೧೪. ಕಲ್ಯಾಣ ಕರ್ನಾಟಕದ ಪಿಕಳಿಹಾಳ, ತೆಕ್ಕಲಕೋಟ, ಸಂಗನಕಲ್ಲು ಮುಂತಾದ ಕಡೆಯ ಉತ್ಖನನವು ತುಂಗಾ ತೀರದವರೆಗೆ ತಾಮ್ರಯುಗ, ಅಶ್ಮಯುಗಗಳ ಪಶುಪಾಲನೆಯ ಒಂದೇ ಸಂಸ್ಕೃತಿ ೪೦೦೦ ವರ್ಷಗಳು ಹಬ್ಬಿತ್ತು ಎಂಬುದರ ಕುರುಹು. ಇಂದು ಮಹಾರಾಷ್ಟ್ರದಲ್ಲಿನ ಲಹಾಲ, ತೆರೆದಾಡ, ಚಂದೋಲಿ ಮುಂತಾದ ಕಡೆಯ ಉತ್ಖನನವು ಇದೇ ವಿವರವನ್ನು ಸೂಚಿಸುತ್ತವೆ. ಇದೂ ಒಂದೂ ದಿಕ್ಕಿನಿಂದ ಕರ್ನಾಟಕ ವ್ಯಾಪ್ತಿಯನ್ನು ತಿಳಿಯಲು ಸಹಾಯಕವಾಗುತ್ತದೆ. ಎಡೆ ಊರುಗಳ ಹೆಸರಿನ ಈ ಜನ ಜೀವನದ ಪ್ರವಾಹ ಹರಿದು ಬಂದುದನ್ನು ಹಾಗೂ ವಸತಿ ಪ್ರದೇಶದ ಸ್ಥಿತಿಯನ್ನು ತಿಳಿಯಲು ಸಹಾಯಕವಾಗುತ್ತದೆ. ಪಡು(ವು) ಪೊದರಗಳ ಮರೆಯಲ್ಲಿರುವ ಕಾಲದ ಚಿತ್ರವಾದರೆ ಪಾಡಿ, ಹಟ್ಟಿಗಳು ದನಗಳನೊಡನಿರುವ ನೆಲೆಯಾಗುತ್ತದೆ. ಕುಡಿ – ಕುಡಿ – ಎಲೆಮನೆ (ಪರ್ಣಕುಟಿ)ಗಳು ಪ್ರಾಥಮಿಕ ಕುಡು – ಕುಡುವಿನಿಂದ ಒಕ್ಕಲು ರೈತನಾಗುವ ಸೂಚನೆಯಿದೆ. ಗೂಡು – ಗುಜಿಗಳು ಗುಳೆಯವರ ಗೂಡಾರ ಇವು ಚರವೃತ್ತಿಯ ಜೀವನ ಸಂದರ್ಭಗಳ ಸೂಚಕವಾಗಿದೆ. ಕುಡಿ ಸಂಸ್ಕೃತ ಪ್ರಭಾವದಿಂದ ‘ಕುಡ್ಯ’ ಆದುದನ್ನು ಟಿ. ಬರೋ ಎಂಬ ವಿದ್ವಾಂಸರು ಗುರುತಿಸಿದ್ದಾರೆ. ಕುಡ್ಯ ಕೋಡೆ – ಗೋಡೆ ಆಗಿರಬೇಕೆಂದು ಸಂಸ್ಕೃತ ಪ್ರಭಾವದಿಂದ ಕೋಟೆ ಆಗಿದೆ ಎಂದು ಶಂಬಾ ಅವರು ಸಾಂಸ್ಕೃತಿಕವಾಗಿ ಸರಿಯಾಗಿ ಊಹಿಸುತ್ತಾರೆ. ದನ < ಧನ ಆದುದು ದ್ರವದಿಂದ ದ್ರವ್ಯ ಆದುದನ್ನು ಇದಕ್ಕೆ ಉದಾಹರಣೆಯಾಗಿ ಶಂಬಾ ನೀಡುತ್ತಾರೆ. ದನಕ್ಕಾಗಿ ಹೋರಾಡಿ ಮಡಿದು ‘ಧನಂ’ – ಜಯರಾದ ಹಲವು ವೀರಗಲ್ಲುಗಳು ಕರ್ಣಾಟಕದಾದ್ಯಂತ ದೊರಕುತ್ತವೆ. ಮಾಳ = ಗುಡ್ಡ – ಮಾಡ – ಮಾಲೆ – ಮಾಲ – ಮಲ್ಲಯ್ಯ (ಶಿವ) ಬನ = ವೃಕ್ಷ ಮಾಳಮ್ಮ = ಬನದಮ್ಮ – ವನದಮ್ಮ – ಬನಶಂಕರಿ – ಮರದಮ್ಮ. ಇವುಗಳು ಕರ್ನಾಟಕ ಸಂಸ್ಕೃತಿಯ ಪ್ರಾಚೀನತೆ ಅರಿಯಲು ಹೇಗೆ ಸಹಾಯಕವಾಗುತ್ತದೆಂಬ ಅಂಶವನ್ನು ಕಂನಾಡಿನ ಜನರ ಗಮನಕ್ಕೆ ತಂದುಕೊಡುತ್ತಾರೆ. ಕರ್ಣಾಟಕ ಸಂಸ್ಕೃತಿಯನ್ನು ಶಂಬಾ ಮಾತಾಡಲು ತೊಡಗಿದರೆ, ಮರ್ಹಾಟೀ ಸಂಸ್ಕೃತಿಯ ರಾಜಕೀಯದ ನಿಲುಮೆಗಳು, ಭಾಷಿಕ ಪ್ರತಿಮೆಗಳಲ್ಲಿ ಆದ ಬದಲಾವಣೆಗಳೂ ಸಹ ಇದರೊಡನೆ ಬರುತ್ತವೆ. ಉದಾ. ಕದಂಬ – ಕದಮ, ಚಾಲುಕ್ಯ – ಸಾಳುಂಕಿ, ಸಾಮಂತ – ಸಾಮಂತ, ಮನ್ನೆಯ – ಮಾನೆ, ರಾಷ್ಟ್ರಿಕ – ರಾಥೋಡ, ಸಿಂದ – ಸಿಂಧೆ (ಶಿಂಧೆ) ಹೀಗೆಯೇ ಯಾದವ – ಜಾಧವ ಇವುಗಳನ್ನು ಗಮನಿಸಿದರೆ ಗತಕಾಲದ ಸಾಮಾಜಿಕ ಸ್ಥಿತ್ಯಂತರಗಳಿಂದ ಮಹಾರಾಷ್ಟ್ರದ ಬೆಳವಣಿಗೆ ಅರಿಯಲು ಸಹಾಯಕವಾಗುತ್ತದೆ!

೧೫. ಮೊದಲಿಗೆ ಜನ ಆರಾಧಿಸಿದ್ದು ಮರಗಳನ್ನು : ವೃಕ್ಷಾರಾಧನೆ ಅತಿಪ್ರಾಚೀನವಾದದ್ದು, ಮೊದಲ ಹಂತದ ವೃಕ್ಷ – ರಸ, ಕ್ಷೀರ (ಹಾಲು) ಮುಂದಿನ ಹಂತದಲ್ಲಿ ಗೋರಸ ಕ್ಷೀರ ಆದದ್ದು ಕಾಣುತ್ತದೆ! ಆರ್ಯಭಾಷಿಕರ ಸಂಪರ್ಕವು ಬರತೊಡಗಿದ ಸೂಚನೆ ಇಲ್ಲಿ ಕಾಣುತ್ತದೆ. ಮರವರು, ಕಳವರು – ಕರುಬ ‘ದನಗಾರ(ಧನಗಾರ) ರಾದುದು,ಕುಡುಬ – ಒಕ್ಕಲು ಮಕ್ಕಳು ಆಗುವ ಹಂತದ ಸೂಚನೆ ಇರುವುದನ್ನು ಶಂಬಾ ಅವರು ಮೊದಲಿಗೆ ಸಂಶೋಧಿಸಿದ್ದು, ಅದನ್ನು ಕಂನಾಡಿಗ ತಿಳಿಸಿದ್ದು ಈ ಬಗೆಯ ಅಧ್ಯಯನಕ್ಕೆ ಹೊಸ ದಿಕ್ಸೂಚನೆಗಳೇ ಸರಿ. ವೃಕ್ಷಾರಾಧಕದ ಈ ಜನ ಮರವರು – ಮರ ಎಂದರೆ ಮರಾಠಿಯಲ್ಲಿ ‘ಝೂಡ್’, ಮರವರು ಝೂಡಿಗಳೂ. ಈ ಝೂಡಿಗಳೇ (ಜೇಡರು) ಜಾಡರು, ನೇಕಾರರು. ಈ ಬಟ್ಟೆ ನೇಯುವ ನೇಕಾರರೇ ನೇಯ್ಕರು. ನೇಯಿಕಾರರಾದ ಬೆಣ್ಣೆ ಮಾರುವ ಗೋವಾಳರು, ಈ ಗೋವಾಳಿಗರೇ ಗೌಡರು. ನೇಯುವವರು ನೇಗಿಲರು, ಇವರು ಒಕ್ಕಲಿಗರು > ಕೃಷಿಕರು ಇವರೇ ನಾಡವರು. ನಾಡವರೇ ರಾಷ್ಟ್ರಿಕರು, ರಟ್ಟರು. ಶಂಬಾ ಅವರು ಇಂತಹ ಶಬ್ದ ಸಂಕೇತಗಳ ಮೂಲಕ ನೀಡುವ ಉತ್ತರ ಎಂಥವರಿಗೂ ವಿಸ್ಮಯ ನೀಡುತ್ತವೆ. ಉದಾ. ಪಟ್ಟಿ > ಪಾಡಿ – ಪಾಡ – ವಾಡ – ವಾಟ – ಬಾರ್ ಇವೆಲ್ಲ ‘ಪುಡು’ ಧಾತುವಿನಿಂದ ಉತ್ಪನ್ನಗೊಂಡ ಪದಗಳೇ. ಪಟ್ಟಿಯಲ್ಲಿದ್ದವ ಪಟ್ಟಲ ಪಾಟೀಲ, ಗೌಡ > ಗೌಳ – ಗೋವಾಳ; ವಟ(ಮರ) > ಗಿಡ – ವಾಡ – ವಾಡಿಗಳು. ಇಂತಹ ಶಬ್ದ ಸಂಕೇತಗಳ ಮುಖಾಂತರ ಕರ್ನಾಟಕದ ಹುಡುಕಾಟದ ಬಗ್ಗೆ ಶಂಬಾ ಚರ್ಚಿಸಿರುವ ರೀತಿ ಅನನ್ಯವಾದುದು.

