ಇದರಂತೆ ರಾಯಗಡ ಜಿಲ್ಲೆ, ಜಳಗಾಂವ್ ಜಿಲ್ಲೆ, ಸಾತಾರಾ ಜಿಲ್ಲೆ, ಕೋಲಾರ, ರತ್ನಗಿರಿ, ಸಾವಂತವಾಡಿ, ಅಹಮ್ಮದ್‌ನಗರ, ಠಾಣಾ, ಔರಂಗಬಾದ್ ಜಿಲ್ಲೆಗಳು, ಧೂಲಿ ಜಿಲ್ಲೆಗಳ ಸ್ಥಳನಾಮಗಳು, ವ್ಯಕ್ತಿನಾಮಗಳಲ್ಲಿ ಕನ್ನಡದ ಚಹರೆಗಳಿವೆ. ಔರಂಗಾಬಾದ್ ಜಿಲ್ಲೆಯಲ್ಲಿ ‘ಕನ್ನಡ’ ಎಂಬ ಹೆಸರಿನ ತಾಲೂಕಿದ್ದರೂ ಅದು ‘ಕನ್ನಡವಾಡ’ ಎಂಬುದರ ರೂಪಾಂತರ. ಫರಭಣಿ ಜಿಲ್ಲೆಯಲ್ಲಿ ಅಂಕೋಲ ಎಂಬ ಸ್ಥಳನಾಮ ಉತ್ತರಕನ್ನಡ ಜಿಲ್ಲೆಯ ಅಂಕೋಲನ್ನು ನೆನೆಪಿಸುತ್ತದೆ. ಆ ತಾಲೂಕಿನಲ್ಲಿರುವ ‘ಬೇಡರ್ ಜನ’ ಕರ್ನಾಟಕದ ಬೇಡರನ್ನು ನೆನಪಿಗೆ ತರುತ್ತದೆ. ಇವರು ಮಾತನಾಡುವ ಮರಾಠಿಯಲ್ಲಿ ‘ಅ’ ಕಾರಾಂತ ನಪುಂಸಕ ಲಿಂಗದ ಪದಗಳು ‘ಎ’ ಕಾರಾಂತವಾಗುತ್ತವೆ (ನೋಡಿ. ಕನ್ನಡದ ಅಡಕೆ, ಮೊಟಕೆ, ಮಲೆ, ಹರಕೆ ಇತ್ಯಾದಿ). ಖಾಂದೇಶ್ ಜಿಲ್ಲೆ : ಲಾಸೂರ್, ರಾವೇಜ್, ಭೂಸಾವಳ್ (ಆಂಧ್ರದಲ್ಲಿ ಪಾಳ್ – ವಾಳ್ ನೋಡಿ) ಗಿರಿಜನರಲ್ಲಿ ‘ಭಿಲ್ಲರ’ ಅಲೆಮಾರಿಗಳು. ಇವರ ಹೆಸರಿನಲ್ಲಿ ‘ಬಿಲ್’ ಎಂಬ ಕನ್ನಡ ಪದವಿದೆಯೆಂದು ವಿದ್ವಾಂಸರು ಊಹಿಸಿದ್ದಾರೆ. ನಾಸಿಕ್ ಜಿಲ್ಲೆ : ನಾಸಿಕ್ ಜಿಲ್ಲೆಯಲ್ಲಿ ನಾಯಿಗಳಿಗೆ ‘ಕರಿಯ’ ಎಂಬ ಹೆಸರಿನ್ನಿಡುವುದನ್ನು ಅಣ್ಣ, ಅಮ್ಮ, ಅಪ್ಪ ಇತ್ಯಾದಿ ಬಂಧುಸೂಚಕ ಪದಗಳು, ವ್ಯಕ್ತಿ ನಾಮಗಳಲ್ಲಿರುವುದನ್ನಾಗಲಿ ಆ ಜಿಲ್ಲೆಗೆ ಹೋಗಿ ಅಲ್ಲಿನ ಕೊಲ್ಹಾಟಿ, ಕಳಾಲ, ಬುರುಡ, ಹಳೆಮರ್ ಇಂತಹ ಬುಡಕಟ್ಟಿನ ಭಾಷೆಯಲ್ಲಿ ಕನ್ನಡದ ಕುರುಹುಗಳಿವೆ. ಅವರು ಈಗ ಕನ್ನಡ ಮಾತನಾಡದಿದ್ದರೂ ಅವರ ಇಂದಿನ ಮನೆ ಮಾತಿನಲ್ಲಿ (ಖುರ್ಪೆ – ಕುರ್ಫಿ), ಕುಡಲ್ (ಕೈನೇ ಗಿಲು) ಖಟೆ (ಕಣ) ಕನ್ನಡದ ನಿತ್ಯೋಪಯೋಗಿ ಪದಗಳಿರುವ ಸಾಧ್ಯತೆಗಳಿವೆ. ಮುಂಬೈ: ಮುಂಬೈ ನಗರದ ಮೂಲನಿವಾಸಿಗಳು ಆ ಪ್ರದೇಶದಲ್ಲಿ ಮುಖ್ಯವಾಗಿ ಮೀನುಗಾರರಾದ, ‘ಕೋಳಿ’ ಜನವರ್ಗ. ಅವರ ಆರಾಧ್ಯ ದೇವತೆಯ ಹೆಸರಾದ ‘ಮುಂಬಾದೇವಿ’. ‘ಕೋಳಿ’ ಪದ ದ್ರಾವಿಡ ಮೂಲದ್ದು. ಅವರು ಕರ್ನಾಟಕದ ಮೀನುಗಾರ ಜಾತಿಯ ಕಬ್ಬಿಲರು (ಕಬ್ಬಲಿಗ) ಒಂದೇ. ಬಹುಶಃ ಕಬ್ಬಿಲ > ಕವ್ವಿಲ > ಕೌಳಿ ಆಗಿರಲು ಸಾಧ್ಯ. ಮುಂಬಾ ದೇವಿ ಪರಿಸರದ ಸ್ಥಳನಾಮಗಳು ಬೋರಿನಲ್ಲಿ, ಕಾಡಿನಲ್ಲಿ, ಮರೋಳ್, ಚೆಂಬೂರ್ ಇವೆ. ಅವು ಕನ್ನಡದ ಪಳ್ಳಿ, ಊರ್, ಏರಿಗಳನ್ನು ನೆನಪಿಸುತ್ತವೆ. ಮುಂಬಯಿ ಬಹುಹಿಂದೆ ಒಂದು ಕಾಲಕ್ಕೆ ಕನ್ನಡ ಮಾತನಾಡುವ ಪ್ರದೇಶವಾಗಿತ್ತು ಎಂಬುದರಲ್ಲಿ ಸಂದೇಹವಿಲ್ಲ.

ಬೀದರ್ ಜಿಲ್ಲೆಗೆ ಅಂಡಿಕೊಂಡಿರುವ ಇಂದಿನ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯನ್ನು ಕರ್ನಾಟಕದ ಗಡಿಗೆ ಉತ್ತರಕ್ಕೆ ಐವತ್ತು ಮೈಲಿ ಆಚೆ ಹರಿಯುವ ಗೋದಾವರಿ ನದಿ ಇಬ್ಭಾಗ ಮಾಡಿ ಹರಿದಿದೆ. ಆ ಜಿಲ್ಲೆಯ ಐವತ್ತು ಶಾಸನಗಳಲ್ಲಿ ಮೂವತ್ತಾರು ಕನ್ನಡದಲ್ಲಿದ್ದರೆ ಒಂಬತ್ತು ಮರಾಠಿಯಲ್ಲಿವೆ. ಒಂಬತ್ತು ಸಂಸ್ಕೃತದಲ್ಲಿವೆ. ಮರಾಠಿ ಶಾಸನಗಳೆಲ್ಲ ಹದಿಮೂರನೇ ಶತಮಾನಕ್ಕೆ ಈಚಿನವು ಮತ್ತು ಒಂದು ಬಿಟ್ಟರೆ ಎಲ್ಲವೂ ಗೋದಾವರಿಯ ಉತ್ತರಕ್ಕಿವೆ.

