ಸಾಮಾನ್ಯವಾಗಿ ಉತ್ಸಾಹ, ಆಧಿಕ್ಯ, ವೀಪ್ಸೆ, ಕೋಸ, ಸಂಭ್ರಮ ಅದರ, ಆಶ್ಚರ್ಯ, ಆಕ್ಷೇಪ (ತಿರಸ್ಕಾರ), ಹರ್ಷ, ಸಮ್ಮತಿ, ತ್ವರೆ (ಅವಸರ), ದುಃಖ, ಆವೃತ್ತಿ, ಭಯ, ಭತ್ಸನ್ ಇವೇ ಮೊದಲಾದ ಭಾವನೆಗಳ ಪ್ರಕಟನೆಗಾಗಿ ನಾಮಪದ, ಕೃದಂತ, ಕ್ರಿಯಾಪದ, ಅವ್ಯಯ ಇವುಗಳನ್ನು ಎಡಬಿಡದೆ ಎರಡೆರಡು ಸಾರಿ ಉಚ್ಚರಿಸುವುದುಂಟು. ಕೆಲವೊಮ್ಮೆ ಎರಡಕ್ಕಿಂತ ಹೆಚ್ಚಿನ ಸಾರಿ ಸಹ ಉಚ್ಚರಿಸುವುದುಂಟು.

ಉತ್ಸಾಹ i. ಹೌದು ಹೌದು ನಾನೇ ಗೆದ್ದೆ
ii. ನಿಲ್ಲು ನಿಲ್ಲು ನಾನೂ ಬರುವೆ
ಆಧಿಕ್ಯ i. ಹಿಂದೆ ಹಿಂದೆ ಹೋದನು
ii. ಹೆಚ್ಚು ಹೆಚ್ಚು ಜನ
i. ಸಣ್ಣ ಸಣ್ಣ ಹಣ್ಣುಗಳು
ವೀಪ್ಸೆ (ಪ್ರತಿಯೊಂದು) i. ಮನೆ ಮನೆ ಗಣತಿ
ii. ಕೇರಿ ಕೇರಿ ಅಲೆದನು
iii. ಊರು ಊರು ತಿರುಗು
ಕೋಪ i. ಎಲೇ ಎಲೇ ಹೋಗಬೇಡ
ii. ಎಲೇ ಕಳ್ಳಾ ಕಳ್ಳಾ ನಿಲ್ಲು ನಿಲ್ಲು
iii. ಎಲಾ ಮೂರ್ಖಾ ಹೋಗು ಹೋಗು
ಸಂಭ್ರಮ
(ಅದರ)
i. ಅಗೋ ಅಗೋ ಅಲ್ಲಿ ನೋಡಿ ಎಷ್ಟು ಚೆನ್ನಾಗಿದೆ
ii. ಬನ್ನಿ ಬನ್ನಿ ಕುಳಿತುಕೊಳ್ಳಿ
iii. ಹತ್ತಿರ ಹತ್ತಿರ ಬನ್ನಿರಿ
ಆಶ್ಚರ್ಯ i. ಅಬ್ಬಬ್ಬಾ! ಎಂಥ ರಮ್ಯ ದೃಶ್ಯ
ii. ಅಹಹಾ! ಅವನ ಆಟ ಅದ್ಭುತ
ಆಕ್ಷೇಪ
(ತಿರಸ್ಕಾರ)
i. ಬೇಡ ಬೇಡ ಕೊಡಬೇಡ
ii. ನಡೆ ನಡೆ ಸುಮ್ಮನೆ
ಹರ್ಷ i. ಅಮ್ಮಾ ಅಮ್ಮಾ ಇದು ನಾನು ಬರೆದ ಚಿತ್ರ
ii. ಅಪ್ಪಾ ಅಪ್ಪಾ ನಾನು ತರಗತಿಗೇ ಪ್ರಥಮ
ಸಮ್ಮತಿ
(ಒಪ್ಪಿಗೆ)
i. ಹೌದು ಹೌದು ಯೋಗ್ಯ ಆಯ್ಕೆ
ii. ಇರಲಿ ಇರಲಿ, ಅವನೇ ಇರಲಿ
ತ್ವರೆ
(ಅವಸರ)
i. ಓಡು ಓಡು ಬೇಗ ಸೀಗುತ್ತಾನೆ
ii. ಹಿಡಿ ಹಿಡಿ
iii. ನಡೆ ನಡೆ ಹೊತ್ತಾಯಿತು
ದುಃಖ i. ಅಯ್ಯೋ ಅಯ್ಯೋ, ಹೀಗಾಯಿತೆ!
ii. ದೇವರೇ ದೇವರೇ, ರಕ್ಷಿಸು
iii. ಹಾ ಮಗನೇ ಹಾ ಮಗನೇ ಎಲ್ಲಿ ಹೋದೆಯಾ
ಆವೃತ್ತಿ i. ಉಂಡುಂಡು ಹೋದನು
i. ನೋಡಿ ನೋಡಿ ನಕ್ಕನು
ಭಯ i. ಹಾವು ಹಾವು
ii. ಅಯ್ಯೋ ಅಯ್ಯೋ ಬೆಂಕಿ ಬೆಂಕಿ
ಭರ್ತ್ಸನ i. ದುರುಳಾ ದುರುಳಾ
ii. ಪೆಣ್ಣು ಪೆಣ್ಣಿಂದೆತಕೆ ಬೀಳುಗಳೆವರು
ಪ್ರಾರ್ಥನೆ i. ಚಿಲಿಪಿಲಿ ಎಂದೋದುವ ಗಿಳಿಗಳಿರಾ
ii. ನೀವು ಕಾಣರೇ, ನೀವು ಕಾಣಿರೇ

ದ್ವಿರುಕ್ತಿಯಲ್ಲಿ ಬರುವ ಕೆಲವು ವಿಶೇಷ ರೂಪಕಗಳು

೧. ಪದಗಳು ಸೇರುವಾಗ (ದ್ವಿರುಕ್ತಿಯ ಸಂದರ್ಭಗಳಲ್ಲಿ) ಪೂರ್ವ ಪದ ಅಂತ್ಯಕ್ಕೆ ಲೋಪವಾಗುತ್ತದೆ. ಅದನ್ನು ಕೇಶಿರಾಜ ಈ ರೀತಿ ಹೇಳಿದ್ದಾರೆ.

ಅತಿಶಯತರಾರ್ಥ ವೀಪ್ಸಾ
ನ್ವಿತ ನಾಂತಾವ್ಯಯ ಪದಕ್ಕ ಮನು ಕೃತಿ ಪಡಕಂ
ಕೃತ ಮಂತ್ಯ ಲೋಪಮಿತರಾ
ಗತವತ್ವಂ ನಡುವಿನಂತೆ ಕಡೆಗಂ ಟತ್ವಂ (ಸೂ. ೧೯೬)

ನಾಂತಗಳಾದ ಅವ್ಯಯ ಪದಕ್ಕೂ, ಅನುಕರಣ ಪದಕ್ಕೂ ಅಂತ್ಯ ಲೋಪವಾಗುತ್ತದೆ. (ಪೂರ್ವ ಪದದಲ್ಲಿ) ನಡು, ಕಡೆ ಎಂಬವುಗಳ ಅಂತ್ಯ ಸ್ವರ ಲೋಪವಾಗಿ ಡ ಕಾರಕ್ಕೆ ಟ ಕಾರಾದೇಶವಾಗುತ್ತದೆ.