೧೬. ಗ್ರಾಮ, ಊರು, ಪುರಾ ಎಂಬಿವು ಅಷ್ಟು ಪುರಾತನವಲ್ಲವೆನ್ನುವ ಶಂಬಾ ಅವರು ಮಾನವನು ಪ್ರಾಥಮಿಕ ಸ್ಥಿತಿಯನ್ನು ಆಹಾರ ಸಂಚಯಕ್ಕಾಗಿ ಅಲೆಮಾರಿಯಾಗಿದ್ದು ಅವನ ವಸತಿಸೂಚಕವಾದ ಹೆಸರು ಪಟ್ಟಿ ಎಂದು ಊಹಿಸುವರು. ಈ ಶಬ್ದವು ದನಗಾರಿಕೆಯ ಬಾಳಿನ ದ್ಯೋತಕವಾಗಿದೆಯೆಂಬಲ್ಲಿ ಸಂದೇಹವಿಲ್ಲ. ಹಟ್ಟಿಗಳೇ ನಮ್ಮ ನಾಡಿನ ಆರಂಭ ಕಾಲದ ವಸತಿಗಳೆಂದು ಊಹಿಸುವರು. ಹಟ್ಟಿಯ ಮೂಲರೂಪ ಪಟ್ಟಿ ಎಂದೂ, ಇದಕ್ಕೆ ತಮಿಳಿನಲ್ಲಿ ಮನೆ, ಹಳ್ಳಿ ಎಂಬ ಅರ್ಥವಿದೆಯೆಂದೂ ಅವರು ವಾದಿಸಿದರು. ಪಟ್ಟಿಯು ಈ ನಾಡವರ ತೀರ ಆರಂಭಕಾಲದ ದನಗಾರಿಕೆಯ ಮಟ್ಟದ ಬಿಡಾರವೆಂದು ಅವರು ತೀರ್ಮಾನಿಸುವರು. ಪಂಪಭಾರತದಲ್ಲಿ ಬರುವ ‘ಆಯ್ದು ಬಾಡಮಂ ಅವರ್ಗೀವುದು’ ಎಂದು ಉಲ್ಲೇಖದ ಬಗೆಗೆ ಪ್ರಸ್ತಾಪಿಸುತ್ತಾ ಅವರು ‘ಬಾಡ’ ವೆಂಬುದು ಪಟ್ಟಿಯ ಬಳಗಕ್ಕೆ ಸೇರಿದ ಪದವಾಗಿದೆ ಎನ್ನುವರು. ಈ ನಾಡಿನ ಮೊದಲಿಗರಾದ ‘ಪಟ್ಟಿ’ಗಳು ಬೇರೆ ಯಾರು ಅಲ್ಲ, ಹಟ್ಟಿಕಾರ ಗೌಳರು, ಗೌಡ ಮತ್ತು ಪಟ್ಟಿಲರು ಮೂಲತಃ ಒಬ್ಬರೆ. ಗಾಮುಂಡ > ಗಾವುಂಡ > ಗವುಡ > ಗೌಡ ಎಂಬ ರೂಪದಲ್ಲಿ ಈ ಪದ ಬಳಕೆಯಲ್ಲಿದೆಯೆಂದೂ, ಮೂಲ ಉಚ್ಚಾರವೇ ಗೌಡವೆಂದಿದ್ದು ಶಾಸನಗಳನ್ನು ಬರೆದ ಕಾಲದ ಸುಮಾರಿಗೆ ಗೌಡ(ಳ)ರ ಆ ಪುರಾತನ ಪರಂಪರೆಯ ಅರ್ಥವು ಜನಗಳಲ್ಲಿ ಮರೆತುಹೋಗಿದ್ದಿತು. ಗೌಡರು ಗ್ರಾಮಾಧಿಕಾರಿಗಳಾಗಿಯೂ ಇರುತ್ತಿದ್ದುದರಿಂದ ಗೌಡ ಶಬ್ದಕ್ಕೂ ತಳಕುಹಾಕಿದರು ಎಂದು ಶಂಬಾ ಅವರು ವಾದವನ್ನು ಒಪ್ಪುವುದು ಬಹುಶಃ ಕಷ್ಟ. ಪಟ್ಟಲರೆಂದರೆ ಹಟ್ಟಿಕಾರ ಗೋವಳರು. ಇವೆರಡೂ ಸಮಾನಾರ್ಥಕ ಪದಗಳು. ಚೀನ + ಅಂಬರ = ಚೀನಾಂಬರದಲ್ಲಿ ಚೀನ ದೇಶವಾಚಕವಾಗಿರುವಂತೆ, ಪಟ್ಟ + ವಸ್ತ್ರ = ಪಟ್ಟವಸ್ತ್ರದಲ್ಲಿನ ಪಟ್ಟವು ದೇಶವಾಚಕ. ಪಟ್ಟಜವೆಂದರೆ, ಪಟ್ಟಿಯಲ್ಲಿ ಜನಿಸಿದ್ದು ಎಂದರ್ಥ. ಪಟ್ಟಿಕಾರರು, ಹಟ್ಟಿಗಾರರೆಂದು ನೇಕಾರರಿಗೆ ಹೆಸರಿದ್ದು, ಇದು ದಕ್ಷಿಣಾಪಥದಲ್ಲಿ ಮಾತ್ರ ಬಳಕೆಯಲ್ಲಿದೆ. ಹಾಟಕವೆಂದರೆ ಬಂಗಾರ; ಹಟ್ಟಿಯಲ್ಲಿ ಹುಟ್ಟಿದ್ದು ಹಾಟಕ. ನಿಜಾಂ ಇಲಾಖೆಯ ಹಟ್ಟಿಯ ಗಣಿಗಳು ಭಾರತದಲ್ಲಿಯೇ ಅತಿಪುರಾತನವಾದುದೆಂದು ಡಾ. ಮಾರ್ಶಲ್ಲರು ಮೊಹೆಂಜೋದಾರೋದ ತಮ್ಮ ಗ್ರಂಥದಲ್ಲಿ ಕಾಣಿಸಿದ್ದಾರೆ. ‘ಹಾಟಕ’ ವೆಂಬುದೂ ಕಂನುಡಿಯು ಸಂಸ್ಕೃತಕ್ಕೆ ಭಾರತಕ್ಕೆ ಸಲ್ಲಿಸಿದ ಒಂದು ಬೆಲೆಯುಳ್ಳ ಕಾಣಿಕೆ. ಹೀಗೆ ಶಂಬಾ ಅವರು ಕರ್ನಾಟಕದ ಶೋಧದ ಬಗ್ಗೆ ಶಬ್ದಗಳ ಜಾಡು ಹಿಡಿದು ನಡೆಸುವ ಪರಿಕಲ್ಪನೆ ಅದ್ಭುತವಾಗಿದೆ. ಚೀನಾಂಬರದ ಮೊದಲನೆಯ ಪದ ದೇಶವಾಚಕವಲ್ಲ ಶ್ರೇಷ್ಠ, ಬೆಲೆಬಾಳುವ ಎನ್ನುವ ಅರ್ಥದಲ್ಲಿ ಬಳಕೆಯಲ್ಲಿದೆ.

ಕುಂತಲ – ಕರ್ನಾಟಗಳ ಐಕ್ಯ ಅಭಿನ್ನತೆಗಳು ಸಂಶೋದಕರನ್ನು ಬೆರಗು ಗೊಳಿಸಿವೆ ಎಂದೂ ಹೇಳುವ ಶಂಬಾ ವರ್ಹಾಟವು ಕುಂತಳವೆಂದೂ, ಚಲುಕ್ಯ ರಾಜರಿಗೆ ಕುಂತಲಾಧಿಪರೆಂಬ ಪರ್ಯಾಯನಾಮವೂ ಇದೆಯೆಂದು ಅಭಿಪ್ರಾಯಪಡುವರು. ಲಾಭ ಮತ್ತು ಮರ್ಹಾಟಗಳಲ್ಲಿ ಆರ್ಯರು ಮೊದಲು ನೆಲೆಸಿದ್ದವರು,ಆರ್ಯರು ಬಂದ ಬಳಿಕ ಪ್ರಕೃತ ಭಾಷೆಯನ್ನು ಸ್ವೀಕರಿಸಿ ಲಾಡರೂ ಮರಾಟ (ಆರಿಯಾ)ರೂ ಆದ ಜನಗಳು ಕಂನಾಡ ಬಳಗದವರೆಂದೇ ಸಿದ್ಧವಾಗುತ್ತದೆ. ಪಾಡಿ, ವಾಡಿ, ಹಟ್ಟಿಗಳನ್ನು ಕಟ್ಟಿ ನೆಲಸಿದ ಆ ಜನಗಳು ಕಂನಾಡ ಪಟ್ಟಿಗಳು ಹಟ್ಟಿಕಾರರೇ ಆಗಿದ್ದರೆಂದು ಹೇಳಬೇಕಾಗುತ್ತದೆ. ಆದುದರಿಂದ ಪ್ರಾಚೀನ ಕಾಲದಲ್ಲಿ ಮರಹಟ್ಟಿಯು (ಎಂದರೆ ವರ್ಹಾಟವೂ) ಕಂನಾಡವರ ನೆಲೆವೀಡೆಂಬಲ್ಲಿ ಸಂದೇಹವೇ ಇಲ್ಲ ಎಂಬ ತೀರ್ಮಾನಕ್ಕೆ ಶಂಬಾ ಬಂದಿರುವರು.

೧೭. ಕವಿರಾಜಮಾರ್ಗಕಾರ ಹೇಳಿದ ಕನ್ನಡ ನಾಡಿನ ಭೌಗೋಳಿಕ ವ್ಯಾಪ್ತಿಗೆ ಇಲ್ಲಿನ ಕನ್ನಡ ಶಾಸನಗಳಲ್ಲಿ ದಾಖಲಾದ ಸ್ಥಳನಾಮಗಳು ಇಂದಿಗೂ ಜೀವಂತ ಸಾಕ್ಷಿಯಾಗಿವೆ. ಒಂದು ಗ್ರಾಮಕ್ಕೆ ಅಥವಾ ಎಡೆಗೆ ಹೆಸರಿಡುವಾಗ ಅವು ಹೆಚ್ಚಾಗಿ ಸ್ಥಳೀಯವಾಗಿರುತ್ತವೆ. ಆ ಎಡೆಯ ಪ್ರಾದೇಶಿಕ ವೈಶಿಷ್ಟ್ಯವನ್ನೋ ಅಥವಾ ಅಲ್ಲಿ ಹೆಸರು ಮಾಡಿದ ವ್ಯಕ್ತಿಯನ್ನೋ ಇಲ್ಲವೇ ಸ್ಥಳೀಯ ವೈಶಿಷ್ಟ್ಯಕ್ಕನುಸಾರವಾಗಿಯೇ ಈ ಹೆಸರುಗಳು ಹತ್ತಿಕೊಳ್ಳುತ್ತವೆ. ಇದೆಲ್ಲವನ್ನು ಗಮನಿಸಿದಾಗಲೂ ಈ ಪ್ರದೇಶದಲ್ಲಿ ಕನ್ನಡ ಆಡುಭಾಷೆಯಾಗಿತ್ತು. ಇಲ್ಲಿ ಕನ್ನಡ ಸಂಸ್ಕೃತಿ ತಲೆಯೆತ್ತಿ ನಿಂತಿತ್ತು ಎಂಬ ಅಂಶ ಸ್ಪಷ್ಟವಾಗುತ್ತದೆ.