ನಾಂದೇಡ್ ಜಿಲ್ಲೆಯ ಶಾಸನಗಳಲ್ಲಿ ಬರುವ ವ್ಯಕ್ತಿನಾಮಗಳು: ನಾಕರಸ, ಬಲ್ಲವರಸ, ಮಾಲಗೌಂಡ, ಎರೆಯಮರಹಸ, ರೇವಣಯ್ಯ ಇತ್ಯಾದಿ. ಕನ್ನೋಜ ಎಂಬ ಶಿಲ್ಪಿಯ ಹೆಸರು ಅಲ್ಲಿದೆ. ಇವು ಕೆಲವು ಸ್ಥಳನಾಮಗಳು : ಸವರಹಳ್ಳಿ, ಕರಡಿಕಲ್ಲು, ನೇರಿಲಿಗೆ, ಕೊಳನೂರು ಇತ್ಯಾದಿ. ‘ಸವರವಳ್ಳಿ’ ಇಂದು ಸಂಗ್ರೋಲಿ, ನಾಗರಹಾಳು ಎಂಬುದು ನಗ್ರಾಳ್, ಮರಿಕಲ್ ಎಂಬುದು ಮರ್ಖಲ್, ನೇರಿಲಗೆಯು ನೇರ‍್ಲಿ ಎಂದಾಗಿದೆ. ನಾಂದೇಡ್ ಹೆಸರಿನ ಹಿಂದಿನ ರೂಪ ನಾಂದೀ ಕಡ ಗೋದಾವರಿ ನದಿಯನ್ನು ಹಸುಗಳು ದಾಟುವ ಸ್ಥಳದಲ್ಲಿ ಅದು ಇದ್ದುದನ್ನು ಸೂಚಿಸುತ್ತದೆ. ನಾಂದೇಡ್ ನಗರ ಗೋದಾವರಿ ದಡದಲ್ಲಿದೆ. ಹಿಂದೆ ಆ ಪ್ರದೇಶವನ್ನು ಹಳ್ಳಿಗಳ ಸಂಖ್ಯೆ ಮೇಲೆ ವಿಭಾಗಗಳಾಗಿ ವಿಂಗಡಿಸಿದ್ದರು. ಉದಾ. ಎರಡಿರ್ಛಾಸಿರ ಬಾಡ. ಹೆಜ್ಜುಂಕ, ಅರುವಣ, ಅಂಕದೆರೆ ಇವು ಕೆಲವು ತೆರಿಗೆಗಳ ಹೆಸರುಗಳು. ಬಳ್ಳ, ಮತ್ತರ, ಸೊಲ್ಲಗೆ ಇವು ಕೆಲವು ಅಳತೆಯ ಹೆಸರುಗಳು. ಪೆರ್ಗಡೆ ಎಂಬ ಅಧಿಕಾರದ ಸ್ಥಾನದ ಹೆಸರಿದೆ. ಕಟ್ಟಡಕ್ಕೆ ಆಸ್ತಿಭಾರ ಹಾಕು ಎಂಬರ್ಥದಲ್ಲಿ ‘ಕೆಸರು ಕಲ್ಲಿಕ್ಕು’ ಎಂಬ ಪದ ಪ್ರಯೋಗವಿದೆ. ನೇಕಾರರ ವರ್ಗವನ್ನು ‘ದೇಡ’ರು ಎಂದು ಕರೆದಿದೆ (ದೇಡ = ಜೇಡ. ನೋಡಿ : ಜೇಡರ ದಾಸಿಮಯ್ಯ). ದೇಗ್ಲೂರ್, ಬಿಳೋಳಿ ಇವು ಆ ಜಿಲ್ಲೆಯ ಎರಡು ತಾಲೂಕುಗಳು ಹೆಸರುಗಳು. ಹದಿಮೂರನೇ ಶತಮಾನಕ್ಕಿಂತ ಹಿಂದೆ ನಾಂದೇಡ್ ಜಿಲ್ಲೆ ಅಪ್ಪಟ ಕನ್ನಡ ಪ್ರದೇಶವಾಗಿದ್ದಿತು. ಮರಾಠಿಯು ಹದಿಮೂರನೇ ಶತಮಾನದ ಬಳಿಕ ಆ ಪ್ರದೇಶವನ್ನು ಪ್ರವೇಶಿಸಿತು ಎಂಬುದಂತೂ ವಿವಾದಾತೀತ ಸಂಗತಿ.

‘ಸಾಯಿರಬಾಡ’ದ ಇನ್ನೊಂದು ಹೆಸರು ಸವರವಾಡಿ. ‘ಏರಿಗೆ’ ಇಂದಿನ ಯೇರಿಗಿ. ತಡಕಲ್ ಇಂದಿನ ‘ತಡ್ಖೇಲ್’. ಜಿಲ್ಲೆಯ ಹಿಂದಿನ ಅಚ್ಚಗನ್ನಡ ಸ್ಥಳನಾಮಗಳು ಈಗ ಹಲವು ಮಾರ್ಪಾಡುಗಳನ್ನು ಪಡೆದಿವೆಯೆಂಬುದಕ್ಕೆ ಹೆಚ್ಚಿನ ಉದಾಹರಣೆಗಳು. ಒಕ್ಕುಲಗಾವೆ ಎಕ್ಲಾರ; ಕರಡಿಕಲ್ -> ಕರಡಖೇಡ; ಅವರವಾಡಿ -> ಅವರಾಲಾ; ಜುನ್ನವಳಿಗೆ ಜುನ್ನಿ -> ಜುನ್ನಿವಣಿ; ಚಿಂಚವಲಿ ಚಿಂಚಖೆಡ್; ಕೊಳನೂರ್ -> ಕೋಳ್ಳೂರ್; ಮದನೂರು -> ಮನೂರು ಮನೂರ್; ಮರಿಕಲ್ಲು -> ಮರ್‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ಖಲ್ ಇತ್ಯಾದಿ.

೫. ಮಹಾರಾಷ್ಟ್ರದಲ್ಲಿ ಕನ್ನಡ ಶಾಸನಗಳು ಹೆಚ್ಚಾಗಿ ದೊರಕಿರುವ ಜಿಲ್ಲೆಗಳೆಂದರೆ ಕೊಲ್ಲಾಪುರ, ಸಾಂಗ್ಲಿ, ಸೊಲ್ಲಾಪುರ, ಒಸ್ಮಾನಾಬಾದ್ ಮತ್ತು ನಾಂದೇಡ್. ಸೋಲ್ಲಾಪುರ ‘ತರಿಕಾಡು ೩೦೦’ ನಾಡಿನ ರಾಜಧಾನಿ ಬಿಜ್ಜಳನು ಆಳುತ್ತಿದ್ದ ಮಂಡಳವೇಡೆ ಆಗಿತ್ತು. ಭೀಡ ಜಿಲ್ಲೆಯ ಲೊಕ್ಕಿಗುಂಡಿ ಕರ್ನಾಟಕದ ಲಕ್ಕುಂಡಿ (ಲೊಕ್ಕಿಗುಂಡಿ) ಎರಡು ಒಂದೇ ಹೆಸರಿನವು. ದೇವಗಿರಿಯ (ಈಗಿನ ಔರಂಗಾಬಾದ್ ಜಿಲ್ಲೆಯ ದೌಲತಾಬಾದ್) ಆಳಿದ ಯಾದವರು ಕನ್ನಡಿಗರು. ಅವರಲ್ಲಿ ಭಿಲ್ಲಮ, ಜೈತುಗಿ, ಸಿಂಘಣ, ಅಮ್ಮಣ (ಅಣ್ಣ), ಬಲ್ಲಾಳ ಇವು ಕೆಲವು ಹೆಸರುಗಳು ಕೊಲ್ಲಾಪುರದ ಶಿಲಾಹಾರದ ಕೆಲವು ಹೆಸರುಗಳು ಇವು. ಜಟಿಗ, ಬಲ್ಲಾಳ, ಗಂಡರಾದಿತ್ಯ (ಬಿರುದು) ಅಕ್ಕಲಕೋಟೆಯ ಮೂಲ ಹೆಸರು ಅಂಕುಲಗೆ, ಭೀಡ್ ಜಿಲ್ಲೆಯ ಶಾಸನಗಳಲ್ಲಿ ಬರುವ ಕೆಲವು ವ್ಯಕ್ತಿನಾಮಗಳು. ಕಾಳಿಮರಸ, ರೇಕಲಾ, ಎರಗದೇವ, ತೈಲಪ, ಮಲ್ಲಗಾವುಂಡ, ಆ ಜಿಲ್ಲೆಯ ಒಂದು ಮಠದ ಹೆಸರು ‘ಎಳೆಯಮಠ‘ ಅಲ್ಲಿಯ ಒಂದು ಗುಡಿ ‘ಬೆಳ್ಳೇಶ್ವರ’, ‘ಅಣಂದೂರು’, ‘ಲತ್ತಲೂರು’ ಇವು ಆ ಜಿಲ್ಲೆಯ ಕೆಲವು ಸ್ಥಳನಾಮಗಳು. ಅಂದರೆ ದಕ್ಷಿಣ ಮಹಾರಾಷ್ಟ್ರ ನಿಶ್ಚಿತವಾಗಿಯೂ ಆರು ನೂರು ಎಂಟು ನೂರು ವರ್ಷಗಳ ಹಿಂದೆ ಅಪ್ಪಟ ಕನ್ನಡ ಪ್ರದೇಶವಾಗಿತ್ತು. ಶಾಸನಗಳಲ್ಲಿ ದೊರೆಯುವ ಸ್ಥಳನಾಮಗಳ ಇನ್ನಷ್ಟು ಮಾಹಿತಿ ಹೀಗಿದೆ : ಊರು, ಪಲ್ಲಿ, ಪಳ್ಳಿ, ವಳ್ಳಿ, ಮಾಲ, ಮಲ, ಕಲ್ ಇಂತಹ ಕನ್ನಡ ವಾರ್ಗಿಕಗಳು ಮಹಾರಾಷ್ಟ್ರದಲ್ಲಿವೆ.

