I

ಜೀವಂತವಾದ ಎಲ್ಲ ವಸ್ತಗಳಲ್ಲೂ ವ್ಯತ್ಯಾಸಗಳುಕಾಲಕಾಲಕ್ಕೆ ನಡೆಯುತ್ತಲೇ ಇರುತ್ತವೆ. ಭಾಷಾಕ್ಷೇತ್ರದಲ್ಲಂತೂ ಈ ಪರಿವರ್ತನೆ ಅನಿವಾರ್ಯ, ಅಗತ್ಯ ಹಾಗೂ ಆರೋಗ್ಯದ ಚಿಹ್ನೆ. ಹಲವು ಸಂದರ್ಭಗಳಲ್ಲಿ ಈ ವ್ಯತ್ಯಾಸ ಸ್ಪಷ್ಟವಾಗಿ ಕಾಣುತ್ತದೆ, ಕೆಲವು ಸಲ ನಮಗೆ ತಿಳಿಯದಂತೆಯೇ ಈ ಮಾರ್ಪಾಟು ಆಗುತ್ತಿರುತ್ತದೆ. ಭಾಷೆ ಆಡುನುಡಿಯಾಗಿ ಜೀವಂತವಾಗಿ ಇರುವವರೆಗೂ, ಈ ಬಗೆಯ ವ್ಯತ್ಯಾಸಕ್ಕೆ ಹೊರತಾಗಲು ಸಾಧ್ಯವಿಲ್ಲ. ಇದು ಭಾಷೆಯಲ್ಲಿ ಪ್ರತಿನಿತ್ಯವೂ ವ್ಯಕ್ತವಾಗಿ ಅವ್ಯಕ್ತವಾಗಿ ನಡೆಯುತ್ತಲೇ ಇರುತ್ತದೆ. ಪ್ರವಾಹದ ನೀರಿನಂತೆ ನಿರಂತರವೂ ವ್ಯಾತ್ಯಾಸವನ್ನು ಹೊಂದುತ್ತಾ ಹೋಗುತ್ತಿರುವುದೇ ವ್ಯಾವಹಾರಿಕ ಅಥವಾ ಜೀವದ್ಭಾಷೆಯ ನೈಸರ್ಗಿಕ ಲಕ್ಷಣ. ಹೊಸ ಶಬ್ದಗಳು ಅನ್ಯಭಾಷೆಯಿಂದ ಬಂದು ಸೇರುತ್ತಿರುತ್ತವೆ. ಹಳೆಯ ಪದಗಳು ಹಿನ್ನೆಲೆಗೆ ಸರಿದು ಅತಿಥಿ ಪದಗಳಿಗೆ ಆಶ್ರಯ ಕೊಡುತ್ತವೆ, ಹೊಸ ನೀರು ಬಂದು ಹಳೆಯ ನೀರನ್ನು ಕೊಚ್ಚಿಕೊಂಡು ಹೋದಂತೆ. ಕೆಲವು ಪದಗಳು ಹೊಂದಿಕೊಂಡು ಸಹಬಾಳ್ವೆ ನಡೆಸಿದರೆ, ಹಲವು ಪದಗಳು ವೈರದಿಂದೆಂಬಂತೆ ಮೂಲೆಗೆ ಸೇರುತ್ತವೆ. ಆಕ್ಸಫರ್ಡ್ ವಿಶ್ವವಿದ್ಯಾಲಯದ ಘನ ನಿಘಂಟಿನ ಮೊದಲ ಮುದ್ರಣದ ಪ್ರತಿಯಲ್ಲಿ, ಇಂದು ಜಗದ್ ವಿಖ್ಯಾತವೂ, ಬಹುಜನಮಾನ್ಯವೂ, ನಿತ್ಯ ವ್ಯವಹಾರ ಪ್ರಿಯವೂ ಆದ ‘ಸಿನೆಮಾ’ ಎಂಬ ಪದವಿಲ್ಲವೆಂದರೆ ಅನೇಕ ಜನ ಅಚ್ಚರಿಯಿಂದ ಮೂಗಿನ ಮೇಲೆ ಬೆರಳು ಇಟ್ಟಾರು! ಆದರೂ ಇದು ನಿಜ.

ಹಳೆಯ ಬಳಕೆಯಿಂದ ನಿರಂತರ ಪರಿಷ್ಕಾರದಿಂದ ಬಾಯಿಂದ ಹೊಮ್ಮುವ ಶಬ್ದಕ್ಕೂ ಅರ್ಥಕ್ಕೂ ಹಿಂದಿನಿಂದ ಒಂದು ನಂಟು ಅಂಟಿಕೊಂಡು ಬೆಳೆದು ಬಂದಿದೆ. ಹೀಗಿದ್ದೂ ಹೊಸದಾದ ಚಿಂತನೆ, ಆಲೋಚನೆ ತಲೆದೋರಿದಾಗ ಅದನ್ನು ಅಭಿವ್ಯಕ್ತಗೊಳಿಸಲು ಮಹಾ ಕವಿಯಾದವನೂ ಸ್ವಲ್ಪ ಪ್ರಯಾಸ ಪಡಬೇಕಾಗುತ್ತದೆ. ಹಿರಿಯ ಕವಿಯೂ ಶಬ್ದಾನ್ವೇಷಣೆಗಾಗಿ ನವೀನ ಶಬ್ದಗಳ ನಿರ್ಮಾಣಕ್ಕಾಗಿ ತನ್ನ ಪ್ರತಿಭಾಶಕ್ತಿಯನ್ನು ವಿನಿಯೋಗಿಸಬೇಕಾಗುತ್ತದೆ. ಅಥವಾ ಆತ ಕೆಲವೊಮ್ಮೆ ಇರುವ ಪದಗಳಿಗೆ ಹೊಸ ಅರ್ಥ ತುಂಬಬೇಕಾಗುತ್ತದೆ. ಹೀಗೆ ಹೊಸ ಪದಗಳನ್ನು ಪೋಣಿಸಿಯೋ, ಇಲ್ಲವೇ ಹೊಸ ಅರ್ಥವನ್ನು ಆರೋಪಿಸಿಯೋ ತನ್ನ ಆಲೋಚನೆಯನ್ನು ಮೂಡಿಸಲು ಪ್ರಯತ್ನಿಸುವನು. ಇದರ ಫಲವಾಗಿ ಭಾಷೆಯಲ್ಲಿ ಬೆಳವಣಿಗೆ ತಲೆದೋರುತ್ತದೆ. ಇದಲ್ಲದೆ ದಿನದಿನವೂ ಜನತೆಯಲ್ಲಿ ಕಾಣಿಸಿಕೊಳ್ಳುವ ಹೊಸ ಹೊಸ ವಿಚಾರಗಳು ಮತಿನ ಮೂರ್ತಸ್ವರೂಪವನ್ನು ಪಡೆಯುವ ಅವಸರದಲ್ಲಿ ಸಹಜವಾಗಿಯೇ ಭಾಷೆ ಅರ್ಥಾಂತರ ಹಾಗೂ ರೂಪಾಂತರಗಳನ್ನು ತಳೆಯುತ್ತದೆ. ಇದರಿಂದ ಭಾಷೆಯೂ ಮಾನವನ ಮಾನಸಿಕ ಪರಿವರ್ತನೆ, ವಿಕಾಸಕ್ಕೆ ತಕ್ಕಂತೆ ನಿರಂತರವಾಗಿ ಬದಲಾಗುತ್ತಿರುತ್ತದೆ. ಇದಕ್ಕಾಗಿಯೇ ಭಾಷಾಚರಿತ್ರೆಯನ್ನು ಜನಾಂಗದ ಹಾಗೂ ಸಂಸ್ಕೃತಿ ಪರಂಪರೆಯ ಚರಿತ್ರೆಯೆಂದು ಕರೆಯುವುದು.

ಒಂದು ಭಾಷೆಯಲ್ಲಿ ಹೊಸದಾಗಿ ಬಂದು ಸೇರಿದ ಪದಗಳಲ್ಲಿ ಅನೇಕ ಪದಗಳು ಪರಭಾಷೆಯಿಂದಲೇ ಬಂದಿರುತ್ತವೆಯಾದರೂ, ಎಲ್ಲ ಪದಗಳೂ ಅನ್ಯದೇಶೀಯ ಪದಗಳಾಗಿರುವುದಿಲ್ಲ. ನಮ್ಮಲ್ಲಿ, ಆಯಾಯಾ ಭಾಷೆಯಲ್ಲಿ ಇರುವ ಪದಗಳನ್ನೇ ಎರಡು ಮೂರು ಪದಗಳು ಸೇರಿಸಿ ಒಂದು ಹೊಸ ಸಮಾಸ ಪದವನ್ನು ಸೃಷ್ಟಿಸುವುದೂ ಉಂಟು. ಮಾತನಾಡುವ ಮಂದಿ ನಿತ್ಯವೂ ತಾವೂ ವ್ಯವಹಾರದಲ್ಲಿ ಬಳಸುವ ಶಬ್ದ ಸಮುದಾಯವನ್ನು ಬೇರೆ ಬೇರೆ ರೀತಿಯಲ್ಲಿ ಜೋಡಿಸುತ್ತಿರುತ್ತಾರೆ. ಈ ಬಗೆಯ ವಾಕ್ ಸೃಷ್ಟಿ, ಪದಗಳ ಜನನವೇ ಭಾಷೆಯ ಬೆಳವಣಿಗೆಗೆ ಬಹುಮಟ್ಟಿನ ಕಾರಣ. ಎಲ್ಲ ಸಂದರ್ಭಗಳಲ್ಲೂ ಭಾಷೆಯಲ್ಲಿ ನಡೆಯುವ ಬದಲಾವಣೆಗಳಿಗೆ ಸಮಂಜಸವಾದ ಉತ್ತರಗಳನ್ನಾಗಲಿ, ಕಾರಣವಾಗಲಿ ಹೇಳುವುದು ಕಷ್ಟಕರವಾಗುತ್ತದೆ. ಈ ವ್ಯತ್ಯಾಸ ಪ್ರಾರಂಭವಾದ ಕಾಲವನ್ನೂ, ಹಿನ್ನೆಲೆಯನ್ನೂ ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲವಾದರೂ, ಅನೇಕ ವೇಳೆ ಮಾನವನ ಸೌಲಭ್ಯಾಕಾಂಕ್ಷೆಯಿಂದಲೂ, ಅನುಕರಣೆಯಿಂದಲೂ, ಸಾಮ್ಯ ವಿಧಿನಿಯಮದಿಂದಲೂ, ನಾಗರಿಕತೆಯ ಪರಿಣಾಮದಿಂದಲೂ, ಅನ್ಯಭಾಷಾ ಸಂಸರ್ಗದಿಂದಲೂ ಈ ಪರಿವರ್ತನೆ ಪ್ರಾರಂಭವಾಗುತ್ತದೆಂದು ಹೇಳಬಹುದು. ಧ್ವನಿವ್ಯತ್ಯಾಸದ ಮೂಲ ನಿಯಮ ಉಚ್ಚಾರದಲ್ಲಿ ಆದಷ್ಟೂ ಕಟಿಮೆ ಪ್ರಯಾಸ ಅಥವಾ ಪ್ರಯತ್ನಗಳ ಅಪೇಕ್ಷೆ ಅಥವಾ ವರ್ಣೋತ್ಪತ್ತಿಸ್ಥಾನ ಸಮೀಪವಾಗಿರುವುದು. ಕಾಲ ದೇಶ ಪರಿಸರಗಳ ಪ್ರಭಾವ ಭಾಷೆಗೂ ತಪ್ಪಿದ್ದಲ್ಲ, ಮಾನವ ಮತ್ತು ಅವನ ಭಾಷೆ ಎರಡೂ, ಕಾಲಕ್ಕೆ ತಕ್ಕಂತೆ ಮಾರ್ಪಾಡುಗೊಂಡು ಹೊಂದಿಕೊಂಡು ಹೋಗಬೇಕಾಗುತ್ತದೆ. ತಾತ್ಪರ್ಯವಿಷ್ಟೇ ನಿತ್ಯಪರಿವರ್ತನಶೀಲವಾದ ಜೀವಂತಭಾಷೆ ನಿರಂತರವಾಗಿ ಬೆಳೆಯುತ್ತಿರುತ್ತದೆ.

