ನೃಪತುಂಗ ದೇವಾನುಮತಮಪ್ಪ ಕವಿರಾಜಮಾರ್ಗದಲ್ಲಿ ಕನ್ನಡ ನಾಡಿನ ವ್ಯಾಪ್ತಿಯನ್ನು ಹೇಳಿದ್ದಾಗಿದೆ. “ಕಾವೇರಿಯಿಂದ ಆ ಗೋದಾವರಿ ವರಂ ಇರ್ದನಾಡು” ಈ ಉಕ್ತಿಯಂತೆ ಕನ್ನಡನಾಡು ಉತ್ತರದ ಗೋದಾವರಿಯಿಂದ ದಕ್ಷಿಣಕ್ಕೆ ಕಾವೇರಿ ನದಿಯವರೆಗೆ ಹಬ್ಬಿತ್ತು. ಈ ಹೇಳಿಕೆ ಶಂಬಾ ಅವರಿಗೆ ಕಣ್ಮರೆಯಾದ ಕರ್ನಾಟಕ ಹುಡುಕಾಟಕ್ಕೆ ಪ್ರೇರಣೆ ನೀಡುತ್ತದೆ. ಅವರ ಮನಸ್ಸಿನಲ್ಲಿ ಕೆಲವು ಮೂಲಭೂತ ಸಮಸ್ಯೆಗಳು ರೂಪುತಾಳುತ್ತವೆ.

‘ಕನ್ನಾಡು’, ‘ಕನ್ನಾಟ’ ವೆಂಬುದು ಎಂದಾದರೂ ಎಲ್ಲಿಯಾದರೂ ಪ್ರತ್ಯೇಕ ಪ್ರಾಂತವಾಗಿದ್ದಿತೆ, ಇಲ್ಲವೇ? ಮರ್ಹಾಟಕಕ್ಕೂ ಕನ್ನಾಟಕ್ಕೂ ಏನಾದರೂ ಸಂಬಂಧವು ಇದ್ದಿತೆ, ಇಲ್ಲವೆ? ಮರ್ಹಾಟದಂತಹ ಆ ದೂರಿನ ನಾಡಿನ ಬ್ರಾಹ್ಮಣರ ಮನೆಗಳಲ್ಲಿಯೂ ‘ಗಡಿಗೆ ನೀರು’, ‘ಕೈವಾರ’, ‘ಗುಡಿತೋರಣ’, ‘ದಂಡೆ ಬಾಸಿಂಗ’ ಈ ಬಗೆಯ ಅಚ್ಚಗನ್ನಡದ ವಾಕ್ಪ್ರಚಾರಗಳೂ ರೀತಿಗಳೂ ಹೆಗೆ ಸೇರಿದವು? ಮಿಥಿಲೆ, ನೇಪಾಳ, ಬಂಗಾಳಗಳಲ್ಲಿ ರಾಜ್ಯ ಸ್ಥಾಪಿಸಿದ ‘ಕರ್ಣಾಟಕ ಕ್ಷತ್ರಿಯರೂ’ ಅವರ ಕೆಚ್ಚೆದೆಯ ದಂಡಾಳುಗಳೂ ಯಾರು? ಎಲ್ಲಿಯವರು? ದಕ್ಷಿಣಾಪಥದಲ್ಲೆಲ್ಲ ಕರ್ಣಾಟಕ ವಿಜಯ ಧ್ವಜವನ್ನು ಮೆರೆಯಿಸಿ ಉತ್ತರದವರಿಗೂ ತಮ್ಮ ಶೌರ್ಯ, ಧೈರ್ಯದ ಮಾದರಿಯನ್ನು ತೋರಿಸಿದ ಕನ್ನಡ ನಾಡಿನ ಆ ಗಂಡು ಕುಲವು ಆವುದು? ಅದು ಈಗ ಆವ ಜನಾಂಗ? ಆಂಧ್ರ ಮತ್ತು ಕರ್ಣಾಟಗಳ ಸಂಬಂಧಗಳೇನು? ದ್ರಾವಿಡ ಶಬ್ದದ ವ್ಯಾಪ್ತಿ, ಅತಿವ್ಯಾಪ್ತಿಗಳಿಗೆ ಏನಾದರೂ ಎಲ್ಲೆ ಕಟ್ಟುಗಳುಂಟೆ? ಈಗಿನ ಕರ್ಣಾಟದ ಜನಾಂಗಗಳಲ್ಲಿ ಪರಸ್ಪರರೊಳಗೆ ಆತ್ಮೀಯ ಭಾವವು ಉಂಟಾಗುವಂತಹ, ತಾವೆಲ್ಲ ಒಂದು ನಾಡಿನ ಒಂದೇ ರಾಷ್ಟ್ರಪುರುಷರ ಅವಿಭಾಜ್ಯ ಅವಯವಗಳು ಎಂಬ ನೇರನಂಬುಗೆಯುಂಟಾಗುವಂತಹ ಸಂಬಂಧಗಳು, ಋಣಾನುಬಂಧಗಳು, ಐತಿಹಾಸಿಕ ಪರಂಪರೆಗಳು ಏನಾದರೂ ಇವೆಯೇ? ಇಲ್ಲವೆ ಸುಮ್ಮನೆ ಕನ್ನಡ ನಾಡು ಒಂದು, ನಾವೆಲ್ಲ ಒಂದು ಎಂದು ಹೇಳುವುದೇ? ಇಂತಹವೆಲ್ಲ ಪ್ರಶ್ನೆಗಳು ಅವರನ್ನು ಕಾಡತೊಡಗಿದವು. ಅದಕ್ಕೆ ಶಂಬಾ ಅವರು ಭಾಷೆ, ದೇವತಾಶಾಸ್ತ್ರ, ಪ್ರತಿಮಾಶಾಸ್ತ್ರ, ಪುರಾಣಶಾಸ್ತ್ರ, ಜಾತಿ ಬುಡಕಟ್ಟುಗಳು, ಸ್ಥಳನಾಮಗಳು ಈ ಆಕರಗಳನ್ನು ಬಳಸಿಕೊಳ್ಳುತ್ತಾರೆ. ಅವರು ಕಣ್ಮರೆಯಾದ ಕರ್ನಾಟಕ ಹುಡುಕುವ ಬಗೆ ಹೀಗಿದೆ:

೧. ನರ್ಮದಾ ತೀರದಲ್ಲಿ ಇದ್ದ ಕನ್ನಡ ಗವಳಿಗಳ ವರ್ಚಸ್ಸು ಅಷ್ಟು ಇಷ್ಟಲ್ಲ. ಗುಜರಾತ ಮಾಳವಗಳಲ್ಲಿ ಹಬ್ಬಿ ಉತ್ತರಕ್ಕೆ ಈ ತಂಡಗಳು ಗಂಗಾ ಯಮುನಾ ತೀರದಲ್ಲಿಯೂ ನೆಲಸಿದ್ದುವೆಂದು ವಿಮರ್ಶಿಸಿ ನೋಡಿದ ಹಾಗೆ ಹೆಚ್ಚು ಹೆಚ್ಚು ಮನವರಿಕೆಯಾಗುತ್ತಿದೆ. ಹಾಲಿನ ಪದಾರ್ಥಗಳನ್ನು ಮಾಡಿ ಮಾರುವ ವರ್ತಕನಿಗೆ ಉತ್ತರ ಹಿಂದೂಸ್ಥಾನ ಖಾನದೇಶ ವರ್ಹಾಟಗಳಲ್ಲೆಲ್ಲ ಹಾಲಯ್ಯ (ಹಾಲುವಾಯಿ) ಎಂಬ ಹೆಸರಿದೆ! ಕನ್ನಡ ಗೌಳಿಗಳ ಒಂದು ಕಾಲದ ಕೀರ್ತಿಧ್ವಜದಂತೆ ಇರುವುದು ಗವಳಿಏರಿ ಗ್ವಾಲೇರಿ ಇಂದಿಗೂ ಇದು ತನ್ನ ಹಳೆಯ ಕಥೆಯನ್ನು, ಕೇಳಬೇಕೆದಿಚ್ಛೆಯಿದ್ದವರಿಗೆ, ಹೇಳಲು ಸಿದ್ಧವಿದೆ. ಮರ್ಹಾಟರು ‘ಗವಳಿಗಿರಿ’ ಗ್ವಾಲೇರಿ ಎಂದು ಅದರ ವ್ಯುತ್ಪತ್ತಿಯನ್ನು ಹೇಳುವರು. ಆದರೆ, ಗುಡ್ಡಕ್ಕೆ ‘ಏರಿ’ ಎಂದು ಒಂದು ಕಾಲಕ್ಕೆ ಕನ್ನಡದಲ್ಲಿ ಅರ್ಥವಿದ್ದುದು ಮಹಾರಾಷ್ಟ್ರದಲ್ಲಿರುವ ಕಾನ್ಹೇರಿ – ಕೃಷ್ಣಗಿರಿ, ಆಂಜನೇರಿ (ನಾಸಿಕದ ಹತ್ತಿರ), ಶಿವನೇರಿ (ಇಲ್ಲಿ ಶಿವನ + ಏರಿದನಂದಿರುವುದರಿಂದ ಕನ್ನಡ ಷಷ್ಠೀ ವಿಭಕ್ತಿಯ ಕೈಯೊಳಗಿಂದ ಯಾರಿಗೂ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ). ಇವುಗಳಲ್ಲೆಲ್ಲ ಗೋಚರವಾಗುವ ಕನ್ನಡ ‘ಏರಿ’ ಯೆ ಗ್ವಾಲೇರಿಯಲ್ಲಿಯೂ ಉಂಟೆಂದು ಹೇಳುವುದು ತಪ್ಪಾದೀತೆ? ಉತ್ತರಕ್ಕೆ ಮಥುರೆಯವರೆಗೆ ಪ್ರಖ್ಯಾತರಾದ ಕನ್ನಡ ಗವಳಿಗಳ ಮೂಲಸ್ಥಾನವು ಖಾನದೇಶ ನಾಸಿಕಗಳಿಂದ ಹೊರಗೆ ದೂರ ಎಲ್ಲಿಯೂ ಇರಲಾರದು. ಗಂಗಾ ಯಮೂನೆಗಳವರೆಗೆ ತಮ್ಮ ವರ್ಚಸ್ಸನ್ನು ಇಟ್ಟುಕೊಳ್ಳಬೇಕಾದರೆ ಅವರ ಮೂಲಸ್ಥಾನವು ನೀಲಗಿರಿ ಅಥವಾ ಅದರ ನೇರೆಹೊರೆಯ ಅಷ್ಟು ದೂರದ ಯಾವ ಸೀಮೆಯಲ್ಲಿಯೂ ಇರುವುದು ಅವಶ್ಯ ಈ ತರ್ಕಪ್ರಮಾಣಕ್ಕಿಂತಲೂ ನಾಸಿಕದ ಹತ್ತಿರ ಇರುವ ಪ್ರಖ್ಯಾತ ‘ಗೋವರ್ಧನ ಗಿರಿಗಳು’ ಇದನ್ನು ಇನ್ನಿಷ್ಟು ಪುಷ್ಟೀಕರಿಸುತ್ತವೆ. ೧೫೦೦ – ೧೮೦೦ ವರುಷಗಳ ಹಿಂದೆ ಈ ಗೋವರ್ಧನ ಗಿರಿಗಳಿಗೆ ಇದ್ದ ಮಹತ್ವವು ಅಲ್ಲಿರುವ ಸಾತವಾಹನರ ಕಾಲದ ಗವಿಗಳಿಂದಲೂ ಶಿಲಾಶಾಸನಗಳಿಂದಲೂ ಪ್ರತ್ಯಕ್ಷ ಆ ಪರ್ವತದ ‘ಗೋವಧನ – ಗೋವರ್ಧನ’ ಎಂಬ ಹೆಸರಿನಿಂದಲೂ ಚೆನ್ನಾಗಿ ವ್ಯಕ್ತವಾಗುತ್ತದೆ. ಈ ಗವಿಗಳಲ್ಲಿ ಕೊರೆದಿರುವ ಚಿತ್ರಗಳಲ್ಲಿ ಅವು, ಎತ್ತುಗಳಿಲ್ಲದ ಸ್ಥಳಗಳೇ ಇಲ್ಲವೆನ್ನಬಹುದು. ಹಿಂದಕ್ಕೆ ಈ ಗುಡ್ಡಗಳು ಕನ್ನಡ ಗೌಳಿಗಳು ‘ಗವಾಸ್ಪದಗಳು’ ತುರುಮುಂದೆಗಳು ಆಗಿದ್ದುವೆಂದು ಸಹಜವಾಗಿ ಹೇಳಬಹುದು. ಇದೇ ವಿಭಾಗದಲ್ಲಿರುವ ಇಗತಪುರಿ, ದಿಂಡೋರಿ ಮೊದಲಾದ ತಾಲೂಕುಗಳಲ್ಲಿ ಕನ್ನಡಿಗರು ಹಳ್ಳಿಹಳ್ಳಿಗೂ ನೆಲಸಿದ್ದಾರೆ, ಸುಸ್ಥಿತಿಯಲ್ಲಿಯೂ ಇರುವರಂತೆ. ಇಂದಿಗೂ ಮೂರು ನಾಲ್ಕು ಮನೆಯ ಕನ್ನಡಿಗರು ಕೂಡಿ ಐದೈದನೂರು ಆಕಳು ಎತ್ತುಗಳನ್ನೂ ಆಡುಕುರಿಗಳನ್ನೂ ಸಾಕಿಕೊಂಡಿರುವರು’ ಎಂದು ನಾಸಿಕ ಗ್ಯಾಝಿಟಿಯರು ಹೇಳುತ್ತಿದೆ.