ಹಳೆಯ ಹೆಸರು ಹೊಸ ಹೆಸರು ಜಿಲ್ಲೆ
ಲತ್ತಲೂರ್ ಲಾತೂರ್ (ಒಸ್ಮಾನಾಬಾದ್)
ಚಿಂಚಪಲ್ಲಿ ಚಿಂಚೋಲಿ (ಔರಂಗಾಬಾದ್)
ಕಲ್ಲಗ್ರಾಮ ಕಲೆಗಾವ್ (ಥಾಣೆ)
ಕೆರೆಯಲಿ ಕೇರಲ್ಲಿ (ಕೊಲ್ಲಾಪುರ)

ಮಧ್ಯ ಷಷ್ಠಿ ಪ್ರತ್ಯಯ ಇರುವ ಹೆಸರುಗಳು ಪಟ್ಟಿಯ ಗ್ರಾಮ (ಕೊಲ್ಲಾಪುರ) ಕೋಣೆಯ ಗ್ರಾಮ (ರತ್ನಗಿರಿ)ಗೆ ಕೊನೆಯಲ್ಲಿರುವ ಹೆಸರುಗಳು ಕುರುವಲಗೆ, ಇಂಡಿಗೆ (ರತ್ನಗಿರಿ) ಇವೆಲ್ಲವುಗಳನ್ನು ಗಮನಿಸಿದಾಗ ಇಡೀ ಮಹಾರಾಷ್ಟ್ರ ಒಂದು ಕಾಲಕ್ಕೆ ಕನ್ನಡ ಪ್ರದೇಶವಾಗಿತ್ತು.

೬. ಪ್ರಾಚೀನ ಕಾಲದಲ್ಲಿ ಮಹಾರಾಷ್ಟ್ರದ ಉತ್ತರ ಭಾಗವು ಕೊಲಾಚಾ, ಥಾಣ, ಕಲ್ಯಾಣ ಜಿಲ್ಲೆಗಳಲ್ಲಿ ಕನ್ನಡವು ಆಡುಭಾಷೆಯಾಗಿ ಮರಾಠಿ ಜೊತೆಗೆ ಬಳಕೆಯಲ್ಲಿತ್ತು. ಹಳೆಯ ಮರಾಠಿ ಮೇಲೆ ಅದರಲ್ಲೂ ಸಂತ ಜ್ಞಾನೇಶ್ವರನ ಜನಪ್ರಿಯ ಗೀತವ್ಯಾಖ್ಯಾನ ಗ್ರಂಥ ಜ್ಞಾನೇಶ್ವರಿಯ ಮೇಲೆ ಕನ್ನಡ ಭಾಷೆಯ ಪ್ರಭಾವ ಆಗಿದೆ. ಪಂಡರಪುರದ ವಿಠೋಬವನ್ನು ಜ್ಞಾನೇಶ್ವರನು ಕನ್ನಡ ದೈವವೆಂದು ಕರೆದಿರುವುದು ಸತ್ಯವಾಗಿದೆ. ಉತ್ತರ ಮಹಾರಾಷ್ಟ್ರ ಜಿಲ್ಲೆಗಳಲ್ಲಿ ಕನ್ನಡ, ಮರಾಠಿಗಳು ಹಿಂದೆ ಒಟ್ಟಿಗೆ ಇದ್ದವು. ಕನ್ನಡ ಪ್ರದೇಶವನ್ನು ಪ್ರವೇಶಿಸಿದ ಮರಾಠಿಯು ಕೆಲಕಾಲ ಅದರ ಜೊತೆಗೆ ಇದ್ದು, ಬದುಕಿನ ಕ್ರಮೇಣ ಕನ್ನಡವನ್ನು ದಕ್ಷಿಣಕ್ಕೆ ತಳ್ಳುತ್ತ ಬಂದಿತು. ಕನ್ನಡವು ಮರಾಠಿ ಶಬ್ದಕೋಶದ ಮೇಲೆ ಮಾತ್ರವಲ್ಲ ಧ್ವನಿ ರಚನೆ ಮತ್ತು ವ್ಯಾಕರಣ ಮೇಲೆ ದಟ್ಟ ಪ್ರಭಾವ ಬೀರಿದೆ. ಮರಾಠಿ ಮೇಲೆ ಹಳಗನ್ನಡ ತುಂಬ ಪ್ರಭಾವ ಬೀರಿದೆ. ಉದಾ. ಪದ ಭಂಡಾರ :

ಕನ್ನಡ ಮರಾಠಿ
ಒಳಗೆ ಓಳಗೇ, ಔಳೇ
ಕೋಲು ಕೋಲು
ತುಪ್ಪ ತೂಪ
ಮಡು (ಕೆರೆ) ಮಢು
ಕೋಂಟೆ ಕೋಂಢ
ತೊರೆ ತೋರೇ
ಅಕ್ಕಾ(ಹಿರಿಯ ಸೋದರಿ) ಅಕ್ಕ
ಅಡಚನೆ (ತಡೆ, ಬಿಕ್ಕಟ್ಟು) ಅಡಚಣೆ
ಅಣ್ಣಾ (ಸ್ವಾಮಿ, ತಂದೆ, ಅಣ್ಣ) ಅಣ್ಣ

೭. ಮಹಾರಾಷ್ಟ್ರದ ಧನಗಾರರು ಕುರುಬ ಜನಾಂಗದವರು. ಇವರು ಕಂದಮಿಳ್ (ದ್ರಾವಿಡ) ಪ್ರಾಂತಕ್ಕೆ ಸೇರಿದವರೆಂದು ಶಂಬಾ ಅವರು ಗುರುತಿಸಿದ್ದಾರೆ. ಮಧ್ಯಪ್ರದೇಶದ ಇಂದೋರಿನ ಹೋಳ್ಕರ್ ರಾಜಮನೆತನದವರು ಧನಗರ ವರ್ಗಕ್ಕೆ ಸೇರಿದವರು. ಮೈಲಾರನ ಭಕ್ತರು ಅಲ್ಲಿದ್ದಾರೆ. ಮಹಾರಾಷ್ಟ್ರದ ಪ್ರಾಚೀನ ಗ್ರಾಮ ಸೇವಕ ಆಯಗಾರರನ್ನು “ಕೊರಬು” (= ಕುರುಬು) ಎನ್ನುತ್ತಾರೆ. ಮಹಾರಾಷ್ಟ್ರದ ಚಂದಾ, ಭಂಡಾರ ಭಾಗದ “ಕುರುಬರ್” ಜನ (= ಕುರುಬರು) ಒಂದು ಬಗೆಯ ಕನ್ನಡವನ್ನು ಮಾತಾಡುತ್ತಿದ್ದರು ಎಂದು ಗಿಯರ್ಸನ್ ತನ್ನ Linguistic Survey of India IV 1906, P. 396 ದಲ್ಲಿ ದಾಖಲಿಸಿದ್ದಾನೆ. ಶಂಬಾ ಅವರು ಖಾನ್ದೇಶ, ನಾಸಿಕ ಜಿಲ್ಲೆಗಳ ಹಲವು ಸ್ಥಳನಾಮಗಳು ಕನ್ನಡವೇ ಆಗಿರುವುದನ್ನು ಅಲ್ಲಿ ಧನಗರ್ ಸಮುದಾಯದ ಚಹರೆಗಳಿರುವುದನ್ನು ಗುರುತಿಸಿದ್ದಾರೆ. ಮಧ್ಯಭಾರತದ ’ಮಾಳವ’ ಪ್ರಾಂತದ ಹೆಸರು ‘ಮಲೆ’ ದಿಂದ ಬಂದುದೆಂಬ ಅವರ ಊಹೆ ನಿಸ್ಪಲವಾದದಲ್ಲ.

‘ವಾಟಿ’, ‘ವಾಟಿಕಾ’ ಇವು ಸಂಸ್ಕೃತ ಪದಗಳಂತೆ ‘ವಾಡಿ’,‘ವಾಡೆ’ ಇವು ಅವುಗಳ ತದ್ಭವಗಳಂತೆ ಕಂಡರೂ ಅವೆಲ್ಲವೂ ಮೂಲತಃ ‘ಪಡು’ (to lie down stay) ಎಂಬ ದ್ರಾವಿಡ ಧಾತುವಿನಿಂದ ಬಂದಿರುವ ‘ಪಾಡಿ’ ‘ಬಾಡ’ ಗಳ ರೂಪಾಂತರಗಳೇ ಆಗಿವೆ ಎಂಬ ಶಂಬಾ ಅವರ ಸೂಚನೆ ಗಟ್ಟಿ ಆಧಾರದ ಮೇಲೆ ನಿಂತಿವೆ. ವಾಡ, ವಾಡಿಯಿಂದ ಕೊನೆಯಾಗುವ ಸ್ಥಳನಾಮಗಳು ಕರ್ನಾಟಕದ ಉದ್ದಗಲಕ್ಕೂ ಮಾತ್ರವಲ್ಲ ಮಹಾರಾಷ್ಟ್ರದಲ್ಲೂ ಕಾಣಿಸಿಕೊಂಡಿವೆ. ಆಂಧ್ರ, ತಮಿಳುನಾಡುಗಳಲ್ಲಿ ವಾಡ ಕೊನೆಯಲ್ಲಿನ ಸ್ಥಳನಾಮಗಳಿವೆ. ಇಲ್ಲೆಲ್ಲ ಕನ್ನಡದ ಚಹರೆ ಅಡಗಿದೆ ಎಂಬುದರ ಬಗ್ಗೆ ಅನುಮಾನವಿಲ್ಲ.

