ಸಾಮಾಜಿಕ ಚಹರೆಯ ಅಧ್ಯಯನ ಕೈಗೊಳ್ಳುವವರಿಗೆಲ್ಲ ಭಾಷಾವಿಜ್ಞಾನದ ಅಗತ್ಯತೆ ಇತ್ತೀಚಿನ ದಶಕಗಳಲ್ಲಿ ಕಂಡುಬಂದಿದೆ. ಮೌಖಿಕ ಸಂಪ್ರದಾಯಕ್ಕೆ ಜಾನಪದ ಪ್ರಕಾರಗಳು ಭಾಷಿಕ ಅಧ್ಯಯನದ ದೃಷ್ಟಿಯಿಂದ ಹೆಚ್ಚು ಮಹತ್ವಪೂರ್ಣವಾಗಿದೆ. ಹಾಗಾಗಿಯೇ ಇತ್ತೀಚೆಗೆ ಭಾಷಾವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಭಾಷಾವಿಜ್ಞಾನ ಎನ್ನುವ ಶಾಖೆಯೊಂದು ಹುಟ್ಟಿಕೊಂಡಿದೆ. ಇತ್ತೀಚಿನ ಅನೇಕ ಅಧ್ಯಯನಗಳ ಫಲವಾಗಿ ಭಾಷೆ ಹಾಗೂ ಜಾನಪದಗಳ ನಿಕಟ ಸಂಬಂಧ ಹಾಗೂ ಅವುಗಳ ಪರಸ್ಪರ ಅವಲಂಬನೆ ಅಚ್ಚರಿಯನ್ನುಂಟುಮಾಡುತ್ತದೆ.

‘ಜನಪದ’ ಎನ್ನುವ ಶಬ್ದಕ್ಕೆ ಹಳ್ಳಿಗಾಡು, ಪ್ರಾಂತ ಜನತೆ ಎನ್ನುವ ಅರ್ಥವಿದೆ. ಅದರ ಬಗ್ಗೆ ಈಗಾಗಲೇ ಅನೇಕ ಜನರ ಸಾಕಷ್ಟು ಚರ್ಚೆಯನ್ನೂ ಮಾಡಿದ್ದಾರೆ. ಜಾನಪದ ಎನ್ನುವ ಶಬ್ದವನ್ನು ಹಳ್ಳಿ ಎನ್ನುವ ಸಂಕುಚಿತಾರ್ಥದಲ್ಲಿ ಸೇರಿಸಬಯಸದೆ ಅದಕ್ಕೆ ವ್ಯಾಪಕ ಅರ್ಥವ್ಯಾಪ್ತಿಯನ್ನು ಜಾನಪದ ವಿಜ್ಞಾನಿಗಳು ಕೊಟ್ಟಿದ್ದಾರೆ. ಒಟ್ಟಿನಲ್ಲಿ ಜಾನಪದ ಸಾಹಿತ್ಯವೂ ಒಂದು ಜನಾಂಗದ ಸಂಸ್ಕೃತಿಯನ್ನು, ಆ ಸಂಸ್ಕೃತಿಯಲ್ಲಿ ಪಾಲ್ಗೊಂಡಿರುವವರ ಸಮಷ್ಠಿ ಮನಸ್ಸಿನ ಆಶೋತ್ತರಗಳನ್ನು ಪ್ರತಿನಿಧಿಸುತ್ತದೆ. ಎನ್ನಬಹುದು. ಇಂತಹ ಜಾನಪದವು ಗೀತೆಗಳಾಗಿಯೋ, ಕಥೆಗಳಾಗಿಯೋ, ಕಲೆಗಳಾಗಿಯೋ, ನಂಬಿಕೆಗಳಾಗಿಯೋ, ಮಾತುಗಳಾಗಿಯೋ ಒಂದು ಜನಾಂಗದ ಮಧ್ಯೆ ಅವರ ಬದುಕಿನಲ್ಲಿ ಹಾಸುಹೊಕ್ಕು ಜೀವಂತವಾಗಿರುತ್ತದೆ. ಆದ್ದರಿಂದ ಈ ಜೀವಂತಿಕೆಯಲ್ಲಿ ಕಂಡುಬರುವ ಭಾಷಿಕ ಪ್ರಕಾರಗಳಾದ, ಗೀತೆ, ಕಥೆ, ಒಗಟು, ಗಾದೆ, ಪಡೆನುಡಿ, ಮಾತು, ಮುಂತಾದವು ಭಾಷಾವಿಜ್ಞಾನದ ಅಧ್ಯಯನದ ವಸ್ತುಗಳಾಗುತ್ತವೆ.

ರಷ್ಯಾ ದೇಶದ ಸಾಮಾಜಿಕ ಭಾಷಾವಿಜ್ಞಾನಿ ಜೆ. ಪ್ರಾಪ್ ಎಂಬುವವನು ಮೌಖಿಕ ಸಂಪ್ರದಾಯಕ್ಕೆ ಸೇರಿದ ಕಥೆಗಳನ್ನು ತೆಗೆದುಕೊಂಡು ಅವುಗಳ ರಾಚನಿಕ ವಿಶ್ಲೇಷಣೆ ಮಾಡಿದ್ದಾನೆ. ಈ ರೀತಿ ವಿಶ್ಲೇಷಣೆ ಕಥೆಗಳ ವಿಶಿಷ್ಟ ಘಟಕಗಳನ್ನು ಚಿಕ್ಕ ಚಿಕ್ಕ ಘಟಕಗಳನ್ನಾಗಿ ಮಾರ್ಪಾಡಿಸಿ ಅವುಗಳನ್ನು ಸೂತ್ರಬದ್ಧವಾಗಿ ವಿವರಿಸುವ ಕಾರ್ಯ ಮಾಡುತ್ತದೆ. ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ಕೆಲಸ ಮಾಡಿದ ಜಾನಪದ ವಿಜ್ಞಾನಿಗಳಿಗೆ ಮೂಲತಃ ಭಾಷಾ ವಿಜ್ಞಾನದ ಕಲ್ಪನೆ ಇದ್ದುದರಿಂದ ಭಾಷಾವಿಜ್ಞಾನದ ವಿಶ್ಲೇಷಣಾ ತತ್ವಗಳು ಜಾನಪದ ವಿಜ್ಞಾನದಲ್ಲಿ ಪ್ರವೇಶ ಮಾಡಲು ಅವಕಾಶ ದೊರೆಯಿತು. ಭಾಷಾವಿಜ್ಞಾನಿಗಳು ಧ್ವನಿಘಟಕ ಹಾಗೂ ಆಕೃತಿಮಾ ಘಟಕಗಳನ್ನು ಚಿಕ್ಕ ಚಿಕ್ಕ ಘಟಕಗಳನ್ನಾಗಿ ವಿಭಜಿಸಿ ಅವುಗಳನ್ನು ವಿಶ್ಲೇಷಿಸುವ ವಿಧಾನ ಜಾನಪದ ವಿಜ್ಞಾನಿಗಳಿಗೆ ಮೆಚ್ಚುಗೆಯಾಯಿತು. ಜಾನಪದ ವಿಜ್ಞಾನಿಯಂತೆ ಭಾಷಾ ವಿಜ್ಞಾನಿಯೂ ಸಹ ಭಾಷಿಕದತ್ತಗಳನ್ನು ಸಂಗ್ರಹಿಸುವಾಗ ಪ್ರಚಲಿತವಿರುವ ಅನೇಕ ಮೌಖಿಕ ರೂಪಗಳನ್ನು ಸಂಗ್ರಹಿಸಬೇಕಾಗುತ್ತದೆ. ಆದ್ದರಿಂದ ಜಾನಪದ ಮತ್ತು ಭಾಷಾವೈಜ್ಞಾನಿಕ ಕ್ಷೇತ್ರಕಾರ್ಯಗಳು ಒಂದರ್ಥದಲ್ಲಿ ಪೂರಕವಾಗಿರುತ್ತವೆ.