೨. ಕನ್ನಡದಲ್ಲಿರುವ ಗೋವುಗಳು ಎಂಬರ್ಥದ ‘ತುರು’ ಶಬ್ದವು ಸಮೂಹರ್ಥಕ. ಆಕಳು, ಬಹುವಚನಾಂತರವಿದ್ದರೂ ಏಕವಚನದಂತೆ ಉಪಯೋಗಿಸಲ್ಪಡುವುದು. ಇವೆರಡೂ ಶಬ್ದಗಳು ಸಹ ಕನ್ನಡಿಗರು ಒಂದು ಅವು ಎಂದೂ ಆಗುತ್ತಿದ್ದಿಲ್ಲ. ಇವರಲ್ಲಿರುವುದು ತುರು(ಹಿಂಡು)ಗಳು ಆಕಳು, ಎಂದು ಈ ಶಬ್ದಗಳು ಸಹ ತಮ್ಮ ಪ್ರಾಚೀನ ಕಥೆಯನ್ನು ಹೇಳುತ್ತಲಿವೆ. ಗೋತಮಿನದಿ (ಗೋದಾವರಿಯ ಇನ್ನೊಂದು ಹೆಸರು) ಗೋವರ್ಧನ ಪರ್ವತ ಹತ್ತಿರದಲ್ಲಿ, ‘ಕನ್ನಡಿಗರು’ ಎಂದೂ ಈಗಲೂ ದೇಶವಾಚಕ ಹೇಸರನ್ನು ಧರಿಸಿರುವ ಗೌಳಿಗಳು ಅದರ ನೆರೆಹೊರೆಯಲ್ಲಿ! ಅಲ್ಲದೆ, ಈ ನಾಡಿಗೆ ಗೋಪರಾಷ್ಟ್ರವೆಂದೂ ಹೆಸರಿದ್ದಿತಂತೆ! ಇದೆಲ್ಲವು ಕಾಕತಾಳೀಯನ್ಯಾಯವೇ? ಈ ನಾಲ್ಕುಮಾತುಗಳನ್ನು ಒಮ್ಮೆಲೇ ಸಮಾಲೋಚಿಸಿದರೆ ‘ಇದುವೇ ಕನ್ನಡ ನಾಡು’, ‘ಇದೆ ಇಕೊ ಕನ್ನಡ ತಾಯ ತವರ್ಮನೆ’ ಎಂದು ಹಿಗ್ಗುಹಿಡಿಸಲಾರದೆ ಉದ್ಘೋಷಿಸುವ ಹುಮ್ಮಸ್ಸು ಉಂಟಾದರೆ ಸೋಜಿಗವೇನು? ಎಂದು ಕನ್ನಡ ಗೋವಳರ ಧೈರ್ಯ ಶೌರ್ಯ ಗಳನ್ನು ಯುಗಯುಗಕ್ಕೂ ಸಾರಿ ಹೇಳುವುದಕ್ಕೆ (ಕಿವಿಯಿದ್ದು ಕೇಳುವವರಿಗೆ, ಕಣ್ಣಿದ್ದು ನೋಡುವ ಇಚ್ಛೆಯಿದ್ದವರಿಗೆ ಮಾತ್ರ) ಚಳಿ ಮಳೆಗಳನ್ನು ಲೆಕ್ಕಿಸದೆ ನಿಂತಿರುವ ವೀರಗಲ್ಲುಗಳಿಗೆ ಈ ನಾಡಿಯಲ್ಲಿಯೂ ಕೊರತೆಯಿಲ್ಲ.

೩. ಕುರುಬರೂ ಮಲೆಯರೂ ಮಧ್ಯಪ್ರಾಂತದಲ್ಲಿ ಇನ್ನೂ ಇದ್ದಾರೆ. ಇವರ ಭಾಷೆಯಲ್ಲಿ ಹಳಗನ್ನಡ ಸರ್ವನಾಮಗಳಿವೆ. ಕರ್ನಾಟಕದಿಂದ ಬಂದವರು ಇವರು. ನರ್ಮದಾ ನದಿಯನ್ನು ದಾಟಿ ಬಂದರಂತೆ ಈ ಸ್ಥಳಕ್ಕೆ. ನಡುವೆ ಗೋದಾವರಿ ಸಿಕ್ಕಲಿಲ್ಲ. ಆದ್ದರಿಂದ ಗೋದಾವರಿಯ ಉತ್ತರಕ್ಕೆ ಕರ್ಣಾಟ. ನೀಲಗಿರಿಯ ನುಡಿಗೂ ಇವರ ನುಡಿಗೂ ಸಂಬಂಧ ಇದೆ. ಗೊಲ್ಲರು, ಹೊಲೆಯರು, ಕುರುಬರು ವರ್ಹಾಡ ನಾಗಪೂರ ಚಾಂಡನಿವಾಸಿಗಳು. ಇವರ ನುಡಿ ಬಿಜಾಪುರದ ಕನ್ನಡವನ್ನು ಹೋಲುತ್ತಿದೆ. ಇವರ ಭಾಷೆಗೂ ನೀಲಗಿರಿಯ ಬಡಗರ ಮಾತಿಗೂ ಸಾಮ್ಯ ಇರುವುದರಿಂದ ಬಡಗರು ಈ ಪ್ರದೇಶಗಳಿಂದ ಒಂದಾನೊಂದು ಕಾಲದಲ್ಲಿ ಬಂದು ನೀಲಗಿರಿಯಲ್ಲಿ ನೆಲಸಿರಬೇಕು. ಹಳಬರು ಅಥವಾ ಹಳೆಪೈಕರು ವರ್ಹಾಡ ಮಧ್ಯಪ್ರಾಂತಗಳಲ್ಲಿ ಸುಮಾರು ಒಂದು ಲಕ್ಷ ಜನರಿದ್ದಾರೆ. ಈಗ ಇವರ ಹಳಬಿ ಭಾಷೆಯೆಂಬೊಂದು ಮಿಶ್ರಭಾಷೆಯನ್ನು ಆಡುತ್ತಿದ್ದಾರೆ. ಬನವಾಸಿ ತುಳುನಾಡುಗಳಲ್ಲಿರುವ ಈ ಪಂಗಡದವರು ಕಲ್ಬುರ್ಗಿಯಿಂದ ಬಂದವರೆಂದು ಹೇಳಿಕೊಳ್ಳುವುದರಿಂದ ಹಿಂದಿನ ಕಾಲಕ್ಕೆ ಇವರ ಮಾತು ಕನ್ನಡವೇ ಆಗಿತ್ತು. ಆದರೆ ವಾಸ್ತವವಾಗಿ ಇವರು ಮಧ್ಯಪ್ರಾಂತಕ್ಕೆ ಸೇರಿದವರು. ಹುಲಿಯಯ್ಯನ ಆರಾಧನೆ ಇವರಲ್ಲಿದೆ. ಪ್ರಾಚೀನ ಕರ್ಣಾಟ ಆ ಪ್ರದೇಶ ಕನ್ನಡಿಗರು ಇವರು ಖಾನ್ದೇಶ ನಾಸಿಕಗಳಲ್ಲಿರುವರು. ಅಲ್ಲಿ ಆಳಿದ ರಾಜರು ಗೋವಳರು ಅಥವಾ ಗವಳಿಗರು ಕನ್ನಡದವರೇ. ಗುಜರಾತ ಮಾಳವಗಳಲ್ಲಿಯೂ ಗಂಗಾ ಯಮುನಾ ತೀರಗಳಲ್ಲಿಯೂ ಇವರಿದ್ದರು. ಅಲ್ಲದೆ ಈ ಪ್ರಾಂತಗಳಲ್ಲಿ ಅನೇಕ ವೀರಗಲ್ಲುಗಳಿವೆ. ನಾಸಿಕ ಜಿಲ್ಲೆಯ ಶಿವರ ಗ್ರಾಮದಲ್ಲಿಯೂ ಚೌಸಾಲೆಯಲ್ಲಿಯೂ ಅವು ಹೇರಳವಾಗಿವೆ. ಮರಾಠರಲ್ಲಿ ಬಹುಶಃ ಇವನ್ನು ನೆಡುವ ಪದ್ಧತಿ ಇಲ್ಲ. ಕನ್ನಡಿಗರ ವಿಶಿಷ್ಟ ಪದ್ಧತಿ ಇದು. ಅಲ್ಲದೆ ಕುಣಬಿ, ಕೋಳಿ, ವಂಜಾರಿಗಳು ಇವರು ಮರಾಠರಲ್ಲ ಇವನ್ನು ಈಗಲೂ ಪೂಜೆ ಮಾಡುತ್ತಾರೆ. ಆದ್ದರಿಂದ ಆ ಪ್ರದೇಶಗಳಲ್ಲಿ ಪ್ರಾಚೀನ ಕಾಲದಲ್ಲಿ ಕನ್ನಡಿಗರು ಇರಲೇಬೇಕು. ಗೋದಾವರಿಯ ಮೇಗಡೆಯ ನಾಡಿನಲ್ಲಿರುವ ಕುರುಬರು, ಮಲೆಯರು, ಹೊಲೆಯರು, ಹಳಬರು, ಕನ್ನಡಿಗರು (ಗೋವಳರು) ಇವಿಷ್ಟೆ ಜನಾಂಗಗಳಲ್ಲ. ಸ್ವಲ್ಪ ಆಳವಾಗಿ ನೋಡಿದರೆ ಕನ್ನಡಕ್ಕೆ ಹತ್ತಿರದವರೆನಿಸುವ ಇನ್ನೂ ಹಲವು ಜಾತಿಬಣಗಳು ಅಲ್ಲಿ ನೆಲೆಯಾಗಿವೆ.

