆ – ಸಾಹಿತ್ಯ, ಇತಿಹಾಸ – ಸಂಸ್ಕೃತಿ ಅಧ್ಯಯನ ಮಾಡುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಶಂಬಾ ಅವರ ಪುಸ್ತಕಗಳನ್ನು ಅವಶ್ಯವಾಗಿ, ಆಳವಾಗಿ ಅಧ್ಯಯನ ಮಾಡಬೇಕು. ಖಂಡಿತವಾಗಿಯೂ ಅಂತಹ ಓದುಗನ ದೃಷ್ಟಿ ವಿಶಾಲವಾಗುತ್ತದೆ. ಬುದ್ಧಿ ಚುರುಕಾಗುತ್ತದೆ. ಹೊಸ ಪಂಥಾಹ್ವಾನ (ಚಾಲೆಂಜ್) ಗಳು ಅವನಿಗೆ ಎದುರಾಗುತ್ತವೆ.