೮. ನಾ. ಶ್ರೀ ರಾಜಪುರೋಹಿತರು ೧೯೧೨ ರಿಂದ ೧೯೧೪ರ ವರೆಗೆ “ಕೇಸರಿ” ಮರಾಠಿ ಪತ್ರಿಕೆಯಲ್ಲಿ ಬರೆದ ಐದು ಲೇಖನಗಳ ಒಟ್ಟು ತಿರುಳನ್ನು ಚಿದಾನಂದಮೂರ್ತಿ ಅವರು ಕೊಟ್ಟಿದ್ದಾರೆ. ರಾಜಪುರೋಹಿತರ ಅಭಿಪ್ರಾಯಗಳು ಒಟ್ಟಾರೆ ಸಾಧಾರವೂ ವಿದ್ವಜ್ಜನ ಮಾನ್ಯವೂ ಆಗಿವೆ. ಮರಾಠಿ ವಿದ್ವಾಂಸರ ಅಭಿಪ್ರಾಯಗಳನ್ನು ವಿರೋಧಿಸಿ ೧೯೧೨ರ ಹೊತ್ತಿನಲ್ಲಿಯೇ ಕರ್ನಾಟಕದ ಉತ್ತರ ಗಡಿಗಳು ಇಂದಿನ ಇಡೀ ಮಹಾರಾಷ್ಟ್ರವನ್ನು ಒಳಗೊಂಡಿದ್ದವು ಎಂಬ ವಾದವನ್ನು ಮರಾಠಿಯಲ್ಲಿ ಯಶಸ್ವಿಯಾಗಿ ಮಂಡಿಸಿರುವ ರಾಜ ಪುರೋಹಿತರು ಆ ದಿಸೆಯಲ್ಲಿ ಮೊದಲಿಗರೆಂದೇ ಹೇಳಬೇಕು.

೯. ಪ್ರಾಚೀನ ಮತ್ತು ಆಧುನಿಕ ಮರಾಠಿಯ ಮೇಲೆ ಆಗಿರುವ ಕನ್ನಡದ ಪ್ರಭಾವವನ್ನು ಕುರಿತು ಚಿದಾನಂದಮೂರ್ತಿ ಅವರು ಇನ್ನಷ್ಟು ಮಾಹಿತಿ ಕೊಟ್ಟಿದ್ದಾರೆ. ಸಂಬಂಧ ಸೂಚಕಗಳಾದ ಅವ್ವ, ಅಪ್ಪ, ಅಕ್ಕ, ತಂಗಿ, ಅಣ್ಣ, ತಮ್ಮ, ತಂದೆ, ತಾಯಿ, ಅತ್ತೆ, ಕಕ್ಕ, ಮಾವ, ಅಜ್ಜ, ಅಜ್ಜಿ ಇತ್ಯಾದಿ ಕನ್ನಡ ಬಾಂಧವ್ಯ ಸೂಚಕ ಪದಗಳು ಮರಾಠಿಯಲ್ಲಿ ಸ್ವೀಕೃತವಾಗಿ, ಆ ಭಾಷೆಯ ಭಾಗವೇ ಆಗಿರುವುದು ಗಮನಾರ್ಹ. ಬಹು ಅರ್ಥಪೂರ್ಣ. ಅದರಂತೆ ಮನುಷ್ಯ ದೇಹಕ್ಕೆ ಸಂಬಂಧಿಸಿದ ಹಲವು ಪದಗಳು ಮರಾಠಿಗೆ ಕನ್ನಡದಿಂದ ಸ್ವೀಕೃತವಾಗಿವೆ. ಬೊಟ್ಟು, ಹೊಟ್ಟೆ, ಗಲ್ಲ, ಮಂಡೆ, ಕೊರಳು, ತಲೆ, ಬಗಲು, ಎದೆ ಇತ್ಯಾದಿ. ಎತ್ತಕಡೆ, ಅತ್ತಕಡೆ, ಇಷ್ಟು,ಬೇಗನೇ ಇತ್ಯಾದಿ ದಿಕ್ಸೂಚಕಗಳು,ಅವ್ಯಯಗಳು ಕನ್ನಡದಿಂದ ಸ್ವೀಕೃತಿಗಳು.

ವ್ಯಾಕರಣದ ದೃಷ್ಟಿಯಿಂದ ನೋಡುವುದಾದರೆ ಕನ್ನಡ ಚತುರ್ಥಿ ವಿಭಕ್ತಿ ಪ್ರತ್ಯಯ ‘ಕೆ’ ಎಂಬುದು ‘ಕ’ ಎಂದಾಗಿ ಮರಾಠಿ ನಾಮಪದಗಳಿಗೆ ಸೇರಿದೆ. ಉದಾ. ಘೋಡೆಯೇಕ (ಘೋಡ್ಯಾಂಕು) ಎಂದರೆ ‘ಕುದುರೆಗೆ’ ಎಂದರ್ಥ. ಕನ್ನಡದ ದಿಕ್ಸೂಚಿ ‘ಕಡೆ’ ಯ ಮರಾಠಿಯಲ್ಲಿ ದಿನನಿತ್ಯ ಬಳಕೆಯ ಪದ ‘ವರಲೀ ಕಡೆ’ (= ಪಶ್ಚಿಮದ ಕಡೆಗೆ) ‘ಖಾಲವೇ ಕಡೆ’ (= ಪೂರ್ವದ ಕಡೆಗೆ) ಪ್ರಥಮಾ ವಿಭಕ್ತಿ ‘ಉ’ ಎಂಬುದನ್ನು ಕನ್ನಡದಿಂದ ಮರಾಠಿ ಸ್ವೀಕರಿಸಿದೆ. ಉದಾ. ‘ಬ್ರಾಹ್ಮಣು’ (= ಬ್ರಾಹ್ಮಣನು).

ಸಾಮಾನ್ಯವಾಗಿ ಭಾಷೆಗಳ ಮಧ್ಯೆ ನಾಮಪದ, ವಿಶ್ಲೇಷಣ, ಪದಗಳ ಸ್ವೀಕಾರ ಕಾರ್ಯ ನಡೆಯಬಹುದೇ ಹೊರತು ಕ್ರಿಯಾಪದಗಳ ಸ್ವೀಕಾರವಿರುವುದಿಲ್ಲ. ಆದರೆ ಕನ್ನಡದ ಸಾಕಷ್ಟು ಕ್ರಿಯಾಪದಗಳು ಸದ್ಯ ಮರಾಠಿಯಲ್ಲಿ ಬಳಕೆಯಾಗಿವೆ. ಕುಟ್ಟು, ರುಬ್ಬು, ಸರಿ, ತಬ್ಬು, ಬಡಿಸು, ಬೋಗ್ಗು, ತುಳಿ, ತುಂಬು, ಕಲಸು, ಉಗುಳು, ಜಜ್ಜು, ಅಪ್ಪಳಿಸು, ಕೆದರು, ಒದರು, ಕೊರೆ, ತಿಳಿಸು, ಕಿಲಬು, ಹೆದರು, ಹುಡುಕು ಇತ್ಯಾದಿ. ಮೇಲಿನ ಕನ್ನಡ ಪದಗಳು ಮರಾಠಿ ಭಾಷೆಯಲ್ಲಿ ಉಳಿದುಕೊಂಡಿರುವ ಪಳೆಯುಳಿಕೆಗಳಾಗಿವೆ.

ಮಹಾರಾಷ್ಟ್ರ ಶಾಸನಗಳಿಂದ ಸಂಗ್ರಹಿಸಿ ಹೇಳುವುದಾದರೆ ಹಲವಾರು ಕನ್ನಡ ಸ್ಥಳನಾಮಗಳು ಕುರುಹುಗಳು ಮರಾಠಿಯಲ್ಲಿವೆ. ‘ಗೆ’ ಯಿಂದ ಕೊನೆಯಾಗುವ ಊರ ಹೆಸರುಗಳು ಮೂಲತಃ ಕನ್ನಡವೇ ಉದಾಹರಣೆಗೆ ಅಲತಗೆ (ಈಗ ಅಲ್ತ, ಕೊಲ್ಲಾಪುರ ಜಿಲ್ಲೆ) ಚಂಡಿಗೆ (ಈಗ ಛಂಜಥಾಣಾ ಜಿಲ್ಲೆ) ‘ಖೋಪ’ ಕೊನೆಯಲ್ಲಿರುವ ಹೆಸರುಗಳೂ ಕನ್ನಡದವೇ ಉದಾ. ಅಕ್ಕಲಖೋಪ್ (ಸಾತಾರ ಜಿಲ್ಲೆ) ಎಂಬುದರ ಉತ್ತರಾರ್ಧ “ಕೊಪ್ಪ”, “ಅಕ್ಕಲಕೋಟೆ” ಹೆಸರು ಇಲ್ಲಿ ನೆನಪಿಗೆ ಬರುತ್ತದೆ. ಮಹಾರಾಷ್ಟ್ರದ ಇಂತಹ ಗ್ರಾಮನಾಮಗಳು ಕನ್ನಡ ನಾಡನ್ನು ನೆನೆಪಿಸುತ್ತವೆ.