೪. ಬಿಲ್ಲವರು ಇವರಲ್ಲಿ ಪ್ರಮುಖರು, ಖಾನದೇಶ, ಗುಜರಾತಗಳಲ್ಲಿ ಲಕ್ಷಾವಧಿ ಜನಗಳಿದ್ದಾರೆ. ಭಿಲ್ಲರೆಂದು ಅಲ್ಲಿ ಹೆಸರು. ಆದರೆ, ಇದು ‘ಬಿಲ್ಲು’ ಶಬ್ದದಿಂದ ಆದ ‘ಬಿಲ್ಲವ’ ಎಂಬುದರ ಸಂಸ್ಕೃತೀಕರಣವೆಂದು ಸಾಮಾನ್ಯವಾಗಿ ಎಲ್ಲರೂ ಒಪ್ಪುವರು. ಮದ್ದುಗುಂಡುಗಳು ಹುಟ್ಟುವ ಮೊದಲು ದಂಡಿನಲ್ಲಿ ಬಿಲ್ಲಾಳುಗಳಿಗಿದ್ದ ಮಹತ್ವವು ಅಷ್ಟಿಷ್ಟಲ್ಲ. ಬಿಲ್ಲವರ ಎದೆಗಾರಿಕೆಯು ಬ್ರಿಟಿಷ ದಳಪತಿಗಳನ್ನು ಬೆರಗುಗೊಳಿಸಿದೆ. ರಜಪೂತರಿಗೆ ಮುಸಲ್ಮಾನರು ಮೊಗಲರುಗಳ ವಿರುದ್ಧ ಹೊರಾಡುವುದರಲ್ಲಿ ತುಂಬಾ ನೆರವಾದವರು ಈ ಬಿಲ್ಲವರೇ. ರಜಪೂತರ ಶೌರ್ಯ ಪರಾಕ್ರಮಗಳ ಅಜರಾಮರ ಕೀರ್ತಿಗೆ ಈ ಬಿಲ್ಲವರ ಪಡೆಯೇ ಮೂಲಾಧಾರವು. ‘ಗಂಗಾವಾರಿಧಿಯೊಳ್ ತುರಂಗಮಂ ಮೀಯಿಸಿದ’ ಚಾಳುಕ್ಯ, ರಾಷ್ಟ್ರಕೂಟಭೂಪತಿಗಳ ‘ಕರ್ಣಾಟಬಲ’ ದಲ್ಲಿ ಬಿಲ್ಲವರಿಗೆ ಪ್ರಧಾನವಿರನೇಕೆಂದು ತೋರುತ್ತದೆ. ಆದರೆ, ತೋಪು ತುಬಾಕಿಗಳ ಅವತಾರವಾದ ಬಳಿಕ ಬಿಲ್ಲವರ ಕಾಲವಾಯಿತು. ಬಿಲ್ಲವರು ತಮ್ಮ ಹೊಟ್ಟೆಯ ಪಾಡಿಗಾಗಿ ನೆರೆಹೊರೆಯ ಜನಗಳಿಗೆ ಕಾಡಿಸುವ, ಪೀಡಿಸುವ ಹೋರೆಗೆ ಆರಂಭಿಸಿದ್ದರೆ. ಅದರಲ್ಲಿ ಅಸ್ವಭಾವಿಕವೇನೂ ಇಲ್ಲ. ಅವರ ಜಾತಿಯು ಜನಗಳಿಗೆ ‘ಬೇಡ’ ಆಯ್ತು. ಬೇಡ ಪಡೆಯು ತೋರಿದ ಧೈರ್ಯ ಶೌರ್ಯಗಳನ್ನು ಅರಿತುಕೊಳ್ಳಲಿಚ್ಛಿಸುವವರು ‘ಸುರಪುರದ ನಾಯಕನ’ ಚರಿತ್ರೆಯನ್ನು ಓದಬೇಕು ಹಾಗೂ ಚಿತ್ರದುರ್ಗದ ಪಾಳೆಯಗಾರರ ಇತಿಹಾಸವನ್ನು ನೋಡಬಹುದೆಂದು ಶಂಬಾ ಸೂಚಿಸುತ್ತಾರೆ.

ಹಳಬರಂತೆ ಬಿಲ್ಲವರೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಬಂದು ನೆಲೆಯಾಗಿದ್ದಾರೆ. ದಕ್ಷಿಣ ಕನ್ನಡ ದಲ್ಲಿ ‘ಬಿಲ್ಲವರು’ ಎಂಬ ಹೆಸರಿನ ಸಮಾಜವೇ ಇದೆ. ವಿಪರೀತಕಾಲ! ಖಾನದೇಶದಲ್ಲಿ ಡಾಂಗ (ಗುಡ್ಡ) ನಾಡು, ಮೇವಾಸಿ ಎಂಬ ಎರಡು ಬಿಲ್ಲವರ ಸಂಸ್ಥಾನಗಳಿವೆ. ಕೋಳ (ಕೋತ?) ಜಾತಿಯ ಮನೆತನದವರು ಇತ್ತಕಡೆಗೆ ಜವ್ಹಾರ ಎಂಬಲ್ಲಿ ಅರಸುಗೈಯುತ್ತಿರುವರು. ಈ ಬಿಲ್ಲವರ ಮನೆ ಮಾತು ಕನ್ನಡವೆಂದು ಶಂಬಾ ಗುರುತಿಸಿದ್ದಾರೆ.

೫. ಕುಣಬಿಯು ಕನ್ನಡ ಕುರುಂಬನ ಮರ್ಹಾಟಿ ಅವತಾರ. ಕುರಿಗಾರಿಕೆಯನ್ನು ಬಿಟ್ಟು ಕುಳನಾಗಿ ಒಕ್ಕಲನಾಗಿ ನಿಂತು ಹೊಲಮನೆ ಮಾಡಿಕೊಂಡಿರ ಹತ್ತಿದ ಮೇಲೆ ಕುರುಂಬನು ಮಹಾರಾಷ್ಟ್ರದಲ್ಲಿ ಕುಣಬಿಯಾದನು! ಕುಣಬಿ ಮಾಜಲ ಮರ್ಹಾಟಾ ಚಾಹಲಾ ಕುಣಬಿಯು ಮಲೆತು ಮರ್ಹಾಟನಾದ ಎಂಬ ಗಾದೆಯು, ಇವರು ಮರ್ಹಾಟರಿಂದ ಭಿನ್ನರೆಂಬುದನ್ನು ಸೂಚಿಸುತ್ತದೆ. ಮರ್ಹಾಟರು ಇವರೊಡನೆ ಊಟ ಉಡಿಗೆಯನ್ನಂತೂ ಸರಿಯೆ ಮದುವೆಗಳನ್ನೂ ಮಾಡಿಕೊಳ್ಳುವರು. ಮರ್ಹಾಟರು ಆರ್ಯದ್ರಾವಿಡರು ಮಿಶ್ರದ್ರಾವಿಡರು ಎಂದು ಆ ಜಾತಿಯವರೂ ವಿದ್ವಾಂಸರು ಸಂಶೋಧಕರೂ ಆದ ಶ್ರೀ ಭಾಸ್ಕರರಾವ ಜಾಧವ ಅವರೇ ಹೇಳುತ್ತಾರೆ. ಮದುವೆ ಕಾಲಕ್ಕೆ ಗಿಡಮರಗಳಿಂದ ಬಣಗಳನ್ನು ಹೇಳುವ (ಕುರಿಗಾರರೆ ಮೊದಲಾದವರ ಹಾಗೆ) ಮರ್ಹಾಟರಲ್ಲಿಯೂ ನಡತೆಯಿದೆಯೆಂದು ಜಾಧವರಾಯರು ಹೇಳುತ್ತಾರೆ. ಇದು ದ್ರಾವಿಡರಿಂದ ತಮ್ಮಲ್ಲಿ ಸೇರಿದ ನಡತೆಯೆಂದು ಜಾಧವರಾಯರು ಹೇಳುತ್ತಾರೆ. ಮದುವೆ ಕಾಲಕ್ಕೆ ಗಿಡಮರಗಳಿಂದ ಬಣಗಳನ್ನು ಹೇಳುವ (ಕುರಿಗಾರರೆ ಮೊದಲಾದವರ ಹಾಗೆ) ಮರ್ಹಾಟರಲ್ಲಿಯೂ ನಡತೆಯಿದೆಯೆಂದು ಜಾಧವರಾಯರು ಹೇಳುತ್ತಾರೆ. ಇದು ದ್ರಾವಿಡರಿಂದ ತಮ್ಮಲ್ಲಿ ಸೇರಿದ ನಡತೆಯೆಂದು ಅವರ ಅಭಿಪ್ರಾಯ. ಮರ್ಹಾಟರು ತಮ್ಮ ವರ್ಗದ ಹೊರತು ಹೊರಗಿನವರೊಡನೆ ಈಗಲೂ ಮದುವೆ ಮಾಡಿಕೊಳ್ಳುತ್ತಿರುವ ಸಂಪ್ರದಾಯವುಳ್ಳ ಜಾತಿಗಳು ಎರಡು, ಕುಣಬಿ ಮತ್ತು ಧನಗರರು. ಆದುದರಿಂದ ಮರ್ಹಾಟರು ದ್ರಾವಿಡರೊಡನೆ ಮಿಶ್ರರಾದರು ಎಂದು ಶ್ರೀ ಜಾಧವರಾಯರು ಕಂಡುಹಿಡಿದಿರುವ ಆ ದ್ರಾವಿಡ ವರ್ಗದವರು, ಕನ್ನಡ ಕುಣಬಿ ಮತ್ತು ಧನಗರರೇ ಇರಬೇಕೆಂದು ಊಹಿಸಲು ಶ್ರಮಪಡಬೇಕಾದುದಿಲ್ಲ.