ಜಾನಪದ ವಿಜ್ಞಾನಿ ಕ್ಷೇತ್ರಕಾರ್ಯ ಕೈಗೊಳ್ಳುವಾಗ ಅವನಿಗೆ ಸಹಾಯವಾಗಬಹುದಾದ ಅನೇಕ ಅಂಶಗಳನ್ನು ಭಾಷಾವಿಜ್ಞಾನಿಯಿಂದ ಕಲಿಯಬೇಕಾಗುತ್ತದೆ. ಮೌಖಿಕ ರೂಪದಲ್ಲಿ ದೊರೆಯುವ ಜಾನಪದ ದತ್ತವನ್ನು ಸಂಗ್ರಹಿಸುವಾಗ ಧ್ವನಿಶಾಸ್ತ್ರದ ಪರಿಣತಿ ಇದ್ದರೆ ಹೆಚ್ಚು ಯುಕ್ತವೂ ಮತ್ತು ಸುಲಭವೂ ಆಗುತ್ತದೆ. ಮೌಖಿಕರೂಪದಲ್ಲಿರುವ ಜಾನಪದ ದತ್ತವನ್ನು ಬರಹ ರೂಪಕ್ಕೊಯ್ಯುವಾಗ ಧ್ವನಿಯ ಸೂಕ್ಷ್ಮ ವ್ಯತ್ಯಾಸಗಳು, ದೇಶೀಯ ಭಿನ್ನ ಭಿನ್ನ ಉಚ್ಛಾರಗಳು ತಪ್ಪಾಗುವ ಸಾಧ್ಯತೆ ಅಧಿಕವಿರುತ್ತದೆ. ಅಂತಹ ಸಂದರ್ಭದಲ್ಲಿ ಸಂಗ್ರಹಕಾರನಿಗೆ ಧ್ವನಿಶಾಸ್ತ್ರದ ಅಧ್ಯಯನ ಹೆಚ್ಚು ನೆರವಾಗಬಲ್ಲದು. ಅಲ್ಲದೇ ಧ್ವನಿಶಾಸ್ತ್ರಜ್ಞ ಧ್ವನಿಗಳ ಸೂಕ್ಷ್ಮಾತಿಸೂಕ್ಷ್ಮ ಭಿನ್ನತೆಗಳನ್ನು ಗುರುತಿಸಿ ಅವುಗಳಿಗೆ ಬೇರೆ ಬೇರೆ ಸಂಕೇತಗಳನ್ನು ಕೊಡುವುದರಿಂದ ಮೌಖಿಕ ರೂಪದ ಭಾಷೆಯನ್ನು ಸಮರ್ಥವಾಗಿ ಬರಹಕ್ಕಿಳಿಸಲು ಸಹಾಯವಾಗುತ್ತದೆ. ಧಾಟಿ, ನಾದ, ಲಯಗಳೊಡನೆ ಬೆರೆತುಕೊಂಡಿರುವ ಸ್ವರಾಘಾತ, ತಾನ, ವಿರಾಮ, ಮುಂತಾದ ಅವಿಭಾಜಕ ಧ್ವನಿಗಳನ್ನು ಅವುಗಳ ಮೂಲರೂಪದಲ್ಲಿಯೇ ಹಿಡಿದಿಟ್ಟರೆ ಅನುಕೂಲವಾಗುತ್ತದೆ. ಜಾನಪದ ಸಂಗ್ರಹದಲ್ಲಿ ದೊರೆಯುವ ಈ ಭಾಷಿಕ ಪಾಠಾಂತರದ ಸಮಸ್ಯೆಗಳನ್ನು ಭಾಷಾವಿಜ್ಞಾನದ ನೆರವಿನಿಂದ ಬಗೆಹರಿಸಬಹುದಾಗಿದೆ.

ಜಾನಪದದಲ್ಲಿ ಆಡುನುಡಿಯ ಪ್ರಮುಖ್ಯತೆ ಇರುವಂತೆ ಭಷಾವಿಜ್ಞಾನಿಯೂ ಹೆಚ್ಚಾಗಿ ಆಡುನುಡಿಯನ್ನೇ ಅವಲಂಬಿಸಿರುತ್ತಾನೆ. ಪರಂಪರಾನುಗತ ವ್ಯಾಕರಣಶಾಸ್ತ್ರಜ್ಞರು ನಿರ್ಲಕ್ಷಿಸಿದ ಆಡುನುಡಿ ಭಾಷಾವಿಜ್ಞಾನಿಗೆ ಮಹತ್ತರ ಅಧ್ಯಯನದ ವಿಷಯವಾಯಿತು. ಆಡುನುಡಿ ಶಿಷ್ಟಭಾಷೆಗಿಂತ ತೀರ ಭಿನ್ನವಾಗಿ ಒಂದು ಸಮೂಹದ ಮಧ್ಯೆ ಜೀವಂತವಾಗಿರುತ್ತದೆ. ಭಾಷಾ ವಿಜ್ಞಾನಿಯ ದೃಷ್ಟಿಯಲ್ಲಿ ಯಾವ ಭಾಷೆಯೂ ಕೀಳಲ್ಲ, ಎಲ್ಲವೂ ಆಯಾ ಸಂಸ್ಕೃತಿಯ ಅಗತ್ಯ ಪೂರೈಕೆಗಾಗಿಯೇ ಹುಟ್ಟಿಕೊಂಡಿರುತ್ತವೆ. ಶಿಷ್ಟಭಾಷೆ ಒಂದು ಭಾಷಾ ಪ್ರದೇಶದ ಮೇಲೆ ಸಾಂಸ್ಕೃತಿಕವಾಗಿ, ಸಾಮಾಜಿಕ ಹಾಗೂ ರಾಜಕೀಯವಾಗಿ ಪ್ರಭಾವಬೀರುತ್ತಿರುವಾಗ್ಯೂ ಆಡುನುಡಿಗಳು ತಮ್ಮ ವೈಶಿಷ್ಟ್ಯತೆಯನ್ನು ಕಾಪಾಡಿಕೊಂಡು ಬರುತ್ತಿರುತ್ತವೆ. ಆದ್ದರಿಂದಲೇ ಒಂದು ಭಾಷಾಪ್ರದೇಶದಲ್ಲಿ ಅನೇಕ ಭಾಷಾಭಿನ್ನತೆಗಳಿರಲು ಸಾಧ್ಯವಾಗುತ್ತದೆ. ಕನ್ನಡ ಭಾಷೆಯನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ಬೀದರ್ ಕನ್ನಡ, ಮಂಗಳೂರ್ ಕನ್ನಡ, ಬೆಳಗಾವಿ ಕನ್ನಡ, ಮೈಸೂರು ಕನ್ನಡ ಮುಂತಾದ ಪ್ರಾಂತಭೇದಗಳು ಹಾಸುಹೊಕ್ಕಾಗಿರುತ್ತವೆ. ಕನ್ನಡ ಜಾನಪದ ಅಧ್ಯಯನ ಕೈಗೊಳ್ಳುವವರೆಲ್ಲರಿಗೂ ಈ ರೀತಿಯ ಭಾಷಾ ಪ್ರಾದೇಶಿಕ ಭಿನ್ನತೆಯ ಸ್ಥೂಲ ಅರಿವಿರುವುದು ಅವಶ್ಯವಾಗಿರುತ್ತದೆ. ಏಕೆಂದರೆ ಜಾನಪದ ರೂಪಗಳೂ ಕೂಡ ಪ್ರದೇಶದಿಂದ ಪ್ರದೇಶಕ್ಕೆ ಅನುದ್ದೇಶಿತವಾಗಿ ಪ್ರಾದೇಶಿಕ ಭಾಷೆಯ ರೂಪ ಮತ್ತ ಧ್ವನಿಗಳನ್ನು ಮೈಗೂಡಿಸಿಕೊಂಡಿರುತ್ತವೆ. ಆದ್ದರಿಂದ ಭಾಷಾವಿಜ್ಞಾನಿ ಅಭ್ಯಸಿಸುವ ಪ್ರದೇಶಿಕ ಭಾಷಾಭಿನ್ನತೆಯ ಅಂಶಗಳು ಜಾನಪದ ವಿಜ್ಞಾನಿಗೂ ಸಹಾಯಕವಾಗುತ್ತವೆ. ಜಾನಪದ ವಿಜ್ಞಾನಿ ಅನಿವಾರ್ಯವಾಗಿ ಅವುಗಳನ್ನು ಲಕ್ಷಿಸಬೇಕಾಗುತ್ತದೆ. ಭಾಷಾವಿಜ್ಞಾನಿಗೆ ಭಾಷಿಕ ರಚನೆಗಳ ಸ್ವರೂಪ ಹಾಗೂ ಅವುಗಳ ವಿಶ್ಲೇಷಣೆ ಹೆಚ್ಚು ಪ್ರಮುಖವಾಗಿದ್ದರೆ ಜಾನಪದ ವಿಜ್ಞಾನಿಗೆ ಭಾಷೆಯಿಂದ ಹೊರಡುವ ಧ್ವನಿ, ಅರ್ಥಭಿನ್ನತೆ ಪ್ರಮುಖವಾಗಿರುತ್ತವೆ.