II

ಈ ಹಿನ್ನೆಲೆಯಲ್ಲಿ ಶಂಬಾಜೋಶಿ ಅವರ ‘ಕಂನುಡಿಯ ಹುಟ್ಟು’ (೧೯೩೭) ಈ ಕೃತಿಯ ಅಧ್ಯಾಯನದಲ್ಲಿಯ ಸಮಾಸಗಳು, ಕೃತ್ತದ್ಧಿತಗಳು, ತತ್ಸಮ ತದ್ಭವಗಳು, ಮಹತ್ವದ ಹಲವು ಪ್ರತ್ಯಯಗಳು. ಈ ಅಧ್ಯಾಯಗಳನ್ನು ಅನುಲಕ್ಷಿಸಿ ಕನ್ನಡ ಭಾಷೆಯ ರಚನೆಯ ಬಗ್ಗೆ ಅವರ ಚಿಂತನೆಗಳನ್ನು ಇಲ್ಲಿ ಕಲೆ ಹಾಕಲಾಗಿದೆ. ಈ ಕೃತಿ ರಚನೆಯ ಸುಮಾರಿನಲ್ಲಿ ಮತ್ತು ಇದಕ್ಕೆ ಪೂರ್ವದಲ್ಲಿ ಕನ್ನಡ ಭಾಷೆಯನ್ನು ಕುರಿತು ಅನೇಕ ಕೃತಿಗಳು ಹೊರಬಂದಿವೆ. ಮಿಶನರಿಗಳಿಂದ ಕನ್ನಡದ ವ್ಯಾಕರಣಗಳು ಸಾಕಷ್ಟು ಹಿಂದೆಯೆ ಪ್ರಕಟವಾಗಿದ್ದವು. ಮ. ಪ್ರ. ಪೂಜಾರ ಅವರ ‘ಕನ್ನಡ ನುಡಿಗನ್ನಡಿ’, ಮಲ್ಲಪ್ಪನವರ ‘ಶಬ್ದಾದರ್ಶ’, ಉಗ್ರಾಣ ಮಂಗೇಶರಾಯರು ಹಾಗೂ ಪಂಜೆಯವರ ಶಾಲಾ ವ್ಯಾಕರಣಗಳು, ಪುಟ್ಟಣ್ಣನವರ ‘ಕನ್ನಡ ಭಾಷಾ ಸಮೀಕ್ಷೆ’ ಮುಂತಾದ ಕೃತಿಗಳು ಸುಮಾರು ಇದೇ ಕಾಲದಲ್ಲಿ ಪ್ರಕಟವಾದವುಗಳು. ಇವೆಲ್ಲವೂ (ಕನ್ನಡ ಭಾಷಾ ಸಮೀಕ್ಷೆಯನ್ನು ಹೊರತುಪಡಿಸಿ) ಕನ್ನಡದ ‘ವ್ಯಾಕರಣ’ಗಳು. ಹೇಳಬೇಕಾದ ವಿಷಯ ಹಾಗೂ ರೀತಿ ಬಹುಮಟ್ಟಿಗೆ ಪೂರ್ವನಿರ್ಧರಿತವಾದದ್ದು. ಜೋಶಿಯವರ ಈ ಎರಡು ಕೃತಿಗಳು ಇಂತಹ ‘ವ್ಯಾಕರಣ’ಗಳಲ್ಲ, ವ್ಯಾಕರಣಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಒಳಗೊಂಡಿದೆ ಎನ್ನಬಹುದು. ಕನ್ನಡ ಸಂಸ್ಕೃತಿಯ ಹಿನ್ನೆಲೆಯಲ್ಲಿ ಕನ್ನಡದ ಆಗಿನ (= ನಲವತ್ತರ ದಶಕದ) ಸ್ಥಿತಿ. ಅದು ಉತ್ತಮಗೊಳ್ಳಬೇಕಾದ ಅವಶ್ಯಕತೆ ಹಾಗೂ ಅದನ್ನು ಭಾಷೆಯಲ್ಲಿ ಸಾಧಿಸಬೇಕಾದ ರೀತಿ ಇದು ಈ ಎರಡೂ ಕೃತಿಗಳ ವಿಷಯವೆಂದು ಸ್ಥೂಲವಾಗಿ ಹೇಳಬಹುದು. ಕನ್ನಡ ಸಂಸ್ಕೃತಿ ಹಾಗೂ ಅದರ ಅಂಗವಾಗಿ ಕನ್ನಡ ಭಾಷೆ ಇವುಗಳ ಬಗೆಗಿನ ಕಾಳಜಿಯೇ ಶಂಬಾ ಅವರ ಹಿಂದಿನ ತುಡಿತ. ಈ ಕೃತಿ ರಚನೆಯ ಹಿಂದೆ ಶಂಬಾ ಅವರಿಗಿದ್ದ ಕಳಕಳಿಯನ್ನು ಗಮನಿಸಬೇಕು.

ನಮ್ಮ ಭಾವನೆಗಳ ಅಭಿವ್ಯಕ್ತಿಗೆ ಭಾಷೆ ಬೇಕು. ಇದೀಗ ಕನ್ನಡ ಓದಬೇಕು, ಬರೆಯಬೇಕು ಎಂಬ ಹುಮ್ಮಸ್ಸು ತಲೆದೋರಲಾರಂಭಿಸಿದೆ. ಕನ್ನಡ ನುಡಿಯ ಗುಟ್ಟನು ತಿಳಿಸಿ ಕೊಡುವ ಪುಸ್ತಕಗಳಿಲ್ಲದ್ದರಿಂದ ಶಂಬಾ ಅವರು ಈ ಪುಸ್ತಕವನ್ನು ಬರೆಯಬೇಕಾಯಿತು ಎಂದು ತಮ್ಮ ಕೃತಿಯ ‘ಅರಿಕೆ’ ಭಾಗದಲ್ಲಿ ಹೇಳಿದ್ದಾರೆ. ಕನ್ನಡ ಶಬ್ದಸಿದ್ಧಿ ಕ್ರಮವನ್ನು ನಿರೂಪಿಸುವ ಪುಸ್ತಕಗಳು ಇನ್ನೂ ಪ್ರಕಟವಾಗಿಲ್ಲ. ನುಡಿಯ ಹುಟ್ಟಿನ ಬಗ್ಗೆ ಗೊತ್ತಾಗದೆ ಹೊಸನುಡಿಗಳನ್ನು ಮಾಡಿಕೊಳ್ಳುವುದಾಗಲಿ, ಇದ್ದ ನುಡಿಗಟ್ಟನ್ನು ತಿಳಿದುಕೊಳ್ಳಲಿಕ್ಕಾಗಲಿ ಆಗುವುದಿಲ್ಲ. ಇವೆರಡರ ಅವಶ್ಯಕತೆ ಈಗ (೧೯೩೭) ಕನ್ನಡಕ್ಕಿದೆ. ಕನ್ನಡ ನುಡಿಯ ಹುಟ್ಟನ್ನು ತಿಳಿಸುವ ಮೊದಲನೆಯ ಪುಸ್ತಕವಿದು.

ಭಾವಕ್ಕೆ ತಕ್ಕ ಪದಗಳನ್ನು ಸಿದ್ಧಪಡಿಸಿಕೊಳ್ಳುವ ಹದವು ಕನ್ನಡಕ್ಕಿದೆ. ತನ್ನ ಬಾಳುವೆಗೆ ಬೇಕಾದ ಹೊಸ ಪದಗಳನ್ನು ತಾನೇ ಸೃಷ್ಟಿಸಿಕೊಳ್ಳುವುದು. ಇಲ್ಲವೇ ಅನ್ಯ ಭಾಷೆಯ ಪದಗಳನ್ನು ತನ್ನ ಜಾಯಮಾನಕ್ಕೆ ತಕ್ಕಂತೆ ಮಾರ್ಪಡಿಸಿಕೊಳ್ಳುವುದು. ಶಂಬಾ ಅವರು ಮೊದಲನೇ ದಾರಿಯೇ ಹಿರಿದಾದುದೆಂದು ಹೇಳಿದ್ದಾರೆ. ಅನಿವಾರ್ಯ ಬಿದ್ದರೆ ಎರಡನೇ ದಾರಿ ಹಿಡಿಯಬೇಕು. ಬ್ಯಾಂಗಲೋರ್, ಬೆಳಗಾಮ್ ಎಂದು ಮುಂತಾದ ಅನಾವಶ್ಯಕವಾಗಿ ನಮ್ಮ ಊರುಗಳ ಹೆಸರು ಮೊದಲಾದವುಗಳನ್ನು ಪರಭಾಷೆಯ ಉಚ್ಚಾರ ಪದ್ಧತಿಯಿಂದ ಬರೆಯುವುದು ಅಥವಾ ಉಚ್ಚರಿಸುವುದು ಎರಡೂ ಅಸಮಂಜಸವಾಗಿದೆ. ಕನ್ನಡದಲ್ಲಿ ಹೆಚ್ಚಾಗಿ ಮೊದಲ ಅಕ್ಷರದ ಮೇಲೆ ಆಘಾತವಿರುತ್ತದೆ. ಮರಾಠಿ, ಹಿಂದಿ, ಇಂಗ್ಲೀಷ್ ಮೊದಲಾದವುಗಳ ಉಚ್ಚಾರ ಪದ್ಧತಿ ತೀರ ಬೇರೆಯಾಗಿರುತ್ತದೆ. ನಾವು ಪರಭಾಷೆಯ ಮೇಲಿನ ಮೋಹದಿಂದ ಅವಶ್ಯಕವಿಲ್ಲದಲ್ಲಿಯೂ ಆಯಾ ಶಬ್ದಗಳನ್ನು ಮೂಲದಂತೆ ಉಚ್ಚರಿಸುವ ಪ್ರಯತ್ನದಲ್ಲಿ ನಮ್ಮ ನುಡಿಗೆ ಕೇಡು ಬಗೆಯುತ್ತಲಿದ್ದೇವೆ. ಅನ್ಯಭಾಷಾ ರೂಪಗಳು ಸಹಜವಾಗಿ ಕನ್ನಡದಲ್ಲಿ ಒಂದುಗೂಡಿ ಹೋಗುತ್ತಿದ್ದರೆ ಅದನ್ನು ತಡೆಯುಂಟು ಮಾಡಬಾರದು. ‘ಅರಸು ಗುಣ’, ‘ಮಂಗಳಾರತಿ’ ಮುಂತಾದವು ಸಹಜ. ಕನ್ನಡದ ಉಚ್ಚಾರದಲ್ಲಿ ಸಮವಾಗಿರುವ ಸಂಸ್ಕೃತ ಶಬ್ದಗಳಿಗೆ ಸಮಸಂಸ್ಕೃತ ಪದಗಳೆನ್ನುವರು.

ವಿದಿತ ಸಮಸಂಸ್ಕೃತೋದಿತ |
ಪದಂಗಳೊಳ್
ಪುದಿದು ಬೆರೆಸಿ ಬರೆ ಕನ್ನಡದೊಳ್ |
ಮುದುಮನವು
ತರ್ಕುಮತಿಶಯ |
ಮೃದಂಗಸಂಗೀತ
ಕಾದಿ ಮಧುರವಂಬೋಲ್ ||

ಸಮಸಂಸ್ಕೃತ ಮತ್ತು ಕನ್ನಡ ಕೂಡಿದರೆ ಮಧುರ ಸಂಗೀತದಂತೆ ಮನಸ್ಸಿಗೆ ಹಿಗ್ಗು ಉಂಟಾಗುತ್ತದೆಂದು ಕವಿರಾಜಮಾರ್ಗವು ಹೇಳುತ್ತದೆ. ಶಂಬಾ ಅವರು ಹೆಚ್ಚಾಗಿ ಹೆರವರ ಪದಗಳನ್ನು ಸ್ವೀಕರಿಸದೆ ತಮ್ಮ ಭಾಷೆಯಲ್ಲಿಯೇ ಹೊಸಶಬ್ದಗಳನ್ನು ಹುಟ್ಟಿಸಿಕೊಳ್ಳಬೇಕು. ಯಾವುದೊಂದು ಭಾಷೆ ಬೆಳೆಯಬೇಕಾದರೆ ಇದೇ ಮಿಗಿಲಾದ ದಾರಿ ಎಂದು ಹೇಳಿದ್ದಾರೆ.