೬. ದನಗರನೆಂಬುದು ಕನ್ನಡ ಕುರುಬನ ಮರ್ಹಾಟಿ ಹೆಸರು. ಕುರಿಗಾರಿಕೆಯನ್ನು ಬಿಟ್ಟು ದನಕರಗಳನ್ನು ಸಾಕಿಕೊಂಡಿರಲಾರಂಭಿಸಿದ ಮೇಲೆ ಆ ಕುರುಬನ ‘ತುರುಕಾರ’ ನಾದವನು, (ಗೋಧನವುಳ್ಳ) ‘ಧನಕರ’ ನಾದನು. ಕನ್ನಡಿಗರಿಗೆ ದನಗಳೇ ಧನ. ನಮ್ಮ ಕುರುಬನೇ ಧನಗಾರನೆಂಬುದಕ್ಕೆ ಮರ್ಹಾಟಿ ಭಾಷೆಯೂ ಸಾಕ್ಷಿ. ‘ದನಗರ’ ಶಬ್ದಕ್ಕೆ ಮರ್ಹಾಟಿಯಲ್ಲಿ ಕುರುಬನೆಂದೇ ಅರ್ಥವಿದೆ! ಮರ್ಹಾಟಿಗಳು ತಮ್ಮ ಹೆಣ್ಣು ಕೊಟ್ಟು ಕೊಂಡು ‘ಕುಣಬಿ’ ಗಳನ್ನೂ ‘ದನಗರ’ ರನ್ನೂ ತಮ್ಮಲ್ಲಿ ಬೆರೆಸಿಕೊಂಡು ಬಿಟ್ಟರು. ಇವರಲ್ಲಿಯೂ ಕೆಲವು ಸಂಪ್ರದಾಯವಂತರು ಮರ್ಹಾಟಗಳೊಡನೆ ಸಮರಸವಾಗದೆ ಇದ್ದುದರಿಂದ ‘ಕನ್ನಡ ಕುಣಬಿ’, ‘ಕನ್ನಡ ದನಗರ’ ರೆಂದು ಹೇಳುವ ಅವಶ್ಯಕತೆಯುಂಟಾಗಿದೆ.

೭. ಮಹಾರಾಷ್ಟ್ರದಲ್ಲಿ ನಡೆಯುವ ಬಹುಪಾಲು ಹಬ್ಬ ಹರಿದಿನಗಳು ಕನಾಟಕವುಗಳೇ ಆಗಿವೆ. ಶಂಬಾ ಹಲವು ಆಕರಗಳಿಂದ ಅವುಗಳನ್ನು ಗುರುತಿಸಿದ್ದಾರೆ.

ಹಬ್ಬಹರಿದಿನಗಳು ಅನಾದಿಕಾಲದಿಂದಲೂ ಹಬ್ಬ ಹರಿದಿನಗಳು ನಡೆದುಕೊಂಡು ಬಂದಿವೆ. ಜಗತ್ತಿನ ಎಲ್ಲಾ ಧರ್ಮಗಳಲ್ಲೂ ಹಬ್ಬ ಹರಿದಿನಗಳ ಆಚರಣೆ ಇದ್ದೇ ಇದೆ. ಜಾತ್ರೆ, ಉತ್ಸವ ಅಥವಾ ಹಬ್ಬ ಇವೆಲ್ಲ ಆಯಾಯ ಜನಾಂಗದ ಸಂಸ್ಕೃತಿಯ ಪ್ರತೀಕಗಳು. ಹಬ್ಬಗಳ ಮೂಲ ಉದ್ದೇಶ – ಆಶಯ ಏನೇ ಇರಲಿ ಅದು ಜನರ ನಂಬಿಕೆ ಹಾಗೂ ಅವರ ಧಾರ್ಮಿಕ ಶ್ರದ್ಧೆಯನ್ನು ಎತ್ತಿತೋರಿಸುತ್ತದೆ. ಪ್ರಾಚೀನ ಕಾಲದಿಂದಲೂ ಕರ್ನಾಟಕದಲ್ಲಿ ನಾನಾ ರೀತಿಯ ಉತ್ಸವಗಳು ಚಾಲ್ತಿಯಲ್ಲಿದ್ದವು ಎಂಬುದಕ್ಕೆ ನಮಗೆ ಸಿಗುವ ಮುಖ್ಯ ಆಕರಗಳೆಂದರೆ ಶಾಸನಗಳು ಮತ್ತು ಜಾತಿ – ಬುಡಕಟ್ಟುಗಳು. ಮಹಾರಾಷ್ಟ್ರದ ಕನ್ನಡ ಶಾಸನಗಳಲ್ಲಿಯೂ ಗ್ಯಾಝಟಿರುಗಳಲ್ಲಿಯೂ ಈ ಹಬ್ಬ ಹುಣ್ಣಿಮೆಗಳ ಉಲ್ಲೇಖ ದಾಖಲಾಗಿದೆ. ಗ್ರಹಣ, ಸಂಕ್ರಾಂತಿ, ನೂಲಹುಣ್ಣಿಮೆ ಮೊದಲಾದ ಸಂದರ್ಭದಲ್ಲಿ ದೇವಾಲಯಗಳಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತಿದ್ದವು. ಊರಿನ ಸಮಸ್ತ ಜನರು ಇದರಲ್ಲಿ ಸಂಭ್ರಮದಿಂದ ಪಾಲ್ಗೊಳ್ಳುತ್ತಿದ್ದರೆಂಬ ಅಂಶ ಸ್ಪಷ್ಟವಾಗುತ್ತದೆ.

ದೇವಾಲಯ ಅಂದೂ ಇಂದೂ ಸಾಂಸ್ಕೃತಿಕ ಕೇಂದ್ರಗಳಾಗಿ ಉಳಿದುಕೊಂಡು ಬಂದಿವೆ. ದೇವಾಲಯಗಳಲ್ಲಿ ನಡೆಯುತ್ತಿದ್ದ ಈ ಉತ್ಸವಗಳ ಖರ್ಚು ವೆಚ್ಚಕ್ಕೆ ದತ್ತಿದಾನಗಳನ್ನು ಬಿಡಲಾಗುತ್ತಿತ್ತು. ಇಂಥ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆದುಕೊಂಡು ಹೋಗಲು ರಾಜ ಮಹಾರಾಜರು ಅವರ ಸಾಮಂತರು ಇನ್ನುಳಿದ ಅಧಿಕಾರಿಗಳು ಹಾಗೂ ಸಾಮಾನ್ಯ ಜನರೂ ಅವರೊಂದಿಗೆ ಸಹಾಯಹಸ್ತ ಜೋಡಿಸಿದ್ದೂ ಇದೆ. ಉದಾ. ಕ್ರಿ.ಶ. ೧೦೪೭ ದೆಗ್ಲೂರ ತಾಲೂಕ್ಕಿನ ತಡಖೇಲ್ ಶಾಸನದಲ್ಲಿ “ಚೈತ್ರದ ಪರ್ಬ್ಬಕ್ಕೆ ಆದಿತ್ಯವಾರದ ಸಿಂಗವಟ್ಟಿಗೆ ೨ ಪವಿತ್ರದ ಪರ್ವಕ್ಕೆ ಆದಿತ್ಯವಾರದ ಸಿಂಗವಟ್ಟಿಗೆಗೆ ೨ ಚೈತ್ರದಲು ದ್ರಮ್ಮ ೧ ಪವಿತ್ರದಲು ದ್ರಮ್ಮ ೧” ಎಂದು ದತ್ತಿ ನೀಡಿದ ವಿವರ ದಾಖಲಾಗಿದೆ.

ಚೈತ್ರದ ಹಬ್ಬ: ಇದು ಚೈತ್ರಮಾಸದಲ್ಲಿ ಬರುವ ಒಂದು ಹಬ್ಬ. ಚಿತ್ರಾ ನಕ್ಷತ್ರದಲ್ಲಿ ಚಂದ್ರನಿರುವ ತಿಂಗಳಿಗೆ ಚೈತ್ರಮಾಸವೆಂದು ಹೆಸರು. ಚೈತ್ರಮಾಸವನ್ನು ಪುಣ್ಯಕಾಲವೆಂದು ಜನ ನಂಬುತ್ತಿದ್ದರು. ಇದು ಹೊಸ ಋತುವಿನ ಆರಂಭಕಾಲ. ಚೈತ್ರಮಾಸ ಚಾಂದ್ರಮಾನ ಸಂವತ್ಸರದ ಮೊದಲ ತಿಂಗಳು. ವಸಂತಾಗಮದ ತಿಂಗಳೂ ಹೌದು, ಚೈತ್ರದ ಪರ್ವವೆಂದರೆ ಚೈತ್ರಮಾಸದ ಹಬ್ಬವೆಂದೇ ಅರ್ಥ. ಇಂದಿಗೂ ಹಳ್ಳಿಗಳಲ್ಲಿ ವಸಂತೋತ್ಸವವೆಂದು ಈ ಹಬ್ಬವನ್ನು ಆಚರಿಸುತ್ತಾರೆ. ಅನೇಕ ಶಾಸನಗಳನ್ನು ಚೈತ್ರಪೂರ್ಣಿಮೆಯಂದು ಬರೆಸಿದ್ದನ್ನು ಕಾಣಬಹುದು. ಮಹಾರಾಷ್ಟ್ರದ ಅನೇಕ ಕನ್ನಡ ಶಾಸನಗಳಲ್ಲಿ ಚೈತ್ರಮಾಸದಲ್ಲಿ ಬರುವ ಈ ಹಬ್ಬದ ಉಲ್ಲೇಖವಿದೆ. ಅಂದು ಈ ಹಬ್ಬವನ್ನು ವಿಶೇಷ ರೀತಿಯಿಂದ ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಿರಬೇಕು. ಆದ್ದರಿಂದ ದೇವಾಲಯಗಳಿಗೆ ದಾನ ನೀಡುವಾಗ ಅಲ್ಲಿ ಆಚರಿಸಲಾಗುವ ಈ ಚೈತ್ರದ ಹಬ್ಬವನ್ನು ಲಕ್ಷ್ಯದಲ್ಲಿಡಲಾಗುತ್ತಿತ್ತು. ಹಬ್ಬದ ಖರ್ಚಿಗೆ ಇಂತಿಷ್ಟು ಎಂದು ಈ ಶಾಸನಗಳಲ್ಲಿ ನಿಗದಿಪಡಿಸಿದ್ದನ್ನು ಕಾಣಬಹುದು.

ಪವಿತ್ರದ ಹಬ್ಬ: ಶಾಸನಗಳಲ್ಲಿ, ಗಾಝಿಟರುಗಳಲ್ಲಿ ಈ ಹಬ್ಬವನ್ನು ‘ಪವಿತ್ರದ ಪರ್ವ’ (ಕೆಲವು ಕಡೆ ಚೈತ್ರ ಪೈತ್ರ) ಎಂದು ಕರೆಯಲಾಗಿದೆ. ಇದು ನೂಲ ಹುಣ್ಣಿಮೆಯ ಹಬ್ಬ. ಶ್ರಾವಣ ಶುದ್ಧ ಹುಣ್ಣಿಮೆ (ಪೌರ್ಣಿಮೆ) ಎಂದು ದೇವರಿಗೆ ಜನಿವಾರ ತೊಡಿಸುವ ಉತ್ಸವ ಇದಾಗಿತ್ತು. ನೂಲಹುಣ್ಣಿಮೆ ಎಂದು ಈ ಹಬ್ಬವನ್ನು ಇಂದಿಗೂ ಆಚರಿಸಲಾಗುತ್ತಿದೆ. ಕ್ರಿ. ಶ. ೧೧೨೨ರ ಅಕ್ಕಲಕೋಟೆ ಶಾಸನದಲ್ಲಿ ಮಾದಿರಾಜನು ಈ ಉತ್ಸವಗಳು ಕ್ರಮವಾಗಿ ನಡೆದುಕೊಂಡು ಹೋಗಲು ದತ್ತಿದಾನಗಳನ್ನು ನೀಡಿದ್ದಾನೆ. “ಸಿಂನ್ನಿಖೇಡದ ಪಡುವಣ ಹೊಲದೊಳಗೆ ಚೈತ್ರ ಪೈತ್ರಕ್ಕೆ ಬಿಟ್ಟ ಮತ್ತರು ಅಯ್ವತ್ತು” ಎಂಬ ಉಲ್ಲೇಖವಿದೆ. ಇಲ್ಲಿ ಪೈತ್ರವೆಂದರೆ ಪವಿತ್ರ ಅಥವಾ ದೇವರಿಗೆ ನೂಲುಹಾಕುವುದು ಅಥವಾ ನೂಲಹುಣ್ಣಿಮೆ ಎಂದೇ ಅರ್ಥ. ಮಹಾರಾಷ್ಟ್ರದ ಕನ್ನಡ ಶಾಸನಗಳಲ್ಲಿ ದಾನ ಶಾಸನಗಳದ್ದೇ ಮೇಲುಗೈ. ಬಹುತೇಕ ಶಾಸನಗಳಲ್ಲಿ ಚೈತ್ರದ ಪರ್ವಕ್ಕೆ ಹಾಗೂ ಪವಿತ್ರದ ಪರ್ವಕ್ಕೆಂದು ದಾನ ನೀಡಿದ ಅಂಶ ಉಲ್ಲೇಖಗೊಂಡಿದೆ. ಈ ಎರಡೂ ಹಬ್ಬಗಳು ಅಂದು ಸಾಕಷ್ಟು ವಿಜೃಂಭಣೆಯಿಂದ ನಡೆಯುತ್ತಿದ್ದವು ಎಂಬುದನ್ನು ಶಾಸನಗಳು, ಗ್ಯಾಝಿಟಿರುಗಳು ಮನದಟ್ಟು ಮಾಡಿಕೊಡುತ್ತವೆ.