ಜಾನಪದ ವಿಜ್ಞಾನಿ ಆಡುನುಡಿಯಲ್ಲಿ ಹೇರಳವಾಗಿ ದೊರೆಯುವ ಗಾದೆ, ಒಗಟು, ಪಡೆನುಡಿ ಮುಂತಾದವುಗಳನ್ನು ಅವುಗಳ ಸಾಹಿತ್ಯಿಕ ಮೌಲ್ಯದ ದೃಷ್ಟಿಯಿಂದ ಅಭ್ಯಸಿಸುತ್ತಾನೆ. ಆದರೆ ಅವುಗಳ ಸಾಹಿತ್ಯಿಕ ಮೌಲ್ಯದಂತೆಯೇ ಅವುಗಳ ಭಾಷಿಕ ಮೌಲ್ಯವೂ ಅಧ್ಯಯನದ ದೃಷ್ಟಿಯಿಂದ ಮುಖ್ಯವಾಗಿದೆ. ಎಕೆಂದರೆ ಆಡುನುಡಿಯಲ್ಲಿ ಇಂತಹ ರೂಪಗಳು ಜನಸಾಮಾನ್ಯರ ದಿನನಿತ್ಯದ ಬದುಕಿನಲ್ಲಿ ಹಾಸುಹೊಕ್ಕು, ಅವರ ಸಮರ್ಥ ಭಾಷಿಕ ಬಳಕೆಯ ಅಂಶಗಳಾಗಿರುತ್ತವೆ.

ಜನಪದರ ಭಾಷಿಕ ಬಳಕೆಯ ಪ್ರಮುಖ ರೂಪವಾದ ‘ಗಾದೆ’ ಗಳನ್ನೇ ತೆಗೆದುಕೊಂಡರೆ ಅದರ ಭಾಷಿಕ ಮೌಲ್ಯದ ಅರಿವು ನಮಗಾಗುತ್ತದೆ. ಗಾದೆಗಳನ್ನು ‘ನಾಣ್ಣುಡಿ’ ಎಂದೂ ಕರೆಯುತ್ತಾರೆ. “ಈ ನಾಣ್ಣುಡಿಗಳು ರಾಷ್ಟ್ರೀಯ ಮಣ್ಣಿನಲ್ಲಿ ಬೆಳೆದ ಸಹಜ ಬೆಳೆಗಳೆಂದು” ಎಸ್. ಜಿ. ಛಾಂಪಿಯನ್‌ರವರು ಅಭಿಪ್ರಾಯಪಡುತ್ತಾರೆ. ಗಾದೆಯ ಭಾಷೆ ಸಾಂಕೇತಿಕವಾಗಿರುತ್ತದೆ, ಭಾವ ಬಹುಮಟ್ಟಿಗೆ ರೂಪಕವಾಗಿರುತ್ತದೆ. ಗಾದೆಗಳ ಮುಖ್ಯ ಲಕ್ಷಣವೆಂದರೆ ಅವುಗಳಲ್ಲಿ ಕಂಡುಬರುವ ಸಂಕ್ಷಿಪ್ತತೆ ಮತ್ತು ಸೂಚ್ಯವಾದ ಧ್ವನಿಶಕ್ತಿ. ಗಾದೆಯ ಮಾತು ಒಬ್ಬನಿಗೇ ಸೀಮಿತವಾಗಿರದೆ ಒಂದು ಸಮುದಾಯಕ್ಕೆ ಸೇರಿ ಹಲವರ ಮಾತಾಗುತ್ತದೆ. ಒಂದೊಂದು ಗಾದೆಯೂ ಜೀವನದ ಸಮಸ್ಯೆ, ಸುಖ, ದುಖಃವನ್ನು ಪ್ರತಿಬಿಂಬಿಸುತ್ತದೆ. ಎಲ್ಲ ದೇಶಗಳ, ಎಲ್ಲ ಜನಾಂಗಗಳ, ಎಲ್ಲ ಕಾಲಗಳ ಮೌಖಿಕ ಪರಂಪರೆಗೆ ಸೇರಿದ ಇವುಗಳ ಮೂಲ ಆಲೋಚನೆ, ಅಭಿವ್ಯಕ್ತಿಯನ್ನು ಕುರಿತು ಸರ್ವಸಮಾನವಾದ ತತ್ವಗಳನ್ನು ನಿರ್ಮಿಸುವ ಸಾಧ್ಯತೆ ಇದೆ. “ಯಾವ ಭಾಷೆ ಅವ್ಯಯ ಮತ್ತು ಪ್ರತ್ಯಯಗಳಲ್ಲಿ ಸಂಪದ್ಯುಕ್ತವಾಗಿರುತ್ತದೋ ಅದು ಸಾಧ್ಯವಾದ ಮಟ್ಟಿಗೆ ಗಾದೆಗಳನ್ನು ನಿರ್ಮಿಸಲು ಪ್ರಾರಂಭಿಸುವಾಗಲೇ ಹೆಚ್ಚು ವಿಷಯಗಳನ್ನು ತಡೆಹಿಡಿಯಲು ಯತ್ನಿಸುತ್ತದೆ” ಎನ್ನುವ ಮಾತನ್ನು ಭಾಷಾವಿಜ್ಞಾನಿಗಳು ವಿಮರ್ಶಿಸಬೇಕಾಗಿದೆ.

ಗಾದೆಗಳಂತೆ ಒಗಟುಗಳೂ ಸಹ ಭಾಷಿಕ ಅಧ್ಯಯನದ ದೃಷ್ಟಿಯಿಂದ ಮಹತ್ವದ್ದಾಗಿವೆ. “ಮೌಖಿಕ – ಸಂಪ್ರದಾಯದಲ್ಲಿ ಒಗಟುಗಳೇ ಪ್ರಾಚೀನ ರೂಪಗಳೆಂದು” ಪಾಟರ್ ಅಭಿಪ್ರಾಯ ಪಡುತ್ತಾನೆ. ಈ ಅಭಿಪ್ರಾಯಗಳನ್ನೂ ಸಹ ಭಾಷಾ ವಿಜ್ಞಾನದ ದೃಷ್ಟಿಯಿಂದ ವಿವೇಚಿಸಬಹುದಾಗಿದೆ. ಒಗಟುಗಳನ್ನು ಭಾಷಾವಿಜ್ಞಾಗಳು ಮೂರು ವರ್ಗಗಳಾಗಿ ವಿಂಗಡಿಸಿದ್ದಾರೆ. ಅವುಗಳೆಂದರೆ ೧. ರೂಪಪ್ರಧಾನ ೨. ಕ್ರಿಯಾಪ್ರಧಾನ ೩. ಅರ್ಥಪ್ರಧಾನ. ಸಾಮಾನ್ಯವಾಗಿ ರೂಪಪ್ರಧಾನ ಒಗಟುಗಳಲ್ಲಿ ನಾಮಪದದಿಂದ ಕೂಡಿದ ವರ್ಣನಾತ್ಮಕ ವಾಕ್ಯಗಳೇ ಅಧಿಕವಾಗಿರುತ್ತವೆ. ಇವುಗಳಲ್ಲಿ ಒಂದು ಅಥವಾ ಒಂದಕ್ಕಿಂತ ಅನೇಕ ಸರಳ ವಾಕ್ಯಗಳಿರಬಹುದು. ಇಲ್ಲವೇ ಶಬ್ದಗಳ ಸರಪಳಿರೂಪದ ಜೋಡಣೆಯಿಂದ ಕೂಡಿದ ವಾಕ್ಯಗಳಿರಬಹುದು. ಇಂತಹ ಒಗಟುಗಳ ಅಧ್ಯಯನದಲ್ಲಿ ಭಾಷಾವಿಜ್ಞಾನ ಸಹಕಾರಿಯಾಗುತ್ತದೆ.