ಉದಾ. ಅಂತ್ಯಲೋಪಕ್ಕೆ ಕಮ್ಮನೆ + ಕಮ್ಮನೆ = ಕಮ್ಮಕಮ್ಮನೆ
ಮೆಲ್ಲನೆ + ಮೆಲ್ಲನೆ = ಮೆಲ್ಲಮೆಲ್ಲನೆ
ತಣ್ಣನೆ + ತಣ್ಣನೆ = ತಣ್ಣತಣ್ಣನೆ
ಸಪ್ಪನೆ + ಸಪ್ಪನೆ = ಸಪ್ಪಸಪ್ಪನೆ

ಡ > ಟ

ನಡು + ನಡು = ನಟ್ಟನಡು
ಕಡೆ + ಕಡೆ = ಕಟ್ಟಕಡೆ

೨. ತುದಿ, ಮೊದಲ್ ಎಂಬ ಪದಗಳು ಪುನರಾವೃತ್ತಿಯಾದಾಗ ದ > ತ್ತ ಎಂದಾಗಿ ಮೊದಲ್ ಎಂಬಲ್ಲಿಯ ಕೊನೆಯ ‘ಲ’ ಕಾರಕ್ಕೆ ಲೋಪವೊದಗುತ್ತದೆ. ಈ ಬಗೆಗೆ ಕೇಶಿರಾಜ ಈ ರೀತಿ ಹೇಳಿದ್ದಾನೆ.
ತುದಿಮೊದಲೆಂಬ ದಕಾರ

ಕ್ಕುದಯಿಸುಗುಂ ದ್ವಿತ್ತ ವೃತ್ತಿಯಿಂದೆ ತಕಾರಂ
ಮೊದಲೆಂಬ ಲಕಾರಕ್ಕ
ಪ್ಪುದದರ್ಶನ ವಿಧಿ ವಿಶೇಷಮಂ ನುಡಿವೊಡೆಯೊಳ್ (ಸು. ೧೯೭)

ಉದಾ. ತುದಿ + ತುದಿ = ತುತ್ತತುದಿ
ಮೊದಲ್ + ಮೊದಲ್ = ಮೊತ್ತಮೊದಲ್

೩. ಪೂರ್ವಪದದ ಅಂತ್ಯಾಕ್ಷರವನ್ನು ಮಾತ್ರ ಲೋಪಿಸಿದವು (ನಾಂತ ಪದಗಳನ್ನು ಹೊರತುಪಡಿಸಿ, ಹೆಚ್ಚಾಗಿ ಗಾಂತ ಪದಗಳು).

ಕೆಳಗೆ + ಕೆಳಗೆ = ಕೆಳಕೆಳಗೆ
ಮೆಲ್ಲನೆ + ಮೆಲ್ಲಗೆ = ಮೆಲ್ಲಮೆಲ್ಲಗೆ
ಒಳಗೆ + ಒಳಗೆ = ಒಳಗೊಳಗೆ / ಒಳೊಳಗೆ
ಕೊನೆಗೆ + ಕೊನೆಗೆ = ಕೊನೆಕೊನೆಗೆ

೪. ದ್ವಿರುಕ್ತಿಗಳ ಮೂಲಕ ಕಡೆ, ನಡು, ತುದಿ, ಬಯಲು, ಮೊದಲು ಎಂಬ ಶಬ್ದಗಳು ‘ಎಲ್ಲಕ್ಕಿಂತ ಕಡೆ’ ಎಂಬ ಅರ್ಥ ಕೊಡಬಲ್ಲವು. ಆ ಬಗೆಯವುಗಳಲ್ಲಿ ಪದಾಂತ್ಯ ವ್ಯಂಜನದ ಯಾವುದಿರುತ್ತದೆಯೋ ಅದಕ್ಕೆ ಅನುಗುಣವಾಗಿ ಆ ವ್ಯಂಜನದ ವರ್ಗ ಪ್ರಥಮಾಕ್ಷರವು ದ್ವಿತ್ವಗೊಂಡು ಬರುವುದು ಸಾಮಾನ್ಯ.

ಕಟ್ಟಕಡೆ
ನಟ್ಟನಡು
ತುತ್ತತುದಿ
ಬಟ್ಟಬಯಲು
ಮೊಟ್ಟಮೊದಲು/ ಮೊತ್ತದಮೊದಲು

‘ಮೊದಲು’ ಶಬ್ದದಲ್ಲಿ ಮಾತ್ರ ನಡುವಣ ವರ್ಗೀಯ ವ್ಯಂಜನವನ್ನು ಅನುಸರಿಸಿದೆ.

ಮೊದಲು – ಮೊತ್ತಮೊದಲು

ರೂಢಿಯಲ್ಲಿ ‘ಮೊಟ್ಟಮೊದಲು’ ಎಂದು ಕೇಳಿಬರುವುದು. ಬಹುಶಃ ಕಟ್ಟಕಡೆ, ನಟ್ಟನಡು ಎಂಬ ದ್ವಿರುಕ್ತಿಗಳ ಸಾದೃಶ್ಯದಿಂದಾಗಿ ಎಂದು ತೋರುತ್ತದೆ. ದ್ವಿರುಕ್ತಿಗಳಿಗೆ ಅರ್ಥ ಇದೆಯೇ? ಇದೆ. ಇವು ಹೇಳಬೇಕಾದ ವಿಷಯವನ್ನು ಸ್ಪಷ್ಟಪಡಿಸುತ್ತವೆ. ಮಾತಿಗೆ ಶಕ್ತಿಯುತ ಓಘವನ್ನು ತೋರಿಸುತ್ತವೆ. ಅನೌಪಚಾರಿಕ ಸನ್ನಿವೇಶಗಳಲ್ಲಿ ಇವು ಹೆಚ್ಚಾಗಿ ಬಳಕೆಯಾಗುತ್ತವೆ. ಸಾಹಿತ್ಯದಲ್ಲಿ/ಬರಹದ ಭಾಷೆಯಲ್ಲಿ ಅವುಗಳ ಬಳಕೆ ಕಡಿಮೆ.

ಅಱಸಿ ಅಱಸಿ ಹಾಹಾ ಎನ್ನುತ್ತಿದ್ದೆನು
ಬೆದಕಿ ಬೆದಕಿ ಬೆದಬೆದ ಬೇವುತ್ತದ್ದೆನು
ಗೊಗ್ಗೇಶ್ವರ ಕಣ್ಣ ಮೊದಲಲ್ಲಿದ್ದವನ ಕಾಣೆನು
(- ಅಲ್ಲಮನ ವಚನ)

ನಾಟಕಗಳ ಸಂಭಾಷಣೆಯ ಸಂದರ್ಭದಲ್ಲಿ ಧಾರಾಳವಾಗಿ ಬಳಕೆಯಾಗುತ್ತವೆ. ಉದಾ. ‘ಸೊಹ್ರಾಬ್ – ರುಸ್ತುಂ’ ನಾಟಕದಲ್ಲಿ ಇರಾನಿ ಸೈನಿಕರು ಸೊಹ್ರಾಬ್‌ನ ರಾಜ್ಯವನ್ನು ಮುತ್ತಿಗೆ ಹಾಕಿದಾಗ ನಡೆಯುವ ಸಂಭಾಷಣೆ

ಸುಲೇಮಾನ್ – ಬೆಂಕಿಯೆಂದು ತಿಳಿದು ತಿಳಿದು ಮುಂದೆ ನುಗ್ಗುವರೆ?
ಸೊಹ್ರಾಬ್ – ಬೆಂಕಿಯೆಂದು ಹೆದರಿ ಹೆದರಿ ನಿಂತರೆ ಕೆಲಸವಾದೀತೆ?