ಮಹಾರಾಷ್ಟ್ರದ ಅನೇಕ ಗ್ರಾಮನಾಮಗಳಿಗೆ ಕನ್ನಡದಲ್ಲಿ ನಿಷ್ಪತ್ತಿ ಹೇಳಬೇಕಾಗುತ್ತದೆ. ಇವೆಲ್ಲ ಕನ್ನಡಿಗರು ಇಟ್ಟ ಹೆಸರು ಎಂಬುದು ಇದರಿಂದ ಗೊತ್ತಾಗುತ್ತದೆ. “ಪರಂಪರೆ, ಜಾತಿ, ಜನಾಂಗ, ಭಾಷೆಗಳಲ್ಲಿ ಯಾವ ದೃಷ್ಟಿಯಿಂದ ವಿಚಾರಿಸಿ ವಿಮರ್ಶಿಸಿದರೂ ಗೋದಾವರಿವರೆಗೆ ಕನ್ನಡವಿದ್ದೇ ಇತ್ತು” ಎಂಬ ಅಭಿಪ್ರಾಯದಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ. ‘ಮಹಾರಾಷ್ಟ್ರದಲ್ಲಿಯ ಸುಮಾರು ಅರ್ಧಕ್ಕಿಂತ ಹೆಚ್ಚು ಊರ ಹೆಸರುಗಳು ಕನ್ನಡವಿರುತ್ತದೆಂದು ಹಿರಿಯ ಮರಾಠಿ ಇತಿಹಾಸಜ್ಞ ಶ್ರೀ ರಾಜವಾಡೆ ಅವರೇ ಒಪ್ಪಿಕೊಂಡಿರುವುದಾಗಿ ಕರ್ನಾಟಕ ಗತವೈಭವದ ಕೃತಿಯಲ್ಲಿ ಶ್ರೀ ಆಲೂರು ವೆಂಕಟರಾಯರು ಅಭಿಪ್ರಾಯ ಪಟ್ಟಿದ್ದಾರೆ. ಇಲ್ಲಿನ ಕನ್ನಡ ಶಾಸನಗಳಲ್ಲಿ ದಾಖಲಾದ ಸ್ಥಳನಾಮಗಳ ಮೇಲಿನ ಮಾತನ್ನು ಶ್ರತಪಡಿಸುತ್ತವೆ.

ಕನ್ನಡ ನಾಡು ಬಹುಪ್ರಾಚೀನವಾದುದು. ಇದಕ್ಕೆ ಬಹು ಸುದೀರ್ಘವಾದ ಐತಿಹಾಸಿಕ ಹಿನ್ನೆಲೆಯಿದೆ. ಸಾಂಸ್ಕೃತಿಕ ಪರಂಪರೆಯಿದೆ ಎನ್ನುವುದನ್ನು ಈ ಸ್ಥಳನಾಮಗಳು ಖಚಿತಪಡಿಸುತ್ತವೆ. ಸಂಸ್ಕೃತಿಯು ಮಾರ್ಪಡುವಷ್ಟು ಬೇಗ ಭಾಷೆಯ ಮೂಲ ಆಕರವು ಬದಲಾಗುವುದಿಲ್ಲ. ಸಾಮಾಜಿಕ ಸಂಸ್ಕೃತಿಯ ರೂಪವು ಬದಲಾಗಿ ಇನ್ನೊಂದು ಭಾಷೆಯೂ ಬರಬಹುದು ಆದರೂ ಹಿಂದಿನ ಭಾಷೆಯ ಅವಶೇಷಗಳೇ ಇಲ್ಲದೇ ಹೊಸ ಭಾಷೆಯು ಅಲ್ಲಿ ತಲೆದೊರಲು ಶಕ್ಯವಿಲ್ಲ. ಕೆಲವೊಂದು ಸ್ಥಳನಾಮ, ದೇವತಾ ಸ್ವರೂಪದ ಮೂಲಪಡಿಯಚ್ಚು ಸಹ ತೀರಾ ನಷ್ಟವಾಗಿ ಹೋಗುವುದಿಲ್ಲ. ಕಡೆಗಣಿಸಲ್ಪಡುವ ಹಳೆಯ ಎಡೆಗಳ ನಾಮ ಸಂಕೇತಗಳು ಹೊಸ ಭಾಷೆಯ ತಳದಲ್ಲಿ ಮರೆವಿನ ಆಳದಲ್ಲಿ ಹಾಗೆಯೇ ಉಳಿಯಬಲ್ಲವು ಎಂಬ ಸಂಬಾ ನಿಲುವು ನಿಜವೇ ಆಗಿದೆ. ಇಂದು ಮಹಾರಾಷ್ಟ್ರದಲ್ಲಿ ಕನ್ನಡ ಭಾಷೆ ಮರೆಯಾಗಿ ಮರಾಠಿ ಸಂಸ್ಕೃತಿ ನೆಲೆಸಿದೆ. ಕನ್ನಡ ನಾಡಿನ ಭಾಗವಾಗಿದ್ದ ಈ ಪ್ರಾಂತವೀಗ ಅಚ್ಚ ಮರಾಠಿ ಭಾಷಿಕವಾಗಿದೆ. ಹೀಗಿದ್ದರೂ ಪ್ರಾಚೀನ ಸ್ಥಳನಾಮಗಳು ಪಳೆಯುಳಿಕೆಯಂತೆ ಇಲ್ಲಿ ಉಳಿದುಬಂದಿದೆ ಎಂಬುದು ಗಮನಾರ್ಹ ಸಂಗತಿ. ಕನ್ನಡಿಗರ ರಾಜ್ಯ ವಿಸ್ತಾರ, ಕನ್ನಡ ಭಾಷಾ ವಿಸ್ತಾರವನ್ನು ಗುರುತಿಸುವ ಸಂದರ್ಭದಲ್ಲಿ ಇಲ್ಲಿ ದೊರೆಯುವ ಕನ್ನಡ ಶಾಸನಗಳನ್ನಷ್ಟೇ ಗಮನಿಸಿದರೆ ಸಾಲದು. ಯಾಕೆಂದರೆ ಶಾಸನಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋದ ನಿದರ್ಶನಗಳು ಇವೆ. ಸ್ಥಳನಾಮಗಳು ವಲಸೆ ಹೋಗುವ ಪ್ರಶ್ನೆಯೇ ಇಲ್ಲ. ಆದ್ದರಿಂದ ಒಂದು ಪ್ರದೇಶದ ಭೌಗೋಳಿಕ ವ್ಯಾಪ್ತಿಯನ್ನು ಗುರುತಿಸುವಲ್ಲಿ, ಒಂದು ಸಂಸ್ಕೃತಿಯನ್ನು ಅಧ್ಯಯನ ಮಾಡುವ ಸಂದರ್ಭದಲ್ಲಿ ಸ್ಥಳನಾಮಗಳು ಅತ್ಯಂತ ವಿಶ್ವಸನೀಯವಾದ ಆಕರಗಳಾಗಬಲ್ಲವು. ಇವು ಅಲ್ಪಸ್ವಲ್ಪ ಬದಲಾವಣೆಗೊಳಗಾಹಬಹುದೇ ಹೊರತೂ ಪೂರ್ಣಪ್ರಮಾಣದಲ್ಲಿ ತಮ್ಮ ತನವನ್ನು ಬಿಟ್ಟುಕೊಡಲಾರವು. ಎಂಟುನೂರು ವರ್ಷಗಳ ಸತತ ಮರಾಠಿ ಭಾಷೆಯ, ಭಾಷಿಕರು ಸಂಪರ್ಕದಲ್ಲಿದ್ದೂ ಇಲ್ಲಿನ ಕನ್ನಡ ಸ್ಥಳನಾಮಗಳು ತಮ್ಮ ತನವನ್ನು ಉಳಿಸಿಕೊಂಡು ಬಂದಿವೆ. ಸ್ಥಳನಾಮಗಳಿಗೆ ವಿಶಿಷ್ಟ ತಾಳಿಕೆಯ ಗುಣವಿದೆ ಎಂಬುದಕ್ಕೆ ಇಲ್ಲಿನ ಶಾಸನಗಳಲ್ಲಿ ದಾಖಲಾದ ಗ್ರಾಮನಾಮಗಳು ಉತ್ತಮ ನಿದರ್ಶನಗಳಾಗಿವೆ.

೧೮. ಶಂಬಾ ಅವರು ಲಾಟ ಕರ್ಣಾಟಕಗಳನ್ನು ಸಂಯುಕ್ತ ದೇಶಗಳೆಂದು ಗುಣಾಢ್ಯನ ಬೃಹತ್ಕಥೆಯಲ್ಲಿ ಹೇಳಿರುವುದನ್ನು ಉಲ್ಲೇಖಿಸುತ್ತಾರೆ. ಗುಣಾಢ್ಯನ ಪ್ರಕಾರ, ಲಾಟ (ಗುಜರಾತ) ಮತ್ತು ‘ಕರ್ಣಾಟಕ’ (ಈಗಿನ ಉತ್ತರ ಮಹಾರಾಷ್ಟ್ರ) ಗಳೂ ನೆರೆಹೊರೆಯ ದೇಶಗಳು. ಮಹಾರಾಷ್ಟ್ರದ ದನಗರರು ಅಂದರೆ ಕುರುಬ ಜನಾಂಗದವರು. ಇವರು, ಇರಾವತಿ ಕರ್ವೇ ಪ್ರಕಾರ ‘ಕಂದಮಿಳ’ (ದ್ರಾವಿಡ) ಬುಡಕಟ್ಟಿಗೆ ಸೇರಿದವರು. ಮಧ್ಯ ಪ್ರದೇಶದ ಇಂದೋರಿನ ಹೋಲ್ಕರ್ ರಾಜಮನೆತನದವರು ದನಗರ ವರ್ಗಕ್ಕೆ ಸೇರಿದವರು. ಇಂದೋರ್ ಉಜ್ಜಯಿನಿಗಳಲ್ಲಿ ಮೈಲಾರನ ಭಕ್ತರಿದ್ದಾರೆ. ಮಹಾರಾಷ್ಟ್ರದ ಪ್ರಾಚೀನ ಗ್ರಾಮ ಸೇವಕ ಆಯಗಾರರನ್ನು “ಕೊರಬು” (= ಕುರುಬ) ಎನ್ನುತ್ತಾರೆ. ಮಹಾರಾಷ್ಟ್ರದ ಚಂದಾ ಭಂಡಾರಾ ಭಾಗ “ಕುರುಂಬರ್” ಜನ (= ಕುರುಬರು) ಒಂದು ಬಗೆಯ ಕನ್ನಡವನ್ನು ಮಾತನಾಡುತ್ತಿರುವುದನ್ನು ಗ್ರಿಯರ್ಸನ್ ದಾಖಲಿಸಿದ್ದಾರೆ. ಮರಾಠಿಯ ಹಲವು ಜೋಡುನುಡಿಗಳು ಒಂದೇ ಅರ್ಥದ ಕನ್ನಡ – ಮರಾಠಿ ಪದಗಳ ಜೋಡಿಗಳೇ ಆಗಿವೆ. ಕೋಲ – ಕಾಠೀ, ಕೋಲು – ದಂಡಾ (= ಕೋಲು); ಅರಳ್ – ಸುಮನ್ (= ಹೂವು); ಚೂಲ – ಓಲ (ಒಲೆ); ಮೋರ್ – ದಹಿ (= ಮೊಸರು); ವಳ – ಕಟೀ (= ಕಟ್ಟು). ಮುಂದಿನ ಕೆಲವು ಜೋಡುನುಡಿಗಳು ಕನ್ನಡದಿಂದ ಹಾಗೇ ತೆಗೆದುಕೊಂಡಂಥವು. ಉದಾ. ಗುದ್ದಾ ಗುದ್ದಿ, ಕೋಲಾ ಕೋಲಿ. ಶಂಬಾ ಅವರು ಜ್ಞಾನೇಶ್ವರ ಕನ್ನಡದಲ್ಲಿ ಬರೆದಿರುವ ಒಂದು ಅಭಂಗವನ್ನು ದಾಖಲಿಸಿದ್ದಾರೆ.