ಗಾದೆ, ಒಗಟು, ಒಡಪು, ಪಡೆನುಡಿಗಳ ಭಾಷಿಕ ಅಧ್ಯಯನದಂತೆಯೇ ಸ್ಥಳನಾಮ ಹಾಗೂ ವ್ಯಕ್ತಿನಾಮಗಳ ಅಧ್ಯಯನವನ್ನೂ ಸ್ಥಳನಾಮಗಳಲ್ಲಿ ಕಾಣುವ ಧ್ವನಿಬದಲಾವಣೆ, ಸದೃಶ್ಯಾಕ್ಷರ, ಲೋಪ, ಸಮರೂಪಧಾರಣೆ ಮುಂತಾದ ಭಾಷಿಕ ಕ್ರಿಯೆಗಳನ್ನು ವೈಜ್ಞಾನಿಕವಾಗಿ ಅಭ್ಯಸಿಸಬಹುದಾಗಿದೆ. ಆದ್ದರಿಂದ ಸಮಾಜ ಹಾಗೂ ಭಾಷಾವಿಜ್ಞಾನದ ಕ್ಞೇತ್ರಗಳು ನಿಕಟವಾಗುತ್ತಿವೆ ಎಂಬುದನ್ನು ಶಂಬಾ ಅವರು ಅರಿತಿದ್ದರು. ಆಡುನುಡಿಯಲ್ಲಿಯ ವಾಗ್ರೂಢಿಗಳ ಹಿಂದಿರುವ ಸಾಮಾಜಿಕ ಚಹರೆ ಶೋಧಿಸುವುದು ಶಂಬಾ ಅವರಿಗೆ ಮುಖ್ಯವಾಗಿತ್ತು.

. ನುಡಿಯಗುಟ್ಟು: ನಮ್ಮ ವ್ಯಾಕೃಣದಲ್ಲಿ ಕೊಟ್ಟಿರುವ ಕೃದಂತ, ತದ್ದಿತ, ಸಮಾಸ ಮತ್ತು ತತ್ಸಮ – ತದ್ಭವಗಳು ಇಷ್ಟರಿಂದಲೇ ನುಡಿಯ ನೆಲೆಯನ್ನು ಸಂಪೂರ್ಣವಾಗಿ ಕಂಡು ಹಿಡಿಯಲಿಕ್ಕೆ ಆಗುವುದಿಲ್ಲ. ಉದಾಹರಣಾರ್ಥವಾಗಿ ಗೆಳೆಯನೆಂಬುದು ಗೆಣೆಯನೆಂದಾಯ್ತು. ಗೆಳೆಯನೆಂಬುದಕ್ಕಿಂತ ಬೇರೆ ಅರ್ಥವನ್ನು ಪಡೆಯಿತು. ಇದರಂತೆ ಎಣ್ಣೆ, ಹೊನ್ನು (ನಾಣ್ಯ) ಮುಂತಾದವು ಹಲವು ನುಡಿಗಳ ಹುಟ್ಟಿನ ಗುಟ್ಟು. ಈ ಅಧ್ಯಾಯದಲ್ಲಿ ಶಂಬಾ ಅವರು ಭಾಷೆಯಲ್ಲಿಯ ನುಡಿಗಳು (= ಶಬ್ದಗಳು) ಹೇಗೆ ಹುಟ್ಟಿವೆ ಎಂಬುದನ್ನು ವಿಚಾರ ಮಾಡಲಾಗಿದೆ. ಅನುಕರಣವಾಚಕಗಳು ಅಥವಾ ಉದ್ಗಾರವಾಚಕಗಳು ಇದೇ ಭಾಷೆಯ ಪ್ರಾಚೀನ ಅವಸ್ಥೆಗಳು ಎಂಬ ವಿವಿಧ ವಾದಗಳನ್ನು ಪ್ರಸ್ಥಾಪಿಸಿ ಇವು ಸರಿಯಲ್ಲವೆಂದೂ ಭಾಷೆಯು ಮೊದಲು ಭಾವವಾಚಕವಾಗಿದ್ದು, ಉಚ್ಚರಿಸಿದ ಕೂಡಲೇ ಅರ್ಥಕೊಡುವ ಶಕ್ತಿಯಿದ್ದು ಕ್ರಮೇಣ ಮನುಷ್ಯ ವಿಚಾರಪ್ರಧಾನನಾದ ಹಾಗೇ ಹಾವಭಾವಗಳು ಕಡಿಮೆಯಾಗಿ ಕೃತ್ರಿಮತೆತಲೆದೋರಿ ಸಂಕೇತ ವ್ಯವಸ್ಥೆಯಾಯಿತು. ಯೆಸ್ಪರ್ಸನ್ ಹೇಳಿದಂತೆ ಮೊದಲು ಭಾಷೆಯಲ್ಲಿ ಕಿರುನುಡಿಗಳಿರಲಿಲ್ಲ, ದೀರ್ಘವಾದ ನುಡಿಗಳಿದ್ದವು. ಪ್ರತ್ಯಯಗಳೆಂಬವು ಇರಲಿಲ್ಲ. ಅವಶ್ಯಕತೆಗೆ ತಕ್ಕಂತೆ ಶಬ್ದಗಳನ್ನು ಸೇರಿಸಿ ಸಮಾಸಗಳನ್ನು ‘ಕೂಡುನುಡಿ’ ಮಾಡಲಾಗುತ್ತಿತ್ತು. ಇಂದಿನ ಪ್ರತ್ಯಯಗಳೆಲ್ಲ ಹಿಂದೆ ಸ್ವತಂತ್ರವಾದ ಶಬ್ದಗಳೇ ಆಗಿದ್ದವು. ಇಂದು ನಾವು ಸ್ವತಂತ್ರ ಶಬ್ದಗಳೆಂದು ತಿಳಿದ ಶಬ್ದಗಳೂ ಮೂಲಶಬ್ದವೊಂದಕ್ಕೆ ಪ್ರತ್ಯಯ ಸೇರಿ ಆಗಿವೆ (ಉದಾಹರಣೆಗೆ ತಿರಿ, ತಿರುಗು ಇವುಗಳಲ್ಲಿ ತಿರ್ ಮೂಲಶಬ್ದ – ಇ, – ಉಗು ಗಳು ಪ್ರತ್ಯಯಗಳು). ಇಂತಹ ಮೂಲಶಬ್ದಗಳಿಂದ ನಾನಾ ಬಗೆಯಲ್ಲಿ ಹೊಸ ಶಬ್ದಗಳನ್ನು ಉಂಟುಮಾಡಿಕೊಳ್ಳಬಹುದು. ಕೆಲವೊಮ್ಮೆ ಮೂಲಶಬ್ದಗಳಲ್ಲಿಯ ಅಕ್ಷರಗಳ (= ಧ್ವನಿಗಳ) ಉಚ್ಚಾರಣ ವ್ಯಾತ್ಯಾಸದಿಂದ ಹೊಸ ಶಬ್ದ ಹುಟ್ಟಬಹುದು (ಉದಾ. ಪಾಡು > ಹಾಡು, ಕುರಿ > ಗುರಿ); ಹ್ರಸ್ವಸ್ವರ ದೀರ್ಘವಾಗುವುದರಿಂದ ಆಗಬಹುದು (ಉದಾ. ಕೆಡು – ಕೇಡು, ನಡು – ನಾಡು); ಅಕ್ಷರಪಲ್ಲಟದಿಂದ ಆಗಬಹುದು (ಉದಾ. ತಿರುಗಿ – ತಿಗುರಿ, ಕಾಲುವೆ – ಕಾವಲಿ); ಶಬ್ದಾದಿಯಲ್ಲಿ ವ್ಯಂಜನ ಸೇರಿ ಆಗಬಹುದು (ಉದಾ. ಇಂಗು – ಹಿಂಗು, ಒಂದು – ಹೊಂದು); ಬೇರೆ ಬೇರೆ ಶಬ್ದಗಳ ಮೊದಲಾಕ್ಷರಗಳು ಸೇರಿ ಆಗಬಹುದು (ಉದಾ. ದೇಭ = ದೇಶಭಕ್ತ, ತೀಸ್ವ = ತೀರ್ಥಸ್ವರೂಪ) ಇವಲ್ಲದೆ ಇನ್ನೂ ಕೆಲವು ವಿಧಾನಗಳು ಇವೆ. ಇವುಗಳ ಪರಿಚಯವೇ ‘ನುಡಿಯ ಗುಟ್ಟು’.