ಜಾನಪದ ಗೀತ ರೂಪಕದಲ್ಲಿ ಒಂದು ಘಟನೆ/ಕ್ರಿಯೆಯ ಭಾವನೆಗಳನ್ನು ಅತಿಶಯ ಅಥವಾ ಉತ್ಕಟಗೊಳಿಸಲಿಕ್ಕೆ ದ್ವಿರುಕ್ತಿಗಳು ಬರುತ್ತವೆ. ಉದಾ. ಸಂಗ್ಯಾಬಾಳ್ಯಾದಲ್ಲಿ ಗಂಗಾಳ ರೂಪ ವೈಯಾರವನ್ನು ಸಂಗ್ಯಾ, ಬಾಳ್ಯಾನಿಗೆ ಹೇಳುವ ಪದಗಳು, ಪದಪುಂಜಗಳು ಪುನರಾವರ್ತನೆಯಾಗಿ ಕಾವ್ಯಸೌಂದರ್ಯಕ್ಕೆ ಕಾರಣವಾಗುತ್ತವೆ.

ಒಂದ ಹೆಣ್ಣ | ಒಂದ ಹೆಣ್ಣ ಕಂಡಿನೊ ಬಾಳಣ್ಣ ಕಣ್ಣಾರೆ ನೋಡಿನೊ
ಊರೊಳಗ | ಊರೊಳಗ ಇದ್ಹಾಂಗೂ ಬಾಳ್ವಾ ರತೀದೇವಿ ||
ನಡಿನ್ಯಾಗ | ನಡಿನ್ಯಾಗ ಇಟಾಳೊ ಬಾಳ್ಯಾ ಒಡ್ಡಾಣ ||

ಕೆಲವು ಸಂದರ್ಭದಲ್ಲಿ ಸನ್ನಿವೇಶವನ್ನು ಯಥಾವತ್ತಾಗಿ ಚಿತ್ರಿಸಲಿಕ್ಕೂ ಇವು ನೆರವಾಗುತ್ತವೆ. ಉದಾ. ‘ರಾತ್ರಿ ಆದ ಕೂಡಲೇ ಕುಡದ ಜೋಲಿ ಹೊಡ ಕೊತ, ಜೋಲಿ ಹೊಡಕೊತ ಬರ್ತಾನ’ ಎನ್ನುವಲ್ಲಿ ವ್ಯಕ್ತಿ ಬಹುಪಾಲು ಮಧ್ಯಪಾನ ಮಾಡಿದ್ದಾನೆ ಎಂಬುದನ್ನು ಸೂಚಿಸುತ್ತದೆ. ಒಬ್ಬ ವ್ಯಕ್ತಿ ಸಥವಾ ಒಂದು ವಸ್ತುವಿನ ಬಗ್ಗೆ ನಮ್ಮ ಭಾವನೆಯನ್ನು ವ್ಯಕ್ತಪಡಿಸುವಾಗ ಇವು ಅರ್ಥವತ್ತಾಗಿ ಬಳಕೆಯಾಗುತ್ತವೆ. ಉದಾ. ‘ಮಾವ ಬಂದ ಮರೆಯಾಗು’ ಎಂಬ ವಾಕ್ಯ ‘ಮಾವ ಬಂದ ಮರೆಯಾಗು, ಮರೆಯಾಗು’ ಎಂಬ ವಾಕ್ಯಕ್ಕಿಂತ ಹೆಚ್ಚು ಪರಿಣಾಮಕಾರಿ. ದ್ವಿರುಕ್ತಿಗಳ ಬಗ್ಗೆ ಗಂಭೀರವಾಗಿ ವಿಚಾರ ಮಾಡಿ ನೋಡಿದಾಗ ಅವುಗಳ ರಚನೆಯಲ್ಲಿ ಒಂದು ಕ್ರಮವಿರುವುದನ್ನು ಗುರುತಿಸಬಹುದು ಅರ್ಥ ಅಥವಾ ನಿಯೋಗದ ದೃಷ್ಟಿಯಿಂದಲೂ ಅವು ಭಾಷೆಯಲ್ಲಿ ಮುಖ್ಯವಲ್ಲದಿದ್ದರೂ ಗಣನೀಯವಾದ ಪಾತ್ರವಹಿಸುತ್ತವೆಂಬುದನ್ನು ಗಮನಿಸಬೇಕು.

೬. ಈವರೆಗೆ ನಡೆದಿರುವ ವಾಗ್ರೂಡಿಗಳ ಚರ್ಚೆಗಳಲ್ಲಿ ಜೋಡು ನುಡಿಗಳ ಬಗೆಗೆ ಪ್ರಾಸಂಗಿಕವಾಗಿ ಚರ್ಚೆ ನಡೆದಿದೆ. ಪ್ರತ್ಯೇಕವಾಗಿ, ಸ್ವಲ್ಪ ವಿವರದಲ್ಲಿ ಆ ವಿಚಾರವನ್ನು ಮುಂದುವರಿಸುವುದು, ಜೋಡುನುಡಿಗಳ ಸ್ವರೂಪವನ್ನು ಇನ್ನಷ್ಟು ಖಚಿತಪಡಿಸುವುದು ಶಂಬಾ ಅವರ ಉದ್ದೇಶ. ಜೋಡುನುಡಿಗಳೆಂದರೆ ಬಹುಮಟ್ಟಿಗೆ ಅರ್ಥದಲ್ಲಿ ಸಾಮ್ಯವಿರುವ ಎರಡು ಪದಗಳು. ಅವು ಜೊತೆಜೊತೆಯಾಗಿ ಬಂದಾಗ ವಿಶಿಷ್ಟವಾದ ಅರ್ಥವನ್ನು ಕೊಡುತ್ತವೆ. ಜೋಡುನುಡಿಗಳ ರಚನೆ, ಸ್ವರೂಪ ಸರಳವಾದುದು ಮತ್ತು ವ್ಯವಸ್ಥಿತವಾದುದು. ಇವುಗಳನ್ನು ಸ್ಥೂಲವಾಗಿ ನಾಲ್ಕು ಗುಂಪುಗಳಾಗಿ ವಿಂಗಡಿಸಬಹುದು.