ಮರಾಠಿಯಂತೆ ಕೊಂಕಣವೂ (ಗೋವೆ) ಒಂದು ನಾಡಾಗಿ ಮೂಲತಃ ಕನ್ನಡ ಭಾಷೆಯನ್ನಾಡುವ ಪ್ರದೇಶವಾಗಿತ್ತು. ಕೊಂಕಣಿ ಭಾಷೆಯು ಇಂಡೋ ಆರ್ಯನ್ ವರ್ಗಕ್ಕೆ ಸೇರಿದ ಸ್ವತಂತ್ರ ಭಾಷೆ. ಅದರಲ್ಲಿ ಸಾವಿರಾರು ಪದಗಳು,ನಿತ್ಯೋಪಯೋಗಿ ಪದಗಳು ಮರಾಠಿಯಂತೆ ಕನ್ನಡವೇ ಆಗಿವೆ. ಉದಾ. ಅಜಿ (= ಅಜ್ಜಿ), ಮಾಮ (= ಮಾಮ), ಕಡೇಕ (= ಕಡೆಗೆ), ತೂಕ್ (= ತೂಗು), ತೋಟಾಗಾರ್ (= ತೋಟಗಾರ), ಪಾಲ್ಕಿ (= ಪಲ್ಲಕ್ಕಿ), ಬೆಂಡೊ, ಭೆಂಡ (= ಬೆಂಡೆ), ಸಾಸಮ (= ಸಾಸಿಮೆ), ಪಣಸು (= ಹಲಸು) ಎಂದರೆ ಕೊಂಕಣಕ್ಕೆ ಗೋವೆ ಮತ್ತು ಪರಿಸರದ ನಾಡಿಗೆ ಕೊಂಕಣಿ ಭಾಷೆಯ ಜನರು ಬಂದು ಅಲ್ಲಿದ್ದ ಕನ್ನಡ ಪದಗಳನ್ನು ಸ್ವೀಕರಿಸಿದರು ಎಂಬುದಕ್ಕೆ ಮೇಲಿನ ಉದಾಹರಣೆಗಳು ಕೆಲವು ಮಾತ್ರ. ಕನ್ನಡದಲ್ಲಿ ‘ಪ್’ ಇನ್ನೂ ‘ಹ್’ ಆಗಿರದಿದ್ದ ಕಾಲದಲ್ಲಿ ಹತ್ತು, ಹನ್ನೊಂದನೇ ಶತಮಾನಕ್ಕೆ ಮುನ್ನವೇ ಕೊಂಕಣಿಯು ಕನ್ನಡ ಪ್ರದೇಶಕ್ಕೆ ಆಗಮಿಸಿತು ಎಂದು ಹೇಳಲು ಸಾಧ್ಯವಾಗುತ್ತದೆ.

೧೦. ಮಹಾರಾಷ್ಟ್ರದಲ್ಲಿ ಕನ್ನಡ ಉಪಭಾಷೆಗಳ ಚಹರೆಗಳನ್ನು ಚಿದಾನಂದಮೂರ್ತಿ ಅವರು ಗುರುತಿಸಿದ್ದಾರೆ. ಉತ್ತರ ಮಹಾರಾಷ್ಟ್ರವು ಬಹು ಹಿಂದೆ ದ್ರಾವಿಡ ಭಾಷಾ (ಕನ್ನಡ) ಪ್ರದೇಶವಾಗಿದ್ದಿತೆಂಬುದಕ್ಕೆ ಕೈಕಾಡಿ ಉಪಭಾಷೆಯ ಒಂದು ಪೋಷಕ ನಿದರ್ಶನ. ಆ ಭಾಷೆ ‘ನಾನ್ನ ಬಂಗಾ ನಾನ್‌ಕುತಾ (= ನನ್ನ ಭಾಗ ನನಗೆ ತಾ) ಇದು ಆ ಭಾಷೆಯ ಮಾದರಿ. ಗೋಲರಿ ಅಥವಾ ಹೋಲಿ, ಕುರುಂಚಿ ಎಂಬುದು ಕನ್ನಡ ಉಪಭಾಷೆಯಾಗಿದ್ದು ಅದು ಚಂದಾ, ಕಡಪಾ, ನೀಲಗಿರಿ, ತಂಜಾವೂರು, ಮಲಬಾರ್ ಜಿಲ್ಲೆಗಳಲ್ಲಿದೆ. “ಒಬ್ಬ ಮನ್ಸೇನ್ ಇಬ್ಬರು ಮಕಾಳು ಇದ್ದರು” ಇದು ಆ ಭಾಷೆಯ ಒಂದು ಮಾದರಿ. ಇಂದಿನ ಕರ್ನಾಟಕದ ಪೂರ್ವ, ದಕ್ಷಿಣ ಗಡಿಗಳ ಅಂಚಿನಲ್ಲಿರುವ ಆಂಧ್ರ, ತಮಿಳುನಾಡುಗಳ ಎಷ್ಟೋ ಭಾಗಗಳು ಕನ್ನಡ ಪ್ರದೇಶವೇ ಆಗಿತ್ತೆಂಬುದಕ್ಕೆ ಇದು ಒಂದು ಚಿಕ್ಕ ಪೋಷಕ ಸಾಮಗ್ರಿ. ನೀಲಗಿರಿಯ ಪ್ರಧಾನ ಜನಾಂಗವಾದ ಬಡಗರ ಭಾಷೆ, ಕನ್ನಡದ ಒಂದು ಉಪಭಾಷೆಯೇ ಆಗಿದೆ. ಕೊಲಾಬಾ ಜಿಲ್ಲೆ, ನಾಸಿಕ ಜಿಲ್ಲೆಯ ಠಾಕರೀ ಉಪಭಾಷೆಯಲ್ಲಿ, ಕನ್ನಡ ಪದರೂಪಗಳಿವೆ. ನಾಸಿಕ್ ಪ್ರದೇಶವು ಕನ್ನಡ ನಾಡಾಗಿದ್ದಿತು ಎಂಬುದಕ್ಕೆ ಇದು ಒಂದು ಆಧಾರ. ಅದರಂತೆ ಥಾಣೆ ಜಿಲ್ಲೆಯ ಮಾಂಗೇಲಾ ಉಪಭಾಷೆ, ಬಸ್ತಾರ್ ಪ್ರದೇಶದ ಹಳಬೀ ಜನಾಂಗದ ಉಪಭಾಷೆಯಲ್ಲಿ ಕನ್ನಡ ಭಾಷಾರೂಪಗಳಿರುವುದನ್ನು ಚಿದಾನಂದ ಮೂರ್ತಿ ಅವರು ಗುರುತಿಸಿದ್ದಾರೆ.

‘ಧನಗರ್’ ಅಥವಾ ‘ಹಟ್ಟಿಕರ್’, ‘ಧನಗರ್’ ಜಾತಿಯ ಜನರು ಕರ್ನಾಟಕ, ಮಹಾರಾಷ್ಟ್ರಗಳ ಉದ್ದಗಲಕ್ಕೆ ಕುರಿ ಸಾಗುವ ವೃತ್ತಿಯವರು. ‘ದನ’ ಪದ ಮರಾಠಿಗೆ ಹೋಗಿ ‘ಧನ’ ಆಗಿದೆ. ಉತ್ತರಾರ್ಧ ‘ಗರ್’ ಪ್ರತ್ಯಯವು ಕನ್ನಡ ಕರು ಆಗಿರುವ ಸಾಧ್ಯತೆಯಿದೆ. ‘ಧನಗರ್’ ಜನರು ಮೂಲತಃ ಕನ್ನಡ ಭಾಷಿಕರು ಎಂಬುದಕ್ಕೆ ಹಲವಾರು ಸಾಕ್ಷಾಧಾರಗಳಿವೆ. ಮರಾಠಿ ‘ಧನಗರ್’ ರ ಖೋಪ, ಗುಡಿ ರೂಪಗಳು ಕನ್ನಡದ ಕೊಪ್ಪ, ಗುಡಿಗಳೇ ಆಗಿವೆ. ಖಂಡೋಬಾ (ಮೈಲಾರ) ಇವರ ಪ್ರಧಾನ ದೈವ. ಸೋಲ್ಲಾಪುರ ಪ್ರದೇಶದ ಧನಗರರಿಗೆ ಯೇವನಾಯಿ (ಎಲ್ಲಮ್ಮ) ಅವರ ಆರಾಧ್ಯ ದೈವಗಳಲ್ಲಿ ಒಂದು. ಗವಳಿಗಳಲ್ಲಿ ಬಿಜಾಪುರಿ, ಧನಗರ್, ಗೊಲ್ಲ, ಕುಣಬಿ, ಕೊಕ್ನಿ, ಕುರುಬ ಇವು ಕೆಲವು ಉಪವರ್ಗಗಳು. ಇವರು ಕನ್ನಡವನ್ನು ಮಾತನಾಡುತ್ತಾರೆ. ‘ಹಳಬಿ’ ಎಂಬ ವರ್ಗ ಜನರು ರೈತರು ಮನೆಗೆಲಸ ಮಾಡುವಾಗ ಕನ್ನಡವನ್ನೇ ಮತನಾಡುತ್ತಾರೆ. ‘ಕೋಳಿ’ (ಕೋಹಳಿ) ಎಂಬ ಜನವರ್ಗ ದ್ರಾವಿಡ ವರ್ಗದವರು ಅವರ ಭಾಷೆ ಕನ್ನಡ, ತೆಲಗು, ತಮಿಳನ್ನು ಹೋಲುತ್ತದೆ. ಕೋಳಿಗಳಲ್ಲಿ ‘ಕಬ್ಬೇರ್’ ಎಂಬ ಪಂಗಡವಿರುವುದು ಸ್ವಾರಸ್ಯವಾಗಿದೆ. ಮಧ್ಯಕರ್ನಾಟಕದ ಮೀನುಗಾರ ಜಾತಿಗೆ ಸೇರಿದ ಕಬ್ಬೇರರು ಇಲ್ಲಿ ನೆನೆಪಾಗುತ್ತಾರೆ. ಕೋಳಿ, ಧೋರ ಜನ ಸತ್ತ ಪ್ರಾಣಿಗಳ ಚರ್ಮವನ್ನು ಹದಮಾಡುತ್ತಾರೆ. ಅವರು “ಮಲ್ಹಾರ್” ದೈವವನ್ನು ಪೂಜಿಸುತ್ತಾರೆ. ಮಲ್ಲಾರ್ ಇನ್ನಾರೂ ಅಲ್ಲ, ಕರ್ನಾಟಕದ ಮೈಲಾರನೇ. ಇವರ ಆಡುರೂಪಗಳು ಕನ್ನಡ ಪದಗಳಿವೆ. ಕುಡ್ಲಿ (= ಕೊಡಲಿ), ಖುರ್ಪೆ (= ಕುರ್ಪಿ), ಜ್ವಾರಿ (= ಜೋಳ), ಅಲ್ಸಿ (= ಹಲಸಂದಿ), ತೂರ್ (= ತೊಗರಿ) ಎಲ್ಲವೂ ದ್ರಾವಿಡ (ಕನ್ನಡ)ಪದಗಳು. ಹೀಗೆ ಚಿದಾನಂದಮೂರ್ತಿ ಅವರು ಮಹಾರಾಷ್ಟ್ರದ ಹಲವು ಉಪಭಾಷೆ ಮತ್ತು ಬುಡಕಟ್ಟು ಜನಾಂಗಗಳಲ್ಲಿ ಕನ್ನಡದ ಚಹರೆಗಳನ್ನು ಗುರುತಿಸಿದ್ದಾರೆ.