೨. ಅರ್ಥಸಾಮ್ಯವಿರುವ ಶಬ್ದಗಳನ್ನು ಮೇಳನುಡಿಗಳೆಂದು ಶಂಬಾ ಅವರು ಕರೆದಿದ್ದಾರೆ. ಮೇಳದ ನುಡಿಗಳಲ್ಲಿ ಅರ್ಥಸಾಮ್ಯವಿರುವುದರಿಂದ ಕೆಲವೆಡೆಗಳಲ್ಲಿ ಅವುಗಳಲ್ಲಿ ಒಂದನ್ನು ಮತ್ತೊಂದರ ಸ್ಥಳದಲ್ಲಿ ಉಪಯೋಗಿಸಬಹುದು. ಇಂತಹ ಹಲವು ಮೇಳ ನುಡಿಗಳನ್ನು ಶಂಬಾ ಅವರು ಸಂಗ್ರಹಿಸಿಕೊಟ್ಟಿದ್ದಾರೆ.

ಅಗೆ (ಅಗಿ), ಮರಿ, ಸಸಿ, ಅಂಟು
ಅಟ್ಟ, ಉಪ್ಪರಿಗೆ, ಮಾಡ, ಮಾಡಿ, ಮಹಡಿ, ಮಾಳಿ, ಅಂತಸ್ತು
ಅಟ್ಟು, ಕಳಿಸು, ಓಡಿಸು, ತಳ್ಳು
ಅಡಗು, ಹಡಗು, ಮರೆಯಾಗು, ಮೈಗರೆ, ಕಾಣದಾಗು, ಅವಿತುಕೊಳ್ಳು, ಲೆಗರೆ
ಅಡಿ, ಬುಡ, ಮೊದಲು, ಮೂಲ
ಅಡೆ, ತಡೆ, ಎಡರು, ತೊಡರು, ಅಡ್ಡಿ, ಕಾಟ, ಪೀಡೆ
ಅಂಚು, ಏಣು, ತುದಿ, ದಂಡೆ, ದಡ, ಕಡೆ, ಕರೆ, ತಡಿ, ಮೇರೆ, ಹದ್ದು, ಎಲ್ಲೆ
ಅಂಜು, ಅಳುಕು, ಅದಿರು, ನಡುಗು
ಅಂದ, ಚೆಂದ, ಚೊಕ್ಕ, ಹಸ, ಎಡ್ಡ, ಧಾಳ, ಕಂಗೊಳಿಪ
ಅರಿ, ಕಲಿ, ತಳಿ
ಅಳತೆ, ಮಾನ, ಮಾಪು, ತೂಕ, ಕಟ್ಟು, ಮಾರು, ಮೊಳ, ಅಡಿ
ಆಳು, ತೊತ್ತು, ದಾದಿ, ದಾಸಿ, ದಾಸ, ಅಡಿಗ, ಲೆಂಕ.

ಭಾಷೆಯ ಬೆಳವಣಿಗೆಗೆ ಇಂತಹ ಮೇಳನುಡಿಗಳು ಮಹತ್ವದ ಪಾತ್ರವಹಿಸುತ್ತವೆ. ಸೂಕ್ಷ್ಮವಾದ ಅರ್ಥ ಭೇಧವುಳ್ಳ ಮೇಳದ ನುಡಿಗಳು ವಿಫುಲವಾಗಿರುವ ಭಾಷೆಯೇ ಶ್ರೇಷ್ಠವೆನಿಸುವುದು.

೩. ‘ದೇಶಿ ನುಡಿ’ ಎಂಬ ಅಧ್ಯಾಯದಲ್ಲಿ (ಕಂನುಡಿಯ ಜೀವಾಳ) ಕನ್ನಡಕ್ಕೆ ವಿಶಿಷ್ಟವಾದ ನುಡಿರಚನೆಗಳನ್ನು ಹೇಳಿದ್ದಾರೆ. ದೇಸಿ ನುಡಿಯ ಮಹತ್ವವನ್ನು ಸಾವಿರಾರು ವರುಷಗಳಿಂದಲೂ ಕನ್ನಡ ಕವಿಗಳು ಹೇಳುತ್ತ ಬಂದಿರುವರು. ಪಂಪ – ಪೊನ್ನ – ರನ್ನರನ್ನು ಮೊದಲುಗೊಂಡು, ಕನ್ನಡ ಕವಿಪುಂಗವರೆಲ್ಲರೂ ದೇಸಿಗೆ ಮನಸೋತರವರೇ, ದೇಸಿಯನ್ನು ಮನಸಾರೆ ಹೊಗಳಿದವರಾಗಿದ್ದಾರೆ. ‘ಪೊಸದೇಸೆಯ ನುಡಿಗಳೊಳ್ ಪೊಸದೆನಿಪಂತೆ’, ‘ದೇಸೆ ಒಡಂ ಬಡುವಂತೆ’, ‘ದೇಸವೆತ್ತ ಪೊಸನುಡಿ’ ಯ ಕುಸುರು ಬಗೆಗೊಳ್ವಂತೆ, ನುಣ್ಪುವೆತ್ತ ಪೊಸದೇಸಿ ನುಡಿಗೆ ಆಗರವಾಗುವಂತೆ ತಮ್ಮ ತಮ್ಮ ಕಾವ್ಯಗಳನ್ನು ಬರೆಯಬೇಕೆಂದು ಹೆಮ್ಮೆಯಿಂದ ಪ್ರತಿಜ್ಞೆಗಳನ್ನು ಮಾಡಿದುದನ್ನು ಕಾಣಬಹುದು. ಪಂಪಭಾರತವು ಕನ್ನಡದ ದೇಸಿಯ ತಿರುಳನ್ನೊಳಗೊಂಡಿದೆ, ನಯಸೇನನ ಧರ್ಮಾಮೃತ ಕನ್ನಡ ದೇಸಿಯ ಹೊತ್ತು ಹೊರಬಂದಿದೆ. ಆಂಡಯ್ಯ, ಕುಮಾರವ್ಯಾಸ, ಸರ್ವಜ್ಞ ಕವಿಗಳ ಗ್ರಂಥಗಳಿಗೆ ದೇಸಿಯೇ ಅಡಿಗಲ್ಲಾಗಿದೆ.