೧. ಸ್ಪಷ್ಟವಾಗಿ ಅರ್ಥಭೇದವಿರುವ ಎರಡು ಶಬ್ದಗಳು ತಮ್ಮ, ಪ್ರತ್ಯೇಕವಾದ ಅರ್ಥವನ್ನು ಕಳೆದುಕೊಂಡು ಸ್ಥೂಲವಾಗಿ ಏಕಾರ್ಥ ಸಾದೃಶ್ಯಭಾವವನ್ನು ಹೊಂದಿ ಒಂದು ಮೊತ್ತದ ಆಶಯ, ಅಭಿಪ್ರಾಯಗಳನ್ನು ತಿಳಿಸಲು ಸಮರ್ಥವಾಗುತ್ತವೆ. ಇಂತಹ ರಚನೆಗಳು ಭಾಷಿಕ ಸನ್ನಿವೇಶಗಳಲ್ಲಿ ತೀರ ಸಾಮಾನ್ಯ. ಆಡುನುಡಿಯಲ್ಲಿ ಇವುಗಳ ಪ್ರಾಚುರ್ಯ ಹೆಚ್ಚು. ಈ ವರ್ಗಕ್ಕೆ ಸೇರುವ ಪದಗಳೆಂದರೆ

ಮಳೆಬೆಳೆ           ಕಸಮುಸುರೆ       ಮನೆಮಠ
ಎಣ್ಣೆಬೆಣ್ಣೆ             ಕಾಳುಕಡಿ           ಹಸಿಬಿಸಿ
ಕಪ್ಪುಕಾಣಿಕೆ         ತಾಳಮೇಳ        ಕಸಕಡ್ಡಿ ಮುಂತಾದವು

ಎರಡೂ ಪದಗಳೂ ಅತ್ಯಂತ ಸಮೀಪ ಸಂಬಂಧಿಗಳಾಗಿ ಒಗ್ಗೂಡಿ, ತಂತಮ್ಮ ಆಶಯಗಳೊಂದಿಗೆ ಒಂದು ಹೊಸ ಆಶಯವನ್ನು ಹೊರಪಡಿಸುತ್ತವೆ.

೨. ಅ. ಮೊದಲ ಪದದ ಅರ್ಥ ಸ್ಪಷ್ಟವಾಗಿದ್ದರೂ ಎರಡನೆಯದರ ಅರ್ಥ ಹಾಗೂ ಸ್ವರೂಪ ಅಸ್ಪಷ್ಟವಾಗಿರುತ್ತದೆ, ಅನಿಶ್ಚಿತವಾಗಿರುತ್ತದೆ.

ಕೂಲಿಕುಂಬಳ     ನೀರುನಿಡಿ
ಕೆಲಸಬೊಗಸೆ     ಲಗುಬಿಗು
ಅರಿವೆ ಅಂಚಡಿ    ದಕ್ಕುಕಕ್ಕು ಮುಂತಾದವು

ಆ. ಎರಡು ಶಬ್ದಗಳಲ್ಲಿ ಮೊದಲನೆಯದರ ಅರ್ಥ ಮಾತ್ರ ಸ್ಪಷ್ಟವಾಗಿದ್ದು, ಎರಡನೆಯದರ ಅರ್ಥ ಅಸ್ಪಷ್ಟವಾಗಿರುತ್ತದೆ. ಇಲ್ಲವೆ ಮೊದಲು ಸ್ಪಷ್ಟವಾಗಿದ್ದು ಕಾಲಕ್ರಮದಲ್ಲಿ ನಶಿಸಿ ಹೋಗಿರಬಹುದು. ಮೊದಲನೆಯ ಶಬ್ದದ ಅರ್ಥ ಮತ್ತು ನಿಷ್ಪತ್ತಿಗಳ ಸಮೀಪ ಸಂಬಂಧವನ್ನು ಎರಡನೆಯ ಶಬ್ದಕ್ಕೆ ಕಲ್ಪಿಸಲು ಸಾಧ್ಯವಿರುವಂತೆ ತೋರುತ್ತದೆ. ಇವೆರಡು ಕೂಡಿ “ಇವು ಮತ್ತು ಇತರ, ಇಂತಹ” ಎಂಬ ಆಶಯವನ್ನು ಈ ಬಗೆಯ ಜೋಡುನುಡಿಗಳು ಕೊಡುತ್ತವೆ.

‘ತೋಟತುಡಿಕೆ’ ಎಂಬ ಪದವನ್ನು ಗಮನಿಸಬಹುದು. ‘ತೋಡು’ ಧಾತುವಿನಿಂದಲೇ ಇಲ್ಲಿಯ ಎರಡು ಶಬ್ದಗಳು ಹುಟ್ಟಿರಬಹುದೆಂದು ಊಹಿಸಬಹುದಾಗಿದೆ. ಶಾಸನಗಳಲ್ಲಿ ಈ ಜೋಡುನುಡಿಗೆ ಹಾಗೂ ಪ್ರತ್ಯೇಕವಾಗಿ ಇದರ ಎರಡು ಶಬ್ದಗಳಿಗೆ ಪ್ರಯೋಗಗಳು ಕಂಡುಬರುತ್ತವೆ.

‘ಆ ಹಸುರ ಹಳ್ಳಿ ಗ್ರಾಮಕ್ಕೆ ಸಲ್ಲುವ ಗದ್ದೆ ಬೆದಲು ತೋಟ ತುಡಿಕೆ’ (ಎ.ಕ. IV 116;1593)

‘ಆ ಗ್ರಾಮಕ್ಕೆ ಸಲ್ಲುವ ಚತುಃಸೀಮೆಯವೊಳಗಾಡ ಕೆರೆಗದ್ದೆ ಬೆದಲು ತೋಟತುಡಿಕೆ’ (ಎ.ಕ. IV 229;1563)

‘ತುಡಿಕೆ’, ‘ತೊಡಿಕೆ’ ಪದ ಸ್ವತಂತ್ರವಾಗಿಯೂ ಬಂದಿದೆ. ‘ಸ್ವಸ್ತಿಶ್ರೀ ಉದಾ ಅಯ್ಯ ದೇವಪರ ವಿಟ್ಟಿತೊಡಿಕೆ ಅಱವಿಟ್ಟರ್’ (ಮೈಆರಿ ೧೯೩೪, ಪು.೧೭೦). ಇಲ್ಲಿ ‘ತೊಡಿಕೆ’ ಎಂದರೆ ಪ್ರಾಯಶಃ ‘ಹೂವಿನತೋಟ’ ಎಂದು ಅಭಿಪ್ರಾಯವಾಗುವಂತೆ ತೋರುತ್ತದೆ. ಮೊದಲು ತೆಂಗು, ಅಡಿಕೆ, ಬಾಳೆ ಮುಂತಾದ ಬೆಳೆಗಳು ಬೆಳೆಯುವ ಭೂಮಿಗೆ ‘ತೋಟ’ ವೆಂದೂ ಹೂಗಿಡಗಳನ್ನು ಬೆಳೆಯುವ ಉದ್ಯಾನವನವನ್ನು ‘ತೊಡಿಕೆ’ ಎಂದೂ ಕರೆಯುತ್ತಿದ್ದರು. ಕಾಲಕ್ರಮದಲ್ಲಿ ಏಕಾರ್ಥ ಸಾದೃಶ್ಯವನ್ನು ಪಡೆದಿರುವುದು ಸ್ಪಷ್ಟ. ‘ಹುಳುಹುಪ್ಪಡಿ’ ಹುಳು ಮತ್ತು ಆ ವರ್ಗದ ಇನ್ನೂ ಕೀಳಾದ ಜಂತುಗಳನ್ನು ಹುಪ್ಪಡಿ ಪದ ಸೂಚಿಸುತ್ತದೆ. ಈ ವರ್ಗಕ್ಕೆ ಸೇರುವ ಜೋಡುನುಡಿಗಳು ತುಂಬ ಕಡಿಮೆ.