ಕನ್ನಡ ಶಬ್ದಸಂಪತ್ತನ್ನು ಹೆಚ್ಚಿಸಲು ಶಂಬಾ ಅವರು ನಾಲ್ಕು ದಾರಿಗಳನ್ನು ಹುಡುಕಿದ್ದಾರೆ. ಅವು ಇಂತಿವೆ. “೧. ಹಿರಿಯರ ನಿಕ್ಷೇಪಧನದಂತೆ ಕನ್ನಡ ಕಾವ್ಯಶಾಸನಾದಿಗಳಲ್ಲಿ ಹುದುಗಿಕೊಂಡಿರುವ ಹುರುಳಿನ ನುಡಿಗಳನ್ನು ಮತ್ತೆ ಬೆಳಕಿಗೆ ತಂದು ಬಳಸಲಾರಂಭಿಸುವುದು. ೨. ಹಳ್ಳಿಗರು ಹಾಗೂ ಪಟ್ಟಣಿಗರಲ್ಲಿ ಸಹಮನೆಮನೆಗೂ ಹೋಗಿ ಹೆಣ್ಣುಮಕ್ಕಳ ಬಾಯಲ್ಲಿರುವ ಅಚ್ಚಗನ್ನಡದ ಕೆಚ್ಚಿನ ಮಾತುಗಳನ್ನು ಎತ್ತಿ ಬರಹದಲ್ಲಿ ಉಪಯೋಗಿಸ ಹತ್ತುವುದು. ೩. ಈಗ ವ್ಯಾಕರಣಗಳಲ್ಲಿ ಹೇಳಿರುವ ಹಂಚಿಕೆಗಳಿಂದ ಹೊಸನುಡಿಗಳನ್ನು ಸಿದ್ಧಪಡಿಸಿಕೊಳ್ಳುವುದು. ೪. ಸಂಸ್ಕೃತ, ಇಂಗ್ಲೀಷ್ ಮೊದಲಾದ ಭಾಷೆಗಳಲ್ಲಿರುವಂತೆ ಇನ್ನೂ ವಿವಿಧಾರ್ಥ ದರ್ಶಕ ಹೊಸ ಶಬ್ದಗಳನ್ನು ಸಿದ್ಧಪಡಿಸಿಕೊಳ್ಳಲು ಬೇಕಾದ ಹೊಸ ಹಂಚಿಕೆಗಳನ್ನು ಕಂಡುಹಿಡಿಯುವುದು” (ಕಂನುಡಿಯ ಹುಟ್ಟು, ಶಂಬಾ ಕೃತಿ ಸಂಪುಟ – ೨, ಪು. ೨೬೧).

೧. ಪಂಪಾದಿ ಕವಿಗಳಲ್ಲಿ ಅಡಗಿರುವ ಸೊಗಸಾದ ಕನ್ನಡ ನುಡಿಗಳನ್ನು ಮತ್ತೆ ಈಗ ಬಳಕೆಗೆ ತರುವುದು ಕನ್ನಡ ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಉತ್ತಮ. ಉದಾಹರಣೆಗೆ ಪಂಪ ಬಳಸಿದ ‘ಕನ್ನಡಿಸು’, ಕೊಡಿಗೆ (ಉಂಬಳಿ) ಇವುಗಳನ್ನು ಲೋಕಪ್ರಿಯವಾಗುವಂತೆ ಮಾಡಬೇಕಾಗಿದೆ. ಕೆಲವು ಪದಗಳಿಗೆ ಅಲ್ಪಸ್ವಲ್ಪ ಸಂಸ್ಕಾರ ಕೊಡಬೇಕಾಗಿದೆ. ಒರಂಟು – ಒರಟು, ಕಾಣ್ಕೆ – ಕಾಣಿಕೆ.

೨. ಒಂದು ಭಾಷೆಯ ನಿಜಸ್ವರೂಪವನ್ನು ಅರಿಯಬೇಕಾದರೆ ಹಳ್ಳಿಯ ಮಾತು, ಹೆಣ್ಣು ಮಕ್ಕಳ ಮಾತುಗಳ ಅಭ್ಯಾಸವು ಅವಶ್ಯಕವಾಗಿರುತ್ತದೆ. ಈ ದಿಕ್ಕಿನಲ್ಲಿ ಶ್ರಮಪಟ್ಟರೆ ಇದು ಸಹ ಕನ್ನಡ ನುಡಿಯ ಬೆಡಗನ್ನು ಹೆಚ್ಚಿಸುತ್ತದೆ. ಪಂಪನ ಕಾವ್ಯದಲ್ಲಿ ಸಿಕ್ಕುವ ಎಷ್ಟೋ ಮಾತುಗಳು ನಮ್ಮ ಹಳ್ಳಿಯ ಒಕ್ಕಲಿಗರ ಮಾತಿನಲ್ಲಿ ದೊರೆಯುತ್ತದೆ. ಉದಾಹರಣೆಗೆ ಜಡಿದು, ಪಸುವು (ಬಯಕೆ), ತೆರಪು, ಹೊರಪು ಮುಂತಾದ ಶಬ್ದಗಳನ್ನು ಯಾರು ತಾನೇ ಕೇಳಿಲ್ಲ. ಇಂತಹ ಸಾವಿರಾರು ಶಬ್ದಗಳೂ ಹಳ್ಳಿಯ ಮಾತಿನಲ್ಲಿ, ಕಾವ್ಯಶಾಸನಗಳಲ್ಲಿ ಸಿಗುತ್ತವೆ. ಇವುಗಳನ್ನು ನಮ್ಮ ಕವಿ ಸಾಹಿತಿಗಳೂ ಬಳಸಬೇಕಾಗಿದೆ. ಪ್ರಚಾರಕ್ಕೆ ತರಬೇಕಾಗಿದೆ. ಇದು ಮಹತ್ವದ ಕೆಲಸವೇ ಆಗಿದೆ.

೩. ನಮ್ಮ ವ್ಯಾಕರಣಗಳಲ್ಲಿ ಹೊಸ ನುಡಿಗಳನ್ನು ನೇರ್ಪಡಿಸಿಕೊಳ್ಳತಕ್ಕ ಕೆಲವು ಹಂಚಿಕೆಗಳನ್ನು ಹೇಳಿದೆ. ಆದರೆ ಅವುಗಳ ಲಾಭವನ್ನು ನಾವು ಸಾಕಷ್ಟು ಪಡೆದಿಲ್ಲ. ಈವರೆಗಿನ ನಮ್ಮ ವ್ಯಾಕರಣಗಳಲ್ಲಿ ಹೇಳಿರುವ ಪ್ರತ್ಯಯಗಳ ಸಂಪೂರ್ಣ ಉಪಯೋಗ ಪಡೆಯಬೇಕು.

ಅನ್ಯಭಾಷೆಯ ಶಬ್ದಗಳನ್ನು ನಾವು ನೇರವಾಗಿ ಸ್ವೀಕರಿಸುವುದಕ್ಕಿಂತ ನಮ್ಮಲ್ಲಿಯೇ ಹೊಸಶಬ್ದಗಳನ್ನು ಸೃಷ್ಟಿಸುವ ಕಾರ್ಯ ಆಗಬೇಕು. ಅವುಗಳ ಮೇಲೆ ಕನ್ನಡಿಗರ ಮನ್ನಣೆಸಿಗಬೇಕು. ಶಂಬಾ ಅವರ ಈ ಕೃತಿ ಆ ಕಾಲಕ್ಕೆ ಮದ್ರಾಸ, ಉಸ್ಮಾನೀಯಾ ವಿಶ್ವವಿದ್ಯಾಲಯಗಳಲ್ಲಿ ಎಂ. ಎ. ತರಗತಿಗಳಿಗೆ ಪಠ್ಯವಾಗಿತ್ತು ಎಂಬುದನ್ನು ಗಮನಿಸಿದಾಗ ಅದರ ಮಹತ್ವ ಗೊತ್ತಾಗುತ್ತದೆ.

ಕನ್ನಡವು ಶ್ರೀಮಂತ ಭಾಷೆ, ಶಬ್ದದಾರಿದ್ರ್ಯ ಇಲ್ಲ. ಮಾತಿನ ಆಳವಾದ ಅರ್ಥ ಔಚಿತ್ಯ ತಿಳೀದುಕೊಳ್ಳಬೇಕು. ನುಡಿಯೇ ನಾಡಿನ ಉಸಿರು, ಪ್ರಾಣ. ಆ ಪ್ರಾಣ ರೂಪಿಯಾದ ಭಾಷೆಯು ಕ್ಷೀಣವಾಗುತ್ತಿರುವಾಗ ಯಾವ ದೇಶವು ಉನ್ನತಿಗೇರುವುದು. ಅನ್ಯಭಾಷೆಯ ಕಡೆಗೆ ಅತಿವ್ಯಾಮೋಹ ಬೇಡ. ಶಂಬಾ ಅವರು ಹೇಳುವಂತೆ ‘ಹೊರಮಿಂಚಿಗೆ ಮನಸೋತು ಒಳಬೆಳಕಿಗೆ ನಾವು ಎರವಾಗಿದ್ದೇವೆ.

‘ಕನ್ನಡ’ವೆಂಬುದು ಸ್ಥಳವಾಚಕ – ದೇಶವಾಚಕ ಶಬ್ದವೆಂದು ವಿದ್ವಾಂಸರೆಲ್ಲರೂ ಒಪ್ಪಿಕೊಂಡ ಮಾತಾಗಿದೆ. ಕಂನಾಡಿನ ಮೂಲಜನಾಂಗವೂ ಕಂ – ಕನ್ (ಕಣ್ಣ ಅಥವಾ ಕರ್ಣ = ಕರಣ) ಎಂದಾಗಿದ್ದಿತೆಂದು ಈಗ ನಿಶ್ಚಿತವಾಗಿ ಗೊತ್ತಾದ ಸಂಗತಿಯಾಗಿದೆ. ತಿಳಿಯದೆ ಆದ ತಪ್ಪನ್ನು, ಅರಿವು ತಲೆದೋರಿದ ಬಳಿಕ ತಿದ್ದಿಕೊಳ್ಳುವುದೇ ಜೀವಂತಿಕೆಯ ಲಕ್ಷಣ. ನಮ್ಮ ಭಾಷೆಯಲ್ಲಿ ತಕ್ಕ ಹೊಸ ಶಬ್ದಗಳನ್ನು ನೇರ್ಪಡಿಸಿಕೊಂಡ ಕಸುವು ಇಲ್ಲವೇ?

ನಿಲ್ದಾಣ  – (Station)
ಬಾನುಲಿ – (Radio)

ಮೊದಲಾದ ಹೊಸಮಾತುಗಳನ್ನು ಬಳಕೆಗೆ ತಂದವರು ಇಲ್ಲಿ ಮಾತ್ರ ಕೈಲಾಗದವರಾದರೆ? ‘ಕಂ’ ನರನಾಡು ‘ಕಂನಾಡು’ ಆಗಿರುವಂತೆ ‘ಕ’ ನರನುಡಿ ‘ಕಂನುಡಿ’ ಎಂದು ಹೇಳಿದರೆ ಆಗದೆ? ಈ ಬಾರಿ ಹೇಳಿದ್ದಾಗಿದೆ (ಕಂನುಡಿಯ ಹುಟ್ಟು, ಶಂಬಾ ಕೃತಿ ಸಂಪುಟ – ೨, ಪು. ೨೬೯) “ ಈ ಕೃತಿರಚನೆಯ ಹಿಂದಿರುವ ತುಡಿತವನ್ನು ಶಂಬಾ ಅವರೇ ಒಂದೆಡೆ ಹೇಳಿದ್ದಾರೆ. “ ನಮ್ಮ ಮನೆಯಲ್ಲಿ ನಮ್ಮ ಮಾತೆ ನಡೆಯಬೇಕಷ್ಟೇ. ಹೆರವರ ಮಾತು ನಡೆದರೆ ಅದು ನಮ್ಮ ದಾಸ್ಯದ ಲಕ್ಷಣ. ಆದುದರಿಂದ ಕಂನುಡಿಯು ಪರಭಾಷೆಗಳ ಬಂಧನದಲ್ಲಿ ಸಿಲುಕದಂತೆ ಪ್ರತಿಯೊಬ್ಬರೂ ಎಚ್ಚರವಾಗಿರುವುದು ಕರ್ತವ್ಯವಾಗಿದೆ. ಆದರೆ ಕಂನುಡಿಯ ಒಣ ಹೆಮ್ಮೆ ಏತಕ್ಕೂ ಬಾರದು. ಇದರ ಹೆಚ್ಚಳವನ್ನು ಹಾರಯಿಸುವವರೆಲ್ಲರೂ ಈ ನುಡಿಯ ತಿರುಳನ್ನು ಅರಿತುಕೊಳ್ಳಬೇಕು ಮತ್ತು ಕೈನಡೆವವರೆಗೂ ಅಚ್ಚುಕಟ್ಟಿನ ಕಂನುಡಿಯಲ್ಲಿಯೇ ಬರೆಯಬೇಕು. ಮಾತನಾಡಬೇಕೆಂಬ ಜಿಗಟುಳ್ಳವರಾಗಬೇಕೆಂದು ಬೇರೆ ಹೇಳಬೇಕಾಗಿಲ್ಲ. ಈ ಬಗೆಯ ಹಂಬಲದಿಂದಲೇ ತನಗಾಗಿ ಮಾಡಿಕೊಂಡ ಈ ಸಂಗ್ರಹವು ಇನ್ನುಳಿದವರಿಗೂ ಉಪಯುಕ್ತವಾಗುವಂತಿದ್ದರೆ ಆಗಲೆಂದು ಮೊದಲು ಇದನ್ನು ಬೆಳಕಿಗೆ ತಂದಿತು” (ಶಂಬಾ ಕೃತಿ ಸಂಪುಟ – ೨, ಕಂನುಡಿಯ ಹುಟ್ಟು ಪು. ೨೭೦).