೧೧. ಮಹಾರಾಷ್ಟ್ರದ ರಾಷ್ಟ್ರೀಯ ದೈವಗಳೆಂದೇ ಮರಾಠಿ ಜನರು ಗೌರವಿಸುವ ಕೊಲ್ಲಾಪುರದ ಮಹಾಲಕ್ಷ್ಮಿ, ಪಂಡರಪುರಂದ ವಿಠೋಬ, ಜೆಜೂರಿಯ ಖಂಡೋಬ, ತುಳಜಾಪುರದ ತುಳಜಾ ಭವಾನಿ ಈ ನಾಲ್ಕು ಸ್ವಾರಸ್ಯದ ವಿಷಯವೆಂದರೆ ಕರ್ನಾಟಕದ ದೇವತೆಗಳು.ಕೊಲ್ಲಾಪುರದ ಮಹಾಲಕ್ಷ್ಮೀ ದೇವಾಲಯದ ಶಾಸನಗಳೆಲ್ಲವೂ ಕನ್ನಡದಲ್ಲಿವೆ. ಮತ್ತು ಆ ಜಿಲ್ಲೆ ಹಿಂದೆ ಅಪ್ಪಟ ಕನ್ನಡ ಪ್ರದೇಶವಾಗಿತ್ತು. ಶಿವಾಜಿಯು ಅದನ್ನು “ಕರ್ನಾಟ” ವೆಂದೇ ಭಾವಿಸಿದ್ದನು. ಪಂಡಾರಾಪುರದ ಹಳೆಯ ಹೆಸರು “ಪಂಡರಂಗೆ” (ನೋಡಿ: ಜೇವರ್ಗಿ, ಮುಂಡರಗಿ) ವಿಠೋಬನನ್ನು ಸಂತ ಜ್ಞಾನೇಶ್ವರನು ಕಾನಡಾ (ಕನ್ನಡ ದೇವತೆ) ಎಂದೇ ಕರೆದಿದ್ದಾನೆ.ಖಂಡೋಬಾ ಯಾರೂ ಅಲ್ಲ, ಕರ್ನಾಟಕದ ಮೈಲಾರ. ಅವನ ಹೆಂಡತಿ ಮ್ಹಾಲಸಾ ಕರ್ನಾಟಕದ ಮಾಳಚಿಯೇ. ತುಳಜಾಪುರದ ತುಳಜಾ ಭವಾನಿಯೂ ಮೂಲತಃ ಕರ್ನಾಟಕದ ದೇವತೆ. ತುಳಜಾಪುರ ಹಿಂದೆ ಅಪ್ಪಟ ಕನ್ನಡ ಪ್ರದೇಶವಾಗಿತ್ತೆಂದು ಚಿದಾನಂದಮೂರ್ತಿ ಅವರು ಶಾಸನಾಧಾರಗಳಿಂದ ಸ್ಪಷ್ಟಪಡಿಸಿದ್ದಾರೆ.

೧೨. ರತ್ನಗಿರಿ ಜಿಲ್ಲೆಯ ಚಿತ್ಪಾವನ ಬ್ರಾಹ್ಮಣರಲ್ಲಿ ಗೋಡ್ಸೆ, ಆಪ್ಟೆ, ಬಡ್ಗೆ, ಚಾಪೇಕರ್, ಅಪ್ಪಾಸಾಹೇಬ್, ಪಟವರ್ಧನ್, ಸಿಂಧುತಾಯ್, ಈ ವ್ಯಕ್ತಿನಾಮಗಳಲ್ಲಿ ಕೆಲವೆಡೆ ಕನ್ನಡ ಪದಗಳು ಸ್ಪಷ್ಟವಾಗಿವೆ. ಉಳಿದ ಪದಗಳಲ್ಲಿ ಕನ್ನಡ ಭಾಷೆಯ ಸೂಚನೆಯಿದೆ. ದಕ್ಷಿಣ, ಮಹಾರಾಷ್ಟ್ರದ ಹಣಬರ್ ಜನರು ದನ ಸಾಕುವರು. ‘ತುರ್ಕಾರ್’ ಎಂಬುದು ತುರು + ಕರು ಪದದಿಂದ ಬಂದಿರುವಂತೆ ಕಾಣುತ್ತದೆ (ತುರುಕರು = ದನಕರು > ಧನಗರ್?) ಹಿಂದೆ ಪೇಶ್ವೆಗಳ ಜೊತೆಗೆ ತಂಜಾವೂರಿಗೆ ಹೋಗಿ ನೆಲೆಸಿದ ಮಾಧ್ವ ದೇಶಸ್ಥ ಬ್ರಾಹ್ಮಣರು ಮನೆಯಲ್ಲಿ ಮರಾಠಿ, ಕನ್ನಡ ಮಾತನಾಡಿದರೂ ಶ್ರಾದ್ಧದ ದಿನ ಕನ್ನಡದಲ್ಲಿ ಮಾತ್ರ ಮಾತನಾಡುತ್ತಾರೆ. ಅವರಿಗೆ ಕನ್ನಡ ಮೊದಲ ಭಾಷೆ. ಆದ್ದರಿಂದ ಶ್ರದ್ಧೆಯ ಭಾಷೆ. ಹೋಳ್ಕರ್ ರಾಜಮನೆತನದವರು ಸೋಬಾನೆ ಹಾಡುಗಳಲ್ಲಿ ಕನ್ನಡ ಉಳಿದುಕೊಂಡಿರುವುದು, ಪಂಡರಪುರದ ವಿಠ್ಠಲನ ರಾತ್ರಿಪೂಜೆಯಲ್ಲಿ ಕನ್ನಡ ಮಂಗಳಾರತಿ ಹೇಳುವುದು ಅರ್ಥಪೂರ್ಣ. ಮಹಾರಾಷ್ಟ್ರದ ಒಂದು ವಂಶನಾಮ ‘ಹೆಡ್ಗೆವಾರ್’ ಎಂಬುದು ಮೂಲತಃ ‘ಹೆಗ್ಗಡೆಯವರ್’ ಆಗಿರುವ ಸಾಧ್ಯತೆಯಿದೆ. ಹೀಗೆ, ಇಂದಿನ ಮಹಾರಾಷ್ಟ್ರದ ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ಜಾತಿ, ಬುಡಕಟ್ಟು ಜನರ ಮೇಲೆ ಬೆಳಕು ಬೀರುವ ಕೆಲವು ಸಂಗತಿಗಳನ್ನು ಮೇಲಿನ ಮಾಹಿತಿ ಸೂಚಿ ಒಳಗೊಂಡಿದೆ.