ದೇವರುದಿಂಡರು-            ಬಡಬಗ್ಗರು
ಬೀಗರುಬಿಜ್ಜರು-              ನೆರೆಹೊರೆ

ಇವು ಈ ವರ್ಗಕ್ಕೆ ಸೇರಬಹುದು, ಆಲೋಚಿಸಬೇಕಾಗಿದೆ. ಒಂದು ಗಮನಿಸಬೇಕಾದ ಸಂಗತಿ ಎಂದರೆ ಈ ಗುಂಪಿನಲ್ಲಿ ಬರುವ ಘಟಕಗಳು ಆ ಜೋಡುನುಡಿಯಲ್ಲಿ ಮಾತ್ರ ಕಾಣಿಸಿಕೊಂಡು ಪೂರ್ವಪದ ಮತ್ತು ಉತ್ತರಪದಗಳು ಬೇರೆ ಭಾಷಿಕ ರಚನೆಗಳಲ್ಲಿ ಬರುತ್ತವೆ. ಉದಾ. ಕೆಲಸಬೊಗಸೆ, ಬಡಬಗ್ಗರು ಇಂತಹ ರಚನೆಗಳನ್ನು ಗಮನಿಸಿದಾಗ ‘ಬೊಗಸೆ’ ಕೆಲಸದ ಜೊತೆಗೆ ‘ಬಗ್ಗರು’, ‘ಬಡ’ ದ ಜೊತೆಗೆ ಮಾತ್ರ ಕಂಡುಬರುತ್ತದೆ. ಕೆಲಸ ಮತ್ತು ಬಡ ಇವು ಸ್ವತಂತ್ರವಾಗಿ ಬಳಕೆಯಾಗುತ್ತವೆ.

೩. ಎರಡು ಶಬ್ದಗಳ ಅರ್ಥ ಮತ್ತು ಸ್ವರೂಪ ಅಸ್ಪಷ್ಟವಾಗಿದ್ದು ಅಸ್ತವ್ಯಸ್ತತೆ, ಗೊಂದಲಗಳೇ ಆಶಯವಾಗಿರುತ್ತದೆ. ಅವುಗಳಿಂದ ಸಾಧಿತವಾದ ಜೋಡುನುಡಿ ಯಲ್ಲಿಯೂ ಅದೇ ಅಸ್ಪಷ್ಟತೆ ಇರುತ್ತದೆ.

ಅಡಸಲು-           ಬಡಸಲು
ಇರುಸು-            ಮುರುಸು
ಎಗ್ಗಾ-               ಮುಗ್ಗಾ
ಅಗಡಿ-              ದಿಗಡಿ

೪. ಸಮಾನಾರ್ಥಕವಾದ ಶಬ್ದಗಳಲ್ಲಿ ಎರಡೂ ದೇಶ್ಯ ಶಬ್ದಗಳಾಗಿರಬಹುದು ಇಲ್ಲವೇ ಅದರಲ್ಲಿ ಒಂದು ದೇಶ್ಯ ಒಂದು ದೇಶ್ಯ ಶಬ್ದವಾಗಿ ಇನ್ನೊಂದು ಅನ್ಯಭಾಷೆಯ ಶಬ್ದಗಳಾಗಿರಬಹುದು. ಅವೆರಡು ಸೇರಿ ಜೋಡುನುಡಿಗಳಾಗುವ ಸಂಭವ ಉಂಟು.

ಹಣ್ಣುಹಂಪಲ-      ಕಂಪೌಂಡಗೋಡೆ
ತಲೆಶಿರೋಭಾರ- ಚೋರಕಳ್ಳ
ಗೇಟ್‌ಬಾಗಿಲು-    ಮುಂತಾದುವು.

ಜೋಡುನುಡಿಗಳನ್ನು ಇನ್ನೊಂದು ರೀತಿಯಾಗಿ ವರ್ಗೀಕರಿಸಬಹುದು.

೧. ಸಮಾನಾರ್ಥಕ ಜೋಡುನುಡಿಗಳು :

ಅಂದಚೆಂದ-       ಉಣ್ಣುತಿನ್ನು
ನಡುಮಧ್ಯ-        ಕೂಡಲಸಂಗಮ
ಅಚ್ಚುಮೆಚ್ಚು-       ಮುಂತಾದವು

೨. ವಿಜಾತಿಯ ಪದಗಳಿಂದಾಗುವ ಜೋಡುನುಡಿಗಳು : ಎರಡು ಪದಗಳಿಗೆ ಪ್ರತ್ಯೇಕವಾದ ಅರ್ಥವಿದ್ದರೂ ಸಾಹಚರ್ಯದಿಂದ ಒಂದೇ ಭಾವವನ್ನು ಇವು ಬಿಂಬಿಸುತ್ತವೆ.

ಅಣ್ಣತಮ್ಮ-         (ಸಹೋದರ)
ಕಾಫಿತಿಂಡಿ-        (ಉಪಹಾರ)
ಕಂಠಪತ್ರ-          (ಲೇಖನಸಾಮಗ್ರಿ)

೩. ವಿರೋಧ ಪದಗಳಿಂದಾಗುವ ಜೋಡುನುಡಿಗಳೂ : ರಾತ್ರಿಹಗಲು, ಮೇಲೆಕೆಳಗೆ, ಪಾಪಪುಣ್ಯ, ಭವಭಕ್ತ ಮುಂತಾದವು.

ಮಾತನಾಡುವಾಗ ಭಾವದ ಸ್ಪಷ್ಟತೆಗಾಗಿಯೋ, ಅವಧಾರಣೆಗಾಗಿಯೋ ಇಲ್ಲವೆ ಅಭಿಪ್ರಾಯ ವಿಶೇಷತೆಗಾಗಿಯೋ ಜೋಡುನುಡಿಗಳನ್ನು ಬಳಸುವುದುಂಟು. ಜೋಡುನುಡಿಗಳು ಭಾಷೆಯ ಅರ್ಥಪೂರ್ಣ ಘಟಕಗಳು. ಅವುಗಳ ಅರ್ಥ ಇದೇ ಎಂದು ಖಚಿತವಾಗಿ ಹೇಳುವುದು ಕಷ್ಟ. ಅದರ ಬದಲು ಅವು ಬಳಕೆಯಾಗುವ ಕೆಲವು ಮುಖ್ಯ ಸನ್ನಿವೇಶಗಳನ್ನು ಗುರುತಿಸುವ ಯತ್ನ ಮಾಡಲಾಗಿದೆ.