ಸಂಕ್ರಾಂತಿ : ಸಂಕ್ರಾಂತಿ ಹಬ್ಬವನ್ನು ಪ್ರಾಚೀನ ಹಾಗೂ ಮಧ್ಯಕಾಲೀನ ಕರ್ನಾಟಕದ ಜನತೆ ವಿಶೇಷ ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದರು. ಅವುಗಳಲ್ಲಿ ಮುಖ್ಯವಾಗಿ ಮಕರ ಸಂಕ್ರಾಂತಿ, ಕರ್ಕಾಟಕ ಸಂಕ್ರಾಂತಿ ಹಾಗೂ ಉತ್ತರಾಯಣ ಸಂಕ್ರಾಂತಿಗೆ ಹೆಚ್ಚು ಮಹತ್ವವಿತ್ತು. ಅಂದು ಸೂರ್ಯರಾಧನೆಯೂ ಸಾಕಷ್ಟು ಜನಪ್ರಿಯವಾಗಿತ್ತು. ಆದ್ದರಿಂದ ಈ ಸಂಕ್ರಾಂತಿ ಹಬ್ಬಗಳು ಹೆಚ್ಚು ಪ್ರಚಾರದಲ್ಲಿದ್ದವು. ಮಕರ ಸಂಕ್ರಾಂತಿ ಇಂದಿಗೂ ಸಂಭ್ರಮ ಉತ್ಸವದಿಂದ ಕರ್ನಾಟಕ ಮಹಾರಾಷ್ಟ್ರವೂ ಸೇರಿದಂತೆ ಭಾರತದ ಎಲ್ಲಾ ಕಡೆ ಆಚರಣೆಯಲ್ಲಿದೆ. ಈ ಸಂಕ್ರಾಂತಿ ದಿನಗಳಲ್ಲಿ ದಾನ ದಾನ ಧರ್ಮಕಾರ್ಯ ಕೈಗೊಂಡರೆ ಒಳ್ಳೆಯದು ಎಂಬ ನಂಬಿಕೆ ಇದ್ದಿರಬೇಕು. ಉತ್ತರಾಯಣ ಸಂಕ್ರಾಂತಿ ಹಿಂದೂಗಳಿಗೆ ವಿಶೇಷವಾದ ದಿನ. ಕ್ರಿ. ಶ. ೧೦೬೬ರ ಎಕ್ಲಾರ ಶಾಸನ ಕ್ರಿ.ಶ. ೧೦೭೦ರ ತಡಖೇಲ್ ಶಾಸನ, ಕ್ರಿ. ಶ. ೧೦೭೯ರ ಕರಾಡಖೇಡ ಶಾಸನ ಹೀಗೆ ಮಹಾರಾಷ್ಟ್ರದ ಅನೇಕ ಶಾಸನಗಳಲ್ಲಿ ಉತ್ತರಾಯಣ ಪರ್ವದ ಉಲ್ಲೇಖವಿದೆ. ಒಂದೆರಡು ಶಾಸನಗಳಲ್ಲಿ ಮಕರ ಸಂಕ್ರಮಣ, ಕರ್ಕಾಟಕ ಸಂಕ್ರಮಣದ ಉಲ್ಲೇಖವೂ ಬಂದಿದೆ. ಸಂಕ್ರಾಂತಿ ಎಂದು ಈ ಹಬ್ಬವನ್ನು ಕರೆಯಲಾಗಿದೆ.

ಶ್ರಾವಣ ಮತ್ತು ಆಶ್ವೀಜಮಾಸ : ಶ್ರಾವಣ ಮಾಸ ಹಾಗೂ ಆಶ್ವೀಜಮಾಸಗಳ ಉಲ್ಲೇಖವೂ ಈ ಭಾಗದ ಅನೇಕ ಕನ್ನಡ ಶಾಸನಗಳಲ್ಲಿ ಬಂದಿದೆ. ಶ್ರಾವಣ ಶನಿವಾರ ಹಾಗೂ ಸೋಮವಾರವನ್ನು ಶುಭದಿನವೆಂದು ಭಾವಿಸಲಾಗುತ್ತಿತ್ತು. ಅಂದಿ ಜನರು ವಿಶೇಷ ಪೂಜೆ ಪುನಸ್ಕಾರ ದಾನ ಧರ್ಮ ಪುಣ್ಯಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆಶ್ವೀಜಮಾಸವನ್ನು ಪುಣ್ಯದಿನವೆಂದು ಕರೆದರೂ ‘ನವರಾತ್ರಿ’ ಎಂಬ ಉಲ್ಲೇಖ ಎಲ್ಲಿಯೂ ಕಾಣಸಿಗುವುದಿಲ್ಲ.

ಗ್ರಹಣ : ಗ್ರಹಣವನ್ನು ಶಾಸನದಲ್ಲಿ ‘ಪರ್ವ ಎಣದು ಕರೆಯಲಾಗಿದೆ. ಇಲ್ಲಿ ಪರ್ವ ಎಂದರೆ ಹಬ್ಬ ಎಂದೇ ಅರ್ಥವಿದ್ದಿರಬೇಕು. ಸೂರ್ಯಗ್ರಹಣದ ದಿನವನ್ನು ವಿಶೇಷ ದಿನವೆಂದು ಪರಿಗಣಿಸಲಾಗುತ್ತಿತ್ತು. ಅಂದು ದಾನ ಧರ್ಮ ಮಾಡಿದರೆ ಪುಣ್ಯ ಲಭಿಸುತ್ತದೆಂದು ಜನ ಭಾವಿಸಿದ್ದಿರಬೇಕು. ಹಾಗಾಗಿ ದೇವಾಲಯಗಳಲ್ಲಿ ಮಠಗಳಲ್ಲಿ ವಿಶೇಷ ಪೂಜೆ, ಆರಾಧನೆ ನಡೆಯುತ್ತಿದ್ದಿರಬೇಕು. ದೇವಾಲಯಗಳು ಅಂದು ಸಾಂಸ್ಕೃತಿಕ ಕೇಂದ್ರಗಳಾಗಿದ್ದವು. ದೇವಾಲಯದಲ್ಲಿ ವಿಶೇಷ ಕಾರ್ಯಕ್ರಮವಿದ್ದರೆ ಅದು ಊರಿಗೂ ಸಂಭ್ರಮದ ದಿನವೇ. ಕ್ರಿ. ಶ. ೧೦೭೮ರ ಏರಿಗೆಯ ಶಾಸನದಲ್ಲಿ “ಕಾರ್ತಿಕ ಅಮವಾಸ್ಯೆ ಸೂರ್ಯಗ್ರಹಣ ಪರ್ವದಂದು” ಎಂಬ ಉಲ್ಲೇಖ ಕಾಣಸಿಗುತ್ತದೆ. ಸೂರ್ಯಗ್ರಹಣದಂದು ಅಲ್ಲಿಯ ಅಗ್ರಹಾರ ಹಾಗೂ ಮೂಲಸ್ಥಾನ ದೇವರಿಗೆ ದಾನ ನೀಡಿದ್ದನ್ನು ಇದೇ ಶಾಸನ ಹೇಳುತ್ತದೆ.

ಕ್ರಿ.ಶ. ೧೧೧೩ರ ಸಗ್ರೋಳಿ ಶಾಸನದಲ್ಲಿ ಸೂರ್ಯಗ್ರಹಣ ನಿಮಿತ್ತವಾಗಿ ಶ್ರೀ ಸರ್ವೇಶ್ವರದೇವರ್ಗ್ಗೆ ಶ್ರೀಮತು ರೆಬ್ಬಲದೇವಿಯರು ತಮ್ಮ ಮನೆಯ ಸಾಮ್ಯದರುವಣ”ವನ್ನು ದಾನ ನೀಡಿದ್ದರ ಉಲ್ಲೇಖವಿದೆ. ಗ್ರಹಣದಂದು ದೇವಾಲಯಗಳ ಶಂಕುಸ್ಥಾಪನೆಯನ್ನು ನೆರವೇರಿಸಲಾಗುತ್ತಿತ್ತು. ಸಗ್ರೋಳಿ ಶಾಸನದಲ್ಲಿ “ಫಾಲ್ಗುಣದಮಾವಾಸ್ಯೆ ಸೂರ್ಯಗ್ರಹಣ ನಿಮಿತ್ತವಾಗಿ ಶ್ರೀ ಸರ್ಬ್ಬೇಶ್ವರ ದೇವರ ಕೆಸರ್ಕಲ್ಲಿಕ್ಕುವಲ್ಲಿ ನಾಡ ಸಮಸ್ತರು” ಸೇರಿದ ಅಂಶ ಉಲ್ಲೇಖಗೊಂಡಿದೆ. ಸೋಮಗ್ರಹಣದ ನಿಮಿತ್ತಮಾರುಡಿಗೆಯಲ್ಲಿ ಛತ್ರಕ್ಕೆ, ಅಲ್ಲಿಯ ಬ್ರಾಹ್ಮಣರಿಗೆ, ಘಟಿಕಾಸ್ಥಾನದ ಘಳಿಸಾಸರಿಗೆ ಯುವರಾಜ ಮಲ್ಲಿಕಾರ್ಜುನ ದೇವರ ಪತ್ನಿ ಸಿರಿಯಾದೇವಿ ದಾನ ಧರ್ಮ ಮಾಡಿದ್ದನ್ನು ಕ್ರಿ. ಶ. ೧೧೦೭ರ ಮಾರ್ಡಿಶಾಸನ ಹೇಳುತ್ತದೆ. ಕಾಳಾಮುಖ ಗುರುಗಳಿಗೆ, ಸೂರ್ಯಗ್ರಹಣದಂದು ದತ್ತಿದಾನ ನೀಡಿದ್ದರ ಉಲ್ಲೇಖ ಸೊಲ್ಲಾಪುರ ಜಿಲ್ಲೆಯ ಹಲವಾರು ಶಾಸನಗಳಲ್ಲಿ ಕಾಣಬಹುದು. ಕ್ರಿ. ಶ. ೧೧೯೫ರ ಜಾಮಗಾಂವ ಶಾಸನದಲ್ಲಿ “ಹೊನ್ನೋಜ ದಂಣ್ನಾಯಕರು ಸೂರ್ಯ ಪರ್ವದ ನಿಮಿತ್ತ” ಸೊನ್ನಲಿಗೆ ಕಪಿಲಸಿದ್ಧ ಮಲ್ಲಿಕಾರ್ಜುನ ದೇವರಿಗೆ ದಾನ ನೀಡಿದ ಅಂಶ ದಾಖಲಾಗಿದೆ. ‘ಸೂರ್ಯಪರ್ವ’ ಎಂದರೆ ಇಲ್ಲಿ ಸೂರ್ಯಗ್ರಹಣ ಎಂದೇ ಅರ್ಥ. ಸೂರ್ಯ ಗ್ರಹಣದಂದು ದಾನಧರ್ಮ ಮಾಡುವ ಪರಂಪರೆ ಇಂದಿಗೂ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಚಾಲ್ತಿಯಲ್ಲಿದೆ. ಹೀಗೆ, ಮಹಾರಾಷ್ಟ್ರದ ಹಬ್ಬ – ಹರಿದಿನಗಳ ಮೇಲೆ ಕರ್ನಾಟಕದ ಪಾತ್ರ ಧಾರಾಳವಾಗಿದೆ.