ವ್ಯಕ್ತಿಗಳಿದ್ದಷ್ಟು ಪ್ರಕೃತಿಗಳು, ದೇಶಗಳಿದ್ದಷ್ಟು ದೇಸಿ. ಪ್ರತಿಯೊಬ್ಬರಲ್ಲಿಯೂ ಒಂದೊಂದು ಬಗೆಯ ವ್ಯಕ್ತಿ – ವೈಶಿಷ್ಟ್ಯವಿರುವಂತೆ ದೇಸಿ – ದೇಸಿಗಳಲ್ಲಿಯೂ ಒಂದೊಂದು ಬಗೆಯ ಅಂದವಿದೆ. ವ್ಯಕ್ತಿತ್ವವಿಲ್ಲದವನು ಮನುಷ್ಯನೇ ಅಲ್ಲ, ಅದು ಬೆಡಗು ಇಲ್ಲದ ಬೋಳುನುಡಿ. ದೇಸಿಯ ಸೊಗಸಿದ ಮಾತೂ ನರುಗಂಪಿಲ್ಲದ ಹೂವೂ ಒಂದೇ, ಆದುದರಿಂದಲೇ ಕವಿಗಳಿಗೆ ದೇಸಿಯ ಮೇಲೆ ಇಷ್ಟು ಮೋಹ ದೇಸಿಯನ್ನು ಬಿಟ್ಟು ಬೋಳುಮಾತಿನಿಂದ ಬರೆದ ತಪ್ಪುದಾರಿಯನ್ನು ಹಿಡಿದವರು ಕಂನುಡಿಯನ್ನು ಅಡ್ಡಮಾರ್ಗಕ್ಕೆ ಒಯ್ದರು. ದೇಸಿಯು ಭಾಷೆಯ ಜೀವಾಳ. ದೇಸಿಯನ್ನು ನಿರ್ಲಕ್ಷಿಸಿದರೆ ಭಾಷೆಯು ನೀರಸವಾಗಿ ಪರಿ ಪುಷ್ಪವಾಗಲಾರದು.

ದೇಸಿಯಲ್ಲಿ ನುಡಿನುಡಿಗೂ ಹೊಸತನವನ್ನು ತುಂಬಿಕೊಂಡಿದೆ, ದೇಸಿಯೆಂದರೆ ಸಜೀವ ಭಾಷೆ, ಸಜೀವರ ಭಾಷೆ. ದೇಸಿಯ ಒಂದೊಂದು ನುಡಿಯಲ್ಲಿಯೂ ಕಣ್ಣಮುಂದೆ ಸುಸ್ಪಷ್ಟವಾದ ಚಿತ್ರಗಳನ್ನು ತಂದು ನಿಲ್ಲಿಸುವ ಸಾಮರ್ಥ್ಯವಿದೆ. ‘ತಲೆದೂಗು’, ‘ಮೂಗುಮುರಿ’ ಇವೇ ಮೊದಲಾದ ಮಾತುಗಳು ಮನಸ್ಸಿನ ಮೇಲೆ ಎಷ್ಟೊಂದು ಪರಿಣಾಮಕಾರಿಯಾಗಿ ಅರ್ಥವನ್ನು ಅಚ್ಚೊತ್ತಿದಂತೆ ಮೂಡಿಸುವುವು! ಬೇಕು, ಬೇಡ, ಅಹುದು, ಅಲ್ಲವೆಂಬ ಬರನುಡಿಗಿಂತ ಮೇಲಿನಂತಹ ದೇಸಿನುಡಿಯು ಯಾವಾಗಲೂ ಮಾತಿನ ಸವಿಯನ್ನು ಹೆಚ್ಚಿಸುವುದು. ಅಲ್ಲದೇ, ದೇಸಿಯಲ್ಲಿರುವ ಜೋರು, ಬಚ್ಚಬರಿ ಮಾತಿನಲ್ಲಿಲ್ಲ. ಭಾವನಾಯುಕ್ತರಾಗಿ ಒಳ್ಳೆ ಹಾವಭಾವ ಸಹಿತವಾಗಿ ಸುಖಸಲ್ಲಪ – ವಾಗ್ವಾದಗಳನ್ನು ನಡೆಯಿಸುವ ನಾಡವರಿಂದಲೇ (ಜನಸಾಮಾನ್ಯರಿಂದಲೇ) ದೇಸಿನುಡಿಯು ಬೆಳೆದುದು. ಆದುದರಿಂದ, ದೇಸಿಗೆ ‘ನಾಡ – ನುಡಿ’ ಎಂದು ಹೇಳುವುದೂ ಉಚಿತವಾಗಿದೆ. ನಾಣ್ಣುಡಿಯೂ ನಾಡನುಡಿಯೂ ದೇಸಿಯ ಒಂದು ಪ್ರಕಾರವೇ ಸರಿ.

ದೇಸಿಯಲ್ಲಿ ಸ್ಥೂಲವಾಗಿ ಐದು ವಿಭಾಗಗಳನ್ನು ಕಲ್ಪಿಸಬಹುದು. ೧. ಜೋಡುನುಡಿ ೨. ಮಾರುನುಡಿ ೩. ಕಿರುನುಡಿಗಳು ೪. ಪಡೆನುಡಿ ೫. ನಾಣ್ಣುಡಿ (ಗಾದೆ). ಜೋಡುನುಡಿ (ಉದಾ. ಮರ – ಗಿಡ, ಮಾತು – ಗೀತು, ನಡೆ – ನುಡಿ, ಅಲ್ಲಿ – ಇಲ್ಲಿ, ಗಿಡ – ಗಂಟೆ, ಹಿಂದೆ – ಮುಂದೆ). ಮಾರುನುಡಿ (ಉದಾ. ಅತ್ತೆ – ಸೊಸೆ, ತಳ – ಬುಡ, ಏಳು – ಬೀಳು). ಕಿರುನುಡಿ (ಉದಾ. ತಳಮಳ ಹೊಳೆ, ಕರ್ರನೆ ಕಂದು). ನಾಣ್ಣುಡಿ ಅಥವಾ ಗಾದೆ ಎಂದು ನಾಲ್ಕು ಬಗೆಯಾಗಿ ವಿಂಗಡಿಸಿ ಹೇಳಲಾಗಿದೆ ಹಾಗೂ ವಿಫುಲವಾದ ಉದಾಹರಣೆಗಳನ್ನು ಶಂಬಾ ಕೊಟ್ಟಿದ್ದಾರೆ.

೪. ದೇಶಿಯ ಇನ್ನೊಂದು ಲಕ್ಷಣವಾದ ಪಡೆನುಡಿಗಳನ್ನು ಪ್ರತ್ಯೇಕ ಅಧ್ಯಾಯವಾಗಿ ಕೊಡಲಾಗಿದೆ. ಯಾವುದೇ ಭಾಷೆಯ ಸಾರವೇ ಅವರ ದೇಸಿ. ಆ ದೇಸಿಯ ಸಾರ ಅದರ ಪಡೆನುಡಿ. ಪಡೆನುಡಿಯೆಂದರೆ ನುಡಿಯ ಕೆನೆಯಿದ್ದಂತೆ. ಇದನ್ನು ಬಿಟ್ಟರೆ ಕಂನುಡಿಯು ಸಪ್ಪೆಯಾಗುವುದು. ಪಡೆನುಡಿಗಳು ಹಲವು ಬಗೆಗಳಿಂದ ಮಾತಿನಲ್ಲಿ ಬೆಳೆದುಬಂದಿವೆ. ನಮ್ಮ ಅವಯವಗಳ ಮೇಲಿಂದ ಪಡೆದುಕೊಂಡ ಮಾತುಗಳು ಅವೆಷ್ಟೋ ಇವೆ. ಈ ಅವಯವಗಳಲ್ಲಿ ಕನ್ನಡಿಗರಿಗೆ ಕೆಯ್ಯು ಹೆಚ್ಚಿನದು, ಕೆಯ್ಯ ಮೇಲೆ ನಮ್ಮ ಹೊಟ್ಟೆ, ಕೆಯ್ಯ ಮೇಲೆ ನಮ್ಮ ಬಾಳ್ವೆ. ಆದರಿಂದ ಕೆಯ್ಯ ಮೇಲಿನ ಪಡೆದುಕೊಂಡ ನುಡಿಗಳು ಉಳಿದ ಯಾವ ಅವಯವಕ್ಕಿಂತಲೂ ತುಂಬ ಹೆಚ್ಚಾಗಿದ್ದುದು ಕಂಡುಬರುತ್ತದೆ. ಮೆಯ್ – ಕೆಯ್‌ಗಳಿಂದಲ್ಲದೆ ಪ್ರಾಣಿ – ವನಸ್ಪತಿಗಳು. ಧರ್ಮ, ಜ್ಯೋತಿಷ, ಇತಿಹಾಸ, ಪುರಾಣಾದಿಗಳಿಂದಲೂ ಪಡೆದುಕೊಂಡ ಸಾವಿರಾರು ನುಡಿಗಳು ಉಂಟು.