III

ಶಂಬಾ ಅವರ ಕನ್ನಡ ಶಬ್ದಕೋಶವನ್ನು ವರ್ಗೀಕರಿಸುವ ಪ್ರಯತ್ನವನ್ನು ಹಾಗೂ ಕೆಲಮಟ್ಟಿಗೆ ಶಬ್ದರಚನೆಯನ್ನು ವಿವರಿಸುವ ಪ್ರಯತ್ನ ಮಾಡಿದ್ದಾರೆ.

೧. ಸಮಾಸಗಳು ಎರಡು ನುಡಿಗಳು ಕೂಡಿ ಆಗುವುದರಿಂದ ಕೂಡುನುಡಿ ಅಥವಾ ಸಮಾಸವೆಂದು ಕರೆಯಬಹುದು. ಕೂಡನೂಡಿಯೊಳಗಿನ ಎರಡನೆಯ ನುಡಿyu ಸಾಮಾನ್ಯ ಅರ್ಥವನ್ನೂ ಮೊದಲನೆಯ ನುಡಿಯು ವಿಶೇಷ ಅರ್ಥವನ್ನು ಸೂಚಿಸುವುದು.

ಉದಾ. ಕರೆಗುದುರೆ, ಚಿನ್ನದುಂಗುರ.

ನಂತರ ಶಂಬಾ ಅವರು ತತ್ಪುರುಷ, ದ್ವಂದ್ವ ಮುಂತಾದ ಸಾಂಪ್ರದಾಯಕ ಸಮಾಸ ನಿಯಮಗಳನ್ನು ಹೇಳುತ್ತಾರೆ. ಸಮಾಸಗಳ ಪರಿಭಾಷೆಗಳು ಸಂಸ್ಕೃತದಿಂದ ಅನುಕರಿಸಿದ ಪದ್ಧತಿಯಿದೆ. ‘ಕೂಡುನುಡಿ’ ಗಳು ಕಂನುಡಿಗೆ ಹೊಸವಲ್ಲ, ಪರಭಾಷೆ ಮಾತ್ರ ಹೊಸದು. ಶಂಬಾ ಅವರಿಗೆ ಕನ್ನಡದ ರಚನೆ ಬೇರೆಯಾಗಿ ಎಂಬುದರ ಸೂಚನೆ ಇಲ್ಲಿ ದೊರೆಯುತ್ತಿದೆ. ‘ಕೂಡುನುಡಿ’ ಗಳು ಉಚ್ಚಾರದಲ್ಲಿ ಬೇಗನೆ ಬದಲಾಗ ತೊಡಗುವುವು.

ಉದಾ. ತಣ್ಣನೆಯ + ಕೂಳು = ತಂಗೂಳು = ತಂಗುಳ = ತುಂಗ್ಳು = ತಂಗಳ
ಮುನ್ನಪಳ್ಳಿ (ಮುನವಳ್ಳಿ) – ಮುನೋಳಿ – ಮನೋಳಿ

ಇತ್ಯಾದಿ ಆಡುನುಡಿಯ ಸಮಸ್ತ ಪದದ ರಚನೆಯನ್ನು ಹೇಳಿದವರಲ್ಲಿ ಶಂಬಾ ಅವರೇ ಮೊದಲಿಗರು. ಮೂಲರೂಪಗಳು ಆಡುನುಡಿಯಲ್ಲಿ ಬದಲಾಗುವವು.

೨. ಕೃತ್ತದ್ಧಿತಗಳು ಈ ಅಧ್ಯಾಯದಲ್ಲಿ ಕೃತ್ ಮತ್ತು ತದ್ಧಿತ ಪ್ರತ್ಯಯಗಳಿಗೆ ಉದಾಹರಣೆ ಮತ್ತು ವಿವರಗಳಿವೆ. ಸಮಾಸಗಳಂತೆ ಹೊಸನುಡಿಗಳನ್ನು ಸಾಧಿಸಿಕೊಳ್ಳುವ ಇನ್ನೊಂದು ಹಂಚಿಕೆಯಿದೆ. ಈ ಹಂಚಿಕೆಯಿಂದ ಮಾಡಿಕೊಂಡ ಹೊಸನುಡಿಗಳಲ್ಲಿ ಕೆಲಸ ಕೃದಂತಗಳೆಂದು ಇನ್ನೂ ಕೆಲವಕ್ಕೆ ತದ್ದಿತಾಂತಗಳೆಂದು ಕರೆಯುವರು.

ಕೃದಂತ: ಧಾತುಗಳಿಂದ ಹೊಸದಾಗಿ ವಿಶೇಷಣ, ನಾಮ ಮತ್ತು ಆವ್ಯಯಗಳನ್ನು ಸಾಧಿಸಿಕೊಳ್ಳಬಹುದು. ಇವುಗಳನ್ನು ಸಾಧಿಸುವುದಕ್ಕಾಗಿ ಧಾತುಗಳಿಗೆ ಹಚ್ಚುವ ಪ್ರತ್ಯಯಗಳಿಗೆ ‘ಕೃತ್ ಪ್ರತ್ಯಯ’ ಗಳೆಂಬ ಹೆಸರಿದೆ. ಕೃತ್ ಪ್ರತ್ಯಯಗಳು ಸೇರಿ ಆದ ಧಾತು ಸಾಧಿತಗಳೇ ಕೃದಂತಗಳು. ಧಾತುಗಳಿಗೆ ‘ಅದ’ ಪ್ರತ್ಯಯವನ್ನು ಸೇರಿಸಿದರೆ ನಿಷೇಧ ಕೃದಂತ ವಿಶೇಷಣಗಳಾಗುವುವು. ಉದಾ. ಕೊಡದ, ಬೇಡ, ಮಾಡದ ಮುಂತಾದವುಗಳು. ಅದರಂತೆ ಕೃದಂತ ನಾಮಗಳು, ಕೃದಂತ ಅವ್ಯಯಗಳು ಕುರಿತು ಸ್ಥೂಲವಾಗಿ ಹೇಳಿದ್ದಾರೆ.

ತದ್ದಿತಾಂತ ರೂಪಗಳು: ನಾಮಧಾತುಗಳಿಗೆ ತದ್ದತ ಪ್ರತ್ಯಯಗಳು ಹಚ್ಚಿ ರೂಪುಗೊಂಡ ಪದಗಳು ಇದರಲ್ಲಿ

– ತದ್ದಿತಾಂತ ವಿಶೇಷಣಗಳು
– ತದ್ದಿತಾಂತ ನಾಮಗಳು
– ಸ್ತ್ರೀ ಪ್ರತ್ಯಗಳು
– ತದ್ದಿತಾಂತ ಅವ್ಯಯಗಳನ್ನು ವಿವರಿಸಿದ್ದಾರೆ.

ಸ್ತ್ರೀ ಪ್ರತ್ಯಯಗಳು: ಇ, ಸಾನಿ, ಳು ಮತ್ತು ಣಿ ಮೊದಲಾದವು ಪ್ರತ್ಯಯಗಳು ಸೇರಿ ಸ್ತ್ರೀವಾಚಕ ತದ್ದಿತಾಂತಗಳಾಗಿವೆ. ಅರಸಿ, ದೊರೆಸಾನಿ, ಗೌಡಸಾನಿ, ಜಮೀನದಾರಳು, ಜಮೀನದಾರಣಿ ಮುಂತಾದವು. ಇವು ನಿಶ್ಚಿತವಾಗಿಯೂ ಶಂಬಾ ಅವರ ಶೋಧಗಳಾಗಿವೆ.

೩. ಯಾವುದೇ ಭಾಷೆಯ ಶಬ್ದ ಸಂಪತ್ತು ಬೆಳೆಯುವುದಕ್ಕೆ ಪರಭಾಷೆಗಳಿಂದ ಎತ್ತಿಕೊಂಡ ಶಬ್ದಗಳೂ ಎಷ್ಟೋಮಟ್ಟಿಗೆ ಕಾರಣವಾಗುತ್ತವೆ. ಕನ್ನಡ ಭಾಷೆಯಲ್ಲಿ ಈಗಾಗಲೇ ಕೂಡಿಕೊಂಡಿರುವ ಮತ್ತು ಕೂಡಿಕೊಳ್ಳುತ್ತಿರುವ ಅನ್ಯಭಾಷೆಯ ಶಬ್ದಗಳನ್ನು ಕುರಿತು ಸ್ವಲ್ಪ ಪರ್ಯಾಯಲೋಚಿಸಿ ನಂತರ ಕನ್ನಡ ಭಾಷೆಯ ಶಬ್ದಸಿದ್ದಿ ಕ್ರಮದ ವಿವರಗಳನ್ನು ಹೇಳಿದ್ದಾರೆ.

  1. ಅನ್ಯಭಾಷೆಯಸಂಸರ್ಗವಿಲ್ಲದಭಾಷೆಯೆಇಲ್ಲ, ಅಂತಹಭಾಷೆಯುಬೆಳೆಯಲಾರದು. ಅನ್ಯಭಾಷೆಗೊಬ್ಬರಹಾಕಿ, ಕೃಷಿಮಾಡಿ, ತನ್ನನುಡಿಯಬೆಳವಣಿಗೆಮಾಡಿಕೊಳ್ಳುವುದರಲ್ಲಿಯೇಜಾಣ್ಮೆಯಿದೆ. (ಇಂಗ್ಲೀಶ್ – ಕನ್ನಡ, ಸಂಸ್ಕೃತ – ಕನ್ನಡ) ಒಂದೊಂದುಭಾಷೆಗೂಒಂದೊಂದುಉಚ್ಚಾರಒಂದೊಂದುತೆರ. ಕಂನುಡಿಯಲ್ಲಿಒಂದುಕಾಲಕ್ಕೆಮಹಾಪ್ರಾಣಗಳುಶ್, ಷಗಳಇರಲಿಲ್ಲ. ಸಂಸ್ಕೃತದಸಂಪರ್ಕದಿಂದಅವುಬಂದವು. ಇಂಗ್ಲೀಶಿನ High ಇದನ್ನುಕನ್ನಡದಲ್ಲಿಹೈ, ಹಾಯ್ಬರೆದರೂಮೂಲಉಚ್ಚಾರಣೆಸರಿಯಾದರೀತಿಆಗುವುದಿಲ್ಲ. ಕನ್ನಡ – ಸಂಸ್ಕೃತಗಳಮಧ್ಯಸಹಇದೇಪರಿಸ್ಥಿತಿಇತ್ತು. ಆದುದರಿಂದಲೇ ‘ತದ್ಭವ’ ಗಳುತಲೆದೋರಿದವು. ವಿಕಾರವನ್ನುಹೊಂದಿಕನ್ನಡದಲ್ಲಿಬಂದಸಂಸ್ಕೃತಶಬ್ದಗಳೂತದ್ಭವಗಳಾಗುತ್ತವೆ.

ಹಿಂದಕ್ಕೆ ಕಂನಾಡಿನೊಡನೆ ಸಂಬಂಧವು ಬಂದ ಭಾಷೆಯು ಸಂಸ್ಕೃತವೊಂದೇ. ಆಮೇಲೆ ಮುಸಲ್ಮಾನಿ, ಪೋರ್ತುಗೀಜ್, ಇಂಗ್ಲಿಶ್ ಮೊದಲಾದ ಭಾಷೆಗಳ ಸಂಪರ್ಕ ಉಂಟಾಯಿತು. ಅವುಗಳ ಕೆಲವು ಶಬ್ದಗಳು ಕನ್ನಡ ಜಾಯಮಾನಕ್ಕೆ ಮಾರ್ಪಾಟು ಹೊಂದಿ ನಮ್ಮ ನುಡಿಯಲ್ಲಿ ಬಂದು ಸೇರಿದವು. ತದ್ಭವಗಳು ಕೇವಲ ಸಂಸ್ಕೃತ ಪದಗಳಿಗೆ ಮಾತ್ರ ಸೀಮಿತವಲ್ಲ. ಉರ್ದು ಮತ್ತು ಇಂಗ್ಲೀಷ ಪದಗಳಿಗೆ ಸೀಮಿತವಾಗಿವೆ ಎಂದು ಶಂಬಾ ಹೇಳಿದ್ದಾರೆ.