೧೩. ಅಭ್ಯಾಸಪೂರ್ಣ ೧೪ ಅನುಬಂಧಗಳಿವೆ. ಕೊಲ್ಲಾಪುರ ಪ್ರದೇಶವನ್ನು ಇಂಗ್ಲಿಶ್ ಪತ್ರಗಳಲ್ಲಿ ದಕ್ಷಿಣ ಮಹಾರಾಷ್ಟ್ರ ಎಂದು ಕರೆಯದೆ ‘ಕರವೀರ ಇಲಾಖಾ ಕರ್ನಾಟಕ ಪ್ರಾಂತ’ ಎಂದು ಕರೆದಿದೆ (ಪ್ಲೀಟ್, ಹಂಟರ್). ಮುಂಬೈ ಸ್ಥಳನಾಮ + ರಸ್ತೆಯ ಹೆಸರುಗಳಲ್ಲಿ ಕನ್ನಡ ಪದಗಳಿವೆ. ಹದಿನೈದನೇ ಶತಮಾನಕ್ಕಿಂತ ಹಿಂದಿನ ಮಹಾರಾಷ್ಟ್ರದ ರಾಜಕೀಯ ಚರಿತ್ರೆ ಎಂದರೆ ಅದು ಕರ್ನಾಟಕದ ಚರಿತ್ರೆಯೇ. ಕರ್ನಾಟಕವನ್ನು ಆಳಿದ ದೊರೆಗಳು ಮಹಾರಾಷ್ಟ್ರವನ್ನು ಆಳಿದರು. ಬಾದಾಮಿ ಚಾಲುಕ್ಯರು (೬ನೇ ಶತಮಾನದಿಂದ ೮ನೇ ಶತಮಾನದವರೆಗೆ), ರಾಷ್ಟ್ರಕೂಟರು (೮ನೇ ಶತಮಾನದಿಂದ ೧೦ನೇ ಶತಮಾನದವರೆಗೆ), ಕಲ್ಯಾಣ ಚಾಲುಕ್ಯರು ಮತ್ತು ಕಳಚೂರ್ಯರು (೧೦ನೇ ಶತಮಾನದಿಂದ ೧೨ನೇ ಶತಮಾನದವರೆಗೆ), ಶಿಲಾಹಾರರು (೯ನೇ ಶತಮಾನದಿಂದ ೧೩ನೇ ಶತಮಾನದವರೆಗೆ), ದೇವಗಿರಿ ಸೇವುಣರರು ಅಥವಾ ಯಾದವರು (೯ನೇ ಶತಮಾನದಿಂದ ೧೪ನೇ ಶತಮಾನದವರೆಗೆ), ವಿಜಯನಗರ ಸಾಮ್ರಾಜ್ಯದವರೆಗೆ (ಕ್ರಿ.ಶ. ೧೪ನೇ ಶತಮಾನ) ಅಂದಿನ ಮಹಾರಾಷ್ಟ್ರದ ಚರಿತ್ರೆ ಎಂದರೆ ಒಂದು ರೀತಿಯಲ್ಲಿ ಕರ್ನಾಟಕದ ಚರಿತ್ರೆಯೇ ಆಗಿದೆ. ಬೆಳಗಾವಿ ಅಪ್ಪಟ ಕನ್ನಡ ಪ್ರದೇಶವಾಗಿತ್ತು ಎಂಬುದನ್ನು ಹಲವಾರು ದಾಖಲೆಗಳು, ಗೆಜೆಟಿಯರ್‌ಗಳಿಂದ, ಮಾಹಿತಿಗಳನ್ನು ಕೊಟ್ಟಿದ್ದಾರೆ. ಮಹಾಜನ ವರದಿಯ ಶಿಫಾರಸ್ಸುಗಳನ್ನು ಚರ್ಚಿಸಿದ್ದಾರೆ. ಅದರಂತೆ ಉತ್ತರ ಕನ್ನಡ, ಗುಲಬರ್ಗಾ, ಬೀದರ್, ಸೊಲ್ಲಾಪುರ, ಕಾಸರಗೋಡ ಕನ್ನಡ ಪರ ಚಿಂತನೆಯ ನೆಲೆಯಲ್ಲಿ ಚರ್ಚಿಸಿದ್ದಾರೆ.

೧೯೧೫ರ ಒಂದು ಅಂದಾಜಿನ ಪ್ರಕಾರ ಅಂದಿನ ಕನ್ನಡ ಭಾಷಿಕರ ಬಾಹುಳ್ಯದ ಪ್ರದೇಶ ಉತ್ತರದಲ್ಲಿ ಕೊಲ್ಲಾಪುರದಿಂದ ಹಿಡಿದು ಗೋವೆ ಸೇರಿದಂತೆ ದಕ್ಷಿಣದಲ್ಲಿ ಕಲ್ಲಿಕೋಟೆ, ಕೊಯಮತ್ತೂರು, ಸೇಲಂದವರೆಗೆ ಪೂರ್ವದಲ್ಲಿ ನಲ್ಗೊಂಡ, ಅನಂತಪುರದವರೆಗೆ ಪಶ್ಚಿಮಕ್ಕೆ ರತ್ನಗಿರಿಯಿಂದ ಕಲ್ಲಿಕೋಟೆಯವರೆಗೆ ವ್ಯಾಪಿಸಿತ್ತು.

೧೪. ಇಂದಿನ ಬಹುತೇಕ ಮಹಾರಾಷ್ಟ್ರ ಹಿಂದೊಮ್ಮೆ ಕನ್ನಡ ನಾಡಾಗಿದ್ದಿತು ಎಂಬುದು ಕೇವಲ ಪ್ರಮೇಯವಾಗಿ ಉಳಿಯದೇ ಒಂದು ಸಾಧಾರ ತೀರ್ಮಾನವಾಗುತ್ತದೆಯೆನ್ನುವಷ್ಟರ ಮಟ್ಟಿಗೆ ಪ್ರಮುಖ ಪ್ರಮಾಣಗಳು ದೊರಕಿವೆ. ಮಹಾರಾಷ್ಟ್ರ ಉದ್ದಗಲಕ್ಕೂ ಕಾಣುವ ಸ್ಥಳನಾಮಗಳು, ಬಂಧುಸೂಚಕಗಳ ಪದಗಳು, ಮರಾಠಿ ಭಾಷೆ ಇಂದಿಗೂ ಉಳಿಸಿಕೊಂಡು ಬಂದಿರುವ ಹಳಗನ್ನಡ ಪದ, ವ್ಯಾಕರಚನೆಗಳು, ನಾಸಿಕ್‌ದಂತಹ ಉತ್ತರದ ಜಿಲ್ಲೆಗಳಲ್ಲಿ ಕನ್ನಡ ಭಾಷಿಕಗುಂಪುಗಳು, ಅವರ ಭಾಷೆಯಲ್ಲಿನ ಹಳಗನ್ನಡ ಪದಗಳು, ಎಲ್ಲೆಡೆ ಇರುವ ಮಹಾರ್, ಧನಗರ್ ಇವೇ ಮೊದಲಾದ ಕನ್ನಡ ಮೂಲದ ಜಾತಿಗಳು ಇವು ಮೊದಲಾದ ಬಹುಮುಖ್ಯ ಸಾಕ್ಷ್ಯಾಧಾರಗಳು ಬೆರಳು ತೋರುವುದು. ಒಂದೇ ಕಡೆಗೆ ಉತ್ತರ ಮಹಾರಾಷ್ಟ್ರ ಮೊದಲು ಕನ್ನಡ ನಾಡೇ ಆಗಿದ್ದಿತು. ಕೋಳಿಗಳಲ್ಲಿ ಕಬ್ಬೇರ್ ಎಂಬ ವರ್ಗದವರಿರುವುದು ಕೋಳಿಗಳೂ ಕರ್ನಾಟಕದ ಕಬ್ಬಿಲರೂ ಇಬ್ಬರೂ ಮೀನುಗಾರರು ಎಂಬ ಅಂಶ ತುಂಬ ಸ್ವಾರಸ್ಯವಾಗಿದೆ. ಕಬ್ಬಿಲ – ಕವ್ವಿಲ; ಕವ್ವಿಲ – ಕೋಳಿ ಕಬ್ಬಿಲ ಪದವು ಬಹುಶಃ ದ್ರಾವಿಡ ಮೂಲದ ಪದ ಮುಂಬೈ ಮೂಲನಿವಾಸಿಗಳಾದ ಕೋಳಿಗಳು ಮೂಲತಃ ಕನ್ನಡಿಗರೇ ಎಂಬ ಊಹೆ ನಿರಾಧಾರವಾದುದಲ್ಲ.

ತಮಿಳುನಾಡಿನ ಸೇಲಂ, ಧರ್ಮಪುರಿ ಜಿಲ್ಲೆಗಳ ಕನ್ನಡ ಶಾಸನಗಳಲ್ಲಿ ಬಂದಿರುವ ಸ್ಥಳನಾಮಗಳು, ವ್ಯಕ್ತಿನಾಮಗಳು, ದೇವರ ಹೆಸರುಗಳು, ತೆರಿಗೆ ಹೆಸರುಗಳು ಕನ್ನಡವೇ ಎಂಬುದನ್ನು ಗಮನಿಸಬೇಕು. ಇದೇ ಮಾತನ್ನು ಆಂಧ್ರ ಪ್ರದೇಶಕ್ಕೂ ಅನ್ವಯಿಸಿ ಹೇಳಬಹುದು. ಚಿತ್ತೂರು, ಅನಂತಪುರ, ಮೇದಕ್, ಕರ್ನೂಲು, ಇವೇ ಮೊದಲಾದ ಜಿಲ್ಲೆಗಳ ಬಹುಭಾಗಗಳು ಹಿಂದೊಮ್ಮೆ ಕನ್ನಡ ನಾಡೇ ಆಗಿದ್ದವು.