೮. ‘ಗೋದಾವರಿಯಿಂದ ಕೆಳಗೆ ಕನ್ನಡ’ ಎಂದು ನೃಪತುಂಗನು ಹೇಳಿರುವುದು ನಿಜ, ಆದರೆ ಈಗ ಅದಾದರೂ ಎಲ್ಲಿ ಉಳಿದಿದೆ? ಹಾಗೆಯೇ, ನೃಪತುಂಗನ ಮೊದಲೇ ಕೆಲವು ಶತಮಾನ ನರ್ಮದಾ ತೀರದ ‘ಕನ್ನಡ’ ಕೈಬಿಟ್ಟಿರಬೇಕು. ಆರನೆಯ ಶತಮಾನದಲ್ಲಿ ಮರಹಟ್ಟಿನಾಡಿಗೆ (ಮಾಳವಾಸೇರಿ) ಮಹಾರಾಷ್ಟ್ರವೆಂಬ ಹೆಸರ ಪ್ರರೂಢವಾಯಿತು. ಆ ಮೊದಲೇ, ಆ ನಾಡಿಗಿದ್ದ ಕನ್ನಡ ಹೆಸರು ಹೋಗಿರಲಿಕ್ಕೆಬೇಕು. ಮಳೆ ಬಿಟ್ಟಿರೂ ಮರದ ಹನಿ ಬಿಡದು. ನಾಡಿಗೆ ಇದ್ದ ಕನ್ನಡವೆಂಬ ಹೆಸರು ಹಿಂದೆ ಬಿದ್ದರೂ ಜನರ ಭಾಷೆಯೂ ಹೇಗೆ ಸಂಪೂರ್ಣವಾಗಿ ಒಮ್ಮೆಲೆ ಬದಲಾಗಬೇಕು? ಅದು ಹೇಳಹೆಸರಿಲ್ಲದಂತಾಗಲೂ ಹದಿಮೂರನೆಯ ಶತಮಾನದವರೆಗೆ ಕಾಲಹಿಡಿಯಿತು. ಕನ್ನಡದಲ್ಲಿ ‘ದೇಸಿಗ’ ಶಬ್ದಕ್ಕೆ ಬಂದಿರುವ ‘ಅನಾಥನು’ ಎಂಬ ಅರ್ಥವು ಕನ್ನಡಿಗರ ಆಗಿನ ಅವಸ್ಥೆಯ ಇತಿಹಾಸವನ್ನು ಚೆನ್ನಾಗಿ ವಿಶದಪಡಿಸುತ್ತದೆ. ಕನ್ನಡಿಗನು ತನ್ನ ದೇಶದಲ್ಲಿ ತಾನು ದೇಸಿಗನು ಅಂದರೆ ಪರದೇಶಿ! ಅನಾಥ! ದಿಕ್ಕಿಲ್ಲದವನು! ಎಷ್ಟು ವಿಪರೀತ! ಪರದೇಶಿಯು (ಹೊರಗಿನಿಂದ ಬಂದವನು) ಮನೆಯವನು, ದೇಶಿಕನು (ಮನೆಯವನು) ಪರದೇಶಿ, ದೇಸಿಗ! ಇದಕ್ಕೂ ಕ್ರೂತರವಾದ ದುರ್ದೈವವಿನ್ನಾವುದು! ಪರದೇಶಿಗಳು ಮರ್ಯಾದೆ ಮೀರಿದ್ದರಿಂದ ಕನ್ನಡಿಗರು ‘ದೇಸಿಗರು’ (ದಿಕ್ಕಿಲ್ಲದವರು) ಆದರು. ಎಷ್ಟೋ ಜನರು ಮನೆಮಾರುಗಳನ್ನು ತೊರೆದು ದಾರಿ ದೊರೆತತ್ತ ಹೊರಟರು. ಕನ್ನಡ ಜನಗಳ ಆಗಿನ ಆ ಗೋಳಾಟವನ್ನು ಸಹೃದಯರು ಬಗೆದು ಭಾವಿಸಿಕೊಳ್ಳಬೇಕು. ಆಗ ಹರಿದ ಕಣ್ಣೀರ ಕಾಲುವೆಯಷ್ಟು! ಕರುಳು ಕತ್ತರಿಸುವ ಹೊಟ್ಟೆಯೊಳಗಿನ ಬೇಗುದಿಯೆಷ್ಟು! ಆಹಾ ನೆನೆಸುವುದಕ್ಕೂ ಆಗುವುದಿಲ್ಲ. ಅಂದು ಆ ಎದೆಗಿಚ್ಚಿನಿಂದ ಹೊತ್ತಿದ ಜ್ವಾಲೆಯು ಗೋದಾವರೀ ತೀರದಲ್ಲಿ ಪ್ರತಿವರ್ಷವೂ ಈಗ ಸಹ ಕಾಣಿಸಿಕೊಳ್ಳುತ್ತಿದೆ. ನೃಪತುಂಗನ ಆಳ್ವಿಕೆಯಲ್ಲಿ ಗೋದಾವರಿ ನದಿಯ ದಕ್ಷಿಣದಿಂದ ಕನ್ನಡ; ಮೇಲಿನಿಂದ ಬಂದ ಕನ್ನಡಿಗರು ಗೋದಾವರಿಯ ದಕ್ಷಿಣ ತಡಿಯಲ್ಲಿ ಆಶ್ರಯ ದೊರೆತರಲಿಕ್ಕೆ ಸಾಕು. ಈ ಜನಗಳು ಇಲ್ಲಿ ಬಂದು ನೆಲೆಸಿದ ಮೇಲೆ ಸಹ ಮೊದಲಿನ ಮನೆಮಾರುಗಳ ನೆನಪು ಆಗಿ ಆವೇಶವುಂಟಾಗುತ್ತಿದ್ದರೆ ವಿಶೇಷವಿಲ್ಲ.

೯. ನಾಸಿಕ ಮತ್ತು ನಗರ ಜಿಲ್ಹೆಗಳಲ್ಲಿ ಗೋದಾವರಿ ನದಿಗುಂಟ ಎರಡೂ ದಂಡೆಯ ಮೇಲಿನ ಜನರು ನಾಗಪಂಚಮಿಯ ದಿನ ಎರಡು ತಡಿಗಳ ಮೇಲೆ ನಿಂತು ಬೈಯ್ದಾಡುವರು, ಹೊಡೆದಾಡುವರು. ಇದು ಈಗ ಬರಿ ಸಾಂಪ್ರದಾಯಿಕ. ಪ್ರತಿವರುಷ ಹೀಗೆ ಮಾಡದಿದ್ದರೆ ಮಳೆ ಬೆಳೆ ಚೆನ್ನಾಗಿ ಆಗುವುದಿಲ್ಲವೆಂದು ಆ ಜನರ ಗ್ರಹಿಕೆಯಂತೆ. ನಾಗರಪಂಚಮಿಗೆ ಇದು ಆಗುತ್ತಿರುವುದಕ್ಕೆ ಒಂದು ಕಾರಣವಿರಬೇಕು. ಕ್ರಿ. ಶ. ಮೂರನೆಯ ಶತಮಾನದಲ್ಲಿ ಆ ನಾಡಿಗೆ ಆಹಿರರು (ಆಭೀರರು) ಬಂದು ಕೊಳ್ಳೆ ಹೊಡೆದರು. ಅಹಿರರು (ಅಹಿ = ಹಾವು) ನಾಗರೆಂದು ಒಂದು ಗ್ರಹಿಕೆ. ಅಹಿರರ ಪ್ರಾಬಲ್ಯವಾಗಿ ತಮ್ಮ ಮನೆಮಾರುಗಳಿಗೆ ಎರವಾಗ ಬೇಕಾಯಿತೆಂದು ತಿಳಿದು ನಾಗರಪಂಚಮಿಯ ದಿನ ಅದರ ನೆನಪಿಗಾಗಿ ಈ ಹುಸಿಕಾಳಗವು ನಡೆಯುತ್ತಿರಲಿಕ್ಕಿಲ್ಲವಷ್ಟೆ?