ಒಂದೊಂದು ನಾಡಿನವರ ಮಾತಿನ ರೀತಿಯಲ್ಲಿ ಒಂದೊಂದು ವೈಶಿಷ್ಟ್ಯವಿರುತ್ತದೆ. ಆದರೆ ಕನ್ನಡಿಗರಲ್ಲಿ ಮಾತ್ರ ತಮ್ಮ ನುಡಿಯ ಈ ವೈಶಿಷ್ಟ್ಯದ ಸರಿಯಾದ ಅರಿವು ಇದ್ದವರು ತೀರ ಕಡಿಮೆ. ಕನ್ನಡಿಗರು ತಮ್ಮ ಉಚ್ಚಾರ ವೈಶಿಷ್ಟ್ಯವನ್ನು ಕಾಯ್ದುಕೊಳ್ಳದೆ ಇದ್ದುದರಿಂದ ತಮ್ಮ ಭಾಷೆಗೆ ದೊಡ್ಡ ಹಾನಿಯನ್ನುಂಟು ಮಾಡಿದ್ದಾರೆ. ಮರಾಠಿ ಬಾಯಿಗೆ ‘ಕಕ್ಕ’ ಶಬ್ದವನ್ನು ಉಚ್ಚರಿಸುವುದಕ್ಕಾಗದೆ ಅದು ಅವರಲ್ಲಿ ‘ಕಾಕಾ’ ಆಯಿತು. ‘ಎರಡು’ ತೆಲುಗು ಸೊಲ್ಲಿನಲ್ಲಿ ‘ರೆಂಡು’ ಆಗುವುದು ‘ಕಿವಿ’ ಯು ‘ಚೆವಿ’ ಎಂದು ರೂಪುಗೊಳ್ಳುವುದು. ನಾವು ‘ಅಡಿಗಡಿಗೆ’ ಎಂಬುದನ್ನು ತಮಿಳರು ‘ಅಡಿಕ್ಕಡಿ’ ಎಂದು ನುಡಿಯುವರು.

ಸಾಮಾನ್ಯವಾಗಿ ಕನ್ನಡ ಭಾಷೆಯ ಬಿಡಿ ಬಿಡಿಯಾದ ನುಡಿಗಳಲ್ಲಿ ಮೊದಲಕ್ಕರದ ಮೇಲೆ ಆಘಾತವನ್ನಿತ್ತು ಮಾತನಾಡುವ ರೂಢಿ ಕಂಡುಬರುತ್ತದೆ. ಆದ್ದರಿಂದ ಅಚ್ಚಕನ್ನಡ ನುಡಿಯಲ್ಲಿ ಎರಡು ಹೆಚ್ಚಾದರೆ ಮೂರು ಅಕ್ಕರದ ಮಾತುಗಳು ಹೆಚ್ಚು. ನಮ್ಮ ಸಾಹಿತ್ಯದಲ್ಲಿ ಕಣ್ಣಿಗೆ ಬೀಳುವ ತದ್ಭವಗಳೆಲ್ಲ ನಿಜವಾದುವುಗಳಿಲ್ಲ.

  1. ಕನ್ನಡಬಾಯಿಗೆಸರಿಹೋಗುವಸಂಸ್ಕೃತಶಬ್ದಗಳುಸಮಸಂಸ್ಕೃತತದ್ಭಮಗಳೇನಮ್ಮಪ್ರಾಚೀನವ್ಯಾಕರಣಕಾರರುಕರೆದಿದ್ದಾರೆ.
  2. ಇನ್ನುಕೆಲವುಅಸ್ವಭಾವಿಕವಾದತದ್ಭವಗಳಾಗಿವೆ. ಉದಾ. ವಿಧಿ = ಬೀದಿಎಂದುವ್ಯಾಕರಣಹೇಳಿದರೆಜನರಮಾತಿನಲ್ಲಿಅದು ‘ಇದಿ’ ಯಾಗಿದೆ. ತದ್ಭವಗಳೆಂಬಪರಭಾಷೆಯಶಬ್ದಗಳುಕಂನುಡೀಕರಣ. ಕಂನಾಡಉಚ್ಚಾರಪದ್ಧತಿಗೆಸರಿಹೊಂದುವಂತೆಕನ್ನಡಭಾಷೆಯಿಂದಲೇಯಾವಾಗೂಮಾತನಾಡುವಎಚ್ಚರವಿರಬೇಕು.

ತದ್ಭವ – ತತ್ಸಮಗಳ ಪಟ್ಟಿ

ಕನ್ನಡ ಭಾಷೆಯಲ್ಲಿ ಸಂಸ್ಕೃತದಷ್ಟು ಬೇರೆ ಯಾವ ಭಾಷೆಯ ಪದಗಳೂ ಸೇರಿಕೊಂಡಿಲ್ಲ ಕ್ರಮೇಣ ಇಂಗ್ಲೀಶ್ ಭಾಷೆಯ ಶಬ್ದಗಳು ಬಂದವು.

. ಸಂಸ್ಕೃತ

ಅಕ್ಷರ – ಅಕ್ಕರ, ಆಕಾಶ – ಆಗಸ, ಕೂಷ್ಮಾಂಡು – ಕುಂಬಳ, ಕಾರ್ಯ – ಕಜ್ಜ ಮುಂತಾದವು.

. ಉರ್ದು

ಹವಾ – ಹವೆ, ತಯ್ಯಾರು – ತಯಾರು, ಮುದತ್ – ಮುದ್ದತ್ತು, ಖಾತರೀ – ಖಾತರಿ, ಕಬೂಲ್ – ಕಬೂಲ ಮುಂತಾದವು.

. ಪೋರ್ಚುಗೀಶ್ ಶಬ್ದಗಳು

ಪಗಾರ, ಚಾವಿ, ಬಟಾಟೆ ಮುಂತಾದವು.

. ಇಂಗ್ಲೀಶ್

ಬಸ್ – ಬಸ್ಸು, ಕಾರ್ – ಕಾರು, ಬಾಟಲ್ – ಬಾಟ್ಲೆ, ಸ್ಕೂಲ್ – ಇಸ್ಕೂಲ್, ಸ್ಟೇಶನ್ – ಟೇಶನ್ ಮುಂತಾದವುಗಳು.

ಮಹತ್ವದ ಹಲವು ಪ್ರತ್ಯಯಗಳು

ಕನ್ನಡ ಭಾಷೆಯ ಹೊಸನುಡಿಗಳನ್ನುಂಟು ಮಾಡುವ ಹಲವು ಪ್ರ್ಯಯಗಳುಂಟು. ಈ ಪ್ರತ್ಯಯಗಳಿಂದ ಉಂಡಾಗುವ ನುಡಿಗಳಲ್ಲಿ ನಾಲ್ಕು ಬಗೆಗಳಿವೆ. i. ಧಾತುಗಳು ii. ವಸ್ತುವಾಚಕ ನಾಮಗಳು iii. ಭಾವವಾಚಕ ನಾಮಗಳು iv. ಶೀಲ – ಗುಣ – ಉದ್ಯೋಗವಾಚಕ ನಾಮಗಳು. ಶಂಬಾ ಅವರು ಈ ಅಧ್ಯಾಯದಲ್ಲಿ ಕನ್ನಡದಲ್ಲಿ ಹೆಚ್ಚಾಗಿ ಕಂಡು ಬರುವ ಕೆಲವು ಪ್ರತ್ಯಯಗಳನ್ನು ವರ್ಗೀಕರಿಸಿ ಉದಾಹರಣೆ ಸಹಿತ ಕೊಟ್ಟಿದ್ದಾರೆ. ಶಬ್ದಗಳನ್ನು ಸಾಧಿತಧಾತು ಮತ್ತು ಸಾಧಿತನಾಮಗಳೆಂದು ಎರಡು ಮುಖ್ಯ ವರ್ಗಗಳಾಗಿ ವಿಂಗಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಪ್ರತ್ಯಯಗಳಂತೆ ವ್ಯವಹರಿಸುವ ‘ಕುಲಿ’ (ಮುಂಗುಲಿ ಮುಂ.) ‘ಇಲಿ’ (ನಾಣಿಲಿ ಮುಂ) ‘ಕೇಡಿ’ (ಬುದ್ಧಿಗೇಡಿ ಮುಂ) ಇಂತಹವು ಇನ್ನೂ ತಮ್ಮ ಶಬ್ದ ಸ್ವರೂಪವನ್ನು ಕಳೆದುಕೊಂಡಿಲ್ಲ. ಅವಶ್ಯಕತೆಗೆ ತಕ್ಕಂತೆ ಅನ್ಯಭಾಷೆಯ ಪ್ರತ್ಯಯಗಳು ಬಂದು ಸೇರುತ್ತವೆ. ಅಖಂಡವಾಗಿ ಅನ್ಯಭಾಷೆಯ ಪ್ರತ್ಯಯಗಳನ್ನು ಎತ್ತಿಕೊಳ್ಳುವುದಕ್ಕಿಂತ ಅಂತಹ ಸಿದ್ಧಪಡಿಸುವ ಪ್ರತ್ಯಯಗಳನ್ನು ಸ್ವೀಕರಿಸುವುದು ಲೇಸು.

ಅ. ಧಾತುಗಳಲ್ಲದ ನುಡಿಗಳಿಂದ ಮಾಡಿಕೊಂಡ ಧಾತುಗಳು (ಬೇಕಾದರೆ ಇವುಗಳಿಗೆ ತದ್ಧಿತ ಧಾತುಗಳೆಂದು ಕರೆಯಬಹುದು.)

ಪ್ರತ್ಯಯಗಳ ಸಾಧಿತ ಧಾತುಗಳು
ಕು, ಂಕು ಉರ್ಕು; ಉಕ್ಕು ಮುಂ
ಗುಂ, ಂಗು ಮಿರುಗು; ಮಿನುಗು ಮುಂ
ದು ಒಂದು; ಊರು
ಬು, ಂಬು ಉರ್ಬು; ಉಬ್ಬು

ಆ. ಧಾತುಗಳಿಂದ ಸಾಧಿತವಾದ ಧಾತುಗಳು (ಇವುಗಳೂ ಕೃದಂತ ನಾಮಗಳು)

ಪ್ರತ್ಯಯಗಳು ಸಾಧಿತ ಧಾತುಗಳು
ಕ, ಂಕು ಕುಸಿಕು; ಕುಸಿಂಕು ಮುಂ
ಗು, ಂಗು ಕರಗು; ಕರಂಗು ಮುಂ
ಟು, ಂಟು ಮುರುಟು; ಮುರುಂಟು ಮುಂ
ಸು ತೀರಿಸು; ಬೆರಸು ಮುಂ

ಅದರಂತೆ ವಸ್ತುವಾಚಕ ನಾಮಗಳಲ್ಲಿ ಸಿದ್ಧಿಸುವ ಪ್ರತ್ಯಯಗಳನ್ನು ಭಾವವಾಚಕ ನಾಮಗಳಲ್ಲಿ ಸಿದ್ಧಿಸುವ ಪ್ರತ್ಯಯಗಳನ್ನು ಶೀಲ, ಗುಣ, ಸ್ವಭಾವಾದಿ ನಾಮಗಳಲ್ಲಿ ಸಿದ್ದಿಸುವ ಪ್ರತ್ಯಯಗಳನ್ನು

ಆಳಿ – ಮಾತಾಳಿ, ಜೂದಾಳಿ
ಗ – ಮಾತುಗ, ಎರಗ
ಬಕ್ಕ – ಕೊಳಬಕ್ಕ, ಲಂಚಬಕ್ಕ
ಅಳಿ – ಔದಾಳಿ, ಮಾತಾಳಿ
ಅನ್ನ – ದುಂಡನ್ನ
ಆರೆ – ಮನಸಾರೆ
ಕಡು > ಕಟ್ (ಅಂತ್ಯ ಅಂಬರ್ಥಗಳು) ಕಟ್ಟಕಡೆ, ಕಟ್ಟಾಳು
ಚು – ನಟ್ಟು (ನಲ್ + ಚು)

ಆಡುನುಡಿಯ ಪ್ರತ್ಯಯಗಳನ್ನು ಮೊದಲ ಬಾರಿಗೆ ಗುರುತಿಸಿದ ಶ್ರೇಯಸ್ಸು ಶಂಬಾ ಅವರಿಗೆ ಸಲ್ಲಬೇಕು.