ಕಂನುಡಿಯ ಈ ಬಗೆಯ ಪಡೆನುಡಿಗಳ ಪರಂಪರೆಯು ಇಂದು ನಿನ್ನೆಯದಲ್ಲ, ಅನಾದಿ ಕಾಲದಿಂದ ಬಂದುದು. ‘ಪ್ರೌಢವಾಗಿ’ ಬರೆಯಬೇಕೆಂಬ ಮಬ್ಬಿನಲ್ಲಿ ಕಂನುಡಿಯ ದೇಸಿಯ ಈ ಸೊಬಗನ್ನು ಕಣ್ಣೆತ್ತಿ ಸಹ ನೋಡದ ಕೆಲಪಂಡಿತರನ್ನು ಬಿಟ್ಟರೆ, ಪಂಪನಿಂದ (ಅವನಿಂದಲೂ ಮೊದಲಿನಿಂದ) ಇಂದಿನ ತನಕ ಇದಕ್ಕೆ ಮನಸೋತು ಮಾರುಹೋಗದ ಸಾಹಿತಿಗಳೇ ಇಲ್ಲ. ಸಾವಿರಾರು ವರ್ಷಗಳ ಹಿಂದೆ ಉಪಯೋಗಿಸುತ್ತಲಿದ್ದ ಪಡೆನುಡಿಗಳು ಈಗಲೂ ದಿನದ ಮಾತಿನಲ್ಲಿ ಕಿವಿಗೆ ಬೀಳುತ್ತಿರುವುದನ್ನು ನೋಡಿ ಮನಸ್ಸು ಹಿಗ್ಗುವುದು. ಒಬ್ಬ ಮನುಷ್ಯನು ತುಂಬ ಬಡವನು, ಹತ್ತಿರ ಏನೂ ಇಲ್ಲವೆಂಬುದನ್ನು ದೇಸಿಯಲ್ಲಿ ಹೇಳಬೇಕಾದರೆ “ಕೈಯಲ್ಲಿ ಅಡಕೆ (ಚೂರು) ಸಹ ಇಲ್ಲ”, “ಹತ್ತಿರ ಹಸರು ಮಣಿ ಉಳಿದಿಲ್ಲ” ಎಂಬೀ ಬಗೆಯಾಗಿ ಮಾತನಾಡುವುದುಂಟು. ಇದು ಇಂದಿನ ಮಾತಿನ ರೀತಿಯೆಂದು ಮಾತ್ರ ತಿಳಿಯಲಾಗದು, ಸಾವಿರಾರು ವರುಷಗಳ ಹಿಂದೆ ಪಂಪನ ಕಾಲದ ಭಾಷೆಯಲ್ಲಿಯೂ ಇವೇ ಮಾತುಗಳಿದ್ದುವು. ಆತನ ವಿಕ್ರಮಾರ್ಜುನ ವಿಜಯವೇ ಇದಕ್ಕೆ ಸಾಕ್ಷಿ.

ಹಿಂದಿನ ಕಾಲದ ಕೆಲವು ಪಡೆನುಡಿಗಳಿಗೆ ಈಗ ಅರ್ಥವಾಗುವುದಿಲ್ಲ. ‘ಕೆಯ್‌ಬೀಸು’ (ಕೆಯ್ವಾಸು) ಎಂದು ‘ಯುದ್ಧವು ಆರಂಭವಾಗಲೆಂದು ಸಂಜ್ಞೆ ಮಾಡು’, ‘ಸಿಗ್ನಲು ಕೊಡು’ ಎಂಬರ್ಥದಲ್ಲಿ ಉಪಯೋಗಿಸಲ್ಪಡುತ್ತಿತ್ತು. ಆದರೆ ಇದು ಈಗ ರೂಢಿಯಲ್ಲಿ ಉಳಿದಿಲ್ಲ. ಯುದ್ಧವೇ ಅರಿಯದ ಮಾತಾಗಿದ್ದಾಗ ‘ಕೈವೀಸು’ ಎಂಬುದರ ಅರ್ಥವೂ ಮರೆತು ಹೋಗಿದ್ದರೆ ಸೋಜಿಗವೇನು? ಕೆಲವು ನುಡಿಗಳು ಕಾಲಕಾಲಕ್ಕೆ ಅಲ್ಪಸ್ವಲ್ಪ ಮಾರ್ಪಾಟುಗೊಳ್ಳುತ್ತ ಬಂದಿವೆ. ‘ಕೈಮಿಗು, ಕೈಗಳೆ, ಕೈಮೀರು, ಎಂಬಿವು ಇದಕ್ಕೆ ಉದಾಹರಣೆಗಳು. ಆದರೂ ಒಟ್ಟಿನಲ್ಲಿ, ಅನೇಕ ಶತಮಾನಗಳಿಂದ ಅವ್ಯಾಹತವಾಗಿ ನಡೆದು ಬಂದ ಕಂನಾಡ ಅವಿಚ್ಛಿನ್ನ ಪರಂಪರೆಯು ಕೌತುಕಾಸ್ಪದವಾಗಿದೆ, ಹೆಮ್ಮೆ ಪಡುವಂತಹುದಾಗಿದೆ. ಕನ್ನಡ ಭಾಷೆಯಲ್ಲಿ ಬಳಕೆಯಾದ ಹಲವಾರು ನುಡಿಗಟ್ಟುಗಳನ್ನು ಶಂಬಾ ಕೊಟ್ಟಿದ್ದಾರೆ. ಉದಾಹರಣೆಗೆ.

ಅಳ್ಳೆದೆ (ಪುಕ್ಕಮನಸ್ಸು) : ಅರಿಗಂಡರ ಅಳ್ಳೆರ್ದೆಗಳಂ ತುಳಿವವೊಲ್ – ಪಂಪ

ಅಡಿ (ಮಹನೀಯರು) : ನಿಮ್ಮಡಿ ಬಂದ ಕಾರ್ಯ ಬೆಸಸಿ ಬೇಗದೊಳು – ಕು. ವ್ಯಾಸ

ಅಳು (ಸಮರ್ಥ) : ನಿಮ್ಮಿದಿರೊಳು ಅಳೇ ತಾನು? – ಕು. ವ್ಯಾಸ

ಪ್ರಕಟಮೈ ನಿಮ್ಮಾಳುತನ, ಪಲಾಯನ, ಪಂಡಿತರು ನೀವು! – ಕು. ವ್ಯಾಸ
ಎದೆ (ಅಂತಃಕರಣ) : ಎದೆಯರಿತು ನುಡಿದಳು: – ರತ್ನಾಕರವರ್ಣಿ

ಸುಭದ್ರೆಯ ಮನಂ ಒರಲ್ದುದು, ಎರ್ದೆ ಉರಿದುದು – ಪಂಪ

ಎಂಟೆರ್ದೆ (ಅತುಲ ಧೈರ್ಯ) : ಶುಭಕೀರ್ತಿ ಮುನಿಪನೊಳ್, ಏಂ ಗಡ!

ನುಡಿಯಲ್ಕೆ ಪರವಾದಿಗಳ್ಗೆ ಎಂಟೆರ್ದೆಯೆ? – ಪಂ. ಮಂ.