ಅ. ಜೋಡನುಡಿಗಳು ಅನೌಪಚಾರಿಕ ಸಂದರ್ಭಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತವೆ. ಅದರಲ್ಲೂ ವಿದ್ಯಾವಂತರಿಗಿಂತ ಅನಕ್ಷರಸ್ಥರ ಮಾತಿನಲ್ಲಿ ಇವುಗಳ ಬಳಕೆ ಹೆಚ್ಚು. ಬರಹದ ಭಾಷೆಯಲ್ಲಿ ಕಡಿಮೆ ಇಲ್ಲವೆಂತಲ್ಲ. ಉದಾ. ‘ಸಾಮಂತರಿರ್ವರಿದಂ ದೊರೆಗಳ್ ಕಪ್ಪುಕಾಣ್ಕೆ ಪಡೆದರು’ (ಚಿಕ್ಕದೇವರಾಯ ವಂಶವಾಳಿ), ‘ಕ್ರಿಮಿಕಸ ಕಡ್ಡಿ ಮಣ್ಣೊಳೊ ಎಸೆದೆಪ್ಪಂ’ (ಸಾನಂದ ಚರಿತ್ರ), ‘ಕೈಲಾದಷ್ಟು ಬಡಬಗ್ಗರಿಗೆ ದಾನಮಾಡಿರಯ್ಯ’ (ಪುರಂದರದಾಸ) ಆಧುನಿಕ ಕಾವ್ಯ ಪ್ರಕಾರಗಳಲ್ಲೂ ಇವು ಕಂಡುಬರುತ್ತವೆ. ಮಾತಿಗೆ ಮೊನಚನ್ನು ಸನ್ನಿವೇಶವೊಂದನ್ನು ಸಹಜವಾಗಿಸುವುದು ಇವುಗಳ ಉದ್ದೇಶ.

ಆ. ಹೇಳುತ್ತಿರುವ ವಿಷಯದಲ್ಲಿ ನಿರ್ದಿಷ್ಟತೆ, ಖಚಿತತೆ ಇದ್ದಾಗ ಇವು ಬಳಕೆಯಾಗುತ್ತವೆ. ‘ಕತ್ತಲು ಆಗೇತಿ ಹೋಲಕ್ಕೆ ಹೋಗುವಾಗ ಜೋಕೆ, ಹುಳುಹುಪ್ಪಡಿ ಬಹಳ’, ‘ರಾತ್ರಿ ಸಮಯ ಹುಷಾರದಿಂದ ಹೋಗು’ ಎಂಬ ಸೂಚನೆಯನ್ನು ‘ಹುಳುಹುಪ್ಪಡಿ’ ಪದ ಪ್ರಯೋಗದಿಂದ ತಿಳಿದುಬರುವುದು. ‘ಎತ್ತುಗಳಿಗೆ ಕಾಳುಕಡಿ ಹಾಕಿ ಮೇಯಿಸಬೇಕು’ ಎತ್ತುಗಳಿಗೆ ಶಕ್ತಿ ಬರಬೇಕಾದರೆ ಕಾಳು ಅಂತಹ ದವಸಧಾನ್ಯಗಳನ್ನು ಹಾಕಬೇಕು ಎತ್ತುಗಳಿಗೆ ಎಂಬ ಅಂಶ ತಿಳಿಯುತ್ತದೆ. ಭಾಷಾ ಬಳಕೆಯ ಬೇರೆ ಬೇರೆ ಸಂದರ್ಭಗಳಲ್ಲಿ ಧಾರಾಳವಾಗಿ ಬಳಕೆಯಾಗುವ ‘ಜೋಡುನುಡಿಗಳು’ ಭಾಷಿಕ ಚರ್ಚೆಯಲ್ಲಿ ಮುಖ್ಯವಲ್ಲದಿದ್ದರೂ ಮಹತ್ವದ ಪಾತ್ರವಹಿಸುತ್ತವೆ.

೭. ಆಡುಮಾತು ಹಾಗೂ ಲಿಪಿಗಳ ಭಿನ್ನಗುಣಗಳನ್ನು ವಿವರಿಸಲಾಗಿದೆ. ಪ್ರಕೃತಿಯಲ್ಲಿಯ ಪ್ರಾಣಿಪಕ್ಷಿಗಳ ಕೂಗಿನ ಅನುಕರಣೆಯ ಸಂಸ್ಕೃತಗೊಂಡ ರೂಪವೇ ಭಾಷೆಯಾಗಿ ಮೂಡಿದೆ ಎಂಬುದು ಶಂಬಾ ಅವರ ನಿಲುವಾಗಿದೆ. ಭಾಷೆಯು ಪ್ರಾರಂಭದಲ್ಲಿ ರಾಗಯುಕ್ತವಾಗಿದ್ದು ದೀರ್ಘವಾದ ಇಡೀ ರಾಗ ಒಂದು ಅಖಂಡವಾದ ಅರ್ಥವನ್ನು ಹೇಳುತ್ತಿತ್ತು ಶಬ್ದಗಳೆಂಬುದು ಇರಲಿಲ್ಲ. ನಾದ ಅರ್ಥಗಳು ಒಂದಕ್ಕೊಂದು ಹೊಂದಿಕೊಂಡಿದ್ದವು. ಇಂತಹವುಗಳಲ್ಲಿ ಹುಟ್ಟು ನುಡಿಗಳು ಎಂದು ಕರೆಯಬಹುದೆಂದೂ ಇವೇ ಸಹಜ ಶಬ್ದಗಳೆಂದೂ ಶಂಬಾರವರು ಹೇಳುತ್ತಾರೆ. ಇಂತಹ ಹುಟ್ಟುನುಡಿಗಳ ವಿಷಯದಲ್ಲಿ ಭಾಷೆ – ಭಾಷೆಗಳಲ್ಲಿ ಹೋಲಿಕೆ ಕಂಡುಬರುತ್ತದೆ. ಉದಾಹರಣೆಗೆ, ಕನ್ನಡ. ಕೂಗು; ಕುವಿ. ಕೂವು; ಮಲೆಯಾಳ. ಕೊವು; ತೆಲುಗು. ಕೊಯು; ತುಳು. ಕೂಗು; ಸಂಸ್ಕೃತ. ಕೂಜನ; ಇಂಗ್ಲೀಷ್. ಕಾಲ್ ಇವುಗಳನ್ನು ಗಮನಿಸಬಹುದು. ಇವೆಲ್ಲವೂ ಒಂದು ಮೂಲದ್ರವ್ಯಕ್ಕೆ ವಿವಿಧ ಪ್ರತ್ಯಯಗಳು ಸೇರಿ ಉಂಟಾಗಿವೆ.

ಭಾಷೆಯಲ್ಲಿಯ ಕೆಲವು ವರ್ಣಗಳು ಅರ್ಥಸೂಚಕವಾಗಿದೆ. ಉದಾಹರಣೆಗೆ, ‘ರ್’ ಕೆಂಪು ವರ್ಣ ಸೂಚಕವಾಗಿದೆ. ರೋಷ, ರಾಗ, ರೊಚ್ಚು, ರಂಗು, ರಕ್ತ ಮುಂತಾದ ಶಬ್ದಗಳು ಧ್ವನಿಯಿಂದಲೇ ಕೆಂಪನ್ನು ಸೂಚಿಸುತ್ತದೆ (ಆದರೆ ರಾಜ, ರಾತ್ರಿ ಮುಂತಾದ ಶಬ್ದಗಳಲ್ಲಿ ಇದು ಹೇಗೆ ಸಾಧ್ಯ?). ಕೆಲವು ಅಕ್ಷರಗಳು ಗತಿಸೂಚಕಗಳಾಗಿವೆ. ಉದಾಹರಣೆಗೆ – ಳ, ಡ, ರ ಗಳು ಗಳಗಳನೆ, ಗಡಗಡ, ಬೀಳು, ಉರುಳು, ಸುರಿ ಮುಂತಾದವುಗಳಲ್ಲಿ ಗತಿ ಸೂಚಕವಾಗಿವೆ.