ಅಕ್ಕಾ ನೀ ಕೇಳೇ ಚಿಕ್ಕನಾ ಮಾತು
ಕಾರಲೆ ದನಿಗೆ ಮರುಳಾದನೆ
ಚೆಲುವಾನೆ ಪಂಡರಿರಾಯ ಚೆಲುವಾನೆ
ಎಲ್ಲಿದೆಯೌ ನರಕ ಬಾರನ್ನೆ
ಪುಂಡಲೀಕೆ ಭಕ್ತಿಗೆ ಚಂದಾ
ರಖುಮಾದೇವೀ ವರ ವಿಠಲನೆ

ಅವರು ಖಾನ್‌‌‌‌‌‌‌‌‌‌‌‌‌‌‌‌ದೇಶ, ನಾಸಿಕ್ ಜಿಲ್ಲೆಗಳ ಹಲವು ಸ್ಥಳನಾಮಗಳು ಕನ್ನಡವೇ ಆಗಿರುವುದನ್ನು ಗುರುತಿಸಿದ್ದಾರೆ. ಮಧ್ಯಭಾರತದ ’ಮಾಳವ’ ಪ್ರಾಂತದ ಹೆಸರು ‘ಮಾಲೆ’ಯಿಂದ ಬಂದುದೆಂಬ ಅವರ ಊಹೆ ನಿಷ್ಫಲವಾದುದನ್ನು. ಸ್ಟೆನ್ ಕೋನೋ ಎಂಬ ಭಾಷಾ ವಿಜ್ಞಾನಿಯ “The substrutum over which Gujarati and Marathi have spead was Dravidian” ಎಂಬ ವಾಕ್ಯವನ್ನು ಉದಾಹರಿಸಿ, ಪ್ರಾಚೀನ ಕಾಲದಲ್ಲಿ ಕನ್ನಡವು ಗೋದಾವರಿಯಿಂದ ಆಚೆ ನರ್ಮದೆಯವರೆಗೆ ಹಬ್ಬಿತ್ತು ಎಂದು ಪ್ರತಿಪಾದಿಸಿದ್ದಾರೆ. ಇಮ್ಮಡಿ ಪುಲಕೇಶಿಯು ‘ಉತ್ತರಾಪಥೇಶ್ವರ’ ಶ್ರೀಹರ್ಷ ಚರ್ಕವರ್ತಿಯನ್ನು ಸೋಲಿಸಿ ನರ್ಮದೆಯಿಂದ ಆಚೆಗೆ ಅವರ ಸೈನ್ಯವನ್ನು ಓಡಿಸಿದನೆಂಬುದು ಪ್ರಸಿದ್ಧ ಸಂಗತಿ.

‘ವಾಟಿ’, ‘ವಾಟಿಕಾ’ ಇವು ಸಂಸ್ಕೃತ ಪದಗಳಂತೆ, ‘ವಾಡಿ’, ‘ವಾಡ’ ಇವು ಅವುಗಳ ತದ್ಭವದಂತೆ ಕಂಡರೂ ಅವೆಲ್ಲವೂ ಮೂಲತಃ “ಪಡು” ಎಂಬ ದ್ರಾವಿಡ ಧಾತುವಿನಿಂದ ಬಂದಿರುವ ಪಾಡಿ, ಬಾಡಗಳ ರೂಪಾಂತರಗಳೇ ಆಗಿವೆ ಎಂಬ ಶಂಬಾ ಅವರ ಸೂಚನೆ ಗಟ್ಟಿ ಆಧಾರದ ಮೇಲೆ ನಿಂತಿದೆ. – ವಾಡ, – ವಾಡಿಯಿಂದ ಕೊನೆಯಾಗುವ ಸ್ಥಳನಾಮಗಳು ಕರ್ನಾಟಕದ ಉದ್ದಗಲಕ್ಕೆ ಮಾತ್ರವಲ್ಲ, ಮಹಾರಾಷ್ಟ್ರದಲ್ಲಿಯೂ ಕಾಣಿಸಿಕೊಳ್ಳುತ್ತವೆ. ಆಂಧ್ರ, ತಮಿಳುನಾಡಿನಲ್ಲಿಯೂ – ವಾಡ ಕೊನೆಯಲ್ಲಿರುವ ಸ್ಥಳನಾಮಗಳಿವೆ. ಉದಾಹರಣೆಗೆ ಆಂಧ್ರದ ವಿಜಯವಾಡ (ಬೆಜವಾಡ). ಪಟ್ಟಿ, ಪಾಡಿ (ಹಾಡಿ), ಬಾಡ, ವಾಡಗಳು ಹಳ್ಳಿ ಅಥವಾ ವಸತಿ ಪ್ರದೇಶ ಸೂಚಕ ದ್ರಾವಿಡ ಪದ. ಅದು ಸಂಸ್ಕೃತಕ್ಕೆ ಹೋಗಿ – ವಾಟಿ ಎಂದಾಗಿರುವ ಸಾಧ್ಯದೆ ಇದೆ. ದ್ರಾವಿಡ ಭಾಷೆಗಳಿಂದ ಸಂಸ್ಕೃತ (ಪ್ರಾಕೃತ)ಕ್ಕೆ ಸ್ವೀಕೃತವಾಗಿರುವ ಪದಗಳು ಸಾವಿರಾರು ಇವೆ. ಹೇರಂಬ (ಎರಮ್ಮೈ, ಎಮ್ಮೆ), ನೀರು (ನೀರು), ಮೀನು (ಮೀನು) ಇತ್ಯಾದಿ.

ಮರಾಠಿ ಶಬ್ದ ಭಂಡಾರದಲ್ಲಿ ಕನ್ನಡ ಪದಗಳು

ಮರಾಠಿ

ಕನ್ನಡ

ಮರಾಠಿ ಕನ್ನಡ
ಅಇತೀ (ಆಗಿತ್ತು) ಆಯಿತು, ಆಯ್ತು
ಅಕ್ಕಾ (ಹಿರಿಯ ಸೋದರಿ) ಅಕ್ಕ
ಅಟಾಟೇ (ದೂತ) ಅಟ್ಟಟ್ಟಿ (= ದೂತ)
ಅಡಕೀ (ಒಂದು ತೂಕ) ಅಡಕೆ
ಅಡಚಣೆ (ತಡೆ, ಬಿಕ್ಕಟ್ಟು) ಅಡಚಣೆ
ಅಡಣ (ಅಡ್ಡಿ) ಅಡ್ಡಿ
ಅಡಣೀ (ಮೂರು ಕಾಲಿನ ಮಣೆ) ಅಡ್ಡಣಿಗೆ
ಅಡವೇಂ (ವಸ್ತ್ರ) ಅರಿವೆ
ಅಡಳ (ಎಡವು) ಎಡಹು (ವು)
ಅಢೀ (ರಾಶಿ) ಅಡಸು, ಅಡಕು
ಅಣ್ಣಾ (ಸ್ವಾಮಿ, ತಂದೆ, ಅಣ್ಣ) ಅಣ್ಣ
ಅದರೀ (ಕಂಪಿಸು) ಅದಿ(ದು)ರ್
ಅಯ್ಯಾ(ತಂದೆ) ಅಯ್ಯ (ಸಂ. ಆರ್ಯ)
ಅಲ್ಲಡ (ತುಂಟ) ಅಲ್ಲದಾಟ

 

ಕನ್ನಡವೆಂದರೆ ಪ್ರಾಕೃತ ಜನ್ಯ ಭಾಷೆ ಎಂಬ ತಿಳಿವಳಿಕೆ ಇದದ್ದರಿಂದ ಕನ್ನಡದಲ್ಲಿ ಸಂಸ್ಕೃತ ಮತ್ತು ಪ್ರಾಕೃತ ಪದಗಳ ಹೊಕ್ಕು ಬಳಕೆಗೆ ಯಾವ ಅಡ್ಡಿಯೂ ಇರಲಿಲ್ಲ. ಕನ್ನಡದ ವ್ಯಾಕರಣ ಪ್ರಕ್ರಿಯೆ ಸಂಸ್ಕೃತ ಭಾಷೆಯನ್ನು ಅನುಸರಿಸಿತ್ತು. ಕಾರ, ಗಾರ, ವಂತ, ವಳ (ಪಾಲ, ವಾಲ, ವಾಳ,ವಳ) ಮೊದಲಾದ ಪ್ರತ್ಯಯಗಳನ್ನು ಕನ್ನಡ ಸಂಸ್ಕೃತದಿಂದ ಕಡ ತೆಗೆದುಕೊಂಡಿತು. ಮಾರಾಮಾರಿ, ಹಣಾಹಣಿಯಂಥ ಸಮಾಸಗಳನ್ನು ಕನ್ನಡದಲ್ಲಿ ರೂಢಗೊಳಿಸುವ ಪ್ರಯತ್ನ ಮೊನ್ನೆ ಮೊನ್ನೆಯವರೆಗೆ ನಡೆಯಿತು. ಆದರೆ ಅದು ಕನ್ನಡದ ಜಾಯಮಾನಕ್ಕೆ ವಿಸಂಗತವೆನಿಸಿದ್ದರಿಂದ ಈಗ ಕೈಬಿಡಲಾಗಿದೆ. ಕ್ರಿಯಾ ಪ್ರತ್ಯಯ ಮತ್ತು ನಾಮವಿಭಕ್ತಿ ಪ್ರತ್ಯಯಗಳನ್ನು ಹೊರತುಪಡಿಸಿದರೆ ಸಂಸ್ಕೃತ ಪ್ರಾಕೃತ ಶಬ್ದಗಳಿಂದ ತುಂಬಿದ ಇಡೀ ವಾಕ್ಯಗಳನ್ನು ಕನ್ನಡದ ಪ್ರೌಢಕವಿಗಳ ಕೃತಿಗಳಲ್ಲಿ ಕಾಣಬಹುದಾಗಿದೆ.