ಮೂಲ ಕರ್ನಾಟಕದ ದಕ್ಷಿಣದ ಸ್ಥೂಲ ಗಡಿಯಾಗಿ ನೀಲಗಿರಿ ಪರ್ವತ ಶ್ರೇಣಿಯೆಂದು ಭಾವಿಸಬೇಕು. ಕವಿರಾಜಮಾರ್ಗಕಾರನು ಹೇಳಿದ ಕಾವೇರಿ, ಗೋದಾವರಿ ನದಿಗಳು ಸ್ಥೂಲ ಗಡಿಗಳೆಂದೇ ಭವಿಸಬೇಕು. ನೀಲಗಿರಿಯ ದಕ್ಷಿಣದ ಕೊಯಮತ್ತೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ಈಗಲೂ ಕನ್ನಡ ಮಾತಾಡುವ ಜನರಿದ್ದಾರೆ. ಗೋದಾವರಿ ನದಿಯ ಪ್ರದೇಶದಲ್ಲಿಯೂ ಕನ್ನಡ ಮಾತಾಡುವ ಜನರಿದ್ದಾರೆ. ನೀಲಗಿರಿ ಬೆಟ್ಟದ ಪ್ರಮುಖ ಭಾಷೆ ಬಡಗವು ಕನ್ನಡದ ಸ್ಪಷ್ಟ ಉಪಭಾಷೆ. ಸೋಲಿಗ ಉಪಭಾಷೆಯಂತೆ ಅದು ತಮಿಳುನಾಡಿಗೆ ಸೇರಿದ್ದರೂ ಇಂದಿಗೂ ಅದು ದ್ವಿಭಾಷಿಕ ಪ್ರದೇಶವೇ ಆಗಿದೆ.

ಒಂದು ಕಾಲದಲ್ಲಿ ಮಹಾರಾಷ್ಟ್ರದ ಬಹುಭಾಗವೆಲ್ಲ ಸಾಂಸ್ಕೃತಿಕ ಕರ್ನಾಟಕ ಅಂಗವೇ ಆಗಿತ್ತು. ಸಾಂಸ್ಕೃತಿಕ ಕರ್ನಾಟಕ ಭಾಗವಲ್ಲ ಇಡೀ ಮಹಾರಾಷ್ಟ್ರವು ‘ಭಾಷಿಕ ಕರ್ನಾಟಕ’ದ ಭಾಗವಾಗಿತ್ತು ಎಂಬುದು ಸ್ಪಷ್ಟ. ಅಷ್ಟರಮಟ್ಟಿಗೆ ಈ ಕೃತಿ ಸ್ಪಷ್ಟಪಡಿಸುತ್ತದೆ. ಇಂದಿಗೂ ಈ ಭಾಗದಲ್ಲಿ ನೆಲೆನಿಂತ ಜನರು ದ್ವಿಭಾಷಿಕರು. ಬಹುತೇಕ ಕಡೆಗಳಲ್ಲಿ ಮನೆಮಾತು ಕನ್ನಡ. ಹೊರಗಿನ ವ್ಯವಹಾರವೆಲ್ಲ ಮರಾಠಿಯಲ್ಲಿ ಉತ್ತರ ಮಹಾರಾಷ್ಟ್ರದಲ್ಲಿ ಅದರಲ್ಲೂ ಕೆಳವರ್ಗದ ಜನರ ಸಮೀಕ್ಷೆ ನಡೆದರೆ ಅಲ್ಲಿ ಕನ್ನಡ ಭಾಷಿಕರು ದೊರಕಬಹುದು ಅಥವಾ ದೊರಕುತ್ತಾರೆ. ಹಟ್ಕರ್ ಕಾನಡಿ ಇತ್ಯಾದಿ ಕೆಲವು ವರ್ಗಗಳ ಉಲ್ಲೇಖ ಈ ಕೃತಿಯಲ್ಲಿ ಬಂದಿದೆ.

ಒಟ್ಟಾರೆ, ಸಾವಿರ ವರ್ಷಗಳಿಗೂ ಹಿಂದೆ ಕನ್ನಡ ಭಾಷೆಯನ್ನಾಡುತ್ತಿದ್ದ ಮೂಲ ಕನ್ನಡ ನಾಡು ಉತ್ತರದಲ್ಲಿ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಗೆ ಅಂಟಿಕೊಂಡು ಹರಿಯುವ ಗೋದಾವರಿಯವರೆಗೆ ಮಾತ್ರವಲ್ಲ, ಮುಂಬೈನಿಂದ ಇನ್ನೂ ಮೇಲಕ್ಕೆ ಮಹಾರಾಷ್ಟ್ರದ ಕೊನೆಯ ಜಿಲ್ಲೆ ನಾಸಿಕ್ ನಗರದ ಪಕ್ಕದಲ್ಲಿ ಹರಿಯುವ ಗೋದಾವರಿಯವರೆಗೆ ಹಬ್ಬಿದ್ದಿತೆಂಬುದು ಮುಂಬೈ ಪ್ರದೇಶ ಸೇರಿದಂತೆ ಇಂದಿನ ಮಹಾರಾಷ್ಟ್ರ, ಪಶ್ಚಿಮದಲ್ಲಿ ಗೋವೆ, ದಕ್ಷಿಣದಲ್ಲಿ ಕಾಸರಗೋಡು ಕೆಳಗಿರುವ ಕಣ್ಣಾನೂರು, ಕಲ್ಲಿಕೋಟೆ ನೀಲಗಿರಿ ಘಟ್ಟಗಳವರೆಗೆ ಪೂರ್ವದಲ್ಲಿ ಸೇಲಂ, ಧರ್ಮಪುರಿ, ಕರ್ನೂಲುವರೆಗೆ ವ್ಯಾಪಿಸಿದ್ದಿತೆಂಬುದನ್ನು ಈ ಕೃತಿ ಹಲವು ಹೊಸ ನಿರ್ಣಾಯಕ ಆಧಾರಗಳಿಂದ ಸ್ಥಾಪಿಸಿದೆ ಅಥವಾ ದೃಢಗೊಳಿಸಿದೆ. ಶಾಸನಾಧಾರಗಳು ಮಾತ್ರವಲ್ಲ, ಸಮಕಾಲೀನ ಸ್ಥಳನಾಮಗಳು, ಜಾತಿ – ಬುಡಕಟ್ಟುಗಳು, ಜಾನಪದ, ಪ್ರವಾಸಿಗರ ಬರಹಗಳು, ಮರಾಠಿ ಕೊಂಕಣಿಗಳು ಸ್ವೀಕರಿಸಿರುವ ಹಳಗನ್ನಡ, ನಡುಗನ್ನಡ ಪದಗಳು, ಭೂಪಟಗಳು ಇವೇ ಮೊದಲಾದುವನ್ನೂ ಇಲ್ಲಿ ಆಕರಗಳನ್ನಾಗಿ ಬಳಸಿಕೊಳ್ಳಲಾಗಿದೆ.

ಈ ಕೃತಿ ಬರೀ ಕನ್ನಡದ ಅಭಿಮಾನದಿಂದ ಮೂಡಿಬಂದದಲ್ಲ, ಇದರ ಹಿಂದೆ ವಸ್ತುನಿಷ್ಠ ದೃಷ್ಟಿಕೋನವಿದೆ. ಎರಡು ವರ್ಷಗಳ ನಿರಂತರ ಶ್ರಮ ಇದೆ. ಒಟ್ಟಾರೆ, ಕನ್ನಡಿಗರು ಸ್ವಾಭಿಮಾನಿಗಳಾಗಬೇಕು. ಅದಕ್ಕೆ ಅವರು ಸ್ವಾಭಿಮಾನವನ್ನು ತಮ್ಮ ಗತ ಇತಿಹಾಸದ ಅರಿವಿನಿಂದ ಮೂಡಿಸಿಕೊಳ್ಳುವ, ಬಳಸಿಕೊಳ್ಳುವ ಸ್ಪೂರ್ತಿ ಪಡೆಯುವ ಮನೋಧರ್ಮ ಇನ್ನೂ ಮೇಲಾದರೂ ರೂಢಿಸಿಕೊಳ್ಳಬೇಕಾಗಿದೆ. ಮೂಲಕನ್ನಡ ನಾಡು ಇಂದಿನ ನಾಡಿನ ಗಿಂತ ಕನಿಷ್ಠ ಮೂರರಷ್ಟು ದೊಡ್ಡದಿತ್ತು ಎಂಬ ಸಂಗತಿ ಕನ್ನಡಿಗರಿಗೆ ಹೆಮ್ಮೆಯ ವಿಷಯ, ಕನಿಷ್ಠ ಮೂರನೇ ಎರಡರಷ್ಟು ಭಾಗವನ್ನು ಇಂದಿನ ಕರ್ನಾಟಕ ಕಳೆದುಕೊಂಡಿದೆಯೆಂಬ ಸಂಗತಿ ಯಾತನೆಯ ವಿಷಯ, ಆ ಯಾತನೆ ಈಗ ಉಳಿದಿರುವಷ್ಟನ್ನಾದರೂ ಉಳಿಸಿಕೊಳ್ಳಬೇಕೆಂಬ ಸಾತ್ವಿಕ ಚಲವನ್ನು ಮೂಡಿಸಬೇಕೆಂಬ ಪರೋಕ್ಷ ಆಶಯ, ಅಪಾರ ಕಳಕಳಿ ಈ ಕೃತಿಯ ಹಿನ್ನೆಲೆಯಲ್ಲಿದೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನದ ಹಕ್ಕೊತ್ತಾಯಕ್ಕೆ ಮತ್ತು ಆ ಕುರಿತು ಮುಂದಿನ ಯೋಜನೆಗಳಿಗೆ ಈ ಕೃತಿ ಬಹುಮುಖ್ಯ ಆಕರವಾಗುತ್ತವೆ; ಪರಾಮರ್ಶನ ಬಿಂದುವಾಗುತ್ತದೆ.