ರನ್ನರ ಕೃತಿರತ್ನಮುಮಂ ಪೇಳ್ ಪರೀಕ್ಷಿಪಂಗೆ ಎಂಟೆರ್ದೆಯೆ? – ರನ್ನ

ಎದೆ ಅದಿರು, ಒಡೆ, ನಡುಗು, ಪರವಾದಿಗಳ ಎದೆ ಅದಿರೆ – ಬ.ಪುರಾಣ

(ಅರ್ಜುನನೊಡನೆ) ಆ ಮಹಾರಥ ದ್ರೋಣನೆದೆ ನಡುಗುವುದು ಕದನದಲಿ –ಕು. ವ್ಯಾಸ

ಎದೆಗುಂದು, ಕೆಡು, ಬಿರಿ : ಎಡರಿನಲ್ಲಿ ಎದೆಗುಂದದೆ, ಬಡತನಕೆ ಕಂಗೆಡದೆ – ಅನುಭವಾಮೃತ

ನೀವುಂ ಇಂತು ಇನಿತು ಎದೆಗೆಟ್ಟಿರೆ! – ಪಂಪ

ವಿಡಂಬನವ ಕಂಡು ಎದೆಬಿರಿದವು – ಕು. ವ್ಯಾಸ

ಎದೆಗೊಳ್ಳು (ಚೆಂದಕಾಣು) : ಮದನಾರಿಯ ರೂಪು ಎರ್ದೆಗೊಳ್ಳುವುದು – ಪಂಪ

ಇದರಂತೆ ಧಾತುಗಳಲ್ಲಿ ವಿಶೇಷಾರ್ಥವನ್ನು ಪಡೆದಿರುವ ನುಡಿಗಳೂ ಅದೆಷ್ಟೋ ಇವೆ. ಕಾಸುವಾಗ ಹಾಲು ಕೆಟ್ಟರೆ ಅದಕ್ಕೆ ‘ಒಡೆಯಿತು’ ಎನ್ನುವರು (ಕೆಟ್ಟ ಮನುಷ್ಯನು). ‘ಸತ್ತ’ ನೆಂಬಲ್ಲಿ ‘ನೆಗೆದೆ’ ನೆಂದು ಹೇಳುವರು. ‘ತಿಮ್ಮನು ರಾಯರಲ್ಲಿ ನೀರು ಹೊರಲಿಕ್ಕೆ ನಿಂತಿದ್ದಾನೆ’ ‘ನಿಲ್ಲು’ ಧಾತುವು ಉದ್ಯೋಗ ಮಾಡು ಎಂಬರ್ಥವನ್ನು ಕೊಡುವುದು ‘ಭೀಮರಾಯನು ದಿನಾಲು ಕುಡಿಯುತ್ತಾರೆ’ ಎಂಬಲ್ಲಿ ಸೆರೆಯನ್ನು ಎಂದೇ ಸೂಚನೆಯಿದೆ. ಈ ಬಗೆಯಾಗಿ ಅನೇಕ ಧಾತುಗಳು ಒಂದೊಂದು ವಿಶೇಷಾರ್ಥವನ್ನು ಪಡೆದ ನುಡಿಗಳಾಗಿವೆ. ಇವೆಲ್ಲ ಸೂಕ್ಷ್ಮಗಳನ್ನು ಮನ್ನಿಸಿ ಮಾತುಗಳನ್ನು ಆಡುತ್ತ ಬರೆಯುತ್ತ ಹೋದರೆ ಕಂನುಡಿಯ ಗುಣ್ಪು ಮತ್ತು ನುಣ್ಪು ಹೆಚ್ಚಾಗುವುದರಲ್ಲಿ ಸಂದೇಹವೇ ಇಲ್ಲ. ಕನ್ನಡ ಶಬ್ದಗಳನ್ನು ಸೂಕ್ಷ್ಮವಾದ ಅರ್ಥ ವ್ಯತ್ಯಾಸಗಳೊಂದಿಗೆ ಬಳಸುವ ರೂಢಿ ಹಳಗನ್ನಡದಲ್ಲಿ ಕಂಡುಬರುತ್ತದೆಯಾದರೂ ಅದು ಇಲ್ಲ ಎಂಬ ಖೇದ ‘ಕಂನುಡಿಯ ಒಳ್ಗಂಪು’ ವಿನಲ್ಲಿ ವ್ಯಕ್ತವಾಗಿದೆ.

೫. ‘ದ್ವಿರುಕ್ತಿ’ ಎಂದರೆ ದ್ವಿ: ಎರಡು, ಉಕ್ತಿ = ಮಾತು / ಶಬ್ದ ಎಂದರ್ಥ. ಹೀಗೆ, ಒಂದು ವಿಶೇಷಾರ್ಥವನ್ನು ವ್ಯಕ್ತಪಡಿಸುವುದಕ್ಕಾಗಿ ಹಾಗೂ ಭಾವನೆಗಳ ಸ್ಪಷ್ಟತೆಗಾಗಿ ಒಂದು ಪದವನ್ನು ಅಥವಾ ಒಂದು ವಾಕ್ಯವನ್ನು ಅವಕಾಶ ಅಥವಾ ಬಿಡುವು ಇಲ್ಲದೇ ಎರಡು ಸಲ ಪ್ರಯೋಗಿಸುವುದನ್ನು ದ್ವಿರುಕ್ತಿ ಎನ್ನುವರು.

ಉದಾ. ಜಾತ್ರೆಯ ದಿನ ಮನೆ ಮನೆಯಲ್ಲಿಯೂ ಸಂಭ್ರಮ
ಜಾತ್ರೆಗೆ ಜನ ಹಿಂಡು ಹಿಂಡಾಗಿ ಬಂದರು
ಇಲ್ಲಿ ಗಮನಿಸಬೇಕಾದ ಸಂಗತಿಗಳು ಎರಡು.

೧. ದ್ವಿರುಕ್ತಿಗಳಲ್ಲಿ ಮೂಲಪದ ಇಡಿಯಾಗಿ ಮುಗುಚಿ ಬರುತ್ತದೆ. ಅಲ್ಲಿಯ ರೂಪಗಳು ಸ್ವತಂತ್ರವಾಗಿ ಬಳಕೆಯಾಗುತ್ತವೆ. ಅವು ಸ್ವತಂತ್ರ ರೂಪಗಳು.

೨. ದ್ವಿರುಕ್ತಿಗಳಿಗೂ ಪ್ರತಿಧ್ವನಿಪದ ಹಾಗೂ ಜೋಡುನುಡಿಗಳಿಗೂ ರಚನೆ ಮತ್ತು ಅರ್ಥದಲ್ಲಿ ವ್ಯತ್ಯಾಸಗಳುಂಟು.

ಶಾಲೆ ಶಾಲೆಗೆ – ಪ್ರತಿಯೊಂದು ಶಾಲೆಗೆ
ಶಾಲೆಗೀಲೆಗೆ – ಶಾಲೆ ಅಥವಾ ಅಂತಹ ಜಾಗಕ್ಕೆ
ಹುಳುಹುಪ್ಪಡಿ – ಕಾಳು ಕಡಿ

ದ್ವಿರುಕ್ತಿ ವಸ್ತು, ಕ್ರಿಯೆಗಳ ಉತ್ಸಾಹ, ‌ಆಧಿಕ್ಯ, ಕೋಪ ಇಂತಹ ಭಾವನೆಗಳನ್ನು ಸೂಚಿಸಿದರೆ ಪ್ರತಿಧ್ವನಿ ಪದಗಳು ಸಾಮಾನ್ಯವಾಗಿ ‘ಅಂತಹ ಇತರ’ ಎಂಬರ್ಥವನ್ನು ಸೂಚಿಸುತ್ತವೆ. ಜೋಡುನುಡಿಗಳಲ್ಲಿ ಉತ್ತರ ಪದಕ್ಕೆ ಅರ್ಥ ಇರದಿದ್ದರೂ ಅದು ಪೂರ್ವ ಪದಕ್ಕೆ ಪುಷ್ಟಿಕೊಡುತ್ತವೆ.