೧೦. ಮರಾಠಿ ನಾಡಿಗೂ ಮೂಲ ‘ಮಹಾರಾಷ್ಟ್ರಿ’ ಅಲ್ಲ. ಇದು ಮೊದಲು ಹುಟ್ಟಿದ್ದು ವರ್ಹಾಟದಲ್ಲಿ. ಈ ನುಡಿ ‘ಮಹಾರಾಷ್ಟ್ರಿ’ ಪ್ರಾಕೃತಕ್ಕಿಂತಲೂ ಹಿಂದಿನ ಭಾಷೆ. ವರ್ಹಾಟದಲ್ಲಿ ಇದು ಮೊದಲು ಇದ್ದಿಲ್ಲ. ಇವೆರಡಕ್ಕೂ ಜನ್ಯಜನಕ ಸಂಬಂಧವೇ ಇಲ್ಲ. ಅಲ್ಲದೇ ಮಹಾರಾಷ್ಟ್ರೀ ಪ್ರಾಕೃತವು ಹಲವು ಬೇರೆ ಬೇರೆ ಪ್ರಾಕೃತಗಳ ಸಮ್ಮಿಶ್ರಣ. ಈ ಪ್ರಾಕೃತಕ್ಕೂ ಮರಾಠಿ ಭಾಷೆಗೂ ಕೆಲವು ಶಬ್ದ ಸಾಮ್ಯಗಳಿವೆ ಅಷ್ಟೆ. ತಾಯಿ ಮಕ್ಕಳ ಸಂಬಂಧವಿಲ್ಲ. ರ್ಸ್ಟೆ ಕೋನೋ ಅವರು ” ಮರಾಠಿ ಭಾಷೆ ದ್ರಾವಿಡ ಭಾಷೆಯ ಮೂಲಾಧಾರದಿಂದ ವಿಕಾಸ ಹೊಂದಿತು” ಎಂದು ಹೇಳುತ್ತಾರೆ. ಇಲ್ಲಿ ‘ದ್ರಾವೀಡ ಭಾಷೆ’ ಎಂದರೆ ಕನ್ನಡವಲ್ಲದೆ ಬೇರೆ ಅಲ್ಲ. ಇದರಿಂದ ಹಿಂದಕ್ಕೆ ಒಂದಾನೊಂದು ಕಾಲದಲ್ಲಿ ಈಗ ಮರಾಠಿ ಪ್ರಚುರವಾಗಿರುವ ನಾಡುಗಳಲ್ಲಿ ಕನ್ನಡವೇ ಇದ್ದಿರಬೇಕು. ಮರಾಠಿ ಪ್ರಬಲವಾಗುತ್ತ ಬಂದ ಹಾಗೆಲ್ಲ ಕನ್ನಡ ಅತ್ತೆಯನ್ನು ಹೊಡೆದೋಡಿಸಿತು. ನರ್ಮದೆಯಿಂದ ಗೋದಾವರಿಗೆ ಅಲ್ಲಿಂದಿತ್ತ ಕೃಷ್ಣಾ ನದಿಯವರೆಗೆ ಕನ್ನಡಕ್ಕೆ ನೆಲೆ ತಪ್ಪುತ್ತ ಬಂದು ನಂತರ ಮರ್ಹಾಟ – ವರ್ಹಾಟ ಇವಕ್ಕೆ ಬಹುಸಮ್ಮತವಾದ ವ್ಯುತ್ಪತ್ತಿ ಹೊರಬಿದ್ದಿಲ್ಲ. ಮರ + ಹಟ್ಟಿ ಎಂದರೆ ದೊಡ್ಡ ನಾಡು ಎಂದು. ಅದಕ್ಕೆ ಕನ್ನಡದಿಂದ ವ್ಯುತ್ಪತ್ತಿ ಹೇಳಬಹುದು. ಇದೇ ಕ್ರಮೇಣ ಸಂಸ್ಕೃತದಲ್ಲಿ ಮಹಾರಾಷ್ಟ್ರವಾಯಿತು. ಆದ್ದರಿಂದ ಈ ದೇಶದ ಹೆಸರು ಕನ್ನಡ. ಅಲ್ಲದೆ ಕನ್ನಡ ಎಂಬ ಒಂದು ತಾಲೂಕು ಕೂಡ ಈಗ ಖಾನ್ದೇಶದಲ್ಲಿದೆ. ಕಂಡರ ದೇಶ (ಕನ್ನಡರ ದೇಶ) ಎಂಬುದರ ವಿಕೃತರೂಪವೇ ಖಾನ್ದೇಶ. ಕಂಡರು ವಿಂಧ್ಯವಲಯಗಳ ಕಾಡುಗಳನ್ನು ಬಿಟ್ಟು ನಾಡಿಗೆ ಬಂದ ಕೂಡಲೇ ಅವರು ಕನ್ನಡರಾದರು. ಕನ್ನಾಡು > ಕನ್ನಡು > ಕನ್ನಡ. ಆದ್ದರಿಂದ ಇವರು ಮೊದಲಿದ್ದ ನಾಡು ವಿಂಧ್ಯದ ನೆರೆಹೊರೆಯಲ್ಲಿತ್ತು.

ಪುಂಡರಿ – ಕಂಡಾರಿ – ಮಲ್ಲಾರಿಗಳೆಂಬ ವರ್ಹಾಟ ಮರಾಠರ ಕುಲದೇವತೆಗಳು ಕನ್ನಡಿಗರಿಗೆ ಸೇರಿದುವು. ಪುಂಡರು, ಕಂಡರು, ಮಲೆಯರು ಎಂಬ ವಿಂಧ್ಯವಾಸಿಗಳ ದೇವತೆಗಳಿವು. ಪುಂಡರನಾಡು > ಪುನ್ನಾಡು > ಪುನ್ನಾಟ. ಪ್ರಾಚೀನ ಪುನ್ನಾಟ ದೇಶವು ಈ ಜನಾಂಗದ ಕೊನೆಯ ಅವಶೇಷ. ಕಂಡರಿಗೆ ಹಗೆಯಾದವನು ಕಂಡಾರಿ > ಖಂಡೇರಾಯ,ಖಂಡೋಬ. ವಿಂಧ್ಯದ ದಕ್ಷಿಣಕ್ಕೆ ಇವರು ಮೆರೆದ ಲಾಲ ಉಂಟು. ಇವರೇ ಕನ್ನಡಿಗರಿಗೆ ಮೂಲ. ಮಲೆಯರಿಗೆ ವೈರಿ ಮಲ್ಲಾರಿ. ಇವನಿಗೆ ಏಳು ಕೋಟಿ ಭಕ್ತಗಣ. ಈ ದೇವತೆಯ ಗುಡಿಗಳಲ್ಲಿ “ಏಳುಕೋಟಿ” ಎಂಬುದನ್ನು ಈಗಲೂ ಮರಾಠರು ಉದ್ಘೋಷಿಸುತ್ತಾರೆ. ಇವೆಲ್ಲವನ್ನೂ ನೋಡಿದರೆ, ಈ ದೇವತೆಗಳ ಮೂಲ ಆರಾಧಕರು ಕನ್ನಡಿಗರು ಎಂದು ಕಾಣುತ್ತದೆ.

೧೧. ಕರಾವಳಿ ಜಿಲ್ಲೆಯ (ಕಾರವಾರ ಮತ್ತು ಮಂಗಳೂರು) ಮಹತ್ವದ ಜನಾಂಗವಾದ ಹವಿಕರು ಅಹಿಛತ್ರದಿಂದ ಬಂದವರೆಂದು ಐತಿಹ್ಯವಿದೆ. ಉತ್ತರದಲ್ಲಿ ಛತ್ರಪುರ ಸಂಸ್ಥಾನವುಂಟು. ಅಹಿರರ ಪ್ರಾಬಲ್ಯವಾದಾಗ ಅದೆಲ್ಲ ಸೀಮೆಯು ಅಹಿ + ಛತ್ರವೆನಿಸುತ್ತಿರುವ ಸಂಭವವೂ ಇದೆ. ಈ ಸೀಮೆಯಿಂದಲೇ ಹವಿಕರು ಬನವಾಸಿ ದೇಶಕ್ಕೆ ಬಂದಿರಬಹುದು ಎಂದು ವಿಲ್ಸನ್‌ನ ಊಹೆ. ಇವರ ಮನೆಮಾತು ನೃಪತುಂಗನ ಕಾಲಕ್ಕೂ ಹಿಂದೆ ಇದ್ದ ಪಳಗನ್ನಡ. ಪ್ರಾಚೀನ ಕಾಲದ ತಮ್ಮ ಭಾಷೆಯನ್ನು ಕಾದುಕೊಂಡು ಬಂದಿದ್ದಾರೆ. ಇದು ಈ ಜನರು ಮೊದಲು ನೆಲಸಿದ್ದ ನಾಡಿನ ಭಾಷೆಯಾಗಿರಲಿಕ್ಕೆಬೇಕು. ಗೌಡರು, ಸಾರಸ್ವತರು, ಹೇಗೆ ತಮ್ಮ ಪ್ರಾಚೀನ ಮನೆಮಾತುಗಳನ್ನು ಕಾದುಕೊಂಡು ಬಂದಿರುವರೋ ಹಾಗೆಯೆಹವಿಕರೂ ಆ ಹಳಗನ್ನಡವನ್ನು ರಕ್ಷಿಸಿದ್ದಾರೆ. ಇವರು ಗುಜರಾತಿನಿಂದ ಬಂದರೆಂದು ಕನ್ನಡವೂ ಜನರ ಬಳಕೆಯ ಮಾತು ಆಗಿತ್ತೆಂಬುದು ಮಾತ್ರ ನಿಶ್ಚಿತ. ಏಕೆಂದರೆ ಹವಿಕರ ಹೊರತು ಬೇರೆ ಯಾವ ಜನಾಂಗದವರೂ ತತ್ಸದೃಶವಾದ ಭಾಷೆಯನ್ನಾಡುವುದಿಲ್ಲ. ಅದರ ಶಬ್ದಕೋಶವನ್ನು ಸಿದ್ಧಪಡಿಸಿದರೆ ಕನ್ನಡದ ಮೂಲಸ್ಥಾನವನ್ನು ಅರಿತುಕೊಳ್ಳಲು ಇನ್ನಿಷ್ಟು ನೆರವು ಸಿಕ್ಕಬಹುದೇನೊ ಎಂಬ ಆಸೆ.