ಕನ್ನಡದಲ್ಲಿ ಎರಡಕ್ಷರದ ಕಿರುನುಡಿಗಳೇ ಅಧಿಕವಾಗಿವೆ. ಕೆಲವೊಂದು ಪ್ರಸಂಗದಲ್ಲಿ ದೀರ್ಘನುಡಿಗಳು ಅವಶ್ಯವಾಗುತ್ತವೆ. ನಾದದ ಮೂಲದ್ರವ್ಯಕ್ಕೆ ವಿವಿಧ ಪ್ರತ್ಯಯಗಳನ್ನಂಟಿಸಿ ಹೊಸ ಹೊಸ ಶಬ್ದಗಳನ್ನು ಹುಟ್ಟಿಸಬಹುದು. ಸಂಸ್ಕೃತ, ತಮೀಳು, ಮುಂತಾದ ಭಾಷೆಗಳಲ್ಲಿ ಹೀಗೆ ಶಬ್ದಗಳನ್ನು ಪಡೆಯಲಾಗಿದೆ. ಉದಾ. ‘ಕಲ್’ ಧಾತುವಾಗಿಯೂ ‘ಕಲ’ ನಾಮವಾಗಿಯೂ ಸಂಸ್ಕೃತದಲ್ಲಿದೆ. ‘ಕಲೆ’ ಇದೆ. ‘ಕಲ’ ಎಂಬುದಕ್ಕೆ ರವ, ಭಾಷಣ, ಕಂಠ, ಕೂಣಿಕಾ ಇತ್ಯಾದಿಗಳನ್ನು ಸೇರಿಸಿ ಹೊಸ ಹೊಸ ಶಬ್ದಗಳನ್ನು ಸೃಷ್ಟಿಸಲಾಗಿದೆ. ಕನ್ನಡದಲ್ಲಿ ಹೀಗೆ ಆಗಿಲ್ಲ. ಮೂಲದ್ರವ್ಯಗಳಿಂದ ಹುಟ್ಟುನುಡಿ ಅಥವಾ ಸಹಜ ಶಬ್ದಗಳನ್ನು ಹುಟ್ಟಿಸುವಲ್ಲಿ ಬುದ್ಧಿವಂತರಿಗಿಂತ ಸಹಜ ಸ್ವಭಾವದ ಮಕ್ಕಳೂ ಹೆಣ್ಣು ಮಕ್ಕಳೂ ಪ್ರತಿಭಾವಂತರು. ಒಂದು ನಾಡಿನ ಸೊಲ್ಲು ಎಂತಹುದೋ ಅಂತಹವರು ಅಲ್ಲಿನ ಜನ. ನುಡಿಯ ಏಳ್ಗೆಯಾಗದೆ ನಾಡಿನ ಏಳ್ಗೆಯಿಲ್ಲ. ಕನ್ನಡ ನಾಡಿನ ವೀರ, ಸತ್ವ ಸಾಹಸಗಳ ಯುಗವು ಒಂದಾಯ್ತು. ಅಂದು ಪಂಪಭಾರತ, ರನ್ನನ ಗದಾಯುದ್ಧದಂತಹ ಓಜಸ್ವಿಯಾದ ಮಹಾಕಾವ್ಯಗಳು ಹುಟ್ಟಿದವು… ಮುಂದೆ ಕನ್ನಡದ ಹದ ಕೆಟ್ಟಿತು. ಕನ್ನಡ ನಾಡು ತಲೆತಗ್ಗಿಸಿ ಕುಗ್ಗಲಾರಂಭಿಸಿತು… ಇಂದು ಮತ್ತೆ ಕನ್ನಡವು ವೀರರ ನುಡಿ, ವಿಚಾರಗಳ ಭಾಷೆ, ಕವಿಗಳ ಸೊಲ್ಲು ಆಗುವ ಅರ್ಹತೆಯನ್ನು ಪಡೆಯಬೇಕಿದ್ದರೆ ಕನ್ನಡದ ಕೆಚ್ಚು ಅಂತಃಸತ್ವವು ಹೆಚ್ಚಾಗಬೇಡವೆ? ಕನ್ನಡಿಗರೆಲ್ಲ ಕನ್ನಡದ ನಾಲಗೆಯಿಂದಲೇ ಮಾತನಾಡುವ ಪಣ ತೊಡಬೇಕು. ಏಕೆಂದರೆ ಕನ್ನಡವು ಮತ್ತೆ ಜೀವಂತ ಭಾಷೆಯಾಗಲು ಇದರ ಹೊರತು ಬೇರೆ ದಾರಿಯೆ ಇಲ್ಲ. ಇದು ಶಂಬಾ ಅವರ ಅಭಿಮತವಾಗಿದೆ.

ಹುಟ್ಟುನುಡಿಗಳ ಪಟ್ಟಿ ಎಂಬ ಎರಡನೆಯ ಭಾಗದಲ್ಲಿ ವಿವಿಧ ಶಬ್ದದ್ರವ್ಯಗಳಿಂದ ಶಬ್ದಗಳು ಹುಟ್ಟಿದ ಅಥವಾ ಹುಟ್ಟಿಸಬಹುದಾದ ಮಾದರಿಗಳನ್ನು ಕೊಡಲಾಗಿದೆ. ಹಳಗನ್ನಡದಲ್ಲದ್ದ ಅನೇಕ ಹುಟ್ಟುನುಡಿಗಳನ್ನು ಬಳಕೆಗೆ ತರುವುದರ ಜೊತೆಗೆ ಇದೇ ಮಾದರಿಯಲ್ಲಿ ಹೊಸ ಶಬ್ದಗಳನ್ನು ಉಂಟುಮಾಡಿಕೊಳ್ಳಬೇಕೆಂಬುದು ಶಂಬಾ ಅವರ ಒಟ್ಟು ಆಶಯವಾಗಿದೆ.