IV

ಕನ್ನಡ ಭಾಷೆಯ ಶಬ್ದರಚನೆಯನ್ನು ಕುರಿತು ಶಂಬಾ ಅವರ ವಿಚಾರಗಳನ್ನು ಡಿ. ಎನ್. ಶಂಕರಭಟ್‌ರು ಭಾಷಾಶಾಸ್ತ್ರದ ಹೊಸ ಆಲೋಚನೆಗಳ ನೆಲೆಯಲ್ಲಿ ಸಮರ್ಥವಾಗಿ ಮುಂದುವರಿಸಿ ಹೇಳಿದರು. ಅವರ ವಿಚಾರ ಸರಣಿ ಇಂತಿದೆ:

ಡಿ. ಎನ್. ಶಂಕರಭಟ್‌ರು ಸಿದ್ದವ್ಯಾಕರಣ ನಿಯಮಗಳನ್ನು ಪಲ್ಲಟಗೊಳಿಸಿದ ಭಾಷಾ ಶಾಸ್ತ್ರಜ್ಞರು. ಅವರ ‘ಕನ್ನಡ ಶಬ್ದರಚನೆ’ ಗ್ರಂಥ ಪ್ರಕಟವಾಗಿದ್ದು ೧೯೯೯ರಲ್ಲಿ. ತಲಸ್ಪರ್ಶಯಾದ ಸಂಶೋಧನೆ ಮತ್ತು ಹರಿತವಾದ ವೈಚಾರಿಕ ಚಿಂತನೆ ಎರಡೂ ಕೂಡಿರುವ ಗ್ರಂಥ ಇದಾಗಿದೆ. ಈ ಗ್ರಂಥದ ವಿಶೇಷತೆಯೆಂದರೆ ಸಂಶೋಧನೆ ಮತ್ತು ವೈಚಾರಿಕತೆ ಇವು ಒಂದಕ್ಕೊಂದು ಪೂರಕವಾಗಿರುವುದು. ಈಗ ಬಳಕೆಯಲ್ಲಿರುವ ವ್ಯಾಕರಣ ಸಂಸ್ಕೃತದ ರಚನೆಯನ್ನು ತಿಳಿಸಿಕೊಡುತ್ತದೆಯೇ ವಿನಃ ಕನ್ನಡದ ರಚನೆಯನ್ನಲ್ಲ ಎಂಬುದು ಶಂಕರಭಟ್‌ರ ವಾದದ ಮುಖ್ಯ ತಿರುಳಾಗಿದೆ. ಈ ಪುಸ್ತಕದಲ್ಲಿ ಶಂಕರಭಟ್‌ರು ಕನ್ನಡ ಶಬ್ದಗಳ ಆಂತರಿಕ ರಚನೆಯನ್ನು ಪರಿಶೀಲಿಸಿದ್ದಾರೆ. ಕನ್ನಡ ಶಬ್ದಗಳಿಗೂ ಅವುಗಳಿಗೆ ಹತ್ತಿಕೊಳ್ಳುವ ಪ್ರಯತ್ನಗಳಿಗೂ ಎಂತಹ ಸಂಬಂಧವಿದೆ? ಮತ್ತು ಪ್ರತ್ಯಯಗಳನ್ನು ಬೇರೊಂದು ಶಬ್ದದ ಅಂಗಗಳಾಗಿ ಬಂದಾಗ ಅವು ಎಂತಹ ಬದಲಾವಣೆಗೆ ಒಳಗಾಗುತ್ತವೆ? ಇಂತಹ ಪ್ರಶ್ನೆಗಳನ್ನು ಎತ್ತಿಕೊಂಡು ಅವರು ಚರ್ಚೆ ಆರಂಭಿಸುತ್ತಾರೆ. ಕನ್ನಡದ ಮೂಲಕ ಕನ್ನಡದ ರಚನೆಯನ್ನು ನೋಡುವುದು ಶಂಕರ ಭಟ್‌ರ ಚಿಂತನೆಯ ಮುಖ್ಯಧಾರೆಯಾಗಿದೆ. ಅದಕ್ಕೆ ಬೇಕಾದ ಎಲ್ಲ ಭಾಷಿಕ ಪುರಾವೆಗಳನ್ನು ಒಟ್ಟುಗೂಡಿಸಿ ಅವರು ತಮ್ಮ ಸಿದ್ಧಾಂತವನ್ನು ಮಂಡಿಸುತ್ತಾರೆ.

ಭಾಷೆಯಲ್ಲಿ ಸಾಮಾನ್ಯವಾಗಿ ಎರಡು ರೀತಿಯ ಪ್ರತ್ಯಯಗಳಿರುತ್ತವೆ. ಪದವೊಂದನ್ನು ರಚಿಸಲು ಬಳಕೆಯಾದ ಪ್ರತ್ಯಯ ‘ಪದ ಪ್ರತ್ಯಯ’ (ಕುಣಿ + ತ). ಒಂದು ಪದದಿಂದ ಅದರ ರೂಪವೊಂದನ್ನು ರಚಿಸಲು ಬಳಕೆಯಾದ ಪ್ರತ್ಯಯ ‘ಪದರೂಪ ಪ್ರತ್ಯಯ’. ಉದಾ. ಬೆವರು ಎಂಬ ಪದ ‘ಬೆದರಿ’, ‘ಹೆದರಿ’ ಎಂಬ ಪದರೂಪವನ್ನು ರಚಿಸಲು ಬಳಸಿರುವ ‘ಇ’ ಎಂಬ ಪ್ರತ್ಯಯ. ಕನ್ನಡದಲ್ಲಿ ಈ ಎರಡು ಪ್ರತ್ಯಯಗಳು ಬಳಕೆಯಲ್ಲಿವೆ. ಅವುಗಳ ಸ್ವರೂಪವನ್ನು ಹೇಳಿ ಕನ್ನಡ ಪದ ವರ್ಗಗಳನ್ನು ಕುರಿತು ನಿರೂಪಿಸುತ್ತಾರೆ. ಕನ್ನಡದಲ್ಲಿ ಮೂರು ಬಗೆಯ ಪದಗಳಿವೆ. ವ್ಯಕ್ತಿ, ವಸ್ತುಗಳನ್ನು ಗುರುತಿಸುವ ಶಬ್ದಗಳು ನಾಮಪದಗಳು (ಮೇಘನಾ, ವಿಶಾಲಾಕ್ಷಿ ಮುಂತಾದವು). ಘಟನೆಗಳನ್ನು ನಿರ್ದೇಶಿಸುವ ಪದಗಳು ಕ್ರಿಯಾಪದಗಳು (ಹೇಳು, ತಿನ್ನು ಮುಂತಾದವು). ವ್ಯಕ್ತಿ, ವಸ್ತು ಹಾಗೂ ಘಟನೆಗಳ ಗುಣಧರ್ಮವನ್ನು ಸೂಚಿಸುವ ಪದಗಳು ವಿಶೇಷಣಗಳು (ಬಿಳಿ, ದೊಡ್ಡ ಮುಂತಾದವು). ಸಂಸ್ಕೃತದಲ್ಲಿ ನಾಮಪದ ಮತ್ತು ಕ್ರಿಯಾಪದ ಎಂಬ ಎರಡು ವರ್ಗದ ಶಬ್ದಗಳಿವೆ. ತಾತ್ಪರ್ಯವಿಷ್ಟೇ, ಪದ ವರ್ಗದಲ್ಲಿ ಕನ್ನಡ ಸಂಸ್ಕೃತಕ್ಕಿಂತ ಭಿನ್ನವಾಗಿದೆ.

ಹೆಸರಿಸುವ ಮತ್ತು ವರ್ಣಿಸುವ ವಿಧಾನದ ಮೂಲಕ ನಾಮಪದಗಳನ್ನು ಮತ್ತು ನಾಮಪದ ಗುಚ್ಚಗಳನ್ನು ಗುರುತಿಸಲಾಗಿದೆ. ‘ರಾಜು ಅವನ ಹೆಂಡತಿಗೆ ಬೆಳಗಾವಿಯಿಂದ ರೇಷ್ಮೆ ಸೀರೆ ತಂದಿದ್ದಾನೆ.’. ಇಲ್ಲಿ ರಾಜು, ಬೆಳಗಾವಿ ಎಂಬ ನಾಮರೂಪಗಳು ಹೆಸರಿಸುವ ವಿಧಾನದ ಮೂಲಕ ಸಮಸ್ತ ಪದವನ್ನು ಗುರುತಿಸುತ್ತವೆ. ‘ರೇಷ್ಮೆಸೀರೆ’ ಎಂಬ ನಾಮರೂಪ ವರ್ಣಿಸುವ ವಿಧಾನದ ಮೂಲಕ ನಾಮಪದ ಗುಚ್ಛವನ್ನು ಗುರುತಿಸುತ್ತದೆ. ಅವುಗಳ ಸಾಮ್ಯ ವೈಷಮ್ಯಗಳು ಶಂಕರಭಟ್‌ರು ಸ್ಥಿರವಾಗಿಸಿದ್ದಾರೆ. ಕನ್ನಡದಲ್ಲಿ ಮುಖ್ಯವಾಗಿ ಮೂರು ರೀತಿಯ ‘ಪ್ರತ್ಯಯಯುಕ್ತ ನಾಮಪದಗಳು’ ಬಳಕೆಯಲ್ಲಿವೆ. ಅವು ಕ್ರಮವಾಗಿ ನಾಮಪದ (ಗಾಣ + ಇಗ = ಗಾಣಿಗ), ಕ್ರಿಯಾಪದ (ಅಗಲು + ಇಕೆ = ಅಗಲಿಕೆ), ವಿಶೇಷಣ (ಬಡ + ವ = ಬಡವ) ಗಳಿಗೆ ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ರಚಿತವಾಗಿವೆ. ಕ್ರಿಯಾಪದಗಳಿಂದ ಕ್ರಿಯಾರೂಪವೊಂದನ್ನು ಸಾಧಿಸುವುದಕ್ಕಾಗಿ ಬಳಸುವ ‘ಇಕೆ’ ಎಂಬ ಪದರೂಪ ಪ್ರತ್ಯಯವೂ ಕನ್ನಡದಲ್ಲಿ ಬಳಕೆಯಲ್ಲಿದೆ. ಇದನ್ನು ಬಳಲುವಿಕೆ, ಹಿಡಿಯುವಿಕೆ ಮೊದಲಾದ ಕ್ರಿಯಾರೂಪಗಳಲ್ಲಿ ಕಾಣಬಹುದು. ಇದು ಸಾಮಾನ್ಯವಾಗಿ ಎಲ್ಲ ಕ್ರಿಯಾಧಾತುಗಳಲ್ಲಿ ಬಳಕೆಯಾಗುತ್ತದೆ.