ಇದರಿಂದಾಗಿ ಕನ್ನಡದಲ್ಲಿ ೧೨ – ೧೩ನೆಯ ಶತಮಾನದವರೆಗೆ ಪ್ರಾಕೃತ ಎಂಬ ತಿಳಿವಳಿಕೆಯ ಮೇರೆಗೆ ರೂಢಗೊಳಿಸಿದ ಶಬ್ದಗಳು ಪರ್ಯಾಯವಾಗಿ ಮರಾಠಿಯ ಪೂರ್ವ ಸಿದ್ಧತೆಗೆ ಕಾರಣವಾದವು. ಆಧುನಿಕ ಮರಾಠಿಯ ಪ್ರಾಥಮಿಕ ರೂಪಗಳು ಮರಾಠಿ ಸಾಹಿತ್ಯದಲ್ಲಿ ಸಿಗಬೇಕು. ಆದರೆ ಅವು ಕನ್ನಡದ ಆಡುಮಾತಿನಲ್ಲಿ ಮತ್ತು ಸಾಹಿತ್ಯದಲ್ಲಿ ಚೆದುರಿ ಹೋಗಿವೆ. ಮರಾಠಿಯಲ್ಲಿಯ ತೇಲ, ಪೀಠ, ಗಾಭ(ಣ) ಮೊದಲಾದ ಶಬ್ದಗಳು ಮೂಲ ಸಂಸ್ಕೃತದಲ್ಲಿದ್ದು ಮರಾಠಿಯಲ್ಲಿ ಬರುವ ಮೊದಲು ಅವುಗಳ ಪ್ರಾಕೃತದೊಳಗಿನ ಮಧ್ಯಮ ಅವಸ್ಥೆ ಉಚ್ಚಾರಣಶಾಸ್ತ್ರದ ದೃಷ್ಟಿಯಿಂದ ಅವಶ್ಯಕವೆನಿದೆ.

ಸಂಸ್ಕೃತ ಪ್ರಾಕೃತ

ಮರ್ಹಾಟೀ

ತೈಲ ತೆಲ್ಲ ತೇಲ
ಪಿಷ್ಟ ಪಿಠ್ಠ ಪೀಠ
ಗರ್ಭ ಗಬ್ಬ ಗಾಭ
ಕರ್ಪಟ ಕಪ್ಪಡ ಕಾಪಡ

ಈ ಕೋಷ್ಟಕದಲ್ಲಿಯ ಮೂರನೆಯ ಪ್ರಕಾರದ ಶಬ್ದಗಳು ಆಧುನಿಕ ಮರಾಠಿಯಲ್ಲಿ ರೂಢವಾಗಿವೆ. ಆದರೆ ನಡುವಿನ ಶಬ್ದರೂಪಗಳು ಹಳೆಯ ಮರಾಠೀ ಸಾಹಿತ್ಯದಲ್ಲಿ ದೊರೆಯುವುದಿಲ್ಲ. ಆದರೆ ಈ ರೂಪಗಳು ಕನ್ನಡದ ಆಡುಮಾತಿನಲ್ಲಿ ಇಂದಿಗೂ ಪ್ರಚಾರದಲ್ಲಿವೆ. ಜ್ಞಾನೇಶ್ವರಿ ಮೊದಲಾದ ಹಳೆಯ ಗ್ರಂಥಗಳಲ್ಲಿ ಕಾಣುವ ನೀಚ,ಚೋಖ, ಅಗಳ, ಸಾನ, ದಿಠೀ, ಜೇಠೀ, ಸಾದ, ವೆಗೈರ ಶಬ್ದಗಳ ಪೂರ್ವರೂಪಗಳ ಕನ್ನಡ ಮಾತಿನಲ್ಲಿ ಜೀವಂತವಾಗಿವೆ.

ಮರ್ಹಾಟೀ ಕನ್ನಡ ಸಂಸ್ಕೃತ
ನೀಚ ನಿಚ್ಚ ನಿತ್ಯ
ಚೋಖ ಚೊಕ್ಕ  –
ಆಗಳಾ ಅಗಳ ಅರ್ಘ
ಜೇಠಿ ಜಟ್ಟಿ _
ಸಾನ ಸಣ್ಣ  –
ದಿಠೀ ದಿಟ್ಟಿ ದೃಷ್ಟಿ
ಸಾದ ಸದ್ದ (ಸದ್ದು) ಶಬ್ದ

ಮರಾಠಿಯ ಈ ಶಬ್ದಗಳು ಇಂದಿನ ಸ್ವರೂಪದಲ್ಲಿ ಒಮ್ಮೆಲೇ ವ್ಯವಹಾರದಲ್ಲಿ ಬರಲಿಲ್ಲ. ಉಚ್ಚಾರ ಶಾಸ್ತ್ರದ ದೃಷ್ಟಿಯಿಂದ ಮಧ್ಯಂತರ ಅವಸ್ಥೆಯನ್ನು ಗೃಹೀತ ಹಿಡಿಯಬೇಕಾಗುತ್ತದೆ. ಆ ಅವಸ್ಥೆ ಕಾಲ್ಪನಿಕವಗಿರುವುದಿಲ್ಲ. ಅವು ಇಂದು ಕನ್ನಡದಲ್ಲಿ ರೂಢವಾಗಿವೆ. ಮರಾಠೀ ಪ್ರತ್ಯಯಗಳಿಂದ ಕೂಡಿದ ದಿಟ್ಟಿ, ಜಟ್ಟಿ ಎಂಬ ರೂಪಗಳು ಮರಾಠಿಯಲ್ಲಿ ಎಲ್ಲೂ ಸಿಗುವುದಿಲ್ಲ. ಈ ಪ್ರಾಕೃತ ರೂಪಗಳ ಮರಾಠೀಕರಣದ ಪ್ರಯೋಗ ಸಂಬಂಧ ಕರ್ನಾಟಕದಲ್ಲಿ ನಡೆಯುತ್ತಿತ್ತು ಮತ್ತು ಆ ಆಯೋಗದಿಂದ ನಿಷ್ಪನ್ನವಾದ ವಾಕ್ಯಗಳು ಕನ್ನಡ ಸಾಹಿತ್ಯದಲ್ಲಿ ಮತ್ತು ಶಿಲಾಲೇಖಗಳಲ್ಲಿ ಕಾಣುತ್ತವೆ.

ಮರ್ಹಾಟಿಯಲ್ಲಿ ಕನ್ನಡ ಹಳೆಯ ರೂಪಗಳು ಮತ್ತು ಕನ್ನಡದಲ್ಲಿ ವರ್ಹಾಟಿಯ ಪ್ರಾಥಮಿಕ ರೂಪಗಳು ನಿಶ್ಚಯವಾಗಿ ದೊರೆಯುತ್ತವೆ. ಇದರಿಂದ ಈ ಎರಡು ಪ್ರಾಂತಗಳ ಜನರ ನಡುವೆ ನಿಕಟವಾದ ಸಂಬಂಧವಿತ್ತು ಮತ್ತು ಈ ಎರಡು ಭಾಷೆಗಳಲ್ಲಿ ಸಾಮಾನ್ಯವಾದ ಪದಪ್ರಯೋಗ ಇರಬೇಕೆಂದು ಒಪ್ಪಬೇಕಾಗುತ್ತದೆ. ಮರಾಠಿ ಭಾಷೆ ಒಂದು ಮೂರ್ತರೂಪಕ್ಕೆ ಬರುವ ಮೊದಲೇ ಈ ಎರಡು ಜನಾಂಗಗಳಲ್ಲಿ ಗಾಢವಾದ ಸಂಬಂಧವಿತ್ತೆಂಬುದು ನಿಶ್ಚಿತವಾದ ಸಂಗತಿಯಾಗಿದೆ. ಕ್ರಿಸ್ತಶಕದ ಪ್ರಾರಂಭದಲ್ಲಿ ರಚಿತವಾದ ‘ಗಾಥಾ ಸಪ್ತಶತಿ’ ಯಲ್ಲಿಯ ಗಲ್ಲ, ಪೊಟ್ಟ, ತುಪ್ಪದಂಥ ಕನ್ನಡದಲ್ಲಿ ರೂಢವಾಗಿದ್ದ ಬೇಕಾದಷ್ಟು ಶಬ್ದಗಳಿವೆ. ಮರಾಠಿಯಲ್ಲಿ ‘ಸೇಂದಣೇ’ ಎಂಬ ಶಬ್ದ ಅನುಸ್ವಾರಯುಕ್ತವಾಗಿದೆ. ಕನ್ನಡದಲ್ಲಿ, ಹನ್ನೆರಡನೆಯ ಶತಮಾನದಲ್ಲಿ ಅದು ಅನುಸ್ವಾರಯುಕ್ತವಾಗಿತ್ತೆಂದು ಕೇಶಿರಾಜನ ‘ಶಬ್ದಮಣಿದರ್ಪಣ’ ದಿಂದ ತಿಳಿಯುತ್ತದೆ. ಇದರಂತೆ ಜ್ಞಾನೇಶ್ವರ ಗ್ರಂಥದಲ್ಲಿ ಕನ್ನಡ ಶಬ್ದಗಳು ತುಂಬಿಕೊಂಡಿರುವ ಸಂಗತಿ ಮರಾಠೀ ಪಂಡಿತರಿಗೂ ಒಪ್ಪಿಗೆಯಾದ ಮಾತಾಗಿದೆ. ಜ್ಞಾನೇಶ್ವರಿಯ ಭಾಷೆಯ ಮೇಲೆ ಕನ್ನಡದ ದಟ್ಟ ನೆರಳು ಬಿದ್ದಿರುವುದನ್ನು ಸಂಶೋಧಕರು ಸಪ್ರಮಾಣವಾಗಿ ಸಿದ್ದಪಡಿಸಿದ್ದಾರೆ.