೧೨. ಬನವಾಸಿ ನಾಡಿನಲ್ಲಿ ಮಾಳವ – ಮರಹಟ್ಟ ನಾಡಿನಿಂದ ಹವ್ಯಕರಲ್ಲದೆ ಬೇರೆ ಹಲವು ಜನಾಂಗಗಳೂ ಬಂದು ನೆಲೆಸಿರಬೇಕು. ಹಳಬರು – ಹಳಪೈಕರು, ರಾಷ್ಟ್ರಿಕರು – ರಾಠರು – ನಾಡವರು ಬಂಡರು, ಹಾಲು ಕುರುಂಬರು – ಹಾಲು ಒಕ್ಕಲರು, ಬಿಲ್ಲವರು – ಬಿಲ್ಲವರು. ಹೀಗೆ ಹೊಸಜನಗಳ ಹೆಚ್ಚಳದಿಂದ ಬನವಾಸಿ ನಾಡಿಗೆ ಬೇರೆ ಹೆಸರು ಬಂದಿದ್ದರೆ ಸೋಜಿಗವೇನು? ಹೊಸತಾಗಿ ಬಂದ ಹೆಸರಾವುದು? ಕನ್ನಡ ಅಥವಾ ಕನ್ನಡಮೆನಿಪ್ಪಾನಾಡು. ಬಂದ ಜನಾಂಗದ ಮೇಲಿಂದ ಈ ಹೆಸರು ಬಂದಿರಬೇಕಾದರೆ ಈ ಜನಗಳು ಬಂದ ದೇಶವು ಆವುದಿರಬೇಕು? ಕನ್ನಡ, ಕನ್ನಡ ಮಾಳವಾ (ಮಲೆ) ನಾಡಿನಿಂದ ಬಂದವರು ಇಲ್ಲಿಯೂ ಮಲೆನಾಡಿನ ಹತ್ತಿರ ಹತ್ತಿರವೇ ಊರಿಕೊಂಡಿರಬೇಕು. ಮಾಳವಾದ ರಾಜಧಾನಿ ಕೆಲಕಾಲ ಅವಂತಿ – ಅಮರಿಪುರ, ಧಾರಾನಗರ, ನಮ್ಮ ನಾಡಿನಲ್ಲಿಯೂ ಧಾರವಾಡ ಒಂದು ಇದ್ದರೆ ಅಮರಗೊಳ್ಳ ಮೂರು ನಾಲ್ಕು! ವರ್ಹಾಟ ನಾಡಿನಲ್ಲಿ ಪಾವಗಡ, ನಮ್ಮ ಕಡೆಗೆ ಮೈಸೂರ ಸೀಮೆಯಲ್ಲಿ ಪಾವುಗಡ, ಧಾರವಾಡದ ಹತ್ತಿರ ಹಾವೇರಿ. ನೀಲಗಿರಿ ಮತ್ತು ನಾಗಪುರ – ಚಂದಾಗಳಲ್ಲಿರುವ ಕುರುಂಬರು, ಬಡಗರು ಮೊದಲಾದವರನ್ನು ಕುರಿತು ಈ ಮೊದಲೇ ಹೇಳಿದೆ. ಗೋಕರ್ಣ ಮತ್ತು ಹಂಪಿಗಳು ಹರಿದು ಬಂದು ನೆಲೆಯಾದವರಿಂದ ಸ್ಥಾಪಿತವಾದ ಕ್ಷೇತ್ರಗಳು. ಇವೆರಡೂ ಕ್ಷೇತ್ರಗಳಿಗೆ ಇರುವ ಮಹಾತ್ಮ್ಯವನ್ನು ನೆನೆಸಿದರೆ ಇವು ಜ್ಯೋತಿರ್ಲಿಂಗಗಳಾಗಿರಬೇಕೆಂದೆನಿಸುತ್ತದೆ. ಆದರೆ, ಹನ್ನೆರಡು ಜ್ಯೋತಿರ್ಲಿಂಗಗಳ ನಾಮಾವಳಿಯಲ್ಲಿ ಇವುಗಳ ಹೆಸರೇ ಇಲ್ಲ! ಇವೆರಡೂ ದಕ್ಷಿಣ ಕಾಶಿ, ಉಜ್ಜಯಿನಿ ಮಹಾಕಾಲನೂ ಕಡಿಮೆಯವನಲ್ಲ. ಇವೆರಡರಲ್ಲಿ ಒಂದು ಉಜ್ಜಯಿನಿ ಮಹಾಕಾಲನ ಪ್ರತಿಬಿಂಬ, ಇನ್ನೊಂದು ತ್ರ‍್ಯಂಬಕೇಶ್ವರದ ಪಡಿಯಚ್ಚು ಆಗಿರಬೇಕು. ಸೌರಾಷ್ಟ್ರದ ಸೋಮನಾಥನು ಅಲ್ಲಿಯ ಕನ್ನಡರೊಡನೆ ಮೈಸೂರ ನಾಡಿಗೆ ಬಂದು ಸೋಮನಾಥಪುರವನ್ನು ಕಟ್ಟಿಕೊಂಡು ನಿಂತಿರಬೇಕು. ನಾಸೀಕದ ಹತ್ತಿರ ಅಂಜನೇರಿ ಇದೆ. ಶ್ರೀರಾಮನ ಸಂಬಂಧವೂ ಅಲ್ಲಿಯೇ ಮುಖ್ಯವಾಗಿ ಹಂಪಿಯಲ್ಲಿ ರಾಮನ ಸಂಬಂಧಗಳನ್ನು ಹೇಳುವ ಸ್ಥಳಗಳ ಎಲ್ಲಿ ನೋಡಿದಲ್ಲಿ. ಯಾವುದೇ ಜನಾಂಗವು ಗುಳೇಕಟ್ಟಿಕೊಂಡು ಎದ್ದಾಗ ಮೊದಲು ನೆಲೆಯಾಗಿದ್ದ ನಾಡಿನ ದೇವದೇವತೆಗಳ ನೆನಹುಗಳನ್ನೂ ಸ್ಥಳ ಪುರಾಣಗಳನ್ನೂ ಕಟ್ಟಿಕೊಂಡೆ ಹೊರಡುವುದುಂಟು. ಅದಕ್ಕೆ ಕನ್ನಡಿಗರೂ ಹೊರತಾದವರಲ್ಲ.

೧೩. ಶಂಬಾ ಅವರು ಮಹಾರಾಷ್ಟ್ರವನ್ನಾಳಿದ ಕರ್ನಾಟಕ ದೊರೆಗಳ ಇತಿಹಾಸವನ್ನೇ ಬಿಚ್ಚಿಡುತ್ತಾರೆ. ಅಷ್ಟೇ ಅಲ್ಲ. ಇಂದಿನ ಮಹಾರಾಷ್ಟ್ರದ ಪ್ರಾಚೀನ ಇತಿಹಾಸವೆಂದರೆ ಪ್ರಾಚೀನ ಕರ್ನಾಟಕದ.ವಿವಿಧ ರಾಜಮನೆತನಗಳ ಇತಿಹಾಸವೆ ಆಗಿದೆ. ಭೌಗೋಳಿಕವಾಗಿ ಮಹಾರಾಷ್ಟ್ರ ಬಹು ವಿಶಾಲವಾದದು. ಆದರೆ ಅದರ ಇತಿಹಾಸ ಬಹುಚಿಕ್ಕದು. ಕರ್ನಾಟಕದಲ್ಲಿ ಹೆಸರು ಮಾಡಿದ ರಾಜವಂಶಗಳ ಸಾಮ್ರಾಜ್ಯವು ಸಾಕಷ್ಟು ವಿಸ್ತಾರವಾಗಿತ್ತು. ಬಾದಾಮಿ ಚಾಲುಕ್ಯರು ಹಾಗೂ ರಾಷ್ಟ್ರಕೂಟರ ಸಾಮ್ರಾಜ್ಯ ನರ್ಮದಾ ನದಿಯ ಗಡಿಯನ್ನು ಮೀರಿ ವ್ಯಾಪಿಸಿತ್ತು. ಆದರೆ ಈ ರಾಜಮನೆತನಗಳ ಕನ್ನಡ ಶಾಸನಗಳು ಇಲ್ಲಿ ಲಭ್ಯವಾಗಿಲ್ಲ. ಹತ್ತನೆಯ ಶತಮಾನದ ಅನಂತರ ಈ ಭಾಗವನ್ನು ಕಲ್ಯಾಣದ ಚಾಲುಕ್ಯರು, ಕಲಚುರಿಗಳು, ಸೇವುಣರು, ಶಿಲಾಹಾರರು ನೇರವಾಗಿ ಇಂದಿನ ಮಹಾರಾಷ್ಟ್ರವನ್ನು ಆಳಿದವರಲ್ಲ. ಅವರು ತಮ್ಮ ಮಾಂಡಳಿಕರ ಮೂಲಕ ಈ ಭಾಗವನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡಿದ್ದರು. ಕಲಚೂರಿಗಳು ಇಂದಿನ ಮಂಗಳವೇಡದಲ್ಲಿ ತಮ್ಮ ರಾಜಕೀಯ ಅಧ್ಯಾಯವನ್ನು ಆರಂಭಿಸಿದರು. ಸೇವುಣರ ಹಾಗೂ ಶಿಲಾಹಾರರ ರಾಜಧಾನಿಗಳಂತೂ ಇಂದಿನ ಮಹಾರಾಷ್ಟ್ರದಲ್ಲಿಯೇ ಇದ್ದಿತ್ತು. ಇವರ ರಾಜಕೀಯ ಇತಿಹಾಸವೂ ಕರ್ನಾಟಕ ಸಂಸ್ಕೃತಿಯನ್ನೇ ಬಿಂಬಿಸುತ್ತದೆ.

ಅಷ್ಟೇ ಅಲ್ಲದೆ ಕ್ರಿ. ಪೂ. ೪ನೆಯ ಶತಮಾನದಲ್ಲಿ ಕನ್ನಡ ನಾಡು ಚಂದ್ರಗುಪ್ತನ ಅಧೀನದಲ್ಲಿತ್ತು. ಅಶೋಕನ ಕಾಲದಲ್ಲಿಯೂ ಹಾಗೆಯೇ. ಅವನು ಬನವಾಸಿ ಮಹಿಷ ಮಂಡಲಗಳಿಗೆ ಬೌದ್ಧಧರ್ಮೋಪದೇಶಕರನ್ನು ಕಳಿಸಿದನು. ಅವನ ಶಾಸನಗಳಲ್ಲಿ ರಾಷ್ಟ್ರಿಕ ಪಿಟಣಿಕರ ರಾಜ್ಯಗಳ ಉಲ್ಲೇಖವಿದೆ. ರಾಷ್ಟ್ರಿಕರು (ನಾಡವರು ಪಿಟಣಿಕರು (ಪೈಠಣಿಕರು) ಕನ್ನಡಿಗರೇ ಇದ್ದಿರಬೇಕೆಂಬುದು ನಿಶ್ಚಿತ. ಕ್ರಿ. ಪೂ. ೨೦೦ ರಿಂದ ಕ್ರಿ. ಶ. ೨೨೫ರವರೆಗೆ ಸಾತವಾಹನರು ಆಳಿದರು. ಇವರು ದಾಕ್ಷಿಣಾಪಥಕ್ಕೆ ಅರಸರಾಗಿದ್ದುದರಿಂದ ಆಂಧ್ರ ಎಂಬ ಹೆಸರು ಬಂದಿತೇ ಹೊರತು ಇವರ ನುಡಿ ತೆಲಗು ಎಂಬುದರಿಂದಲ್ಲ. ಇವರ ಶಾಸನಗಳೆಲ್ಲ ಪ್ರಾಕೃತದಲ್ಲಿದ್ದರೂ ಇವರಾಳಿದ ನಾಡಿನ ಸಾಮಾನ್ಯ ಭಾಷೆ ಕನ್ನಡವೇ. ಸಾತವಾಹನರು ಕನ್ನಡಿಗರೆಂದು ಹೇಳಲು ಅಡ್ಡಿ ಇಲ್ಲ. ‘ಪುಲಿಮಯಿ’, ‘ಹಾಲ’ ಎಂಬ ಕನ್ನಡ ಹೆಸರುಗಳೇ ಸಾಕು. ಇವರಾದ ಮೇಲೆ ಈ ನಾಡಿಗೆ ವಾಕಾಟಕರು ಒಡೆಯರು. ಈ ಮನೆತನದ ರಾಜರ ಹೆಸರುಗಳು ಸೇನ ಎಂದು ಮುಗಿಯುತ್ತವೆ. ಬಂಗಾಳದಲ್ಲಿ ಒಂದು ಸೇನ ಮನೆತನ ಆಳಿತು. ಇವರು ಕರ್ಣಾಡ ಕ್ಷತ್ರಿಯರು. ಮಿಥಿಲೆಯ ನಾನ್ಯದೇವನೂ ಕರ್ಣಾಟನು. ಇವರೆಲ್ಲ ಕರ್ಣಾಟ ರಾಜರು ಉತ್ತರ ದೇಶದಲ್ಲಿ ಅಷ್ಟು ದೂರ ವ್ಯಾಪಿಸಿದ್ದಿರಬೇಕಾದರೆ ಕರ್ಣಾಟದ ಮೂಲಸ್ಥಾನ ಅನತಿದೂರದಲ್ಲಿಯೇ ಇರಬೇಕು. ಇವರ ಏಳಿಗೆಯ ಮೂಲ ತಿಳಿಯಬೇಕಾದರೆ ವಿಂಧ್ಯದ ಬುಡಕ್ಕೆ ಹೋಗಬೇಕು. ಇದರಿಂದಲೂ ಕರ್ಣಾಟಕದ ಸ್ಥಾನ ನರ್ಮದಾ ತೀರ. ದೇವಗಿರಿಯ ಯಾದವರು ಮರಾಠರಲ್ಲ, ಕನ್ನಡಿಗರೇ.