ಕನ್ನಡದಲ್ಲಿ ಈಗ ಬಳಕೆಯಲ್ಲಿರುವ ಸಮಾಸ ನಿಯಮಗಳು ತುಂಬ ಗೋಜಲಮಯವಾಗಿವೆ. ಅವು ಸಂಸ್ಕೃತ ಸಮಾಸಗಳ ಪರಿಶೀಲನೆಯ ಮೂಲಕ ಕನ್ನಡ ಸಮಾಸಗಳನ್ನು ವಿವರಿಸಲು ಯತ್ನಿಸಿರುವುದು ಇದಕ್ಕೆ ಒಂದು ಕಾರಣವಾದರೆ, ಸಮಸ್ತ ಪದಗಳಿಗೂ ಪದಗುಚ್ಛಗಳಿಗೂ ನಡುವಿರುವ ವ್ಯತ್ಯಾಸವನ್ನು ಸರಿಯಾಗಿ ಗ್ರಹಿಸಿಕೊಳ್ಳದಿರುವುದು ಇನ್ನೊಂದು ಕಾರಣ. ಕನ್ನಡ ಸಮಸ್ತ ಪದಗಳ ರಚನೆ ಸಂಸ್ಕೃತಕ್ಕಿಂತ ಭೀನ್ನವಾಗಿದೆ. ಸಂಸ್ಕೃತದ ಸಮಸ್ತ ಪದಗಳಲ್ಲಿ ಉತ್ತರ ಪದ ಪ್ರಧಾನವಾಗಿದ್ದರೆ ತತ್ಪುರುಷ. ಆದರೆ ಕನ್ನಡದ ಸಮಸ್ತ ಪದಗಳಲ್ಲಿ ಉತ್ತರ ಪದವೇ ಪ್ರಧಾನವಾಗಿರುವುದರಿಂದ ಎಲ್ಲ ಸಮಸ್ತ ಪದಗಳನ್ನು ತತ್ಪುರುಷ ಎಂದೇ ಕರೆಯಬೇಕಾಗುತ್ತದೆ! ಕರ್ಮಧಾರೆಯ ಕನ್ನಡದ ಉದಾಹರಣೆಗಳಲ್ಲಿ ಪೂರ್ವಪದ ವಿಶೇಷಣವಾಗುತ್ತದೆ (ಹೆಜ್ಜೇನು, ಹೆಮ್ಮರ ಮುಂತಾದವು). ಕನ್ನಡದಲ್ಲಿ ವಿಶೇಷಣಗಳು ಪ್ರತ್ಯೇಕ ಪದವರ್ಗಕ್ಕೆ ಸೇರಿರುವುದರಿಂದ ಸಂಸ್ಕೃತದ ಹಾಗೆ ತತ್ಪುರುಷದ ಪ್ರಬೇಧವಾಗುವುದಿಲ್ಲ. ಸಂಸ್ಕೃತದಲ್ಲಿ ಸಂಖ್ಯಾವಾಚಕಗಳು ನಾಮಪದದಲ್ಲಿಯೇ ಸಮಾವೇಶವಾಗುತ್ತವೆ. ಕನ್ನಡದಲ್ಲಿ ಅವು ವಿಶೇಷಣ ವರ್ಗದಲ್ಲಿ ಸೇರುತ್ತವೆ (ಇರ್ಮಡಿ, ಇಮ್ಮಾವು ಮುಂತಾದವು). ಹೀಗಾಗಿ ದ್ವಿಗುವನ್ನು ತತ್ಪುರುಷದಲ್ಲಿ ಸೇರಿಸಲು ಸಾಧ್ಯವಾಗದು. ಅದರಂತೆಯೆ ಕನ್ನಡದಲ್ಲಿ ದ್ವಂದ್ವ (ಗಿಡ ಮರ ಬಳ್ಳಿಗಳು), ಗಮಕ (ಆ ಮನೆ), ಕ್ರಿಯಾ (ಬಿಚ್ಚುವ ಕತ್ತಿ) ಇವು ಪದ ಪುಂಜಗಳೇ ವಿನಃ ಸಮಸ್ತ ಪದಗಳಲ್ಲ. ಈ ಎಲ್ಲ ಅಂಶಗಳನ್ನು ಶಂಕರಭಟ್ಟರು ಸೋದಾಹರಣವಾಗಿ ಪರಿಶೀಲಿಸಿದ್ದಾರೆ. ಇದನ್ನು ಗಮನಿಸಿದಾಗ ಈಗಿರುವ ಸಮಾಸ ನಿಯಮಗಳೇ ಪಲ್ಲಟವಾಗುತ್ತವೆ. ತನ್ಮೂಲಕ ಶಂಕರಭಟ್ಟರು ಕನ್ನಡದ್ದೇ ಆದ ಸಮಸ್ತ ಪದಗಳ ತಾತ್ವಿಕ ಚೌಕಟ್ಟನ್ನು ಸ್ಥಿರಪಡಿಸಿದ್ದಾರೆ. ಕನ್ನಡ ಸಮಸ್ತ ಪದಗಳನ್ನು ವಿಶ್ಲೇಷಿಸುವ ರೀತಿಯನ್ನು ಅವರು ಶಾಸ್ತ್ರೀಯ ತಿಳಿವಳಿಕೆಯಿಂದ ಪಡೆದಿರಬಹುದು ಆದರೂ ಅವರದು ನವೀನ ದೃಷ್ಟಿ.

ಶಂಕರಭಟ್ಟರು ಕನ್ನಡ ಕ್ರಿಯಾಪದಗಳನ್ನೂ ಕೂಡ ಆಂತರಿಕ ರಚನೆಯಿರುವವುಗಳು ಮತ್ತು ಇಲ್ಲದವುಗಳು (ಎಂದರೆ ಕ್ರಿಯಾಧಾತುಗಳು) ಎಂಬುದಾಗಿ ಎರಡು ವರ್ಗಗಳಲ್ಲಿ ವಿಂಗಡಿಸುತ್ತಾರೆ. ಕ್ರಿಯಾಧಾತುಗಳನ್ನು ಅವುಗಳ ಕೊನೆಯ ಸ್ವರದ ಆಧಾರದ ಮೇಲೆ ವಿಂಗಡಿಸಲು ಸಾಧ್ಯವಿದೆ. ಅವುಗಳಲ್ಲಿ ಎ ಕಾರಾಂತ (ಅಗೆ, ಒಗೆ, ನಡೆ ಮುಂತಾದವು), ಇ ಕಾರಾಂತ (ಕಡಿ, ಕುಡಿ, ಮುರಿ ಮುಂಥಾದವು), ಉ ಕಾರಾಂತ (ನಗು, ಅಳು, ಬರು ಮುಂತಾದವು)ಗಳೆಂದು ಮೂರು ರೀತಿಯಾಗಿ ವಿಂಗಡಿಸಿದ್ದಾರೆ. ಉ ಕಾರಾಂತ ಧಾತುಗಳಲ್ಲಿ ಮಾತ್ರ ಅಕ್ಷರಗಳ ಸಂಖ್ಯೆಯಲ್ಲಿ ಮತ್ತು ಸ್ವರೂಪದಲ್ಲಿ ವೈವಿಧ್ಯತೆ ಕಾಣುತ್ತದೆ (ನಗು, ಓಡು, ನುಂಗು, ಉಜ್ಜು, ಅಡುಗು ಮುಂತಾದವು). ನಾಮಪದಗಳಿಗೆ ‘ಇಸು’ ಪ್ರತ್ಯಯ ಸೇರಿಸಿ ಕ್ರಿಯಾಪದಗಳನ್ನು ರಚಿಸುವ ಕ್ರಮ ಕನ್ನಡದಲ್ಲಿ ಬಳಕೆಯಲ್ಲಿದೆ (ಅಬ್ಬರ – ಅಬ್ಬರಿಸು, ಹಂಗು – ಹಂಗಿಸು ಮುಂತಾದವು). ವಿಶೇಷಣಗಳಿಗೂ ಕೂಡ ‘ಇಸು’ ಪ್ರತ್ಯಯ ಸೇರಿಸಿ ಕ್ರಿಯಾಪದಗಳನ್ನು ರಚಿಸುವ ಕ್ರಮವೂ ಕನ್ನಡದಲ್ಲಿದೆ (ಎತ್ತರ – ಎತ್ತರಿಸು, ತಂಪು – ತಂಪಿಸು). ಕೆಲವು ಶಬ್ದಗಳು ‘ಇಕೆ’ ಅಥವಾ ‘ಕೆ’ ಎಂಬ ಪ್ರತ್ಯಯ ಸೇರಿದಾಗ ನಾಮಪದಗಳಾಗಿಯೂ ಮತ್ತು ‘ಇಸು’ ಪ್ರತ್ಯಯ ಸೇರಿದಾಗ ಕ್ರಿಯಾಪದಗಳಾಗಿಯೂ ಬಳಕೆಯಾಗುತ್ತವೆ (ಆಕಳಿಕೆ – ಆಕಳಿಸು, ಬೆದರಿಕೆ – ಬೆದರಿಸು ಮುಂತಾದವು). ಹೊಸಗನ್ನಡದಲ್ಲಿ ಬಳಕೆಯಲ್ಲಿರುವ ಆಗು, ಆಡು, ಕೊಡು, ಬರು,ಬಿಡು, ಕಚ್ಚು, ಬೀಳು, ಮಾಡು, ಹಾಕು ಮೊದಲಾದ ಕ್ರಿಯಾಪದಗಳು ಇತರ ಪದರೂಪಗಳೊಡನೆ ಸೇರಿ ಸಂಯುಕ್ತ ಕ್ರಿಯಾಪದಗಳಾಗುತ್ತವೆ (ನಾಮಪದದೊಂದಿಗೆ ಪೆಟ್ಟಾಗು, ಬಲಿಯಾಗು, ವಿಶೇಷಣದೊಂದಿಗೆ – ಬಡವಾಗು, ಕಪ್ಪಾಗು, ಕ್ರಿಯಾಪದದೊಂದಿಗೆ – ಬೇಕಾಗು, ಸಾಕಾಗು).

ಕನ್ನಡದಲ್ಲಿ ‘ವಿಶೇಷಣ’ ಎಂಬ ಪದ ಮತ್ತೊಂದು ವರ್ಗವಿದೆ. ನಾಮಪದಗಳನ್ನು ಗುರುತಿಸುವ ವ್ಯಕ್ತಿ, ವಸ್ತುಗಳ ಗುಣಧರ್ಮವನ್ನು ಸೂಚಿಸುವ ವಿಶೇಷಣಗಳನ್ನು ‘ನಾಮ ವಿಶೇಷಣ’ ಗಳೆಂದು ಕರೆದರೆ ಕ್ರಿಯಾಪದಗಳನ್ನು ನಿರ್ದೇಶಿಸುವ ಘಟನೆಗಳ ಗುಣಧರ್ಮವನ್ನು ಸೂಚಿಸುವ ವಿಶೇಷಣಗಳನ್ನು ‘ಕ್ರಿಯಾ ವಿಶೇಷಣಗಳೆಂದು ಕರೆಯಲಾಗಿದೆ. ನಾಮ ವಿಶೇಷಣಗಳು ಪದಗುಚ್ಛಗಳಲ್ಲಿ ಸಾಮಾನ್ಯವಾಗಿ ನಾಮಪದಗಳೊಡನೆ ಸೇರಿ ಬರುತ್ತವೆ (ಕೆಂಪು ಹೂ, ಕರಿ ಟೊಪ್ಪಿಗೆ ಮುಂತಾದವು). ಆದರೆ ಕ್ರಿಯಾ ವಿಶೇಷಣಗಳು ಈ ರೀತಿ ಕ್ರಿಯಾಪದಗಳೊಂದಿಗೆ ಸೇರಿ ಬರುವ ಬದಲು ವಾಕ್ಯದಲ್ಲೆಲ್ಲೂ ಬರಬಲ್ಲುವು (ರಾಜು ಮಡಿಕೆಯನ್ನು ನೆಲದ ಮೇಲೆ ಮೆಲ್ಲಗೆ ಇರಿಸಿದ, ರಾಜು ಮಡಿಕೆಯನ್ನು ಮೆಲ್ಲಗೆ ನೆಲದ ಮೇಲೆ ಇರಿಸಿದ ಮುಂತಾದವು). ಕನ್ನಡದಲ್ಲಿ ಆಂತರಿಕ ರಚನೆಯಿಲ್ಲದ ನಾಮವಿಶೇಷಣ ಧಾತುಗಳಿವೆ (ಕರಿ, ಬಿಳಿ, ಬಿಸಿ ಮುಂತಾದವು). ನೇರವಾಗಿ ಕ್ರಿಯಾ ವಿಶೇಷಣಗಳಾಗಿಯೇ ಬಳಕೆಯಾಗುವಂತಹ ಧಾತುಗಳು ಕನ್ನಡದಲ್ಲಿ ಹೆಚ್ಚಿಲ್ಲ. ಆದರೆ ಅನುಕರಣಾರ್ಥದಲ್ಲಿ ಬರುವ ಶಬ್ದಗಳಲ್ಲಿ ಹಲವು ‘ಆನೆ’ ಇಲ್ಲವೇ ‘ನೆ’ ಎಂಬ ಪ್ರತ್ಯಯದೊಂದಿಗೆ ಸೇರಿ ಕ್ರಿಯಾ ವಿಶೇಷಣವಾಗಿ ಬಳಕೆಯಾಗುತ್ತವೆ (ಸರ್ರನೆ, ಸರಕ್ಕನೆ, ಸರಸರನೆ). ಕೆಲವು ಅನುಕರಣ ಶಬ್ದಗಳು ‘ಆನೆ’ ಎಂಬ ಪ್ರತ್ಯಯದ ಸಹಾಯದಿಂದ ಕ್ರಿಯಾ ವಿಶೇಷಣವಾಗಿಯೂ (ಗಮ ಗಮನೆ) ಮತ್ತು ‘ಇಸು’ ಎಂಬ ಪ್ರತ್ಯಯದ ಸಹಾಯದಿಂದ ಕ್ರಿಯಾಪದಗಳಾಗಿಯೂ (ಗಮಗಮಿಸು) ಬಳಕೆಯಾಗಿವೆ. ನಾಮ ವಿಶೇಷಣಗಳಿಂದ ಕ್ರಿಯಾ ವಿಶೇಷಣಗಳನ್ನು ಸಾಧಿಸಲು ಬಳಕೆಯಾಗುವ ಪ್ರತ್ಯಯಗಳಲ್ಲಿ ‘ಅಗೆ’ ಎಂಬುದು ಮುಖ್ಯವಾಗಿದೆ (ತೆಳು – ತೆಳ್ಳಗೆ, ಕರಿ – ಕರ್ರಗೆ, ಬಿಳಿ – ಬೆಳ್ಳಗೆ). ವಿಶೇಷಣಗಳ ಚಾರಿತ್ರಿಕ (ಹಳಗನ್ನಡದ) ಅವಶೇಷಗಳನ್ನು ಗಮನದಲ್ಲಿಟ್ಟುಕೊಂಡು ವರ್ತಮಾನ ಕಾಲದ ವಿಶೇಷಣಗಳ ಸ್ವರೂಪವನ್ನು ಲಿಖಿತ ಪ್ರಮಾಣಗಳೊಡನೆ ಖಚಿತವಾಗಿ ತಿಳಿಸಿದ್ದಾರೆ.