ಹೀಗೆ, ಶಂಬಾ ಅವರು ಸಮಾಜೋ – ಭಾಷಿಕ ಕರ್ನಾಟಕದ ಮೇಲೆ ಹೊಸಬೆಳಕು ಚೆಲ್ಲಿದರು. ಸಿದ್ಧ ಮಾದರಿಯ ಅಧ್ಯಯನ ವಿಧಾನಗಳನ್ನು ಮೀರಿದರು. ದೈವೀ ಸಂಕೇತಗಳು, ಜಾತಿ ಬುಡಕಟ್ಟುಗಳು, ಚರಿತ್ರೆ, ಸ್ಥಳನಾಮಗಳು, ಪರಂಪರೆ, ಭಾಷಾಶಾಸ್ತ್ರ ಇಂತಹ ಆಕರಗಳನ್ನು ಬಳಸಿಕೊಂಡು ಗೋದಾವರಿ ತೀರದ ಹಾಗೂ ಅದರಾಚೆಯ ಕನ್ನಡದ ಚಹರೆಯನ್ನು ಗುರುತಿಸಿದರು. ಅದನ್ನು ಹೀಗೂ ಹೇಳಬಹುದು. ಕನ್ನಡ ಸಂಸ್ಕೃತಿಯ ಪೂರ್ವ ಪೀಠಿಕೆಯನ್ನು ಶೋಧಿಸುವಲ್ಲಿ, ಇಂದಿನ ಗಡಿಯಾಚಿನ ಕನ್ನಡ ನಾಡಿನ್ನು ಗುರುತಿಸುವಲ್ಲಿ ಕರ್ನಾಟಕದ ಆತ್ಮಗೌರವವನ್ನು ಎತ್ತಿಹಿಡಿಯುವಲ್ಲಿ ಶಂಬಾ ಅವರು ಪಟ್ಟಶ್ರಮ, ಮಾಡಿದ ಆಲೋಚನೆಗಳು ಯಾವ ಕಾಲಕ್ಕೂ ಪ್ರಸ್ತುತವಾಗಿವೆ. ಅವರ ಬರಹಗಳು ಕರ್ನಾಟಕದ ಬಗ್ಗೆ ಕನ್ನಡಿಗರು ಅರಿವನ್ನು ಹೆಚ್ಚಿಸಿವೆ.

ಅನುಬಂಧ: ಭಾಷಿಕ ಬೃಹತ್ ಕರ್ನಾಟಕ : ಚಿ. ಮೂ. ವಿಚಾರ ಸರಣಿ

ಎಂ. ಚಿದಾನಂದಮೂರ್ತಿ ಅವರ ಭಾಷಿಕ ‘ಬೃಹತ್‌ ಕರ್ನಾಟಕ’ (೨೦೦೫) ಈ ಗ್ರಂಥವು ಶಂಬಾ ಅವರ ಅಧ್ಯಯನಕ್ಕೆ ಪೂರಕವಾಗಿರುವುದರಿಂದ ಆ ಕೃತಿಯನ್ನು ಕುರಿತು ಇಲ್ಲಿ ವಿವೇಚಿಸಲಾಗಿದೆ. ಈ ಕೃತಿ ಹಲವು ದೃಷ್ಟಿಗಳಿಂದ ತುಂಬ ಮಹತ್ವದ ಕೃತಿಯಾಗಿದೆ. ಭಾಷಿಕ ಬೃಹತ್ ಕರ್ನಾಟಕದ ವ್ಯಾಪ್ತಿ, ಸ್ವರೂಪ, ಮಹತ್ವ ಕುರಿತು ತುಂಬ ಅಧಿಕೃತವಾಗಿ, ಅಭಿಮಾನ ಮತ್ತು ಕಳಕಳಿಪೂರ್ಣವಾಗಿ ಹೇಳಿದ್ದಾರೆ. ಈ ಕೃತಿಯ ಮುಖ್ಯ ವಿಷಯ ಕರ್ನಾಟಕದ ದೊರೆಗಳು ಎಲ್ಲೆಲ್ಲಿ ಆಳಿದರು ಎಂಬುದಕ್ಕಿಂತ ಹೆಚ್ಚು, ಭಾಷೆಯಾಗಿ ಕನ್ನಡವು ಹಿಂದೆ, ಸಾವಿರ ವರ್ಷಗಳಿಗೂ ಹಿಂದೆ ಎಲ್ಲಿಯವರೆಗೆ ವ್ಯಾಪಿಸಿತ್ತು ಎಂಬುದೇ ಆಗಿದೆ. ಭಾಷೆಯು ಸಂಸ್ಕೃತಿಯ ಒಂದು ಪ್ರಧಾನ ಅಂಗವೆಂಬುದನ್ನು ಹೇಳಬೇಕಾಗಿಲ್ಲ. ಒಂದು ಭಾಷೆ ಒಂದು ಪ್ರದೇಶದಲ್ಲಿ ಪ್ರಚಲಿತವಿದ್ದು ಅದರ ಆಧುನಿಕ ಕಾಲದಲ್ಲಿ ಮರೆಯಾಗಿ ಹೋಗಿದ್ದರೂ ಅದರ ಕುರುಹುಗಳು ಬಹುಮುಖ್ಯವಾಗಿ ಆ ಪ್ರದೇಶದ ಸ್ಥಳನಾಮಗಳಲ್ಲಿ ತಮ್ಮದೆ ಆದ ರೀತಿಯಲ್ಲಿ ಹುದುಗಿರುತ್ತವೆ ಎಂಬುದನ್ನು ಭಾಷಾವಿಜ್ಞಾನ, ಅದರ ಶಾಖೆಯಾದ ಸ್ಥಳನಾಮ ವಿಜ್ಞಾನ ಒಪ್ಪಿಕೊಳ್ಳುತ್ತದೆ. ಈ ಕೃತಿಯ ಒಟ್ಟು ತಿರುಳನ್ನು ಹೀಗೆ ಕಲೆ ಹಾಕಲಾಗಿದೆ.

೧. ೧೮೫೦ – ೯೦ರ ಸುಮಾರಿನಲ್ಲಿ ಮುಂಬೈ ಬ್ರಿಟಿಶ್ ಸರಕಾರವು ಶಾಲಾ ಪಠ್ಯಪುಸ್ತಕಗಳಿಗಾಗಿ ಸಿದ್ಧಪಡಿಸಿ ಪ್ರಕಟಿಸಿದ ‘ಕರ್ನಾಟಕ ನಕಾಶ’ ವು ನಾಡಿನ ವಿಸ್ತಾರತೆಯನ್ನು ಹೇಳುತ್ತದೆ. ಅದನ್ನು ಗ್ರಿಯರ್ಸನ್ ಕೂಡ ತನ್ನ Linguistic Survey of India – IV ದಲ್ಲಿ ದಾಖಲಿಸಿದ್ದಾನೆ. ಆ ನಕಾಶೆಯ ಪ್ರಕಾರ “ಕರ್ನಾಟಕ” ಎಂದರೆ ಕನ್ನಡ ಮಾತನಾಡುವ ಪ್ರದೇಶದ ಉತ್ತರ ಗಡಿಯಲ್ಲಿ ಕೊಲ್ಲಾಪುರ, ಮೀರಜ್, ಸೊಲ್ಲಾಪುರ, ಕಲ್ಯಾಣ, ಬೀದರಗಳು ಸೇರಿವೆ. ಪಶ್ಚಿಮ ಗಡಿಯಲ್ಲಿ ಇಡೀ ಗೋವೆ, ಮಂಗಳೂರು ಇನ್ನೂ ದಕ್ಷಿಣಕ್ಕೆ ಬಂದರೆ ಕಾಸರಗೋಡು, ಕಣ್ಣಾನೂರು, ತಲಚೇರಿ, ಕಲ್ಲಿಕೋಟಿ ಸೇರಿವೆ. ದಕ್ಷಿಣದ ಗಡಿ ಇಡೀ ನೀಲಗಿರಿ ಪರ್ವತ ಶ್ರೇಣಿ. ಪಶ್ಚಿಮದ ಗಡಿಯಲ್ಲಿ ಕೋಲಾರ ಜಿಲ್ಲೆಯಂತೂ ಸರಿಯೇ, ಪೆನಗೊಂಡ, ತಾಡಪತ್ರಿ, ಆದವಾನಿ, ಕರ್ನೂಲುಗಳು ಸೇರಿವೆ. ಬಳ್ಳಾರಿ, ಕಲಬುರ್ಗಿ, ರಾಯಚೂರು, ವಿಜಾಪುರ, ವಿಷಯಗಳನ್ನು ಎತ್ತಿ ಹೇಳಬೇಕಾಗಿಲ್ಲ. ಒಂದು ಅಂಶ ಸ್ಪಷ್ಟ ಲಭ್ಯ ಭಾಷಿಕ ಸಾಮಗ್ರಿಗಳನ್ನು, ವರದಿಗಳನ್ನು ಪರಿಶೀಲಿಸಿ ತಯಾರಿಸಿದ ಭೂಪಟವದು. ತುಂಬ ನೋವಿನ ವಿಷಯವೆಂದರೆ ಅದರಲ್ಲಿ ಕನ್ನಡ ಮಾತಾಡುವ ಪ್ರದೇಶದ ಒಟ್ಟಾರೆ ಎಂಟು ಜಿಲ್ಲೆಗಳನ್ನು ಇಂದಿನ ಕರ್ನಾಟಕವು ಕಳೆದುಕೊಂಡಿದೆ.

೨. ಬೆಂಗಳೂರು, ಮೈಸೂರು, ಚಾಮರಾಜನಗರ ಜಿಲ್ಲೆಗಳಿಗೆ ಅಂಟಿಕೊಂಡಿರುವ ತಮಿಳುನಾಡಿನ ಧರ್ಮಪುರಿ, ಸೇಲಂ, ನೀಲಗಿರಿ ಜಿಲ್ಲೆಗಳಲ್ಲಿ ಈಗಲೂ ಕನ್ನಡ ಮಾತಾಡುವ ವೆಳ್ಳಾಲ ಗೌಡರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಸೇಲಂ, ಧರ್ಮಪುರಿ, ಈರೋಡ್ ಜಿಲ್ಲೆಗಳ ಪ್ರಾಚೀನ ಶಾಸನಗಳೆಲ್ಲ ಬಹುತೇಕ ಕನ್ನಡವೇ ಆಗಿವೆ. ಆ ಜಿಲ್ಲೆಗಳ ಪ್ರಾಚೀನ ಶಾಸನಗಳಲ್ಲಿ ಬರುವ ಅತ್ತಿಮಬ್ಬರಸಿ, ಪುಲ್ಲಬ್ಬರಸಿ, ಅಯ್ಯಪ್ಪದೇವ, ಜಾಯಬ್ಬರಸಿ ಇವೆ ಮೊದಲಾದ ವ್ಯಕ್ತಿನಾಮಗಳು ಅಪ್ಪಟ ಕನ್ನಡವೇ ಆಗಿವೆ. ಆ ಜಿಲ್ಲೆಯ ಕೃಷ್ಣಗಿರಿ ತಾಲ್ಲೂಕಿನಲ್ಲಿ ಈಗಲೂ ಒಂದು ಹಳ್ಳಿಗೆ ಇರುವ ಹೆಸರು “ಕನ್ನಡ ಹಳ್ಳಿ” ಇದರ ಹಳೆಯ ರೂಪ ‘ಕನ್ನಡಂ ಬಳ್ಳಿ’, ‘ಸೇಲಂ’ದ ಮೂಲಹೆಸರು “ಶಾಳ್ಯ”. ಅಲ್ಲಿಂದ ಕೃಷ್ಣರಾಯ ಎಂಬಾತ ಕನ್ನಡದಲ್ಲಿ ಕೃತಿರಚನೆ ಮಾಡಿದ್ದಾನೆ. ಇದು ಸ್ಪಷ್ಟ. ಕಾವೇರಿ ಹಿಂದಿನ ಕರ್ನಾಟಕದ ಸ್ಥೂಲಗಡಿ. ಅದು ಮೈಸೂರು, ಧರ್ಮಪುರಿ, ಸೇಲಂ ಜಿಲ್ಲೆಗಳಲ್ಲಿ ಹರಿಯುವ ಕಾವೇರಿಯೆಂಬಲ್ಲಿ ಉತ್ಪ್ರೇಕ್ಷೆಯೇನೂ ಇಲ್ಲ. ನೀಲಗಿರಿ ಹಿಂದೊಮ್ಮೆ ಕನ್ನಡ ಪ್ರದೇಶವೇ ಆಗಿತ್ತು. ಅಲ್ಲಿ ಬಹುಸಂಖ್ಯಾತರಾದ ಬಡಗರ ಭಾಷೆ ಸ್ಪಷ್ಟವಾಗಿ ಕನ್ನಡ ಉಪಭಾಷೆಯಾಗಿದೆ.