ಕನ್ನಡ ಭಾಷೆ ಹೊಸ ನುಡಿಗಟ್ಟುಗಳನ್ನು ರೂಪಿಸಿಕೊಂಡು ಶ್ರೀಮಂತವಾಗಬೇಕು ಎಂಬ ಆಶಯವೇ ಹಿನ್ನೆಲೆಯಾಗಿ, ಈ ರೂಪಣಕ್ರಿಯೆಗೆ ನಿರ್ದಿಷ್ಟ ದಿಕ್ಕನ್ನು ತೋರುವಂತೆ ಕನ್ನಡ ಶಬ್ದರಚನೆಯ ವಿವಿಧ ರೀತಿಗಳನ್ನು ಪರಿಚಯಿಸಲಾಗಿದೆ ಎಂಬುದು ಈ ಮೇಲಿನ ಉದ್ಧರಣ ವಿವರಣಗಳಿಂದ ಸ್ಪಷ್ಟವಾಗಿದೆ. ಈ ಸಂದರ್ಭದಲ್ಲಿ ಭಾಷೆಯನ್ನು ಕುರಿತು ಹೇಳಿದ ಕೆಲವು ಮಾತುಗಳನ್ನು ಇಂದು ಒಪ್ಪುವುದು ಕಷ್ಟವಾಗಬಹುದು. ಕಳೆದ ಐವತ್ತು ವರ್ಷಗಳ ಅವಧಿಯಲ್ಲಿ ಭಾಷೆಯ ಬಗೆಗಿನ ನಮ್ಮ ತಿಳಿವಳಿಕೆ ಸಾಕಷ್ಟು ಬದಲಾಗಿರುವುದರಿಂದ ಇದು ಅನಿವಾರ್ಯವಾಗಿದೆ. ಯಾವುದೇ ಶಾಸ್ತ್ರ ವಿಷಯದಲ್ಲಿ ಹೀಗಾಗುವುದು ಸಹಜವೇ ಆಗಿದೆ. ಆದರೆ ನಲವತ್ತರ ದಶಕದಲ್ಲಿ ಕನ್ನಡದ ಅಭಿಮಾನ ಕೇವಲ ಅಮೂರ್ತವಾದ ಮಾತುಗಳಾಗಿರದೆ ಶಬ್ದಕೋಶದ ಬಗೆಗೆ ಶಂಬಾ ಅವರು ವಸ್ತುನಿಷ್ಠವಾಗಿ ಆಲೋಚಿಸಿದ್ದಾರೆಂಬುದು ವಿಶೇಷ ಸಂಗತಿಯಾಗಿದೆ. ಕನ್ನಡ ಶಬ್ದಗಳು ಮೊದಲಾಕ್ಷರದಲ್ಲಿ ಆಘಾತವನ್ನು ಹೊಂದಿರುತ್ತವೆ ಎಂಬುದಾಗಲೀ ಸಮಾಸದಲ್ಲಿ ಎರಡನೆ ಶಬ್ದವು ಆಘಾತವನ್ನು ಕಳೆದುಕೊಳ್ಳುವುದರಿಂದ ‘ಅಕ್ಷರ ಬದಲಾವಣೆ’ (ಮುಖ್ಯವಾಗಿ ಪರುಷವರ್ಣಗಳು ಸರಳವಾಗುವುದು) ಆಗುತ್ತದೆಂಬ ಮಾತಾಗಲೀ ಇಂದೂ ಸ್ವೀಕಾರಾರ್ಹವೇ. ಕನ್ನಡ ಶಬ್ದಗಳಲ್ಲಿ ‘ಮೂಲಶಬ್ದ’ ಗಳೊಂದಿಗೆ ಸೇರಿದ (ಪ್ರಕೃತಿ ಸಾಧಕ) ಪ್ರತ್ಯಯಗಳನ್ನು (ಅವುಗಳಲ್ಲಿ ಅನೇಕವು ಪ್ರತ್ಯಯಗುಚ್ಛಗಳಾಗಿವೆ ಯೆಂಬುದು ಬೇರೆ ವಿಷಯ) ಪ್ರತ್ಯೇಕಿಸಿ ತೋರಿಸುವ ಪ್ರಯತ್ನವಾಗಲೀ ಕನ್ನಡದಲ್ಲಿ ಆದಿ ಪ್ರತ್ಯಯಗಳಿವೆಯೆಂದು ಉದಾಹರಣೆ ಸಹಿತ ಉದಾ. ಕಿರಿ, ಹಿರಿ, ಮರು, ಕಿರಿ, ಬಡ, ಹುಸಿ ಇತ್ಯಾದಿ ವಿವರಿಸುವುದಾಗಲೀ ಇವುಗಳ ವಿಷಯದಲ್ಲಿ ಚರ್ಚೆ ಸಾಧ್ಯವಾದರೂ, ಕನ್ನಡದಲ್ಲಿಯ ಕೃತ್ತದ್ಧಿತ ಪ್ರತ್ಯಯಗಳ ದೀರ್ಘಪಟ್ಟಿಯನ್ನು ಅವುಗಳಿಗೆ ಅಂಡುವ ಪ್ರಕೃತಿಗಳೊಡನೆ ಕೊಟ್ಟಿರುವುದಾಗಲೀ, ಆ ಕಾಲದ ವ್ಯಾಕರಣ ಭಾಷಾಭ್ಯಾಸಗಳ ಹಿನ್ನೆಲೆಯಲ್ಲಿ ಗಮನಾರ್ಹವಾದ ವಿಷಯವೇ ಆಗಿದೆಯೆನ್ನಬೇಕು.

ಶಂಬಾ ಅವರು ತಮ್ಮ ಅನಂತರದ ಕೃತಿಗಳಲ್ಲಿ ಭಾಷಾ ಸಂಕೇತಗಳನ್ನು ಮುಖ್ಯವಾಗಿ ಆಧರಿಸಿ, ದೇಶ್ಯ ಹಾಗೂ ಅನ್ಯಸಂಸ್ಕೃತಿಗಳ ಪ್ರಭಾವ, ಇದರಿಂದಾದ ಸಾಂಸ್ಕೃತಿಕ ಅಧೋಗತಿ ಹಾಗೂ ಪೂರ್ವಸಂಸ್ಕೃತಿಯ ಪುನರುತ್ಥಾನದ ಅವಶ್ಯಕತೆ ಇವುಗಳನ್ನು ವಿವರಿಸಿದಂತೆ ಇಲ್ಲಿಯಾದರೂ ಅನ್ಯಭಾಷಾ ಪ್ರಭಾವದಿಂದಾಗಿ ಹಾನಿಯಾಗಿರುವ ಕನ್ನಡಕ್ಕೆ ಸ್ವಭಾಷಾ ಮೂಲಕವಾದ ಚಿಕಿತ್ಸೆಯಿಂದ ರಿಕ್ತಸ್ಥಿತಿಯನ್ನು ಹೋಗಲಾಡಿಸಿ ಪುನಶ್ಚೇತನಗೊಳಿಸಲು ಬಯಸಿದ್ದಾರೆ.

ಭಾಷೆಯ ಮುಖ್ಯ ಉದ್ದೇಶವೇ ಸಾಮಾಜಿಕ ಸಂಪರ್ಕ. ಭಾಷೆಯಷ್ಟು ಪರಸ್ಪರ ವಿನಿಮಯ ಸಾಮರ್ಥ್ಯ ಬೇರಾವ ಸಂವಹನಕ್ಕೂ ಇಲ್ಲ. ಭಾಷೆ, ಸಂಸ್ಕೃತಿಯ ಮುಖ್ಯ ಅಂಗವಾಗಿರುವುದರಿಂದ ಭಾಷಾಸಮುದಾಯದಲ್ಲಿ ಭಾಷಿಕರು ಪರಸ್ಪರ ಆಂತರಿಕ ಸಂಬಂಧ ಹೊಂದಿರುತ್ತಾರೆ. ಭಾಷಿಕ ಕ್ರಿಯೆ ಮತ್ತು ಘಟನೆಗಳನ್ನು ಸಾಮಾಜಿಕ ಚೌಕಟ್ಟಿಗೆ ಅಳವಡಿಸಿ ಅದರ ಬಳಕೆಯ ಪರಿಸರದಲ್ಲಿ ಶಂಬಾ ಗುರುತಿಸಿದ್ದಾರೆ. ತನ್ಮೂಲಕ ಭಾಷೆಯ ಸಾಮಾಜಿಕ ಚಹರೆಯನ್ನು, ಸಾಮಾಜೋಭಾಷಿಕ ಅನನ್ಯತೆಯನ್ನು ಅರ್ಥಪೂರ್ಣವಾಗಿ ಶೋಧಿಸಿದ್ದಾರೆ.