ಕನ್ನಡದಲ್ಲಿ ಸಂಸ್ಕೃತ, ಇಂಗ್ಲಿಶ್, ಪರ್ಶಿಯನ್ ಮೊದಲಾದ ಅನ್ಯಭಾಷೆಯ ಶಬ್ದಗಳು ಎರವಲಾಗಿ ಬಂದಿವೆ. ಆದರೆ ಅವುಗಳ ಆಂತರಿಕ ರಚನೆ ಕನ್ನಡಕ್ಕಿಂತ ಭಿನ್ನವಾಗಿದೆ. ಸಂಸ್ಕೃತ ರೂಪಗಳು ತತ್ಸಮ – ತದ್ಭವ ಪ್ರಕ್ರಿಯೆಯ ಮೂಲಕ ಕನ್ನಡಕ್ಕೆ ಬಂದಿವೆ. (ವೀಥಿ > ಬೀದಿ, ಸಂಸ್ಥೆ > ಸಂತೆ) ಸಂಸ್ಕೃತದಿಂದ ಕನ್ನಡಕ್ಕೆ ಬಂದ ಶಬ್ದಗಳಲ್ಲಿ ಹೆಚ್ಚಾಗಿ ನಾಮಪದಗಳೇ ಆಗಿವೆ. ಅವು ಕನ್ನಡಕ್ಕೆ ಬಂದಾಗ ವಿಶೇಷಣಗಳಾಗಿ ಬಳಕೆಯಾಗುತ್ತವೆ (ಮುಖ್ಯ, ಉತ್ತರ, ಕೋಪ ಮುಂತಾದವು) ಇನ್ನೂ ಕೆಲವು ನಾಮಪದಗಳಾಗಿ ಬಳಕೆಯಾಗುತ್ತವೆ. (ಗ್ರಾಮ, ಪಾಠ ಮುಂತಾದವು) ಕನ್ನಡದಲ್ಲಿ ಪರ ಪ್ರತ್ಯಯಗಳಿವೆ ವಿನಃ ಸಂಸ್ಕೃತದ ಹಾಗೆ ಪೂರ್ವ ಪ್ರತ್ಯಯ (ಉಪಸರ್ಗ) ಗಳಿಲ್ಲ. ಅ, ನಿರ್, ವಿ ಇಂತಹ ಪೂರ್ವ ಪ್ರತ್ಯಯಯುಕ್ತ ರೂಪಗಳು ಕನ್ನಡದಲ್ಲಿ ಬಳಕೆಯಾಗುತ್ತವೆ (ತೃಪ್ತಿ – ಅತೃಪ್ತಿ, ಅಪರಾಧಿ – ನಿರಪರಾಧಿ, ನಾಶ – ವಿನಾಶ). ಸಂಸ್ಕೃತದಿಂದ ಎರವಲಾಗಿ ಬಂದ ನಾಮಪದಗಳಲ್ಲಿ ಕಾಣಿಸುವ ಪರಪ್ರತ್ಯಯಗಳಲ್ಲಿ ಪ್ರಾಮುಖ್ಯವಾದವು ತೆ, ಇ, ಯ ಮತ್ತು ಇಕ (ಅಧ್ಯಕ್ಷ – ಅಧ್ಯಕ್ಷತೆ, ಅಧಿಕಾರ – ಅಧಿಕಾರಿ, ಕವಿ – ಕಾವ್ಯ, ಸಮಾಜ – ಸಾಮಾಜಿಕ) ಸಂಸ್ಕೃತದಿಂದ ಕ್ರಿಯಾಪದಗಳು ನೇರವಾಗಿ ಕನ್ನಡಕ್ಕೆ ಎರವಲಾಗಿ ಬರುವುದಿಲ್ಲ. ಅದಕ್ಕೆ ಬದಲಾಗಿ ಅವು ಬೇರೆ ರೂಪಗಳಲ್ಲಿ ಕನ್ನಡ ‘ಇಸು’ ಪ್ರತ್ಯಯದೊಂದಿಗೆ ಸೇರಿ ಕ್ರಿಯಾಪದಗಳಾಗುತ್ತವೆ (ಆಲೋಚಿಸು, ಚಲಿಸು ಮುಂತಾದವು) ಅನ್ಯ ಭಾಷೆಯ ಪದಗಳು ಕನ್ನಡಕ್ಕೆ ಎರವಲಾಗಿ ಬಂದಾಗ ಕನ್ನಡದ ಪದರಚನೆಯ ನಿಯಮಗಳನ್ನು ಅನ್ವಯಿಸಿಕೊಳ್ಳುತ್ತವೆ ಎಂಬುದು ಗಮನಿಸಬೇಕಾದ ಸಂಗತಿ.

ಡಿ. ಎನ್. ಶಂಕರಭಟ್ಟರು ಈ ಕೃತಿಯಲ್ಲಿ ಕನ್ನಡ ಶಬ್ದರಚನೆಯ ಸ್ವರೂಪವನ್ನು ರೇಖಿಸಿದ್ದಾರೆ. ಅಲ್ಲದೆ ಸಂಸ್ಕೃತ ಮಾದರಿಯ ಸಿದ್ದವ್ಯಾಕರಣ ರಚನೆಯನ್ನು ಪ್ರಶ್ನಿಸಿದ್ದಾರೆ ಕನ್ನಡದ್ದೇ ಆದ ವ್ಯಾಕರಣದ ಮೂಲಸೂತ್ರವನ್ನು ಶೋಧಿಸುವ ಅವರ ಪ್ರಮೆಯು ಈ ಕೃತಿಯಲ್ಲಿ ಸಿದ್ಧಾಂತವಾಗಿ ರೂಪುಗೊಂಡಿದೆ. ಕನ್ನಡ ಶಬ್ದರಚನೆಯನ್ನು ಓದುವಾಗ ಗಮನಕ್ಕೆ ಬರುವ ಮತ್ತೊಂದು ಸಂಗತಿಯೆಂದರೆ ಉದಾಹರಣೆಗಳ ಬಾಹುಲ್ಯ. ಉದಾಹರಣೆಗಳ ಮೂಲಕ ಕನ್ನಡ ವ್ಯಾಕರಣದ ಮೂಲಸೂತ್ರಗಳನ್ನು ಶಂಕರಭಟ್ಟರು ಅಚ್ಚುಕಟ್ಟಾಗಿ ಹಿಡಿದಿದ್ದಾರೆ. ಆ ಮೂಲಕ ಕನ್ನಡ ವ್ಯಾಕರಣದ ಹೊಸ ತಾತ್ವಿಕ ಚೌಕಟ್ಟನ್ನು ನಿರೂಪಿಸಿದ್ದಾರೆ. ದೇಶಿಯ ಭಾಷೆಯೊಂದರ ರಚನೆಯನ್ನು ಕುರಿತಂತಹ ಇಂತಹ ಲಕ್ಷಣ ಗ್ರಂಥ ಬಹುಶಃ ಇತರ ಭಾರತೀಯ ಭಾಷೆಗಳಲ್ಲಿ ಬಂದಿರಲಾರದು. ಈ ಕೃತಿ ಕನ್ನಡ ವ್ಯಾಕರಣ ಮೀಮಾಂಸೆಯ ಚರಿತ್ರೆಯಲ್ಲಿ ಮೈಲಿಗಲ್ಲಾಗಿದೆ.

V

ಹೀಗೆ, ಹಿಂದಿನ ಕನ್ನಡದಲ್ಲಿ ಹೊಸ ಶಬ್ದಗಳನ್ನು ಸೃಷ್ಟಿಮಾಡುವುದಕ್ಕೆ ಬೇಕಾದಷ್ಟು ದಾರಿಗಳಿದ್ದವು. ಸಮಾಸಗಳನ್ನೂ ತದ್ಧಿತಭಾವನಾಮಗಳನ್ನೂ ಹಿಂದಿನವರು ಬೇಕಾದ ಹಾಗೆ ನಿರ್ಮಿಸಬಲ್ಲವರಾಗಿದ್ದರು. ಕೃತ್ತದ್ಧಿತ ಪ್ರತ್ಯಯಗಳು ಆಗ ಹೆಚ್ಚಾಗಿದ್ದವು. ಈಗ ಅವುಗಳಲ್ಲಿ ಹಲವು ಬಳಕೆಯಲ್ಲಿಲ್ಲದೆ ನಷ್ಟವಾಗಿ ಅವುಗಳ ಸ್ಥಾನಕ್ಕೆ ಬೇರೆ ಹೊಸ ಪ್ರತ್ಯಯಗಳಾವುವೂ ಬಾರದೆ ಭಾಷೆ ಬಡವಾಗಿದೆ! ಬೇರೆ ಭಾಷೆಯ ಸಹಾಯವನ್ನು ಗಳಿಗೆ ಗಳಿಗೆಗೆ ಬೇಡುವುದಕ್ಕಿಂತ ಹಿಂದಿದ್ದ ಪ್ರತ್ಯಯಗಳನ್ನೇ ಈಗ ಏತಕ್ಕೆ ಉಜ್ಜೀವಿಸಬಾರದು? ಹೀಗೆ ಮಾಡಿದರೆ ಎಷ್ಟೋ ಅನುಕೂಲವುಂಟು. ಬೇರೆ ಗತಿಯಿಲ್ಲವೆಂದು ಕಂಡಾಗ ಮಾತ್ರ ಬೇರೆ ಭಾಷೆಯಿಂದ ನೆರವನ್ನು ಅಪೇಕ್ಷೀಸುವುದು ಸಹಜವಾದುದು. ಶಂಬಾ ಅವರು ತಮ್ಮ ಚಿಂತನೆಯ ಉದ್ದಕ್ಕೂ ಶಬ್ದಸಂಪತ್ತಿ ದೃಷ್ಟಿಯಿಂದಲೂ ಹೊಸಶಬ್ದಗಳನ್ನು ಕಲ್ಪಿಸಿಕೊಳ್ಳುವ ದೃಷ್ಟಿಯಿಂದಲೂ ಕನ್ನಡ ಭಾಷೆಯ ಜಾಯಮಾನವನ್ನು ತೋರಿಸಿದ್ದಾರೆ. ತಮ್ಮ ವಿಚಾರಗಳ ಸರಣಿಯಲ್ಲಿ ಶಂಬಾ ಅವರು ಎಲ್ಲರಿಗೂ ಅರ್ಥವಾಗುವ ಹಾಗೆ ತಿಳಿಯಾದ, ಚೊಕ್ಕವಾದ ಶೈಲಿಯಲ್ಲಿ ವಿಷಯ ನಿರೂಪಣೆ ಮಾಡಿದ್ದಾರೆ. ಕನ್ನಡ ಆಡುನುಡಿಯ ಸ್ವರೂಪವನ್ನು (ರಚನೆ) ಮೊಟ್ಟಮೊದಲ ಬಾರಿಗೆ ತಿಳಿದವರು ಶಂಬಾ ಅವರೇ ಕನ್ನಡಿಗರಿಗೆ ಅಕ್ಕರೆಯ ಮಾತಾಗಿದೆ.