ಕರ್ನಾಟಕಕ್ಕೆ ಅಂಟಿಕೊಂಡಿರುವ ಆಂಧ್ರ ಪ್ರದೇಶದ ಕನ್ನಡ ಶಾಸನಗಳು ಪ್ರಕಟವಾಗಿವೆ. ಮುಖ್ಯವಾಗಿ ಅನಂತಪುರ, ಕರ್ನೂಲು, ಮೆಹಬೂಬ್‌‌‌‌‌‌‌‌‌‌‌‌‌ನಗರ, ರಂಗಾರೆಡ್ಡಿ, ಮೇದಕ್, ಈ ಜಿಲ್ಲೆಗಳ ಕರ್ನಾಟಕಕ್ಕೆ ಹೊಂದಿಕೊಂಡಿರುವ ಗಡಿಭಾಗದಲ್ಲಿ ಹೆಚ್ಚು ಸಂಖ್ಯೆಯ ಕನ್ನಡ ಶಾಸನಗಳು ದೊರೆತಿವೆ. ಈಗಿನ ಆಂಧ್ರ ಪ್ರದೇಶದ ಹಿಂದಿನ ಹಲವಾರು ಕನ್ನಡ ಸ್ಥಳನಾಮಗಳು ತೆಲಗು ರೂಪಾಂತರ ಪಡೆದಿವೆ. ಪೊಟ್ಟಳಕೆರೆ – > ಪಟ್ಟಣ ಚೆರವು, ಪಟಾಣ್‌ಚೆರು, ಕೆರೆಯಬೆಳಗಲ್ಲು – > ಚರುವು ಬೆಳಗಲ್ಲು, ಗೊರವನಹಳ್ಳಿ – > ಗೊರ‍್ರವಲ್ಲಿ, ಅನಂತಪುರ ಜಿಲ್ಲೆಯ ಶಾಸನಗಳಲ್ಲಿ ಕಾಣುವ ಹಲವಾರು ಸ್ಥಳನಾಮಗಳು, ವ್ಯಕ್ತಿನಾಮಗಳು ಅಪ್ಪಟ ಕನ್ನಡವೇ ಆಗಿವೆ. ‘ಮಂಚಾಲೆ’ ಹೆಸರನ್ನು ‘ಮಂತ್ರಾಲಯ’ ಎಂಬ ಸಂಸ್ಕತೀಕರಿಸಿದರೂ ಆ ಊರಲ್ಲಿ ಈಗಲೂ ‘ಮಂಚಾಲಮ್ಮ’ ಎಂಬ ಗ್ರಾಮದೇವತೆ ಇರುವುದು ಗಮನಾರ್ಹ. ಇಂತಹ ಸಾಕ್ಷಾಧಾರಗಳ ಮೂಲಕ ಚಿದಾನಂದಮೂರ್ತಿ ಅವರು ತಮಿಳುನಾಡು, ಆಂಧ್ರಗಳಲ್ಲಿ ಕನ್ನಡದ ಚಹರೆಗಳನ್ನು ಗುರುತಿಸಿದ್ದಾರೆ.

೩. ಇಡೀ ಗೋವಾ ಕನ್ನಡ ನಾಡಿನ ಭಾಗವೇ ಆಗಿತ್ತು. ಅಲ್ಲಿಯ ಸ್ಥಳನಾಮಗಳ ಅದ್ಯಯನ ಕುತೂಹಲಕಾರಿ – ಹಳ್ಳಿ ಕೊನೆಯಳ್ಳಿಯ ಊರುಗಳಿವೆ. ಕುಂಕುಹಳ್ಳಿ, ಕೋಳಿವಲ್ಲಿ, ಸುರವ್ಲಿ( < ಶ್ರೀವಳ್ಳಿ) ಬೆಟ್ಟ, ಮೊರಡಿ, ಗುಡ್ಡ, ಕಲ್ ಹೊಂದಿರುವ ಗ್ರಾಮದ ಹೆಸರುಗಳಿವೆ. ಗಡೆಗರ್, ಮೊರಡಿ, ಧರ್ಗಲ್ – ಊರ್ ಹೊಂದಿರುವ ಹೆಸರುಗಳು ಮಂದೂರ್, ಕಲಪೂರ್ ಮೇಲ್ಕಂಡ ಸ್ಥಳನಾಮಗಳು ಗೋವೆ ಹಲವು ವೀರಗಲ್ಲುಗಳು, ಜನವರ್ಗಗಳು (- ಕೆಳವರ್ಗದ ಮಾದರ್, ಅವರ ಮನೆಮಾತು ಕನ್ನಡ) ಇಂತಹ ಸಾಕ್ಷಾಧಾರಗಳು ಒಂದು ಕಾಲಕ್ಕೆ ಗೋವೆಯ ಸ್ಥಳೀಯ ಭಾಷೆ ಕನ್ನಡವೇ ಆಗಿದ್ದಿತು ಎಂಬುದಕ್ಕೆ ಪ್ರಬಲ ಸಾಕ್ಷಾಧಾರಗಳಾಗಿವೆ. ಕ್ರಿ. ಶ. ೧೦ – ೧೩ರವರೆಗೆ ಗೋವೆ, ಬೆಳಗಾವಿ, ಕಾರವಾರ ಪ್ರದೇಶ ಆಳಿದ ಗೋವೆ ಕದಂಬರು ಬನವಾಸಿ ಕದಂಬರ ಒಂದು ಶಾಖೆಯವರೇ. ಗೋವೆ ಕದಂಬರ ಮನೆಮಾತು ಕನ್ನಡವಾಗಿತ್ತೆಂದು ಪ್ರತ್ಯೇಕ ಹೇಳಬೇಕಾಗಿಲ್ಲ.

೪. ಮಹಾರಾಷ್ಟ್ರಕ್ಕೆ ಸಂಬಂಧಿಸಿದ ಅಧ್ಯಾಯ ಈ ಕೃತಿಯ ಬಹುಮುಖ್ಯ ಭಾಗ. ಮರಾಠಿ ಭಾಷೆ, ಸಾಹಿತ್ಯಗಳಿಗೆ ಪ್ರೋತ್ಸಾಹ ನೀಡಿದ ದೇವಗಿರಿ (ಔರಂಗಬಾದ್) ಯಾದವರು ಹುಟ್ಟಿನಿಂದ ಕನ್ನಡಿಗರೇ. ಅವರ ಹೆಸರುಗಳೆಲ್ಲ (ಧರೆಯಪ್ಪ, ಲಚ್ಚಿಯಮ್ಮ, ಸಿಂಘಣ ಇತ್ಯಾದಿ) ಇಂದಿನ ಮಹಾರಾಷ್ಟ್ರದ ತುಂಬ ದೊರಕುವ ಮಾಹಿತಿಯನ್ನು ಚಿದಾನಂದಮೂರ್ತಿ ಅವರು ಉಂಡೆ ಉಂಡೆಯಾಗಿ ನೀಡಿದ್ದಾರೆ. ಲೇಖಕರ ಶ್ರಮ ಈ ಭಾಗದಲ್ಲಿ ನಿಚ್ಚಳವಾಗಿ ಪ್ರಕಟವಾಗಿದೆ.

ಯಾವುದೇ ಸಮಾಜದ ಸುಶಿಕ್ಷಿತ ಸಮಾಜದಂತೆ ಅಶಿಕ್ಷಿತ ಅಥವಾ ಕೆಳವರ್ಗದ ಜನತೆ ಚಲನಶೀಲವಾಗಿರುವುದಿಲ್ಲ. ವ್ಯವಸಾಯ, ಪಶುಪಾಲನೆ, ಉಪಕರಣಗಳ ತಯಾರಿಕೆ, ಚರ್ಮಕ್ಕೆ ಸಂಬಂಧಿಸಿದ ಉದ್ಯೋಗಗಳು ಇತರೇ ದೈಹಿಕ ಶ್ರಮ ಕೆಲಸಗಳಲ್ಲಿ ತೊಡಗಿರುವ ಅವರು ಒಂದು ಪ್ರದೇಶದಲ್ಲಿ ಅಂಟಿಕೊಂಡವರಾಗಿರುತ್ತಾರೆ. ಈ ಮಾತು ಈ ಕಾಲಕ್ಕೂ ನಿಜವಾದರೂ ಹಿಂದಿನ ಕಾಲಕ್ಕೆ ಅದು ಇನ್ನೂ ಹೆಚ್ಚು ಸತ್ಯ.

“ಕೋಳಿ” ಎಂಬುದು ಮಹಾರಾಷ್ಟ್ರದ ಪ್ರಾಚೀನ, ಸ್ಥಳೀಯ ಜನಾಂಗ ಎಂಬ ಬಹುತೇಕರು ಪ್ರತಿಪಾದಿಸಿದ್ದಾರೆ. ಅವರು ಮಲ್ದಾರ್ (ಮೈಲಾರ್) ದೇವರ ಭಕ್ತರು ಇದನ್ನು ಗಮನಿಸಿದ್ದರೆ ಅವರು ಹಿಂದೆ ಕನ್ನಡಿಗರಾಗಿದ್ದರೆಂಬುದಕ್ಕೆ ಸ್ಪಷ್ಟ ಸೂಚನೆಗಳಿವೆ. ಥಾಣಾ ಜಿಲ್ಲೆಯ ಅಲೆಮಾರಿ ಜನ ‘ಪುಡಗೀ’ ಉಪಭಾಷೆ, ‘ಹಳ್‌ಬೀ’ ಉಪಭಾಷೆ ಮಹಾರ್ (ಮಹಾರ್, ಮಹರ್ ಮ್ಹಾರ್) ಎಂಬುದು ಕನ್ನಡದ ಮಾದರ ಪದದ ರೂಪಾಂತರವೆಂಬಲ್ಲಿ ಅನುಮಾನವಿಲ್ಲ. ಇವರು ಆಡುತ್ತಿರುವ ಭಾಷೆ ಮೂಲತಃ ಕನ್ನಡವೇ ಆಗಿತ್ತು. ಮಹಾರಾಷ್ಟ್ರದ ಈಶಾನ್ಯಭಾಗದ ನಾಗಪುರ, ಚಂದಾ, ಭಂಡಾರ ಪ್ರದೇಶದ ಗೋಲಾರಿ (ಗೋಲ್ಕರ್) ಅಥವಾ ಹೋಲಿಯಾರ್ ಜನರಾಡುವ ಭಾಷೆ ಕನ್ನಡ ಸ್ವರೂಪವಾಗಿದೆ.

ಮಾನಿ (ಮನಿ) = ಮನೆ
ನಾ (ನನ್ನ) = ನನ್ನ
ವಾಬ (ಒಬ್ಬ)
ಹಾತೀನ್ (ಹತ್ತಿರೇನು) ಇತ್ಯಾದಿ

ಇವರ ಕನ್ನಡವು ಬಿಜಾಪುರ ಪ್ರದೇಶದ ಕನ್ನಡವನ್ನು ಹೋಲುತ್ತದೆಂದು ಗ್ರಿಯರ್ಸನ್ ಹೇಳುತ್ತಾನೆ. ಮಹಾರಾಷ್ಟ್ರದ “ಕಾನಡಿ” ಗಳು ಮಹಾರಾಷ್ಟ್ರಕ್ಕೆ ಕರ್ನಾಟಕದಿಂದ ವಲಸೆ ಬಂದವರು. ಮರಾಠಿ ಗೌಳಿ ಮತ್ತು ಕಾನಡಿ ಗೌಳಿ ಎಂದು ಎರಡು ಸ್ಥೂಲ ವಿಭಾಗಗಳಿಟ್ಟು ಅವರು ನಾಸಿಕ್ ಪರಿಸರದಲ್ಲಿ ವಾಸವಾಗಿದ್ದಾರೆ. ಅವರ ಮುಖ್ಯ ವೃತ್ತಿ ಪಶುಪಾಲನೆ ಮತ್ತು ವ್ಯವಸಾಯ. ಅವರ ಮನೆ ಮಾತು ಕನ್ನಡ.

ಹಲ್ = ಹಲ್ಲು
ಕೊಂದಲ್ = ಕೂದಲು
ಕಾಲ್ = ಕಾಲು

ಇನ್ನು ಕೆಲವು ವಾಕ್ಯಗಳು.

ನಿನ್ನೆಸರ್ ಏನ್ = ನಿನ್ನ ಹೆಸರು ಏನು
ನನ್ನೆಸರ ಶಿವ್ ಆಯ್ತ್ = ನನ್ನ ಹೆಸರು ಶಿವ

ನಾಸಿಕ್ ಪ್ರದೇಶವು ಒಂದು ಕಾಲಕ್ಕೆ ಅಚ್ಚಗನ್ನಡ ಪ್ರದೇಶವೇ ಆಗಿತ್ತು. ಸಾವಿರ ವರ್ಷಗಳ ಹಿಂದೆ ಉತ್ತರ ಮಹಾರಾಷ್ಟ್ರವು ಕನ್ನಡ ಪ್ರದೇಶವಾಗಿದ್ದಿತ್ತು ಎಂಬುದಕ್ಕೆ ಮೇಲಿನದು ಪ್ರಬಲ ಆಧಾರ ಎಂದು ಹೇಳಲಿಕ್ಕಾಗದಿದ್ದರೂ ಗಮನಾರ್ಹ ಆಧಾರ.

ಅದರಂತೆ ಚಿದಾನಂದಮೂರ್ತಿ ಅವರು ಮಹಾರಾಷ್ಟ್ರದ ಬೇರೆ ಬೇರೆ ಜಿಲ್ಲೆಗಳಲ್ಲಿ ಕನ್ನಡದ ಚಹರೆಗಳನ್ನು ಹುಡುಕಲು ಯತ್ನಿಸುತ್ತಾರೆ. ಚಂದ್ರಾಪುರ ಜಿಲ್ಲೆ : ಆಂಡಿಯ ಬಲ್ಲಾಳ್‌ಸಿಂಗ, ಸುರ್ಜಾಲಬಲ್ಲಾಳ್ ಸಿಂಗ್ ಎಂಬಲ್ಲಿಯ “ಬಲ್ಲಾಳ್” ಎಂಬಲ್ಲಿಯ ಉತ್ತರಾರ್ಧ. “ಆಳ್” ಎಂಬುದು ಅಚ್ಚಗನ್ನಡ ಪದ (ವ್ಯಕ್ತಿನಾಮ). ಅದರಂತೆ ‘ಗೋಂಡಿ’ ಬುಡಕಟ್ಟಿನ ಜನಾಂಗದವರಲ್ಲಿ ಒಂದು ಬಗೆಯ ಕನ್ನಡ ಮಾತನಾಡುವ ಜನ ಈಗಲೂ ಇದ್ದಾರೆ. ಚಿಮೂರ್, ವಿತೂರ್ ‘ಊರ್’ ವಾರ್ಗಿಕ ಕನ್ನಡದ್ದು. ಒಸ್ಮಾನಾಬಾದ್ ಜಿಲ್ಲೆ : ಸುಪ್ರಸಿದ್ಧ ‘ತುಳಜಾ ಭವಾನಿ’ ಈ ಜಿಲ್ಲೆಯಲ್ಲಿದೆ. ಇಲ್ಲಿನ ತುರೆ ಅಥವಾ ತೊರೆ ‘ತೊರೆ’ ಅಚ್ಚಗನ್ನಡ ಪದ. ತುಳಜಾಭವಾನಿ ಮೂಲತಃ ಕನ್ನಡ ದೇವತೆ. ಆ ಜಿಲ್ಲೆಯ ಲಾತೂರ್, ಬಡೂರ್, ಬೇಳವಾಡಿ, ಹಗಲೂರ್, ಒಸ್ಮಾನಾಬಾದ್ ಹಿಂದೆ ಅಪ್ಪಟ ಕನ್ನಡ ನಾಡಾಗಿತ್ತು. ನಾಗಪುರ ಜಿಲ್ಲೆ : ಈ ಜಿಲ್ಲೆಯಲ್ಲಿ ‘ಧೀಮಾರ್’ (ಕನ್ನಡ – ದೀವರ್) ಎಂಬ ಜನಾಂಗವಿದೆ. ಅವರ ಕುಲದೇವತಾ ಚಿಹ್ನೆ ‘ಗಿಢ್ವೇ’ (= ಗಿಡುಗ ಅಚ್ಚಗನ್ನಡದ ಪ್ರಾಚೀನ ರೂಪ ಗಿಡಗ). ಪುಣೆ ಜಿಲ್ಲೆ: ಈ ಜಿಲ್ಲೆಯ ಧನಗರರು “ಬೀರೋಬ”ನ ಪೂಜೆ ಮಾಡುತ್ತಾರೆ. ಈ ಜಿಲ್ಲೆಯ ಮಕ್ಕಳಾಟಗಳು ಚೆಂಡಸಳಿ (ಅರಿವೆ ಚಂಡಾಟ), ಗಜಗೆ (ಗಜ್ಜುಗ ದಾಟ), ವೀಟಿ – ದಾಂಡೂ (ಚಿನ್ನಿದಾಂಡೂ) ಅದರಂತೆ ಸ್ಥಳನಾಮಗಳು ಸಿರೂರ್, ಕಸೂರ್, ಚಿಂಚವಾಡ್, ರಾಜೂರ್, ಮಳಾವಳಿ. ವಾರ್ಧಾ ಜಿಲ್ಲೆ : ಈ ಜಿಲ್ಲೆಯಲ್ಲಿ ದಲಿತ ವರ್ಗದ ಅಸ್ಪೃಶ್ಯರಲ್ಲಿ ‘ಮಾದಗಿ’ ಎಂಬ ಹೆಸರಿನ ಜನ ಹಲವರಿದ್ದಾರೆ (ಇದು ಕನ್ನಡದ ‘ಮಾದಿಗ’ ಎಂಬುದೇ ಆಗಿದೆ) ‘ಮಹರ್’ ವರ್ಗದವರ್ ಹೆಚ್ಚು. ಕುರುಬ ಜಾತಿಯ ಧನಗರರಲ್ಲಿ ‘ಕನೋರ್’ ಎಂಬ ಉಪಜಾತಿಯಿದ್ದು ಅವರು ತಾವು ಮೂಲತಃ ಕರ್ನಾಟಕದವರೆಂದು ಹೇಳಿಕೊಳ್ಳುವುದು ಬಹುಗಮನಾರ್ಹ. ಆ ಜಿಲ್ಲೆಯ ಗ್ರಾಮನಾಮಗಳು – ಚಿಂಚೋಲಿ, ಕಾಚನೂರ್, ಮರಗಸೂರ್ ಈ ಹೆಸರಿನ ಊರುಗಳು ಕರ್ನಾಟಕದಲ್ಲಿ ಇವೆ. ಕೊಲ್ಲಾಪುರ, ಸೊಲ್ಲಾಪುರ ಇವು ಅಪ್ಪಟ ಕನ್ನಡ ಪ್ರದೇಶಗಳಾಗಿದ್ದವು ಎಂಬುದರ ಬಗ್ಗೆ ಯಾರಿಗೂ ಅನುಮಾನಗಳಿಲ್ಲ. ಇಲ್ಲಿಯ ಶಾಸನಗಳು, ಸ್ಥಳನಾಮಗಳು ಬಹುತೇಕ ಕನ್ನಡದವು. ಯೋಟ್‌ಮಲ್‌ಜಿಲ್ಲೆ : ಈ ನಗರ ಎತ್ತರ ಗುಡ್ಡದ ಮೇಲೆ ಪುಟ್ಟ ಪ್ರದೇಶದ ಮೇಲ್ಭಾಗದಲ್ಲಿದೆ (ಆದ್ದರಿಂದಲೇ ಮಟ, ಮಲೆ). ಸಾಕೂರ್, ಕೋಳಂಬಿ, ಇವು ಕೆಲವು ಗಮನಾರ್ಹ ಊರ ಹೆಸರುಗಳು.